Archive
ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ
ಕಂತು ೧೨: ಜಾತಿ ವ್ಯವಸ್ಥೆಯ ಕಥೆಯನ್ನು ಸಾಮಾಜಿಕ ಸಿದ್ಧಾಂತವೆನ್ನಬಹುದೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ
ಕೆಲವು ವರ್ಷಗಳ ಹಿಂದಿನ ಮಾತು. ಆಗಿನ್ನೂ ಕರ್ನಾಟಕದಲ್ಲಿ ಒಂದು ಸಂಶೋಧನಾ ತಂಡವನ್ನು ಕಟ್ಟಲು ಪ್ರಾರಂಭಿಸಿದ್ದೆ. ಕನ್ನಡದ ಒಬ್ಬ ಸುಪ್ರಸಿದ್ಧ ಪ್ರಗತಿಪರ ಸಾಹಿತಿಗಳು ನನ್ನ ಸಂಶೋಧನೆಯನ್ನು ಈ ಶತಮಾನದ ನಿರ್ಲಜ್ಜ ಸಂಗತಿಗಳಲ್ಲಿ ಒಂದು ಎಂಬುದಾಗಿ ಘೋಷಿಸಿದರಂತೆ. ಈ ಸಂಶೋಧನೆಯನ್ನು ಹೇಗಾದರೂ ತಡೆಯಬೇಕು ಎಂಬುದಾಗಿ ಬಹಿರಂಗವಾಗಿ ಕರೆಯನ್ನು ಕೂಡ ಕೊಟ್ಟರಂತೆ. ಇದನ್ನು ಮಿತ್ರರೊಬ್ಬರು ನನಗೆ ತಿಳಿಸಿದರು. ನನಗೆ ಗಾಭರಿಯಾಯಿತು. ನನ್ನ ವಿದ್ಯಾರ್ಥಿಗಳೇನಾದರೂ ನನ್ನ ಗಮನಕ್ಕೆ ಬರದಂತೆ ನಿರ್ಲಜ್ಜ ವ್ಯವಹಾರಗಳನ್ನು ನಡೆಸಿದ್ದಾರೆಯೆ? ವಿಚಾರಿಸಿದಾಗ ನಾನು ಜಾತಿ ವ್ಯವಸ್ಥೆ ಇಲ್ಲವೆಂದು ಹೇಳಿದ್ದೇ ಆ ನಿರ್ಲಜ್ಜ ಸಂಗತಿ ಎಂಬುದಾಗಿ ತಿಳಿಯಿತು. ಇದುವರೆಗೆ ಒಪ್ಪಿತವಾದ ಸಿದ್ಧಾಂತವನ್ನು ಸುಳ್ಳು ಎಂಬುದಾಗಿ ತೋರಿಸುವುದು ಸಂಶೋಧನೆಯ ಜೀವಂತಿಕೆಯ ಲಕ್ಷಣ. ಇದರಲ್ಲಿ ನಿರ್ಲಜ್ಜತೆ ಏನು ಬಂತು ಎಂಬ ಒಗಟು ನನಗಿನ್ನೂ ಬಗೆಹರಿದಿಲ್ಲ.
ಈ ಜಾತಿ ವ್ಯವಸ್ಥೆ ಎಂಬ ಸಿದ್ಧಾಂತವು ಏನು ಹೇಳುತ್ತದೆ? ವೇದಕಾಲದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನು ತನ್ನ ಶುದ್ಧ ರೂಪದಲ್ಲಿ ಇತ್ತು, ನಂತರ ಬ್ರಾಹ್ಮಣ ಪುರೋಹಿತಶಾಹಿಯು ತನ್ನ ಲಾಭಕ್ಕಾಗಿ ತರತಮಗಳನ್ನು ಸೃಷ್ಟಿಸಿ ವರ್ಣ ವಿಭಜನೆಯನ್ನು ಹುಟ್ಟುಹಾಕಿತು, ಆದು ಮೇಲು ಕೀಳೆಂಬ ಜಾತಿ ವ್ಯವಸ್ಥೆಯ ಮೂಲತತ್ವವಾಗಿ ಹಿಂದೂಯಿಸಂನಲ್ಲಿ ಸೇರಿಕೊಂಡಿತು. ಮನುಧರ್ಮಶಾಸ್ತ್ರದಲ್ಲಿ ಜಾತಿ ವ್ಯವಸ್ಥೆಯ ಕ್ರೂರ ಕಾನೂನುಗಳನ್ನು ಸೃಷ್ಟಿಸಿ ಎಲ್ಲರ ಮೇಲೆ ಹೇರಲಾಯಿತು. ತದನಂತರ ಈ ವ್ಯವಸ್ಥೆಯು ಗಟ್ಟಿಯಾಗಿ ಸಾವಿರಾರು ವರ್ಷಗಳವರೆಗೆ ಹಾಗೇ ಉಳಿದುಕೊಂಡು ಬಂದಿದೆ. ಅಂದರೆ ಜಾತಿ ವ್ಯವಸ್ಥೆ ಎಂಬ ಸಿದ್ಧಾಂತವು ತಿಳಿಸುವುದೇನೆಂದರೆ ಭಾರತದಲ್ಲಿ ಈಗ ಇರುವ ಜಾತಿ, ಮತ, ಕುಲ, ಪಂಗಡ ಇತ್ಯಾದಿ ವೈವಿಧ್ಯಪೂರ್ಣವಾದ ಸಾಮಾಜಿಕ ಗುಂಪುಗಳು ಯಾರದೋ ಲಾಭಕ್ಕಾಗಿ ಮಾಡಿಕೊಂಡ ಒಂದು ವ್ಯವಸ್ಥೆ. ಹಾಗೂ ಉಳಿದವರ ಮೇಲೆ ಒತ್ತಾಯದಿಂದ ಹೇರಿದ ಒಂದು ವ್ಯವಸ್ಥೆ. ಈ ವ್ಯವಸ್ಥೆಯಿಂದ ಮೇಲಿನ ಜಾತಿಗಳಿಗೆಲ್ಲ ಲಾಭವಾಗುತ್ತದೆ, ಕೆಳಗಿನ ಜಾತಿಗಳಿಗೆಲ್ಲ ಇದು ಶೋಷಣೆ.
ಈ ಕಥೆಯನ್ನು ಜಾತಿ ವ್ಯವಸ್ಥೆಯ ಸಿದ್ಧಾಂತ ಎಂದು ಸೂಚಿಸುತ್ತಿದ್ದೇನೆ. ನಿಮಗೆ ಈ ಕಥೆ ಗೊತ್ತಿದೆಯೊ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹೌದು ಅಂತಾದರೆ ನಿಮಗೂ ಆ ಸಿದ್ಧಾಂತವು ಗೊತ್ತಿದೆ ಎಂದರ್ಥ. ಏಕೆ ಈ ವಿಷಯವನ್ನು ಹೀಗೆ ಪರಿಚಯಿಸುವ ಪ್ರಸಂಗ ಬಂದಿದೆಯೆಂದರೆ ಕನ್ನಡದ ಬುದ್ಧಿಜೀವಿಗಳಲ್ಲಿ ಅನೇಕರು ಇಂದಿಗೂ ಕೂಡ ನಾನು ಏನು ಹೇಳುತ್ತಿದ್ದೇನೆಂಬುದನ್ನು ಗ್ರಹಿಸಿದಂತಿಲ್ಲ. ನಾನು ಭಾರತದಲ್ಲಿ ಜಾತಿಗಳೇ ಇಲ್ಲವೆಂದು ಹೇಳುತ್ತಿದ್ದೇನೆ ಎಂಬುದಾಗಿ ಪ್ರಚಾರ ನಡೆಸಿ ನನ್ನ ಬುದ್ಧಿಮತ್ತೆಯನ್ನೇ ಲೇವಡಿ ಮಾಡಲು ಪ್ರಯತ್ನಿಸಿದರು. ನಾನು ನಮ್ಮ ಸಮಾಜದಲ್ಲಿರುವ ದೌರ್ಜನ್ಯವನ್ನು ಸಮರ್ಥಿಸುತ್ತಿದ್ದೇನೆ ಎಂದು ಖಳನಾಯಕ ಪಟ್ಟವನ್ನು ನೀಡಲು ಪ್ರಯತ್ನಿಸಿದರು. ನಾನು ವಸಾಹತೋತ್ತರ ಚಿಂತಕರ ಹೇಳಿಕೆಗಳನ್ನು ಪಠಿಸುತ್ತಿದ್ದೇನೆ ಎಂಬುದಾಗಿ ನನ್ನ ಹೇಳಿಕೆಯನ್ನು ಗೌಣಮಾಡಲು ಪ್ರಯತ್ನಿಸಿದರು. ಇದೆಲ್ಲ ಪ್ರಗತಿಪರರ ಕಥೆಯಾಯಿತು. ಹಾಗಾದರೆ ನಮ್ಮ ಭಾರತೀಯ ಸಮಾಜವು ಅವ್ಯವಸ್ಥಿತವಾಗಿದೆಯೆ? ನಮ್ಮ ಸಮಾಜದಲ್ಲಿ ನಾಲ್ಕು ವರ್ಣಗಳಿವೆ ಎಂಬುದಾಗಿ ನಮ್ಮ ಪ್ರಾಚೀನ ಗ್ರಂಥಗಳು ಹೇಳುವುದು ಸುಳ್ಳೆ? ಎಂದು ಕೇಳಿದ ಸಂಪ್ರದಾಯಸ್ಥರೂ ಇದ್ದಾರೆ. ಯಾರಿಗೇ ಇರಬಹುದು ನನ್ನ ಉತ್ತರ ಒಂದೇ: ಈ ಮೇಲಿನ ಕಥೆ ನಿಜವಾಗಲಿಕ್ಕೆ ಸಾಧ್ಯವಿಲ್ಲ.
ನಿಮ್ಮ ಸುತ್ತುಮುತ್ತಲೇ ಇರುವ ಅಸಂಖ್ಯಾತ ಜಾತಿ, ಮತ ಇತ್ಯಾದಿ ಗುಂಪುಗಳನ್ನು ನಾಲ್ಕು ವರ್ಣಗಳಲ್ಲಿ ಗುರುತಿಸುತ್ತಾ ಹೋಗಿ. ಕೊನೆಗೆ ಅವುಗಳಲ್ಲಿ ಬಹುಪಾಲು ಜಾತಿಗಳು ಈ ನಾಲ್ಕು ವರ್ಣಗಳಲ್ಲಿ ಯಾವುದಕ್ಕೂ ಸೇರುವುದಿಲ್ಲ ಎಂಬುದನ್ನು ಕಂಡುಕೊಳ್ಳುತ್ತೀರಿ. ಹಾಗಾಗಿ ಈಗ ನಾವು ನೋಡುತ್ತಿರುವುದು ವರ್ಣ ವ್ಯವಸ್ಥೆಯಂತೂ ಅಲ್ಲ. ಇದಕ್ಕೆ ಉತ್ತರವಾಗಿ ಒಮ್ಮೆ ಇದ್ದ ವರ್ಣ ವ್ಯವಸ್ಥೆಯು ಕಾಲಾಂತರದಲ್ಲಿ ಬದಲಾಗಿ ಇಂದಿನ ಜಾತಿ ವ್ಯವಸ್ಥೆಯಾಗಿದೆ ಎಂದು ಸಮಜಾಯಿಷಿ ನೀಡಲಾಗುತ್ತದೆ. ಈ ಹೇಳಿಕೆಗೆ ಕೆಲವು ಉಪಕಥೆಗಳನ್ನು ಬಿಟ್ಟರೆ ಇನ್ನೂ ಯಾವುದೇ ಖಚಿತವಾದ ಆಧಾರವನ್ನು ಯಾರೂ ತೋರಿಸಿಲ್ಲ. ಆದರೆ ಎಲ್ಲರದೂ ಒಂದೇ ಕಥೆ: ಯಾರೋ ಈ ಸಮಾಜವನ್ನು ಹೀಗೆ ವ್ಯವಸ್ಥಿತಗೊಳಿಸಿ ನಿಯಮಗಳನ್ನು ವಿಧಿಸಿದ್ದಾರೆ, ಆ ನಿಯಮಗಳ ಪ್ರಕಾರವೇ ಎಲ್ಲರೂ ಜಾತಿಭೇದವನ್ನು, ದೌರ್ಜನ್ಯವನ್ನು ಒಪ್ಪಿಕೊಂಡಿದ್ದಾರೆ.
ಈ ಕಥೆಯನ್ನು ಪ್ರಶ್ನಿಸಿದರೆ ಏಕೆ ಇಷ್ಟು ಪ್ರತಿರೋಧ ಹುಟ್ಟುತ್ತಿದೆ? ಇದು ನಿರ್ಲಜ್ಜ ಸಂಗತಿ ಏಕಾಗುತ್ತದೆ? ಅನೀತಿ ಹಾಗೂ ಅನ್ಯಾಯದ ಪರ ವಹಿಸಿ ಮಾತನಾಡಿದಂತೆ ಹೇಗಾಗುತ್ತದೆ? ಅಂದರೆ ಇಲ್ಲಿ ಎರಡು ಬೇರೆ ಬೇರೆ ಸಂಗತಿಗಳನ್ನು ಪರಸ್ಪರ ಕಾರ್ಯ-ಕಾರಣಗಳಂತೆ ಜೋಡಿಸುತ್ತಿದ್ದಾರೆ. ಅವೆಂದರೆ ಜಾತಿ ವ್ಯವಸ್ಥೆಯ ಕುರಿತ ಕಥೆ ಹಾಗೂ ಭಾರತೀಯ ಸಮಾಜದಲ್ಲಿ ಇದೆ ಎನ್ನಲಾಗುವ ಅನ್ಯಾಯ ಹಾಗೂ ದೌರ್ಜನ್ಯಗಳು. ಜಾತಿವ್ಯವಸ್ಥೆಯೇ ಈ ದೌರ್ಜನ್ಯಗಳಿಗೆ ಕಾರಣ ಎಂಬುದಾಗಿ ಕಳೆದ ನೂರಾರು ವರ್ಷಗಳಿಂದ ನಂಬಿಕೊಂಡು ಬರಲಾಗಿದೆ. ಹಾಗಾಗಿ ಜಾತಿ ವ್ಯವಸ್ಥೆ ಇಲ್ಲವೆಂದಾಕ್ಷಣ ಈ ದೌರ್ಜನ್ಯವನ್ನು ಸಮರ್ಥಿಸಲಿಕ್ಕಾಗಿ ಅದರ ಕಾರಣವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಗುಮಾನಿ ಹುಟ್ಟುತ್ತದೆ. ಏಕೆ ಮರೆಮಾಚುತ್ತಿದ್ದಾರೆಂದರೆ ಇವರಿಗೇನೋ ಹಿತಾಸಕ್ತಿ ಇದೆ ಎಂಬುದಾಗಿ ಭಾವಿಸಿಕೊಳ್ಳುತ್ತಾರೆ. ಈ ಕಥೆಯನ್ನು ತಿರಸ್ಕರಿಸುವವರು ಬ್ರಾಹ್ಮಣರೇ ಆಗಿದ್ದರಂತೂ ಈ ಕಥೆಗೆ ಅದು ಸರಿಯಾಗಿಯೇ ಹೊಂದುತ್ತದೆ.
ಜಾತಿ ವ್ಯವಸ್ಥೆ ಭಾರತಕ್ಕೇ ವಿಶಿಷ್ಟವಾದುದು. ಹಾಗೂ ಅದು ಹುಟ್ಟುಹಾಕುತ್ತಿರುವ ದೌರ್ಜನ್ಯ ಕೂಡ ಭಾರತಕ್ಕೇ ವಿಶಿಷ್ಟವಾದುದು ಎನ್ನಲಾಗುತ್ತದೆ. ಪ್ರಪಂಚದ ಬೇರೆ ಯಾವ ದೇಶದಲ್ಲೂ ಇಂಥ ಕ್ರೂರ ವ್ಯವಸ್ಥೆ ಇಲ್ಲ ಎನ್ನಲಾಗುತ್ತದೆ. ಭಾರತೀಯ ಮುಸ್ಲಿಂ, ಕ್ರೈಸ್ತರನ್ನೂ ಈ ಅನಿಷ್ಟ ಬಿಟ್ಟಿಲ್ಲ ಎನ್ನಲಾಗುತ್ತದೆ. ಈ ಹೇಳಿಕೆ ಎಷ್ಟು ಹಾಸ್ಯಾಸ್ಪದವಾಗಿದೆ ಎಂಬುದಕ್ಕೆ ಈ ಮುಂದಿನ ಸಂಗತಿಯನ್ನು ಗಮನಿಸಿ: 1947ರ ವರೆಗೆ ಬ್ರಿಟಿಷರು ಆಳುತ್ತಿದ್ದ ಭಾರತದಲ್ಲಿ ಇಂದಿನ ಬಾಂಗ್ಲಾದೇಶ, ಪಾಕಿಸ್ತಾನಗಳೂ ಸೇರಿಕೊಂಡಿದ್ದವು. ಆಗಲೂ ಜಾತಿ ವ್ಯವಸ್ಥೆ ಭಾರತದ ವೈಶಿಷ್ಟ್ಯ ಎಂಬುದಾಗಿ ಎಲ್ಲ ವಿದ್ವಾಂಸರೂ ಹೇಳಿದ್ದಾರೆ. ಆ ದೇಶಗಳು ಈಗ ಭಾರತದಿಂದ ಬೇರ್ಪಟ್ಟಿವೆ. ಆದರೆ ಇಂದು ಜಾತಿ ವ್ಯವಸ್ಥೆ ಈ ಎಲ್ಲಾ ದೇಶಗಳ ವೈಶಿಷ್ಟ್ಯ ಎಂಬುದಾಗಿ ಯಾರೂ ಹೇಳುತ್ತಿಲ್ಲ. ಕೇವಲ ಇಂದಿನ ಭಾರತದಲ್ಲಿ ಮಾತ್ರವೇ ಈ ಅನಿಷ್ಟ ಪದ್ಧತಿ ಇದೆ ಎನ್ನಲಾಗುತ್ತದೆ. ಅದು ಹೇಗೆ ಭಾರತದ ನಕಾಶೆ ಬದಲಾದ ತಕ್ಷಣ ಈ ಜಾತಿವ್ಯವಸ್ಥೆ ಈಗಿನ ಭಾರತಕ್ಕೆ ಮಾತ್ರ ತನ್ನನ್ನು ಹೊಂದಿಸಿಕೊಂಡು ಬಿಡುತ್ತದೆ? ಉಳಿದ ಭಾಗಗಳಲ್ಲಿ ಮಾಯವಾಗಿಹೋಗುತ್ತದೆ? ವಿದ್ವಾಂಸರು ಈ ಕಥೆಯನ್ನು ಎಷ್ಟು ಹಗುರಾಗಿ ಪರಿಗಣಿಸಿದ್ದಾರೆ ಎಂಬುದಕ್ಕೆ ಇದೊಂದು ದೃಷ್ಟಾಂತ.
ಇದು ಒಂದು ವಿಚಾರವಾದರೆ ಇನ್ನೊಂದು ಮುಖ್ಯ ಪ್ರಶ್ನೆ ಇದೆ. ಜಾತಿ ವ್ಯವಸ್ಥೆಗೇ ವಿಶಿಷ್ಟವಾದ ಅನಿಷ್ಟ ಪದ್ಧತಿಗಳು ಯಾವವು ಎನ್ನುತ್ತಾರೆ? ಮೇಲು-ಕೀಳು ಭಾವನೆ, ಹೊರಗಿಡುವುದು, ಸಾಮಾಜಿಕ ಸಂಘರ್ಷ, ಕ್ರೌರ್ಯ, ಹಿಂಸೆ, ಶೋಷಣೆ ಇತ್ಯಾದಿ. ಇವೆಲ್ಲ ಜಾತಿ ವ್ಯವಸ್ಥೆಗೆ ನಿದರ್ಶನಗಳಾಗುವುದಾದರೆ ಇವು ಪ್ರಪಂಚದ ಎಲ್ಲಾ ಸಮಾಜಗಳಲ್ಲೂ ಇರುವಂಥವೇ. ಹಾಗಾಗಿ ಜಾತಿ ವ್ಯವಸ್ಥೆ ಎಲ್ಲ ದೇಶಗಳಲ್ಲೂ ಇಲ್ಲವೆಂದು ಹೇಗೆ ಹೇಳುತ್ತೀರಿ? ಅಂದರೆ ಈ ಮೇಲಿನ ಕಟ್ಟು ಕಥೆಯನ್ನು ಬಿಟ್ಟರೆ ಭಾರತಕ್ಕೇ ವಿಶಿಷ್ಟವಾದ ವ್ಯವಸ್ಥೆ ಏನಿದೆ ಎಂಬುದು ಸ್ಪಷ್ಟವಿಲ್ಲ. ಭಾರತದಲ್ಲೂ ಕೂಡ ಈ ಮೇಲಿನ ದುರ್ಗುಣಗಳು ಯಾವುದೇ ಜಾತಿಯ ಸೊತ್ತು ಎನ್ನಲು ಆಧಾರಗಳಿವೆಯೆ? ಜಾತಿ ವ್ಯವಸ್ಥೆಯ ಕಥೆಯನ್ನು ನಿಜ ಎಂದುಕೊಂಡರೆ ಕೇವಲ ಮೇಲ್ಜಾತಿಯವರು ಮಾತ್ರವೇ ಕೆಳಜಾತಿಯವರ ಮೇಲೆ ದೌರ್ಜನ್ಯಗಳನ್ನು ನಡೆಸಬೇಕು. ಈ ಮುಂದಿನ ದೌರ್ಜನ್ಯಗಳು ಇರಬಾರದು: 1. ಕೆಳಜಾತಿಯವರು ಕೆಳಜಾತಿಯವರ ಮೇಲೆ ನಡೆಸುವ ದೌರ್ಜನ್ಯ. 2. ಕೆಳಜಾತಿಯವರು ಮೇಲ್ಜಾತಿಯವರ ಮೇಲೆ ನಡೆಸುವ ದೌರ್ಜನ್ಯ. ಏಕೆಂದರೆ ಈ ಎರಡೂ ಪ್ರಕಾರದ ದೌರ್ಜನ್ಯಗಳನ್ನು ಜಾತಿ ವ್ಯವಸ್ಥೆಯ ಕುರಿತ ಕಥೆಯಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಷ್ಟೇ ಅಲ್ಲ, ಅವು ಈ ಕಥೆಯನ್ನು ಅಲ್ಲಗಳೆಯುತ್ತವೆ. ಆದರೆ ಇಂಥ ದೃಷ್ಟಾಂತಗಳು ಕೂಡ ನಮ್ಮ ಸಮಾಜದಲ್ಲಿ ಕಣ್ಣಿಗೆ ರಾಚುವಂತೆ ಇವೆ.
ಈ ಕಥೆಯ ಪ್ರಕಾರ ಅವಮಾನಕರವಾದ, ಅನಾರೋಗ್ಯಕರವಾದ ಹಾಗೂ ಹಿಂಸಾತ್ಮಕವಾದ ಸಾಮಾಜಿಕ ಕಟ್ಟುಪಾಡುಗಳನ್ನು ಬ್ರಾಹ್ಮಣರು ಕೆಳಜಾತಿಯವರಿಗೆ ಮಾತ್ರವೇ ವಿಧಿಸಿ ತಾವು ಹಾಯಾಗಿ ಇರಬೇಕು. ಆದರೆ ಬ್ರಾಹ್ಮಣರು ಉಳಿದವರಿಗಿಂತ ಹೆಚ್ಚು ಕಟ್ಟುಪಾಡುಗಳನ್ನೇ ಇಟ್ಟುಕೊಂಡಿದ್ದಾರೆ. ಇಂದು ಬ್ರಾಹ್ಮಣ ಸಮಾಜವನ್ನು ಇಂಥ ಕೆಲವು ಆಚರಣೆಗಳಿಂದ ಬಿಡಿಸಲು ನಡೆದಷ್ಟು ಚಳುವಳಿಗಳು ಬೇರೆ ಸಮಾಜಗಳ ಸಂದರ್ಭದಲ್ಲ್ಲಿ ನಡೆದಿಲ್ಲ. ಅದಕ್ಕಿಂತ ಮುಖ್ಯವೆಂದರೆ ಆಯಾ ಜಾತಿಯ ಕಟ್ಟುಪಾಡುಗಳನ್ನು ಅವರವರೇ ರೂಢಿಸಿಕೊಂಡು ತಲೆ ತಲಾಂತರದಿಂದ ಪಾಲಿಸಿಕೊಂಡು ಬಂದಿದ್ದಾರೆ ಎಂಬುದು ಭಾರತೀಯ ಸಮಾಜದಲ್ಲಿ ಹುಟ್ಟಿ ಬೆಳೆದ ಯಾರಿಗಾದರೂ ಇರತಕ್ಕ ಅನುಭವ. ಹೀಗಿರುವಾಗ ತಮಗೆ ತಾವೇ ಕಟ್ಟುಪಾಡುಗಳನ್ನು ಹಾಕಿಕೊಳ್ಳುವ ವ್ಯವಸ್ಥೆಯಿಂದ ಬ್ರಾಹ್ಮಣರಿಗೇನು ಲಾಭವಾಗಿರಬಹುದು?
ಭಾರತದಲ್ಲಿ ಇರುವ ವೈವಿಧ್ಯಪೂರ್ಣವಾದ ಸಾಮಾಜಿಕ ಸಮುದಾಯಗಳು ಏಕೆ ಹಾಗಿವೆ? ಅವೇಕೆ ಕ್ರೈಸ್ತ, ಇಸ್ಲಾಂ ರಿಲಿಜನ್ನುಗಳಂತೆ ಇಲ್ಲ? ಎಂಬ ಪ್ರಶ್ನೆಯನ್ನು ಉತ್ತರಿಸುವ ಸಲುವಾಗಿ ಮೇಲಿನ ಕಥೆಯು ಪಾಶ್ಚಾತ್ಯರಿಂದ ಹುಟ್ಟಿಕೊಂಡಿದೆ. ನಮ್ಮ ಸಾಮಾಜಿಕ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಎಲ್ಲರೂ ಸಧ್ಯಕ್ಕೆ ಅದನ್ನೊಂದು ಸಿದ್ಧಾಂತವೆಂದು ಬಳಸುತ್ತಿದ್ದಾರೆ. ಹಿಂದೂಯಿಸಂ ಹಾಗೂ ಅದರ ಧರ್ಮಗ್ರಂಥ, ತತ್ವಗಳು, ಅದನ್ನಾಧರಿಸಿದ ಕಾನೂನುಗಳು, ಬ್ರಾಹ್ಮಣ ಪುರೋಹಿತ ಶಾಹಿ, ಇತ್ಯಾದಿ ಸಂಗತಿಗಳು ಭಾರತದಲ್ಲಿ ನಿಜವಾಗಿಯೂ ಇಲ್ಲ ಅಂತಾದರೆ ಈ ಮೇಲಿನ ಕಥೆಯೂ ನಿಜವಾಗಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ಈ ಕಲ್ಪನೆಗಳನ್ನು ಆಧರಿಸಿಯೇ ಈ ಕಥೆಯನ್ನು ಕಟ್ಟಲಾಗಿದೆ. ನಾನು ಸಂಶೋಧನೆ ಮಾಡುತ್ತ ಮಾಡುತ್ತ ಕಂಡುಕೊಂಡದ್ದು ಕೂಡ ಅದನ್ನೇ. ನಾನೂ ಕೂಡ ಈ ಕಥೆಯನ್ನು ಅಲ್ಲಗಳೆಯಬೇಕೆಂದು ಹರಕೆ ಹೊತ್ತು ಸಂಶೋಧನೆಗೆ ತೊಡಗಿರಲಿಲ್ಲ. ಆದರೆ ಈಗ ಈ ಕಥೆಯನ್ನು ಒಪ್ಪಿಕೊಳ್ಳಬೇಕಾದರೆ ನಾನು ನನ್ನ ಇದುವರೆಗಿನ ಸಂಶೋಧನೆಯನ್ನೇ ನಿರಾಕರಿಸಬೇಕಾಗುತ್ತದೆ ಎಂಬುದು ಮಾತ್ರ ಅರಿವಾಗಿದೆ.
ನಮ್ಮ ಸಂಶೋಧನೆಗೆ ಕುಯುಕ್ತಿಯನ್ನು ಆರೋಪಿಸುವುದು ಯುಕ್ತವೆ?
ಪ್ರೊ.ರಾಜಾರಾಮ ಹೆಗಡೆ
ದೇವನೂರು ಮಹಾದೇವರವರ ಲೇಖನಕ್ಕೆ ಪ್ರತಿಕ್ರಿಯೆ
{ಪ್ರಜಾವಾಣಿಯಲ್ಲಿ ಅಪ್ರಕಟಿತ ಲೇಖನ}
ಸನ್ಮಾನ್ಯ ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಹಾಗೂ ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ, ಅವರನ್ನು ಕಾಡಿದ ಹೇಗೆ ಹೇಳಲಿ ಎಂಬ ಪ್ರಶ್ನೆಯು ಈಗ ನನ್ನದೇ ಆಗಿದೆ. ದೇವನೂರರ ಕಥನದ ಭಾಷೆ ನನಗೆ ತುಂಬಾ ಇಷ್ಟ. ಆದರೆ ಇಲ್ಲಿ ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದೂ ಸ್ಪಷ್ಟ. ಅವರಿಗೆ ನಮ್ಮ ಮೇಲೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.
ನಮ್ಮ ದುರುದ್ದೇಶದ ಕುರಿತು ಅವರು ಕಟ್ಟಿಕೊಂಡಿರುವ ಚಿತ್ರಗಳನ್ನು ಅವರ ಲೇಖನದ ಮೂಲಕ ಗ್ರಹಿಸುತ್ತ ಹೋದಾಗ ನಮ್ಮ ಕುರಿತು ಯಾವ ರೀತಿಯ ಚಿತ್ರಣವು ಅವರ ವಲಯದಲ್ಲಿ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಸಿಕ್ಕಂತಾಯಿತು. ಹಾಗಂತ ಇದೇನೂ ನನಗೆ ಆಘಾತ ನೀಡಲಿಲ್ಲ. ಈ ಥೆರಪಿಯನ್ನು ನನಗೆ ಹಾಗೂ ನನ್ನ ಗುಂಪಿಗೆ ನಾವು ಬಾಲು ಜೊತೆ ಸೇರಿ ಸಂಶೋಧನೆ ಪ್ರಾರಂಭಿಸಿದಾಗಿನಿಂದಲೂ ನೀಡಲಾಗುತ್ತಿದೆ. ಸಂಶೋಧನೆ ಮಾಡುವುದು ಕೇವಲ ಬೌದ್ಧಿಕ ಪ್ರಶ್ನೆಯೊಂದೇ ಅಲ್ಲ, ಅದು ಪ್ರವಾಹದ ವಿರುದ್ಧ ಈಜುವ ಕೆಲಸ ಕೂಡ ಆಗಿದೆ ಎಂಬುದು ನಮಗೆ ಈಗಾಗಲೇ ಅನುಭವ ವೇದ್ಯವಾಗಿದೆ. ನಮ್ಮ ದುರುದ್ದೇಶದ ಕುರಿತು ಹುಟ್ಟುತ್ತಿರುವ ಕಥೆ ಸಾಕಷ್ಟು ಬೇರುಬಿಡುತ್ತಿದೆ ಎಂಬುದನ್ನು ಪ್ರಜಾವಾಣಿ ಪ್ರತಿಕ್ರಿಯೆಗಳಿಂದ ಮನಗಾಣುತ್ತಿದ್ದೇನೆ. ದೇವನೂರರೇ ಕೊಟ್ಟ ಆಡಿನ ಕಥೆಯಂತೆ ಹತ್ತಾರು ಮಂದಿ ಒಂದು ಸುಳ್ಳನ್ನು ಹೇಳುತ್ತಿದ್ದರೆ, ಹಾಗೂ ನಾವು ಸುಮ್ಮನೇ ಇದ್ದರೆ ಜನ ಅದನ್ನೇ ಸತ್ಯವೆಂದು ನಂಬಿಬಿಡುವ ಸಾಧ್ಯತೆಯಿದೆ. ಒಂದೊಮ್ಮೆ ನಮ್ಮ ಸಂಶೋಧನೆಯು ದೇವನೂರರು ಅಂದುಕೊಂಡಂತೇ ಯಾವುದೇ ಮಾನವ ಸಮುದಾಯದ ಅಹಿತವನ್ನು ಬಯಸುವ ದುರುದ್ದೇಶವನ್ನು ಹೊಂದಿಲ್ಲ ಅಂತಾದರೆ, ಈ ನಿಟ್ಟಿನಲ್ಲಿ ಈಗಿರುವ ಜ್ಞಾನದ ಮಿತಿಗಳನ್ನು ಕಳೆದು ಇನ್ನೂ ಹೆಚ್ಚು ಸ್ಪಷ್ಟತೆಯನ್ನು, ನ್ಯಾಯವನ್ನು ಸಾಧಿಸುವುದು ಅಂತಾದರೆ, ದೇವನೂರರ ನೋವಿಗೆ ಇರಬಹುದಾದ ಕಾರಣಗಳೇ ಮಾಯವಾಗುತ್ತವೆ. ಮುಂದೆ ಅವರ ಜೊತೆ ಅರ್ಥಪೂರ್ಣ ಸಂವಾದ ಸಾಧ್ಯವಾಗಬಹುದು ಎಂಬ ಆಶಯದಿಂದ ಈ ಲೇಖನ.
ಹಾಗಾಗಿ ಈ ಆರೋಪ ನಿರಾಧಾರವಾದುದು ಎಂಬುದನ್ನು ಸ್ಪಷ್ಟೀಕರಿಸುತ್ತಿದ್ದೇನೆ. ಈ ಆರೋಪವನ್ನು ಮಾಡಲಿಕ್ಕೆ ದೊರೆಯುವ ಸಮರ್ಥನೆಗಳು ಯಾವವು? 1) ನಾವು ಈಗ ಪ್ರಚಲಿತದಲ್ಲಿರುವ, ವಿದ್ವಾಂಸರು ಸತ್ಯವೆಂದುಕೊಂಡಿರುವ ವಿಚಾರಗಳಲ್ಲಿ ಸಮಸ್ಯೆಗಳಿವೆ ಎಂಬುದನ್ನು ತೋರಿಸುತ್ತಿದ್ದೇವೆ. 2) ಈ ವಿಚಾರಗಳು ಇಂದಿನ ಸಾಮಾಜಿಕ ನ್ಯಾಯದ ಜೊತೆಗೆ ತಳಕು ಹಾಕಿಕೊಂಡಿವೆ. 3) ಇಂದಿನ ಸಾಮಾಜಿಕ ನ್ಯಾಯದ ಹಾಗೂ ಅದನ್ನಾಧರಿಸಿದ ನೀತಿಗಳ ಕುರಿತು ಮರುಚಿಂತನೆ ನಡೆಸಬೇಕೆಂಬ ಆಶಯವೂ ನಮ್ಮ ಸಂಶೋಧನೆಯಲ್ಲಿದೆ. ಈ ಸಂಗತಿಗಳು ಇವೆ ಎಂದಾಕ್ಷಣ ನಾವು ಅನ್ಯಾಯದ ಪರ, ಸಮಾಜವಿರೋಧಿಗಳು ಎಂಬುದಾಗಿ ಯಾವ ಸೀಮೆಯ ತರ್ಕದ ಪ್ರಕಾರ ಹೇಳುತ್ತೀರಿ? ಈ ಆಶಯವು ವಿಶೇಷವಾಗಿ ನಮ್ಮ ಮಾನವೀಯ ಕಳಕಳಿಯಿಂದಲೇ ಹುಟ್ಟಿದೆ ಎಂಬುದಾಗಿ ಗ್ರಹಿಸುವ ಸಾಧ್ಯತೆಯೂ ಇದೆಯಲ್ಲ? ನಮ್ಮ ಈ ಕೆಲಸದಲ್ಲಿ ಒಂದೊಮ್ಮೆ ನಾವು ತಪ್ಪುಗಳನ್ನು ಮಾಡಿರಬಹುದಾದರೂ ಅವನ್ನು ನಮ್ಮ ಸಂಶೋಧನೆಯ ಮಿತಿಗಳು ಎಂದು ಸಹಜವಾಗಿಯೇ ಗುರುತಿಸಬಹುದಲ್ಲ? ವೃಥಾ ದುರುದ್ದೇಶದ ಆರೋಪವೇಕೆ? ಇಂಥ ಸಂಶೋಧನೆಯನ್ನೇ ಮಾಡಕೂಡದು, ಅದು ಸಮಾಜ ವಿರೋಧಿ ಧೋರಣೆಯಾಗುತ್ತದೆ ಎಂದು ವಾದಿಸುವುದಾದರೆ ನಿಮ್ಮ ಪ್ರಕಾರ ಇಂದಿನ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಂತಿಮ ವಾದುದು, ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ, ಹಾಗೂ ಅದಕ್ಕೆ ಯಾವ ಪರ್ಯಾಯವೂ ಇಲ್ಲ ಎಂಬುದಾಗಿ ನಂಬಬೇಕಾಗುತ್ತದೆ. ಆಗ ನಮ್ಮ ಉದ್ದೇಶಗಳನ್ನು ಶಂಕಿಸುವ ಬದಲು ಸಮಾಜ ವಿಜ್ಞಾನ ವಿಭಾಗಗಳನ್ನೇ ಮುಚ್ಚಲು ಕರೆ ಕೊಡುವುದು ಒಳ್ಳೆಯ ಉಪಾಯವಲ್ಲವೆ?
ಈ ಹಿಂದೆ ಉಲ್ಲೇಖಿಸಿದ ಮೂರು ಅಂಶಗಳನ್ನು ಬಿಟ್ಟು ನಮ್ಮ ಸಂಶೋಧನೆಗೆ ಬೇರಾವುದೇ ಉದ್ದೇಶವಿದೆ ಎಂಬುದನ್ನು ನಮ್ಮ ಯಾವುದೇ ಬರೆಹಗಳಾಗಲೀ, ಭಾಷಣಗಳಾಗಲೀ ತಿಳಿಸುತ್ತಿಲ್ಲ. ಆದರೆ ನಮ್ಮ ಲೇಖನಗಳ ಸಾಲುಗಳನ್ನು ಸಂದರ್ಭದಿಂದ ಪ್ರತ್ಯೇಕಿಸಿ, ಅವುಗಳ ಅಭಿವ್ಯಕ್ತಿಯಲ್ಲಿರಬಹುದಾದ ಮಿತಿಗಳನ್ನು ದೊಡ್ಡಮಾಡಿ ನಾವು ದುರುದ್ದೇಶದಿಂದ ಸಂಶೋಧನೆ ಮಾಡುತ್ತಿದ್ದೇವೆ ಎಂಬುದನ್ನು ದೃಷ್ಟಾಂತ ಪಡಿಸಲೆಂದೇ ಅವನ್ನು ಬಳಸಿಕೊಂಡಾಗ ತತ್ಕ್ಷಣಕ್ಕೆ ಅದು ನಮ್ಮ ಮೇಲೆ ಸಂದೇಹ ಮೂಡಿಸುವ ಸಾಧ್ಯತೆ ಇದೆ. ಉದಾಹರಣೆಗೆ ದಲಿತರ ಮೇಲಿನ ದೌರ್ಜನ್ಯದ ಕುರಿತ ಅಂಕಿ ಅಂಶಗಳು. ಅದರ ಅಡಿ ಟಿಪ್ಪಣಿಯಲ್ಲಿ “ಇದು ಅಸಾಧ್ಯವೆಂದೇನೂ ನಮ್ಮ ಊಹೆಯಲ್ಲ” ಎಂಬ ಸಾಲನ್ನು ಚೆನ್ನಿಯವರು ಕೈಬಿಟ್ಟಿದ್ದಾರೆ. ನಂತರ ಆ ಭಾಗವನ್ನು ನಿರೂಪಿಸಿ ಮುಂದಿನ ಪ್ಯಾರಾ, ಪುಟ 124 ರಲ್ಲಿ ” ಇದರರ್ಥ ಕೊಲೆಗಳನ್ನು ಮತ್ತು ಅತ್ಯಾಚಾರಗಳನ್ನು ಖಂಡಿಸಲೇಬಾರದೆಂದಲ್ಲ. ಅದು ನಮ್ಮ ಉದ್ದೇಶವೂ ಅಲ್ಲ. ಆದರೆ ಈ ರೀತಿಯ ದೋಷಯುಕ್ತ ವಿಶ್ಲೇಷಣೆಗಳಿಂದ ಇದ್ದ ಸಮಸ್ಯೆ ಬಗೆಹರಿಯುವುದು ಹಾಗಿರಲಿ, ಅದನ್ನು ಅರ್ಥಮಾಡಿಕೊಳ್ಳಲೂ ಆಗುವುದಿಲ್ಲ ಎಂಬುದಷ್ಟೇ ಇಲ್ಲಿನ ವಾದ” ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಂದರೆ ಇಂಥ ದೌರ್ಜನ್ಯಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ವಿಶ್ಲೇಷಣೆಗಳು ಬೇಕಾಗಿವೆ ಎಂಬ ಆಶಯ ಇಲ್ಲಿದೆ. ಇದರಲ್ಲಿ ಏನು ಅಂಥ ಕ್ರೌರ್ಯವನ್ನು, ಅಮಾನವೀಯತೆಯನ್ನು ಗುರುತಿಸುತ್ತೀರಿ? ಅಂದರೆ ಒಂದು ಕೃತಿಯನ್ನು (ಅಥವಾ ಕಥಯನ್ನೇ ಇಟ್ಟುಕೊಳ್ಳಿ) ಒಟ್ಟಾಗಿ ಅರ್ಥೈಸುತ್ತೀರೊ ಅಥವಾ ವಾಕ್ಯಕ್ಕೊಂದೊಂದು ಅರ್ಥ ಹಚ್ಚುತ್ತೀರೊ? ನಮ್ಮ ಕುರಿತು ಪೂರ್ವಾಗ್ರಹವನ್ನು ಬಿಟ್ಟು, ನಮಗೆ ಸದುದ್ದೇಶವನ್ನು ಆರೋಪಿಸಿ ದೇವನೂರರು ಮತ್ತೊಮ್ಮೆ ಆ ಪುಸ್ತಕವನ್ನು ಮೊದಲಿನಿಂದ ಕಡೆಯವರೆಗೆ ಓದಿದಲ್ಲಿ ಅದು ಹೀಗೆಯೇ ಕಾಣಿಸುತ್ತದೆಯೆ ಎಂಬುದನ್ನು ಒಮ್ಮೆ ಪರೀಕ್ಷಿಸಲಿ ಎಂಬುದು ನನ್ನ ವಿನಂತಿ.
ನಮ್ಮ ಕೃತಿಗಳಲ್ಲಿ ನಾವು ಸ್ವೀಕೃತ ಸಿದ್ಧಾಂತಗಳನ್ನು ಪ್ರಶ್ನಿಸುತ್ತಿದ್ದೇವೆಯೇ ವಿನಃ ಯಾವುದೇ ಸಮುದಾಯವನ್ನು ನಿಂದಿಸುತ್ತಿಲ್ಲ, ಅನ್ಯಾಯವನ್ನು ಸಮರ್ಥಿಸುತ್ತಿಲ್ಲ. ಹೀಗಿರುವಾಗ ನಮ್ಮ ಕೃತಿಗಳ ಸಾಲುಗಳನ್ನು ಹೀಗೆ ಸಂದರ್ಭದಿಂದ ಬೇರ್ಪಡಿಸಿ ದುರುದ್ದೇಶವನ್ನು ಆರೋಪಿಸುವವರಲ್ಲಿ ಏನು ಸದುದ್ದೇಶವಿರಬಹುದು? ಜಾತಿಗಳನ್ನು ಹಾಗೂ ಸಮುದಾಯವನ್ನು ನಮ್ಮ ವಿರುದ್ಧ ಎತ್ತಿಕಟ್ಟುವುದೆ? ನಾವು ಕ್ರೂರಿಗಳು, ಮಾನವ ದ್ವೇಷಿಗಳು ಎಂಬುದನ್ನು ಸಾಬೀತು ಪಡಿಸುವುದೆ? ಮೂಲತಃ ಇನ್ನೂ ಕೊನೆಮುಟ್ಟದ ಸಂಶೋಧನೆಯ ಪ್ರಕ್ರಿಯೆಯಾಗಿರುವ ನಮ್ಮ ಬರವಣಿಗೆಗಳನ್ನು ಈ ರೀತಿಯಲ್ಲಿ ಬೀದಿ ರಂಪಕ್ಕೆಳೆಯಲು ಹೊರಟಿರುವವರಿಗೆ ತಮ್ಮ ನಂಬಿಕೆಯನ್ನು ಪ್ರಶ್ನಿಸುವ ಸಂಶೋಧನೆಯೇ ನಡೆಯ ಕೂಡದು ಎಂಬ ಅಭಿಪ್ರಾಯವಲ್ಲದೇ ಇನ್ನಾವ ಸದುದ್ದೇಶವಿದ್ದೀತು? ಆದರೆ ಇಂಥ ಕೆಲಸಗಳು ಪ್ರಚೋದನಕಾರಿಯಾಗಿರುವುದಂತೂ ಹೌದು. ಈಗಾಗಲೇ ಇದರ ಫಲವಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ನಮ್ಮ ಕೇಂದ್ರವನ್ನು ಮುಚ್ಚಬೇಕೆಂಬುದಾಗಿ ಸಹಿ ಸಂಗ್ರಹಣೆ ನಡೆಯುತ್ತಿದೆ. ಸಂಶೋಧನಾ ಕೇಂದ್ರಗಳನ್ನು ಮುಚ್ಚಿಬಿಟ್ಟರೆ ಸಂಶೋಧನೆಯಾಗಲೀ, ಚಿಂತನೆಯಾಗಲೀ ನಿಂತುಹೋಗುತ್ತದೆಯೆ ಎಂಬುದು ಬೇರೆ ವಿಚಾರ. ಆದರೆ ಅಷ್ಟು ಮಂದಿಗೆ ನಮ್ಮ ವಿರುದ್ಧ ದ್ವೇಷಭಾವನೆಯನ್ನು ಹುಟ್ಟುಹಾಕಿದ್ದೇನೂ ಸುಳ್ಳಲ್ಲವಲ್ಲ! ಇದೇ ಕೆಲಸವನ್ನು ನಾವೂ ಮಾಡಬಹುದಲ್ಲ? ತಮ್ಮೆಲ್ಲರ ಕೃತಿಗಳಿಂದ ಒಂದಷ್ಟು ಸಾಲುಗಳನ್ನು ಸಂದರ್ಭದಿಂದ ಎತ್ತಿಟ್ಟು ಜನಾಂಗ ದ್ವೇಷ, ಜಾತಿ ದ್ವೇಷಗಳನ್ನು ತೋರಿಸಿ ಬೀದಿ ರಂಪ ಮಾಡುವುದು ಕಷ್ಟವೆ? ಆಗ ಕೋಮುವಾದಿ ಹಿಂಸೆಯನ್ನು ಪ್ರಚೋದಿಸುವವರಿಗೂ ನಮಗೂ ಏನು ವ್ಯತ್ಯಾಸ ಉಳಿದಂತಾಯಿತು? ಈ ತಂತ್ರವನ್ನು ಅನುಸರಿಸುವುದು ಅನಾರೋಗ್ಯಕರ ಅಷ್ಟೇ ಅಲ್ಲ ಒಟ್ಟಾರೆಯಾಗಿ ಬೌದ್ಧಿಕ ಪ್ರಪಂಚಕ್ಕೇ ಅನಾಹುತಕಾರಿ ಎಂಬುದನ್ನು ನಾವೆಲ್ಲರೂ ಮನಗಾಣುವ ಅಗತ್ಯವಿದೆ.
ಇನ್ನು ನಮ್ಮನ್ನು ವೈದಿಕ ಶಾಹಿ (ಬ್ರಾಹ್ಮಣ ಪುರೋಹಿತಶಾಹಿ)ಯ ರಕ್ಷಣೆಗೆ, ಪುನರುತ್ಥಾನಕ್ಕೆ ಸಂಚು ಮಾಡುವವರು ಎಂಬ ಆಪಾದನೆಯನ್ನು ಮಾಡಲಿಕ್ಕೆ ಕೂಡ ನಮ್ಮ ಬರವಣಿಗೆಗಳಲ್ಲಿ ಸಾಕ್ಷ್ಯಾಧಾರಗಳನ್ನು ತೋರಿಸಬೇಕಾಗುತ್ತದೆ. ಈ ಮೇಲೆ ಹೇಳಿದಂತೆ ಇಂದು ನಾವು ನಮ್ಮ ಸಂಸ್ಕೃತಿ ಹಾಗೂ ಸಮಾಜದ ಕುರಿತು ಸತ್ಯವೆಂಬುದಾಗಿ ನಂಬಿಕೊಂಡಿರುವ ಚಿಂತನೆಗಳನ್ನು ಪ್ರಶ್ನಿಸುತ್ತಿದ್ದೇವೆ. ಆಗ ಅದರ ಅಂಗವಾದ ಬ್ರಾಹ್ಮಣ ಪುರೋಹಿತಶಾಹಿ, ಮೂಢನಂಬಿಕೆ, ಹಿಂದೂಯಿಸಂ, ಸೆಕ್ಯುಲರಿಸಂ, ಜಾತಿ ವ್ಯವಸ್ಥೆ ಇತ್ಯಾದಿಗಳ ಕುರಿತು ನಾವು ಪ್ರಚಲಿತ ಅಭಿಪ್ರಾಯಗಳು ಆಧಾರರಹಿತ ಎಂಬುದನ್ನು ಕಂಡುಕೊಳ್ಳುತ್ತಿದ್ದೇವೆ. ಕಂಡುಕೊಂಡಿದ್ದನ್ನು ಹೇಳುತ್ತಿದ್ದೇವೆ. ಬ್ರಾಹ್ಮಣ ಪುರೋಹಿತಶಾಹಿ ಇದೆಯೆಂದು ಕಂಡುಬಂದಿದ್ದರೆ ಇಲ್ಲ ಎಂಬುದಾಗಿ ಸುಳ್ಳನ್ನೂ ಹೇಳುತ್ತಿರಲಿಲ್ಲ. ಇಲ್ಲ ಸುಳ್ಳು ಹೇಳುತ್ತಿದ್ದೇವೆ ಅನ್ನಿಸಿದರೆ ಅದನ್ನು ನಮ್ಮ ವಾದದಲ್ಲೇ ತೋರಿಸಲಿಕ್ಕೆ ಮಾರ್ಗಗಳಿರುತ್ತವೆ. ಒಂದೊಮ್ಮೆ ನಾನು ಹೇಳಿದ್ದು ಸುಳ್ಳಾದರೂ ಕೂಡ ಅದು ನನ್ನ ತಪ್ಪಾಗಬಹುದೇ ವಿನಃ ಸಂಚು ಎಂದು ಹೇಗೆ ಹೇಳುತ್ತೀರಿ? ಹಿಂದೂಯಿಸಂ ಇಲ್ಲವೇ ಇಲ್ಲ ಎಂದು ವಾದಿಸುವ ನಮಗೆ ಅದರ ಪುರೋಹಿತಶಾಹಿಯನ್ನು ಜಾರಿಯಲ್ಲಿ ತರುವ ಹುನ್ನಾರವಿದೆ ಎಂದರೆ ನಗಬೇಕೋ ಅಳಬೇಕೊ ತಿಳಿಯುವುದಿಲ್ಲ.
ಇನ್ನು ಅಪರಾಧೀ ಪ್ರಜ್ಞೆಯ ಕುರಿತು. ಕಳೆದ 35 ವರ್ಷಗಳಿಂದ ವೃತ್ತಿಯಲ್ಲಿ ನಾನೊಬ್ಬ ಇತಿಹಾಸಕಾರ, ಹಾಗೂ ಸಂಶೋಧಕ. ಹಾಗಾಗಿ ದೇವನೂರರು ಉಲ್ಲೇಖಿಸಿದ ಪ್ರತೀ ಐತಿಹಾಸಿಕ ಉದಾಹರಣೆಗಳಲ್ಲೂ ಏನೇನು ಸಮಸ್ಯೆಗಳಿವೆ ಎಂಬುದನ್ನು ಬಲ್ಲೆ. ಭಾರತೀಯ ಇತಿಹಾಸದಲ್ಲಿ ನನ್ನ ಹಿಂದಿನವರು ಇತ್ತು ಎಂಬುದಾಗಿ ಭಾವಿಸಿಕೊಂಡ ಅನೇಕ ಸಂಗತಿಗಳಿಗೆ ಸೂಕ್ತ ಆಧಾರಗಳಿಲ್ಲ ಎಂಬುದು ಇಂದು ನನಗೆ ಮನದಟ್ಟಾಗಿದೆ. ಅವುಗಳಲ್ಲಿ ರಿಲಿಜನ್ನು, ಪವಿತ್ರಗ್ರಂಥ, ಪುರೋಹಿತಶಾಹಿ, ಸ್ಟೇಟ್ ಎಂಬ ವ್ಯವಸ್ಥೆ, ಲಾ ಹಾಗೂ ಲೀಗಲ್ ವ್ಯವಸ್ಥೆ, ಇತ್ಯಾದಿಗಳೆಲ್ಲ ನಮ್ಮಲ್ಲಿ ಇದ್ದವು ಎನ್ನಲಿಕ್ಕೆ ಆಧಾರಗಳಿಲ್ಲ. ಇವತ್ತಿನ ಇತಿಹಾಸ ತಜ್ಞರಲ್ಲಿ ಯಾರೂ ಈ ಸಮಸ್ಯೆಗಳನ್ನು ನಿರಾಕರಿಸುವುದಿಲ್ಲ ಅಷ್ಟೇ ಅಲ್ಲ ಅವರು ಎತ್ತಿದ ಸಮಸ್ಯೆಗಳನ್ನೇ ನನ್ನಂಥವರು ಪರಿಹರಿಸಲು ಪ್ರಯತ್ನಿಸುತ್ತಿರುವುದು. ನನಗೆ ಈಗ ಸ್ಪಷ್ಟವಾಗಿರುವುದೆಂದರೆ, ಜಾತಿ ವ್ಯವಸ್ಥೆ ಸಿದ್ಧಾಂತವು ಭಾರತದಲ್ಲಿ ಇರುವ ಅನ್ಯಾಯ, ಅನಾಚಾರಗಳಿಗೆಲ್ಲ ಬ್ರಾಹ್ಮಣ ಜಾತಿಯೇ ಹೊಣೆ ಎನ್ನುತ್ತದೆ. ಅವರೇ ಈ ತರತಮಗಳನ್ನು ಹುಟ್ಟುಹಾಕಿದ್ದಾರೆನ್ನುತ್ತದೆ. ಆದರೆ ಅದೊಂದು ಐತಿಹಾಸಿಕ ಸತ್ಯವಲ್ಲ. ಕಪೋಲಕಲ್ಪಿತ ಆವಾಂತರ.
ನಾನು ಬ್ರಾಹ್ಮಣ ಜಾತೀಯ. ಆದರೆ ನಾನಾಗಲೀ ನಮ್ಮ ಪೂರ್ವಿಕರಾಗಲೀ ವೈದಿಕಶಾಹೀ ಕಥೆಯು ತಿಳಿಸುವ ಅಪರಾಧವನ್ನು ಮಾಡಿದ್ದೇವೆ ಎಂದು ನನಗಂತೂ ಖಂಡಿತ ಅನಿಸುವುದಿಲ್ಲ. ಆದರೆ ಆ ಕಾರಣಕ್ಕೆ ಅದ್ಯಾವ ತರ್ಕದ ಮೂಲಕ ನಾನು ನಿರ್ದಯಿ ಹಾಗೂ ಕ್ರೂರ ಮನುಷ್ಯ ಎಂದು ತೀರ್ಮಾನಿಸುತ್ತೀರಿ? ಅನ್ಯರ ಕಷ್ಟಕ್ಕೆ ಮಿಡಿಯುವ ಹಾಗೂ ಅನ್ಯರ ಸುಖಕ್ಕಾಗಿ ಆಶಿಸುವ ನನ್ನ ಕಳಕಳಿ ಅದರಿಂದಾಗಿ ಕುಂದುತ್ತದೆಯೆ? ನಾನು ಒಬ್ಬ ಶಿಕ್ಷಕನಾಗಿ ಹಾಗೂ ಮನುಷ್ಯನಾಗಿ ಆ ಕಳಕಳಿಗೆ ಇದುವರೆಗೂ ಬದ್ಧನಾಗಿದ್ದೇನೆ ಎಂಬುದನ್ನು ನನ್ನ ಒಡನಾಡಿಗಳು ಹಾಗೂ ವಿದ್ಯಾರ್ಥಿಗಳನ್ನು ಬೇಕಾದರೆ ಕೇಳಿ ತಿಳಿದುಕೊಳ್ಳಬಹುದು. ವೈದಿಕ ಶಾಹಿಯ ಕಥೆಯನ್ನು ಇನ್ನೂ ಮುಂದುವರೆಸಬೇಕು ಎಂದು ಪಟ್ಟು ಹಿಡಿದರೆ ನಿರಪರಾಧಿಯ ಮೇಲೆ ಅಪರಾಧವನ್ನು ಹೇರುವ ಪ್ರಯತ್ನವಾಗಿ ನನಗೆ ಅದು ಕಾಣಿಸುತ್ತದೆ. ನನ್ನ ಪ್ರಕಾರ ಈ ಕಥೆಯನ್ನು ಹಿಡಿದುಕೊಂಡು ಯಾವುದೋ ಜಾತಿಯು ಅಪರಾಧೀ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂಬುದಾಗಿ ನಿರೀಕ್ಷೆಗಳನ್ನು ಬಿಟ್ಟು ಮಾನವ ಹಿತದ ಚಿಂತನೆಯನ್ನು ನಡೆಸುವ ಕಾಲ ಬಂದಿದೆ. ನಮಗೆಲ್ಲರಿಗೂ ಬೇಕಾದುದು ಸಮುದಾಯಗಳ ಸೀಮೆಯನ್ನು ಮೀರಿದ ದಯೆ, ಪ್ರೀತಿ ಹಾಗೂ ಮನುಷ್ಯ ಕಾಳಜಿಗಳು. ಅನ್ಯಾಯವನ್ನು ಚೆಂಡಿನ ಥರ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ರವಾನಿಸುವ ಆಟದ ಬದಲು ಅದನ್ನು ನಮ್ಮೆಲ್ಲರಿಂದ ದೂರ ಸರಿಸುವ ಉಪಾಯ ಹುಡುಕುವದರಲ್ಲೇ ಎಲ್ಲರ ಶ್ರೇಯಸ್ಸು ಅಡಗಿದೆ. ಬಹುಶಃ ದೇವನೂರರನ್ನು ನಾನು ಅರ್ಥೈಸಿಕೊಂಡಂತೆ ಈ ವಿಷಯಕ್ಕೆ ಸಂಬಂಧಿಸಿ ಅವರಿಗೂ ನನಗೂ ಭಿನ್ನಾಭಿಪ್ರಾಯವು ಇರಲು ಸಾಧ್ಯವೇ ಇಲ್ಲ.
ಸಾಧಾರಣವಾಗಿ ನಮಗೂ ಬಲಪಂಥೀಯರಿಗೂ, ಅಥವಾ ಬಲಪಂಥೀಯ ಸಂಘಟನೆಗಳಿಗೂ ಇರುವ ಸಂಬಂಧವನ್ನು ಪ್ರಸ್ತಾಪಿಸಿ ನಮ್ಮನ್ನು ವೈದಿಕ ಶಾಹಿಯ ವಕ್ತಾರರು ಎಂಬ ವಾದವನ್ನು ಗಟ್ಟಿ ಮಾಡಲಾಗುತ್ತದೆ. ನಮಗೆ ನಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಿಸುತ್ತಿರುವ ಮನುಷ್ಯರು ಮತ್ತು ಸಂಘಟನೆಗಳು ಮಾತ್ರವೇ ಕಾಣಿಸುತ್ತಾರೆ. ಅವರ ಜಾತಿಗಳಾಗಲೀ, ರಾಜಕೀಯ ಕ್ಯಾಂಪುಗಳಾಗಲೀ, ಐಡಿಯಾಲಜಿಗಳಾಗಲೀ ಸಂಬಂಧವಿಲ್ಲ. ನಾವು ಯಾವ ರಾಜಕೀಯ ನಿಲುವುಗಳನ್ನು ಸಮರ್ಥಿಸಲಿಕ್ಕಾಗಿ ಸಂಶೋಧನೆ ಮಾಡುವವರೂ ಅಲ್ಲ. ನಮ್ಮ ಸಮಾಜ ಮತ್ತು ಸಂಸ್ಕೃತಿಯ ಕುರಿತು ಪ್ರಚಲಿತದಲ್ಲಿರುವ ತಿಳುವಳಿಕೆಯಿಂದ ಪ್ರಣಾಳಿಕೆಗಳನ್ನು ರೂಪಿಸಿಕೊಂಡ ಪ್ರಸ್ತುತ ರಾಜಕೀಯದ ಮಿತಿಗಳನ್ನೇ ನಾವು ಪರೀಕ್ಷಿಸುತ್ತಿದ್ದೇವೆ. ಹಾಗೆಯೇ ಮಿತಿಗಳನ್ನು ಮೀರುವ ಹಂಬಲ ಪ್ರತೀ ಮನುಷ್ಯನಿಗೂ ಇರುತ್ತದೆ ಎಂದು ಧೃಡವಾಗಿ ನಂಬಿದ್ದೇವೆ.

Recent Comments