Archive
ಅಂಕಣ:ವಸಾಹತು ಪ್ರಜ್ಞೆಯ ವಿಶ್ವರೂಪ
ಕಂತು ೧- ನಮ್ಮೊಳಗಿನ ಎರಡು ಜಗತ್ತುಗಳು
ಎಸ್. ಎನ್. ಬಾಲಗಂಗಾಧರ. ಕನ್ನಡ ನಿರೂಪಣೆ: ರಾಜಾರಾಮ ಹೆಗಡೆ
ಭಾರತೀಯ ವಿದ್ಯಾವಂತರಲ್ಲಿ ಇರಬಹುದಾದ ಎರಡು ಜಗತ್ತುಗಳ ಕುರಿತು ಗಮನ ಹರಿಸೋಣ: ಒಂದು ಜಗತ್ತು ಸಾಂಪ್ರದಾಯಿಕವಾಗಿ ನಾವು ಬೆಳೆದು ಬಂದ ಜಗತ್ತಾಗಿದೆ. ಅಲ್ಲಿ ನಮ್ಮ ಅಪ್ಪ ಅಮ್ಮ, ಬಂಧು-ಬಳಗ, ನೆರೆ-ಹೊರೆಯವರು ನಮಗೆ ಈ ಪ್ರಪಂಚದಲ್ಲಿ ಹೇಗೆ ವ್ಯವಹರಿಸಬೇಕೆಂಬುದನ್ನು ಕಲಿಸಿರುತ್ತಾರೆ. ಅನೇಕ ಆಚರಣೆಗಳನ್ನು, ಆಲೋಚನಾ ಕ್ರಮವನ್ನು ಒಳಗೊಂಡ ಜೀವನ ಶೈಲಿಯನ್ನು ಕಲಿಸಿರುತ್ತಾರೆ.
ನಂತರ ನಾವು ವಿದ್ಯಾವಂತರಾದಂತೆಲ್ಲ ಮತ್ತೊಂದು ಜಗತ್ತಿಗೆ ತೆರೆದುಕೊಳ್ಳುತ್ತೇವೆ. ಇದು ವಿಚಾರಗಳ ಜಗತ್ತು. ಅದು ನಮ್ಮ ಆಧುನಿಕ ಶಿಕ್ಷಣವು ನಮಗೆ ಪರಿಚಯಿಸುವ ಜಗತ್ತು. ನಮ್ಮ ಕುಟುಂಬ, ಜಾತಿ ಮುಂತಾದ ಸಾಂಪ್ರದಾಯಿಕ ಸಮಾಜದಾಚೆಗೆ ಇರಬಹುದಾದ ಸಾರ್ವಜನಿಕ ಜಗತ್ತು ಇಂಥ ವಿಚಾರಗಳ ತಳಹದಿಯ ಮೇಲೆ ನಿರ್ಮಾಣವಾಗಿದೆ. ಹಾಗಾಗಿ ಅದು ನಮಗೆಲ್ಲ ಒಂದು ಆದರ್ಶ ಮಾದರಿ ಎಂದುಕೊಂಡಿರುತ್ತೇವೆ.
ಅದಕ್ಕೆ ಪೂರಕವಾಗಿ ಆ ಜಗತ್ತು ನಮ್ಮ ಸಾಂಪ್ರದಾಯಿಕ ಜಗತ್ತಿನ ಕುರಿತು ಕೆಲವು ನಿರ್ಧಿಷ್ಟ ಧೋರಣೆಗಳನ್ನು ಬೆಳೆಸುತ್ತಿರುತ್ತದೆ. ಉದಾಹರಣೆಗೆ ಭಾರತೀಯ ಸಮಾಜ ವ್ಯವಸ್ಥೆಯು ಜಾತಿ ಪದ್ಧತಿಯೆಂಬ ಅನೈತಿಕ ಹಾಗೂ ಅಮಾನವೀಯ ತಳಹದಿಯ ಮೇಲೆ ನಿಂತಿದೆ, ಶತಶತಮಾನಗಳಿಂದ ಸ್ತ್ರೀಯರನ್ನು ಹಾಗೂ ಕೆಳಜಾತಿಗಳನ್ನು ಶೋಷಿಸುತ್ತಿದೆ, ಈ ಜನರು ಆಚರಿಸುವ ಗೊಡ್ಡು ಸಂಪ್ರದಾಯಗಳು ಅನಾರೋಗ್ಯಕರ ಹಾಗೂ ಅವೈಜ್ಞಾನಿಕ, ಇತ್ಯಾದಿ. ಒಟ್ಟಿನಲ್ಲಿ ನಾವು ಇದುವರೆಗೆ ಬೆಳೆದು ಬಂದ ಜಗತ್ತು ಸರಿ ಇಲ್ಲ, ಅದು ಈ ಹೊರ ಜಗತ್ತನ್ನು ಅನುಕರಿಸಿ ತನ್ನ ದೋಷಗಳನ್ನು ತಿದ್ದಿಕೊಳ್ಳಬೇಕು, ಅದನ್ನು ತಿದ್ದುವುದು ಈ ಹೊರ ಜಗತ್ತಿನ ಕುರಿತು ಜಾಗೃತಿಯನ್ನು ಹೊಂದಿದ ವಿದ್ಯಾವಂತನ ಕರ್ತವ್ಯ ಎಂಬ ಧೋರಣೆಯನ್ನು ಈ ಎರಡನೆಯ ಜಗತ್ತು ಬೆಳೆಸುತ್ತದೆ.
ಸೋಜಿಗದ ಸಂಗತಿಯೆಂದರೆ, ನಾವು ಯಾರೂ ನಮ್ಮ ಬಾಲ್ಯದಲ್ಲಿ ಮೊದಲನೆಯ ಜಗತ್ತನ್ನು ದೋಷಪೂರ್ಣ, ಅಪೂರ್ಣ ಎಂಬುದಾಗಿ ಅನುಭವಿಸುತ್ತ ಬದುಕುವುದಿಲ್ಲ. ಅಲ್ಲಿ ಸುಖ-ದುಃಖಗಳೂ, ಹತಾಶೆ, ಅತೃಪ್ತಿ, ಕ್ರೌರ್ಯ-ಹಿಂಸೆಗಳೂ ಕೂಡ ಅನುಭವಕ್ಕೆ ಬಂದಿರಬಹುದು. ಆದರೆ ಆ ಕಾರಣಕ್ಕೆ ನಮ್ಮ ಆಚರಣೆಗಳು ಕೆಟ್ಟವು, ಅವು ನಮ್ಮ ಪೂರ್ವಿಕರು ಹಾಗೂ ಬಂಧುಗಳ ಮೌಢ್ಯ, ಅವು ಅನಾಗರಿಕತೆಯ ಲಕ್ಷಣ ಎಂಬ ಭಾವನೆಯಿಂದ ಅದನ್ನು ನಾವು ಬದುಕಿರುವುದಿಲ್ಲ. ಅದನ್ನು ಶೃದ್ಧೆಯಿಂದ ಆಚರಿಸಿಕೊಂಡು ಬರುತ್ತಿದ್ದ ನಮ್ಮ ಹಿರಿಯರು ಎಂದೂ ಇಂಥ ಅಭಿಪ್ರಾಯಗಳನ್ನು ಹೊಂದಿದಂತೆ ಕಾಣುವುದಿಲ್ಲ. ಇಂಥ ಆಚರಣೆಗಳನ್ನು ನಡೆಸುವ ಸಮಾಜವು ತನ್ನದೇ ಪುಣ್ಯ-ಪಾಪ, ನ್ಯಾಯಾನ್ಯಾಯ, ಧರ್ಮಾಧರ್ಮದ ವಿವೇಕವನ್ನೂ ನಮಗೆ ಕಲಿಸಿದೆ. ಇಂಥ ಕಲ್ಪನೆಗಳಿಗೂ ಹೊರತಾಗಿ ನಮ್ಮ ಬದುಕಿನ ಪರಮ ಸಂಭ್ರಮದ ಕ್ಷಣಗಳೂ ಅವುಗಳಲ್ಲಿರುತ್ತವೆಯಾದ್ದರಿಂದ ಅವನ್ನು ಆಚರಿಸುತ್ತಿರುತ್ತೇವೆ. ಇಂಥ ಅನುಭವಗಳು ಕಳೆದು ಹೋದ ಕಾಲದ್ದಲ್ಲ, ನಮ್ಮ ವೈಚಾರಿಕ ಜಗತ್ತಿನ ಜೊತೆಜೊತೆಗೇ ಅಸ್ತಿತ್ವದಲ್ಲಿರುವಂಥವು.
ತಮ್ಮ ಬಾಲ್ಯದ ಇಂಥ ಸಂಭ್ರಮದ ಅನುಭವಗಳನ್ನು ಕನ್ನಡದ ಸುಪ್ರಸಿದ್ಧ ಬರಹಗಾರರು ತಮ್ಮ ಆತ್ಮಕಥನಗಳಲ್ಲಿ ಕೂಡ ದಾಖಲಿಸಿದ್ದಾರೆ. ಆದರೆ ಇಂಥವರಿಗೆ ಮತ್ತೊಂದು ಜಗತ್ತಿನ ಪರಿಚಯವಾದ ತಕ್ಷಣ ಅವರ ಹಳೆಯ ಜಗತ್ತಿನ ಅನುಭವಗಳೆಲ್ಲ ಬೇರೆಯದೇ ಸತ್ಯಗಳನ್ನು ತಿಳಿಸಲು ತೊಡಗುತ್ತವೆ. ಇಂಥ ಸತ್ಯದರ್ಶನವು ಅವರಿಗೆ ಯಾವುದೋ ಪುಸ್ತಕವನ್ನು ಓದಿ, ಯಾರದೋ ಮಾತನ್ನು ಕೇಳಿ ಆಯಿತು ಎಂಬುದಾಗಿ ಅವರು ದಾಖಲಿಸುತ್ತಾರೆ. ಅಂಥ ಬರೆಹಗಾರರು ಮೊದಲು ನಾನು ಅದರಲ್ಲೇ ಬದುಕಿದ್ದರೂ ನನಗಿದೆಲ್ಲ ತಿಳಿದೇ ಇರಲಿಲ್ಲ, ಇಂಥದೊಂದು ಪುಸ್ತಕವನ್ನು ಓದಿದ ನಂತರ/ಇಂಥವರ ಮಾತನ್ನು ಕೇಳಿದ ನಂತರ ನಾನು ಬೆಳೆದ ಸಮಾಜದ ನಿಜಸ್ವರೂಪವೇನು (ಅದರ ಅನಿಷ್ಠಗಳು, ಮೌಢ್ಯ, ಶೋಷಣೆ ಇತ್ಯಾದಿ) ಎಂಬುದು ಅರಿವಾಯಿತು. ಅಷ್ಟರ ನಂತರ ಈ ಪದ್ಧತಿಗಳೆಲ್ಲ ತೊಲಗದ ಹೊರತೂ ನಮ್ಮ ಅಥವಾ ನಾವು ಉದ್ಧಾರವಾಗುವುದಿಲ್ಲ ಎಂಬುದು ತಿಳಿಯಿತು. ಎಂಬಂಥ ಹೇಳಿಕೆಗಳನ್ನು ಮಾಡುತ್ತಾರೆ. ಹೀಗೆ ಈ ಎರಡನೆಯ ಜಗತ್ತಿಗೆ ಪ್ರವೇಶಿಸುವುದೆಂದರೆ ‘ಮೊದಲು ಸುಳ್ಳುಗಳಲ್ಲಿ ಬದುಕಿದ್ದೆವು ಈಗ ನಿಜ ತಿಳಿದಿದೆ’ ಎಂಬ ಜ್ಞಾನೋದಯವನ್ನು ಪಡೆಯುವ ಕೆಲಸ.
ಮತ್ತೊಂದು ಜಗತ್ತು ನಮ್ಮನ್ನು ಆಕ್ರಮಿಸಿಕೊಂಡ ನಂತರ ವಿಭಿನ್ನ ರೀತಿಯಲ್ಲಿ ನಾವು ಅದಕ್ಕೆ ಪ್ರತಿಕ್ರಿಯಿಸಬಹುದು:
1) ಅವರಲ್ಲಿ ಬಹುತೇಕರು ಇದನ್ನೊಂದು ಸಮಸ್ಯೆಯಾಗಿ ಮಾಡಿಕೊಳ್ಳದೇ ಈ ಎರಡು ಜಗತ್ತುಗಳಲ್ಲೂ ಸಲೀಸಾಗಿ ಈಜಾಡುವುದನ್ನು ರೂಢಿಸಿಕೊಳ್ಳುತ್ತಾರೆ.
2) ಇನ್ನೂ ಕೆಲವರು ಮೊದಲನೆಯ ಜಗತ್ತಿನ ಕುರಿತು ರಕ್ಷಣಾತ್ಮಕ ನಿಲುವು ತಳೆಯುತ್ತಾರೆ. ಎರಡನೆಯ ಜಗತ್ತಿನ ಪರಿಭಾಷೆಗಳನ್ನೇ ಉಪಯೋಗಿಸಿ ತಮ್ಮದು ಮೌಢ್ಯವಲ್ಲ, ವೈಜ್ಞಾನಿಕ ಎಂದು ಸಾಧಿಸಲು ಅವರು ಪ್ರಯತ್ನಿಸಬಹುದು. ಇಲ್ಲ ಅದು ಮಾಡುವ ಟೀಕೆಗಳನ್ನು ಪರಿಗಣಿಸಿ ಸಂಪ್ರದಾಯವನ್ನು ಸುಧಾರಿಸುವ ಯುಕ್ತಿಯೂ ಅವರಲ್ಲಿ ಮೂಡಬಹುದು.
3) ಮತ್ತೂ ಕೆಲವರು ಮೊದಲನೆಯ ಜಗತ್ತನ್ನು ಸಂಪೂರ್ಣವಾಗಿ ಇಲ್ಲ ಭಾಗಶಃ ಅಲ್ಲಗಳೆಯತೊಡಗುತ್ತಾರೆ. ಮೊದಲ ಜಗತ್ತನ್ನು ಅನುಭವಿಸುವಾಗ, ಅಥವಾ ಅದರಲ್ಲಿ ಭಾಗವಹಿಸುವಾಗ ಅರೆಮನಸ್ಸು ಬರುತ್ತದೆ. ಅದರಲ್ಲಿ ತೊಡಗಿಕೊಂಡಾಗ ತನಗೆ ಹುಟ್ಟುವ ಸಂತೋಷವೇ ಹಿಂಸೆ ಎಂಬ ಪಾಪಪ್ರಜ್ಞೆ ಬೆಳೆಯುತ್ತದೆ, ಅದನ್ನು ಸಂತೋಷದಿಂದ ಆಚರಿಸುವವರ ಕುರಿತು ಅಸಹ್ಯ, ಕನಿಕರ, ಇತ್ಯಾದಿ ಭಾವನೆಗಳು ಹುಟ್ಟುತ್ತವೆ. ಇಲ್ಲ ಅದರ ವಿರುದ್ಧ ಯುದ್ಧ ಸಾರುವುದು ಪ್ರಜ್ಞಾವಂತರ ಕರ್ತವ್ಯ ಎಂಬ ಭಾವ ಮೂಡುತ್ತದೆ. ಆ ಜಗತ್ತಿನ ಜೊತೆಗೆ ಸಂಘರ್ಷಪೂರ್ಣ ಮುಖಾಮುಖಿಗಳೂ ನಡೆಯಬಹುದು.
ಒಟ್ಟಿನಲ್ಲಿ ಮೊದಲನೆಯ ಜಗತ್ತಿನ ಅನುಭವದಿಂದ ಉದ್ದೇಶಪೂರ್ವಕವಾಗಿ ಬಿಡಿಸಿಕೊಳ್ಳುವ ಅಥವಾ ಕಳಚಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಕಳಚಿಕೊಳ್ಳಲಾಗದೇ ತೋರಿಕೆ, ಇಬ್ಬಂದಿತನಗಳು ಬೆಳೆಯುತ್ತವೆ. ಇಲ್ಲ ಅದಕ್ಕೆ ವೈಚಾರಿಕತೆಯನ್ನು ಆರೋಪಿಸಿ ಸಮರ್ಥಿಸಿಕೊಳ್ಳುವ, ಇಲ್ಲವೇ ಅನಾಸಕ್ತರಾಗಿ ತಾವೊಂದೇ ಅದರಿಂದ ಕಳಚಿಕೊಂಡು ನೈತಿಕವಾಗಿ ನಿಟ್ಟುಸಿರು ಬಿಡುವ, ಇಲ್ಲ ತಮ್ಮ ಬಂಧುಗಳ ಮನಸ್ಸನ್ನು ನೋಯಿಸಲಾರದೇ ಅವರಿಗಾಗಿ ನಾಟಕ ಮಾಡಿ ಇಲ್ಲ ತ್ಯಾಗ ಮಾಡಿ ಧನ್ಯರಾಗುವ, ನಾನಾ ರೀತಿಯ ಉದಾಹರಣೆಗಳು ನಮಗೆ ಕನ್ನಡ ಬರವಣಿಗೆಯ ಲೋಕದಲ್ಲಿ ಚಿರಪರಿಚಿತ.
ಆದರೆ ಇವರ ಈ ಎಲ್ಲ ಡೊಂಬರಾಟಗಳಿಗೂ ಅತೀತವಾಗಿ ಆ ಮೊದಲಿನ ಜಗತ್ತು ತನ್ನಷ್ಟಕ್ಕೆ ಮುಂದುವರಿದುಕೊಂಡು ಹೋಗುತ್ತಿರುತ್ತದೆ. ಎರಡನೆಯ ಜಗತ್ತನ್ನು ಕೂಡ ತಿರಸ್ಕರಿಸದೇ ತನ್ನದೊಂದು ಆಭರಣದಂತೆ ಅದನ್ನು ಧರಿಸಿ ಸಾಗುವುದೊಂದೇ ಅದರ ಕೆಲಸ. ಹಾಗಾಗಿ ಒಮ್ಮೆ ಬದಲಾದ ಹಾಗೆ ಕಾಣಿಸುತ್ತದೆ, ಮತ್ತೆ ತನ್ನ ‘ಕಬಂಧ ಬಾಹುಗಳ’ ನಿಜ ಸ್ವರೂಪವನ್ನು ದರ್ಶಿಸುತ್ತದೆ. ಇದನ್ನು ಬದಲಾಯಿಸಹೊರಟ ಚಳುವಳಿಕಾರರು ಹತಾಶರಾಗಿ ಕೈಚೆಲ್ಲುತ್ತಾರೆ, ರಾಜಿ ಮಾಡಿಕೊಳ್ಳುತ್ತಾರೆ, ಇಬ್ಬಂದಿತನವನ್ನು ರೂಢಿಸಿಕೊಳ್ಳುತ್ತಾರೆ, ದ್ವೀಪವಾಗುತ್ತಾರೆ, ಇಲ್ಲ ತಾವೇ ಪಳಗಿ ಅದರೊಳಗೆ ಸೇರಿಕೊಳ್ಳುತ್ತಾರೆ. ‘ನಮ್ಮ ಈ ಸಮಾಜವನ್ನು ತಿದ್ದಲು ಯಾರಿಗೂ ಸಾಧ್ಯವಿಲ್ಲ, ನೋಡಿ, ಬುದ್ಧ ಬಂದ, ಬಸವ ಬಂದ… ಏನಾಯಿತು?’ ಎಂಬ ಹೇಳಿಕೆ ನಮಗೆಲ್ಲ ಸತ್ಯವಾಗಿಬಿಟ್ಟಿದೆ. ಎಲ್ಲ ತಲೆಮಾರುಗಳ ಆಧುನಿಕ ವಿದ್ಯಾವಂತರಿಗೂ ಈ ಅನುಭವದ ಮೃದು ಅಥವಾ ಕಟು ಆವೃತ್ತಿಗಳು ಒಂದಿಲ್ಲೊಂದು ಬಾರಿ ಪರಿಚಯವಾಗಿರುತ್ತವೆ. ಭಾರತೀಯ ಸಮಾಜವು ವಿದ್ಯಾವಂತರ ವಿಚಾರಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಒಗ್ಗಲಾರೆನೆಂದು ಹಟ ಹಿಡಿದಂತೆ ವಿಚಾರವಾದಿಗಳಿಗೆ ಕಾಣುತ್ತದೆ.
ಆದರೆ ಸಮಾಜದ ದೃಷ್ಟಿಯಿಂದ ನೋಡಿ, ಬೇರೆಯದೇ ಸತ್ಯವೊಂದು ಗೋಚರಿಸುತ್ತದೆ: ಜನರ ಅನುಭವವನ್ನು ನಿಜವೆಂದು ಪರಿಗಣಿಸಿ ಅದನ್ನಾಧರಿಸಿ ಈ ಸಮಾಜದ ಸ್ವರೂಪವನ್ನು ತಿಳಿದುಕೊಳ್ಳಲು ವೈಚಾರಿಕ ಜಗತ್ತು ನಿರಾಕರಿಸುತ್ತಿದೆ. ಇದರ ಪರಿಣಾಮಗಳನ್ನು ಇಂಥ ಫಜೀತಿಗಳ ರೂಪದಲ್ಲಿ ನಾವು ಅನುಭವಿಸುತ್ತಿಲ್ಲವೆಂದು ಹೇಗೆ ಹೇಳುತ್ತೀರಿ? ಏಕೆಂದರೆ ನಮ್ಮ ವೈಚಾರಿಕ ಜಗತ್ತು ನಮ್ಮ ಕುರಿತು ಪಾಶ್ಚಾತ್ಯರ ಅನುಭವವನ್ನು ಹಾಗೂ ಪ್ರಶ್ನೆಗಳನ್ನು ಆಧರಿಸಿ ಹುಟ್ಟಿಕೊಂಡ ಚಿತ್ರಣಗಳನ್ನು ಆಧರಿಸಿದೆ. ಇದು ಮೂಢನಂಬಿಕೆ, ಇದು ಸಮಾಜವಿರೋಧಿ, ಇದು ಮಾನವ ವಿರೋಧಿ, ಇದು ಪ್ರತಿಗಾಮಿ, ಇದು ಶೋಷಣಾತ್ಮಕ, ಇದು ತಾರತಮ್ಯ, ಇದು ಅನಿಷ್ಠ, ಇದು ದಮನಕಾರಿ, ಎನ್ನುತ್ತಿರುವಾಗ ಪಾಶ್ಚಾತ್ಯ ಪರಿಕಲ್ಪನೆಗಳನ್ನು ಬಳಸಿಕೊಳ್ಳುತ್ತಿರುತ್ತೇವೆ. ಇಂಥ ಪರಿಕಲ್ಪನೆಗಳೆಲ್ಲ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಿರ್ದಿಷ್ಟ ಇತಿಹಾಸವನ್ನೂ, ಅರ್ಥವನ್ನೂ ಹೊಂದಿವೆ. ಅದನ್ನು ತಿಳಿದುಕೊಳ್ಳುವ ಗೋಜಿಗೇ ಹೋಗದೇ, ಅಥವಾ ಅದರ ಅರಿವೇ ಇಲ್ಲದೆ ಅಂಥ ಶಬ್ದಗಳನ್ನು ಯೆರ್ರಾಬಿರ್ರಿಯಾಗಿ ಅನುವಾದಿಸಿಕೊಂಡು ನಮ್ಮ ಸಮಾಜವನ್ನು ವರ್ಣಿಸುತ್ತಿರುತ್ತೇವೆ.
ಎಲ್ಲಾದರೂ ಜನರ ಅನುಭವದ ಕುರಿತು ಚರ್ಚೆಗಳನ್ನೆತ್ತಿದರೆ ಅದೊಂದು ಪಾಪವೋ ಎಂಬಂತೆ, ಅನೈತಿಕ ಕೆಲಸವೊ ಎಂಬಂತೆ, ಇಲ್ಲ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರವೋ ಎಂಬಂತೆ ಅದನ್ನು ಬದಿಗೊತ್ತಲಾಗುತ್ತದೆ. ಪಾಶ್ಚಾತ್ಯ ಚಿತ್ರಣಗಳನ್ನೇ ಸತ್ಯವೆಂಬುದಾಗಿ ನಂಬಿಕೊಂಡು ನಮ್ಮ ಅನುಭವವನ್ನು ಆ ಚಿತ್ರಣಗಳ ಬೆಳಕಿನಲ್ಲಿ ವಿಕಾರವಾಗಿ ಜೋಡಿಸಿಕೊಳ್ಳುವಂತೆ ಮಾಡುವುದೇ ವಸಾಹತು ಪ್ರಜ್ಞೆ. ವಸಾಹತು ಪ್ರಜ್ಞೆ ಎಂಬುದಾಗಿ ಏಕೆ ಕರೆಯುತ್ತಿದ್ದೇವೆಂದರೆ, ಬ್ರಿಟಿಷರ ಸಾಮ್ರಾಜ್ಯದಿಂದ ವಸಾಹತುವಿನ ದಾಸರು ಪಡೆದ ಬಳುವಳಿ ಅದು. ವಸಾಹತು ಪ್ರಜ್ಞೆಯು ನಮ್ಮ ಅನುಭವದ ಕುರಿತು ಆಲೋಚಿಸದಂತೆ ನಮ್ಮನ್ನು ತಡೆಯುತ್ತದೆ.
ಅಂದರೆ ನಮ್ಮ ಬಾಲ್ಯದ ಅನುಭವವು ನಿಜವಾಗಿದ್ದರೂ ಕೂಡ ಅದು ನಮ್ಮ ಅಜ್ಞಾನದಿಂದ ಹುಟ್ಟಿರುವುದರಿಂದ ಅದನ್ನು ಆಧರಿಸಿ ನಮ್ಮ ಸಾಮಾಜಿಕ ಚಿಂತನೆಯನ್ನು ನಡೆಸುವಂತಿಲ್ಲ ಎಂಬುದಾಗಿ ನಮ್ಮ ವೈಚಾರಿಕ ಜಗತ್ತು ಭಾವಿಸುತ್ತದೆ. ನಮ್ಮ ಸಮಾಜದ ಕುರಿತು ನಾವು ವೈಚಾರಿಕ ವಿವರಣೆಗಳನ್ನು ಬೆಳೆಸಬೇಕಾದರೆ ಈ ಜನರ ಅನುಭವಗಳನ್ನು ಅಲ್ಲಗಳೆಯುವುದು ಅನಿವಾರ್ಯ. ಅದರಲ್ಲಿ ತಪ್ಪೇನಿದೆ? ಪ್ರಪಂಚದ ಕುರಿತ ನಮ್ಮ ಅಜ್ಞಾನವನ್ನು ಕಳೆದುಕೊಳ್ಳುವುದೇ ಶಿಕ್ಷಣದ ಗುರಿ. ದಿನವೂ ಸೂರ್ಯನೇ ಭೂಮಿಯ ಸುತ್ತ ತಿರುಗುತ್ತಿರುವುದನ್ನು ನೋಡಿದರೂ ಕೂಡ ಭೂಮಿಯೇ ಸೂರ್ಯನ ಸುತ್ತ ತಿರುಗುತ್ತಿದೆ ಎಂಬ ಸತ್ಯವನ್ನು ನಾವು ಶಿಕ್ಷಣದಿಂದಲೇ ಕಲಿತಿದ್ದಲ್ಲವೆ? ಹಾಗಾಗಿ ನಮ್ಮ ಅನುಭವಕ್ಕೆ ವ್ಯತಿರಿಕ್ತವಾಗಿರುವ ಇಂಥ ಸಂಗತಿಗಳೇಕೆ ಸತ್ಯವಾಗಿರಬಾರದು? ಎಂಬ ಪ್ರಶ್ನೆಯೂ ಏಳಬಹುದು.
ಆದರೆ ವೈಜ್ಞಾನಿಕ ಸತ್ಯಗಳನ್ನು ನಮ್ಮ ತರ್ಕಕ್ಕೆ ಸುಸಂಬದ್ಧವಾಗುವಂತೆ ವಿವರಿಸಿರುತ್ತಾರೆ ಎಂಬುದನ್ನೂ ನೆನಪಿಡಬೇಕು. ನಮ್ಮನ್ನು ಪೋಷಿಸಿ ಬದುಕಿಗೆ ಹಚ್ಚಿಸಿದ ಸಮಾಜವನ್ನು ಏಕೆ ಅಮಾನವೀಯ ಎಂಬುದಾಗಿ ತಿಳಿಯಬೇಕು, ನಮಗೆ ವ್ಯವಹಾರವನ್ನು ಹಾಗೂ ಯೋಚಿಸುವುದನ್ನು ಹೇಳಿಕೊಟ್ಟ ಹಿರಿಯರನ್ನು ಏಕೆ ಮೂಢರೆಂದು ತಿಳಿಯಬೇಕು, ಸಂಭ್ರಮದ ಕ್ಷಣಗಳೆಂದುಕೊಂಡವುಗಳನ್ನು ಹಿಂಸೆ ಎಂಬುದಾಗಿ ಏಕೆ ತಿಳಿಯಬೇಕು, ಪುಣ್ಯಕಾರ್ಯ ಎಂದು ಹೇಳುತ್ತಿರುವುದು ನಿಜವಾಗಿಯೂ ಪಾಪಕಾರ್ಯವೇಕೆ ಎಂಬುದನ್ನು ಎಲ್ಲೂ ವೈಜ್ಞಾನಿಕವಾಗಿ ವಿವರಿಸಿಲ್ಲ. ಯಾವ ಸ್ಪಷ್ಟೀಕರಣಗಳನ್ನೂ ನೀಡದೇ ಅವುಗಳನ್ನು ಸತ್ಯವೆಂಬಂತೆ ನಮಗೆ ನೀಡಲಾಗುತ್ತದೆ.
ಈ ವಸಾಹತು ಪ್ರಜ್ಞೆಯನ್ನು ಇಂಥ ಯಾವುದೇ ವೈಜ್ಞಾನಿಕ ವಿವರಣೆಗಳನ್ನು ನೀಡದೇ ಸಮರ್ಥಿಸುವ ಕೈಂಕರ್ಯವನ್ನು ಸಮಾಜಶಾಸ್ತ್ರವು ಮಾಡಿದೆ. ಕಳೆದ ನೂರಾರು ವರ್ಷಗಳಿಂದ ಭಾರತೀಯ ಸಮಾಜದ ಕುರಿತು ನಡೆಸಿಕೊಂಡು ಬಂದ ಚಿಂತನೆ ಹಾಗೂ ಚರ್ಚೆಗಳೆಲ್ಲವೂ ಇಂಥ ಸಮಾಜಶಾಸ್ತ್ರವನ್ನು ಆಧರಿಸಿದ ತಿಳುವಳಿಕೆಗಳೇ. ಈ ಸಮಾಜಶಾಸ್ತ್ರವು ಪಾಶ್ಚಾತ್ಯರ ಪ್ರಶ್ನೆಗಳನ್ನು, ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ಹುಟ್ಟಿಕೊಂಡಿದ್ದು, ಈಗಲೂ ಅದೇ ಕೆಲಸವನ್ನು ಮಾಡುತ್ತಿದೆ.
ಒಂದು ಸಮಾಜದ ಸಮಸ್ಯೆಯೆಂದರೆ ಅದು ಜನರ ಸಮಸ್ಯೆಯೇ ಆಗಿದ್ದಲ್ಲಿ ಈ ಕುರಿತು ಎರಡು ಪ್ರಶ್ನೆಗಳಂತೂ ಎದ್ದೇ ಏಳುತ್ತವೆ: 1) ಎಲ್ಲಾ ಮನುಷ್ಯ ಸಮಾಜಗಳಲ್ಲಿರುವಂತೆ ನಮ್ಮ ಜನರಿಗೂ ಅವರದೇ ಸಮಸ್ಯೆಗಳಿದ್ದಿರಲೇಬೇಕು. ಅವುಗಳನ್ನು ಪರಿಹರಿಸಬೇಕಾದರೆ ಈ ಜನರ ಅನುಭವವನ್ನು ಆಧರಿಸಿ ಅವುಗಳ ಸ್ವರೂಪವೇನೆಂಬುದನ್ನು ತಿಳಿದುಕೊಳ್ಳುವ ಕೆಲಸವನ್ನು ಮಾಡಲೇಬೇಕು. ಆದರೆ ನಾವು ಆ ಕೆಲಸವನ್ನು ಮಾಡುತ್ತಿದ್ದೇವೆಯೆ? 2) ನಮ್ಮ ಜನರ ಸಮಸ್ಯೆಗಳೆಂದು ನಾವು ನಡೆಸುತ್ತಿರುವ ಬಗೆಹರಿಯದ ಚರ್ಚೆ, ಚಿಂತನ-ಮಂಥನಗಳಲ್ಲಿ ಬೌದ್ಧಿಕ ಜಗತ್ತು ಸೃಷ್ಟಿಸಿಕೊಂಡದ್ದೆಷ್ಟು ನಮ್ಮ ಜನರ ನೈಜ ಸಮಸ್ಯೆಗಳೆಷ್ಟು? ಈ ಮೇಲಿನ ಎರಡೂ ಪ್ರಶ್ನೆಗಳಿಗೆ ನಕಾರಾತ್ಮಕ ಉತ್ತರವೇ ಬಂದ ಪಕ್ಷದಲ್ಲಿ ಮತ್ತೊಂದು ಪ್ರಶ್ನೆ ಏಳುತ್ತದೆ: ಇಂಥ ವಸಾಹತು ಪ್ರಜ್ಞೆಯಿಂದ ರೂಪಿತವಾದ ಚಿಂತನೆಯ ಅನಾಹುತಗಳೇನು?
ಇಂದು ಭಾರತೀಯ ವಿದ್ಯಾವಂತರ ಜೀವನದಲ್ಲಿ ಪ್ರಚಲಿತದಲ್ಲಿರುವ ಚರ್ಚೆಗಳನ್ನೇ ಉದಾಹರಿಸಿ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬಹುದು. ಇಂದು ನಮ್ಮ ಸಂಸ್ಕೃತಿ ಹಾಗೂ ಸಮಾಜದ ಕುರಿತು ಪತ್ರಿಕೆಗಳಲ್ಲಿ ಹಾಗೂ ಸಾರಸ್ವತ ಲೋಕದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲೆಲ್ಲ ಪ್ರತಿಪಾದನೆಗೊಳ್ಳುತ್ತಿರುವ ಅನೇಕ ಧೋರಣೆಗಳು ಹಾಗೂ ಒಪ್ಪಿಕೊಂಡ ಪ್ರಮಾಣಗಳು ಹಾಗೂ ಪರಿಭಾಷೆಗಳು ವಸಾಹತು ಪ್ರಜ್ಞೆಯನ್ನು ನಿದರ್ಶಿಸುತ್ತಿರುತ್ತವೆ. ಅವು ನಮ್ಮ ನೈಜ ಸಮಸ್ಯೆಗಳನ್ನು ಗುರುತಿಸಲಿಕ್ಕೂ ದೊಡ್ಡ ತೊಡಕಾಗಿವೆ. ಈ ಅಂಕಣದಲ್ಲಿ ಇನ್ನು ಮುಂದೆ ಇಂಥ ದೃಷ್ಟಾಂತಗಳನ್ನು ಚರ್ಚೆಗೆತ್ತಿಕೊಳ್ಳಲಾಗುವದು.
ವಸಾಹತು ಪ್ರಜ್ಞೆಯು ಹುಟ್ಟುಹಾಕುವ ಇಂಥ ಚರ್ಚೆಯನ್ನು ನಡೆಸುತ್ತಿರುವಾಗ ಮತ್ಯಾವುದೋ ಜಗತ್ತಿನ ಸಮಸ್ಯೆಗಳನ್ನು ನಮ್ಮಲ್ಲಿದೆ ಎಂಬುದಾಗಿ ಭಾವಿಸಿಕೊಂಡು ಚರ್ಚೆಸುತ್ತಿರುತ್ತೇವೆ. ಆ ಕಾರಣದಿಂದಾಗಿಯೇ ಇಂಥ ಸಮಸ್ಯೆಗಳನ್ನು ಕುರಿತು ನಮ್ಮ ಅನುಭವಕ್ಕೆ ಸರಿ ಎನ್ನಿಸುವಂತೆ ತರ್ಕಬದ್ಧವಾಗಿ ಯೋಚಿಸುವುದೂ ಸಾಧ್ಯವಿಲ್ಲ, ಜನರಿಗೆ ಮನದಟ್ಟಾಗುವಂತೆ ವಿವರಿಸುವುದೂ ಸಾಧ್ಯವಿಲ್ಲ, ಇನ್ನು ಪರಿಹರಿಸುವುದಂತೂ ದೂರದ ಮಾತು. ವಸಾಹತು ಪ್ರಜ್ಞೆಯ ಆವಾಂತರಗಳನ್ನು ಗುರುತಿಸುತ್ತ ಅವುಗಳ ಪರಾಮರ್ಶೆಯನ್ನು ನಡೆಸಿದರೆ ಮಾತ್ರವೇ ಅಂಥ ಬೌದ್ಧಿಕ ಸಮಸ್ಯೆಗಳಿಂದ ಹೊರಬರುವ ಮಾರ್ಗಗಳು ಗೋಚರಿಸಬಹುದು ಹಾಗೂ ನಮ್ಮ ಸಮಾಜದಲ್ಲಿರುವ ಸಮಸ್ಯೆಗಳ ನೈಜ ಸ್ವರೂಪವನ್ನು ತಿಳಿಯಬಹುದು. ಆ ಕಾರಣಕ್ಕಾಗಿ ಈ ಅಂಕಣವನ್ನು ವಸಾಹತು ಪ್ರಜ್ಞೆಯ ವಿಶ್ವರೂಪ ಎಂಬುದಾಗಿ ಹೆಸರಿಸಲಾಗಿದೆ.
ಕೇಸರೀಕರಣ: ದಾಯಾದಿಗಳ ಕಲಹ
ಸಂತೋಷ್ ಕುಮಾರ್ ಪಿಕೆ
ಕರ್ನಾಟಕದ ಪ್ರಾಥಮಿಕ ಶಾಲಾಪಠ್ಯದಲ್ಲಿ ಹೊಸ ಪಠ್ಯಕ್ರಮವನ್ನು ಸೇರ್ಪಡೆ ಮಾಡುತ್ತಿರುವ ಕುರಿತು ಎರಡು ಬಣಗಳ ನಡುವೆ ವ್ಯಾಪಕವಾದ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಬಿ.ಜೆ.ಪಿಯವರು ಹೊಸಪಠ್ಯಕ್ರಮವನ್ನು ಕೇಸರೀಕರಣವೆಂದೂ ಆದರೆ ಅದು ವಿರೋಧಿ ಬಣಗಳು ತಿಳಿದುಕೊಂಡಿರುವ ರೀತಿಯದ್ದಲ್ಲ ಎಂತಲೂ ಹಾಗೂ ಅದರ ವಿರೋಧಿ ಗುಂಪು ಅದು ಕೇಸರೀಕರಣ ಪ್ರಕ್ರಿಯೆ ಎಂತಲೂ ನಿರಪಯುಕ್ತವಾದ ಚರ್ಚೆಯನ್ನು ಬಿರುಸಾಗಿ ನಡೆಸುತ್ತಿದ್ದಾರೆ. ಪ್ರಸ್ತುತ ಬರಹದಲ್ಲಿ ಆ ಚರ್ಚೆಯಲ್ಲಿ ಪಾಲ್ಗೊಂಡವರು ಬೇರೆ ಬೇರೆ ತುದಿಯಲ್ಲಿ ನಿಂತಂತೆ ಭಾಸವಾದರೂ ಇಬ್ಬರೂ ಒಂದೇ ಸೇತುವೆಯ ಮೇಲೆ ನಿಂತಿರುವುದನ್ನು ನಿದರ್ಶಿಸುವ ಪ್ರಯತ್ನವನ್ನು ಮಾಡಲಾಗುವುದು. ಮೊದಲನೆಯದಾಗಿ ಬಿ.ಜೆ.ಪಿ.ಬಣದ ವಾದದಿಂದ ಪ್ರಾರಂಭಿಸುತ್ತೇನೆ.
ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಡಗೆ ಕಾಗೇರಿಯವರು ಇತ್ತೀಚೆಗೆ ತಮ್ಮ ಲೇಖನದಲ್ಲಿ ಕೇಸರೀಕರಣದ ಕುರಿತು ಎಲ್ಲರಿಗೂ ಗೊಂದಲವಿದ್ದು, ಅದರ ಕುರಿತು ಸ್ಪಷ್ಟತೆ ಅದನ್ನು ವಿರೋಧಿಸುವ ವಿರೋಧಿಗಳಿಗಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ನನ್ನ ಪ್ರಕಾರ, ಕೇಸರೀಕರಣದ ಕುರಿತು ಅದರ ವಿರೋಧಿಗಳಿಗಿರಲಿ, ಅದರ ಸ್ವಯಂ ಪ್ರತಿಪಾದಕರಿಗೇ ಸರಿಯಾದ ಜ್ಞಾನ ಇರುವುದು ಅನುಮಾನ. ಏಕೆಂದರೆ ಇದುವೇ ಕೇಸರೀಕರಣ ಎಂದು ಸ್ಪಷ್ಟವಾಗಿ ಹೇಳುವ ಧೈರ್ಯ ಯಾರಿಗೂ ಇದ್ದಂತಿಲ್ಲ, ಕೇವಲ ಭಗವಾಧ್ವಜ ಹಿಡಿದುಕೊಂಡು ಮಾಡುವ ಕೆಲಸಗಳು ಮಾತ್ರ ಕೇಸರೀಕರಣವಾಗುತ್ತದೆಯೇ? ಖಂಡಿತ ಇಲ್ಲ, ಏಕೆಂದರೆ ಕೇಸರೀಕರಣ ಎಂಬುದು ಒಂದು ಐಡಿಯಾಲಜಿ, ನಿದರ್ಶಿ ಷ್ಟವಾಗಿ ಇಂತಿಂತಹ ಕೆಲಸಗಳನ್ನು ಮಾಡಬೇಕು ಎಂದು ನಿರ್ದೇಶನ ನೀಡುವ ವಿಚಾರಗಳ ಗುಚ್ಚ ಅದಾಗಿದೆ. ಹಾಗೂ ಕೇಸರೀಕರಣದ ಕುರಿತು ಯಾವುದೇ ಸಿದ್ಧಾಂತ (ಥಿಯರಿ)ದ ಜ್ಞಾನಶಿಸ್ತು (ಜ್ಞಾನಶಿಸ್ತಿನ ಅಗತ್ಯ ಇಲ್ಲ ಎಂದು ಬಿ.ಜೆಪಿ ಯವರು ಭಾವಿಸಿದ್ದರೂ ಕೂಡ) ಇಲ್ಲದಿರುವುದರಿಂದ ಜನರು ತಮ್ಮ ಮನಸೋಇಚ್ಚೆ ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಕೇಸರೀಕರಣ ಎಂಬುದು ಒಂದು ಐಡಿಯಾಲಜಿ ಎಂದು ಬಹುತೇಕರು ಅದನ್ನು ಬಳಸುತ್ತಾರೆ, ಆದರೆ ನಿದರ್ಶಿ ಷ್ಟವಾಗಿ ಅದರ ಗುಣಲಕ್ಷಣಗಳೇನು? ಎಂಬುದನ್ನು ಯಾರೂ ಸ್ಪಷ್ಟಪಡಿಸಿಲ್ಲ. ಒಮ್ಮೆ ಅದರ ಗುಣಲಕ್ಷಣಗಳು ಸ್ಪಷ್ಟವಾದರೆ ಬಿಜೆಪಿಗರು ಮಾಡುವ ಯಾವ ಯಾವ ಕೆಲಸಗಳು ಕೇಸರೀಕರಣವಾಗುತ್ತವೆ ಯಾವ ಕೆಲಸಗಳು ಕೇಸರೀಕರಣವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಆದರೆ ಸದ್ಯದ ಪರಿಸ್ಥಿತಿ ಸಂಪೂರ್ಣವಾಗಿ ಇದಕ್ಕೆ ತದ್ವಿರುದ್ದವಾಗಿದೆ. ಐಡಿಯಾಲಜಿಯು ಸಾಮಾನ್ಯವಾಗಿ ಬೇರೆ ಬೇರೆ ಚಿಂತನೆಗಳ ಸಮೂಹಗಳಾಗಿರುತ್ತವೆ. ಆ ಚಿಂತನೆಗಳು ಹಲವಾರು ಸಿದ್ಧಾಂತಗಳಿಂದ ಬರಬಹುದು ಅಥವಾ ವೈಯುಕ್ತಿಕವಾಗಿ ಕೆಲವಾರು ವ್ಯಕ್ತಿಗಳಿಂದ ಹೊರಹೊಮ್ಮಬಹುದು. ಒಟ್ಟಿನಲ್ಲಿ ಐಡಿಯಾಲಜಿಯು ಮುಂದೆ ಮಾಡಬೇಕಾಗಿರುವ ಕಾರ್ಯಗಳ ರೂಪುರೇಷೆಗಳನ್ನು ಸ್ಪಷ್ಟಪಡಿಸುತ್ತಾ ಗುರಿಸಾಧನೆಯ ಮಾರ್ಗವನ್ನು ತೋರಿಸುತ್ತಾ ಹೋಗುತ್ತದೆ. ಉದಾಹರಣೆಗೆ ಮಾರ್ಕ್ಸಿಸ್ಟ್ ಐಡಿಯಾಲಜಿ ಅಥವಾ ಎಡಪಂಥೀಯ ಐಡಿಯಾಲಜಿಯು ಕಾರ್ಮಿಕರ ಸರ್ವಾಧಿಕಾರವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿರುತ್ತದೆ. ಅದರಂತೆಯೇ ಅದರ ಹಿಂಬಾಲಕರು ಕಾರ್ಯಪ್ರವೃತ್ತರಾಗುತ್ತಾರೆ. ಅಂದರೆ ಒಂದು ಅಥವಾ ಹಲವಾರು ಗುರಿಗಳನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಬೇಕಾದ ಐಡಿಯಾಗಳನ್ನು ಮತ್ತು ಅದಕ್ಕೆ ಪೂರಕವಾದ ಕಾರ್ಯಗಳನ್ನು ರೂಪಿಸುತ್ತಾ ಹೋಗುತ್ತಾರೆ. ಈ ಅರ್ಥದಲ್ಲಿ ಕೇಸರೀಕರಣ ಎಂಬ ಪರಿಕಲ್ಪನೆಯನ್ನು ತೆಗೆದುಕೊಂಡರೆ ಅದು ಐಡಿಯಾಲಜಿಯೇ? ಎಂಬುದು ಅದರ ಪ್ರತಿಪಾದಕರಿಂದಾಗಲಿ ಅಥವಾ ಅದರ ವಿರೋಧಿಗಳಿಂದಾಗಲಿ ಸ್ಪಷ್ಟವಾಗುವುದಿಲ್ಲ. ಅಂದರೆ ನಿದರ್ಶಿಷ್ಟವಾಗಿ ಇಂತಿಂತಿಹ ಕೆಲಸಗಳನ್ನು ಮಾಡಿದರೆ ಕೇಸರೀಕರಣವಾಗುತ್ತದೆ ಎಂಬುದನ್ನು ಇದುವರೆಗೂ ಯಾರೂ ತೋರಿಸಿಕೊಟ್ಟಿಲ್ಲ. ಇನ್ನೂ ಸ್ವಲ್ಪ ಬಿಡಿಸಿ ಹೇಳುವುದಾದರೆ, ಹೊಸಪಠ್ಯಕ್ರಮ ಸೇರಿದರೆ, ಸಹಲ್ ನಡೆಸಿದರೆ, ಬೈಠಕ್ ನಡೆಸಿದರೆ, ಐಟಿಸಿ, ಓಟಿಸಿ ಕ್ಯಾಂಪ್ ನಡೆಸಿದರೆ ಅವೆಲ್ಲವೂ ಕೇಸರಿಕರಣವಾಗುತ್ತದೆಯೋ ಇಲ್ಲವೋ ಎಂಬುದೂ ಸಹ ಗೊತ್ತಿಲ್ಲ. ಆದ್ದರಿಂದ ಕೇಸರೀಕರಣದ ಕುರಿತು ಜನರು ಬಾಯಿಗೆ ಬಂದ ಹಾಗೆ ಮಾತನಾಡಿದರೆ ಅದರ ಗುಣಲಕ್ಷಣವನ್ನು ಭೌದ್ದಿಕವಾಗಿ ನಿರ್ದಿಷ್ಟಪಡಿಸದಿರುವುದಕ್ಕೆ ಬಿ.ಜೆ.ಪಿ.ಯವರ ನಿರ್ಲಕ್ಷವೇ ಹೊಣೆಗಾರಿಕೆ ಎಂದರೆ ತಪ್ಪಾಗಲಾರದು. ಇದಿಷ್ಟು ಕೇಸರೀಕರಣದ ಕುರಿತು ಇರುವ ಗೊಂದಲವಾಗಿದೆ. ಇನ್ನು ಈ ಗೊಂದಲದ ಆಧಾರದ ಮೇಲೆ ಹೊಸಪಠ್ಯಕ್ರಮವನ್ನು ರೂಪಿಸಲು ಹೊರಟಿರುವ ಹಿಂದಿರುವ ಅಜೆಂಡಾಗಳ ಕುರಿತು ವಿಶ್ಲೇಷಣೆ ಮಾಡುವ ಅಗತ್ಯವಿದೆ.
ಹೊಸಪಠ್ಯಕ್ರಮ ಸೇರಿಸುವುದರಲ್ಲಿ ಎರಡು ಮುಖ್ಯವಾದ ಅಜೆಂಡಾಗಳಿವೆ ಎಂಬುದಾಗಿಯೂ ಸಹ ಮಾನ್ಯ ಮಂತ್ರಿಯವರು ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅವುಗಳಲ್ಲಿ ಮೊದಲನೆಯದು, ಭಾರತೀಯ ಸಂಸ್ಕೃತಿಯನ್ನು ನವಪೀಳಿಗೆಗೆ ಪರಿಚಯಿಸುವುದು ಹಾಗೂ ಎರಡನೆಯದು ರಾಷ್ಟ್ರೀಯವಾದವನ್ನು ಮಕ್ಕಳ ಮೇಲೆ ಹೇರುವುದು. ಅವುಗಳನ್ನು ಒಂದೊಂದಾಗಿ ನೋಡುವ ಭಾರತೀಯ ಸಂಸ್ಕೃತಿಯನ್ನು ಹೊಸತಲೆಮಾರಿಗೆ ಪರಿಚಯಿಸುವುದು ಮೊದಲನೆಯ ಅಜೆಂಡಾ. ಇದು ಸದುದ್ದೇಶದಿಂದ ಕೂಡಿದ್ದರೂ ಸಹ ಸಂಸ್ಕೃತಿಯ ಹೆಸರಿನಲ್ಲಿ ಏನನ್ನು ಪರಿಚಯಿಸಲಾಗುತ್ತದೆ ಎಂಬ ಪ್ರಶ್ನೆ ಏಳುತ್ತದೆ. ಮಾನ್ಯ ಮಂತ್ರಿಯವರೇ ಹೇಳುವಂತೆ, ಖಗೋಳಶಾಸ್ತ್ರ, ಗಣಿತ, ಆಯುರ್ವೇದ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಭಾರತೀಯರು ಮಾಡಿರುವ ಸಾಧನೆಗಳನ್ನು ಪರಿಚಯಿಸಿಕೊಡುವುದು. ಇದರಿಂದ ಓದುಗರಿಗೆ ಏನು ಲಾಭ? ನಿಜವಾಗಿಯೂ ಗೊತ್ತಿಲ್ಲ. ಭಾರತೀಯರು ಸೊನ್ನೆ ಕಂಡುಹಿಡಿದರು, ಆರ್ಯಭಟ ಎಂಬುವವನಿದ್ದ, ಇನ್ನೂ ಮುಂತಾದ ವಿಷಯಗಳನ್ನು ಹೇಳಿಕೊಡುವುದರಿಂದ ಭಾರತೀಯ ಸಂಸ್ಕೃತಿಯ ನೈಜ ಪರಿಚಯವಾಗಿಬಿಡುತ್ತದೆಯೇ? ಉದಾಹರಣೆಗೆ, ಮುಂದಿನ 50 ವರ್ಷದ ನಂತರ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಇಂದು ಸಾಧನೆಗೈದಿರುವ ಸಾನಿಯಾ ಮಿರ್ಜಾ, ಸಚಿನ್ ತೆಂಡೂಲ್ಕರ್, ಅಬ್ದುಲ್ ಕಲಾಂ, ಮಹೇಶ್ ಭೂಪತಿ, ರಾಜ್ ಕುಮಾರ್ (ಇವರೆಲ್ಲರೂ ತಮ್ಮತಮ್ಮ ಕ್ಷೇತ್ರದಲ್ಲಿ ಸಾಧನೆಗೈದಿರುವ ಮಹನೀಯರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ) ಮುಂತಾದ ಮಹನಿಯರ ಪರಿಚಯ ಮಾಡಿದರೆ ಭಾರತೀಯ ಸಂಸ್ಕೃತಿಯ ಕುರಿತು ಜ್ಞಾನ ಬಂದಂತಾಗುತ್ತದೆಯೇ? ಅದೇ ರೀತಿ ಹಿಂದಿನ ಕಾಲದಲ್ಲಿ ಯಾರೋ ಮಾಡಿದ ಯುದ್ದ, ಯಾರೋ ಸೋತಿರುವ ಕುರುಹು ಇವುಗಳನ್ನು ತೆಗೆದುಕೊಂಡು ಮಾಡುವುದಾದರೂ ಏನು? ಇಂದು ನಾವು 21ನೇ ಶತಮಾನದಲ್ಲಿದ್ದೇವೆ, ಅದರ ಅರ್ಥ ತಂತ್ರಜ್ಞಾನ ವಿಜ್ಞಾನ ಬಹಳಷ್ಟು ಮುಂದುವರೆದಿವೆ, ಇಂದು ನಮಗೆ ಬೇಕಾಗಿರುವುದು ಅದರೊಟ್ಟಿಗೆ ಜೀವನ ನಡೆಸಲು ಬೇಕಾದ ಮಾರ್ಗದರ್ಶಿಯನ್ನು ರೂಪಿಸುವ ಶಿಕ್ಷಣವೇ ಹೊರತು ರೋಷ ಉಕ್ಕಿಸಿ ಸಾಮರಸ್ಯವನ್ನು ಕದಡುವ ಅಥವಾ ನಮ್ಮ ಸಂಸ್ಕೃತಿಯನ್ನೇ ಹೀಗಳೆಯುವ ಶಿಕ್ಷಣದ ಅಗತ್ಯವಿಲ್ಲ.
ಎರಡನೆಯದಾಗಿ, ರಾಷ್ಟ್ರೀಯತೆಯನ್ನು(ನ್ಯಾಶನಾಲಿಸಂ) ಜಾಗೃತಿಗೊಳಿಸುವ ಕಾರ್ಯ. ನಿಜವಾಗಿಯೂ ಇದು ಆಶ್ಚರ್ಯಕರವಾದ ಅಜೆಂಡಾ ಎಂದರೆ ತಪ್ಪಾಗಲಾರದು. ಏಕೆಂದರೆ ರಾಷ್ಟ್ರೀಯವಾದದ ಕುರಿತು ಏನನ್ನೂ ತಿಳಿದುಕೊಳ್ಳದೆ ಮನಸ್ಸಿಗೆ ಬಂದ ವಿಷಯಗಳನ್ನು ರಾಷ್ಟ್ರೀಯವಾದ ಎಂದು ಹೇಳುತ್ತಿರುವುದು ಕೇಸರೀಕರಣದ ಪ್ರತಿಪಾದಕರ ಪಾಳೆಯದಲ್ಲಿರುವ ಅಜ್ಞಾನವನ್ನು ಪ್ರದರ್ಶಿಸುತ್ತದೆ. ಉದಾಹರಣೆಗೆ, ಅಲೆಗ್ಸಾಂಡರ್ನನ್ನು ಪುರೂರವ ಸೋಲಿಸಿದ್ದು ಇತಿಹಾಸದ ಇನ್ನೊಂದು ಮಗ್ಗಲು ಇದು ರಾಷ್ಟ್ರೀಯವಾದ ಹಾಗೆಯೇ ಶಿವಾಜಿಯ ಸಾಮ್ರಾಜ್ಯ ವಿಸ್ತರಣೆ ಇದು ರಾಷ್ಟ್ರೀಯವಾದ ಎಂಬುದು ಮಾನ್ಯ ಮಂತ್ರಿಗಳ ವಾದ. ಆದರೆ, ಅಲೆಗ್ಸಾಂಡರ್ ಸೋಲುವುದಕ್ಕೂ ರಾಷ್ಟ್ರೀಯವಾದಕ್ಕೂ ಏನು ಸಂಬಂಧ? ನಿಜವಾಗಿಯೂ ಯಾವ ಸಂಬಂಧವೂ ಇಲ್ಲ, ಏಕೆಂದರೆ ಅಲೆಗ್ಸಾಂಡರ್ ನ ದಾಳಿ ಹೊತ್ತಿಗಾಗಲೀ ಅಥವಾ ಶಿವಾಜಿಯ ಸಾಮ್ರಾಜ್ಯ ವಿಸ್ತರಣೆಯ ಸಂದರ್ಭದಲ್ಲಿ ಆಗಲಿ ರಾಷ್ಟ್ರ (ನೇಶನ್) ಎನ್ನುವ ಕಲ್ಪನೆಯೇ ನಮ್ಮಲ್ಲಿ ಇರಲಿಲ್ಲ. ಹಲವಾರು ಚಿಕ್ಕ ಚಿಕ್ಕ ಸಾಮ್ರಾಜ್ಯಗಳಾಗಿ ಇದ್ದಂತಹ ಪ್ರದೇಶ ಇದಾಗಿತ್ತು. ಅವೆಲ್ಲವನ್ನೂ ಒಗ್ಗೂಡಿಸುವ ರಾಷ್ಟ್ರವಾಗಲೀ ಅದರ ಕಲ್ಪನೆಯಾಗಲೀ ಇದ್ದುದಕ್ಕೆ ನಮ್ಮಲ್ಲಿ ಯಾವುದೇ ಪುರಾವೆಗಳಿಲ್ಲ. ರಾಷ್ಟ್ರೀಯವಾದವು ರಾಷ್ಟ್ರ-ರಾಜ್ಯ ಕಲ್ಪನೆಯ ಫಲವಾಗಿದ್ದು, ರಾಷ್ಟ್ರ-ರಾಜ್ಯ ಕಲ್ಪನೆಯು 1648 ರ ವೆಸ್ಟ್ಫಾಲಿಯ ಒಪ್ಪಂದದಿಂದಾಗಿ ಯುರೋಪಿನಲ್ಲಿ ಜನ್ಮತಾಳಿತು. ಒಂದು ಜನಾಂಗ ಹೊಂದಿರುವ ಸಾಮಾನ್ಯ ಇತಿಹಾಸ, ಸಂಸ್ಕೃತಿ, ಭಾಷೆ ಮುಂತಾದ ಸಂಗತಿಗಳ ಆಧಾರದ ಮೇಲೆ ತಮಗೆ ಬೇಕಾದ ಮತ್ತು ಎಲ್ಲರಿಗೂ ಸಾಮಾನ್ಯವಾಗಿ ಅನ್ವಯವಾಗುವ ಪ್ರಭುತ್ವವನ್ನು ಕಟ್ಟಿಕೊಳ್ಳುವುದೇ ರಾಷ್ಟ್ರ-ರಾಜ್ಯದ ಕಲ್ಪನೆಯಾಗಿದೆ. ಆದರೆ ಇದು ಯುರೋಪಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಅಗತ್ಯವಿದ್ದ ಸಂಗತಿ, ಜಗತ್ತಿನ ಎಲ್ಲಾ ಪ್ರದೇಶಗಳು ಅದೇ ರೀತಿಯಾಗಿ ಬದುಕುವ ಅಗತ್ಯವಿಲ್ಲ. ಬಿಜೇಪಿಗರು ಅಂತಹ ರಾಷ್ಟ್ರೀಯವಾದವನ್ನು ಹಾಗೂ ನಮ್ಮ ಸಂಸ್ಕೃತಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಪಾಶ್ಚಾತ್ಯರ ಮಾದರಿಯ ರಾಷ್ಟ್ರವನ್ನು ಕಟ್ಟುವ ಹುನ್ನಾರದಲ್ಲಿದ್ದಾರೆ. ಆದ್ದರಿಂದ ಅದನ್ನು ಶಾಲಾಪಠ್ಯಗಳಿಗೆ ಅಳವಡಿಸುವುದು ಅಸಮಂಜಸವಾದ ಕಲ್ಪನೆಯನ್ನು ಅವರ ಮೇಲೆ ಹೇರಿದಂತೆ ಆಗುತ್ತದೆ. ಏಕೆಂದರೆ ರಾಷ್ಟ್ರೀಯತೆ ಎಂದರೇನು? ಈ ಜಾಗತೀಕರಣದ ಸಂದರ್ಭದಲ್ಲಿ ಅದರ ಅಗತ್ಯತೆ ಎಷ್ಟಿದೆ? ಹಾಗೂ ಅದು ಸಂಸ್ಕೃತಿಗೆ ಸಮಂಜಸವಾದುದೇ? ಎಂಬುದರ ಅರಿವು ಕೊಂಚವೂ ಇರದಿದ್ದರೆ ಸುಮ್ಮನೆ ಇರುವುದು ಒಳಿತು. ನಮಗೇ ರಾಷ್ಟ್ರೀಯವಾದದ ಕುರಿತು ತಿಳಿಯದಿರದಿದ್ದರೆ, ಇನ್ನು ಮಕ್ಕಳಿಗೆ ಏನು ಕಲಿಸಿಕೊಡುತ್ತೇವೆ? ಒಟ್ಟಿನಲ್ಲಿ ಕೇಸರೀಕರಣದ ಕುರಿತು ಸ್ಪಷ್ಟತೆ ಅದರ ಪ್ರತಿಪಾದಕರಿಗೆ ಇಲ್ಲ ಎಂಬುದು ಮಾತ್ರ ಮೇಲ್ನೋಟಕ್ಕೆ ಗೋಚರಿಸುತ್ತದೆ.
ಮೇಲಿನ ವಿಷಯಗಳು ಕೇಸರಿ ಪಾಳೆಯದಲ್ಲಿರುವ ಗೊಂದಲಗಳು ಮತ್ತು ಅಸ್ಪಷ್ಟ ವಿಚಾರಗಳಾಗಿವೆ. ಈ ಮೊದಲೆ ಹೇಳಿದಂತೆ ಕೇಸರೀಕರಣದ ಚರ್ಚೆಯಲ್ಲಿ ಎರಡು ಬಣಗಳು ಪರಸ್ಪರ ವಿರೋಧ ಎಂಬಂತೆ ಮೇಲ್ನೋಟಕ್ಕೆ ಅನ್ನಿಸಿದರೂ ಅವರಿಬ್ಬರೂ ಹಂಚಿಕೊಂಡಿರುವ ಅಥವಾ ಅವರಿಬ್ಬರೂ ಪರಸ್ಪರ ಸಂಧಿಸುವ ಅಂಶಗಳಿವೆ. ಅವುಗಳೆಂದರೆ, 1 ಶಿಕ್ಷಣದ ಕುರಿತು ಎರಡೂ ಬಣಗಳಿಗಿರುವ ಒಪ್ಪಂದ 2. ಇತಿಹಾಸದ ಕುರಿತು ಎರಡೂ ಬಣಗಳಿಗಿರುವ ಒಲವು. ಈ ಎರಡು ಸಂಗತಿಗಳನ್ನು ಅರ್ಥಮಾಡಿಕೊಂಡರೆ ಕೇಸರೀಕರಣದ ಚರ್ಚೆಯ ಮಿತಿ ಏನೆಂಬುದು ನಮಗೆ ತಿಳಿದುಬರುತ್ತದೆ ಎಂಬುದು ನನ್ನ ಅಭಿಪ್ರಾಯ.
ಮೊದಲನೆಯ ಅಂಶದಿಂದ ಪ್ರಾರಂಭಿಸುತ್ತೇನೆ. ಶಿಕ್ಷಣ ಎಂದರೆ ಸಾಮಾನ್ಯವಾಗಿ ಹಿಂದುತ್ವದವರಾಗಿರಲಿ, ಸೆಕ್ಯುಲರಿಸ್ಟರಾಗಿರಲಿ ಒಂದೇ ತೆರನಾದ ನಂಬುಗೆ ಇರುವುದನ್ನು ಕಾಣಬಹುದು. ಅದೆಂದರೆ, ಶಿಕ್ಷಣವನ್ನು ಪಡೆಯುವ ಉದ್ದೇಶ ಅಥವಾ ನೀಡುವ ಉದ್ದೇಶ ಅದು ನಮ್ಮ ಬದುಕಿಗೆ ದಾರಿದೀಪವಾಗಬೇಕು. ಅಂದರೆ ನಾವು ಬದುಕಲು ಬೇಕಾಗ ಅಗತ್ಯ ಸಂಗತಿಗಳನ್ನು ಸ್ಪಷ್ಟವಾಗಿ ಅದು ನಮಗೆ ಕಲಿಸಿಕೊಡಬೇಕು, ಇದರಲ್ಲಿ ಯಾರಿಗೂ ಅನುಮಾನವಿರಲಿಕ್ಕಿಲ್ಲ. ಅಷ್ಟೆ ಅಲ್ಲ, ಇವರಿಬ್ಬರಲ್ಲೂ ಇರುವ ಮತ್ತೊಂದು ಮೂಲಭೂತ ಒಪ್ಪಂದವೆಂದರೆ, ಶಿಕ್ಷಣವು ಮನುಷ್ಯನನ್ನು ವೈಚಾರಿಕನನ್ನಾಗಿ ಮಾಡಿಬಿಡುತ್ತದೆ ಎಂದು. ಅದು ಯಾವ ಶಿಕ್ಷಣ ಎಂಬುದು ಆಯಾ ಬಣದ ಐಡಿಯಾಲಜಿಯ ಮೇಲೆ ಅವಲಂಬಿತ. ಆದ್ದರಿಂದಲೇ ಕಡ್ಡಾಯ ಶಿಕ್ಷಣದಂತಹ ಕಾಯ್ದೆಗಳು ಜಾರಿಗೆ ಬಂದಿವೆ. ಒಬ್ಬ ವ್ಯಕ್ತಿ ನಾಗರೀಕನಾಗಬೇಕಾದರೆ ಶಿಕ್ಷಣ ಅಗತ್ಯ ಎಂಬುದು ಇದರ ಅರ್ಥ. ಇಂದು ಬಹುತೇಕ ಶಿಕ್ಷಣ ಸಂಸ್ಥೆಗಳು ವಿಧ್ಯಾರ್ಥಿಗಳನ್ನು ಒಬ್ಬ/ಳು ಉತ್ತಮ ಪ್ರಜೆಯನ್ನಾಗಿ ರೂಪಿಸುವ ಹೊಣೆಯನ್ನು ಹೊತ್ತಿವೆ ಎಂದು ಎದೆತಟ್ಟಿ ಹೇಳಲು ಯಾರಿಗೂ ಸಾಧ್ಯವಿಲ್ಲ. ಹಿಂದಿನ ಶಿಕ್ಷಣ ಪದ್ಧತಿಯನ್ನು ಅವಲೋಕಿಸಿದರೆ, ಅದನ್ನು ಧರಮಪಾಲ್ ಎಂಬ ಚಿಂತಕರು ತಮ್ಮ ಬ್ಯೂಟಿಫುಲ್ ಟ್ರಿ ಎಂಬ ಗ್ರಂಥದಲ್ಲಿ ತಿಳಿಸುವಂತೆ, ಬ್ರಿಟೀಷರ ಆಗಮನ ಪೂರ್ವದಲ್ಲಿ ಇಲ್ಲಿನ ಶಿಕ್ಷಣ ಜನರಿಗೆ ಬದುಕಲು ಅಗತ್ಯವಿರುವ ವಿಚಾರಗಳನ್ನು ಒಳಗೊಂಡಿತ್ತು. ಅಂದರೆ ವೈಶ್ಯರಿಗೆ ವ್ಯಾಪಾರ ಮಾಡಲು ಅಗತ್ಯವಾದ ತರಬೇತಿ, ರಾಜರ ಮಕ್ಕಳಿಗೆ ರಾಜ್ಯಭಾರ ನಡೆಸಲು ಬೇಕಾದ ವಿದ್ಯೆ, ಹಾಗೂ ವೇದಾಧ್ಯಯದಲ್ಲಿ ಆಸಕ್ತಿ ಹೊಂದಿರುವವರಿಗೆ ಅವುಗಳ ಅಧ್ಯಯನ ಹೀಗೆ ಮುಂತಾದ ಅಗತ್ಯವಾದ ವಿದ್ಯೆಗಳನ್ನು ಕಲಿಸಿಕೊಡಲಾಗುತ್ತಿತ್ತು. ಆದರೆ ಮೆಕಾಲೆಯ ಶಿಕ್ಷಣ ಪದ್ದತಿ ಬಂದಮೇಲೆ ಪಾಶ್ಚಾತ್ಯರ ಶ್ರೇಷ್ಟತೆಯನ್ನು ಅನುಸರಿಸುವುದು ಮತ್ತು ಅವರ ಕುರಿತು ಅಧ್ಯಯನ ಮಾಡುವುದು ಮಾತ್ರವೇ ನಿಜವಾದ ಶಿಕ್ಷಣ ಎಂಬಂತಹ ಕಲ್ಪನೆ ಬೆಳೆಯತೊಡಗಿತು. ಶಿಕ್ಷಣದ ಮೂಲಕ ವೈಚಾರಿಕತೆಯನ್ನು ಪಡೆಯುವುದೆಂದರೆ ಪಾಶ್ಚಾತ್ಯರ ನಾಲ್ಕು ಆಂಗ್ಲ ಪುಸ್ತಕಗಳನ್ನು ಓದುವುದು ಮತ್ತು ಅದರ ಆಧಾರದ ಮೇಲೆ ಭಾರತೀಯ ಸಂಸ್ಕೃತಿಯನ್ನು ಹೀಗಳೆಯುವದೇ ವೈಚಾರಿಕ ಶಿಕ್ಷಣದ ಗುರಿಯಾಗಿಬಿಟ್ಟಿದೆ. ಆದ್ದರಿಂದಲೇ ಒಬ್ಬ ಪ್ರಸಿದ್ದ ಚಿಂತಕರೊಬ್ಬರು ಹೇಳುವಂತೆ ಆಧುನಿಕ ಶಿಕ್ಷಣ ಪದ್ದತಿಗೆ ಜೋತುಬಿದ್ದಿರುವ ನಾವೆಲ್ಲಾ ಮೆಕಾಲೆಯ ಮಕ್ಕಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪಾಶ್ಚಾತ್ಯರ ಈ ಶಿಕ್ಷಣ ಪದ್ದತಿಯಿಂದಾಗಿ ನಮಗೆ ಬದುಕಲು ಅಗತ್ಯವಿರುವ ಅಂಶಗಳನ್ನು ಮರೆತು ಭಾರತೀಯ ಸಂಸ್ಕೃತಿಯನ್ನು ಹೀಗಳೆಯುತ್ತಾ, ಪಾಶ್ಚಾತ್ಯ ಸಂಸ್ಕೃತಿಯನ್ನು ಹೊಗಳು ಭಟ್ಟರಂತೆ ಹೊಗಳುವುದು ರೂಢಿಯಾಗಿಬಿಟ್ಟಿದೆ. ಬಿ.ಎಲ್. ಶಂಕರ್ ರವರು ಬರೆದಿರುವ ಲೇಖನವೂ ಸಹ ಪಾಶ್ಚಾತ್ಯರು ಭಾರತದ ಕುರಿತು ಕಟ್ಟಿಕೊಟ್ಟ ಚರಿತ್ರೆಯನ್ನು ಯಥಾವತ್ತಾಗಿ ನಂಬುತ್ತದೆ. ಅವರು ಕೇಸರೀಕರಣ ವಿರೋಧಿಸುತ್ತಾ ಬ್ರಿಟೀಷರು ಹೇಳಿದ್ದನ್ನೇ ಸತ್ಯ ಎಂದು ನಂಬಿ ಅದನ್ನೇ ನಾವೂ ಓದುವಂತೆ ಒತ್ತಾಯ ಪಡಿಸುತ್ತಿದ್ದಾರೆ. ಭಾರತದ ಕುರಿತು ಪಾಶ್ಚಾತ್ಯರು ಹೇಳಿರುವುದನ್ನು ಹಾಗೂ ಹಿಂದಿನ ಕಾಲದ ಕೆಲವೇ ಕಲವು ಭಾರತೀಯ ಸಾಧನೆಗಳನ್ನು ಓದುವುದರಿಂದ ಅದು ನಮ್ಮ ಅನುಭವವಾಗುತ್ತದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ. ಅಂದರೆ ಈಗಿರುವ ಪಠ್ಯಕ್ರಮ ಪಾಶ್ಚಾತ್ಯರ ಫಲವಾಗಿದ್ದು, ಮುಂದೆ ತರಲು ಇಚ್ಚಿಸಿರುವ ಪಠ್ಯಕ್ರಮ ಇವೆರಡರಿಂದಲೂ ನಾವು ಬದುಕುವ ವಿಧಾನವನ್ನು ಕಲಿಯುವಲ್ಲಿ ಅನುಮಾನವಿದೆ. ಆದ್ದರಿಂದ ಪಾಶ್ಚಾತ್ಯರ ಶಿಕ್ಷಣ ಪದ್ದತಿ ವಿರೋಧಿಸಿ ಪುರೂರವನನ್ನು ಓದುತ್ತಾ ಕುಳಿತರೂ ಯಾವ ಪ್ರಯೋಜನವೂ ಇಲ್ಲ ಹಾಗೆಯೇ ಕೇಸರೀಕರಣವನ್ನು ವಿರೋಧಿಸಿ ಪಾಶ್ಚಾತ್ಯರ ಅನುಭವ ಪ್ರಣೀತ ಕತೆಗಳನ್ನು ಓದುವುದರಿಂದಲೂ ಉಪಯೋಗವಿಲ್ಲ, ಏಕೆಂದರೆ ಇವೆರಡೂ ಸಹ 21 ನೇ ಶತಮಾನದಲ್ಲಿ ನಾವು ಬದುಕಬೇಕಾದ ಮಾರ್ಗವನ್ನು ತೋರಿಸುವಲ್ಲಿ ಹೀನಾಯವಾಗಿ ಸೋಲುತ್ತವೆ. ಏಕೆಂದರೆ ಈ ಎರಡೂ ತೆರನಾದ ಪಠ್ಯಕ್ರಮ ನಮ್ಮ ಅನುಭವಕ್ಕೂ ಮತ್ತು ಅಭ್ಯಾಸಕ್ಕೂ ಸಂಬಂಧವನ್ನು ಕಲ್ಪಿಸುವುದಿಲ್ಲ. ಇದರ ಜೊತೆಗೆ ಮತ್ತೊಂದು ಮುಖ್ಯವಾದ ವಿಷಯವನ್ನು ನಾವು ಗಮನಿಸಬೇಕು, ಅದೆಂದರೆ ಶಿಕ್ಷಣದ ಪಠ್ಯಕ್ರಮದಲ್ಲಿ ವಿಜ್ಞಾನದ ವಿಷಯವನ್ನು ಅಥವಾ ಗಣಿತದ ವಿಷಯವನ್ನು ಬದಲಿಸಿದರೆ ಅದು ಅಷ್ಟು ಚರ್ಚೆಗೆ ಗ್ರಾಸವಾಗುವುದಿಲ್ಲ. ಆದರೆ ಇಂದು ಹೆಚ್ಚು ಚರ್ಚೆಯಾಗುವುತ್ತಿರುವುದು ಸಮಾಜವಿಜ್ಞಾನಗಳ ಪಠ್ಯಗಳನ್ನು ಬದಲಿಸುವ ಕುರಿತೇ ಆಗಿದೆ. ಇಂದು ನಾವು ಓದುತ್ತಿರುವ ಸಮಾಜವಿಜ್ಞಾನ ಪಠ್ಯಗಳು ಸಂಪೂರ್ಣವಾಗಿ ಪಾಶ್ಚಾತ್ಯರ ಅನುಭವದ ಕಥನಗಳು ಎಂಬ ವಾದವೂ ಸಹ ಇದೆ. ಅಂದರೆ ಭಾರತೀಯ ಸಮಾಜದ ಕುರಿತು ನಾವು ಓದುವ ಪುಸ್ತಕಗಳಲ್ಲಿರುವ ವಿವರಣೆಗಳು ಪಾಶ್ಚಾತ್ಯರು ಭಾರತಕ್ಕೆ ಬಂದು ಕೆಲವರು ಬಾರದೆ ವಿದೇಶಗಳಲ್ಲೇ ಇದ್ದು ನೀಡಿದಂತವುಗಳಾಗಿವೆ. ಹಾಗೆಂದು ಅದಕ್ಕೆ ಬದಲಿಯಾದ ಪಠ್ಯಕ್ರಮವಿದೆಯೇ ಎಂದು ನೋಡಿದರೂ ಅಲ್ಲಿಯೂ ನಮಗೆ ನಿರಾಸೆಯಾಗುತ್ತದೆ. ಏಕೆಂದರೆ ನಮ್ಮ ಸಂಸ್ಕೃತಿಯ ಕುರಿತು ಸಂಶೋಧನೆ ನಡೆಸಿ ಪಾಶ್ಚಾತ್ಯರು ಹೇಳಿದ್ದನ್ನು ಪುನಾರಾವರ್ತಿಸುವುದನ್ನು ಬಿಟ್ಟು ಹೊಸ ವಿಚಾರಗಳನ್ನು ಹೇಳಿರುವುದು ತುಂಬಾ ವಿರಳ. ಆದ್ದರಿಂದ ಸೆಕ್ಯುಲರ್ಗಳು ಹೇಳುವ ಪಾಶ್ಚಾತ್ಯರ ವಿವರಣೆಯನ್ನು ಓದಿದರೂ ಹಾಗೂ ಯಾವುದೇ ಸಂಶೋಧನೆ ನಡೆಸದೆ ಭಾರತೀಯ ಸಂಸ್ಕೃತಿಯ ಕುರಿತು ಗ್ಲೋರಿಫೈ ಮಾಡುವ ಪಠ್ಯಕ್ರಮ ಇಟ್ಟರೂ, ಇವೆರಡೂ ಸಹ ಮನುಷ್ಯನನ್ನು ವೈಚಾರಿಕನನ್ನಾಗಿ ಬೆಳೆಸುತ್ತವೆ ಎಂಬುದರಲ್ಲಿ ತುಂಬಾ ಬಲವಾದ ಅನುಮಾನವಿದೆ.
ಎರಡನೆಯದಾಗಿ, ಇತಿಹಾಸವನ್ನು ಒಂದು ಮೈಲಿಗಲ್ಲು ಎಂಬಂತೆ ನೋಡುವ ಪರಿಪಾಠ ನಮಗೇಕೆ? ಹೊಸಪಠ್ಯಕ್ರಮವನ್ನು ಸಮರ್ಥಿಸುವ ಮತ್ತು ಅದನ್ನು ವಿರೋಧಿಸುವ ಎರಡೂ ಬಣಗಳು ತಮ್ಮ ಚರ್ಚೆಯನ್ನು ಇತಿಹಾಸದ ಮೇಲೆ ಕೇಂದ್ರೀಕರಿಸಿವೆ. ಇಬ್ಬರೂ ಸಹ ತೆರೆದ ಮತ್ತು ಮುಚ್ಚಿದ ಇತಿಹಾಸ ಎಂಬ ಕಲ್ಪನೆಯನ್ನಿಟ್ಟುಕೊಂಡು ಒಬ್ಬರಮೇಲೋಬ್ಬರು ಕೆಸರೆರಾಚಟ ಮಾಡುತ್ತ ಒಣಚರ್ಚೆಯನ್ನು ಗಂಭೀರವಾಗಿ ಮಾಡುತ್ತಿದ್ದಾರೆ. ಜೊತೆಗೆ ಎರಡೂ ಬಣಗಳು ರಾಷ್ಟ್ರೀಯವಾದವನ್ನು ಬೇರೆ ಬೇರೆ ಸ್ವರೂಪದಲ್ಲಿ ಬೆನ್ನುಹತ್ತಿರುವುದರಿಂದ ಇತಿಹಾಸವು (ಹಿಸ್ಟರಿ) ಅತ್ಯಗತ್ಯ ಎಂದು ಮನಗಂಡಿವೆ. ಆದರೆ ಗತದ ಕುರಿತು ಬೇರೆ ಬೇರೆ ವಿಧಗಳಲ್ಲಿ ನೋಡುವ ಸಾಧ್ಯತೆಗಳಿವೆ ಎಂಬುದಾಗಿ ಬಾಲಗಂಗಾಧರವರು ವಾದಿಸುತ್ತಾರೆ. ಅವರ ವಾದವನ್ನು ಸ್ವಲ್ಪ ನೋಡುವುದಾದರೆ, ಪಾಶ್ಚಾತ್ಯ ಮತ್ತು ಭಾರತದಂತಹ ಪೌರಾತ್ಯ ರಾಷ್ಟ್ರಗಳಲ್ಲಿ ಗತವನ್ನು ನೋಡುವ ವಿಧಾನಗಳಲ್ಲಿ ವ್ಯತ್ಯಾಸಗಳಿವೆ. ಪಾಶ್ಚಾತ್ಯರು ಗತವನ್ನು ಅರ್ಥೈಸಿಕೊಳ್ಳಲು ಮತ್ತು ರಕ್ಷಿಸಿಡಲು ಇತಿಹಾಸ(ಹಿಸ್ಟರಿ)ಯ ಬೆನ್ನುಬಿದ್ದಿದ್ದರೆ, ಭಾರತದಂತಹ ರಾಷ್ಟ್ರಗಳು ಇತಿಹಾಸದ ಅಗತ್ಯವೇ ಇಲ್ಲದೆ ತಮ್ಮ ಗತವನ್ನು ವಿಶಿಷ್ಟ ಬಗೆಯಲ್ಲಿ ಸ್ಮರಣೆಯಲ್ಲಿಟ್ಟುಕೊಂಡಿವೆ. ಅಂದರೆ, ಕತೆ, ಪುರಾಣ ಮುಂತಾದವುಗಳ ಮೂಲಕ ಗತವನ್ನು ಪ್ರಸ್ತುತದಲ್ಲಿ ಉಳಿಸಿಕೊಳ್ಳುತ್ತವೆ. ಆದರೆ ಪಾಶ್ಚಾತ್ಯರ ವಿಧಾನವು ಗತವನ್ನು ವರ್ತಮಾನದಿಂದ ಸಂಪೂರ್ಣವಾಗಿ ಬೇರ್ಪಡಿಸಿಬಿಡುತ್ತದೆ. ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬ ರಾಜ ಯುದ್ದ ಮಾಡಿದ, ಅದು ಇತಿಹಾಸವಾಗುತ್ತದೆ, ಅವನು ಆ ಕಾಲದಲ್ಲಿ ಯುದ್ದ ಮಾಡಿದ್ದಕ್ಕೂ ನಾವು ಇಂದು ಐಟಿ ಬಿಟಿ ಯಲ್ಲಿ ಕಾರ್ಯನಿರ್ವಹಿಸುವುದಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ಆದರೆ ಕತೆಗಳನ್ನು ಸ್ಮೃತಿಯಲ್ಲಿಟ್ಟುಕೊಳ್ಳುವುದು ಪಾಶ್ಚಾತ್ಯರ ವಿಧಾನಕ್ಕೆ ಸಂಪೂರ್ಣವಾಗಿ ವಿರುದ್ಧವಾದುದು. ಇಂತಹ ಸತ್ಯವನ್ನು ಅರಿಯದ ಮೆಕಾಲೆಯ ಮಕ್ಕಳು ಎಲ್ಲವನ್ನೂ ಪಾಶ್ಚಾತ್ಯೀಕರಣ ಮಾಡಹೊರಟಿದ್ದಾರೆ, ಅದೂ ನಮ್ಮ ಸಂಸ್ಕೃತಿಯ ಸತ್ವವನ್ನು ನಾಶಮಾಡುವ ಮೂಲಕ. ಆದ್ದರಿಂದ ಹಿಂದುತ್ವದ ಪಠ್ಯಗಳನ್ನು ಅಳವಡಿಸಿದರೂ ಅಥವಾ ಸೆಕ್ಯುಲರ್ ಪಠ್ಯಕ್ರಮವನ್ನು ಅಳವಡಿಸಿದರೂ ಒಂದೊಮ್ಮೆ ಅವು ಇತಿಹಾಸದ ಮೇಲೆ ಅಷ್ಟೊಂದು ಅವಲಂಬಿತವಾಗಿದ್ದರೆ, ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವಲ್ಲಿ ಮೊದಲನೆಯ ಹಂತದಲ್ಲಿಯೇ ಮಗುಚಿ ಬೀಳುತ್ತದೆ. ಹಿಂದುತ್ವದರವರು ಒಂದು ತೆರನಾದ ಇತಿಹಾಸ ಬೇಕು ಎಂದರೆ ಸೆಕ್ಯುಲರ್ ವಾದಿಗಳು ಮತ್ತೊಂದು ತೆರನಾದ ಇತಿಹಾಸ ಬೇಕು ಎಂದು ಪಟ್ಟುಹಿಡಿಯುತ್ತಾರೆ. ಆದರೆ ಇವರಿಬ್ಬರ ದೋಣಿ ಒಂದೇ, ಅದುವೆ ಇತಿಹಾಸ ಅಥವಾ ಚರಿತ್ರೆ. ಹಾಗೆಯೇ ರಾಷ್ಟ್ರೀಯವಾದವನ್ನು ನೋಡುವುದಾದರೆ, ಒಬ್ಬರನ್ನು ಹಿಂದೂ ರಾಷ್ಟ್ರೀಯವಾದಿಗಳು ಎಂದು ಮತ್ತೊಬ್ಬರನ್ನು ಸೆಕ್ಯುಲರ್ ರಾಷ್ಟ್ರೀಯವಾದಿಗಳೆಂದು ಬಣ್ಣಿಸುವುದರ ಹಿಂದೆ, ಇಬ್ಬರಲ್ಲೂ ರಾಷ್ಟ್ರೀಯವಾದದ ಭೂತ ಅಡಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಒಟ್ಟಿನಲ್ಲಿ ರಾಷ್ಟ್ರೀಯವಾದ ಹಾಗೂ ಇತಿಹಾಸ ಇವೆರಡನ್ನೂ ವಿಭಿನ್ನ ನೆಲಗಳಲ್ಲಿ ಎರಡೂ ಬಣಗಳು ಗ್ರಹಿಸಿ ಹಾಗೂ ಅವುಗಳ ಆಧಾರದ ಮೇಲೆಯೇ ಶಾಲೆಗಳಿಗೆ ಪಠ್ಯಕ್ರಮಗಳನ್ನು ಸೇರಿಸಿದರೂ ಕೂಡ ಅವುಗಳ ಪರಿಣಾಮ ಮಾತ್ರ ಒಂದೆ, ಅದೆಂದರೆ ನಮ್ಮ ಸಂಸ್ಕೃತಿಯನ್ನು ನಾವು ಗ್ರಹಿಸಲು ಸಾಧ್ಯವಾಗುವುದಿಲ್ಲ. ನಮ್ಮ ಸಂಸ್ಕೃತಿಯ ಕುರಿತು ಅಪಾರವಾದ ಗೌರವವನ್ನು ಹೊಂದಿರುವ ಬಿಜೆಪಿಗರು ಮತ್ತು ಅರ್.ಎಸ್ಸ್.ಎಸ್ಸಿಗರು ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲದಿರಲಿ ಎಂಬುದೇ ನನ್ನ ಆಶಯ.

Recent Comments