Social Science Module for Engineering Students BMS Engineering College Bangalore

July 27, 2011 Leave a comment

“ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ”

July 24, 2011 Leave a comment

ಸಂಸ್ಕೃತಿ ಸಂಕಥನ – ೨

“ಯಲ್ಲಿ ಪ್ರಕಟಿತ

-ರಮಾನಂದ ಐನಕೈ

ಸಂಸ್ಕೃತಿ ಸಂಕಥನ – ೧

ಭಾರತೀಯ ಸಂಸ್ಕೃತಿಯ ಕುರಿತಾದ ನಮ್ಮ ಸ್ಮೃತಿ ವಿಸ್ಮೃತಿಯಾಗಿದೆ. ಇದಕ್ಕೆ ಕಾರಣವೇನು ಈ ಮರೆವನ್ನು ಪುನಃ ನೆನಪಿಸಿಕೊಳ್ಳುವುದು ಹೇಗೆ? ಸಂಸ್ಕೃತಿಯನ್ನು ಮರೆತದ್ದರಿಂದ ಆದ ಪರಿಣಾಮಗಳೇನು? ಹೀಗೆ ಯೋಚಿಸಲು ಹೋದರೆ ನಮ್ಮೆದುರು ನೂರಾರು ಪ್ರಶ್ನೆಗಳುಂಟು. ಭಾರತೀಯರು ತಮ್ಮ ಸಂಸ್ಕೃತಿಯ ಕುರಿತಾಗಿ ಕೇಳುತ್ತಿರುವ, ಓದುತ್ತಿರುವ, ನಂಬಿಕೊಂಡಿರುವ ಹಲವು ಸಂಗತಿಗಳು ತಪ್ಪು ತಿಳುವಳಿಕೆಂದ ಕೂಡಿದ್ದರಿಂದ ವರ್ತಮಾನದ ಭಾರತದಲ್ಲಿ ಅನೇಕಾನೇಕ ಸಮಸ್ಯೆಗಳು ಜೀವಪಡೆಯುತ್ತಲೇ ಇವೆ. ಈ ಸತ್ಯ ಅರ್ಥವಾಗಬೇಕಾದರೆ ಇತ್ತೀಚೆಗೆ ಪ್ರಕಟಗೊಂಡ ಎರಡು ಕನ್ನಡದ ಪುಸ್ತಕಗಳನ್ನು ಪ್ರತಿಯೊಬ್ಬರೂ ಓದಲೇಬೇಕು.

ಒಂದು ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಎಂಬ ಪುಸ್ತಕ ಇದು ಪ್ರೊ. ಬಾಲಗಂಗಾಧರರ ಸಂಶೋಧನಾ ಗ್ರಂಥ  ಇದನ್ನು ಪ್ರೊ. ರಾಜಾರಾಮ ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಇನ್ನೊಂದು ಪುಸ್ತಕ ಪೂರ್ವಾವಲೋಕನ. ಇದು ಬಾಲಗಂಗಾಧರರ ಬಿಡಿ ಲೇಖನಗಳ ಅನುವಾದಗಳ ಸಂಗ್ರಹ. ಇವೆರಡೂ ಕೂಡಾ ಭಾರತೀಯ ಸಮಾಜ ವಿಜ್ಞಾನವನ್ನು ಪುನರ್‌ಪರಿಶೀಲನೆಗೆ ಹಚ್ಚುವ ಮಹತ್ವದ ಕೃತಿಗಳು.

ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಪುಸ್ತಕ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆಯುತ್ತದೆ. ಜಗತ್ತಿನ ಸಂಸ್ಕೃತಿಗಳನ್ನು ಅಧ್ಯಯನ ಮಾಡಲು ಬೇಕೆಂದ ವೈ್ಜ್ಞಾನಿಕ ತರ್ಕವನ್ನು ಸೂತ್ರವನ್ನು ಇದು ಅನಾವರಣ ಮಾಡುತ್ತದೆ. ಶೈಲಿಯ ದ್ರುಷ್ಟಿಯಿಂದಲೂ ಈ ಗ್ರಂಥ ಅಪರೂಪದ್ದು. ವಿಷಯ ಮಂಡಿಸಲು ಬೇಕಾದ ವೈಜ್ಞಾನಿಕ ತರ್ಕ, ಚಿಕಿತ್ಸಕ ದ್ಟೃಷ್ಟಿ, ಸಹನೆ, ಹಠ ಎಲ್ಲವನ್ನೂ ನಾವಿಲ್ಲಿ ಕಾಣಬಹುದು. ಪಾಶ್ಚಾತ್ಯರು ಸಂಸ್ಕೃತಿಯನ್ನು ಅರ್ಥೈಸುವ ರೀತಿಗೂ ನಾವು ಅರ್ಥೈಸಬೇಕಾದ ರೀತಿಗೂ ಇರುವ ಮುಖ್ಯ ವ್ಯತ್ಯಾಸವನ್ನು ಈ ಕೃತಿಯಲ್ಲಿ ತಿಳಿಸಲಾಗುತ್ತದೆ.

ಪಾಶ್ಚಾತ್ಯ ಸಂಸ್ಕೃತಿ ಕ್ರಿಶ್ಚಿಯನ್ ಥಿಯಾಲಜಿಂದ ಬೆಳೆದುಬಂದದ್ದು.ನಮ್ಮ ಸಂಸ್ಕೃತಿ ಅನುಭವ ಮತ್ತು ಆಚರಣೆಯ ಮೂಲಕ ಹರಿದುಬಂದದ್ದು. ಹಾಗಾಗಿ ಪರಸ್ಪರ ಅರ್ಥವಾಗುವುದು ತುಂಬಾ ಕಷ್ಟ.ಪಾಶ್ಚಾತ್ಯರು ನಮ್ಮ ಸಂಸ್ಕೃತಿಯ ಕುರಿತು ಎಷ್ಟೇ ಅಧ್ಯಯನ ಮಾಡಿದ್ದರೂ ಅದು ಭಾರತೀಯ ಸಂಸ್ಕೃತಿಯ ಕುರಿತಾದ ಅವರ ಅನುಭವವೇ ವಿನಾ ನಿಜ ಅಲ್ಲ. ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಹೊರಟಾಗ ಮಾತ್ರ ಈ ಸತ್ಯ ಅರಿವಾಗುತ್ತದೆ.

ಸ್ಮೃತಿ ವಿಸ್ಮೃತಿಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥೈಸುವ ಅದ್ಭುತವಾದ ಪ್ರಯತ್ನ ಕಾಣುತ್ತದೆ. ಹಾಗೂ ಪಾಶ್ಚಾತ್ಯ ಸಂಸ್ಕೃತಿಯಿಂದ ಯರವಲು ಅಂಶಗಳೂ ನಮ್ಮಲ್ಲಿ ಇಲ್ಲದೇ ಇದ್ದಷ್ಟು  ಇದ್ದದ್ದು ಗೋಚರವಾಗಿರುತ್ತದೆ. ಆಗ ನಮ್ಮ ಸಂಸ್ಕೃತಿ ಅತ್ಯಂತ ವಿಶಾಲವೂ ಶ್ರೀಮಂತವೂ ಆಗಿ ಕಾಣುತ್ತದೆ. ಹಾಗಾದರೆ ನಮ್ಮ ಸಂಸ್ಕೃತಿ ಅಂದರೆ ಗೊಡ್ಡು ಆಚರಣೆಗಳಿಂದ ಕೂಡಿದ ಸಂಪ್ರದಾಯಗಳು ಎಂಬ ಭಾರತೀಯ ಸುಶಿಕ್ಷಿತರ ಚಿಂತನೆಗೆ ಅರ್ಥ ಎಲ್ಲಿದೆ? ಇದೇ ಬಾಲಗಂಗಾಧರರ ಬರವಣಿಗೆಯ ಶಕ್ತಿ.

ನಿಜಕ್ಕೂ ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿಯನ್ನು ಅರ್ಥ ಮಾಡಿಸಲು ಬರೆದ ಪಾಶ್ಚಾತ್ಯ ಸಂಸ್ಕೃತಿಯ ಸುದೀರ್ಘವಾದ ಕಥೆ. ಪಾಶ್ಚಾತ್ಯರ ಕತೆಯನ್ನು ಓದುತ್ತ ಹೋದಹಾಗೆ ಭಾರತ ನಮಗೆ ಅರ್ಥವಾಗುತ್ತ ಬರುತ್ತದೆ. ಪಾಶ್ಚಾತ್ಯ ಸಂಸ್ಕೃತಿ ನಿಂತಿದೆ.  ಮುಖ್ಯವಾಗಿ ರಿಲಿಜನ್ ಎಂಬ ಪರಿಕಲ್ಪನೆಯ ಮೇಲೆ. ಅಷ್ಟೇ ಅಲ್ಲ, ಪಾಶ್ಚಾತ್ಯ ಪಂಡಿತರು ರಿಲಿಜನ್ ಜಗತ್ತಿನ ಎಲ್ಲ ಸಂಸ್ಕೃತಿಗಳ ಸಾಮಾನ್ಯ ಲಕ್ಷಣ ಎಂದು ಭಾವಿಸುತ್ತಾರೆ. ಹಾಗಾಗಿಯೇ ಯುರೋಪಿಯನ್ನರು ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ರಿಲಿಜನ್ ಎಂದು ಪರಿವರ್ತಿಸಿ ಸಮಾಜ ವಿಜ್ಞಾನ ಬರೆದದ್ದು. ಆದರೆ ಬಾಲಗಂಗಾಧರರು ಪ್ರತಿಪಾದಿಸುತ್ತಾರೆ ರಿಲಿಜನ್ ಸಂಸ್ಕೃತಿಗಳ ಸಾಮಾನ್ಯ ಲಕ್ಷಣ ಅಲ್ಲ. ರಿಲಿಜನ್ ಇಲ್ಲದ ಅದೆಷ್ಟೋ ಸಂಸ್ಕೃತಿಗಳು ಜಗತ್ತಿನಲ್ಲಿ ಇವೆ ಎಂದು ಹಾಗಾದರೆ ರಿಲಿಜನ್ ಅಂದರೆ ಏನು? ಇಲ್ಲಿ ಪುನಃ ಶುರುವಾಗುತ್ತದೆ. ರಿಲಿಜನ್ನಿನ ಕಥೆ. ಇಡೀ ಪುಸ್ತಕದುದ್ದಕ್ಕೂ ಬಾಲಗಂಗಾಧರ ರಿಲಿಜನ್ನಿನ ವ್ಯಾಖ್ಯೆ ಹೇಳುವುದಿಲ್ಲ. ಆದರೆ ರಿಲಿಜನ್ ಅಂದರೆ ಏನೆಂಬುದನ್ನು ಅರ್ಥ ಮಾಡಿಸುತ್ತಾರೆ. ಇದೇ ಈ ಗ್ರಂಥದ ಬಹುದೊಡ್ಡ ಯಶಸ್ಸು.

ಹಾಗಾದರೆ ಯುರೋಪಿಯನ್ನರಿಗೆ ಭಾರತದಲ್ಲಿ ಹಿಂದೂ ರಿಲಿಜನ್ ಗುರುತಿಸುವ ಅನಿವಾರ್ಯತೆ ಏಕೆ ಬಂತು? ಏಕೆಂದರೆ ಅವರಿಗೆ ಭಾರತಕ್ಕೊಂದು ಸಮಾಜ ವಿಜ್ಞಾನವನ್ನು ಬರೆಯಬೇಕಾಗಿತ್ತು. ಅದಕ್ಕೆ ಅವರು ಪಾಶ್ಚಾತ್ಯ ಸಮಾಜವಿಜ್ಞಾನ ಅಥವಾ ಕ್ರಿಶ್ಚಿಯಾನಿಟಿಯನ್ನೇ ಮಾದರಿಯಾಗಿಟ್ಟುಕೊಂಡರು. ಅವರು ಸಮಾಜವಿಜ್ಞಾನ ಪ್ರಾರಂಭವಾದುದೇ ರಿಲಿಜನ್‌ನ ನಾಂದಿಂದ. ಹಾಗಾಗಿ ಹಿಂದೂ ರಿಲಿಜನ್ ಭಾರತೀಯ ಸಮಾಜ ವಿಜ್ಞಾನಕ್ಕೆ ನಾಂದಿಯಾತು. ರಿಲಿಜನ್‌ನ ರೀತಿಗಳೆಲ್ಲ ಭಾರತೀಯ ಸಂಸ್ಕೃತಿಯ  ಮಿತಿಗಳಾದವು. ಸ್ವಾತಂತ್ರ್ಯಾನಂತರದ ಪಂಡಿತರು, ಬುದ್ಧಿಜೀವಿಗಳು ಈ ಮಿತಿಯಲ್ಲಿ ಸಿಕ್ಕಿಬಿದ್ದರು. ಹೀಗೆ ಈ ಗ್ರಂಥ ಓದುಗರ ಸಾಮರ್ಥ್ಯಕ್ಕನುಗುಣವಾಗಿ ಅರ್ಥ ಸಾಧ್ಯತೆಯನ್ನು ಒದಗಿಸುತ್ತದೆ.

ಮುಖ್ಯವಾಗಿ ಬಾಲಗಂಗಾಧರರು ಈ ಸಂಶೋಧನಾ ಗ್ರಂಥವನ್ನು ೧೭ ವರ್ಷದ ಹಿಂದೆ ಬರೆದದ್ದು. ಅದರಲ್ಲೂ ಯುರೋಪಿಯನ್ ಚಿಂತಕರನ್ನು ಹಾಗೂ ಅವರಿಂದ ಪ್ರೇರಿತರಾದ ಭಾರತೀಯ ಬುದ್ಧಿಜೀವಿಗಳನ್ನು ಗಮನದಲ್ಲಿಟ್ಟುಕೊಂಡು ಬರೆದ ಕೃತಿ. ಹಾಗಾಗಿ ಸಾಮಾನ್ಯ ಓದುಗರಿಂದ ಸಹನೆ ಅಪೇಕ್ಷಿಸುತ್ತದೆ.ಭಾವಾನುವಾದವಾಗಿರದೇ ನೇರ ಅನುವಾದವಾದ್ದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ನಿಖರತೆ ಒದಗಿಸುತ್ತದೆ.

ಪೂರ್ವಾವಲೋಕನ ಕನ್ನಡದ ಸಾಮಾನ್ಯ ಓದುಗರನ್ನು ಲಕ್ಷದಲ್ಲಿ ಇಟ್ಟುಕೊಂಡು ಹೊರತಂದ ಸರಳವಾದ ಕೃತಿ ಭಾರತದಲ್ಲಿನ ಅನೇಕ ಸಮಸ್ಯೆಗಳ ಕುರಿತಾಗಿ ಬರೆದ ಬಾಲಗಂಗಾಧರರ ಲೇಖನಗಳ ಕನ್ನಡಾನುವಾದ. ಭಾರತದಿಂದ ವಸಾಹತು ಆಳ್ವಿಕೆ ಹಿಂದೆ ಹೋದರೂ ಆ ವಸಾಹತು ಪ್ರಜ್ಞೆ ಇಲ್ಲಿ ಕೆಲಸ ಮಾಡುತ್ತದೆ. ಇಂಗ್ಲೀಶರು ಸ್ಟೃಸಿದ ಅರ್ಥ ಸಾಮ್ರಾಜ್ಯದಲ್ಲಿ ಕಣ್ಣಿಗೆ ಬಟ್ಟೇ ಕಟ್ಟಿಬಿಟ್ಟಂತಾಗಿದೆ ನಮ್ಮ ಪರಿಸ್ಥಿತಿ. ಆದರೂ ನಿಜವಾಗಿ ಕಣ್ಣು ಕಾಣುವವರಂತೆ ನಟಿಸುತ್ತಿದ್ದೇವೆ. ಏಕೆಂದರೆ ಈ ಸಭ್ಯತೆಯನ್ನು ಅವರೇ ಹೇಳಿಕೊಟ್ಟಿದ್ದಲ್ಲವೇ?

ಸಂಸ್ಕೃತಿ ಸಂಕಥನ – ೧

July 11, 2011 1 comment

- ರಮಾನಂದ ಐನಕೈ

ಭಾರತೀಯ ಸಂಸ್ಕೃತಿಯ ವಿಷಯದಲ್ಲಿ ಇಂದಿಗೂ ಕೂಡಾ ಗೊಂದಲವಿದೆ. ನಮ್ಮ ಆಚರಣೆಗಳು ಅರ್ಥವಿಲ್ಲದ್ದು. ಮೌಢ್ಯದಿಂದ ಕೂಡಿದ್ದು…. ಇತ್ಯಾದಿ. ನಮ್ಮ ಸುಶೀಕ್ಷಿತ ಜನರೂ ಕೂಡ ಇದನ್ನೇ ಪುನರುಚ್ಚರಿಸುತ್ತಿದ್ದಾರೆ. ಆದರೆ ಇದು ನಿಜ ಅಲ್ಲ. ಇವು ಕೇವಲ ಪಾಶ್ಚಾತ್ಯರಿಗೆ ನಮ್ಮ ಸಂಸ್ಕೃತಿಯ ಕುರಿತಾದ ಅನುಭವಗಳು. ಅವರ ಅನುಭವಗಳೇ ನಮಗೆ ಆದರ್ಶವಾಗಿದೆ.ಬೆಲ್ಜಿಯಂನ ಗೆರಿಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಾಲಗಂಗಾಧರ ಅವರು ಈ ಕುರಿತು ದೀರ್ಘ ಸಂಶೋಧನೆ ಮಾಡಿದ್ದಾರೆ. ಇವರ ಸಂಶೋಧನೆ ಭಾರತೀಯ ಸಂಸ್ಕೃತಿಯ ಮೇಲೆ ಹೊಸ ಬೆಳಕು ಚೆಲ್ಲಲಿದೆ.

ಭಾರತೀಯ ಸಂಸ್ಕೃತಿಯ ಕುರಿತಾದ ನಮ್ಮ ತಪ್ಪು ತಿಳುವಳಿಕೆ ಹೇಗೆ ಜೀವನದ ಬೇರೆ ಬೇರೆ ರಂಗದ ಮೇಲೆ ಅಡ್ಡ ಪರಿಣಾಮ ಮಾಡಿದೆ ಎಂಬ ಬಾಲಗಂಗಾಧರರ ವಾದವನ್ನು ಸರಳವಾಗಿ ಅನುಭವಕ್ಕೆ ದಕ್ಕುವಂತೆ ನಿರೂಪಿಸಲಿದ್ದಾರೆ ರಮಾನಂದ ಐನಕೈ. ಹೊಸ ಅಂಕಣ ‘ಸಂಸ್ಕೃತಿ ಸಂಕಥನ’ ಆರಂಭವಾಗಲಿದೆ.

ಇದು ಹೇಳುವಷ್ಟು ಸುಲಭವಲ್ಲ. ಆದರೂ ಒಂದು ಕ್ಷಣ ವರ್ತಮಾನದ ನಮ್ಮ ಸಿದ್ಧ ನಂಬಿಕೆಗಳನ್ನು ಪೂರ್ವಾಗ್ರಹಗಳನ್ನು ಬದಿಗಿಟ್ಟು ಮುಂದುವರಿಯೋಣ.

ಕಳೆದ ೬೦ ವರ್ಷಗಳ ನಮ್ಮ ಸ್ವತಂತ್ರ ಭಾರತದಲ್ಲಿ ನೂರಾರು ರೀತಿಯ ಮನಸ್ಸುಗಳು ಬೆಳೆಯುತ್ತ ಬಂದಿವೆ. ಪ್ರತಿಯೊಂದು ಮನಸ್ಸೂ ತನ್ನದೇ ರೀತಿಯ ವೈಚಾರಿಕ ಹಾಗೂ ಮಾನಸಿಕ ಸಾಮ್ರಾಜ್ಯವನ್ನು ಕಟ್ಟಿಕೊಂಡಿದೆ ಹಾಗೂ ಅದೇ ಅಂತಿಮ ಸತ್ಯ ಎಂದು ಪ್ರತಿಪಾದಿಸುತ್ತಲಿದೆ.ಈ ಕಾರಣಕ್ಕಾಗೇ ದೇಶದಲ್ಲಿ ಅಸಂಖ್ಯಾತ ವೈವಿಧ್ಯಮಯ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಇವುಗಳನ್ನೆಲ್ಲ ಸೇರಿಸಿ ನಾವು ಮುಖ್ಯವಾಗಿ ಎರಡು ರೀತಿಯ ಮನಸ್ಸುಗಳನ್ನು ಗುರುತಿಸೋಣ.

ಒಂದು ಮನಸ್ಸು ನಮ್ಮದಲ್ಲದ್ದನ್ನು ನಮ್ಮದೂ ಎಂದು ತಪ್ಪಾಗಿ ನಂಬಿ ನಿಜವಾದ ನಮ್ಮದನ್ನು ಅನಾಗರಿಕ, ಅವೈಜ್ನಾನಿಕ, ಗೊಡ್ಡು ಮೌಢ್ಯ ಇತ್ಯಾದಿಗಳೆಂದು ವ್ಯಾಖ್ಯಾನಿಸುತ್ತ ಪ್ರಗತಿಪರವೆನಿಸಿಕೊಂಡಿದೆ.

ಇನ್ನೊಂದು ಮನಸ್ಸು ನಮ್ಮದೆಲ್ಲವೂ ಅತೀ ಶ್ರೇಷ್ಠವಾದದ್ದು, ಅದನ್ನು ನಮ್ಮವರಿಗೆಲ್ಲರಿಗೂ ತಿಳಿಸಿ ಹೇಳಬೇಕೆಂಬ ಹುಮ್ಮಸ್ಸಿನಲ್ಲಿ ನಮ್ಮದಲ್ಲದ ವಿಚಾರ ಹಾಗೂ ಸಾಧನಗಳ ಮೂಲಕವೇ ಪ್ರತಿಪಾದಿಸಹೊರಟಿದೆ.

ಈ ಎರಡು ಮಾನಸಿಕ ಸಾಮ್ರಾಜ್ಯಗಳು ನಮ್ಮಲ್ಲಿ ಪಕ್ಷ ರಾಜಕೀಯದ ಮೌಲಿಕವೂ ಕೆಲಸ ಮಾಡುತ್ತಲಿದೆ. ಆದರೂ ದೇಶದ ಸಮಸ್ಯೆ ಬಗೆಹರಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಏಕೆ? ಇವೆರಡೂ ಮನಸ್ಸುಗಳ ಹೋರಾಟದ ಮಾರ್ಗವನ್ನೂ ಮೀರಿದ ನಿಜವಾದ ಇನ್ನೊಂದು ಸತ್ಯ ಇರಬಹುದೇ? ಇದ್ದರೆ ಆ ಸತ್ಯ ಯಾವುದು ಮತ್ತು ಅದರ ಕಥೆ ಏನಾಗಿರಬಹುದು.ಭಾರತದಲ್ಲಿ ಸದ್ಯ ಸಂಶೋಧನೆಗಳೊಗಾಗಬೇಕಾದ ಸಂಗತಿ ಇದು.

ಪ್ರೊ. ಬಾಲಗಂಗಾಧರ ಈ ಕೆಲಸ ಮಾಡಲು ಮುಖ್ಯ ಪ್ರೇರಣೆಯಾಗಿದ್ದಾರೆ. ಮೂಲತಃ ಇವರು ಕನ್ನಡದವರು. ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾಲಯದ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ “ಭಾಗದಲ್ಲಿ ಪ್ರಾಧ್ಯಾಪಕರು. ಕ್ರಿಶ್ಚಿಯಾನಿಟಿ ಮತ್ತು ರಿಲಿಜನ್ ಇವರ ಸಂಶೋಧನಾ ಪ್ರಬಂಧದ ವಿಷಯ.ಕ್ರಿಶ್ಚಿಯಾನಿಟಿ ಅಧ್ಯಯನ ಮಾಡುವಾಗ ಇವರಿಗೆ ಭಾರತ ಬೇರೆಯೇ ರೀತಿಯಲ್ಲಿ ಅರ್ಥವಾಗತೊಡಗಿತು. ಕ್ರಿಶ್ಚಿಯಾನಿಟಿಯ ಯಾವ ಮಿತಿಗಳೂ ಭಾರತೀಯ ಸಂಸ್ಕೃತಿಯಲ್ಲಿ ಕಾಣುತ್ತಿಲ್ಲ. ಆ ದ್ರುಷ್ಟಿಯಲ್ಲಿ ಭಾರತದ್ದು ಜಗತ್ತಿನಲ್ಲೇ ಒಂದು ಅದ್ಭುತವಾದ ಸಂಸ್ಕೃತಿ. ಹೀಗಿದ್ದೂ ದೇಶದಲ್ಲಿ ಯಾಕಿಷ್ಟು ಆಂತರಿಕ ಸಮಸ್ಯೆಗಳು ಹುಟ್ಟಿಕೊಂಡಿವೆ ಎಂಬುದು ಅವರ ಕುತೂಹಲಕ್ಕೆ ಕಾರಣವಾತು. ಆಗ ಅವರು ಪೂರ್ವ ಮತ್ತು ಪಶ್ಚಿಮ ಎರಡೂ ಸಂಸ್ಕೃತಿಗಳ ಕುರಿತು ಆಳವಾಗಿ ಅಧ್ಯಯನ ಮಾಡಿದರು. ಇಂದು ನಾವು ವ್ಯಾಖ್ಯಾನಿಸುತ್ತಿರುವ ಭಾರತೀಯ ಸಂಸ್ಕೃತಿಯೆಂಬ ಹಲವು ಅಂಶಗಳು ಕ್ರಿಶ್ಚಿಯಾನಿಟಿಯ ಕವಚ ತೊಟ್ಟಿವೆ ಎಂಬ ಕಠೋರ ಸತ್ಯ ಅವರಿಗೆ ಗೋಚರವಾತು. ಈ ಕವಚವನ್ನು ಕಿತ್ತೆಸೆದು ನಿಜವಾದ ನಮ್ಮ ಸಂಸ್ಕೃತಿಯ ದರ್ಶನ ಮಾಡಿಕೊಳ್ಳಬೇಕು. ಆಗ ಮಾತ್ರ ಭಾರತ ದೇಶಕ್ಕೆ ನೆಮ್ಮದಿ ಎಂಬುದು ಇವರ ವಾದವೂ ಹೌದು, ಹೋರಾಟವೂ ಹೌದು.

ಹಾಗಂತ, ನಮ್ಮ ಸಂಸ್ಕೃತಿಯನ್ನು ನಾವು ನೋಡುತ್ತಿರುವ ದ್ರುಷ್ಟಿ ಸರಿಯಾಗಿಲ್ಲ ಎಂದು ಹೇಳುತ್ತಿರುವವರಲ್ಲಿ ಬಾಲಗಂಗಾಧರರೇ ಪ್ರಥಮರಲ್ಲ. ಸಾಕಷ್ಟು ಚಿಂತಕರು ಹೇಳಿದ್ದಾರೆ. ಹೇಳುತ್ತಲೂ ಇದ್ದಾರೆ. ಆದರೆ ಈ ಕುರಿತು ಆಳವಾಗಿ ಅಧ್ಯಯನ ಮಾಡಿಲ್ಲ. ಈ ಸಮಸ್ಯೆಯ ಕಾರ್ಯಕಾರಣ ಸಂಬಂಧವನ್ನು ವೈಜ್ನಾನಿಕವಾಗಿ, ತರ್ಕಬದ್ಧವಾಗಿ ತೆರೆದು ತೋರಿಸುತ್ತಿರುವ ಪ್ರಪ್ರಥಮ ಚಿಂತಕರು ಇವರು. ತಮ್ಮ ಚಿಂತನೆಗೆ ಇವರು ಭಾರತೀಯರ ಅನುಭವವನ್ನು ಪ್ರಮಾಣವಾಗಿಸಿಕೊಳ್ಳುತ್ತಾರೇ ಪುನಃ ಪಾಶ್ಚಾತ್ಯರು ನಮ್ಮ ಬಗ್ಗೆ ಬರೆದಿಟ್ಟ ಗ್ರಂಥಗಳನ್ನಲ್ಲ. ಹಾಗಾಗೇ ಇವರ ಅನಿಸಿಕೆಗಳು ಹೆಚ್ಚು ಪ್ರಾಮಾಣಿಕವಾಗುತ್ತವೆ. ಸಾಮಾನ್ಯರ ಅನುಭವಕ್ಕೆ ಹತ್ತಿರವಾಗುತ್ತವೆ.

ನಾವು ನಮ್ಮ ಸಂಸ್ಕೃತಿಯ ಬಗ್ಗೆ, ಸಮಾಜದ ಬಗ್ಗೆ ಓದುತ್ತಿರುವ, ಕೇಳುತ್ತಿರುವ ಅನೇಕ ಸಂಗತಿಗಳು ತಪ್ಪು ತಿಳುವಳಿಕೆಂದ ಕೂಡಿವೆ ಎಂಬುದು ಬಾಲಗಂಗಾಧರರ ಖಚಿತ ಅಭಿಪ್ರಾಯ. ನೂರಾರು ವರ್ಷಗಳಿಂದ ಈ ತಪ್ಪು ತಿಳುವಳಿಕೆಯನ್ನೇ ನಾವು ಸತ್ಯ ಎಂದು ನಂಬಿಕೊಂಡಿದ್ದೇವೆ. ಹಾಗಾಗಿ ನಿಜವಾದ ಸತ್ಯ ಎದುರಿಗೆ ಬಂದರೂ ಅದನ್ನು ಸ್ವೀಕರಿಸಲು ನಮ್ಮ ಸಿದ್ಧನಂಬಿಕೆ ಕಾಲಾವಕಾಶ ಬೇಡುತ್ತದೆ. ಈ ತಪ್ಪು ತಿಳುವಳಿಕೆ ನಮಗೆ ಯುರೋಪಿಯನ್ನರಿಂದ ಬಂದದ್ದು. ಇಂಗ್ಲೀಶರು ಭಾರತಕ್ಕೆ ಬಂದಾಗ ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳೆಲ್ಲ ಅವರಿಗೆ ವಿಚಿತ್ರವಾಗಿ ಕಾಣಿಸತೊಡಗಿದವು. ಈ ದೇಶ ಏನೆಂಬುದೇ ಅವರಿಗೆ ಅರ್ಥವಾಗಲಿಲ್ಲ. ಇದನ್ನು ಅರ್ಥ ಮಾಡಿಸದಿದ್ದರೆ ಅವರಿಗೆ ಇಲ್ಲಿ ವಸಾಹತು ಮುಂದುವರಿಸುವುದು ಕಷ್ಟ. ಹಾಗಾಗಿ ಭಾರತಕ್ಕೆ ಬಂದು ಸಮಾಜ ವಿಜ್ನಾನ ಕಟ್ಟುವ ಕೆಲಸಕ್ಕೆ ಕೈಹಾಕಿದರು. ಈ ಸಮಾಜ ವಿಜ್ನಾನದ ಮೂಲಕ ಭಾರತೀಯರಿಗೆ ನೀವು ಇಂಥವರು ಎಂದು ತೋರಿಸಿ ಕೊಡುವ ಪ್ರಯತ್ನ ಅವರದ್ದು.

ಆಗ ತಮ್ಮದೇ ಸಿದ್ಧ ಮಾದರಿಯಲ್ಲಿ ಅಂದರೆ ಕ್ರಿಶ್ಚಿಯಾನಿಟಿಯ ಚೌಕಟ್ಟಿನಲ್ಲಿ ಭಾರತವನ್ನು ನೋಡುತ್ತ ಹೋದರು. ಇದು ಅವರ ಧೂರ್ತತನ ಅನ್ನುವುದು ಬೇಡ, ಪ್ರಾಮಾಣಿಕವಾಗೇ ಮಾಡಿರಬಹುದು. ಅವರು ಭಾರತವನ್ನು ಈ ರೀತಿ ನೋಡದೇ ಬೇರೆ ರೀತಿಯಲ್ಲಿ ನೋಡಲು ಸಾಧ್ಯವೂ ಇರಲಿಲ್ಲ. ಪ್ರಾಮಾಣಿಕವಾಗೇ ಸಮಾಜ ವಿಜ್ನಾನ ಬರೆದರು. ಆದರೆ ಏನಾಯಿತು? ಕ್ರಿಶ್ಚಿಯಾನಿಟಿಯ ಮಿತಿ ಭಾರತೀಯ ಸಂಸ್ಕೃತಿಯ ಮಿತಿಯಾಗಿ ಮಾರ್ಪಾಡಾಯಿತು. ಭಾರತೀಯ ಸಂಪ್ರದಾಯಗಳು ‘”ಹಿಂದೂ ರಿಲಿಜನ್” ಎಂದು ಕರೆಯಲ್ಪಟ್ಟವು. ಯಾವಾಗ ಭಾರತಕ್ಕೆ ರಿಲಿಜನ್‌ನ ಲೇಪ ಬಿತ್ತೋ ಆಗಲೇ ಭಾರತೀಯ ಸಂಸ್ಕೃತಿಯ ಅರ್ಥವೂ ವ್ಯತ್ಯಾಸವಾಯಿತು. ಇದೇ ಮುಂದೆ ನಮ್ಮ ಸಂಸ್ಕೃತಿ, ಸಮಾಜ, ಆಡಳಿತ, ರಾಜಕೀಯ, ಸಂಪ್ರದಾಯ, ಧರ್ಮ – ಎಲ್ಲ ರಂಗದಲ್ಲೂ ಗೊಂದಲ ಸ್ರುಷ್ಟಿಯಾಗಲು ಕಾರಣವಾತು. ಇದೇ ನಂಬಿಕೆಯಲ್ಲಿ ನಾವು ಎಷ್ಟೇ ಪ್ರಯತ್ನಿಸಿದರೂ ಸಮಸ್ಯೆಗಳು ದೊಡ್ಡ ಸಮಸ್ಯೆಗಳಾಗುತ್ತವೆಯೇ ವಿನಃ ಪರಿಹಾರ ಕಾಣಲಾರದು.

ಇಂದಿಗೂ ಕೂಡ ಭಾರತದ ಬಗ್ಗೆ, ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡುವ ಹಾಗೂ ಬರೆಯುವ ಅಪ್ಪಟ ಭಾರತೀಯ ಚಿಂತಕರಿಗೂ ಕೂಡಾ ಆಧಾರ ಯಾವುದು ಗೊತ್ತಾ? ಪಾಶ್ಚಾತ್ಯರು ನಮ್ಮ ಕುರಿತು ಬರೆದಿಟ್ಟ ಬೃಹತ್ ಗ್ರಂಥಗಳೇ! ಹಾಗಿದ್ದಾಗ ಇಲ್ಲಿ ಬೇರೆ ರೀತಿಯ ತಿಳುವಳಿಕೆ ಅರಳಲು ಹೇಗೆ ಸಾಧ್ಯ? ಮನುಷ್ಯ ಹೇಗೆ ಬಾಳಿ ಬದುಕಿ ಬಂದ ಎಂಬ ಅನುಭವದ ಕಥೆ ನಮಗೆ ಸುಳ್ಳು ಅನಿಸುತ್ತದೆ. ಮನುಷ್ಯನ ಬಗ್ಗೆ ಪ್ರಜ್ನಾಪೂರಕವಾಗಿ ಚಿಂತಿಸಿ ಬರೆದ ಕಥೆ ಸತ್ಯ ಅನಿಸುತ್ತದೆ. ವಿಪರ್ಯಾಸ ನೋಡಿ! ನಾವು ನಮ್ಮ ಸಂಸ್ಕೃತಿ ಅರಿಯುವಲ್ಲಿ ಕೂಡಾ ಈ ಅಂತರ ಇದೆ.

ಭಾರತದ ಪ್ರತಿಯೊಂದು ಸಂಗತಿಯ ಮೇಲೂ ಈ ತಪ್ಪು ತಿಳುವಳಿಕೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಬಾಲಗಂಗಾಧರ ಸಚಿತ್ರವಾಗಿ ತಿಳಿಸುತ್ತಾರೆ. ಅದನ್ನೇ ಪ್ರತಿವಾರ ನಾವು ಸರಳವಾಗಿ ಹಂಚಿಕೊಳ್ಳುವಾ.

“ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಬೆಳೆದುಬಂದ ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿಯ ನಿಜ ಅರ್ಥವಾಗಲು ಸಾಧ್ಯವಿಲ್ಲ. ಅಂತೆಯೇ ಭಾರತೀಯರಿಗೆ ಪಾಶ್ಚಾತ್ಯ ಸಂಸ್ಕೃತಿ ಕೂಡಾ. ಪಾಶ್ಚಾತ್ಯ ವಿದ್ವಾಂಸರು ಭಾರತದ ಕುರಿತಾದ ತಮ್ಮ ಅನುಭವಗಳನ್ನು ಹೇರಳವಾಗಿ ದಾಖಲಿಸಿದ್ದಾರೆ. ನಾವು ಅವರ ಅನುಭವಗಳನ್ನೇ ನಮ್ಮ ನಿಜ ಎಂದು ನಂಬಿದ್ದೇವೆ. ಇಂದಿನ ಭಾರತೀಯ ಬುದ್ದುಜೀವಿಗಳು ಕೂಡ ಅದೇ ತಪ್ಪು ತಿಳುವಳಿಕೆಯಲ್ಲಿದ್ದಾರೆ. ನಮಗೆ ನಮ್ಮ ಸಂಸ್ಕೃತಿಯ ಸತ್ಯ ಗೊತ್ತಾಗಬೇಕು – ಪ್ರೊ. ಬಾಲಗಂಗಾಧರ

This article was published in one of the regional newspaper Dyeyanishta Patrakarta from Sirsi and in the blog nilime.

(Published here for the readers of this blog)

ರಾಜಕಾರಣದಲ್ಲಿ ಆಣೆ ಮತ್ತು ಆಣೆಯ ರಾಜಕಾರಣ

June 29, 2011 Leave a comment

ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ ಮಾಡಲು ಸನ್ನದ್ದರಾಗಿರುವುದು ಬಹುಟೀಕೆಗೆ ಒಳಗಾಗಿದೆ. ಇದು ಮೇಲ್ನೋಟಕ್ಕೆ ಕೇವಲ ಆಣೆ ಪ್ರಮಾಣದ ಸಮಸ್ಯೆಯಂತೆ ಕಂಡರೂ ಸಹ ಆ ಸಮಸ್ಯೆಯ ಆಳ ಅಗಲ ನಾವು ಊಹಿಸಲು ಸಾಧ್ಯವಿರದ ಮಟ್ಟಿಗೆ ಇದೆ. ಬಹುತೇಕ ಚಿಂತಕರು, ಲೇಖಕರು ಹಾಗೂ ವಿದ್ವಾಂಸರನ್ನೊಳಗೊಂಡು ಆ ಆಣೆ ಮಾಡುವ ಪ್ರವೃತ್ತಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ, ಇಲ್ಲಿ ಕೇವಲ ಆಣೆ ಪ್ರಮಾಣದ ವಿಚಾರವನ್ನುವಿವಮರ್ಶಿಸಿದರೆ ಒಂದೊ, ರಾಜಕಾರಣಿಗಳ ಮೇಲೆ ಕೋಪ ಮಾಡಿಕೊಳ್ಳಬೇಕಾಗುತ್ತದೆ, ಇಲ್ಲವೆ ಅಂತಹ ಪ್ರೃತ್ತಿಯೇ ಕೆಟ್ಟದೆಒಳ್ಳೆಯದೋ ಎಂಬ ನಿರಪಯುಕ್ತ ಚರ್ಚೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಆಣೆ ಮಾಡುವ ಪ್ರವೃತ್ತಿಯನ್ನು ಪ್ರಶ್ನೆಮಾಡುವ ನೆಪದಲ್ಲಿ ನಮ್ಮ ರಾಜ್ಯಾಂಗದ ಅಥವಾ ಸೆಕ್ಯುಲರಿಸಂ ಸಮಸ್ಯೆಯನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹಾಗಾಗಿ ಆಣೆ ಮಾಡುವುದರಲ್ಲಿ ತಪ್ಪೇನಿದೆ ಎಂಬುದನ್ನು ನೋಡುವಾ ಅಥವಾ ಆಣೆ ಮಾಡುವುದು ನಮಗೇಕೆ ತಪ್ಪಾಗಿ ಗೋಚರಿಸುತ್ತಿದೆ ಎಂಬುದನ್ನು ಅವಲೋಕಿಸುವ.

ಜನಸಾಮಾನ್ಯರಾದ ನಾವು ಬದುಕುತ್ತಿರುವ ಹಲವಾರು ರೀತಿಗಳಲ್ಲಿ ಇಂತಹ ಆಣೆ ಪ್ರಮಾಣದ ಸಂಗತಿ ಮಾಮೂಲಿಯಾದುದು. ಇಬ್ಬರು ವ್ಯಕ್ತಿಗಳ ನಡುವೆ ಪರಸ್ಪರ ಅಪನಂಬಿಕೆ ಉಂಟಾದರೆ, ಅಥವಾ ಬಗೆಹರಿಸಲಾಗದ ವ್ಯಾಜ್ಯ ಉಂಟಾಗಲು ಪ್ರಾರಂಭಿಸಿದರೆ ಕೊನೆಯದಾಗಿ ನಮ್ಮ ನಡಿಗೆ ದೇವರ ಕಡೆಗೆ ಎಂಬಂತೆ ಆಣೆಯ ಮೇಲೆ ಅವಲಂಬಿತರಾಗುತ್ತಾರೆ. ಇಷ್ಟೆ ಅಲ್ಲ ಪ್ರೇಮಿಗಳು ತಮ್ಮ ತಮ್ಮಲ್ಲೆ ನಂಬಿಕೆ ಬೆಳಸಲು ನನ್ನ ಆಣೆ, (ಐ ಸ್ವೇರ್) ಅಪ್ಪನ ಆಣೆ, ದೇವರ ಆಣೆ (ಸ್ವೇರ್ ಆನ ಗಾಡ್), ಹಾಗೂ ಪೋಷಕರುಗಳು ಪ್ರೇಮ ವಿವಾಹಗಳನ್ನು ವಿರೋಧಿಸುವಾಗಲೂ ನೀನು ಅವರನ್ನು ವಿವಾಹವಾದರೆ ನನ್ನ ಮೇಲೆ ಆಣೆ ಹಾಗೂ ಇನ್ನೂ ಹಲವಾರು ಸಂದರ್ಭಗಳಲ್ಲಿ ಇಂತಹ ಹೇಳಿಕೆಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಕೇಳುತ್ತಲೇ ಇರುತ್ತೇವೆ. ಹೀಗೆ ಆಣೆ ಮಾಡುವಾಗಲೂ ಸತ್ಯವನ್ನೇ ಹೇಳುತ್ತಾರೆ ಎಂಬ ನಂಬಿಕೆ ಏನೂ ಇಲ್ಲ, ಅದರಲ್ಲೂ ಸುಳ್ಳು ಹೇಳುವವರನ್ನೂ ನಾನು ನೋಡಿದ್ದೇನೆ. ಅದೇನೇ ಇರಲಿ ಜನರು ಬದುಕುವ ರೀತಿಯಲ್ಲಿ ಇದೊಂದು ಸಂಗತಿ ಸ್ವಾಭವಿಕವಾಗಿ ಹಾಸುಹೊಕ್ಕಾಗಿದೆ.

ವಿಚಿತ್ರವೆಂದರೆ, ಇಂತಹ ಆಣೆ ಪ್ರಮಾಣಗಳನ್ನು ಜನ ಸಾಮಾನ್ಯರು ಮಾಡಿದರೆ ತಪ್ಪಿಲ್ಲ, ಆದರೆ ರಾಜಕಾರಣಿಗಳು ಮಾಡಿದರೆ ಮಾತ್ರ ತಪ್ಪಾಗುತ್ತದೆ. ಅದಕ್ಕೂ ಹೆಚ್ಚಿನದಾಗಿ ಆಣೆ ಮಾಡುವ ಜನಸಾಮಾನ್ಯರ ಮಧ್ಯದಿಂದ ಬಂದತಂಹ ಲೇಖಕರು, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಕೆಂಡಾಮಂಡಲವಾಗುತ್ತಾರೆ. ಏಕೆಂದರೆ ರಾಜಕಾರಣಿಗಳು ರಾಜ್ಯದ ಪ್ರತಿನಿಧಿಗಳಾಗಿ ಸಂವಿಧಾನಬದ್ದವಾಗಿ ಕಾರ್ಯನಿರ್ವಹಿಸುವಾಗ ತಮ್ಮ ವೈಯುಕ್ತಿಕ ಜೀವನದ ವಿಷಯಗಳನ್ನು ಬಿಟ್ಟುಬಿಡಬೇಕು ಎಂಬ ತೀವ್ರವಾದ ನಂಬಿಕೆ ಅದರ ಬಂದಿದೆ. ಈ ವಿರೋಧಿಸುವ ಅಥವಾ ಟೀಕಿಸುವ ಪರಿ ಕೇವಲ ಆಣೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಲ್ಲಿ ಎರಡು ಸಮಸ್ಯೆಗಳಿವೆ ಒಂದು ನೇಷನ್ ಸ್ಟೇಟ್ ಎಂಬ ಪರಿಕಲ್ಪನೆ ಸಮಸ್ಯೆಯಾದರೆ ಮತ್ತೊಂದು ಸೆಕ್ಯುಲರಿಂಸ ಸಮಸ್ಯೆ.

ನೇಷನ್ ಸ್ಟೇಟ್ ಸಮಸ್ಯೆಂದ ಪ್ರಾರಂಭಿಸುವ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ೧೬೪೮ರ ವೆಸ್ಟ್ ಫಾಲಿಯಾ ಒಪ್ಪಂದಿಂದ ಅಸ್ತಿತ್ವಕ್ಕೆ ಬಂದಂತಹ ನೇಷನ್ ಸ್ಟೇಟ್ ಎಂಬ ಕಲ್ಪನೆಯ ಮೂಲ ತಳಹದಿ ಆಯಾ ಪ್ರದೇಶದಲ್ಲಿರುವ ಜನಾಂಗಗಳ ಇಚ್ಚೆಯ ಆಧಾರದ ಮೇಲೆ ಸ್ಟೇಟ್ ಜಾರಿಗೆ ಬರಬೇಕು. ನೇಷನ್ ಎಂದರೆ ಜನಾಂಗ ಹಾಗೂ ಸ್ಟೇಟ್ ಎಂದರೆ ಆ ಜನಾಂಗಗಳು ಸೇರಿಕೊಂಡು ರೂಪಿಸಿಕೊಂಡಿರುವ ನಿಯಮಗಳ ಮೊತ್ತ. ಆನರ ಬೇಕುಬೇಡಗಳ ಆಧಾರದ ಮೇಲೆ ಅವರುಗಳೇ ಕೂಡಿಕೊಂಡು ಸ್ಥಾಪಿಸಿಕೊಂಡ ಸಂಸ್ಥೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಂದಂತದ್ದಾಗಿದೆ. ಇಂತಹ ವ್ಯವಸ್ಥೆಯನ್ನು ಯಥಾವತ್ತಾಗಿ ಅಳವಡಿಸಿಕೊಂಡ ನಾವು ಇಲ್ಲಿನ ಜನರ ಇಚ್ಚೆಯನ್ನು ಆ ಸಂಸ್ಥೆ ಪ್ರತಿನಿಧಿಸುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಂಡಂತೆ ತೋರುವುದಿಲ್ಲ. ಇಲ್ಲಿ ಸ್ಟೇಟ್ ಎಂಬುದು ಜನರ ಇಚ್ಚೆಯನ್ನು ಪ್ರತಿನಿಧಿಸಬೇಕೆಂಬುದರ ಅರ್ಥ, ಜನರು ಹೇಗೆ ಬದುಕುತ್ತಿದ್ದಾರೋ ಅಂತಹ ಬದುಕನ್ನು ಪ್ರತಿನಿಧಿಸುವ ಹಾಗೂ ಅಂತಹ ಬದುಕನ್ನು ಮುಂದುವರೆಸಲು ಬೇಕಾದಂತಹ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಿಕೊಡುವ ಹೊಣೆಗಾರಿಗೆ ಸ್ಟೇಟ್‌ಗಿರುತ್ತದೆ. ಅದರಂತೆ ರಾಜಕಾರಣಿಗಳೂ ಸಹ ಜನಸಾಮಾನ್ಯರು ಬದುಕುತ್ತಿರುವ ರೀತಿಯಲ್ಲೇ ಬದುಕಲು ಸಾಧ್ಯ, ಏಕೆಂದರೆ ಅವರೂ ಜನಸಾಮಾನ್ಯರಾಗಿ ತಮ್ಮ ಜೀವನ ರೂಪಿಸಿಕೊಂಡವರು, ಅವರ ದಿನನಿತ್ಯದ ಜೀವನದಲ್ಲಿ ಬಳಸುತ್ತಿದ್ದ ಆಚಾರ ವಿಚಾರ, ಆಣೆ ಪ್ರಮಾಣಗಳನ್ನೆ ಅಲ್ಲಿಯೂ ಮುಂದುವರೆಸುತ್ತಿದ್ದಾರೆ, ಅದರಲ್ಲಿ ತಪ್ಪೇನಿದೆ? ನಾವು ಜೀವನ ನಡೆಸುತ್ತಿರುವ ವಿಧಾನವನ್ನೇ ಅಲ್ಲಿಯೂ ಅಳವಡಿಸಿಕೊಂಡಿದ್ದಾರೆ ಅಷ್ಟೆ.
ಆದರೆ ರಾಜಕಾರಣಿಗಳು ಆಣೆ ಮಾಡುವ ಪ್ರವೃತ್ತಿ ಘನಘೋರ ಸಂಗತಿಯಂತೆ ಬಹುತೇಕರಿಗೆ ಏಕೆ ಕಾಣುತ್ತಿದೆ ಎಂಬ ಪ್ರಶ್ನೆಯೂ ಏಳುತ್ತದೆ. ಅದೇಕೆ ಕೆಟ್ಟ ಪ್ರವೃತ್ತಿ ಎಂದು ಗೋಚರಿಸುತ್ತದೆ ಎಂದರೆ ನಮಗೆ ಗೊತ್ತಿರುವಂತೆಯೋ ಅಥವಾ ಗೊತ್ತಿಲ್ಲದಂತೆಯೋ ಸೆಕ್ಯುಲರಿಸಂ ಎಂಬ ಭೂತವನ್ನು ಮೈಮೇಲೆ ಎಳೆದುಕೊಂಡಿದ್ದೇವೆ. ಅದರ ಪ್ರಕಾರ ಜನರ ಖಾಸಗಿ ಆಚಾರ ವಿಚಾರ ನಂಬಿಕೆ ಎಲ್ಲವೂ ರಾಜ್ಯಾಂಗದ ಕಾರ್ಯದಲ್ಲಿ ನುಸುಳಬಾರದು. ಅದಕ್ಕೂ ಹೆಚ್ಚಿನದಾಗಿ ರಾಜಕಾರಣದಿಂದ ರಿಲಿಜನ್ ಹೊರಗುಳಿಯಬೇಕು. ಇದೇ ಇಲ್ಲಿನ ಮೂಲಭೂತ ಸಮಸ್ಯೆಯಾಗಿದೆ. ಅದೆಂದರೆ ಹಿಂದೂಸಂ ಎಂಬುದು ಅಸಲಿಗೆ ರಿಲಿಜನ್ನೇ ಅಲ್ಲ, ಹಾಗೂ ಹಿಂದೂಸಂ ಎಂಬ ಸಂಗತಿ ಅಸ್ತಿತ್ವದಲ್ಲಿಯೂ ಇಲ್ಲ. ರಿಲಿಜನ್ನೇ ಇರದ ಮೇಲೆ ರಾಜಕಾರಣದಿಂದ ಹೊರಗಿಡುವುದು ಏನನ್ನು? ಇಲ್ಲಿನ ಆಚಾರ ವಿಚಾರಗಳನ್ನು ರಿಲಿಜಸ್ ಆಚರಣೆಗಳು ಎಂದು ತಪ್ಪಾಗಿ ಭಾವಿಸಿರುವುದೇ ಆಣೆ ಮೇಲೆ ಕಂಡಕಾರಲು ಪ್ರಮುಖವಾದ ಕಾರಣವಾಗಿದೆ. ಸಂವಿಧಾನದಲ್ಲಿ ರಿಲಿಜಸ್ ಆಚರಣೆಗಳನ್ನು ರಾಜಕಾರಣದಲ್ಲಿ ಬಳಸಬಾರದು ಎಂಬ ವಿಧಿ ಇದೆಯೇ ಹೊರತು ಸಂಪ್ರದಾಯಗಳನ್ನು ಬಳಸಬಾರದು ಎಂಬ ನಿಯಮವಿಲ್ಲ. ಹಾಗಾಗಿ ಕಾನೂನಾತ್ಮಕವಾಗಿ ಆಣೆ ಮಾಡುವುದನ್ನು ವಿಮರ್ಶಿಸಲೂ ಸಾಧ್ಯವಿಲ್ಲ. ಹಿಂದೂಸಂ ಏಕೆ ಒಂದು ರಿಲಿಜನ್ ಅಲ್ಲ, ಹಾಗೂ ಅದೇಕೆ ರಿಲಿಜನ್ ಎಂಬ ಅರ್ಥದಲ್ಲಿ ಬಳಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇತ್ತೀಚೆಗೆ ಅಕ್ಷರ ಪ್ರಕಾಶನದಿಂದ ಹೊರಬಂದಿರುವ ಬಾಲಗಂಗಾಧರರವರ ಸ್ಮೃತಿ ವಿಸ್ಮೃತಿ ಮತ್ತು ಭಾರತೀಯ ಸಂಸ್ಕೃತಿ ಎಂಬ ಕೃತಿ ನೆರವಾಗಬಹುದು.

ಆಣೆ ಪ್ರಮಾಣಗಳನ್ನು ರಾಜ್ಯಾಂಗದಿಂದ ಹೊರಗಿಡಬೇಕೆಂದು ಪ್ರತಿಪಾದಿಸುವ ಚಿಂತಕರು ಈ ಮುಂದಿನ ಸಂಗತಿಯನ್ನು ಪರಿಶೀಲಿಸಬೇಕು: ಪ್ರಧಾನ ಮಂತ್ರಿಯಾದಿಯಾಗಿ, ಮುಖ್ಯಮಂತ್ರಿ, ಶಾಸಕರುಗಳು ಅಧಿಕಾರ ಪಡೆಯುವ ಮುನ್ನ ಪ್ರಮಾಣವಚನ ಸ್ವೀಕರಿಸುವುದು; ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳುವವರಿಗೆ ಹಾಗೂ ಆರೋಪಿಗಳಿಗೆ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೆ ಏನೂ ಹೇಳುವುದಿಲ್ಲ ಎಂಬುದು, ಇವುಗಳು ರಾಜ್ಯಾಂಗದ ವ್ಯಾಪ್ತಿಯಲ್ಲೇ ಬರುವ ಸಂಗತಿಗಳಲ್ಲವೆ? ಅದೇಕೆ ತಪ್ಪಾಗಿ ಕಾಣುವುದಿಲ್ಲ? ರಾಜ್ಯಪಾಲರು ಹಾಗೂ ರಾಷ್ಟ್ರಾಧ್ಯಕ್ಷರು ಮಾಡಿಸುವ ಪ್ರಮಾಣವಚನಗಳು ದೇವರ ಮೇಲೆ ಅಲ್ಲದಿದ್ದರೂ ಅದು ಅಂತದ್ದೇ ಆಣೆಯ ಮತ್ತೊಂದು ಸ್ವರೂಪವಾಗಿದೆ. ಅದು ಆಣೆಯೇ ಅಲ್ಲವೆಂದು ಯಾರೂ ಸಾಬೀತುಪಡಿಸಲು ಸಾಧ್ಯವಿಲ್ಲ.

ಇಂತಹ ಸೆಕ್ಯಲರಿಸಂ ನೀತಿಯನ್ನು ಆಳವಾಗಿ ನಂಬಿಕೊಂಡಿರುವ ಯಾರಿಗಾದರೂ ಆಣೆ ಮಾಡುವುದು ತಪ್ಪು ಎಂದೆನಿಸುತ್ತದೆ. ಆದರೆ ಸತ್ಯವಾಗಿಯೂ ಸೆಕ್ಯುಲರ್ ವಾದಿಗಳಿಗೆ ಅದು ಏಕೆ ತಪ್ಪು ಎಂದು ಕೇಳಿದರೆ ಅದು ರಿಲಿಜಸ್ ಆಚರಣೆ, ಖಾಸಾಗಿ ಜೀವನದಲ್ಲಿ ಅವುಗಳನ್ನು ಪಾಲಿಸಬೇಕು, ಹಾಗಾಗಿ ಅದನ್ನು ಬಳಸಿಕೊಳ್ಳಬಾರದು ಎಂದು ಹೇಳುತ್ತಾರೆ. ಹಾಗೆಯೇ ಮುಂದುವರೆದು, ಅದೇಕೆ ರಿಲಿಜಸ್ ಆಚರಣೆ ಎಂದು ಕೇಳಿದರೆ ಆಗ ಕೇಳಿದವರ ಮೇಲೆ ರೇಗಲು ಪ್ರಾರಂಭಿಸುತ್ತಾರೆ. ಒಟ್ಟಿನಲ್ಲಿ ಬಿ.ಜೆ.ಪಿ ಯು ಜನಸಾಮಾನ್ಯರಲ್ಲಿರುವ ಆಚಾರ ವಿಚಾರಗಳನ್ನು ಹಾಗೂ ನಂಬಿಕೆಗಳನ್ನೇ ಅಸ್ತ್ರವಾಗಿರಿಸಿಕೊಂಡು ರಾಜಕಾರಣ ಮಾಡುತ್ತಿದೆ, ಅದೇಕೆ ತಪ್ಪು ಎಂದು ತೋರಿಸುವವರೆಗೂ ಅದು ಅರ್ಥವಾಗದ ಸಂಗತಿ. ನಾವು ಯಾವುದಾದರು ಒಂದು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದೇವೆ ಎಂದು ಇಟ್ಟುಕೊಳ್ಳೋಣ, ಅಲ್ಲಿಯ ಮುಖ್ಯಸ್ಥರು ನಾವು ಮಾಡುವ ಆಚರಣೆಗಳನ್ನೆ ಅಲ್ಲಿ ಮಾಡುತ್ತಿದ್ದರೆ ಅವರ ಬಗ್ಗೆ ಯಾರಿಗಾದರೂ ಖುಷಿಯಾಗೇ ಆಗುತ್ತದೆ. ಅಂತೆಯೇ ಇಂದು ಬಿ.ಜೆ.ಪಿ. ಹೀಗೆ ಮಾಡುತ್ತಿರುವುದರಿಂದ ಲೇಖಕರುಗಳನ್ನು ಹೊರತು ಪಡಿಸಿ ಜನಸಾಮಾನ್ಯರಿಗೆ ಅದೊಂದು ದೊಡ್ಡ ಸಮಸ್ಯೆಯಾಗಿ ಕಾಣುತ್ತಿಲ್ಲ. ನಿಜವಾಗಿಯೂ ಸೆಕ್ಯುಲರಿಸಂನ ಸುವಾರ್ತೆಗಳನ್ನು ಬದಿಗಿರಿಸಿ ಆಣೆ ಪ್ರಮಾಣದಲ್ಲಿ ತಪ್ಪೇನಿದೆ ಎಂದು ಎಲ್ಲರೂ ಆಲೋಚಿಸಬೇಕಾಗಿದೆ. ಇಲ್ಲಿ ಯಾವುದೇ ಪಕ್ಷವನ್ನಾಗಲೀ, ಅಥವಾ ಯಾವುದೇ ರಾಜಕೀಯ ತತ್ವವವನ್ನಾಗಲೀ ಸಮರ್ಥಿಸುವ ಅಥವಾ ವಿರೋಧಿಸುವ ಹುನ್ನಾರವಿಲ್ಲದೆ, ಸಮಸ್ಯೆಯನ್ನು ವಸ್ತುನಿಷ್ಠವಾಗಿ ಚರ್ಚಿಸುವ ಉದ್ದೇಶವನ್ನು ಹೊಂದಿದ್ದೇನೆ.

ಸಂತೋಷ್ ಕುಮಾರ್ ಪಿ.ಕೆ

ನಿಲುಮೆಯಲ್ಲಿ ಪ್ರಕಟಿತ

Categories: Culture, Religion, Ritual

ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?

June 20, 2011 3 comments

ಸಂತೋಷ್ ಕುಮಾರ್ ಪಿಕೆ

(ಅವಧಿಯಲ್ಲಿ ಪ್ರಕಟಿತ)


ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗುತ್ತಿರುವುದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ ಚಳುವಳಿಯಾಗಲೀ ಎರಡೂ ಸಹ ಅಷ್ಟೇ ಪ್ರಮುಖವಾದವು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶ ಜಾತಿಯನ್ನು ನಾಶಮಾಡಲು ಅಂತರಜಾತಿವಿವಾಹಿತರನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಾನ ಮನಸ್ಕರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಜೊತೆ ಜೊತೆಗೆ ಭೌದ್ಧಿಕ ಚಳುವಳಿಯೂ ಸಹ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಅಂತಹ ಚಳುವಳಿಯ ಕುರುಹಾಗಿ ಹಲವಾರು ಲೇಖನಗಳು ಮಾದ್ಯಮಗಳಲ್ಲಿ ಬರುತ್ತಿವೆ. ಹಾಗೆ ಬಂದಂತಹ ಒಂದು ಲೇಖನದ ವಿಮರ್ಶೆಯನ್ನು ಇಲ್ಲಿ ಮಾಡಲು ಪ್ರಯತ್ನಿಸಲಾಗುವುದು. ಇಂತಹ ಪ್ರಯತ್ನ ಏಕೆಂದರೆ ಕಳೆದ ೬೦, ೭೦ ವರ್ಷಗಳಿಂದಲೂ ಇಂತಹ ಚಳುವಳಿ ಸಮಾವೇಶ ನಡೆಯುತ್ತಿದ್ದರೂ ಜಾತಿ, ಶೋಷಣೆ, ಅನ್ಯಾಯ ದಿನೆದಿನೇ ಹೆಚ್ಚಾಗುತ್ತಿವೆ. ಕೇವಲ ಹಳೆಯ ಹಲಸಲು ವಿಚಾರಗಳನ್ನೇ ಪುನರಾವರ್ತಿಸುವ ಬದಲು ಸಮಸ್ಯೆ ಎಲ್ಲಿಂದ ಉಗಮವಾಗುತ್ತಿದೆ ಎಂಬುದನ್ನು ತುರ್ತಾಗಿ ಅರಿಯಬೇಕಾಗಿದೆ. ಆದ್ದರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಇದುವರೆಗೂ ನಾವು ಕೇಳಿಕೊಂಡು ಬಂದಂತಹ ವಿಚಾರಗಳನ್ನು ಹಾಗೂ ಇಂದು ಹೇಳುತ್ತಿರು ವ ವಿಚಾರಗಳನ್ನು ಜೊತೆಗೆ ನಮ್ಮನ್ನು ನಾವೇ ಪುನರಾವಲೋಕಿಸುವ ಸಂದರ್ಭ ಇಂದು ನಮ್ಮ ಮುಂದಿದೆ.

ಎಸ್. ಕೆ ಭಗವಾನ್ ದಿನಾಂಕ 3 ಜೂನ್ 2011 ರಂದು ಪ್ರಜಾವಾಣಿಯಲ್ಲಿ ಬರೆದ ಅವರ ಲೇಖನದ ಒಟ್ಟಾರೆ ವಾದ ಈ ರೀತಿಯಾಗಿತ್ತು, ಜಾತಿಯನ್ನು ಇದುವರೆಗೂ ದೂರಿದ್ದು ಸಾಕು, ಇನ್ನು ಅದನ್ನು ನಾಶ ಮಾಡಲೇಬೇಕು. ಜಾತಿ ನಾಶವಾದರೆ ಹಲವಾರು ಸವಲತ್ತುಗಳು ಸಹ ಸುಮುದಾಯಗಳಿಗೆ ದೊರೆಯುತ್ತವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಹಾಗೆ ಹೇಳುವ ಮುನ್ನ ಕೆಳಕಾಣಿಸಿರುವ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಲೇಬೇಕು.

1. ಜಾತಿ ವಿನಾಶ ಮಾಡುವುದು ಎಂದರೆ ಏನು? ಅದು ವಾಸ್ತವಿಕವಾಗಿ ಸಾಧ್ಯವೇ? ಜಾತಿ ವಿನಾಶವೆಂದರೆ ಈಗ ಅಸ್ತಿತ್ವದಲ್ಲಿರುವ ಜಾತಿ ಅಸ್ಮಿತೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕುವುದು. ಜಾತಿಯನ್ನು ಸಂಪೂರ್ಣವಾಗಿ ಏಕೆ ಅಳಿಸಿಹಾಕಬೇಕೆಂದರೆ ಅದು ಸಮಾಜದಲ್ಲಿ ಅನ್ಯಾಯ ಶೋಷಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ಸತ್ಯವೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ಯಾವುದೋ ಭಾಗದಲ್ಲಿ ಯಾವುದೋ ಸಮುದಾಯಗಳು ಮತ್ತೊಂದು ಸಮುದಾಯಗಳ ಮೇಲೆ ಅಥವಾ ವೈಯುಕ್ತಿಕವಾಗಿ ತೊಂದರೆಯನ್ನುಂಟು ಮಾಡುತ್ತಿದ್ದರೆ ಅದನ್ನು ಖಂಡಿಸಿ ಅದನ್ನು ಹೋಗಲಾಡಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನಿಗೂ ಇದೆ. ಆದರೆ ಎಲ್ಲೋ ಆಗುವ ಘಟನೆಗಳಿಗೆ ಜಾತಿ ಕಾರಣವೆಂದು ಅದೂ ನಿರಾಧಾರವಾಗಿ ಅದನ್ನು ತೆಗಳುತ್ತಾ ಹಾಗೂ ಸಮಸ್ಯೆಯನ್ನು ಸಾರ್ವತ್ರಿಕರಣಗೊಳಿಸಿದರೆ ಶೋಷಣೆ ಎಂಬ ಕಾಯಿಲೆ ವಾಸಿಯಾಗಲಾರದು, ಅದಕ್ಕೆ ಸುಮಾರು ನೂರು ವರ್ಷಗಳಿಂದ ಜಾತಿವ್ಯವಸ್ಥೆಯ ವಿರುದ್ದ ನಡೆದ ಹೋರಾಟ ಹಾಗೂ ಬಂದಂತಹ ಸಾಹಿತ್ಯಗಳ ವಿಫಲ ಪ್ರಯತ್ನಗಳೇ ಸಾಕ್ಷಿ. ಜಾತಿಯನ್ನು ನಿರ್ದೇಶಿಸುವ ಯಾವುದಾದರೂ ತತ್ವವಿದೆಯೇ ಎಂದು ಹುಡುಕ ಹೊರಟರೆ ಆಗಲೂ ನಾವು ಸೋಲುತ್ತೇವೆ. ಹಾಗಾದರೆ ನಾಶ ಮಾಡುವುದು ಇನ್ನೇನನ್ನ? ಗೊತ್ತಿಲ್ಲ ಆದ್ದರಿಂದ ಮತ್ತೊಂದು ದಾರಿ ಹಿಡಿಯಲು ವಿದ್ವಾಂಸರು ಹಾಗೂ ಚಳುವಳಿಗಾರರು ಪ್ರಯತ್ನಿಸಿದ್ದಾರೆ ಅದೆಂದರೆ ಅಂತರ ಜಾತಿ ವಿವಾಹ. ಅಂತರ ಜಾತಿ ವಿವಾಹದಿಂದ ಹೇಗೆ ನೋಡಿದರೂ ಜಾತಿ ಗಟ್ಟಿಯಾಗಿ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತದೆಯೇ ಹೊರತು, ಜಾತಿ ವಿನಾಶ ಖಂಡಿತವಾಗುವುದಿಲ್ಲ. ನನ್ನ ಅನುಭವದಿಂದಲೇ ಹೇಳುವುದಾದರೆ ಬಂಟ ಮತ್ತು ಲಿಂಗಾಯತ ಜಾತಿಯವರು ಮದುವೆಯಾದರೆ ಒಂದೋ ಅವರು ಬಂಟರ ಜಾತಿಗೆ ಸೇರುತ್ತಾರೆ ಇಲ್ಲ ಲಿಂಗಾಯತರ ಕೋಮಿಗೆ ಸೇರುತ್ತಾರೆ. ಇವೆರಡೂ ಇಲ್ಲವಾದರೆ ಅಂದರೆ ಮದುವೆಯಾದ ನವವಿವಾಹಿತರನ್ನು ಎರಡೂ ಮನೆಯವರು ಸೇರಿಸದಿದ್ದರೆ ಮತ್ತೊಂದು ಇನ್ಯಾವುದೋ ಹೊಸ ಜಾತಿ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಅಂತರಜಾತಿ ವಿವಾಹವಾದರೂ ಸಹ ಇದುವರೆಗೂ ನಂಬಿರುವಂತೆ ಜಾತಿ ಸರ್ವನಾಶವಾಗದೇ ಮತ್ತೆ ಮತ್ತೆ ಅದು ಗಟ್ಟಿಗೊಳ್ಳುತ್ತಾ ಹೋಗುತ್ತದೆ.

2. ಭಗವಾನ್ ರವರು ಅಂತರಜಾತಿ ವಿವಾಹವಾದವರಿಗೆ ಮಾತ್ರ ಸರಕಾರಿ ನೌಕರಿ ದೊರಕುವಂತೆ ತಾಕೀತು ಮಾಡಿದ್ದಾರೆ. ಅದನ್ನೂ ಒಂದು ಅತಿಗೆ ತೆಗೆದುಕೊಂಡು ಹೋದರೆ ಈ ಮುಂದಿನಂತೆ ಹೇಳಬಹುದು. ನೀವು ಸರಕಾರಿ ಉದ್ಯೋಗ ಪಡೆಯಬೇಕಾದರೆ ಬೇರೆಲ್ಲಾ ಅರ್ಹತೆಗಳಿಗಿಂತ ಅಂತರಜಾತಿ ವಿವಾಹವೇ ಮುಖ್ಯ. ಇದರ ಅರ್ಥ ಇನ್ನು ಮುಂದೆ ಮಕ್ಕಳು ಶಾಲೆಯಲ್ಲಿ ಉತ್ತಮ ವಾಗಿ ಓದಿ ಎಂದು ಹೇಳುವ ಪ್ರಮೇಯ ಬರುವುದಿಲ್ಲ ಎನಿಸುತ್ತದೆ, ಏಕೆಂದರೆ 21 ವರ್ಷದ ವರೆಗೆ ಹಾಗೂ ಹೀಗೋ ಕಾಲ ಹಾಕಿ ಅಂತರಜಾತಿ ವಿವಾಹವಾದರೆ ಸರಕಾರಿ ಕೆಲಸ ಖಾಯಂ. ಇದಕ್ಕೂ ಹೆಚ್ಚಿನದಾಗಿ ಶಿಕ್ಷಣವೂ ಬೇಡ, ವಿದ್ಯಾಸಂಸ್ಥೆಗಳೂ ಬೇಡ, ಎಲ್ಲರೂ ಹಾಯಾಗಿ ಮದುವೆಯಾಗಿ ಕಾಲ ಹಾಕಿದರೆ ಸಾಕು. ಇದರಿಂದ ಭಾರತದಲ್ಲಿರುವ ಎಲ್ಲಾ ಶೋಷಣೆಗಳು ತನ್ನಿಂತಾನೆ ಸರಿಯಾಗಿಬಿಡುತ್ತವೆ. ತಾರ್ಕಿಕವಾಗಿ ಭಗವಾನ್ ರವರ ವಾದವನ್ನು ಹೀಗೆಯೇ ಅರ್ಥಮಾಡಿಕೊಳ್ಳಲು ಸಾಧ್ಯ. ಇದರ ಇನ್ನೊಂದು ಸಾಧ್ಯತೆಯೂ ಇದೆ, 21 ವರ್ಷದವರೆಗೆ ಶಿಕ್ಷಣ ಮಾಡುವ ಅಗತ್ಯವಿಲ್ಲ, ಏಕೆಂದರೆ ವಿವಾಹವಾದರೆ ಹೇಗಿದ್ದರೂ ಕೆಲಸ ಸಿಗುತ್ತದೆ ಎಂದಾದ ಮೇಲೆ, ಬಹುತೇಕರು ಸಂವಿಧಾನದಲ್ಲಿರುವ ವಿವಾಹಕ್ಕೆ ನಿಗಧಿಪಡಿಸಿರುವ 21 ವರ್ಷವನ್ನು ಅದಕ್ಕೂ ಕಡಿಮೆಗೊಳಿಸಬೇಕೆಂದು ಒತ್ತಾಯಿಸಬಹುದು, ಏಕೆಂದರೆ ಬೇಗ ವಿವಾಹವಾದರೆ ಬೇಗ ಕೆಲಸ, ಇದರ ಅರ್ಥ ಬಾಲ್ಯವಿವಾಹವನ್ನು ಪುನರ್ಸ್ಥಾಪಿಸಲು ಇಂತಹ ನೀತಿಗಳು ಬುನಾದಿಯನ್ನು ಹಾಕಿಕೊಟ್ಟಹಾಗೆ ಆಗುತ್ತದೆ. ಇದೆಲ್ಲಾ ಎಷ್ಟು ಅವಾಸ್ತವಿಕ ಹಾಗೂ ಕಾಲ್ಪನಿಕವಾಗಿ ಗೋಚರಿಸುತ್ತದೆಯೋ ಅಷ್ಟೆ ಅವಾಸ್ತವಿಕವಾಗಿ ಅಂತರಜಾತಿ ವಿವಾಹದಿಂದ ಆಗುವ ಲಾಭಗಳೂ ಕಾಣುತ್ತವೆ.

3. ಇನ್ನೂ ಜನರು ಅಂತರಜಾತಿ ವಿವಾಹವನ್ನು ಏಕೆ ವಿರೋಧಿಸುತ್ತಾರೆ? ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು, ಅದು ಕೇವಲ ಜಾತಿವ್ಯವಸ್ಥೆ ಎಂದರೆ ಮಾತ್ರ ಸಾಲದು. ಹಾಗೆ ಹೇಳಿ ಇದುವರೆಗೂ ನಮಗೆ ನಮ್ಮ ಸಮಾಜ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬುದನ್ನು ಮನಗಾಣಲೇಬೇಕು. ಇದನ್ನು ಸ್ವಲ್ಪ ನಮ್ಮ ನಮ್ಮ ಅನುಭವದಿಂದ ವಿಶ್ಲೇಷಿಸಲು ಪ್ರಯತ್ನಿಸುವ. ಯಾವುದೇ ಸಮುದಾಯವಾಗಲೀ ತನ್ನ ಸಂಪ್ರದಾಯದ ಅಥವಾ ತನ್ನ ಜಾತಿಯ ಒಳಗೆ ಹೆಣ್ಣು ಗಂಡುಗಳನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತವೆ. ಏಕೆಂದರೆ, ವಿವಾಹವಾಗಿ ಬರುವ ನವವಧುವಿಗೆ ತಮ್ಮ ಸಂಪ್ರದಾಯದ ಕುರಿತು ತಿಳಿದಿದ್ದರೆ ಬದುಕು ನಡೆಸುವುದು ಸುಲಭ. ಸಂಪ್ರದಾಯಗಳು ವ್ಯತ್ಯಾಸವಾಗಲಿಕ್ಕೆ ಹಲವಾರು ಸಂಗತಿಗಳು ಕಾರಣವಾಗುತ್ತವೆ, ಅದರಲ್ಲಿ ಮುಖ್ಯವಾದ ಒಂದನ್ನು ಇಲ್ಲಿ ನೋಡಬಹುದು, ಅದೆಂದರೆ ಉದ್ದ ನಾಮ ಧರಿಸುವ ಅಯ್ಯಂಗಾರಿ ಬ್ರಾಹ್ಮಣರು ಅಡ್ಡ ನಾಮ ಧರಿಸುವ ಸ್ಮಾರ್ಥರನ್ನು ವಿವಾಹವಾಗಲು ಹಿಂಜರಿಯುತ್ತಾರೆ, ಅದಕ್ಕೆ ಕಾರಣ ಅವೆರಡೂ ಸಮುದಾಯಗಳು ಪಾತ್ರ ಪಡಗವನ್ನು ತೊಳೆಯುವಲ್ಲಿ ವ್ಯತ್ಯಾಸವಾಗುತ್ತದೆ. ಅಡುಗೆ ಮಾಡುವಲ್ಲಿ ಆಹಾರ ಪದ್ದತಿಯಲ್ಲಿ, ಉಪನಯನ ಮಾಡುವ ಸಂದರ್ಭದಲ್ಲಿ, ದೇವರನ್ನು ಪೂಜಿಸುವ ಸಂದರ್ಭದಲ್ಲಿ ವ್ಯತ್ಯಾಸವಾಗುತ್ತದೆ. ಹಾಗೆಯೇ ಹತ್ತಿಕಂಕಣ ಮತ್ತು ಉಣ್ಣೆ ಕಂಕಣ ಕುರುಬರಲ್ಲಿಯೂ ಹಲವಾರು ವ್ಯತ್ಯಾಸಗಳಿವೆ, ಹೀಗೆ ಹಲವಾರು ಕಾರಣಗಳನ್ನು ನೀಡುವ ಮೂಲಕ ಇತರ ಸಂಪ್ರದಾಯಗಳೊಂದಿಗೆ ವ್ಯತ್ಯಾಸ ಮಾಡಿಕೊಳ್ಳುತ್ತಾರೆ. ಒಂದು ಸಂಪ್ರದಾಯ ಮತ್ತೊಂದು ಸಂಪ್ರದಾಯ ವ್ಯತ್ಯಾಸ ಮಾಡಿಕೊಂಡಾಕ್ಷಣ ಅವು ಒಂದನ್ನೊಂದು ತಿರಸ್ಕರಿಸುತ್ತವೆ ಎಂದರ್ಥವಲ್ಲ, ಬದಲಿಗೆ ನಮ್ಮದು ನಮಗೆ ಅವರದು ಅವರಿಗೆ ಎಂಬ ಮನೋಭಾವ ಇರುವುದರಿಂದ ಪ್ರತ್ಯೇಕತೆಯನ್ನು ಅವರು ಉಳಿಸಿಕೊಳ್ಳಲು ಇಚ್ಚಿಸುತ್ತಾರೆ. ಈ ರೀತಿಯಲ್ಲಿ ವ್ಯತ್ಯಾಸ ಮಾಡಿಕೊಂಡು ತಮ್ಮ ಸಂಪ್ರದಾಯದವರನ್ನೇ ಹುಡುಕುವದರ ಅರ್ಥ ಯಾವುದೋ ಸಾಮಾಜಿಕ ಅಂತಸ್ತನ್ನು ಪಡೆಯುವುದು ಅಲ್ಲ, ಬದಲಿಗೆ ನಾವು ಬದುಕುತ್ತಿರುವ ಪರಿಸರವನ್ನು ವಾಸಯೋಗ್ಯವನ್ನಾಗಿ ಮಾಡಿಕೊಳ್ಳಲು ಮಾತ್ರ. ಹಾಗಾಗಿ ವಿವಾಹವೆಂಬುದು ಆಯಾ ಸಮುದಾಯಗಳ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗಲು ಇರುವ ಹಲವಾರು ಸಾಧನಗಳಲ್ಲಿ ಒಂದಾಗಿದೆ.

4. ಭಗವಾನ್ ರವರ ವಾದವನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡರೆ ಈ ಮುಂದಿನಂತೆ ವಿಶ್ಲೇಷಿಸಬಹುದು. ಎಲ್ಲರೂ ನಿಮ್ಮ ಜಾತಿ ತಿರಸ್ಕರಿಸಿ ಅಂತರಜಾತಿ ವಿವಾಹವಾಗಿ ಎಂಬುದರ ಅರ್ಥ ಇದುವರೆಗೂ ನೀವು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ತಿರಸ್ಕರಿಸಿ ಎಂದೇ ಅರ್ಥ. ಹಾಗೆ ಸಂಪ್ರದಾಯಗಳನ್ನು ತಿರಸ್ಕರಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ, ಜನರು ತಮ್ಮ ಸಂಪ್ರದಾಯಗಳನ್ನು ತಿರಸ್ಕರಿಸಬೇಕಾದರೆ ಅವರ ಸಂಪ್ರದಾಯದಿಂದ ಎಂತೆಂತಹ ಅಪಾಯವಾಗುತ್ತಿದೆ ಎಂಬುದನ್ನು ಅವರಿಗೆ ಮನದಟ್ಟಾಗುವಂತೆ ತೋರಿಸಬೇಕಾಗುತ್ತದೆ. ಕ್ರಿಯಾತ್ಮಕವಾಗಿರುವಂತಹ ಇಂತಹ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳದೆ ಎಲ್ಲರೂ ತಿರಸ್ಕರಿಸಿ ಎಂದರೆ ನಮ್ಮಂತ ಜನಸಾಮಾನ್ಯರಿಗೆ ಏಕೆ ಬಿಡಬೇಕು ಎಂಬುದೇ ಅರ್ಥವಾಗುವುದಿಲ್ಲ. ಹಾಗಾಗಿ ಅಷ್ಟೆಲ್ಲಾ ಸಮಾವೇಶ ಚಳುವಳಿಗಳು ನಡೆದರೂ ಜನರು ಅವುಗಳನ್ನು ಹಾಗೆಯೇ ಉಳಿಸಿಕೊಂಡು ಬರುತ್ತಿದ್ದಾರೆ. ಬರಿಯ ಜಾತಿವ್ಯವಸ್ಥೆಯ ತೊಂದರೆ ಎಂದು ಪರಿಕಲ್ಪನಾತ್ಮಕ ಮಟ್ಟದಲ್ಲಿ ಹೇಳುವುದಕ್ಕಿಂತಲೂ ಜನರು ಬದುಕುತ್ತಿರುವ ಅನುಭವದ ಹಿನ್ನೆಲೆಯಲ್ಲಿ ಅವರ ಸಂಪ್ರದಾಯಗಳಿಂದ ಇತತರಿಗೆ ಹೇಗೆ ತೊಂದರೆಯಾಗುತ್ತಿದೆ ಎಂದು ತೋರಿಸದ ಹೊರತು ಇನ್ನೂ ಲಕ್ಷ ಲಕ್ಷ ಸಮಾವೇಶ ನಡೆಸಿದರೂ ಯಾವುದೇ ಉಪಯೋಗವಾಗುವುದಿಲ್ಲ.

5. ಸರಿ ಒಂದೊಮ್ಮೆ ಸುಸಂದರ್ಭ ಬಂದು ಎಲ್ಲಿಯೂ ಜಾತಿಯ ಅಸ್ಮಿತೆ ನಾಶವಾಯಿತು ಎಂದಿಟ್ಟುಕೊಳ್ಳುವ. ನಂತರ ಜನರು ಮತ್ಯಾವುದೋ ಅಸ್ಮಿತೆಯನ್ನು ಹುಟ್ಟಿಹಾಕಿಕೊಳ್ಳುತ್ತಾರೆ, ಅದು ಜಾತಿಯ ಬದಲಿಗೆ ಕಾತಿ, ಪಾತಿ, ವರ್ಗ ಹೀಗೆ ಯಾವುದಾದರೂ ಹೆಸರು ಜಾತಿಯನ್ನು ಬದಲಿಸಬಹುದು. ಆದರೆ ಅವಾಗಲೂ ಇಂತಹ ಶೋಷಣೆಗಳು ದಬ್ಬಾಳಿಕೆಗಳು ಮುಂದುವರೆದರೆ ಆ ಹೆಸರುಗಳನ್ನೂ ಬಿಡಿ ಎಂದು ಹೇಳಿದರೆ ಅನ್ಯಾಯ ಶೋಷಣೆಗಳು ಹೋಗುವುದಿಲ್ಲ. ಆದ್ದರಿಂದ ಜಾತಿಗಳನ್ನು ಬಿಡಿ, ನಿಮ್ಮ ಸಂಪ್ರದಾಯಗಳನ್ನು ಬಿಡಿ ಎಂದು ಹೇಳುವುದಕ್ಕಿಂತ ಸಮಸ್ಯೆಯ ಮೂಲ ಎಲ್ಲಿದೆ ಹಾಗು ಅದಕ್ಕೆ ಪರಿಹಾರ ಏನು ಎಂಬುದನ್ನು ಕಂಡುಹಿಡಿಯುವುದು ಸೂಕ್ತವಾದ ಕೆಲಸ ಎಂಬುದು ನನ್ನ ಅಭಿಪ್ರಾಯ.

 

ಚಿತ್ರ ಕೃಪೆ : ಅವಧಿ

ಪಾಶ್ಚಾತ್ಯರು ಮತ್ತು ಭಾರತೀಯ ಬುದ್ಧಿಜೀವಿಗಳ ಗ್ರಹಿಕೆಯಲ್ಲಿ ಹಿಂದೂಯಿಸಂ ಎಂಬ ರಿಲಿಜನ್

June 3, 2011 4 comments

“The Religion Called Hinduism:As  The  Western and Indian Intellectuals  See It”

*ಸಂತೋಷ್ ಕುಮಾರ್,

ಸಂಶೋಧನಾ ವಿಧ್ಯಾರ್ಥಿ,

ಕುವೆಂಪು ವಿಶ್ವವಿದ್ಯಾನಿಲಯ

ದಿನಾಂಕ: 24.04.2011 ರಂದು ಹೊಸದಿಗಂತ ದಿನಪತ್ರಿಕೆಯಲ್ಲಿ ‘ಜನ್ಮದಿಂದ ಇಟಾಲಿಯನ್, ಧರ್ಮದಿಂದ ಕ್ಯಾಥೋಲಿಕ್’ ಎಂಬ  ಶೀರ್ಷಿಕೆಯಡಿಯಲ್ಲಿ ಒಂದು ಲೇಖನವನ್ನು ಜಾನ್ಮೆಕ್ಲಿಥನ್ (ವಿದೇಶಿ ಬಾನುಲಿ ವರದಿಗಾರರು, ಲೇಖಕರು)ರವರು ಹಿಂದೂಧರ್ಮದ (ರಿಲಿಜನ್ ಅರ್ಥದಲ್ಲಿ) ಕುರಿತು ಈ ರೀತಿ ಹೇಳಿದ್ದಾರೆ. ಹಿಂದೂಧರ್ಮವು ಎದ್ದುನಿಂತು ಹೋರಾಡದಿರುವುದೇ ಯುಗಯುಗಗಳಿಂದ ಅದು ಬದುಕುಳಿದಿರಲು ಕಾರಣ. ಅದುವೇ ಅದರ ಶ್ರೇಷ್ಠತೆ ಕೂಡ. ಅದು ಬದಲಾವಣೆಗೊಳ್ಳುತ್ತಾ ಸಾಗುತ್ತದೆ. ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗುತ್ತದೆ. ತನ್ನನ್ನು ತಾನು ಆಧುನೀಕರಣಗೊಳಿಸಿಕೊಂಡು ಮುನ್ನಡೆಯುತ್ತದೆ. ವೈಜ್ಞಾನಿಕವಾದುದನ್ನು ತನ್ನೊಳಗೆ ವಿಲೀನಗೊಳಿಸಿಕೊಂಡು ಮುಂದುವರೆಯುತ್ತದೆ. ಹಿಂದೂಧರ್ಮವು ಈ ‘ಸಹಸ್ರಮಾನದ ಧರ್ಮ’ ಎಂಬುದನ್ನು ನಿಜವಾಗಿಯೂ ಸಾಬೀತುಪಡಿಸಲಿದೆ ಎಂಬುದಾಗಿ ನಾನು ದೃಢವಾಗಿ ನಂಬುತ್ತೇನೆ. ಏಕೆಂದರೆ ಅದು ಬದಲಾವಣೆಗೆ ತನ್ನನ್ನು ಸಮರ್ಥವಾಗಿ ಒಡ್ಡಿಕೊಳ್ಳಬಲ್ಲುದು ಎಂಬುದಾಗಿ ಹೇಳುತ್ತಾರೆ. ಈ ಹೇಳಿಕೆಯ ಮೇಲಿನ ಚರ್ಚೆಯನ್ನು ಮುಂದಿನ ಹಂತದಲ್ಲಿ ತೆಗೆದುಕೊಳ್ಳಲಿದ್ದೇನೆ.

            ಮತ್ತೋರ್ವ ಭಾರತೀಯ ಚಿಂತಕರಾದ ಡಾ|| ಎಂ.ಚಿದಾನಂದಮೂರ್ತಿಯವರು ದಿನಾಂಕ: 29.04.2011 ರಂದು ಹೊಸದಿಗಂತ ದಿನಪತ್ರಿಕೆಯಲ್ಲಿ ಮತಾಂತರ ಭಾರತಕ್ಕೆ ಹತ್ತಿರುವ ಒಂದು ಪಿಡುಗು ಎಂಬ ಶೀರ್ಷಿಕೆಯಡಿಯಲ್ಲಿ ಮತಾಂತರವನ್ನು ತಡೆಯುವ ಕುರಿತು ತಮ್ಮ ಲೇಖನದಲ್ಲಿ ಈ ರೀತಿ ಹೇಳಿದ್ದಾರೆ. ನಾನು ಯಾವುದೇ ಭಯವಿಲ್ಲದೇ ಸ್ಪಷ್ಟವಾಗಿ ಘೋಷಿಸುತ್ತೇನೆ. ಮತಾಂತರ ನಿಷೇಧ ಕಾನೂನು ಮತ್ತು Common civil code (ಸಮಾನ ನಾಗರೀಕ ಸಂಹಿತೆಗಳನ್ನು) (ಎಲ್ಲರಿಗೂ ಒಂದೇ ರೀತಿಯ ವಿವಾಹ ಕಾನೂನು ಇರುವುದು) ಜಾರಿಗೊಳಿಸದೇ ಇದ್ದರೆ ಈ ಶತಮಾನದ ಅಂತ್ಯದ ಹೊತ್ತಿಗೆ ‘ಹಿಂದೂಧರ್ಮ’ (ರಿಲಿಜನ್ ಅರ್ಥದಲ್ಲಿ) ನಿಶ್ಯೇಷವಾಗಿ ನಾಶವಾಗುವುದು ಎಂದು ಹೇಳಿದ್ದಾರೆ.

            ಈ ಮೇಲ್ಕಂಡ ಇಬ್ಬರ ಹೇಳಿಕೆಗಳನ್ನು ಗಮನಿಸಿದಾಗ ಇವರು ಹಿಂದೂಧರ್ಮವನ್ನು ಅದು ಒಂದು ರಿಲಿಜನ್ ಎನ್ನುವ ಅರ್ಥದಲ್ಲಿಯೇ ಬಳಸುತ್ತಿದ್ದಾರೆ ಎಂಬುದು ನನ್ನ ವಾದ. ನಮ್ಮ ಆಡುಭಾಷೆಯಲ್ಲಿ ಮತ್ತು ವಿಧ್ವತ್ ಪೂರ್ಣ ಚರ್ಚೆ ಹಾಗೂ ಲೇಖನಗಳಲ್ಲಿ ನಾವು ಧರ್ಮ ಹಾಗೂ ರಿಲಿಜನ್ ಒಂದೇ ಎನ್ನುವ ರೀತಿಯಲ್ಲಿ ಬಳಸುತ್ತಿದ್ದೇವೆ. ಹಿಂದೂಧರ್ಮವು ಯಾವುದೇ ಅರ್ಥದಲ್ಲಿಯೂ ಒಂದು ರಿಲಿಜನ್ ಆಗಿಲ್ಲ ಎನ್ನುವುದನ್ನು ಎಸ್.ಎನ್.ಬಾಲಗಂಗಾಧರ್ ಅವರು (ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಹಾಗೂ  ಕರ್ನಾಟಕದ ಕುವೆಂಪು ವಿಶ್ವವಿದ್ಯಾನಿಲಯದ ಜೊತೆಗೂಡಿ ಸ್ಥಳೀಯ ಸಂಸ್ಕೃತಿಯನ್ನು ಅಧ್ಯಯನ ಮಾಡುತ್ತಿದ್ದಾರೆ) ತಮ್ಮ ಸಂಶೋಧನಾ ಕೃತಿಯಾದ  ’Heathen in his Blindness’ (ಕನ್ನಡ ಅನುವಾದ ಸ್ಮೃತಿ: ವಿಸ್ಮೃತಿ – ಭಾರತೀಯ ಸಂಸ್ಕೃತಿ) ನಲ್ಲಿ ಹಾಗೂ ತಮ್ಮ ಹಲವು ಲೇಖನಗಳಲ್ಲಿ ತಿಳಿಸಿದ್ದಾರೆ.

            ಎಸ್.ಎನ್.ಬಾಲಗಂಗಾಧರ್ ಅವರು ವಾದಿಸುವಂತೆ, ಪಾಶ್ಚಾತ್ಯರಿಗೆ ರಿಲಿಜನ್ನಿನ ಕುರಿತು ಸ್ಪಷ್ಟವಾದ ನಿಲುವುಗಳಿವೆ. ಅವರ ದೃಷ್ಟಿಯಲ್ಲಿ ರಿಲಿಜನ್ನು ಎಂದರೆ ಒಬ್ಬ ಪ್ರವಾದಿ ಇರಬೇಕು, ಒಂದು ಪವಿತ್ರ ಗ್ರಂಥವಿರಬೇಕು ಹಾಗೂ ಸಂಸ್ಕೃತಿಯ ಜನರ ಆಚರಣೆಗಳು ಡಾಕ್ಟ್ರಿನ್ನುಗಳನ್ನು ಆಧರಿಸಿರಬೇಕು. ಈ ಅಂಶಗಳು ರಿಲಿಜನ್ನಿನ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಪಾಶ್ಚಾತ್ಯರ ದೃಷ್ಠಿಯಲ್ಲಿ ಪ್ರತಿಯೊಂದು ಸಂಸ್ಕೃತಿಯಲ್ಲಿ ರಿಲಿಜನ್ನು ಇರಲೇಬೇಕು ಹಾಗೂ ರಿಲಿಜನ್ನು ಇಲ್ಲದೆ ಯಾವುದೇ ಸಮಾಜವೂ ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ.

ರಿಲಿಜನ್ನಿನ ಹಿನ್ನೆಲೆಯಿಂದ ಬಂದಂತಹ ಪಾಶ್ಚಾತ್ಯರು ಭಾರತಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಅವರಿಗೆ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಕಂಡು ಆಶ್ಚರ್ಯವೆನಿಸುತ್ತದೆ. ಇಲ್ಲಿನ ಆಚರಣೆಗಳನ್ನು ನಿರ್ದೇಶಿಸುವ ನಂಬಿಕೆ ಹಾಗೂ ಪವಿತ್ರ ಗ್ರಂಥಗಳನ್ನು ಸ್ಪಷ್ಟವಾಗಿ ಕಾಣಲಾಗದ ಅವರಿಗೆ ಎಲ್ಲವೂ ಗೊಂದಲಮಯವಾಗಿ ಕಾಣುತ್ತದೆ. ರಿಲಿಜನ್ನನ್ನು ಕುರಿತು ಪಾಶ್ಚಾತ್ಯರ ದೃಷ್ಠಿಕೋನದಲ್ಲಿ ಇಲ್ಲಿನ ಬಹಳಷ್ಟು ಆಚರಣೆಗಳು ಮೂಡನಂಬಿಕೆಯಂತೆ ಕಾಣುತ್ತದೆ. ರಿಲಿಜನ್ ಇಲ್ಲದ ಒಂದು ಸಂಪ್ರದಾಯ ಆಧಾರಿತ ಸಂಸ್ಕೃತಿಯು ಅವರ ಗ್ರಹಿಕೆಗೆ ನಿಲುಕುವುದಿಲ್ಲ ಎನ್ನುತ್ತಾರೆ ಬಾಲಗಂಗಾಧರ್ ಅವರು. ಹಿಂದೂಯಿಸಂ ಎನ್ನುವುದು ಒಂದು ರಿಲಿಜನ್ ಎನ್ನುವ ಗ್ರಹಿಕೆ ಏನೆಲ್ಲಾ ಪರಿಣಾಮಗಳನ್ನು ಉಂಟುಮಾಡಿತು ಎಂಬ ಬಾಲಗಂಗಾಧರ್ ಅವರ ವಾದವನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ವಿವರಿಸಲು ಇಚ್ಛಿಸುತ್ತೇನೆ. (ನಾನಿಲ್ಲಿ ಹೇಳಬಯಸುವ ವಿಷಯವನ್ನು ನನ್ನ ಮಿತ್ರರಾದ ಶ್ರೀ ಮಹೇಶ್  ಕುಮಾರ್ ಇವರು ದಿನಾಂಕ 22 ಜೂನ್ 2010ರಂದು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ತಮ್ಮ ಲೇಖನವಾದ ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ; ಯಾರು ಹಿತವರು? ಎಂಬ ಲೇಖನದಲ್ಲಿ ವಿವರಿಸಿದ್ದರು).

ಬ್ರಿಟನ್ನಿನಲ್ಲಿ ಸೆಮೆಟಿಕ್ ರಿಲಿಜನ್ಗಳ ನಡುವೆ ಪರಸ್ಪರ ವಿರುದ್ಧ ನಿಲುವುಗಳು (ಸತ್ಯದ ಬಗ್ಗೆ) ಇದ್ದಾಗ ಪ್ರಭುತ್ವ ತಟಸ್ಥ ನಿಲುವನ್ನು ತಾಳಿತು. ಇದೇ ಗ್ರಹಿಕೆಯ ಹಿನ್ನೆಲೆಯಿಂದ ಬಂದ ಈಸ್ಟ್ ಇಂಡಿಯಾ ಕಂಪನಿಯು ಈ ನೀತಿಯನ್ನು ಭಾರತದಲ್ಲೂ ಅಳವಡಿಸಲಾಯಿತು ಮತ್ತು ಅದೇ ಸಂದರ್ಭದಲ್ಲಿ ಭಾರತದಲ್ಲಿನ ಯಾವ ಆಚರಣೆಗಳಿಗೆ ಪಠ್ಯಗಳ ಬೆಂಬಲವಿದೆಯೋ ಅವನ್ನು ಮಾತ್ರ   ಸರಕಾರವು ಮಾನ್ಯ ಮಾಡಿ ಉಳಿದವನ್ನು ನಿಷೇಧಿಸುವ ಶಾಸನವನ್ನು ಜಾರಿಗೆ ತಂದಿತು. ಅಂದರೆ ಭಾರತೀಯರು ತಮ್ಮ ಯಾವುದೇ ಆಚರಣೆಗಳನ್ನು ಆಚರಿಸಬೇಕಾದರೆ ಪವಿತ್ರ ಗ್ರಂಥಗಳು ಮತ್ತು ಡಾಕ್ಟ್ರಿನ್ನುಗಳ ಆಧಾರವಿರಬೇಕು ಎಂದು ಕಂಪನಿ ಸಕರ್ಾರವು ಒತ್ತಿ ಹೇಳಿತು. ವಾಸ್ತವವಾಗಿ ಸಂಪ್ರದಾಯಗಳಿಗೆ ಸಂಬಂಧಿಸಿದ ಆಚರಣೆಗಳಿಗೆ ಯಾವುದೇ ನಂಬಿಕೆಯ ಹಿನ್ನೆಲೆಯಾಗಲೀ, ಪವಿತ್ರಗ್ರಂಥಗಳ ಆಧಾರವಾಗಲೀ ಇರಲಿಲ್ಲ. ಆದರೆ ಈಸ್ಟ್ ಇಂಡಿಯಾ ಕಂಪನಿಯು ಹೊರಡಿಸಿದ ಆದೇಶದ ಪರಿಣಾಮವಾಗಿ ಭಾರತೀಯ ಸಂಪ್ರದಾಯವಾದಿಗಳೂ ಸಹ ಕಂಪನಿಯ ಆದೇಶಕ್ಕೆ ಪೂರಕವಾಗಿ ತಮ್ಮ ಆಚರಣೆಗಳಿಗೆ ಗ್ರಂಥಗಳ ಆಧಾರವನ್ನು ಹುಡುಕ ಹೊರಟರು. ಹಾಗೂ ಈ ಕೆಲಸವನ್ನು ತೀರಾ ಬಲವಂತವಾಗಿ (ಒಂದು ನಿರ್ದೀಷ್ಟ ರೀತಿಯಲ್ಲಿ ಗ್ರಹಿಸಬೇಕಾದ ಒತ್ತಡ) ಜಾರಿಯಲ್ಲಿ ತರಲಾಯಿತು. ಭಾರತೀಯ ಆಚರಣೆಗಳಿಗೆ ಡಾಕ್ಟ್ರಿನ್ನುಗಳ ಬುನಾದಿ ಇರುವುದನ್ನು ರುಜುವಾತುಗೊಳಿಸಿದರೆ ಅವರ ಆಚರಣೆಗಳನ್ನು ಅಂಗೀಕರಿಸುವುದಾಗಿ ಸರಕಾರವು ತಿಳಿಸಿತು. ಇಂತಹ ಸಂದರ್ಭದಲ್ಲಿ ಬಂಗಾಳದಲ್ಲಿ ಎರಡು ರೀತಿಯ ಪ್ರತಿಕ್ರಿಯೆಗಳು ಬಂದವು.

1.         ಒಂದು ತಮ್ಮ ಆಚರಣೆಗೆ ಯಾವುದೋ ಒಂದು ಪವಿತ್ರ ಗ್ರಂಥ ಹಾಗೂ ಡಾಕ್ಟ್ರಿನ್ನಿನ ಬೆಂಬಲವಿದೆ ಎಂದು ಅನೇಕ ಪುರಾಣಪಠ್ಯಗಳನ್ನು ಸೃಷ್ಠಿಸಿ ತಮ್ಮ ಆಚರಣೆಗಳಿಗೆಲ್ಲಾ ಸಹಮತವನ್ನು ಸಾಬೀತುಮಾಡಿಕೊಳ್ಳುವುದು. ಈ ಮಾರ್ಗವನ್ನು ಸಂಪ್ರದಾಯವಾದಿಗಳು ಅನುಸರಿಸಿದರು.

2.         ಸುಧಾರಣಾವಾದಿಗಳ ಪ್ರತಿಕ್ರಿಯೆ, ಸುಧಾರಣಾವಾದಿಗಳ ಪ್ರಕಾರ ವೇದಗಳು ಮಾತ್ರವೇ ನಮ್ಮ ನಿಜವಾದ ಪಠ್ಯಗಳು. ಅವುಗಳನ್ನು ಬಿಟ್ಟು ಉಳಿದವೆಲ್ಲವೂ ಅನಧೀಕೃತವಾದವು ಎಂದು ಬಂಗಾಳದಲ್ಲಿ ಚಾಲ್ತಿಯಲ್ಲಿದ್ದ ಅನೇಕ ಆಚರಣೆಗಳನ್ನು ನಿರ್ಮೂಲನನಮಾಡಲು ಒತ್ತಾಯಿಸಿದರು. ಏಕೆ ಹಾಗೆ ಮಾಡಿದರು?. ಸುಧಾರಣಾವಾದಿಯಾದ ರಾಜಾರಾಮ್ ಮೋಹನರಾಯರು ಭಾರತೀಯ ಸಂಪ್ರದಾಯವನ್ನು ಸೆಮೆಟಿಕ್ ರಿಲಿಜನ್ನಿನ ಸ್ವರೂಪದಲ್ಲೇ ಇಡುವ ಕೆಲಸಕ್ಕೆ ನಾಂದಿಹಾಡಿದರು. ಇಲ್ಲಿ ಒಂದು ಅಂಶ ಸ್ಪಷ್ಟವಾಗುತ್ತದೆ. ಭಾರತೀಯ ಸಂಪ್ರದಾಯವಾದಿಗಳೂ ಸಹ ಹಿಂದೂಯಿಸಂನ್ನು ಸೆಮೆಟಿಕ್ ರಿಲಿಜನ್ನಿನಂತೆ ಅರ್ಥಮಾಡಿಕೊಂಡರು ಎಂಬುದು. ಈ ರೀತಿ ಗ್ರಂಥಗಳ ಆಧಾರವನ್ನು ಹುಡುಕ ಹೊರಟವರು ಹಿಂದೂಧರ್ಮವನ್ನು (ರಿಲಿಜನ್) ಸೃಷ್ಠಿಸುವ ಪ್ರಯತ್ನ ಮಾಡಿದರು. ಬಾಲಗಂಗಾಧರ್ರವರು ವಾದಿಸುವಂತೆ, ಭಾರತೀಯರು ತಮ್ಮ ಆಚರಣೆಗಳಿಗೆ ಆಧಾರಗ್ರಂಥವನ್ನು ಹುಡುಕಿದರೇ ವಿನಃ ಒಂದು ಸಂಪ್ರದಾಯಕ್ಕೆ ಅಥವಾ ಆಚರಣೆಗಳಿಗೆ ಗ್ರಂಥಗಳ ಆಧಾರ ಏಕೆ ಬೇಕು? ಎಂದು ಯಾರೂ ಪ್ರಶ್ನಿಸಲಿಲ್ಲ. ಈ ರೀತಿ ಪ್ರಶ್ನಿಸದೇ ಇದ್ದುದರಿಂದ ಹಿಂದೂಯಿಸಂ ಎಂಬ ರಿಲಿಜನ್ನನ್ನು ಹುಡುಕುವ ಪ್ರಯತ್ನ ಇಂದಿಗೂ ಮುಂದುವರೆದಿದೆ. ಬಾಲಗಂಗಾಧರ ಅವರು ಹೇಳುವಂತೆ ರಿಲಿಜನ್ ಇಲ್ಲದೇ ಇರುವುದು ಸಂಸ್ಕೃತಿಯಲ್ಲಿರುವ ಒಂದು ದೋಷ ಎನ್ನುವ ರೀತಿಯಲ್ಲಿ ಪರಿಗಣಿಸಲಾಗುತ್ತಿದೆ. ಜಗತ್ತಿನಲ್ಲಿರುವುದು ಕೇವಲ ಮೂರೇ ಮೂರು ರಿಲಿಜನ್ನು. ಅವುಗಳೆಂದರೆ ಕ್ರಿಶ್ಚಿಯಾನಿಟಿ, ಇಸ್ಲಾಂ ಹಾಗೂ ಜೂಡಾಯಿಸಂ. ಇನ್ನುಳಿದ ಯಾವುದೇ ಸಂಸ್ಕೃತಿಯಲ್ಲಿ ರಿಲಿಜನ್ ಇಲ್ಲದೇ ಇರುವುದು ಒಂದು ದೋಷವಾಗಲಾರದು. ರಿಲಿಜನ್ನು ಇಲ್ಲದೆಯೇ ಭಾರತೀಯ ಸಮಾಜವು ಸಹಸ್ರಾರು ವರ್ಷಗಳಿಂದ ಬದುಕಿಲ್ಲವೇ ಹಾಗೂ ಒಂದು ಸಮಾಜದ ಅಸ್ತಿತ್ವಕ್ಕೆ ರಿಲಿಜನ್ನು ಅತ್ಯವಶ್ಯಕ ಎಂಬುದು ಪಾಶ್ಚಾತ್ಯರ ನಂಬಿಕೆ. ಈ ರೀತಿಯಾದ ನಂಬಿಕೆ ತಪ್ಪು ಎಂಬುದು ಬಾಲಗಂಗಾಧರ್ರ ವಾದ. ಈ ರೀತಿ ಭಾರತೀಯರಿಗೆ ಹಿಂದೂಯಿಸಂ ಎಂಬ ರಿಲಿಜನ್ನು ಇಲ್ಲವೇ ಇಲ್ಲ ಮತ್ತು ಅದನ್ನು ಹೇಗೆ ಭಾರತೀಯರು ಹುಡುಕಿದರು ಎಂಬುದನ್ನು ತಮ್ಮ ಲೇಖನದಲ್ಲಿ ಸವಿವರವಾಗಿ ತಿಳಿಸಿದ್ದಾರೆ.

 ಬಾಲಗಂಗಾಧರ್ರವರ ವಾದವನ್ನು ತಿಳಿದ ಮೇಲೆ ಜಾನ್ಮೆಕ್ಲಿಥನ್ರ ಹಿಂದೂಧರ್ಮದ ಕುರಿತ ತಪ್ಪು ಗ್ರಹಿಕೆಯನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಇವರು ಹಿಂದೂಯಿಸಂನ್ನು ಸೆಮೆಟಿಕ್ ರಿಲಿಜನ್ ಚೌಕಟ್ಟಿನಲ್ಲಿಯೇ ಅರ್ಥಮಾಡಿಕೊಂಡಿದ್ದಾರೆ ಎಂಬುದು ನನ್ನ ವಾದವಾಗಿದೆ.

ಮತ್ತೋರ್ವ ಚಿಂತಕ ಡಾ|| ಎಂ.ಚಿದಾನಂದಮೂರ್ತಿಯವರು ತಮ್ಮ ಲೇಖನದಲ್ಲಿ ಮತಾಂತರವನ್ನು ತಡೆಯದೇ ಹೋದರೆ ಈ ಶತಮಾನದ ಅಂತ್ಯದ ಹೊತ್ತಿಗೆ ಹಿಂದೂಧರ್ಮ ನಿಶ್ಯೇಷವಾಗುತ್ತದೆ ಎಂದು ಲೇಖನದ ಕೊನೆಯಲ್ಲಿ ಹೇಳುತ್ತಾರೆ. ಬಹುಶಃ ಡಾ|| ಎಂ.ಚಿದಾನಂದಮೂರ್ತಿಯವರೂ ಸಹ ಹಿಂದೂಧರ್ಮವನ್ನು ಸೆಮೆಟಿಕ್ ರಿಲಿಜಿಯನ್ ಚೌಕಟ್ಟಿನಲ್ಲಿಯೇ  ಅರ್ಥಮಾಡಿಕೊಂಡಿದ್ದಾರೆ ಎಂಬುದು ನನ್ನ ವಾದ. ಇನ್ನೂ ಅನೇಕ ಬುದ್ದಿಜೀವಿಗಳೂ ಸಹ ಹಿಂದೂಧರ್ಮದ ಬಗ್ಗೆ ಆಗಾಗ್ಗೆ ಲೇಖನಗಳನ್ನು ಬರೆಯುತ್ತಲೇ ಇರುತ್ತಾರೆ ಹಾಗೂ ಹಿಂದೂ ರಿಲಿಜನ್ ಇದೆ ಎಂದು ಬಲವಾಗಿ ನಂಬಿದ್ದಾರೆ. ಕ್ರಿಶ್ಚಿಯನ್ನರ ಪ್ರಕಾರ ರಿಲಿಜನ್ನು, ಗಾಡ್ ಕಲ್ಪನೆಯಿಲ್ಲದ ಸಂಸ್ಕೃತಿಗಳು ಕತ್ತಲೆಯಲ್ಲಿವೆ ಹಾಗೂ ಆ ಸಂಸ್ಕೃತಿಗಳು ಬೆಳಕಿನೆಡೆಗೆ ಬರಬೇಕೆಂದು ಪ್ರತಿಪಾದಿಸುತ್ತಾರೆ ಹಾಗೂ ಈ ಹಿನ್ನೆಲೆಯಿಂದಲೇ ಮತಾಂತರವನ್ನು ಸಹ ಬೆಂಬಲಿಸುತ್ತಾರೆ.

ಮತಾಂತರದ ವಿಷಯವನ್ನು ಕುರಿತು ನಾವು ಮಾತನಾಡುವುದಾದರೆ ಭಾರತದಲ್ಲಿ ಸ್ಥಳೀಯ ಸಂಪ್ರದಾಯಗಳು ಹಾಗೂ ಸೆಮೆಟಿಕ್ ರಿಲಿಜನ್ಗಳೆರಡನ್ನು ನಾವಿಲ್ಲಿ ಗುರುತಿಸಬಹುದು. ಸೆಮೆಟಿಕ್ ರಿಲಿಜನ್ನುಗಳು ನಂಬುವಂತೆ ಅವರಿಗೆ ರಿಲಿಜನ್ ಎಂಬುದು ಗಾಡ್ / ಅಲ್ಲಾನಿಂದಲೇ ಬಂದಿದೆ ಹಾಗೂ ಉಳಿದೆಲ್ಲವೂ ಸಹ ಸುಳ್ಳೆಂದು ಸಹ ನಂಬುತ್ತಾರೆ. ರಿಲಿಜನ್ನು ಇಲ್ಲದ ಸಂಸ್ಕೃತಿಗಳು ಸತ್ಯದೆಡೆಗೆ ಬರಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಆ ದೃಷ್ಟಿಯಿಂದ ಮತಾಂತರವನ್ನು ಸಹ ಬೆಂಬಲಿಸುತ್ತಾರೆ ಹಾಗೂ ಅದು ತಮ್ಮ ರಿಲಿಜಸ್ ಸ್ವಾತಂತ್ರ್ಯ ಎಂದು ಹೇಳುತ್ತಾರೆ. ಸೆಮೆಟಿಕ್ ರಿಲಿಜನ್ನುಗಳು ಅನ್ಯ ಸಂಸ್ಕೃತಿಗಳನ್ನು (ಮತಾಂತರ ರಿಲಿಜನ್ಗಳ ಅಂತರ್ಗತ ಅಂಶವಾಗಿದೆ, ಸಂಪ್ರದಾಯಗಳನ್ನು ಆಧರಿಸಿದ ಸಮಾಜದಲ್ಲಿ ಮತಾಂತರದ ಅವಶ್ಯಕತೆಯೇ ಬರುವುದಿಲ್ಲ.) ತನ್ನೊಳಗೆ ವಿಲೀನಗೊಳಿಸಿಕೊಳ್ಳುತ್ತಾರೆ. ಆದರೆ ಭಾರತೀಯ ಸಂಸ್ಕೃತಿಯು ವಿಭಿನ್ನತೆಯನ್ನು ಪ್ರೋತ್ಸಾಹಿಸುತ್ತದೆ. ಭಾರತೀಯ ಸಂಪ್ರದಾಯವು ಎಂದೂ ಸಹ ಯಾವುದೇ ರಿಲಿಜನ್ನನ್ನು ಅಥವಾ ಸಂಪ್ರದಾಯವನ್ನು ಸುಳ್ಳೆಂದು ಪ್ರತಿಪಾದಿಸುವುದಿಲ್ಲ. ಹಾಗಾಗಿಯೇ ಮತಾಂತರ ಅಧರ್ಮವೆಂದು ಭಾರತೀಯರು ಭಾವಿಸುತ್ತಾರೆ. (ಗಾಂಧೀಜಿಯವರ ಉದಾಹರಣೆ)

ಮತಾಂತರವನ್ನು ನಿಷೇಧಿಸಬೇಕು ಎಂಬ ಡಾ|| ಎಂ.ಚಿದಾನಂದಮೂರ್ತಿಯವರ ವಾದವನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಕಾರಣವೆಂದರೆ ಭಾರತದ ಉದಾರವಾದಿ ಪ್ರಜಾಪ್ರಭುತ್ವದಲ್ಲಿ ಮತಾಂತರವನ್ನು ಬೆಂಬಲಿಸಲು ನಮಗೆ ಸಮರ್ಥನೆಗಳೇ ಸಿಗುವುದಿಲ್ಲ. ಜೊತೆಗೆ ರಿಲಿಜಸ್ ಸ್ವಾತಂತ್ರ್ಯವನ್ನು ಭಾರತದ ಸಂದರ್ಭದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಬಾಲಗಂಗಾಧರ್ ಹೇಳುವಂತೆ ಒಂದು ಕಡೆ ರಿಲಿಜನ್ನುಗಳು, ಮತ್ತೊಂದು ಕಡೆ ಸಂಪ್ರದಾಯಗಳ ಸಮೂಹ ಇರುವ ಭಾರತದಂತಹ ಪ್ರಭುತ್ವದಲ್ಲಿ, ಪ್ರಭುತ್ವವು ರಿಲಿಜನ್ಗಳ ಕುರಿತು ತಟಸ್ಥವಾಗಿರುವ ನಿಲುವು ಯಾರು ಯಾರನ್ನು ಬೇಕಾದರೂ ಮತಾಂತರ ಮಾಡುವ ಸ್ವಾತಂತ್ರ್ಯವನ್ನು ಕಲ್ಪಿಸುತ್ತದೆ. ಅಂದರೆ ವಾಸ್ತವದಲ್ಲಿ ರಿಲಿಜನ್ನುಗಳು ಮಾತ್ರ ಮತಾಂತರವನ್ನು ಮಾಡಲು ಬೇಕಾದ ಸಲಕರಣೆಗಳನ್ನು ಹೊಂದಿರುವುದರಿಂದ ಪರೋಕ್ಷವಾಗಿ ಪ್ರಭುತ್ವವು ರಿಲಿಜನ್ಗಳ ಪರ ಹಾಗೂ ಸಂಪ್ರದಾಯಗಳ (ಮತಾಂತರ ಮಾಡುವ ಯಾವ ಸೌಲಭ್ಯಗಳೂ ಇಲ್ಲದ) ವಿರುದ್ಧದ ನಿಲುವನ್ನು ತಳೆಯಬೇಕಾಗುತ್ತದೆ ಎನ್ನುವ ಸಂಗತಿಯು ರಿಲಿಜಸ್ ಸ್ವಾತಂತ್ರ್ಯದ ಒಂದು  ವಿಪರ್ಯಾಸವೇ ಸರಿ. ಬಾಲಗಂಗಾಧರ್ ಅವರೇ ಹೇಳುವಂತೆ ಯೂರೋಪಿನಲ್ಲಿ ರಿಲಿಜನ್ನಿನ ಸ್ವಾತಂತ್ರ್ಯದ ಪರಿಕಲ್ಪನೆಯ ಪ್ರಕಾರ ಪ್ರತಿಯೊಬ್ಬ ನಾಗರೀಕನೂ ರಾಜ್ಯದ ಹಸ್ತಕ್ಷೇಪವಿಲ್ಲದೇ ತನಗೆ ಬೇಕಾದ ರಿಲಿಜನ್ನಿನ ನಂಬಿಕೆಯನ್ನು ಬೋಧಿಸುವ, ಆಚರಿಸುವ ಹಕ್ಕನ್ನು ಹೊಂದಿದ್ದನು. ಹಿಂದೂ ರಾಷ್ಟ್ರೀಯವಾದಿಗಳು ಈ ರಿಲಿಜನ್ನಿನ ಸ್ವಾತಂತ್ರ್ಯದ ತತ್ವವನ್ನು ಪವಿತ್ರವಾದ ಹಿಂದೂತನ ಎಂಬ ಅರ್ಥದಲ್ಲಿ ಸ್ವೀಕರಿಸಿದರು. ಹೀಗೆ ಹಿಂದೂ ರಾಷ್ಟ್ರವು ಈ ಹಕ್ಕುಗಳನ್ನು ಧರಿಸಿತು. ‘ರಿಲಿಜನ್ನಿನ ಸ್ವಾತಂತ್ರ್ಯವು’ ಸ್ಥಳೀಯ ಭಾರತೀಯ ಸಂಪ್ರದಾಯಗಳ ಅನುಯಾಯಿಗಳಿಗೆ ಅವರೆಲ್ಲರೂ ಸಾಮಾನ್ಯವಾದ ಹಿತಾಸಕ್ತಿಯನ್ನು ಹೊಂದಿರುವ ಅಖಂಡವಾದ ಹಿಂದೂ ಸಮುದಾಯವೆಂದು ಮನವರಿಕೆ ಮಾಡಿಕೊಡುವ ಒಂದು ಸಾಧನವಾಗಿ ಪರಿವತರ್ಿತವಾಯಿತು ಎಂದು ಬಾಲಗಂಗಾಧರ್ರವರು ಹೇಳುತ್ತಾರೆ.

ಭಾರತದಂತಹ ಸೆಕ್ಯುಲರ್ ಪ್ರಭುತ್ವವು ಮತಾಂತರದಂತಹ ವಿಷಯದಲ್ಲಿ ಎದುರಿಸುವ ಹಲವು ಸಮಸ್ಯೆಗಳನ್ನು ನಾವು ಗುರುತಿಸಬಹುದು. ಸೆಮೆಟಿಕ್ ರಿಲಿಜನ್ನುಗಳಿಗೆ ಮತಾಂತರ ಮಾಡುವುದು ಅವರ ರಿಲಿಜಸ್ ಲಿಬರ್ಟಿಯಾಗಿದೆ. ಆದರೆ ಸಂಪ್ರದಾಯಗಳಿಗೆ ಇದು ಅನ್ವಯಿಸುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಯೆಂದರೆ ಒಂದು ವೇಳೆ ಪ್ರಭುತ್ವವು ಮತಾಂತರವನ್ನು ನಿಷೇದಿಸಬೇಕು ಎಂಬ ತಿರ್ಮಾನ ಕೈಗೊಂಡರೆ ಅದು ಸೆಮೆಟಿಕ್ ರಿಲಿಜನ್ಗಳಿಗೆ ವಿರೋಧವಾಗುತ್ತದೆ. ಹಾಗೆಯೇ ಮತಾಂತರದ ವಿಷಯದಲ್ಲಿ ಪ್ರಭುತ್ವ ತಟಸ್ಥ ನಿಲುವನ್ನು ಹೊಂದಿದರೆ ಅದು ಭಾರತೀಯ ಸಂಪ್ರದಾಯಕ್ಕೆ ವಿರೋಧವಾಗುತ್ತದೆ ಹಾಗೂ ಪ್ರಭುತ್ವ ಸೆಮೆಟಿಕ್ ರಿಲಿಜನ್ಗಳ ಪರವಾಗಿದೆ ಎಂದೂ ಸಹ ಪ್ರಭುತ್ವವನ್ನು ಟೀಕಿಸಲಾಗುತ್ತದೆ. ಈ ರೀತಿಯಾದಂತಹ ಜಠಿಲ ಸಮಸ್ಯೆಗಳು ಪ್ರಭುತ್ವಕ್ಕೆ ಎದುರಾಗುತ್ತವೆ. ಇದರಿಂದ ಒಂದಂತೂ ಸ್ಪಷ್ಟವಾಗುತ್ತದೆ ಭಾರತದ ಸೆಕ್ಯುಲರಿಸರಿಗೆ ಈ ಸಮಸ್ಯೆಯನ್ನು ಬಗೆಹರಿಸುವ ಶಕ್ತಿಯಿಲ್ಲ ಹಾಗೂ ಹಿಂದುತ್ವದಿಂದ ಭಾರತೀಯ ಸಮಾಜಕ್ಕೆ ಎಷ್ಟು ಅಪಾಯವಿದೆಯೋ ಅಷ್ಟೇ ಅಪಾಯ ಸೆಕ್ಯುಲರಿಸಂನಿಂದಲೂ ಇದೆ ಎಂಬುದು. ಹಾಗಾಗಿ ಸೆಕ್ಯುಲರಿಸಂ ಕುರಿತು ನಾವೆಲ್ಲರೂ ಮತ್ತೊಮ್ಮೆ ಚಿಂತಿಸುವ ಅಗತ್ಯವಿದೆ.

ಹಾಗೂ ಜಾನ್ಮೆಕ್ಲಿಥನ್ರವರು ಹಿಂದೂಯಿಸಂನ್ನು ಸೆಮೆಟಿಕ್ ರಿಲಿಜನ್ನಿನಂತೆ ಅರ್ಥಮಾಡಿ-ಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹಾಗೂ ಚಿದಾನಂದಮೂರ್ತಿಯವರ ವಾದಗಳಿಂದ ತಿಳಿಯುವ ಅಂಶವೆಂದರೇ ಅವರು ಹಿಂದೂ ಧರ್ಮವನ್ನು ಸೆಮೆಟಿಕ್ ರಿಲಿಜನ್ ಅರ್ಥದಲ್ಲಿಯೇ ಗ್ರಹಿಸಿದ್ದಾರೆ ಹಾಗೂ ಇವರೊಬ್ಬ ಹಿಂದುತ್ವವಾದಿ ಎಂಬ ಅಂಶ ನಮಗೆ ಸ್ಪಷ್ಟವಾಗುತ್ತದೆ. ಇವರಿಬ್ಬರ ಹಿಂದೂಧರ್ಮದ ಗ್ರಹಿಕೆಯ ಕುರಿತು ಯಾವುದೇ ವ್ಯತ್ಯಾಸವಿಲ್ಲವೆಂದು ನನಗನಿಸುತ್ತದೆ.

 *@ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ *ಲೇಖಕ ಪಿಪಿಸಿ ಪದವಿಪೂರ್ವ ಕಾಲೆಜಿನಲ್ಲಿ ಉಪನ್ಯಾಸಕರು

“ಪೂರ್ವಾವಲೋಕನ : ಒಂದು ಸಂವಾದ”

April 19, 2011 Leave a comment

ಕನ್ನಡದ ವಿದ್ವಾಂಸ ಜಗತ್ತಿಲ್ಲಿ ನಮ್ಮ ಸಮಾಜದ ಮತ್ತು ಸಮಾಜವಿಜ್ಞಾನದ ಕುರಿತು ವೈಜ್ಞಾನಿಕವಾಗಿ ಹೆಚ್ಚು ಚರ್ಚೆಯಾಗಬೇಕೆಂಬ ಉದ್ದೇಶದಿಂದ ಬಾಲಗಂಗಾಧರರ ಹಲವಾರು ಆಂಗ್ಲ ಭಾಷೆಯ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿಲಾದ ’ಪೂರ್ವಾವಲೋಕನ’ ಕೃತಿಯನ್ನು (ಅಭಿನವ ಪ್ರಕಾಶನ) ಇತ್ತೀಚೆಗೆ ಪ್ರಕಟಿಸಲಾಗಿದೆ. ಈ ಪುಸ್ತಕದಲ್ಲಿರುವ ಕೆಲವಾರು ಲೇಖನಗಳ ಆಧಾರದ ಮೇಲೆ “ಪೂರ್ವಾವಲೋಕನ : ಒಂದು ಸಂವಾದ”  ಒಂದು ದಿನ ಕಾರ್ಯಾಗಾರವನ್ನು ಇದೇ ತಿಂಗಳ ೨೪ ರಂದು ಸರ್ಕಾರಿ ಕಲಾ  ಕಾಲೇಜು, ಕೆ.ಆರ‍್. ಸರ್ಕಲ್ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ನಾವು ಬರೆದ ಲೇಖನಗಳಿಗೆ ಹಾಗೂ ಇತರ ಗೆಳೆಯರ ಲೇಖನಗಳಿಗೆ ಪ್ರತಿಕ್ರಿಯೆ ಬರೆದಂತಹ ಸಂದರ್ಭದಲ್ಲಿ ಆಸಕ್ತಿದಾಯಕವಾಗಿ ಚರ್ಚೆಗೆ ಅನುವು ಮಾಡಿಕೊಡಲಾಗಿದೆ. ಆದಕಾರಣ ಇದು ಕೇವಲ ಅಂತರ್ಜಾಲದಲ್ಲಿ ನಡೆಯುವ ಚರ್ಚೆಗೆ ಸೀಮಿತವಾಗದೆ, ನೇರವಾಗಿ ಮುಖಾಮುಖಿಯಾಗಿ ಚರ್ಚಿಸಲು ಒಂದು ಸುಸಂದರ್ಭ ಎಂದು ತಿಳಿದು ತಮ್ಮೆಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ. ಕಾರ್ಯಾಗಾರಕ್ಕೆ ಬರಲು ಯಾವುದೇ ಪ್ರವೇಶ ಶುಲ್ಕವಿಲ್ಲ, ನಿಮ್ಮ ಆಸಕ್ತಿಯೇ ಶುಲ್ಕವಾಗಿದೆ. ಹಾಗೂ ಕೆಳಕಂಡ ಲೇಖನಗಳನ್ನು ಓದಿಕೊಂಡು ಬಂದು ಚರ್ಚಿಸಬಹುದು
ರಾಜಾರಾಮ ಹೆಗ್ಡೆಯವರು “ Why Understand Western Culture” which is translated as ” ಪಾಶ್ಚಾತ್ಯ ಸಂಸ್ಕತಿಯನ್ನು ಯಾಕೆ ಅರ್ಥ ಮಾಡಿಕೊಳ್ಳಬೇಕು? (ಪುಟ ಸಂಖ್ಯೆ ೧೦೦ – ೧೧೫  ಪೂರ್ವಾವಲೋಕನ) ಲೇಖನದ ಕುರಿತು ಚರ್ಚಿಸಲಿದ್ದಾರೆ
ಪ್ರೊ. ಜಿ ಸಿವರಾಮಕ್ರಷ್ಣನ್  ” To Follow Our fore Fathers…” which is translated as “ನಮ್ಮ ಪೂರ್ವಜರನ್ನು ಅನುಸರಿಸಿ…” ಸಂಪ್ರದಾಯದ ಸ್ವರೂಪ” (ಪುಟ ಸಂಖ್ಯೆ ೮೫-೧೦೦  ಪೂರ್ವಾವಲೋಕನ) ಲೇಖನದ ಕುರಿತು ಚರ್ಚಿಸಲಿದ್ದಾರೆ.
ಪ್ರೊ. ಸದಾನಂದ ಅವರು Dark hour of Secularism”   which is translated as ”ಸೆಕ್ಯುಲರಿಸಂನ ಕರಿನೆರಳು – ಭಾರತದಲ್ಲಿ ಹಿಂದೂ ಮೂಲಭೂತವಾದ ಮತ್ತು ವಸಾಹತುಶಾಹಿ ಉದಾರವಾದ” (ಪುಟ ಸಂಖ್ಯೆ223- 260 ಪೂರ್ವಾವಲೋಕನ)
 ಈ ಕಾರ್ಯಾಗಾರವನ್ನು ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ,

ಕುವೆಂಪು ವಿಶ್ವವಿದ್ಯಾನಿಲಯ

ಹಾಗೂ ಸಮಾಜ ಅಧ್ಯಯನ ಹಾಗೂ ಶಿಕ್ಷಣದ ಕೇಂದ್ರ (CESS) ಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

ಕಾರ್ಯಾಗಾರ ನಡೆಯುವ ಸ್ಥಳ: ಸರ್ಕಾರಿ ಕಲಾ  ಕಾಲೇಜು, ಕೆ.ಆರ‍್. ಸರ್ಕಲ್, ಬೆಂಗಳೂರು.
ದಿನಾಂಕ: 23-4-2011
ಸಮಯ: ಬೆಳಗ್ಗೆ ೧೦.೦೦ ಗಂಟೆ
ಸಂದೀಪ್ ಕುಮಾರ್ ಶೆಟ್ಟಿ
ಕಾರ್ಯಕ್ರಮ ನಿರ್ವಹಣಾಧಿಕಾರಿ
ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ
ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ
Ph: +91 8282 – 257316 (O)
+91-8147953299 (M)
Follow

Get every new post delivered to your Inbox.

Join 58 other followers