ಮುಖ ಪುಟ > Cultural Studies, Culture, Hindu, Hinduism, Religion > ಭಾರತ ಮತ್ತು ಪಶ್ಚಿಮದ ತುಲನೆ

ಭಾರತ ಮತ್ತು ಪಶ್ಚಿಮದ ತುಲನೆ

ಮೂಲ : ಎಸ್. ಎನ್. ಬಾಲಗಂಗಾಧರ
ಅನುವಾದ: ಪ್ರವೀಣ ಟಿ.ಎಲ್ ಮತ್ತು ವಾಣಿ ಪಾಲ್ವೆ ಎನ್

ನಾನು ಕಳೆದೆರೆಡು ದಶಕಗಳಿಂದ ಭಾರತ ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಮುಖ್ಯವಾಗಿಟ್ಟುಕೊಂಡು ಹೊಸ ರೀತಿಯಲ್ಲಿ ಸಂಸ್ಕೃತಿಗಳ ಭಿನ್ನತೆಗಳನ್ನು ಗುರುತಿಸುವ ಅಧ್ಯಯನದಲ್ಲಿ ತೊಡಗಿದ್ದೇನೆ. ಏಕೆಂದರೆ, ‘ಭಾರತ’ ಮತ್ತು ‘ಪಾಶ್ಚಾತ್ಯ’ ಸಂಸ್ಕೃತಿಗಳು ಎಂಬ ಪದಗಳ ಮಿತಿಗಳ ಕುರಿತಾದ ಪ್ರಶ್ನೆಗಳಿಗೆ ಒಬ್ಬನು ತೃಪ್ತಿಕರವಾಗಿ ಉತ್ತರಿಸಲು ಸಾಧ್ಯವೆಂದು ನಾನು ನಂಬಿದ್ದೇನೆ. (ಬಾಲಗಂಗಾಧರ, 1994). ಆ ಶಬ್ಧಗಳು ನಿಮಗೆ ತಿಳಿದಿವೆಯೆಂಬುದಾಗಿ ಭಾವಿಸಿಕೊಳ್ಳುತ್ತೇನೆ. ಈ ಲೇಖನದಲ್ಲಿ ಈ ಎರಡು ಸಂಸ್ಕೃತಿಗಳ ಹೋಲಿಕೆಯ ಕುರಿತಂತೆ ನಮ್ಮನ್ನು ಕಾಡುತ್ತಿರುವ ಸಮಸ್ಯೆಯನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಈ ಚರ್ಚಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಚಲಿತದಲ್ಲಿರುವ ಬೇರೆಯ ದೃಷ್ಟಿಕೋನಗಳನ್ನು ಉದ್ದೇಶದಲ್ಲಿಟ್ಟುಕೊಳ್ಳದೆಯೇ ಈ ಕೆಲಸವನ್ನು ಒಂದು ವಾದಸರಣಿಯ ರೂಪದಲ್ಲಿ ನಡೆಸಲಿದ್ದೇನೆ. ಸಯೀದನ ‘ಓರಿಯೆಂಟಲಿಸಂ’ನ್ನು ಬಳಸಿಕೊಂಡು ನೇರವಾಗಿ ವಿಷಯವನ್ನು ಪ್ರವೇಶಿಸುತ್ತೇನೆ.

ಓರಿಯೆಂಟಲಿಸಂನ ಸವಾಲು
ಓರಿಯೆಂಟಲಿಸ್ಟ್ ವ್ಯಾಖ್ಯಾನವನ್ನು ನಾವು ಹೇಗೆ ನೋಡಿದರೆ ಚೆನ್ನಾಗಿರುತ್ತದೆ? ಇದಕ್ಕೆ ಸಂಬಂಧಿಸಿದಂತೆ ಎರಡು ಮಾರ್ಗಗಳಿವೆ: ಇದೊಂದು ಪೂರ್ವದ ಚಿತ್ರಣ ಎಂಬುದು ಮೊದಲನೆಯ ಮಾರ್ಗ, ಇದು ಪೂರ್ವದ ಕುರಿತಂತೆ ಪಾಶ್ಚಾತ್ಯರು ಹೊಂದಿದ ಅನುಭವದ ಚಿತ್ರಣವಾಗಿದೆ ಎಂಬುದು ಎರಡನೆಯ ಮಾರ್ಗ. ನಾನು ಎರಡನೆಯ ಸಾಧ್ಯತೆಯನ್ನು ನಂಬುತ್ತೇನೆ. ಪಾಶ್ಚಾತ್ಯ ಸಂಸ್ಕೃತಿಯು ಪೂರ್ವವನ್ನು ಕಷ್ಟಪಟ್ಟು ಅರ್ಥಮಾಡಿಕೊಂಡ ಪ್ರಕ್ರಿಯೆಯೇ ‘ಓರಿಯಂಟಲಿಸಂ’ ಎಂಬುದನ್ನು ಒಪ್ಪಿಕೊಂಡರೆ, ಅದು (‘ಓರಿಯಂಟಲಿಸಂ’) ಅನುಭವದ ಕುರಿತ ವ್ಯಾಖ್ಯಾನ ಮಾತ್ರವಲ್ಲದೇ ಆ ಅನುಭವವನ್ನು ಪರ್ಯಾಯಾವಲೋಚಿಸುವ ಹಾಗೂ ಆ ಅನುಭವವನ್ನು ರೂಪಿಸುವ ಕೆಲಸ ಕೂಡಾ ಆಗಿದೆ. ಈ ಅರ್ಥದಲ್ಲಿ, ಓರಿಯೆಂಟಲಿಸಂ ಎನ್ನುವುದು ಪಾಶ್ಚಾತ್ಯ ಸಂಸ್ಕೃತಿಯ ಅನುಭವದ ವ್ಯಾಖ್ಯಾನವಾಗಿದೆ ಎಂದರೂ ಸಹಾ ಅದೊಂದು ನೇರವಾದ ವ್ಯಾಖ್ಯಾನವಲ್ಲ. ಏಕೆಂದರೆ ಇದು ಅನ್ಯ ಸಂಸ್ಕೃತಿಗಳ ಕುರಿತಾದದ್ದು ಎನ್ನುವಂತೆ ಮೇಲ್ನೋಟಕ್ಕೆ ತೋರುತ್ತದೆ. ಒಂದು ನಿರ್ದಿಷ್ಟ ಸಂಸ್ಕೃತಿಗೆ ಸೇರಿದ ವ್ಯಕ್ತಿಗಳ ಅನುಭವವನ್ನು ಸೂಚಿಸುತ್ತದೆ ಎಂಬರ್ಥದಲ್ಲಿ ಇದನ್ನು ‘ಪಾಶ್ಚಾತ್ಯ’ ಎಂಬುದಾಗಿ ಕರೆಯಬಹುದು. ಪಶ್ಚಿಮೇತರ ಸಂಸ್ಕೃತಿಗಳ ಅನುಭವದ ಕುರಿತ ಪಶ್ಚಿಮದ ಚಿಂತನಾಕ್ರಮವೇ ಓರಿಯಂಟಲಿಸಂ ಎನ್ನಬಹುದು. ಆದಾಗ್ಯೂ ಕೂಡ ಇದು ಮೇಲ್ನೋಟಕ್ಕೆ ಪೂರ್ವದ ಬಗೆಗಿನ ವ್ಯಾಖ್ಯಾನವೆಂಬಂತೆ ಕಾಣುತ್ತದೆ.

ಈ ಪ್ರಕ್ರಿಯೆಯಲ್ಲಿ, ಪಶ್ಚಿಮವು ತನ್ನ ಸಂಸ್ಕೃತಿಗೆ ಲಭ್ಯವಿದ್ದ ವೈಚಾರಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಪರಿಕಲ್ಪನಾತ್ಮಕ ಚೌಕಟ್ಟನ್ನು ಕಟ್ಟಿ ವಿಸ್ತರಿಸಿತು. ಈ ಚಿತ್ರಣಗಳು ಯೂರೋಪು ತನ್ನನ್ನೇ ಚಿತ್ರಿಸಿಕೊಳ್ಳುವುದಕ್ಕೆ ಹಾಗೂ ಅರ್ಥೈಸಿಕೊಳ್ಳುವುದಕ್ಕೆ ಸಹಾಯಕವಾದವು. ಆದ್ದರಿಂದಾಗಿ, ಯೂರೋಪು ಜಗತ್ತನ್ನು ಅನುಭವಿಸಿದ ರೀತಿ ಹಾಗೂ ಅದು ಅನ್ಯ ಸಂಸ್ಕೃತಿಗಳ ಕುರಿತು ನೀಡಿದ ಚಿತ್ರಣಗಳು ಅನೇಕ ಅವ್ಯಕ್ತ ರೀತಿಗಳಲ್ಲಿ ತಳುಕುಹಾಕಿಕೊಂಡಿವೆ. ಹಾಗಾಗಿ ಪಾಶ್ಯಾತ್ಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದೇ ಓರಿಯಂಟಲಿಸಂನ ನಿಜವಾದ ಸವಾಲಾಗಿದೆ. ಅಂದರೆ, ಪಶ್ಚಿಮವು ತನ್ನ ಕುರಿತಾಗಿ ಹೊಂದಿರುವ ಸ್ವ-ವಿವರಣೆಯನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅದು ಅನ್ಯವನ್ನು ವಿವರಿಸಿದ ರೀತಿಯನ್ನು ಅರ್ಥೈಸುವುದು. ಇದು ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಇಡಬೇಕಾದ ಮೊದಲನೆಯ ಹೆಜ್ಜೆ.

ತೌಲನಿಕ ದೃಷ್ಟಿಕೋನದಲ್ಲಿ ಪಾಶ್ಚಾತ್ಯ ಸಂಸ್ಕೃತಿ:
ಈ ವಾದದಿಂದ ಉಂಟಾಗುವ ಪರಿಣಾಮಗಳಲ್ಲೊಂದನ್ನು ಸ್ಪಷ್ಟವಾಗಿ ತೋರಿಸಲು ಬಯಸುತ್ತೇನೆ. ಒಂದು ಸಂಸ್ಕೃತಿಯನ್ನು ಈ ಮೇಲೆ ನಾನು ತಿಳಿಸಿದ ರೀತಿಯಲ್ಲಿ ಅಧ್ಯಯನ ಮಾಡಿದರೆ, ನಾವು ನಮ್ಮ ಅಧ್ಯಯನ ವಿಷಯವಾದ ಪಾಶ್ಚಾತ್ಯ ಸಂಸ್ಕೃತಿಯನ್ನು ತೌಲನಿಕ ವಿಧಾನದಲ್ಲಿ ಪರಿಕಲ್ಪಸಿಕೊಂಡು ಆರಂಭಿಸುತ್ತೇವೆ. ಪಶ್ಚಿಮವೆಂದರೆ ಅದು ತನ್ನ ಕುರಿತು ಹಾಗೂ ಅನ್ಯರ ಕುರಿತು ಏನು ಹೇಳುತ್ತದೆಯೋ ಅದೇ ಆಗಿದೆ. ಒಂದು ಸಾಮಾನ್ಯವಾದ ಪರಿಕಲ್ಪನಾ ಚೌಕಟ್ಟನ್ನು ಗುರುತಿಸುವ ಸಲುವಾಗಿ ಪಶ್ಚಿಮವು ಅನ್ಯರ ಕುರಿತು ಹೇಳಿರುವುದನ್ನು ಅದು ತನ್ನ ಕುರಿತು ಹೇಳಿಕೊಂಡಿರುವುದರ ಜೊತೆಗೆ ಹೋಲಿಸಿ ನೋಡಬೇಕಾಗುತ್ತದೆ. ಒಂದರ್ಥದಲ್ಲಿ ಈ ನಿಲುವು ಮನುಷ್ಯನ ಕುರಿತು ನಾವು ಹೊಂದಿರುವ ಒಳನೋಟಕ್ಕೆ ಸಮಂಜಸವಾಗಿ ಕಾಣುತ್ತದೆ: ಯಾವಾಗ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಚಿತ್ರಿಸುತ್ತಾನೋ ಆ ಚಿತ್ರಣದ ಫಲಿತಾಂಶವು ಚಿತ್ರಿಸಿದವನ ಕುರಿತೇ ಹೆಚ್ಚಾಗಿ ಹೇಳುತ್ತಿರುತ್ತದೆ. ನಿರ್ಧಿಷ್ಟ ಸಂಸ್ಕೃತಿಗೆ ಸೇರಿದ ವ್ಯಕ್ತಿಯೊಬ್ಬನು ನೀಡಿದ ವೈಯಕ್ತಿಕ ಚಿತ್ರಣಗಳ ವಿಷಯದಲ್ಲೂ ಇದು ಸರಿಯಾದುದಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದ ಕುರಿತ ಯುರೋಪಿನ ಚಿತ್ರಣಗಳು ಒಂದು ಸಾಮಾನ್ಯವಾದ ಪರಿಕಲ್ಪನಾತ್ಮಕ ರಚನೆಯನ್ನು ಹೊಂದಿದ್ದರೆ, ಆಗ ಯುರೋಪಿನ ಸಂಸ್ಕೃತಿಯು ಅಂತಹ ರಚನೆಯನ್ನು ಸಾಮಾನ್ಯವಾಗಿ ಹಂಚಿಕೊಂಡಿದೆ ಎಂದಾಗುತ್ತದೆ. ಈ ರೀತಿಯ ಚೌಕಟ್ಟು ಅಸ್ತಿತ್ವದಲ್ಲಿದೆ ಎಂಬುದನ್ನು ಸಯೀದನ ‘ಓರಿಯಂಟಲಿಸಂ’ಗೂ ಹಿಂದಿನ ಮತ್ತು ನಂತರದ ಸಂಶೋಧನೆಗಳು ತಿಳಿಸುತ್ತವೆ. ಯುರೋಪಿನ ಸ್ವ-ಚಿತ್ರಣದಲ್ಲಿಯೂ ಈ ಚೌಕಟ್ಟು ಅಸ್ತಿತ್ವದಲ್ಲಿರುವುದು ಕಂಡುಬಂದರೆ, ಈ ಚೌಕಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಸೇರಿದ್ದೆಂದು ಖಡಾಖಂಡಿತವಾಗಿ ಆಗ ನಾವು ಹೇಳಬಹುದು. ಈ ವಾದವು ಪಶ್ಚಿಮದ ಸಂಸ್ಕೃತಿಯನ್ನು ವಸ್ತುನಿಷ್ಠವಾಗಿ, ಖಚಿತವಾಗಿ ಹಾಗೂ ವೈಜ್ಞಾನಿಕವಾಗಿ ತೌಲನಿಕ ರೀತಿಯಲ್ಲಿ ಅಧ್ಯಯನಕ್ಕೊಳಪಡಿಸಲು ವಿಧಾನವನ್ನು ಒದಗಿಸುತ್ತದೆ. ಸದ್ಯಕ್ಕೆ ಈ ಅಂಶವನ್ನು ವಿಸ್ತಾರವಾಗಿ ವಿವರಿಸಲು ಸಮಯವಿಲ್ಲದ್ದರಿಂದ ಇದನ್ನು ಇಲ್ಲಿಯೇ ನಿಲ್ಲಿಸಿ, ಭಾರತದ ಸಂದರ್ಭದಲ್ಲಿಯೂ ಮೇಲಿನ ನಿರ್ಣಯಗಳು ಸರಿಯಾಗುತ್ತವೆಯೋ ಎನ್ನುವುದರ ಕಡೆಗೆ ನನ್ನ ದೃಷ್ಟಿಯನ್ನು ಹರಿಸುತ್ತೇನೆ.

ಮೇಲ್ನೋಟಕ್ಕೆ ಕಾಣುವಂತೆ, ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ಮಾಡುವಾಗಲೂ ಈ ಒಳನೋಟವು ಪ್ರಯೋಜನಕಾರಿಯಾಗಿ ತೋರುತ್ತದೆ; ಈ ಸಂಸ್ಕೃತಿ ಕೂಡ ತಾನು ತನ್ನ ಬಗ್ಗೆ ಏನನ್ನು ಹೇಳುತ್ತದೆ ಮತ್ತು ‘ಅನ್ಯರ’ ಕುರಿತು ಏನನ್ನು ಹೇಳುತ್ತದೆ ಎಂಬುದೇ ಆಗಿದೆ. ಈ ನಿರೀಕ್ಷೆಯೊಂದಿಗೆ ನಮ್ಮ ಭಾರತೀಯ ಬೌದ್ಧಿಕ ಪರಂಪರೆಯನ್ನು ಅಗೆದು ನೋಡಿದರೆ, ಸೋಜಿಗವಾಗುವುದು ಸಹಜ (1) ಭಾರತದ ‘ಸ್ಥಳೀಯ’ ಸಂಪ್ರದಾಯಗಳು ತಮ್ಮ ಬಗ್ಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಚಿತ್ರಿಸಿಕೊಳ್ಳುತ್ತವೆ ಹಾಗೂ ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ‘ಅನ್ಯರ’ ಕುರಿತು ಚಿತ್ರಣಗಳನ್ನು ಒದಗಿಸಿವೆ. (2) ಆಧುನಿಕ ಭಾರತದ ಬೌದ್ಧಿಕತೆಯು ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಕುರಿತು ಪಾಶ್ಚಾತ್ಯರು ನೀಡುವ ಚಿತ್ರಣಗಳ ಪುನರುತ್ಪಾದನೆಯಲ್ಲಿ ತೊಡಗಿರುವಂತೆ ಕಾಣುತ್ತದೆ. ಈ ನಿಜಾಂಶಗಳನ್ನು ಹೇಗೆ ಅರ್ಥೈಸುವುದು ಅಥವಾ ವಿವರಿಸುವುದು? ಮತ್ತು ಭಾರತೀಯ ಸಂಸ್ಕೃತಿಯ ತೌಲನಿಕ ಅಧ್ಯಯನದ ಬಗ್ಗೆ ಈ ನಿಜಾಂಶಗಳು ಏನನ್ನು ಹೇಳುತ್ತವೆ?

ನಾವು ಈ ಪ್ರಶ್ನೆಗಳನ್ನು ಪ್ರತ್ಯೇಕವಾಗಿ ನೋಡುವುದರ ಜೊತೆಗೆ ‘ಅನ್ಯರ’ ಕುರಿತು ಹಾಗೂ ತಮ್ಮ ಬಗ್ಗೆ ಭಾರತದ ‘ಸ್ಥಳೀಯ’ರೇ ನೀಡುವ ಚಿತ್ರಣಗಳ ಅಭಾವದ ಕುರಿತು ನೋಡೋಣ. ಭಾರತದ ಸಂಪ್ರದಾಯಗಳಲ್ಲಿ ನಿರ್ದಿಷ್ಟವಾಗಿ ಯಾವುದರ ಅಭಾವ ಇದೆ? ನಾನು ಯಾದೃಚ್ಛಿಕವಾಗಿ ಮೂರು ವಿಷಯಗಳನ್ನು ಆರಿಸಿಕೊಳ್ಳುತ್ತೇನೆ; ರಿಲಿಜನ್ ಮತ್ತು ಗಾಡ್: ಎಥಿಕ್ಸ್; ಮತ್ತು ಸಾಮಾಜಿಕ ರಚನೆ.

ನಾವು ದಿನನಿತ್ಯ ನಮ್ಮ ವಿದ್ಯಾರ್ಥಿಗಳಿಗೆ ಪಾಠಮಾಡುವ ಪ್ರಮುಖ ಪಠ್ಯಪುಸ್ತಕಗಳು ತಿಳಿಸುವಂತೆ, ಭಾರತದಲ್ಲಿ ಹಲವಾರು ‘ಸ್ಥಳೀಯ'(ದೇಶೀಯ) ರಿಲಿಜನ್ನುಗಳಿವೆ (ಹಿಂದೂಯಿಸಂ, ಬುದ್ಧಿಸಂ, ಜೈನಿಸಂ, ಶೈವ ಪಂಥದ ವಿವಿಧ ಬಗೆಗಳು, ವೈಷ್ಣವರ ವಿವಿಧ ಬಗೆಗಳು, ಭಕ್ತಿ ಚಳುವಳಿಗಳು, ಸಿಕ್ಕಿಸಂ ಇನ್ನೂ ಮುಂತಾದವು ಮತ್ತು ಬೇರೆ ರೀತಿಯ ‘ಜನಪ್ರಿಯ’ ರಿಲಿಜನ್ನುಗಳು). ಇಷ್ಟೇ ಅಲ್ಲದೆ, ಇವುಗಳು ಸಂಪ್ರದಾಯವಾದಿಗಳ ಆಡಳಿತದ ವಿರುದ್ಧ ಬಂಡೆದ್ದು ಹುಟ್ಟಿಕೊಂಡವುಗಳಾಗಿವೆ ಎಂಬುದನ್ನೂ ಅವು ತಿಳಿಸುತ್ತವೆ. ಉದಾಹರಣೆಗೆ, ವೇದಗಳ ಶುದ್ಧ ರಿಲಿಜನ್ನು ಭ್ರಷ್ಟಗೊಂಡು ‘ಬ್ರಾಹ್ಮಣಿಸಂ’ ಹುಟ್ಟಿಕೊಂಡಿದೆ. (ಜೈನಿಸಂ ಮತ್ತು ಬೌದ್ಧಿಸಂನ) ಶ್ರಮಣ ಸಂಪ್ರದಾಯಗಳು ಜಂಟಿಯಾಗಿ ‘ಬ್ರಾಹ್ಮನಿಸಂ’ ವಿರುದ್ಧ ಹೋರಾಡಿದವು, ಈ ‘ಬ್ರಾಹ್ಮನಿಸಂ’ ನಂತರ ‘ಹಿಂದೂಯಿಸಂ’ ಆಗಿ ಪರಿವರ್ತನೆಗೊಂಡಿತು. ಇದು ಬುದ್ಧಿಸಂ ವಿರುದ್ಧ ಹೋರಾಡಿದ ‘ಅದ್ವೈತ’ ರಿಲಿಜನ್ನಿನಿಂದ ಬಲಪಡೆಯಿತು. ಇದು ನಿಜವೇ ಆಗಿದ್ದಲ್ಲಿ ರಿಲಿಜನ್ ಕುರಿತ ಬೃಹತ್ ಸಂಪುಟಗಳ ಸಾಹಿತ್ಯ ನಮ್ಮಲ್ಲಿ ಇರಬೇಕಿತ್ತು. (ರಿಲಿಜನ್ ಎಂದರೆ ಏನು?, ಈ ಪ್ರತ್ಯೇಕ(individual) ರಿಲಿಜನ್ಗಳೆಂದರೆ ಏನು? ಇತ್ಯಾದಿ) ಮತ್ತು ಅದಕ್ಕೂ ಹೆಚ್ಚಾಗಿ ಥಿಯಾಲಜಿಯ ಸಾಹಿತ್ಯವೂ ಇರಬೇಕಿತ್ತು. ಬುದ್ಧಿಸಂ ಮತ್ತು ಜೈನಿಸಂಗಳೆರಡೂ ಗಾಡ್ನನ್ನು ನಿರಾಕರಿಸುತ್ತವೆ ಎಂಬುದಂತೂ ನಿಜ. ಅವು ನಿರಾಕರಿಸುವುದು ಸುಳ್ಳೆ? ಭಾರತದಲ್ಲಿ ಯಾವುದೇ ಥಿಯಾಲಜಿಯೂ ಕಷ್ಟ ಸಾಧ್ಯ (ಥಿಯಾಲಜಿಕಲ್ ಗ್ರಂಥ ರಚನೆಯ ಅರ್ಥವನ್ನು ತಿಳಿಯಲು ಕ್ರಿಶ್ಚಿಯಾನಿಟಿಯನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು) ಮತ್ತು ರಿಲಿಜನ್ನಿನ ಸ್ವರೂಪದ ಕುರಿತ ಸ್ವಷ್ಟವಾದ ಪರ್ಯಾಯಾಲೋಚನೆಯೂ ಕಷ್ಟಸಾಧ್ಯ. ಇವೆಲ್ಲವುಗಳ ಅಭಾವವು ಎಷ್ಟು ಎದ್ದು ಕಾಣುವಂತಿದೆಯೆಂಬುದನ್ನು ಅರಿಯಲು ಕ್ರಿಶ್ಚಿಯಾನಿಟಿಯ ಇತಿಹಾಸವನ್ನು ತಿಳಿದರೆ ಸಾಕು. ಇಂದಿನವರೆಗೂ ಕೂಡ ಯಾವುದು ಹಿಂದೂಯಿಸಂನ್ನು ರಿಲಿಜನ್ನಾಗಿ ಮಾಡಿದೆ ಎಂಬ ಪ್ರಶ್ನೆಗಾಗಲಿ ಅಥವಾ ಯಾವ ‘ಬ್ರಾಹ್ಮನಿಸಂ’ ವಿರುದ್ದ ಬುದ್ಧಿಸಂ ಹೋರಾಟ ಮಾಡಿತು ಎಂಬ ಪ್ರಶ್ನೆಗಾಗಲಿ ಬುದ್ಧಿಜೀವಿಗಳಿಂದಾಗಲಿ ಅಥವಾ ಶ್ರೀಸಾಮಾನ್ಯರಿಂದಾಗಲಿ ಉತ್ತರಿಸಲು ಸಾಧ್ಯವಾಗಿಲ್ಲ. ಹಾಗೆಯೇ ಬ್ರಾಹ್ಮನಿಸಂನ್ನು ರಿಲಿಜನ್ನಾಗಿ ಮಾಡಿರುವುದಾದರೂ ಏನು? ಎಂಬುದನ್ನು ಹೇಳಲು ಸಾಧ್ಯವಾಗದಿದ್ದರೂ ಸಹ ಬುದ್ಧಿಸಂ ಬ್ರಾಹ್ಮಣಿಸಂನ ವಿರುದ್ಧ ಹೋರಾಡಿತು ಎಂಬುದನ್ನು ಶತಮಾನಗಳಿಂದಲೂ ನಾವು ನಂಬಿಕೊಂಡು ಬಂದಿದ್ದೇವೆ.

ಇದೇ ವಿಷಯವೇ ಬೇರೆ ಕಡೆಗೂ ಅನ್ವಯಿಸುತ್ತದೆ. ಹಲವಾರು ಸಂಪುಟಗಳ ಸುಭಾಷಿತ ಮತ್ತು ಧರ್ಮಶಾಸ್ತ್ರಗಳ ಸಾಹಿತ್ಯವು ಲಭ್ಯವಿದ್ದರೂ ಕೂಡ ಭಾರತವು ಎಥಿಕ್ಸ್ ಕುರಿತ ಗ್ರಂಥಗಳನ್ನು ಹಾಗೂ ಪರ್ಯಾಯಾಲೋಚನೆಯ ಪರಂಪರೆಯನ್ನು ಸೃಷ್ಟಿಸಲು ಸೋತಿತು. Ethica Nichomachea ‘ ಇರಲಿ ’Summa Theologica ‘ಗೆ ಸಮನಾದದ್ದು ಸಹ ಭಾರತದ ಬೌದ್ಧಿಕ ಪರಂಪರೆಗಳಲ್ಲಿ ಯಾವುದೂ ಇಲ್ಲ. ಅಂದರೆ ಭಾರತದಲ್ಲಿ ಬೌದ್ಧಿಕ ಪರ್ಯಾಯಾಲೋಚನೆಗೆ ಆಧಾರಗಳಿಲ್ಲ ಎಂಬುದು ಇದರರ್ಥವಲ್ಲ; ಪರಿಸ್ಥಿತಿಯು ಇದಕ್ಕೆ ತದ್ವಿರುದ್ದವಾಗಿದೆ. ಆದರೆ, ಅದರ ಅಭಾವಕ್ಕೆ ಕೆಲವು ನಿರ್ಧಿಷ್ಟ ರೀತಿಯ ಪರ್ಯಾಯಾಲೋಚನೆಗಳ ಅಭಾವವು ಎದ್ದು ಕಾಣುವಂತಿದೆ.

ಇದಕ್ಕೆ ನಿದರ್ಶನವೆಂದರೆ ಸುಪ್ರಸಿದ್ಧವಾಗಿರುವ ‘ಭಾರತದ ಜಾತಿ ವ್ಯವಸ್ಥೆ’. ಭಾರತದ ಸಾಮಾಜಿಕ ರಚನೆಯೆಂದರೆ ‘ಜಾತಿ ವ್ಯವಸ್ಥೆ’ ಎಂಬುದಾಗಿ ನಾವು ಧೃಡೀಕರಿಸಿದ್ದೇವೆ ಮತ್ತು ಪುರುಷ ಸೂಕ್ತ, ಭಗವದ್ಗೀತೆ ಮತ್ತು ಕೆಲವು ಧರ್ಮಶಾಸ್ತ್ರಗಳಲ್ಲಿ ಈ ವ್ಯವಸ್ಥೆಯ ವಿರುದ್ಧ ಉಲ್ಲೇಖವಾಗಿರುವ ಕೆಲವು ವಿವರಣೆಗಳನ್ನು (ಅಥವಾ ಸಮರ್ಥನೆಗಳನ್ನು) ನಾವು ಕಾಣಬಹುದು. ಈ ವ್ಯವಸ್ಥೆಯ ‘ನಿಯಮಗಳನ್ನು’ ಯಾವ ಭಾರತೀಯನೂ ತಿಳಿಸಲು ಸಾಧ್ಯವಿಲ್ಲ, ಆದಾಗ್ಯೂ ಇದರ ಸುತ್ತ ಕೆಲವು ಆಧುನಿಕ ‘ಸಿದ್ಧಾಂತಗಳು’ ಸುತ್ತುತ್ತಿವೆ. ಸಮಾಜಶಾಸ್ತ್ರಜ್ಞರು, ಮಾನವ ಶಾಸ್ತ್ರಜ್ಞರು, ರಾಜಕೀಯ ಸಿದ್ಧಾಂತಿಗಳು ‘ಜಾತಿ ವ್ಯವಸ್ಥೆ’ ಎಂದು ಕರೆಯುವ ಈ ವ್ಯವಸ್ಥೆ ಇದೆಯೇ ಎಂಬುದನ್ನು ಕೂಡ ಖಾತ್ರಿಪಡಿಸಿಕೊಳ್ಳದೆಯೇ ಎಲ್ಲಾ ರೀತಿಯ ವಿವರಣೆಗಳನ್ನು ನೀಡಿದ್ದಾರೆ.

ಬೌದ್ಧಿಕ ಪರ್ಯಾಯಾಲೋಚನೆಯ ಅಭಾವ :

ಈ ಅರ್ಥದಲ್ಲಿ, ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡುವಾಗ ನಾವು ಎರಡು ರೀತಿಯ ವಾಸ್ತವಗಳನ್ನು ಗುರುತಿಸಬಹುದು. ಮೊದಲನೆಯದು, ಈ ಮೇಲಿನ ಅಂಶಗಳು ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯಮಾನಗಳ ಕುರಿತು ಬೌದ್ಧಿಕ ಪರ್ಯಾಯಾಲೋಚನೆಯ ಅಭಾವ ಎದ್ದುಕಾಣುವಂತಿದೆ; ಎರಡನೆಯದು, ಕಳೆದ ಮುನ್ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಯುರೋಪಿಯನ್ನರು ಭಾರತದ ಸಂಸ್ಕೃತಿ ಮತ್ತು ಅದರ ಸಂಪ್ರದಾಯಗಳ ಕುರಿತು ನೀಡಿದ ಚಿತ್ರಣವನ್ನೇ ಭಾರತೀಯ ಬುದ್ಧಿಜೀವಿಗಳು ಪುನರ್ ಸೃಷ್ಟಿಸುತ್ತಿರುವುದು. ಭಾರತವನ್ನು ಅಧ್ಯಯನ ಮಾಡುವಾಗ ಈ ರೀತಿಯ ಪ್ರಶ್ನೆ ಬಂದೇ ಬರುತ್ತದೆ; ಏಕೆ ಈ ರೀತಿಯ ಅಭಾವವೇರ್ಪಟ್ಟಿದೆ? ಬೇರೆಯ ‘ನಕಾರಾತ್ಮಕ ಅಂಶ’ಗಳಿಗೆ ಮೊರೆಹೋಗುವ ಮೂಲಕ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ ಎಂಬುದನ್ನು ಗುರುತಿಸುವ ಅಗತ್ಯತೆ ಇದೆ. ಉದಾಹರಣೆಗೆ ಭಾರತೀಯ ಸಂಸ್ಕೃತಿಯು ‘ವಿಜ್ಞಾನ’ವನ್ನು ಹೊಂದಿಲ್ಲ ಎಂದು ವಾದಿಸುವುದು. ಪ್ರಪಂಚದಲ್ಲಿ ಇಲ್ಲದಿರುವುದನ್ನು ವಿವರಿಸುವ ಸಲುವಾಗಿ ಇರುವುದನ್ನು ಆಧರಿಸುವ ಅಗತ್ಯವಿದೆ.

ಈ ಸಾರ್ವತ್ರಿಕ ಅಂಶವನ್ನು ಸ್ವಲ್ಪ ಹೆಚ್ಚು ಸ್ಪಷ್ಟವಾದ ರೀತಿಯಲ್ಲಿ ಇಡುತ್ತೇನೆ. ಸಾಮಾನ್ಯವಾಗಿ ಪಾಶ್ಚಾತ್ಯರು ಕೇಳುವ ಪ್ರಶ್ನೆಗಳನ್ನು ಗಮನಿಸಿ: ಏಕೆ ಹಿಂದೂಗಳು ಕುಂಕುಮವನ್ನು ಇಡುತ್ತಾರೆ? ಏಕೆ ಭಾರತೀಯರು ದನದ ಮಾಂಸವನ್ನು ತಿನ್ನುವುದಿಲ್ಲ? ಬಹುತೇಕ ಭಾರತೀಯರು ಲಿಂಗವನ್ನು ಪೂಜಿಸುವುದು ನಿಜವೇ? ಜಾತಿ ವ್ಯವಸ್ಥೆಯ ಬಗೆಗೆ ಭಾರತೀಯರು ಏನೆಂದುಕೊಂಡಿದ್ದಾರೆ? ‘ಸತಿ’ ಆಚರಣೆಯನ್ನು ಈಗಲೂ ಅವರು ಆಚರಿಸುತ್ತಾರೆಯೆ? ಭಾರತೀಯ ದೇವತೆಗಳು ಆರು ಅಥವಾ ಏಂಟು ಕೈಗಳನ್ನು ಏಕೆ ಹೊಂದಿರುತ್ತವೆ? ಹಿಂದೂ ರಿಲಿಜನ್ನಿನ ಚಿಹ್ನೆ ಯಾವುದು? ಎಲ್ಲಾ ಭಾರತೀಯರು ದೇವಸ್ಥಾನಗಳಲ್ಲಿ ವಿಗ್ರಹಗಳನ್ನು ಪೂಜಿಸುತ್ತಾರೆಯೇ? ಬೌದ್ದರು ಗಾಡ್ನನ್ನು ನಂಬುತ್ತಾರೆಯೇ? ಇನ್ನು ಮುಂತಾದವುಗಳು.

ಭಾರತೀಯರು ತಮ್ಮ ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಈ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂಬುದನ್ನು ಗಮನಿಸಿ. ಏಕೆ ಅಲ್ಲಿ ಈ ಪ್ರಶ್ನೆಗಳು ಏಳುವುದಿಲ್ಲ? ಅಂದರೆ, ಭಾರತದಲ್ಲಿ ದನದ ಮಾಂಸ ತಿನ್ನುವುದು, ಬಿಂದಿ ಇಡುವುದು, ಶಿವಲಿಂಗವನ್ನು ಪೂಜಿಸುವಂತಹ ಕ್ರಿಯೆಗಳ ಕುರಿತು ಏಕೆ ಪ್ರಶ್ನೆಗಳನ್ನು ಕೇಳುವುದಿಲ್ಲ? ಇಂಥ ಆಚರಣೆಗಳ ಮೇಲೆ ಬೃಹತ್ ಗ್ರಂಥಗಳನ್ನು ರಚಿಸುವುದು ಅತ್ಯಂತ ಮುಖ್ಯವಾದುದು ಎಂದು ಜನರಿಗೇಕೆ ಅನ್ನಿಸಿಲ್ಲ? ಈ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿದೆ ಎಂಬ ಕಾರಣಕ್ಕಂತೂ ಖಂಡಿತಾ ಅಲ್ಲ: ಅವರಿಗೆ ಗೊತ್ತಿದ್ದಿದ್ದೇ ಆದರೆ ಅದೇ ಉತ್ತರಗಳನ್ನು ಪಶ್ಚಿಮದ ಸಂಭಾಷಣಕಾರನಿಗೆ ನೀಡಲು ಯಾವ ಸಮಸ್ಯೆಯೂ ಇರಬಾರದಿತ್ತು. ಇಲ್ಲಿ ಸರಳವಾದ ಆದರೆ ಬಹುಮುಖ್ಯವಾದ ಉತ್ತರವಿದೆ: ತಮ್ಮ ಸಂಪ್ರದಾಯಗಳ ಕುರಿತು ಬಹುತೇಕ ಭಾರತೀಯರಿಗೆ ಈ ರೀತಿಯ ಪ್ರಶ್ನೆಗಳನ್ನು ಎತ್ತುವ ಸಂದರ್ಭವೇ ಉದ್ಭವಿಸುವುದಿಲ್ಲ. ಅವರಿಗೆ ಪಾಶ್ಚಾತ್ಯ ಸಂಸ್ಕೃತಿಯ ಜನರಿಗಿಂತ ಕಡಿಮೆ ಕುತೂಹಲವಿದೆ ಅಥವಾ ಅವರು ಕಡಿಮೆ ಬುದ್ಧಿವಂತರು ಹಾಗಾಗಿ ಅವರಿಗೆ ಈ ಸಂದರ್ಭ ಉದ್ಭವಿಸುವುದಿಲ್ಲವೆಂದಲ್ಲ. ಬದಲಾಗಿ ಅವರ ಸಾಂಸ್ಕೃತಿಕ ವಲಯದಲ್ಲಿ ಈ ರೀತಿಯ ಪ್ರಶ್ನೆಗಳು ಅರ್ಥವೇ ಆಗುವುದಿಲ್ಲ. ಅಂದರೆ, ಅವರು ತಮ್ಮ ಸಂಪ್ರದಾಯದ ಕುರಿತು ಈ ರೀತಿಯ ಪ್ರಶ್ನೆಗಳನ್ನು ಕೇಳಬಾರದು ಎಂಬುದನ್ನು ಕಲಿತಿದ್ದಾರೆ, ಏಕೆಂದರೆ ಅವರು ಭಾರತೀಯ ಸಂಪ್ರದಾಯಗಳ ಜೊತೆಗೆ ವ್ಯವಹರಿಸುವುದನ್ನು ಕಲಿಯುತ್ತಿರುತ್ತಾರೆ. ಅವರು ಈ ರೀತಿಯ ಪ್ರಶ್ನೆಗಳನ್ನು ಎತ್ತುವುದಿಲ್ಲವೆಂದು ಹೇಳಿದರೆ ಖಂಡಿತವಾಗಿ ಅವರು ತಮ್ಮ ಜೀವನದ ಯಾವ ಸಂದರ್ಭದಲ್ಲಿಯೂ ಇಂತಹ ಪ್ರಶ್ನೆಗಳನ್ನು ಕೇಳುವುದೇ ಇಲ್ಲ ಎಂದಲ್ಲ; ಉದಾಹರಣೆಗೆ, ಈ ರೀತಿಯ ಹಲವಾರು ಪ್ರಶ್ನೆಗಳನ್ನು ಮಕ್ಕಳು ಕೇಳಿರಬಹುದು ಮತ್ತು ಉತ್ತರಗಳು ಅವರಿಗೆ ತೃಪ್ತಿಯನ್ನೂ ನೀಡಿರಬಹುದು. ಅಂತಹ ಉತ್ತರಗಳು ಅವರ ತಲೆತಲಾಂತರದ ಆಚರಣೆಗಳ ಸ್ವರೂಪವನ್ನು ತಿಳಿಸುತ್ತವೆ.

ಭಾರತೀಯರು ಇಂತಹ ಪ್ರಶ್ನೆಗಳನ್ನು ಪಶ್ಚಿಮದಲ್ಲಿ ಎದುರಿಸಿದಾಗ ಎರಡು ಘಟನೆಗಳು ಸಂಭವಿಸುತ್ತವೆ; (1) ಅವರು ಉತ್ತರ ಕೊಡಲೇಬೇಕೆಂಬ ಒತ್ತಡವನ್ನು ಅನುಭವಿಸುತ್ತಾರೆ; (2) ಪಾಶ್ಚಾತ್ಯರಿಂದ ಈ ಮೊದಲೇ ನೀಡಲ್ಪಟ್ಟಿರುವ ಉತ್ತರಗಳಿಗೆ ಅವರ ಉತ್ತರಗಳು ತುಂಬಾ ಹತ್ತಿರ ಇರುತ್ತವೆ. ಆದ್ದರಿಂದ ಭಾರತೀಯ ಸಂಪ್ರದಾಯವನ್ನು ಆಚರಿಸುವವರಿಗೆ ಈ ರೀತಿಯ ಪ್ರಶ್ನೆಗಳನ್ನು ಕೇಳಿದಾಗ ಭಾರತೀಯರಿಗೆ ಆ ಪ್ರಶ್ನೆಗಳು ಅರ್ಥವಾಗುವವು ಎಂಬುದಾಗಿ ಭಾವಿಸಿಕೊಳ್ಳಬಾರದು; ಅವುಗಳು ಅವರಿಗೆ ಅರ್ಥವಾಗುವುದಿಲ್ಲ. ಇಂತಹ ಕೆಲವು ಪ್ರಶ್ನೆಗಳನ್ನು ಎತ್ತುವಂತೆ ಪಾಶ್ಚಿಮಾತ್ಯ ಸಂಸ್ಕೃತಿಯ ಸ್ವರೂಪವೇ ಪ್ರೇರೇಪಿಸುತ್ತದೆ. ಇದಕ್ಕೂ ಹೆಚ್ಚಾಗಿ ಈ ರೀತಿಯ ಪ್ರಶ್ನೆಗಳು ಅವುಗಳಿಗೆ ಸಮ್ಮತವಾದ ಉತ್ತರಗಳ ರೂಪುರೇಷೆಗಳನ್ನೂ ನಿರ್ಧರಿಸುತ್ತವೆ.

ನನ್ನ ವಾದದ ಪ್ರಮುಖವಾದ ಒಂದು ಪರಿಣಾಮವೆಂದರೆ; ಭಾರತೀಯರಿಗೆ ಅವರ ಸಂಪ್ರದಾಯಗಳ ಸ್ವರೂಪದ ಕುರಿತು ಪ್ರಶ್ನಿಸುತ್ತಿರುವಾಗ ಪಾಶ್ಚಾತ್ಯ ಸಂಸ್ಕೃತಿಯು ತನ್ನ ಕುರಿತೇ ನಮಗೆ ತಿಳಿಸುತ್ತಿರುತ್ತದೆ. ಭಾರತ ಸಂಪ್ರದಾಯದ ಕುರಿತು ಪಾಶ್ಚಾತ್ಯ ಸಂಭಾಷಣಾಕಾರನು ಎತ್ತುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಒಬ್ಬನು ಪಾಶ್ಚಾತ್ಯ ಸಂಸ್ಕೃತಿಯ ಸ್ವರೂಪವನ್ನು ಅರ್ಥಮಾಡಿಕೊಂಡಿರಬೇಕು. ಸರಳವಾಗಿ ಹೇಳುವುದಾದರೆ; ಭಾರತದ ಸಂಪ್ರದಾಯದ ಕುರಿತಾದ ಪ್ರಶ್ನೆಗಳನ್ನು ಉತ್ತರಿಸುವುದಕ್ಕಾಗಲಿ ಅಥವಾ ಅರ್ಥಮಾಡಿಕ್ಕೊಳ್ಳಲಿಕ್ಕಾಗಲಿ ಒಬ್ಬನು ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲೇಬೇಕು.

ಸಂಸ್ಕೃತಿಗಳ ನಡುವಿನ ಅಸಮತೋಲನ:

ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಒಂದು ಅಸಮತೋಲನವನ್ನು ಎದುರಿಸುತ್ತೇವೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕಾದರೆ ಮತ್ತು ಅರ್ಥಮಾಡಿಕೊಳ್ಳಬೇಕಾದರೆ, ಇದು ಅನ್ಯರ ಬಗ್ಗೆ ಏನು ಹೇಳುತ್ತದೆ ಮತ್ತು ತನ್ನ ಕುರಿತು ಏನು ಹೇಳಿಕೊಳ್ಳುತ್ತದೆ ಎನ್ನುವುದನ್ನು ನಾವು ಅಧ್ಯಯನ ಮಾಡಬೇಕು. ಹಾಗೆಯೇ, ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕಾದರೂ ನಾವು ಅದನ್ನೇ ಮಾಡಬೇಕು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಪಶ್ಚಿಮವನ್ನು ಅರ್ಥಮಾಡಿಕೊಳ್ಳಲು ಪಶ್ಚಿಮವು ತನ್ನ ಮತ್ತು ಅನ್ಯರ ಕುರಿತು ನೀಡಿರುವ ಚಿತ್ರಣಗಳನ್ನು ಹೋಲಿಕೆ ಮಾಡಬೇಕು; ಭಾರತವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ಭಾರತವು ಏಕೆ ಪಾಶ್ಚಿಮಾತ್ಯ ರೀತಿಯಲ್ಲಿ ಇಲ್ಲ (ಮತ್ತು ಯಾವ ಆರ್ಥದಲ್ಲಿ) ಎಂಬ ಪ್ರಶ್ನೆಯಿಂದ ಪ್ರಾರಂಭಿಸಬೇಕು. ಭಾರತವು ತನ್ನ ಬಗ್ಗೆ ಏನು ಹೇಳುತ್ತದೆ ಮತ್ತು ಭೇಟಿಮಾಡದ ಅನ್ಯರ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಅಧ್ಯಯನ ಮಾಡಬೇಕೆಂಬ ನಮ್ಮ ನಿರೀಕ್ಷೆಯು ಇನ್ನೂ ಈಡೇರಿಲ್ಲ. ನಾವು ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ‘ಎಂಪಿರಿಕಲ್’ ಮತ್ತು/ಅಥವಾ ‘ಗ್ರಾಂಥಿಕ’ ಎಂದು ಕರೆಯಬಹುದಾದ ಅಧ್ಯಯನಗಳಿಂದ ಸುಮ್ಮನೆ ಮುಂದುವರಿಯಲು ಸಾಧ್ಯವಿಲ್ಲ, ಏಕೆಂದರೆ, ಈ ಪ್ರಕ್ರಿಯೆಯಲ್ಲಿ, ನಾವು ಭಾರತದ ಕುರಿತಾದ ಪಾಶ್ಚಾತ್ಯ ಚಿತ್ರಣಗಳಿಗೆ ಹೆಚ್ಚೇನಾದರೂ ಸೇರಿಸುತ್ತೇವೆಯೇ ಹೊರತು ಭಾರತೀಯ ಸಂಸ್ಕೃತಿಯ ಬಗೆಗಿನ ಹೊಸ ಅರ್ಥಗ್ರಹಿಕೆಯನ್ನಲ್ಲ.

ಇಂತಹ ಅಸಮತೋಲನ ಏಕಿದೆ? ಇದು ವಸಾಹತುಶಾಹಿಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಷಯ ಕೂಡಾ ಆಗಿದೆ; ಅಧಿಕಾರ ಮತ್ತು ಹಿಂಸೆಯನ್ನು ಬಳಸಿಕೊಳ್ಳುವುದರ ಮೂಲಕ ಮನುಷ್ಯರ ಸ್ವಭಾವ ಮತ್ತು ಸಮಾಜಗಳ ಸ್ವರೂಪವನ್ನು ತಿಳಿಯುವ ಚೌಕಟ್ಟನ್ನು ಸ್ಥಾಪಿಸುವುದು ವಸಾಹತುಶಾಹಿಯಾಗಿದೆ. (ಎಸ್. ಎನ್. ಬಾಲಗಂಗಾಧರ 2008, ಇನ್ನೂ ಮುಂತಾದವರು). ಒಮ್ಮೆ ಹುಟ್ಟುಹಾಕಿ ಸಾರ್ವತ್ರಿಕಗೊಳಿಸಿದ ಮೇಲೆ, ಅಂತಹ ಚೌಕಟ್ಟುಗಳು ಮನುಷ್ಯನ ಜ್ಞಾನ ಮಾರ್ಗವನ್ನು ಬಿಟ್ಟು ಇತರ ಮಾಧ್ಯಮಗಳ ಮೂಲಕ ಮಾನ್ಯತೆ ಪಡೆಯುತ್ತ ಮುಂದುವರಿಯುತ್ತವೆ. ಇಂದು ಈ ಸಮರ್ಥಿಸುವ ಪ್ರಕ್ರಿಯೆಯು ಒಂದು ಮನೋಭಾವನೆಯಾಗಿ ದೈವತ್ವದ ಸ್ವರೂಪವನ್ನು ಪಡೆದಿದೆ ಎಂದು ನನಗೆ ಕಾಣಿಸುತ್ತದೆ. ಇದು ಮಾನವೀಯ ಮತ್ತು ಜ್ಞಾನಸಂಬಂಧೀ ಮಿತಿಗಳಿಂದಾಗಿ ಸಾಂಸ್ಕೃತಿಕ ಮತ್ತು ಸಮಾಜ ವಿಜ್ಞಾನಗಳು ಮನುಷ್ಯನಿಗೆ ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ಹೋಗಿದೆ. ಇಂತಹ ಧೋರಣೆಗೆ ನಿರಂತರವಾದ ‘ಅವೈಜ್ಞಾನಿಕ’ ಮನೋಭಾವನೆಯು ಹುಲ್ಲು ನೀರುಹಾಕಿ ಪೋಷಿಸುತ್ತಿದೆ ಎಂದು ಮತ್ತೊಮ್ಮೆ ಹೇಳಬೇಕಿಲ್ಲ.

ಸಂಸ್ಕೃತಿಗಳ ವಿಜ್ಞಾನವನ್ನು ಭೌತಶಾಸ್ತ್ರ ಅಥವಾ ಜೀವಶಾಸ್ತ್ರಗಳಂತೆಯೇ ವೈಜ್ಞಾನಿಕವಾದ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವೆಂದು ನಾನು ನಂಬುತ್ತೇನೆ. ಆದಾಗ್ಯೂ, ನಮ್ಮ ದಾರಿಯು ತುಲನಾತ್ಮಕ ಸ್ವರೂಪದ್ದು ಎಂದು ತಿಳಿದುಕೊಳ್ಳದ ಹೊರತು ಅದನ್ನು ನಾವು ಸಾಧಿಸಲು ಸಾಧ್ಯವಿಲ್ಲ; ಪಶ್ಚಿಮವನ್ನು ತುಲನಾತ್ಮಕವಾಗಿ ಅಭ್ಯಸಿಸಬೇಕು ಮತ್ತು ಅನ್ಯ ಸಂಸ್ಕೃತಿಗಳ ವ್ಯತ್ಯಾಸಗಳ ವಿಶಿಷ್ಟತೆಯನ್ನು ಪಶ್ಚಿಮದಿಂದ ಬೇರ್ಪಡಿಸಿ ಅಧ್ಯಯನ ಮಾಡಬೇಕು. ಅವುಗಳೆರಡೂ ಭಿನ್ನ ರೀತಿಯ ಹೋಲಿಕೆಗಳಾಗಿರುತ್ತವೆ, ಆದರೆ ಅವುಗಳು ನಮ್ಮಲ್ಲಿ ಯಾವ ಕೊರತೆ ಇದೆಯೋ ಹಾಗೂ ನಮಗೆ ಯಾವುದು ಅತ್ಯವಶ್ಯಕವಾಗಿದೆಯೋ ಅದನ್ನೇ ನೀಡುತ್ತವೆ. ಅಂದರೆ ಮಾನವರ, ಅವರ ಸಮಾಜಗಳ ಮತ್ತು ಸಂಸ್ಕೃತಿಗಳ ಜ್ಞಾನವನ್ನು ನೀಡುತ್ತದೆ.

ಆಧಾರ ಗ್ರಂಥಗಳು:

ಎಸ್. ಎನ್., ಬಾಲಗಂಗಾಧರ. 1994. ‘ದಿ ಹೀದನ್ ಇನ್ ಹಿಸ್ ಬ್ಲೈಂಡ್ನೆಸ್…’: ಏಷ್ಯಾ, ದಿ ವೆಸ್ಟ್, ಅಂಡ್ ದಿ ಡೈನಾಮಿಕ್ ಆಫ್ ರಿಲಿಜನ್. ಲೆಯ್ಡನ್: ಇ. ಜೆ. ಬ್ರಿಲ್. ಸೆಕೆಂಡ್ ಎಡಿಶನ್, ನ್ಯೂ ಡೆಲ್ಲಿ: ಮನೋಹರ್, 2005.
ಎಸ್. ಎನ್., ಬಾಲಗಂಗಾಧರ, ಎಸ್ತರ್ ಬ್ಲಾಕ್ ಮತ್ತು ಜೇಕಬ್ ಡಿ ರೂವರ್, 2008, ರಿಥಿಂಕಿಂಗ್ ಕಲೋನಿಯಲಿಸಂ ಅಂಡ್ ಕಲೋನಿಯಲ್ ಕಾನ್ಷಿಯಸ್ನೆಸ್ ಇನ್ ಸುರೇಶ್ ರಾವಲ್ (ಸಂ), ರಿಥಿಂಕಿಂಗ್ ಫಾರ್ಮ್ಸ್ ಆಫ್ ನಾಲೆಡ್ಜ್ ಇನ್ ಇಂಡಿಯ. ಡೆಲ್ಲಿ: ಪೆನ್ಕ್ರಾಫ್ಟ್ ಇಂಟರ್ನ್ಯಾಷನಲ್.

ವಿ.ಸೂ.: ಈ ಅನುವಾದಿತ ಲೇಖನದ ಮೂಲ ಇಂಗ್ಲೀಷ್ ಲೇಖನದ ಪ್ರಕಟಣೆ- Balagangadhara, S. N. 2008. “Comparing India and the West”. In ASIANetwork Exchange. Vol. XVI, 1: 57-63.
Centre for the Study of Local Cultures (CSLC),  ಕುವೆಂಪು ವಿ.ವಿ., ಇವರು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೂರು ಕಾರ್ಯಾಗಾರಗಳಲ್ಲಿನ ತರಗತಿಗಳು ಮತ್ತು ಚರ್ಚೆಗಳ ಸಹಾಯದಿಂದಾಗಿ ಈ ಲೇಖನವನ್ನು ಅನುವಾದಿಸಲಾಗಿದೆ. ಸಂಶೋಧನಾ ವಿಧಾನಗಳ ಕುರಿತ ಈ ಕಾರ್ಯಾಗಾಗಳ ಪ್ರಾಯೋಜಕರಾದ ಸರ್ ರತನ್ ಟಾಟ ಟ್ರಸ್ಟ್ (Sir Ratan Tata Trust) ಮತ್ತು ಆಯೋಜಕರಾದ CSLCಗೆ ನಮ್ಮ ಧನ್ಯವಾದಗಳು

Advertisements
 1. RR
  ಮಾರ್ಚ್ 12, 2010 ರಲ್ಲಿ 10:53 ಫೂರ್ವಾಹ್ನ

  That is a nice translation. Good work. Keep it up!

  Like

 2. ಮಾರ್ಚ್ 27, 2010 ರಲ್ಲಿ 3:15 ಅಪರಾಹ್ನ

  Dear RR,
  thanks for your encouragement…but i’m looking forward to your response on the theme of the article…

  cslcku

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: