ಮುಖ ಪುಟ > Cultural Studies, Culture, Dharma, Hindu, Religion > ಹಿಂದುತ್ವ ಸಂಘಟನೆಗಳಿಗೊಂದು ಪ್ರೇಮಪಾಠ…!

ಹಿಂದುತ್ವ ಸಂಘಟನೆಗಳಿಗೊಂದು ಪ್ರೇಮಪಾಠ…!

– ಪ್ರವೀಣ್ ಮತ್ತು ಸಂತೋಷ್ ಕುಮಾರ್

ಇತ್ತೀಚೆಗಷ್ಟೆ ಪ್ರಮೋದ್ ಮುತಾಲಿಕ್ರವರ ಮುಖಕ್ಕೆ ಮಸಿ ಬಳಿದಿರುವ ಸಂಗತಿ ಎಲ್ಲರಿಗೂ ನೆನಪಿರಬಹುದು. ಇದಕ್ಕೆ ನಿಜವಾದ ಕಾರಣವೇನೆಂಬುದು ತಿಳಿಯದಿದ್ದರೂ, ಮುತಾಲಿಕರ ನೇತೃತ್ವದಲ್ಲಿ ಶ್ರೀರಾಮ ಸೇನೆಯು ಕಳೆದ ಕೆಲವು ವರ್ಷಗಳಿಂದ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಬಾರದು ಎಂಬ ನಿಷೇಧವನ್ನು ಹೇರಲು ಮುಂದಾಗಿರುವುದಕ್ಕೆ ಪ್ರತಿರೋಧ ಎಂದು ಬಿಂಬಿಸಲಾಗಿದೆ. ಈ ಲೇಖನದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಮಾಡುವುದು ಸರಿಯೋ ಅಥವಾ ತಪ್ಪೋ ಎನ್ನುವ ವಿಚಾರಗಳನ್ನು ಚರ್ಚೆ ಎತ್ತಿಕೊಳ್ಳದೇ, ಈ ಸಂಘಟನೆಗಳು ನಿಷೇಧಕ್ಕೆ ನೀಡುತ್ತಿರುವ ಕಾರಣಗಳು ಸಮಂಜಸವಾದವುಗಳೇ? ಎಂಬುದನ್ನು ಪ್ರಶ್ನಿಸುವ ಮೂಲಕ, ಈ ಸಂಘಟನೆಗಳ ದ್ಯೇಯೋದ್ದೇಶಗಳಲ್ಲಿನ ಮೂಲಭೂತವಾದ ತೊಡಕುಗಳನ್ನು ಗುರುತಿಸುವ ಒಂದು ಚಿಕ್ಕ ಪ್ರಯತ್ನವನ್ನು ಮಾಡಲಿದ್ದೇವೆ. ಅದಕ್ಕೂ ಮುಂಚೆ ಸ್ಪಷ್ಟಪಡಿಸಬೇಕಿರುವ ವಿಚಾರವೆಂದರೆ, ಈ ಶ್ರೀರಾಮ ಸೇನೆಯೆಂಬುದು ಆರ್.ಎಸ್.ಎಸ್ ನ ಅಂಗ ಸಂಸ್ಥೆಯಂತಿದ್ದು, ಅವುಗಳು ಸಾಮಾನ್ಯವಾದ ಕೆಲವು ದ್ಯೇಯೋದ್ದೇಶಗಳ ಈಡೇರಿಕೆಯ ಉದ್ದೇಶವನ್ನು ಹೊಂದಿರುವುದು ಸರ್ವರಿಗೂ ತಿಳಿದ ವಿಚಾರವೇ. ಅವುಗಳ ಮೂಲ ದ್ಯೇಯ ಹಿಂದುತ್ವ ಪ್ರತಿಪಾದನೆಯಾಗಿರುವುದರಿಂದ ನಾವು ಈ ಲೇಖನದಲ್ಲಿ ಅವುಗಳನ್ನು (ಶ್ರೀರಾಮ ಸೇನೆ, ಆರ್. ಎಸ್. ಎಸ್, ಮತ್ತು ವಿ. ಹೆಚ್. ಪಿ ಮುಂತಾದವುಗಳು) ಒಟ್ಟಾರೆಯಾಗಿ ಹಿಂದುತ್ವ ಸಂಘಟನೆಗಳೆಂದು ಕರೆಯುತ್ತಿದ್ದೇವೆ.

ಈ ಸಂಘಟನೆಗಳು ಮಾಡುವ ಬಹುತೇಕ ಕಾರ್ಯ ಕ್ರಮಗಳಿಗೆ ಪ್ರತಿರೋಧ ಎದುರಾಗಿರುವುದನ್ನು ಗಮನಿಸುತ್ತೇವೆ. ಉದಾಹರಣೆಗೆ, ದೆಹಲಿಯಲ್ಲಿ ಹುಸೇನರ ಕಲಾಕೃತಿಗಳನ್ನು ನಿಷೇಧಿಸಬೇಕೆಂದಾಗ, ಮಂಗಳೂರಿನಲ್ಲಿ ಪಬ್ ಮೇಲೆ ದಾಳಿಯನ್ನು ನಡೆಸಿದಾಗ ಬಂದಂತಹ ಪ್ರತಿರೋಧಗಳು. ಇಂತಹ ಪ್ರತಿರೋಧಗಳು ಏಕೆ ಎದುರಾಗುತ್ತವೆ? ಅದಕ್ಕೆ ಕೆಲವೊಂದು ಕಾರಣಗಳನ್ನು ಪಟ್ಟಿ ಮಾಡಬಹುದು. ಒಂದು, ರಾಜಕೀಯ ಕಾರಣಗಳಿಗಾಗಿ ಈ ರೀತಿಯ ಪ್ರತಿರೋಧಗಳನ್ನು ವಿರೋಧಿ ಸಂಘಟನೆಗಳು ಅಥವಾ ಪಕ್ಷಗಳು ಒಡ್ಡುತ್ತಿವೆ ಎಂದು ಹೇಳಬಹುದು. ಕೇವಲ ಈ ಕಾರಣಕ್ಕಾಗಿಯೇ ಮೇಲೆ ಗುರುತಿಸಿದ ಪ್ರತಿರೋಧಗಳಾದರೆ ಅದು ಸರ್ವ ಸಾಮಾನ್ಯ ಇದರಲ್ಲಿ ಏನೂ ವಿಶೇಷವಿಲ್ಲ ಎಂಬ ತಿರ್ಮಾನನಕ್ಕೆ ಬರಬಹುದಷ್ಟೆ. ಎರಡು, ನಮ್ಮ ಸಂಸ್ಕೃತಿಯಲ್ಲಿ ಯಾವ ಆಚರಣೆ ನಡೆಯಬೇಕು ಯಾವುದು ನಡೆಯಬಾರದು ಎಂಬುದನ್ನು ತಿರ್ಮಾನಿಸಲು ಈ ಸಂಘಟನೆಗಳಿಗೇನು ಅಧಿಕಾರವಿದೆ ಎಂದಾಗಿರಬಹುದು. ಇದು ಸ್ವಲ್ಪ ಆಸಕ್ತಿದಾಯಕವಾಗಿದೆ, ಏಕೆಂದರೆ ಈ ಅಂಶವು ಸಂಘಟನೆಯ ತಾತ್ವಿಕ ಸ್ವರೂಪ ಹಾಗೂ ನಮ್ಮ ಸಂಸ್ಕೃತಿಯ ಸತ್ವವನ್ನು ಅರ್ಥಮಾಡಿಕೊಳ್ಳಲು ಉಪಯುಕ್ತವಾಗಬಹುದು ಎಂಬ ಊಹೆಯೊಂದಿಗೆ ಮುಂದುವರಿಯುತ್ತೇವೆ.

ಪ್ರೇಮಿಗಳ ದಿನಾಚರಣೆಯನ್ನು ನಿಷೇಧಿಸಲೇಬೇಕೆಂದು ಪಣತೊಟ್ಟಿರುವುದಕ್ಕೆ ಅವರು ನೀಡುತ್ತಿರುವ ಮುಖ್ಯ ಕಾರಣವಾದರೂ ಯಾವುದು? ಆ ಕಾರಣ ಈ ರೀತಿಯಾಗಿದೆ; ಪ್ರೇಮಿಗಳ ದಿನಾಚರಣೆ ಎಂಬುದು ಪಾಶ್ಚಾತ್ಯ ಸಂಸ್ಕೃತಿಯಿಂದ ಆಮದಾಗಿದ್ದು, ಇಂತಹ ಪಾಶ್ಚಾತ್ಯ ಆಚರಣೆಗಳು ಭಾರತೀಯ ಜೀವನ ಶೈಲಿಗೆ ಹೊಂದಿಕೆಯಾಗುವ ಬದಲಾಗಿ ನಮ್ಮ ಸಂಸ್ಕೃತಿಯ ವಿನಾಶಕ್ಕೆ ನಾಂದಿಹಾಡುತ್ತವೆ.

ಪ್ರೇಮಿಗಳ ದಿನ ಎಂಬುದು ಪಾಶ್ಚಾತ್ಯರ ಜೀವನ ಶೈಲಿ, ಅದು ಇತ್ತೀಚೆಗೆ ಭಾರತದಲ್ಲಿಯೂ ಆಚರಣೆಗೆ ಬಂದಿತೆಂಬುದನ್ನು ಒಪ್ಪಿಕೊಳ್ಳೋಣ. ಆದರೆ ಇದು ಪಾಶ್ಚಾತ್ಯರದ್ದು ಎಂಬ ಕಾರಣಕ್ಕೆ ವಿರೋಧಿಸಬೇಕೆಂಬುದನ್ನು ಯಾರು ಸಹಾ ಒಪ್ಪಲು ಸಾಧ್ಯವಿಲ್ಲ. ಅದನ್ನು ಈ ಸಂಘಟನೆಗಳೂ ಸಹಾ ಹೇಳುತ್ತಿಲ್ಲ ಎಂದೇ ಭಾವಿಸುತ್ತೇವೆ. ಆದರೆ ಈ ಆಚರಣೆಗಳು ಭಾರತೀಯ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ, ಬದಲಾಗಿ ನಮ್ಮ ಸಂಸ್ಕೃತಿ-ಸಂಪ್ರದಾಯಗಳು ವಿನಾಶ ಮಾಡುತ್ತವೆ ಎಂಬುದನ್ನು ಮುಖ್ಯವಾಗಿ ಪರಿಗಣಿಸುವುದಾದರೆ, ಅವುಗಳು ಈ ಆಚರಣೆಯು ಹೇಗೆ ವಿನಾಶಕ್ಕೆ ಎಡೆಮಾಡಿಕೊಡುತ್ತವೆ ಎಂಬುದನ್ನು ಎಲ್ಲೂ ಸಹ ಸ್ಪಷ್ಟವಾಗಿ ತಿಳಿಸಿರುವುದು ಕಂಡುಬಂದಿಲ್ಲ. ಆದರೂ ನಾವು ಕೆಲವು ಊಹೆಗಳನ್ನು ಮಾಡಬಹುದು; ಈ ರೀತಿಯ ಪಾಶ್ಚಾತ್ಯ ಆಚರಣೆಗಳು ಪಬ್, ಡೇಟಿಂಗ್ ಎಂಬ ಹೊಸರೀತಿಯ ಜೀವನ ಪದ್ಧತಿಗಳನ್ನು ಪರಿಚಯಿಸುವ ಮೂಲಕ ‘ಅನೈತಿಕ ಚಟುವಟಿಕೆ’ಗಳಿಗೆ ಎಡೆಮಾಡಿಕೊಡುತ್ತವೆ. ಆದರೆ ಇಲ್ಲಿ ನಾವು ಈ ಹೊಸ ರೀತಿಯ ಜೀವನ ಶೈಲಿಯು ನೈತಿಕವೋ ಅನೈತಿಕವೋ ಎಂಬ ತತ್ವಶಾಸ್ತ್ರ್ರೀಯ ಜಿಜ್ಞಾಸೆಯಲ್ಲಿ ತೊಡಗದೇ ಅದು ನಮ್ಮ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ ಎಂಬ ಅವರ ವಾದವನ್ನು ಚರ್ಚೆ ಎತ್ತಿಕೊಳ್ಳುತ್ತೇವೆ. ಅವರ ಈ ಕಾರಣವು ಮೇಲ್ನೋಟಕ್ಕೆ ಈ ಸಂಘಟನೆಗಳನ್ನು ‘ಭಾರತೀಯ ಸಂಸ್ಕೃತಿಯ ರಕ್ಷಕ’ರೆಂಬಂತೆ ಬಿಂಬಿಸುತ್ತವೆ. ಆದರೆಎ ಈ ಸಂಘಟನೆಗಳ ದ್ಯೇಯೋದ್ದೇಶಗಳ ಮೇಲೆ ಮತ್ತು ಭಾರತೀಯ ಸಾಮಾನ್ಯ ಜನರ ಜೀವನ ಪದ್ಧತಿಗಳ ಮೇಲೆ ಸೂಕ್ಷ್ಮವಾದ ದೃಷ್ಟಿಯನ್ನು ಬೀರಿದರೆ ಮೇಲಿನ ನಿರ್ಣಯಕ್ಕೆ ಸಂಪೂರ್ಣ ವ್ಯತಿರಿಕ್ತವಾದ ತಿರ್ಮಾನ ಬರಬೇಕಾಗುತ್ತದೆ. ಅದನ್ನು ಈ ರೀತಿಯಾಗಿ ಸೂಚಿಸಬಹುದು; ಈ ಸಂಘಟನೆಗಳು ಭಾರತದ ಸಂಸ್ಕೃತಿಗೆ ಹೊಂದಿಕೆಯಾಗದಿರುವ ಪಾಶ್ಚಾತ್ಯ ಸಂಸ್ಕೃತಿಯ  ರಿಲಿಜನ್ನಿನ (ಥಿಯಾಲಜಿಯ) ಚೌಕಟ್ಟನ್ನು ಭಾರತೀಯರ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆ. ಈ ಮೂಲಕ ಸಂಘಟನೆಗಳು ಭಾರತೀಯ ಸಂಸ್ಕೃತಿಯನ್ನು (ಸ್ವಂತಿಕೆಯನ್ನು) ನಾಶಮಾಡುತ್ತಿದ್ದಾವೆ. ಈ ಅರ್ಥದಲ್ಲಿ ಅವುಗಳು ನಮ್ಮ ಸಂಸ್ಕೃತಿಯನ್ನು ರಕ್ಷಿಸುವುದಿರಲಿ ಕನಿಷ್ಟ ಪಕ್ಷ ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿಯೂ ವಿಫಲವಾಗಿವೆ.

ಹಿಂದುತ್ವದ ನಿಲುವು :

ಈ ಮೇಲೆ ಗುರುತಿಸಲಾಗಿರುವ ಅಂಶಗಳನ್ನು ವಿಸ್ತಾರವಾಗಿ ಪರೀಕ್ಷಿಸೋಣ. ಈ ಕಾರ್ಯವನ್ನು ನಿರ್ವಹಿಸಲು ಮೊದಲಿಗೆ ಈ ಸಂಘಟನೆಗಳ ಸಾಮಾನ್ಯವಾದ ಮೂಲ ದ್ಯೇಯೋದ್ದೇಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅವಶ್ಯಕತೆ ಇದೆ. ಅವುಗಳ ದ್ಯೇಯೋದ್ದೇಶಗಳನ್ನು ಸರಳವಾಗಿ ಈ ರೀತಿಯಲ್ಲಿ ಇಡಬಹುದು; ಭಾರತದಲ್ಲಿ ಅಖಂಡ ಹಿಂದೂ ರಾಷ್ಟ್ರ್ರದ ನಿರ್ಮಾಣ. ಅಂದರೆ ಭಾರತದಲ್ಲಿ ಹಿಂದುತ್ವದ ಪ್ರತಿಪಾದನೆ. ಈ ಹಿಂದುತ್ವ ಪರಿಕಲ್ಪನೆಯ ಮೂಲಕ ಅವರು ಪ್ರತಿಪಾದಿಸುತ್ತಿರುವುದಾದರೂ ಏನು? ಹಿಂದೂಯಿಸಂ ಒಂದು ರಿಲಿಜನ್, ಹಿಂದೂಗಳಿಗೂ ಬೈಬಲ್, ಕುರಾನ್ ನಂತಹ ಒಂದು ಪವಿತ್ರ ಗ್ರಂಥ ಇದೆ. ಚರ್ಚೆ, ಮಸೀದಿಗಳಂತೆ ದೇವಸ್ಥಾನಗಳಿವೆ. ಹಿಂದೂಗಳಿಗೂ ಒಬ್ಬ ಗಾಡ್ ಇದ್ದಾನೆ ಎಂದು ವಾದಿಸುವ ಮೂಲಕ ಭಾರತದಲ್ಲಿ ಹಿಂದೂ ರಿಲಿಜನ್ನಿನ ಹೆಸರಿನಲ್ಲಿ ಸರ್ವರನ್ನು ಓಗ್ಗೂಡಿಸುವ ಉದ್ದೇಶವಾಗಿದೆ. ಈ ಅಂಶಗಳನ್ನು ವಾದದ ಅನುಕೂಲಕ್ಕಾಗಿ ಎರಡು ರೀತಿಯಲ್ಲಿ ವಿಂಗಡಿಸಿಕೊಳ್ಳುತ್ತೇವೆ. ಒಂದು; ಹಿಂದೂಯಿಸಂ ಎಂಬ ಒಂದು ರಿಲಿಜನ್ನಿನ ನಿರ್ಮಾಣದ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಎರಡು, ಹಿಂದುತ್ವ ಅಥವಾ ಹಿಂದೂ ರಿಲಿಜನ್ನು ಮೂಲಕ ಭಾರತೀಯರನ್ನು ಒಗ್ಗೂಡಿಸುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಈ ಪ್ರಕ್ರಿಯೆಗಳು ಭಾರತೀಯ ಸಂಸ್ಕೃತಿ-ಸಂಪ್ರದಾಯಗಳನ್ನು ರಕ್ಷಿಸುತ್ತಿವೆಯೇ ಎಂಬುದನ್ನು ಪರಿಕ್ಷೀಸೋಣ.

ಹಿಂದುತ್ವ ಪ್ರತಿಪಾದನೆಯ ಹಿಂದೆ…

ಹಿಂದೂಯಿಸಂನ್ನು ಒಂದು ರಿಲಿಜನ್ನಾಗಿ ನಿಮರ್ಿಸುವ ಕಾರ್ಯವು ವಸಾಹತು ಸಂಧರ್ಭದಲ್ಲಿ ಆರಂಭವಾದಂತಹ ಬೆಳವಣಿಗೆಯಾಗಿದೆ. ಯೂರೋಪಿಯನ್ನರು ಕ್ರಿಶ್ಚಿಯನ್ ಎಂಬ ಒಂದು ರಿಲಿಜನ್ ಅನ್ನು ಹೊಂದಿದ್ದರು/ದ್ದಾರೆ. ಅವರ ರಿಲಿಜನ್ ‘ಎಲ್ಲಾ ಸಂಸ್ಕೃತಿಗಳಲ್ಲಿಯೂ ಒಂದಲ್ಲ ಒಂದು ರಿಲಿಜನ್’ ಇರುತ್ತದೆ ಎಂದು ಪ್ರತಿಪಾದಿಸುತ್ತದೆ. ಈ ಪ್ರತಿ ರಿಲಿಜನ್ ಸಹಾ ಒಬ್ಬ ಗಾಡ್, ಓರ್ವ ಪ್ರವಾದಿ ಹಾಗೂ ಚರ್ಚ್  ಮಾದರಿಯ ಸಂಸ್ಥೆಯನ್ನು ಹೊಂದಿರುತ್ತದೆ. ಆದರೆ ಕೆಲವು ರಿಲಿಜನ್ಗಳು ಡೆವಿಲ್ಗಳ ಹಸ್ತಕ್ಷೇಪದಿಂದಾಗಿ ದುಷ್ಟ ಆಚರಣೆಗಳನ್ನು ಅಳವಡಿಸಿಕೊಂಡಿರುತ್ತವೆ ಎಂದು ಸಹಾ ಭಾವಿಸಿದ್ದರು. ಈ ರೀತಿಯಾಗಿ ರೂಪುಗೊಂಡಿದ್ದ ಐರೋಪ್ಯರ ಪ್ರಜ್ಞೆಯು ಭಾರತವನ್ನು ಮುಖಾಮುಖಿ ಮಾಡಿದ ಸಂದರ್ಭದಲ್ಲಿ ಇಲ್ಲಿಯೂ ಒಂದು ರಿಲಿಜನ್ ಇರಲೇಬೇಕೆಂದು ಹುಡುಕಾಟ ನಡೆಸಲಾರಂಭಿಸಿದರು. ಆಗ ಸೃಷ್ಟಿಯಾದುದೇ ಈ ‘ಹಿಂದೂಯಿಸಂ’. ಆದರೆ ಇಲ್ಲಿನ ಕೆಲವು ಆಚರಣೆಗಳನ್ನು ನೋಡಿ ಇದನ್ನೊಂದು ‘ತಪ್ಪು’ ರಿಲಿಜನ್ ಎಂದು ಪರಿಗಣಿಸಿದರು. ಇಂತಹ ಐರೋಪ್ಯ ಪ್ರಜ್ಞೆಯನ್ನು ಶಿಕ್ಷಣ ಇನ್ನಿತರೆ ಮಾದ್ಯಮಗಳ ಮೂಲಕ ಭಾರತೀಯರಿಗೂ ದಾಟಿಸುವ ಕೆಲಸವು ನಡೆಯಿತು. ಇದರ ಕೂಸುಗಳಾದ ಆರ್.ಎಸ್.ಎಸ್ ಸಂಘಟನೆಯ ಸಂಸ್ಥಾಪಕರು ‘ಹಿಂದುತ್ವ’ದ ಪ್ರತಿಪಾದನೆಯನ್ನು ತಮ್ಮ ದ್ಯೇಯೋದ್ದೇಶಗಳನ್ನಾಗಿ ಮಾಡಿಕೊಂಡರು. ಈ ರೀತಿ ಪಶ್ಚಿಮದ ರಿಲಿಜನ್ನಿನ ಚೌಕಟ್ಟಿನಲ್ಲಿ ಸೃಷ್ಟಿಯಾದ ಹಿಂದೂಯಿಸಂನ ಪ್ರತಿಪಾದನೆಯನ್ನು ಈ ಸಂಘಟನೆಗಳು ಸಾಧಿಸಿ ತೋರಿಸಲು ಹೊರಟಿರುವುದು ವಿಪರ್ಯಾಸವೇ ಸರಿ. ಇಷ್ಟೇ ಅಲ್ಲದೇ ಈ ಪ್ರತಿಪಾದನೆಯ ಮೂಲಕ ಭಾರತೀಯರೆಲ್ಲರನ್ನೂ ಒಗ್ಗೂಡಿಸಲು ಸಾಧ್ಯ ಎಂದು ಬಲವಾಗಿ ನಂಬಿದ್ದಾರೆ. ಆದರೆ ಈ ಪ್ರಕ್ರಿಯೆಯಿಂದ ನಿಜವಾಗಿಯೂ ಒಗ್ಗೂಡಿಸಲು ಸಾಧ್ಯವಾಗುತ್ತಿದೆಯೇ?

ಹಿಂದುತ್ವ ಭಾರತೀಯರನ್ನು ಒಗ್ಗೂಡಿಸುವುದೇ..?

ಈ ಮೇಲೆ ಗುರುತಿಸಿರುವಂತೆ, ಭಾರತೀಯರನ್ನು ಒಗ್ಗೂಡಿಸುವುದು ತಮ್ಮ ಉದ್ದೇಶವೆಂದು ಈ ಸಂಘಟನೆಗಳು ಪರಿಗಣಿಸಿವೆ. ಈ ಉದ್ದೇಶದ ಈಡೇರಿಕೆಗಾಗಿ ಹಿಂಸಾ ಮಾರ್ಗದಲ್ಲಿ ತೊಡಗುತ್ತಿರುವ ಬಹಳಷ್ಟು ಘಟನೆಗಳು ನಮ್ಮ ಕಣ್ಮುಂದೆ ಸಾಕ್ಷಿಗಳಾಗಿವೆ.  ಹಾಗಾದರೆ ಈ ಸಂಘಟನೆಗಳ ಪ್ರಕಾರ ಭಾರತೀಯರೆಲ್ಲರನ್ನೂ ಒಗ್ಗೂಡಿಸಿವುದೆಂದರೇನು? ಭಾರತದಲ್ಲಿ ವಿಭಿನ್ನ ಸಂಪ್ರದಾಯಗಳು ತಮ್ಮದೇ ಆದ ಬೇರೆ ಬೇರೆ ನಂಬಿಕೆ, ಆಚರಣೆಗಳನ್ನು ಹೊಂದಿವೆ. ಇವುಗಳನ್ನು ಒಂದು ನಿರ್ದಿಷ್ಟ (ಹಿಂದೂ) ತತ್ವದ ಕೆಳಗೆ ಒಗ್ಗೂಡಿಸಬೇಕು. ಆದರೆ ವಿಭಿನ್ನ ಸಂಪ್ರದಾಯಗಳಿಂದ ಕೂಡಿರುವ  ಭಾರತದಲ್ಲಿ ಒಂದು ನಿರ್ದಿಷ್ಟ  ತತ್ವವಿರಲು ಸಾಧ್ಯವೇ? ಆಗ ಶಾಸ್ತ್ರ್ರಗಳನ್ನೋ, ವೇಧಗಳನ್ನೋ, ಭಗವದ್ಗೀತೆಯನ್ನೋ ಬೈಬಲ್, ಖುರಾನ್ಗಳಂತೆ ಪವಿತ್ರವಾದುದು  ಎಂದು ಸಾಧಿಸುವ ತುರ್ತು ಎದುರಾಗುತ್ತದೆ. ಈ ಕಾರ್ಯವನ್ನೇ ಹಿಂದುತ್ವ ಸಂಘಟನೆಗಳು ವಸಾಹತು ಸಂದರ್ಭದಿಂದ ಮಾಡುತ್ತಾ ಬಂದಿರುವುದು. ಆದರೆ ನಮ್ಮ ಸಂಪ್ರದಾಯಗಳಲ್ಲಿ ಜನರು, ಬೈಬಲ್ ಮತ್ತು ಖುರಾನ್ಗಳ ತತ್ವಗಳಿಗೆ ಅನುಗುಣವಾಗಿ ತಮ್ಮ ಜೀವನ ನಡೆಸುವ ಕ್ರೈಸ್ತ ಇಸ್ಲಾಂನವರಂತೆ ಯಾವುದೇ ತತ್ವಗಳ ಆಧಾರದ ಮೇಲೆ ತಮ್ಮ ಜೀವನ ಪದ್ಧತಿಯನ್ನು ರೂಪಿಸಿಕೊಂಡಿಲ್ಲ. ಅವುಗಳು ತಮ್ಮ ಹಿರಿಯ ತಲೆಮಾರುಗಳಿಂದ ಬಳುವಳಿಯಾಗಿ ಬಂದಂತಹ ಆಚರಣೆ, ಪದ್ಧತಿಗಳನ್ನು ಕೆಲವು ಮಾರ್ಪಾಡುಗಳೊಂದಿಗೆ ಮುಂದುವರೆಸಿಕೊಂಡು ಹೋಗುತ್ತಿರುತ್ತವೆ. ಅಲ್ಲದೇ ತಮ್ಮ ಆಚರಣೆಗಳು ಮಾತ್ರ ಶ್ರೇಷ್ಠ, ಉಳಿದವುಗಳು ಕನಿಷ್ಟ ಎಂದು ಅವುಗಳು ವಾದಿಸುವುದಿಲ್ಲ. ಬದಲಾಗಿ ನಮ್ಮ ಆಚರಣೆಗಳು ನಮಗೆ, ನಿಮ್ಮ ಆಚರಣೆಗಳು ನಿಮಗೆ ಎಂದು indifference ತೋರಿಸುವ ಮೂಲಕ ಸಹಬಾಳ್ವೆಯ ಜೀವನ ನಡೆಸುತ್ತಿರುತ್ತವೆ. ಇದನ್ನು ಅರ್ಥಮಾಡಿಕೊಳ್ಳದಿರುವ ಈ ಸಂಘಟನೆಗಳು ಯಾವುದೋ ನಿರ್ದಿಷ್ಟ ತತ್ವವನ್ನು ಒತ್ತಾಯಪೂರ್ವಕವಾಗಿ ಹೇರುವ ಕೆಲಸವನ್ನು ಮಾಡುತ್ತಿವೆ. ಈ ಉದ್ದೇಶದ ಈಡೇರಿಕೆಯ ಸಂಧರ್ಭದಲ್ಲಿ  ಇಲ್ಲಿನ ವೈವಿಧ್ಯಮಯ  ಕಥೆಗಳ ನಾಶ, ಆಚರಣೆಗಳ ನಾಶ ಮಾಡುತ್ತಿದ್ದಾರೆ. ಉದಾ; ವಾಲ್ಮಿಕಿ ರಾಮಾಯಣವನ್ನು ‘ಸತ್ಯ’ವಾದುದು ಎಂದು ಸಾಧಿಸುವ ಯತ್ನದಲ್ಲಿ ಉಳಿದ ರಾಮಾಯಣಗಳನ್ನು (ಕಂಬ, ) ಸುಳ್ಳುಕಥೆಗಳು ಎಂದು ಪ್ರತಿಪಾದಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಬೀಳುತ್ತಾರೆ. ಆಗ ಯಾರು ‘ಉಳಿದ’ ರಾಮಾಯಣಗಳನ್ನು ಗೌರವಿಸುತ್ತಿದ್ದರೋ ಅವರು ಪ್ರತಿಭಟನೆಯಲ್ಲಿ ತೊಡಗುತ್ತಾರೆ. ಈ ರೀತಿಯಾಗಿ ಬೇರೆ ಬೇರೆ ಸಂಪ್ರದಾಯಗಳ ನಡುವೆ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಇದರಿಂದಾಗಿ ಈ ಸಂಘಟನೆಗಳು ಭಾರತೀಯರನ್ನು ಒಗ್ಗೂಡಿಸುವ ಬದಲು ಮೊದಲೇ ಸಹಬಾಳ್ವೆ ಮತ್ತು ಒಗ್ಗಟ್ಟಿನ ಜೀವನ ನಡೆಸುತ್ತಿರುವ ಸಮಾಜದಲ್ಲಿ ಜನರ ಶಾಂತಿಯನ್ನು ಕದಡುವ ಕೆಲಸದಲ್ಲಿ ತೊಡಗಿದ್ದಾರೆ ಎಂಬುದು ಅರ್ಥವಾಗುತ್ತದೆ. ಅಂದರೆ ನಮ್ಮ ಸಂಪ್ರದಾಯಕ್ಕೆ ಹೊಂದಿಕೆಯೇ ಆಗದ ಬೇರೊಂದು ಐಡಿಯಾಲಜಿಯನ್ನು/ರಿಲಿಜನ್ನಿನ ಚೌಕಟ್ಟನ್ನು ಅದರ ಮೂಲದ ಕುರಿತು ಮರುಚಿಂತನೆಯನ್ನು ನಡೆಸದೆಯೇ ಭಾರತಕ್ಕೆ ಅಳವಡಿಸುವ ಕಾರ್ಯದಲ್ಲಿ ತೊಡಗಿರುವ ಈ ಸಂಘಟನೆಗಳು ಪ್ರೇಮಿಗಳ ದಿನಾಚರಣೆಯನ್ನು ನಿಷೇದಿಸಲು ಕೊಡುತ್ತಿರುವ ಕಾರಣ ಸಮಂಜಸವೇ? ಅಷ್ಟೇ ಅಲ್ಲದೆ ನಮ್ಮ ಕಥೆಗಳು,  ಆಚರಣೆಗಳು ನಾಶವಾಗುತ್ತಿವೆ ಮತ್ತು ಹೊಸ ಜೀವನ ಪದ್ಧತಿ ಹೊಂದಿಕೆಯಾಗದಿದ್ದರೂ ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆಂದರೆ ಇದು ಸಂಸ್ಕೃತಿ-ಸಂಪ್ರದಾಯಗಳ ವಿನಾಶವಲ್ಲವೇ? ಈ ಅರ್ಥದಲ್ಲಿಯೇ ನಾವು ಹೇಳುತ್ತಿರುವುದು ಈ ಸಂಘಟನೆಗಳಿಗೆ ನಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ರಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಅವುಗಳು ನಮ್ಮ ಸಂಸ್ಕೃತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಂಪೂರ್ಣ ವಿಫಲವಾಗಿವೆ. ಭಾರತೀಯ ಸಂಸ್ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೆಂದ ಮೇಲೆ ಯಾವ ಆಚರಣೆಯನ್ನು ನಡೆಸಬೇಕು, ಯಾವುದನ್ನು ನಡೆಸಬಾರದು ಎಂದು ನಿರ್ಣಯಿಸಲು ಹೋದರೆ ಪ್ರತಿರೋಧಗಳು ಬರುವುದು ಸಹಜ. ಹಾಗೆಂದು ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡವರು ನಿರ್ಣಯಿಸಬಹುದು ಎಂಬ ಅರ್ಥವಲ್ಲ. ಯಾವ ಸಂಘಟನೆಗಳೂ ಇದನ್ನು ನಿರ್ಣಯಿಸಬೇಕಿಲ್ಲ ಆಯಾ ಸಂಪ್ರದಾಯಗಳೇ ಸೂಕ್ತವಾದುದನ್ನು ಮತ್ತು ಸರಿಯಾದುದನ್ನು ಅಳವಡಿಸಿಕೊಳ್ಳುತ್ತವೆ.

ಹಿಂದುತ್ವ ಸಂಘಟನೆಗಳ ಸಂಧಿಗ್ಧ:

ಹಿಂದುತ್ವ ಐಡಿಯಾಲಜಿಯನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ಅದು ಅಷ್ಟಾಗಿ ಸಫಲವಾಗದಿರುವುದು ಅದಕ್ಕೆ ಬಂದಿರುವ ಪ್ರತಿರೋಧಗಳನ್ನು ನೋಡಿದರೆ ತಿಳಿಯುತ್ತದೆ. ಭಾರತೀಯ ಸಮಾಜದ ಸಂಪ್ರದಾಯಗಳನ್ನು ಸಂಘಟಿಸುವ ಹಾಗೂ ಪುನರ್ ವ್ಯಾಖ್ಯಾನಿಸುವ ಪ್ರಯತ್ನದಲ್ಲಿರುವ ಈ ಹಿಂದುತ್ವವು (ಅದನ್ನು ಪ್ರತಿಪಾದಿಸುವ ಸಂಘಟನೆಗಳು) ಎರಡು ದಾರಿಯನ್ನು ಹುಡುಕಿಕೊಳ್ಳಲು ಹೊರಡಬಹುದು. ಮೊದಲನೆಯದಾಗಿ, ಭಾರತೀಯ ಪರಂಪರೆಗಳು ಹೇಗೆ ಇವೆಯೋ ಅವುಗಳನ್ನು ಹಾಗೆಯೇ ಒಪ್ಪಿಕೊಂಡು ಸಂಘಟಿಸುವುದು. ಎರಡನೆಯದಾಗಿ, ತನ್ನ ಕ್ರಿಶ್ಚಿಯನ್ ಮಾದರಿ ರಿಲಿಜನ್ನಿನ ಕಲ್ಪನೆಯನ್ನು ತೊರೆಯುವುದು. ಆದರೆ ಈ ಎರಡೂ ದಾರಿಗಳಲ್ಲಿಯೂ ಹಿಂದುತ್ವ ಸಂಘಟನೆಗಳು ಸಾಗಲು ಸಾಧ್ಯವೇ ಇಲ್ಲ, ಏಕೆಂದರೆ ಕ್ರಿಶ್ಚಿಯನ್ ರಿಲಿಜನ್ ಮಾದರಿಯನ್ನು ಒಂದೊಮ್ಮೆ ಬಿಟ್ಟರೆ ಭಾರತದ ಸಂಪ್ರದಾಯಗಳನ್ನು ಒಂದುಗೂಡಿಸಲು ಅದಕ್ಕೆ ಬೇರೆ ಯಾವುದೇ ಮಾರ್ಗಗಳಿಲ್ಲ. ಹಾಗಯೇ ಸಂಪ್ರದಾಯಗಳನ್ನು ಅವು ಇದ್ದ ರೀತಿಯಲ್ಲೇ ಒಪ್ಪಿಕೊಂಡರೆ ಹಿಂದುತ್ವ ಏನನ್ನೂ ಸಂಘಟಿಸಲು ಸಾಧ್ಯವಿಲ್ಲ….

ಮೇಲಿನ ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಹಿಂದುತ್ವ ಸಂಘಟನೆಗಳು ತಮ್ಮ ಮೂಲ ದ್ಯೇಯೋದ್ದೇಶಗಳನ್ನೇ ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತವೆ. ಆದರೆ ಅದು ಸಾಧ್ಯವೆ? ಒಂದು ಪಕ್ಷ ಹಾಗೇನಾದರು  ಸಾಧ್ಯವಾದರೆ, ಆ ಸಂಘಟನೆಗಳು ಅಂತಹ ಸಂಘಟನೆಗಳಾಗಿ ಉಳಿಯುವುದಿಲ್ಲ ಎಂಬುದು ನಮ್ಮ ಅನಿಸಿಕೆ. ಏಕೆಂದರೆ ಈ ಸಂಘಟನೆಗಳು ಅಸ್ತಿತ್ವಕ್ಕೆ ಬಂದಿರುವುದೇ ಈ ಮೇಲಿನ ಮೂಲಭೂತ ಉದ್ದೇಶಗಳನ್ನು ಇಟ್ಟುಕೊಂಡು. ಆ ಉದ್ದೇಶಗಳಲ್ಲಿಯೇ ಮೂಲಭೂತ ಬದಲಾವಣೆಗಳಾದರೆ, ಹಿಂದುತ್ವ ಸಂಘಟನೆಗಳಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಅವುಗಳ ಮುಂದಿರುವ ಒಂದೇ ದಾರಿಯೆಂದರೆ, ಸಂಸ್ಕೃತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗುವುದು.

ಒಟ್ಟಂದದಲ್ಲಿ ಈ ಹಿಂದೂ ಸಂಘಟನೆಗಳು ಪಾಶ್ಚಾತ್ಯ ರಿಲಿಜನ್ ಮಾದರಿಯನ್ನು ಬಳಸಿಕೊಂಡು ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಬದಲಿಗೆ ನಾಶಮಾಡ ಹೊರಟಿರುವುದಂತು ಸತ್ಯ. ಇಂತಹ ದುಷ್ಪರಿಣಾಮವನ್ನು ಬೀರುತ್ತಿರುವ ಈ ಸಂಘಟನೆಗಳು ಪ್ರೇಮಿಗಳ ದಿನಾಚರಣೆಯ ನಿಷೇದಕ್ಕೆ ನೀಡುತ್ತಿರುವ ಕಾರಣ ಎಷ್ಟು ಸಮಂಜಸ?

  1. Mahesha
    ಜುಲೈ 6, 2010 ರಲ್ಲಿ 3:07 ಅಪರಾಹ್ನ

    ಈ ಲೇಖನದ ಬಗ್ಗೆ ನನ್ನದೊಂದು ಕಮೆಂಟನ್ನು ನೀಡಲು ಬಯಸುತ್ತೇನೆ. ನಾನು ಹಿಂದುತ್ವ ಸಂಘಟನೆಗಳನ್ನು ಹತ್ತಿರದಿಂದ ಬಲ್ಲವನು. ಅದರ ಬಗ್ಗೆ ನೀವು ಊಹಿಸಿರುವ ವಿಷಯಗಳು ಪೂರ್ತಿಯಾಗಿ ಸರಿಯಲ್ಲ ಎಂದು ಹೇಳಬಯಸುತ್ತೇನೆ. ಇಲ್ಲಿ ಹಿಂದುತ್ವ ಸರಿಯೋ ತಪ್ಪೋ ಎಂದು ನಾನು ಹೇಳಲು ಹೋಗುವುದಿಲ್ಲ. ಅದು ನಿಮಗೆ ಬಿಟ್ಟದ್ದು. ಅದು ಏನು ಎಂದು ಹೇಳುವುದು ಮಾತ್ರ ನನ್ನ ಉದ್ದೇಶ.

    ಮೊದಲನೆಯದಾಗಿ ಹಿಂದುತ್ವ ಜನರನ್ನು ಒಗ್ಗೂಡಿಸಬೇಕೆಂದು ಹೇಳುತ್ತದೆಯೇ ಹೊರತು ಒಂದೇ ಸಂಸ್ಕೃತಿ ತರಬೇಕು ಎಂದು ಹೇಳುತ್ತಿಲ್ಲ. ಹಾಗಿದ್ದರೆ ಯಾವ ವಿಷಯದ ಅಡಿಯಲ್ಲಿ ಎಲ್ಲರೂ ಒಗ್ಗೂಡಬೇಕು ಎನ್ನುವ ನಿಮ್ಮ ಪ್ರಶ್ನೆ ಬರುವುದು ಸಹಜ. ಅದಕ್ಕೇ ಸಂಘದಲ್ಲಿ (ರಾ ಸ್ವ ಸಂಘ) ಹೇಳುವ ಮಾತು – ದೇಶದ ಹೆಸರಲ್ಲಿ ಒಗ್ಗೂಡಬೇಕು. ಇದು ಸರಿಯೋ ತಪ್ಪೋ ನೀವು ವಿಮರ್ಷಿಸಬಹುದು ಅದು ಬೇರೆ ವಿಷಯ. ಈ ದೇಶಕ್ಕೆ ಯಾವುದೆಲ್ಲ ಒಳ್ಳೆಯದೋ ಅದನ್ನು ಸ್ವೀಕರಿಸಬೇಕು, ಯಾವುದೆಲ್ಲ ಕೆಟ್ಟದ್ದೋ ಅದನ್ನು ತಿರಸ್ಕರಿಸಬೇಕು.

    ಪಬ್ ವಿಷಯ ಬಂದರೆ ಸಂಘದ ನಿಲುವು ಸ್ಪಷ್ಟ. ಕುಡಿತ ಯಾರಿಗೇ ಆಗಲಿ ಒಳ್ಳೆಯದಲ್ಲ. ದೇಶದ ಆರೋಗ್ಯ ಸರಿ ಇರಬೇಕಾದರೆ ಜನರ ಆರೋಗ್ಯ ಸರಿ ಇರಬೇಕು. ಅದರಲ್ಲೂ ಮಹಿಳೆಯರಿಗೆ ಕುಡಿತ ಇನ್ನೂ ಹಾಳು – ಎರಡು ಕಾರಣಗಳಿಗೆ – ಒಂದು ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಎರಡನೆಯದಾಗಿ ತಾಯಿಯನ್ನು ನೆಚ್ಚಿಕೊಂಡು ಬೆಳೆಯುವ ಮಕ್ಕಳು ಕುಡುಕರಾಗುವ ಸಂಭವ ಹೆಚ್ಚು. ಇದು ಸಂಘದ ನಿಲುವು. ಹಾಗೆಂದು ಮುತಾಲಿಕ್ ಮಾಡಿದಂತೆ ಪಬ್ ಗಳಿಗೆ ಹೋಗಿ ಹೊಡೆಯುವುದು ನನ್ನ ಪ್ರಕಾರ ತಪ್ಪು. ಮೊದಲು ನಾವು ನಾವೇ ಮನೆಗಳಲ್ಲಿ ಇಂಥ ಚಟಗಳು ಬೆಳೆಯದಂತೆ ಎಚ್ಚರವಹಿಸಿ, ನಮ್ಮ ಸುತ್ತ ಇರುವವರಿಗೂ ಈ ಬಗ್ಗೆ ತಿಳಿಹೇಳಬೇಕಾದ್ದು ಪ್ರತಿಯೊಬ್ಬ ಸಂಘಿಯ ಕರ್ತವ್ಯ.

    ಇನ್ನು ಪಾಸ್ಚಿಮಾತ್ಯ ಸಂಸ್ಕೃತಿಯ ಬಗ್ಗೆ ಸಂಘ್ಹಕ್ಕೆ ಇರುವ ನಿಲುವು – ದೇಷದ ಒಳ್ಳೆಯದಕ್ಕೆ ಯಾವುದು ಒಳ್ಳೆಯದೋ ಅದನ್ನು ಮಾಡಬೇಕು. ಅದು ಪಶ್ಚಿಮದಿಂದ ಬಂದರೂ ಸರಿ, ಪೂರ್ವದಿಂದ ಬಂದರೂ ಸರಿ. ಸಂಘದ ವಿರೋಧವಿರುವುದು ಪಾಶ್ಚಿಮಾತ್ಯರಿಂದ ಕೆಟ್ಟ ಗುಣಗಳನ್ನು ಕಲಿಯುವುದಕ್ಕೆ. ಉದಾ ಪಾಶ್ಚಿಮಾತ್ಯರಿಂದ ಪ್ರೀತಿಯನ್ನು ಕಲಿಯುವುದು ಬಿಟ್ಟು ಪಬ್, ಅನೈತಿಕ ಸಂಬಂಧ, ಜವಾಬ್ದಾರಿ ಇಲ್ಲದ ಮುಕ್ತ ಲೈಂಗಿಕತೆ ಇತ್ಯಾದಿಗಳನ್ನು ಕಲಿಯುವುದು. ಇದು ಸರಿಯೇ? ಮಾಧ್ಯಮಗಳಲ್ಲಿ ಬರುವಂತೆ ಇದು ವ್ಯಾಲೆಂಟೈನ್ ವಿರೋಧ ಅಲ್ಲ, ಬದಲಾಗಿ ಅನೈತಿಕ ಹಾಗು ಸಮಾಜಕ್ಕೆ ಹಾಳು ಮಾಡುವ ವಿಷಯಗಳನ್ನು ಅಲ್ಲಿಂದ ಇಲ್ಲಿಗೆ ಕಾಪಿ ಮಾಡುವುದಕ್ಕೆ ವಿರೋಧ.

    ನೀವು ಸಂಘ್ಹದ (ನಿಮ್ಮ ಭಾಷೆಯಲ್ಲಿ ಹಿಂದುತ್ವವಾದಿಗಳ) ಉದ್ದೇಶ ಕ್ರಿಶ್ಚಿಯಾನಿಟಿಯಂತೆ ಮೊನೊಲಿಥಿಕ್ ರಿಲಿಜನ್ ಅನ್ನು ಮಾದುವುದು ಅಂತ. ನಿಮಗೆ ಆಶ್ಚರ್ಯವಾಗಬಹುದು, ಸಂಘ್ಹದ ಸಂವಿಧಾನದಲ್ಲಿ ಇದರ (ಸಂಸ್ಕೃತಿ/ಮತ) ಪ್ರಸ್ತಾವವೇ ಬರುವುದಿಲ್ಲ. ಸಂಘ್ಹದ ಸಂವಿಧಾನ ಯಾವುದು? ಸಂಘ್ಹ ಪ್ರಾರ್ಥನೆಯೇ ಅದರ ಸಂವಿಧಾನ. ನೀವೊಮ್ಮೆ ಆ ಪ್ರಾರ್ಥನೆಯನ್ನು ಕೇಳಿ, ಅದರ ಅನುವಾದವನ್ನು ಓದಬೇಕು. ಅದರ ತಿರುಳು ಇಂತಿದೆ – “ಪರಂ ವೈಭವನ್ನೇತುಮೇತತ್ ಸ್ವರಾಷ್ಟ್ರಂ” ಅಂದರೆ ನಿನ್ನ ಸ್ವರಾಜ್ಯವನ್ನು ಪರಮ ವೈಭವಕ್ಕೆ ತರಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡು – ಇದಕ್ಕಾಗಿ ಈ ದೇಶದಲ್ಲಿ ಬಂದು ಹೋದ ಮಹಾತ್ಮರ ದಾರಿಯಲ್ಲಿ ನಡೆಯಬೇಕೋ ಅಥವಾ ನೀನೇ ಹೊಸದಾಗಿ ಏನಾದರೂ ಮಾಡಬೇಕೋ ನಿನಗೆ ಬಿಟ್ಟದ್ದು. ಅದು ಧರ್ಮದ ಹಾದಿಯಲ್ಲಿ (ಒಳ್ಳೆಯತನಕ್ಕೆ ಧಕ್ಕೆಯಾಗದಂತೆ) ಇರಬೇಕು ಅಷ್ಟೆ. ಪಬ್ ಹೋಗುವವರನ್ನು ಹೊಡೆಯುವದರಿಂದ ಈ ಧ್ಯೇಯ ಸಾಧ್ಯವಾಗುತ್ತದೆಯೇ? ಆಗುತ್ತದೆಂದು ಮೂತಾಲಿಕ್ ತಿಳಕೊಂಡಿರಬಹುದು, ನಾನು, ನನ್ನಂತೆ ಬಹುತೇಕರು ಆ ಥರ ತಿಳಕೊಳ್ಳಿಲ್ಲ.

    ಇನ್ನು ಭಾರತದ ಸಂಸ್ಕೃತಿಯೆಂದರೆ ಅದು ಇದುವೇ ಎಂದು ಹೇಳಲು ಬರುವುದಿಲ್ಲ ಎಂಬುದನ್ನು ಸಂಘವು ಎಂದೋ ಒಪ್ಪಿಕೊಂಡಿದೆ. ಅದಕ್ಕೇ ಸಂಘದಲ್ಲಿ ಉದಾಹರಣೆಗೆ ಆಹಾರ ಪಧ್ಧತಿ, ಪೂಜಾ ವಿಧಾನ ಇತ್ಯಾದಿಗಳಿಗೆ ನಿಯಮವಿಲ್ಲ. ಸಂಘದ ಕಾರ್ಯಕ್ರಮಗಳಲ್ಲಿ ಮಾಂಸಾಹಾರ ಇಲ್ಲ, ಹಾಗೆಂದು ಸಂಘಿಗಳು ಮಾಂಸಾಹಾರಿಗಳ ಮನೆಗೆ ಹೋಗುವುದು ಅವರ ಜೊತೆ ಉಣ್ಣುವುದು (ಆತ ಮಾಂಸ ಉಣ್ಣದೇ ಇರಬಹುದು) ಸಾಮಾನ್ಯ. ಆಹಾರ ಪಧ್ಧತಿ, ಪೂಜಾ ಪಧ್ಧತಿ ಎಲ್ಲ ಸಂಘಿಯ ವೈಯಕ್ತಿಕ ಹಾಗೂ ಸಂಘ ಅದರಲ್ಲಿ ಯಾವುದೇ ಮೂಗು ತೂರಿಸುವುದಿಲ್ಲ. ಹಾಗೆಯೇ ಸಂಘದಲ್ಲಿ ಯಾವುದೇ ದೇವರ ಹಬ್ಬವನ್ನು ಆಚರಿಸದೆ, ಸಾಮಾಜಿಕ ಹಿನ್ನೆಲೆಯಲ್ಲಿ ಪ್ರಮುಖವಾದ ಹಬ್ಬಗಳನ್ನು ಮಾತ್ರ ಆಚರಿಸಲಾಗುತ್ತದೆ (ವಿಜಯದಶಮಿ, ಹಿಂದೂ ಸಾಮ್ರಾಜ್ಯೋತ್ಸವ, ಮಕರ ಸಂಕ್ರಾಂತಿ, ಯುಗಾದಿ ಇತ್ಯಾದಿ). ಮಕರ ಸಂಕ್ರಂತಿ ಆಚರಿಸುವುದಕ್ಕೂ ಸಾಮಾಜಿಕ ಕಾರಣ ಇದೆ. ಇನ್ನುಳಿದಂತೆ ಆಯಾಯಾ ಪ್ರದೇಶದ ಹಬ್ಬಗಳನ್ನು ಆಚರಿಸುವುದು ಪಧ್ಧತಿ.

    ಇನ್ನು ಸಂಘ ಸಾಹಿತ್ಯಗಳಲ್ಲಿ ಬರುವ ಹಿಂದೂ ಶಬ್ದದ ಬಗ್ಗೆ ನಿಮಗಿರುವ ತಕರಾರನ್ನು ನಾನು ಅರ್ಥ ಮಾಡಿಕೊಳ್ಲಬಲ್ಲೆ. ಆದರೆ ಸಂಘ್ಹ್ದಲ್ಲಿ ಹಿಂದೂ ಎಂಬುದು ಸಾಮಾಜಿಕ ಹಿನ್ನೆಲೆಯಲ್ಲಿಯೇ ಹೊರತು ಧಾರ್ಮಿಕ ಹಿನ್ನೆಲೆಯಲ್ಲಿ ಅಲ್ಲ. ಹಾಗಿದ್ದಲ್ಲಿ ಎಲ್ಲರನ್ನೂ ಒಂದು ಧರ್ಮ, ಸಂಸ್ಕೃತಿಯ ಅಡಿಯಲ್ಲಿ ತರುವ ಪ್ರಯತ್ನ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ತಾನೆ? ಎಲ್ಲರನ್ನೂ ಒಂದು ಸಂಸ್ಕೃತಿಯ ಅಡಿಯಲ್ಲಿ ತರಲು ಸಾಧ್ಯವಿಲ್ಲದಿದ್ದರೇನಂತೆ (ಹಾಗೆ ಮಾಡುವುದು ಸಂಘದ ಉದ್ದೇಶವೂ ಅಲ್ಲ) ಒಂದೇ ಸಮಾಜದ ಅಡಿಯಲ್ಲಿ ತರಬಹುದಲ್ಲವೇ? ಇದೇ ಹಿಂದುತ್ವವನ್ನು ನೀವು ತಿಳಕೊಂಡಿರುವುದಕ್ಕೂ ಅದರ ನಿಜ ಅರ್ಥಕ್ಕೂ ಇರುವ ವ್ಯತ್ಯಾಸ.


    ಪ್ರೀತಿಯಿಂದ,
    ಮಹೇಶ

    Like

    • Mahesha
      ಜುಲೈ 6, 2010 ರಲ್ಲಿ 3:09 ಅಪರಾಹ್ನ

      ಕಾಗುಣಿತ ತಪ್ಪುಗಳನ್ನು ಮನ್ನಿಸಿ ಓದಿರಿ.. ಅವುಗಳನ್ನು ಸರಿ ಮಾಡಲು ಅವಕಾಶ ಇದ್ದಂತೆ ಕಾಣುತ್ತಿಲ್ಲ..

      Like

  2. Santhosh Shetty
    ಜುಲೈ 7, 2010 ರಲ್ಲಿ 12:46 ಅಪರಾಹ್ನ

    ಮಹೇಶ್

    ೧. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮಗೆ ಒಂದು ವಿಚಾರ ಸ್ಪಷ್ಟ ಪಡಿಸಲು ಇಚ್ಚಿಸುತ್ತೇನೆ. ನಾನೂ ಸಹ ಆರ್‍.ಎಸ್. ಎಸ್. ನಮ್ಮ ಹಲವು ವರ್ಷಗಳ ಕಾಲ ಕಾರ್ಯಕರ್ತನಾಗಿ ಇದ್ದೆ. ಹಾಗೂ ಐ.ಟಿ,ಸಿ, ಮತ್ತು ಓ.ಟಿ.ಸಿ ಕ್ಯಾಂಪ್ ಗಳನ್ನೂ ಮುಗಿಸಿದ್ದೇನೆ. ಹಾಗಾಗಿ ಸಂಘದ ಕಾರ್ಯಗಳನ್ನು ಕೇವಲ ಹೊರಗಿನಿಂದ ನೋಡಿರಬಹುದು ಎಂಬ ನಿಮ್ಮ ಅನುಮಾನವನ್ನು ಪರಿಹರಿಸಲು ಈ ಮೇಲಿನ ನನ್ನ ವೈಯುಕ್ತಿಕ ಮಾಹಿತಿಯನ್ನು ನೀಡಿದ್ದೇನೆ

    ೨. ನಿಮ್ಮ ಪ್ರತಿಕ್ರಿಯೆಯ ಇಡೀ ತಿರುಳು ಹೀಗಿದೆ. ಹಿಂದುತ್ವದ ಅಡಿಯಲ್ಲಿ ರಾ.ಸ್ವ.ಸಂಘವು ಕ್ರಿಶ್ಚಿಯನ್ ಮಾದರಿಯ ರಿಲಿಜನ್ನಿನ ಚೌಕಟ್ಟಿನಲ್ಲಿ ಜನರನ್ನು ಒಗ್ಗೂಡಿಸುತ್ತಿಲ್ಲ, ಬದಲಿಗೆ ನಮ್ಮ ಸಂಪ್ರದಾಯಗಳಿಗನುಗುಣವಾಗಿಯೇ ಅದು ಕಾರ್ಯಪ್ರವೃತ್ತವಾಗಿದೆ ಎಂಬುದು. ಅದು ರಿಲಿಜನ್ ಮಾದರಿಯಲ್ಲೇ ಜನರನ್ನು ಒಗ್ಗೂಡಿಸುತ್ತದೆ ಎಂಬುದಕ್ಕೆ ನೋಡಿ ಈ ಕೆಳಗಿನ ಸಾಕ್ಷ್ಯಗಳನ್ನು;
    ಎ) ಮೊದಲನೆಯದಾಗಿ, ರಿಲಿಜನ್ ಗಳಿಗೆ ಪವಿತ್ರಭೂಮಿ ಎಂಬ ಕಲ್ಪನೆ ಇದೆ. ಮುಸ್ಲಿಂರಿಗೆ ಮೆಕ್ಕಾ ಮವಿತ್ರ ಭೂಮಿಯಾದರೆ ಕ್ರಿಶ್ಚಿಯನ್ನರಿಗೆ ಪ್ಯಾಲಸ್ತೈನ್ ಹೋಲಿ ಲ್ಯಾಂಡ್ ಎಂದು ನಂಬುತ್ತಾರೆ. ಅದೇ ಮಾದರಿಯಲ್ಲಿ ಭಾರತದಲ್ಲಿರುವ ಹಿಂದೂಗಳು ಹಾಗೂ ಹಿಂದೂಗಳಲ್ಲದವರು ಭಾರತವನ್ನು ಪಿತೃಭೂಮಿ ಎಂದು ಅಂದುಕೊಳ್ಳಬೇಕು ಇಲ್ಲವಾದರೆ ಅವರು ಭಾರತವನ್ನು ಬಿಟ್ಟುಹೋಗಬೇಕು ಎಂಬ ಧೋರಣೆಯನ್ನು ವಿರಾಟ್ ಸಮಾವೇಶಗಳಲ್ಲಿ ನೀವೂ ಕೇಳಿರಬಹುದು. ಅದೂ ರಿಲಿಜನ್ ಮಾದರಿಯಲ್ಲವೇ?

    ಬಿ) ಎರಡನೆಯದಾಗಿ, ಎಲ್ಲಾ ರಿಲಿಜನ್ ಗಳಲ್ಲಿಯೂ ಅಥಾರಿಟಿ ಎಂಬ ಕಲ್ಪನೆ ಇರುತ್ತದೆ. ಅಂದರೆ ಜನರ ಸಾಮಾಜಿಕ ಜೀವನವನ್ನು ನಿರ್ಧರಿಸುವ ಮತ್ತು ಮಾರ್ಗದರ್ಶನ ಮಾಡುವ ಕೆಲಸವನ್ನು ಈ ಅಥಾರಿಟಿಗಳು ಮಾಡುತ್ತವೆ. ಕ್ರಿಶ್ಚಿಯನ್ನರಲ್ಲಿ ಪ್ರೀಸ್ಟ್ ಗಳಾಗಿರಬಹುದು, ಮುಸ್ಲಿಂರಲ್ಲಿ ಮುಲ್ಲಾಹ್ ಗಳಾಗಿರಬಹುದು ಇವರು ಜನರನ್ನು ನಿಯಂತ್ರಿಸುತ್ತಿರುತ್ತಾರೆ. ಹಿಂದುತ್ವ ಸಂಘಟನೆಗಳು ಹಾಗೆ ಮಾಡುತ್ತಿಲ್ಲವೆ? ಹಿಂದುತ್ವ ಸಂಘಟನಾಕಾರಾರು ತಾವೇ ಈ ಸಮಾಜದ ನಿಯಂತ್ರಕರು ಎಂಬಂತೆ ವರ್ತಿಸುತ್ತಿಲ್ಲವೇ? ಇದೂ ಸಹ ರಿಲಿಜನ್ ಮಾದರಿಯೇ ಆಗಿದೆ.

    ಸಿ) ಹಿಂದೂ ಸಂಸ್ಕೃತಿ ಎಂಬ ಒಂದು ಸಂಸ್ಕೃತಿಯ ಅನುಷ್ಠಾನಕ್ಕೆ ಸಂಘಟನಾ ವಕ್ತಾರರು ಹೋರಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಸಾವರ್ಕರ್‍, ಗೋಲ್ ವಾಲ್ಕರ್‍ ರವರ ಬರಹಗಳಲ್ಲಿ ಅದನ್ನು ಸ್ಪಷ್ಟವಾಗಿ ನಮೂದಿಸುತ್ತಾರೆ, ಸಂಸ್ಕೃತಿಯ ಆಯಾಮದಿಂದ ಜನರನ್ನು ಅಥವಾ ದೇಶವನ್ನು ಒಗ್ಗೂಡಿಸಲು ಸಾಧ್ಯ ಎಂಬುದು ಅವರ ಬಲವಾದ ನಂಬಿಕೆ ಹಾಗೂ ಕಾರ್ಯತಂತ್ರವೂ ಆಗಿದೆ. ಸಂಸ್ಕೃತಿಯನ್ನು ಯಾವ ಆಧಾರದ ಮೇಲೆ ಮಾಡಲು ಸಾಧ್ಯ? ಖಂಡಿತವಾಗಿಯೂ ಧಾರ್ಮಿಕ ಭಾವನೆಯ ಆಧಾರದ ಮೇಲೆಯೇ ಎಂಬುದು ಅವರ ಅಚಲವಾದ ನಂಬಿಕೆ. ಸಾವರ್ಕರ್‍ ದೇಶಭಕ್ತರು ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಜನರನ್ನು ಒಗ್ಗೂಡಿಲು ಧಾರ್ಮಿಕ ಭಾವನೆಯನ್ನು ಬಳಸಿಕೊಳ್ಳುವುದೇ ಉತ್ತಮ ಎಂಬುದು ಅವರ ಅಭಿಪ್ರಾಯ. ಅಂತಹುದೇ ವಿಚಾರವನ್ನು ಮುಂದುವರೆಸಿಕೊಂಡು ಬಂದಿರುವ ರಾ.ಸ್ವ.ಸಂಘದ ರಾಜಕೀಯ ಅಂಗವಾಗಿರುವ ಬಿ.ಜೆಪಿ.ಯೂ ಸಹ ೯೦ರ ದಶಕದಲ್ಲಿ ರಾಮಜನ್ಮ ಭೂಮಿ ವಿಷಯವನ್ನು ಪ್ರಮುಖವಾಗಿ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು ನಮಗೆಲ್ಲರಿಗೂ ತಿಳಿದ ವಿಚಾರ. ಮಂದಿರ ಗಳಂತಹ ವಿಚಾರಗಳನ್ನು ಮುಂದೆ ಮಾಡಿಕೊಂಡು ಜನರನ್ನು ಒಗ್ಗೂಡಿಸುವುದು ಯಾವ ಮಾದರಿ. ಒಂದು ರೀತಿಯಲ್ಲಿ ಧಾರ್ಮಿಕವಲ್ಲವೇ? ದೇವರ ಹೆಸರಿನಲ್ಲಿ ಜನರನ್ನು ಒಂದುಮಾಡುವುದು ರಿಲಿಜನ್ ಗಳು ಇದುವರೆಗೂ ಬಳಸಿಕೊಂಡಿರುವ ಕಾರ್ಯತಂತ್ರವಾಗಿದೆ. ಹಿಂದುತ್ವ ಸಂಘಟನೆಗಳೂ ಸಹ ಅದನ್ನೇ ಮಾಡುತ್ತಿವೆ ಎಂದರೆ ಅದು ಇನ್ಯಾವ ಮಾದರಿ?

    ಪ್ರೀತಿಯಿಂದ

    ಸಂತೋಷ್

    Like

  3. ಕೃಷ್ಣಪ್ರಕಾಶ ಬೊಳುಂಬು
    ಅಕ್ಟೋಬರ್ 20, 2011 ರಲ್ಲಿ 10:49 ಅಪರಾಹ್ನ

    ಭಾರತವನ್ನು ಪಿತೃಭೂಮಿಯೆಂದು ತಿಳಿಯುವ ಬಗ್ಗೆ –
    ಭಾರತವನ್ನು ಪಿತೃಭೂಮಿಯೆಂದು ತಿಳಿಯುವುದು ಒಂದು ರಿಲಿಜಿಯಸ್ ಮಾತೃಕೆಯೆನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಹಾಗೆ ತಿಳಿದುಕೊಳ್ಳುವ ಪ್ರಕ್ರಿಯೆ ಯಾವುದೇ ಒಂದು ರಿಲಿಜಿಯನಿನ ಆಧಿಪತ್ಯವನ್ನು ಬಯಸುತ್ತದೆಯೆನ್ನುವುದು ಅನುಮಾನಾರ್ಹ.
    ಜಿಹಾದ್ ಎಂಬ ಪರಿಕಲ್ಪನೆಯ ಕುಱಿತಾಗಿ ಇಸ್ಲಾಮಿಕ್ ಮತಪಂಡಿತರಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಜಿಹಾದ್ ಎಂದರೆ ತನ್ನ ಮಾತೃಭೂಮಿ/ ಪಿತೃಭೂಮಿಗಾಗಿ ಮಾಡುವಂಥ ಯುದ್ಧ ಎನ್ನುವಂಥ ಪರಿಕಲ್ಪನೆಯೂ ಆಧುನಿಕ ಇಸ್ಲಾಮಿಕ್ ಮತಪಂಡಿತರ ನಡುವೆ ಮೂಡುತ್ತಲಿದೆ. ಮುಸ್ಲಿಯಾರರೊಬ್ಬರು ಈ ಕುಱಿತಾಗಿ ಮಾತನಾಡಿದ್ದು ನೋಡಿದ್ದೇನೆ, ಅವರು ಹೇೞುವನ್ತೆ – ಮೇಲೆ ಹೇೞಿರುವನ್ತೆ ಜಿಹಾದ್ ಎಂದರೆ ತನ್ನ ಮಾತೃಭೂಮಿ/ ಪಿತೃಭೂಮಿಗಾಗಿ ಮಾಡುವಂಥ ಯುದ್ಧ.

    Like

  1. No trackbacks yet.

Leave a reply to Mahesha ಪ್ರತ್ಯುತ್ತರವನ್ನು ರದ್ದುಮಾಡಿ