ಮುಖ ಪುಟ > Cultural Studies, Culture, Dharma, Religion > ಫ್ರೇಜರನ ಗೋಲ್ಡನ್ ಬೊ: ಒಂದು ಟೀಕೆ

ಫ್ರೇಜರನ ಗೋಲ್ಡನ್ ಬೊ: ಒಂದು ಟೀಕೆ

Ludwig Wittgenstein’s remarks on James Frazer’s Golden Bough


ಓದುವ ಮುನ್ನ…

20ನೇ ಶತಮಾನ ಕಂಡ  ಮೇಧಾವಿ ಪಂಡಿತರುಗಳಲ್ಲಿ, ಲುಡ್ವಿಗ್  ವಿಟ್ಗೆನ್ಸ್ಟೆಯ್ನ್/ Ludwig Wittgenstein (1889-1951) ಕೂಡ ಒಬ್ಬ. ರಿಲಿಜನ್ ಅಧ್ಯಯನ, ತರ್ಕ ಮತ್ತು ತತ್ವಶಾಸ್ತ್ರ, ಭಾಷೆಯ ಕುರಿತ ಅಧ್ಯಯನ, ಎಥಿಕ್ಸ್ ಮುಂತಾದವುಗಳಲ್ಲಿ ಈತನ ಸಿದ್ಧಾಂತಗಳು ಮತ್ತು ಒಳನೋಟಗಳು,ಇಂದಿಗೂ ಕೂಡ ತಮ್ಮ ಛಾಪನ್ನು ಊಳಿಸಿಕೊಂಡಿವೆ. ಆದರೆ, ಅವೆಲ್ಲವುಗಳಿಗಿಂತ ಭಾರತೀಯರಾದ ನಮಗೆ ಈತ ಮುಖ್ಯನಾಗುವುದು ಮತ್ತೊಂದು ವಿಚಾರಕ್ಕಾಗಿ: ಪಾಶ್ಚಾತ್ಯ ಸಂಸ್ಕೃತಿ ಮತ್ತು ಅದರ ರಿಲಿಜನ್ನಿನ ತಾತ್ವಿಕ ಚೌಕಟ್ಟಿನ ಮೂಲಕ ಏಷ್ಯಾ ಮತ್ತು ಆಫ್ರಿಕಾದ ಸಂಪ್ರದಾಯಗಳನ್ನು ಹಾಗು ಅದರ ಆಚರಣೆಗಳನ್ನು ಗ್ರಹಿಸಿದ ವಿದ್ವಾಂಸರು ಅವುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೇಗೆ ಸೋಲುತ್ತಾರೆ ಎಂದೂ, ಅದಕ್ಕ್ಕೂ ಹೆಚ್ಚಾಗಿ ಈ ಗ್ರಹಿಕೆಯ ಪರಿಣಾಮವಾಗಿ ಹೇಗೆ ಈ ಸಂಪ್ರದಾಯಗಳನ್ನು ಮೌಢ್ಯದ ಕಂತೆಯೆಂಬಂತೆ ಬಿಂಬಿಸಲ್ಪಟ್ಟವುಎಂಬುದನ್ನು ಈತ ತೋರಿಸಿಕೊಡುತ್ತಾನೆ. ದುರಂತವೆಂದರೆ ಈತನ ಈ ಒಳನೋಟಗಳು ಆತನ ನಂತರದ ವಿದ್ವಾಂಸರಿಗೆ ಅರ್ಥವಾಗಿದ್ದು ಮಾತ್ರ ಅಷ್ಟಕ್ಕಷ್ಟೆ.

ಕುವೆಂಪು ವಿ.ವಿಯಲ್ಲಿ  ಕಾರ್ಯನಿರತವಾಗಿರುವ Centre for the Study of Local Culturesನ ಸಂಶೋಧನಾ ತಂಡವು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅಭ್ಯಸಿಸುತ್ತಿರುವುದು ಈ ತಾತ್ವಿಕ ಚೌಕಟ್ಟಿನ ಮೂಲಕವೆ.  ನಮ್ಮ ಪಿ.ಎಚ್.ಡಿ ಸಂಶೋಧನಾ ಕಾರ್ಯಾಗಾರದಲ್ಲಿ ಬಳಸುವ ಉದ್ದೇಶದಿಂದ ಅನುವಾದಿಸಲಾಗಿದ್ದ ಈ ಲೇಖನವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.

ಅನುವಾದಕರು: ಸಂತೋಷ ಶೆಟ್ಟಿ, ಪಿ.ಎನ್. ಕವಿತ, ಪ್ರವೀಣ್ ಕುಮಾರ, ನಾಗಶಿಲ್ಪ ಆಚಾರಿ, ಮಹೇಶ್ ಕುಮಾರ, ವಾಣಿ ಪಾಲ್ವೆ, ಶಂಕರಪ್ಪ, ಡಂಕಿನ್ ಜಳಕಿ

Centre for the Study of Local Cultures (CSLC), ಕುವೆಂಪು ವಿ.ವಿ.


ಫ್ರೇಜರನ ಗೋಲ್ಡನ್ ಬೊ: ಒಂದು ಟೀಕೆ[i]

ಲೇ:  ಲುಡ್ವಿಗ್ ವಿಟ್ಗೆನ್ಸ್ಟೆಯ್ನ್

ನಾವು [ಒಂದು ವಿಷಯದ ಕುರಿತು ವಿಚಾರ ಮಾಡುವಾಗ] ಒಂದು ತಪ್ಪಿನೊಂದಿಗೆ/ಸಮಸ್ಯೆಯೊಂದಿಗೆ ಪ್ರಾರಂಭಿಸಿ, ಆ ತಪ್ಪನ್ನು ಸರಿಯಾದ ಗ್ರಹಿಕೆಯನ್ನಾಗಿ ಮಾರ್ಪಡಿಸಬೇಕು.

ಅಂದರೆ, ನಾವು ತಪ್ಪಿನ ಮೂಲವನ್ನು ತೋರಿಸಿಕೊಡಬೇಕು. ಕೇವಲ ತಪ್ಪಿನ ಸರಿಯಾದ ಗ್ರಹಿಕೆ ಅಥವ ಸತ್ಯವನ್ನು ಆಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ್ಲ. ತನ್ನ ಸ್ಥಳವನ್ನು ಬೇರೊಂದು ವಿಚಾರವು ಆಕ್ರಮಿಸಿಕೊಂಡಿರುವಾಗ, ಸತ್ಯವು ಒಳ ನುಸುಳಿಕೊಂಡು ಬರುವುದು ಸಾಧ್ಯವಿಲ್ಲ.

ಯಾರೋ ಒಬ್ಬರಿಗೆ ಸರಿಯಾದ ಗ್ರಹಿಕೆಯನ್ನು ಮನವರಿಕೆ ಮಾಡಿ ಕೊಡಲು, ಆ ಗ್ರಹಿಕೆಯನ್ನು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು; ಬದಲಿಗೆ ಒಂದು ಸಮಸ್ಯೆಯಿಂದ ಆರಂಭಿಸಿ ಅದು ಸರಿಯಾದ ಗ್ರಹಿಕೆಯಾಗಿ ರೂಪುಗೊಳ್ಳುವಲ್ಲಿನ ಪ್ರಕ್ರಿಯೆಯನ್ನು ತೋರಿಸಿ ಕೊಡಬೇಕು. ಒಂದು ವಿಚಾರವನ್ನು ಪದೇ ಪದೇ ಪ್ರಶ್ನಿಸುವುದನ್ನು, ಸಂದೇಹ ಪಡುವುದನ್ನು ನಾವು ರೂಢಿಸಿಕೊಳ್ಳಬೇಕು.

ಮ್ಯಾಜಿಕ್ ಹಾಗೂ ರಿಲಿಜನ್ನಿನ ಬಗ್ಗೆ ಮನುಕುಲವು ಹೊಂದಿರುವ ದೃಷ್ಟಿಕೋನಕ್ಕೆ ಸಂಬಂಧಿಸಿದ ಫ್ರೇಜರನ ವಿವರಣೆಯು ಅಸಮಾಧಾನಕರವಾಗಿದೆ. ಏಕೆಂದರೆ ಈತ ಮ್ಯಾಜಿಕ್[ii] ಹಾಗೂ ರಿಲಿಜನ್ನಿನ ಬಗ್ಗೆ ಮನುಕುಲದ ದೃಷ್ಟಿಕೋನವನ್ನು ತಪ್ಪಿನ/ಮೌಢ್ಯದ ಕಂತೆಯೆಂಬಂತೆ ಚಿತ್ರಿಸುತ್ತಾನೆ.

ಆಗಸ್ಟಿನನು ತನ್ನ ಕನ್ಫೆಶನ್[iii] (Confession) ಗ್ರಂಥದ ಪ್ರತೀ ಪುಟದಲ್ಲಿಯೂ ದೇವರನ್ನು ಕರೆಯುವಾಗ ಆತ ಮೂಢನಂಬಿಕೆಯ ಅಥವಾ ದೋಷಪೂರಿತ ವಿಚಾರದಲ್ಲಿ ತೊಡಗಿದ್ದನು ಎಂದು ಭಾವಿಸಬಹುದೆ?

ಆದರೆ – ಯಾರಾದರೂ ಹೀಗೆ ಹೇಳಬಹುದು – ಒಂದು ವೇಳೆ ಆಗಸ್ಟಿನನ ವಿಚಾರ ಸರಿ ಇದ್ದರೂ ಇರಬಹುದು, ಆದರೆ [ಕ್ರೈಸ್ತರಲ್ಲದ] ಇತರ ರಿಲಿಜನ್ನಿನ ಜನರು (ಉದಾ: ಬೌದ್ಧರು) ರಿಲಿಜನ್ ಸಂಬಂಧಿತವಾಗಿ ಇಟ್ಟುಕೊಂಡಿರುವ ನಂಬಿಕೆಗಳು ಮಾತ್ರ ಖಂಡಿತವಾಗಿಯೂ ತಪ್ಪು. ಅದರೆ, [ನನ್ನ ಪ್ರಕಾರ] ಇವರಲ್ಲಿ ಯಾರೂ ಕೂಡ [ಅವರ ಆಚರಣೆಗಳ ಮಟ್ಟಿಗೆ ಹೇಳುವುದಾದರೆ] ದೋಷಪೂರಿತ ವಿಚಾರದಲ್ಲಿ ತೊಡಗಿಕೊಂಡವರಲ್ಲ. ಮಾನವನ ಆಚರಣೆ ಮತ್ತು ನಂಬಿಕೆಗಳನ್ನು ಒಂದು ಸಿದ್ಧಾಂತವನ್ನಾಗಿ ಮುಂದಿಡದ ಹೊರತು ಅವು ತಪ್ಪಲ್ಲ್ಲ.

ಒಂದು ಆಚರಣೆಯ ಕುರಿತು ವಿವರಣೆ ನೀಡುವ ಪ್ರಕ್ರಿಯೆಯೇ ನನಗೆ ತಪ್ಪಾಗಿ ಕಾಣುತ್ತದೆ. ಉದಾಹರಣೆಗೆ, ರಾಜನ ವಿಧಿ-ಆಚರಣೆಗೆ ಸಂಬಂಧಿತ ಹತ್ಯೆಯ (ritual murder) ಕುರಿತು ನೀಡಿರುವ ವಿವರಣೆಯನ್ನೇ ತೆಗೆದುಕೊಳ್ಳೋಣ[iv]. ಇದನ್ನು ವಿವರಿಸುತ್ತಾ ಫ್ರೇಜರ್ ಮಾಡಿರುವ ಒಟ್ಟಾರೆ ಕೆಲಸವಿಷ್ಟೇ: ಅವನಂತೆಯೆ ಯೋಚಿಸುವವರಿಗೆ ಈ ಆಚರಣೆಗಳು ‘ಅರ್ಥ’ವಾಗುವಂತೆ ವಿವರಿಸುವುದು. ಈ ರೀತಿಯ ವಿವರಣೆಗಳನ್ನು ನೀಡುತ್ತಾ ಕಡೇಯದಾಗಿ ಫ್ರೇಜರ್ ಸಾಧಿಸುವ ಒಂದು ಗಮನಾರ್ಹ ಅಂಶವೆಂದರೆ, ಈ ಎಲ್ಲಾ ಆಚರಣೆಗಳನ್ನು ಕೇವಲ ಮೂರ್ಖತನದ ತುಣುಕುಗಳು ಎಂಬಂತೆ ಪ್ರಸ್ತುತಪಡಿಸುವುದು.

ಆದರೆ ಮನುಕುಲವು ತನ್ನೆಲ್ಲಾ ಆಚರಣೆಗಳನ್ನು ಕೇವಲ ಮೂರ್ಖತನದಿಂದಾಗಿ ಆಚರಿಸುತ್ತದೆ ಎಂದು ಹೇಳುವುದು ಎಂದಿಗೂ ಅಸಾಧ್ಯವೇ ಸರಿ.

ಫ್ರೇಜರ್ ಕೊಡುವ [ಒಂದು ಬುಡಕಟ್ಟು ಜನರ ಆಚರಣೆಯ] ಈ ವಿವರಣೆಯನ್ನೆ ಗಮನಿಸಿ. ಅವರು ರಾಜನನ್ನು ಇನ್ನೂ ತನ್ನ ಪ್ರಾಯದ ಉತ್ತುಂಗ ಸ್ಥಿತಿಯಲ್ಲಿರುವಾಗಲೇ ಹತ್ಯೆಗೈಯುತ್ತಿದ್ದರು. ಏಕೆಂದರೆ, [ಫ್ರೇಜರ್ ವಿವರಿಸುವಂತೆ] ಈ ರೀತಿಯಾಗಿ ಹತ್ಯೆಗೈಯದಿದ್ದರೆ ರಾಜನ ಆತ್ಮವನ್ನು ತಾಜಾ ಇಡಲು ಸಾಧ್ಯವಿಲ್ಲ ಎಂದು ಆ ಅನಾಗರೀಕರು ನಂಬಿದ್ದರು. [ಸೂಕ್ಷ್ಮವಾಗಿ ನೋಡುವುದಾದರೆ] ಒಟ್ಟಾರೆಯಾಗಿ ಈ ಆಚರಣೆಯ ಬಗ್ಗೆ ನಾವು ಇಷ್ಟು ಮಾತ್ರ ಹೇಳಬಹುದು: ಎಲ್ಲಿ ಒಂದು ಆಚರಣೆ ಮತ್ತು ನಂಬಿಕೆ ಒಟ್ಟಾಗಿ ಸಂಭವಿಸುತ್ತದೆಯೋ, ಅಲ್ಲಿ ಆ ಆಚರಣೆಯು ಆ ನಂಬಿಕೆಯಿಂದ ಹುಟ್ಟಿಕೊಂಡಿರುವುದಿಲ್ಲ. ಬದಲಾಗಿ, ಅವೆರೆಡೂ ಆ ಸಂದರ್ಭಕ್ಕೆ ಅಲ್ಲಿ ಒಟ್ಟಾಗಿ ಮೇಳೈಸಿರುತ್ತವೆ ಅಷ್ಟೆ.[v]

ಸಾಮಾನ್ಯವಾಗಿ, ಇಂದು ಯಾವುದೇ ಒಬ್ಬ ವ್ಯಕ್ತಿ, ತಾನು ನಡೆಸುವ ಆಚರಣೆಯು ಒಂದು ತಪ್ಪಿನ ಮೇಲೆ ಅವಲಂಬಿಸಿದೆ ಎಂದು ಕಂಡುಕೊಂಡ ಕೂಡಲೆ ಅದನ್ನು ಬಿಟ್ಟು ಬಿಡುತ್ತಾನೆ. ಅಂದರೆ ಒಬ್ಬನ ತಪ್ಪಿನತ್ತ ಆತನ ಗಮನ ಹರಿಸಿದರೆ ಸಾಕು ಆತನ ವರ್ತನೆಯನ್ನು ತಪ್ಪಿಸಬಹುದು ಎನ್ನುವಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ. ಆದರೆ ಜನರ ರಿಲಿಜಸ್ ಆಚರಣೆಗಳಿಗೆ ಸಂಬಂಧಿಸಿದಂತೆ ಈ ಮಾತು ಹೇಳುವುದು ಸಾಧ್ಯವಿಲ್ಲ. ಆದಕಾರಣ, ಇಲ್ಲಿ ದೋಷದ ಪ್ರಶ್ನೆಯೆ ಬರುವುದಿಲ್ಲವೆಂದಾಯಿತು.

ಫ್ರೇಜರ್ನ  ಪ್ರಕಾರ ಮ್ಯಾಜಿಕ್ನಲ್ಲಿರುವ ದೋಷ ಕಂಡುಹಿಡಿಯುವುದು ಬಹಳ ಕಷ್ಟದ ಕೆಲಸ, ಮತ್ತು ಆದ್ದರಿಂದಲೇ ಅದು ಬಹಳ ಕಾಲದಿಂದ ಉಳಿದುಕೊಂಡು ಬರಲು ಸಾಧ್ಯವಾಗಿದೆ. ಉದಾಹರಣೆಗೆ, ಮಳೆ ಬರಲಿ ಎಂದು ಮಾಡುವ ವ್ರತಾಚರಣೆಗಳು ಬಹಳ ಪ್ರಭಾವಕಾರಿ ಎಂದೆನಿಸುವುದು ಸಹಜ. ಏಕೆಂದರೆ, ಮಳೆಗೆ ಸಂಬಂಧಿಸಿದ ಈ ರೀತಿಯ ವ್ರತಾಚರಣೆ ಕೈಗೊಂಡ ತಕ್ಷಣದಲ್ಲೋ ಅಥವಾ ತಡವಾಗಿಯೊ, ಒಟ್ಟಿನಲ್ಲಿ ಒಂದಲ್ಲ ಒಂದು ದಿನ ನಿಸ್ಸಂಶಯವಾಗಿ ಮಳೆ ಬಂದೆಬರುತ್ತದೆಯಲ್ಲವೆ. ಹಾಗಾದರೆ, [ನನಗೆ] ಆಶ್ಚರ್ಯವೆನಿಸುವುದೇನೆಂದರೆ, ಶತ ಶತಮಾನಗಳಿಂದ ಇಂತಹ ಆಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿರುವ ಜನರಿಗೆ [ಫ್ರೇಜರ್ನ  ಪ್ರಕಾರ] ಇಷ್ಟು ಸಣ್ಣ ವಿಷಯವೂ ತಿಳಿದಿರಲಿಲ್ಲ ಎಂದಾಯಿತಲ್ಲ.

ಈ ಕಾರಣದಿಂದಾಗಿಯೆ, ಆಚರಣೆಗಳಿಗೆ  ವಿವರಣೆಕೊಡುವ ಕೆಲಸವೇ ತಪ್ಪೆಂದು ನಾನು ನಂಬಿರುವುದು. ಏಕೆಂದರೆ, ನಾವು ಯಾವಾಗಲೂ ನಮಗೆ ತಿಳಿದಿರುವಂತಹ ವಿಚಾರಗಳನ್ನಷ್ಟೆ ಸರಿಯಾಗಿ ಜೋಡಿಸಬೇಕು; ಅದಕ್ಕೆ ಹೊಸದಾಗಿ ಇನ್ನೇನನ್ನೂ ಸೇರಿಸಬಾರದು. ಹೀಗೆ ಮಾಡಿದಾಗ ಮಾತ್ರ ಒಂದು ವಿವರಣೆ ಹಾಗೂ ಆ ವಿವರಣೆಯಿಂದ ನಾವು ಬಯಸುವ ತೃಪ್ತಿಗಳೆರಡೂ ತನ್ನಷ್ಟಕ್ಕೆ ತಾನೆ ಸಿದ್ಧಿಯಾಗುವುದು.

ಹಾಗೆ ನೋಡಿದರೆ, ಇಲ್ಲಿ ನಮಗೆ ತೃಪ್ತಿಯನ್ನು ನೀಡುವುದು ವಿವರಣೆಗಳೇನೂ ಅಲ್ಲ. ಆಫ್ರಿಕಾದ ನೆಮಿ ಬುಡಕಟ್ಟಿನ ರಾಜನ ಕಥೆಯೊಂದಿಗೆ ತನ್ನ ವ್ಯಾಖ್ಯಾನವನ್ನು ಆರಂಭಿಸುವ ಫ್ರೇಜರ್ನ ಧ್ವನಿಯು, ಆತ ಈ ಬುಡಕಟ್ಟಿನ ಆಚರಣೆಗಳು ವಿಚಿತ್ರ ಹಾಗೂ ಬರ್ಬರವೆಂದು ನಂಬಿರುವುದು ಮತ್ತು ನಮ್ಮನ್ನೂ ಹಾಗೆ ನಂಬಲು ಆಗ್ರಹಿಸುತ್ತಿರುವುದೆರಡೂ ಕೇಳಿಸುತ್ತದೆ. ಆದರೆ, ಈ ರೀತಿಯ ಬರ್ಬರ ಆಚರಣೆಗಳು ಏಕೆ ನಡೆಯುತ್ತವೆ? ಎನ್ನುವ ನಮ್ಮ ಪ್ರಶ್ನೆಗೆ ಫ್ರೇಜರ್ನ ವಿವರಣೆಗಳಲ್ಲಿ ಸಿಗುವ ಉತ್ತರ ಮಾತ್ರ ಇಷ್ಟೆ: ಏಕೆಂದರೆ ಅವು ನಿಜವಾಗಿಯೂ ಬರ್ಬರ ಆಚರಣೆಗಳೇ ಆಗಿವೆ. ಅಂದರೆ, ಈ ಆಚರಣೆಗಳಲ್ಲಿ ಯಾವುದು ಬರ್ಬರ, ಭಯಾನಕ, ಕ್ಷುಲ್ಲಕ ಮತ್ತು ಅಪ್ರಾಮುಖ್ಯ ಎಂದು ನಮಗೆ ಎದ್ದು ಕಾಣುತ್ತದೆಯೋ, ಅವೇ ವಿಚಾರಗಳು ಈ ಆಚರಣೆಗಳನ್ನು ಹುಟ್ಟುಹಾಕುವ ಅಂಶಗಳು ಕೂಡಾ ಆಗಿವೆ.

ಮಾನವ ಜೀವನದ ಬಗ್ಗೆ ನಾವು ಇಷ್ಟು ಮಾತ್ರ ಹೇಳಬಹುದು: ಜೀವನವೆಂದರೆ ಹೀಗೇ ಇರುವುದು.

ಒಂದು ವಸ್ತು/ಸಂಗತಿಯು ನಮ್ಮ ಮೇಲೆ ಮೂಡಿಸುವ ಭಾವನೆಗೆ ಹೋಲಿಸಿದರೆ, ಆ ವಸ್ತು/ಸಂಗತಿಯ ಕುರಿತ ವಿವರಣೆಯು ನಮ್ಮ ಮೇಲೆ ಮೂಢಿಸುವ ಭಾವನೆಯು ಹೆಚ್ಚು ಅನಿಶ್ಚಿತವಾಗಿರುತ್ತದೆ.

ಯಾವುದೇ ವಿವರಣೆಯು ಕೇವಲ ಒಂದು ಹೈಪೋಥಿಸಿಸ್ ಅಷ್ಟೆ. ಆದರೆ, ಒಂದು ಹೈಪೋಥೆಟಿಕಲ್ ವಿವರಣೆಯು, ಯಾವುದೋ ಒಂದು ಸಮಸ್ಯೆಯಿಂದ ಬಳಲುತ್ತಿರುವವನನ್ನು ಸಮಾಧಾನ ಪಡಿಸುವುದಿಲ್ಲ. ಉದಾಹರಣೆಗೆ, ತನ್ನ ಪ್ರಿಯತಮ/ಮೆಯನ್ನು ಕಳೆದುಕೊಂಡು ವ್ಯಥೆ ಪಡುತ್ತಿರುವವನಿಗೆ ಯಾವುದೇ ಹೈಪೋಥೆಟಿಕಲ್ ವಿವರಣೆಗಳು ಸಮಾಧಾನಪಡಿಸುವುದಿಲ್ಲ.

[ಯಾವುದೇ ಆಚರಣೆಗಳ ಕುರಿತು ಮಾತನಾಡುತ್ತಿರುವಾಗ] ಒಬ್ಬನು, ಈ ಘಟನೆ ನಡೆಯಿತು, ಆ ಘಟನೆ ನಡೆಯಿತು ಎಂದು ಹೇಳಲು ಮಾತ್ರ ಸಾಧ್ಯ.

ಅಪ್ಪಟ [ಕ್ರಿಶ್ಚಿಯನ್/ಸೆಮೆಟಿಕ್] ರಿಲಿಜಸ್ ಆಚರಣೆೆಗಳಿಗಿಂತ (ಉದಾ: sin ಗಳ ತಪ್ಪೊಪ್ಪಿಗೆ/ಪ್ರಾಯಃಶ್ಚಿತ್ತ), ಆಫ್ರಿಕಾದ ಬುಡಕಟ್ಟಿನ ಜನರ ರಿಲಿಜಸ್ ಆಚರಣೆಗಳು ಅಥವಾ ಅವರ ರಿಲಿಜಸ್ ಬದುಕು ಯಾವುದೇ ರೀತಿಯಲ್ಲೂ ಭಿನ್ನವಲ್ಲ.

ಒಂದು ಪ್ರತಿಕೃತಿಯನ್ನು ದಹಿಸುವ ಅಥವಾ ಒಬ್ಬನು ತನ್ನ ಪ್ರಿಯತಮೆಯ ಚಿತ್ರಕ್ಕೆ ಮುತ್ತಿಡುವ ಎರಡೂ ವರ್ತನೆಗಳ ಹಿಂದೆ, ಆ ಚಿತ್ರ/ಪ್ರತಿಕೃತಿಯು ಪ್ರತಿನಿಧಿಸುತ್ತಿರುವ ವ್ಯಕ್ತಿಯ ಮೇಲೆ ಒಂದು ನಿರ್ದಿಷ್ಟ  ಪರಿಣಾಮವನ್ನು ಬೀರುತ್ತದೆ ಎಂಬ ನಂಬಿಕೆ ಖಂಡಿತ ಇರುವುದಿಲ್ಲ. ಇಂತಹ ವರ್ತನೆ ಕೇವಲ ತೃಪ್ತಿಯ ಗುರಿಯನ್ನು ಮಾತ್ರ ಹೊಂದಿದ್ದು, ಅದನ್ನು ಸಾಧಿಸುತ್ತದೆ. ಅಥವಾ ಇದು ಯಾವುದೇ ಗುರಿಯನ್ನು ಹೊಂದಿರುವುದೇ ಇಲ್ಲ; ನಾವು ಹಾಗೆ ವರ್ತಿಸಿ ತೃಪ್ತಿ ಹೊಂದಿದವರಂತೆ ಭಾವಿಸಿಕೊಳ್ಳುತ್ತೇವಷ್ಟೆ. ತನ್ನ ಪ್ರಿಯಕರನ/ಪ್ರಿಯತಮೆಯ ಹೆಸರನ್ನು ಚುಂಬಿಸುವ ಜನರನ್ನು ನಾವು ನೋಡಬಹುದು. ಇಲ್ಲಿ ನಮಗೆ ಸ್ಪಷ್ಟವಾಗುವ ಸಂಗತಿ ಎಂದರೆ, ಪ್ರೀತಿಸಲ್ಪಟ್ಟ ಆ ಜೀವಂತ ವ್ಯಕ್ತಿಗಳಿಗೆ ಪರ್ಯಾಯವಾಗಿಯಷ್ಟೇ ಈ ಹೆಸರುಗಳನ್ನು ಉಪಯೋಗಿಸಲಾಗುತ್ತದೆ.

[ಆಫ್ರಿಕಾದ ಆ ‘ಅನಾಗರಿಕ’ ವ್ಯಕ್ತಿ] ತನ್ನ ವೈರಿಯ ಚಿತ್ರವನ್ನು ಚೂರಿಯಿಂದ ಚುಚ್ಚುವುದರಿಂದ ಆ ವೈರಿಯನ್ನು ಕೊಲ್ಲಬಹುದು ಎಂದು ನಂಬಿರುತ್ತಾನೆ [ಎಂದು ಫ್ರೇಜರನು ವಿವರಿಸುತ್ತಾನೆ]. ಆದರೆ, [ಆಶ್ಚರ್ಯವೆಂದರೆ, ಆ ಅನಾಗರಿಕ ವ್ಯಕ್ತಿ] ತಾನು ವಾಸಿಸಲು ನಿರ್ಮಿಸಿಕೊಳ್ಳುವ ಮನೆಯನ್ನಾಗಲಿ ಅಥವಾ ಬಾಣವನ್ನಾಗಲಿ ನಿಜವಾದ ಇಟ್ಟಿಗೆ ಮತ್ತು ಕಟ್ಟಿಗೆಗಳಿಂದಲೇ, ತನ್ನೆಲ್ಲಾ ಕೌಶಲ್ಯಗಳನ್ನು ಬಳಸಿ ನಿರ್ಮಿಸಿಕೊಳ್ಳುತ್ತಾನೆಯೆ ಹೊರತು, ಅವುಗಳ ಚಿತ್ರವನ್ನಷ್ಟೆ ಬಿಡಿಸಿಕೊಂಡಲ್ಲ್ಲ.

ಆಚರಣೆಗಳನ್ನು ನಾವು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಹೊರಟಾಗ ಮಾತ್ರ ಸಮಸ್ಯೆಗಳು ಹುಟ್ಟುವುದು[vi]. ಮಗುವೊಂದನ್ನು ದತ್ತು ತೆಗೆದುಕೊಳ್ಳುವ ಸಂದರ್ಭದಲ್ಲಿ, ದತ್ತು ತೆಗೆದುಕೊಳ್ಳುವ ತಾಯಿಯು ಆ ಮಗುವನ್ನು ತನ್ನ ಸೆರಗಿನಲ್ಲಿ ಹಾಕಿ ತೆಗೆಯುವಂತಹ ಆಚರಣೆಯಿದೆ. ಇಲ್ಲಿ ತಾಯಿಯು ತಾನೇ ಆ ಮಗುವನ್ನು ಹಡೆದೆನೆಂಬ ನಂಬಿಕೆಯನ್ನು ಇಟ್ಟ್ಟುಕೊಂಡಿರುತ್ತಾಳೆಂದೂ, ಆದ್ದರಿಂದ ಇದು ಒಂದು ದೋಷಪೂರಿತವಾದ ಆಚರಣೆಯೆಂದು ವಾದಿಸುವುದು ಮಾತ್ರ ನಿಜವಾಗಿಯೂ ಹುಚ್ಚುತನ.

ಅವೈಜ್ಞಾನಿಕ ವಿಚಾರಗಳ ಬುನಾದಿಯ ಮೇಲೆ ನಿಂತಿರುವ ಕ್ರಿಯೆ ಮತ್ತು ಆಚರಣೆಗಳು ಹಾಗು ರಿಲಿಜಸ್ [ಮತ್ತು ಸಾಂಪ್ರದಾಯಿಕ] ಆಚರಣೆಗಳು ಒಂದೇ ಸ್ವರೂಪದವಲ್ಲ; ಅವನ್ನು ಬೇರೆ ಬೇರೆಯಾಗಿಯೇ ನೋಡಬೇಕು. ಈ ಉದಾಹರಣೆಯನ್ನು ಗಮನಿಸಿ: ರೋಗವು ಒಂದು ದ್ರವ ರೂಪದ ವಸ್ತು, ಅದು ದೇಹದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಚಲಿಸುತ್ತದೆ, ಅಥವಾ ಅದನ್ನು ದೇಹದ ಬೇರೊಂದು ಭಾಗಕ್ಕೆ ಹರಿಯುವಂತೆ ಮಾಡಬಹುದು ಎಂದು ವಾದಿಸುವವನು, ತನ್ನ [ತನ್ನ ದೇಹದ] ಕುರಿತು ಒಂದು ತಪ್ಪು [ಅವೈಜ್ಞಾನಿಕ] ಚಿತ್ರಣವನ್ನು ಸೃಷ್ಟಿಸುತ್ತಿರುತ್ತಾನೆ. ಈ ಪರಿಸ್ಥಿತಿಯ ಮಟ್ಟಿಗೆ, ಇಂತಹ ಚಿತ್ರಣವು ನಿರಾಧಾರವಾದಂತಹದ್ದು. [ಆದರೆ, ರಿಲಿಜಸ್/ಸಾಂಪ್ರದಾಯಿಕ ಆಚರಣೆಗಳು ಈ ಸ್ವರೂಪದ್ದಲ್ಲ.]

ಫ್ರೇಜರ್ನು ಸೃಷ್ಟಿಸುವ ರಿಲಿಜಸ್ ಜಗತ್ತಿನ ಚಿತ್ರಣವು ಎಷ್ಟೊಂದು ಸಂಕುಚಿತವಾದದ್ದೆಂದರೆ, ಅವನ ಕಾಲದ ಇಂಗ್ಲೆಂಡಿನ ಜೀವನ ಕ್ರಮವನ್ನು ಹೊರತುಪಡಿಸಿಯೂ ಅದರಾಚೆಗೆ ಬೇರೆಯದೇ ಆದಂತಹ ಒಂದು ಜೀವನ ಕ್ರಮವಿರಬಹುದೆಂದು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ! ತನ್ನ ಕಾಲದ ಮೂರ್ಖ ಮತ್ತು ದಡ್ಡ ಆಂಗ್ಲ  ಪ್ರೀಸ್ಟ್ [/ಪುರೋಹಿತ]ನನ್ನು ಬಿಟ್ಟು ಬೇರೆ ಪ್ರೀಸ್ಟನ್ನು ಕಲ್ಪನೆ ಮಾಡಿಕೊಳ್ಳುವುದಕ್ಕೂ ಫ್ರೇಜರ್ನಿಗೆ ಸಾಧ್ಯವಿಲ್ಲ.

ನಿಜವಾಗಿಯೂ, ಫ್ರೇಜರ್ನ ವಿವರಣೆಗಳು [ಪಶ್ಚಿಮದ ಜನರಾದ] ನಮ್ಮಲ್ಲಿರುವ ಒಂದು ಪ್ರವೃತ್ತಿಗೆ ಒಪ್ಪದ ಹೊರತು, ಅವು ವಿವರಣೆಗಳಾಗಿ ಕಾಣುವುದು ಸಾಧ್ಯವೇ ಇಲ್ಲ.

ಯಾವುದೇ ಒಂದು ವಿದ್ಯಮಾನವು ತನಷ್ಟಕ್ಕೆ ತಾನೇ ನಿಗೂಢವಾಗಿರುವುದಿಲ್ಲ, ಆದರೆ ಯಾವುದೋ ಒಂದು ವಿದ್ಯಮಾನ ನಮ್ಮ ಮಟ್ಟಿಗೆ ನಿಗೂಢವಾಗಬಹುದಷ್ಟೇ. ವಿದ್ಯಮಾನವೊಂದರ ನಿಜವಾದ ಅರ್ಥವನ್ನು ಗ್ರಹಿಸಿಕೊಳ್ಳುವುದೆ ಜಾಗೃತಿಗೊಂಡ ಮನಸ್ಸಿನ ಗುಣಲಕ್ಷಣ. ನಾವು ಮನುಷ್ಯನನ್ನು ಆಚರಣೆಗಳ ಜೀವಿ ಎಂದು ಕರೆದರೆ ಅದು ಉತ್ಪ್ರೇಕ್ಷೆಯಲ್ಲ. ಹಾಗೆ ಕರೆಯುವುದು, ಖಂಡಿತವಾಗಿಯೂ, ಭಾಗಶಃ ತಪ್ಪು ಮತ್ತು ಅಸಂಬದ್ದವಾದದ್ದು. ಆದರೂ ಈ ಹೇಳಿಕೆಯಲ್ಲಿ ಸತ್ಯವಾದದ್ದು ಏನೋ ಇದೆ ಎನ್ನುವುದರಲ್ಲಿ ಮಾತ್ರ ಯಾವುದೇ ಸಂಶಯವಿಲ್ಲ.

ಈ ವಿಚಾರದ ಕುರಿತು ಇನ್ನಷ್ಟು ಹೇಳುವುದಾದರೆ,  [ನನಗನ್ನಿಸುವಂತೆ] ಮಾನವಶಾಸ್ತ್ರದ ಕುರಿತ ಪುಸ್ತಕವೊಂದನ್ನು ಈ ಮುಂದಿನ ಹೇಳಿಕೆಯೊಂದಿಗೆ ಪ್ರಾರಂಭಿಸಬಹುದು: ಪ್ರಪಂಚದಾದ್ಯಂತ ಮಾನವನ ಜೀವನ ಮತ್ತು ವರ್ತನೆಯನ್ನು ಪರೀಕ್ಷಿಸಿದಾಗ, ಪ್ರಾಣಿ ಮತ್ತು ಮನುಷ್ಯರು ಹೊಂದಿರುವ ಸಹಜವಾದ ಆಹಾರ ಸೇವನೆ ಇತ್ಯಾದಿ ಚಟುವಟಿಕೆಗಳ ಹೊರತಾಗಿಯೂ ಮನುಷ್ಯ ಮಾತ್ರ ನಡೆಸುವ ಕೆಲವು ಕ್ರಿಯೆಗಳನ್ನು ಗುರುತಿಸಲು ಸಾಧ್ಯವಿದೆ. ಈ ಕ್ರಿಯೆಗಳು ತಮ್ಮದೇ ಆದ ಕೆಲವೊಂದು ಗುಣಲಕ್ಷಣಗಳನ್ನು ಹೊಂದಿವೆ. ಇಂತಹ ಕ್ರಿಯೆಗಳನ್ನು ಸಾಂಪ್ರದಾಯಿಕ ಆಚರಣೆಗಳು[vii] ಎಂದು ಕರೆಯಬಹುದು.

ಆದರೆ ಈ ಎಲ್ಲಾ ಕ್ರಿಯೆಗಳ ಒಂದು ಬಹುಮುಖ್ಯ ಗುಣಲಕ್ಷಣವೆಂದರೆ ಅದು ಒಂದು ಅವೈಜ್ಞಾನಿಕ ತಿಳುವಳಿಕೆಯಿಂದ ಹುಟ್ಟಿದ ಕ್ರಿಯೆಗಳು ಎಂದು ಯಾರಾದರು ಹೇಳಿದರೆ ಅದು ಶುದ್ಧ ಮೂರ್ಖತನವೇ ಸರಿ. ಮ್ಯಾಜಿಕನ್ನು ಮೂಲತಃ ಒಂದು ತಪ್ಪು ಭೌತಶಾಸ್ತ್ರ, ತಪ್ಪು ವೈದ್ಯವಿಜ್ಞಾನ ಅಥವಾ ತಪ್ಪು ತಂತ್ರಜ್ಞಾನ ಎಂದು ಹೇಳುವ ಮೂಲಕ ಫ್ರೇಜರ್ ಇದೇ ಮೂರ್ಖತನವನ್ನು ತೋರಿಸುತ್ತಾನೆ.

ಸುಳ್ಳು ಅಥವಾ ಸತ್ಯ ಅಭಿಪ್ರಾಯವಾಗಿರುವುದು ಅಥವಾ ದೃಷ್ಟಿಕೋನವಾಗಿರುವುದು, ಸಾಂಪ್ರದಾಯಿಕ ಆಚರಣೆಗಳ ಗುಣಲಕ್ಷಣವೇ ಅಲ್ಲ. [ಅಂದರೆ, ಸಾಂಪ್ರದಾಯಿಕ ಆಚರಣೆಗಳು ಒಂದು ಅಭಿಪ್ರಾಯ ಅಥವಾ ದೃಷ್ಟಿಕೋನವಾಗಿರುವುದಿಲ್ಲ.] ಆದರೆ, ಒಂದು ಅಭಿಪ್ರಾಯವು ಅಥವಾ ನಂಬಿಕೆಯು ತಾನೇ ಒಂದು ಸಾಂಪ್ರದಾಯಿಕ ಆಚರಣೆಯಾಗಿರಬಹುದು ಅಥವಾ ಅದು ಆ ರೀತಿಯ ಒಂದು ಆಚರಣೆಯ ಭಾಗವಾಗಿರಬಹುದು.

ನಾವು ಭಾಷೆಯನ್ನು ಸಮಗ್ರವಾಗಿ ಬಗೆದು ನೋಡಬೇಕು.

ಫ್ರೇಜರನು ಹೇಳುವಂತೆ, …[ನಾವು ಇದುವರೆಗೂ ನೋಡಿರುವ] ಆಚರಣೆಗಳು, ಕೊಲ್ಲಲ್ಪಟ್ಟ ವ್ಯಕ್ತಿಯ ಘೋಸ್ಟ್ (Ghost)ನ ಭಯದ ನಿರ್ದೇಶನದಲ್ಲೇ ನಡೆದಿವೆ ಎಂಬುದು ಸರ್ವವೇದ್ಯ… [ಅಂದರೆ, ಘೋಸ್ಟ್ನ ಭಯವೇ ನಂಬಿಕೆಯಾಗಿ ಆಚರಣೆಗಳನ್ನು ನಿಯಂತ್ರಿಸುತ್ತಿವೆ]. ಆದರೆ, ಫ್ರೇಜರನು ಈ ‘ಘೋಸ್ಟ್’ ಎಂಬ ಪದವನ್ನು ಏಕೆ ಬಳಸಿದ? ಅಂದರೆ, ಫ್ರೇಜರ್ ಈ ‘ಮೂಢನಂಬಿಕೆ’ಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲ ಎಂದಾಯಿತು; ಆದ್ದರಿಂದಲೇ ಆತ ತನಗೆ ಚಿರಪರಿಚಿತವಿರುವ ಮೂಢನಂಬಿಕೆಯ ಪದದ ಮೂಲಕ ಈ ಆಚರಣೆಯನ್ನು ನಮಗೆ ವಿವರಿಸಲು ಪ್ರಯತ್ನಿಸುತ್ತಾನೆ. ನಾನು, ಎಲ್ಲೋ ಒಂದು ಕಡೆ ಗಾಡ್ ಎಂದು ಕರೆಯಬಹುದಾದ ಅತಿಮಾನುಷ ಶಕ್ತಿಯೊಂದು ಇರಬಹುದು ಎಂದು ನಂಬದ ವ್ಯಕ್ತಿಯಾಗಿದ್ದು, ಒಂದೊಮ್ಮೆ ಗಾಡ್ನ ಕೋಪದ ಕುರಿತು ನನಗೆ ಭಯವಿದೆ ಎಂದು ಹೇಳಿದಲ್ಲಿ, ನನ್ನ ಹೇಳಿಕೆಗೂ ಗಾಡ್ನ ಕುರಿತ ನನ್ನ ನಂಬಿಕೆಗೂ ಸಂಬಂಧವಿರಲೇಬೇಕಾದ ಅಗತ್ಯತೆ ಇಲ್ಲವೆಂದು ತೋರಿಸುತ್ತದೆ. ಈ ಹೇಳಿಕೆಯ ಮೂಲಕ ನಾನು ನನ್ನ ಮತ್ತಾವುದೋ (ಗಾಡ್ನ ಕುರಿತ ನನ್ನ ನಂಬಿಕೆಗೆ ಸಂಬಂಧವಿರದ) ಭಾವನೆಗೆ ಶಬ್ದ ರೂಪಕೊಟ್ಟಂತಾಗುತ್ತದೆ.

ಐತಿಹಾಸಿಕ ವಿವರಣೆಯು – ವಿಕಾಸವಾದವನ್ನು ಪ್ರತಿಪಾದಿಸುವ ಐತಿಹಾಸಿಕ ವಿವರಣೆಯು -ಮಾಹಿತಿಗಳನ್ನು ಜೋಡಿಸುವ ಒಂದು ರೀತಿಯ ವಿಧಾನವಷ್ಟೆ. ಮಾಹಿತಿಗಳನ್ನು, ಕಾಲದಿಂದ ಕಾಲಕ್ಕೆ ಆದ ವಿಕಾಸದ ಚಿತ್ರಣವನ್ನು ನೀಡುವ ವಿವರಣೆಯೆಂಬ ರೀತಿಯಲ್ಲಿ ಮಾತ್ರವಲ್ಲದೆ, ಬೇರೆ ರೀತಿಯಲ್ಲೂ ನೋಡಬಹುದು. [ಉದಾಹರಣೆಗೆ] ಮಾಹಿತಿಗಳ ಅಂತರ ಸಂಬಂಧವನ್ನು ಕುರಿತು ನಾವು ಗಮನ ಹರಿಸಬಹುದು.

ನಾನು ಹೇಳಲು ಇಚ್ಛಿಸುವುದೆಂದರೆ: ಫ್ರೇಜರ್ ಹಾಗೂ ಅವನು ವಿವರಣೆ ಕೊಡುವ ಆ ಬುಡಕಟ್ಟು ಜನರ  ಮಧ್ಯೆ ಇರುವ ಸಂಬಂಧದ ಪರಿಯನ್ನು, ಅವನು ಬಳಸುವ ಪರಿಕಲ್ಪನೆಗಳ ಮೂಲಕ ತಿಳಿದುಕೊಳ್ಳಬಹುದು. ಆ ಬುಡಕಟ್ಟು ಜನರನ್ನು ಹಾಗೂ ಅವರ ಜೀವನ ಕ್ರಮವನ್ನು ವಿವರಿಸಲು, ಫ್ರೇಜರ್ ತನಗೂ ಮತ್ತು ನಮಗೂ ಚಿರಪರಿಚಿತವಿರುವ ‘ಘೋಸ್ಟ್’ ಪದವನ್ನು ಬಳಸುತ್ತಾನೆ.

ಫ್ರೇಜರನು ಈ ಮುಂದಿನಂತೆ ಚಿತ್ರಿಸಿದ್ದರೆ ಅವನ ವಿವರಣೆಯು ನಿಜವಾಗಿಯೂ ಬೇರೆಯದೇ ರೀತಿಯಲ್ಲಿರುತ್ತಿತ್ತು: ‘ಆ ಅನಾಗರೀಕ ಜನರು, ತಮ್ಮ ಶತ್ರುಗಳನ್ನು ಕೊಂದ ಮೇಲೆ ತಮ್ಮ ಶಿರಗಳು ಉರುಳಿ ಹೋಗುತ್ತವೆ ಎಂದು ಕಲ್ಪಿಸಿಕೊಂಡಿದ್ದರು.’ ಈ ವಿವರಣೆಯಲ್ಲಿ ಯಾವುದೇ ರೀತಿಯ ಮೂಢನಂಬಿಕೆಯಾಗಲಿ ಅಥವಾ ಮ್ಯಾಜಿಕ್ನ ಅಂಶಗಳಾಗಲಿ ಇಲ್ಲದಿರುವುದನ್ನು ನಾವು ಗಮನಿಸಬಹುದು.

ಹಾಗೆ ನೋಡುವುದಾದರೆ, ಈ ಸಮಸ್ಯೆ ಕೇವಲ ‘ಘೋಸ್ಟ್’ ಮತ್ತು ‘ಶೇಡ್’  (‘shade’) ಪದಗಳ ಕುರಿತಾದದ್ದೇನಲ್ಲ. ಇಂದು ನಾವು ಸೋಲ್’ ಮತ್ತು ‘ಸ್ಪಿರಿಟ್’ (‘soul’, ‘spirit’)  ನಂಥ ಪದಗಳನ್ನು ನಮ್ಮ ದೈನಂದಿನ ಜೀವನದ ಬೌದ್ಧಿಕ ಶಬ್ದ ಭಂಡಾರದ ಭಾಗಗಳನ್ನಾಗಿ ಮಾಡಿಕೊಂಡು,  ಅವುಗಳ ಅರ್ಥ ವಿವೇಚನೆಯ ಗೊಡವೆಗೂ ಹೋಗದೆ, ಅವುಗಳನ್ನು ತೀರಾ ಸಾಮಾನ್ಯ ಶಬ್ದಗಳೆಂಬಂತೆ ಬಳಸುತ್ತ್ತಿದ್ದೇವೆ.

ಒಂದು ಭಾಷೆಯಲ್ಲಿ ಆ ಸಂಸ್ಕೃತಿಗೆ ಸೇರಿದ ವಿಚಾರಗಳೆಲ್ಲವೂ ಅಡಗಿಕೊಂಡಿರುತ್ತದೆ.

ಅಭಿಪ್ರಾಯ ಅಥವಾ ನಂಬಿಕೆಗಳ ಆಧಾರದ ಮೇಲೆ ಆದಿಮ ಮನುಷ್ಯನ [ಎಲ್ಲಾ] ಕ್ರಿಯೆಗಳು ನಡೆಯುತ್ತಿರಲಿಲ್ಲವೆಂದೇ ನಾನು ನಂಬಿರುವುದು. ಫ್ರೇಜರ್ ಇದಕ್ಕೆ ತದ್ವಿರುದ್ದವಾದ ನಂಬಿಕೆಯನ್ನಿಟ್ಟುಕೊಂಡವನು.

ನಾನು ಓದಿರುವ ಹಲವಾರು ಉದಾಹರಣೆಗಳಲ್ಲಿ ಒಂದನ್ನು ಇಲ್ಲಿ ಹೇಳುತ್ತೇನೆ: ಆಫ್ರಿಕಾದಲ್ಲಿನ ಕೆಲ ಜನಾಂಗಗಳಲ್ಲಿ, ಮಳೆಗಾಗಿ ಮಳೆಯ-ರಾಜನನ್ನು [ಅಥವಾ ಮಳೆಯ ದೇವತೆಯನ್ನು] ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಪ್ರಾರ್ಥಿಸುವ ಒಂದು ಆಚರಣೆಯಿದೆ. ಅಂದಮಾತ್ರಕ್ಕೆ ಅವರು ಮಳೆ-ರಾಜನು ಮಳೆಯನ್ನು ಸುರಿಸುತ್ತಾನೆ ಎಂದು ನಂಬಿದ್ದಾರೆಂದೇನಲ್ಲ. ಹಾಗೇನಾದರೂ ನಂಬಿದ್ದೆ ಆದರೆ, ಭೂಮಿಯು ಬಿಸಿಲಿನಿಂದ ಬಾಡಿ, ಮರುಭೂಮಿಯಂತೆ ಬರಡೆದ್ದು ಹೋಗುವ ಬೇಸಿಗೆ ಕಾಲದಲ್ಲಿಯೂ ಅವರು ಈ ಆಚರಣೆಯನ್ನು ಆಚರಿಸುತ್ತಿದ್ದರು. ಈ ರೀತಿಯ ಆಚರಣೆಗಳನ್ನು ಜನರು ತಮ್ಮ ಮೂಢನಂಬಿಕೆ ಮತ್ತು ಅಜ್ಞಾನದಿಂದಾಗಿಯೆ ಸೃಷ್ಟಿಸಿಕೊಂಡಿದ್ದಾರೆ ಎಂದು [ಫ್ರೇಜರನು ಹೇಳುವುದನ್ನು] ನಂಬುವುದಾದರೆ, ಜನರು ತಮ್ಮ ಅದೇ ಅಜ್ಞಾನವನ್ನು ಮುಂದುವರೆಸಿ, ಈ ರೀತಿಯ ಆಚರಣೆಯಿಂದ ಮಳೆಯನ್ನು ತರಿಸಬಹುದು ಎಂದು ನಂಬಿಕೊಂಡು ಬಿರುಬಿಸಿಲಿನ ಕಾಲದಲ್ಲೂ ಮಳೆ-ರಾಜನನ್ನು ಪ್ರಾರ್ಥಿಸಬೇಕಿತ್ತು. [ಆದರೆ, ಈ ರೀತಿಯ ಆಚರಣೆಗಳನ್ನು ಮಳೆಗಾಲದಲ್ಲಿ ಮಾತ್ರ ಏಕೆ ನಡೆಸುತ್ತಾರೆ?] ಅಥವಾ, ಇನ್ನೊಂದು ಉದಾಹರಣೆ ಕೊಡುವುದಾದರೆ, ಸೂರ್ಯೋದಯವಾಗುವ ಕೆಲ ಹೊತ್ತಿನ ಮುಂಚೆಯಷ್ಟೆ ಜನರು ಸೂರ್ಯೋದಯಕ್ಕೆ ಸಂಬಂಧಪಟ್ಟ ಆಚರಣೆಗಳನ್ನು ನಡೆಸುತ್ತಾರೆಯೇ ಹೊರತು ರಾತ್ರಿಯ ಸಮಯದಲ್ಲಿ ಅಲ್ಲ. ರಾತ್ರಿಯಲ್ಲಿ ಅವರು ದೀಪವನ್ನು ಹಚ್ಚಿಡುತ್ತಾರಷ್ಟೆ.

ನಾನು ಯಾವುದಾದರು ವಿಷಯದ ಬಗ್ಗೆ ಕೋಪಗೊಂಡಾಗ, ನನ್ನ ಕೈಕೋಲಿನಿಂದ ನೆಲವನ್ನೋ ಅಥವಾ ಮರವನ್ನೋ ಹೊಡೆಯುತ್ತಿರುತ್ತೇನೆ. ಆದರೆ, ಅವುಗಳ ಮೇಲೆ ಹಾಗೆ ಕೋಪ ತೋರಿಸುವುದರಿಂದಾಗಲಿ ಅಥವಾ ಹೊಡೆಯುವುದರಿಂದಾಗಲೀ ಏನಾದರು ಪ್ರಯೋಜನವಾಗಬಹುದೆಂದು ನಂಬಿ ನಾನು ಹಾಗೆ ನಡೆದುಕೊಳ್ಳುವುದಿಲ್ಲ. ಅದು ನಾನು ನನ್ನ ಕೋಪವನ್ನು ವ್ಯಕ್ತಪಡಿಸುವ ವಿಧಾನವಷ್ಟೇ. ಆಚರಣೆಗಳೆಲ್ಲವೂ ಈ ರೀತಿಯ ಕ್ರಿಯೆಗಳೆ. ಇಂತಹ ಕ್ರಿಯೆಗಳನ್ನು ನಾವು ಸಹಜ-ಪ್ರವೃತ್ತಿಗಳೆಂದು [Instinct-actionsಗಳೆಂದು] ಕರೆಯಬಹುದು. ನಾನು ಅಥವಾ ನಮ್ಮ ಪೂರ್ವಜರು ನೆಲವನ್ನು ಒದೆಯುವುದರಿಂದ ಏನೋ ಪ್ರಯೋಜನವಾಗುತ್ತದೆ ಎಂದು ನಂಬಿದ್ದೇವೆ ಎನ್ನುವಂತಹ ಐತಿಹಾಸಿಕ ವಿವರಣೆಯು ಕೇವಲ ನೆರಳಿನ ಜೊತೆ ಗುದ್ದಾಡಿದಂತೆ. ಇಂತಹ ಅನವಶ್ಯಕ ಗ್ರಹಿಕೆಗಳು ಏನನ್ನೂ ವಿವರಿಸುವುದಿಲ್ಲ. ನಾನು ಮೇಲೆ ಚರ್ಚಿಸಿದ, ಮರ ಅಥವಾ ನೆಲವನ್ನು ಕೈಕೋಲಿನಿಂದ ಹೊಡೆಯುವ ಕ್ರಿಯೆ ಹಾಗು ಯಾರನ್ನಾದರು ಶಿಕ್ಷಿಸುವ ಕ್ರಿಯೆಗೂ ಒಂದು ಸಾಮ್ಯತೆ ಇರುವುದೇನೋ ನಿಜ. ಆದರೆ ಈ ಸಾಮ್ಯತೆಗಿಂತ ಹೆಚ್ಚಿನದೇನನ್ನೂ ಹೇಳಲು ಸಾಧ್ಯವಿಲ್ಲ.

ಈ ರೀತಿಯ [ತೋರಿಕೆಯ] ಸಾಮ್ಯತೆಯನ್ನು ಗುರುತಿಸಿ ಅದನ್ನು ಚರ್ಚಿಸ ಹೊರಟ ಕೂಡಲೆ, ನಾವು ಖಂಡಿತವಾಗಿಯು ಬಯಸುವುದು, ಆಚರಣೆಗಳ ಹಿಂದಿರುವ ಪ್ರಯೋಜನವನ್ನು ಹುಡುಕುವ ವಿವರಣೆಯೆ. ಈ ರೀತಿಯ ವಿವರಣೆಯನ್ನು ನಾವು ಕೈಗೆತ್ತಿಕೊಂಡ ಕೂಡಲೆ, ಆಚರಣೆಗಳು ಮತ್ತು ಸಹಜ-ಪ್ರವೃತ್ತಿಗಳು [ಉದಾಹರಣೆಗೆ, ನೆಲವನ್ನು ಹೊಡೆಯುವ ನನ್ನ ಪ್ರವೃತ್ತಿಯು] ಹೊಂದಿರಬಹುದಾದ ಐತಿಹಾಸಿಕ ಕಾರಣಗಳನ್ನು ಶೋಧಿಸುವ ಸಂಶೋಧನೆಗಳು ಆರಂಭಗೊಳ್ಳುತ್ತವೆ.

ಮನುಕುಲದ ಕೆಲವಾರು ಜನಾಂಗಗಳು ಮರಗಳನ್ನು [ಉದಾಹರಣೆಗೆ, ಓಕ್ ಮರಗಳನ್ನು ಎಂದಿಟ್ಟುಕೊಳ್ಳಿ] ಪೂಜಿಸುವುದಕ್ಕೆ ಯಾವುದಾದರು ಕಾರಣವಿರಲೇಬೇಕಾದ ಅವಶ್ಯಕತೆಯಿಲ್ಲ. ಆ ಮನುಷ್ಯರು ಮತ್ತು (ಓಕ್) ಮರವು ಜೀವನದ ಸಮುಚ್ಚಯದಲ್ಲಿ ಒಂದಾಗಿವೆ ಎನ್ನುವ ವಿಚಾರವಷ್ಟೇ ಸಾಕು. ಹಾಗೆ ಅವು ಒಂದಾಗಿರುವುದು ತಮ್ಮ ಸ್ವ-ಆಯ್ಕೆಯಿಂದಲ್ಲ, ಬದಲಾಗಿ ನಾಯಿಯ ಮೈಮೇಲೆ ಚಿಗಟವಿರುವ ರೀತಿಯಲ್ಲಿ. (ಒಂದು ಪಕ್ಷ ಚಿಗಟಗಳೇನಾದರು ತಮ್ಮದೇ ಆದ ಆಚರಣೆಗಳನ್ನು ಆರಂಭಿಸುವುದೇ ಆದರೆ ಆ ಆಚರಣೆಗಳು ನಾಯಿಯನ್ನೇ ಅವಲಂಬಿಸಿರುತ್ತದೆ).


ಟಿಪ್ಪಣಿಗಳು

[i] (ಇದು ಮತ್ತು ಮುಂದಿನ ಎಲ್ಲಾ ಅಡಿ ಟಿಪ್ಪಣಿಗಳು ಹಾಗು ಚೌಕಾಕಾರದ ಆವರಣ ಚಿಹ್ನೆಯಲ್ಲಿ – [ ] – ಕೊಟ್ಟಿರುವ ಪದಗಳು ಅನುವಾದಕರಿಗೆ ಸೇರಿದ್ದು.) ಈ ಲೇಖನವನ್ನು Centre for the Study of Local Cultures (CSLC),  ಕುವೆಂಪು ವಿ.ವಿ., ಇವರು ಸ್ನಾತಕೋತ್ತರ ಮತ್ತು ಸಂಶೋಧನಾ ವಿಧ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೂರನೇ ಕಾರ್ಯಾಗಾರದಲ್ಲಿ ಬಳಸುವ ಉದ್ದೇಶದಿಂದ ಅನುವಾದಿಸಿದ್ದು. ಸಂಶೋಧನಾ ವಿಧಾನಗಳ ಕುರಿತ ಈ ಕಾರ್ಯಾಗಾರಗಳ  ಪ್ರಾಯೋಜಕರಾದ ಸರ್ ರತನ್ ಟಾಟ ಟ್ರಸ್ಟ್ (SRTT), ಹಾಗು ಮೂರನೇ ಕಾರ್ಯಾಗಾರವನ್ನು ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ನೀನಾಸಂ (NINASAM), ಹೆಗ್ಗೋಡು, ಇವರಿಗೆ ನಮ್ಮ ಧನ್ಯವಾದಗಳು.

[ii] ಫ್ರೇಜರ್ ಈ ಶಬ್ದವನ್ನು ಆಂತ್ರೋಪಾಲಜಿ ಮತ್ತು ರಿಲಿಜಸ್ ಅಧ್ಯಯನಗಳಲ್ಲಿ ಬಳಸುವ ರೀತಿಯಲ್ಲಿ ಬಳಸುತ್ತಿದ್ದಾನೆ. ಸ್ಥೂಲವಾಗಿ ಹೇಳುವುದಾದರೆ, ಜಾದುವಿನ ಮೂಲಕ ಜಗತ್ತಿನಮೇಲೆ ಪರಿಣಾಮ ಬೀರಬಹುದು ಎನ್ನುವ ನಂಬಿಕೆಗಳು ಮಾನವನ ಎಲ್ಲಾ ಜನಾಂಗಗಳಲ್ಲೂ ಇತ್ತು. ಮಾನವನ ಚಿಂತನಾ ಶಕ್ತಿ ಬೆಳೆಯುತ್ತಾ ಹೋದಹಾಗೆ ಮಾನವ ಈ ರೀತಿಯ ಅಸಂಬದ್ಧವಾದ ನಂಬಿಕೆಗಳನ್ನು ಬಿಡುತ್ತಾ ಹೋದ. ಮತ್ತು ಇದು ಕ್ರಮೇಣ ಒಂದುಕಡೆ ಸತ್ಯವಾದ ರಿಲಿಜನ್ಆಗಿ ಬೆಳೆದರೆ, ಮತ್ತೊಂದು ಕಡೆ ತರ್ಕಬದ್ಧ ವಿಜ್ಞಾನವಾಗಿ ಬೆಳೆಯತು. ಆದರೆ, ಆಫ್ರಿಕಾ ಮತ್ತು ಏಷ್ಯಾದ ಜನರು ಮಾತ್ರ ಇತ್ತ ಸತ್ಯವಾದ ರಿಲಿಜನ್ನನ್ನು ಬೆಳೆಸಿಕೊಳ್ಳಲಿಲ್ಲ, ಅತ್ತ ತರ್ಕಬದ್ಧ ವಿಜ್ಞಾನವನ್ನು ಬೆಳೆಸಿಕೊಳ್ಳಲಿಲ್ಲ. ಆಂತ್ರೋಪಾಲಜಿ ಮತ್ತು ರಿಲಿಜಸ್ ಅಧ್ಯಯನಗಳು ಇಂದಿಗೂ ಕೂಡ, ಸೂಕ್ಷ್ಮವಾಗಿಯಾದರೂ, ಉಳಿಸಿಕೊಂಡು ಬಂದಿರುವ ಗ್ರಹಿಕೆ ಇದು.

[iii] ಆಗಸ್ಟಿನ್ (354-450) ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಪಂಗಡದ ಒಬ್ಬ ಅತಿ ಪ್ರಸಿದ್ಧ ಸಂತ. ಈತ ಕ್ರಿಶ್ಚಿಯನ್ಆಗಿ ಮತ ಪರಿವರ್ತನೆಗೊಂಡು, ಪ್ರೀಸ್ಟ್ ಆಗಿ ದುಡಿಯುತ್ತಾ ಕ್ರಮೇಣ ಉತ್ತರ ಆಫ್ರಿಕಾದ ಹಿಪ್ಪೋ ರೀಗಿಯಸ್ (Hippo Regius) ಭಾಗದ ಬಿಶಪ್ಪನಾಗಿ ಮೇಲೇರಿದವನು.

[iv] ಆಫ್ರಿಕದ ಕೆಲವು ಬುಡಕಟ್ಟು ಜನಾಂಗದಲ್ಲಿರುವ ಈ ಆಚರಣೆಯ ಪ್ರಕಾರ, ರಾಜನು ಇನ್ನೂ ಸಣ್ಣವಯಸ್ಸಿನಲ್ಲಿರುವಾಗಲೆ ಜೀವ ತ್ಯಾಗ ಮಾಡಬೇಕಿತ್ತು. ರಾಜನ ಈ ಜೀವ ತ್ಯಾಗ ಅಥವ ಸಾಂಪ್ರದಾಯಿಕ ಹತ್ಯೆಯ ಸುತ್ತಮುತ್ತ ಬಹಳಷ್ಟು ಆಚರಣೆಗಳಿದ್ದವು. ಹೆಚ್ಚಿನ ಮಾಹಿತಿಗಾಗಿ ಫ್ರೇಜರ್ನ ಗೋಲ್ಡನ್ ಬೊ ಗ್ರಂಥವನ್ನು ನೋಡಿ.

[v] ಬೇರೆ ರೀತಿಯಲ್ಲಿ ಹೇಳುವುದಾದರೆ, ಇಲ್ಲಿ ಆಚರಣೆ ಹಾಗೂ ನಂಬಿಕೆ ಎರಡೂ ಒಟ್ಟಿಗೆ ಇವೆ ಎಂದಷ್ಟೆ ಹೇಳಬಹುದು. ಆದರೆ, ಆ ನಂಬಿಕೆಯಿಂದಲೇ ಆಚರಣೆ ಅಸ್ತಿತ್ವ್ವದಲ್ಲಿದೆಯೇ ಅಥವಾ ಆ ಆಚರಣೆಯಿಂದ ನಂಬಿಕೆ ಹುಟ್ಟಿದೆಯೇ ಎಂಬುದಾಗಿ ಹೇಳುವುದು ಸಾಧ್ಯವಿಲ್ಲ.

[vi] ಉದಾ: ‘ತುಳಸಿ ಪೂಜೆಯನ್ನು ಮಾಡಲು ವೈಜ್ಞಾನಿಕ ಕಾರಣಗಳಿವೆ. ಅದರಲ್ಲಿರುವ ಔಷಧೀಯ ಅಂಶಗಳನ್ನು ಮುಂಜಾನೆಯ ಹೊತ್ತು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ.’ ಆಚರಣೆಗಳನ್ನು ಕುರಿತ ಈ ರೀತಿಯ ವಿವರಣೆಗಳು ಸಮಸ್ಯಾತ್ಮಕವೆನ್ನುವುದು ವಿಟ್ಗೆನ್ಸ್ಟೆಯ್ನ್ರ ವಾದ.

[vii] ವಿಟ್ಗೆನ್ಸ್ಟೆಯ್ನ್ನ ಮಾತಿನಲ್ಲಿ ಹೇಳುವುದಾದರೆritualಗಳು ಅಥವ ritualistic actionsಗಳು

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: