ಮುಖ ಪುಟ > Cultural Studies, Culture, Dharma, Hindu, Religion > ಯಂತ್ರಗಳನ್ನು ಕಳಚೋಣ ಬನ್ನಿ: ಒಂದು ವಿಮರ್ಶಾತ್ಮಕ ಓದು

ಯಂತ್ರಗಳನ್ನು ಕಳಚೋಣ ಬನ್ನಿ: ಒಂದು ವಿಮರ್ಶಾತ್ಮಕ ಓದು

ಯಂತ್ರಗಳನ್ನು ಕಳಚೋಣ ಬನ್ನಿ: ಒಂದು ವಿಮರ್ಶಾತ್ಮಕ ಓದು

YantragaLannu Kalachona Banni (trans : Lets move away from Machines): A Critical Reading

* ಕವಿತ. ಪಿ. ಎನ್ * ಡಂಕಿನ್ ಜಳಕಿ

ಪ್ರಸನ್ನರ ಯಂತ್ರಗಳನ್ನು ಕಳಚೋಣ ಬನ್ನಿ ಪುಸ್ತಕದ ಈ ವಿಮರ್ಶೆಯನ್ನು, ಈ ಪುಸ್ತಕವನ್ನು ಹೇಗೆ ಓದಬೇಕು ಎಂಬ ವಿಚಾರದ ಮೂಲಕವೆ ಆರಂಭಿಸುವುದು ಸೂಕ್ತ. ಯಾಕೆಂದರೆ, ಈ ಪುಸ್ತಕವನ್ನು ತಪ್ಪುತಪ್ಪಾಗಿ ಅರ್ಥ ಮಾಡಿಕೊಳ್ಳುವ ಹಲವಾರು ಸಾಧ್ಯತೆಗಳಿವೆ. ನಾವು ಗಮನಿಸಬೇಕಾದ ಒಂದು ಬಹು ಮುಖ್ಯ ವಿಚಾರವೆಂದರೆ, ಇದು ತನ್ನ ವಾದಗಳ ಸಮರ್ಥನೆಗಿಳಿಯುವ ಪುಸ್ತಕವಲ್ಲ. ಪುಸ್ತಕದ ಆರಂಭದಲ್ಲೆ ಪ್ರಸನ್ನರವರು ಹೇಳಿಬಿಡುವಂತೆ, ಇದು ಸಮಾಜ ಶಾಸ್ತ್ರೀಯ ಶಿಸ್ತಿನಲ್ಲಿ ತಯಾರಾದ ಪುಸ್ತಕವೂ ಅಲ್ಲ. ಅದಕ್ಕೆ ಸರಿಯಾಗಿ, ಇಲ್ಲಿನ ವಿಚಾರಗಳು ಬೆಳೆಯುವುದಿಲ್ಲ. ಬದಲಿಗೆ ಪದೇ ಪದೇ ಪುನರಾವರ್ತನೆಗೊಂಡು ಅವು ನಮ್ಮನ್ನು ಮತ್ತೆ ಮತ್ತೆ ವೈಚಾರಿಕವಾಗಿ ಕಾಡುತ್ತವೆ, ಆಳಕ್ಕಿಳಿಯುವ ಪ್ರಯತ್ನ ಮಾಡುತ್ತವೆ. ಅಂತಿಮವಾಗಿ, ಈ ಪುಸ್ತಕವು ಮಂಡಿಸುವ ವಿಚಾರಗಳನ್ನು ನಾವು ಒಪ್ಪುತ್ತೇವೊ ಇಲ್ಲವೋ ಎಂಬುದು ಇಲ್ಲಿ ಒಂದು ಗೌಣವಾದ ವಿಚಾರ. ಈ ಪುಸ್ತಕ ಎಲ್ಲದಕ್ಕಿಂತಲು ಹೆಚ್ಚಾಗಿ ನಮಗೆ ಇಷ್ಟವಾಗಿದ್ದು ಈ ಕಾರಣಕ್ಕಾಗಿ: ಇದು ನಮ್ಮನ್ನು ಯೋಚಿಸುವ ಒತ್ತಾಯಕ್ಕೆ ದೂಡುತ್ತದೆ.

ಪ್ರಸನ್ನರ ಪುಸ್ತಕ, ‘ಮಾಡು-ಮಾಡಬೇಡಗಳ’ ಒಂದು ಪಟ್ಟಿಯಲ್ಲ. ಇದು ಒಂದು ಆತ್ಮ ವಿಮರ್ಶೆ; ಆತ್ಮ ವಿಮರ್ಶೆಮಾಡಿಕೊಳ್ಳಲು ನಮಗೊಂದು ಕರೆಯೋಲೆ. ಆದ್ದರಿಂದ, ಈ ಪುಸ್ತಕವನ್ನು ನಾವು ಆತ್ಮ ವಿಮರ್ಶೆಗೆ ಒಪ್ಪಿಸಿದ ವಿಚಾರಗಳು ಎನ್ನುವ ರೀತಿಯಲ್ಲೆ  ಚರ್ಚೆಗೆತ್ತಿಕೊಳ್ಳುತ್ತೇವೆ. ಇಲ್ಲಿ ಬರುವ ಹಲವಾರು ವಿಚಾರಗಳು ನಮಗೆ ಅತಿರೇಕ ಹಾಗೂ ಕಪಟ ಎನಿಸಿದರು ಎನಿಸಬಹುದು. ಅದು ಸಹಜ. ಉದಾ: ಪುಟ 69-70ರಲ್ಲಿ ಬರುವ ಸಂವಹನ ತಂತು, ನಂಬಿಕಾರ್ಹತೆಯ ವಿಚಾರಗಳನ್ನು ಮರಳಿ ಪ್ರಸನ್ನರವರಿಗೆ ಕೇಳಿಬಿಡೋಣ ಎಂದು ಅನ್ನಿಸಬಹುದು. ಸಮಸ್ಯೆಯೆಂದರೆ, ಹೀಗಾದಾಗ ನಾವು ಪುಸ್ತಕದಲ್ಲಿನ ಚಿಂತನೆಗಳ ಕುರಿತು ಚಿಂತಿಸುವ ಮೊದಲೇ ಅದರ ಕುರಿತು ಒಂದು ನಿರ್ಣಯಕ್ಕೆ ಬಂದು ಬಿಟ್ಟಿರುತ್ತೇವೆ. ಹಾಗೆಂದ ಮಾತ್ರಕ್ಕೆ ಪ್ರಸ್ತುತ ಪುಸ್ತಕದ ವಿಮರ್ಶೆ ಸಲ್ಲವೆಂದೇನೂ ನಮ್ಮ ಧೋರಣೆಯಲ್ಲ. ನಾವೂ ಕೂಡ, ಈ ಲೇಖನದಲ್ಲಿ, ಎಲ್ಲೆಲ್ಲಿ ಈ ಪುಸ್ತಕದ ವಿಚಾರಗಳು ಹದಮೀರಿ ಹೋಗುತ್ತಿದೆ ಎನಿಸುತ್ತದೆಯೋ, ಎಲ್ಲೆಲ್ಲಿ ಇದು ವಸಾಹತು ಗ್ರಹಿಕೆಯನ್ನೆ ಯಥಾವತ್ತಾಗಿ ಒಪ್ಪಿಕೊಂಡುಬಿಟ್ಟಿದೆ ಎನಿಸುತ್ತದೆಯೋ ಅಲ್ಲಲ್ಲಿ ನಾವು ಅದನ್ನು ಎತ್ತಿತೋರಿಸುವ, ವಿಮರ್ಶಿಸುವ ಪ್ರಯತ್ನವನ್ನು ಮಾಡಿದ್ದೇವೆ.

ಈ ಪುಸ್ತಕ ಏನನ್ನು ಹೇಳುತ್ತದೆ?

ನಾವು ಕಳಚಬೇಕಾದದ್ದು ಸ್ವಯಂಚಾಲಿತ ಯಂತ್ರಗಳನ್ನು (110): ಇದು ಈ ಪುಸ್ತಕದ ಸಾರಾಂಶ. ಆದರೆ, ಈ ಹೇಳಿಕೆಯನ್ನು ಅರ್ಥಮಾಡಿಕೊಳ್ಳುವುದು ಮಾತ್ರ ಸರಳವಾದ ವಿಚಾರವೇನೂ ಅಲ್ಲ. ‘ಯಂತ್ರಗಳನ್ನು ಕಳಚುವುದು’ ಎಂದರೇನು? ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ನಾವು ಮೊದಲು ಉತ್ತರ ಕೊಟ್ಟುಕೊಳ್ಳಬೇಕಾಗುತ್ತದೆ. ಯಂತ್ರಗಳನ್ನು ಕಳಚುವ ಚಳುವಳಿಯೆಂಬುದು, ಲೇಖಕರೆ ಹೇಳುವಂತೆ, ಹಲವಾರು ಆಧುನಿಕ ಭ್ರಾಂತಿಗಳನ್ನು ಕಳಚುವ ಒಂದು ಚಳುವಳಿ (140). ಹಾಗೆಂದೇ, ಪುಸ್ತಕವು ಹಲವು ಸಮಕಾಲೀನ ಭ್ರಾಂತಿಗಳನ್ನು ವಿಮರ್ಶೆಗೆತ್ತಿಕೊಳ್ಳುತ್ತದೆ: ಜಾತಿ ಮತ್ತು ಮತೀಯ ಕಲಹ, ಅಧಿಕಾರ ಮತ್ತು ಸಂಪತ್ತಿನ ವ್ಯಾಮೋಹ ಇತ್ಯಾದಿ. ಲೇಖಕರು ಹೇಳುವಂತೆ, ಈ ಎಲ್ಲ ಭ್ರಾಂತಿಗಳಿಗೆ ಭದ್ರವಾದ ಬುನಾದಿ ಒದಗಿಸಿರುವುದು ಯಂತ್ರನಾಗರೀಕತೆ.

‘ಯಂತ್ರಗಳನ್ನು ಕಳಚುವುದು’ ಎನ್ನುವ ಪದ ಬಹಳ ಭಾರವಾಗಿ ಕಂಡರೂ ಪ್ರಸನ್ನರವರು ಇದನ್ನು ಒಂದು ಸಣ್ಣದೊಂದು ತ್ಯಾಗ (30) ಎಂದುಬಿಡುತ್ತಾರೆ. ಈ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಒಂದು ಸರಳವಾದ ದಾರಿಯೆಂದರೆ ಗಾಂಧಿಜಿಯವರ voluntary poverty ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು. ಮನೆಯಲ್ಲಿ ಎರಡು ಕಾರುಗಳಿದ್ದರೆ, ಒಂದನ್ನು ಬಿಟ್ಟು ಉಳಿದ ಒಂದೇ ಕಾರಿನಲ್ಲಿ ದಿನಸಾಗಿಸುವುದು, ಅಥವ ಮನೆಯಲ್ಲಿ ನಾಲ್ಕು ಸೆಲ್ ಫೋನ್ಗಳಿದ್ದರೆ, ಎರಡು ಸೆಲ್ ಫೋನ್ಗಳಿಗೋ ಅಥವ ಒಂದು land line ಫೋನಿಗೋ ನಮ್ಮ ಅವಶ್ಯಕತೆಯನ್ನು ಸೀಮಿತ ಗೊಳಿಸಿಕೊಳ್ಳುವುದು ಈ voluntary povertyಗೆ ಒಂದು ಚಿಕ್ಕ ಉದಾಹರಣೆ. ಇದು ಪ್ರಸನ್ನರ ಸಲಹೆ ಕೂಡ. ಹೀಗೆ ನೋಡಿದಾಗಲಷ್ಟೆ, ‘ಯಂತ್ರಗಳನ್ನು ಕಳಚುವುದು’ ಸಣ್ಣದೊಂದು ತ್ಯಾಗವಾಗಿ ಕಾಣಿಸುವುದು. ಈ ತ್ಯಾಗವೆ ಸತ್ಯಾಗ್ರಹ; ಅದೇ ಆಧ್ಯಾತ್ಮಿಕ ಚಳುವಳಿ (30).

ಹಾಗೆ ನೋಡುವುದಾದರೆ, ಗಾಂಧಿ ಹೇಳುವಂತೆ, ನಾವು ಕಳಚಬೇಕಾದದ್ದು ಯಂತ್ರಗಳನ್ನಲ್ಲ, ಅವುಗಳ ಮೇಲಿನ ಅತಿಯಾದ ಮೋಹವನ್ನು. ಅವರದೇ ಮಾತಿನಲ್ಲಿಡುವುದಾದರೆ, ಹೇಗೆ ದೇಹವೆಂಬುದು ಆತ್ಮೋದ್ಧಾರಕ್ಕೆ ಅಡ್ಡಿ ಬಂದಾಗ, ದೇಹವನ್ನು ತಿರಸ್ಕರಿಸುತ್ತೇವೋ ಹಾಗೆಯೆ ಯಂತ್ರಗಳನ್ನು ಸಹ, ಅದು ಸಮಾಜದ ಒಳಿತಿಗೆ ಅಡ್ಡಿಬಂದಾಗ ತಿರಸ್ಕರಿಸಬೇಕು (115). ಆದರೆ, ‘ಮೋಹವನ್ನು ಬಿಡಬೇಕು’ ಎನ್ನುವ ಪರಿಕಲ್ಪನೆ ನಿತ್ಯ ಜೀವನದ ಬೇಕು-ಬೇಡಗಳಿಗೆ ಒಗ್ಗಿಸಬೇಕಾದರೆ ಅದನ್ನು voluntary povertyಯಂತಹ ನಿತ್ಯ ತ್ಯಾಗದ ರೂಪದಲ್ಲಿ ರೂಢಿಗೊಳಪಡಿಸುವುದು ಸಹಾಯಕಾರಿ ಮಾತ್ರವಲ್ಲ ಬಹುಶಃ ಅನಿವಾರ್ಯ ಕೂಡ. ಗಾಂಧಿಯ ಈ ಮೇಲಿನ ಮಾತುಗಳು ಅರ್ಥವಾಗದಿದ್ದರೆ, ಪ್ರಸನ್ನರವರ ಪುಸ್ತಕವೂ ಅರ್ಥವಾಗುವುದಿಲ್ಲ. ಆದ್ದರಿಂದ, ಈ ವಿಚಾರ ಪ್ರಸ್ತುತ ಪುಸ್ತಕದ ಮೊದಲಿಗೇ ಬಂದಿದ್ದರೆ, ಇನ್ನಷ್ಟು ವಿಶದವಾಗಿ ಮಂಡನೆಯಾಗಿದ್ದರೆ, ಹೆಚ್ಚು ಉಪಯುಕ್ತವಾಗಿರುತ್ತಿತ್ತು.

ಇಲ್ಲಿ ನಮಗೊಂದು ಪ್ರಶ್ನೆ ಕಾಡಬಹುದು: ಹೀಗೆ ಯಂತ್ರಗಳನ್ನು ಕಳಚುವಲ್ಲಿನ ಹಿಂಸೆಯನ್ನು ಏನು ಮಾಡುವುದು? ಇದಕ್ಕೆ ಪ್ರಸನ್ನರ ಬಳಿ ಚಿಕ್ಕ ಆದರೆ ಸ್ಪಷ್ಟ ಮತ್ತು ನಿಖರವಾದ ಉತ್ತರವಿದೆ. ಆ ಹಿಂಸೆಯನ್ನು ನಮ್ಮ ಬಲಿದಾನ, ತ್ಯಾಗ ಎಂದು ನೋಡಬೇಕು ಎನ್ನುತ್ತಾರವರು (28 ಮತ್ತು ಮುಂದಿನ ಪುಟಗಳು). ಈ ಬಲಿದಾನ, ತ್ಯಾಗವಿಲ್ಲದೆ ಸಮಕಾಲೀನ ಭ್ರಾಂತಿಗ

ಪುಸ್ತಕದ ಕೆಲವು ವಿಶೇಷತೆಗಳು

ಭಾರತೀಯ ಬೌದ್ಧಿಕತೆಯಮೇಲೆ ವಸಾಹತುಶಾಹಿ ನಡೆಸಿದ ಬೌದ್ಧಿಕ ಆಕ್ರಮಣದ ಬಗ್ಗೆ ಈ ಪುಸ್ತಕ ಕೆಲವು ವಿಶೇಷ ಒಳನೋಟಗಳನ್ನು ಕೊಡುತ್ತದೆ. ಓದುಗನಿಗೆ ಆರಿಸಿಕೊಳ್ಳುವ ಜಾಣ್ಮೆ ಇರಬೇಕಷ್ಟೆ. ಮೊದಲೇ ತಿಳಿಸಿದಂತೆ, ಪ್ರಸನ್ನ ಅವರು ಒಬ್ಬ academician ಅಲ್ಲ, ಆವರೊಬ್ಬ ಪಾರಂಪರಿಕ ಚಿಂತಕ. ಆವರ ಚಿಂತನೆಯ ಹಾಸುಗಳನ್ನು, ಹೊಕ್ಕುಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಜವಾಬ್ದಾರಿ ಮಾತ್ರ ನಮ್ಮದು. ಇದರಲ್ಲಿ ಕೆಲವು ಎಳೆಗಳು, ವಸಾಹತುಶಾಹಿಯಿಂದಲೇ ಬಂದಂಥವು. ಉಳಿದಂಥವು, ಅವರದೇ ಸಂಸ್ಕೃತಿ, ಸಂಪ್ರದಾಯ, ಗತದಿಂದ ಬಂದ ಚರಕದ ನೂಲುಗಳು.

ಪ್ರತಿ-ಸಂಸ್ಕೃತಿ ಕುರಿತ ಪ್ರಸನ್ನ ಅವರ ಚಿಂತನೆ ಬಹಳ ಪ್ರಸ್ತುತವಾಗಿದೆ. ಹಳೆಯ ಸಂಸ್ಕೃತಿಯನ್ನು ವಿರೋಧಿಸಿ ಮತ್ತೊಂದು ಸಂಸ್ಕೃತಿ ಕಟ್ಟುವ – ಅಥವ ಕಟ್ಟಬೇಕು ಎಂದು ಪರದಾಡುವ – ಪವೃತ್ತಿ ಮತ್ತು ಚಡಪಡಿಕೆಯು ದಿನೇದಿನೇ ಏರುತ್ತಿದೆ. ಇದರ ಒಂದು ಪರಿಣಾಮವೆಂದರೆ, ಇಂದು ನಾವು ನಮ್ಮ ಸಂಸ್ಕೃತಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ಬೇರೆ ಯಾರದೋ ಸರಕಿಗೆ ಜೋತು ಬೀಳುವ ಪರಿಸ್ಥಿತಿ ಬಂದೊದಗಿದೆ (43-46). ಇಲ್ಲೊಂದು ಸಣ್ಣ ಪ್ರಶ್ನೆ: ಆಧುನಿಕತೆ ಅಥವ ಪರಕೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ತಪ್ಪೇನು? ಲೇಖಕರು ತೋರಿಸಿಕೊಡುವಂತೆ, ಪರಕೀಯ ಸಂಸ್ಕೃತಿಯ ಮೋಹದಿಂದಾಗಿ ಇಂದು ನಾವು ನಮ್ಮ ಸ್ಥಾನಿಕ ಭಾಷೆಗಳು, ಜೀವನ ಶೈಲಿ, ಆಚರಣೆಗಳನ್ನು ತೀರಾ ಉಡಾಫೆಯಿಂದ ಕಂಡು ಅವನ್ನು ಮೂಲೆಗುಂಪು ಮಾಡತೊಡಗಿದ್ದೇವೆ. ಇದೇ ಪ್ರವೃತ್ತಿ ಮುಂದುವರೆದಲ್ಲಿ, ಒಂದು ದಿನ ನಾವು ‘ನಮ್ಮ ಸಂಸ್ಕೃತಿ’ ಎಂದು ಹೇಳಿಕೊಳ್ಳಲು ನಮ್ಮ ಬಳಿ ಏನು ಉಳಿದಿರುವುದಿಲ್ಲವಷ್ಟೆ. ಇದು ಬರೀಯ ಅಭಿಮಾನದ ಮಾತಲ್ಲ. ಇದು ನಮ್ಮತನ ಕಳೆದುಕೊಳ್ಳುವ, ಅದರೊಟ್ಟಿಗೆ ಬರುವ ಹಿಂಸೆಯ ವಿಚಾರ.

ಮತೀಯ ಸಂಘರ್ಷದ ವಿಚಾರವಾಗಿ ಪುಸ್ತಕ ಮಂಡಿಸುವ ಬಹಳಷ್ಟು ವಿಚಾರಗಳು ಕನ್ನಡಕ್ಕೆ ಹೊಸ ವಿಚಾರಗಳು ಆದರೆ ಹೇಳುವ ಧಾಟಿ ಮಾತ್ರ ಹಳೆಯ ಹಾದಿಯನ್ನು ಹಿಡಿಯುವುದರಿಂದ ಅಪಾಯಕಾರಿಯೂ ಎನಬಹುದು. ಇಂದು ನಮ್ಮ ಬೌದ್ಧಿಕ ಜಗತ್ತಿನಲ್ಲ್ಲಿ ಮುಸಲ್ಮಾನರ ಕುರಿತು ಎರಡು ರೀತಿಯ ವ್ಯತಿರಿಕ್ತ ಅಭಿಪ್ರಾಯಗಳಿವೆ. ಒಂದು ಪಂಗಡ ಅವರನ್ನು ‘ಹೊರಗಿನಿಂದ ಬಂದ ಉಗ್ರವಾದಿಗಳು’ ಎಂಬಂತೆ ಕಂಡರೆ, ಇನ್ನೊಂದು ಪಂಗಡ ಅವರನ್ನು ‘ಸದಾ ತುಳಿತಕ್ಕೊಳಗಾದ, ಅಬಲ ಜನತೆ’ ಎಂದು ಪರಿಗಣಿಸುತ್ತದೆ. ಈ ಎರಡು ಅತಿರೇಕದ ಅಭಿಪ್ರಾಯಗಳನ್ನಿಟ್ಟುಕೊಂಡು, ಮುಸಲ್ಮಾನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಅಥವ ಮುಸಲ್ಮಾನರ ಬಗ್ಗೆ ಸಮಾಜದಲ್ಲಿರುವ stereotypeಗಳನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವೆ. ಪ್ರಸನ್ನರವರು, ಈ ಎರಡೂ ಪಂಗಡಕ್ಕೆ ಸೇರದೆ, ಮುಸಲ್ಮಾನರ ಸಾಮಾಜಿಕ ಸ್ಥಿತಿಗತಿಗಳನ್ನು ಪರಿಶೀಲಿಸುವ ಪ್ರಯತ್ನಮಾಡಿದ್ದಾರೆ. ಅಂತೆಯೆ, ಮುಸಲ್ಮಾನರು ವಿಪರೀತ ಮಕ್ಕಳು ಮಾಡುತ್ತಾರೆ, ಮುಸಲ್ಮಾನರು ವ್ಯವಹಾರದಲ್ಲಿ ಮೋಸಮಾಡುತ್ತಾರೆ, ಮುಸಲ್ಮಾನರ ದೇಶಭಕ್ತಿಯು ಅನುಮಾನಾಸ್ಪದವಾದದ್ದು ಇತ್ಯಾದಿ stereotypeಗಳನ್ನು ಅವರು ‘ಅರ್ಧ ಸತ್ಯ’ವೆಂದು ಕರೆಯುವ ಧೈರ್ಯ ತೋರಿಸಿದ್ದಾರೆ (144). ಅಷ್ಟೆ ಅಲ್ಲ, ಈ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಹಾಗು ಅದಕ್ಕೊಂದು ಪರಿಹಾರ ಕಂಡುಹಿಡಿಯುವ ಕಾಳಜಿಯನ್ನು ಇಟ್ಟುಕೊಂಡಿದ್ದಾರೆ.

ಅದೇ ರೀತಿ, ರಾಮಾಯಣ/ಪುರಾಣಗಳ ಓದಿನ ಕುರಿತಾಗಿ ಪ್ರಸನ್ನ ಅವರು ನೀಡಿರುವ ಕೆಲವು ಸೂಕ್ಷ್ಮ ವಿವರಣೆಗಳು ತುಂಬಾ ಮಹತ್ವದ್ದಾಗಿವೆ.  ರಾಮಾಯಣವನ್ನು ‘ಸಾಮಾನ್ಯ’ ಜನ ಗ್ರಹಿಸುವ ರೀತಿಗು, ಕೆಲವು ವಿದ್ಯಾವಂತ ಮತ್ತು ಐಡಿಯಲಾಜಿಕಲ್ ಸಂಘಟನೆಗಳು ಬಳಸಿಕೊಳ್ಳುವ ಪರಿಗು ಇರುವ ವ್ಯತ್ಯಾಸವನ್ನು ಪುಸ್ತಕದಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ. ‘ಸಾಮಾನ್ಯ’ ಜನತೆ ಪುರಾಣಗಳ ಇತಿಹಾಸದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ‘ಸಾಮಾನ್ಯ’ ಜನರ ಪಾಲಿಗೆ ಪುರಾಣ/ರಾಮಾಯಣ ಭೂತದಲ್ಲಿ ಗತಿಸಿಹೋದರೂ,  ವರ್ತಮಾನದಲ್ಲಿ ನಿತ್ಯ ಜರುಗುವ, ಅವರದೇ ಜೀವನದ ಭಾಗವಾಗಿದೆ. ಅವರ ಪಾಲಿಗೆ, ರಾಮ ಯಾವುದೇ ಸಿದ್ಧಾಂತಗಳನ್ನು, ಯಾವುದೇ ಉಪದೇಶವನ್ನೂ ನೀಡಲಿಲ್ಲ. … ತನ್ನಷ್ಟಕ್ಕೆ ಸರಳವಾದ ಹಾಗೂ ನೈತಿಕವಾದ ಬದುಕನ್ನು ಬದುಕುತ್ತಾ ಹೋದ. ಇದೇ ಮೂಲರಾಮನ ಸಂದೇಶ (176). ಆದ್ದರಿಂದ, ಆತನ ಆದರ್ಶವನ್ನು ನಾವು ಅನುಕರಿಸಬಹುದಷ್ಟೆ. ಅವನ ಹೆಸರಿನಲ್ಲಿ ಹೊಡೆದಾಡುವುದು, ಕೆಡವುವುದು ಸಾಧ್ಯವಿಲ್ಲ.

ಇದಕ್ಕೆ ವ್ಯತಿರಿಕ್ತವಾದ, ರಾಮಾಯಣವನ್ನು ಓದುವ ಹೊಸದೊಂದು ಪದ್ದತಿ ಕಳೆದ ಶತಮಾನದಲ್ಲಿ ಬೆಳೆದು ಬಂದಿದೆ. ರಾಮಾಯಣಕ್ಕೆ ಸಮಸ್ಯಾತ್ಮಕವಾದ ಮೂರನೇಯದೊಂದು ಪಠ್ಯವಿದೆ. [ಅದು] ರೂಪಗೊಂಡದ್ದು, ಇತ್ತೀಚೆಗೆ;  ಇಪ್ಪತ್ತನೇಯ ಶತಮಾನದಲ್ಲಿ. … ರಮಾನಂದ ಸಾಗರರ ಟೀವಿ ಸೀರಿಯಲ್, ಅದ್ವಾನಿಯವರ ರಥಯಾತ್ರೆ ಹಾಗೂ ವೈದಿಕ ಧರ್ಮ … ಈ ಮೂರು ಒಟ್ಟಾಗಿ ಸೇರಿ ರೂಪಿಸಿರುವ ಪಠ್ಯ. ಇದು ಸಹಬಾಳ್ವೆಯನ್ನು ಕಲಿಸಿಕೊಟ್ಟ ಪುರಾಣವೊಂದು, ಲೇಖಕರು ಹೇಳುವಂತೆ, ಹೀಗೆ ಅದ್ವಾನಿಯವರ ಕೈಯಲ್ಲಿ ಸಿಕ್ಕಿ ಅನ್ಯಧರ್ಮೀಯರ ಮೇಲೆ ಆಕ್ರಮಣ ನಡೆಸಲು ಬಳಸಬಹುದಾದ ಅಸ್ತ್ರವಾಗಿ ಮಾರ್ಪಟ್ಟಿದೆ (171). ಈ ಮೂರನೇಯ ಪಠ್ಯದಲ್ಲಿ ರಾಮನು, ಮೊದಲು ದೇವರೆ, ಕೊನೆಗೂ ದೇವರೆ, … ಆದರೆ ವಾಲ್ಮೀಕಿಯ ಪಾತ್ರವಾದ ರಾಮ ಹಾಗಲ್ಲ,  ಮೂಲರಾಮನಿಗೆ ದೈವತ್ವವೆಂಬುದು ಮುಳ್ಳಿನ ಕೀರಿಟ (172). ಹೀಗೆ ರಾಮಾಯಣವು ಅನುಕೂಲ ಸಿಂಧೂ ರಾಮಾಯಣವಾಗಿ ಪರಿವರ್ತಿತವಾಗುತ್ತಿರುವ ಕುರಿತು ಗಮನ ಸೆಳೆದದ್ದು ಪುಸ್ತಕದ ಒಂದು ಉತ್ತಮ ಸಾಧನೆ.

ಇನ್ನು ಪುಸ್ತಕದ ಭಾಷೆಯ ಬಳಕೆ, ಶೈಲಿ, ಆಪ್ತತೆಯ ಕುರಿತು ಹೇಳುವುದಾದರೆ: ಬರವಣಿಗೆ ಶೈಲಿ ಮತ್ತು ಭಾಷೆ ಸರಳವಾಗಿದೆ. ವಿಷಯವನ್ನು ಮನದಟ್ಟು ಮಾಡಲು ನಮ್ಮ ಸುತ್ತ-ಮುತ್ತಲಿರುವ ಉದಾಹರಣೆಗಳನ್ನು ಬಳಸಿಕೊಂಡಿರುವುದರಿಂದ, ಆ ವಿಷಯದೊಡನೆ ನಮ್ಮ ಆಪ್ತತೆ ಏರ್ಪಟ್ಟು ಅದು ನಮ್ಮದೇ ಸಮಸ್ಯೆ ಎಂಬ ಭಾವನೆ ಬೆಳೆಸಿ ಕೊಂಚ ಯೋಚಿಸುವಂತೆ ಮಾಡುತ್ತದೆ.

ಪುಸ್ತಕದ ಕೆಲ ಕುಂದು ಕೊರತೆಗಳು

ಪ್ರಸನ್ನರ ಇತಿಹಾಸ, ಫಿಲಾಸಫಿಯ ಜ್ಞಾನ ನಿಖರವಾಗಿದ್ದಿದ್ದರೆ, ಪುಸ್ತಕ ಮಂಡಿಸುವ ವಿಚಾರಗಳು ಇನ್ನಷ್ಟು ತೀಕ್ಷ್ಣವಾಗಿರುತ್ತಿತ್ತು. ಸ್ವಲ್ಪ ನಿಷ್ಠುರವಾಗಿ ಹೇಳುವುದಾದರೆ, ಪ್ರಸನ್ನರವರು, ತಾವು ಸಂಶೋಧನೆ ಮಾಡಿರದ ವಿಚಾರಗಳ ಬಗ್ಗೆ ಆತುರಾತುರವಾಗಿ ತಮ್ಮ ವಿಚಾರಗಳನ್ನು ಹೇಳದಿದ್ದರೆ ಪುಸ್ತಕದ ಮಹತ್ವ ನಿಜವಾಗಿಯು ಇನ್ನು ಹೆಚ್ಚುತ್ತಿತ್ತು. ಪುರೋಹಿತಶಾಹಿ (83) ಮತ್ತು ಜಾತಿಯ ಕುರಿತು (154, 155, 156) ಅವರು ಹೇಳುವ ವಿಚಾರಗಳಿಗೆ ಯಾವ ಆಧಾರವೂ ಇಲ್ಲ. ಆಧಾರವಿದೆ ಎಂದು ಅವರು ತೋರಿಸಿಕೊಡುವುದೂ ಇಲ್ಲ. ರಾಮನ ಕುರಿತು ನಮಗಿರುವ ತಪ್ಪು ವಿಚಾರಗಳ ಕುರಿತು ಪುಟಗಟ್ಟಲೆ ಬರೆಯುವ ಲೇಖಕ, ಮಾರ್ಕಂಡೇಯ ಮುನಿಯ ಕುರಿತು ಮಾತನಾಡುವಾಗ ಮತ್ತೆ ಅದೇ ಹಳೆಯ ವಿಚಾರ ಮತ್ತು ದೃಷ್ಟಿಕೋನಗಳಗೆ ಮರಳಿಬಿಡುತ್ತಾರೆ. ಬ್ರಾಹ್ಮಣರ ಮೇಲಿನ ಅವರ ಸಿಟ್ಟುಕೂಡ ಬಹಳ ಅತಾರ್ಕಿಕವಾದದ್ದು. ಅದೇರೀತಿ, ವಿಜ್ಞಾನದ ವಿರುದ್ಧದ ಅವರ ವಿಚಾರಗಳು, ಸೆಂಟಿಮೆಂಟುಗಳು ಇನ್ನೊಂದು ಆಧಾರರಹಿತ ವಿಚಾರವೆನ್ನಲೇ ಬೇಕು (43). ಯಾವ ರೀತಿಯ ಸಂಶೋಧನೆಯ ಆಧಾರದ ಮೇಲೆ ಈ ರೀತಿಯ ವಾದ ಮಂಡಿಸಲಾಗಿದೆ ಎಂಬುದು ಪುಸ್ತಕದಲ್ಲೆಲ್ಲೂ ಸ್ಪಷ್ಟವಾಗುವುದಿಲ್ಲ. ಈ ರೀತಿಯ ಆಧಾರವಿಲ್ಲದ ಹೇಳಿಕೆಗಳು, ಸಮರ್ಥನೆಯಿಲ್ಲದೆ ಪುಸ್ತಕದ ತುಂಬಾ ನೇತಾಡುತ್ತವೆ. ಈ ಎಲ್ಲ ಆಕ್ಷೇಪಣೆಗಳನ್ನು ಇಲ್ಲಿ ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ, ಜಾತಿ ಮತ್ತು ಕೋಮಿಗೆ ಸಂಬಂಧಪಟ್ಟ ವಿಚಾರಗಳ ಕುರಿತು ಒಂದೆರಡು ಉದಾಹರಣೆಗಳನ್ನು ಮಾತ್ರ ಇಲ್ಲಿ ಕೊಡಬಹುದು.

ಒಂದೊಂದು ವೃತ್ತಿಯು ಒಂದೊಂದು ಜಾತಿಯಾಗಿ ರೂಪಿತಗೊಂಡಿದೆ ಎನ್ನುವುದು ಜಾತಿ ಪದ್ದತಿ ಕುರಿತು ಪ್ರಸನ್ನರವರು ಹೊಂದಿರುವ ಗ್ರಹಿಕೆಗಳಲ್ಲಿ ಒಂದು. ಆದರೆ ಎಷ್ಟೋ ಜಾತಿಗಳು ನಾನಾ ಪ್ರಕಾರದ ವೃತ್ತಿ ಮಾಡುವುದನ್ನು ನಾವು ಕಾಣುತ್ತೇವೆ. ಈ ಸಮಸ್ಯೆಯನ್ನು ಬಗೆ ಹರಿಸುವುದು ಹೇಗೆ? ಪ್ರಸ್ತುತ ಪುಸ್ತಕ, 19-20ನೆ ಸತಮಾನದಲ್ಲಿ ಕುರುಬ-ಗೊಲ್ಲ-ಬ್ಯಾಡ ನಾಯಕ ಜಾತಿಗಳ ನಡುವೆ ನಡೆದ ವೃತ್ತಿಯ ಬದಲಾವಣೆಯ ವಿಷಯವನ್ನು ಪ್ರಸ್ತಾಪಿಸುತ್ತದೆ (156). ಆದರೆ, ಇಂದಿನ ಸಮಾಜದಲ್ಲಿ ಪ್ರತಿ ಜಾತಿಯವರು ಪ್ರತಿಯೊಂದು ಉದ್ಯೋಗವನ್ನೂ ಮಾಡುವುದನ್ನು ನಾವು ನೋಡಬಹುದು. ಹಾಗಾದರೆ, ಈ ರೀತಿಯ ಒಂದು ಬೃಹತ್ತಾದ ವೃತ್ತಿ ಬದಲಾವಣೆ ನಡೆದಿದೆಯೆ? ಯಾವಾಗ ನಡೆಯಿತು? ಅಥವ, ಜಾತಿಗು ಮತ್ತು ವೃತ್ತಿಗೂ ನಡುವೆ ಇರುವ ಸಂಬಂಧ ಕೇವಲ ವಸಾಹತು ಲೇಖಕರು ಕಂಡ ಕನಸೇ?

ಪುರೋಹಿತಶಾಹಿಗೆ ಜಾತೀಯತೆಯಿಂದ ಲಾಭವಾಗಿದೆ ಎನ್ನುತ್ತದೆ ಪುಸ್ತಕ. ಯಾವ ಅರ್ಥದಲ್ಲಿ ಲೇಖಕರು ಲಾಭದ ಕುರಿತು ಮಾತನಾಡುತ್ತಿದ್ದಾರೆ? ಯಾವ ಲಾಭ? ಯಾವಾಗ ಮತ್ತು ಹೇಗೆ ಇದು ಆಗಿದ್ದು? ಈ ಪ್ರಶ್ನೆಗಳು ಪ್ರಸನ್ನರ ತೀಕ್ಷ್ಣ ದೃಷ್ಟಿಗೆ ಹೊಳೆಯದಿರುವುದು ಆಶ್ಚರ್ಯವೆ ಸರಿ. ಎಲ್ಲ ದೇಶಗಳ, ಎಲ್ಲ ಚರಿತ್ರೆಯಲ್ಲೂ, ಒಂದಲ್ಲ ಒಂದು ಅಸಮಾನತೆ, ಒಂದಲ್ಲ ಒಂದು ಊನ ಇದ್ದೇ ಇರುತ್ತದೆ. ಅಂತಹ ಊನಗಳು, ದೇವಸ್ಥಾನಗಳ ಜೊತೆ, ಧರ್ಮ ಸಂಸ್ಕೃತಿಗಳ ಜೊತೆ ಸಾಮಾನ್ಯವಾಗಿ ತಾಳೆ ಹಾಕಿಕೊಂಡಿರುತ್ತದೆ (40), ಎನ್ನುವ ಲೇಖಕ ಭಾರತ ದೇಶದ ಸಮಸ್ಯೆಗಳನ್ನು ಮಾತ್ರ ಜಾತಿ ಸಮಸ್ಯೆಯೆಂದು ಗುರುತಿಸುವುದು ಏಕೆಂಬುದು ಅರ್ಥವಾಗುವುದಿಲ್ಲ. ಇದು, ವಸಾಹತು ಗ್ರಹಿಕೆಯ ನೇರವಾದ ನಕಲಲ್ಲದೆ ಮತ್ತೇನು?

ಇಂತಹ ಎಷ್ಟೋ ವಿಚಾರಗಳು ಅಸ್ಪಷ್ಟವಾಗಿದ್ದರು ಸಹ ಪರಿಶೀಲನೆಗೊಳಪಟ್ಟ ‘ಸತ್ಯ’ಗಳು ಎಂಬ ರೀತಿಯಾಗಿ ಲೇಖಕರು ಅವುಗಳನ್ನು ಮಂಡಿಸುವುದು ನಾವು ಪುಸ್ತಕದ ತುಂಬಾ ಕಾಣಬಹುದು. ಪರಂಪರೆಯ ರಕ್ಷಣೆ ಹಾಗೂ  ದೇಶಿತ್ವದ ಕುರಿತು ಖಾಳಜಿ ಹೊಂದಿರುವ ಲೇಖಕರು ಇಂತಹ ಗ್ರಹಿಕೆಗಳನ್ನು ಪರಿಶೀಲನೆಗೊಳಪಡಿಸದೆ ಬಳಸಬಾರದಿತ್ತು.

ಕಡೇಯ ಮಾತು…

ಪ್ರಸನ್ನರ ಈ ಪುಸ್ತಕ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಕಂಡಂತಹ ಒಂದು ಅತ್ಯುತ್ತಮ ವೈಚಾರಿಕ ಪುಸ್ತಕವೆನ್ನುವುದರಲ್ಲಿ ಎರಡು ಮಾತಿಲ್ಲ. ಬಹಳ ಕಾಲದಿಂದ ಗಾಂಧಿ ಚಿಂತನೆಗಳನ್ನು ಕುರಿತು ಚಿಂತಿಸುತ್ತಾ ಬಂದ ಲೇಖಕರಿಂದ ಈ ರೀತಿಯ ಪ್ರಬುದ್ಧ ಪುಸ್ತಕವೊಂದು ಬಂದಿರುವುದು ಹರುಷದ ವಿಚಾರ.

“ಸಂಚಯ” ದಲ್ಲಿ (ಚಾತುರ್ಮಾಸಿಕ, Vol 18, Issue 6, 2010, P 73-77) ಪ್ರಕಟವಾದ ಲೇಖನ

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: