ಮುಖ ಪುಟ > Cultural Studies, Culture, Dharma, Hindu, Religion > ಭಾರತೀಯ ಸಾಮಾಜಿಕ ಸಮಸ್ಯೆಗಳ ಚಿತ್ರಣ ಮತ್ತು ಪಾಶ್ಚಾತ್ಯ ಥಿಯಾಲಜಿಕಲ್ ಭಾಷೆಯ ಚೌಕಟ್ಟು

ಭಾರತೀಯ ಸಾಮಾಜಿಕ ಸಮಸ್ಯೆಗಳ ಚಿತ್ರಣ ಮತ್ತು ಪಾಶ್ಚಾತ್ಯ ಥಿಯಾಲಜಿಕಲ್ ಭಾಷೆಯ ಚೌಕಟ್ಟು

The description of Social Problems in India and the Framework of Western Theological Language

ಎ.ಷಣ್ಮುಖ

ಇದುವರೆಗಿನ ಸಮಾಜ ವಿಜ್ಞಾನಗಳ ವಿವರಣೆಗಳು ಭಾರತದ ಸಾಮಾಜಿಕ ಸಮಸ್ಯೆಗಳಿಗೆ ಸಂಬಂದಿಸಿದಂತೆ ಪಾಶ್ಚಿಮಾತ್ಯ ಸಮಾಜಗಳಿಂದ ಹುಟ್ಟಿದ ಸಾಂಸ್ಕೃತಿಕ ಪರಿಕಲ್ಪನೆಗಳಿಂದ ಚಿತ್ರಿಸಲ್ಪಟ್ಟಿದ್ದು, ಅವುಗಳ ಹಿನ್ನೆಲೆಯಲ್ಲಿಯೇ ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿವೆ. ಇದು ನಮ್ಮ ಸಮಾಜ ವಿಜ್ಞಾನಗಳಿಗೆ ಎರಡು ರೀತಿಯ ಮಿತಿಯನ್ನು ಹಾಕುತ್ತದೆ. ಒಂದು ಈ ಪರಿಕಲ್ಪನೆಗಳು ಪಶ್ಚಿಮದ ಸಂಸ್ಕೃತಿಯ ವಿವರಣೆಗೆ ಸೀಮಿತವಾಗಿರುವುದರಿಂದ ಅವುಗಳು ಭಾರತೀಯ ಸಮಾಜದಲ್ಲಿನ ಸಮಸ್ಯೆಗಳನ್ನು ಸರಿಯಾಗಿ ಗ್ರಹಿಸುವುದೂ ಇಲ್ಲ, ವಿವರಿಸುವುದೂ ಇಲ್ಲ. ಎರಡನೆಯದಾಗಿ, ಇದರ ಪರಿಣಾಮವಾಗಿ ಭಾರತೀಯ ಸಮಾಜದಲ್ಲಿನ ಯಾವುದೇ ಸಮಸ್ಯೆಯ ಮೂಲವನ್ನು ಗುರುತಿಸಿ ಅವುಗಳಿಗೆ ಪರಿಹಾರ ಸೂಚಿಸಲು ಸಮಾಜ ವಿಜ್ಞಾನಿಗಳಿಗೆ ಸಾಧ್ಯವಾಗುತ್ತಿಲ್ಲ.  ಉದಾಹರಣೆಗೆ ಭಾರತೀಯ ಸಮಾಜದ ಯಾವುದೇ ಸಮಸ್ಯೆಯ ಕುರಿತ ವಿವರಣೆಗಳು ಭಾರತದಲ್ಲಿ ಹಿಂದೂ ‘ರಿಲಿಜಿಯನ್’ ಎನ್ನುವುದು ಇದೆ ಎಂಬ ಪೂರ್ವಕಲ್ಪನೆಯೊಂದಿಗೇ ತಮ್ಮ ವಾದವನ್ನು ಸಮರ್ಥಿಸುತ್ತವೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜಿಯನ್ ನಿಜಕ್ಕೂ ಇದೆಯೇ ಎಂಬ ಪ್ರಶ್ನೆಯನ್ನು ಎತ್ತುವುದಾಗಲೀ ಅದರ ಬಗ್ಗೆ ಚರ್ಚಿಸಿ ಅದರ ಇರುವಿಕೆಯನ್ನು ಎಂಪಿರಿಕಲ್ ಆಗಿ ಸಾಬೀತುಪಡಿಸುವ ಅಗತ್ಯತೆಯಾಗಲೀ ನಮ್ಮ ಸಮಾಜ ವಿಜ್ಞಾನದ ಕಾಳಜಿಯಾಗಿಯೇ ಇಲ್ಲ.  ಒಂದು ವೇಳೆ ಹಿಂದೂಯಿಸಂ ಎಂಬ ರಿಲಿಜಿಯನ್ ಇಲ್ಲದಿರುವುದೇ ಸತ್ಯವಾದಲ್ಲಿ ಭಾರತೀಯ ಸಮಾಜದ ಎಲ್ಲಾ ಸಮಸ್ಯೆಗಳನ್ನು ನೋಡುವ ದೃಷ್ಟಿಯೇ ಬದಲಾಗಬೇಕಾಗುತ್ತದೆ.

ವಸಾಹುತು ಪೂರ್ವದ ಎಲ್ಲಾ ಸಾಮಾಜಿಕ ಹೋರಾಟಗಳ ಕುರಿತ ಸಮಾಜ ವಿಜ್ಞಾನಗಳಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲೂ ಸಹ ಇದೇ ತೊಡಕುಗಳಿವೆ. ಅದನ್ನು ಸರಳವಾಗಿ ಹೇಳುವುದಾದರೆ, ಸಾವಿರಾರು ವರ್ಷಗಳಿಂದ ಇಲ್ಲಿ ಉಳಿದುಕೊಂಡು ಬಂದಿರುವ ಕೃತಿಗಳು ಜಾತಿ, ಧರ್ಮ ಮತ್ತು ಪ್ರಭುತ್ವವನ್ನು ಕುರಿತು ಚರ್ಚೆ ಮಾಡಿರುವುದು ನಿಜವೇ. ಆದರೆ ಅವು ಯಾವ ನೆಲೆಯಲ್ಲಿ ಈ ಚರ್ಚೆಗಳನ್ನು ಮಾಡಿವೆ ಎಂಬ ಬಗ್ಗೆ ಇಂದಿನ ಬಹಳಷ್ಟು ಚಿಂತಕರ ವಿವರಣೆಗಳು ಆ ಚರ್ಚೆಗಳೆಲ್ಲವನ್ನೂ ತಮ್ಮದೇ ಕಾಲಘಟ್ಟದ ವಸಾಹತು (ಪ್ರಜ್ಞೆಯ) ಪರಿಕಲ್ಪನೆಗಳ ಚೌಕಟ್ಟಿನೊಳಗೇ ಎಳೆತಂದು ವಿವರಿಸುತಿವೆ. ಇದರ ಪರಿಣಾಮ ಎಷ್ಟು ದಟ್ಟವಾಗಿದೆ ಎಂದರೆ, ಇಂದಿನ ಸಮಾಜ ವಿಜ್ಞಾನದ ವಿದ್ಯಾರ್ಥಿಗಳಿಗೆ ಆ ಕಾಲಘಟ್ಟದಲ್ಲಿ ಇವು ಯಾವುದರ ಕುರಿತ ಚರ್ಚೆಗಳಾಗಿದ್ದವು ಎಂಬುದೇ ಕಲ್ಪನೆಗೆ ನಿಲುಕುವುದಿಲ್ಲ. ಹಾಗಾಗಿ, ಇಂದಿನ ಎಲ್ಲಾ ವಿವರಣೆಗಳು ಅಂದಿನ ಎಲ್ಲಾ ಚರ್ಚೆಗಳನ್ನೂ ಒಂದೋ ಹಿಂದೂ ವರ್ಣಾಶ್ರಮ ಧರ್ಮ, ಮತ್ತು ಜಾತಿವ್ಯವಸ್ಥೆಯ ಸಮರ್ಥನೆಯಾಗಿ, ಇಲ್ಲವೇ ಅವುಗಳನ್ನು ವಿರೋಧಿಸುವ ಚರ್ಚೆಗಳಾಗಿಯೇ ಗುರುತಿಸುವ ಅನಿವಾರ್ಯತೆಗೆ ಸಿಲುಕಿವೆ. ಹಿಂದುತ್ವವಾದಿಗಳು ಹಿಂದೂ ಧರ್ಮದ ಭವ್ಯತೆಯ ಬಗ್ಗೆ ಮತ್ತು ಹಿಂದೂ ರಾಷ್ಟ್ರವನ್ನು ಅಸ್ತಿತ್ವಕ್ಕೆ ತರುವ ಬಗ್ಗೆ ಮಾತನಾಡುವಾಗಲೂ,  ಸೆಕ್ಯುಲರ್ ವಾದಿಗಳು ಈ ಹಿಂದೂ ರಾಷ್ಟ್ರೀಯವಾದಿಗಳನ್ನು ವಿರೋಧಿಸುವಾಗಲೂ ಅವರಿಗೆ ಈ ವಸಾಹತು ಪರಿಪಕಲ್ಪನೆಗಳೇ ಆವರಿಸಿಕೊಂಡಿವೆ. ಅಷ್ಟಕ್ಕೂ, ಭಾರತದ ರಾಷ್ಟ್ರೀಯವಾದ ಹೋರಾಟವೂ ಈ ಪರಿಕಲ್ಪನೆಗಳ ಮೂಸೆಯಿಂದಲೇ ಹೊರಹೊಮ್ಮಿದ್ದಾಗಿದೆ ಅಲ್ಲವೇ? ಹಾಗಾಗಿ, ವಸಾಹತು ಪೂರ್ವ ಕೃತಿಗಳನ್ನು ಉಲ್ಲೇಖಿಸಿ ವಿವರಿಸಿದ ಮಾತ್ರಕ್ಕೆ ವಸಾಹತುಶಾಹಿ ಪರಿಕಲ್ಪನೆಯ ಚೌಕಟ್ಟಿನಿಂದ ಮುಕ್ತವಾಗಿ ವಿವರಿಸಲಾಗುತ್ತಿದೆ ಎಂದೇನೂ ಆಗದು. ಹಾಗಾದರೆ, ವಸಾಹತು ಪೂರ್ವ ಕೃತಿಗಳು ಯಾವುದರ ಕುರಿತು ಚರ್ಚಿಿಸುತ್ತಿವೆ ಎಂಬುದನ್ನು ಹೇಗೆ ಗುರುತಿಸುವುದು? ಅದು ಸಾಧ್ಯವಾಗುವುದು ಇಂದಿನ ಸಮಾಜ ವಿಜ್ಞಾನವು ಈ ವಸಾಹತೀ ಪರಿಕಲ್ಪನೆಗಳಿಂದ ಮುಕ್ತಿಗೊಂಡಾಗಲೇ. ಇವುಗಳಿಂದ ಮುಕ್ತಿ ಪಡೆಯುವುದೆಂತು? ಅದಕ್ಕೆ ಮೊದಲು ಇಂದಿನ ಸಮಾಜವಿಜ್ಞಾನದ ಪರಿಕಲ್ಪನೆಗಳು ಯಾವ ನೆಲೆಯಲ್ಲಿ ವಸಾಹತೀ ಪರಿಕಲ್ಪನೆಯಿಂದ ತುಂಬಿದೆ? ಅವುಗಳ ತೊಂದರೆಗಳೇನು? ಎಂಬುದನ್ನು ಗುರುತಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇಲ್ಲವಾದರೆ ದಾಸಸಾಹಿತ್ಯ ಅಥವಾ ಮಂಟೆಸ್ವಾಮಿ ಮತ್ತು ಮಲೆಮಾದೇಶ್ವರದಂತಹ ಜನಪದ ಕಾವ್ಯಗಳು ಯಾವ ಮೌಲ್ಯಗಳನ್ನು ಪ್ರತಿಪಾದಿಸುತ್ತಿವೆ ಎಂಬುದನ್ನು ಗುರುತಿಸುವುದಿರಲಿ ಅವು ನಮ್ಮ ಅನುಭವಕ್ಕೇ ದಕ್ಕಲಾರದಂತೆ ಈ ಪರಿಕಲ್ಪನೆಗಳು ಮಾಡಿಬಿಡುತ್ತವೆ.

ಈ ಪರಿಕಲ್ಪನೆಗಳ ಚೌಕಟ್ಟನ್ನು ನಾವು ವಿರೋಧಿಸಬೇಕಿರುವುದು ಮತ್ತು ಮೀರಬೇಕಿರುವುದು ಇವು ವಸಾಹತುಶಾಹಿಯದು ಮತ್ತು ಪಾಶ್ಚಾತ್ಯವೆಂದೇ? ಖಂಡಿತಾ ಅಲ್ಲ. ಹಾಗೆ ಮಾಡುವುದಾದರೆ ನಾವು ಚರ್ಚೆ ಮಾಡಲು ಬಳಸುತ್ತಿರುವ ಈ ಸಮಾಜವಿಜ್ಞಾನಗಳನ್ನೂ  ಬಹಿಷ್ಕರಿಸಬೇಕಾಗುತ್ತದೆ. ಆದರೆ ಇಲ್ಲಿಯ ಸಮಸ್ಯೆ ಅವು ಪಶ್ಚಿಮದ್ದು ಎಂಬ ಕಾರಣವಲ್ಲ. ಬದಲಿಗೆ, ಈ ಚೌಕಟ್ಟುಗಳ ಮಿತಿಗಳದ್ದು. ಈ ವಸಾಹಿತೀ ವಿವರಣೆಯ ಚೌಕಟ್ಟುಗಳೊಳಗಿನ ಪರಿಕಲ್ಪನೆಗಳು ಪಶ್ಚಿಮದ ರಿಲಿಜಿಯಸ್ ಸಂಸ್ಕೃತಿಯ ಜಗತ್ತಿಗೆ ಮಾತ್ರವೇ ಸೀಮಿತವಾಗಿರುವ ಪರಿಕಲ್ಪನೆಗಳು. ಆದರೆ ಇವನ್ನು ಸಾರ್ವತ್ರಿಕವಾದ ಮತ್ತು ಎಲ್ಲಾ ಸಂಸ್ಕೃತಿಗಳನ್ನೂ ವಿವರಿಸಲು ಸಾಧ್ಯವಾಗುಬಹುದಾದ ಅರ್ಥಾತ್ ವೈಜ್ಞಾನಿಕ ಪರಿಕಲ್ಪನೆಯೆಂಬಂದತೆಯೇ ಇಲ್ಲಿಯವರೆಗೂ ಬಳಸಲಾಗಿದೆ. ಅಂದರೆ ಪಶ್ಚಿಮದ ರಿಲಿಜಿಯಸ್ ಥಿಯಾಲಜಿಯ ಭಾಷೆಯೇ ಇಂದಿನ ನಮ್ಮ ಸಮಾಜವಿಜ್ಞಾನದ ಭಾಷೆಯೂ ಆಗಿ ಪರಿವರ್ತಿತವಾಗಿದೆ. ಈ ಥಿಯಲಾಜಿಕಲ್ ಭಾಷೆಯು ಮಾನವ ಕುಲದ ಚರಿತ್ರೆಯನ್ನು ಹೇಗೆ ನಿರೂಪಿಸುತ್ತದೆ ಎಂದರೆ

“ಒಂದಾನೊಂದು ಕಾಲದಲ್ಲಿ ಒಂದು ರಿಲಿಜಿಯನ್ ಇತ್ತು. ಅದು ಸತ್ಯವೂ ಸಾರ್ವತಿಕವೂ ಆಗಿದ್ದು ಮಾನವ ಕುಲಕ್ಕೆ ದೈವೀ ಕೊಡುಗೆಯಾಗಿತ್ತು. ಎಲ್ಲಾ ಜನಾಂಗಗಳಲ್ಲೂ (ಮತ್ತು ವ್ಯಕ್ತಿಗಳಲ್ಲೂ) ದೈವತ್ವದ ಪ್ರಜ್ಞೆಯನ್ನು (Biblical) God ಸ್ಥಾಪಿಸಿದ್ದನು; ಈ ಪ್ರಜ್ಞೆಯು ಮಾನವ ಇತಿಹಾಸದ ಕಾಲಾನುಕ್ರಮದಲ್ಲಿ ಭ್ರಷ್ಟವಾಗುತ್ತದೆ. ಆಗ ಮೂರ್ತಿಪೂಜೆ (Idolatry), ಡೆವಿಲ್ನ (ಅಂದರೆ, ಸುಳ್ಳು ದೇವರು ಮತ್ತು ಆತನ ಅಧೀನ ಶಕ್ತಿಗಳ) ಆರಾಧನೆಗಳು ಮಾನವಕುಲವನ್ನು ಅತಿಯಾಗಿ ಆವರಿಸುತ್ತವೆ. ಈ ಸ್ಥಿತಿಯು ಅಬ್ರಾಹಂ, ಇಸಾಕ್ ಮತ್ತು ಜೇಕಬ್ರೊಂದಿಗೆ God ಮಾತನಾಡಿ ಅವರ ಬುಡಕಟ್ಟನ್ನು ಪುನಃ ಸರಿಯಾದ ಮಾರ್ಗಕ್ಕೆ ಬರುವಂತೆ ಮಾಡುವವರೆಗೆ ಮುಂದುವರಿಯುತ್ತದೆ. ಆದರೆ ಕ್ರಿಶ್ಚಿಯನ್ ಪಾದ್ರಿಗಳ ಕೈಯಲ್ಲಿ ಈ ರಿಲಿಜಿಯನ್  ಮತ್ತೊಮ್ಮೆ ಭ್ರಷ್ಟತೆಯ ಪಾತಾಳಕ್ಕೆ ಜಾರಿಬೀಳುತ್ತದೆ. ಆಗ ಉದಯಿಸುವ ಮಾರ್ಟಿನ್ ಲೂಥರ್ ಈ ಕ್ರಿಶ್ಚಿಯನ್ ಪಾದ್ರಿಗಳಿಂದ ರಿಲಿಜಿಯನ್ ಅನ್ನು ಪುನಃ ಸರಿದಾರಿಗೆ ತಂದು ನಿಜವಾದ ರಿಲಿಜಿಯನ್ ಅನ್ನು ಸರ್ವರಿಗೂ ಲಭ್ಯವಾಗುವಂತೆ ಮಾಡುತ್ತಾರೆ.”

ಭಾರತದ ಸಂಧರ್ಭದಲ್ಲಿ ಈ ಮೇಲಿನ ಥಿಯಾಲಜಿಕಲ್ ಭಾಷೆಯೇ ಪದೇ ಪದೇ ಒಂದಲ್ಲಾ ಒಂದು ರೂಪದಲ್ಲಿ ಮಾತನಾಡುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೆಂದರೆ ಬಹುತೇಕ ಚಿಂತಕರು ಭಾರತದ ಕ್ರಾಂತಿ ಮತ್ತು ಪ್ರತಿಭಟನೆಗಳನ್ನು ಯೂರೋಪಿನಲ್ಲಿ ನಡೆದ ಕ್ಯಾಥೊಲಿಕ್ ಚರ್ಚಿನ ವಿರುದ್ದ ಪ್ರೊಟೆಸ್ಟಾಂಟ್ರ ಹೋರಾಟದ ಪಡಿಯಚ್ಚಿನಂತೆ ಚಿತ್ರೀಕರಿಸಿ ಬುದ್ದ, ಬಸವಣ್ಣ, ಅಂಬೇಡ್ಕರ್ ಎಲ್ಲರೂ ಭಾರತದ ಮಾರ್ಟಿನ್ ಲೂಥರ್ ಎಂಬಂತೆ ಬಿರುದನ್ನು ನೀಡಿಬಿಡುವುದು. ಹಾಗಾದರೆ, ಈ ರೀತಿಯ ಚಿತ್ರಣಗಳು ಏನನ್ನು ಧ್ವನಿಸುತ್ತವೆ? ಮೇಲೆ ಹೇಳಿದ ಥಿಯಾಲಜಿಕಲ್ ಭಾಷೆ ಕಟ್ಟಿಕೊಡುವಂತೆ ಯೂರೋಪಿನ ರೀತಿಯ ಚರಿತ್ರೆಯೇ ಭಾರತದ ಚರಿತ್ರೆಯೂ ಕೂಡ, ಭಾರತೀಯ ಸಮಾಜ ಯೂರೋಪಿನ (ಯಾವುದೋ ಕಾಲದ) ಸಮಾಜದ ಪ್ರತಿರೂಪ. ಅಲ್ಲಿಯ ಸಾಮಾಜಿಕ ರಚನೆಯಲ್ಲಿ ಯಾವರೀತಿಯಲ್ಲಿ ಸಮಸ್ಯೆಗಳು ತಲೆದೋರಿದವೋ ಅದೇ ರೀತಿಯ ಸಮಸ್ಯೆಗಳೇ ಇಲ್ಲೂ ತಲೆದೋರಿದವು. ಆ ಸಮಸ್ಯೆಗಳಿಗೆ ಅಲ್ಲಿಯ ಜನ ಮತ್ತು ನಾಯಕರು ಹೇಗೆ ಪ್ರತಿಕ್ರಿಯಿಸಿ ಹೋರಾಡಿದರೂ ಇಲ್ಲಿಯೂ ಹಾಗೆಯೇ ಮಾಡಿದರು ಎಂಬುದನ್ನಲ್ಲವೇ? ನಮ್ಮ ಬುದ್ದ, ಬಸವಣ್ಣನವರು ನಿಜವಾದ ರಿಲಿಜಿಯನ್ಅನ್ನು ಅವಿತಿಟ್ಟು ಸುಳ್ಳುರಿಲಿಜಿಯನ್ ಅನ್ನು ಪ್ರಚಾರ ಮಾಡಿ, ಜನರನ್ನು ಮೂಢನಂಬಿಕೆಯ ಅಂಧಕಾರದಲ್ಲಿ ಮುಳುಗಿಸಿದ ಹಿಂದೂ/ವೈದಿಕ/ವರ್ಣಾಶ್ರಮ ಧರ್ಮದ ವಿರುದ್ದ ಹೋರಾಡಿದರು ಎಂದು ವಿವರಿಸಿದರೆ ಅದು ಮೇಲಿನ ಥಿಯಾಲಜಿಕಲ್ ಭಾಷೆಯ ಪುನರುತ್ಪಾದನೆ ಅಲ್ಲವೇ? ಬುದ್ದ, ಮತ್ತು ಬಸವಣ್ಣನವರಿಗೆ ನಿಜವಾದ ರಿಲಿಜಿಯನ್ ಒಂದಿತ್ತು, ಅದನ್ನು ಭ್ರಷ್ಟಗೊಳಿಸಲಾಗಿದೆ, ಈಗ ನಾನು ಅದನ್ನು ಪುನರ್ಸ್ಥಾಪಿಸುತ್ತ್ತಿದ್ದೇನೆ, ನಾನು ಸ್ಥಾಪಿಸುತ್ತಿರುವ ಈ ರಿಲಿಜಿಯನ್ನೇ ನಿಜವಾದ ರಿಲಿಜಿಯನ್, ಉಳಿದೆಲ್ಲವೂ ಸುಳ್ಳು ಮತ್ತು ಭ್ರಷ್ಟಗೊಂಡವು ಎಂಬ ಕಲ್ಪನೆ ಇತ್ತೇ? ಅಷ್ಟಕ್ಕೂ ಈ ಕಲ್ಪನೆ ಇಂದಿನ ಯಾವ ಭಾರತೀಯ ಸಂಪ್ರದಾಯದಲ್ಲಿದೆ? ಬುದ್ದ ಮತ್ತು ಬಸವಣ್ಣನವರು ಮಾರ್ಟಿನ್ ಲೂಥರ್ ಮಾಡಿದ್ದನ್ನೇ ಇಲ್ಲಿ ಮಾಡಿದರೇ? ಅಥವಾ ಅವರ ಪ್ರತಿಭಟನೆ ಮತ್ತು ತತ್ವಗಳಿಗೆ ತನ್ನದೇ ಆದ ಬೇರೆ ಸಾಂಸ್ಕೃತಿಕ ಮೌಲ್ಯಗಳಿಲ್ಲವೇ?

ಹಿಂದೂ ಧರ್ಮವೊಂದಿದೆ; ಅವುಗಳಿಗೆ ಪವಿತ್ರ ಶಾಸ್ತ್ರಗ್ರಂಥಗಳಿವೆ; ಅವುಗಳೇ ಇಲ್ಲಿಯ ಸಾಮಾಜಿಕ ಆಚರಣೆಗಳನ್ನು ನಿರ್ದೇಶಿಸುತ್ತಿವೆ ಎಂಬುದು ಯಾರೊಬ್ಬರ ಅನುಭವವೂ ಆಗಿರದಿದ್ದರೂ ಸಹ ಮೇಲು-ಕೀಳುಗಳೆಂಬ ವರ್ಗೀಕರಣಗಳಿವೆ. ಜೊತೆಗೆ ಅಸ್ಪೃಶ್ಯತೆಯಂತಹ ಅಮಾನವೀಯ ಆಚರಣೆಯೂ ಇಲ್ಲಿ ಇದೆ. ಈ ಅಸಮಾನತೆ ಮತ್ತು ಅಮಾನವೀಯತೆಗಳನ್ನು ಸರಿಪಡಿಸಬೇಕೆಂದಾದರೆ ಪರಿಹಾರವನ್ನು ಎಲ್ಲಿ ಹುಡಕಬೇಕು? ಒಂದು ವೇಳೆ ಹಿಂದೂ ರಿಲೀಜಿಯನ್ ಮತ್ತು ಅದರ ಶಾಸ್ತ್ರಗ್ರಂಥಗಳೇ ಈ ಸಮಸ್ಯೆಗಳ ಮೂಲವಾಗಿದ್ದರೆ ಅವುಗಳನ್ನು ನಾಶಪಡಿಸಬೇಕೆಂಬ ಪರಿಹಾರ ಸೂಕ್ತವಾಗುತ್ತದೆ. ಒಂದು ವೇಳೆ ಹಿಂದೂ ರಿಲಿಜಿಯನ್ ಅಸ್ತಿತ್ವದಲ್ಲಿಯೇ ಇಲ್ಲದಿದ್ದರೆ ಮತ್ತು ಈ ಯಾವ ಶಾಸ್ತ್ರಗ್ರಂಥಗಳು ಇಲ್ಲಿ ಯಾರಿಗೂ ರಿಲಿಜಿಯಸ್ ಪವಿತ್ರಗ್ರಂಥಗಳಲ್ಲದಿದ್ದರೆ ಈ ಪರಿಹಾರ ಸೂಕ್ತವಾಗುವುದಿಲ್ಲ. ಹಾಗಾಗಿ ಅವನ್ನು ತೆಗಳಿದರೂ, ಸುಟ್ಟರೂ ಇಲ್ಲಿಯ ಯಾವ ಸಾಮಾಜಿಕ ಅನಿಷ್ಟಗಳೂ ತೊಲಗುವುದಿಲ್ಲ (ಸುಟ್ಟರೂ ಅವು ತೊಲಗಿಲ್ಲ ಎಂಬುದೇ ಅದಕ್ಕೆ ಸಾಕ್ಷಿ). ಹೀಗಾಗಿ ಇಲ್ಲಿ ಹಿಂದೂ ರಿಲಿಜಿಯನ್ ಇಲ್ಲದಿದ್ದರೂ; ಈ ಶಾಸ್ತ್ರಗಳ ಅರಿವಿರದಿದ್ದರೂ, ಈ ಸಾಮಾಜಿಕ ಅಸಮಾನತೆ ಅಸ್ಪೃಶ್ಯತೆಗಳಂತಹ ಸಮಸ್ಯೆಗಳು ಇವೆ. ಅವುಗಳನ್ನು ತೊಲಗಿಸಬೇಕೆಂದರೆ ಮೊದಲು ಅವುಗಳ ಮೂಲಕಾರಣವೇನೆಂದು ಗುರುತಿಸಬೇಕಾಗುತ್ತದೆ. ಇಲ್ಲಿಯವರೆಗೆ ಎಲ್ಲರೂ ಹಿಂದೂ ರಿಲಿಜಿಯನ್ ಮತ್ತದರ ಹಿಂದೂ ಶಾಸ್ತ್ರಗ್ರಂಥಗಳೇ ಕಾರಣ ಎಂಬ ಮಂತ್ರವನ್ನೇ ಪುನರುಚ್ಚರಿಸುತ್ತಿದ್ದಾರೆ ಅಷ್ಟೇ!.

ಹೀಗೆ ಒಂದೆಡೆ, ರಿಲಿಜಿಯಸ್ ಥಿಯಾಲಜಿಕಲ್ ಭಾಷೆಯ ಚೌಕಟ್ಟಿನಿಂದಾಗಿ ಸೆಕ್ಯುಲರಿಸ್ಟರು ಮತ್ತು ಪ್ರಗತಿಪರರು ಭಾರತೀಯ ಸಮಾಜದ ಸಮಸ್ಯೆಗಳನ್ನು ಸರಿಯಾಗಿ ಗುರತಿಸುವಲ್ಲಿ ವಿಫಲವಾಗುತ್ತಿದ್ದರೆ ಮತ್ತೊಂದೆಡೆ, ಹಿಂದೂ ರಿಲಿಜಿಯನ್ ಭಾರತದಲ್ಲಿ ಅಸ್ತಿತ್ವದಲ್ಲಿರುವುದರ ಬಗ್ಗೆ ಹಿಂದೂ ಎನ್ನುವುದು ಭಾರತೀಯರ ಸಾಮಾಜಿಕ ವಾಸ್ತವವಾಗಿರುವ ಬಗ್ಗೆ ವೈಜ್ಞಾನಿಕವಾಗಿ ಸಾಭಿತುಪಡಿಸದೆ ಅವು ಇದ್ದೇ ಇವೆ ಎಂಬ ಸಾಮಾನ್ಯ ನಂಬಿಕೆಯೊಂದಿಗೆ ಹಿಂದುತ್ವವಾದವು ನಿಂತಿದೆ. ಅದು ಯೂರೋಪಿಯನ್ ರಿಲಿಜಿಯಸ್ ಸಂಸ್ಕೃತಿಯ ಥಿಯಾಲಜಿಲ್ ಭಾಷೆಯು ಭಾರತೀಯ ಶಿಕ್ಷಿತರಲ್ಲಿ ಹುಟ್ಟುಹಾಕಿರುವ ಭ್ರಾಂತಿಯೇ ವಾಸ್ತವವೆಂದು ಸಾಧಿಸುವ ಪ್ರಯತ್ನದಲ್ಲಿದೆ. ಇಡೀ ಭಾರತೀಯ ಬಹುತ್ವ್ವವೂ ಅನನ್ಯವೂ ಮತ್ತು ವಿಭಿನ್ನ ಜೀವನ ಮಾದರಿಗಳ ಸಂಸ್ಕೃತಿಗಳನ್ನೆಲ್ಲಾ ಏಕೀಭವಿಸಿ ಅಥವಾ ನಾಶಪಡಿಸಿ ಭಾರತೀಯವಲ್ಲದ ಯೂರೋಪಿಯನ್ ರಿಲಿಜಿಯಸ್ ಸಂಸ್ಕೃತಿಯ ಪಡಿಯಚ್ಚಿನ ಹಿಂದೂ ರಿಲಿಜಿಯಸ್ ಸಂಸ್ಕೃತಿಯನ್ನು ಸಾಕಾರಗೊಳಿಸುವ ಕನಸು ಕಾಣುತ್ತಿದೆ. ಈ ಅರ್ಥದಲ್ಲಿ ಹಿಂದುತ್ವವಾದಿಗಳು ಇಡೀ ಆ ರಿಲಿಜಿಯಸ್ ಥಿಯಾಲಜಿಕಲ್ ಭಾಷೆಯನ್ನೇ ತಮ್ಮಲ್ಲಿ ಅವಾಹಿಸಿಕೊಂಡು ಭಾರತವನ್ನು ಯೂರೋಪಿನ ರಿಲಿಜಿಯಸ್ ಸಮಾಜದ ಪ್ರತಿರೂಪವಾಗಿಸುವ ಯೋಜನೆಯಲ್ಲಿದ್ದಾರೆ.

ಇದೇ ಸಂಧರ್ಭದಲ್ಲಿ ಇತ್ತೀಚೆಗೆ ಸಮಾಜವಿಜ್ಞಾನಳ ಚರ್ಚೆಯಲ್ಲಿ ಹುಟ್ಟಿಕೊಂಡಿರುವ ‘ನಿರ್ವಸಾಹಿತೀಕರಣ’ ಎಂಬ ಹೆಸರಿನ ಇಂದಿನ ಸಮಾಜವನ್ನು ಆವರಿಸಿಕೊಂಡಿರುವ ವಸಾಹತುಶಾಹಿ ಎನ್ನುವುದೆನ್ನೆಲ್ಲಾ ಒಂದೊಂದೇ ಕಳಚಿಹಾಕುತ್ತಾ ಹೋಗಬೇಕು. ಆಗ ನಮಗೆ ನೈಜ ಭಾರತೀಯ ಎನ್ನುವುದು ದೊರೆಯುವುದು ಎಂಬ ವಾದವೂ ಈ ತೊಡಕಿನಿಂದ ಮುಕ್ತಗೊಂಡಿಲ್ಲ. ಒಂದು ರೀತಿಯಲ್ಲಿ ಇದೂ ಸಹ ಯೂರೋಸೆಂಟ್ರಿಕ್ ವಾದದ ಮತ್ತೊಂದು ಮುಂದುವರಿಕೆಯೇ. ಇಂದಿನ ‘ಡೀಕನ್ಸ್ಟ್ರ್ರಕ್ಷನಿಸ್ಟ್’, (De-Constructionist)   ‘ಪೋಸ್ಟ್ಸ್ಟ್ರಕ್ಚರಲಿಸ್ಟ್’ (Post – structuralists) ಮತ್ತು ‘ಹೆಜಮನಿ’ಯನ್ನೂ ಒಳಗೊಂಡಂತೆ ಬಹಳಷ್ಟು ವಸಾಹತೋತ್ತರ ವಾದಗಳೆಲ್ಲವೂ ಇದನ್ನೇ ಪ್ರತಿಪಾದಿಸುತ್ತಿವೆ. ನಿಜವಾಗಿಯೂ ಒಂದರ್ಥದಲ್ಲಿ ಇವು ಹಿಂದಿನ ಓರಿಯಂಟಲಿಸಂನ ಮುಂದುವರಿಕೆಗಳಾಗಿವೆ. ಒಟ್ಟಾರೆ ಈ ಎಲ್ಲಾ ವಾದಗಳಿಂದ ಹುಟ್ಟಿಕೊಂಡ ‘ವೇದಗಳಿಗೆ ಹಿಂತಿರುಗಿ;’, ‘ಭಾರತೀಯತೆಯನ್ನು ನಾಶಗೊಳಿಸುತ್ತಿರುವ ಆಧುನಿಕತೆಯನ್ನು ತಿರಸ್ಕರಿಸಿ’; ‘ವಸಾಹತುಶಾಹಿ ಹುಟ್ಟುಹಾಕಿದ ಸಾಮಾಜಿಕ ರಚನೆಗಳನ್ನು ಹೊಡೆದುರುಳಿಸಿ ಭಾರತೀಯವೆನ್ನುವ ಹೊಸ ಸಾಮಾಜಿಕ ರಚನೆಗಳನ್ನು ಕಟ್ಟಿ’ ಎನ್ನುವ ಉದ್ಘೋಷಗಳು ಈ ಥಿಯಾಲಜಿಕಲ್ ಭಾಷೆಯ ಚೌಕಟ್ಟನ್ನು ಒಂದೊಂದು ರೀತಿಯಲ್ಲಿ ಪುನರುತ್ಪಾಧಿಸುತ್ತಿವೆ, ಹೀಗೆ ಹೇಳಿದರೆ ಹಿಂದೆ ಎಂದೋ ಭಾರತೀಯವೆನ್ನುವ ನೈಜ ಮತ್ತು ಪವಿತ್ರವೆನ್ನುವ (ನಿಜ ರಿಲಿಜಿಯನ್ಅನ್ನು ಆಧರಿಸಿದ) ಒಂದು ಸಾಮಾಜಿಕ ವ್ಯವಸ್ಥೆ ಇತ್ತು; ಅದನ್ನು ವಸಾಹತುಶಾಹಿಗಳು ಅಥವಾ ಇನ್ಯಾರೋ ತಮ್ಮ ವೈಯುಕ್ತಿಕ ಹಿತಾಸಕ್ತಿಗಾಗಿ ಶಿಥಿಲವಾಗಿಸಿ ಭ್ರಷ್ಟ ಸಾಮಾಜಿಕ ವ್ಯವಸ್ಥೆಗೆ ಕಾರಣವಾಗಿದ್ದಾರೆ; ಹಾಗಾಗಿ ಅವನ್ನು ಇಂದು (ಆಧುನಿಕ ಮಾರ್ಟಿನ್ ಲೂಥರ್ ಅವರಂತೆ) ಮುರಿದು ಪುನಃ ಹಿಂದಿನ ನೈಜ ಮತ್ತು ಪವಿತ್ರ ಸಾಮಾಜಿಕ ಸ್ಥಿತಿಯನ್ನು (ನಿಜ ರಿಲಿಜಿಯನ್ಅನ್ನು) ಪುನರ್ಸ್ಥಾಪಿಸಬೇಕು ಎಂದಂತಾಗುತ್ತದೆ. ಇಂಥಹ ವಾದವನ್ನೆ ಇಲ್ಲಿ ಯೂರೋಪಿನ ಥಿಯಾಲಜಿಕಲ್ ಭಾಷೆಯ ಚೌಕಟ್ಟಿನ ಯಥಾವತ್ತಾದ ಪುನರುತ್ಪಾದನೆ ಎನ್ನುತ್ತಿರುವುದು.

ಹಾಗಾದರೆ, ಈ ಮೇಲಿನ ಚರ್ಚೆ ಹೇಳುತ್ತಿರುವುದೇನು? ಯಾವುದನ್ನೇ ನಾಶಪಡಿಸಬೇಕು ಮತ್ತು ಹೊಸದನ್ನು ಕಟ್ಟಬೇಕು ಎನ್ನುವ ಮೊದಲು ಅದು ಸಮಾಜದಲ್ಲಿ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಇದ್ದರೂ ಅದರ ಸ್ವರೂಪ ನಾವು (ನಮ್ಮ ಇಂದಿನ ಸಮಾಜ ವಿಜ್ಞಾನ) ಕಟ್ಟಿಕೊಡುತ್ತಿರುವಂತೆ ಇದೆಯೇ? ಎನ್ನುವುದನ್ನು ಪರಿಶೀಲಿಸಿ ಎಂದು. ಹಿಂದೂ ರಿಲಿಜಿಯನ್ ಅನ್ನು ವಸಾಹತುಶಾಹಿಗಳು ಅಥಾವ ಇನ್ಯಾರೋ ಹುಟ್ಟುಹಾಕಿದರು ಎನ್ನುವ ಮೊದಲು ಅದು ಅಸ್ಥಿತ್ವದಲ್ಲಿ ಇದೆಯೇ? ಅದು ನಮ್ಮ ಸಾಮಾಜಿಕ ವಾಸ್ತವವೇ? ಎಂಬುದನ್ನು ಅರಿಯುವ ಕೆಲಸ ಆಗಬೇಕು ಎಂದು. ಸಮಾಜ ವಿಜ್ಞಾನ (ಮತ್ತು ಸಾಮಾಜಿಕ ಹೋರಾಟಗಳು) ಇಂದಿನ ಪೀಳಿಗೆಯಲ್ಲಿ ಆಸಕ್ತಿ ಕಳೆದುಕೊಳ್ಳಲು ಬಹುಮುಖ್ಯ ಕಾರಣವೇ ಅವು ಅವರ ವಾಸ್ತವ ಅನುಭವದ ಸಾಮಾಜಿಕ ಸ್ಥಿತಿಯ ಬಗ್ಗೆ ಏನನ್ನೂ ಹೇಳುತ್ತಿಲ್ಲ ಎನ್ನುವುದು. ಇಂದಿನ ಸಮಾಜ ವಿಜ್ಞಾನವನ್ನು ಸಂಪೂರ್ಣವಾಗಿ ಈ ಥಿಯಾಲಜಿಕಲ್ ಚೌಕಟ್ಟು ಆವರಿಸಿಕೊಂಡಿರುವುದರಿಂದ ಅದರ ಪರಿಕಲ್ಪನೆಗಳಾವುದೂ ನಮ್ಮ ಸಮಾಜದ ವಾಸ್ತವ ಚಿತ್ರಣಗಳನ್ನು ಕಟ್ಟಿಕೊಡುವಲ್ಲಿ ಸಫಲವಾಗುತ್ತಿಲ್ಲ. ಇದರ ಪರಿಣಾಮವಾಗಿ ಸಮಾಜ ವಿಜ್ಞಾನದ ಇಂದಿನ ಚರ್ಚೆ ತನ್ನ ಅರ್ಥ ಮತ್ತು ಪ್ರಸ್ತುತೆಗಳನ್ನು ಕಳೆದುಕೊಂಡು ಪತನದ ಹಾದಿ ಹಿಡಿದಿದೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇಲ್ಲವಾದರೆ ಇಂದಿನ ಯುವಜನಾಂಗದ ಪ್ರತಿಭಾವಂತರೆಲ್ಲರೂ ಆಧುನಿಕತೆಯ ಮೋಡಿಗೊಳಗಾಗಿ (ಭ್ರಷ್ಟವಾಗಿ) ಹಣದ ಹಿಂದೆ ಬಿದ್ದು ಐ.ಟಿ. ಬಿ.ಟಿ.ಯಂತಹ ಟೆಕ್ನಿಕಲ್ ಕೊರ್ಸ್ಗಳ (Technical Course) ಕಡೆಗೆ ಸೆಳೆಯಲ್ಪಟ್ಟಿದ್ದಾರೆ ಅವರಿಗೆ, ಸಾಮಾಜಿಕ ಮೌಲ್ಯಗಳ ಬಗ್ಗೆ ಆದರವಿಲ್ಲ ಎಂದು ಬೊಬ್ಬೆ ಹೊಡೆಯಬೇಕಾಗುತ್ತದೆ. ಸಮಾಜ ವಿಜ್ಞಾನವನ್ನು ಪ್ರಸ್ತುತವಾಗಿಸಿ ಮತ್ತು ಆಸಕ್ತಿದಾಯಕವಾಗಿಸಿ; ಹಾಗೆ ಮಾಡುವುದೆಂದರೆ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವಾಸ್ತವದ ಸ್ಥಿತಿಗಳ ಬಗ್ಗೆ ನಾವು ಮಾತನಾಡಲು ಆರಂಭಿಸಬೇಕು. ಇಂದಿನ ಪೀಳಿಗೆಯವರಿಗೆ ನಮ್ಮ ಸಮಾಜದ ವಾಸ್ತವ ಸಮಸ್ಯೆಗಳ ಬಗ್ಗೆ ಇದು ಮಾತಾನಾಡುತ್ತಿದೆ ಎಂದೆನಿಸಬೇಕು.

Advertisements
 1. ಜುಲೈ 5, 2010 ರಲ್ಲಿ 8:25 ಅಪರಾಹ್ನ

  ಒಂದು ವ್ಯವಸ್ಥೆ ಯನ್ನು ನೋಡುವ ನಿಮ್ಮ ದೃಷ್ಟಿಕೋನ ವಿಶಿಷ್ಟವಾಗಿದೆ.

  ಸಾಧ್ಯವಾದರೆ ಸಂಪದದಲ್ಲಿಯೂ ಒಂದು copy / ಪೋಸ್ಟ್ ಮಾಡಿ. ಅಲ್ಲಿ ಚರ್ಚೆ ಮಾಡಲು ಸುಲಭವಾಗಿಉತ್ತೆ.

  Like

 2. ಜುಲೈ 6, 2010 ರಲ್ಲಿ 10:12 ಫೂರ್ವಾಹ್ನ

  ಪ್ರೀತಿಯ ಸವಿತೃ,
  ನಿಮ್ಮ ಸಲಹೆಗೆ ಧನ್ಯವಾದಗಳು.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: