ಮುಖ ಪುಟ > Cultural Studies, Culture, Dharma, Hindu, Hinduism, Religion > ಹಿಂದೂ ಹಾಗೆಂದರೇನು?…

ಹಿಂದೂ ಹಾಗೆಂದರೇನು?…

“Hindu” What is it?…

ಸಂತೋಷ್ ಕುಮಾರ್. ಪಿ. ಕೆ

ಆಧುನಿಕ ಜಗತ್ತಿನ ಬುದ್ದಿಜೀವಿಗಳ ವಲಯದಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿರುವ ವಿಷಯವೆಂದರೆ ಹಿಂದೂಯಿಸಂ, ಈ ಹಿಂದೂಯಿಸಂನ ಅಧ್ಯಯನಕ್ಕಾಗಿ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಬೃಹತ್ ಮಟ್ಟದ ಸಂಸ್ಥೆಗಳು ಹುಟ್ಟಿಕೊಂಡಿವೆ. ಈ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬಹುತೇಕ ಬುದ್ದಿಜೀವಿಗಳು ಹಿಂದೂಯಿಸಂ ಎಂಬ ರಿಲಿಜನ್ ಅಸ್ಥಿತ್ವದಲ್ಲಿದ್ದು ಅದರ ಸಾಧಕ ಬಾಧಕಗಳ ಕುರಿತು ಆಲೋಚಿಸುವ ಸಂದರ್ಭದಲ್ಲಿ ಕೊಂಚ ವಿಭಿನ್ನವಾಗಿ ಪರ್ಯಾಯಾವಲೋಚಿಸುವ ಕುರಿತು ಇಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ನಾವು ನಮ್ಮದಲ್ಲದ ವಿಚಾರಗಳನ್ನು ನಮ್ಮದೇ ಎಂದು ಹೇಗೆ ತಿಳಿದುಕೊಂಡಿದ್ದೇವೆ ಹಾಗು ಅವುಗಳು ನಮ್ಮವೇ ಎಂದು ಸ್ಪಷ್ಟಪಡಿಸುವಲ್ಲಿ ಇತರ ಅಂಶಗಳ ಪಾತ್ರಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿದ್ದೇನೆ. ಪ್ರಸಕ್ತ ಲೇಖನದಲ್ಲಿ ಈ ಕೆಳ ಕಾಣಿಸಿರುವ ಅಂಶಗಳ ಮೇಲೆ ಬೆಳಕನ್ನು ಹರಿಸಲು ಪ್ರಯತ್ನಿಸಿದ್ದೇನೆ.

1. ಹಿಂದೂ ಪದದ ಉಗಮ, ಬೆಳವಣಿಗೆ ಮತ್ತು ಅದರ ಇಂದಿನ ಬಳಕೆ

2. ಹಿಂದೂಯಿಸಂನ ಉಗಮ ಮತ್ತು ಅದರ ಪ್ರಸಕ್ತತೆ

1. ಹಿಂದೂಯಿಸಂನ ಕುರಿತು ಚರ್ಚಿಸುವ ಮುನ್ನ ಈ ಹಿಂದೂ ಎಂಬ ಪದವು ಹೇಗೆ ಅಸ್ಥಿತ್ವಕ್ಕೆ ಬಂದಿತೆಂದು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಭಾರತದವರು ಹಿಂದುಗಳು ಎಂಬ ಕಲ್ಪನೆ ಬಹಳಷ್ಟು ಜನರಿಗೆ ಬೇರೂರಿದೆ, ಪ್ರೌಢಶಾಲಾ ಶಿಕ್ಷಣ ಮುಗಿಸಿದವರಿಗೆ ನೆನಪಿರಬಹುದು, ಹಿಂದೂ ಎಂಬ ಪದ ಹೇಗೆ ಬಂತೆಂದು. ಪರ್ಷಿಯನ್ನರು ಮೊದಲು ಭಾರತಕ್ಕೆ ಬಂದಾಗ ಸಿಂಧೂ ನದಿಯ ಬಯಲಿನಲ್ಲಿ ವಾಸಿಸುತ್ತಿದ್ದ ಜನರನ್ನು  ಹಿಂದೂಗಳೆಂದು ಕರೆದರು,  ಈ ವಿಷಯಕ್ಕೆ ಸಂಬಂಧಿಸಿದಂತೆ ಆಧಾರವನ್ನು ಒದಗಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ,  ಕಾರಣ ಪ್ರೌಢಶಾಲಾ ಪಠ್ಯಪುಸ್ತಕಗಳಲ್ಲಿ ದೊರಕುವ ಸರ್ವೇಸಾಮಾನ್ಯ ಮಾಹಿತಿಯಾಗಿದೆ. ಆದರೆ ಹಿಂದೂಸ್ಥಾನ ಎಂಬ ಹೆಸರು ಬಹಳ ಹಿಂದಿನಿಂದಲೂ ಭಾರತಕ್ಕೆ ಇತ್ತು ಆದ ಕಾರಣ ಇಲ್ಲಿ ವಾಸಿಸುವವರಿಗೆ ಹಿಂದೂಗಳೆಂದು ಹೆಸರು ಬಂದಿರುವುದು ಎಂಬುದು ಕೆಲವರ ವಾದ ಇರಬಹುದು, ಆದರೆ ನಾನು ಆ ರೀತಿಯ ಗೊಂದಲ ಚರ್ಚೆಗೆ ಇಳಿಯಬಸುವುದಿಲ್ಲ, ಬದಲಿಗೆ ನಾ ಹೇಳ ಹೊರಟಿರುವುದು, ಹಿಂದೂ ಎಂಬುದು ಹೇಗೆ ಅಸ್ಥಿತ್ವಕ್ಕೆ ಬಂದಿತು ಮತ್ತು ಅದರ ಬಳಕೆ ಪ್ರಸಕ್ತ ಕಾಲದಲ್ಲಿ ಯಾವ ರೀತಿ ಆಗುತ್ತಿದೆ ಎಂಬುದನ್ನು ವಿಶ್ಲೇಷಿಸುತ್ತೇನೆ. ನಮಗೆ ಈ ವಿಷಯಗಳು ತಿಳಿದಿದ್ದರೂ ಅದರ ಕುರಿತು ಆಲೋಚಿಸುವಾಗ ಸ್ವಲ್ಪ ಎಡವಿರುವುದು ಬುದ್ದಿಜೀವಿಗಳ ಆಲೋಚನಾ ಕ್ರಮಗಳನ್ನು ನೋಡಿದರೆ ತಿಳಿಯುತ್ತದೆ.

ಇದರ ಆಧಾರದ ಮೇಲೆಯೇ (ಅಂದರೆ ಹಿಂದೂಗಳು ಎಂಬ ಕಲ್ಪನೆ) 1925 ರಿಂದೀಚೆಗೆ ಕುತೂಹಲಕಾರಿ ಬೆಳವಣಿಗೆ ಭಾರತದಲ್ಲಿ ಕಂಡುಬಂದಿತು, ಎಲ್ಲಾ ಹಿಂದೂಗಳು ಒಂದಾಗಿ ಅಖಂಡ ಹಿಂದೂಸ್ಥಾನದ ನಿರ್ಮಾಣ ಎಂಬ ಘೋಷಣೆಯೊಂದಿಗೆ ಆರ್.ಎಸ್.ಎಸ್. ಸಂಘಟನೆ ಹುಟ್ಟಿಕೊಂಡಿತು, ಹೀಗೆ ಹಿಂದೂಗಳನ್ನು ಒಂದು ಮಾಡುವುದು ಸಾಧ್ಯವೇ? ಗೊತ್ತಿಲ್ಲ……… ಆದರೆ ಒಂದು ಉದಾಹರಣೆ ಕೊಡುವ ಮೂಲಕ ಇದಕ್ಕೆ ಸಂಬಂದಿಸಿದಂತೆ ನಾನು ಕೆಲವು ಪ್ರಶ್ನೆಗಳನ್ನು ಎತ್ತಲು ಬಯಸುತ್ತೇನೆ. ಸುಮಾರು ಐದು ಅಥವಾ ಆರು ಶತಮಾನಗಳ ನಂತರ ಯಾವದೋ ದೇಶದ ವಿದೇಶಿ ಯಾತ್ರಿಕರು ಭಾರತಕ್ಕೆ ಬರುತ್ತಾರೆ ಎಂದಿಟ್ಟುಕೊಳ್ಳಿ, ಅವರಿಗೆ ನಮ್ಮ ಭಾಷೆ ಬರುವುದಿಲ್ಲ ಹಾಗೆಯೇ ನಮಗೆ ಅವರ ಭಾಷೆ ಅರ್ಥವಾಗುವುದಿಲ್ಲ, ಇಂತಹ ಸನ್ನಿವೇಷದಲ್ಲಿ ವಿದೇಶಿಗರು ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಇಲ್ಲಿನ ಜನರನ್ನು ಏನೆಂದು ಕರೆಯಬೇಕೆಂದು ತಿಳಿಯದೇ ಗಿಲ್-ಗಿಲ್ ಎಂದು ನಾಮಕರಣ ಮಾಡಿ ಇಲ್ಲಿ ವಾಸಿಸುವ ಎಲ್ಲರನ್ನೂ ಗಿಲ್-ಗಿಲ್ಗಳು ಎಂದು ಕರೆದರು ಅಂತಿಟ್ಟುಕೊಳ್ಳಿ. ಅವರು ತಮ್ಮ ದೇಶಗಳಿಗೆ ಹಿಂದಿರುಗಿದ ಅಥವಾ ನಾಮಕರಣಗೊಳಿಸಿದ 200 ವರ್ಷಗಳ ತರುವಾಯ ಭಾರತದಲ್ಲಿ ಯಾವುದೋ ಒಂದು ಸಂಘ ಅಥವಾ ಗುಂಪು ಹುಟ್ಟುತ್ತದೆ ಮತ್ತು ಅದರ ಮೂಲ ಉದ್ದೇಶ ಎಲ್ಲಾ ಗಿಲ್-ಗಿಲ್ ಗಳನ್ನು ಒಂದಾಗಿಸಿ ಅಖಂಡ ಗಿಲ್-ಗಿಲ್ ಗಳ ದೇಶವನ್ನು ನಿರ್ಮಾಣ ಮಾಡುವುದೇ ಆಗಿರುತ್ತದೆ ಇದು ಸಾಧ್ಯವೇ ಎಂಬುದು ನನ್ನ ಪ್ರಶ್ನೆಯಾಗಿದೆ, ಕಾರಣ ಗಿಲ್-ಗಿಲ್ ಎಂಬುದು ಅವರ ಅನುಭವಾತ್ಮಕ ವಸ್ತುವೇ ಆಗಿರುವುದಿಲ್ಲ, ಈ ನೆಲೆಗಟ್ಟಿನಲ್ಲಿ ಹಿಂದೂಗಳ ಒಗ್ಗೂಡಿಸುವಿಕೆ ಸಾಧ್ಯವೇ? ಏಕೆಂದರೆ ಹಿಂದೂ ಎಂಬುದು ಇಲ್ಲಿನ ಜನರ ಅನುಭವಾತ್ಮಕ ವಿಷಯವೇ ಅಲ್ಲ. ಇದನ್ನು ಈ ಕೆಳಗಿನ ಕೆಲವು ಅಂಶಗಳಿಂದ ಇನ್ನೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ,  ಯಾರಾನ್ನಾದರೂ ನೀವು ಯಾರು ಎಂದು ಕೇಳಿದೊಡನೆ ಆತ ನಿಸ್ಸಂಶಯವಾಗಿ ತನ್ನ ಹೆಸರು ಅಥವಾ ಊರು, ತಾನು ಇವರ ಮಗ, ತಾನು ಇಂತಹ ಜಾತಿಗೆ ಸೇರಿದವನು ಅಥವಾ ತಾನು ಇಂತಹ ಉದ್ಯೋಗ ನಿರ್ವಹಿಸುತ್ತಿರುವವನು ಎಂದೆಲ್ಲಾ ಹೇಳಬಹುದು ಆದರೆ ನಾನೊಬ್ಬ ಹಿಂದೂ ಎಂದು ಹಿಂದೆ ಮುಂದೆಯೂ ಆತ ಹೇಳುವುದಿಲ್ಲ, ಕಾರಣ ಹಿಂದೂ ಎಂಬುದು ಆತನ ಅನುಭವಾತ್ಮಕ ಸಂಗತಿಯೇ ಆಗಿರುವುದಿಲ್ಲ, ಬದಲಿಗೆ ಆತನ ಹೆಸರು, ಕುಲ, ಪಂಗಡ, ಇತ್ಯಾದಿಗಳು ಅವನ ಅನುಭವಕ್ಕೆ ನಿಲುಕುತ್ತಿರುತ್ತವೆ. ಪ್ರಿಯ ಓದುಗರೇ ನೀವೇ ಸ್ವಲ್ಪ ಯೋಚಿಸಿ ನಿಮಗೆಂದಾದರೂ ಹಿಂದೂ ಎಂಬ ಭಾವನೆ ಮೂಡಿದೆಯೇ ಎಂದು? ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಯಾರಾದರೂ ನಮ್ಮ ಹೆಸರನ್ನು ಕರೆದರೆ ಆ ಹೆಸರು ನಮ್ಮದೆಂಬ ಅನುಭವವಾಗುತ್ತದೆ, ಅಂತೆಯೇ ನಾವು ಪಡೆದ ಶಿಕ್ಷಣದ ಆಧಾರದ ಮೇಲೆ ನಮ್ಮನ್ನು ಗುರುತಿಸಿದರೆ ಆ ಶಿಕ್ಷಣದ ಅನುಭವ ನಮಗಿರುತ್ತದೆ, ಕೆಲವೊಮ್ಮೆ ಜಾತಿ ನಮ್ಮ ದೈನಂದಿನ ಜೀವನದಲ್ಲಿ ಅನುಭವಕ್ಕೆ ಬಾರದಿದ್ದರೂ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ (ಅಂದರೆ ವಿವಾಹ, ಜಾತಿ ಸಂಘಟನೆಗಳ ಕಾರ್ಯಕ್ರಮಗಳು, ಇತ್ಯಾದಿಗಳಲ್ಲಿ) ತಾನು ಇಂತಹ ಜಾತಿಯವನು ಎಂಬುದು ನಮ್ಮ ಅನುಭವಕ್ಕೆ ನಿಲುಕುತ್ತದೆ, ಆದರೆ ಹಿಂದೂ ಎಂಬುದು ಯಾವ ಸಂದರ್ಭದಲ್ಲಿ ನಮ್ಮ ಅನುಭವಕ್ಕೆ ಬರುತ್ತದೆ ಎಂಬುದೇ ಪ್ರಶ್ನಾರ್ಹ ಸಂಗತಿಯಾಗಿದೆ. ಶಾಲೆಗಳಿಗೆ ಸೇರಿಸುವ ಅಥವಾ ಸೇರುವ ಸಂದರ್ಭದಲ್ಲಿ ಶಾಲಾ ಅರ್ಜಿಗಳಲ್ಲಿ ಮಾತ್ರ ರಿಲಿಜನ್ ಎಂಬ ಕಾಲಂನ ಮುಂದೆ ಹಿಂದೂ ಎಂದು ಬರೆಯುತ್ತೇವೆ, ಆದರೆ ಅದು ಏನು ಮತ್ತು ಅದರ ಅರ್ಥವೇನೆಂಬುದೂ ನಮಗೆ ತಿಳಿದಿರುವುದಿಲ್ಲ, ಹಾಗೆಯೇ ಅರ್ಜಿಯಲ್ಲಿ ರಿಲಿಜಿನ್ ಎಂಬ ಕಾಲಂ ಇರದಿದ್ದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ.

2. ಇನ್ನೂ ಹಿಂದೂಯಿಸಂ ವಿಷಯಕ್ಕೆ ಬರುವ, ಹಿಂದೂ ಎಂಬುದೇ ನಮ್ಮ ಅನುಭವಾತ್ಮಕ ಸಂಗತಿ ಅಲ್ಲದ ಮೇಲೆ ಹಿಂದೂಯಿಸಂ ನಮ್ಮ ರಿಲಿಜನ್ ಆಗಿರಲು ಸಾಧ್ಯವೇ? ಹಾಗಾದರೆ ಹಿಂದೂಯಿಸಂ ನಮ್ಮ ರಿಲಿಜನ್ ಅಲ್ಲವಾದರೆ ಬೇರೆ ಯಾವುದಾದರೂ ರಿಲಿಜನ್ ಇದೆಯೇ? ಈ “ಹಿಂದೂಯಿಸಂ” ಭಾರತದಲ್ಲಿ ರಿಲಿಜನ್ ಎಂದು ಹೇಗೆ ಗುರುತಿಸಲ್ಪಟ್ಟಿತು ಮತ್ತು ಯಾರಿಂದ ಗುರುತಿಸಲ್ಪಟ್ಟಿತು ಎಂಬುದು ಅತ್ಯಂತ ಪ್ರಮುಖವಾದ ವಿಚಾರವಾಗಿದೆ.

ಭಾರತದಲ್ಲಿರುವ ಯಾರೋಬ್ಬರಿಗೂ ತಿಳಿಯದ ರಿಲಿಜನ್ ಮೊದಲು ಕಂಡವರು ಪಾಶ್ಚಾತ್ಯರು ಹಾಗು ಕ್ರೈಸ್ತ ಮಿಷನರಿಗಳು. ಅವರು ಭಾರತದಲ್ಲಿ ರಿಲಿಜನ್ನನ್ನು ಕಾಣಲು ಎರಡು ಪ್ರಮುಖವಾದ ಕಾರಣಗಳೂ ಇದ್ದವು, ಅವುಗಳೆಂದರೆ,

ಅ) ಪಾಶ್ಚಾತ್ಯರ ಸಾಂಸ್ಕೃತಿಕ ಹಿನ್ನೆಲೆ

ಆ) ಕ್ರೈಸ್ತ ಮಿಷನರಿಗಳ ಮತ ಪ್ರಚಾರ

ಅ) ಪಾಶ್ಚಾತ್ಯರು ಭಾರತಕ್ಕೆ ವಿವಿಧ ಉದ್ದೇಶಗಳಿಗಾಗಿ ಬಹಳ ಶತಮಾನಗಳ ಹಿಂದಿನಿಂದಲೂ ಬರುತ್ತಿದ್ದರು, ಹಾಗೆ ಬಂದವರು  ಈ ಸಮಾಜವನ್ನು  ಅರ್ಥಮಾಡಿಕೊಳ್ಳಲು ಇಲ್ಲಿನ ರಿಲಿಜನ್ನಿನ ಶೋಧದಲ್ಲಿ ತೊಡಗಿದರು. ಅವರು ಈ ರೀತಿ ಶೋಧದಲ್ಲಿ ತೊಡಗಲು ಕಾರಣ ಅವರ ಸಾಂಸ್ಕೃತಿಕ ಹಿನ್ನೆಲೆಯೇ ಆಗಿತ್ತು. ಅವರು ಕ್ರಿಶ್ಚಿಯಾನಿಟಿ ಎಂಬ ರಿಲಿಜನ್ನನ್ನು ಹೊಂದಿದ್ದರು ಹಾಗೆಯೇ ಪ್ರಪಂಚದ ಎಲ್ಲಾ ಸಂಸ್ಕೃತಿಗಳಿಗೂ ಒಂದು ರಿಲಿಜನ್ ಇದ್ದಿರಲೇಬೇಕು ಎಂಬ ದೃಡ ನಂಬಿಕೆಯನ್ನು ಹೊಂದಿದ್ದರು. (S.N. Balagangadhara, The Heathen in His Blindness- p.2) ರಿಲಿಜನ್ ಇರದ ಸಂಸ್ಕೃತಿ ಇರಬಹುದೆಂಬ ಕಲ್ಪನೆಯನ್ನೂ ಸಹ ಅವರಿಂದ ಮಾಡಲು ಸಾಧ್ಯವಿರಲಿಲ್ಲ, ಈ ರೀತಿಯ ಒಂದು ರಿಲಿಜಿಸ್ ಹಿನ್ನೆಲೆಯಿಂದ ಬಂದ ಪಾಶ್ಚಾತ್ಯರು ರಿಲಿಜನ್ನನ್ನೆ ಹುಡುಕುವ ಪ್ರಯತ್ನದಲ್ಲೇ ತಮ್ಮನ್ನು ತೊಡಗಿಸಿಕೊಂಡರು. ಇದನ್ನು ಒಂದು ಉದಾಹರಣೆಯ ಮೂಲಕ ಇನ್ನೂ ಸರಳವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ಒಬ್ಬ ಮರಳುಗಾಡಿನಲ್ಲಿ ವಾಸಿಸುವ ವ್ಯಕ್ತಿ, ಮರಳುಗಾಡನ್ನು ಬಿಟ್ಟು ಬೇರಾವ ಪ್ರದೇಶವನ್ನು ಎಂದೆಂದೂ ಕಂಡಿರದವನು ಮತ್ತು ಮರಳುಗಾಡು ಇರದಿರುವ ಪ್ರದೇಶ ಇರಬಹುದೆಂಬುದನ್ನೂ ಆಲೋಚಿಸಲಾಗದವನು ಎಂದು ಕಲ್ಪಸಿಕೊಳ್ಳಿ, ಒಮ್ಮೆ ಆತ ಯಾವುದೋ ಕಾರಣಕ್ಕಾಗಿ ಬೇರೆ ಪ್ರದೇಶಕ್ಕೆ ಪ್ರಯಾಣಿಸುವ ಸಂದರ್ಭ ಬಂದೊದಗಿತೆಂದು ಇಟ್ಟುಕೊಳ್ಳಿ, ಆತ ಭೇಟಿ ಮಾಡಿದ ಪ್ರದೇಶ ಆತ ಜೀವಿಸುತ್ತಿದ್ದ ಮರಳುಗಾಡು ಪ್ರದೇಶಕ್ಕಿಂತ ತೀರಾ ವಿಭಿನ್ನವಾಗಿದ್ದಿರಬಹುದು ಅಂದರೆ ಮಲೆನಾಡೇ ಆಗಿರಬಹುದು, ಆಗ ಆತನಿಗೆ ಮಲೆನಾಡನ್ನು ನೋಡಿ ಏನನ್ನಿಸಬಹುದು ಎಂಬುದು ಆ ಪ್ರದೇಶವನ್ನು ಅರ್ಥಮಾಡಿಕೊಳ್ಳಲಿಕ್ಕೆ ಪ್ರಮುಖವಾಗಿರುತ್ತದೆ, ತಕ್ಷಣದಲ್ಲಿ ಆ ವ್ಯಕ್ತಿಗೆ ಹಂತ ಹಂತವಾಗಿ ಹೀಗೆ ಅನ್ನಿಸಬಹುದು, ಮೊದಲ ಹಂತದಲ್ಲಿ ಈ ಪ್ರದೇಶ ಮರಳುಗಾಡಿನ  ವ್ಯತ್ಯಸ್ಥ ರೂಪವಾಗಿರಬೇಕು ಅಥವಾ ಮರಳುಗಾಡು ಆಗುವ ಮೊದಲ ಹಂತದಲ್ಲಿರಬೇಕು ಅಂದರೆ ಬಾಲ್ಯಾವಸ್ಥೆಯ ಪ್ರದೇಶವಿರಬಹುದು ಎಂದೆನಿಸಬಹುದು ಆದ ಕಾರಣ ಎರಡನೇ ಹಂತದಲ್ಲಿ ಆತ ಅಲ್ಲಲ್ಲಿ ಮರಳನ್ನು ಹುಡುಕುವ ಪ್ರಯತ್ನವನ್ನೂ ಮಾಡಬಹುದು, ಆದರೆ ಆತನ ಸಮಸ್ಯೆ ಎಂದರೆ ಮರಳೇ ಇಲ್ಲದ ಪ್ರದೇಶಗಳೂ ಇರಲು ಸಾಧ್ಯವಿಲ್ಲ ಆದ್ದರಿಂದ ಇಲ್ಲಿ ಮರಳಿನಿಂದ ಆವೃತವಾದ ಪ್ರದೇಶ ಇದ್ದಿರಲೇಬೇಕು, ಇದಕ್ಕೆ ಕಾರಣ ಎಲ್ಲಾ ಪ್ರದೇಶಗಳು ಮರಳುಗಾಡಿನಿಂದ ಕೂಡಿರುತ್ತವೆ ಎಂಬ ಅವನ ಪೂರ್ವಾಗ್ರಹ ಯೋಚನೆಯೇ ಆಗಿರುತ್ತದೆ. ಈ ನಿಟ್ಟಿನಲ್ಲಿ ತನ್ನ ಯೋಚನಾಲಹರಿಯಿಂದ ಆ ಪ್ರದೇಶವನ್ನು ತಪ್ಪಾಗಿ ಗ್ರಹಿಸಿ, ಅರ್ಥೈಸಿಕೊಂಡು ತನ್ನ ಅನುಭವವನ್ನೇ ಇತರರಿಗೂ ಸತ್ಯವೆಂಬಂತೆ ಆತ ಮನದಟ್ಟು ಮಾಡಬಹುದು.

ಈ ರೀತಿಯ ಸನ್ನಿವೇಶಗಳೇ ಪಾಶ್ಚಾತ್ಯರಿಗೆ ಉಂಟಾಗಿದ್ದವು, ಅವರ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ಭಾರತದಲ್ಲಿ ರಿಲಿಜನ್ನಿನ ಪ್ರಮುಖ ಅಂಶಗಳಾದ ಪವಿತ್ರ ಗ್ರಂಥಗಳು, ಪ್ರೀಸ್ಟ್ ಗಳು, ಧಾರ್ಮಿಕ ಸಂಸ್ಥೆಗಳು ಹಾಗು ಪ್ರವಾದಿ  ಇತ್ಯಾದಿಗಳನ್ನು ಹುಡುಕಲು ಪ್ರಾರಂಭಿಸಿದರು. ಈ ಹಂತದಲ್ಲಿ ಅವರಿಗೆ ಎದುರಾದ ಪ್ರಮುಖ ತೊಡಕುಗಳೆಂದರೆ ಅವರ ನಿರೀಕ್ಷೆಯ ಫಲಗಳು ದೊರೆಯದಿದ್ದುದು, ಆದರೆ ಅವರು ಉಪಯೋಗಿಸಿದ ಚತುರತೆ ಎಂದರೆ ಇಲ್ಲಿರುವ ವಸ್ತುಗಳನ್ನು ಅವರ ಗ್ರಹಿಕೆಗನುಸಾರವಾಗಿ ಬದಲಾಯಿಸುತ್ತಾ  ಅವರ ಸಾಂಸ್ಕೃತಿಕ ಚೌಕಟ್ಟಿನ ಒಳಗಡೆಯೇ (ರಿಲಿಜಿಯಸ್ ಚೌಕಟ್ಟು) ಸತ್ಯವೆಂಬಂತೆ ನಿರೂಪಿಸುತ್ತಾ ಬಂದರು. ಇದು ಅವರ ಯೋಚನಾ ಲಹರಿಯ ಮಿತಿಯೂ ಆಗಿತ್ತು. ಹಾಗಾದರೆ ಆ ಮಿತಿ ಯಾವ ತೆರನದ್ದಾಗಿತ್ತು? ಪ್ರತಿಯೊಂದು ಸಂಸ್ಕೃತಿಯ ಜನರು ತಮ್ಮದೇ ಆದ ಬದುಕುವ ರೀತಿಯನ್ನು ಹೊಂದಿರುತ್ತಾರೆ ಅಂತೆಯೇ ಪಾಶ್ಚಾತ್ಯರು ರಿಲಿಜಿನ್ ಆಧಾರದ ಮೇಲೆ ತಮ್ಮ ಜೀವನವನ್ನು ರೂಪಿಸಿಕೊಂಡರೆ, ಪೌರಾತ್ಯರು ತಮ್ಮ ಸಂಪ್ರದಾಯಗಳ ಆಧಾರದ ಮೇಲೆ ಬದುಕುತ್ತಿದ್ದಾರೆ, ಹೀಗೆ ಬೇರೆ ಬೇರೆ ಹಿನ್ನೆಲೆಯ ಸಂಸ್ಕೃತಿಯಲ್ಲಿ ಬದುಕುವ ಜನರಿಗೆ ಇತರೆ ಸಂಸ್ಕೃತಿಯ ಜನರನ್ನು ನೋಡುವಾಗ ಅಥವಾ ಅಭ್ಯಸಿಸುವಾಗ ತಮ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿಯೇ ನೋಡುವಂತೆ ಅವರು ಹೊಂದಿರುವ ಜ್ಞಾನ ಅವರನ್ನು ಪ್ರೇರೇಪಿಸುತ್ತದೆ ಮತ್ತು ಅವರಿಗೆ ತಿಳಿಯದೆ ನಿರ್ಧಿಷ್ಟ ಚೌಕಟ್ಟನ್ನು ಅಥವಾ ಜ್ಞಾನ ಮಿತಿಯನ್ನು ಅವರವರ ಸಂಸ್ಕೃತಿ ಅವರಿಗೆ ಹಾಕುತ್ತದೆ. ಈ ನಿಟ್ಟಿನಲ್ಲಿ ಪಾಶ್ಚಾತ್ಯರು ರಿಲಿಜಿಯಸ್ ಸಂಸ್ಕೃತಿಯಿಂದ ಬಂದವರಾದ್ದರಿಂದ ಭಾರತದಲ್ಲಿ ಮೊದಲು ರಿಲಿಜನ್ನನ್ನೆ ಹುಡುಕುವ ಪ್ರಯತ್ನ ಮಾಡಿದರು. ಅದರ ಪರಿಣಾಮವೇ ಹಿಂದೂಯಿಸಂ ಒಂದು ರಿಲಿಜನ್ ಆಗಿ ಗೋಚರವಾಗಿದ್ದು.

ಇನ್ನೂ ಹಿಂದೂಯಿಸಂ ಏಕೆ ರಿಲಿಜನ್ ಆಗಿದ್ದಿರಲು/ಆಗಲು ಸಾಧ್ಯವಿಲ್ಲವೆಂಬುದನ್ನು ರಿಲಿಜನ್ನಿನ ಮೇಲೆ ಮಹತ್ವದ ಸಿದ್ದಾಂತವನ್ನು ಕಟ್ಟುತ್ತಿರುವ ಪ್ರೊ.ಬಾಲಗಂಗಾಧರರವರ ವಾದ ಸರಣಿಯನ್ನು ಗಮನಿಸಿದರೆ ತಿಳಿಯುತ್ತದೆ. ಅವರ ಪ್ರಕಾರ ತರ್ಕಬದ್ದವಾಗಿ ನೋಡಿದರೆ ಕ್ರಿಶ್ಚಿಯಾನಿಟಿ, ಇಸ್ಲಾಂ ಇವುಗಳು ರಿಲಿಜನ್ ಆದರೆ ಹಿಂದೂಯಿಸಂ ರಿಲಿಜನ್ ಆಗಿರಲು ಸಾಧ್ಯವಿಲ್ಲ, ಅಂತೆಯೇ ಹಿಂದೂಯಿಸಂ ರಿಲಿಜನ್ ಆದರೆ ಕ್ರಿಶ್ಚಿಯಾನಿಟಿ, ಇಸ್ಲಾಂ, ಜೂಡಾಯಿಸಂಗಳು ರಿಲಿಜನ್ ಆಗಲು ಸಾಧ್ಯವಿಲ್ಲ, ಕಾರಣ ರಿಲಿಜನ್ ಅಸ್ಥಿತ್ವಕ್ಕೆ ಅಗತ್ಯವಾದ ಅಂಶಗಳಾದ ಏಕದೇವ ಕಲ್ಪನೆ, ಪ್ರವಾದಿ, ದೇವೋಪಾಸನೆಗೆ ಒಂದು ಸಂಸ್ಥೆ ಹಾಗು ಪವಿತ್ರ ಗ್ರಂಥ, ಇವುಗಳನ್ನು ಕ್ರಿಶ್ಚಿಯಾನಿಟಿ, ಇಸ್ಲಾಂ ಗಳಲ್ಲಿ ಗುರುತಿಸಬಹುದು ಆದರೆ ಹಿಂದೂಯಿಸಂನಲ್ಲಿ ಸಾಧ್ಯವಿಲ್ಲ. ಹಾಗೆಯೇ ಹಿಂದೂಯಿಸಂನಲ್ಲಿರುವ ಅಂಶಗಳು ರಿಲಿಜನ್ನಿನ ಅಸ್ಥಿತ್ವಕ್ಕೆ ಅಗತ್ಯ ಅಂಶಗಳೆಂದಾದರೆ ಕ್ರಿಶ್ಚಿಯಾನಿಟಿ, ಇಸ್ಲಾಂಗಳು ರಿಲಿಜನ್‍ಗಳಾಗಲು ಸಾಧ್ಯವಿಲ್ಲ.

ಆದರೆ ಭಗವದ್ಗೀತೆ, ಮಹಾಕಾವ್ಯಗಳು, ವೇದಗಳು, ಆಗಮಗಳು ಪವಿತ್ರ ಗ್ರಂಥಗಳೆಂದು ಕೆಲವೊಬ್ಬರ ಪ್ರಭಾವದಿಂದ ನಿಮಗನಿಸಿರಬಹುದು, ಸತ್ಯಾಂಶವೆಂದರೆ ಇವೆಲ್ಲಾ ಪವಿತ್ರಗ್ರಂಥಗಳಿರಬಹುದೆಂದು ತೋರಿಸಿಕೊಟ್ಟವರೇ ಪಾಶ್ಚಾತ್ಯರಾಗಿದ್ದಾರೆ, ಹಾಗಾದರೆ ಪಾಶ್ಚಾತ್ಯರಿಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆ ಉದ್ಬವಿಸದೇ ಇರಲಾರದು, ಅವರಿಗೇನು ದೇವರೇ ಬಂದು ಹೇಳಿದನೇ? ಅಥವಾ ಭೂಮಿ ಅಗೆದಾಗ ದೊರಕಿತೇ? ಅಥವಾ ಅವರೇ ತಮ್ಮ ಬುದ್ದಿಶಕ್ತಿಯಿಂದ ತಿಳಿದುಕೊಂಡರೇ? ಉತ್ತರ ಇವ್ಯಾವುದೂ ಅಲ್ಲ….. ಭಾರತದ ನಿವಾಸಿಗಳೇ ಅವರಿಗೆ ಮಾಹಿತಿಯನ್ನು ನೀಡಿದ್ದರು. ಹಾಗಾದರೆ ಭಾರತೀಯರೇ ನೀಡಿದ್ದರೆ ಅದು ಅವರ ಧರ್ಮಗ್ರಂಥವಾಗಿದ್ದಿರಲೇಬೇಕು ಎಂಬ ಸಹಮತವೂ ನಿಮ್ಮಲ್ಲಿ ಮೂಡಬಹುದು, ಈ ಸನ್ನಿವೇಶವನ್ನು ಇನ್ನೊಂದು ಉದಾಹರಣೆಯ ಮೂಲಕ ಅರ್ಥೈಸಲು ಪ್ರಯತ್ನಿಸುತ್ತೇನೆ. ನಿಮ್ಮ ಮನೆಗೆ ಕ್ರಿಶ್ಚಿಯನ್ ವಿದೇಶಿಯೊಬ್ಬ  ಬರುತ್ತಾನೆಂದಿಟ್ಟುಕೊಳ್ಳಿ, ಆತ ಮೂಲತಃ ಕ್ರಿಶ್ಚಿಯಾನಿಟಿಯವನಾದ್ದರಿಂದ ಆಚಾರ-ವಿಚಾರ, ನೀತಿ-ನಿಯಮಗಳನ್ನು ನಿರ್ದೇಶಿಸುವ ಪವಿತ್ರಗ್ರಂಥಗಳು ಎಲ್ಲರಿಗೂ ಇರುತ್ತವೆ ಎಂಬ ನಂಬಿಕೆಯವನಾಗಿರುತ್ತಾನೆ, ಆತ ನಿಮ್ಮಲ್ಲಿಗೆ ಬಂದು  ನಿಮ್ಮ ಮನೆಯಲ್ಲಿ ಎತ್ತರವಾಗಿ ಜೋಡಿಸಿಟ್ಟ ‘ಧರ್ಮಸಿಂಧು’ ಅಥವಾ ‘ಗುರುಚರಿತ್ರೆ’ ಪುಸ್ತಕಗಳನ್ನು ನೋಡಿ, ಇವು ಯಾವ ಪುಸ್ತಕಗಳು ಮತ್ತು ಇದರಲ್ಲೇನಿದೆ ಎಂದು ನಿಮಗೆ ಕೇಳಿದರೆ ಸಾಮಾನ್ಯವಾಗಿ ನೀವು ಅದರಲ್ಲಿ ಒಳ್ಳೋಳ್ಳೆಯ ಕಥೆಗಳಿವೆ ಅದರಲ್ಲೂ ಹೆಚ್ಚಾಗಿ ನೀತಿಭೋದನೆಯ ಕಥೆಗಳಿವೆ ಮತ್ತು ಪೂಜೆಗಳನ್ನು ಮಾಡುವ ಸಂದರ್ಭಗಳಲ್ಲಿ ಯಾವ ಯಾವ ನಿಯಮಗಳನ್ನು ಪಾಲಿಸಬೇಕು ಎಂದು ಬರೆಯಲಾಗಿದೆ, ಎಂಬಿತ್ಯಾದಿಯಾದಿಯಾಗಿ ನೀವು ಉತ್ತರಿಸಬಹುದು, ಆದರೆ ನೀವು ಸ್ವಲ್ಪ ಇಂಗ್ಲೀಷ್ ಮಾತನಾಡುವ ಭರಾಟೆಯಲ್ಲಿ Morality, ethics, the way of worshiping or the way of offering puja,   ಇವೆಲ್ಲಾ ಇದೆ ಎಂದು ಹೇಳಿದೊಡನೆ, ತಕ್ಷಣದಲ್ಲಿ ಆತನಿಗೆ ಇಷ್ಟೆಲ್ಲಾ ಇವೆಯೆಂದರೆ ಇದೊಂದು ಜನರ ಕೆಟ್ಟಚಟುವಟಿಕೆಗಳನ್ನು ನಿಯಂತ್ರಿಸುವ ಅಮೂಲ್ಯವಾದ ಪುಸ್ತಕವಿದ್ದಿರಬಹುದು ಅಂದರೆ ಇವರನ್ನು ನಿರ್ದೇಶಿಸುವ ಪವಿತ್ರಗ್ರಂಥವೇ ಇರಬಹುದು ಆದ್ದರಿಂದ ಇದು ಪವಿತ್ರಗ್ರಂಥದ ಸರಣಿಮಾಲೆ ಎಂದೆನಿಸದೇ ಇರಲಾರದು. ನೀವು ನೀಡಿದ ಮಾಹಿತಿ ಅವನ ಸತ್ಯಕ್ಕೆ ದೂರವಾಗಿದ್ದರೂ ಅವನ ಗ್ರಹಿಕೆಗೆ ಹತ್ತಿರವಾಗಿರುತ್ತದೆ ಆದಕಾರಣ ಅವುಗಳು ಪವಿತ್ರಗ್ರಂಥಗಳು ಎಂಬ ನಿರ್ಧಾರಕ್ಕೆ ಆತ ಬರಬಹುದು, ಇಂತಹ ಸನ್ನಿವೇಶವೇ ಪಾಶ್ಚಾತ್ಯರಿಗೆ ಬ್ರಾಹ್ಮಣರು ನೀಡಿದ ಮಾಹಿತಿಯಿಂದ ಆಗಿರುವುದು. (Kevin Hobson- The Indian Caste System and the British) ಇದೇ ರೀತಿಯ ತಪ್ಪು ಗ್ರಹಿಕೆಯಿಂದಾಗಿ ಅನೇಕ ಪುಸ್ತಕಗಳು ಹಿಂದೂಯಿಸಂನ ಪವಿತ್ರ ಧರ್ಮಗ್ರಂಥಗಳಾದವು.

ಆ) ಭಾರತಕ್ಕೆ ಆಗಮಿಸಿದ ಕ್ರಿಶ್ಚಿಯನ್ ಮಿಷನರಿಗಳ ಮೂಲ ಉದ್ದೇಶ ಕ್ರೈಸ್ತ ಮತವನ್ನು ಹರಡುವುದೇ ಆಗಿತ್ತು, ಹಿಂದೂಯಿಸಂ ರಿಲಿಜನ್ ಆಗಲಿಕ್ಕೂ ಮಿಷನರಿಗಳು ಮತಪ್ರಚಾರ ಮಾಡುವುದಕ್ಕೂ ಏನು ಸಂಬಂಧ ಎಂದೆನಿಸಬಹುದು, ಇವೆರಡಕ್ಕೂ ಒಂದು ರೀತಿಯ ನೇರವಾದ ಸಂಬಂಧವಿದೆ. ಭಾರತಕ್ಕೆ ಬಂದ ಕ್ರಿಶ್ಚಿಯನ್ ಮಿಷನರಿಗಳಿಗೆ ತಮ್ಮ ರಿಲಿಜಿಯನ್ನನ್ನು  ಪ್ರಚಾರ ಮಾಡಿ ಭಾರತದ ನಿವಾಸಿಗಳನ್ನು ಮತಾಂತರಗೊಳಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ, ಆದ್ದರಿಂದ ಅವರು ಇಲ್ಲೊಂದು ತಪ್ಪಾದ ರಿಲಿಜಿನ್ ಇದೆ ಎಂದು ತೋರಿಸುವುದು ಅಗತ್ಯವಾಗಿತ್ತು ಆದ ಕಾರಣ ಭಾರತೀಯರಿಗೆ ಒಂದು ರಿಲಿಜಿಯನ್ ಇದೆ, ಅದು ತಪ್ಪಾದ ರಿಲಿಜಿಯನ್ ಆಗಿದ್ದು, ದೇವರ ಕೃಪೆ ಮತ್ತು ಮೋಕ್ಷ ಪಡೆಯಲು ಅದರಿಂದ ಸಾಧ್ಯವಿಲ್ಲ ಆದ್ದರಿಂದ ಎಲ್ಲರನ್ನೂ ಸರಿಯಾದ ರಿಲಿಜಿಯನ್ ಕಡೆಗೆ  ಒಯ್ಯಬೇಕು, ಹಾಗೆ ಕ್ರಿಶ್ಚಿಯನ್ನೇತರರನ್ನು ಕ್ರಿಶ್ಚಿಯಾನಿಟಿಗೆ ಮತಾಂತರಗೊಳಿಸುವುದೊಂದೇ ಮಾರ್ಗ ಎಂಬ ಪ್ರಣಾಳಿಕೆಯನ್ನು ಸಿದ್ದಪಡಿಸಿಕೊಂಡರು, ಭಾರತೀಯರು ತಪ್ಪಾದ ರಿಲಿಜಿನ್ ಎಂದು ನಿರೂಪಿಸಲು ಭಾರತೀಯರು ಮರ, ಗಿಡ, ಭೂಮಿ ಮತ್ತು ದೇವರಿಗೆ ವಿರುದ್ದವಾದ ಶಕ್ತಿಗಳಾದ ಭೂತ, ದೆವ್ವಗಳಿಗೆ ಪೂಜಿಸುತ್ತಾರೆ ಎಂಬಿತ್ಯಾದಿ ವಿಚಾರಗಳನ್ನು ಪ್ರಚಾರ ಮಾಡುತ್ತಾ ಬಂದರು. ಆದ್ದರಿಂದ ಅವರಿಗೆ ಹಿಂದೂಯಿಸಂನ್ನು ರಿಲಿಜನ್ ಎಂದು ಗುರುತಿಸುವ ಅಗತ್ಯತೆ ಹೆಚ್ಚಾಗಿತ್ತು.

ಹೀಗೆ ಹಿಂದೂಯಿಸಂ ಎಂಬ ರಿಲಿಜನ್ ಪಾಶ್ಚಾತ್ಯರ ಗ್ರಂಥಾಲಯಗಳಲ್ಲಿ ಅಸ್ಥಿತ್ವಕ್ಕೆ ಬಂದ ನಂತರ ಅದರ ಬಗ್ಗೆ  ಸ್ವಲ್ಪವೂ ಆಲೋಚಿಸದೆ ಭಾರತದ ಬಹುತೇಕ ಜನಪ್ರಿಯ ಅಗ್ರಗಣ್ಯರು ತಮ್ಮ ರಿಲಿಜನ್ ಎಂಬಂತೆ ಒಪ್ಪಿಕೊಂಡರು, ಮತ್ತು ಎಲ್ಲಿ ಯಾವುದೇ ರೀತಿಯ ಸಾಮಾಜಿಕ ಸಮಸ್ಯೆಗಳುಂಟಾದರೂ ಅವುಗಳನ್ನು ಈ ಹಿಂದೂಯಿಸಂನ ಚೌಕಟ್ಟಿನ ಮೂಲಕ ನೋಡಲು ಪ್ರಾರಂಭಿಸಿದರು, ಇದರಿಂದ ಸಮಸ್ಯೆಗಳು ಇನ್ನೂ ಹೆಚ್ಚು ಉಲ್ಬಣವಾಗುತ್ತಿದ್ದವೇ ಹೊರತು ಪರಿಹಾರವಾಗುತ್ತಿರಲಿಲ್ಲ, ಕಾರಣ ಅವುಗಳ ಮೂಲ ಹಿಂದೂಯಿಸಂ ಎಂಬ ಬಲವಾದ ನಂಬುಗೆಯನ್ನು ಹೊಂದಿದ್ದರು. ನಾವುಗಳು ಈಗ ಹೊಸದೊಂದು ಚೌಕಟ್ಟಿನಡಿಯಲ್ಲಿ ಈ ರೀತಿಯ ವಾದಗಳನ್ನು ಗ್ರಹಿಸುವುದು ಸೂಕ್ತವಲ್ಲವೆ?

Advertisements
 1. Vijayendra
  ಅಕ್ಟೋಬರ್ 10, 2010 ರಲ್ಲಿ 6:39 ಫೂರ್ವಾಹ್ನ

  I think the word “Hindu” was used to descrbe the non-Muslim people living in different parts of India and was subsequently popularised by the Christian missionaries and colonial historians to describe all those, who resisted or were not given in the ideas of converting themselves to Christianity. The word Hindu, as such signified reference to a “way of life” , rather than a religion, like Christianity or Islam is. There are and still could be any number of cultural traditions, philosophical schools, rituals, ceremonies, festivals, gods and godesses, castes, communities and languages and even create alternate religions like – Buddhism, Jainism, Sikhism, Buddhism, etc. refered to as being what Hindu is about. People have their own pickings, but this i.e the choice or belonging to any one such descriptions does not, either wholly contain one’s identity nor is it exhausted by it.

  Like

  • ಅಕ್ಟೋಬರ್ 12, 2010 ರಲ್ಲಿ 3:14 ಅಪರಾಹ್ನ

   Yes you are right, thanks for your patience

   Like

 2. palv
  ಅಕ್ಟೋಬರ್ 20, 2010 ರಲ್ಲಿ 3:31 ಫೂರ್ವಾಹ್ನ

  Christians claim that they have their way of life; so do hindus/muslims/jews. So, the talk of “way of life” does not go anywhere; in fact, it obscures the conceptual and empirical problems. This kind of obscuring is similar to: Hinduism, Buddhism, Jainism are DIFFERENT kinds of religion. That’s how one befuddles further.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: