ಮುಖ ಪುಟ > Cultural Studies, Culture, Dharma, Religion, review > ವಿಕೃತ ಕಾಲಾಭಾಸಗಳ ಸಂಗ್ರಹ

ವಿಕೃತ ಕಾಲಾಭಾಸಗಳ ಸಂಗ್ರಹ

ವಿಕೃತ ಕಾಲಾಭಾಸಗಳ ಸಂಗ್ರಹ

ವಿವೇಕ ಧಾರೇಶ್ವರ

ಬೆಂಗಳೂರು

A collection of crude anachronisms

Vivek Dhareshwar

Bangalore

ಇದು Penguin Books India ಹೊರತಂದಿರುವ, ಎಚ್.ಎಸ್. ಶಿವಪ್ರಕಾಶರ I Keep Vigil of Rudra: The Vachanas (2010, ಪುಟಗಳು: 1xxix+172, ಬೆಲೆ ರೂ. 299) ಪುಸ್ತಕದ ವಿಮರ್ಶೆ. ಆಯ್ದ ವಚನಗಳ ಆಂಗ್ಲ ಅನುವಾದದ ಜೊತೆಗೆ, ಈ ಕೃತಿಯಲ್ಲಿ ಶಿವಪ್ರಕಾಶರ ದೀರ್ಘವಾದ ಪ್ರಸ್ತಾವನೆಯೂ ಇದೆ.

ಈ ಪುಸ್ತಕದಲ್ಲಿ ಸೇರಿಸಿರದ ಅಲ್ಲಮನ ವಚನವೊಂದಿದೆ: ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ಗತದ ಯಾವುದೇ ಒಂದು ವಿಚಾರ (ಒಂದು ಘಟನೆ, ಒಂದು ಚಳವಳಿ, ಕಲಾಕೃತಿ, ಸಾಹಿತ್ಯ, ಚಿಂತನೆಗಳು ಹೀಗೆ ಗತದ ಯಾವುದೇ ವಿಚಾರ) ಕುರಿತ ಒಂದು ಕೃತಿಯ ಮುಂದೆ ಒಂದು ಸವಾಲಿರುತ್ತದೆ: ಗತವನ್ನು ನಮ್ಮ ಮುಂದೆ ತೆರೆದಿಡುವಾಗ ಅದು ಕಾಲಾಭಾಸದ (anachronismನ) ತಪ್ಪೆಣಿಕೆಗೆ ಸಿಲುಕಿಕೊಳ್ಳಬಾರದು. ಭಾರತದಲ್ಲಿ ಮಾತ್ರ, ಸಾಹಿತ್ಯ ಮತ್ತು ಐತಿಹಾಸ ಕುರಿತ ವಿದ್ವತ್ತು ಇಂದು ನಿಂತಿರುವುದೇ ಅತ್ಯಂತ ಕ್ಷುದ್ರವಾದ ಕಾಲಾಭಾಸಗಳ ಮೇಲೆ: ಬುದ್ಧ ಒಬ್ಬ ಸಮಾಜ ಸುಧಾರಕ, ಅಶೋಕ ಒಬ್ಬ ಸೆಕ್ಯಲರಿಸ್ಟ್, ಅಕ್ಕಮಹಾದೇವಿ ಒಬ್ಬ ಫೆಮಿನಿಸ್ಟ್ ಇತ್ಯಾದಿ. ವಚನಕಾರರು ಎಂದು ನಾವು ಇಂದು ಗುರುತಿಸುವ 12ನೆಯ ಶತಮಾನದ ಕವಿ ಮತ್ತು ಚಿಂತನಕಾರರ ಕುರಿತು ಚಾಲ್ತಿಯಲ್ಲಿರುವ ಅತ್ಯಂತ ಕ್ಷುದ್ರವಾದ ಕಾಲಾಭಾಸಗಳ ಒಂದು ಸಂಗ್ರಹ ನಿಮಗೆ ನೋಡಬೇಕು ಎನಿಸಿದರೆ ಈ ಕೃತಿಯನ್ನು ನೋಡಬಹುದು. ವಚನಗಳ ಆಂಗ್ಲ ಅನುವಾದದ ಜೊತೆಗೆ ಈ ಕೃತಿಯಲ್ಲಿ ಶಿವಪ್ರಕಾಶರ ದೀರ್ಘವಾದ ಪ್ರಸ್ತಾವನೆಯೊಂದಿದೆ. ಇಲ್ಲಿ ಸಂಗ್ರಹಗೊಂಡಿರುವ ಶುಷ್ಕ ಸ್ಟೀರಿಯೋಟೈಪ್ಗಳಿಗೆ ಸರಿ ಹೊಂದಬೇಕು ಎನ್ನುವ ಹಟತೊಟ್ಟು ಮಾಡಿರುವಂತಿರುವ ಇಲ್ಲಿನ ಅನುವಾದದಲ್ಲಿ ಜೀವವೂ ಇಲ್ಲ, ಭಾವವೂ ಇಲ್ಲ. ಈ ರೀತಿಯ ಸ್ಟೀರಿಯೋಟೈಪ್ಗಳ ಸಂಗ್ರಹಗಳನ್ನು ಹೊರತರುವುದೇ ಈ ಕೃತಿಯನ್ನು ಹೊರತಂದಿರುವ Penguin Classics seriesನ ಆಶಯವೂ ಕೂಡ ಇರಬಹುದೇನೋ ಎನ್ನುವ ಅನುಮಾನ ಬಂದರೆ ಆಶ್ಚರ್ಯವಿಲ್ಲ.

ಎ.ಕೆ. ರಾಮಾನುಜನ್ನರ Speaking of Siva (1973) ಕೃತಿಯು ವಚನಗಳನ್ನು ನವ್ಯಕಾವ್ಯಗಳ ಮಟ್ಟಕ್ಕೆ ತಂದು ನಿಲ್ಲಿಸಿ, ವಚನಗಳಲ್ಲಿನ ತಾತ್ವಿಕ ವಿಚಾರಗಳನ್ನು ಬದಿಗೊತ್ತಿ, 20ನೇ ಶತಮಾನದ ಆದಿಯಲ್ಲಿ ಮೂರ್ತಗೊಳ್ಳುತ್ತಾ ಬಂದ ‘ವಚನಗಳು ಜಾತಿವಿರೋಧಿ ಸಾಹಿತ್ಯ’ ಎಂಬ ವಿಚಾರವನ್ನಷ್ಟೆ ಎತ್ತಿಹಿಡಿಯುವ ಕೆಲಸವನ್ನು ಮಾಡಿತ್ತು. ಆದರೆ ಇಂದು, ನಮ್ಮ ಗತ ಮತ್ತು ಪ್ರಸ್ತುತವನ್ನು ಅರ್ಥಮಾಡಿಕೊಳ್ಳಲು ಎಡ್ವರ್ಡ ಸಯಿದ್ ಮತ್ತು ಎಸ್.ಎನ್. ಬಾಲಗಂಗಾಧರರ ಕೃತಿಗಳು ಹಾಕಿಕೊಟ್ಟಿರುವ ಹೊಸ ತಾತ್ವಿಕ ಚೌಕಟ್ಟು ಲಭ್ಯವಿರುವಾಗಲೂ, ಈ ರೀತಿಯಲ್ಲಿ ಕಾಲಾಭಾಸಗಳ ಸೃಷ್ಟಿ, ಕಥೆ ಮತ್ತು ಮಿಥ್ಗಳನ್ನು ಐತಿಹಾಸಿಕ ಸತ್ಯಾಂಶಗಳಂತೆ ಮಂಡಿಸುವುದು, ಭಾರತೀಯ ಬೌದ್ಧಿಕ ಪರಂಪರೆಗಳ ಪೌರಸ್ತ್ಯೀಕರಣವು ನಮ್ಮ ಗತವನ್ನು ಯಾವುದೇ ಸಂಶೋಧನೆಗೆ ತೆರೆದುಕೊಳ್ಳದಂತೆ ಮುಚ್ಚಿಬಿಡುತ್ತದೆ. ತಮ್ಮ ನಿಲುವು ಮತ್ತು ವಿಚಾರಗಳಿಗೆ ಪ್ರತಿರೋಧತೋರಿಸಿದ ಬ್ರಾಹ್ಮಣ ಮತ್ತು ನಾವಿಂದು ‘ಕೆಳ ಜಾತಿ’ ಎಂದು ಗುರುತಿಸುವ ಹಲವು ಜಾತಿಗಳನ್ನು ವಚನಗಳು ನಿಷ್ಠುರವಾಗಿ ಬಯ್ಯುತ್ತವೆ. ನಾನು ವಚನಗಳನ್ನು ಓದಿ ಕಂಡುಕೊಂಡಂತೆ, ಈ ರೀತಿಯ ಬೈಗುಳಗಳನ್ನು ಬಿಟ್ಟರೆ ವಚನಗಳು ಜಾತಿಯ ವಿಚಾರವಾಗಿ ಬೇರೇನನ್ನೂ ಹೇಳುವುದಿಲ್ಲ. ವಚನಗಳನ್ನು ಜಾತಿ-ವಿರೋಧಿ ಸಾಹಿತ್ಯವೆಂದು ಹೊಗಳುವ ವಿದ್ವಾಂಸರು, ಉದಾಹರಣೆಗೆ ಪ್ರಸ್ತುತ ಕೃತಿಯ ಸಂಪಾದಕ, ಜಾತಿಗಳನ್ನು ಬಯ್ಯುವುದೇ ಜಾತಿ-ವಿರೋಧಿ ವಿಚಾರವೆಂದು ತಿಳಿದಿರುವಂತೆ ಕಾಣುತ್ತದೆ. ಅದರಲ್ಲೂ, ‘ಕೆಳ ಜಾತಿ’ಯವರನ್ನು ಬಯ್ಯುವ ವಚನಗಳ ಸಂಖ್ಯೆಯೆ ಅಧಿಕವಾಗಿವೆ ಎಂಬ ವಿಚಾರವನ್ನು ಸುಲಭವಾಗಿ ಕಡೆಗಣಿಸಿ ಈ ನಿರ್ಣಯಕ್ಕೆ ಬರುವುದು ಇಲ್ಲಿ ಎದ್ದು ಕಾಣುವ ವಿಚಾರ. ಈ ರೀತಿಯ ಜಾತಿ-ವಿರೋಧವೆ ವಚನಗಳ ಮುಖ್ಯ ಕೊಡುಗೆ ಎನ್ನುವುದು ನಿಜವಾದರೆ, ಅವುಗಳು ನಮ್ಮನ್ನು ಆಕಷರ್ಿಸಬೇಕಾಗಿಲ್ಲ. ವಚನಗಳ ಪೈಕಿ ಕೆಲವು ಉತ್ತಮವಾದ ವಚನಗಳಿವೆ, ಜಾತಿಗಳನ್ನು ಬಯ್ಯುವುದರ ಹೊರತಾಗಿ ಅವು ಮಿಸ್ಟಿಕಲ್ ಎನ್ನುವ ಕಾರಣಕ್ಕಾಗಿ ಅವು ಮುಖ್ಯವೆನ್ನುವ ವಿಚಾರವೂ ಬರುತ್ತದೆ ಈ ಕೃತಿಯಲ್ಲಿ. ವಚನಗಳು ಮಿಸ್ಟಿಕಲ್ ಎನ್ನುವುದು ಒಂದು ಭಾವೋದ್ವೇಗಗೊಳ್ಳುವ ವಿಚಾರ ಯಾಕೆ ಎಂಬುದು ನನಗಿನ್ನೂ ಅರ್ಥವಾಗದ ವಿಚಾರ. ಒಟ್ಟಿನಲ್ಲಿ ಜಾತಿಗಳನ್ನು ಬಯ್ಯುವುದನ್ನು (ಜಾತಿ-ವಿರೋಧಿ ವಿಚಾರ) ಮತ್ತು ಅರ್ಥವಾಗದ ಭಾಷೆಯಲ್ಲಿ ಬರೆಯುವುದನ್ನೆ (ಮಿಸ್ಟಿಕಲ್ ವಿಚಾರ) ನಾವು ಇಂದು 12ನೇ ಶತಮಾನದ ಬೌದ್ಧಿಕ ಸಂಪತ್ತು ಎಂದು ಕೊಂಡಾಡಬೇಕೆ? ತನಗೆ ಈ ಗತಿ ಬರುತ್ತದೆ ಎಂಬ ಕಲ್ಪನೆಯಾದರೂ ಇತ್ತೆ ಅಲ್ಲಮನಿಗೆ?

ಈ ಸಂಕಲನದಲ್ಲಿ ಸೇರಿಸಿರದ ಅಲ್ಲಮನ ಮತ್ತೊಂದು ವಚನದೊಂದಿಗೆ ಈ ವಿಮರ್ಶೆಯನ್ನು ಮುಗಿಸುತ್ತೇನೆ:

ನಿತ್ಯ ನಿರಂಜನ ತಾನೆಂದರಿಯದೆ, ‘ತತ್ತ್ವಮಸಿ’ ಎಂದು ಹೊರಗನೆ ಬಳಸಿ ಸತ್ತಿತ್ತಲ್ಲಾ ಜಗವೆಲ್ಲ ನಾಯ ಸಾವ! ತಮ್ಮ ತಾವರಿಯದೆ, ಸತ್ತವರ ಹೆಸರ ಪತ್ರವನೋದಿದಡೆ ಎತ್ತಣ ಮುಕ್ತಿ ಗುಹೇಶ್ವರಾ?

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: