ಮುಖ ಪುಟ > Cultural Studies, Culture, Dharma, Hindu, Religion, Ritual > ಎಂಜಲೆಲೆಯ ಮೇಲೆ ಹೊರಳಾಟ: ಒಂದು ಭಿನ್ನ ನೋಟ

ಎಂಜಲೆಲೆಯ ಮೇಲೆ ಹೊರಳಾಟ: ಒಂದು ಭಿನ್ನ ನೋಟ

ಸಂತೋಷ್ ಕುಮಾರ ಮತ್ತು ಪ್ರವೀಣ್ ಟಿ.ಎಲ್

Madesnana : a different view

ಎಂಜಲೆಲೆಯ ಮೇಲಿನ ಉರುಳಾಟದ ಆಚರಣೆಯನ್ನು ಇತ್ತೀಚೆಗೆ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವುದನ್ನು ನಾವು ನೋಡಬಹುದು. ಅದನ್ನು ಕೇವಲ ಬಿತ್ತರಿಸುತ್ತಿರುವುದು ಮಾತ್ರವಲ್ಲದೆ ಅದು ಜನರ ಮೂಢತನ ಎಂಬತೆಯೂ ಹಾಗೂ ಯಾವುದೋ ಜಾತಿಯ ಕುತಂತ್ರ ಎಂಬಂತೆಯೂ ತೋರಿಸಲಾಗುತ್ತಿದೆ. ಕುಕ್ಕೆ ಸುಬ್ರಮಣ್ಯದಲ್ಲಿ ನಡೆದ ಆಚರಣೆಯನ್ನು ಬ್ರಾಹ್ಮಣರ ಕುತಂತ್ರವೆಂದು ಕರೆಯಲಾಗಿದೆ ಏಕೆಂದರೆ ಬ್ರಾಹ್ಮಣರ ಎಂಜಲೆಲೆಯ ಮೇಲೆ ಬೇರೆ ಸಮುದಾಯಗಳ ಭಕ್ತರು ಹೊರಳಾಡುತ್ತಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಕರಾವಳಿಯ ಕೆಲವಾರು ಪ್ರದೇಶಗಳಲ್ಲಿ ಸ್ವತಃ ಬ್ರಾಹ್ಮಣರೇ ಎಂಜಲು ಎಲೆಗಳ ಮೇಲೆ ಹೊರಳಾಡುತ್ತಿರುವುದರ ಕುರಿತೂ ಮಾದ್ಯಮವು ಸ್ಪಷ್ಟ ಪಡಿಸಿದೆ. ಒಟ್ಟಿನಲ್ಲಿ ಈ ಆಚರಣೆಯಲ್ಲಿ ಬ್ರಾಹ್ಮಣರು, ಬ್ರಾಹ್ಮಣೇತರು ಎಲ್ಲರು ಪಾಲ್ಗೊಳ್ಳುತ್ತಿರುವುದಂತೂ ಸ್ಪಷ್ಟ. ಇದರಿಂದ ನಮಗೆ ತಿಳಿದು ಬರುವ ಅಂಶವೆಂದರೆ ಈ ಆಚರಣೆಯು ಬ್ರಾಹ್ಮಣರ ಕುತಂತ್ರವಾಗಿರದೆ, ಜನರು ತಾವೇ ಒಪ್ಪಿಕೊಂಡು ಮಾಡುತ್ತಿರುವ ಕ್ರಿಯಾವಿಧಿಯಾಗಿದೆ. ಇದನ್ನು ಅರ್ಥಮಾಡಿಕೊಳ್ಳದೆ ಬೇಕಾಬಿಟ್ಟಿಯಾಗಿ ಯಾವುದೋ ಒಂದು ಸಮುದಾಯದ ಕುತಂತ್ರ ಎಂದು ಮಾತನಾಡಿದರೆ ಸಮಾಜದ ಸ್ವಾಸ್ಥ್ಯವನ್ನು ನಾವೇ ಹಾಳುಮಾಡಿದಂತೆ ಆಗುತ್ತದೆ. ಒಂದು ಸಮುದಾಯವನ್ನು ವಿನಾಕಾರಣ ದೂಷಣೆಗೆ ಒಳಗಾಗಿಸಿ ಅವರ ವಿರುದ್ಧ ಕೆಟ್ಟ ಭಾವನೆ ಬೆಳೆಯಲು ಪ್ರಚೋದನೆ ನೀಡಿದಂತಾಗುತ್ತದೆ.

ಕುಕ್ಕೆ ಸುಬ್ರಮಣ್ಯ : ಮಡೆಸ್ನಾನ (ಚಿತ್ರ ಕೃಪೆ: avadhi)

ಆದರೆ ಇಂಥ ಆಚರಣೆಯನ್ನು ಮೌಢ್ಯ ಹಾಗೂ ಪ್ರಜ್ಞಾವಂತರು ಮಾಡತಕ್ಕವಲ್ಲ ಹಾಗಾಗಿ ಈ ಆಚರಣೆಗಳನ್ನು ಬಲಾತ್ಕಾರವಾಗಿಯಾದರು ನಿಲ್ಲಿಸಬೇಕೆಂದು ಆಗ್ರಹಿಸುವವರು ಒಂದು ಕಡೆ ಇದ್ದಾರೆ. ಆದರೆ ಅದೇ ವೇಳೆಗೆ ನಾವು ನಮ್ಮ ಮನಸ್ಸಿನ ಶಾಂತಿಗಾಗಿ ಇದನ್ನು ಮಾಡಿಯೇ ತೀರುತ್ತೇವೆ, ನಮ್ಮ ಮೇಲೆ ಯಾರದೇ ಬಲಾತ್ಕಾರವೂ ಇಲ್ಲ ಎಂದು ಆಚರಣೆ ಮಾಡಲು ಪಟ್ಟು ಹಿಡಿದವರು ಮತ್ತೊಂದು ಕಡೆ. ಅವರಲ್ಲೂ ಬರೀ ಅನಕ್ಷರಸ್ಥ ಬಡ ಜನರು ಮಾತ್ರವೇ ಇಲ್ಲ, ಅವರಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ವಿದ್ಯಾವಂತರೂ, ಶ್ರೀಮಂತರೂ ಇದ್ದಾರೆ.  ಡಾಕ್ಟರುಗಳು, ವಿಜ್ಞಾನಿಗಳು, ನ್ಯಾಯಾಧೀಶರು, ಶಿಕ್ಷಕರು, ಈ ರೀತಿಯಲ್ಲಿ ಪ್ರಜ್ಞಾವಂತ ಸಮಾಜದ ಎಲ್ಲಾ ರೀತಿಯ ಪ್ರಜೆಗಳೂ ಇದ್ದಾರೆ. ಇದನ್ನು ಆಚರಿಸುವ ಬಹುಸಂಖ್ಯಾತ ಪ್ರಜ್ಞಾವಂತರಿಗೆ ತಮ್ಮನ್ನೆಲ್ಲ  ಪ್ರಜ್ಞಾವಂತರಲ್ಲವೆಂದು ಸಾರಾಸಗಟಾಗಿ ತಿರಸ್ಕರಿಸಿ ಟೀಕಿಸುವವರೇ  ಉದ್ಧಟರಂತೆ ತೋರಿದರೆ ಆಶ್ಚರ್ಯವಿಲ್ಲ. ಆದರೆ ಏಕೆ ಮಾಧ್ಯಮಗಳಲ್ಲಿನ ವಿದ್ಯಾವಂತ ಸಮಾಜವು ಈ ಬಹುಸಂಖ್ಯಾತರೇ ಮೂಢರೆಂಬುದಾಗಿ ತೀರ್ಮಾನಕ್ಕೆ ಬಂದಿದೆ? ಅವರನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಹಾದಿಗಳೇ ಇಲ್ಲವೆ? ಇವರೆಲ್ಲರ ಅನುಭವ ಪ್ರಪಂಚವನ್ನು ಅರ್ಥಹೀನವೆಂದು ಸಾರಾಸಗಟಾಗಿ ತಳ್ಳಿಹಾಕಿದಲ್ಲಿ ಸಮಸ್ಯೆ ಬಗೆಹರಿಯುತ್ತದೆಯೆ? ಏಕೆ ಕಳೆದ ನೂರಾರು ವರ್ಷಗಳಿಂದ ಇಂಥ ಆಚರಣೆಗಳನ್ನು ತೊಡೆಯಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿವೆ? ಇಲ್ಲಿ ತುಂಬಾ ಗಂಭೀರವಾಗಿ ಯೋಚಿಸಬೇಕಾದ ವಿಷಯವಿದೆ ಎಂಬುದು ನಮ್ಮ ಅಭಿಪ್ರಾಯ.  ಇಂಥ ಪ್ರಶ್ನೆಗಳನ್ನು ಎತ್ತುತ್ತಿರುವಾಗ ಒಂದು ಅಪಾರ್ಥ ಹೊರಡುವ ಸಂಭವವಿದೆ. ಅದೆಂದರೆ ಇಂತಹ ಆಚರಣೆಗಳನ್ನು ಸಮರ್ಥಿಸಿಕೊಳ್ಳುವ ಕಾರ್ಯವು ನಡೆಯುತ್ತಿದೆಯೆ ಎಂದು. ಆದರೆ ಇಲ್ಲಿ ನಮ್ಮ ಉದ್ದೇಶ ಎಂಜಲೆಲೆಯ ಆಚರಣೆಯು ಅತ್ಯದ್ಭುತವಾದುದು ಹಾಗೂ ಅದನ್ನು ಮಾಡಲೇಬೇಕೆಂಬುದು ಅಲ್ಲ ಎಂಬುದನ್ನು ಒತ್ತಿಹೇಳುತ್ತೇವೆ.  ಜೊತೆಗೆ ಈ ಆಚರಣೆಯನ್ನು ಸಮರ್ಥಿಸುವ ಕಾರ್ಯವನ್ನು ಮಾಡುವುದಿಲ್ಲ.

ಈ ಆಚರಣೆಯ ಕುರಿತು ಮಾದ್ಯಮಗಳಲ್ಲಿ ಅಷ್ಟು (ಅಪ)ಪ್ರಚಾರವಾಗುತ್ತಿದ್ದರೂ ಅದರಲ್ಲಿ ಪಾಲ್ಗೊಳ್ಳುವ ವಿದ್ಯಾವಂತ ಜನರೇಕೆ ಅದನ್ನು ಸಮರ್ಥಿಸಿಕೊಂಡು ಪ್ರತಿಕ್ರಿಯಿಸುತ್ತಿಲ್ಲ ಎಂಬುದೂ ಒಂದು ವಿಚಿತ್ರವೇ ಆಗಿದೆ.     ಅವರನ್ನು ಸಂದರ್ಶಿಸಿದವರಿಗೂ ಅವರು ತಿಳಿಸಿದ ಪ್ರಕಾರ ಈ ಆಚರಣೆಗಳು ಹಿಂದಿನಿಂದ ನಡೆದುಕೊಂಡು ಬಂದಿವೆ, ಅವನ್ನು ಮಾಡಿದರೆ ಶಾಂತಿ ಸಿಗುತ್ತದೆ, ಚರ್ಮರೋಗವು ವಾಸಿಯಾಗುತ್ತದೆ, ಇತ್ಯಾದಿ ಉತ್ತರಗಳು ಬಂದವು. ಈ ಉತ್ತರಗಳೂ ಕೂಡ ಈ ಆಚರಣೆಗಳ ಕುರಿತು ಏನನ್ನೂ ಹೇಳುವುದಿಲ್ಲ. ಅವನ್ನು ಮಾಡಲಿಕ್ಕೆ ಜನರು ಈ ಕ್ಷೇತ್ರಗಳಿಗೆ ಬಂದಿದ್ದಾರೆಯೇ ಹೊರತೂ ಆ ಆಚರಣೆಗಳ ಕುರಿತು ಅವರಿಗೆ ಹೇಳಲಿಕ್ಕೆ ಏನೂ ಇಲ್ಲ. ಸಮರ್ಥನೆ ಮಾಡಲೂ ಏನೂ ವಿವರಣೆಗಳಿಲ್ಲ, ಬಿಡಲಿಕ್ಕೂ ಏನೂ ಕಾರಣಗಳಿಲ್ಲ. ಹಾಗೂ ಅವರು ಆಚರಣೆಗಳನ್ನು ಮಾಡಲಿಕ್ಕೆ ಈ ಮೇಲಿನವು ಕಾರಣಗಳೇ ಅಲ್ಲದಿರುವ ಸಾಧ್ಯತೆಯೇ ಹೆಚ್ಚು. ಈ ಆಚರಣೆಯ ಕುರಿತು ಅನಿವಾರ್ಯವಾಗಿ ಎದುರಾದ ಪ್ರಶ್ನೆಗಳಿಗೆ ಅವರು ನೀಡಿದ ತಾತ್ಕಾಲಿಕ ಉತ್ತರವಾಗಿವೆಯಷ್ಟೆ ಎನಿಸುತ್ತದೆ.

ಇಂಥ ಆಚರಣೆಗಳ ಸಂದರ್ಭದಲ್ಲಿ ಜನರು ಕ್ರಿಯೆಗಳನ್ನು ಏಕೆ ಮಾಡುತ್ತಾರೆ ಹಾಗೂ ಆ ಕ್ರಿಯೆಗಳ ಹಿಂದಿರುವ ಉದ್ದೇಶಗಳೇನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅರಿಯಬಹುದು ಎಂಬ ಗ್ರಹಿಕೆ ವಿದ್ವಾಂಸರಲ್ಲಿದೆ. ಆದರೆ ಇಲ್ಲಿ ಅಂಥ ಅಧ್ಯಯನವೇ ಸಾಧ್ಯವಿಲ್ಲ. ಒಂದೊಮ್ಮೆ ಜನರು ಈ ಆಚರಣೆಗಳ ಮೂಲಕವೇ ತಮ್ಮ ಚರ್ಮದ ಖಾಯಿಲೆಗಳು ವಾಸಿಯಾಗುತ್ತವೆ ಎಂದು ನಿಜವಾಗಿಯೂ ನಂಬಿದ್ದರೆ ಅವರು ಆಸ್ಪತ್ರೆಗಳಿಗೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ. ಆದರೆ ಜನರು ಆಸ್ಪತ್ರೆಗಳಿಗೂ ತೆರಳುತ್ತಾರೆ ಅಂತೆಯೇ ದೇವಾಲಯಗಳಿಗೂ ಹೋಗುತ್ತಾರೆ. ಅವರಿಗೆ ಆಸ್ಪತ್ರೆಗಳಿಗೆ ಯಾವಾಗ ಹೋಗಬೇಕೆಂಬುದು ಚೆನ್ನಾಗಿಯೇ ತಿಳಿದಿದೆ ಹಾಗೂ ಅವರಲ್ಲಿ ಸ್ವತಃ ಡಾಕ್ಟರುಗಳೇ ದೇವಾಲಯಕ್ಕೆ ಬಂದು ಆಚರಣೆಯನ್ನು ಮಾಡುತ್ತಾರೆ, ಆಸ್ಪತ್ರೆಗೆ ಹೋಗಿ ವೈದ್ಯಕೀಯ ವೃತ್ತಿಯನ್ನೂ ಮಾಡುತ್ತಾರೆ.    ಇದರ ಸ್ಪಷ್ಟ ಸೂಚನೆಯೆಂದರೆ  ಈ ಆಚರಣೆಗಳಿಗೂ ವಿಚಾರವಂತಿಕೆಗೂ ಇವರು ಸಂಬಂಧ ಕಲ್ಪಿಸುತ್ತಿಲ್ಲ ಅಷ್ಟೆ. ಹಾಗಾಗಿ ಅವರನ್ನು ಮೂಢರೆಂದು ಕರೆಯುವುದು ಯತಾರ್ಥವಾಗಲಾರದು. ಈ ಆಚರಣೆಯ ಕುರಿತು ಏನೇ ಟೀಕೆಯನ್ನು ಮಾಡಿದರೂ, ಅವರನ್ನು ಮೂಢರೆಂದು ಪರಿಗಣಿಸುವುದು  ಅತಾರ್ಕಿಕವಾಗುತ್ತದೆ ಹಾಗೂ ಆ ಕಾರಣಕ್ಕಾಗಿ ಅಮಾನವೀಯವೂ ಆಗುತ್ತದೆ.  ಈ ಅವರ ವಿಚಾರವಂತಿಕೆಯ ಕುರಿತು ಗೌರವವನ್ನಿಟ್ಟುಕೊಂಡೇ ತಮ್ಮ ವಿಚಾರಗಳನ್ನು ಇಡಬೇಕಾಗುತ್ತದೆ.

ನಾವು ಈ ಆಚರಣೆಗಷ್ಟೆ ನಮ್ಮ ವಾದವನ್ನು ಸೀಮಿತಗೊಳಿಸದೆ ಅದನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡುತ್ತೇವೆ. ಇಸ್ರೋ ದಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳೂ ಸಹ ದೇವರಿಗೆ ಪೂಜೆ ಮಾಡಿಸಿ, ರಾಹುಕಾಲ ಗಳನ್ನೆಲ್ಲಾ ಲೆಕ್ಕಹಾಕಿ ತಮ್ಮ ಕೆಲಸದಲ್ಲಿ ತೊಡಗುತ್ತಾರೆ ಎಂಬುದು ಈ ಮೇಲಿನ ವಿಚಾರವಂತರ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿರುವ ವಿಷಯವಾಗಿದೆ.    ಆದರೆ ಈ ವಿಜ್ಞಾನಿಗಳಿಗೆ ಏನೂ ತಿಳಿದೇ ಇಲ್ಲವೆ? ಅವರು ಅಂತಹ ಆಚರಣೆಗಳಲ್ಲಿ ತೊಡಗದಿದ್ದರೂ ಅವರ ವಿಜ್ಞಾನ-ತಂತ್ರಜ್ಞಾನಗಳ ಸಂದರ್ಭದಲ್ಲಿ ಅವರು ವಿಚಾರವಂತರಾಗೇ ಕೆಲಸಮಾಡುತ್ತಾರೆ. ಅವರು ಈ ಮೌಢ್ಯಗಳನ್ನು ಆಚರಿಸದವನಿಗಿಂತ ದಡ್ಡರು ಎನ್ನಬಹುದೆ? ಅವರು ಬಿಡುವ ಉಪಗ್ರಹಗಳು ಅವರು ಪೂಜೆ ಮಾಡಿದ್ದರಿಂದ ಕೆಲಸಮಾಡುತ್ತವೆ ಎಂಬುದಾಗಿ ಅವರು ನಂಬಿದ್ದರೆ ಉಪಗ್ರಹ ತಂತ್ರಜ್ಞಾನವನ್ನು ಅವರೇಕೆ ಬೋಧಿಸುತ್ತಾರೆ? ಪೂಜಾರಿಗಳೆಲ್ಲ ಉಪಗ್ರಹವನ್ನು ಉಡಾವಣೆ ಮಾಡಬಹುದೆ?  ಅಂತೆಯೇ ಆಸ್ಪತ್ರೆಗಳಲ್ಲಿ ಹಲವು ಬಾರಿ ವೈದ್ಯರುಗಳೇ ಇಂತಹ ಆಚರಣೆಗಳಿಗೆ ಮೊರೆಹೋಗುವುದನ್ನ ನೋಡಬಹುದು. ಅಷ್ಟು ದೊಡ್ಡ ವಿಜ್ಞಾನಿಗಳಾಗಿದ್ದರೂ, ವೈದ್ಯರಾಗಿದ್ದರೂ ಜೊತೆಗೆ ಅವರಿಗೆ ಅಷ್ಟು ಜ್ಞಾನವಿದ್ದರೂ ಅವರೇಕೆ ಇಂತಹ ಕ್ರಿಯೆಗಳನ್ನು ಮಾಡುತ್ತಾರೆ? ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಅಪಪ್ರಚಾರಕ್ಕೆ ಏಕೆ ಉತ್ತರಿಸುವುದಿಲ್ಲ? ಈ ಎರಡೂ ಪ್ರಶ್ನೆಗಳಿಗೂ ಒಂದೇ ತೆರನಾದ ಉತ್ತರವಿದೆ ಎಂಬುದು ನಮ್ಮ  ಅಭಿಪ್ರಾಯ. ಆಚರಣೆಗಳನ್ನು ವಿವರಿಸುವ ಕಾರ್ಯ ಅದರಲ್ಲಿ ಪಾಲ್ಗೊಳ್ಳುವ ಜನರಿಗೆ ಅಗತ್ಯವಿರುವುದಿಲ್ಲ. ಸುಮ್ಮನೆ ಮಾಡಬೇಕು ಮಾಡುತ್ತಾರಷ್ಟೆ. ಆ ಕಾರಣದಿಂದ ಅವರನ್ನು ಮೂಢರು ಎನ್ನುವುದು ಅವಸರದ ಹೇಳಿಕೆಯಾಗುತ್ತದೆ. ಅಂದರೆ ಈ ಆಚರಣೆಗಳು ವಿವರಣೆಗಳನ್ನು ಬಯಸುವುದಿಲ್ಲ, ಅವು ಕೇವಲ ಕ್ರಿಯೆಗಳನ್ನು ಮಾತ್ರ ಬಯಸುತ್ತವೆ. ಅವು ವಿಚಾರವಂತಿಕೆಗೆ ಸಂಬಂಧಪಟ್ಟವುಗಳಲ್ಲ. ಆದ್ದರಿಂದಲೇ ಅನೇಕ  ಬೌದ್ಧಿಕ ವೃತ್ತಿಯಲ್ಲ್ಲಿರುವ ಜನರೂ ಸಹ ಅವರ ಆಚರಣೆಗಳ ಕುರಿತು ಏನೇ ಪ್ರಚಾರವಾದರೂ ಅದಕ್ಕೆ ಕಿವಿಗೊಡದೆ ಅದನ್ನು ಮಾಡುವ ಸಂದರ್ಭದಲ್ಲಿ ಮಾಡುತ್ತಾರಷ್ಟೆ.

ಇಂದು ನಮ್ಮ ಮುಂದಿರುವ ಜಿಜ್ಞಾಸೆ ಕೇವಲ ಆಚರಣೆಗಳನ್ನು ತೊಡೆದು ಹಾಕುವ ಕುರಿತಾಗಿ ಇವೆ. ಆಚರಣೆಗಳನ್ನು ಏಕೆ ತೊಡೆಯಬೇಕು? ಏಕೆಂದರೆ ಅದರಿಂದ ತೊಂದರೆಯಾಗುತ್ತಿದೆ ಎನ್ನುವುದು ಕಾರಣವಾಗಬಹುದು. ಆದರೆ ಇಲ್ಲಿ ಆಚರಣೆ ಮಾಡುವವರು ತಮಗೆ ಶಾಂತಿ ಸಿಗುತ್ತದೆ ಎನ್ನುತ್ತಿದ್ದಾರೆ. ಅಂದರೆ ತೊಂದರೆ ಆಗುತ್ತಿದೆ ಎಂಬುದನ್ನು ನಿರ್ಧರಿಸುತ್ತಿರುವವರು ಯಾರು? ನೋಡುವವರೂ ಅಲ್ಲ, ಅದರ ವರದಿಯನ್ನು ಓದಿ ಜಿಜ್ಞಾಸೆ ಮಾಡುವ ಕೆಲವು ವಿಚಾರವಂತರು. ಅಂದರೆ ಏನು ತೊಂದರೆಯಾಗುತ್ತಿದೆ ಎಂಬುದು ಆಚರಣೆ ಮಾಡುವವರಿಗೇ  ಅರಿವಿಲ್ಲದಿದ್ದರೂ ಕೆಲವು ವಿಚಾರವಂತರಿಗೆ ಅದು ಹೇಗೆ ಗೊತ್ತಾಯಿತು?     ಇದುವರೆಗೂ ಎಂಜಲೆಲೆಯ ಆಚರಣೆಯ ಕುರಿತಾದದ ಚರ್ಚೆಗೆ ಸಂಬಂಧಿಸಿದಂತೆ ಅದಕ್ಕೆ ಮೌಢ್ಯವನ್ನು ಆರೋಪಿಸಿ ಅದನ್ನು ಹೋಗಲಾಡಿಸುವ ಪ್ರಯತ್ನದಲ್ಲಿರುವವರೇ ಅದು ಅಸಹನೀಯ ಎನ್ನುತ್ತಿದ್ದಾರೆಯೇ ಹೊರತು ಆಚರಿಸುವವರ ಅನುಭವದಿಂದ ಈ ಹೇಳಿಕೆಯು ಪ್ರಮಾಣಿತವಾಗಿಲ್ಲ. ಜಿಜ್ಞಾಸೆಯನ್ನೇ ಆಧರಿಸದ ಆಚರಣೆಗಳನ್ನು ಜಿಜ್ಞಾಸೆಯ ಮೂಲಕ ನೋಡಲು ಹೋದರೆ ಇಂಥ ಅಸಂಗತ ಸನ್ನಿವೇಶ ನಿರ್ಮಾಣವಾಗುತ್ತದೆ.

ಇದನ್ನು ಇನ್ನೂ ಸ್ಪಷ್ಟಗೊಳಿಸಿಕೊಳ್ಳುವುದಾದರೆ, ಜನರು ಬ್ರಾಹ್ಮಣರ ಎಂಜಲೆಲೆಯಿಂದ ತಮ್ಮ ರೋಗರುಜಿನ ವಾಸಿಯಾಗುತ್ತದೆ ಎಂದು ನಿಜವಾಗಿಯೂ ನಂಬಿದ್ದರೆ, ಬಹುತೇಕ ರೋಗಗ್ರಸ್ಥರು ಬ್ರಾಹ್ಮಣರ ಮನೆಯ ಮುಂದೆ ಅವರ ಎಂಜಲೆಲೆಗಳಿಗೋಸ್ಕರ ನಿಂತಿರಬೇಕಿತ್ತು. ಆದರೆ ಪರಿಸ್ಥಿತಿ ಹಾಗೆ ಇದೆಯೇ? ಖಂಡಿತ ಇಲ್ಲ, ಏಕೆಂದರೆ ನಿರ್ದಿಷ್ಟ ಸಮಯದಲ್ಲಿ ಅದೂ ದೇವಸ್ಥಾನಗಳಂತಹ ಸ್ಥಳಗಳಲ್ಲಿ ಮಾತ್ರ ಜನರು ಆ ಆಚರಣೆಯನ್ನು ಮಾಡುತ್ತಾರೆ. ಅದು ಅಲ್ಲಿ ಮಾತ್ರ ಮಾಡುವ ಕಾರ್ಯವಾಗಿದ್ದು ದೇವಸ್ಥಾನದ ಹೊರಗೆ ಅದರ ಪ್ರಸ್ತುತತೆ ಇರುವುದಿಲ್ಲ. ಆದ್ದರಿಂದ ಆಚರಣೆಗಳು ಜರುಗುವ ಸಂದರ್ಭ, ಕಾಲ, ಸ್ಥಳಗಳು ಆಚರಣೆಗಳಿಗೆ ಅರ್ಥವನ್ನು ನೀಡುತ್ತವೆಯೇ ವಿನಃ, ಅದರಿಂದ ಹೊರಬಂದರೆ ಆಚರಣೆಗಳು ಅವೈಚಾರಿಕವಾಗಿಯೇ ಕಾಣುತ್ತವೆ. ಬ್ರಾಹ್ಮಣರ ಎಂಜಲೆಲೆಯಲ್ಲಿ ಹೊರಳಾಡಿದರೆ ರೋಗ ವಾಸಿಯಾಗುವುದಿಲ್ಲ ಎಂದು ಜನರಿಗೆ ತಿಳಿದಿದೆ ಎಂದು ಜನರಿಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ ಆದರೂ ಅದು ಪೂರ್ವಕಾಲದಿಂದ ಬಂದಿದೆ ಎಂಬ ಕಾರಣಕ್ಕೋ ಅಥವಾ ತಮ್ಮ ಮನಃಶಾಂತಿಗೋ ಹಾಗೂ ಇನ್ಯಾವುದೋ ಕಾರಣಗಳಿಗೆ, ಅಥವಾ ಯಾವುದೇ ಕಾರಣಗಳಿಲ್ಲದೆಯೂ ಆ ಆಚರಣೆಯಲ್ಲಿ ತೊಡಗುತ್ತಾರೆ. ಆದ್ದರಿಂದ ಜನರು ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ನಿರ್ದಿಷ್ಟವಾದ ನಂಬಿಕೆ ಇರುತ್ತದೆ ಎಂಬ ಅವೈಚಾರಿಕ ವಿಶ್ಲೇಷಣೆ ನಮ್ಮ ಆಚರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಾದಿತಪ್ಪಿಸುತ್ತವೆ.

ದೇವರಿಗೆ ಅರ್ಪಿಸುವ ನೈವೇದ್ಯವಾಗಲಿ, ದೇವರ ಮುಂದೆ ಇಡುವ ಎಡೆಯಾಗಲೀ ದೇವರು ತೆಗೆದುಕೊಳ್ಳುತ್ತಾನೆ ಎಂಬುದು ಮೌಢ್ಯದಂತೆಯೇ ಕಾಣುತ್ತದೆ. ಆದರೆ ಅದನ್ನು ಮಾಡುವ ಜನರಿಗೆ ಅವುಗಳನ್ನು ದೇವರು ತಿನ್ನಲು ಸಾಧ್ಯವಿಲ ಎಂಬ ಕ್ಷುಲ್ಲಕ ಸಂಗತಿಗಳು ತಿಳಿದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದರೆ ಹಾದಿ ತಪ್ಪುತ್ತೇವೆ. ದೇವರು ಕಥೆಗಳಲ್ಲಿ ಬಿಟ್ಟರೆ ನಿಜದಲ್ಲಿ ಎಂದೂ ತಿನ್ನುವುದೂ ಇಲ್ಲ ಎಂಬುದು ಅವರ ಅನುಭವ. ಆದರೂ ಜನರೇಕೆ ಎಡೆ ಇಡುತ್ತಾರೆ? ಏಕೆ ಇಡುತ್ತಾರೆಂದರೆ ಅವರ ಪೂರ್ವಿಕರು ಅವರಿಗೆ ಹಾಗೆ ಹೇಳಿಕೊಟ್ಟಿದ್ದಾರೆ. ಅದನ್ನು ಮುಂದುವರೆಸುವುದರಿಂದ ಅವರಿಗೇನು ತೊಂದರೆಯೂ ಇಲ್ಲ, ಅಡ್ಡಿ ಆತಂಕಗಳೂ ಇಲ್ಲ. ಇದನ್ನು ಇನ್ನೂ ಸ್ಪಷ್ಟಪಡಿಸುವುದಾದರೆ, ಆಚರಣೆಗಳನ್ನು ಮಾಡಲು ಇಂತದ್ದೇ ನಿರ್ದಿಷ್ಟ ಕಾರಣ ಇರಬೇಕೆಂಬ ನಿಯಮವಿಲ್ಲ, ಇನ್ನೂ ನಿರ್ದಿಷ್ಟವಾಗಿ ವೈಚಾರಿಕ ವಿವರಣೆ ಅಥವಾ ಕಾರಣಗಳ ಅಗತ್ಯವಿಲ್ಲ. ಅಂತಹ ಯಾವುದೇ ಕಾರಣಗಳಿಲ್ಲದೆಯೂ ಜನರು ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಆ ಆಚರಣೆಗಳಿಗೆ ಕಾರಣಗಳಿಲ್ಲ, ಹಾಗಾಗಿ ಮೂಢ ಆಚರಣೆಗಳು, ಆ ಕಾರಣಕ್ಕಾಗಿ ಅವುಗಳನ್ನು ನಿಲ್ಲಿಸಬೇಕು ಎನ್ನುವವರು ಮನುಷ್ಯ ವರ್ತನೆಯ ಒಂದು ವೈಜ್ಞಾನಿಕ ಸತ್ಯವನ್ನು ಅರಿತಿಲ್ಲ.  ಅದೆಂದರೆ, ಆಚರಣೆಗಳನ್ನು ಮುಂದುವರೆಸಲು  ಕಾರಣಗಳು ಇಲ್ಲ ಎನ್ನುವುದೇ ಅವುಗಳನ್ನು ನಿಲ್ಲಿಸಲು ಕಾರಣವಾಗಲಾರದು. ಅವುಗಳನ್ನು ನಿಲ್ಲಿಸಲು ಪ್ರತ್ಯೇಕ ಕಾರಣಗಳು ಬೇಕು. ಇದು ಮಾನವ ಆಚರಣೆಯ ಕುರಿತು ವಿಜ್ಞಾನಿಗಳೇ ಹೇಳಿದ ವಿಚಾರ. ಹಾಗಾಗಿ ಒಂದೊಮ್ಮೆ ಜನರಿಗೆ ಯಾವುದಾದರೂ ಆಚರಣೆ ತಪ್ಪು, ಅದನ್ನು ನಿಲ್ಲಿಸಬೇಕು ಎಂದು ಅನಿಸಿದಾಗೆಲ್ಲ ಕಾಲಕ್ರಮೇಣ ಅಂತಹ ಆಚರಣೆಗಳನ್ನು ಪರಿವರ್ತಿಸಿಕೊಂಡಿದ್ದಾರೆ ಇಲ್ಲವೆ ಬಿಟ್ಟು ಬಿಟ್ಟಿದ್ದಾರೆ. ಹೀಗೆ ಎಷ್ಟೋ ಆಚರಣೆಗಳು ಅಳಿದಿವೆ, ಎಷ್ಟೋ ಹೊಸದಾಗಿ ಹುಟ್ಟಿಕೊಂಡಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿಯಾಗಿದೆ.

ಒಟ್ಟಿನಲ್ಲಿ ಕುಕ್ಕೆ ಸುಬ್ರಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ, ಜೊತೆಗೆ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ ಜನರೇಕೆ ಆಚರಣೆಗಳಲ್ಲಿ ಬಾಗವಹಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಭಾಗವಹಿಸುವವರಿಗೆ ವಿರೋಧ ಅರ್ಥವಾಉತ್ತಿಲ್ಲ, ಅದನ್ನು ವಿರೋಧಿಸುವವಿಗೆ ಏಕೆ ಜನರ ಭಾಗವಹಿಸುವಿಕೆ ಅರ್ಥವಾಗುತ್ತಿಲ್ಲ. ಇವರಿಬ್ಬರ ನಡುವೆ ಯಾವುದೋ ಒಂದು ತೆರನಾದ ಕಂದರವಿದೆ ಎಂಬುದು ನಮ್ಮ ಅಭಿಪ್ರಾಯ. ಇದರ ಸ್ಪಷ್ಟ ಸೂಚನೆ ಎಂದರೆ ಭಾಗವಹಿಸುವವರು ಎಷ್ಟೇ ವಿರೋಧವಿದ್ದರೂ ಭಾಗವಹಿಸುತ್ತಲೇ ಇದ್ದಾರೆ, ವಿರೋಧಿಸುವವರು ವಿರೋಧಿಸುತ್ತಲೇ ಇದ್ದಾರೆ.

Advertisements
 1. suresh
  ಡಿಸೆಂಬರ್ 21, 2010 ರಲ್ಲಿ 8:22 ಅಪರಾಹ್ನ

  ಮಾನ್ಯರೆ,
  ನಾನು ಕೇವಲ ಎಂಜಲು ಮೇಲೆ ಹೊರಳಾಟದ ಬಗ್ಗೆ ಮಾತನಾಡದೆ, ಒಟ್ಟಾರೆಯಾಗಿ ನಮ್ಮ ಧಾರ್ಮಿಕ ಆಚರಣೆ ಬಗ್ಗೆ ಮಾತನಾಡುತ್ತಿದ್ದೇನೆ.
  ನಾವು ಬದುಕುತ್ತಿರುವುದು ನಂಬಿಕೆಯ ಆಧಾರದ ಮೇಲೆ. ಅಮ್ಮ ಒಬ್ಬ ಗಂಡಸನ್ನು ತೋರಿಸಿ ಇವನೇ ನಿಮ್ಮ ಅಪ್ಪ ಎಂದರೆ ಹೌದು ಅವನಿಗೆ ಅಪ್ಪ ಎನ್ನುವ ಸಂಸ್ಕೃತಿ ನಮ್ಮದು. ಅದನ್ನು ಬಿಟ್ಟು ಅವನನ್ನು ಡಿ.ಎನ್.ಎ ಟೆಸ್ಟ್ ಮಾಡಿಸು ಎಂದು ನಾವು ಹೇಳುವುದಿಲ್ಲ. ಅಂತಹುದೇನಿದ್ದರೂ ಅದು ವಿದೇಶಗಳಲ್ಲಿ ಮಾತ್ರ.
  ಇವತ್ತು ಮನುಷ್ಯ ಉಪಗ್ರಹ ಉಡಾವಣೆ ಮಾಡಿರಬಹುದು ಅಥವಾ ವೈದ್ಯನಾಗಿರಬಹುದು,0 ಆದರೆ ಆತ ಸಣ್ಣ ವಯಸ್ಸಿನಲ್ಲಿದ್ದಾಗ ನೀಡಿದ ಹಿರಿಯರ ಸಂಸ್ಕ್ಋತಿ ಮುಂದುವರೆಯುತ್ತದೆ. ಅದು ನಂತರದ ಜನರೇಷನ್್ಗೂ ಮುಂದುವರೆಯುತ್ತಲೇ ಇರುತ್ತದೆ. ನನ್ನ ಪ್ರಕಾರ ಇವತ್ತು ನಮ್ಮಲ್ಲಿ ಏನಾದರೂ ಸಂಬಂಧಗಳು ಇನ್ನು ಗಟ್ಟಿಯಾಗಿ ಇದೆಯೆಂದರೆ ಕಾರಣ ನಮ್ಮ ಧಾರ್ಮಿಕ ಭಾವನೆಗಳು ಹಾಗೂ ಆಚರಣೆಗಳು. ಧಾರ್ಮಿಕ ಆಚರಣೆಯ ನೆಪದಲ್ಲಿ ಎಲ್ಲರೂ ಸೇರುತ್ತೇವೆ. ಒಟ್ಟಾಗಿ ಕೂತು ಊಟ ಮಾಡುತ್ತೇವೆ. ಒಂದಾಗಿ ಇರುತ್ತೇವೆ. ಬಾಲ ಗಂಗಾಧರ್ ತಿಲಕ್ ಮಾಡಿದ್ದೂ ಇದೇ ಅಲ್ಲವೇ. ಸ್ವಾತಂತ್ರ್ಯಕ್ಕಾಗಿ ಬಹಿರಂಗ ಗಣಪತಿ ಕೂರಿಸುವ ಅಭ್ಯಾಸ ತಂದಿದ್ದು ಅವರೇ ಅಲ್ಲವೇ. ಎಲ್ಲದನ್ನೂ ವೈಜ್ನಾನಿಕವಾಗಿ ನೋಡುತ್ತಾ ಹೋದರೆ ಸಂಬಂಧಗಳು ಇರುತ್ತಲೇ ಇರಲಿಲ್ಲ. ಯಾವುದೇ ಧಾರ್ಮಿಕ ಆಚರಣೆಗಳು ಇತರರಿಗೆ ತೊಂದರೆಯಾಗುತ್ತದೆ ಎಂದರೆ ಅದನ್ನು ಖಂಡಿತಾ ವಿರೋಧಿಸಬೇಕು. ಉದಾ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ. ಇದು ಖಂಡಿತಾ ದೇವರ ಹೆಸರಲ್ಲಿ ನಡೆಯುವ ಕೆಟ್ಟ ಆಚರಣೆ ಎನ್ನಬಹುದಾಗಿದೆ. ಇಲ್ಲಿ ಎಂಜಲು ಎಲೆ ವಿಷಯ ಬಂದಾಗ, ಬ್ರಾಹ್ಮಣರು ಒತ್ತಾಯ ಮಾಡಿದ್ದರೆ ತಪ್ಪು. ಆದರೆ ಇದು ಅವರ ವೈಯುಕ್ತಿಕ ಅಭಿಪ್ರಾಯವಾಗಿದೆ.
  ಇದನ್ನು ವಿರೋಧಿಸುವ ಸಂಘಟನೆಗಳು ದೇವದಾಸಿ ಬಗ್ಗೆ ಹೋರಾಟ ನಡೆಸಿ ನಿಲ್ಲಿಸಿದೆಯಾ ಎನ್ನುವುದನ್ನು ಚಿಂತಿಸಬೇಕಾಗುತ್ತದೆ. ಕಾರಣ ಸಣ್ಣ ವಯಸ್ಸಿನ ಮಕ್ಕಳು ಯಾವನೋ ವೈಯುಕ್ತಿಕ ಹಿತಕ್ಕಾಗಿ ವ್ಯಭಿಚಾರಕ್ಕೆ ಇಳಿಯುತ್ತಿದ್ದಾರೆ. ನೇರವಾಗಿ ಮಕ್ಕಳನ್ನು ಸೂಳೆಗಾರಿಕೆ ತಳ್ಳಲಾಗುತ್ತಿದೆ. ಅದರಲ್ಲೂ ಹಿಂದುಳಿದ ವರ್ಗದವರನ್ನೇ ಎನ್ನುವುದನ್ನು ನಾವು ಮನಗಾಣಬೇಕಿದೆ. ಯಾವನೋ ಎಂಜಲು ಎಲೆ ಮೇಲೆ ಉರುಳಿದ ಎನ್ನುವುದು ದೊಡ್ಡ ಪ್ರಚಾರವಾಗುತ್ತದೆ. ಸ್ವಾಮಿ ನಮ್ಮ ಅಕ್ಕ ತಂಗಿಯರು ಸೂಳೆಯರು ಆಗುತ್ತಿದ್ದಾರಲ್ಲಾ ಇದಕ್ಕೆ ಯಾರು ಹೊಣೆ. ಎಲ್ಲಾ ಧಾರ್ಮಿಕ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವಾಗಲಿ. ಕೇವಲ ಮಾಧ್ಯಮದ ಪ್ರಚಾರಕ್ಕಾಗಿ ಒಂದು ದಿನದ ಪ್ರತಿಭಟನೆ ಮಾಡಿದರೆ ಅದಕ್ಕೆ ಮಹತ್ವ ಕೊಡುವಂತದ್ದರಲ್ಲಿ ಯಾವುದೇ ಅರ್ಥವಿಲ್ಲ. ಇಂತಹುದಕ್ಕೆ ಮೊದಲು ಕಡಿವಾಣ ಹಾಕಬೇಕು.
  “ದೇವರಿಗೆ ಅರ್ಪಿಸುವ ನೈವೇದ್ಯವಾಗಲಿ, ದೇವರ ಮುಂದೆ ಇಡುವ ಎಡೆಯಾಗಲೀ ದೇವರು ತೆಗೆದುಕೊಳ್ಳುತ್ತಾನೆ ಎಂಬುದು ಮೌಢ್ಯದಂತೆಯೇ ಕಾಣುತ್ತದೆ. ಆದರೆ ಅದನ್ನು ಮಾಡುವ ಜನರಿಗೆ ಅವುಗಳನ್ನು ದೇವರು ತಿನ್ನಲು ಸಾಧ್ಯವಿಲ ಎಂಬ ಕ್ಷುಲ್ಲಕ ಸಂಗತಿಗಳು ತಿಳಿದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದರೆ ಹಾದಿ ತಪ್ಪುತ್ತೇವೆ.”
  ದೇವರು ಇದಾನೆ ಅಂತಾ ಜನ ಕೆಟ್ಟ ಕಾರ್ಯ ಮಾಡುವ ಮೊದಲು ಹೆದರುತ್ತಾರೆ. ಇದೂ ಇಲ್ಲದೇ ಹೋಗಿದ್ದರೆ ದಿನ ನಿತ್ಯ ನೂರಾರು ಹೆಣ ಬಿದ್ದಿರುತ್ತಿತ್ತು. ದೆವ್ವ ಇದೆ ಎಂದಾದರೆ ದೇವರು ಇದಾನೆ ಎಂದು ನಂಬಲೇಬೇಕಾಗುತ್ತದೆ. ಎಲ್ಲದಕ್ಕೂ ಚರ್ಚೆಯೇ ಮುಖ್ಯ ಎಂದರೆ ಅದಕ್ಕೂ ಉದಾಹರಣೆಗಳು ಸಾಕಷ್ಟು ಸಿಗುತ್ತದೆ.
  ಒಟ್ಟಾರೆಯಾಗಿ ಜಾಗೃತಿ ಮೂಡಿಸಲಿ ಸಂತೋಷ. ಆದರೆ ಅದನ್ನು ಬಿಟ್ಟು ಒಂದು ವರ್ಗವನ್ನು ದೂರುವುದು ಸರಿಯಲ್ಲ ಎನ್ನುವುದು ನನ್ನ ವಾದ.

  Like

 2. ajakkalagirisha
  ಡಿಸೆಂಬರ್ 22, 2010 ರಲ್ಲಿ 6:12 ಅಪರಾಹ್ನ

  ಮಾನ್ಯರೆ, ಮಡೆಸ್ನಾನವನ್ನು ಸಮರ್ಥಿಸಲು ಸಾಧ್ಯವಿಲ್ಲ. ಹಾಗೆಯೆ ಅದನ್ನು ಬಲಾತ್ಕಾರವಾಗಿ ನಿಲ್ಲಿಸುವುದೂ ಉಚಿತವಾಗದು. ಮಡೆಸ್ನಾನ ಮಾಡುವ ಜನರೇ ನಿಲ್ಲಿಸಿದರೆ ಒಳ್ಳೆಯದು, ಯಾಕೆಂದರೆ ಎಂಜಲೆಲೆಯಲ್ಲಗಲೀ ಇತರ ದಿನಗಳಲ್ಲಾಗಲೀ ಜನರು ಹೊರಳಾಡುವುದು ಅಷ್ಟು ಸುಂದರ ದೃಶ್ಯವಲ್ಲ. girisha bhat

  Like

 3. Santhosh Shetty
  ಡಿಸೆಂಬರ್ 23, 2010 ರಲ್ಲಿ 9:07 ಫೂರ್ವಾಹ್ನ

  ಗಿರೀಶ್ ರವರೆ

  ಪ್ರತಿಕ್ರಿಯೆಗೆ ಧನ್ಯವಾದಗಳು

  ಮಡೆಸ್ನಾನವನ್ನು ಸಮರ್ಥಿಸುವುದಾಗಲಿ ಅಥವಾ ಅದನ್ನ ನಿಲ್ಲಿಸುವುದಾಗಲಿ ನಮ್ಮಿಂದ ಸಾಧ್ಯವಾಗದ ಕೆಲಸ. ನಾವು ಕೇವಲ ಅದನ್ನು ಗ್ರಹಿಸುವ ಕಾರ್ಯವನ್ನಷ್ಟೆ ಸದ್ಯಕ್ಕೆ ಮಾಡಬಹುದು. ಹಾಗೆ ಗ್ರಹಿಸುವ ಅಥವಾ ಅರ್ಥೈಸುವ ಕಾರ್ಯದಲ್ಲಿ ವಸ್ತುನಿಷ್ಠವಾಗಿ ಅಧ್ಯಯನ ಮಾಡಬೇಕೆಂಬುದು ನಮ್ಮ ಉದ್ದೇಶ.

  Like

 4. ಡಿಸೆಂಬರ್ 23, 2010 ರಲ್ಲಿ 3:33 ಅಪರಾಹ್ನ
 5. Vijayendra
  ಡಿಸೆಂಬರ್ 30, 2010 ರಲ್ಲಿ 12:46 ಅಪರಾಹ್ನ

  Concepts of “Naivedhyam”or “prasada”, other food-related cultural prohibitions like “yanjalu” and “musare” (esp. how and where they apply and do apply) are wholly alien and unavailable to our secular Western experience and sensibilities; it is only natural such practices as at Kokke Subramanya temple should befuddle some people.

  It may not be wholly irrelevant to examine if the beliefs of the devout are getting delinked from any deeper understanding or if it has thereby regressed from their original context but it is afterall the people with beliefs, who have the first right to such investigation.

  Secular intolerance and rationalist outrage with media gloating is simply undemocratic. No amount of their alleging any conspiratorial or casteist underpinnings to this popular practice is going to make thier claim any more or creditworthy.

  Like

 6. ಜನವರಿ 1, 2011 ರಲ್ಲಿ 9:21 ಫೂರ್ವಾಹ್ನ

  ಸಂತೋಷ ಕುಮಾರ್‍ ಹಾಗು ಪ್ರವೀಣ್,

  “ಒಂದು ಭಿನ್ನ ನೋಟ” ಎಂದು ನೀವು ಹೇಳಿರುವುದರಿಂದ ಮುಂದಿನದನ್ನು ಹೇಳಬೇಕೆಂದೆನಿಸಿದೆ.

  ಬ್ರಾಹ್ಮಣರಲ್ಲದೆ ಉಳಿದವರ ಉಂಡ ಎಲೆಗಳ ಮೇಲೆ ಹೊರಳಾಡುವ ಸಂಪ್ರದಾಯ ಇದೆಯೆ? ಅಷ್ಟೆ ಅಲ್ಲದೆ ಯಾರ ಎಲೆಯಾದರೂ ಅಡ್ಡಿಯಿಲ್ಲ ಎನ್ನುವುದಾದರೆ ಮಾತ್ರ ನಿಮ್ಮ ಬ್ರಾಹ್ಮಣರ ಪರ apologetic ದೃಷ್ಟಿಕೋನಕ್ಕೆ ಅರ್ಥಬರುತ್ತದೆ. ನಮ್ಮ ಹಲವಾರು ಸಂಪ್ರದಾಯಗಳು ಬ್ರಾಹ್ಮಣ್ಯದ ಸಮ್ಮತಿ/ಉತ್ತೇಜನ/ಬೆದರಿಕೆಯಡಿ ನಡೆಯುತ್ತವೆ ಎಂಬುದಕ್ಕೆ ನೀವು ಕುರುಡಾಗಿರುವುದು ನೋಡಿ ಸೋಜಿಗವಾಯಿತು. ಈ ವಿಷಯವನ್ನು ಮತ್ತಷ್ಟು ವಿವೇಚಿಸುವುದು ಬಿಟ್ಟು ಮೊದಲ ಪ್ಯಾರಾದಲ್ಲೇ “ಬ್ರಾಹ್ಮಣರನ್ನು ಬಯ್ಯುವುದರಲ್ಲಿ ಅರ್ಥವಿಲ್ಲ” ಎಂದು ಘೋಷಿಸಿಬಿಟ್ಟಿದ್ದೀರ!

  ಶ್ರೀಮಂತರು, ವಿದ್ಯಾವಂತರು ಮೂಢರಾಗಿರುವುದಿಲ್ಲ ಎಂಬ ನಿಲುವಿನಿಂದ ಹೊರಟಿರುವುದರಿಂದ ಅವರನ್ನು “ಮೂಢ”ರೆಂದು ಕರೆದಾಗ ಚಕಿತರಾಗಿದ್ದೀರ. ಸಿರಿವಂತಿಕೆ, ವಿದ್ಯೆ ಇದ್ದೊಡನೆ ಬುದ್ಧಿಯೂ ಇದೆ ಎಂದು ಹೇಳಲಾದೀತೆ? ಇದು ವಿಜ್ಞಾನಿಗಳೂ, ಡಾಕ್ಟರುಗಳ ಬಗ್ಗೆಯೂ ಸಲ್ಲುವ ಮಾತು. ನಿಜವಾಗಿಯೂ, ಅವರ ಮನಸ್ಸು ಹೇಗೆ ಕೆಲಸಮಾಡುತ್ತವೆ ಎಂಬುದು ಸೋಜಿಗದ ವಿಷಯವೇ. ಅದಕ್ಕೆ ಹೆಚ್ಚು ಅಧ್ಯಯನದ ಅವಶ್ಯಕತೆ ಇದೆ.

  ಆದರೆ ನೀವು “ಇಲ್ಲಿ ಅಂಥ ಅಧ್ಯಯನವೇ ಸಾಧ್ಯವಿಲ್ಲ.” ಎಂದು ಘೋಷಿಸಿದ್ದೀರ! ನಿಮ್ಮನ್ನು ಅಧ್ಯಯನಶೀಲರು ಎಂದುಕೊಂಡಿದ್ದೆ ತಪ್ಪಾಯಿತೆ? ಹಾಗಾದರೆ, ಯಾವು ಯಾವುದಕ್ಕೆ ಅಧ್ಯಯನ ಸಾಧ್ಯ ಎಂದೂ ನಿಮ್ಮ ಒಂದು ಪಟ್ಟಿ ಕೊಡುತ್ತೀರ? 🙂

  ನಿಮ್ಮ ಈ ಬರಹದ ಒಟ್ಟಾರೆ ಧೋರಣೆ, – ಆಚರಣೆಗಳು “ತಾವಾಗಿಯೇ” ಮರೆಯಾಗುತ್ತವೆ. ಅವುಗಳಿಗೆ ಯಾವುದೇ ಒತ್ತಡದ ಅಗತ್ಯವಿಲ್ಲ. ಅವುಗಳ ಉದ್ದೇಶ/ಮೂಲಗಳನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅವುಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ತೋರದೆ ತೆಪ್ಪಗಿರುವುದು ಒಳ್ಳೆಯದು – ಪ್ರತಿಕ್ರಯಿಸುವುದು ವ್ಯರ್ಥ ಎಂಬಂತಿದೆ! ಈ ಲೋಕದ ಎಷ್ಟೋ ಕ್ರೂರ ಆಚರಣೆಗಳು, ರೂಢಿಗಳು ತಾವಾಗಿಯೇ ನಿಂತವು ಎಂಬುದು ಎಂತಹ ಬಾಲಿಶ ನಿಲುವು ಎಂಬುದನ್ನು ಒಮ್ಮೆ ಯೋಚಿಸಿ ನೋಡಿ. ಅವುಗಳನ್ನು ನಿಲ್ಲಿಸುವ ಬಗ್ಗೆ ನಡೆದಿರುವ ಚರ್ಚೆ, ಚಿಂತನೆ ಹಾಗು ಸಾಮಾಜಿಕ ಹೋರಾಟಗಳು ನಿಮ್ಮ ಕಣ್ಣಿನಲ್ಲಿ ವ್ಯರ್ಥ ಅನಿಸಿದರೆ ಚರಿತ್ರೆಯನ್ನು ಮತ್ತೆ ಓದಿಕೊಳ್ಳುವ ಅವಶ್ಯಕತೆ ಇದೆ ಅನಿಸುತ್ತದೆ.

  ಅಧ್ಯಯನಶೀಲರಾದ ನೀವು ಈ ಬಗೆಯ ತೆಳುವಾದ ವಾದ ಮುಂದಿಟ್ಟು ಅದನ್ನು “ಭಿನ್ನ ನೋಟ” ಎಂದು ಕರೆದಿರುವುದು ದಿಟಕ್ಕೂ ಚಿಂತಾಜನಕ!

  Like

 7. Santhosh Shetty
  ಜನವರಿ 1, 2011 ರಲ್ಲಿ 11:41 ಫೂರ್ವಾಹ್ನ

  ಪ್ರೀತಿಯ ಸುದರ್ಶನ್

  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
  ೧. ನಮ್ಮ ವಾದ ಬ್ರಾಹ್ಮಣರ ಪರವಾಗಿಯೋ ಅಥವಾ ವಿರುದ್ಧವಾಗಿಯೋ ಮಾಡುವ ಆಸಕ್ತಿ ನಮಗಿಲ್ಲ, ಮತ್ತೆ ಅದು ನಮ್ಮ ಕಾಳಜಿಯೂ ಅಲ್ಲ. ನೀವು ಒಂದು ದೃಷ್ಟಿಕೋನದಿಂದ (ಅದೂ ಪ್ರಗತಿಪರರ ಹಣೆಪಟ್ಟಿಯೊಂದಿಗೆ, ಪಾಶ್ಚಾತ್ಯ ಶಿಕ್ಷಣ ಪಡೆದ (ಅ) ವಿದ್ಯಾವಂತರಂತೆ) ನೋಡುತ್ತಿದ್ದೀರ. ಇಡೀ ಸಮಾಜದಲ್ಲಿ ಬ್ರಾಹ್ಮಣರೇ ಎಲ್ಲವನ್ನೂ ಮಾಡಿಸುತ್ತಾರೆ ಎಂಬುದನ್ನು ನಿಜವಾಗಿಯೂ ಪರಿಶೀಲಿಸುವ ಅಗತ್ಯತೆ ಇಂದು ಎಲ್ಲರಿಗೂ ಇದೆ. ಭಾರತದ ಸಮಾಜದಲ್ಲಿ ಬ್ರಾಹ್ಮಣರು ಪುರೋಹಿತವರ್ಗವಾಗಿದ್ದು ಇಲ್ಲಿನ ಎಲ್ಲಾ ಜನರನ್ನು ಮೂಢರನ್ನಾಗಿ ಮಾಡುತ್ತಿದ್ದಾರೆ ಎಂಬ ೩೦೦ ವರ್ಷಕ್ಕೂ ಹಳೆಯ ಕ್ರೈಸ್ತ ಮಿಷನರಿಗಳ ವಾದವನ್ನೇ ನೀವು ಮುಂದುವರೆಸುತ್ತಿದ್ದೀರ. ನಿಮ್ಮ ವಾದ ಯಾವುದೋ ಕ್ಷೇತ್ರಾಧ್ಯಯನದಿಂದ ಬಂದಂತೆ ತೋರುವುದಿಲ್ಲ. ಏಕೆಂದರೆ ಪೌರೋಹಿತ್ಯ ಎಂಬುದು ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಎಲ್ಲಾ ಬ್ರಾಹ್ಮಣರೂ ಪುರೋಹಿತರಲ್ಲ. ಬಹುತೇಕ ಸಮುದಾಯಗಳಲ್ಲಿ ಅವರವರ ಸಮುದಾಯದ ಪುರೋಹಿತರೇ ಇದ್ದಾರೆ. ಇದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ನಮ್ಮ ಸಮಾಜದಲ್ಲಿ ಇಷ್ಟೊಂದು ವೈವಿಧ್ಯತೆಯಿಂದ ಕೂಡಿರುವ ಸಮುದಾಯಗಳು ಅಸ್ತಿತ್ವದಲ್ಲಿರುವಾಗ ಅವರ ಸಂಪ್ರದಾಯಗಳನ್ನು ನಿರ್ಧರಿಸುವ ಕಾರ್ಯವನ್ನು ಅವರೇ ಮಾಡಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಬ್ರಾಹ್ಮಣೇತರರೆಲ್ಲಾ ಅಶಕ್ತರು ಎಂಬ ನಿಲುವನ್ನು ತಾಳಿದಂತೆ ಆಗುತ್ತದೆ. ತುಂಬಾ ಆಚರಣೆಗಳಿಗೆ ಬ್ರಾಹ್ಮಣರ ಭಾಗವಹಿಸುವಿಕೆಯೇ ಇರದೆ ಇರುವ ನಿದರ್ಶನಗಳಿವೆ. ಇದಿಷ್ಟು ವಸ್ತುನಿಷ್ಟವಾಗಿ ಸಮಾಜವನ್ನು ನೋಡಲೆತ್ನಿಸಿದರೆ ಕಂಡುಬರುವ ಸತ್ಯಾಂಶಗಳಾಗಿವೆ.

  ೨. ನೀವೇ ಹೇಳಿರುವಂತೆ ವಿಜ್ಞಾನಿಗಳು ಮೂಢರೇ ಎಂಬುದನ್ನು ತಿಳಿಯಲು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದು. ಆದರೆ ಅವರು ಮೂಢರೇ ಎಂದು ಮೊದಲು ತೀರ್ಮಾನಿಸಿ ಅಧ್ಯಯನ ಮಾಡುವುದಾದರೂ ಏನಿದೆ? ಉತ್ತರ ಹೇಗಿದ್ದರೂ ನಿಮಗೆ ತಿಳಿದಿದೆಯಲ್ಲ ಅವರೂ ಮೂಢರೇ ಎಂದು. ಆದರೆ ನಮ್ಮ ದೃಷ್ಟಿಕೋನ ಇದಕ್ಕಿಂತ ಕೊಂಚ ಭಿನ್ನವಾಗಿಯೇ ಇದೆ. ಆಚರಣೆಗಳಲ್ಲಿ ಭಾಗವಹಿಸುವ ಮೇಧಾವಿಗಳು, ಇಂಜಿನಿಯರುಗಳು ಮೂಢರಾಗಿರಲು ಸಾಧ್ಯವೆ ಎಂಬ ಪ್ರಶ್ನೆಯನ್ನು ಮಾತ್ರ ಕೇಳುತ್ತಿದ್ದೇವೆ. ಆದರೆ ಅವರು ಮೂಢರೋ ಅಲ್ಲವೋ ತಿಳಿದಿಲ್ಲ. ಅದಕ್ಕೂ ಹೆಚ್ಚಾಗಿ ಮೂಢತನವಿದೆ ಎಂದು ಅಳಯುವ ಮಾಪಕಗಳಾವುವು. ಹಲವಾರು ಇರಬಹುದು, ಅವುಗಳಲ್ಲಿ ಪ್ರಮುಖವಾದದು ’ವೈಚಾರಿಕ ದೃಷ್ಟಿಕೋನ’ ಅಥವಾ ವೈಚಾರಿಕ ವಿವರಣೆಯನ್ನು ನೀಡುವ ಮೂಲಕ ಮೂಢತನವನ್ನು ಪರೀಕ್ಷಿಸಬಹುದು ಎಂಬುದಾಗಿದೆ. ಆದರೆ ಎಲ್ಲಾ ವಿಚಾರಗಳಿಗೂ ವೈಚಾರಿಕ ಚೌಕಟ್ಟಿನಿಂದಲೇ ನೋಡಲು ಅಥವಾ ಅಧ್ಯಯನ ಮಾಡಲು ಸಾಧ್ಯವೆ? ಆಚರಣೆಗಳಗಳನ್ನು ವೈಚಾರಿಕವಾಗಿ ಅಧ್ಯಯನ ಮಾಡಬಹುದೇನೋ ಆದರೆ ಅವುಗಳಿಗೆ ವೈಚಾರಿಕ ಅರ್ಥವನ್ನು ನೀಡುವ ಅಗತ್ಯವಿಲ್ಲ. ಇವೆರಡಕ್ಕೂ ನಿಜವಾಗಿಯೂ ವ್ಯತ್ಯಾಸವಿದೆ.
  –ಅವರ ಮನನ್ಥಿತಿಯನ್ನು ಅಧ್ಯಯನ ಮಾಡಿದರೆ ಆಚರಣೆಗಳು ನಮಗೆ ಅರ್ಥವಾಗುತ್ತವೆಯೇ? ಗೊತ್ತಿಲ್ಲ ನೀವೆ ಉತ್ತರಿಸಬೇಕು..
  –ಯಾವುದರ ಕುರಿತು ಅಧ್ಯಯನ ಮಾಡಬಹುದು ಎಂಬ ಪಟ್ಟಿಯನ್ನು ನೀಡುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಯಾವ ಸಂಗತಿಯ ಕುರಿತಾದರೂ ಅಧ್ಯಯನ ಮಾಡಬಹುದು, ಆದರೆ ಅವುಗಳನ್ನು ಹೇಗೆ ಅಧ್ಯಯನ ಮಾಡುತ್ತೀರಿ ಎಂಬುದಷ್ಟೇ ಮುಖ್ಯವಾಗುತ್ತದೆ. ಆಚರಣೆಗಳ ಕುರಿತು ಅಧ್ಯಯನ ಮಾಡಲು ಸಾಧ್ಯವೇ ಇಲ್ಲ ಎಂಬುದಾಗಿ ನಮ್ಮ ವಾದವಿಲ್ಲ. ಪ್ರಾಯಶಃ ನೀವು ತಪ್ಪಾಗಿ ಭಾವಿಸಿದಂತಿದೆ. ಹಾಗೆ ನೋಡಿದರೆ ನಮ್ಮ ಸಂಶೋಧನೆಯ ಕೇಂದ್ರಬಿಂದು “ವಿಧಿಚರಣೆಗಳೇ” ಆಗಿವೆ. ನಾವು ಅಧ್ಯಯನಶೀಲರಾಗಿರುವುದರಿಂದಲೇ ಇಷ್ಟೆಲ್ಲಾ ಬರೆಯಲು ಹಾಗೂ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗುತ್ತಿರುವುದು ಎಂದು ಭಾವಿಸುತ್ತೇವೆ.

  ೩. ಅದೇಕೆ ಬಾಲಿಶ ಎಂಬುದನ್ನು ಕೊಂಚ ವಿವರಿಸಿ.

  ಆಸಕ್ತಿ ಇದ್ದರೆ ಚರ್ಚೆ ಮುಂದುವರೆಸುವಾ…

  Like

 8. ಜನವರಿ 2, 2011 ರಲ್ಲಿ 4:19 ಫೂರ್ವಾಹ್ನ

  ಸಂತೋಷ್ ಕುಮಾರ್‍,
  ಮೊದಲಿಗೆ, ನನಗೆ ಪ್ರಗತಿಪರ ಹಣೆಪಟ್ಟಿಯೂ ಇಲ್ಲ, ನಾನು ಪಾಶ್ಚಾತ್ಯ ಶಿಕ್ಷಣ ಪಡೆದ (ಅ)ವಿದ್ಯಾವಂತನೂ ಅಲ್ಲ. (ಹಾಗೆ ನೋಡಿದರೆ ನಾನು ವಿದ್ಯಾವಂತನೇ ಅಲ್ಲ – ಕಾಲೇಜ್ ಡ್ರಾಪ್ ಔಟ್) ಇರಲಿ. ನಿಮ್ಮ ಮಾತನ್ನು ಪರ್ಸನಲ್ ಅಟ್ಯಾಕ್ ಎಂದು ನಾನು ತೆಗೆದುಕೊಳ್ಳುವುದಿಲ್ಲ.

  ನನಗೆ ನೇರವಾದ ಕ್ಷೇತ್ರಾಧ್ಯಯನದ ತಿಳುವಳಿಕೆ ಇಲ್ಲ ಎಂದು ನಿರ್ಧರಿಸಿದ್ದೀರಿ. ಸರಿ. ನಿಮ್ಮ ನೇರವಾದ ಕ್ಷೇತ್ರಾಧ್ಯಯನದ ಅನುಭವದಿಂದ ಕೆಳಗಿನ ಸಂಗತಿಗಳನ್ನು ತಿಳಿಸುವಿರ?
  ೧. ಬ್ರಾಹ್ಮಣರಲ್ಲದೆ ಉಳಿದವರ ಉಂಡ ಎಲೆಗಳ ಮೇಲೆ ಹೊರಳಾಡುವ ಸಂಪ್ರದಾಯ ಇದೆಯೆ? (ನಾನು ಹಿಂದೆ ಕೇಳಿದ, ನೀವು ನಿರ್ಲಕ್ಷಸಿದ ಪ್ರಶ್ನೆ)
  ೨. ಮಡೆಸ್ನಾನ ನಡೆಸುವ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ವಾರಸುದಾರರು ಯಾವ ಜಾತಿ/ವರ್ಗಕ್ಕೆ ಸೇರಿದವರು?
  ೩. ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನವನ್ನು ಆಯೋಜಿಸಿದ ಮಂದಿ ಯಾವ ಜಾತಿ/ವರ್ಗಕ್ಕೆ ಸೇರಿದವರು?

  ಈ ಪ್ರಶ್ನೆ ಕೇಳಲು ಕಾರಣ ಹೀಗಿದೆ. ಎಲ್ಲದಕ್ಕೂ ಬ್ರಾಹ್ಮಣರನ್ನು ದೂಷಿಸುವಷ್ಟು ಪೆದ್ದುತನ ನನಗಿಲ್ಲ. “೩೦೦ ವರ್ಷದ ಹಿಂದಿನ ಕ್ರೈಸ್ತ ಮಿಷನರಿಗಳ ವಾದ” ಎಂಬುದು rhetoric ಅಷ್ಟೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ತಿಳಿಯದೇ ಇರುವುದಿಲ್ಲ. ಹಾಗೆಂದು ೩೦೦ ವರ್ಷದ ಹಿಂದಿನ ವಾದವನ್ನು ಸಾರಾಸಗಟಾಗಿ ಒಪ್ಪಬೇಕೆಂದೂ ಹೇಳುತ್ತಿಲ್ಲ. ಹಾಗಾಗಿಯೇ ನಾನು “ಬ್ರಾಹ್ಮಣ್ಯ” ಎಂಬ ಪದವನ್ನು ಬಳಸಿದ್ದು. ಇದು ಹೊಸದೂ ಅಲ್ಲ, ಭಿನ್ನವೂ ಅಲ್ಲ. ಈ “ಬ್ರಾಹ್ಮಣ್ಯ” ಯಾವುದೇ ವರ್ಗ/ಜಾತಿಯಲ್ಲಾದರೂ ಇರಬಹುದು. ನೀವು ಹೇಳಿದಂತೆ ಉಳಿದ ಜಾತಿಗಳಲ್ಲೂ ಇದೆ. ಆದರೆ, case at hand, ಮಡೆಸ್ನಾನದ ಸಂದರ್ಭದಲ್ಲಿ ಬ್ರಾಹ್ಮಣರನ್ನು ದೂಷಿಸುವುದು ತಪ್ಪು ಎಂದು ಹೇಳುತ್ತಿದ್ದೀರ?

  ಇನ್ನು ನಿಮ್ಮ “ವೈಚಾರಿಕತೆ” ಹಾಗು “ಮೌಢ್ಯ”ದ ಬಗೆಗಿನ ನಿಲುವು ಅಪ್ರಮಾಣಿಕ ಅನಿಸುತ್ತದೆ. ಇಷ್ಟೆಲ್ಲಾ ಅಧ್ಯಯನ, field-work, ವಿಶ್ಲೇಷಣೆ ಮಾಡುವ ನೀವು “ವೈಚಾರಿಕ no-go zone” ನಿರ್ಮಿಸಿರುವುದು ಅದಕ್ಕೆ ಕಾರಣ. critical thinking ಇಲ್ಲದ, ಸದ್ಯದ ವೈಜ್ಞಾನಿಕ ತಿಳವಳಿಕೆಯ ಆಧಾರವಿಲ್ಲದ ಆಚರಣೆಯನ್ನು ತಿಳಿದುಕೊಳ್ಳಲು “ವೈಚಾರಕತೆ” ಸಹಾಯವಾಗುವುದಿಲ್ಲ ಎಂಬ anti-intellectual ನಿಲುವನ್ನು intellecutal dishonesty ಆಗಿ ಅಲ್ಲದೆ ಮತ್ತೇನೆಂದು ನೋಡಲು ಸಾಧ್ಯ? ಮನಸ್ಥಿತಿಯನ್ನು ಅಧ್ಯಯನ ಮಾಡಿದರೆ, ಆಚರಣೆಗಳ ಒಂದು ಮಗ್ಗುಲಾದರೂ ಅರ್ಥವಾಗುತ್ತದೆ. ಜತೆಜತೆಗೆ ಸಮಾಜಶಾಸ್ತ್ರ, ಚರಿತ್ರೆಗಳ ನೆರವೂ ಬೇಕು. ಆದರೆ ನೀವು ಅಂತಹ ಅಧ್ಯಯನವನ್ನು ತಿರಸ್ಕರಿಸುತ್ತಿರುವುದು ಸೋಜಿಗವೇ ( ಲೇಖನದಲ್ಲಿ ನಿಮ್ಮ ಮಾತು: “ಇಂಥ ಆಚರಣೆಗಳ ಸಂದರ್ಭದಲ್ಲಿ ಜನರು ಕ್ರಿಯೆಗಳನ್ನು ಏಕೆ ಮಾಡುತ್ತಾರೆ ಹಾಗೂ ಆ ಕ್ರಿಯೆಗಳ ಹಿಂದಿರುವ ಉದ್ದೇಶಗಳೇನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅರಿಯಬಹುದು ಎಂಬ ಗ್ರಹಿಕೆ ವಿದ್ವಾಂಸರಲ್ಲಿದೆ. ಆದರೆ ಇಲ್ಲಿ ಅಂಥ ಅಧ್ಯಯನವೇ ಸಾಧ್ಯವಿಲ್ಲ.”)

  ವಿಚಾರವಂತರ ನಿಲುವಿಗೆ ಸವಾಲೆಸೆಯಿರಿ. ಅವರ ನಿಲುವನ್ನು ಅರ್ಥಹೀನವೆಂದು ತೋರಿಸಿ. ಅದು ಒಳ್ಳೆಯದೇ – ಆದರೆ ವೈಚರಿಕತೆಯೇ ವ್ಯರ್ಥ ಎಂಬುದನ್ನು ಅಪ್ರಮಾಣಿಕ ಎಂದೇ ನೋಡಬೇಕಾಗುತ್ತದೆ. ಆ ನಿಲುವನ್ನು ಹೊಂದಿರುವ ನಿಮ್ಮ ಜತೆ ಈ ಚರ್ಚೆ, ವಿಚಾರ-ವಿನಿಮಯವೂ ವ್ಯರ್ಥವಲ್ಲವೆ?!

  Like

 9. praveen
  ಜನವರಿ 3, 2011 ರಲ್ಲಿ 11:48 ಫೂರ್ವಾಹ್ನ

  ಗೆಳೆಯ ಸುದರ್ಶನ್,
  ನಿಮ್ಮ ಪ್ರಶ್ನೆಗಳು:೧. ಬ್ರಾಹ್ಮಣರಲ್ಲದೆ ಉಳಿದವರ ಉಂಡ ಎಲೆಗಳ ಮೇಲೆ ಹೊರಳಾಡುವ ಸಂಪ್ರದಾಯ ಇದೆಯೆ? (ನಾನು ಹಿಂದೆ ಕೇಳಿದ, ನೀವು ನಿರ್ಲಕ್ಷಸಿದ ಪ್ರಶ್ನೆ)
  ೨. ಮಡೆಸ್ನಾನ ನಡೆಸುವ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ವಾರಸುದಾರರು ಯಾವ ಜಾತಿ/ವರ್ಗಕ್ಕೆ ಸೇರಿದವರು?
  ೩. ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನವನ್ನು ಆಯೋಜಿಸಿದ ಮಂದಿ ಯಾವ ಜಾತಿ/ವರ್ಗಕ್ಕೆ ಸೇರಿದವರು?

  ನಿಮ್ಮ ಈ ಪ್ರಶ್ನೆಗಳಿಗೆ ಬ್ರಾಹ್ಮಣರು ಎಂದು ಉತ್ತರಿಸಿದರೂ ಈ ಕೆಳಗಿನ ಕೆಲವು ಸಮಸ್ಯೆಗಳಿವೆ. ಅದನ್ನು ಬಿಡಿಸದ ಹೊರತು ಚರ್ಚೆ ಜಾಳುಜಾಳಾಗುತ್ತದೆ. ಏಕೆಂದರೆ ನೀವೆ ಹೇಳಿದಂತೆ,
  (ಹಾಗಾಗಿಯೇ ನಾನು “ಬ್ರಾಹ್ಮಣ್ಯ” ಎಂಬ ಪದವನ್ನು ಬಳಸಿದ್ದು. ಇದು ಹೊಸದೂ ಅಲ್ಲ, ಭಿನ್ನವೂ ಅಲ್ಲ. ಈ “ಬ್ರಾಹ್ಮಣ್ಯ” ಯಾವುದೇ ವರ್ಗ/ಜಾತಿಯಲ್ಲಾದರೂ ಇರಬಹುದು)
  ೧.”ಬ್ರಾಹ್ಮಣ್ಯ”ವೆಂದರೇನು ಎಂಬುದನ್ನು ವಿಸ್ತರಿಸಿ ಹೇಳುತ್ತೀರಾ ?
  ೨. ಬ್ರಾಹ್ಮಣರಿಗೂ “ಬ್ರಾಹ್ಮಣ್ಯ”ಕ್ಕೂ ಸಂಬಂಧವಿದೆಯೇ?
  ಈ ಪ್ರಶ್ನೆಗಳನ್ನು ಕೇಳಲು ಕಾರಣವಿಷ್ಟೆ; ಮೊದಲನೆಯದು, ಯಾವುದೇ ಚರ್ಚೆಯನ್ನು ತೆಗೆದುಕೊಳ್ಳಲಿ ಬ್ರಾಹ್ಮಣರನ್ನು ದೂಷಿಸುತ್ತಾ ಅಥವಾ ಎಲ್ಲಾ ಸಾಮಾಜಿಕ ಅನಿಷ್ಟಗಳಿಗೂ ಬ್ರಾಹ್ಮಣರೇ ಕಾರಣವೆಂದು ಗುರುತಿಸುವುದು (ಸಾಹಿತ್ಯ ವಿಮರ್ಶೆಗಳು, ಜಾತಿಯ ಕುರಿತ ಅಧ್ಯಯನಗಳು). ಆ ಚರ್ಚೆಯನ್ನು ಇನ್ನೂ ಮುಂದೆ ತೆಗೆದುಕೊಂಡು ಹೋದಾಗ ಬ್ರಾಹ್ಮಣರು ಕಾರಣರಲ್ಲ “ಬ್ರಾಹ್ಮಣ್ಯ” ಎಂದು ಹೇಳುವುದು ಸರ್ವೇಸಾಮಾನ್ಯ. ಇದನ್ನೇ ನೀವು ಮಾಡುತ್ತಿದ್ದೀರಿ ಕೂಡ. ಹಾಗಾಗಿ ಈ ಮೇಲಿನ ಪ್ರಶ್ನೆಗಳನ್ನು ಸ್ಪಷ್ಟಪಡಿಸಿಕೊಂಡ ನಂತರವಷ್ಟೇ ಚರ್ಚೆಯನ್ನು ಮುಂದೊತ್ತಲು ಸಾಧ್ಯ. ಆಗ “ಬ್ರಾಹ್ಮಣ್ಯ”ಕ್ಕೂ ಈ ಎಂಜಲೆಲೆಯ ಮೇಲಿನ ಉರುಳಾಟದಂತಹ “ಆಚರಣೆ”ಗಳಿಗೂ ಏನು ಸಂಬಂಧವೆಂದು ಚರ್ಚಿಸಲು ಸಾಧ್ಯ.
  ಎರಡನೆಯದು, “ಬ್ರಾಹ್ಮಣರು ಹುಟ್ಟು”ಹಾಕಿದ್ದಾರೆಂಬ ಕಾರಣಕ್ಕೆ ಈ ಆಚರಣೆಯು ಮೂಢವೇ? ಅಥವಾ “critical thinking ಇಲ್ಲದ, ಸದ್ಯದ ವೈಜ್ಞಾನಿಕ ತಿಳವಳಿಕೆಯ ಆಧಾರವಿಲ್ಲದ್ದಾ”ಗಿರುವುದರಿಂದ ಈ ಆಚರಣೆಯನ್ನು ಮೂಢವೆಂದು ಕರೆಯುತ್ತಿದ್ದೀರೇ? ಎಂಬುದು ಸ್ಪಷ್ಟವಿಲ್ಲದಿರುವುದು. ಇದು ಕೇವಲ ನಿಮ್ಮ ವಾದಕ್ಕೆ ಮಾತ್ರ ಮೀಸಲು ಅಲ್ಲ, ಬದಲಾಗಿ ಯಾರೆಲ್ಲ ನಿಮ್ಮಂತೆ ವಾದಿಸುತ್ತಾರೆಯೋ ಎಲ್ಲರಿಗೂ ಅನ್ವಯಿಸುತ್ತದೆ.

  ನೀವು ಹೇಳಿರುವುದು;(ಮನಸ್ಥಿತಿಯನ್ನು ಅಧ್ಯಯನ ಮಾಡಿದರೆ, ಆಚರಣೆಗಳ ಒಂದು ಮಗ್ಗುಲಾದರೂ ಅರ್ಥವಾಗುತ್ತದೆ. ಜತೆಜತೆಗೆ ಸಮಾಜಶಾಸ್ತ್ರ, ಚರಿತ್ರೆಗಳ ನೆರವೂ ಬೇಕು. ಆದರೆ ನೀವು ಅಂತಹ ಅಧ್ಯಯನವನ್ನು ತಿರಸ್ಕರಿಸುತ್ತಿರುವುದು ಸೋಜಿಗವೇ)
  ೧.ಯಾರ ಮನಸ್ಥಿತಿಯನ್ನು ಅಧ್ಯಯನ ಮಾಡಬೇಕು? ಆಚರಣೆಯಲ್ಲಿ ಪಾಲ್ಗೊಳ್ಳುವವರ ಮನಸ್ಥಿತಿಯೋ ಅಥವಾ ಆಚರಣೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ “ವಿಚಾರವಂತರ/intellectual” ಗಳ ಮನಸ್ಥಿತಿಯೋ?
  ೨. ಸಮಾಜ ಶಾಸ್ತ್ರ ಮತ್ತು ಚರಿತ್ರೆಗಳ ನೆರವು ಬೇಕೇ ಬೇಕು ಆದರೆ ಸಮಾಜಶಾಸ್ತ್ರ ಮತ್ತು ಚರಿತ್ರೆಗಳು ಹೇಳುವುದು ಅಂತಿಮ ಸತ್ಯವೇ? ಯಾವುದೇ ವಿಜ್ಞಾನವಾಗಲೀ (ಪ್ರಸ್ತುತ ವೈಜ್ಞಾನಿಕ ಚರ್ಚೆ) ತಾನು ವಿವರಿಸುವುದನ್ನು ಅಂತಿಮವೆಂದು ಹೇಳುವುದಿಲ್ಲ. ಹೀಗಿರುವಾಗ ಭಾರತೀಯ ಆಚರಣೆಗಳ ಕುರಿತು ಸಮಾಜಶಾಸ್ತ್ರ ಮತ್ತು ಚರಿತ್ರೆಗಳು ಈ ಹಿಂದೆ ಹೇಳಿರುವ ವಿಚಾರಗಳನ್ನು ಪ್ರಶ್ನೆ ಮಾಡುವುದನ್ನು ನೀವು anti-intellectual ಎಂದೂ, intellecutal dishonesty ಎಂದೂ ಪರಿಗಣಿಸುತ್ತಿದ್ದೀರಿ. ಆದರೆ ಸಮಾಜಶಾಸ್ತ್ರ ಮತ್ತು ಚರಿತ್ರೆಗಳ ಈ ಹಿಂದಿನ ಅಧ್ಯಯನಗಳೇ ಅಂತಿಮವೆಂದಾದರೆ, ಪ್ರಸ್ತುತ ಆಚರಣೆಗಳ ಕುರಿತು ಅಧ್ಯಯನ ಮಾಡುವುದು, ಸಂಶೋಧನೆ ಮಾಡುವುದು ವ್ಯರ್ಥವೆಂಬುದು ನಿಮ್ಮ ಅರ್ಥವೇ?

  ನಿಮ್ಮ ಉತ್ತರದ ನೀರಿಕ್ಷೆಯಲ್ಲಿ,
  ಧನ್ಯವಾದಗಳೊಂದಿಗೆ,
  ಪ್ರವೀಣ್

  Like

 10. ಜನವರಿ 3, 2011 ರಲ್ಲಿ 5:06 ಅಪರಾಹ್ನ

  ಪ್ರವೀಣ್,

  >>ನಿಮ್ಮ ಈ ಪ್ರಶ್ನೆಗಳಿಗೆ ಬ್ರಾಹ್ಮಣರು ಎಂದು ಉತ್ತರಿಸಿದರೂ …

  ಬ್ರಾಹ್ಮಣರು ಹೌದು ಎಂದು ಉತ್ತರಿಸುತ್ತಿದ್ದೀರ? ಏಕೆಂದರೆ ನಿಮ್ಮ ಕ್ಷೇತ್ರಾಧ್ಯಯನದ ಫಲ ಅದುವೆ? ಇದು ಮುಖ್ಯವಾದ ಸಂಗತಿ. ಏನಕ್ಕೂ ನಿಮ್ಮ ಕ್ಷೇತ್ರಾಧ್ಯಯನದ data ಆನ್‌ಲೈನು ಸಿಗುತ್ತದೆಯೆ? ನಿಮ್ಮ ಕ್ಷೇತ್ರಾಧ್ಯಯನವನ್ನು ವಿಶ್ಲೇಷಿಸಿದ್ದೀರ? ಹೌದಾಗಿದ್ದರೆ, ಅದನ್ನು ನೀವು ಹಂಚಿಕೊಳ್ಳುವುದು ಮುಖ್ಯ. ಅದನ್ನು ಒಮ್ಮೆ ಓದಿ ಚರ್ಚೆ ಮುಂದುವರೆಸುವುದು ಒಳ್ಳೆಯದು.

  >>ಇದನ್ನೇ ನೀವು ಮಾಡುತ್ತಿದ್ದೀರಿ ಕೂಡ.

  ಇಲ್ಲ! ನೀವು ಆರೋಪಿಸಿರುವಂತೆ ಚರ್ಚೆ ಮುಂದುವರೆದಂತೆ ನನ್ನ ವಾದವನ್ನು “ಬ್ರಾಹ್ಮಣ್ಯ” ಎಂದು ಪುನರ್‍ರೂಪಿಸಿಲ್ಲ. ನನ್ನ ಮೊಟ್ಟ ಮೊದಲ ಪ್ರತಿಕ್ರಿಯೆಯಲ್ಲೇ ನಾನು ಹೇಳಿದ ಮಾತಿದು. ದಯವಿಟ್ಟು ಮೇಲೆ ನೋಡಿ. ನಾನು ಬ್ರಾಹ್ಮಣ್ಯವನ್ನು ವಿವರಿಸುವ ಮೊದಲು -ನೀವು ಲೇಖನದಲ್ಲಿ “ಬ್ರಾಹ್ಮಣರು” ಎಂದು ಯಾರನ್ನು ಉದ್ದೇಶಿಸಿ ಹೇಳುತ್ತಿದ್ದೀರ? ಬ್ರಾಹ್ಮಣರನ್ನು ದೂಷಿಸುವವರು ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಕ್ಷೇತ್ರಾಧ್ಯಯನ ನಡಿಸಿದ್ದೀರ? ಮೇಲಿನಂತೆ ಅದನ್ನು ನೀವು ಮೊದಲು ಹಂಚಿಕೊಂಡು ವಾದ ಮುಂದುವರೆದರೆ ಒಳ್ಳೆಯದು.

  >>ಎರಡನೆಯದು, “ಬ್ರಾಹ್ಮಣರು ಹುಟ್ಟು” ಹಾಕಿದ್ದಾರೆಂಬ ಕಾರಣಕ್ಕೆ ಈ ಆಚರಣೆಯು ಮೂಢವೇ?

  ಅಲ್ಲ. ಯಾರೇ ಆದರೂ, critical thinking ಇಲ್ಲದ, ಸದ್ಯದ ವೈಜ್ಞಾನಿಕ ತಿಳವಳಿಕೆಯ ಆಧಾರವಿಲ್ಲದ ಆಚರಣೆ ಮೂಢವೇ. ಇದು ಬರೇ ಧರ್ಮ/ಸಂಪ್ರದಾಯವಷ್ಟೇ ಅಲ್ಲ, ವ್ಯವಸಾಯ, ಚಲನಚಿತ್ರರಂಗ, ವ್ಯವಹಾರದ ಕ್ಷೇತ್ರಗಳಲ್ಲಾದರೂ ಮೂಢ ಆಚರಣೆಯೇ!

  >>ಯಾರ ಮನಸ್ಥಿತಿಯನ್ನು ಅಧ್ಯಯನ ಮಾಡಬೇಕು

  ನೀವು ಸರಿಯಾಗಿ ಈ ಚರ್ಚೆಯನ್ನು ಓದಿದಂತೆ ಕಾಣುವುದಿಲ್ಲ. “ಈ ಆಚರಣೆಗಳಲ್ಲಿ ತೊಡಗಿರುವ ವಿಜ್ಞಾನಿಗಳೂ ಮೂಢರೇ?” ಎಂಬ ಮಾತಿಗೆ ಮನಸ್ಥಿತಿಯ ಆಧ್ಯಯನದ ಸಂಗತಿ ಪ್ರಸ್ತುತಗೊಂಡಿತು.

  >>ಯಾವುದೇ ವಿಜ್ಞಾನವಾಗಲೀ (ಪ್ರಸ್ತುತ ವೈಜ್ಞಾನಿಕ ಚರ್ಚೆ) ತಾನು ವಿವರಿಸುವುದನ್ನು ಅಂತಿಮವೆಂದು ಹೇಳುವುದಿಲ್ಲ.

  ಹೌದು! ಹಾಗಾಗಿಯೇ ನನ್ನ ಪ್ರತಿಕ್ರಿಯೆಯಲ್ಲಿ “ಸದ್ಯದ ವೈಜ್ಞಾನಿಕ ತಿಳವಳಿಕೆ” ಎಂದು ಹೇಳಿದ್ದು. ಅಲ್ಲಿ “ಸದ್ಯದ” ಎಂದು ಹೇಳಿರುವುದು ಅದೇ ಕಾರಣಕ್ಕೆ. ನೀವು ಗಮನಿಸಿರುತ್ತೀರ ಎಂದುಕೊಂಡಿದ್ದೆ.

  >> ಹೀಗಿರುವಾಗ ಭಾರತೀಯ ಆಚರಣೆಗಳ ಕುರಿತು ಸಮಾಜಶಾಸ್ತ್ರ ಮತ್ತು ಚರಿತ್ರೆಗಳು ಈ ಹಿಂದೆ ಹೇಳಿರುವ ವಿಚಾರಗಳನ್ನು ಪ್ರಶ್ನೆ ಮಾಡುವುದನ್ನು ನೀವು anti-intellectual ಎಂದೂ, intellecutal dishonesty ಎಂದೂ ಪರಿಗಣಿಸುತ್ತಿದ್ದೀರಿ.

  ಇಲ್ಲ – ನಾನು ಹಾಗೆ ಹೇಳಿಲ್ಲ. ನನ್ನ ಹಿಂದಿನ ಪ್ರತಿಕ್ರಿಯೆ ನೋಡಿ – ಹೀಗೆ ಹೇಳಿದ್ದೇನೆ – “ವಿಚಾರವಂತರ ನಿಲುವಿಗೆ ಸವಾಲೆಸೆಯಿರಿ. ಅವರ ನಿಲುವನ್ನು ಅರ್ಥಹೀನವೆಂದು ತೋರಿಸಿ. ಅದು ಒಳ್ಳೆಯದೇ” ನಾನು anti-intellectual ಹಾಗು intellectual dishonesty ಅಂದದ್ದು ನಿಮ್ಮ ಈ ಮಾತಿಗೆ (ಮತ್ತೆ ಉದ್ಧರಿಸುತ್ತಿದ್ದೇನೆ!) – ““ಇಂಥ ಆಚರಣೆಗಳ ಸಂದರ್ಭದಲ್ಲಿ ಜನರು ಕ್ರಿಯೆಗಳನ್ನು ಏಕೆ ಮಾಡುತ್ತಾರೆ ಹಾಗೂ ಆ ಕ್ರಿಯೆಗಳ ಹಿಂದಿರುವ ಉದ್ದೇಶಗಳೇನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅರಿಯಬಹುದು ಎಂಬ ಗ್ರಹಿಕೆ ವಿದ್ವಾಂಸರಲ್ಲಿದೆ. ಆದರೆ ಇಲ್ಲಿ ಅಂಥ ಅಧ್ಯಯನವೇ ಸಾಧ್ಯವಿಲ್ಲ.”

  >>ಆದರೆ ಸಮಾಜಶಾಸ್ತ್ರ ಮತ್ತು ಚರಿತ್ರೆಗಳ ಈ ಹಿಂದಿನ ಅಧ್ಯಯನಗಳೇ ಅಂತಿಮವೆಂದಾದರೆ, ಪ್ರಸ್ತುತ ಆಚರಣೆಗಳ ಕುರಿತು ಅಧ್ಯಯನ ಮಾಡುವುದು, ಸಂಶೋಧನೆ ಮಾಡುವುದು ವ್ಯರ್ಥವೆಂಬುದು ನಿಮ್ಮ ಅರ್ಥವೇ?

  ಮೇಲಿನ ನನ್ನ ವಿವರಣೆ ನೋಡಿ. ನನ್ನ ಹಿಂದಿನ ಪ್ರತಿಕ್ರಿಯೆಯನ್ನು ಮತ್ತೆ ಓದಿ. ನೀವು ಎಷ್ಟು ತಪ್ಪಾಗಿ ಅರ್ಥೈಸಿಕೊಂಡಿದ್ದೀರೆಂದು ತಿಳಿಯಬಹುದು.

  ನಿಮ್ಮ ಕ್ಷೇತ್ರಾಧ್ಯಯನದ ಸಂಗತಿಗಳನ್ನು ನೀಡುತ್ತೀರ ಎಂದು ಉತ್ಸಕನಾಗಿದ್ದೇನೆ.
  ಅದನ್ನು ಹಾಗು ಅದರ ನಿಮ್ಮ ವಿಶ್ಲೇಷಣೆಯನ್ನು ನೋಡಿ ಚರ್ಚೆ ಮುಂದುವರಿಸಬಹುದು.

  Like

 11. praveen
  ಜನವರಿ 6, 2011 ರಲ್ಲಿ 10:28 ಫೂರ್ವಾಹ್ನ

  ಸುದರ್ಶನ್,
  >>ಬ್ರಾಹ್ಮಣರು ಹೌದು ಎಂದು ಉತ್ತರಿಸುತ್ತಿದ್ದೀರ? ಏಕೆಂದರೆ ನಿಮ್ಮ ಕ್ಷೇತ್ರಾಧ್ಯಯನದ ಫಲ ಅದುವೆ? ಇದು ಮುಖ್ಯವಾದ ಸಂಗತಿ. ಏನಕ್ಕೂ ನಿಮ್ಮ ಕ್ಷೇತ್ರಾಧ್ಯಯನದ data ಆನ್‌ಲೈನು ಸಿಗುತ್ತದೆಯೆ? ನಿಮ್ಮ ಕ್ಷೇತ್ರಾಧ್ಯಯನವನ್ನು ವಿಶ್ಲೇಷಿಸಿದ್ದೀರ? ಹೌದಾಗಿದ್ದರೆ, ಅದನ್ನು ನೀವು ಹಂಚಿಕೊಳ್ಳುವುದು ಮುಖ್ಯ. ಅದನ್ನು ಒಮ್ಮೆ ಓದಿ ಚರ್ಚೆ ಮುಂದುವರೆಸುವುದು ಒಳ್ಳೆಯದು.

  ನಮ್ಮ ಕ್ಷೇತ್ರಾಧ್ಯಯನದ data ಆನ್ಲೈನ್ ಸಿಗುವುದಿಲ್ಲ. ಅದನ್ನು ಇನ್ನೂ ಬರಹ ರೂಪಕ್ಕೆ ತರಬೇಕಿದೆ. ಅದೇನೆ ಇರಲಿ ನಿಮ್ಮ ಪ್ರಶ್ನೆಗಳಿಗೆ ಮರಳುವುದಾದರೆ,
  >>೧. ಬ್ರಾಹ್ಮಣರಲ್ಲದೆ ಉಳಿದವರ ಉಂಡ ಎಲೆಗಳ ಮೇಲೆ ಹೊರಳಾಡುವ ಸಂಪ್ರದಾಯ ಇದೆಯೆ?
  ಇರಬಹುದಾದರೂ, ನಮಗೆ ಸಿಕ್ಕಿಲ್ಲ. ಸದ್ಯಕ್ಕೆ ಬ್ರಾಹ್ಮಣರ ಎಲೆಗಳ ಮೇಲೆ ಮಾತ್ರವೆಂದು ಗುರುತಿಸೋಣ.
  >>೨. ಮಡೆಸ್ನಾನ ನಡೆಸುವ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ವಾರಸುದಾರರು ಯಾವ ಜಾತಿ/ವರ್ಗಕ್ಕೆ ಸೇರಿದವರು?
  ವಾರಸುದಾರರು ಅಂದರೆ ? ಪ್ರಶ್ನೆ ಅರ್ಥವಾಗಲಿಲ್ಲ. ಸದ್ಯಕ್ಕೆ ಆ ದೇವಸ್ಥಾನದ ಮೇಲ್ವಿಚಾರಣೆಯನ್ನು ಕರ್ನಾಟಕ ಮುಜರಾಯಿ ಇಲಾಖೆ ನೋಡಿಕೊಳ್ಳುತ್ತಿದೆ. (ಪುತ್ತೂರಿನ ಸಹಾಯಕ ಕಮೀಷನರ‍್, ಡಾ ಹರೀಶ್ ಕುಮಾರ‍್(ಕೆ. ಎ. ಎಸ್) ಇವರು ಆಡಳಿತಾಧಿಕಾರಿಯಾಗಿದ್ದಾರೆ).
  >>೩. ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನವನ್ನು ಆಯೋಜಿಸಿದ ಮಂದಿ ಯಾವ ಜಾತಿ/ವರ್ಗಕ್ಕೆ ಸೇರಿದವರು?
  ಆ ಆಚರಣೆ ಪ್ರತೀ ವರ್ಷ ನಡೆಯುವುದರಿಂದ ಅಥವಾ ತಲೆ ಮಾರುಗಳಿಂದ ನಡೆದುಕೊಂಡು ಬರುತ್ತಿರುವುದರಿಂದ ಅದನ್ನು ಯಾರು ಆಯೋಜಿಸಿದರು, ಯಾವಾಗ ಆರಂಭವಾಯಿತೆಂಬ ಪ್ರಶ್ನೆ ಅಪ್ರಸ್ತುತ.
  ಒಂದೊಮ್ಮೆ ಬ್ರಾಹ್ಮಣರೆ ಎಂದಾದರೆ …ನಿಮ್ಮ ಮುಂದಿನ ವಿಚಾರವೇನು ಎಂಬುದು ಮುಖ್ಯ.

  >>ಇಲ್ಲ! ನೀವು ಆರೋಪಿಸಿರುವಂತೆ ಚರ್ಚೆ ಮುಂದುವರೆದಂತೆ ನನ್ನ ವಾದವನ್ನು “ಬ್ರಾಹ್ಮಣ್ಯ” ಎಂದು ಪುನರ್‍ರೂಪಿಸಿಲ್ಲ.
  ಸರಿ. ಆದರೆ ನನ್ನ ಪ್ರಶ್ನೆ ಹಾಗೇ ಉಳಿದುಕೊಂಡಿದೆ; “ಬ್ರಾಹ್ಮಣ್ಯ” ಎಂದರೇನು?

  >>ನೀವು ಸರಿಯಾಗಿ ಈ ಚರ್ಚೆಯನ್ನು ಓದಿದಂತೆ ಕಾಣುವುದಿಲ್ಲ. “ಈ ಆಚರಣೆಗಳಲ್ಲಿ ತೊಡಗಿರುವ ವಿಜ್ಞಾನಿಗಳೂ ಮೂಢರೇ?” ಎಂಬ ಮಾತಿಗೆ ಮನಸ್ಥಿತಿಯ ಆಧ್ಯಯನದ ಸಂಗತಿ ಪ್ರಸ್ತುತಗೊಂಡಿತು.
  ನನ್ನನ್ನು ತಿದ್ದಿದ್ದಕ್ಕೆ ಧನ್ಯವಾದಗಳು. ಆದರೆ ಇದನ್ನು ಇನ್ನೂ ಸ್ವಲ್ಪ ವಿವರಿಸಿ.

  >>ಇಲ್ಲ – ನಾನು ಹಾಗೆ ಹೇಳಿಲ್ಲ. ನನ್ನ ಹಿಂದಿನ ಪ್ರತಿಕ್ರಿಯೆ ನೋಡಿ – ಹೀಗೆ ಹೇಳಿದ್ದೇನೆ – “ವಿಚಾರವಂತರ ನಿಲುವಿಗೆ ಸವಾಲೆಸೆಯಿರಿ. ಅವರ ನಿಲುವನ್ನು ಅರ್ಥಹೀನವೆಂದು ತೋರಿಸಿ. ಅದು ಒಳ್ಳೆಯದೇ” ನಾನು anti-intellectual ಹಾಗು intellectual dishonesty ಅಂದದ್ದು ನಿಮ್ಮ ಈ ಮಾತಿಗೆ (ಮತ್ತೆ ಉದ್ಧರಿಸುತ್ತಿದ್ದೇನೆ!) –
  “ಇಂಥ ಆಚರಣೆಗಳ ಸಂದರ್ಭದಲ್ಲಿ ಜನರು ಕ್ರಿಯೆಗಳನ್ನು ಏಕೆ ಮಾಡುತ್ತಾರೆ ಹಾಗೂ ಆ ಕ್ರಿಯೆಗಳ ಹಿಂದಿರುವ ಉದ್ದೇಶಗಳೇನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅರಿಯಬಹುದು ಎಂಬ ಗ್ರಹಿಕೆ ವಿದ್ವಾಂಸರಲ್ಲಿದೆ. ಆದರೆ ಇಲ್ಲಿ ಅಂಥ ಅಧ್ಯಯನವೇ ಸಾಧ್ಯವಿಲ್ಲ.”

  ನಮ್ಮ ಈ ವಾಕ್ಯವನ್ನು ಇನ್ನೂ ಬಿಡಿಸಿ ಹೇಳುವ ಪ್ರಯತ್ನ ಮಾಡುತ್ತೇನೆ. ಆಚರಣೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ ಎಂಬುದು ನಮ್ಮ ಮಾತಿನ ಇಂಗಿತವಲ್ಲ. (ಆದರೆ ನೀವು ತಪ್ಪಾಗಿ ಗ್ರಹಿಸಿದ್ದರಿಂದ anti-intellectual ಹಾಗು intellectual dishonesty ಎಂದು ಕಂಡಿದೆ ಎಂದುಕೊಂಡಿದ್ದೇನೆ ಅಥವಾ ನಾವು ಇನ್ನೂ ಸ್ಪಷ್ಟವಾಗಿ ವಿವರಿಸುವ ಅವಶ್ಯಕತೆ ಇತ್ತು ಎಂದೆನಿಸುತ್ತಿದೆ) ನಮ್ಮ ಈಗಿನ ವೈಚಾರಿಕರು ಮಾಡುತ್ತಿರುವುದೇನೆಂದರೆ; ಆಚರಣೆಗಳಿಗೂ ಮತ್ತು ಅದರ ಹಿಂದೆ ನಂಬಿಕೆಗಳಿಗೂ ತಳುಕು ಹಾಕಿನೋಡುತ್ತಾರೆ. ಆಚರಣೆಗಳ ಹಿಂದಿನ ನಂಬಿಕೆಗಳು ವೈಜ್ಞಾನಿಕವೇ? ಇಲ್ಲವೇ? ಎಂದು ವಿಮರ್ಶಿಸಿ. ಒಂದೊಮ್ಮೆ ಆ ನಂಬಿಕೆ ವೈಜ್ಞಾನಿಕವಲ್ಲದಿದ್ದರೆ ಅದನ್ನು “ಮೂಢ ನಂಬಿಕೆ”ಯೆಂದು, ಆ ಆಚರಣೆಗಳನ್ನು “ಮೂಢಾಚರಣೆಗಳೆಂದೂ/ಗೊಡ್ಡಾಚರಣೆಗಳೆಂದು” ನಿರ್ಣಯಿಸಿಬಿಡುತ್ತಾರೆ. ಆ ಕಾರಣಕ್ಕೆ ಇತ್ತೀಚಿಗೆ ಎರಡು ರೀತಿಯ ಪ್ರವೃತ್ತಿಗಳು ಕಂಡುಬರುತ್ತಿವೆ; ಒಂದು, ಈ ಆಚರಣೆಗಳೆಲ್ಲ ಮೌಢ್ಯವೆಂದು ಸಾರಾಸಗಟಾಗಿ ತಿರಸ್ಕರಿಸಿಬಿಡುವುದು. ಎರಡು, ಹಲವು ಅಧ್ಯಯನಗಳು ಭಾರತೀಯ ಆಚರಣೆಗಳನ್ನು ವೈಜ್ಞಾನಿಕವೆಂದು ತೋರಿಸುವ ಪ್ರಯತ್ನದಲ್ಲಿ ತೊಡಗಿರುವುದು. ಎರಡೂ ಪ್ರವೃತ್ತಿಗಳು ಅಸಂಬದ್ಧವೆಂಬುದನ್ನು ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ತೋರಿಸಿಕೊಡುತ್ತಿವೆ (ವಿಟ್ಗೈನ್ ಸ್ಟೈನ್ ಮತ್ತಿತರರು). ಅಸಂಬದ್ಧವೇಕೆಂದರೆ; ಆಚರಣೆಗಳಿಗೂ-ನಂಬಿಕೆಗಳಿಗೂ ಸಂಬಂಧವಿಲ್ಲವೆಂಬುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿರುವ ಕಾರಣಕ್ಕೆ. ಇದನ್ನು ಇನ್ನೂ ಸ್ವಲ್ಪ ವಿವರಿಸುವ ಅಗತ್ಯವಿದೆಯಾದರೂ, ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮೇಲಿನ ಲೇಖನವನ್ನು ಓದಿ ಎಂದು ಭಿನ್ನವಿಸುತ್ತೇನೆ. ಆ ನಂತರ ಇಲ್ಲಿ ಏಳುವ ಪ್ರಶ್ನೆಗಳನ್ನ ಚರ್ಚಿಸೋಣ. ಆಮೇಲೆ ನೀವೇ ನಿರ್ಣಯಿಸಿ; ಈ ಅಧ್ಯಯನಗಳು anti-intellectual ಹಾಗು intellectual dishonestyಯೇ ಎಂಬುದನ್ನು.

  ನಮ್ಮ ಸಂಶೋಧನಾ ತಂಡ ಶಿರಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರಿಂದಾಗಿ ನನ್ನ ಪ್ರತಿಕ್ರಿಯೆ ತಡವಾಯಿತು, ಕ್ಷಮೆಇರಲಿ

  Like

 12. Santhosh Shetty
  ಜನವರಿ 6, 2011 ರಲ್ಲಿ 11:32 ಫೂರ್ವಾಹ್ನ

  ಎಲ್ಲಾ ಜಾತಿಗಳಲ್ಲಿಯೂ ಬ್ರಾಹ್ಮಣ್ಯವಿದೆಯೆಂದಾದರೆ ಬ್ರಾಹ್ಮಣ್ಯವೆಂದರೇನು ಎಂಬುದು ನಿಮಗೆ ಸ್ಪಷ್ಟವಿರುವಂತೆ ತೋರುತ್ತದೆ. ಅದನ್ನು ಸ್ವಲ್ಪ ವಿವರಿಸಿ. ಬಹುತೇಕ ಜಾತಿಗಳಲ್ಲಿ ಪುರೋಹಿತರಿರುವುದು ಬ್ರಾಹ್ಮಣ್ಯದ ಸಂಸಕೇತವಲ್ಲ. ಏಕೆಂದರೆ ಪೌರೋಹಿತ್ಯಕ್ಕೂ ಬ್ರಾಹ್ಮಣರಿಗೂ ಇರುವ ಏಕಸ್ವಾಮ್ಯ ಸಂಬಂಧವಿಲ್ಲ. ಆದ್ದರಿಂದ ಆ ಅಂಶದಿಂದ ಬ್ರಾಹ್ಮಣ್ಯ ಎಂಬುದು ಸಾಭೀತಾಗುವುದಿಲ್ಲ. ಬೇರೆ ಯಾವುದಾದರೂ ಸಂಗತಿ ಇದ್ದರೆ ತಿಳಿಸಿ ಚರ್ಚಿಸೋಣ.

  ನಾನು ಅಪ್ರಮಾಣಿಕನಂತೆ ನಿಮಗೆ ತೋರಲೂ ಬಹುದು, (ನಾನು ಪ್ರಾಮಾಣಿಕ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕೆಂಬುದು ನನಗೆ ಗೊತ್ತಿಲ್ಲ, ಸಾಧ್ಯವಾದರೆ ವಿಷಧೀಕರಿಸಿ). ಆದರೆ ಏಕೆ ಎಂಬುದನ್ನು ಸ್ಪಷ್ಟಪಡಿಸಿ. ವೈಚಾರಿಕತೆ ಎಂದರೇನು ಸ್ವಲ್ಪ ವಿವರಿಸಿ, ತದನಂತರ ಅದರ ಮೂಲಕ ಆಚರಣೆಗಳಿಗೆ ಅರ್ಥನೀಡುವುದು ಏಕೆ ಕಷ್ಟವೆಂಬುದನ್ನು ಚರ್ಚಿಸಬಹುದು. ವೈಚಾರಿಕತೆಯು ಆಧುನಿಕತೆಯನ್ನು ಮೌಢ್ಯವು ಸಾಂಪ್ರದಾಯಿಕತೆಯನ್ನು ಸೂಚಿಸುತ್ತದೆಯೇ? ಹೌದಾದರೆ ಅದರಲ್ಲಿ ಸಮಸ್ಯೆಗಳಿವೆ. ಅದನ್ನು ಚರ್ಚಿಸುವ ಮುನ್ನ ವೈಚಾರಿಕತೆಯ ಅರ್ಥವನ್ನು ಹಾಗೂ ಮೌಢ್ಯದ ಅರ್ಥಗಳನ್ನು ಸ್ಪಷ್ಟಪಡಿಸಿಕೊಂಡು ಮುಂದುವರೆಯುವ. ಅದನ್ನು ವಿವರಿಸುವ ಮೂಲಕ ಚರ್ಚೆಯನ್ನು ಮುಂದೊತ್ತೋಣ.

  ವೈಚಾರಿಕತೆ ವ್ಯರ್ಥವೋ ಅಥವಾ ಅರ್ಥಪೂರ್ಣವೋ ಎಂಬುದು ವೈಚಾರಿಕತೆ ಎಂದರೇನು ಎಂಬುದರ ಮೇಲೆ ಅವಲಂಬಿತವಾಗಿದೆ ಎಂಬುದು ನನ್ನ ಅಭಿಮತ. ಮತ್ತೊಮ್ಮೆ ಹೇಳುವುದಾದರೆ ಆಚರಣೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದು ಬೇರೆ, ಅವುಗಳ ಅಸ್ತಿತ್ವಕ್ಕೆ ವೈಜ್ಞಾನಿಕ ಅರ್ಥವನ್ನು ನೀಡುವುದು ಬೇರೆ. ದಯವಿಟ್ಟು ಅವರೆಡರ ನಡುವೆ ಗೊಂದಲ ಬೇಡ. ನಮ್ಮ ಅಧ್ಯಯನ ವೈಜ್ಞಾನಿಕವಾಗಿ ಹೇಗೆ ಮಾಡುವುದು ಎಂಬುದರ ಮೇಲೆ ನಿಂತಿದೆಯೋ ಹೊರತು ಅವುಗಳಿಗೆ ವೈಜ್ಞಾನಿಕ ಅರ್ಥವನ್ನು ನೀಡುವುದರ ಮೇಲೆ ನಿಂತಿಲ್ಲ.

  Like

 13. ಜನವರಿ 7, 2011 ರಲ್ಲಿ 12:26 ಅಪರಾಹ್ನ

  ನಿಮ್ಮ ಕ್ಷೇತ್ರಾಧ್ಯಯನದ ಬಗ್ಗೆ ನನಗೆ ವಿಶ್ವಾಸ ಕಾಣುತ್ತಿಲ್ಲ. ನಿಮ್ಮ Data ಹಾಗು analysis ಹಂಚಿಕೊಳ್ಳುವಂತಾದ ಮೇಲೆ – ಬ್ರಾಹ್ಮಣ, ಬ್ರಾಹ್ಮಣ್ಯ, ವೈಚಾರಿಕತೆ, ವೈಜ್ಞಾನಿಕ ಈ ಎಲ್ಲ ಸಂಗತಿಗಳ ಅರ್ಥಗಳನ್ನು ಚರ್ಚಿಸೋಣ. (Wittgensteinನ thin ice ಮೇಲೆ ಇದ್ದೀರೋ, rough ground ಮೇಲೆ ಇದ್ದೀರೋ ವಿಶದವಾಗುತ್ತದೆ!) ಆ ಪದಗಳಲ್ಲಿ ಹಲವನ್ನು ನೀವೇ ಮೊದಲು ಲೇಖನದಲ್ಲಿ ಬಳಸಿಯೂ ಅದಕ್ಕೆ ನಿಮ್ಮ ಅರ್ಥ ಹೇಳದೆ ನನ್ನನ್ನು ಈಗ ಏನು ಎಂದು ಕೇಳುತ್ತಿದ್ದೀರ!
  anti-intellectual ಹಾಗು intellectual dishonesty ಏಕನಿಸಿತು ಎಂದು ಮೇಲೆ ವಿವರಿಸಿದ್ದೇನೆ. ಈಗ ನನ್ನ ಅನುಮಾನ ಬಲವಾಗುವಂತಹ ಮತ್ತೊಂದು ಸಂಗತಿಯೂ ಕಂಡಿತು.

  ಮೇಲೆ ಪ್ರತಿಕ್ರಿಯೆ ಒಂದರಲ್ಲಿ ಕೊಟ್ಟ ಬ್ಲಾಗೊಂದರಲ್ಲಿ ಹೀಗೆಲ್ಲಾ ಇದೆ:
  “ಆದ್ದರಿಂದ ಊಟಮಾಡುವುದು ಕೇವಲ ದೇಹಪೋಷಣೆಗೆ ಅಲ್ಲ, ಅದು ಭಗವಂತನ ಉಪಾಸನೆಯ ಒಂದು ವಿಧ”
  “ಅದೇ ರೀತಿ ಸತ್ ಸಂಕಲ್ಪವಿದ್ದರೆ ಪ್ರಾಣಾಗ್ನಿಹೋತ್ರವಾದ ಭೋಜನದ ಉಳಿಕೆಯೂ ಕೂಡ ಪವಿತ್ರವೇ ಸರಿ.”
  “ಮನಸ್ಸಿನ ನಂಬಿಕೆಯು ದೃಢವಾಗಿದ್ದು, ಭಗವಂತನಲ್ಲಿ ಭಕ್ತಿಯಿದ್ದರೆ ಚರ್ಮ ರೋಗವೇಕೆ, ಸರ್ವ ರೋಗಗಳೂ ಗುಣವಾಗುವುದು”
  “ಪರಿಶಿಂಚನ ಮಾಡಿ, ಮಂತ್ರಪುರಸ್ಸರವಾಗಿ, ಪ್ರಾಣಾಗ್ನಿಹೋತ್ರವಾಗಿ ಊಟಮಾಡುವುದು ಬ್ರಾಹ್ಮಣರಲ್ಲದೆ ಮತ್ತಾರು? ಅದಕ್ಕೇ ಅಲ್ಲವೆ ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಿರುವುದು”
  “ಮಡೆಸ್ನಾನವೇ ಪರಿಹಾರವಲ್ಲ, ಮಡೆಸ್ನಾನವೂ ಒಂದು ಪರಿಹಾರ”
  “ತಿಳಿದವನಿಗೇ ಅಲ್ಲವೆ ಪಾವಿತ್ರ್ಯತೆಯ ಅರಿವು ಆಗುವುದು”
  “ಮಡೆಸ್ನಾನ ಮಾತ್ರವಲ್ಲದೆ ಆದಿ ಸುಬ್ರಹ್ಮಣ್ಯದ ನದಿಯಲ್ಲಿ ಮುಳುಗಿ ಸ್ನಾನ ಮಾಡುವುದರಿಂದಲು ಚರ್ಮ ರೋಗಗಳು ಗುಣವಾಗುತ್ತವೆ. ಮೈ, ಕೈಯಲ್ಲಿ ಗುಳ್ಳೆಗಳೆದ್ದರೆ, ಚರ್ಮ ರೋಗ ಬಂದರೆ ಬೆಳ್ಳಿಯ ನಾಗನನ್ನು ದೇವರಿಗೆ ಅರ್ಪಿಸುವುದು ಹಾಗು ಇದರಿಂದ ಪ್ರಯೋಜನ ಉಂಟಾಗುವುದನ್ನು ಬಹಳ ಪ್ರತ್ಯಕ್ಷವಾಗಿ ನಾನು ಕಂಡವನಿದ್ದೇನೆ”

  ಮೇಲಿನ ಪ್ರತಿಕ್ರಿಯೆಯಲ್ಲಿ ನೀವೇ – ” ಅಸಂಬದ್ಧವೇಕೆಂದರೆ; ಆಚರಣೆಗಳಿಗೂ-ನಂಬಿಕೆಗಳಿಗೂ ಸಂಬಂಧವಿಲ್ಲವೆಂಬುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿರುವ ಕಾರಣಕ್ಕೆ.” ಎಂದು ಹೇಳಿ ಆ ಬ್ಲಾಗಿನಲ್ಲಿ ಹೋಗಿ – “we too have similar thought, you can find here https://cslcku.wordpress.com” ಎಂದು ಸಾರಾಸಗಟಾಗಿ ಒಪ್ಪಿಕೊಂಡಿದ್ದೀರ!

  ನಿಮ್ಮ ಅಧ್ಯಯನ ಹಾಗು ನಿಲುವುಗಳು ಕೊಂಚ ಪಕ್ಕಾದ ಮೇಲೆ ಚರ್ಚೆ ಮಾಡುವುದು ಒಳಿತು ಎನಿಸಿ ಇಲ್ಲಿಗೆ ನನ್ನ ಮಾತುಕತೆ ಮುಗಿಸುತ್ತೇನೆ.

  ನನ್ನ ಪ್ರತಿಕ್ರಿಯೆಗಳನ್ನು ಓದಿ ಪ್ರತಿಕ್ರಯಿಸಿದ್ದಕ್ಕೆ ಥ್ಯಾಂಕ್ಸ್!

  Like

 14. praveen
  ಜನವರಿ 7, 2011 ರಲ್ಲಿ 2:18 ಅಪರಾಹ್ನ

  ಪ್ರಿಯ ಸುದರ್ಶನ್,

  >>ನಿಮ್ಮ ಕ್ಷೇತ್ರಾಧ್ಯಯನದ ಬಗ್ಗೆ ನನಗೆ ವಿಶ್ವಾಸ ಕಾಣುತ್ತಿಲ್ಲ. ನಿಮ್ಮ ಹಾಗು analysis ಹಂಚಿಕೊಳ್ಳುವಂತಾದ ಮೇಲೆ – ಬ್ರಾಹ್ಮಣ, ಬ್ರಾಹ್ಮಣ್ಯ, ವೈಚಾರಿಕತೆ, ವೈಜ್ಞಾನಿಕ ಈ ಎಲ್ಲ ಸಂಗತಿಗಳ ಅರ್ಥಗಳನ್ನು ಚರ್ಚಿಸೋಣ.
  ನಿಮಗೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಕಾರಣ ನೀವು ಕ್ಷೇತ್ರಾಧ್ಯಯನದ Data ಕೇಳುತ್ತಿದ್ದೀರಷ್ಟೆ. ಏಕೆಂದರೆ ಈ ಮೇಲಿನ ಲೇಖನದಲ್ಲಿ ಬ್ರಾಹ್ಮಣ, ಬ್ರಾಹ್ಮಣ್ಯ, ವೈಜ್ಞಾನಿಕ, ವೈಚಾರಿಕ ಎಂಬುದಕ್ಕೆ ಕ್ಷೇತ್ರಾಧ್ಯಯನವನ್ನು ನಾವು ಸೂಚಿಸುತ್ತಲೂ ಇಲ್ಲ. ಅಲ್ಲದೇ “ಬ್ರಾಹ್ಮಣ್ಯ” ಎಂಬುದನ್ನು ನಾವು ನಮ್ಮ ಲೇಖನದಲ್ಲಿ ಬಳಸಲೇ ಇಲ್ಲ. ನೀವೇ ಬಳಸಿದ ಪದಕ್ಕೆ ನೀವು ವಿವರಣೆ ನೀಡಲು ವಿಫಲರಾಗಿರುವುದು ಕಂಡು ಬರುತ್ತದೆ. ಅದರ ಜೊತೆಗೆ ನೀವು ಕೇಳಿದ ಪ್ರಶ್ನೆಗಳಿಗೆ ಕ್ಷೇತ್ರಾಧ್ಯಯನದಲ್ಲಿನ ಉತ್ತರವನ್ನು ನೀಡಿದ್ದೇನೆ.

  >>(Wittgensteinನ thin ice ಮೇಲೆ ಇದ್ದೀರೋ, rough ground ಮೇಲೆ ಇದ್ದೀರೋ ವಿಶದವಾಗುತ್ತದೆ!)
  ನಮ್ಮ ವಿಚಾರ ಯಾವುದರ ಮೇಲಾದರೂ ನಿಂತಿರಲಿ, ನಾವು ಹೇಳುವ ವಿಚಾರದಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದನ್ನು ಸಮರ್ಪಕ ವಾದವನ್ನು ಮಂಡಿಸುವ ಮೂಲಕ ಹೇಗೆ ತಪ್ಪು ಎಂದು ತೋರಿಸಿ. ಅದನ್ನು ಬಿಟ್ಟು…!

  >>ಈಗ ನನ್ನ ಅನುಮಾನ ಬಲವಾಗುವಂತಹ ಮತ್ತೊಂದು ಸಂಗತಿಯೂ ಕಂಡಿತು.
  ಅನುಮಾನಗಳು, ಅನಿಸಿಕೆಗಳನ್ನು ಹೊರತು ಪಡಿಸಿ ಚರ್ಚೆ ಸಾಧ್ಯವೆಂದುಕೊಂಡಿದ್ದೇನೆ.ಯಾಕೆಂದರೆ ನಮ್ಮಲ್ಲಿರುವ ಅನುಮಾನಗಳೇ ಕೆಲವೊಮ್ಮೆ ನಾವು ಬೇರೊಂದು ವಿಚಾರಗಳನ್ನು ಅರ್ಥಮಾಡಿಕೊಳ್ಳದಂತೆ ತಡೆಯುತ್ತದೆ.

  >>we too have similar thought, you can find here https://cslcku.wordpress.com” ಎಂದು ಸಾರಾಸಗಟಾಗಿ ಒಪ್ಪಿಕೊಂಡಿದ್ದೀರ!
  ಅವರ ವಿಚಾರಗಳನ್ನು ಒಪ್ಪಿಕೊಂಡಿರುವುದಲ್ಲ, ಬದಲಾಗಿ, ನಮ್ಮ ಲೇಖನವನ್ನು ನಮ್ಮ ಬ್ಲಾಗಿನಲ್ಲೇ ಓದಲಿ ಎಂಬ ಉದ್ದೇಶವಷ್ಟೆ.

  >>ನಿಮ್ಮ ಅಧ್ಯಯನ ಹಾಗು ನಿಲುವುಗಳು ಕೊಂಚ ಪಕ್ಕಾದ ಮೇಲೆ ಚರ್ಚೆ ಮಾಡುವುದು ಒಳಿತು ಎನಿಸಿ ಇಲ್ಲಿಗೆ ನನ್ನ ಮಾತುಕತೆ ಮುಗಿಸುತ್ತೇನೆ.
  ನಮ್ಮ ವಾದವು ನಿಮ್ಮ ವಿಚಾರಗಳಿಗಿಂತ ಪಕ್ಕಾಗಿದ್ದಾವೆ ಅದು ನಿಮ್ಮೊಂದಿಗಿನ ಚರ್ಚೆಯನ್ನು fallow ಮಾಡಿದ ಯಾರಿಗಾದರೂ ತಿಳಿಯುತ್ತದೆ. ಆದರೆ ನೀವು ಇಷ್ಟಾದರೂ ಸಂಯಮದಿಂದ ನಮ್ಮೊಂದಿಗೆ ಚರ್ಚಿಸಲು ತಮ್ಮ ಸಮಯವನ್ನು ವ್ಯಯಿಸಿದ್ದಕ್ಕೆ ಧನ್ಯವಾದಗಳು.

  ಈ ಬ್ಲಾಗಿನಲ್ಲಿ ಹಾಕುವ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ಬಯಸುತ್ತೇವೆ.

  ಪ್ರೀತಿಯಿಂದ
  ಪ್ರವೀಣ್
  ಸಿ. ಎಸ್. ಎಲ್. ಸಿ.

  Like

 15. ಜನವರಿ 8, 2011 ರಲ್ಲಿ 2:50 ಫೂರ್ವಾಹ್ನ

  >> ನೀವೇ ಬಳಸಿದ ಪದಕ್ಕೆ ನೀವು ವಿವರಣೆ ನೀಡಲು ವಿಫಲರಾಗಿರುವುದು ಕಂಡು ಬರುತ್ತದೆ.
  “ಬ್ರಾಹ್ಮಣ್ಯ”ವನ್ನು ಗುರುತಿಸುವುದು ಅಷ್ಟು ಕಷ್ಟವಲ್ಲ. ನನ್ನ ಮಟ್ಟಿಗೆ – ಯಾವುದೇ ಪಾವಿತ್ಯ್ರ ಹಾಗ ನಂಬಿಕೆಯನ್ನು ಸಮುದಾಯದ ಮೇಲೆ ಆಚರಣೆ ಹಾಗು ನಿಯಮಗಳ ಮೂಲಕ ಹೇರುವ/ಒತ್ತಾಯಿಸುವ ಪ್ರವೃತ್ತಿ ಅದು. ಈಗ “ಬ್ರಾಹ್ಮಣ್ಯ ಎಂದರೇನು?” ಎಂದು ನೀವು ಪ್ರಾಮಾಣಿಕವಾಗಿ ಕೇಳಿದ್ದರೆ “ವಿಧಿ ಆಚರಣೆಗಳೇ” ಸಂಶೋಧನೆಯ ಕೇಂದ್ರಬಿಂದು ಎಂದು ಹೇಳಿರುವ ನೀವು ಅದನ್ನು ಮೊದಲು ಗುರುತಿಸಿಕೊಳ್ಳುವುದು/ಅರಿಯುವುದು ಒಳ್ಳೆಯದು. ಇಲ್ಲಾ, ಗೊತ್ತಿದ್ದೂ ಕೇಳುತ್ತಿದ್ದೀರ ಎಂದರೆ ಅದೊಂದು ಪ್ರಾಮಾಣಿಕ ಪ್ರಶ್ನೆಯೇ? “ನಿಮ್ಮ ಅರ್ಥವೇನು?” ಎಂದು ಕೇಳಬೇಕೆಂದು ನಿಮಗೆ ಅನಿಸಿದ್ದರೆ – ನಾವು ಹೀಗೆ ಅರ್ಥೈಸುತ್ತೇವೆ – ನೀವು ಹೇಗೆ ಅರ್ಥೈಸುತ್ತೀರ ಎಂದು ಕೇಳುವುದು ಸೌಜನ್ಯವಾಗುತ್ತದೆ.

  >>ನಮ್ಮ ಲೇಖನವನ್ನು ನಮ್ಮ ಬ್ಲಾಗಿನಲ್ಲೇ ಓದಲಿ ಎಂಬ ಉದ್ದೇಶವಷ್ಟೆ
  “similar thought” ಅಲ್ಲ ಬೇರೆ ಉದ್ದೇಶವಿತ್ತು ಎಂದಾದರೆ ಅಲ್ಲಿನ ನಿಮ್ಮ ಪ್ರತಿಕ್ರಿಯೆ ಎಷ್ಟು ಪ್ರಾಮಾಣಿಕ ಎಂದು ತೋರಿಸುತ್ತದೆ!

  >>ನಿಮ್ಮೊಂದಿಗಿನ ಚರ್ಚೆಯನ್ನು fallow ಮಾಡಿದ ಯಾರಿಗಾದರೂ ತಿಳಿಯುತ್ತದೆ
  ಖಂಡಿತವಾಗಿಯೂ 🙂

  (ನಿಮ್ಮ ಕ್ಷೇತ್ರಾಧ್ಯಯನದ ಬಗ್ಗೆ ಬರೇ ಚರ್ಚೆಗಾಗಿ ಹೇಳಿದ್ದಲ್ಲ. ನನಗೆ ನಿಜವಾಗಿಯೂ ಅದರಲ್ಲಿ ಅಸಕ್ತಿ ಇದೆ. ಪಬ್ಲಿಷ್ ಆಗಿಲ್ಲದಿದ್ದರೆ ಅದನ್ನು ನನ್ನ ಈಮೈಲಿಗೆ ಕಳಿಸದರೂ ನಾನು ಋಣಿ)

  Like

 16. praveen
  ಜನವರಿ 10, 2011 ರಲ್ಲಿ 10:16 ಫೂರ್ವಾಹ್ನ

  >>“ಬ್ರಾಹ್ಮಣ್ಯ”ವನ್ನು ಗುರುತಿಸುವುದು ಅಷ್ಟು ಕಷ್ಟವಲ್ಲ. ನನ್ನ ಮಟ್ಟಿಗೆ – ಯಾವುದೇ ಪಾವಿತ್ಯ್ರ ಹಾಗ ನಂಬಿಕೆಯನ್ನು ಸಮುದಾಯದ ಮೇಲೆ ಆಚರಣೆ ಹಾಗು ನಿಯಮಗಳ ಮೂಲಕ ಹೇರುವ/ಒತ್ತಾಯಿಸುವ ಪ್ರವೃತ್ತಿ ಅದು.

  ಈ ಕುರಿತು ಚರ್ಚಿಸಲು ತಯಾರಿದ್ದೀರ ಎಂದಾದರೆ ಚರ್ಚೆಯನ್ನು ಇಲ್ಲಿಯೇ ಮುಂದುವರೆಸಬಹುದು. ಬದಲಾಗಿ ನೀವು ಕ್ಷೇತ್ರಾಧ್ಯಯನದ dataಗಳನ್ನು ನೋಡಿದ ನಂತರವೇ ಚರ್ಚೆಮಾಡುವುದೆಂದಾದರೆ, ನೀವು ಯಾವ ಸಂದರ್ಭದಲ್ಲಿ ಬೇಕಾದರೂ ನಮ್ಮ ಈ ಸಂಶೋಧನಾ ಕೇಂದ್ರಕ್ಕೆ ಬರಬಹುದು. ಬರಹರೂಪಕ್ಕೆ ತಂದಿರುವಷ್ಟನ್ನು ನಿಮಗೆ ನೀಡುತ್ತೇವೆ. ಇಲ್ಲಿಯೇ ಚರ್ಚೆಯನ್ನೂ ಮಾಡಬಹುದು. ನಿಮ್ಮ ಆಸಕ್ತಿಯನ್ನು ಅಭಿನಂದಿಸುತ್ತೇನೆ.
  ಧನ್ಯವಾದಗಳು

  Like

 17. ಜನವರಿ 22, 2011 ರಲ್ಲಿ 8:49 ಅಪರಾಹ್ನ

  something “similar” can be “similar” in context also. It need not be “similar” in content.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: