ಮುಖ ಪುಟ > Culture, Dharma, Hindu, Hinduism, Ritual > ಪ್ರಜಾವಾಣಿಗೆ ಬರೆದೆರಡು ಅಪ್ರಕಟಿತ ಪ್ರತಿಕ್ರಿಯೆಗಳು

ಪ್ರಜಾವಾಣಿಗೆ ಬರೆದೆರಡು ಅಪ್ರಕಟಿತ ಪ್ರತಿಕ್ರಿಯೆಗಳು

Replies to Prajavani about Maadesnana by Dr. Rajaram Hegde and Kavitha P N

ಮಡೆಸ್ನಾನದ  ಪರಿಣಾಮದ ಕುರಿತು ನಮಗೆಷ್ಟು ಸ್ಪಷ್ಟತೆ ಇದೆ?

ಮಡೆಸ್ನಾನದ ಕುರಿತ ಅಕ್ಷರ ಅವರ ಲೇಖನ ಹಾಗೂ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಈ ಪ್ರತಿಕ್ರಿಯೆಗಳಲ್ಲಿ ಎರಡು ಮೂರು ವಿಭಿನ್ನ ವಿಚಾರಗಳನ್ನು ಕುರಿತು ಗೊಂದಲವೇರ್ಪಟ್ಟಿದೆ ಎಂಬುದು ಗೋಚರವಾಗುತ್ತದೆ.

1) ಮೊದಲನೆಯದು ಯಾವುದು ಅವಮಾನ ಯಾವುದು ಅಲ್ಲ ಎಂಬ ವಿಷಯ: ಇದನ್ನು ಯಾರು ಪ್ರಮಾಣೀಕರಿಸಬೇಕು? ಅವಮಾನದ ಅನುಭವ ಆದವರೇ ಅದನ್ನು ಪ್ರಮಾಣೀಕರಿಸಬೇಕು ಎನ್ನುವುದು ನಮಗಿರುವ ಒಂದೇ ಮಾರ್ಗ. ನಂನಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳೋಣ: ನಮಗುಂಟಾದ ಆನುಭವವನ್ನು ಅಲ್ಲಗಳೆದು ಬೇರೆಯವರು ಅದಕ್ಕೆ ವ್ಯತಿರಿಕ್ತವಾದುದನ್ನು  ಪ್ರತಿಪಾದಿಸಿದಲ್ಲಿ  ಅವರು ನಮ್ಮನ್ನು ಪೆದ್ದಶಿಖಾಮಣಿಗಳು ಎಂಬುದಾಗಿ ಭಾವಿದಂತೇ. ಅದು ನಮಗೆ ಗೌರವ ತೋರುವ ರೀತಿಯಂತೂ ಅಲ್ಲ. ಮಡೆಸ್ನಾನದ ಆಚರಣೆಯು ಅದನ್ನು ಆಚರಿಸುವವರಲ್ಲಿ ಅವಮಾನದ ಅನುಭವವನ್ನು ಹುಟ್ಟಿಸುತ್ತದೆ ಎಂಬುದೇ ನಮ್ಮ ಆಕ್ಷೇಪಣೆಯಾಗಿದ್ದಲ್ಲಿ  ಹೊರಳಾಡುವವರೇ ಅದನ್ನು ಪ್ರಮಾಣೀಕರಿಸಬೇಕು. ಇಲ್ಲ, ಅವರು ಶತಮೂರ್ಖರು, ಅವರಿಗೇನೂ ಗೊತ್ತಾಗುವುದಿಲ್ಲ ಎಂಬ ಉದ್ಧಟತನ ನಮ್ಮಲ್ಲಿರಬೇಕು. ಅಂಥ ಸಂದರ್ಭದಲ್ಲಿ ನಾವು ನಮ್ಮ ಅನುಭವವೇ ಎಲ್ಲರದೂ ಆಗಿರಬೇಕು ಎಂದು ಹಟಹಿಡಿದಂತೆ ಆಗುತ್ತದೆ. ಅಕ್ಷರ ಅವರ ಲೇಖನವು ಈ ಪಾತಳಿಯಲ್ಲಿ ಆಕ್ಷೇಪಾರ್ಹವಾಗಲು ಕಾರಣವಿಲ್ಲ.

2) ಎರಡನೆಯದು ಇಂಥ ಆಚರಣೆಯ ಪರಿಣಾಮ ಏನು? ಎಂಬುದಕ್ಕೆ ಸಂಬಂಧಿಸಿದ ವಿಷಯ. ಒಂದು ಆಚರಣೆಯಿಂದ ಆಚರಿಸುವವರಿಗೆ ಕೆಡುಕಾಗುತ್ತದೆ ಎಂಬುದು  ಸ್ಪಷ್ಟವಾಗಿದ್ದರೂ ಕೂಡ ಆಚರಿಸುವವರು ಮುಗ್ಧತೆಯಿಂದ ಅಥವಾ ದೌರ್ಬಲ್ಯದಿಂದ ಅದರಲ್ಲಿ ಸುಖ ಕಾಣುತ್ತಿದ್ದರೆ ಅವರನ್ನು ಆ ಕುರಿತು ಮೂರನೆಯವರು ಎಚ್ಚರಿಸುವುದು ತಪ್ಪೆ? ನಮಗೆ ಸ್ಪಷ್ಟವಾಗಿ ಯಾವ ಆಚರಣೆಗಳಿಂದ ನಮ್ಮ ಸಮಾಜಕ್ಕೆ ಅಥವಾ ಅಂಥ ವ್ಯಕ್ತಿಗಳಿಗೆ ಕೆಡುಕಾಗುತ್ತದೆ ಎಂಬುದು ಗೊತ್ತಿದ್ದರೆ  ಅವರ/ಸಮಾಜದ ಮೇಲಿನ ಕಾಳಜಿಯಿಂದಾಗಿ ನಮ್ಮ ಮಧ್ಯಪ್ರವೇಶವು ಅಂಥಲ್ಲಿ ಸಮರ್ಥನೀಯವೇ ಆಗುತ್ತದೆ. ಉದಾಹರಣೆಗೆ ಸಕ್ಕರೆ ಖಾಯಿಲೆಯಿರುವವನು ಸಿಹಿಯನ್ನು ಅತಿಯಾಗಿ ತಿನ್ನುತ್ತಿದ್ದರೆ ಹಾಗೂ ತಾನು ಇರುವಷ್ಟು ದಿನ ಸುಖವಾಗಿದ್ದು ಸಾಯುತ್ತೇನೆ ಎಂಬುದಾಗಿ ವಾದಿಸಿದರೆ ಅದನ್ನು ನಿರ್ಲಕ್ಷಿಸಿ ಅವನ ಮನೆಯವರು ಅದನ್ನು ತಡೆಯಲು ಪ್ರಯತ್ನಿಸುವುದು ಮಾನವೀಯ ಕಾಳಜಿಯೇ ಆಗುತ್ತದೆ. ಬಹುಶ: ಈ ಆಚರಣೆಯನ್ನು ವಿರೋಧಿಸುವವರು ಅಕ್ಷರ ಅವರ ಬರವಣಿಗೆಯು ಈ ಸಂಬಂಧಿಸಿ ಅಪಾಯಕಾರಿಯಾಗಿದೆ ಎಂದು ವಿರೋಧಿಸುತ್ತಿದ್ದಾರೆ. ಅವರು ಈ ಮೇಲಿನ ಪರಸ್ಪರ ಬೇರೆ ಬೇರೆ ಪಾತಳಿಯ ವಿಷಯಗಳನ್ನು ಗೊಂದಲ ಮಾಡುತ್ತಿರುವುದರಿಂದ ಅಕ್ಷರ ಅವರ ಬರವಣಿಗೆಯನ್ನು ಈ ಹಂತಕ್ಕೆ ಅನುಚಿತವಾಗಿ ಜಗ್ಗಲಾಗುತ್ತಿದೆ ಅನಿಸುತ್ತಿದೆ.

3)  ಮೂರನೆಯದು ಜಾತಿ ವ್ಯವಸ್ಥೆ/ಪದ್ಧತಿಗೂ ಈ ಆಚರಣೆಗೂ ಸಂಬಂಧ ಕಲ್ಪಿಸುವುದು.  ಮಡೆಸ್ನಾನದ ಕೆಟ್ಟ ಪರಿಣಾಮದ ಕುರಿತು ವಾದಿಸುವ ನಿಟ್ಟಿನಲ್ಲಿ ಇದುವರೆಗೂ  ಬಂದ ಪ್ರತಿಕ್ರಿಯೆಗಳು ಜಾತಿವ್ಯವಸ್ಥೆ/ಪದ್ಧತಿ ಎಂಬ ಮತ್ತೊಂದು ಅಂಶವನ್ನು ಎಳೆದು ತಂದು ಅದರ ಪರಿಣಾಮದ ಕುರಿತು ಮಾತನಾಡುತ್ತವೆ. ಆದರೆ ಮಡೆಸ್ನಾನಕ್ಕೂ ಜಾತಿ ಪದ್ಧತಿಗೂ ಏನು ಸಂಬಂಧ ಎನ್ನುವುದನ್ನು ಯಾರೂ ಹೇಳುತ್ತಿಲ್ಲ. ಅವರು ತಿಳಿಸುವ ಒಂದೇ ಒಂದು ಸಾಕ್ಷಿಯೆಂದರೆ ಬ್ರಾಹ್ಮಣರ ಎಲೆಯ ಮೇಲೆ ಹೊರಳಾಡಲಾಗುತ್ತಿದೆ ಎಂಬುದು. ಆದರೆ ಎಲ್ಲ ಬ್ರಾಹ್ಮಣರ ಎಲೆಯ ಮೇಲೂ ಹೊರಳಾಡಲಾಗುವುದಿಲ್ಲ ಹಾಗೂ ಬ್ರಾಹ್ಮಣರೂ ಉಳಿದವರಂತೇ ಹೊರಳಾಡುತ್ತಾರೆ ಎಂಬುದು ಈ ಸಾಕ್ಷಿಯನ್ನು ಹೊಡೆದು ಹಾಕುತ್ತದೆ. ಇನ್ನೇನು ಕೆಟ್ಟ ಪರಿಣಾಮ ಎಂಬುದನ್ನು ಯಾರೂ ಹೇಳುತ್ತಿಲ್ಲ.

ನಮ್ಮ ಸಂಪ್ರದಾಯಗಳಲ್ಲೇ ಜ್ಞಾನಿಗಳು ಎಂದೂ ಇಂಥ ಆಚರಣೆಗಳನ್ನು ಸಮರ್ಥಿಸಲಿಲ್ಲ, ಬದಲಾಗಿ ಅವುಗಳನ್ನು ಗೇಲಿ ಮಾಡಿದರು ಎಂಬುದು ನಮಗೆಲ್ಲ ತಿಳಿದ ವಿಷಯ. ಆದರೆ ಅವರಿಗಿದ್ದ ಕಾರಣ ಬೇರೆಯೇ ಆಗಿತ್ತು. ಆತ್ಮಜ್ಷಾನಕ್ಕೆ ಇದು ಮಾರ್ಗವಲ್ಲವಾದುದರಿಂದ ಅದು ಅಜ್ಞಾನವಾಗಿದೆ ಹಾಗೂ ಇದು ನಿಜವಾದ ಭಕ್ತಿಮಾರ್ಗವೂ ಅಲ್ಲವಾದುದರಿಂದ ಇದು ಢಾಂಬಿಕತೆಯೋ, ಮೌಢ್ಯವೋ ಇಲ್ಲ ಉದರವೈರಾಗ್ಯವಷ್ಟೇ ಆಗಬಹುದು ಎಂಬುದಾಗಿ ಅವರು ಇಂಥ ಆಚರಣೆಗಳನ್ನು ಟೀಕಿಸಿದ್ದಾರೆ. ಆತ್ಮಜ್ಞಾನವೇ ನಮ್ಮ ಗುರಿಯಾದಲ್ಲಿ ಇಂಥ ಆಚಣೆಗಳು ಹೇಗೆ ನಮ್ಮನ್ನು ಅಲ್ಲಿಗೆ ತಲುಪಿಸಲಾರವು ಅಥವಾ ಮೌಢ್ಯಗಳಾಗುತ್ತವೆ ಎಂಬುದನ್ನು ಅವರು ಮನವರಿಕೆ ಮಾಡಿಕೊಡುತ್ತಾರೆ. ಆದರೆ ಅವರ ಟೀಕೆಯ ಗುರಿ ಮೋಕ್ಷಾಕಾಂಕ್ಷಿಯಾದ ವ್ಯಕ್ತಿಯೊಬ್ಬನನ್ನು ಎಚ್ಚರಿಸುವುದೇ ಹೊರತೂ  ಆಚರಣೆಗಳನ್ನು ನಿಲ್ಲಿಸುವ ಕುರಿತಲ್ಲ ಅಥವಾ ಮೋಕ್ಷಾಕಾಂಕ್ಷೆಯೇ ಇಲ್ಲದವರನ್ನು ಕುರಿತೂ ಅಲ್ಲ. ಇಂಥ ಆಚರಣೆಗಳು ಹಾಗೂ ಅವನ್ನು ಆಚರಿಸುವವರು ಎಲ್ಲ ಕಾಲದಲ್ಲೂ ಇದ್ದರೆಂಬುದನ್ನು ನಮ್ಮ ಜ್ಞಾನ ಸಂಪ್ರದಾಯಗಳು ಒಪ್ಪಿಕೊಂಡ ಹಾಗಿದೆ. ಹಾಗಾದರೆ ಈ ಆಚರಣೆಗಳನ್ನು ಹೇಗೆ 21ನೇ ಶತಮಾನದ ಪರಿಭಾಷೆಯಲ್ಲಿ ಇಡಬೇಕು?

ಅಕ್ಷರ ಅವರು ಬಾಲಗಂಗಾಧರ ಹಾಗೂ ಅವರ ಶಿಷ್ಯರಿಂದ ಪ್ರಭಾವಿತರಾಗಿದ್ದಾರೆ ಎಂಬ ಆಕ್ಷೇಪಣೆಯೂ ಬಂದಿತು. ಆದರೆ ಬಾಲಗಂಗಾಧರರು ಸಂಪ್ರದಾಯದ ಕುರಿತು ಮಾತನಾಡುವಾಗ ಏನು ಹೇಳುತ್ತಾರೆ? ಇಂಥ ಆಚರಣೆಗಳ ವೈಶಿಷ್ಟ್ಯತೆ ಎಂದರೆ ಅವುಗಳನ್ನು ಮುಂದುವರೆಸಿಕೊಂಡು ಬರಲಿಕ್ಕೆ ಕಾರಣಗಳು ಗೊತ್ತಿರಬೇಕಿಲ್ಲ. ಅವು ಪೂರ್ವಜರನ್ನು ಅನುಕರಿಸಿ ಪಡೆದುಕೊಂಡ ಆಚರಣೆಗಳು. ಆದರೆ ಅವುಗಳನ್ನು ನಿಲ್ಲಿಸಲಿಕ್ಕೆ ಕಾರಣಗಳು ಕಂಡುಬಂದಾಗ ಅವುಗಳನ್ನು ಜನರು ನಿಲ್ಲಿಸುತ್ತಾರೆ.  ಅಂದರೆ ಕಾರಣ ಸಿಗುವವರೆಗೆ ಜನ ಈ ಆಚರಣೆಗಳನ್ನು ಮುಂದುವರೆಸಿಕೊಂಡು ಬರುತ್ತಾರೆ. ಭಾರತೀಯ ಸಂಪ್ರದಾಯಗಳು ಇಂಥ ಎಷ್ಟೋ ಪದ್ಧತಿಗಳನ್ನು ಬಿಡುತ್ತ ಸಾಗಿಬಂದಿವೆ. ಅಂಥ ಸಂದರ್ಭಗಳು ಎದುರಾದಾಗ ಯಾವ ಚಳುವಳಿಗಳೂ ಇಲ್ಲದೇ ಜನರು ಸಾಂಪ್ರದಾಯಿಕ ಆಚರಣೆಗಳನ್ನು ಬದಲಾಯಿಸಬಲ್ಲರು ಎಂಬುದು ನಮ್ಮೆಲ್ಲರ ಅನುಭವಕ್ಕೆ ಬರುವ ಸಂಗತಿ. ಕೆಲವೊಮ್ಮೆ ಚಳುವಳಿಗಾರರ ಮಧ್ಯಪ್ರವೇಶವೂ ಅದಕ್ಕೆ ಬೇಕಾಗಬಹುದು ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಮಡೆಸ್ನಾನದ ಆಚರಣೆಯು ನಿಲ್ಲಬೇಕೆಂದು ವಾದಿಸುವವರು ನೀಡುವ ಕಾರಣ ಆಚರಿಸುವವರಿಗೆ ಗಂಭೀರವಾಗಿ ಕಾಣುತ್ತದೆಯೆ?  ಅದರ ಕೆಟ್ಟ ಪರಿಣಾಮದ ಕುರಿತು ನಮಗೆ ಎಷ್ಟು ಸ್ಪಷ್ಟತೆ ಇದೆ? ನಾವು ಹೇಳುವ ಒಂದೇ ಕಾರಣವಾದ ಜಾತಿ ಪದ್ಧತಿಗೂ ಆ ಆಚರಣೆಗೂ ಇರುವ ಸಂಬಂಧ ನಮಗೇ ಕಟ್ಟುಕಥೆಯಂತೆ ಕಾಣುತ್ತಿರುವಾಗ, ಆಚರಿಸುವವರ ಅನುಭವಕ್ಕೇ ಬರದಿರುವಾಗ ಅವರಿಗೆ ಅದು ಹೇಗೆ ಮನದಟ್ಟಾದೀತು?  ನಾವು ಅವರಿಗೆ ತಿಳಿಸುತ್ತಿರುವ ಮತ್ತೊಂದು  ಕಾರಣವೆಂದರೆ ಇದು ಮೂಢನಂಬಿಕೆ ಹಾಗಾಗಿ ಬಿಟ್ಟುಬಿಡಿರಿ ಎಂಬುದು. ಮೂಢನಂಬಿಕೆ ಎಂದರೆ ಅವೈಜ್ಞಾನಿಕ ಆಚರಣೆಗಳು. ಮಡೆಸ್ನಾನದಂಥ ಆಚರಣೆಗಳನ್ನು ಆಚರಿಸಲಿಕ್ಕೆ  ಜನರಿಗೆ ವೈಜ್ಞಾನಿಕ ಕಾರಣಗಳೇ ಬೇಡವಾದಾಗ ನಾವು ಹೇಳುವ ಮಾತೂ ಅವರಿಗೆ ಅನಗತ್ಯವಾಗುತ್ತದೆ. ಮಡೆಸ್ನಾನದ ಕುರಿತು ಏನನ್ನು ಹೇಳಬೇಕಾದರೂ ಈ ವಸ್ತುಸ್ಥಿತಿಯನ್ನು ಮೊದಲು ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಡಾ. ರಾಜಾರಾಮ ಹೆಗಡೆ

…………………………………………………………………………………………………………………………………………………………………..

……………………………………………………………………………………………………………………………………………………………………

ಹೊಸ ಚಿಂತನೆಗಳಿಗೆ ಸ್ವಾಗತವಿರಲಿ:

ಇತ್ತೀಚಿಗೆಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನವು ಬಹು ಚರ್ಚಿತವಾಗುತ್ತಿರುವ ವಿಷಯವಾಗಿದೆ.ಮಡೆಸ್ನಾನದಕುರಿತುಅಕ್ಷರಅವರ ಲೇಖನವು ನಾನಾ ರೀತಿಯ ಪ್ರತಿಕ್ರಿಯೆಗಳು ಬರುವಂತೆ ಮಾಡಿದೆ.ಅವರ ಒಟ್ಟಾರೆ ವಾದವೆಂದರೆ, ಮಡೆಸ್ನಾನ ಆಚರಣೆಯು ಶ್ರದ್ಧಾವಂತರ ನಂಬಿಕೆಯನ್ನು ಆಧರಿಸಿದೆ, ಹಾಗಾಗಿಯೇ ಬಡವರಿಂದ ಹಿಡಿದು, ಶ್ರೀಮಂತರವರೆಗೆ ಹಾಗೂ ಎಲ್ಲ ಜಾತಿಯ ಜನರು ಕೂಡ ಅದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದ್ದರಿಂದಲೇ ಕೇವಲ ಅದನ್ನು’ಅವಮಾನ’ವೆಂದೋ, ‘ಶೋಷಣೆ’ಎಂದೋ, ‘ಅಂಧಶ್ರದ್ಧೆ’ ಮತ್ತು’ ಕಂದಾಚಾರ’ ಎಂಬ ತಲೆಪಟ್ಟಿಯೊಂದಿಗೆ ಆಚರಣೆಯನ್ನು ತಳುಕುಹಾಕಿ ಅರ್ಥೈಸಿಕೊಳ್ಳುವುದಕ್ಕಿಂತ ಅದರ ಕುರಿತು ವಿಭಿನ್ನವಾಗಿ ಚಿಂತಿಸುವ ತುರ್ತು ಇಂದಿದೆ ಎಂದಿದ್ದಾರೆ. ಇದು ಒಪ್ಪಿಕೊಳ್ಳುವ ವಾದವಾಗಿದೆ ಏಕೆಂದರೆ ಹೊಸ ರೀತಿಯ ಚಿಂತನೆಯ ತುರ್ತಿನ ಕುರಿತು ಮಾತನಾಡುತ್ತಿದ್ದಾರೆ.

ತದನಂತರ ಅಕ್ಷರರ ವಾದಗಳಿಗೆ ಪ್ರತಿವಾದಗಳು ಬಂದಿದ್ದು ಅವುಗಳಲ್ಲಿ ಫಣಿರಾಜ ಅವರ ವಾದವು ಕೂಡಾ ಒಂದು. ಫಣಿರಾಜ ಹೇಳುವಂತೆ ಅಕ್ಷರವರು ಬಂಡುಕೋರರಿಗೆ ಬಾಣವನ್ನು ಹೂಡಿದ್ದಾರೆ. ಅವರ ಪ್ರಕಾರ ಮಡೆಸ್ನಾನವನ್ನು ವಿರೋಧಿಸುತ್ತಿರುವ ಬಂಡುಕೋರರು ವಿರೋಧಿಸುವುದು ಎರಡನೇಯ ವರ್ಗದವರನ್ನೇ ಹೊರತೂ ಹರಕೆಯನ್ನು ಹೊತ್ತ ಮೊದಲ ವರ್ಗದಜನರನ್ನಲ್ಲ. ಹರಕೆ, ಜಾತಿ ಮತ್ತು ಸಾಮಾಜಿಕ ಅಧಿಕಾರಗಳ ಸಲಕರಣೆ ಮಾಡಿಕೊಂಡಿರುವ ಎರಡನೇಯ ವರ್ಗದ ಭಕ್ತರು ದೇವಾಲಯ ವ್ಯವಸ್ಥೆ ಹಾಗೂ ಹರಾಜನ್ನು ನಡೆಸುವ ಮಂದಿ.ಆದರೆ ಫಣಿರಾಜಅವರ ಈ ಪ್ರತಿವಾದವು ಕೆಲವು ಅಸ್ಪಷ್ಟತೆ ಮತ್ತು ಸಮಸ್ಯೆಗಳನ್ನು  ಹೊಂದಿದೆ:

1.      ಲೇಖಕರು ವಾದಿಸುವಂತೆ ಮೊದಲನೆಯೇ ವರ್ಗದವರಾದ ಹರಕೆಯವರು ದುಖಿಃತ ಸಮುದಾಯದವರು ಇನ್ನು ಎರಡನೇಯ ವರ್ಗದವರಾದ ಹರಾಜಿನರು ಲೆಕ್ಕಾಚಾರದ ಮಂದಿ, ಲೆಕ್ಕಾಚಾರದ ಮಂದಿಯವರಿಗೆ ಆಚರಣೆ ನೇರವೇರಿದರೆ ವೈದ್ಯಕೀಯ ಖರ್ಚ ಉಳಿಯಿತು, ಇಲ್ಲದಿದ್ದರೆ ದೈವಶ್ರದ್ಧೆಯ ಪ್ರದರ್ಶನವಂತೂ ಆಯಿತು ಎಂಬ ಮನಸ್ಥಿತಿಯವರು. ಲೇಖಕರು ಹೀಗೆ ಹೇಳುವ ಮೂಲಕ ಮೊದಲನೆಯ ವರ್ಗದವರು ‘ಅಸಹಾಯ’ಕರು ಹಾಗೂ ಎರಡನೇಯ ವರ್ಗದವರು ‘ಡಾಂಭಿಕ’ರೆಂದು ಪರೋಕ್ಷವಾಗಿ ಕರೆಯುತ್ತಿದ್ದಾರೆ. ಇನ್ನೂ ಮಡೆಸ್ನಾನ ಆಚರಣೆಯನ್ನು ಪ್ರತಿಭಟಿಸುವ ಬಂಡುಕೋರರ ಕುರಿತು ಕೂಡ ಸಾರ್ವಜನಿಕರಲ್ಲಿ ಸಾಮಾನ್ಯ ಅಭಿಪ್ರಾಯವಿದೆ : ಬಂಡುಕೋರರು ಈ ರೀತಿಯ ಪ್ರತಿಭಟನೆಗಳನ್ನು ಮಾಡಿಕೊಂಡೆ ತಮ್ಮ ಸ್ಥಾನವನ್ನು ಮತ್ತು ಚಳುವಳಿಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಇರದಿದ್ದರೆ ಅವರ ಚಳುವಳಿಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಆದುದರಿಂದಲೇ ಇಂತಹ ಪ್ರತಿಭಟನೆಗಳನ್ನು ಬಂಡುಕೋರರು ಆಗಾಗ್ಗೆ ಮಾಡುತ್ತಾರೆ ಎಂಬುದು. ಚಾಲ್ತಿಯಲ್ಲಿರುವ ಈ ಅಭಿಪ್ರಾಯ ನೋಡಿದರೆ ಬಂಡುಕೋರರು ಕೂಡ ಎರಡನೇ ವರ್ಗಕ್ಕೆ ಸೇರುತ್ತಾರಲ್ಲವೇ?

2.     ಆಚರಣೆಗಳನ್ನು ಪಾಲಿಸುವವರಿಗೆ ಇದರ ಕುರಿತು ತಕರಾರಿಲ್ಲ ಆದರೆ ತಕರಾರಿರುವುದು ಹೊರಗಿನ ಬುದ್ಧಿಜೀವಿಗಳು ಎನಿಸಿಕೊಂಡವರಿಗೆ ಮಾತ್ರ. ಅಂದರೆ ಈ ರೀತಿಯ ವಿವರಣೆಗಳು ಹೊರಗಡೆಯಿಂದ ಆಚರಣೆಯನ್ನು ಅವಲೋಕಿಸಿ ನಿರ್ದೀಷ್ಟ (ಅವರ)  ಜ್ಞಾನದ ಮಿತಿಯಲ್ಲಿ ವಿವರಿಸುವ ಕೆಲಸವೇ ಹೊರತು ಆಚರಿಸುವವರದಲ್ಲ.

3.      ಫಣಿರಾಜ ಅವರ ತಗಾದೆ ಇರುವುದು ದೇವಳದ ಆಡಳಿತ ಮಂಡಳಿಯವರ ವಿರುದ್ಧವೋ ಅಥವಾ ಆಚರಣೆಯ ವಿರುದ್ಧವೋ?  ಆಡಳಿತ ಮಂಡಳಿಯವರ ಕುತಂತ್ರ ವಿಷಯದಿಂದ, ಆಚರಣೆಯನ್ನು (ಮಡೆಸ್ನಾನ)  ಪ್ರತ್ಯೇಕವಾಗಿ ನೋಡಿದಾಗ ಮಾತ್ರ ಅಕ್ಷರ ಅವರ ವಾದವನ್ನು ಗ್ರಹಿಸಿಕೊಳ್ಳಲು ಸಾಧ್ಯ. ಏಕೆಂದರೆ ಅಕ್ಷರ ಅವರು ಮಾತನಾಡುತ್ತಿರುವುದು ಮಡೆಸ್ನಾನ ಆಚರಣೆಯನ್ನು ಪರ್ಯಾಯವಾಗಿ ಚಿಂತಿಸುವ ಕುರಿತು ಹೊರತೆ ಆಡಳಿತ ಮಂಡಳಿಯ ಕುತಂತ್ರದ ಕುರಿತು ಅಲ್ಲ.

ಕೊನೆಯದಾಗಿ ಹೊಸ ದೃಷ್ಟಿಕೋನಗಳಲ್ಲಿ ಚಿಂತಿಸುವ ಎಳೆಯನ್ನು ಅಕ್ಷರವರು ಮುಂದಿಡುತ್ತಿದ್ದಾರೆ.ಅಂತಹ ಒಂದು ಪ್ರಯತ್ನವನ್ನು ಮಾಡದೇ ಜ್ಞಾನದ ಯಥಾಸ್ಥಿತಿಯನ್ನು ಕಾಪಾಡುವ ಕಾರ್ಯ ಫಣಿರಾಜ ಮಾಡುತ್ತಿದ್ದಾರೆ.

ಕವಿತ.ಪಿ.ಎನ್.

Advertisements
Categories: Culture, Dharma, Hindu, Hinduism, Ritual
 1. ರಾಜೇಶ್
  ಏಪ್ರಿಲ್ 8, 2011 ರಲ್ಲಿ 7:20 ಅಪರಾಹ್ನ

  ಸರ್, ಪ್ರಜಾವಾಣಿಯೆನ್ನುವುದು ಸಂಪ್ರದಾಯ ವಿರೋಧಿಗಳ ಪುರೋಹಿತಶಾಹಿಯ ಕೈಲಿದೆ ಹಾಗಾಗಿ ನಿಮ್ಮ ಲೇಖನಗಳು ಅಲ್ಲಿ ಪ್ರಕಟವಾಗಲು ಸಾಧ್ಯವಿಲ್ಲ

  Like

 2. jayan
  ಆಗಷ್ಟ್ 8, 2011 ರಲ್ಲಿ 8:41 ಅಪರಾಹ್ನ

  only peoples like you are an able to comment like this idiotic thoughts. go hell.

  Like

 3. ಆಗಷ್ಟ್ 8, 2011 ರಲ್ಲಿ 9:01 ಅಪರಾಹ್ನ

  Give me your better argument and be happy in heaven

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: