ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

invisible-hands1ಅಂಕಣ 4: ವೈವಿಧ್ಯ ಸಮಾಜದ ಪ್ರತಿಯೊಂದು ಆಚರಣೆಗಳಲ್ಲೂ ’ಕಾಣದ ಕೈಗಳ’ ಇವೆಯೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ಇತ್ತೀಚೆಗೆ ಮಡೆಸ್ನಾನವನ್ನು ನಿಷೇಧಿಸುವ ಕುರಿತು ಹೈಕೋರ್ಟನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಒಂದು ಕಾನೂನಿನ ಸಮಸ್ಯೆ ಉದ್ಭವವಾಯಿತು. ಆ ಆಚರಣೆಯನ್ನು ನಡೆಸುವ ಬುಡಕಟ್ಟುಗಳಾದ ಮಲೆಕುಡಿಯರು ಇಚ್ಛಾಪೂರ್ವಕವಾಗಿ ಅದನ್ನು ನಡೆಸುತ್ತಿದ್ದಾರೆ, ಹಾಗಾಗಿ ಅದನ್ನು ಮಾನವ ಹಕ್ಕಿನ ಉಲ್ಲಂಘನೆ ಎಂಬುದಾಗಿ ಹೇಗೆ ಹೇಳುತ್ತೀರಿ? ಎಂಬುದಾಗಿ ಒಂದು ಪಕ್ಷದವರ ವಾದ. ಅದಕ್ಕೆ ವಿರೋಧಿ ವಕೀಲರ ಉತ್ತರವೆಂದರೆ ‘ ಅವರನ್ನು ಹಾಗೆ ಯಾರೋ ನಂಬಿಸಿಬಿಟ್ಟಿದ್ದಾರೆ, ಹಾಗಾಗಿ ಅದು ಸ್ವ ಇಚ್ಛೆಯಲ್ಲ’. ಯಾರು ಅವರನ್ನು ನಂಬಿಸಿದವರು? ನಂತರ ಕನ್ನಡದ ಒಂದು ಸುಪ್ರಸಿದ್ಧ ಪತ್ರಿಕೆಯ ಅಂಕಣವೊಂದರಲ್ಲಿ ಅವರನ್ನು ನಂಬಿಸಿದ ಕಾಣದ ಕೈಗಳು ಯಾವವು ಎಂಬುದನ್ನು ಕೂಡಾ ಬಹಿರಂಗಪಡಿಸಲಾಯಿತು. ಅದೆಂದರೆ ಬ್ರಾಹ್ಮಣ ಪುರೋಹಿತಶಾಹಿ.
ಇದು ಕೇವಲ ಮಡೆಸ್ನಾನದ ಸಂದರ್ಭಕ್ಕೊಂದೇ ಅಲ್ಲ. ನಮ್ಮಲ್ಲಿ ಆಗಾಗ ಸಾಂಪ್ರದಾಯಿಕ ಆಚರಣೆಗಳ (ಮೂಢ ನಂಬಿಕೆಗಳ) ಕುರಿತು ಇಂಥ ವಿವಾದಗಳು ಏಳುತ್ತಲೇ ಇರುತ್ತವೆ, ಹಾಗೂ ಅವುಗಳನ್ನು ರೂಢಿಸಿದ ಅಪರಾಧಿಗಳು ಯಾರೆಂಬ ಕುರಿತು ಯಾವ ಪ್ರಗತಿಪರರೂ ತಡವರಿಸಬೇಕಿಲ್ಲ. ಅದೇ ಕಾಣದ ಕೈಗಳು ಅಲ್ಲೂ ಇರುತ್ತವೆ ಎಂಬುದು ಗ್ಯಾರಂಟಿ.
ಮಡೆಸ್ನಾನದಲ್ಲಂತೂ ಬ್ರಾಹ್ಮಣರು ತಾವೇ ಶ್ರೇಷ್ಠರೆಂಬುದನ್ನು ಕೆಳಜಾತಿಗಳಿಗೆ ಮನದಟ್ಟುಮಾಡಿಕೊಡಲು ತಮ್ಮ ಎಂಜಲೆಲೆಯ ಮೇಲೆ ಉರುಳಾಡುವುದನ್ನು ರೂಢಿಸಿದ್ದಾರೆ ಎನ್ನಲಾಗುತ್ತಿದೆ. ಬ್ರಾಹ್ಮಣರ ಎಲೆಯ ಮೇಲೆ ಕೆಲವರು ಉರುಳಾಡಿದರೆಂದರೆ ಅವರೇ ಅದನ್ನು ರೂಢಿಸಿದವರೆಂಬುದಾಗಿ ಯಾವ ತರ್ಕದ ಮೂಲಕ ನಿರ್ಣಯಿಸಲು ಸಾಧ್ಯ? ಜನರನ್ನು ಇಷ್ಟು ಸುಲಭವಾಗಿ ನಂಬಿಸಲು ಸಾಧ್ಯವಾಗುತ್ತದೆ ಅಂತಾದಲ್ಲಿ ಬ್ರಾಹ್ಮಣರಿರುವ ಎಲ್ಲಾ ದೇವಾಲಯಗಳಲ್ಲೂ, ಎಲ್ಲಾ ಸ್ಥಳಗಳಲ್ಲೂ ಈ ಆಚರಣೆಯನ್ನು ಅವರು ಏಕೆ ಜಾರಿಯಲ್ಲಿ ತರಲಿಲ್ಲ? ಚಂದ್ರಗುತ್ತಿಯ ಬತ್ತಲೆ ಸೇವೆಯು ವಿವಾದಾಸ್ಪದವಾಗಿ ಅದನ್ನು ಸಕರ್ಾರವು ನಿಷೇಧಿಸಲು ಪ್ರಯತ್ನಿಸಿದಾಗ ಅಲ್ಲಿದ್ದ ಜೋಗತಿಯರು ಹಾಗೂ ಸ್ಥಳೀಯ ಭಕ್ತರು ಹಿಂಸಾತ್ಮಕವಾಗಿ ಪ್ರತಿಭಟಿಸಿದ್ದು ಎಲ್ಲರಿಗೂ ತಿಳಿದ ವಿಷಯ. ನಂತರ ಅದರ ಕುರಿತು ನಾಟಕವೊಂದನ್ನು ರಚಿಸಲಾಯಿತು. ಅದರಲ್ಲಿ ಒಬ್ಬ ಬ್ರಾಹ್ಮಣನು ಬತ್ತಲೆ ಸೇವೆಗೆ ಪ್ರಚೋದನೆ ನೀಡುತ್ತ ಜೋಗತಿಯರ ಹಿಂದೆ ನಿಂತಿರುತ್ತಾನೆ. ಹೀಗೆ ಬೀದಿಯಲ್ಲಿ ಕಾಣದ ಕೈ ನಾಟಕದಲ್ಲಿ ಪ್ರಕಟವಾಗುತ್ತದೆ.
ಇಂಥ ಉದಾಹರಣೆಗಳಲ್ಲಿ ಕಡೇ ಪಕ್ಷ ಬ್ರಾಹ್ಮಣರು ಅಂಥ ಸ್ಥಳಗಳಲ್ಲಿ ಪೂಜಾರಿಗಳಾಗಿಯೊ, ಪುರೋಹಿತರಾಗಿಯೊ ಉಪಸ್ಥಿತರಿರುತ್ತಾರೆ. ಆದರೆ ಇನ್ನೂ ಎಷ್ಟೋ ಉದಾಹರಣೆಗಳಲ್ಲಿ ಅಲ್ಲಿ ಯಾವ ಬ್ರಾಹ್ಮಣರೂ ಕಂಡುಬರುವುದಿಲ್ಲ. ಬ್ರಾಹ್ಮಣೇತರ ಪೂಜಾರಿಗಳೂ, ದೇವಾಲಯಗಳೂ ವಿಫುಲವಾಗಿಯೇ ಇವೆ ಹಾಗೂ ಅಂಥಲ್ಲಿ ಇದಕ್ಕೂ ಹಿಂಸಾತ್ಮಕ ಆಚರಣೆಗಳೂ ಪ್ರಚಲಿತದಲ್ಲಿವೆ. ಆದರೂ ಅಂಥ ಆಚರಣೆಗಳ ಹಿಂದೆ ಕೂಡ ಬ್ರಾಹ್ಮಣರ ಕೈವಾಡವಿದೆ ಎಂಬುದರಲ್ಲಿ ಪ್ರಗತಿಪರರಿಗೆ ಸಂದೇಹವಿಲ್ಲ.

ಈಗ ಒಂದು ಕಾಲ್ಪನಿಕ ಸಂಭಾಷಣೆಯ ಮೂಲಕ ಪ್ರಗತಿಪರರ ವಾದದ ಸ್ವರೂಪವನ್ನು ತಿಳಿದುಕೊಳ್ಳೋಣ.
ವಾದಿ: ಈ ಕಾಣದ ಕೈಗಳಿಂದ ಮಾನವ ಹಕ್ಕುಗಳ ದಮನವಾಗುತ್ತಿದೆ.
ಆಕ್ಷೇಪಣೆ: ಆದರೆ ಇಂಥ ವಾದದಿಂದ ಕೆಳಜಾತಿಗಳ ಮಾನವ ಹಕ್ಕನ್ನು ನಿರಾಕರಿಸಿದಂತಾಗುವುದಿಲ್ಲವೆ? ಯಾರೋ ಒಂದಿಷ್ಟು ಬ್ರಾಹ್ಮಣರು ಏನು ಹೇಳಿದರೂ ಒಂದಿಷ್ಟೂ ಯೋಚಿಸದೇ ನಂಬಿಬಿಡುತ್ತಾರೆ ಎನ್ನುತ್ತಿದ್ದೀರಿ. ಯಾರನ್ನಾದರೂ ಮಂದಮತಿಗಳು ಅಥವಾ ಹುಚ್ಚರು ಎಂದು ನೇರವಾಗಿ ಹೇಳಲು ಕಷ್ಟವಾದರೆ ಹೀಗೆ ಹೇಳಿದರೆ ಸಾಕಲ್ಲವೆ? ಅದೂ ಒಬ್ಬಿಬ್ಬರಲ್ಲ, ಭಾರತದ ಸಮಸ್ತ ಕೆಳಜಾತಿಯ ಹಾಗೂ ಬುಡಕಟ್ಟುಗಳ ಜನರೆಲ್ಲ ಶತಶತಮಾನಗಳಿಂದ ಹೀಗೇ ಇದ್ದಾರೆ ಎಂಬುದಾಗಿ ವಾದಿಸುತ್ತಿದ್ದೀರಿ. ಕೆಲವು ಮನುಷ್ಯ ಸಮುದಾಯಗಳು ವಿಕಾಸಪಥವನ್ನು ತುಳಿಯದೇ ಪ್ರಾಕೃತಾವಸ್ಥೆಯಲ್ಲೇ ಇವೆ ಎಂದರೆ ಅವರ ಮನುಷ್ಯತ್ವವನ್ನೇ ಅಲ್ಲಗಳೆದಂತಲ್ಲವೆ?
ಸಮರ್ಥನೆ: ಇಲ್ಲ ಅವರು ವಿಚಾರವಂತರೇ. ಆದರೆ ಬಲವಂತವಾಗಿ ಅವರನ್ನೆಲ್ಲ ಗುಲಾಮರನ್ನಾಗಿ ಮಾಡಲಾಗಿದೆ. ಅಮೇರಿಕಾದಲ್ಲಿ ನಿಗ್ರೋ ಗುಲಾಮರನ್ನು ಹೀಗೆ ನಡೆಸಿಕೊಳ್ಳಲಿಲ್ಲವೆ?
ಆಕ್ಷೇಪಣೆ: ಗುಲಾಮಗಿರಿ ವ್ಯವಸ್ಥೆಯು ಒಂದು ನಿರ್ದಿಷ್ಟ ಭೌತಿಕ ರಚನೆಯನ್ನು ಹೊಂದಿದ ಪ್ರಭುತ್ವದ ಶಕ್ತಿಯಿಂದ ಅಸ್ತಿತ್ವದಲ್ಲಿತ್ತು. ಅದರ ರಚನೆಯನ್ನು ತೋರಿಸಲಿಕ್ಕೆ ಸಾಧ್ಯವಿದೆ. ನಾವು ಚರ್ಚಿಸುತ್ತಿರುವ ಆಚರಣೆಗಳೆಲ್ಲ ಇಂದಿನವು. ಇಂದು ಇರುವ ವ್ಯವಸ್ಥೆ ಆಧುನಿಕ ಭಾರತೀಯ ಸಂವಿಧಾನವನ್ನಾಧರಿಸಿ ನಿಂತಿದೆ. ಅದನ್ನು ಜಾರಿ ತರಲು, ತಪ್ಪಿದವರನ್ನು ದಂಡಿಸಲು ಕಾನೂನುಗಳಿವೆ, ನ್ಯಾಯಾಲಯಗಳಿವೆ ಹಾಗೂ ಪೋಲೀಸ್ ವ್ಯವಸ್ಥೆಯಿದೆ. ಇದಕ್ಕೆಲ್ಲ ಸಾಕ್ಷ್ಯಾಧಾರಗಳನ್ನು ತೋರಿಸಬಹುದು. ಅದೇ ರೀತಿಯಲ್ಲಿ ಇಲ್ಲಿ ಬ್ರಾಹ್ಮಣರ ದಮನಕಾರೀ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆಯೆ?
ಸಮರ್ಥನೆ: ಈ ಬ್ರಾಹ್ಮಣರ ಆಳ್ವಿಕೆಯು ಅದೃಶ್ಯವಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಹೇಗೆಂದರೆ ಅದು ಜನರ ನಂಬಿಕೆಯ ರೂಪದಲ್ಲಿ ಅವರ ಮನಸ್ಸಿನಲ್ಲಿ ಮಾತ್ರವೇ ಇದೆ.
ಆಕ್ಷೇಪಣೆ: ಅದು ಜನರ ನಂಬಿಕೆಯ ರೂಪದಲ್ಲಿದೆ ಅಂತಾದಲ್ಲಿ ಆ ನಂಬಿಕೆಯ ರೂಪುರೇಷೆಗಳನ್ನು ಕಂಡುಹಿಡಿಯಬಹುದಲ್ಲ. ಆದರೆ ಜನರೇನು ಹೇಳುತ್ತಾರೆ? ಅವರು ತಮ್ಮ ಪೂರ್ವಿಕರ ಆಚರಣೆಯನ್ನು ಪಾಲಿಸುತ್ತಿದ್ದೇವೆ ಎನ್ನುತ್ತಾರೆ. ಈ ಆಚರಣೆಗಳು ತಮ್ಮವೇ, ತಾವೇ ಯೋಚಿಸಿ ನಿರ್ಣಯಿಸುತ್ತಿದ್ದೇವೆ ಅಂದುಕೊಳ್ಳುತ್ತಾರೆ. ಹಾಗಲ್ಲದೇ ಯಾವುದೋ ಬ್ರಾಹ್ಮಣರು ಹೇಳಿದಂತೆ ಜೀವಿಸುತ್ತಿದ್ದೇವೆ ಅಂದುಕೊಳ್ಳುವುದಿಲ್ಲ.
ಸಮರ್ಥನೆ: ಈಗ ಅವರಿಗೆ ತಿಳಿಯದಿರಬಹುದು. ಸಾವಿರಾರು ವರ್ಷಗಳಿಗೂ ಪೂರ್ವದಲ್ಲೇ ಬ್ರಾಹ್ಮಣರು ಜಾತಿ ವ್ಯವಸ್ಥೆ ಎಂಬ ಕರಾಳ ವ್ಯವಸ್ಥೆಯನ್ನು ರಚಿಸಿಬಿಟ್ಟಿದ್ದಾರೆ. ಅದನ್ನು ಮನುಸ್ಮೃತಿ ಎಂಬ ಕಾನೂನಿನ ಮೂಲಕ ಜಾರಿಯಲ್ಲಿ ತಂದಿದ್ದರು. ಪ್ರಾಚೀನ ಸಮಾಜಕ್ಕೆ ಅದು ಸಂವಿಧಾನವಾಗಿತ್ತು. ಆ ಕಾನೂನುಗಳನ್ನು ಇವರಿಗೆ ಗೊತ್ತಿಲ್ಲದೇ ಇಂದೂ ಇವರು ಪಾಲಿಸುತ್ತಿದ್ದಾರೆ.
ಆಕ್ಷೇಪಣೆ: ಈ ಉತ್ತರ ಮೇಲಿನ ಉತ್ತರಗಳಿಗಿಂತಲೂ ಹಾಸ್ಯಾಸ್ಪದವಾಗಿದೆ. ಏಕೆಂದರೆ, ಯಾವುದೇ ಕಾನೂನನ್ನೂ ಜಾರಿಗೊಳಿಸಲು ಒಂದು ಪ್ರಭುತ್ವ ವ್ಯವಸ್ಥೆಯ ಅನಿವಾರ್ಯತೆಯಿದೆ. ನಮ್ಮ ಪ್ರಾಚೀನ ಪ್ರಭುತ್ವಗಳು ಐರೋಪ್ಯ ಪ್ರಭುತ್ವಗಳಂತೆ ಕಾನೂನಿನ ತಳಹದಿಯ ಮೇಲೆ ನಿಂತಿರಲಿಲ್ಲ. ಹಾಗಾಗಿ ಅವುಗಳಿಗೆ ಮನುಸ್ಮೃತಿ ಹೋಗಲಿ, ಯಾವ ಸಂವಿಧಾನದ ತಳಹದಿಯೂ ಇರಲಿಲ್ಲ. ಅವು ಆಯಾ ಸಮುದಾಯಗಳ ಸಾಂಪ್ರದಾಯಿಕ ಆಚಾರಗಳನ್ನು ಒಪ್ಪಿಕೊಂಡಿದ್ದವು. ನಮಗೆ ಈ ಸಂಬಂಧಿಸಿ ಐತಿಹಾಸಿಕ ಆಧಾರಗಳು ಇಲ್ಲವಲ್ಲ?
ಸಮರ್ಥನೆ: ಐತಿಹಾಸಿಕ ಆಧಾರಗಳು ಇಲ್ಲದಿರಬಹುದು. ನಮ್ಮ ಪುರಾಣಗಳಲ್ಲಿ ಇಲ್ಲವೆ? ಏಕಲವ್ಯ. ಶಂಬೂಕ, ಕರ್ಣ? ಮತ್ತೆ ಬುದ್ಧ, ಬಸವ ಇವರೆಲ್ಲ ಯಾವುದರ ವಿರುದ್ಧ ಹೋರಾಡಿದರು ಅಂತೀರಿ?
ಆಕ್ಷೇಪಣೆ: ಪುರಾಣಗಳ ಕೆಲವು ಹೆಸರುಗಳನ್ನು ತೆಗೆದುಕೊಂಡರೆ ಸಮರ್ಥನೆಗೆ ಸಾಕು ಅಂತಾದರೆ ವಾಲ್ಮೀಕಿ, ವ್ಯಾಸ, ಕಾಳಿದಾಸ ಮುಂತಾದವರ ಹೆಸರನ್ನು ತೆಗೆದುಕೊಂಡು ನಿಮ್ಮನ್ನು ಅಲ್ಲಗಳೆಯಬಹುದಲ್ಲ? ಮತ್ತೆ ಬುದ್ಧ, ಬಸವ ಮುಂತಾದವರು ಬ್ರಾಹ್ಮಣಶಾಹಿಯ ವಿರುದ್ಧ ಪ್ರತಿಭಟಿಸಿದರು ಎಂಬ ಜ್ಞಾನೋದಯವು ಏಕೆ ಬ್ರಿಟಿಷರು ಭಾರತಕ್ಕೆ ಬಂದ ನಂತರವೇ ನಮ್ಮವರಿಗೆ ಆಗಬೇಕು?
ಸಮರ್ಥನೆ: ಇಂದು ಅಸ್ಪೃಶ್ಯತೆ, ದಲಿತರ ಮೇಲೆ ದೌರ್ಜನ್ಯ ಇತ್ಯಾದಿಗಳು ನಡೆಯುತ್ತಿಲ್ಲವೆ?
ಆಕ್ಷೇಪಣೆ: ಅಸ್ಪೃಶ್ಯತೆಯನ್ನು ಎಲ್ಲರೂ ಆಚರಿಸುತ್ತಾರೆ, ದಲಿತರಲ್ಲೇ ಒಂದು ಜಾತಿಯವರು ಮತ್ತೊಂದು ಜಾತಿಯವರ ಕುರಿತು ಆಚರಿಸುತ್ತಾರೆ. ಇವರಲ್ಲಿ ಮತ್ಯಾರೂ ಅಲ್ಲದೇ ಬ್ರಾಹ್ಮಣರೇ ಅದನ್ನು ಪ್ರಾರಂಭಿಸಿದ್ದಾರೆಂದು ಹೇಗೆ ಹೇಳುತ್ತೀರಿ? ದೌರ್ಜನ್ಯದ ಪ್ರಕರಣಗಳ ಕುರಿತು ಇಷ್ಟೊಂದು ವರದಿಗಳು ಪತ್ರಿಕೆಗಳಲ್ಲಿ ಬಂದಿವೆ. ಏಕೆ ಅವುಗಳಲ್ಲಿ ಕಣ್ಣಿಟ್ಟು ಹುಡುಕಿದರೂ ಬ್ರಾಹ್ಮಣರು ಕಾಣುವುದಿಲ್ಲ?
ಸಮರ್ಥನೆ: ಬ್ರಾಹ್ಮಣರು ನೇರವಾಗಿ ಕಾಣದಿರಬಹುದು. ಆದರೆ ಅವರು ದಲಿತರನ್ನೊಳಗೊಂಡಂತೆ ಉಳಿದ ಜಾತಿಯವರನ್ನೆಲ್ಲ ನಂಬಿಸಿಬಿಟ್ಟಿದ್ದಾರೆ.
ಆಕ್ಷೇಪಣೆ: ಬ್ರಾಹ್ಮಣರು ಸಾವಿರಾರು ವರ್ಷಗಳ ಹಿಂದೆ ವಿಧಿಸಿದ ನಿಯಮಗಳು ಯಾವ ಪ್ರಭುತ್ವದ ಸಹಾಯವಿಲ್ಲದೆ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ, ನೆನಪಿನಲ್ಲೂ ಉಳಿಯದೇ ಭಾರತದಂಥ ದೊಡ್ಡ ದೇಶದ ಉದ್ದಗಲಕ್ಕೂ ಮುಂದುವರಿದುಕೊಂಡು ಬಂದಿವೆ ಅಂದ ಹಾಗಾಯಿತು. ಅಂದರೆ ಇದಕ್ಕೂ ಅದ್ಭುತವಾದ ವ್ಯವಸ್ಥೆಯನ್ನು ಪ್ರಪಂಚದ ಇತಿಹಾಸವೇ ಕಂಡಿಲ್ಲ. ನಿಮ್ಮ ಬಳಿ ಇದಕ್ಕೂ ವಿಶ್ವಾಸಾರ್ಹವಾದ ಕಥೆಗಳಿಲ್ಲವೆ? ನಾನು ಇದಕ್ಕೂ ಒಳ್ಳೆಯ ದೆವ್ವದ ಕಥೆಯನ್ನು ಇದುವರೆಗೂ ಕೇಳಿಲ್ಲ.
ಸಮರ್ಥನೆ: ಈ ಕಥೆಯೇ ನಿಜ. ನೀವು ನಂಬಲೇಬೇಕು.

ಒಂದು ಸಂಗತಿಯನ್ನು ಗಮನಿಸಿ. ಆಚರಣೆಗಳು ಯಾವುದೇ ತೊಡಕಿಲ್ಲದೇ, ವಿವಾದವಿಲ್ಲದೇ ನಡೆಯುತ್ತಿರುವಷ್ಟು ಕಾಲ ಇಂಥ ಚರ್ಚೆಗಳು ಹುಟ್ಟುವುದಿಲ್ಲ. ಯಾವುದಾದರೊಂದು ಆಚರಣೆಯು ಮೂಢನಂಬಿಕೆ ಎಂಬುದಾಗಿ ಗುರುತಿಸಲ್ಪಟ್ಟು ಅದರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬುದು ಕಂಡುಬಂದಾಗ ಕಾಣದ ಕೈಗಳು ಅವತರಿಸುತ್ತವೆ. ಅಂದರೆ ಭಾರತದಲ್ಲಿರುವ ವೈವಿಧ್ಯಪೂರ್ಣ ಸಾಮಾಜಿಕ ಗುಂಪುಗಳೆಲ್ಲವುಗಳ ಸಮಸ್ತ ಆಚರಣೆಗಳನ್ನೂ ಈ ಕಾಣದ ಕೈಗಳು ರೂಪಿಸಿ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿವೆಯೆ? ಅಥವಾ ಈ ಕಾಣದ ಕೈಗಳು ಇಂಥ ಅಮಾನವೀಯ ಆಚರಣೆಗಳನ್ನು ಮಾತ್ರವೇ ರೂಢಿಸಿ ನಿಯಂತ್ರಿಸುತ್ತವೆಯೆ? ಎಂಬಂಥ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ.
ಈ ಮೇಲಿನವು ನಮ್ಮ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕಂಡುಕೊಂಡ ಉತ್ತರಗಳಲ್ಲವೇ ಅಲ್ಲ. ನಮ್ಮ ವಸಾಹತು ದೊರೆಗಳು ಆ ಪರಿಶ್ರಮದಿಂದ ನಮ್ಮನ್ನು ತಪ್ಪಿಸಿದ್ದಾರೆ. ಒಂದು ಸಾಮಾಜಿಕ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಸವಾಲು ಎಲ್ಲೆಲ್ಲಿ ಏಳುತ್ತದೆಯೊ ಆಗ ಅದನ್ನು ಅರ್ಥೈಸಲು ಸುಲಭವಾಗಿ ಸಿಗಬಲ್ಲ ವಿವರಣೆಯೊಂದನ್ನು ನಾವು ಈಗಾಗಲೇ ಪಡೆದುಕೊಂಡು ಬಿಟ್ಟಿದ್ದೇವೆ. ಅದೆಂದರೆ ಜಾತಿ ವ್ಯವಸ್ಥೆಯ ಕುರಿತ ಕಥೆ. ಕಾಣದ ಕೈ ಕುರಿತ ಅಸಂಬದ್ಧತೆಯನ್ನು ತೋರಿಸುವುದಷ್ಟೇ ಈ ಅಂಕಣದ ಉದ್ದೇಶವಾಗಿರುವುದರಿಂದ ಈ ಕಥೆ ಎಲ್ಲಿಂದ ಬಂದಿತು, ಏಕೆ ಬಂದಿತು ಇತ್ಯಾದಿಗಳನ್ನು ಸಂಬಂಧಪಟ್ಟ ಅಂಕಣಗಳಲ್ಲಿ ವಿವರಿಸುತ್ತೇನೆ.
ಈ ಕುರಿತು ವಿವರವಾಗಿ ತಿಳಿದುಕೊಳ್ಳಬಯಸುವವರು ಮಲ್ಲಾಡಿಹಳ್ಳಿಯ ಆನಂದ ಕಂದ ಪ್ರಕಾಶನವು ಇತ್ತೀಚೆಗೆ ಪ್ರಕಟಿಸಿದ ‘ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ?’ (ಸಂ. ಡಂಕಿನ್ ಜಳಕಿ) ಎಂಬ ಗ್ರಂಥವನ್ನು ನೋಡಬಹುದು. ನಾನು ಕಳೆದ ಹತ್ತಾರು ವರ್ಷಗಳಿಂದ ಜಾತಿಯ ಕುರಿತು ನಡೆಸಿದ ಚರ್ಚೆಯನ್ನು ಅದರಲ್ಲಿ ಸಂಗ್ರಹಿಸಿ ನೀಡಲಾಗಿದೆ.

ಬಾಲಗಂಗಾಧರ
ಕನ್ನಡ ನಿರೂಪಣೆ: ರಾಜಾರಾಮ ಹೆಗಡೆ
ಡಿಸೆಂಬರ್ ೯,೨೦೧೨ ರಂದು ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: