ಮುಖ ಪುಟ > Cultural Studies, Culture, Dharma, News Papers and Blogs, Politics, Uncategorized > ರಾಜಕೀಯ ಪಕ್ಷಗಳಿಗೆ ಐಡಿಯಾಲಜಿಯ ಅಜೆಂಡಾಗಳಿವೆಯೇ?

ರಾಜಕೀಯ ಪಕ್ಷಗಳಿಗೆ ಐಡಿಯಾಲಜಿಯ ಅಜೆಂಡಾಗಳಿವೆಯೇ?

UPPoliಡಾ.ಎ.ಷಣ್ಮುಖ

ಸಾಮಾನ್ಯವಾಗಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಒಂದೊಂದು ರಾಜಕೀಯ ಅಜೆಂಡಾ ಇರುತ್ತದೆ ಎಂಬುದು ಒಂದು ಸಾಮಾನ್ಯ ಜ್ಞಾನ. ಈ ಅಜೆಂಡಾಗಳು ಒಂದೊಂದು ಐಡಿಯಾಲಜಿಯನ್ನು ಆಧರಿಸಿ ಇರುತ್ತವೆ ಎಂಬುದಾಗಿಯೂ ರಾಜಕೀಯ ವಿಶ್ಲೇಷಕರು ತಿಳಿಸುತ್ತಾರೆ. ಉದಾಹರಣೆಗೆ, ಕಾಂಗ್ರೆಸ್ಗೆ ಸೆಕ್ಯುಲರ್ ಐಡಿಯಾಲಜಿ, ಬಿಜೆಪಿಗೆ ಹಿಂದುತ್ವದ ಐಡಿಯಾಲಜಿ, ಬಿ.ಎಸ್.ಪಿ. ಗೆ ಸಾಮಾಜಿಕ ನ್ಯಾಯ ಅಥವ ದಲಿತ ವಿಮೋಚನೆ, ಇತ್ಯಾದಿ. ಇವನ್ನು ಆಯಾ ಪಕ್ಷದ ವಕ್ತಾರರೂ ಒಪ್ಪಿಕೊಂಡಿರುತ್ತಾರೆ ಹಾಗೂ ರಾಜಕೀಯ ವಿಶ್ಲೇಷಕರೂ ಸಹ ಹಾಗೆಯೇ ಹಣೆಪಟ್ಟಿ ನೀಡಿ ವಿಶ್ಲೇಷಿಸುತ್ತಿರುತ್ತಾರೆ. ಆದರೆ ನಾನು ಈ ಲೇಖನದಲ್ಲಿ ಎತ್ತುತ್ತಿರುವ ಪ್ರಶ್ನೆ ಎಂದರೆ ವಾಸ್ತವದ ರಾಜಕಾರಣದಲ್ಲಿ ಈ ರೀತಿಯ ಅಜೆಂಡಗಳ ಮೂಲಕ ಆಯಾಪಕ್ಷಗಳ ರಾಜಕೀಯ ನಡೆಗಳನ್ನು ವಿವರಿಸಲು ಸಾಧ್ಯವೇ? ಇಂದಿನ ರಾಜಕೀಯ ಘಟನೆಗಳನ್ನು ಈ ಐಡಿಯಾಲಜಿಯ ಚೌಕಟ್ಟಿನಲ್ಲಿ ವಿವರಿಸಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆಯೇ? ಕರ್ನಾಟಕದಲ್ಲಿ ನಡೆಯುತ್ತಿರುವ ಈಗಿನ ರಾಜಕೀಯ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಶ್ನೆಗಳನ್ನು ಪರಿಶೀಲಿಸೋಣ.

ಯಡಿಯೂರಪ್ಪನವರು ಮತ್ತು ಅವರ ಬೆಂಬಲಿಗರು ಬಿಜೆಪಿಯಿಂದ ಹೊರಬಂದು ಹೊಸ ಪಕ್ಷವನ್ನು ಕಟ್ಟುತ್ತಿದ್ದಾರೆ. ಈ ಹೊಸ ಪಕ್ಷದ ಬೆಂಬಲಕ್ಕೆ ಸರ್ಕಾರದ ಪ್ರಮುಖ ಸ್ಥಾನಗಳಲ್ಲಿರುವ ಸಾಕಷ್ಟು ಶಾಸಕರು ಸಚಿವರು ಮತ್ತು ಸಂಸದರು ನಿಂತಿದ್ದಾರೆ. ಲಕ್ಷಾಂತರ ಜನರು ಹಾವೇರಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂಧರ್ಭದಲ್ಲಿ ಸುದ್ದಿಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವುದು ಯಾವುದೇ ಐಡಿಯಾಲಜಿಯ ಸಂಘರ್ಷ ಅಥವಾ ಸಂದಿಗ್ದತೆಯ ಬಗ್ಗೆ ಅಲ್ಲ. ಬದಲಿಗೆ ಸರ್ಕಾರದ ಬಹುಮತಕ್ಕೆ ಸಂಬಂಧಿಸಿದ ತಾಂತ್ರಿಕ ವಿಚಾರಗಳ ಕುರಿತು. ಅಂದರೆ ಈಗ ಆಳುವ ಸರ್ಕಾರ ಎಷ್ಟರ ಮಟ್ಟಿಗೆ ತನ್ನ ಪಕ್ಷದ ಶಿಸ್ತನ್ನು ಕಾಪಾಡಿಕೊಂಡು ಸರ್ಕಾರದ ಬಹುಮತವನ್ನು ಉಳಿಸಿಕೊಂಡು ಹೋಗಬಹುದು ಎನ್ನುವ ಲೆಕ್ಕಚಾರ. ಶಿಸ್ತು ಕಾಪಾಡಿಕೊಳ್ಳಲು ಬಯಸಿದರೆ ಸಕರ್ಾರವನ್ನು ಬಲಿಕೊಡಬೇಕಾಗುತ್ತದೆ. ಸರ್ಕಾರವನ್ನು ಕಾಪಾಡಲು ಬಯಸಿದರೆ ಪಕ್ಷದಲ್ಲಿ ಅಶಿಸ್ತನ್ನು ಪೋಷಿಸಿದಂತಾಗಿ ಸಂಘಟನೆ ಸಡಿಲಗೊಳ್ಳುತ್ತದೆ.

ಈ ಸ್ಥಿತಿಯಲ್ಲಿ ಈಗ ಬಿಜೆಪಿ ಏನು ಮಾಡಬಹುದು ಎನ್ನುವಂತಹ ಪ್ರಶ್ನೆಗಳನ್ನಿಟ್ಟುಕೊಂಡು ಮಾಧ್ಯಮಗಳು ಥ್ರಿಲ್ಲರ್ ಕಥೆಯ ರೀತಿಯಲ್ಲಿ ಚರ್ಚೆ ಮಾಡುತ್ತಿವೆ. ಹೀಗಾಗಿ ವಿಭಿನ್ನ ಗುಂಪುಗಳ ರಾಜಕೀಯ ನಾಯಕರ ಮುಂದೆ ಮೈಕು ಹಿಡಿದು ಅವರ ಹೇಳಿದ ವಾಕ್ಯಗಳೇ ಈಗ ಬ್ರೇಕಿಂಗ್ ನ್ಯೂಸ್. ಅದಕ್ಕೆ ಇನ್ನೊಂದು ಗುಂಪಿನ ನಾಯಕರಿಂದ ಬರುವ ಪ್ರತಿಕ್ರಿಯೆ ಇನ್ನೊಂದು ಬ್ರೇಕಿಂಗ್ ನ್ಯೂಸ್. ಇದು ನಮ್ಮ ಮುಂದೆ ನಡೆಯುವ ರಾಜಕೀಯ ಘಟನೆಗಳ ಯಥಾವತ್ತಾದ ನಿರೂಪಣೆ ಎನ್ನುವ ನಿಲುವ ಮಾಧ್ಯಮಗಳದ್ದು.

ಯಡಿಯೂರಪ್ಪನವರ ಪಕ್ಷರಚನೆ ಮತ್ತು ಬಿಜೆಪಿ ಸರ್ಕಾರದ ಉಳಿಸಿಕೊಳ್ಳುವ ಎರಡೂ ಸಂಧರ್ಭಗಳಲ್ಲಿ ಹಿಂದಿನಿಂದಲೂ ಯಡಿಯೂರಪ್ಪ (ಮತ್ತು ಅವರ ಬಹುತೇಕ ಬೆಂಬಲಿಗರು) ಮತ್ತು ಬಿಜೆಪಿ ಪಕ್ಷಗಳೆರಡೂ ಕಡೆಯವರಿಗೂ ‘ಹಿಂದುತ್ವ’ ವೇ ಅವರ ರಾಜಕೀಯ ವ್ಯವಹಾರಗಳ ಅಜೆಂಡವೆಂದು ಹಿಂದಿನಿಂದಲೂ ವಿವರಿಸಿಕೊಂಡು ಬರಲಾಗಿದೆ. ಈಗ ಯಡಿಯೂರಪ್ಪ ಹೊಸ ಪಕ್ಷ ರಚನೆಗೆ ಮುಂದಾದಾಗ ಈಗ ಅವರು ‘ಹಿಂದುತ್ವ’ದ ಐಡಿಯಾಲಜಿಯಿಂದ ಹೊರಹೋಗಿ ಪಕ್ಷ ಕಟ್ಟುತ್ತಿದ್ದಾರೆ ಎನ್ನಲು ಸಾಧ್ಯವೇ? ಅಥವಾ ಅವರಿಗೆ ಹೊಸದಾಗಿ ಒಂದು ‘ಐಡಿಯಾಲಜಿಯ ಅಜೆಂಡ ಇಟ್ಟುಕೊಂಡು ಪಕ್ಷ ಸ್ಥಾಪಿಸುತ್ತಿದ್ದಾರೆ ಎಂದು ವಿಶ್ಲೇಷಿಸಲು ಬರುತ್ತದೆಯೇ. ಇಡೀ ವಿದ್ಯಾಮಾನಗಳ ಚರ್ಚೆಗಳಲ್ಲಿ ಅಪ್ಪಿ ತಪ್ಪಿಯೂ ಈ ರೀತಿಯ ಪ್ರಸ್ತಾವ ಯಾರಿಂದಲೂ ಬಂದಿಲ್ಲ. ಆಯಾ ಪಕ್ಷದವರಿಂದ ಮಾತ್ರವಲ್ಲ, ಅವರ ವಿರೋಧಿಗಳಿಂದಲೂ ಮತ್ತು ರಾಜಕೀಯ ಪರಿಣತರೆನಿಸಿ ಕೊಂಡವರಿಂದಲೂ ಈ ವಿಚಾರದ ಪ್ರಸ್ತಾಪವೇ ಬರುವುದಿಲ್ಲ ಏಕೆ?

ಏಕೆಂದರೆ, ಪಕ್ಷಗಳ ಈ ‘ಐಡಿಯಾಲಜಿಕಲ್ ಅಜೆಂಡಾಗಳಿಗೂ’ ರಾಜಕಾರಣದಲ್ಲಿ ತೊಡಗಿರುವ ರಾಜಕಾರಣಿಗಳಿಗೂ ನಡುವೆ ಎರಡು ರೀತಿಯ ಕಂದಕಗಳು ಇವೆ. ಮೊದಲನೆಯದಾಗಿ ರಾಜಕಾರಣಿಗಳ ಕಾರ್ಯತಂತ್ರಗಳಿಗೆ ಈ ಐಡಿಯಾಲಜಿಗಳು ಯಾವುದೇ ಮಾರ್ಗದರ್ಶನವನ್ನು ನೀಡುವ ಸಾಮರ್ಥ್ಯವನ್ನು ಹೊಂದಿಲ್ಲ. ಎರಡನೆಯದಾಗಿ, ರಾಜಕಾರಣಿಗಳಿಗೆ ಈ ಐಡಿಯಾಲಜಿಗಳು ಅರ್ಥವೇ ಆಗಿರುವುದಿಲ್ಲ. ಅಂದರೆ ಐಡಿಯಾಲಜಿಗಳು ಅಜೆಂಡಾಳಲ್ಲಿರುತ್ತವೆ (ಉಳಿದ ಕಾರ್ಯಕ್ರಮಗಳ ಪಟ್ಟಿಗಳೊಟ್ಟಿಗೆ) ಅವು ರಾಜಕಾರಣದ ಕಾರ್ಯತಂತ್ರಗಳನ್ನು ನಿರ್ದೇಶಿಸುವುದಿಲ್ಲ.
ಮೊದಲನೆಯದಾಗಿ ಈ ಐಡಿಯಾಲಜಿಗಳು ಏನನ್ನು ಸೂಚಿಸುತ್ತವೆ ಎನ್ನುವುದು ಸಮಾಜ ವಿಜ್ಞಾನದ ಚಿಂತಕರಿಗೇ ಇಂದು ಬಹುದೊಡ್ಡ ಒಗಟಾಗಿದೆ. ಹೀಗಿರುವಾಗ ರಾಜಕಾರಣಿಗಳು ಅವುಗಳನ್ನು ಅರ್ಥಮಾಡಿಕೊಂಡು ಅದರಂತೆ ರಾಜಕೀಯ ಮಾಡುತ್ತಾರೆ ಎಂದು ನಿರೀಕ್ಷಿಸುವುದು ಸಾಧುವಲ್ಲ. ಹಾಗಾಗಿ, ಅವರು ಸುಲಭವಾಗಿ, ಸಾಮಾಜಿಕ-ನ್ಯಾಯ; ಸಮಬಾಳು-ಸಮಪಾಲು; ದಲಿತರ, ಮಹಿಳೆಯರ, ಹಿಂದುಳಿದವರ,ರೈತರ, ಮಹಿಳೆಯರ-ಕಲ್ಯಾಣ; ಅಲ್ಪಸಂಖ್ಯಾತರ ಅಭಿವೃದ್ದಿ; ಮಾನವಹಕ್ಕು, ನಾಡಿನ ಹಿತಾಸಕ್ತಿ, ಜನತಾ ನ್ಯಾಯಲಯ, ಅಭಿವ್ಯಕ್ತಿ ಸ್ವಾತಂತ್ರ, ಮುಂತಾದ ಪದಗಳನ್ನು ಕ್ಲೀಷೆಯಂತೆ ಬಳಸುತ್ತಾ ಸಾಗುತ್ತಾರೆ. ಈ ಪದಗಳ ಬಳಕೆ ಮಾದ್ಯಮ ಮಿತ್ರರಿಗೂ ಅವರ ಕ್ರಿಯೆಗಳ ಸಮರ್ಥನೆಯಂತೆ ಕಾಣುತ್ತದೆ. ಆದರೆ ಅವುಗಳನ್ನು ಪರಿಶೀಲಿಸಿ ಅವರ ಕ್ರಿಯೆಗೂ ಹೇಳಿಕೆಗಳಿಗೂ ಇರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜನಸಾಮಾನ್ಯರೂ ಸಹ ಅವರ ಹೇಳಿಕೆಗಳನ್ನು ಕೇಳಿ/ಓದಿ ಹಾಸ್ಯಮಾಡುವುದನ್ನು ನೋಡಬಹುದು. ಅದರೆ, ಈ ಗೊಂದಲಗಳೇ ರಾಜಕಾರಣಿಗಳಿಗೆ ವರದಾನ ಎಂಬುದು ಅಷ್ಟೇ ಸತ್ಯ. ಕೇಳುವವರಿಗೂ ಹೇಳುವವರಿಗೂ ಇಬ್ಬರಿಗೂ ಅರ್ಥವಾಗದ ಮೇಲೆ ಅವರು ಹೇಳಿದ್ದೇ ಸಮರ್ಥನೆ ಆಗುತ್ತದೆ.

ಒಂದು ಲಿಬರಲ್ ಡೆಮಾಕ್ರಸಿಯಲ್ಲಿ ಜನರ ಆಶೋತ್ತರಗಳನ್ನು ಪ್ರತಿನಿಧಿಸಲಿಕ್ಕಾಗಿ ವಿಭಿನ್ನ ಐಡಿಯಾಲಜಿಗಳನ್ನು ಆಧರಿಸಿದ ರಾಜಕೀಯ ಪಕ್ಷಗಳು ಇರುತ್ತವೆ. ಈ ಐಡಿಯಾಲಜಿಗಳ ಮೂಲಕ ಆಯಾ ಪಕ್ಷಗಳು ಪ್ರಜೆಗಳ ಹಿತವನ್ನು ಕಾಯುವ ಸಾಧನಗಳಾಗುತ್ತವೆ. ಇದನ್ನು ಅನುಸರಿಸಿ ಶಾಸನಗಳು ಆಗುತ್ತವೆ ಎನ್ನುವುದು ಲಿಬರಲ್ ರಾಜಕೀಯ ಸಿದ್ದಾಂತ. ಆದರೆ ಈ ಮೇಲಿನ ಉದಾಹರಣೆಗಳಲ್ಲಿ ಐಡಿಯಾಲಜಿಯನ್ನುವುದು ನಿಜಕ್ಕೂ ರಾಜಕೀಯ ಪಕ್ಷಗಳಿಗೆ ಆಧಾರವಾಗಿ ಇದೆಯೇ? ಉದಾಹರಣೆಗೆ, ಹಿಂದುತ್ವ ಎನ್ನವ ಐಡಿಯಾಲಜಿಯನ್ನು ತೆಗೆದುಕೊಳ್ಳಿ. ಈ ಐಡಿಯಾಲಜಿಯ ಹೆಸರಿನಲ್ಲಿ ಅವರು ತೆಗೆದುಕೊಳ್ಳುವ ಸಂಗತಿಗಳು ರಾಮಜನ್ಮಭೂಮಿ ಬಾಬಾಬುಡನ್ ಗಿರಿ ಇತ್ಯಾದಿಗಳಿಗೆ ಸೀಮಿತವಾಗಿವೆ ಅಷ್ಟೆ. ಅದನ್ನು ಹೊರತುಪಡಿಸಿ ಅವರಿಗೂ ಇತರ ಪಕ್ಷಗಳಿಗೂ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಅವರೂ ಅದೇ ಮೀಸಲಾತಿ ಬೇಕು, ಸಾಮಾಜಿಕ ನ್ಯಾಯ ಬೇಕು, ಜಾತಿಯತೆಗಳೆಲ್ಲ ಹೋಗಬೇಕು, ಜಾತ್ಯಾತೀತವಾಗಿ ಇರಬೇಕು ಎನ್ನುತ್ತಾರೆ. ಎಲ್ಲ ಪಕ್ಷದ್ದೂ ಇದೇ ನಿಲುವು.

ಅವರು ರಾಮಜನ್ಮ ಭೂಮಿಯಂತಹ ವಿಷಯವನ್ನು ಏಕೆ ತೆಗೆದುಕೊಳ್ಳುತ್ತಾರೆ ಎಂಬುದಕ್ಕೂ ಬೇರೆ ಕಾರಣವೇ ಕಾಣಿಸುತ್ತದೆ. ಅದರ ಹೆಸರಿನಲ್ಲಿ ಜನರನ್ನು ಒಟ್ಟುಸೇರಿಸಲು ಸಾಧ್ಯ ಎಂಬುದಾಗಿ ಭಾವಿಸಿದ್ದಾರೆ. ಅಂದರೆ ಕಾಂಗ್ರೆಸ್ಗೆ ರಾಮಜನ್ಮಭೂಮಿಯ ಬಗ್ಗೆ ವಿರೋಧವಿದೆ ಎಂದಾಗ ಮಾತ್ರ ಜನ ಇವರೆಡೆಗೆ ಬರುತ್ತಾರೆ. ಇದನ್ನರಿತ ಕಾಂಗ್ರೆಸ್ ತಾನು ಅದನ್ನು ವಿರೋಧಿಸುತ್ತೇನೆ ಎಂದು ತೋರಿಸಿಕೊಳ್ಳದೇ ತಾನೇ ಮುಂದೆ ನಿಂತು ವಿವಾದಾತ್ಮಕ ದೇವಾಲಯದ ಬಾಗಿಲು ತೆಗೆದುಬಿಟ್ಟಿತು. ಇಲ್ಲಿ ಐಡಿಯಾಲಜಿಯ ಪ್ರಶ್ನೆ ಎಲ್ಲಿ ಬಂತು? ಒಂದು ನಿರ್ದಿಷ್ಟವಾದ ವಿಚಾರ ತಮಗೆ ಜನಪ್ರಿಯತೆಯನ್ನು ತಂದುಕೊಡುತ್ತದೆ, ಜನರನ್ನು ಸೇರಿಸುತ್ತದೆ ಎಂದು ಕಂಡರೆ ಅದನ್ನು ಬಳಸಿಕೊಳ್ಳುತ್ತಾರೆ. ಇದೊಂದು ರೀತಿಯಲ್ಲಿ ರಾಜಕೀಯ ತಂತ್ರ ಅಷ್ಟೆ. ಇದಕ್ಕೂ ಹಿಂದುತ್ವದ ಐಡಿಯಾಲಜಿಗೂ ಏನು ಸಂಬಂಧ?

ಈ ಸಮಸ್ಯೆಗಳನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿರುವ ರಾಜಕಾರಣಿಗಳಿಗಾಗಲೀ, ರಾಮ ದೇವಾಲಯ ಕಟ್ಟಬೇಕೆಂದು ಅದರ ಹಿಂದೆ ಹೋಗುವವರಿಗಾಗಲೀ ಹಿಂದುತ್ವ ಎಂದರೆ ಏನು ಎನ್ನುವ ಪ್ರಾಥಮಿಕ ಜ್ಞಾನವೂ ಇದ್ದಂತೆ ತೋರುವುದಿಲ್ಲ. ಹಾಗಿದ್ದರೆ ಐಡಿಯಾಲಜಿ ಎಲ್ಲಿದೆ? ರಾಜಕಾರಣಿಗಳಲ್ಲೂ ಇಲ್ಲ. ಮತ ಹಾಕುವ ಜನರಲ್ಲೂ ಇಲ್ಲ. ಇನ್ನೆಲ್ಲಿದೆ? ಅದು ಪೇಪರಿನಲ್ಲಿದೆ. ಅಂದರೆ, ಪಕ್ಷಗಳ ಪ್ರಣಾಳಿಕೆಗಳಲ್ಲಿ, ಪುಸ್ತಕಗಳಲ್ಲಿ ಮತ್ತು ಸುದ್ದಿಮಾಧ್ಯಮಗಳಲ್ಲಿದೆ, ಅಷ್ಟೆ. ಶೈಕ್ಷಣಿಕ ಮತ್ತು ಮಾಧ್ಯಮ ವಲಯಗಳಲ್ಲಿ ಚರ್ಚೆಗಳಲ್ಲಿ ತೊಡಗಿರುವ ಬುದ್ದಿಜೀವಿಗಳ ವಲಯದಲ್ಲಿ ಈ ಐಡಿಯಾಲಜಿಯ ವಿಚಾರಗಳು ಅರ್ಥನೀಡುತ್ತಿರುತ್ತವೆಯೇ ಹೊರತು ಅದರಿಂದ ಹೊರಗೆ ರಾಜಕಾರಣದಲ್ಲಿ ತೊಡಗಿರುವ ರಾಜಕಾರಣಿಗಳಿಗೆ ಮತ್ತು ಜನರಿಗೆ ಇದು ಅರ್ಥರಹಿತ ಮತ್ತು ಅನಗತ್ಯವಾದ ವಿಚಾರ.

ಇಂದು ಯಡಿಯೂರಪ್ಪನವರು ಹೊಸ ಪಕ್ಷವನ್ನು ಸ್ಥಾಪಿಸುತ್ತಿರುವ ಸಂಧರ್ಭದ ರಾಜಕೀಯ ಬೆಳವಣಿಗೆಯನ್ನು ವಿವರಿಸಲು ಬಹುಮತದ ಸಂಖ್ಯೆಯ ತಾಂತ್ರಿಕತೆ ಮತ್ತು ನೈತಿಕತೆಗಳು ಮಾತ್ರವೇ ಚರ್ಚೆಯ ವಿಷಯವಾಗುತ್ತಿವೆ. ಬಿಜೆಪಿಯ ‘ತತ್ವ-ಸಿದ್ದಾಂತ’ದ ಬಗ್ಗೆ ತಕರಾರು ಎತ್ತಿ ಹೊರಬಂದಿರುವುದಾಗಿ ಓರ್ವ ರಾಜಕಾರಣಿಯೂ ಹೇಳುತ್ತಿಲ್ಲ. ಹಾಗೆಯೇ, ಕೆ.ಜೆ.ಪಿ. ಯ ತತ್ವ-ಸಿದ್ದಾಂತಗಳನ್ನು ಒಪ್ಪಿ ಬಂದಿರುವುದಾಗಿ ಯಾರೂ ಹೇಳುತ್ತಿಲ್ಲ. ಬದಲಿಗೆ ಯಡಿಯೂರಪ್ಪರ ನಾಯಕತ್ವ ನಿಷ್ಟೆ, ಋಣ, ಅನ್ಯಾಯವಾಗಿದೆ, ಇತ್ಯಾದಿ ಪರಿಭಾಷೆಗಳು ಇಲ್ಲಿ ಬಳಕೆಯಾಗುತ್ತಿವೆ. ಈ ಬೆಳವಣಿಗೆಯನ್ನು ಯಾವ ಐಡಿಯಾಲಜಿಕಲ್ ಚೌಕಟ್ಟಿನಲ್ಲಿ ವಿವರಿಸಲು ಸಾಧ್ಯ? ಅಂದರೆ ರಾಜಕಾರಣಿಗಳಿಗೆ ಹಾಗೂ ಅವರ ಹಿಂಬಾಲಕರಿಗೆ ನಿರ್ಣಾಯಕವಾಗುತ್ತಿರುವ ಸಂಗತಿಗಳು ಯಾವುವು ಎಂಬುದು ನಮ್ಮ ರಾಜಕೀಯ ವಿಶ್ಲೇಷಣೆಗಳ ಪರಿಧಿಗೇ ಬರುತ್ತಿಲ್ಲ. ಆದರೆ ಭಾರತೀಯ ರಾಜಕಾರಣವನ್ನು ಅರ್ಥಮಾಡಿಕೊಳ್ಳಲಿಕ್ಕೆ ಇದೇಹೆಚ್ಚು ಮುಖ್ಯವಾಗಬೇಕು. ಆಗ ಮಾತ್ರ ಇಂತಹ ಘಟನೆಗಳ ಅರ್ಥಪೂರ್ಣ ವಿಶ್ಲೇಷಣೆ ಸಾಧ್ಯ.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: