ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

imagesಕಂತು೩:ರಾಜಕೀಯ, ಧರ್ಮವನ್ನು ಬೇರ್ಪಡಿಸಬೇಕೆಂಬ ಮಿತ್ಯವಾದ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ಎರಡು ಪ್ರಕಾರದ ವಾಕ್ಯಗಳನ್ನು ಇಟ್ಟುಕೊಂಡು ಈ ವಿಷಯವನ್ನು ಪ್ರವೇಶಮಾಡೋಣ: ೧)’ರಾಜಕೀಯದಿಂದ ಧರ್ಮವನ್ನು ದೂರವಿಡಬೇಕು’. ‘ಹಿಂದೂ ಧರ್ಮವು ಅಮಾನವೀಯ ಆಚರಣೆಗಳನ್ನು ಒಳಗೊಂಡಿದೆ’. ‘ಧರ್ಮವು ಶೋಷಣೆಯ ಸಾಧನವಾಗಿದೆ’, ಎಂಬ ಸಾಲುಗಳು ಇಂದು ಪುಸ್ತಕಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ೨) ಇದರ ಜೊತೆಗೆ ಈ ಮುಂದಿನ ವಾಕ್ಯಗಳನ್ನು ಹೋಲಿಸಿ, ‘ಅವನು ಧರ್ಮಿಷ್ಠ’, ‘ಭೂಮಿಯ ಮೇಲೆ ಅಧರ್ಮ ಹೆಚ್ಚಾಗಿ ಮಳೆಬೆಳೆ ಹಾಳಾಗಿಹೋಗಿವೆ’, ‘ದಯವೇ ಧರ್ಮದ ಮೂಲವಯ್ಯ’, ‘ಧರ್ಮಸಂಸ್ಥಾಪನಾರ್ಥಾಯ. ಸಂಭವಾಮಿ ಯುಗೇ ಯುಗೇ’ ಇತ್ಯಾದಿ.

ಈ ಎರಡು ಪ್ರಕಾರದ ವಾಕ್ಯಗಳು ಎರಡು ವಿಭಿನ್ನ ಸಂದರ್ಭಗಳನ್ನೇ ಸೂಚಿಸುತ್ತಿವೆ: ಮೊದಲನೆಯದು ಆಧುನಿಕ ಸಂದರ್ಭ. ಇಲ್ಲಿ ರಿಲಿಜನ್ (ಉದಾಹರಣೆಗೆ ಕ್ರಿಶ್ಚಿಯಾನಿಟಿ) ಎಂಬ ನಿರ್ದಿಷ್ಟ ಶಬ್ದದ ಭಾಷಾಂತರವಾಗಿ ಧರ್ಮ ಎಂಬ ಶಬ್ದವನ್ನು ಉಪಯೋಗಿಸಲಾಗುತ್ತಿದೆ. ರಾಜನೀತಿಜ್ಞರು, ಸಮಾಜಶಾಸ್ತ್ರಜ್ಞರು ಮುಂತಾದವರನ್ನೊಳಗೊಂಡ ಚಿಂತಕರ ವರ್ಗವು ಇಂಥ ಮಾತುಗಳನ್ನು ಹೇಳುತ್ತಿದೆ. ಎರಡನೆಯದು ಸಾಂಪ್ರದಾಯಿಕ ಸಂದರ್ಭ. ನಮ್ಮ ಸುತ್ತ ಮುತ್ತಲಿನ ಜನರು, ಹಾಗೂ ನಮ್ಮ ಸಂಪ್ರದಾಯ ಹೇಳುವ ಮಾತುಗಳಿವು. ‘ಒಳ್ಳೆಯದು’ ‘ಮಾಡಬೇಕಾದಂಥದ್ದು’ ಎಂಬ ಸ್ಥೂಲ ಅರ್ಥವನ್ನು ಸಧ್ಯಕ್ಕೆ ನೀಡೋಣ. ಜನರ ಮಾತುಗಳಲ್ಲೂ ಈ ಅರ್ಥವು ಸ್ಪಷ್ಟವಾಗಿದೆ. ಯಾವುದು ಧರ್ಮ, ಯಾವುದು ಅಧರ್ಮ ಎಂಬುದನ್ನು ಕಾಲ, ದೇಶ, ವ್ಯಕ್ತಿ, ಭಿನ್ನವಾಗಿ ನಿರ್ಣಯಿಸಬೇಕಾಗುತ್ತದೆ ಎಂಬುದಾಗಿ ನಮ್ಮ ಸಂಪ್ರದಾಯವು ತಿಳಿಸುತ್ತದೆ.

ಮೊದಲನೆಯ ಪ್ರಕಾರದ ವಾಕ್ಯಗಳಲ್ಲಿ ಧರ್ಮ ಎಂಬುದು ರಿಲಿಜನ್ ಎಂಬ ಶಬ್ದದ ಭಾಷಾಂತರವಾಗಿದ್ದರೂ ಕೂಡ ಅದೊಂದು ಅರ್ಥವಿಲ್ಲದ ಶಬ್ದ ಎಂಬುದು ನನ್ನ ವಾದ. ಅಂದರೆ ನಮ್ಮ ಚಿಂತಕರು ಈ ವಾಕ್ಯವನ್ನು ಆಡುತ್ತಿರುವಾಗ ಅರ್ಥವಿಲ್ಲದ ಮಾತನ್ನು ಆಡುತ್ತಿದ್ದಾರೆ. ಇದನ್ನು ಒಂದು ಉದಾಹರಣೆಯ ಮೂಲಕ ಮನದಟ್ಟುಮಾಡಲು ಪ್ರಯತ್ನಿಸುತ್ತೇನೆ. ‘ರಾಜಕೀಯದಿಂದ ಧರ್ಮವನ್ನು ದೂರವಿಡಬೇಕು’. ಎಂಬುದು ಇಂದಿನ ರಾಜಕೀಯದಲ್ಲಿ ಬಹುಚರ್ಚಿತ ವಿಷಯ. ಹಾಗೆ ಪ್ರತಿಪಾದಿಸುವುದು ಪ್ರಗತಿಪರ ನಿಲುವು ಎಂದೆನಿಸಿಕೊಂಡಿದೆ. ಆದರೆ ಈ ವಾಕ್ಯವನ್ನು ಅರ್ಥವಿಲ್ಲದೇ ಬಳಸುತ್ತಿದ್ದೇವೆ ಎಂದರೆ ನಂಬುತ್ತೀರಾ?

ನಮ್ಮ ಜನರ ಪ್ರಕಾರ ಧರ್ಮ ಎಂದರೆ ಒಳ್ಳೆಯ ಕೆಲಸಗಳಿಗೆ ಸಂಬಂಧಿಸಿದ ಒಂದು ಪರಿಕಲ್ಪನೆ. ಭಾರತೀಯ ಲಿಖಿತ ಪರಂಪರೆಯನ್ನು ಜಾಲಾಡಿದರೂ ಕೂಡ ‘ಧರ್ಮ’ ಎಂಬುದು ಒಳ್ಳೆಯದು, ‘ಅಧರ್ಮ’ ಎಂಬುದು ಕೆಟ್ಟದ್ದು ಎಂಬ ಅರ್ಥವು ಸ್ಪಷ್ಟವೇ ಇದೆ. ‘ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು’ ಎಂದು ಭಾಷಣಕಾರರು ಹಾಗೂ ಪತ್ರಿಕೆಗಳು ಅದನ್ನೊಂದು ದೊಡ್ಡ ಮೌಲ್ಯವೆಂಬಂತೆ ಸಾರುತ್ತಿರುವುದು ಇಂಥ ಸಮಾಜದಲ್ಲಿ ಹಾಗೂ ಅದರ ರಾಜಕೀಯದ ಸಂದರ್ಭದಲ್ಲಿ. ಹಾಗಾಗಿ ಜನರಿಗೆ ಅದು ಅರ್ಥವೇ ಆಗಬೇಕಿದ್ದರೆ ಒಂದೇ ಅರ್ಥ: ‘ರಾಜಕೀಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬಾರದು’ ಅಂತ. ಈ ರೀತಿಯ ಅರ್ಥವೇ ಆಗಿದ್ದಲ್ಲಿ ಅದನ್ನು ಕೇಳಿದ ಮರ್ಯಾದಸ್ತರು ಹೌಹಾರುವುದು ಖಂಡಿತ. ‘ಈ ಮಾತನ್ನು ಬೀದಿಯಲ್ಲಿ ನಿಂತು ಹೇಳುವಷ್ಟು ಕಾಲ ಕೆಟ್ಟು ಹೋಯಿತೆ? ಸ್ವಲ್ಪ ಮಾನ ಮರ್ಯಾದೆ ಅಂತ ಬೇಡವೆ?’ ಎನ್ನಲೇ ಬೇಕು. ಆದರೂ ಕೂಡ ನಮ್ಮ ಆಧುನಿಕ ರಾಜಕೀಯದ ಕಾರ್ಯಕ್ರಮಗಳಲ್ಲಿ ಅಥವಾ ಮೌಲ್ಯಗಳಲ್ಲಿ ಒಂದೆಂದರೆ ರಾಜಕೀಯದಿಂದ ಧರ್ಮವನ್ನು ದೂರ ಇಡುವುದು ಎಂಬುದರಲ್ಲಿ ನಮಗ್ಯಾರಿಗೂ ಸಂಶಯವಿಲ್ಲ. ಇದು ವಿಚಿತ್ರ ಆದರೂ ನಿಜ! ಅಲ್ಲವೆ?

ಈ ವಿಚಿತ್ರವನ್ನು ನಾವು ಅರ್ಥಮಾಡಿಕೊಳ್ಳುವುದು ಹೇಗೆ? ಜನರಿಗೆ ಏನು ಅರ್ಥವಾಗಿದೆ ಎನ್ನುವುದು ನಮಗೆ ಗೊತ್ತಿಲ್ಲ. ಅವರು ತಮ್ಮ ವಿವೇಕವನ್ನು ಉಪಯೋಗಿಸಿ ಈ ವಾಕ್ಯವನ್ನು ಅರ್ಥವಾದ ರೀತಿಯಲ್ಲಿ ಅರ್ಥ ಮಾಡದೇ ಅದನ್ನೊಂದು ಅರ್ಥವಾಗದ ವಾಕ್ಯವಾಗಿ ಸ್ವೀಕರಿಸಿದ್ದಾರೆ. ಹಾಗಾಗಿ ಅವರ ಸಂದರ್ಭದಲ್ಲಿ ಅದೊಂದು ಅರ್ಥವಿಲ್ಲದ ವಾಕ್ಯ. ಆದರೆ ಅದೇ ಸಮಾಜದಿಂದ ಬಂದು ಈ ಘೋಷಣೆಯನ್ನು ಮಾಡುತ್ತಿರುವ ವಿದ್ಯಾವಂತರು ಹಾಗೂ ಬುದ್ಧಿವಂತರು ಕೂಡ ತಮ್ಮ ಹೇಳಿಕೆಯನ್ನು ಅರ್ಥ ಮಾಡಿಕೊಂಡಿರುವ ಸಾಧ್ಯತೆ ಇಲ್ಲ ಎಂಬುದು ಕುತೂಹಲಕಾರಿಯಾಗಿದೆ.

ಈ ವಾಕ್ಯವು ‘religion ought to be separated from politics’ ಎಂಬ ಇಂಗ್ಲಿಷ್ ವಾಕ್ಯದ ಕನ್ನಡ ತರ್ಜುಮೆಯಾಗಿದೆ. ಮೂಲ ವಾಕ್ಯಕ್ಕೆ ಒಂದು ನಿರ್ದಿಷ್ಟ ಅರ್ಥವಿದೆ. ಇಂಗ್ಲೀಷಿನಲ್ಲಿ ಈ ಹೇಳಿಕೆಯು ಸೆಕ್ಯುಲರ್ ಪ್ರಭುತ್ವದ ಆಧಾರಸ್ಥಂಭವಾಗಿದೆ. ಸಧ್ಯಕ್ಕೆ ‘ರಿಲಿಜನ್ ಎಂಬ ಸಂಸ್ಥೆಯನ್ನು ರಾಜಕೀಯದಿಂದ ದೂರವಿರಿಸತಕ್ಕದ್ದು’ ಎಂಬುದು ತಾತ್ಪರ್ಯ. ರಾಜಕೀಯ ಚಿಂತಕರು ಈ ಮೂಲ ಇಂಗ್ಲೀಷ್ ವಾಕ್ಯವನ್ನು ದೇಶೀಭಾಷೆಯಲ್ಲಿ ಹೇಳುತ್ತಿದ್ದಾರೆ. ಆದರೆ ರಿಲಿಜನ್ ಶಬ್ದಕ್ಕೆ ಧರ್ಮ ಎಂಬುದಾಗಿ ಭಾಷಾಂತರಿಸಿದಾಗ ಆ ವಾಕ್ಯವನ್ನು ಹೇಳುವವರ ತಲೆಯಲ್ಲಿ ಹೇಗೆ ಎರಡೂ ಸಾಂದರ್ಭಿಕ ಅರ್ಥಗಳೂ ಹೊಳೆಯಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಮುಂದಿನ ಭಾಗದಲ್ಲಿ ನೋಡೋಣ.

ಈ ವಾಕ್ಯವನ್ನು ಬಳಸುತ್ತಿರುವವರು ರಿಲಿಜನ್ ಎಂಬ ಅರ್ಥದಲ್ಲಿ ‘ಧರ್ಮ’ ಶಬ್ದವನ್ನು ಬಳಸುತ್ತಿದ್ದಾರಾದರೆ ಅವರಿಗೆ ರಿಲಿಜನ್ ಅಂದರೆ ಏನೆಂಬುದೇ ತಿಳಿದಿಲ್ಲ ಎನ್ನುವುದು ಸ್ಪಷ್ಟ. ಈ ವಾಕ್ಯವು ಮುಖ್ಯವಾಗಿ ಬಿಜೆಪಿಯ ರಾಮಜನ್ಮಭೂಮಿ, ಇತ್ಯಾದಿ ರಾಜಕೀಯ ತಂತ್ರಗಳ ಸಂದರ್ಭದಲ್ಲಿ ಪ್ರಚಲಿತದಲ್ಲಿ ಬಂದಿದೆ. ಅಂದರೆ ಭಾರತದಲ್ಲಿ ಹಿಂದೂಗಳ ರಿಲಿಜನ್ನಾದ ‘ಹಿಂದೂ ಧರ್ಮ’ ಎಂಬುದೊಂದು ಇದೆ ಎಂಬುದಾಗಿ ಭಾವಿಸಿಕೊಂಡು ರಾಜಕೀಯ ಚಿಂತಕರು ಈ ಮೇಲಿನ ಹೇಳಿಕೆಯನ್ನು ಮಾಡುತ್ತಿರುವುದರಿಂದ ಈ ಹೇಳಿಕೆಗೆ ಅರ್ಥವಿರಬಹುದೆ?

ಆದರೆ ಯಾವ ಉದಾಹರಣೆಗಳನ್ನು ಬಳಸಿ ಇಂಥ ಹೇಳಿಕೆಗಳನ್ನು ಸಮರ್ಥಿಸುತ್ತಿದ್ದಾರೆ ಎಂಬುದನ್ನು ಗಮನಿಸಿ: ನಮ್ಮ ಮಂತ್ರಿಗಳು ಯಾಗ ಯಜ್ಞಗಳನ್ನು ಮಾಡುವುದು, ಸ್ವಾಮಿಗಳ ಪಾದಪೂಜೆಯನ್ನು ಮಾಡುವುದು, ಮಠಮಾನ್ಯಗಳಿಗೆ ದತ್ತಿ ನೀಡುವುದು, ದೇವಾಲಯಗಳನ್ನು ಭೇಟಿ ಮಾಡುವುದು, ಆಫೀಸುಗಳಲ್ಲಿ ದೇವರ ಫೋಟೊ ಇಟ್ಟು ಪೂಜೆ ಮಾಡುವುದು, ತೆಂಗಿನಕಾಯಿ ಒಡೆಯುವುದು, ಶಾಲೆಗಳಲ್ಲಿ ಭಗವದ್ಗೀತೆಯನ್ನು ಓದಿಸುವುದು, ಇತ್ಯಾದಿ ಉದಾಹರಣೆಗಳೇ ಸಿಗುತ್ತವೆ. ಈ ಮೂಲಕ ಬ್ರಾಹ್ಮಣ ಪುರೋಹಿತಶಾಹಿಗಳು, ಹಾಗೂ ಮಠಾಧೀಶರು ಸೇರಿಕೊಂಡು ರಾಜಕೀಯದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಅನ್ನುತ್ತಾರೆ.

‘ರಿಲಿಜನ್ ಎಂಬ ಸಂಸ್ಥೆಯನ್ನು ರಾಜಕೀಯದಿಂದ ದೂರವಿರಿಸತಕ್ಕದ್ದು’ ಎಂಬ ಹೇಳಿಕೆಯಲ್ಲಿ ರಿಲಿಜನ್ ಎಂದರೆ ಏನನ್ನು ಸೂಚಿಸುತ್ತಿದೆ ಎಂಬುದನ್ನು ನಿಜವಾಗಿಯೂ ತಿಳಿದಿರುವವರು ಈ ಮೇಲಿನ ಆಚರಣೆಗಳನ್ನು ರಿಲಿಜನ್ ಎನ್ನಲು ಸಾಧ್ಯವಿಲ್ಲ. ಕ್ರಿಶ್ಚಿಯಾನಿಟಿಯು ರೋಮನ್ ಸಾಮ್ರಾಜ್ಯದ ನಾಶದ ನಂತರ ಕ್ಯಾಥೋಲಿಕ್ ಚರ್ಚಿನ ಅಧಿಕಾರ ವ್ಯವಸ್ಥೆಯನ್ನು ಬೆಳೆಸಿ ಇಡೀ ಯುರೋಪಿನ ರಾಜ್ಯಗಳನ್ನು ತನ್ನ ಪ್ರಭಾವದಲ್ಲಿ ತಂದುಕೊಂಡಿತು. ಚರ್ಚು ದೈವೀ ರಾಜ್ಯವಾಗಿದೆ, ಸೃಷ್ಟಿಕರ್ತನೇ ನಿಜವಾದ ಸಾರ್ವಭೌಮ. ಅದೇ ಶಾಶ್ವತ ಹಾಗೂ ಸತ್ಯವಾದ ರಾಜ್ಯ. ಮನುಷ್ಯನನ್ನು ಹಾಗೂ ಈ ಭೂಮಿಯನ್ನು ಸೃಷ್ಟಿಸಿದವನೇ ಗಾಡ್ ಹಾಗೂ ಅವನ ಉದ್ದೇಶವನ್ನು ಈಡೇರಿಸಲಿಕ್ಕಾಗಿಯೇ ಅವುಗಳ ಸೃಷ್ಟಿಯಾಗಿದೆ. ಹಾಗಾಗಿ ಮನುಷ್ಯರ ರಾಜ್ಯಗಳು ಹಾಗೂ ಅವುಗಳ ಕಾನೂನುಗಳು ಸೃಷ್ಟಿಕರ್ತನ ಉದ್ದೇಶಕ್ಕೆ ಆಧೀನವಾಗಿರಬೇಕು, ಇದೇ ಸತ್ಯ, ಎಂಬುದಾಗಿ ಚರ್ಚು ಪ್ರತಿಪಾದಿಸಿತು. ಅದು ತನ್ನನ್ನು ನಿಜವಾದ ರಿಲಿಜನ್ ಎಂಬುದಾಗಿ ಕರೆದುಕೊಂಡಿತು. ಹಾಗಾಗಿ ರಾಜ್ಯಗಳು ಸಹಜವಾಗಿಯೇ ಕ್ರೈಸ್ತ ತತ್ವಗಳನ್ನು ಪ್ರತಿಪಾದಿಸುವ ಹಾಗೂ ಆಚರಣೆಯಲ್ಲಿ ತರುವ ಲೌಕಿಕ ಸಾಧನಗಳಾದವು. ಸುಮಾರು ಸಾವಿರ ವರ್ಷಗಳ ವರೆಗೆ ಯುರೋಪಿನ ರಾಜಕೀಯವು ಹೀಗೆ ಸಾಗಿಕೊಂಡು ಬಂದಿತು.

ಯುರೋಪಿನ ಆಧುನಿಕ ಕಾಲದಲ್ಲಿ ಕ್ರೈಸ್ತ ಮತದಲ್ಲಿಯೇ ಒಡಕುಗಳು ಹುಟ್ಟಿಕೊಂಡವು. ಬೈಬಲ್ ಪ್ರಕಾರ ಯಾವುದು ನಿಜವಾದ ರಿಲಿಜನ್ ಎಂಬ ಕುರಿತ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಒಂದೊಂದು ಪಂಥವೂ ತನ್ನ ಅರ್ಥನಿರೂಪಣೆಯೇ ಸತ್ಯವೆಂದು ಸಾರಿ ಉಳಿದವನ್ನು ಸುಳ್ಳುಗಳೆಂದು ಯುದ್ಧಸಾರಿದವು. ಒಂದೇ ಪ್ರಭುತ್ವದಲ್ಲೇ ಈ ಎಲ್ಲಾ ಪಂಥಗಳ ಅನುಯಾಯಿಗಳೂ ಪ್ರಜೆಗಳಾಗಿದ್ದರು ಹಾಗೂ ಅವರ ಚರ್ಚುಗಳು ಇದ್ದವು. ಅಂಥ ಸಂದರ್ಭದಲ್ಲಿ ರಾಜ್ಯಗಳು ಯಾವ ಪಂಥವನ್ನು ನಿಜವಾದ ರಿಲಿಜನ್ ಎಂಬುದಾಗಿ ಆಧರಿಸಬೇಕು? ಎಲ್ಲವೂ ಒಬ್ಬನೇ ಗಾಡ್ ಎನ್ನುತ್ತವೆ, ಬೈಬಲ್ಲನ್ನೇ ಪ್ರಮಾಣವಾಗಿಟ್ಟುಕೊಂಡಿವೆ. ಏಸುವೇ ಪ್ರವಾದಿ ಅನ್ನುತ್ತವೆ. ಆದರೆ ಬೈಬಲ್ಲು ಹೇಳಿದ್ದು ಹೀಗಲ್ಲ ಎನ್ನುತ್ತವೆ. ಇದು ಕ್ರೈಸ್ತ ಸತ್ಯವನ್ನಾಧರಿಸಿ ರೂಪುಗೊಂಡ ಐರೋಪ್ಯ ರಾಜ್ಯಗಳಿಗೆ ಅವುಗಳ ಇತಿಹಾಸವು ಸೃಷ್ಟಿಸಿದ ಸಮಸ್ಯೆ. ಇದು ರಿಲಿಜನ್ನುಗಳಿಗೆ ಕೇವಲ ಸತ್ಯದ ಕುರಿತ ವಿವಾದವಾಗಿದ್ದರೆ ಕ್ರೈಸ್ತ ಪ್ರಭುತ್ವಗಳಿಗೆ ಪ್ರಾಯೋಗಿಕ ಸತ್ವಪರೀಕ್ಷೆಯೇ ಆಗಿ ಪರಿಣಮಿಸಿತು.
ಈ ಕ್ಲಿಷ್ಟ ಹಾಗೂ ಅಪಾಯಕಾರೀ ಪರಿಸ್ಥಿತಿಯಿಂದ ಹೊರಬರಲು ಅಂಥ ರಾಜ್ಯಗಳು ಹುಡುಕಿಕೊಂಡ ಮಾರ್ಗವೇ ತಟಸ್ಥನೀತಿ. ಈ ರಿಲಿಜನ್ನುಗಳ ಸತ್ಯವನ್ನು ನಿರ್ಣಯಿಸುವುದು ರಾಜ್ಯಗಳಿಗೆ ಎಟುಕದ ಸಂಗತಿ. ಹಾಗಾಗಿ ರಾಜ್ಯವು ಎಲ್ಲ ಪಂಥಗಳನ್ನೂ ಹಾಗೂ ಅವುಗಳ ಪ್ರತಿಪಾದನೆಯನ್ನೂ ಒಂದೇ ರೀತಿಯಲ್ಲಿ ಹೊರಗಿಡಬೇಕು ಈ ಪೇಚಿನಿಂದ ಹೊರಬರುವ ಉಪಾಯವೆಂದರೆ ರಿಲಿಜನ್ನಿನ (ಚರ್ಚಿನ) ಅಧಿಕಾರಕ್ಕೆ ಹೊರತಾದ ವಲಯವನ್ನು (ಈ ವಲಯವನ್ನು ಸೆಕ್ಯುಲರ್ ಎಂಬುದಾಗಿ ಕರೆಯುತ್ತಾರೆ) ಗುರುತಿಸಿ ಅದರಲ್ಲಿ ಪ್ರಭುತ್ವದ ಪರಿಕಲ್ಪನೆ ಹಾಗೂ ಕಾನೂನುಗಳನ್ನು ರೂಪಿಸಬೇಕು. ಈ ನೀತಿಯನ್ನು ಸೆಕ್ಯುಲರಿಸಂ ಎಂಬುದಾಗಿ ಕರೆದರು. ಯುರೋಪಿನ ರಾಜಕೀಯ ಚಿಂತಕರು ಅಂಥ ಬೌದ್ಧಿಕ ಸಂಪ್ರದಾಯವನ್ನೂ ಬೆಳೆಸಿದರು.

ಆ ಹಿನ್ನೆಲೆಯಲ್ಲಿ ‘ರಿಲಿಜನ್ನನ್ನು ರಾಜಕೀಯದಿಂದ ಬೇರ್ಪಡಿಸತಕ್ಕದ್ದು’ ಎಂಬ ಹೇಳಿಕೆಯು ಹುಟ್ಟಿದೆ. ಇಲ್ಲಿ ರಿಲಿಜನ್ನು ಎಂಬುದು ಚರ್ಚನ್ನೂ ಅದರ ಅಧಿಕಾರವಲಯವನ್ನೂ ಸೂಚಿಸುತ್ತದೆ ಹಾಗೂ ಒಂದು ನಿರ್ದಿಷ್ಟ ಐತಿಹಾಸಿಕ ಘಟನೆಯನ್ನು ಒಳಗೊಂಡಿದೆ. ಒಂದೇ ಸತ್ಯವಾದ ದೇವರು, ಒಂದೇ ಸತ್ಯವಾದ ಗ್ರಂಥ, ಒಬ್ಬನೇ ಸತ್ಯವಾದ ಪ್ರವಾದಿ, ಹೀಗೆ ತಮ್ಮದೇ ಸತ್ಯ, ಉಳಿದವರದು ಸುಳ್ಳು ಎಂಬುದಾಗಿ ಪ್ರತಿಪಾದಿಸುವ ಸಂಸ್ಥೆಯನ್ನು ಪಶ್ಚಿಮದಲ್ಲ್ಲಿ ರಿಲಿಜನ್ ಎಂಬುದಾಗಿ ಕರೆಯಲಾಗಿದೆ. ಈ ದೃಷ್ಟಿಯಿಂದ ನೋಡಿದರೆ ಭಾರತದಲ್ಲಿ ದೇಸೀ ರಿಲಿಜನ್ನುಗಳೇ ಇಲ್ಲ ಹಾಗೂ ಈ ಹಿಂದೆ ಉಲ್ಲೇಖಿಸಿದ ಯಾವ ಆಚರಣೆಗಳೂ ರಿಲಿಜನ್ನಿಗೆ ಸೇರಿದವುಗಳಲ್ಲ.

ಧರ್ಮ ಎನ್ನುವ ದೇಸೀ ಶಬ್ದಾರ್ಥವನ್ನು ಹಿಡಿದು ಹೊರಟರೆ ನಮ್ಮ ರಾಜಕೀಯದಲ್ಲಿ ಪ್ರಚಲಿತದಲ್ಲಿವೆ ಎಂದು ಆರೋಪಿಸಲಾದ ಆಚರಣೆಗಳು ಧರ್ಮದ ವ್ಯಾಪ್ತಿಗೆ ಬರುತ್ತವೆಯೆ? ಧರ್ಮ ಹಾಗೂ ರಿಲಿಜನ್ನುಗಳು ಸಂಪೂರ್ಣವಾಗಿ ಬೇರೆ ಬೇರೆ ಪ್ರಭೇದಗಳು. ಇಂಥ ಕ್ರಿಯೆಗಳು ಧರ್ಮ, ಇಂಥವು ಅಧರ್ಮ ಎಂಬುದಾಗಿ ನಮ್ಮ ಸಂಪ್ರದಾಯಗಳು ಪಟ್ಟಿಮಾಡಿ ಕೊಟ್ಟಿಲ್ಲ. ಹೋಗಲಿ ಧರ್ಮ ಅಧರ್ಮಗಳನ್ನು ನಿರ್ಣಯಿಸುವ ಸೂತ್ರಗಳನ್ನೂ, ಡಾಕ್ಟ್ರಿನ್ನುಗಳನ್ನೂ ಕೂಡ ನಮ್ಮವರು ಸೃಷ್ಟಿಸಿಲ್ಲ. ‘ಆಫೀಸಿನಲ್ಲಿ ತೆಂಗಿನಕಾಯಿ ಒಡೆಯುವುದು ಧರ್ಮವೆ?’ ಎಂಬ ಪ್ರಶ್ನೆಗೆ ದೇಶ, ಕಾಲ, ವ್ಯಕ್ತಿ, ಭಿನ್ನವಾಗಿ ಭಿನ್ನ ನಿರ್ಣಯಗಳು ಹೊರಡಬಹುದು. ಹಾಗಾಗಿ ‘ರಾಜಕೀಯದಿಂದ ಧರ್ಮವನ್ನು ಬೇರ್ಪಡಿಸಬೇಕು’ ಎಂಬುದನ್ನು ಸಂದರ್ಭರಹಿತ ಕ್ರಿಯೆಗಳ ಮೂಲಕ ಉದಾಹರಿಸಿದರೆ ಅದಕ್ಕಿಂತ ಅಸಂಬದ್ಧವಾದುದು ಬೇರೆ ಯಾವುದೂ ಇರಲಾರದು.

ಈ ಎಲ್ಲಾ ಕಾರಣಗಳಿಂದಾಗಿ ‘ಧರ್ಮವನ್ನು ರಾಜಕೀಯದಿಂದ ದೂರವಿಡಬೇಕು’ ಎಂಬ ವಾಕ್ಯದಿಂದ ಹೊರಡಬಹುದಾದ ಒಂದೇ ಒಂದು ದೇಸೀ ಅರ್ಥವೆಂದರೆ ರಾಜಕೀಯದಲ್ಲಿ ಒಳ್ಳೆಯದನ್ನು ಮಾಡಬಾರದು ಅಂತ. ಆದರೆ ಯಾವ ಚಿಂತಕನಿಗೂ ಕೂಡ ತಾನು ಹಾಗೆ ಹೇಳುತ್ತಿದ್ದೇನೆಂಬುದನ್ನು ಭಾವಿಸಿದರೇ ಆಘಾತವಾಗುವುದು ನಿಜ. ಅಂದರೆ ನಮಗಿರುವ ಆಯ್ಕೆ ಒಂದೇ: ಅವರು ತಮಗೇ ಅರ್ಥವಾಗದ ಮಾತನ್ನು ಆಡುತ್ತಿದ್ದಾರೆ ಎಂಬುದಾಗಿ ನಿರ್ಣಯಿಸುವುದು.

Advertisements
 1. Manojkumar
  ಫೆಬ್ರವರಿ 25, 2013 ರಲ್ಲಿ 9:52 ಅಪರಾಹ್ನ

  the magic of this article is that , while reading it any person with basic knowledge of Balu’s theory gets convinced but how to convince our social scientists.

  Like

  • ಮಾರ್ಚ್ 7, 2013 ರಲ್ಲಿ 5:27 ಅಪರಾಹ್ನ

   Hmmmm, Manoj Kumar, you are right, and we too face the same problem. But we still have hopes

   Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: