ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 5: imagesರಿಲಿಜನ್ ನೆಲೆಯಲ್ಲಿ ಹಿಂದೂ ಧರ್ಮದ ಹುಡುಕಾಟ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ನಾವು ಗುಜರಾಯಿಸುವ ಒಂದಿಲ್ಲೊಂದು ಅರ್ಜಿಗಳಲ್ಲಿ ‘ನಿಮ್ಮ ಧರ್ಮ ಯಾವುದು?’ ಎಂಬ ಕಾಲಂ ಇರುತ್ತದೆ. ನನ್ನ ಸ್ಕೂಲಿನಲ್ಲಿ ಮೊತ್ತಮೊದಲ ಬಾರಿಗೆ ಅಂಥ ಒಂದು ಫಾರಂ ಭರ್ತಿ ಮಾಡುವ ಸಂದರ್ಭ ಬಂದಿತು. ಅದರಲ್ಲಿ ನಿಮ್ಮ ರಿಲಿಜನ್/ಧರ್ಮ ಯಾವುದು? ಎಂದಿತ್ತು. ನನಗೆ ಗೊತ್ತಾಗಲಿಲ್ಲ. ತಂದೆಯವರ ಬಳಿ ಕೇಳಿದೆ. ಅವರು ‘ಸಂಕೇತಿ ಅಂತ ಬರೆಯೊ’ ಎಂದದ್ದರಿಂದ ಹಾಗೇ ಬರೆದೆ. (ನಮ್ಮನ್ನು ಸಂಕೇತಿ ಬ್ರಾಹ್ಮಣರೆಂದು ಕರೆಯುತ್ತಾರೆ). ಆದರೆ ಸ್ಕೂಲಿನಲ್ಲಿ ನನ್ನ ಮೇಷ್ಟ್ರು ನನ್ನ ತಲೆಯ ಮೇಲೆ ಬಾರಿಸಿ ‘ಹಿಂದೂ’ ಅಂತ ಬರೆಸಿದರು. ಆಶ್ಚರ್ಯವೆಂದರೆ ಈ ಹಿಂದೂ ಧರ್ಮ ಇದೆ ಎಂಬುದರ ಕುರಿತು ನನಗೆ ನನ್ನ ಹಿರಿಯರು ಒಂದು ಸೂಚನೆಯನ್ನು ಕೂಡ ನೀಡಿರಲಿಲ್ಲ. ಅಷ್ಟರ ನಂತರ ‘ಧರ್ಮ’ ಎಂಬ ಕಾಲಮ್ಮಿನಲ್ಲಿ ‘ಹಿಂದೂ’ ಎಂದು ಬರೆಯುವುದನ್ನು ಕಲಿತೆ. ಇದು ಕೇವಲ ನನ್ನೊಬ್ಬನದೇ ಅನುಭವವಲ್ಲ.

ನಮ್ಮ ಸಂಸ್ಕೃತಿಯ ಬುನಾದಿಯಾದ ಈ ಸಂಗತಿಯನ್ನು ಸ್ಕೂಲಿನಲ್ಲೇ ಏಕೆ ಕಲಿಯುವ ಪ್ರಸಂಗ ಬರುತ್ತದೆ ಎಂಬುದು ನನಗೆ ಅರ್ಥವಾಗದ ಸಂಗತಿಯಾಯಿತು. ಭಾರತದಲ್ಲಿ ಹಿಂದೂ ಧರ್ಮ ಎನ್ನುವುದೊಂದಿದೆ ಎಂಬುದನ್ನೂ, ಅದಕ್ಕೆ ನಾಲ್ಕು ವೇದಗಳೆಂಬ ಧರ್ಮ ಗ್ರಂಥಗಳಿವೆ. ಪುರುಷಾರ್ಥಗಳು ಅದರ ಮೌಲ್ಯಗಳು. ಕರ್ಮ-ಪುನರ್ಜನ್ಮ ಎನ್ನುವುದು ಅದರ ತತ್ವ, ವರ್ಣಾಶ್ರಮ ಅದು ವಿಧಿಸುವ ಜೀವನ ಕ್ರಮ, ಬ್ರಾಹ್ಮಣರು ಅದರ ಪ್ರೀಸ್ಟ್ ಗಳು, ಇತ್ಯಾದಿಗಳನ್ನು ನಮ್ಮ ಪಠ್ಯ ಪುಸ್ತಕಗಳಿಂದ ಕಲಿಯುತ್ತೇವೆ. ಅದು ಪುರೋಹಿತಶಾಹಿ, ಮೂಢ ನಂಬಿಕೆಗಳು ಹಾಗೂ ಜಾತಿ ವ್ಯವಸ್ಥೆಯಂಥ ಅನಿಷ್ಠ ಪದ್ಧತಿಗಳಿಂದ ತುಂಬಿಕೊಂಡಿದೆ ಎಂಬುದನ್ನೂ ಕಲಿಸಲಾಗುತ್ತದೆ. ಹಿಂದೂ ಧರ್ಮವನ್ನು ಆಗಾಗ ಸುಧಾರಣೆಗೆ ಒಳಪಡಿಸಿದ ಇತಿಹಾಸವನ್ನೂ ಕಲಿತೇ ಕಲಿಯುತ್ತೇವೆ.

ಇದರ ಜೊತೆಗೇ ನಾವು ಬುದ್ಧಿ ಬಲ್ಲವರಾದಂತೆ ಅನೇಕ ಚರ್ಚೆಗಳನ್ನೂ ಗಮನಿಸತೊಡಗುತ್ತೇವೆ: ಹಿಂದೂ ಧರ್ಮದ ಧರ್ಮ ಗ್ರಂಥ ವೇದವೇ ಏಕೆ? ಭಗವದ್ಗೀತೆಯೊ, ಮಹಾಭಾರತವೊ ಏಕಲ್ಲ? ವೇದವು ಅಪೌರುಷೇಯವೊ ಅಲ್ಲವೊ? ಲಿಂಗಾಯತರು ಜಾತಿಯೊ ಧರ್ಮವೊ? ಸಿಕ್ಖರು, ಜೈನರು, ಬೌದ್ಧರು ಹಿಂದು ಧರ್ಮಕ್ಕೆ ಸೇರಿದ್ದಾರೊ ಇಲ್ಲವೊ? ಇತ್ಯಾದಿ ಬಗೆಹರಿಯದ ಸಮಸ್ಯೆಗಳು ಈ ಹಿಂದೂ ಧರ್ಮಕ್ಕಿವೆ. ಹಿಂದೂ ಧರ್ಮದ ರಕ್ಷಣೆಗೆಂದೇ ಕಟಿಬದ್ಧವಾದ ಸಂಘಟನೆಗಳು ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವ ಮೂಲಕ ಅದರ ರಕ್ಷಣೆಯಾಗುತ್ತದೆ ಎಂಬುದಾಗಿ ನಂಬಿಕೊಂಡಿವೆ.

ಹೀಗೆ ಸ್ಕೂಲಿನಲ್ಲಿ ತಲೆಯ ಮೇಲೆ ಬಾರಿಸಿಕೊಂಡು ಕಲಿಯಬೇಕಾಗಿ ಬಂದ ಹಿಂದೂ ಧರ್ಮ ಎಂಬುದು ‘ಹಿಂದೂಯಿಸಂ ಅಥವಾ ಹಿಂದೂ ರಿಲಿಜನ್’ ಎಂಬ ಇಂಗ್ಲಿಷ್ ಶಬ್ದದ ಭಾಷಾಂತರ ಎಂಬುದು ನನಗೆ ನಂತರ ತಿಳಿದು ಬಂತು. ಅದರಿಂದೇನೂ ಅಂಥ ದೊಡ್ಡ ವ್ಯತ್ಯಾಸವಾಗಲಿಲ್ಲ ಎನ್ನಿ. ಆದರೆ ನಾನು ಘೆಂಟ್ ವಿಶ್ವವಿದ್ಯಾಲಯಕ್ಕೆ ಬಂದು ರಿಲಿಜನ್ನಿನ ಕುರಿತು ಸಂಶೋಧನೆಯನ್ನು ಕೈಗೊಳ್ಳುತ್ತಿದ್ದ ಸಮಯದಲ್ಲಿ ಇದೊಂದು ಅರ್ಥ ಕಳೆದುಕೊಂಡ ಶಬ್ದವೆಂಬುದು ಮನದಟ್ಟಾಯಿತು.

ಹಿಂದೂ ಧರ್ಮ ಎಂಬುದಾಗಿ ನಾವು ಹೇಳುತ್ತಿರುವಾಗಲೆಲ್ಲ ರಿಲಿಜನ್ ಎಂಬ ಶಬ್ದದ ತರ್ಜುಮೆಯಾಗಿ ಧರ್ಮ ಎಂಬ ದೇಶೀ ಪದವನ್ನು ಬಳಸುತ್ತಿರುತ್ತೇವೆ. ಆದರೆ ಈ ಎರಡು ಕಲ್ಪನೆಗಳೂ ಬೇರೆ ಬೇರೆಯೇ ಆಗಿವೆ. ಧರ್ಮ ಎಂದರೆ ಏನೆಂಬುದನ್ನು ಸ್ಪಷ್ಟವಾಗಿ ತಿಳಿಸಲು ನನಗೂ ಸಧ್ಯಕ್ಕೆ ಸಾಧ್ಯವಿಲ್ಲ. ಆದರೆ ರಾಜ ಧರ್ಮ, ಗ್ರಹಸ್ಥ ಧರ್ಮ, ವರ್ಣಾಶ್ರಮ ಧರ್ಮ, ಎಂದೆಲ್ಲ ಇರುವಂತೆ ಹಿಂದೂ ಎಂಬ ಸಮುದಾಯವು ಪಾಲಿಸತಕ್ಕ ಧರ್ಮ ಎಂಬುದಾಗಿ ಈ ಶಬ್ದಾರ್ಥವನ್ನು ಯಾರೂ ಸೂಚಿಸುತ್ತಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿದೆ. ಏಕೆಂದರೆ ಈ ಧರ್ಮದಲ್ಲಿ ಧರ್ಮಗ್ರಂಥ, ಪುರೋಹಿತಶಾಹಿ, ಧರ್ಮತತ್ವಗಳು, ಇತ್ಯಾದಿ ಸಂಗತಿಗಳು ಇರತಕ್ಕದ್ದು ಎಂಬುದಾಗಿ ಎಲ್ಲರೂ ಭಾವಿಸಿದ್ದಾರೆ. ಇವು ನಮ್ಮ ಧರ್ಮ ಕಲ್ಪನೆಗೆ ಅಪರಿಚಿತವಾದ ಸಂಗತಿಗಳು. ಬದಲಾಗಿ ಈ ಸಂಗತಿಗಳು ಪಾಶ್ಚಾತ್ಯ ‘ರಿಲಿಜನ್ನು’ ಎಂಬ ಪರಿಕಲ್ಪನೆಯ ಭಾಗಗಳು. ಆದರೆ ವಿಚಿತ್ರವೆಂದರೆ ಹಿಂದೂಧರ್ಮ ಎಂಬ ಶಬ್ದವು ರಿಲಿಜನ್ನಿನ ಕಲ್ಪನೆಯನ್ನು ಕೊಡಲಿಕ್ಕೂ ಸಾಧ್ಯವಿಲ್ಲ.

ಕ್ರಿಶ್ಚಿಯಾನಿಟಿ, ಇಸ್ಲಾಂ ಹಾಗೂ ಜೂಡಾಯಿಸಂ ಎಂಬ ಈ ಮೂರನ್ನು ಮಾತ್ರವೇ ರಿಲಿಜನ್ನುಗಳೆನ್ನಬಹುದು. ಇವುಗಳ ಪ್ರಕಾರ ಈ ಪ್ರಪಂಚವನ್ನು ಸೃಷ್ಟಿಸಿ ಅದರಿಂದ ಹೊರಗೆ ನಿಂತು ಅದನ್ನು ನಿರ್ದೇಶಿಸುತ್ತಿರುವ ಒಬ್ಬ ದೇವನಿದ್ದಾನೆ. ಅವನನ್ನು ಗಾಡ್, ಅಲ್ಲಾ, ಎಹೋವಾ ಎಂಬುದಾಗಿ ಆಯಾ ರಿಲಿಜನ್ನುಗಳು ಕರೆದುಕೊಳ್ಳುತ್ತವೆ. ಆಡಂ ಮತ್ತು ಈವ್ ಎಂಬ ಮಾನವರ ಆದಿ ಪುರುಷರು ಆತನ ಸೃಷ್ಟಿ. ಅವರಿಬ್ಬರೂ ಗಾಡ್ನ ಆಜ್ಞೆಯನ್ನು ಮೀರಿ ಶಪಿತರಾಗಿ ಈ ಭೂಲೋಕದಲ್ಲಿ ಬೀಳುವುದರ ಮೂಲಕ ಇಲ್ಲಿ ಮನುಷ್ಯ ಸಂತತಿ ನಿರ್ಮಾಣವಾಯಿತು. ಹಾಗಾಗಿ ಈ ಭೂಮಿಯ ಮೇಲೆ ಇರುವ ಸಮಸ್ತ ಮಾನವರೂ ಕೂಡ ದೇವಲೋಕ ಭ್ರಷ್ಟರಾಗಿ ಭೂಮಿಗೆ ಬಿದ್ದ ಪಾಪಿಗಳು. ಈ ಮನುಷ್ಯರು ಮತ್ತೆ ಗಾಡ್ನನ್ನು ಸೇರಬೇಕೆಂದರೆ ಅವನ ಉದ್ದೇಶದಂತೆ ನಡೆಯಬೇಕು. ಆ ಮಾರ್ಗವೇ ರಿಲಿಜನ್.

ರಿಲಿಜನ್ನುಗಳು ತಮ್ಮ ಬಗ್ಗೆ ಏನನ್ನು ಹೇಳಿಕೊಳ್ಳುತ್ತವೆ? ಮನುಷ್ಯನನ್ನು ಸತ್ಯದೇವನ ಜೊತೆಗೆ ಮತ್ತೆ ಜೋಡಿಸುವ ಮಾರ್ಗವೇ ರಿಲಿಜನ್. ಈ ಶಬ್ದದ ಮೂಲ ಧಾತುವಾದ ರಿ-ಲಿಗೇರ್ ಎಂದರೆ ಮತ್ತೆ ಜೋಡಿಸುವುದು ಎಂದರ್ಥ. ಈ ಮಾರ್ಗವನ್ನು ಹೇಳಿಕೊಟ್ಟವನೂ ಅದೇ ಸತ್ಯದೇವನೇ ಆದ್ದರಿಂದ ಅದೇ ಅಧಿಕೃತ. ಇಲ್ಲಿ ತಿಳಿಸಿದ ಸೆಮೆಟಿಕ್ ಕಥೆಯ ಸಂದರ್ಭದಲ್ಲಿ ಮಾತ್ರವೇ ಆ ಶಬ್ದಕ್ಕೆ ಅರ್ಥವಿದೆ. ರಿಲಿಜನ್ನುಗಳು ಈ ಪ್ರಪಂಚದ ಕುರಿತ ಒಂದು ನಿರ್ದಿಷ್ಟ ರೀತಿಯ ನಿರೂಪಣೆಗಳು. ಈ ಸೃಷ್ಟಿ ಹಾಗೂ ಪ್ರಾಪಂಚಿಕ ವಿದ್ಯಮಾನಗಳ ಹಿಂದಿನ ಕಾರಣವಾಗಿ ಒಬ್ಬನೇ ಸತ್ಯದೇವನ ಯೋಜನೆ ಇದೆ ಎಂಬುದಾಗಿ ಅವು ಸಾರುತ್ತವೆ.

ಈ ರಿಲಿಜನ್ನುಗಳಿಗೆ ತಮ್ಮದೇ ಸತ್ಯವಾದ ಕಥೆ ಎಂಬುದನ್ನು ಸ್ಥಾಪಿಸುವುದು ಅತ್ಯಂತ ನಿರ್ಣಾಯಕ. ತಮ್ಮದು ಸತ್ಯ ಎಂಬುದನ್ನು ಸಾಧಿಸಬೇಕಾದರೆ ತಮ್ಮದೇ ಸತ್ಯದೇವನ ನಿಜವಾಣಿ ಎಂಬ ನಂಬಿಕೆಯನ್ನು ರಕ್ಷಿಸಿಕೊಂಡು ಬರಬೇಕು. ಈ ಕಾರಣದಿಂದ ಪವಿತ್ರಗ್ರಂಥ ಹಾಗೂ ಪ್ರವಾದಿಯ ಮೇಲಿನ ನಂಬಿಕೆಗೆ ಅವರಲ್ಲಿ ಆದ್ಯ ಮಹತ್ವ. ಒಂದೆಡೆ ಮೊಹಮ್ಮದನೇ ಸತ್ಯವಾದ ಪ್ರವಾದಿ, ಖೊರಾನೇ ಸತ್ಯ ಎಂದು ನಂಬಿ ಮತ್ತೊಂದೆಡೆ ಕ್ರೈಸ್ತನಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ ನೀವು ಸತ್ಯವೆಂದು ನಂಬಿದ ದೇವನಲ್ಲೇ ಭರವಸೆಯಿಡಬೇಕು. ಹಾಗಾಗಿ ಒಂದು ರಿಲಿಜನ್ನಿಗೆ ಸೇರಬೇಕಾದರೆ ಆ ರಿಲಿಜನ್ನು ತಿಳಿಸುವ ಸತ್ಯದಲ್ಲಿ ನಂಬಿಕೆ ಕಡ್ಡಾಯ. ಆಯಾ ರಿಲಿಜನ್ನಿಗೆ ಸೇರಿದವರ ಆಚರಣೆಯನ್ನು ಅವರವರ ಡಾಕ್ಟ್ರಿನ್ನುಗಳು ನಿರ್ದೆೇಶಿಸಬೇಕು. ಈ ಡಾಕ್ಟ್ರಿನ್ನುಗಳನ್ನೇ ‘ಧರ್ಮತತ್ವ’ ಎಂಬುದಾಗಿ ನಾವು ಭಾಷಾಂತರಿಸಿದ್ದೇವೆ.

ಕ್ರೈಸ್ತರ ಪ್ರಕಾರ ಎಲ್ಲ ಮಾನವರಿಗೂ ಗಾಡ್ನ ಕುರಿತು ತುಡಿತ ಇದ್ದೇ ಇರುತ್ತದೆ. ಇದನ್ನೇ ಸಿದ್ಧಾಂತೀಕರಿಸಿದ ಪಾಶ್ಚಾತ್ಯ ವಿದ್ವಾಂಸರು ರಿಲಿಜನ್ನು ಮಾನವ ಸಂಸ್ಕೃತಿಯ ಒಂದು ಅವಿಭಾಜ್ಯವಾದ ಅಂಗ ಎಂದು ನಂಬಿಕೊಂಡಿದ್ದರು. ಭಾರತದೊಳಗೆ ಪಾಶ್ಚಾತ್ಯರ ಪ್ರವೇಶವು ಆಗುವ ವೇಳೆಗೆ ಇಲ್ಲಿರುವ ಇಸ್ಲಾಂ ಅವರಿಗೆ ಪರಿಚಿತವಾಗಿತ್ತು. ಆದರೆ ಮುಸ್ಲಿಮರಿಗೆ ಹೊರತಾಗಿ ಕೂಡ ಇಲ್ಲಿ ಅನೇಕ ಸಂಪ್ರದಾಯಗಳು ಕಂಡುಬಂದವು. ಅವುಗಳನ್ನು ಆಚರಿಸುವವರನ್ನು ಮುಸ್ಲಿಮರು ‘ಹಿಂದೂ’ಗಳೆಂಬುದಾಗಿ ಗುರುತಿಸಿದ್ದರು. ಅಂಥವರ ಸಾಂಪ್ರದಾಯಿಕ ಆಚರಣೆಗಳನ್ನು ಹಿಂದೂ ರಿಲಿಜನ್ನೆಂಬುದಾಗಿ ಭಾವಿಸಲಾಯಿತು. ಆದರೆ ವಿದ್ವಾಂಸರಿಗೆ ಒಂದು ಸಮಸ್ಯೆ ಎದುರಾಯಿತು. ಇದು ರಿಲಿಜನ್ನೆಂದ ಮೇಲೆ ಇವರ ನಂಬಿಕೆಗಳಿಗೆ ಆಧಾರವಾಗಿರುವ ಧರ್ಮಗ್ರಂಥ, ತತ್ವ (ಡಾಕ್ಟ್ರಿನ್), ಪ್ರವಾದಿ ಎಲ್ಲ ಇರಬೇಕಲ್ಲ? ಅವು ಯಾವವು? ಈ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಹಾಗಾಗಿ ಒಂದು ಕಾಲದಲ್ಲಿ ಶುದ್ಧವಾಗಿದ್ದ ಹಿಂದೂಯಿಸಂ ಈಗ ಭ್ರಷ್ಟಗೊಂಡಿದೆಯಾದ್ದರಿಂದ ಜನರೆಲ್ಲ ಅವನ್ನು ಮರೆತಿದ್ದಾರೆ ಎಂಬುದಾಗಿ ತೀರ್ಮಾನಿಸಿದರು.

ಇಷ್ಟಾದರೂ ಸಮಸ್ಯೆ ಹಾಗೇ ಉಳಿಯಿತು. ಶುದ್ಧವಾದ ಹಿಂದೂಯಿಸಂನ ಆದ್ಯ ತತ್ವ ಯಾವುದು? ಅದು ಶುದ್ಧ ಎಂಬುದನ್ನು ಹೇಗೆ ಗುರುತಿಸಬೇಕು? ಈ ಹುಡುಕಾಟದಲ್ಲಿ ತೊಡಗಿದ ವಿದ್ವಾಂಸರು ಪ್ರೊಟೆಸ್ಟಾಂಟ್ ತತ್ವಗಳೇ ಸತ್ಯವೆಂಬುದಾಗಿ ನಂಬಿಕೊಂಡಿದ್ದರು. ಹಾಗಾಗಿ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಪ್ರತಿಪಾದನೆಗಳೇ ಶುದ್ಧತೆಗೆ ಪ್ರಮಾಣಗಳಾದವು. ಈ ರೀತಿಯಲ್ಲಿ ನಿರಾಕಾರೋಪಾಸನೆ, ಏಕೈಕ ಸತ್ತಿನ ಕಲ್ಪನೆ, ಸಮಾನತೆ, ಸ್ವಾತಂತ್ರ್ಯ, ವೈಚಾರಿಕತೆ ಇತ್ಯಾದಿ ತತ್ವಗಳನ್ನು ನಿರೂಪಿಸಬಲ್ಲ ಸಾಲುಗಳನ್ನು ನಮ್ಮ ಪ್ರಾಚೀನ ಗ್ರಂಥಗಳಿಂದ ಆಯ್ದು ಅವನ್ನು ಶುದ್ಧ ಹಿಂದೂಯಿಸಂನ ತತ್ವಗಳೆಂಬುದಾಗಿ ಗುರುತಿಸಲಾಯಿತು. ಮೂರ್ತಿಪೂಜೆ, ಜಾತಿ ಭೇದ, ಪೌರೋಹಿತ್ಯ ಇತ್ಯಾದಿಗಳನ್ನು ಭ್ರಷ್ಟ ಆಚರಣೆಗಳೆಂಬುದಾಗಿ ನಿರ್ಣಯಿಸಲಾಯಿತು. ಏಕೆಂದರೆ ಯುರೋಪಿನಲ್ಲಿ ಕ್ಯಾಥೋಲಿಕರ ರಿಲಿಜನ್ನು ಭ್ರಷ್ಟವಾಗಿದೆ ಎಂಬುದಕ್ಕೆ ಪ್ರೊಟೆಸ್ಟಾಂಟರು ಇದೇ ಲಕ್ಷಣಗಳನ್ನು ಆರೋಪಿಸಿದ್ದರು.

ಒಟ್ಟಿನಲ್ಲಿ ಜಗತ್ತಿನ ಎಲ್ಲೆಡೆಯಲ್ಲೂ ರಿಲಿಜನ್ನುಗಳನ್ನು ಹುಡುಕುವ ಕಸರತ್ತಿನ ಪರಿಣಾಮವಾಗಿ ರಿಲಿಜನ್ನೆಂದರೆ ಏನೆಂಬುದೇ ವಿದ್ವಾಂಸರಿಗೆ ಒಗಟಾಗಿ ಹೋಯಿತು. ಈ ವೈಚಾರಿಕ ಗೊಂದಲಗಳನ್ನೆಲ್ಲ ರಿಲಿಜನ್ನಿನ ಅಧ್ಯಯನಗಳು ಭಾರತೀಯರಿಗೆ ದಾಟಿಸಿರುವುದರಿಂದ ಹಿಂದೂಯಿಸಂ ರಿಲಿಜನ್ನಲ್ಲವೆಂಬ ಸರಳ ಸತ್ಯವು ಇಂದು ನಮಗೆ ಕಾಣದಂತಾಗಿದೆ. ಒಂದು ನಾಗರಿಕ ಸಂಸ್ಕೃತಿಯ ಪರಮಾರ್ಥವೇ ರಿಲಿಜನ್ನು ಎಂಬ ಭಾವನೆಯನ್ನು ಯುರೋಪಿಯನ್ನರು ನಮ್ಮಲ್ಲಿ ರೂಢಿಸಿಬಿಟ್ಟಿದ್ದಾರೆ. ಹಾಗಾಗಿ ಅದು ಇದೆ ಎಂಬುದನ್ನು ಸಾಧಿಸದಿದ್ದರೆ ನಾವು ಅನಾಗರಿಕರಾಗಿಬಿಡುತ್ತೇವೆಂಬ ಭಯವೂ ಇದೆ.
ಇದುವರೆಗೂ ಹಿಂದೂ ಧರ್ಮದ ಕುರಿತು ಮಾತನಾಡಿದ ಉದ್ದಾಮ ಪಂಡಿತರೆಲ್ಲರೂ ಇಂಥ ಮೂಲಭೂತ ಗೊಂದಲಗಳನ್ನು ಅರ್ಥಮಾಡಿಕೊಳ್ಳುವುದರ ಕುರಿತು ಅಷ್ಟಾಗಿ ಲಕ್ಷ್ಯ ವಹಿಸಿಲ್ಲ. ಆದರೆ ಎಡವಟ್ಟನ್ನು ರಿಪೇರಿ ಮಾಡಲಿಕ್ಕೆ ಹೋಗಿ ಮತ್ತಷ್ಟು ಗೊಂದಲಗಳನ್ನು ಮೈಮೇಲೆ ಹಾಕಿಕೊಂಡಿದ್ದಾರೆ. ಹಾಗಾಗೇ ನಮ್ಮ ಹಿಂದಿನ ಚಿಂತಕರನೇಕರು ಹಿಂದೂಧರ್ಮವು ಸೆಮೆಟಿಕ್ ರಿಲಿಜನ್ನುಗಳಂತಿಲ್ಲ, ಹಿಂದೂ ಎಂಬ ರಿಲಿಜನ್ನು ಅಸ್ತಿತ್ವದಲ್ಲಿಲ್ಲ, ಎಂದೆಲ್ಲ ಒಳನೋಟಗಳನ್ನು ನೀಡುತ್ತಾರೆ. ಇಷ್ಟಾಗಿಯೂ ಅವರ ಮಾತಿನಲ್ಲಿ ‘ಹಿಂದೂ ಧರ್ಮವು ಬೇರೆ ಥರದ ರಿಲಿಜನ್ನು’ ಅಥವಾ ‘ಭಾರತದಲ್ಲಿ ಹಿಂದೂ ಎಂಬ ಹೆಸರಿನ ರಿಲಿಜನ್ನಿಲ್ಲ ಆದರೆ ‘ಶೈವ, ವೈಷ್ಣವ, ಶಾಕ್ತ, ಇತ್ಯಾದಿ ರಿಲಿಜನ್ನುಗಳು ಇವೆ’ ಎಂಬ ಅಭಿಪ್ರಾಯವು ನುಸುಳಿಬಿಡುತ್ತದೆ.

ನಾನು ಹೇಳುವುದೇ ಬೇರೆ. ‘ಭಾರತೀಯ ನೆಲದಲ್ಲಿ ಹುಟ್ಟಿ ಬೆಳೆದ ಯಾವ ರಿಲಿಜನ್ನುಗಳೂ ಇಲ್ಲ. ಹಾಗಾಗಿ ಹಿಂದೂ ಧರ್ಮ ಎಂಬ ಶಬ್ದಕ್ಕೆ ಧರ್ಮ ಎಂಬ ನೆಲೆಯಲ್ಲಾಗಲೀ, ರಿಲಿಜನ್ ಎಂಬ ನೆಲೆಯಲ್ಲಾಗಲೀ ಅರ್ಥ ಹೊರಡಲಿಕ್ಕೆ ಸಾಧ್ಯವೇ ಇಲ್ಲ’.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: