ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

images (1)ಕಂತು 6: ಮೂರ್ತಿಪೂಜೆಯು ಅನೈತಿಕವೆಂಬ ಅಭಿಪ್ರಾಯವು ಎಲ್ಲಿಂದ ಹುಟ್ಟಿಕೊಂಡಿತು?

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ನಮಗೆಲ್ಲಾ ಗೊತ್ತಿರುವ ಒಂದು ವಿಷಯ. ನಮ್ಮ ಸಾಂಪ್ರದಾಯಿಕ ಪೂಜಾಚರಣೆಗಳಲ್ಲಿ ವಿಚಾರವಂತರೆನ್ನಿಸಿಕೊಂಡವರು ಭಾಗವಹಿಸಬಾರದೆನ್ನುವ ನಿಲುವು ಪ್ರಗತಿಪರರಲ್ಲಿ ಒಮ್ಮೆ ಇತ್ತು ಹಾಗೂ ಈಗಲೂ ತಕ್ಕಮಟ್ಟಿಗೆ ಇದೆ. ಅಂಥವರಲ್ಲಿ ಕೆಲವರಿಗೆ ಖಾಸಗಿಯಾಗಿ ಇಲ್ಲವೇ ಸಾರ್ವಜನಿಕವಾಗಿ ಪೂಜಾಚರಣೆಯಲ್ಲಿ ಭಾಗವಹಿಸುವ ಫಜೀತಿ ಬಂದೊದಗಿದಾಗ ಅದು ಮಾಧ್ಯಮಗಳಲ್ಲಿ ಟೀಕೆಗೊಳಗಾದದ್ದೂ ಇದೆ. ಏಕೆ ಪೂಜೆಯೆಂಬ ಸಂಗತಿಯು ಪ್ರಗತಿಪರರಿಗೆ ಮೈಲಿಗೆಯ ಹಾಗೂ ಮುಜಗುರದ ವಿಷಯವಾಯಿತು? ಈ ಪ್ರಶ್ನೆಯ ಉತ್ತರಕ್ಕೆ ಹಲವು ಮುಖಗಳಿವೆ. ಒಂದು ಮುಖವೆಂದರೆ ಪ್ರಗತಿಪರರು ಮೂರ್ತಿಪೂಜೆಗೂ ಭಾರತದಲ್ಲಿ ಇದೆ ಎನ್ನಲಾದ ಅನೀತಿ ಅನ್ಯಾಯಗಳಿಗೂ ತಳಕು ಹಾಕುತ್ತಾರೆ, ಬತ್ತಲೆಸೇವೆ, ಮಡೆಮಡೆಸ್ನಾನ, ಪ್ರಾಣಿ ಬಲಿ, ಇತ್ಯಾದಿ ಆಚರಣೆಗಳು ವಿವಾದಾಸ್ಪದವಾಗಿರುವುದು ಇದೇ ಕಾರಣಕ್ಕೆ.

ದೇವತೆಗಳ ಮೂರ್ತಿಗಳನ್ನು ಪೂಜಿಸುವುದು ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟತೆ. ತೀರಾ ಲೌಕಿಕ ಮಟ್ಟದಿಂದ ಹಿಡಿದು ಆಧ್ಯಾತ್ಮಿಕ ಮಟ್ಟದವರೆಗಿನ ಪುರುಷಾರ್ಥ ಸಿದ್ಧಿಗಾಗಿ ಅದನ್ನು ಆಚರಿಸಲಾಗುತ್ತದೆ. ಕಷ್ಟಗಳು ಎದುರಾದಾಗ, ಆತಂಕಗೊಂಡಾಗ ಅದರಿಂದ ಪಾರಾಗಲು ನಮಗೆ ಈ ದೇವತೆಗಳು ಬೇಕು. ಈ ಪೂಜೆಯ ಧ್ಯಾನ, ಅನುಷ್ಠಾನ, ವ್ರತ, ಜಪ, ಭಜನೆ, ಹರಕೆ, ಇತ್ಯಾದಿ ಅನೇಕ ಆಯಾಮಗಳನ್ನು ಹೊಂದಿದೆ. ಕೆಲವರು ಇಂಥ ಪೂಜೆಗಳಲ್ಲಿ ಹೆಚ್ಚು ನಿಷ್ಠೆಯಿಂದ ತೊಡಗಿಕೊಂಡಿರುತ್ತಾರೆ ಹಾಗೂ ನಮ್ಮ ಸಮಾಜದಲ್ಲಿ ಅಂಥವರಿಗೆ ವಿಶೇಷ ಗೌರವವಿದೆ. ನಮ್ಮ ಸಂಪ್ರದಾಯಗಳು ತಿಳಿಸುವ ಭಕ್ತರ ಅಥವಾ ಶರಣರ ಕಥೆಗಳಲ್ಲಿ ಅಂಥವರನ್ನು ಧರ್ಮನಿಷ್ಠೆ ಹಾಗೂ ಸದಾಚಾರಕ್ಕೆ ಮಾದರಿಗಳೆಂಬಂತೆ ಚಿತ್ರಿಸಿರುತ್ತಾರೆ. ಅನೈತಿಕತೆ ಹಾಗೂ ಅನಾಚಾರವುಳ್ಳ ವ್ಯಕ್ತಿಗಳು ಇಂಥವರ ವಿರೋಧಿಗಳಾಗಿರುತ್ತಾರೆ ಹಾಗೂ ಕೊನೆಗೂ ಸೋಲುತ್ತಾರೆ. ಪೂಜೆ ನಡೆಸುವವರ ನಿಷ್ಠೆ, ಉದ್ದೇಶಗಳ ಕುರಿತು ಟೀಕೆಗಳು ಸಾಧ್ಯವಿದ್ದರೂ ಆ ಕಾರಣಕ್ಕಾಗಿ ಯಾರೂ ಪೂಜೆಯ ಆಚರಣೆಯನ್ನೇ ದೂಷಿಸುವುದಿಲ್ಲ. ಇದು ಇಂದಿಗೂ ನಮ್ಮ ಸಾಂಪ್ರದಾಯಿಕ ಸಮಾಜದ ವಾಸ್ತವ.

ಇಂಥ ಒಂದು ಸಂಸ್ಕೃತಿಯಲ್ಲಿ ಮೂರ್ತಿಪೂಜೆ ಮಾಡುವುದು ಸರಿಯಲ್ಲ ಎಂಬ ತಿಳುವಳಿಕೆ ಎಲ್ಲಿಂದ ಬಂದಿತು ಹಾಗೂ ಏಕೆ ಬಂದಿತು ಎಂಬುದು ಕುತೂಹಲಕಾರಿ ವಿಷಯ. ಅದಕ್ಕೂ ಕುತೂಹಲಕಾರಿಯಾದದ್ದು ಮೂರ್ತಿಪೂಜೆ ಎಂದರೇನು? ಎಂಬುದು. ಮೂರ್ತಿಪೂಜೆಯೆಂದರೆ ದೇವತಾ ಮೂರ್ತಿಗಳನ್ನು ಇಟ್ಟು ಪೂಜಿಸುವ ಆಚರಣೆ ಎಂದು ತಿಳಿದಿದ್ದೇವೆ. ಆದರೆ ಅದು ಕೆಟ್ಟದ್ದು ಎಂದು ಭಾವಿಸುವಾಗ ಈ ಶಬ್ದವು ಐಡೋಲೇಟ್ರಿ ಎಂಬ ಕ್ರಿಶ್ಚಿಯನ್ ಪರಿಕಲ್ಪನೆಯ ಭಾಷಾಂತರವಾಗಿರುತ್ತದೆ ಎಂಬುದು ನಮಗೆ ತಿಳಿದಿರುವುದಿಲ್ಲ. ಐಡೋಲೇಟ್ರಿ ಎಂದರೆ ಸುಳ್ಳು ರಿಲಿಜನ್ನನ್ನು ಹಾಗೂ ಪಾಪಕಾರ್ಯಗಳನ್ನು ಒಟ್ಟಾರೆಯಾಗಿ ಸೂಚಿಸುವ ಶಬ್ದ. ಹಾಗಾಗಿ ಐಡೋಲೇಟ್ರಿಯು ಮೂರ್ತಿಪೂಜೆಯನ್ನು ನಡೆಸುವ ಜನರ ಜೀವನ ಕ್ರಮವನ್ನೇ ಅನೈತಿಕವಾಗಿ ಮಾಡುತ್ತದೆ.

ರಿಲಿಜನ್ನುಗಳು ಮೂರ್ತಿಪೂಜೆಗೂ ಪಾಪಕಾರ್ಯಕ್ಕೂ ಸಂಬಂಧವನ್ನು ಹೇಗೆ ಕಲ್ಪಿಸುತ್ತವೆ? ಇದಕ್ಕೆ ‘ಟೆನ್ ಕಮಾಂಡ್ಮೆಂಟ್ಸ್ ಎಂಬ ಇಂಗ್ಲೀಷ್ ಚಿತ್ರವನ್ನು ಉದಾಹರಿಸಬಹುದು. ಅದು ಬೈಬಲ್ಲಿನ ಕಥೆ. ಮೋಸೆಸ್ ತನ್ನ ಯೆಹೂದಿ ಜನರನ್ನು ಇಜಿಪ್ತಿನಿಂದ ಬಿಡಿಸಿಕೊಂಡು ಬಂದು ಸಿನಾಯ್ ಪರ್ವತದ ಬಳಿ ಅವರನ್ನು ನಿಲ್ಲಿಸಿ ಗಾಡ್ನಿಂದ ಹತ್ತು ಆಜ್ಞೆಗಳನ್ನು ತರಲು ಪರ್ವತದ ಮೇಲೆ ಹೋಗಿರುತ್ತಾನೆ. ಇತ್ತ ಅವನ ಜನರು ಮೂರ್ತಿಯೊಂದನ್ನು ಮಾಡಿ ಪೂಜಿಸುತ್ತಾರೆ. ಪೂಜೆ ಮಾಡಿದ ತಕ್ಷಣವೇ ಅವರ ಮನಸ್ಸು ಕೆಟ್ಟುಹೋಗುತ್ತದೆ. ಅವರು ಅನಾಚಾರ-ಅತ್ಯಾಚಾರಗಳನ್ನು ಮಾಡಲು ಶುರುವಿಟ್ಟುಕೊಳ್ಳುತ್ತಾರೆ. ಅವರಲ್ಲಿದ್ದ ನಾಗರಿಕ ಲಕ್ಷಣಗಳೆಲ್ಲಾ ಮಾಯವಾಗುತ್ತವೆ. ಹೀಗೆ ಮೂರ್ತಿಪೂಜೆ ಮಾಡಿದ ತಕ್ಷಣ ಮನುಷ್ಯನ ಮನಸ್ಸು ಪಾಪಕಾರ್ಯಕ್ಕೆ ಎಳೆಯುತ್ತದೆ. ಈ ಮೇಲಿನ ದೃಶ್ಯವು ಭಾರತೀಯ ಸಂಸ್ಕೃತಿಯಲ್ಲಿ ಬೆಳೆದವರ ಅನುಭವಕ್ಕೆ ದಕ್ಕುವುದಿಲ್ಲ. ಏಕೆಂದರೆ ಮನುಷ್ಯನ ಮನಸ್ಸನ್ನು ಪುಣ್ಯಕಾರ್ಯಗಳತ್ತ ಎಳೆಯಲಿಕ್ಕೆ ಮೂರ್ತಿಪೂಜೆ ಸಾಧನ ಎನ್ನುತ್ತದೆ ಈ ಸಂಸ್ಕೃತಿ.
ರಿಲಿಜನ್ನುಗಳೇಕೆ ಮೂರ್ತಿಪೂಜೆಯನ್ನು ಪಾಪವೆನ್ನುತ್ತವೆ? ಏಕೆಂದರೆ ಸತ್ಯದೇವನನ್ನು ಮಾತ್ರವೇ ಆರಾಧಿಸಬೇಕು ಹಾಗೂ ಅದಕ್ಕೆ ಪವಿತ್ರ ಗ್ರಂಥದಲ್ಲಿ ಉಲ್ಲೇಖಿಸಿದ ವರ್ಷಿಪ್ ನ ಮಾರ್ಗವನ್ನು ಬಿಟ್ಟರೆ ಬೇರಾವ ರೀತಿಯೂ ಅಧಿಕೃತವಲ್ಲ, ಇದು ದೈವಾಜ್ಞೆ. ದೈವಾಜ್ಞೆಯನ್ನು ಮೀರುವುದು ಸಿನ್(ಪಾಪ) ಎನ್ನಿಸಿಕೊಳ್ಳುತ್ತದೆ. ಮೂರ್ತಿಗಳ ರೂಪದಲ್ಲಿ ಪೂಜಿಸಲಾಗುವ ದೇವತೆಗಳು ಡೆವಿಲ್ ಅಥವಾ ಶೈತಾನನ ಮೋಸಗಳು. ಸತ್ಯದೇವನನ್ನು ಒಪ್ಪಿಕೊಳ್ಳದ ದುಷ್ಟ ಶಕ್ತಿಯೇ ಡೆವಿಲ್. ಇವನು ಸುಳ್ಳು ದೇವತೆಗಳನ್ನು ಸೃಷ್ಟಿಮಾಡಿ ಸತ್ಯದೇವನತ್ತ ಮುಖಮಾಡಿದ ಜನರನ್ನು ದಾರಿ ತಪ್ಪಿಸುತ್ತಿರುತ್ತಾನೆ. ಆ ದೇವತೆಗಳ ಹಿಂದೆ ಅಡಗಿ ಅದರ ಶಕ್ತಿಯನ್ನು ತೋರಿಸಿ ಜನರಿಗೆ ಭ್ರಾಂತಿಯನ್ನು ಉಂಟುಮಾಡುತ್ತಾನೆ. ಮೂರ್ತಿಪೂಜೆಯ ಮೂಲಕ ಜನರು ಗಾಡ್ ನ ಆಜ್ಞೆಯನ್ನು ಮೀರಿ ಪಾಪವನ್ನು ಗೈಯುವುದರಿಂದ ಡೆವಿಲ್ನ ಲೋಕವಾದ ನರಕದಲ್ಲಿ ಬಿದ್ದು ಶಾಶ್ವತವಾಗಿ ಕೊಳೆಯುತ್ತಾರೆ.

ಕ್ರೈಸ್ತರು ಹಾಗೂ ಮುಸ್ಲಿಮರು ಐತಿಹಾಸಿಕ ಕಾಲದಲ್ಲಿ ನಡೆಸಿದ ಮೂರ್ತಿ ಭಂಜನೆಯನ್ನು ಈ ನಿಟ್ಟಿನಿಂದ ನೋಡಿದಾಗ ಅವರನ್ನು ಅರ್ಥಮಾಡಿಕೊಳ್ಳಬಹುದು. ಅವರಿಗೆ ಮೂರ್ತಿಗಳು ಡೆವಿಲ್ ಅಥವಾ ಶೈತಾನನ ಮೋಸಗಳಂತೆ ಕಾಣಿಸಿದ್ದವು. ಈ ಮೂರ್ತಿಗಳಲ್ಲಿ ಶಕ್ತಿಯಿಲ್ಲವೆಂಬುದನ್ನು ತೋರಿಸಿ ಜನರನ್ನು ನಿಜವಾದ ದೇವನತ್ತ ನಡೆಸುವ ಪವಿತ್ರ ಕರ್ತವ್ಯವನ್ನು ಅವರು ಮಾಡುತ್ತಿದ್ದರು. ಆದರೆ ಸಂಸ್ಕೃತಿಗಳ ನಡುವಿನ ವ್ಯತ್ಯಾಸದ ವೈಚಿತ್ರ್ಯದಿಂದಾಗಿ ಒಬ್ಬರ ಪುಣ್ಯಕಾರ್ಯವು ಮತ್ತೊಬ್ಬರಿಗೆ ಪಾಪಕಾರ್ಯವಾಗಿ ಪರಿಣಮಿಸಿತು.

ರಿಲಿಜನ್ನುಗಳಿಗೆ ಸತ್ಯದೇವನ ಆಜ್ಞೆಗಳೇ ನೀತಿ ನಿಯಮ. ಸುಳ್ಳು ದೇವತೆಗಳನ್ನು ಪೂಜಿಸುವವರು ಸತ್ಯದೇವನ ಆಜ್ಞೆಗಳನ್ನು ಪಾಲಿಸುವ ಸಾಧ್ಯತೆಯಿಲ್ಲ. ಹಾಗಾಗಿ ಮೂರ್ತಿಪೂಜಕರ ವರ್ತನೆ ಅನೈತಿಕವಾಗಿರಲೇ ಬೇಕು ಎಂಬುದು ರಿಲಿಜನ್ನುಗಳ ನಿರ್ಣಯ. ಭಾರತವನ್ನು ಪ್ರವೇಶಿಸಿದ ಇಂಥ ಮೀಮಾಂಸೆಗಳೆಲ್ಲವೂ 17ನೇ ಶತಮಾನದಲ್ಲಿ ಹುಟ್ಟಿಕೊಂಡ ಪ್ರೊಟೆಸ್ಟಾಂಟರ ಚೌಕಟ್ಟಿನಿಂದ ರೂಪಿತವಾಗಿದ್ದವು. ಪ್ರೊಟೆಸ್ಟಾಂಟರು ರೋಮನ್ ಕ್ಯಾಥೋಲಿಕ್ ಚರ್ಚು ಐಡೋಲೇಟ್ರಿಯನ್ನು ಅಳವಡಿಸಿಕೊಂಡು ಭ್ರಷ್ಟವಾಗಿದೆ ಎಂಬುದಾಗಿ ಟೀಕಿಸಿ ಅದರ ವಿರುದ್ಧ ನಿಂತರು. ಈ ಐಡೋಲೇಟ್ರಿಯ ಲಕ್ಷಣಗಳೆಂದರೆ ಪುರೋಹಿತಶಾಹಿ, ತಾರತಮ್ಯ, ವಿಧಿ ಆಚರಣೆಗಳು, ಇತ್ಯಾದಿ. ಇದೇ ವೇಳೆಗೆ ಯುರೋಪಿನಲ್ಲಿ ಬೆಳವಣಿಗೆಯಾದ ಸೆಕ್ಯುಲರ್ ಚಿಂತನೆಗಳು ಪ್ರೊಟೆಸ್ಟಾಂಟ್ ಚಿಂತನೆಗಗಳಿಂದ ಪ್ರಭಾವಿತವಾಗಿದ್ದವು. ಪ್ರೊಟೆಸ್ಟಾಂಟ್ ತತ್ವಗಳು ನಿಜವಾದ ರಿಲಿಜನ್ನು, ಹಾಗೂ ಆ ಮೂಲಕ ನೈತಿಕತೆಯ ಮಾನದಂಡಗಳಾದವು ಹಾಗೂ ಆಧುನಿಕ ಯುರೋಪಿನ ಜನರ ಧೋರಣೆಗಳನ್ನು ಅವು ರೂಪಿಸಿದವು.

ಇಂಥ ಧೋರಣೆಗಳನ್ನಿಟ್ಟುಕೊಂಡ ಐರೋಪ್ಯರು ಭಾರತದಂಥ ಹೀದನ್ ಸಮಾಜವು ಅನೈತಿಕ, ಅಮಾನವೀಯ ಹಾಗೂ ಭ್ರಷ್ಟ ಆಚರಣೆಗಳನ್ನು ಹೊಂದಿರಲೇಬೇಕೆಂಬುದಾಗಿ ನಿರೀಕ್ಷಿಸಿದ್ದರು. ಅವರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಭಾರತಕ್ಕೆ ಬಂದ ಪ್ರಾರಂಭಿಕ ಮಿಶನರಿಗಳು ಹಾಗೂ ಪ್ರವಾಸಿಗರು ಇಲ್ಲಿಗೆ ಬರುತ್ತಲೇ ಇಲ್ಲಿನ ಸಾಮಾಜಿಕ ಪದ್ಧತಿಗಳು ಹೇಗೆ ವಿಕೃತವಾಗಿವೆ ಎಂಬುದನ್ನು ತೋರಿಸಲು ಪ್ರಯತ್ನಿಸಿದರು. ಹಿಂದೂಯಿಸಂ ಎಂಬುದು ಭ್ರಷ್ಟತೆ, ಜಾತಿವ್ಯವಸ್ಥೆ, ಪುರೋಹಿತಶಾಹಿ, ವಿಕೃತ ಲೈಂಗಿಕ ಆಚರಣೆಗಳು ಇತ್ಯಾದಿಗಳಿಂದ ತುಂಬಿದೆ ಎಂಬುದಾಗಿ ವರ್ಣಿಸಿ ಇವೆಲ್ಲವುಗಳನ್ನೂ ಐಡೋಲೇಟ್ರಿಯ ಲಕ್ಷಣಗಳನ್ನಾಗಿ ನಿರೂಪಿಸಿದರು. ಐಡೋಲೇಟ್ರಿಯು ವಸಾಹತು ಯುಗದಲ್ಲಿ ಭಾರತೀಯ ಸಂಸ್ಕೃತಿಯ ಅವಲಕ್ಷಣಗಳಲ್ಲೊಂದೆಂಬಂತೆ ಬಿಂಬಿತವಾಯಿತು.

ವಸಾಹತುಕಾಲದ ಸುಧಾರಣಾವಾದಿಗಳು ಪ್ರೊಟೆಸ್ಟಾಂಟ್ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಹಾಗಾಗಿ ದೇವನ ಏಕರೂಪವನ್ನು ಎತ್ತಿಹಿಡಿಯುವ ನಿರಾಕಾರೋಪಾಸನೆಯೇ ಸರಿಯಾದ ಆಚರಣೆ, ಮೂರ್ತಿಪೂಜೆಯು ಹುಸಿ ವೈವಿಧ್ಯತೆಯನ್ನು ಸೃಷ್ಟಿಸುವುದರಿಂದ ಮೌಢ್ಯವೆಂಬುದಾಗಿ ತಿಳಿದರು. ಅಷ್ಟೇ ಅಲ್ಲ, ಸನಾತನ ಹಿಂದೂ ಧರ್ಮವು ಪುರೋಹಿತಶಾಹಿಗಳಿಂದ ಭ್ರಷ್ಟಗೊಂಡದ್ದರ ಪರಿಣಾಮವಾಗಿ ಈ ಮೂರ್ತಿಪೂಜೆಯು ಪ್ರಚಲಿತದಲ್ಲಿ ಬಂದಿತು ಎಂಬ ಇತಿಹಾಸವನ್ನೂ ಬರೆದರು. ವಸಾಹತು ಕಾಲದಲ್ಲಿ ಹಿಂದೂಯಿಸಂಅನ್ನು ಸುಧಾರಣೆಗೊಳಪಡಿಸುವ ಪ್ರಯತ್ನಗಳೇನೋ ನಡೆದವು. ಆದರೆ ರಾಷ್ಟ್ರೀಯ ಯುಗದಲ್ಲಿ ಇಂಥ ಸುಧಾರಣೆಗಳು ಅರ್ಥಕಳೆದುಕೊಂಡವು. ಆದರೂ ನೆಹರೂ ಯುಗದಲ್ಲಿ ಇಂಥ ವಿಚಾರಗಳ ಹಲ್ಲು ಉಗುರುಗಳನ್ನು ತಿಕ್ಕಿ ಹೊಳಪುಮಾಡುವ ಪ್ರಯತ್ನವನ್ನು ಮಾಡಲಾಯಿತು. ನೆಹರೂ ಯುಗದ ಆಧುನಿಕತೆ ಹಾಗೂ ವಿಜ್ಞಾನ-ತಂತ್ರಜ್ಞಾನದಿಂದಾಗಿ ಇಂಥ ಆಚರಣೆಗಳೆಲ್ಲ ಮುಂಜಾವಿನ ಮಂಜಿನಂತೆ ಕರಗಿ ಹೋಗುತ್ತವೆ ಎಂಬುದಾಗಿ ಕೂಡ ವಿಚಾರವಂತರು ಭವಿಷ್ಯ ನುಡಿದಿದ್ದರು. ಆದರೆ ಭಾರತೀಯರ ಪೂಜಾಚರಣೆಯ ಹಂಬಲವು ನಾಶವಾಗುವುದರ ಬದಲಾಗಿ ಮತ್ತಷ್ಟು ಗರಿಗೆದರಿಕೊಂಡಿತು. ಅವರು ಪೂಜೆಯಲ್ಲಿ ಹೊಸ ಹೊಸ ಆಧುನಿಕ ಪ್ರಯೋಗಗಳನ್ನು ಕಂಡುಹಿಡಿದು ಅದರ ಮಾರುಕಟ್ಟೆಯನ್ನು ವಿಸ್ತರಿಸಿದರು.

ಇಂದು ಮೂರ್ತಿಪೂಜೆ ಹಾಗೂ ಅದಕ್ಕೆ ಸಂಬಂಧಿಸಿದ ಯಜ್ಞ-ಯಾಗಾದಿಗಳು, ವ್ರತ, ಹರಕೆ, ಇತ್ಯಾದಿಗಳನ್ನು ಆದಷ್ಟೂ ಬಿಟ್ಟುಹಾಕಿದ ಹೊರತೂ ನಮ್ಮ ಸಮಾಜವು ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವು ಪ್ರಗತಿಪರರಲ್ಲಿದೆ. ಆದರೆ ವಿಚಿತ್ರವೆಂದರೆ ಇದುವರೆಗೆ ಯಾರೂ ಮೂರ್ತಿಪೂಜೆಗೂ ಅನೈತಿಕತೆಗೂ ಏನು ಸಂಬಂಧ ಎನ್ನುವುದಕ್ಕೆ ಕ್ರಿಶ್ಚಿಯನ್ ಕಥೆಯನ್ನು ಬಿಟ್ಟು ಬೇರೆ ಕಾರಣಗಳನ್ನು ತೋರಿಸಿಲ್ಲ. ಹಾಗಾಗಿ ನಮ್ಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ಯಾವ ವಿದ್ಯಾವಂತರಿಗೂ ಕೂಡ ಮೂರ್ತಿ ಪೂಜೆ ಏಕೆ ಕೆಟ್ಟದ್ದು ಎಂಬುದು ಅರ್ಥವಾಗುವುದಿಲ್ಲ. ಅದು ಮೌಢ್ಯ, ಏಕೆಂದರೆ ಮೂರ್ತಿ ಬಂದು ನೈವೇದ್ಯ ತಿನ್ನುತ್ತದೆಯೆ? ದೇವರಿಗೆ ಕೈಕಾಲುಗಳಿವೆಯೆ? ಇತ್ಯಾದಿ ವಾದಗಳನ್ನು ಮಂಡಿಸಿದಾಗ ಅವರಿಗೆ ಅಲ್ಪ ಸ್ವಲ್ಪ ಅರ್ಥವಾದಂತೆನಿಸುತ್ತದೆ. ಆದರೂ ಬಹುತೇಕರಿಗೆ ಅಂಥ ವಾದಗಳು ಮನೋರಂಜನೆಯ ವಿಷಯಗಳೇ ಹೊರತೂ ಮಹತ್ವದ್ದೆನ್ನಿಸುವುದಿಲ್ಲ. ಅಷ್ಟಕ್ಕೂ ನಮ್ಮ ಎಷ್ಟೋ ಆಚರಣೆಗಳನ್ನು ವೈಚಾರಿಕವಾಗಿ ವಿವರಿಸುವ ಅಗತ್ಯವಿಲ್ಲ, ಆದರೂ ಅವು ಬಹಳ ಮುಖ್ಯವಾಗಿರುತ್ತವೆ ಹಾಗೂ ಅನಿವಾರ್ಯವಾಗಿಬಿಡುತ್ತವೆ. ಆ ಕಾರಣಕ್ಕೇ ಅವು ಅನೈತಿಕವೇಕೆ?

ಒಟ್ಟಿನಲ್ಲಿ ನಮ್ಮ ಸಮಸ್ಯೆಯೆಂದರೆ ಐಡೋಲೇಟ್ರಿಯನ್ನು ಮೂರ್ತಿಪೂಜೆ ಎಂಬುದಾಗಿ ನಾವು ಭಾಷಾಂತರಿಸಿಕೊಂಡಿದ್ದೇವೆ. ನಮ್ಮ ಅನುಭವದ ಪ್ರಕಾರ ಮೂರ್ತಿಪೂಜೆ ಅನೈತಿಕವಾಗಲು ಸಾಧ್ಯವಿಲ್ಲ. ಆದರೆ ಅದು ಅನೈತಿಕವೆನ್ನುವ ನಿರೂಪಣೆಯೇ ವಿಚಾರವಂತಿಕೆ ಎಂಬ ಅಭಿಪ್ರಾಯವನ್ನು ವಸಾಹತು ಕಾಲದುದ್ದಕ್ಕೂ ಪೋಷಿಸಲಾಗಿದೆ. ಅದು ಏಕೆ ಎನ್ನುವುದು ನಮಗೆ ಗೊತ್ತಿಲ್ಲ.

Advertisements
Categories: Uncategorized
 1. ಜುಲೈ 30, 2014 ರಲ್ಲಿ 5:37 ಅಪರಾಹ್ನ

  I really do not understand what is the stand on the idol worship by this article. But It is clearly slanting towards western ideology. I suggest the people to understand the Indian values at the right angle. If a person in other part of the world commits any act which is not helping the mankind, it has to be taken has offence rather trying to judge by his religion or other background.

  Like

 2. ಆಗಷ್ಟ್ 1, 2014 ರಲ್ಲಿ 10:11 ಫೂರ್ವಾಹ್ನ

  Here this article argues that, the collaboration of immorality with idolatry is came from western culture, in India murthipuje is understood under the same framework by many scholars. Therefore this article makes clear cut difference between western understanding of idolatry and Indian way of murthipuja, but the tragic situation is, that is to say, in India too murthipuja is understood with moral and immoral frame, and this is not the proper way to understand Indian culture.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: