ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

download

ಕಂತು 7: ಭಾರತದಲ್ಲಿ ಧರ್ಮಗ್ರಂಥ, ತತ್ವಗಳ ಹುಡುಕಾಟ ಹಾಗೂ ವಿದ್ವಾಂಸರ ಸಂಕಟ

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ಕಳೆದ ವರ್ಷ ಭಗವದ್ಗೀತೆಯನ್ನು ಶಾಲೆಗಳಲ್ಲಿ ಬೋಧಿಸುವ ಕುರಿತು ವಿವಾದ ಹುಟ್ಟಿಕೊಂಡಿತ್ತು. ಒಂದೆಡೆ ಹಿಂದೂ ಧರ್ಮದ ಉಳಿವಿಗಾಗಿ ಅಂಥದ್ದೊಂದು ಪ್ರಯತ್ನ ಬೇಕೆಂಬ ಒತ್ತಾಯ. ಮತ್ತೊಂದೆಡೆ ಎಲ್ಲ ಧರ್ಮಿಯರೂ ಇರುವ ಶಾಲೆಯಂಥ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಒಂದು ರಿಲಿಜನ್ನಿನ ಧರ್ಮಗ್ರಂಥವನ್ನು (ಅದರಲ್ಲೂ ಬಹುಸಂಖ್ಯಾತರ ರಿಲಿಜನ್ನಿನದು) ಕಲಿಸುವುದು ಸೆಕ್ಯುಲರ್ ತತ್ವಕ್ಕೆ ಹಾಗೂ ಭಾರತೀಯ ಸಂವಿಧಾನಕ್ಕೆ ವಿರೋಧವಾಗುತ್ತದೆ ಎಂಬ ಟೀಕೆ. ಇಲ್ಲದ್ದನ್ನು ಇದೆ ಎಂಬುದಾಗಿ ನಂಬಿಸಿಕೊಂಡು ನಾವೇ ಹುಟ್ಟುಹಾಕಿಕೊಂಡ ಸಮಸ್ಯೆಗೆ ಇದೊಂದು ಉದಾಹರಣೆ. ಅದು ಹೇಗೆ ಎಂಬುದನ್ನು ನೋಡೋಣ.

ನಮ್ಮ ಶಾಲಾ ಪಠ್ಯ ಪುಸ್ತಕಗಳಲ್ಲಿ ಬುದ್ಧನ ಉಪದೇಶಗಳು, ಬೌದ್ಧ ಧರ್ಮದ ತತ್ವಗಳು, ಜೈನ ಧರ್ಮದ ತತ್ವಗಳು ಇತ್ಯಾದಿಯಾಗಿ ಕಲಿಯುತ್ತೇವೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿಗಳ ವರೆಗೂ ಈ ಧರ್ಮೊಪದೇಶಗಳು ಹಾಗೂ ಧರ್ಮ ತತ್ವಗಳು ಆಗಾಗ ಬರುತ್ತಲೇ ಇರುತ್ತವೆ. ಬುದ್ಧನ ಉಪದೇಶಗಳು ಎಂದಾಕ್ಷಣ ‘ದಯೆ, ಅಷ್ಟಾಂಗ ಮಾರ್ಗ..’ ಇತ್ಯಾದಿಗಳು ಬರುತ್ತವೆ, ಜೈನ ಧರ್ಮದ ತತ್ವಗಳು ಎಂದಾಕ್ಷಣ ‘ಅಹಿಂಸೆ. ಸ್ಯಾದ್ವಾದ…’ ‘ಇತ್ಯಾದಿಗಳನ್ನು ಉಲ್ಲೇಖಿಸಲಾಗುತ್ತದೆ. ಹಿಂದೂ ಧರ್ಮ ತತ್ವಗಳೆಂದರೆ ‘ ವರ್ಣಾಶ್ರಮ ಧರ್ಮ, ಕರ್ಮ.’ ಇತ್ಯಾದಿ.

ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಈ ತತ್ವಗಳನ್ನು ಅವರವರ ಪವಿತ್ರ ಗ್ರಂಥಗಳ ರೂಪದಲ್ಲಿ ಕಾಯ್ದಿರಿಸಲಾಗಿದೆ ಎನ್ನಲಾಗುತ್ತದೆ. ಬೌದ್ಧರಿಗೆ ತ್ರಿಪಿಟಕಗಳು, ಹಿಂದೂಗಳಿಗೆ ವೇದಗಳು ಹಾಗೂ ಜೈನರಿಗೆ ಪಾಳಿಸೂತ್ರಗಳು, ಇತ್ಯಾದಿ. ಸಾಧ್ಯವಾದಲ್ಲೆಲ್ಲ ಈ ತತ್ವಗಳನ್ನು ಆಯಾ ಧರ್ಮದ ಸ್ಥಾಪಕರೇ ಉಪದೇಶಿಸುತ್ತಾರೆ. ಈ ಸ್ಥಾಪಕರೂ ಕೂಡ ಜ್ಞಾನೋದಯವನ್ನು ಹೊಂದಿದ ನಂತರವೇ ಉಪದೇಶಕ್ಕೆ ತೊಡಗುತ್ತಾರೆ. ಈ ಜ್ಞಾನೋದಯದ ಚಿತ್ರಣ ಹೇಗಿರುತ್ತದೆಯೆಂದರೆ ಅದು ಒಮ್ಮೆ ಆಗಿಬಿಡುತ್ತದೆ. ಆದನಂತರ ಸತ್ಯ ಗೊತ್ತಾಗುತ್ತದೆ. ನಂತರ ಅದನ್ನು ಉಪದೇಶಿಸುವುದೊಂದೇ ಕೆಲಸ. ಆ ಉಪದೇಶಗಳನ್ನಾಧರಿಸಿ ಅವರವರ ರಿಲಿಜನ್ನು ಹುಟ್ಟಿಕೊಳ್ಳುತ್ತದೆ. ಆ ರಿಲಿಜನ್ನಿನ ಅನುಯಾಯಿಗಳು ಆ ಉಪದೇಶಗಳನ್ನು ಆಚರಿಸುತ್ತಾರೆ ಹಾಗೂ ಅವುಗಳನ್ನು ಗ್ರಂಥರೂಪದಲ್ಲಿ ಸಂಗ್ರಹಿಸುತ್ತಾರೆ. ಕ್ರೈಸ್ತ ಹಾಗೂ ಇಸ್ಲಾಮಿನ ಚರಿತ್ರೆಗೂ ಈ ಚರಿತ್ರೆಗಳಿಗೂ ಒಂದು ಸಾಮಾನ್ಯ ಚೌಕಟ್ಟು ಇದೆ. ಎಷ್ಟರ ಮಟ್ಟಿಗೆ ಎಂದರೆ ಒಂದು ಇನ್ನೊಂದರ ಕಾಪಿ ಎಂಬಷ್ಟರ ಮಟ್ಟಿಗೆ. ಏಕೆಂದರೆ ಇಲ್ಲಿ ಭಾರತೀಯ ಇತಿಹಾಸದ ಈ ಘಟನೆಗಳಿಗೆಲ್ಲ ರಿಲಿಜನ್ನಿನ ಚೌಕಟ್ಟನ್ನು ನೀಡುವ ಪ್ರಯತ್ನ ನಡೆದಿದೆ.

ಇಲ್ಲೆಲ್ಲ ಧರ್ಮ ಎಂಬುದು ರಿಲಿಜನ್ ಎಂಬರ್ಥದಲ್ಲೂ, ತತ್ವ ಎಂಬುದು ‘ಡಾಕ್ಟ್ರಿನ್’ ಎಂಬರ್ಥದಲ್ಲೂ ಪ್ರಯೋಗವಾಗುತ್ತಿವೆ. (ರಿಲಿಜನ್ನೆಂದರೆ ಏನನ್ನು ಸೂಚಿಸುತ್ತದೆ ಎಂಬುದನ್ನು ಈಗಾಗಲೇ ಹಿಂದಿನ ಅಂಕಣಗಳಲ್ಲಿ ಸಂಕ್ಷಿಪ್ತವಾಗಿ ತಿಳಿಸಿದ್ದೇನೆ.) ಧರ್ಮ ಗ್ರಂಥವೆಂಬ ಶಬ್ದವು ಹೋಲಿ ಸ್ಕ್ರಿಪ್ಚರ್ ಎಂಬ ಶಬ್ದದ ತರ್ಜುಮೆ. ಜ್ಞಾನೋದಯ ಎಂಬುದು ರಿವಿಲೇಶನ್ ಎಂಬ ಶಬ್ದದ ಪರ್ಯಾಯ. ಕನ್ನಡ ತರ್ಜುಮೆಯನ್ನು ಮಾಡಿಬಿಟ್ಟರೆ ಕೆಲಸ ಮುಗಿಯಿತು ಎಂಬುದು ನಮ್ಮ ಭಾವನೆ. ಆದರೆ ಈ ತರ್ಜುಮೆಗಳೆಲ್ಲ ಕೇವಲ ಶಬ್ದಗಳಲ್ಲ. ಅವು ರಿಲಿಜನ್ನಿಗೆ ಸೇರಿದ ಪರಿಭಾಷೆಗಳು.

ಈ ಬ್ರಹ್ಮಾಂಡದ ಸೃಷ್ಟಿಕರ್ತನು ಒಬ್ಬ ಮನುಷ್ಯ ಪ್ರವಾದಿಗೆ ಸತ್ಯವನ್ನು ತಿಳಿಸುತ್ತಾನೆ. ಅದನ್ನು ರಿವಿಲೇಶನ್/ದೇವವಾಣಿ ಎನ್ನಲಾಗುತ್ತದೆ. ಅಂಥ ದೇವವಾಣಿಯನ್ನು ಪಡೆದವನೇ ಪ್ರಾಫೆಟ್ ಅಥವಾ ಪ್ರವಾದಿ. ಆ ದೇವವಾಣಿಯನ್ನು ದಾಖಲಿಸಿದ ಗ್ರಂಥವೇ ಹೋಲಿ ಸ್ಕ್ರಿಪ್ಚರ್ (ಪವಿತ್ರ ಗ್ರಂಥ). ಹಾಗೂ ಅದನ್ನಾಧರಿಸಿ ಅದರ ಅನುಯಾಯಿಗಳು ಆ ರಿಲಿಜನ್ನನ್ನು ಹೇಗೆ ಪಾಲಿಸಬೇಕೆಂಬುದನ್ನು ನಿರ್ದೇಶಿಸುವ ತತ್ವಗಳು (ಡಾಕ್ಟ್ರಿನ್) ನಿರ್ಧಾರವಾಗುತ್ತವೆ. ಒಂದು ರಿಲಿಜನ್ನಿಗೆ ಒಂದೇ ಸತ್ಯದೇವನಿರುತ್ತಾನೆ, ಒಂದೇ ದೇವವಾಣಿ, ಹಾಗೂ ಒಂದೇ ಪವಿತ್ರ ಗ್ರಂಥ. ಇದು ರಿಲಿಜನ್ನಿನ ಪರಿಕಲ್ಪನೆ.

ಆದರೆ ಭಾರತೀಯ ಸಂದರ್ಭದಲ್ಲಿ ಧರ್ಮ ಗ್ರಂಥ, ಧರ್ಮ ತತ್ವ ಇತ್ಯಾದಿ ಶಬ್ದಗಳೆಲ್ಲ ಹೇಗೆ ಅಸಂಬದ್ದವಾಗುತ್ತವೆ ಎಂಬುದನ್ನು ನೋಡೋಣ. ಈ ಮೇಲಿನ ಕ್ರಮದಲ್ಲಿ ಏಸುಕ್ರಿಸ್ತ, ಮಹಮ್ಮದ ಪೈಗಂಬರ, ಬುದ್ಧ, ಮಹಾವೀರ ಇವರೆಲ್ಲರೂ ಒಂದೇ ರೀತಿಯಲ್ಲಿ ಧರ್ಮ ಸಂಸ್ಥಾಪಕರು ಎನ್ನಲಾಗುತ್ತದೆ. ಆದರೆ ಜೈನರಲ್ಲಿ ಮಹಾವೀರನು 24ನೇ ತೀರ್ಥಂಕರನಾಗಿರುವುದರಿಂದ ಅವನನ್ನು ಸ್ಥಾಪಕನೆನ್ನಬಹುದೆ? ಬೌದ್ಧರು ಹಾಗೂ ಜೈನರಿಬ್ಬರೂ ನಾಸ್ತಿಕ ಮತದವರಾದ್ದರಿಂದ ಅವರಿಗೆ ಸತ್ಯದೇವನೇ ಇಲ್ಲ, ಅಂದಮೇಲೆ ದೇವವಾಣಿ ಎಲ್ಲಿಂದ ಬಂತು? ಅವರು ಪ್ರವಾದಿಗಳು ಹೇಗಾಗುತ್ತಾರೆ? ದೇವವಾಣಿಯೇ ಇಲ್ಲದೆ ಡಾಕ್ಟ್ರಿನ್ (ಧರ್ಮತತ್ವ) ಎಲ್ಲಿಂದ ಬಂತು? ಎಂಬ ಪ್ರಶ್ನೆಗಳು ಎದ್ದೇ ಏಳುತ್ತವೆ.
ಹಿಂದೂಯಿಸಂಗೆ ಏಕೈಕ ಸತ್ಯದೇವನೇ ಇಲ್ಲ. ಬಹುದೇವತೆಗಳಿವೆ. ಅಂದಾಗ ಅದಕ್ಕೆ ಹಲವು ದೇವವಾಣಿಗಳು ಇವೆ ಎನ್ನಲು ಆಗುತ್ತದೆಯೆ?. ಅದನ್ನಾದರೂ ಮಾಡಬಹುದಿತ್ತು, ಆದರೆ ಹಿಂದೂಯಿಸಂಗೆ ಸ್ಥಾಪಕನೇ ಗೊತ್ತಿಲ್ಲವಲ್ಲ! ದೇವವಾಣಿ ಯಾರಿಗೆ ಗೊತ್ತಾಯಿತು? ಈ ಸಮಸ್ಯೆಯನ್ನು ಪರಿಹರಿಸುವ ಒತ್ತಡದಿಂದಾಗಿಯೇ ನಮ್ಮವರು ‘ವೇದವು ಅಪೌರುಷೇಯ’ ಎಂಬುದಾಗಿ ಒತ್ತಿ ಒತ್ತಿ ಹೇಳುತ್ತಿರುತ್ತಾರೆ. ಆದರೆ ಸಮಸ್ಯೆ ಅಷ್ಟಕ್ಕೇ ಬಗೆಹರಿದರೆ ತಾನೆ? ಹಾಗಾದರೆ ಭಗವದ್ಗೀತೆಯನ್ನು ಕೃಷ್ಣ ಪರಮಾತ್ಮನೇ ಉಪದೇಶಿಸಿದ್ದಾನೆ. ಅದೇಕೆ ದೇವವಾಣಿಯಲ್ಲ? ಹಾಗೇ ಬೇರೆ ಬೇರೆ ದೇವತೆಗಳು ಬೇರೆ ಬೇರೆ ಸಂದರ್ಭದಲ್ಲಿ ಉಪದೇಶಿಸಿದ ಉಳಿದ ಗ್ರಂಥಗಳನ್ನು ಏನೆಂದು ಪರಿಗಣಿಸಬೇಕು? ಒಂದು ರಿಲಿಜನ್ನಿಗೆ ಒಂದೇ ದೇವವಾಣಿ ಇರಬೇಕೆನ್ನುವ ಸತ್ಯವನ್ನು ಗಮನಿಸಿದರೆ ಇವೆಲ್ಲ ಹಿಂದೂ ಎಂಬ ಒಂದೇ ರಿಲಿಜನ್ನೇಕೆ? ವಿದ್ವಾಂಸರಿಗೆ ಇದಕ್ಕೆ ಉತ್ತರವನ್ನು ಇನ್ನೂ ಹುಡುಕಿ ಮುಗಿದಿಲ್ಲ.

ವಿದ್ವಾಂಸರ ಇಂಥ ಸಮಸ್ಯೆಗಳನ್ನು ಅಲ್ಲಿಗೇ ಬಿಟ್ಟು ಈ ರಿಲಿಜನ್ನುಗಳಿಗೆ ಸೇರಿದ ಜನರತ್ತ ಸ್ವಲ್ಪ ಹೊರಳೋಣ. ವಸಾಹತು ಕಾಲದಲ್ಲಿ ಭಾರತಕ್ಕೆ ಬಂದ ಪಾಶ್ಚಾತ್ಯ ಪ್ರವಾಸಿಗರು ಒಂದು ಸಾಮಾನ್ಯ ಅನುಭವವನ್ನು ದಾಖಲಿಸಿದ್ದಾರೆ. ಅದೆಂದರೆ ಬಹುತೇಕ ಬ್ರಾಹ್ಮಣರು ಹಿಂದೂ ರಿಲಿಜನ್ನಿನ ಪವಿತ್ರಗ್ರಂಥ ಹಾಗೂ ಅದರ ತತ್ವಗಳ ಕುರಿತ ಅಜ್ಞಾನವನ್ನು ಹೊಂದಿದ್ದರು. ಹಾಗಾಗಿ ಬ್ರಾಹ್ಮಣರಂಥ ಅಜ್ಞಾನಿಗಳಿಲ್ಲ ಹಾಗೂ ತಮ್ಮದೇ ಪವಿತ್ರ ಗ್ರಂಥಗಳನ್ನು ಓದುವ ಯೋಗ್ಯತೆ ಕೂಡ ಅವರಿಗಿಲ್ಲ ಎಂಬುದಾಗಿ ಅವರು ಲೇವಡಿ ಮಾಡುತ್ತಾರೆ. ನಾನೊಬ್ಬ ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದಲ್ಲಿ ಬೆಳೆದಿದ್ದರೂ ಕೂಡ ವೇದ ಉಪನಿಷತ್ತುಗಳಲ್ಲಿ ಏನಿದೆಯೆಂಬುದು ನನಗೆ ಸಂಶೋಧಕನಾಗಿ ಅವುಗಳ ಅನುವಾದವನ್ನು ಓದುವವರೆಗೆ ಗೊತ್ತಿರಲಿಲ್ಲ. ಹಿಂದೂ ಧರ್ಮದ ಪುರೋಹಿತರೆಂಬುದಾಗಿ ಕರೆದ ಬ್ರಾಹ್ಮಣರಿಗೇ ಇವುಗಳ ಕುರಿತು ತಿಳಿದಿಲ್ಲ ಎಂದರೆ ಉಳಿದವರನ್ನು ವಿಚಾರಿಸುವ ಅಗತ್ಯವೇ ಇಲ್ಲ.

ಇವೆಲ್ಲ ರಿಲಿಜನ್ನುಗಳಾಗಿದ್ದ ಪಕ್ಷದಲ್ಲಿ ಇಂಥ ಪ್ರಶ್ನೆಗಳಿಗೆ ಹಾಗೂ ಅಜ್ಞಾನಕ್ಕೆ ಆಸ್ಪದವೇ ಇರುತ್ತಿರಲಿಲ್ಲ. ತಮ್ಮ ಪ್ರವಾದಿಯು ಕ್ರಿಸ್ತನೊ, ಪೈಗಂಬರನೊ ಎಂಬುದು ಯಾವ ಕ್ರೈಸ್ತನ ಸಮಸ್ಯೆಯೂ ಅಲ್ಲ. ತಮ್ಮ ಧರ್ಮಗ್ರಂಥವು ಖುರಾನೊ, ಬೈಬಲ್ಲೊ ಎಂಬುದು ಯಾವ ಮುಸ್ಲಿಮನ ಸಮಸ್ಯೆಯೂ ಅಲ್ಲ. ಹಾಗಾದರೆ ಎಲ್ಲಾ ಮುಸ್ಲಿಮ ಹಾಗೂ ಕ್ರೈಸ್ತರಿಗೂ ತಮ್ಮ ಪವಿತ್ರಗ್ರಂಥದಲ್ಲಿ ಏನಿದೆ ಎಂಬುದು ತಿಳಿದಿರುತ್ತದೆಯೆ? ಎಂಬ ಪ್ರಶ್ನೆ ಏಳಬಹುದು. ಒಮ್ಮೆ ಅದರ ಅನುಯಾಯಿಗೆ ಅದರ ಜ್ಞಾನ ಇರದಿದ್ದರೂ ಕೂಡ ಅವನು ಹುಡುಕಿದಾಗ ಸಿಗುವ ಉತ್ತರ ಒಂದೇ, ಹತ್ತೆಂಟಲ್ಲ. ಏಕೆಂದರೆ ಅಲ್ಲಿ ಪ್ರವಾದಿ ಹಾಗೂ ಧರ್ಮಗ್ರಂಥ ಎನ್ನುವ ಸಂಗತಿಗಳಿವೆ. ನಮ್ಮಲ್ಲಿ ಇಲ್ಲ. ಹಾಗಾಗೇ ಅವು ಹುಡುಕಿದರೂ ಸಿಗುವುದಿಲ್ಲ. ಇಲ್ಲದ್ದು ಗೊತ್ತಿರಬೇಕೆಂಬುದು ಯಾವ ನ್ಯಾಯ?
ಆದರೆ ಇಲ್ಲದ್ದನ್ನೇ ಇದೆ ಎಂಬುದಾಗಿ ನಮ್ಮನ್ನೇ ನಾವು ನಂಬಿಸಿಕೊಳ್ಳುವ ಪ್ರಯತ್ನವು ಕಳೆದ ನೂರಾರು ವರ್ಷಗಳಿಂದ ಭಾರತದಲ್ಲಿ ನಡೆದಿದೆ. ಪಾಶ್ಚಾತ್ಯರು ತಾವು ಹೋದೆಡೆಯಲ್ಲೆಲ್ಲ ರಿಲಿಜನ್ನುಗಳನ್ನು ಕಾಣುತ್ತೇವೆಂಬುದಾಗಿ ತೀರ್ಮಾನಿಸಿಕೊಂಡಿದ್ದರು. ಹಾಗಾಗಿ ಭಾರತದಲ್ಲಿ ಹಿಂದೂಯಿಸಂ, ಬುದ್ಧಿಸಂ, ಜೈನಿಸಂ ಅಂತೆಲ್ಲ ಇವೆ ಎಂಬುದಾಗಿ ಬರೆದು ಭಾರತೀಯ ಸಂಸ್ಕೃತಿಯ ಇತಿಹಾಸಕ್ಕೆ ಬುನಾದಿ ಹಾಕಿದರು. ಆದರೆ ರಿಲಿಜನ್ನುಗಳು ಇರಬೇಕಾದರೆ ಅದರ ಅಂಗಗಳಾದ ಈ ಧರ್ಮಗ್ರಂಥ, ಡಾಕ್ಟ್ರಿನ್, ಇತ್ಯಾದಿಗಳೂ ಇರಲೇಬೇಕು. ಹಾಗಾಗಿ ಇವುಗಳನ್ನೂ ಆ ಇತಿಹಾಸದಲ್ಲಿ ಸೇರಿಸುವ ಪ್ರಯತ್ನ ನಡೆಸಿದರು. ಆದರೆ ಹಿಂದೂಗಳಿಗೇ ಇವುಗಳ ಕುರಿತು ತಿಳಿದಿರಲಿಲ್ಲ. ನಮ್ಮ ದೇಶೀ ಪಂಡಿತರು ಪಾಶ್ಚಾತ್ಯ ವಿದ್ವಾಂಸರಿಗೆ ಸಹಾಯ ಮಾಡಲು ಪ್ರಯತ್ನಿಸಿ ತಮಗೆ ತೋಚಿದ್ದನ್ನು ಹೇಳಿ ಅವರನ್ನು ಶಾಶ್ವತವಾಗಿ ದಾರಿತಪ್ಪಿಸಿದರು. ಹಾಗಾಗಿ ಇಲ್ಲಿನ ಜನರು ತಮ್ಮ ರಿಲಿಜನ್ನಿನ ಮೂಲ ಗ್ರಂಥ ಹಾಗೂ ತತ್ವಗಳನ್ನು ಮರೆತು ಭ್ರಷ್ಟ ಆಚರಣೆಗಳನ್ನು ರೂಢಿಸಿಕೊಂಡಿದ್ದಾರೆ ಎಂಬುದಾಗಿ ಪಾಶ್ಚಾತ್ಯರು ತಿಳಿದರು. ಇದನ್ನು ನಮ್ಮವರೂ ಒಪ್ಪಿಕೊಂಡರು. ಇಂಥ ಇತಿಹಾಸವನ್ನು ಆಧರಿಸಿ ಧಾರ್ಮಿಕ ಪುನರುತ್ಥಾನದ ಚಳುವಳಿಗಳನ್ನೂ ನಡೆಸಿದರು.

ಧರ್ಮ ತತ್ವಕ್ಕೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿಯಾದ ಸಂಗತಿಯಿದೆ. ರಿಲಿಜನ್ನುಗಳಲ್ಲಿ ಡಾಕ್ಟ್ರಿನ್ ಎಂಬುದು ಆಚರಣೆಯನ್ನು ನಿರ್ದೇಶಿಸುತ್ತದೆ. ನಾವು ಡಾಕ್ಟ್ರಿನ್ನನ್ನು ತತ್ವ ಎಂಬುದಾಗಿ ಭಾಷಾಂತರಿಸಿ ಈ ತತ್ವಗಳು ಆಚರಣೆಗಾಗಿಯೇ ಇವೆ ಎಂದು ನಂಬಿದ್ದೇವೆ. ಆದರೆ ಇಲ್ಲೊಂದು ಭಾಷಾಂತರದ ಆವಾಂತರವಾಗಿದೆ ಎಂಬುದನ್ನು ಗಮನಿಸಬೇಕು. ತತ್ವ ಎಂಬುದು ನಮ್ಮ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಆಚರಣೆಯನ್ನು ನಿರ್ದೇಶಿಸುವ ಸಂಗತಿಯಲ್ಲ. ತತ್ವವು ಜ್ಞಾನಕ್ಕೆ ತಂದುಕೊಳ್ಳಬೇಕಾದ ಸಂಗತಿ. ಅದು ಆಯಾ ಸಂಪ್ರದಾಯಗಳು ಹುಡುಕಾಡುತ್ತಿರುವ ಸತ್ಯ. ಬುದ್ಧಿಸಂ, ಜೈನಿಸಂ, ಹಿಂದೂಯಿಸಂ ಎಂದೆಲ್ಲ ಯಾವುದನ್ನು ಕರೆಯಲಾಗುತ್ತದೆಯೊ ಅವು ಇಂಥ ಆಧ್ಯಾತ್ಮಿಕ ಸಂಪ್ರದಾಯಗಳು. ಇಂಥ ಸಂಪ್ರದಾಯಗಳ ಸಂದರ್ಭದಲ್ಲಿ ತತ್ವಕ್ಕೆ ನೀಡಲಾಗುವ ಈ ಹೊಸ ಅರ್ಥವು ಆವಾಂತರವನ್ನು ಸೃಷ್ಟಿಸುತ್ತದೆ. ‘ಶೂನ್ಯ’ವನ್ನು ಆಚರಿಸು, ‘ಬ್ರಹ್ಮನ್’ ಅಥವಾ ‘ಪರಮಾತ್ಮ’ನನ್ನು ಆಚರಿಸು ಎನ್ನಲು ಸಾಧ್ಯವೆ? ಈ ಸಂಪ್ರದಾಯಗಳನ್ನು ನಿಜವಾಗಿ ತಿಳಿದವರಿಗೆ ತತ್ವಾಚರಣೆ ಎಂಬ ಶಬ್ದವು ಅದೇ ಅರ್ಥವನ್ನು ಹೊರಡಿಸುತ್ತದೆ. ಆದರೆ ವಿಚಿತ್ರವೆಂದರೆ ಇದನ್ನೇ ನಾವು ಮಕ್ಕಳಿಗೆ ಕಲಿಸುತ್ತಿದ್ದೇವೆ.

ಭಾರತದಲ್ಲಿ ರಿಲಿಜನ್ ಇಲ್ಲ ಹಾಗೂ ಧರ್ಮ ಎಂಬುದು ರಿಲಿಜನ್ ಅಲ್ಲ ಎಂಬುದನ್ನು ತಿಳಿದುಕೊಳ್ಳುವುದು ಭಾರತೀಯ ಅಧ್ಯಯನಕ್ಕೆ ನಿರ್ಣಾಯಕವಾದ ಹೆಜ್ಜೆಯಾಗಿದೆ ಎಂಬುದು ನನ್ನ ವಾದ. ಅದನ್ನು ತಿಳಿದುಕೊಳ್ಳದಿದ್ದರೆ ನಮ್ಮ ಸಂಪ್ರದಾಯಗಳ ಕುರಿತು ನಮಗೆ ಸಿಗುವುದು ಈ ಮೇಲಿನಂತಹ ವಿಕೃತ ಚಿತ್ರಣಗಳು ಮಾತ್ರ. ಈ ಚಿತ್ರಣಗಳು ವಜ್ರ ಕವಚಗಳಂತೆ ಭಾರತೀಯ ಸಂಸ್ಕೃತಿಯ ಕುರಿತ ನಮ್ಮ ಅಜ್ಞಾನವನ್ನು ರಕ್ಷಿಸುತ್ತಿವೆ.

Advertisements
Categories: Uncategorized
  1. ಶ್ರೀಧರ
    ಮಾರ್ಚ್ 15, 2013 ರಲ್ಲಿ 6:50 ಅಪರಾಹ್ನ

    ಮಾನ್ಯ ಪ್ರೊ.ಎನ್ ಎಸ್ ಬಿ . ಬೆಂಗಳೂರಿನ ಬಸವನಗುಡಿಯಲ್ಲಿರುವ ನರಸಿಂಹರಾಜಾ ಕಾಲನಿಯ ಎಂಟನೆ ಅಡ್ಡ ರಸ್ತೆಯಲ್ಲಿ ಬಾಲ್ಯದ ದಿನಗಳನ್ನು ಕಳೆದವರು ನೀವು(೫೦ ಮತ್ತು ೬೦ರ ದಶಕದಲ್ಲಿ). ಮನೆಯಲ್ಲಿ ಆಚಾರ ಕಲಿಯುವುದಕ್ಕೆ ಇದ್ದ ಅವಕಾಶಗಳು ಬಹಳ ಕಡಿಮೆಯೇ ಆಗಿರಲಿಲ್ಲವೆ? ಏಕೆಂದರೆ, ಆಚಾರ ಕಲಿಸುವ ತಂದೆ ಸದಾ ರೌದ್ರವತಾರದಲ್ಲಿ ಇದ್ದಾಗ ಕಲಿಯುವುದಾದರೂ ಏನನ್ನು? ಭಯದ ಮೂಲಕವೇ ಬಾಲ್ಯ ಹರಿದಿದ್ದು. ಭಯದ ಮೂಲಕವೇ ಪರಿಸರವನ್ನು ಕಾಣುತ್ತಿದ್ದಂತಹ ಬಾಲ್ಯ . ಎಳೆಯತನದ ಮನಸ್ಸಿನ ಘಾತಾ, ಆಘಾತಗಳಿಂದಲೇ ಆಚರಣೆ, ಅನಾಚರಣೆ ಸ್ಥಿತಿಗಳು ಹುಟ್ಟಿಕೊಳ್ಳುವುದು ಎನ್ನಿಸುವುದಿಲ್ಲವೆ? ಧರ್ಮ, ಅಧರ್ಮಗಳು ವ್ಯಕ್ತಿ ಮನಸ್ಸಿಗೊಂದು ಹಿತ ತುಂಬಿದಾಗಲಷ್ಟೇ ಅವು ಹುಟ್ಟಲು, ಬದಲಾಗಲು ಸಾಧ್ಯ. ಅನುಕರಣೆಯಿಂದ ಕಲಿಯುವುದು, ಅನುಭವಗಳಿಂದ ಕಲಿಯುವುದು, ಪಕ್ಕದವರಂತೆ ನಾವು ಇರಬೇಕೆಂಬುದು ಸಹಜ ಹಂಬಲ. ಹೀಗಾಗಿ ಹೊರಗಿನಿಂದ ಬಂದ ತಂಪುಗಾಳಿ, ಸುಂಟರಗಾಳಿ, ವಿಷದ ಗಾಳಿಗಳಿಗೆ ತತ್ತರಿಸಿದರೂ/ತತ್ತರಿಸದೇ ಇದ್ದರೂ ಉಳಿಯುವ ಕ್ರಮ ಕಂಡುಕೊಳ್ಳುವುದಕ್ಕೆ ರಿಲಿಜನ್, ಗಾಡುಗಳು, ಕುರುಡು ನಂಬಿಕೆ, ದಿವ್ಯ ದೃಷ್ಟಿಗಳ ಕೊಡುಗೆ ಇದ್ದೇ ಇರುತ್ತವೆ. ಜೊತೆಗೆ ಮನುಷ್ಯ ಮಿದುಳಿನ ನರಕೋಶಗಳ ಮಿಶ್ರ ಕಾರ್ಯಾಚರಣೆಯ ಫಲವೂ ಇರುವುದೆನ್ನುವುದನ್ನು ನಿರಾಕರಿಸಲಾಗದು. ಭಾಷೆಯ ಮೂಲಕ ಹುಟ್ಟುವ ಭಾವಗಳು, ಭಾವಗಳ ಮೂಲಕ ಹೊರಬರುವ ವರ್ತನೆಗಳು ಆ ಮೂಲಕ ಎದ್ದು ಕಾಣಿಸುವ ಬಿಡಿ ವರ್ತನೆಗಳು, ನಂತರದಲ್ಲಿ ವಿಶ್ಲೇಷಣೆಗೆ ಒಳ್ಪಟ್ಟು ಸಂಪ್ರದಾಯಗಳಾಗಬಲ್ಲದು, ಅಂತಹದೊಂದಕ್ಕೆ ನೀವೇ ಒಂದು ಉತ್ತಮ ಉದಾಹರಣೆ ಅನಿಸುತ್ತದೆ.

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: