ಮುಖ ಪುಟ > Uncategorized > ಮಾರಲ್ ಪೋಲೀಸಗಿರಿಯ ಹೊಸ ಮಾದರಿ

ಮಾರಲ್ ಪೋಲೀಸಗಿರಿಯ ಹೊಸ ಮಾದರಿ

logo1ಬ್ಲಾಗ್  ಒಂದರಲ್ಲಿ ಪ್ರಕಟವಾದ ರಾಜೇಂದ್ರ ಚೆನ್ನಿಯವರ ಲೇಖನಕ್ಕೆ ಪ್ರತಿಕ್ರಿಯೆ

ಪ್ರೊ. ಜೆ.ಎಸ್. ಸದಾನಂದ

ಪ್ರಾರಂಭದಲ್ಲಿಯೇ ವೈಜ್ಞಾನಿಕ ಸಂಶೋಧನೆಯ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.

ಪ್ರಚಲಿತ ವಿದ್ಯಮಾನವನ್ನು ಕುರಿತಾದ ಯಾವುದೇ ಸಂಶೋಧನೆಯೂ ಕೂಡ ಅಂತಹ ವಿದ್ಯಮಾನದ ಕುರಿತು ಈಗಾಗಲೆ ಇರುವ ವಿವರಣೆಗಳು ಎಷ್ಟು ಸಮರ್ಪಕ/ಅಸಮರ್ಪಕವಾಗಿವೆ ಎನ್ನುವುದರಿಂದ ಪ್ರಾರಂಭವಾಗುತ್ತದೆ. ವಿವರಣೆ ಅಥವಾ ವಿವರಣೆಗಳಲ್ಲಿ ಸಾಕಷ್ಟು ಅಂತರ್ವ್ಯೆರುಧ್ಯಗಳಿದ್ದರೆ ಮತ್ತು ವಿದ್ಯಮಾನದ ಎಲ್ಲ ಆಯಾಮಗಳನ್ನು ಹಿಡಿದಿಡಲು ಅದು ಅಸಮರ್ಥವಾಗಿದ್ದರೆ ಅದಕ್ಕಿರಬಹುದಾದ ಕಾರಣಗಳನ್ನು ಹುಡುಕಿ ಕ್ಯೆಗೆತ್ತಿಕೊಳ್ಳಬೇಕಾದ ಸಮಸ್ಯೆಯ  ಸ್ವರೂಪವನ್ನು ರಚಿಸಬೇಕಾಗುತ್ತದೆ. ಸಂಶೋಧಕನು ಈಗಾಗಲೇ ಇರುವ ವಿವರಣೆಗಳಿಲ್ಲರಬಹುದಾದ ದೋಷಗಳನ್ನು ಮತ್ತು ಅದಕ್ಕಿರಬಹುದಾದ ಕಾರಣಗಳನ್ನು ತರ್ಕಬದ್ಧವಾಗಿ ಊಹಿಸಿ ಅದರ ಆಧಾರದ ಮೇಲೆ ಒಂದು ಪ್ರಾಕ್ ಕಲ್ಪನೆಯನ್ನು ರಚಿಸಿ ವಿದ್ಯಮಾನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಸಂಗ್ರಹಿಸಿ ತರ್ಕಬದ್ಧ ವಾದವನ್ನು ಮಂಡಿಸುವ ಮೂಲಕ ತನ್ನದೇ ಆದ ಪರ್ಯಾಯ ವಿವರಣೆಯನ್ನು ಕೊಡಬೇಕಾಗುತ್ತದೆ. ಅಂತಹ ವಿವರಣೆಯು ಹಳೆಯ ವಿವರಣೆಗಳಲ್ಲಿರುವ ದೋಷಗಳನ್ನು/ಮಿತಿಗಳನ್ನು ಮೀರಿದ್ದಲ್ಲಿ ಮಾತ್ರ ವಿದ್ಯಮಾನಕ್ಕೆ ಸಂಬಂಧಿಸಿದ ಜ್ಞಾನದ ಮುಂದುವರಿಕೆಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ. ನಾವು ತಿಳಿದುಕೊಂಡಂತೆ ಸಂಶೋಧನೆಯು ಮಾಡಬೇಕಾದ ಎರಡು ಪ್ರಮುಖ ಕೆಲಸಗಳೆಂದೆರೆ: 1) ವಿದ್ಯಮಾನದ ಬಗ್ಗೆ ಈಗಾಗಲೇ ಇರುವ ವಿವರಣೆಯ ಮಿತಿಯನ್ನು ತೋರಿಸುವುದು; 2) ಸಂಶೋಧನೆಯ ಫಲಿತವಾದ ಹೊಸ ವಿವರಣೆಯು ಅಂತಹ ಮಿತಿಗಳನ್ನು ಮೀರಿ ವಿದ್ಯಮಾನದ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತದೆ ಎಂದು ಸಾಬೀತುಪಡಿಸುವುದು.

ಈ ಅರ್ಥದಲ್ಲಿ ಸಂಶೋಧಕನ ಒಳ ಉದ್ದೇಶ/ರಾಜಕೀಯ/ಹುನ್ನಾರಗಳೇನೇ ಇರಲಿ ಅವುಗಳನ್ನು ಹೊರತುಪಡಿಸಿ ಸಂಶೋಧನೆಯನ್ನು ಮೌಲ್ಯಮಾಪನ ಮಾಡುವ ಸಾಧ್ಯತೆಯಿದೆ. ಮತ್ತು ಅಂತಹ ಒಳ ಉದ್ದೇಶಗಳು, ಹುನ್ನಾರಗಳು ಹೇಗೆ ಸಂಶೋಧನೆಯ ಮುಖ್ಯ ದೋಷವಾಗುತ್ತವೆ ಎನ್ನುವುದನ್ನು ಸಂಶೋಧನೆಯು ಮಂಡಿಸಿದ ವಾದದ ಚೌಕಟ್ಟಿನಲ್ಲಿಯೇ ತೋರಿಸಲು ಸಾಧ್ಯವಾದಾಗ ಮಾತ್ರ ಉಪಯುಕ್ತವಾಗುತ್ತದೆ. ಇಲ್ಲದಿದ್ದಲ್ಲಿ ಅಂತಹ ಆರೋಪಗಳು ಸಂಶೋಧನೆಗೆ ಹೊರತಾದ ಆರೋಪಗಳಾಗುತ್ತವೆ ಮತ್ತು ಅವುಗಳನ್ನು ಸಾಬೀತುಪಡಿಸುವುದು ಆರೋಪ ಮಾಡಿದವರಿಗಾಗಲಿ ಮತ್ತು ಅಂತಹ ಆರೋಪ ತಪ್ಪು ಎಂದು ತೋರಿಸುವುದು ಸಂಶೋಧಕರಿಗಾಗಲಿ ಸಾಧ್ಯವಿಲ್ಲ. ಈ ಅರ್ಥದಲ್ಲಿ ನಾನು ಅದು ಆಂತರ್ಯಕ್ಕೆ ಸಂಬಂದಿಸಿದ್ದು ಎಂದು ಹೇಳಿದ್ದು. ಆಂತರ್ಯವನ್ನು ಪರೀಕ್ಷಿಸಬಾರದು ಎಂದು ನಾನು ಹೇಳುತ್ತೇನೆ ಎಂದು ಚೆನ್ನಿಯವರು ತಪ್ಪಾಗಿ ಗ್ರಹಿಸುತ್ತಾರೆ. ಸಂಶೋಧನೆ ಎನ್ನುವುದು ಜ್ಞಾನದ ಮುಂದುವರಿಕೆಯ ಒಂದು ಸಾಧನವಷ್ಟೇ ಹೊರತು ಯಾವುದೇ ಸಂಶೋಧಕನು, ಅವನು ಎಂತಹ ಪ್ರಕಾಂಡ ಪಂಡಿತನೇ ಇರಲಿ, ಒಂದು ವಿದ್ಯಮಾನದ ಕುರಿತು ತಾನು ಅಂತಿಮ ಸತ್ಯವನ್ನು ಹೇಳುತ್ತಿದ್ದೇನೆ ಎಂದು ಪ್ರತಿಪಾದಿಸಲು ಬರುವುದಿಲ್ಲ. ಮತ್ತೊಂದು ಮುಖ್ಯ ಸಂಗತಿ ಎಂದರೆ ಸಂಶೋಧನೆ ಎನ್ನುವುದು ಜ್ಞಾನದ ಮುಂದುವರಿಕೆಯೇ ಆದ್ದರಿಂದ ಈಗಾಗಲೇ ಲಭ್ಯವಿರುವ ಜ್ಞಾನದ ನೆಲೆಗಟ್ಟಿನಲ್ಲಿಯೇ ಅದು ಮುಂದುವರೆಯಬೇಕಾದ್ದು ಅನಿವಾರ್ಯ ಅದೊಂದು ನಿರ್ವಾತದಲ್ಲಿ ನಡೆಯುವ ಕ್ರಿಯೆಯಲ್ಲ. ಇದ್ದಕ್ಕಿದ್ದಂತೆ ಕೆಲವರಿಗೆ ಆಗುವ ಜ್ಞಾನೋದಯವೂ ಅಲ್ಲ. ಹಾಗಾಗಿ ಆಸಕ್ತಿ ಇರುವ ಹಾಗು ಶ್ರಮ ಹಾಗೂ ಶಿಸ್ತನ್ನು ಮ್ಯೆಗೂಡಿಸಿಕೊಂಡ ಯಾರಾದರೂ ಸಂಶೋಧನಾ ಕೌಶಲ್ಯವನ್ನು ಗಳಿಸಿಕೊಳ್ಳಬಹುದು.

ಒಂದು ವಾದವನ್ನು ಒಪ್ಪಲೇ ಬಾರದೆಂಬುದಾಗಿ ನಿರ್ಧರಿಸಿದವರು ಯಾವ ಯಾವ ಮಾರ್ಗಗಳನ್ನು ಅನುಸರಿಸಬಹುದೋ ಅವನ್ನೆಲ್ಲ ಚೆನ್ನಿಯವರ ಲೇಖನವನ್ನು ನೋಡಿ ಕಲಿಯಬಹುದು ಎಂಬುದು ಈ ಕೆಳಗಿನ ಅಂಶಗಳಿಂದ ಸ್ಪಷ್ಟವಾಗುತ್ತದೆ:

1. ಮೊದಲನೆಯ ಮಾರ್ಗವೆಂದರೆ  ತಮಗೆ ಬೇಕಾದ ರೀತಿಯಲ್ಲಿ ಓದುವುದು: ನಾವು (ನಾನು ಮತ್ತು ರಾಜಾರಾಮ ಹೆಗ್ಡೆಯವರು) ಬರೆದ  ಪೂರ್ವಾವಲೋಕನದ ಮುನ್ನುಡಿಯನ್ನು ಉದ್ಧರಿಸುತ್ತಾ, ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಒಂದು ಗುಂಪು ತಮ್ಮನ್ನು ಅರ್ಥಮಾಡಿಕೊಳ್ಳಲಾರದ ಬುದ್ದಿಜೀವಿಗಳು ತಿರಸ್ಕಾರಕ್ಕೆ ಯೋಗ್ಯರೆಂದು ವಾದಿಸುತ್ತಾ ಬಂದಿದೆ ಎಂದಿದ್ದಾರೆ. ಆದರೆ ವಾಸ್ತವವಾಗಿ  ಅದರಲ್ಲಿ ನಾವು ನಮ್ಮ ವಿಚಾರಗಳನ್ನು ಸಂವಹನೆ ಮಾಡಲು ನಾವೇ ವಿಫಲರಾಗಿದ್ದೇವೆ ಎಂಬರ್ಥದಲ್ಲಿ ಬರೆದಿದ್ದೇವೆಂಬುದು ಆ ಭಾಗವನ್ನು ಓದಿದ ಯಾರಿಗಾದರೂ ಸ್ಪಷ್ಟವಾಗುತ್ತದೆ. ಚೆನ್ನಿಯವರ ಕನ್ನಡ ಜ್ಞಾನದ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ. ಇದನ್ನು ತಮಗೆ ಬೇಕಾದಂತೆ ಅವರು ಅರ್ಥೈಸುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಮಾರ್ಕ್ಸ್ ವಾದದ ಬಗ್ಗೆ ನಾನು ಹೇಳಿರುವುದನ್ನು ಅವರು ಅರ್ಥೈಸಿಕೊಂಡಿರುವ ರೀತಿ. ನಾನು ಬರೆದದ್ದು ಒಂದು ಚಿಂತನೆ ನಿರಂತರ ವಿಮರ್ಶೆಗೊಳಪಡುತ್ತಿದ್ದರೆ ಕಾಲಕ್ರಮೇಣ ಅದರ ಸ್ವರೂಪದಲ್ಲಿ ಬದಲಾವಣೆಗಳು ಕಂಡುಬರುತ್ತವೆ ಹಾಗೂ ಹಾಗೆ ಮಾಡದೇ ಹೋದಲ್ಲಿ ಅದೊಂದು ನಿರ್ಜೀವ ಐಡಿಯಾಲಜಿಯಾಗಿಬಿಡುತ್ತದೆ ಮಾರ್ಕ್ಸ್ ವಾದ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂಬ ನನ್ನ ಮಾತುಗಳನ್ನು ಮಾರ್ಕ್ಸ್ ವಾದದ ಮರಣಶಾಸನ ಎಂದು ಅರ್ಥ್ಯೆಸಬೇಕಾದರೆ ಚೆನ್ನಿಯವರು ಹಾಗೆ ಮೊದಲೇ ನಿರ್ಣಯಿಸಿಕೊಂಡೇ ಓದಿದ್ದಾರೆ ಎನ್ನದೇ ವಿಧಿಯಿಲ್ಲ. ಸಂಶೋಧನೆ ಹೇಗಿರಬಾರದು ಎನ್ನುವುದಕ್ಕೆ ಮಾರ್ಕ್ಸ್ ವಾದದ ಬಗೆಗಿನ ನನ್ನ ಅಭಿಪ್ರಾಯ ಒಂದು ಉದಾಹರಣೆಯಗುತ್ತದೆಯೋ ಅಥವಾ ಅವರು ಅದನ್ನು ಅರ್ಥ್ಯೆಸಿರುವ ರೀತಿಯೋ?   ನಾನು ಯಾವುದೇ ಭೌದ್ದಿಕ ಸಿದ್ಧತೆ ಇಲ್ಲದೆ ಮಾತನಾಡುತ್ತಿದ್ದೇನೆ ಎಂಬುದು ಅವರ ಆರೋಪ. ಆದರೆ ಏನಕೇನಪ್ರಕಾರೇಣ ಬುದ್ದಿಜೀವಿ ಎಂದು ತೋರಿಸಿಕೊಳ್ಳುವ ಹಪಾಹಪಿ ನನಗಿಲ್ಲದಿರುವುದರಿಂದ ಭೌದ್ದಿಕ ಸಿದ್ಧತೆ ಇಲ್ಲದಿದ್ದರೂ ಇದೆ ಎಂದು ತೋರಿಸಿಕೊಳ್ಳುವ ಒತ್ತಡವಂತೂ ನನಗಿಲ್ಲ.

2. ಇಲ್ಲದ್ದನ್ನು ಆರೋಪಿಸುವುದು: ಈ ಮೇಲಿನ ರೀತಿಯಲ್ಲೇ ಆಧುನಿಕತೆ, ಸೆಕ್ಯುಲರಿಸಂ ಹಾಗೂ ’ಅಂಬೇಡ್ಕರ್ವಾದಗಳ ಬಗ್ಗೆ ಈ ಗುಂಪು ಈಗಾಗಲೇ ಅಂತಿಮ  ನಿರ್ಣಯವನ್ನು ಕೊಟ್ಟಿದೆ’ ಎಂದು ಹೇಳುತ್ತಾರೆ.  ನಮ್ಮ ನಿಲುವಿನ ಪ್ರಕಾರ ಅಂತಿಮ ನಿರ್ಣಯ ಕೊಡುವುದು ಸಂಶೋಧನೆಯ ಗುರಿಯಲ್ಲ ಎಂದು ಈಗಾಗಲೇ ತಿಳಿಸಲಾಗಿದೆ. ಆದರೆ ಈಗಿರುವ ವಾದಗಳನ್ನು ಸಮಸ್ಯೀಕರಿಸುವುದೇ ಅಂತಿಮ ನಿರ್ಣಯ ಎಂದು ಚೆನ್ನಿಯವರಿಗೆ ಅನಿಸಬೇಕಾದರೆ ಈಗಾಗಲೇ ಅವುಗಳ ಬಗ್ಗೆ ಅಂತಿಮ ನಿರ್ಣಯ ಕೊಡಲಾಗಿದೆ ಹಾಗಾಗಿ ಅವುಗಳನ್ನು ಯಾರೂ ಪ್ರಶ್ನಿಸಬಾರದು ಎನ್ನುವ ಧೋರಣೆ ಅವರದಾಗಿರಬೇಕು. ಮತ್ತಾವುದೇ ಕಾರಣವಿರಲು ಸಾಧ್ಯವಿಲ್ಲ. ಇನ್ನು ಅಂಬೇಡ್ಕರ್ರವರ ವಾದದ ಬಗ್ಗೆ ನಾವು ಹಾಗೆ ಹೇಳುತ್ತಿದ್ದೇವೆ ಎನ್ನುವ ಆರೋಪವು  ನಮ್ಮ ಸಂಶೋಧನಾ ಗುಂಪು ಅಂಬೇಡ್ಕರ್ ಹಾಗೂ ದಲಿತ ವಿರೋಧಿ ಎಂದು ಬಿಂಬಿಸುವ ಅವರ ಹುನ್ನಾರದ ಒಂದು ಭಾಗವೆಂದೇ ಹೇಳಬೇಕು.

ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಜಾತಿ ಹಾಗೂ ಜಾತಿ ವ್ಯವಸ್ಥೆಯ ನಡುವಿನ ವ್ಯತ್ಯಾಸವನ್ನು ಬಾಲುರವರು ಬಹಳ ಸ್ಪಷ್ಟವಾಗಿ ಗುರುತಿಸುತ್ತಾರೆ. ಭಾರತೀಯ ಸಮಾಜದಲ್ಲಿ ಜಾತಿಗಳಿವೆ ಹಾಗೂ ಬೇರೆಲ್ಲಾ ಸಮಾಜಗಳಂತೆ ಇಲ್ಲಿಯೂ ಶೋಷಣೆ ಹಾಗೂ ಅನ್ಯಾಯಗಳಿವೆ ಎನ್ನುವುದನ್ನು ಅವರು ನಿರಾಕರಿಸುವುದಿಲ್ಲ. ಚೆನ್ನಿಯವರಂತಹ ವಿದ್ವಾಂಸರು ಇದನ್ನು ಗುರುತಿಸುವುದಿಲ್ಲ. ಜಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಒಳಗೊಂಡಂತೆ, ಭಾರತದ ಸಮಾಜದ ಸಮಸ್ಯೆಗಳನ್ನು ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲಿ ವಿವರಿಸಲು ಸಾಧ್ಯವಿಲ್ಲ ಎನ್ನುವುದಷ್ಟೇ ಬಾಲು ಅವರ ವಾದ. ಜಾತಿ ವ್ಯೆಮನಸ್ಯ, ಶೋಷಣೆ ಇತ್ಯಾದಿ ಭಾರತೀಯ ಸಮಾಜದಲ್ಲಿ ಇಲ್ಲ ಎಂದು ಅವರೆಲ್ಲೂ ಹೇಳಿಲ್ಲ, ಬರೆದೂ ಇಲ್ಲ.

3. ಬೀಸು ಹೇಳಿಕೆಗಳನ್ನು ಮಾಡುವುದು:

’ಆಧುನಿಕ/ವಸಾಹತುಶಾಹಿ/ಕ್ರಿಶ್ಚಿಯನ್ ಥಿಯಾಲಜಿ ಪ್ರೇರಿತ/ ಓರಿಯಂಟಲಿಸ್ಟ್ ಇವೆಲ್ಲವನ್ನೂ ಒಂದೇ ಎನ್ನುವ ಹಾಗೆ ಬಾಲಗಂಗಾಧರರ ವಾದಗಳು collapse ಮಾಡುತ್ತವೆ. ಏಕಾಕೃತಿಗೊಳಿಸುತ್ತವೆ (homogenize). ಇದು ಚಾರಿತ್ರಿಕವಾಗಿ ಮತ್ತು ತಾತ್ವಿಕವಾಗಿ ಅಸಿಂಧುವಾಗಿದ್ದರಿಂದ ಮತ್ತು ಹೀಗೆ ಮಾಡುತ್ತಿರುವುದು ಬಾಲಗಂಗಾಧರರ ವೈಚಾರಿಕ ಚೌಕಟ್ಟಿನ ದೌರ್ಬಲ್ಯವಾಗಿರುವುದರಿಂದ ಅದನ್ನು ಕನ್ನಡ ಬುದ್ಧಿಜೀವಿಗಳು ತಿರಸ್ಕರಿಸುತ್ತಾರೆ.’ ಇದು ಚೆನ್ನಿಯವರ ಹೇಳಿಕೆ. ಸಮಾಜವಿಜ್ಞಾನಗಳ ಸಿದ್ದಾಂತವನ್ನು ರೂಪಿಸುತ್ತಿರುವ ದೃಷ್ಟಿಕೋನಗಳು ಹಾಗು ಅವುಗಳಲ್ಲಿ ಬಳಕೆಯಾಗುತ್ತಿರುವ ಪರಿಭಾಷೆಗಗಳು ಕ್ರಿಶ್ಚಿಯನ್ ಥಿಯಾಲಜಿಯ ಸೆಕ್ಯೂಲರ್ ಸ್ವರೂಪವಾಗಿವೆ ಎಂದು ತೋರಿಸುವಲ್ಲಿ ಬಾಲು ಸಫಲರಾಗಿದ್ದರೆ ಅವೆಲ್ಲವನ್ನೂ ಈ ಚೌಕಟ್ಟಿನಲ್ಲಿ collapse ಮಾಡುವುದರಲ್ಲಿ ಚೆನ್ನಿಯವರಿಗೆ ಯಾವ  ದೋಷ ಕಾಣಿಸುತ್ತದೆ? ವಿಶ್ವವಿದ್ಯಾನಿಲಯದಲ್ಲಿರುವ ಹಲವಾರು ಅಧ್ಯಯನ ವಿಭಾಗಗಳನ್ನು ವಿಶ್ವವಿದ್ಯಾನಿಲಯದ ಚೌಕಟ್ಟಿನಲ್ಲಿ collapse ಮಾಡಿದರೆ ತಪ್ಪೇನು? Collapse ಮಾಡುವುದೇ ಒಂದು ದೋಷವಲ್ಲ, ಆದರೆ ಅದರಲ್ಲಿ ಬಾಲುರವರು ಹೇಗೆ ವಿಫಲರಾಗಿದ್ದಾರೆ? ಮತ್ತು ಹಾಗೆ ಮಾಡುವುದರಿಂದ ಇರುವ ತೊಂದರೆ ಏನು? ಹಾಗೂ  ಇದು ಹೇಗೆ ಚಾರಿತ್ರಿಕವಾಗಿ ಮತ್ತು ತಾತ್ವಿಕವಾಗಿ ಅಸಿಂಧುವಾಗುತ್ತದೆ? ಎನ್ನುವುದನ್ನು ತೋರಿಸಿದರೆ ಮಾತ್ರ ಇಂತಹ ಹೇಳಿಕೆಗೆ ಅರ್ಥ ಬರುತ್ತದೆ. ಇಲ್ಲವಾದರೆ ಇದೊಂದು ಬೀಸು ಹೇಳಿಕೆಯಷ್ಟೆ.

ಚೆನ್ನಿಯವರು ಬಾಲುರವರ ವಾದದ ಮೂಲ ಆಧಾರಗಳಾವುವು ಎಂದು ಹೇಳುತ್ತಾ ‘ರಿಲಿಜನ್’ ಅನ್ನುವ ಪದ ಮತ್ತು ಪರಿಕಲ್ಪನೆ ಎಲ್ಲಾ ಧರ್ಮಗಳಿಗೆ ಅನ್ವಯಿಸಬಹುದಾದಂಥ ‘ಸರ್ವನಾಮ’ವಲ್ಲ. ಅದು ಕೇವಲ ಕ್ರಿಶ್ಚಿಯನ್, ಯಹೂದಿ ಮತ್ತು ಕೆಲವೇ ಧರ್ಮಗಳನ್ನು ವಿವರಿಸುವ ಪದ. ಹಿಂದೂಯಿಸಮ್, ಬುದ್ಧಿಸಮ್ ಮುಂತಾದ ಪದಗಳು ಕೇವಲ ರಚನೆಗಳು ಮತ್ತು ಅವು ಅಸಂಬದ್ಧವೆಂದು’  ಹೇಳಿದ ವಿದ್ವಾಂಸರ ಪಟ್ಟಿಯನ್ನು ಕೊಡುತ್ತಾರೆ. ತಮ್ಮ ಗ್ರಂಥಗಳಲ್ಲಿ ನಾನೇ ಮೊತ್ತಮೊದಲಿಗೆ ಇವೆಲ್ಲವನ್ನೂ ಹೇಳುತ್ತಿದ್ದೇನೆ ಎಂದು ಬಾಲು ರವರು ಎಲ್ಲಿಯೂ ಘೋಷಿಸಿಕೊಂಡಿಲ್ಲ. ತಮಗಿಂತಲೂ ಮೊದಲು ಈ ವಿಷಯವನ್ನು ಕುರಿತು ಚರ್ಚಿಸಿದ ಈ ಮೇಲಿನ ವಿದ್ವಾಂಸರು   ಏನನ್ನು ಹೇಳಿದ್ದಾರೆ ಅವುಗಳ ಮಿತಿಯೇನು, ಯಾವ ಕಾರಣದಿಂದಾಗಿ ಅಂತಹ ಮಿತಿಗಳು ಉದ್ಭವಿಸಿವೆ? ಅವುಗಳನ್ನು ಹೇಗೆ ದಾಟಬಹುದು? ಎಂದು ವಿವರಿಸುವ ಪ್ರಕ್ರಿಯೆಯಲ್ಲಿಯೇ ತಮ್ಮ ಪ್ರಾಕ್ ಕಲ್ಪನೆಯನ್ನು ಬಾಲು ಮಂಡಿಸುತ್ತಾರೆ. ಆದರೆ ಮೊತ್ತಮೊದಲ ಬಾರಿಗೆ ಇಂಥ ಹೇಳಿಕೆಗಳಿಗೆಲ್ಲ ಸಿದ್ದಾಂತದ ಸ್ವರೂಪವನ್ನು ಕೊಟ್ಟ ಕೀರ್ತಿ ಬಾಲುರವರಿಗೇ ಸಲ್ಲುತ್ತದೆ. ಬಾಲುರವರ ಸಿದ್ದಾಂತನ್ನು ಈ ಮೊದಲೇ ಯಾರಾದರೂ ಮಂಡಿಸಿದ್ದಾರೆ ಎನ್ನುವುದು ಚೆನ್ನಿಯವರಿಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿಕೊಡಬೇಕಾಗಿ ಅವರಲ್ಲಿ ವಿನಂತಿಸುತ್ತೇನೆ.

ಚೆನ್ನಿಯವರು ಇಂಥ ಬೀಸು ಹೇಳಿಕೆಯನ್ನು ಮಾಡುವಾಗ ಅವರು ಬಾಲುರವರ ಕೃತಿಗಳನ್ನು ಸರಿಯಾಗಿ ಓದುವ ಗೋಜಿಗೆ ಹೋಗದೇ ಫಿಲಾಸಫಿ ಈಸ್ಟ್ ಎಂಡ್ ವೆಸ್ಟ್ ಜರ್ನಲ್ ನಲ್ಲಿ (ಸಂ.47. ಸಂ.3 (ಜುಲೈ 1997) ಗೆರಾಲ್ಡ್ ಲಾರ್ಸೆನ್ ರವರು ಬಾಲುರವರ ಗ್ರಂಥದ ಕುರಿತು ಮಾಡಿದ ವಿಮರ್ಶೆಯನ್ನು ಕತ್ತರಿಸಿ ಅಂಟಿಸುವುದರಲ್ಲೇ ತೃಪ್ತರಾಗಿದ್ದಾರೆ. ಬಾಲುರವರ ಇದೇ ಗ್ರಂಥದ ಬಗ್ಗೆ ಇನ್ನೂ ಸಾಕಷ್ಟು ಒಳ್ಳೆಯ ವಿಮರ್ಶೆಗಳು ಬಂದಿವೆ. ಅವೆಲ್ಲವನ್ನೂ ಬಿಟ್ಟು ಚೆನ್ನಿಯವರು ಇದನ್ನೇ ಏಕೆ ಆರಿಸಿಕೊಂಡಿದ್ದಾರೆ? ಎಂಬುದು ಕುತೂಹಲಕಾರಿ ವಿಷಯ. ಬಾಲು ಅವರ ಗ್ರಂಥದ ಕುರಿತು ಬಂದ ವಿಮರ್ಶೆಗಳಲ್ಲೇ ಈ ಮೇಲಿನದರಲ್ಲಿ ಮಾತ್ರ ಚೆನ್ನಿಯವರ ಕೆಲಸಕ್ಕೆ ಬೇಕಾದ ಹೇಳಿಕೆಗಳು ಲಭ್ಯವಿವೆ.

4. ಸುಳ್ಳುಗಳನ್ನು ಸೃಷ್ಟಿಸುವುದು :

ಬಾಲುರವರ ಬರವಣಿಗೆಗಳನ್ನು ಸ್ವತಃ ಓದಿ ಅವರ ಬಗ್ಗೆ ಚೆನ್ನಿಯವರು ಬರೆಯುತ್ತಿದ್ದುದೇ ಹೌದಾದರೆ ಈ ಕೆಳಗಿನ ಸುಳ್ಳುಗಳು ಹೇಗೆ ನುಸುಳುತ್ತವೆ ಎಂಬುದಕ್ಕೆ ಪ್ರತ್ಯೇಕ ವಿವರಣೆ ಬೇಕಾಗಬಹುದು:

 1.  ’ಭಾರತೀಯ ರಿಲಿಜನ್ ಕೆಟ್ಟದ್ದು ಎಂದು ಸಾಬೀತು ಮಾಡಿ ಕ್ರಿಶ್ಚಿಯನ್ ಧರ್ಮದ ಶ್ರೇಷ್ಟತೆಯನ್ನು ಸಮರ್ಥಿಸುವ ಉದ್ದೇಶ ಪಶ್ಚಿಮದ ವಿದ್ವಾಂಸರಿಗಿತ್ತು ಎನ್ನುವ ವಿಷಯದಲ್ಲಿ ಬಾಲುರವರು ಸಯೀದ್ ಜೊತೆಗಿದ್ದಾರೆ’ ಎಂಬುದು ಚೆನ್ನಿಯವರ ಹೇಳಿಕೆ. ಆದರೆ ಬಾಲುರವರು ಇದನ್ನೇ  ಬಲವಾಗಿ  ಅಲ್ಲಗಳೆಯುತ್ತಾರೆ. ಸುಮಾರು ಮುನ್ನೂರು ವರ್ಷಗಳ ಕಾಲ ಪಶ್ಚಿಮದ ವಿವಿದೆಡೆಗಳಿಂದ ಹಾಗೂ ವಿವಿಧ ಉದ್ದೇಶಗಳಿಂದ ಭಾರತಕ್ಕೆ ಭೇಟಿ ನೀಡಿದ ಎಲ್ಲರಿಗೂ ಒಂದು ಸಮಾನ ಉದ್ದೇಶವಿತ್ತು ಎಂದು ಹೇಳುವುದು ಅತ್ಯಂತ ಅವ್ಯೆಜ್ಞಾನಿಕ ಎನ್ನುವುದು ಅವರ ವಾದ. (ವಿವರಗಳಿಗೆ ನೋಡಿ: ಪೂರ್ವಾವಲೋಕನ ಮತ್ತು ಹುಡುಕಾಟವನ್ನು ನಿಲ್ಲಿಸದಿರೋಣ ಪೀಠಿಕೆ)
 2. ಬಾಲುರವರು ವಸಾಹತೋತ್ತರ ಚರ್ಚೆಗೆ ಏನನ್ನೂ ಸೇರಿಸಿಲ್ಲ ಎಂದು ಚೆನ್ನಿ ಹೇಳುತ್ತಾರೆ. ಓರಿಯಂಟಲಿಸಂನ ಕೊರತೆಗಳೇನು? ಎನ್ನುವುದರ ಬಗ್ಗೆ ಬಾಲು ಏನು ಹೇಳಿದ್ದಾರೆ? ಎಂದು ತಿಳಿಯಲು ಅವರ ‘ವರ್ತಮಾನದ ಭವಿಷ್ಯ: ಓರಿಯಂಟಲಿಸಂ ಮೂಲಕ ಯೋಚಿಸಿದಾಗ’ ಲೇಖನವನ್ನು ನೋಡಿ.  ಇಲ್ಲಿ ಬಾಲುರವರು ಸಯಿದ್ ಬಗ್ಗೆ ಹೇಳಿರುವುದನ್ನು ಈ ಮೊದಲೇ ವಸಾಹತೋತ್ತರವಾದಿಗಳಾಗಲಿ ಅಥವಾ ಮತ್ತಾರಾದರೂ ಹೇಳಿದ್ದಾರೆ ಎನ್ನುವುದನ್ನು ದಯವಿಟ್ಟು ತೋರಿಸಿ
 3.  ’ಬಾಲು ವಸಾಹತುಶಾಹಿ ಪ್ರಜ್ಞೆಯನ್ನು ಕೇವಲ ಪ್ರಜ್ಞೆಯಾಗಿ, ಗ್ರಹಿಕೆಯಾಗಿ ಎಷ್ಟು ಅಮೂರ್ತವಾಗಿ ಚರ್ಚಿಸುತ್ತಾರೆಂದರೆ ಅವರ ಯಾವುದೇ ಲೇಖನದಲ್ಲಿ ಭಾರತದಲ್ಲಿ ಬ್ರಿಟಿಶ್ ವಸಾಹತುಶಾಹಿ ಒಂದು ರಾಜಕೀಯ, ಆರ್ಥಿಕ ವ್ಯವಸ್ಥೆಯೂ ಆಗಿತ್ತು ಎನ್ನುವ ಸಣ್ಣ ಪ್ರಸ್ತಾಪವೂ ಇಲ್ಲ’ ಎನ್ನುವ ಹೇಳಿಕೆ ಸಂಪೂರ್ಣ ಆದಾರರಹಿತ. ದಯವಿಟ್ಟು ಅವರ ‘Colonialism, Colonial Consciousness, and Political Theory’ ಮತ್ತು ಸೆಕ್ಯುಲರಿಸಂನ ಕರಿನೆರಳು: ಭಾರತದಲ್ಲಿ ಹಿಂದೂಮೂಲಭೂತವಾದ ಮತ್ತು ವಸಾಹತುಶಾಹಿ ಉದಾರವಾದ’ ಲೇಖನಗಳನ್ನು ನೋಡಿ.
 4. ಕ್ರಿಶ್ಚಿಯನ್ ಥಿಯಾಲಜಿ ಪ್ರೇರಿತ history ಗೂ ಮನುಷ್ಯ ಅನುಭವದ ಮೂಲ ಸತ್ಯವೇ ಆಗಿರುವ ಚರಿತ್ರೆಗೂ ವ್ಯತ್ಯಾಸವಿದೆ ಮತ್ತು ಆ ಚರಿತ್ರೆಯನ್ನು ಅಲಕ್ಷಿಸಲಾಗದು ಎಂಬ ಅರಿವು ಗಂಗಾಧರರಿಗೆ ಇಲ್ಲ   ಎಂಬುದು ಚೆನ್ನಿಯವರ ಘೋಷಣೆ. ಚೆನ್ನಿಯವರೇ  “ವಾಟ್ ಡು ವಿ ನೀಡ್ ಹಿಸ್ಟರಿ ಆರ್ ಪಾಸ್ಟ್” ಲೇಖನವನ್ನು ಮತ್ತೊಮ್ಮೆ ಸರಿಯಾಗಿ ಓದಿ.
 5. ’ಬಾಲುರವರ ವಾದಕ್ಕಿದ್ದ ಅನೇಕ ಸಾಧ್ಯತೆಗಳನ್ನು ಬಾಲು ಹಾಗು ಅವರ ಗುಂಪು ಅಸಹ್ಯಗೊಳಿಸಿಬಿಟ್ಟಿದೆ, ಮಡೇಸ್ನಾನವನ್ನು ಬುದ್ದಿಜೀವಿಗಳ ಸಮಸ್ಯೆಯನ್ನಾಗಿ ಮಾಡಿದೆ ಮತ್ತು ಮತಾಂತರ ನಿಷೇಧವನ್ನು ಪುರಸ್ಕರಿಸಲು ಉಪಯೋಗವಾಗಿದೆ’ ಎನ್ನುವ ಚೆನ್ನಿಯವರ ಹೇಳಿಕೆಗೂ ಯಾವುದೇ ಆಧಾರವಿಲ್ಲ. ಮಡೇಸ್ನಾನ ವಾಸ್ತವವಾಗಿ ಯಾರ ಸಮಸ್ಯೆ ಎಂಬುದನ್ನು ಚೆನ್ನಿಯವರು ಹೇಳಬೇಕು. ಅದು ಜನಸಾಮಾನ್ಯರ ಸಮಸ್ಯೆಯಾಗಿತ್ತೆ? ಅದನ್ನು ವಿರೋಧಿಸಿದವರ ವಾದದ ಹಿಂದಿದ್ದ ಸ್ಯೆದ್ದಾಂತಿಕ ಚೌಕಟ್ಟು ಬುದ್ದಿಜೀವಿಗಳದ್ದಲ್ಲವೆ? ಆ ಚೌಕಟ್ಟಿನ ದೌರ್ಬಲ್ಯವನ್ನು ತೋರಿಸುವ ಪ್ರಯತ್ನವನ್ನಷ್ಟೇ ನಾವು ಮಾಡಿದ್ದೇವೆ. ಈಗಾಗಲೇ ವೈಜ್ಞಾನಿಕ ಹಾಗೂ ಪ್ರಗತಿಪರ ಎಂದು ಒಪ್ಪಿಕೊಂಡಿರುವ ಬೌದ್ದಿಕ ಚೌಕಟ್ಟನ್ನು ಪ್ರಶ್ನಿಸಬಾರದು ಎನ್ನುವುದು ನಿಮ್ಮ ಅಭಿಮತವೆ? ಹಾಗೆಯೇ, ಮತಾಂತರ ನಿಷೇಧ ಕಾಯಿದೆಯನ್ನು ಎಲ್ಲಿ ಪುರಸ್ಕರಿಸಲಾಗಿದೆ? ಮತಾಂತರ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಲಿಬರಲ್ ಪ್ರಜಾಪ್ರಭುತ್ವವು ಎಂತಹ ಇಕ್ಕಟ್ಟಿಗೆ ಒಳಗಾಗುತ್ತದೆ ಎಂದು ಹೇಳುವುದು ಅದನ್ನು ಪುರಸ್ಕರಿಸಿದಂತಾಗುತ್ತದೆಯೆ? ಇದರ ಬಗ್ಗೆ ಬಾಲುವಿನ ನಿಲುವು ಅವರ ‘ಸೆಕ್ಯುಲರ್ ಪ್ರಭುತ್ವ ಮತ್ತು ರಿಲಜಸ್ ಸಂಘರ್ಷ: ಲಿಬರಲ್ ನಿರ್ಲಿಪ್ತತೆ ಮತ್ತು ಭಾರತೀಯ ಬಹುಸಂಸ್ಕ್ಕತಿಗಳು’ ಎನ್ನುವ ಲೇಖನದಲ್ಲಿ ಸ್ಪಷ್ಟವಾಗಿದೆ. ಚೆನ್ನಿಯವರು ಇಂತಹ ಸೂಕ್ಷ್ಮ ವ್ಯತ್ಯಾಸಗಳನ್ನು ಅರಿಯದಷ್ಟು ದಡ್ಡರೇನಲ್ಲ ಆದರೂ ಹೀಗೇಕೆ ಮಾಡುತ್ತಿದ್ದಾರೆ? ಅವರ ಉದ್ದೇಶವಾದರೂ ಏನು
 6. ಬಾಲು ಅವರ ಥಿಯರಿ ಪಶ್ಚಿಮದ ವಿದ್ವತ್ಲಯದಲ್ಲಿ ಒಂದು ಸಣ್ಣ ಪರಿಣಾಮವನ್ನೂ ಮಾಡಿಲ್ಲ ಎಂಬುದು ಚೆನ್ನಿಯವರ ಹೇಳಿಕೆ. ಜಗತ್ತಿನ ಮುಂಚೂಣಿಯ ಪ್ರಕಟಣೆಗಳಾದ ಆಕ್ಸ್ಫರ್ಢ, ರೌಟ್ ಲೆಡ್ಜ, ಇತ್ಯಾದಿಗಳೂ, ಅನೇಕ ಅಂತರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳೂ ಅವರ ವಿಚಾರಗಳನ್ನು ಈಗಾಗಲೇ ಪ್ರಕಟಿಸಿವೆ.  ಹಾಗಾಗಿ ಈ ಹೇಳಿಕೆಯ ಸತ್ಯಾಸತ್ಯತೆಗಿಂತ ಬಾಲು ಅವರ ವಿಚಾರಗಳನ್ನು ಗೌಣವಾಗಿ ನೋಡಬೇಕು ಎಂಬುದನ್ನು ಕನ್ನಡ ಜನತೆಗೆ ಮನದಟ್ಟು ಮಾಡಲು ಚೆನ್ನಿಯವರು  ಇಂಥ ತಂತ್ರವನ್ನು ಹೂಡುವುದೇ ಆಸಕ್ತಿಪೂರ್ಣವಾಗಿದೆ.
 7. ಇನ್ನು ಹಿಂದೂ ಸಂಘಟನೆಗಳೊಡನೆ ಬಾಲುರವರ ಒಡನಾಟವನ್ನು ಕುರಿತು. ಚೆನ್ನಿಯವರೇ ಹೇಳುವ ಹಾಗೆ ’ಅಂತಹ ಒಡನಾಟವೆಲ್ಲವೂ ಮುಕ್ತವಾಗಿಯೇ ನಡೆಯುತ್ತಿವೆ” ಒಬ್ಬರ ವಾದವನ್ನು ನಾವು ಪುರಸ್ಕರಿಸಬೇಕೋ ಬೇಡವೋ ಎಂದು ನಿರ್ಧರಿಸಲು ಅವರು ಯಾರೊಡನೆ ಸಂವಾದಿಸುತ್ತಾರೆ ಎನ್ನುವುದು ಹೇಗೆ ಮುಖ್ಯವಾಗುತ್ತದೆ ಎಂಬುದು ನನಗೆ ಸ್ಪಷ್ಟವಾಗಿಲ್ಲ. ಒಂದು ವೇಳೆ ಬಾಲು ಬಲಪಂಥೀಯರೆಂದು ಕರೆಸಿಕೊಂಡವರ ಜೊತೆ ಮಾತ್ರ ನನ್ನ ಸಂವಾದ ಸಾಧ್ಯ ಎಂದು ಹೇಳಿದ್ದರೆ ಅದು ಬೇರೆ ಮಾತು.  ನಾನು ಏನು ಹೇಳುತ್ತಿದ್ದೇನೆ ಮತ್ತು ಯಾವ ಆಧಾರದ ಮೇಲೆ ಹೇಳುತ್ತಿದ್ದೇನೆ ಎನ್ನುವ ಸ್ಪಷ್ಟ ಅರಿವು ನನಗಿರುವವರೆಗೆ ಯಾರ ಜೊತೆಯಲ್ಲಾದರೂ ನನ್ನ ಸಂಶೋಧನೆಯ ಬಗ್ಗೆ ಚರ್ಚಿಸಲು ನಾನು ಸಿದ್ಧ ಎನ್ನುವುದು ಅವರ ನಿಲುವು. ಅವರು ವಿಶ್ವ ಹಿಂದೂ ಪರಿಷತ್ ವೇದಿಕೆಯಲ್ಲಿ ಮಾತನಾಡಿದರೂ ಸಮಾಜವಾದಿ ಸಂಘಟನೆಗಳ ನಡುವೆ ಮಾತನಾಡಿದರೂ ನಮಗೆ ಯಾವ ಸಮಸ್ಯೆಯೂ ಇಲ್ಲ. ಆದರೆ ಬದ್ಧತೆ ಇಲ್ಲದೆ ಎದುರಿಗಿರುವ ಪ್ರೇಕ್ಷಕರ ಮೆಚ್ಚುಗೆ ಗಳಿಸಲು ನಿಲುವನ್ನು ಬದಲಾಯಿಸುತ್ತಾ ಹೋದರಷ್ಟೇ ನನಗೆ ಸಮಸ್ಯೆಯಾಗುತ್ತದೆ. ಬಾಲು ಹಾಗೇನೂ ಮಾಡಿಲ್ಲ. ಹಾಗೂ

ಅಂತಿಮವಾಗಿ, ಚೆನ್ನಿಯವರು ಬಳಸಿರುವ ಕೆಲವು ಪದಗಳ ಬಗ್ಗೆ ಒಂದೆರಡು ಮಾತು. ನನ್ನನ್ನೂ ಒಳಗೊಂಡಂತೆ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದಲ್ಲಿರುವ ಎಲ್ಲರನ್ನೂ ಅವರು ಗಿಂಡಿಮಾಣಿಗಳು ಎಂದು ಕರೆಯುತ್ತಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಗಿಂಡಿಮಾಣಿ ಎನ್ನುವುದು ಮಠದ ಪರಿಭಾಷೆ. ಅದನ್ನು ಬೌದ್ದಿಕ ವಲಯದಲ್ಲಿ ಬಳಸುವ ಅವರ ಉದ್ದೇಶವಾದರೂ ಏನು? ಒಂದು ನಿರ್ಧಿಷ್ಟ ವಾದವನ್ನು ಒಪ್ಪಿ ಪುರಸ್ಕರಿಸುವ ಗುಂಪು ಅವರ ಪ್ರಕಾರ ಒಂದು ಮಠ. ಬ್ಲಾಗನಲ್ಲಿ ಚೆನ್ನಿಯವರ ಅಭಿಪ್ರಾಯವನ್ನು ಮೆಚ್ಚಿ ತಲೆದೂಗುತ್ತಿರುವವರೆಲ್ಲ  ಚೆನ್ನಿಯವರ ಗಿಂಡಿಮಾಣಿಗಳಾಗುತ್ತಾರೆಯೆ? ಈಗ ಪ್ರಚಲಿತದಲ್ಲಿರುವ ಲೋಹಿಯಾವಾದ, ಮಾರ್ಕ್ಸ್ ವಾದ, ಗಾಂಧೀವಾದ, ಅಂಬೇಡ್ಕರ್ವಾದ, ವಸಾಹತೋತ್ತರವಾದ, ಆಧುನಿಕೋತ್ತರವಾದ ಇತ್ಯಾದಿಗಳೆಲ್ಲವೂ ಬೇರೆ ಯಾವ ರೀತಿಯಲ್ಲಿ ಬೆಳೆದು ಬಂದವು?   ಇಂತಹ ಬೇರೆ ನೇರ ಸ್ಕೂಲ್ ಆಫ್ ಥಾಟ್ನಲ್ಲಿ ಗುರುತಿಸಿಕೊಂಡಿರುವವರೆಲ್ಲರೂ ಆಯಾ ಮಠಗಳ ಗಿಂಡಿಮಾಣಿಗಳೆ? ಚೆನ್ನಿಯವರು ಯಾವ ಮಠದ ಅಥವಾ ಮಠಗಳ ಗಿಂಡಿಮಾಣಿಗಳಾಗಿದ್ದರು? ಬೌದ್ದಿಕ ಬೆಳವಣಿಗೆಯ ಪ್ರಕ್ರಿಯೆಯ ಇತಿಹಾಸ ತಿಳಿದವರು ಆಡುವ ಮಾತು ಹೀಗಿರಲು ಸಾಧ್ಯವೇ ಇಲ್ಲ.

ದಿನವೀಡೀ ಪಾಠ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡ ನಮಗೆ ಕನ್ನಡ ಬುದ್ದಿಜೀವಿಗಳ ನಡುವೆ ಸಂಬಳ ಪಡೆಯಲು ಸಂಕಷ್ಟವಾಗಿ ಮುಲಾಜುಗಳಿಗೆ ಬೀಳುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ? ಇಂಥದ್ದೇನನ್ನೂ ಮಾಡದೇ ಸಂಬಳ ಪಡೆಯುವವರಿದ್ದರೆ ಅವರಿಗೆ ಇಂಥ ಸಂಕಷ್ಟಗಳು ಸಹಜವಿರಬಹುದು. ಅಥವಾ ಚೆನ್ನಿಯವರು ವಿಶ್ವವಿದ್ಯಾಲಯಗಳಲ್ಲಿ ಇಂತಿಂಥ ಸಂಶೋಧನೆ ನಡೆಯಬೇಕು, ಇಂಥದ್ದು ನಡೆಯಬಾರದೆಂಬುದಾಗಿ ಏನಾದರೂ ನಿರ್ದೇಶನ ಕೊಡುತ್ತಿದ್ದಾರೆಯೆ? ಅವರ ಪ್ರತಿಕ್ರಿಯೆಯ ಅಂತ್ಯದಲ್ಲಿ ಅವರು ಆ ಮಾರಲ್ ಪೋಲೀಸಗಿರಿಯ ಹೊಣೆ ತಮಗಿರುವುದರಿಂದಲೇ ಇಂಥ ಮಾತುಗಳನ್ನು ಹೇಳಬೇಕಾಗಿದೆ  ಎಂದು ಬೇರೆ ತಿಳಿಸುತ್ತಾರೆ. ನಾನು ಮೊದಲೇ ಹೇಳಿದ ಹಾಗೆ ನಮ್ಮ ಗುಂಪನ್ನು ಹೇಗೆ ಚಿತ್ರಿಸಬೇಕೆಂದು ಮೊದಲೇ ತೀರ್ಮಾನಿಸಿ ಚೆನ್ನಿಯವರು ಈ ಪೋಲೀಸಗಿರಿ ಬರವಣಿಗೆ ಪ್ರಾರಂಬಿಸಿದ್ದಾರೆಯೇ ಹೊರತು ಮತ್ತಾವುದೇ ಉದ್ದೇಶ ಅವರಿಗಿದ್ದಂತಿಲ್ಲ. ವಿಶ್ವವಿದ್ಯಾನಿಲಯದ  ಇತರ ಪ್ರಾಧ್ಯಾಪಕರು ಹಾಗೂ ಸಂಶೋಧನೆಗಳ ಮೇಲೆ ಅವರ ಈ ಹೊಸ ಸರ್ವಾಧಿಕಾರವು ಯಾವ ರಾಜಶಾಸನದ ಮೂಲಕ ಜಾರಿಯಾಯಿತು?

ಕೊನೆಯ ಪ್ರಶ್ನೆ: ಬಾಲುರವರು ಹೊಸತೇನನ್ನೂ ಹೇಳುತ್ತಿಲ್ಲ ಮತ್ತು ಅವರು ಹೇಳುವುದನ್ನೆಲ್ಲಾ ಈ ಮೊದಲೇ ಮತ್ತಾರೊ ಹೇಳಿದ್ದಾರೆ, ಇದೆಲ್ಲಾ ಬುದ್ದಿಜೀವಿಗಳಿಗೆ ಸುಪರಿಚಿತವಾದ ವಾದಗಳು ಎಂಬುದು ನಿಜವೇ ಆದ ಪಕ್ಷದಲ್ಲಿ   ಚೆನ್ನಿಯವರೇಕೆ  ಇಷ್ಟು ವರುಷಗಳ ವರೆಗೂ ಸುಮ್ಮನಿದ್ದು ಈಗ ಬಾಲು ಅದನ್ನು ಹೇಳಿದಾಗ ಮಾತ್ರ ಅದನ್ನು ಪ್ರಶ್ನಿಸಿ ಅವರ ಮೇಲೆ ಎಗರಿ ಬೀಳುತ್ತಿದ್ದಾರೆ? ಏಕೆ ಬಾಲುರವರು ಕಾಪಿ ಹೊಡೆದ ಫ್ರಿಟ್ಸ್ ಸ್ಟಾಲ್ ಅಥವಾ ಸಯೀದ್ ಮುಂತಾದವರು ಅಪರಾಧಿಗಳಂತೆ ಅವರಿಗೆ ಕಾಣುವುದಿಲ್ಲ?

Advertisements
Categories: Uncategorized
 1. Dr.
  ಏಪ್ರಿಲ್ 28, 2013 ರಲ್ಲಿ 4:23 ಅಪರಾಹ್ನ

  ಚೆನ್ನಿಯವರ ವಿಮರ್ಶೆಯ ಅಸಲಿಯತ್ತು…….

  ಚೆನ್ನಿಯವರು ಲಡಾಯಿ ಪ್ರಕಾಶನದಲ್ಲಿ ಪ್ರಕಟವಾದ ಬಾಲು ಗುಂಪಿನ ವಾದಗಳ ಬಗ್ಗೆ ಮಾಡಿದ ವಿಮರ್ಶೆಯಲ್ಲಿ ಬಾಲುರವರ ಮೇರು ಕೃತಿ ದಿ ಹೀದನ್ ಇನ್ ಹಿಸ್ ಬ್ಲೈಂಡ್ ನೆಸ್’ ಕುರಿತು ಬರೆದಿರುವ ಸಾಲುಗಳು ಇವು:

  The Heathen in his Blindness (1994) ಕೃತಿ ಹಾಗೂ ಅನೇಕ ಸಂಕೀರ್ಣ ಪ್ರಬಂಧಗಳ ಮೂಲಕ ಅವರು ವಸಾಹತುಶಾಹಿ ಪ್ರಜ್ಞೆ ಮತ್ತು ಓರಿಯಂಟಲಿಸಂ ಬಗ್ಗೆ ಒಂದು ವಿಸ್ತಾರವಾದ ಪ್ರಾಕ್ಕಲ್ಪನೆಯನ್ನು ರೂಪಿಸಿಕೊಂಡಿದ್ದರು. ಇದಕ್ಕೆ ಪಶ್ಚಿಮದ ವಿದ್ವತ್ ಪ್ರಪಂಚದಲ್ಲಿ ಹಿನ್ನೆಲೆ ಇರಲಿಲ್ಲವೆಂದಲ್ಲ. ‘ರಿಲಿಜನ್’ ಅನ್ನುವ ಪದ ಮತ್ತು ಪರಿಕಲ್ಪನೆ ಎಲ್ಲಾ ಧರ್ಮಗಳಿಗೆ ಅನ್ವಯಿಸಬಹುದಾದಂಥ ‘ಸರ್ವನಾಮ’ವಲ್ಲ. ಅದು ಕೇವಲ ಕ್ರಿಶ್ಚಿಯನ್, ಯಹೂದಿ ಮತ್ತು ಕೆಲವೇ ಧರ್ಮಗಳನ್ನು ವಿವರಿಸುವ ಪದ. ಹಿಂದೂಯಿಸಮ್, ಬುದ್ಧಿಸಮ್ ಮುಂತಾದ ಪದಗಳು ಕೇವಲ ರಚನೆಗಳು ಮತ್ತು ಅವು ಅಸಂಬದ್ಧವೆಂದು——– 1962ರಲ್ಲಿ ಅವರು ವಾದಿಸಿದ್ದರು. ಇದನ್ನೇ ಮುಂದುವರೆಸಿ 1989ರಲ್ಲಿ Frits Staal ಅವರು ‘ರಿಲಿಜನ್’ಅನ್ನುವುದು ಸಾರ್ವತ್ರಿಕವಾದ ಸಂಗತಿಯಲ್ಲ; ಅದರ ಕಲ್ಪನೆ ಕ್ರಿಶ್ಚಿಯನ್ ಥಿಯಾಲಜಿಗೆ ಸಂಬಂಧಿಸಿದ್ದು ಎಂದು ವಾದಿಸಿದ್ದರು. ಇದು ಬಾಲಗಂಗಾಧರರ ಚಿಂತನೆಯ ಮೂಲ ಆಧಾರವಾಗಿದೆ.

  ಜೆರಾಲ್ಡ್ ಲಾರ್ಸನ್ ರವರು ಒಂದು ಜರ್ನಲ್ ನಲ್ಲಿ ಇದೇ ಹೀದನ್ ಕೃತಿಯ ಬಗ್ಗೆ ಬರೆದಿರುವ ವಿಮರ್ಶೆಯಲ್ಲಿ (Gerald Larson Philosophy East and West, Vol. 47, No. 3 (Jul., 1997), pp. 433-435Published by: University of Hawai’i Press, URL: http://www.jstor.org/stable/1399914) ಬರುವ ಈ ಸಾಲುಗಳನ್ನು ನೋಡಿ:

  One of the important debates in the academic study of religion has to do with the manner in which the very notion of “religion” is treated. Over three decades ago, Wilfred Cantwell Smith inaugurated the debate in his now classic book The Meaning and End of Religion (first published in 1962; subsequently, New York: Harper and Row, 1978), in which he argues that the term “religion” is a scholarly construct and that the vari- ous “isms” in the study of religion-for example, Hindu-ism, Buddh-ism, and so forth-are hollow abstractions that inhibit what we really should be studying, namely “cumulative tradition” and “personal faith”…..

  One of the more recent voices in the continuing debate has been that of an outsider in the academic study of religion, Frits Staal, who, in a stimulating, albeit somewhat eccentric, discussion about the origins of language in a book titled Rules without Meaning (New York: Peter Lang, 1989), argues that the term “religion” may be a naming term (or, in other words, almost a kind of proper noun) rather than a generic or general notion. Specifically, Staal argues that the term “religion” has an appro- priate reference only in the Jewish, Christian, and Islamic traditions and cannot meaningfully be extended to traditions in Asia such as the Hindu or Buddhist.

  ಚೆನ್ನಿಯವರು ಬರೆದಿರುವ ವಿಮರ್ಶೆಯ ಸಾಲುಗಳನ್ನು ಮತ್ತು ಜೆರಲ್ಡ್ ರವರು ಬರೆದಿರುವ ವಿಮರ್ಶೆಯ ಸಾಲುಗಳನ್ನು ನೋಡಿದರೆ ಜೆರಾಲ್ಡ್ ರ ಈ ಹೇಳಿಕೆಗಳನ್ನೇ ಕನ್ನಡದಲ್ಲಿ ಸಾರಾಂಶ ರೂಪದಲ್ಲಿ ಚೆನ್ನಿಯವರು ಭಟ್ಟಿ ಇಳಿಸಿದ್ದಾರೆ ಎನ್ನುವುದು ಯಾರಿಗಾದರೂ ನೇರವಾಗಿಯೇ ಗೊತ್ತಾಗುತ್ತದೆ (1962 ಎಂದು ಇಸವಿಯನ್ನು ಸರಿಯಾಗಿ ಉಲ್ಲೇಖಿಸುವ ಚೆನ್ನಿಯವರು ಸ್ಮಿತ್ ಎಂಬ ಹೆಸರನ್ನು ಮಾತ್ರ ಬಿಟ್ಟಿದ್ದಾರೆ. ಅಲ್ಲದೆ ಮೂಲ ವಿಮರ್ಶಕನ ಹೆಸರನ್ನು ಅಪ್ಪಿತಪ್ಪಿಯೂ ಎಲ್ಲಿಯೂ ಉಲ್ಲೇಖಿಸುವುದಿಲ್ಲ).

  ಒಂದು ಸಾಧಾರಣ ಪುಸ್ತಕವನ್ನು ಕೂಡ ಮೂಲ ಪುಸ್ತಕವನ್ನು ಓದಿಯೇ ವಿಮರ್ಶೆ ಬರೆಯಬೇಕು. ಬಾಲುರ ಕೃತಿ ಹೊಸ ಸವಾಲುಗಳನ್ನು ವಿದ್ವದ್ವಲಯದಲ್ಲಿ ಮುಂದಿಡುತ್ತಿದೆ ಎನ್ನುತ್ತಿರುವಾಗ “ಅದೇನು ಮಹಾ ಅದನ್ನು ಯಾರೂ ಸೀರಿಯಸ್ಸಾಗಿ ಪರಿಗಣಿಸಬೇಕಿಲ್ಲ” ಎಂದು ಠರಾವು ಮಾಡುವ ಈ ಮಹಾನ್ ವಿದ್ವಾಂಸರು ತಮ್ಮ ವಿಮರ್ಶೆಗೆ ವಿಮರ್ಶಿಸುವ ಕೃತಿಯನ್ನು ಆಧಾರವಾಗಿ ತೆಗೆದು ಕೊಳ್ಳದೆ ಯಾರದೋ ವಿಮರ್ಶೆಯನ್ನು ಭಟ್ಟಿ ಇಳಿಸಿ ‘ಪಾಂಡಿತ್ಯ ಮೆರೆದೆ’ ಎಂದು ಭೀಗುವುದು ಮತ್ತು ವಿಮರ್ಶಿತ ಕೃತಿಯನ್ನು ಸೀರಿಯಸ್ಸಾಗಿ ತೆಗೆದು ಕೊಂಡು ಅಧ್ಯಯನಕ್ಕೆ ಹೊರಟಿರುವವರು ಬುದ್ದಿ ಇಲ್ಲದವರು ಎನ್ನುವ ರೀತಿಯ ವ್ಯಂಗ್ಯವಾಡುವುದು ಯಾವ ರೀತಿಯ ಸಂಶೋಧನೆ ಸ್ವಾಮಿ……

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: