ಮುಖ ಪುಟ > Uncategorized > ಸಾಮಾಜಿಕ ಸಂಶೋಧನೆ ಯಾಕಾಗಿ?

ಸಾಮಾಜಿಕ ಸಂಶೋಧನೆ ಯಾಕಾಗಿ?

logo1ಪ್ರೊ.ಜೆ.ಎಸ್.ಸದಾನಂದ

{ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ, ಈ ಲೇಖನವನ್ನು ಪ್ರಜಾವಾಣಿಗೆ ಬಹಳ ಹಿಂದೆಯೇ ಕಳುಹಿಸಿದ್ದು ಪ್ರಜಾವಾಣಿಯಲ್ಲಿ ಮಾತ್ರ ಇನ್ನೂ ಪ್ರಕಟಿಸಲಾಗಿಲ್ಲ}

ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ.

ಅವರ ಈ ಅನಿಸಿಕೆ ಎಷ್ಟರಮಟ್ಟಿಗೆ ಸರಿ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಬಾಲುರವರು ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ ಎನ್ನುವ ಪ್ರಾಕ್ಕಲ್ಪನೆಯನ್ನು (ಇದೊಂದು ಸಂಶೋಧನೆಯ ಮುಖಾಂತರ ಸಾಬೀತಾಗಬೇಕಾದ ಪ್ರಾಕ್ಕಲ್ಪನೆ ಮಾತ್ರ) ಏಕೆ ಮುಂದಿಡುತ್ತಾರೆ ಎನ್ನುವುದರ ಹಿನ್ನೆಲೆಯನ್ನು ನಾವು ನೋಡಬೇಕು. ಭಾರತದಲ್ಲಿ ಜಾತಿವ್ಯವಸ್ಥೆಯ ಸ್ವರೂಪ ಹಾಗು ಅದರ ಪರಿಣಾಮಗಳ ಕುರಿತು ಈಗಾಗಲೇ ಅಸಂಖ್ಯಾತ ಸಂಶೋಧನಾ ಗ್ರಂಥಗಳು ಹೊರಬಂದಿವೆ. ಜಾತಿವ್ಯವಸ್ಥೆಯ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವನ್ನು ನಾವು ಕಾಣುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ ಭಾರತದಲ್ಲಿ ಎಲ್ಲಡೆ ಕಂಡುಬರುವ ಜಾತಿಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎನ್ನುವುದುನ್ನು ಎಲ್ಲಾ ವಿದ್ವಾಂಸರೂ ಹೆಚ್ಚು ಕಡಿಮೆ ಒಪ್ಪುತ್ತಾರೆ. ಬಾಲು ಅವರ ಪ್ರಕಾರ ಇದ್ಕಕೆ ಮುಖ್ಯ ಕಾರಣ ಈ ಎಲ್ಲಾ ಸಂಶೋಧನೆಗಳು ಜಾತಿವ್ಯವಸ್ಥೆ ಎನ್ನುವುದು ಹಿಂದೂ ರಿಲಿಜನ್ನ ಪ್ರಧಾನ ಲಕ್ಷಣ ಎನ್ನುವ ಇದುವರೆಗೆ ಯಾವುದೇ ಸಂಶೋಧನೆಯಿಂದ ಸಾಬೀತಾಗದ ನಂಬಿಕೆಯನ್ನು ಆಧರಿಸಿವೆ. ಹಿಂದೂ ರಿಲಿಜನ್ ಎನ್ನುವುದು ಅಸ್ತಿತ್ವದಲ್ಲಿ ಇದೆ ಮತ್ತು ಭಾರತದಲ್ಲಿರುವ ಎಲ್ಲಾ ಜಾತಿಗಳು ಅದರ ನ್ಯೆತಿಕ ನಿರ್ಬಂಧದಲ್ಲಿ ಬಂದಿಸಲ್ಪಟ್ಟಿವೆ ಎನ್ನುವುದು ಒಂದು ಸಾಮಾನ್ಯ ನಂಬಿಕೆಯಾಗಿ ಮುಂದುವರೆದುಕೊಂಡು ಬಂದಿದೆಯೇ ಹೊರತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳನ್ನು ಯಾರಿಗೂ ಕೊಡಲು ಸಾಧ್ಯವಾಗಿಲ್ಲ.

ಜಾತಿವ್ಯವಸ್ಥೆ ಎನ್ನುವ ಒಂದು ಸಾಮಾಜಿಕ ಸತ್ಯ ಇದೆ ಎನ್ನುವ ಬೌದ್ಧಿಕ ಚೌಕಟ್ಟಿನಿಂದ ಹೊರಡುವ ಚಿಂತನೆಗಳು ಪ್ರಚಲಿತ ವಿದ್ಯಾಮಾನವನ್ನು ಕುರಿತಂತೆ ಇರುವ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿವೆ.

ಭಾರತದಲ್ಲಿ ಜಾತಿ ವಿನಾಶವನ್ನು ಗುರಿಯಾಗಿಟ್ಟುಕೊಂಡ ಕಾರ್ಯಕ್ರಮಗಳು ನಿರೀಕ್ಷಿತ ಫಲ ಕೊಡುತ್ತಿಲ್ಲ ಏಕೆ? ಜಾತಿಯ ವಿರುದ್ಧ ಹೊರಾಟಗಳು ನಡೆದಂತೆಲ್ಲಾ ಜಾತಿ ಮತ್ತಷ್ಟು ಗಟ್ಟಿಯಾಗಿ ಬೇರೂರುತ್ತಿರುವಂತೆ ನಮಗನಿಸುವುದು ಏಕೆ? ಜಾತಿವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಬೇಕೆಂದು ಬಯಸುವ ಗುಂಪುಗಳೇ ತಮ್ಮ ಗುರಿಯನ್ನು ತಲುಪಲು ತಮ್ಮ ಜಾತಿ ಅಸ್ಮಿತೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕಾದ ಆಂತರಿಕ ವ್ಯೆರುಧ್ಯವನ್ನು ಎದುರಿಸಬೇಕಾದ ಪರಿಸ್ಥಿತಿಗೆ ಏಕೆ ಒಳಗಾಗಿವೆ? ದಲಿತರ ಮೇಲಿನ ಶೋಷಣೆಗೆ ಜಾತಿಯ ಅಸ್ತಿತ್ವವೇ ಕಾರಣವೆಂದಾದರೆ ಜಾತಿಗಳನ್ನು ಉಳಿಸಿಕೊಂಡು ದಲಿತರೊಡನೆ ಸಂಘರ್ಷರಹಿತ ಸಹಬಾಳ್ವೆಯನ್ನು ಮಾಡುತ್ತಿರುವ ಹಲವು ಉದಾಹರಣೆಗಳನ್ನು ವಿವರಿಸುವುದು ಹೇಗೆ? ಜಾತಿವ್ಯವಸ್ಥೆಯ ಸಿದ್ಧಾಂತದ ಮೂಲದಿಂದ ಹುಟ್ಟಿಕೊಂಡ ಜಾತಿಯಾದಾರಿತ ಅಧಿಕಾರ ರಾಜಕೀಯ ಜಾತಿಗಳ ನಡುವಿನ ವ್ಯೆಮನಸ್ಯದ ಸಮಸ್ಯೆಯನ್ನು ಶಮನಗೊಳಿಸುತ್ತಿದೆಯೆ ಅಥವಾ ಅದನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆಯೆ? ಜಾತಿ ವ್ಯವಸ್ಥೆಯ ಕುರಿತು ಇದೂವರೆಗೆ ನಡೆದಿರುವ ಅಸಂಖ್ಯಾತ ಸಂಶೋಧನೆಗಳು ಅದರ ಸ್ವರೂಪವನ್ನು ಗುರುತಿಸಲು ಏಕೆ ವಿಫಲವಾಗಿವೆ? ಎಲ್ಲರಲ್ಲೂ ಮಾನವೀಯತೆಯ ಮೌಲ್ಯವನ್ನು ಬಿತ್ತುವ ಆಶಯವನ್ನು ಇಟ್ಟುಕೊಂಡ ಚಳುವಳಿಗಳು ಪ್ರಬಲವಾದಂತೆಲ್ಲಾ ಜಾತಿ ಧ್ವೇಷ ಹಾಗೂ ವ್ಯೆಮನಸ್ಯಗಳೂ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು? ಈ ಎಲ್ಲಾ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಹಾಗೂ ಅವುಗಳಿಗೆ ಉತ್ತರ ಕಂಡುಕೊಳ್ಳಬೇಕಾದ ತುರ್ತು ನಮಗೆಲ್ಲರಿಗೂ ಇದೆ ಎನ್ನುವುದನ್ನು ದೇವನೂರರೂ ಒಪ್ಪುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾವೆದುರಿಸುತ್ತಿರುವ ಈ ಸಮಸ್ಯೆಗಳೇ ಜಾತಿಯನ್ನು ಕುರಿತ ಸಂಶೋಧನಾ ಪ್ರಶ್ನೆಗಳನ್ನು ಚರ್ಚೆಗೊಳಪಡಿಸಲು ನಮಗೆ ಮೂಲ ಪ್ರೇರಣೆಯಾಗಿವೆ.

ಬಾಲುರವರ ಪ್ರಕಾರ ಜಾತಿವ್ಯವಸ್ಥೆ ಇದೆ ಎನ್ನುವ ನಂಬಿಕೆಯನ್ನು ಆಧರಿಸಿರುವ ಚಿಂತನೆಗಳು ಹಾಗೂ ಚಳುವಳಿಗಳು ನಾವು ತಲುಪಬೇಕಾದ ಗುರಿಯನ್ನು ಅಂದರೆ ಶೋಷಣಾರಹಿತ, ಪರಸ್ಪರ ಸಹಬಾಳ್ವೆಗೆ ಪೂರಕವಾದ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅಡ್ಡಿಯಾಗಿವೆ. ನಮ್ಮ ಸಮಾಜದಲ್ಲಿ ಹತ್ತು ಹಲವು ವಿಧದ ಶೋಷಣೆಗಳು, ಸಂಘರ್ಷಗಳು ಪ್ರಕಟಗೊಳ್ಳುತ್ತಲೇ ಇವೆ. ಜಾತಿ ಶೋಷಣೆ ಎಂದು ನಾವು ಗುರುತಿಸುವ ವಿದ್ಯಮಾನದಲ್ಲಿ ಜಾತಿ ಒಂದು ಸಾಧನವಾಗಿ ಬಳಕೆಯಾಗುತ್ತಿದೆಯೇ ಹೊರತು ಜಾತಿಯಿಂದಾಗಿಯೇ ಅಂತಹ ಶೋಷಣೆ ಹುಟ್ಟಿಕೊಳ್ಳುತ್ತದೆ ಎಂದು ನಮಗೆ ತೋರಿಸಲಾಗುವುದಿಲ್ಲ. ಜಾತಿ ವ್ಯವಸ್ಥೆಯ ಸಿದ್ಧಾಂತದ ಚೌಕಟ್ಟಿನಲ್ಲಿ ನೋಡಿದಾಗ ಜಾತಿಗಳು ಇದ್ದದ್ದರಿಂದಾಗಿಯೇ ಅಂತಹ ಸಂಘರ್ಷ ಉಂಟಾಯಿತೆಂಬಂತೆ ಕಾಣುತ್ತದೆ ಎನ್ನುವುದು ಅವರ ವಾದ. ಉದಾಹರಣೆಗೆ, ಒಂದು ಹಾಸ್ಟೆಲ್ನಲ್ಲಿರುವ ವಿವಿಧ ಜಾತಿಯ ವಿದ್ಯಾರ್ಥಿಗಳ ನಡುವೆ ಸಂಘರ್ಷ ಉಂಟಾದಾಗ ಜಾತಿಯೇ ಕಾರಣವೆಂಬಂತೆ ನಾವು ಪರಿಗಣಿಸುತ್ತೇವೆ. ಆದರೆ ಅದೇ ವಿದ್ಯಾರ್ಥಿಗಳು ವಿವಿಧ ಭಾಷೆಯವರಾಗಿದ್ದರೆ ಅಥವಾ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದರೆ ಮತ್ತು ಅವರ ನಡುವೆ ಜಗಳ ನಡೆದರೆ ಆಗ ಭಾಷೆ ಅಥವಾ ಜಿಲ್ಲೆಗಳು ಇರುವುದರಿಂದಲೇ ಸಮಸ್ಯೆ ಉದ್ಭವಿಸಿತು ಎನ್ನು ತೀರ್ಮಾನಕ್ಕೆ ನಾವು ಬರುವುದಿಲ್ಲ ಮತ್ತು ಆ ಕಾರಣಕ್ಕಾಗಿ ಭಾಷೆಗಳನ್ನೇ ಅಥವಾ ಜಿಲ್ಲೆಗಳನ್ನೇ ನಿರ್ಮೂಲನೆ ಮಾಡಬೇಕೆಂದು ನಮಗನಿಸುವುದಿಲ್ಲ. ತಮ್ಮ ನಡುವಿನ ವೈಮನಸ್ಯಕ್ಕೆ ಭಾಷೆ ಅಥವಾ ಜಿಲ್ಲೆಗಳನ್ನು ಸಾಧನವಾಗಿ ಬಳಸಿಕೊಂಡರು ಎಂದಷ್ಟೇ ನಾವು ನೋಡುತ್ತೇವೆ. ಆದರೆ ಜಾತಿ ಘರ್ಷಣೆಗಳ ವಿಷಯಕ್ಕೆ ಬಂದಾಗ ಜಾತಿ ನಿರ್ಮೂಲನವೊಂದೇ ಪರಿಹಾರವಾಗಿ ನಮಗೆ ಕಾಣತೊಡಗುತ್ತದೆ.

ಒಂದು ಶೋಷಣಾರಹಿತ ಹಾಗೂ ನ್ಯಾಯಯುತ ಸಮಾಜವನ್ನು ನಿರ್ಮಿಸಬೇಕೆಂಬ ಕಳಕಳಿ ಇರುವವರಿಗೆ ಮುಖ್ಯವಾಗಬೇಕಾದ ಅಂಶವೆಂದರೆ ಸಮಸ್ಯೆಯ ಸ್ವರೂಪವನ್ನು ಗುರುತಿಸುವಲ್ಲಿ ಯಾವ ಮಾರ್ಗ ಹೆಚ್ಚು ವ್ಯೆಜ್ಞಾನಿಕವಾದುದು ಮತ್ತು ಅದು ಎಷ್ಟರಮಟ್ಟಿಗೆ ಸಮಾಜದಲ್ಲಿ ಕಂಡುಬರುತ್ತಿರುವ ಅಸಮಾನತೆ, ಅನ್ಯಾಯ ಶೋಷಣೆಗಳಂತಹ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಮರ್ಥವಾಗಿದೆ ಎನ್ನುವುದರತ್ತ ಗಮನ ಹರಿಸುವುದು. ಈ ನಿಟ್ಟಿನಲ್ಲಿ ಬಾಲುರವರದು ಒಂದು ಪ್ರಾಕ್ಕಲ್ಪನೆ (ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎನ್ನುವ) ಮಾತ್ರ. ಈ ಪ್ರಾಕ್ಕಲ್ಪನೆ ಮುಂದೆ ಈ ನಿಟ್ಟಿನಲ್ಲಿ ಯಾರಾದರೂ ಕ್ಯೆಗೊಳ್ಳಬಹುದಾದ ಸಂಶೋಧನೆಯ ಸಾಧ್ಯತೆಯನ್ನು ತೋರಿಸುತ್ತದೆ ಹಾಗೂ ಅಂತಹ ಒಂದು ಸಂಶೋಧನೆಯಲ್ಲಿ ಅವರ ಪ್ರಾಕ್ಕಲ್ಪನೆಯು ನಿರಾಕಾರಿಸಲ್ಪಡುವ ಸಾಧ್ಯತೆಯೂ ಇದೆ. ಅವರ ಪ್ರಾಕ್ಕಲ್ಪನೆಯು ಸಂಶೋಧನೆಯ ಮೂಲಕ ಸಾಬೀತಾಗಬೇಕಾದರೆ ಕೆಲವು ಕನಿಷ್ಟ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ. ಅವುಗಳೆಂದರೆ: 1) ಜಾತಿಶೋಷಣೆಯ ವಿದ್ಯಮಾನದ ಬಗ್ಗೆ ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ನಾವು ಕೊಡುತ್ತಿರುವ ವಿವರಣೆಗಳಿಗಿಂತ ಉತ್ತಮವಾದ, ಅಂದರೆ ಕಡಿಮೆ ಆಂತರಿಕ ವ್ಯೆರುಧ್ಯಗಳನ್ನೊಳಗೊಂಡ (ಸಂಶೋಧನೆಯಲ್ಲಿ ಯಾವುದೇ ವಿವರಣೆಯು ಸಂಪೂರ್ಣವಾದ ಅಥವಾ ಅಂತಿಮವಾದ ವಿವರಣೆಯಾಗಿರುವುದಿಲ್ಲ) ಹಾಗೂ, 2) ಆ ವಿದ್ಯಮಾನದಲ್ಲಿ ನಾವು ಗುರುತಿಸುವ ಸಮಸ್ಯೆಗಳಿಗೆ ಈಗಿರುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಪರಿಹಾರವನ್ನು ಸೂಚಿಸುವಂತಹ ವಿವರಣೆ ಅದಾಗಿರಬೇಕು. ಹಾಗಿದ್ದಾಗ ಮಾತ್ರ ಅದು ಜ್ಞಾನದ ಮುಂದುವರಿಕೆಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ. ಇಲ್ಲವಾದಲ್ಲಿ ಅವರ ಪ್ರಾಕ್ಕಲ್ಪನೆ ಬಿದ್ದುಹೋಗುತ್ತದೆ. ಮೇಲಿನ ಈ ಎರಡು ಅಂಶಗಳು ಅವರ ಪ್ರಾಕ್ಕಲ್ಪನೆಯನ್ನು ಪರೀಕ್ಷಿಸುವ ಮಾನದಂಡಗಳೂ ಕೂಡ ಆಗಿವೆ.

ಅದರೆ ಈಗ ಬಾಲುರವರ ಪ್ರಾಕ್ಕಲ್ಪನೆಗೆ ಬರುತ್ತಿರುವ ಟೀಕೆಗಳ ಮಾನದಂಡ ಯಾವುದಾಗಿದೆ ನೋಡಿ. ಮೊದಲನೆಯದಾಗಿ, ಈಗಿರುವ ವಿವರಣೆಗಳು (ಜಾತಿವ್ಯವಸ್ಥೆ, ಪುರೋಹಿತಶಾಹಿ, ಬ್ರಾಹ್ಮಿಣಿಸಂ ಇತ್ಯಾದಿ) ಪ್ರಶ್ನಾತೀತ ಎನ್ನುವ ಧೋರಣೆ. ಎರಡನೆಯದಾಗಿ, ಜಾತಿ ವ್ಯವಸ್ಥೆಯ ಸೈದ್ಧಾಂತಿಕ ಚೌಕಟ್ಟನ್ನು ಪ್ರಶ್ನಿಸುವುದೆಂದರೆ ಅದನ್ನು ಆದರಿಸಿ ಇದೂವರೆಗೂ ಕಟ್ಟಿಕೊಂಡು ಬಂದ ಚಳುವಳಿಗಳ, ಹೋರಾಟಗಳ, ಮತ್ತು ಅದಕ್ಕಾಗಿ ಲಕ್ಷಾಂತರ ಮಂದಿ (ಅಂಬೇಡ್ಕರ‍್ ರವರನ್ನೂ ಒಳಗೊಂಡಂತೆ) ಮಾಡಿದ ತ್ಯಾಗದ ಮೂಲ ಆಶಯವನ್ನೇ ಅಲ್ಲಗಳೆದಂತೆ ಎನ್ನುವ ಮನೋಭಾವ. ಮೂರನೆಯದಾಗಿ, ಈಗ ಅನುಸರಿಸುತ್ತಿರುವ ಮಾರ್ಗಕ್ಕೆ ಯಾವುದೇ ಪರ್ಯಾಯ ಇರುವುದು ಸಾಧ್ಯವೇ ಇಲ್ಲ ಎನ್ನುವ ಅಚಲ ನಂಬಿಕೆ. ಸಾಮಾಜಿಕ ಅಥವಾ ಯಾವುದೇ ಚಳುವಳಿಯಲ್ಲಿ ತೊಡಗಿರುವವರಿಗೆ ಇಂತಹ ಧೋರಣೇಗಳಿರುವುದು ಅಸಹಜವೇನಲ್ಲ. ಒಂದು ರೀತಿಯಲ್ಲಿ ಅನಿವಾರ್ಯ ಕೂಡ. ತಾನು ಸಾಗುತ್ತಿರುವ ಮಾರ್ಗದ ಬಗ್ಗೆ ನಂಬಿಕೆ ಹೊಂದಿರದ ವ್ಯಕ್ತಿ ಚಳುವಳಿಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಂಶೋಧನೆಯಲ್ಲಿ ಅಂತಹ ಧೋರಣೆ ಅತ್ಯಂತ ಅಪಾಯಕಾರಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೊಸ ಸಾಧ್ಯತೆಗಳನ್ನೇ ಶಾಶ್ವತವಾಗಿ ಅದು ಮುಚ್ಚಿಬಿಡುತ್ತದೆ. ದೇವನೂರರು ಕೇವಲ ಒಬ್ಬ ಚಳುವಳಿಯ ಕಾರ್ಯಕರ್ತ ಮಾತ್ರವಲ್ಲ ಅವರು ಒಬ್ಬ ಚಿಂತಕರೂ ಹೌದು. ಆದರೆ ಬಾಲುರವರ ಸಂಶೋಧನಾ ಪ್ರಾಕ್ಕಲ್ಪನೆಯನ್ನು ವಿಮರ್ಶೆಗೊಳಪಡಿಸುವಾಗ ಅವರು ಅನುಸರಿಸುತ್ತಿರುವ ಮಾನದಂಡ ಮಾತ್ರ ಚಳುವಳಿಯ ಕಾರ್ಯಕರ್ತನದು.

ಬಾಲು ಅವರ ವಾದದ ಬಗ್ಗೆ ಟೀಕೆಗಳು, ವಿಮರ್ಶೆಗಳು ಬಂದಷ್ಟೂ ಒಳ್ಳೆಯದೇ. ಹಾಗಿದ್ದಾಗ ಮಾತ್ರ ಜ್ಞಾನದ ಮುಂದುವರಿಕೆ ಸಾಧ್ಯ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮುಂದೊಂದು ದಿನ ಬಾಲು ಮಂಡಿಸಿದ ಪ್ರಾಕ್ಕಲ್ಪನೆಯನ್ನು ಅದಕ್ಕಿಂತಲೂ ಉತ್ತಮವಾದ ಮತ್ತೊಂದು ಪ್ರಾಕ್ಕಲ್ಪನೆಯು ಬದಲಿಸದಿದ್ದರೆ ಅವರು ಈಗ ಮಾಡುತ್ತಿರುವುದು ವ್ಯೆಜ್ಞಾನಿಕ ಸಂಶೋಧನೆಯೇ ಅಲ್ಲ ಎಂದಾಗುತ್ತದೆ. ಅವರು ಹೆಳುತ್ತಿರುವುದು ಸಾರ್ವಕಾಲಿಕ ಅಂತಿಮ ಸತ್ಯವೆಂದು ಯಾರಾದರೂ ಹೇಳಿದರೆ ಅವರಿಗೆ ಸಂಶೋಧನೆಯ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂದು ಹೇಳಬೇಕಾಗುತ್ತದೆ. ಜಾತಿ ವ್ಯವಸ್ಥೆಯನ್ನು ಕುರಿತ ಬಾಲು ಅವರ ಪ್ರಾಕ್ಕಲ್ಪನೆಯನ್ನು ನಿರಾಕರಿಸಲು ಜಾತಿ ವ್ಯವಸ್ಥೆಯ ಬಗ್ಗೆ ಈಗಾಗಲೇ ಕಟ್ಟಿಕೊಂಡಿರುವ ಬೌದ್ಧಿಕ ಚೌಕಟ್ಟಿನ ಬಗ್ಗೆ ಅವರು ಎತ್ತುವ ಸಮಸ್ಯೆಗಳಿಗೆ ಸಮರ್ಥ ಉತ್ತರ ನೀಡಬೇಕಾಗುತ್ತದೆ. ಅಂತಹ ಸಂಶೋಧನೆಯಲ್ಲಿ ತೊಡಗುವುದೇ ಹುನ್ನಾರ, ಕುಯುಕ್ತಿ ಎನ್ನುವುದು ಉತ್ತರವಾಗುವುದಿಲ್ಲ. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ನಾವು ಈಗಾಗಲೇ ಕಂಡುಕೊಂಡಿರುವ ಮಾರ್ಗಕ್ಕೆ ಪರ್ಯಾಯಗಳೇ ಇಲ್ಲ, ಅಂತಹ ಒಂದು ಪರ್ಯಾಯದ ಹುಡುಕಾಟ ನಿರರ್ಥಕ ಎನ್ನುವ ನಿಲುವು ಜ್ಞಾನದ ಬೆಳವಣಿಗೆಯನ್ನೇ ಸ್ಥಗಿತಗೊಳಿಸಿಬಿಡುತ್ತದೆ.

ಮೀಸಲಾತಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ತನ್ನೆಲ್ಲಾ ಮಿತಿಗಳ ನಡುವೆ ಮೀಸಲಾತಿಯು ಅದರ ಫಲಾನುಭವಿ ಜಾತಿಗಳ ಅಭ್ಯುದಯದಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಿದೆ ಎನ್ನುವುದು ನನ್ನ ನಿಲುವು. ಎರಡು ದಶಕಗಳ ಹಿಂದೆ ನಾನು ಮಂಡಿಸಿದ ಪಿ.ಹೆಚ್.ಡಿ ಪ್ರಬಂಧದ ಕೊನೆಯಲ್ಲಿ ‘ಯಾವ ವ್ಯವಸ್ಥೆಯೊಳಗೆ ಹಾಗೂ ಯಾವ ವ್ಯವಸ್ಥೆಯ ಕಾರಣದಿಂದಾಗಿ ಮೀಸಲಾತಿಯ ಬೇಡಿಕೆ ಹುಟ್ಟಿಕೊಂಡಿದೆಯೋ ಅಂತಹ ವ್ಯವಸ್ಥೆಯಲ್ಲಿರುವ ಅನ್ಯಾಯಕ್ಕಿಂತ ಮಿಗಿಲಾದ ಅನ್ಯಾಯ ಮೀಸಲಾತಿಯಿಂದಾಗುವುದು ಸಾಧ್ಯವಿಲ್ಲ’, ಹೇಳಿರುವ ನನ್ನ ನಿಲುವು ಸರಿ ಎಂದು ಇಂದಿಗೂ ನನಗನಿಸುತ್ತದೆ. ಆದರೆ ಯಾವ ಗುರಿಯನ್ನು ಮುಟ್ಟುವ ಉದ್ದೇಶದಿಂದ ಮೀಸಲಾತಿಯನ್ನು ಸಾಧನವನ್ನಾಗಿ ನಾವು ಬಳಸುತ್ತಿದ್ದೇವೆಯೋ ಅಂತಹ ಗುರಿಯನ್ನು ನಾವು ಅದರ ಮೂಲಕ ಮುಟ್ಟಲು ಸಾಧ್ಯವಾಗುವುದಿಲ್ಲ, ಬದಲಿಗೆ ದೀರ್ಘಕಾಲದಲ್ಲಿ ಮೀಸಲಾತಿಯ ಫಲಾನುಭವಿ ಜಾತಿಗಳಿಗೆ ಅದರಿಂದ ಅನ್ಯಾಯವೇ ಆಗುತ್ತದೆ ಎಂದು ಯಾರಾದರೂ ವಾದಿಸಿದರೆ ಅಂತಹ ವಾದವನ್ನು ಮುಕ್ತಮನಸ್ಸಿನಿಂದ ಕೇಳಿಸಿಕೊಳ್ಳುತ್ತೇನೆ. ಹಾಗೆ ವಾದಿಸುವುದೇ ಒಂದು ಅಪರಾಧ ಎಂದು ನನಗನಿಸುವುದಿಲ್ಲ. ಏಕೆಂದರೆ ಅನ್ಯಾಯವನ್ನು ಸರಿಪಡಿಸುವುದು ನನಗೆ ಮುಖ್ಯವೇ ಹೊರತು ಮೀಸಲಾತಿಯನ್ನಾಗಲೀ ಅಥವಾ ಜಾತಿ ವ್ಯವಸ್ಥೆಯ ಕುರಿತು ಈಗಿರುವ ಬೌದ್ಧಿಕ ಚೌಕಟ್ಟನ್ನಾಗಲೀ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆನ್ನುವ ಹಠ ಸರಿ ಎಂದು ನನಗನಿಸುವುದಿಲ್ಲ. ಅಂತಹ ಹಠಮಾರಿತನದ ನಿಲುವಿನಿಂದ ಹುಟ್ಟಬಹುದಾದ ಪಟ್ಟಭದ್ರ ಶಕ್ತಿಗಳು ಸೃಷ್ಟಿಸಬಹುದಾದ ಅಪಾಯದ ಲಕ್ಷಣಗಳು ಈಗಾಗಲೇ ಗೋಚರಿಸತೊಡಗಿವೆ.

Advertisements
Categories: Uncategorized
 1. ಮೇ 16, 2013 ರಲ್ಲಿ 2:16 ಅಪರಾಹ್ನ

  ಈ ಬರಹದಲ್ಲಿ ’ಬಾರತದಲ್ಲಿ ಜಾತಿವ್ಯವಸ್ತೆ ಇಲ್ಲ’ ಎಂಬ ಮುನ್ನೆಣಿಕೆಯನ್ನು ನಾನು ಓದಿಕೊಂಡಿದ್ದು ’ಬಾರತದಲ್ಲಿ ಜಾತಿಯೇ ಇಲ್ಲ’ ಎಂದಾಗಿ. ಹೀಗೆ ಮಾಡಿದ್ದು ತಪ್ಪು ಎಂದು ಸಂತೋಶ್ ಶೆಟ್ಟಿ ಅವರು fb ನಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಒಳ್ಳೆಯದಾಯಿತು. ಆದರೆ ಬಾಲು ಅವರು ಇಲ್ಲಿ ಇಲ್ಲ ಎನ್ನುತ್ತಿರುವುದನ್ನು ಯಾವುದನ್ನು? ಪ್ರಪಂಚದಲ್ಲಿ ಎಲ್ಲರೂ ’ವ್ಯವಸ್ತೆ’ ಎಂಬ ಪದವನ್ನು ಹುರುಳಿಸಿಕೊಳ್ಳುವುದು ’ಒಂದಲ್ಲ ಒಂದು ರೀತಿಯ ನಂಟುಳ್ಳ ಬಿಡಿಬಾಗಗಳ ಸಮೂಹ’ ಎಂದು. ಜಾತಿಗಳೆಂಬ ಬಿಡಿಬಾಗಗಳಿವೆ ಎನ್ನುವುದಾದರೆ ಜಾತಿವ್ಯವಸ್ತೆಯೂ ಇದೆ ಎಂದೇ ಆಯಿತಲ್ಲ?

  ವ್ಯವಸ್ತೆ ಇದೆ, ಆದರೆ ಅದರ ಸ್ವರೂಪ ಇಲ್ಲಿಯವರೆಗೆ ಜನರು ಊಹಿಸಿಕೊಂಡಿರುವುದಲ್ಲ ಎನ್ನುವುದು ಬಾಲು ಅವರ ಇಂಗಿತವಾಗಿದ್ದರೆ ಅದನ್ನು ಹಾಗೆಯೇ ಬರೆದರೆ ಒಳಿತು. ಇಲ್ಲದಿದ್ದರೆ ಬಹಳ ಗೊಂದಲ.

  (ನಾನು ಬರೆಯುವುದು ’ಎಲ್ಲರಕನ್ನಡದಲ್ಲಿ’ – ಅದರ ಬಗ್ಗೆ ಇಲ್ಲಿ ಓದಿ:- http://honalu.net – ಮಹಾಪ್ರಾಣ ಎಲ್ಲಿಗೆ ಹೋಯಿತು ಎನ್ನಬೇಡಿ:-)

  Like

 2. ಮೇ 16, 2013 ರಲ್ಲಿ 6:04 ಅಪರಾಹ್ನ

  ಕಿರಣ್

  ಜಾತಿಗಳು ಆಯಾ ಸಮುದಾಯಗಳಾಗಿ ಯಾವುದ್ಯಾವುದೋ ಪದ್ದತಿಗಳನ್ನು ರೂಢಿಸಿಕೊಂಡು ಬಂದಿರುತ್ತವೆ ಅದು ನಿಜ, ಒಂದರ್ಥದಲ್ಲಿ ಸಾಮಾನ್ಯವಾಗಿ ಅಂತ ಪದ್ದತಿಯನ್ನು, ಅಥವಾ ಅರೇಂಜ್ ಮೆಂಟ್ ಗಳನ್ನು ವ್ಯವಸ್ಥೆ ಎಂದು ಭಾವಿಸುತ್ತೇವೆ. ಆದರೆ ಬಾಲು ಕಾಸ್ಟ್ ಸಿಸ್ಟಂ ಇಲ್ಲ ಎನ್ನುವುದು ಆ ಅರ್ಥದಲ್ಲಿ ಅಲ್ಲ. ಜಾತಿಗಳೆಲ್ಲವೂ ಒಗ್ಗೂಡಿಕೊಂಡು ಒಂದು ಸಿಸ್ಟಂ ಅಧಿನದಲ್ಲಿ ಕಾರ್ಯನಿರ್ವಹಿಸುತ್ತವೆ ಹಾಗೂ ಆ ಸಿಸ್ಟಂ ಗೆಕೆಲವಾರು ಲಕ್ಷಣಗಳಿವೆ ಎಂದು ಜಾತಿಸಿದ್ಧಾಂತಗಳು ಪ್ರತಿಪಾದಿಸುತ್ತವೆ. ಆದರೆ ಜಾತಿವ್ಯವಸ್ಥೆಯ ಗುಣಲಕ್ಷಣಗಳೆಂದು ಗುರುತಿಸಿರುವ ಸಂಗತಿಗಳನ್ನು ನೋಡುತ್ತಾ ಹೋದರೆ ಅವೆಲ್ಲವೂ ಹೇಗೆ ಜಾತಿಗಳನ್ನು ಸಿಸ್ಟಂ ರೂಪದಲ್ಲಿ ಪ್ರತಿನಿಧಿಸುತ್ತವೆ ಹಾಗೂ ಪುನರುತ್ಪಾದಿಸುತ್ತವೆ ಎಂಬುದು ಸ್ಪಷ್ಟವಾಗುವುದಿಲ್ಲ. ಹಾಗೆ ಜಾತಿಗಳ ಕುರಿತು ಇದುವರೆಗು ಬರೆದಿರುವ ಸಿದ್ಧಾಂತಗಳೂ ಸಹ ಸಿಸ್ಟಂನ ಮೆಕಾನಿಸಂ ಯಾವುದೆಂದು ತೋರಿಸಲು ಸೋಲುತ್ತವೆ. ಒಂದೊಮ್ಮೆ ಅಂತಹ ಮೆಕಾನಿಸಂನ್ನು ಗುರುತಿಸಲು ಸಾಧ್ಯವಾದರೆ ಜಾತಿಗಳೆಲ್ಲಾ ಹೇಗೆ ಒಂದು ಸಿಸ್ಟಂ ಒಳಗೆ ಇವೆ ಎಂದು ಹೇಳಲು ಸಾಧ್ಯ.

  ಆದ್ದರಿಂದ ಅಂತಹ ಕೆಲಸವನ್ನು ಸ್ವತಃ ಜಾತಿವ್ಯವಸ್ಥೆಯ ಸಿದ್ಧಾಂತಗಳು ಮಾಡಿಲ್ಲವಾದ್ದರಿಂದ ಮತ್ತು ಕೇವಲ ಸಿಸ್ಟಂ ಸಿಸ್ಟಂ ಎಂದು ಹೇಳುವ ಮೂಲಕ ಅದನ್ನು ಸ್ಪಷ್ಟವಾಗಿ ಅರ್ಥೈಸುವ ಮಾರ್ಗನವನ್ನೂ ತೋರಿಸದ ಕಾರಣ ಜಾತಿಗಳು ಒಂದು ಸಿಸ್ಟಂ ಆಗಿ ಇವೆ ಎಂಬುದೇ ಅನುಮಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾಲು ರವರು ಹಾಗಾದರೆ ಜಾತಿ ಸಿಸ್ಟಂ ಇಲ್ಲದಿರಬಹುದು, ಜಾತಿಗಳ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳಲು ಪರ್ಯಾಯವಾದ ಮಾರ್ಗವನ್ನು ಹುಡುಕಬೇಕಾಗುತ್ತದೆ ಎಂದು ಹೇಳುತ್ತಾರೆ..

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: