ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

prof-balu

ಕಂತು ೧೨: ಜಾತಿ ವ್ಯವಸ್ಥೆಯ ಕಥೆಯನ್ನು ಸಾಮಾಜಿಕ ಸಿದ್ಧಾಂತವೆನ್ನಬಹುದೆ?

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ಕೆಲವು ವರ್ಷಗಳ ಹಿಂದಿನ ಮಾತು. ಆಗಿನ್ನೂ ಕರ್ನಾಟಕದಲ್ಲಿ ಒಂದು ಸಂಶೋಧನಾ ತಂಡವನ್ನು ಕಟ್ಟಲು ಪ್ರಾರಂಭಿಸಿದ್ದೆ. ಕನ್ನಡದ ಒಬ್ಬ ಸುಪ್ರಸಿದ್ಧ ಪ್ರಗತಿಪರ ಸಾಹಿತಿಗಳು ನನ್ನ ಸಂಶೋಧನೆಯನ್ನು ಈ ಶತಮಾನದ ನಿರ್ಲಜ್ಜ ಸಂಗತಿಗಳಲ್ಲಿ ಒಂದು ಎಂಬುದಾಗಿ ಘೋಷಿಸಿದರಂತೆ. ಈ ಸಂಶೋಧನೆಯನ್ನು ಹೇಗಾದರೂ ತಡೆಯಬೇಕು ಎಂಬುದಾಗಿ ಬಹಿರಂಗವಾಗಿ ಕರೆಯನ್ನು ಕೂಡ ಕೊಟ್ಟರಂತೆ. ಇದನ್ನು ಮಿತ್ರರೊಬ್ಬರು ನನಗೆ ತಿಳಿಸಿದರು. ನನಗೆ ಗಾಭರಿಯಾಯಿತು. ನನ್ನ ವಿದ್ಯಾರ್ಥಿಗಳೇನಾದರೂ ನನ್ನ ಗಮನಕ್ಕೆ ಬರದಂತೆ ನಿರ್ಲಜ್ಜ ವ್ಯವಹಾರಗಳನ್ನು ನಡೆಸಿದ್ದಾರೆಯೆ? ವಿಚಾರಿಸಿದಾಗ ನಾನು ಜಾತಿ ವ್ಯವಸ್ಥೆ ಇಲ್ಲವೆಂದು ಹೇಳಿದ್ದೇ ಆ ನಿರ್ಲಜ್ಜ ಸಂಗತಿ ಎಂಬುದಾಗಿ ತಿಳಿಯಿತು. ಇದುವರೆಗೆ ಒಪ್ಪಿತವಾದ ಸಿದ್ಧಾಂತವನ್ನು ಸುಳ್ಳು ಎಂಬುದಾಗಿ ತೋರಿಸುವುದು ಸಂಶೋಧನೆಯ ಜೀವಂತಿಕೆಯ ಲಕ್ಷಣ. ಇದರಲ್ಲಿ ನಿರ್ಲಜ್ಜತೆ ಏನು ಬಂತು ಎಂಬ ಒಗಟು ನನಗಿನ್ನೂ ಬಗೆಹರಿದಿಲ್ಲ.

ಈ ಜಾತಿ ವ್ಯವಸ್ಥೆ ಎಂಬ ಸಿದ್ಧಾಂತವು ಏನು ಹೇಳುತ್ತದೆ? ವೇದಕಾಲದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನು ತನ್ನ ಶುದ್ಧ ರೂಪದಲ್ಲಿ ಇತ್ತು, ನಂತರ ಬ್ರಾಹ್ಮಣ ಪುರೋಹಿತಶಾಹಿಯು ತನ್ನ ಲಾಭಕ್ಕಾಗಿ ತರತಮಗಳನ್ನು ಸೃಷ್ಟಿಸಿ ವರ್ಣ ವಿಭಜನೆಯನ್ನು ಹುಟ್ಟುಹಾಕಿತು, ಆದು ಮೇಲು ಕೀಳೆಂಬ ಜಾತಿ ವ್ಯವಸ್ಥೆಯ ಮೂಲತತ್ವವಾಗಿ ಹಿಂದೂಯಿಸಂನಲ್ಲಿ ಸೇರಿಕೊಂಡಿತು. ಮನುಧರ್ಮಶಾಸ್ತ್ರದಲ್ಲಿ ಜಾತಿ ವ್ಯವಸ್ಥೆಯ ಕ್ರೂರ ಕಾನೂನುಗಳನ್ನು ಸೃಷ್ಟಿಸಿ ಎಲ್ಲರ ಮೇಲೆ ಹೇರಲಾಯಿತು. ತದನಂತರ ಈ ವ್ಯವಸ್ಥೆಯು ಗಟ್ಟಿಯಾಗಿ ಸಾವಿರಾರು ವರ್ಷಗಳವರೆಗೆ ಹಾಗೇ ಉಳಿದುಕೊಂಡು ಬಂದಿದೆ. ಅಂದರೆ ಜಾತಿ ವ್ಯವಸ್ಥೆ ಎಂಬ ಸಿದ್ಧಾಂತವು ತಿಳಿಸುವುದೇನೆಂದರೆ ಭಾರತದಲ್ಲಿ ಈಗ ಇರುವ ಜಾತಿ, ಮತ, ಕುಲ, ಪಂಗಡ ಇತ್ಯಾದಿ ವೈವಿಧ್ಯಪೂರ್ಣವಾದ ಸಾಮಾಜಿಕ ಗುಂಪುಗಳು ಯಾರದೋ ಲಾಭಕ್ಕಾಗಿ ಮಾಡಿಕೊಂಡ ಒಂದು ವ್ಯವಸ್ಥೆ. ಹಾಗೂ ಉಳಿದವರ ಮೇಲೆ ಒತ್ತಾಯದಿಂದ ಹೇರಿದ ಒಂದು ವ್ಯವಸ್ಥೆ. ಈ ವ್ಯವಸ್ಥೆಯಿಂದ ಮೇಲಿನ ಜಾತಿಗಳಿಗೆಲ್ಲ ಲಾಭವಾಗುತ್ತದೆ, ಕೆಳಗಿನ ಜಾತಿಗಳಿಗೆಲ್ಲ ಇದು ಶೋಷಣೆ.

ಈ ಕಥೆಯನ್ನು ಜಾತಿ ವ್ಯವಸ್ಥೆಯ ಸಿದ್ಧಾಂತ ಎಂದು ಸೂಚಿಸುತ್ತಿದ್ದೇನೆ. ನಿಮಗೆ ಈ ಕಥೆ ಗೊತ್ತಿದೆಯೊ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹೌದು ಅಂತಾದರೆ ನಿಮಗೂ ಆ ಸಿದ್ಧಾಂತವು ಗೊತ್ತಿದೆ ಎಂದರ್ಥ. ಏಕೆ ಈ ವಿಷಯವನ್ನು ಹೀಗೆ ಪರಿಚಯಿಸುವ ಪ್ರಸಂಗ ಬಂದಿದೆಯೆಂದರೆ ಕನ್ನಡದ ಬುದ್ಧಿಜೀವಿಗಳಲ್ಲಿ ಅನೇಕರು ಇಂದಿಗೂ ಕೂಡ ನಾನು ಏನು ಹೇಳುತ್ತಿದ್ದೇನೆಂಬುದನ್ನು ಗ್ರಹಿಸಿದಂತಿಲ್ಲ. ನಾನು ಭಾರತದಲ್ಲಿ ಜಾತಿಗಳೇ ಇಲ್ಲವೆಂದು ಹೇಳುತ್ತಿದ್ದೇನೆ ಎಂಬುದಾಗಿ ಪ್ರಚಾರ ನಡೆಸಿ ನನ್ನ ಬುದ್ಧಿಮತ್ತೆಯನ್ನೇ ಲೇವಡಿ ಮಾಡಲು ಪ್ರಯತ್ನಿಸಿದರು. ನಾನು ನಮ್ಮ ಸಮಾಜದಲ್ಲಿರುವ ದೌರ್ಜನ್ಯವನ್ನು ಸಮರ್ಥಿಸುತ್ತಿದ್ದೇನೆ ಎಂದು ಖಳನಾಯಕ ಪಟ್ಟವನ್ನು ನೀಡಲು ಪ್ರಯತ್ನಿಸಿದರು. ನಾನು ವಸಾಹತೋತ್ತರ ಚಿಂತಕರ ಹೇಳಿಕೆಗಳನ್ನು ಪಠಿಸುತ್ತಿದ್ದೇನೆ ಎಂಬುದಾಗಿ ನನ್ನ ಹೇಳಿಕೆಯನ್ನು ಗೌಣಮಾಡಲು ಪ್ರಯತ್ನಿಸಿದರು. ಇದೆಲ್ಲ ಪ್ರಗತಿಪರರ ಕಥೆಯಾಯಿತು. ಹಾಗಾದರೆ ನಮ್ಮ ಭಾರತೀಯ ಸಮಾಜವು ಅವ್ಯವಸ್ಥಿತವಾಗಿದೆಯೆ? ನಮ್ಮ ಸಮಾಜದಲ್ಲಿ ನಾಲ್ಕು ವರ್ಣಗಳಿವೆ ಎಂಬುದಾಗಿ ನಮ್ಮ ಪ್ರಾಚೀನ ಗ್ರಂಥಗಳು ಹೇಳುವುದು ಸುಳ್ಳೆ? ಎಂದು ಕೇಳಿದ ಸಂಪ್ರದಾಯಸ್ಥರೂ ಇದ್ದಾರೆ. ಯಾರಿಗೇ ಇರಬಹುದು ನನ್ನ ಉತ್ತರ ಒಂದೇ: ಈ ಮೇಲಿನ ಕಥೆ ನಿಜವಾಗಲಿಕ್ಕೆ ಸಾಧ್ಯವಿಲ್ಲ.

ನಿಮ್ಮ ಸುತ್ತುಮುತ್ತಲೇ ಇರುವ ಅಸಂಖ್ಯಾತ ಜಾತಿ, ಮತ ಇತ್ಯಾದಿ ಗುಂಪುಗಳನ್ನು ನಾಲ್ಕು ವರ್ಣಗಳಲ್ಲಿ ಗುರುತಿಸುತ್ತಾ ಹೋಗಿ. ಕೊನೆಗೆ ಅವುಗಳಲ್ಲಿ ಬಹುಪಾಲು ಜಾತಿಗಳು ಈ ನಾಲ್ಕು ವರ್ಣಗಳಲ್ಲಿ ಯಾವುದಕ್ಕೂ ಸೇರುವುದಿಲ್ಲ ಎಂಬುದನ್ನು ಕಂಡುಕೊಳ್ಳುತ್ತೀರಿ. ಹಾಗಾಗಿ ಈಗ ನಾವು ನೋಡುತ್ತಿರುವುದು ವರ್ಣ ವ್ಯವಸ್ಥೆಯಂತೂ ಅಲ್ಲ. ಇದಕ್ಕೆ ಉತ್ತರವಾಗಿ ಒಮ್ಮೆ ಇದ್ದ ವರ್ಣ ವ್ಯವಸ್ಥೆಯು ಕಾಲಾಂತರದಲ್ಲಿ ಬದಲಾಗಿ ಇಂದಿನ ಜಾತಿ ವ್ಯವಸ್ಥೆಯಾಗಿದೆ ಎಂದು ಸಮಜಾಯಿಷಿ ನೀಡಲಾಗುತ್ತದೆ. ಈ ಹೇಳಿಕೆಗೆ ಕೆಲವು ಉಪಕಥೆಗಳನ್ನು ಬಿಟ್ಟರೆ ಇನ್ನೂ ಯಾವುದೇ ಖಚಿತವಾದ ಆಧಾರವನ್ನು ಯಾರೂ ತೋರಿಸಿಲ್ಲ. ಆದರೆ ಎಲ್ಲರದೂ ಒಂದೇ ಕಥೆ: ಯಾರೋ ಈ ಸಮಾಜವನ್ನು ಹೀಗೆ ವ್ಯವಸ್ಥಿತಗೊಳಿಸಿ ನಿಯಮಗಳನ್ನು ವಿಧಿಸಿದ್ದಾರೆ, ಆ ನಿಯಮಗಳ ಪ್ರಕಾರವೇ ಎಲ್ಲರೂ ಜಾತಿಭೇದವನ್ನು, ದೌರ್ಜನ್ಯವನ್ನು ಒಪ್ಪಿಕೊಂಡಿದ್ದಾರೆ.

ಈ ಕಥೆಯನ್ನು ಪ್ರಶ್ನಿಸಿದರೆ ಏಕೆ ಇಷ್ಟು ಪ್ರತಿರೋಧ ಹುಟ್ಟುತ್ತಿದೆ? ಇದು ನಿರ್ಲಜ್ಜ ಸಂಗತಿ ಏಕಾಗುತ್ತದೆ? ಅನೀತಿ ಹಾಗೂ ಅನ್ಯಾಯದ ಪರ ವಹಿಸಿ ಮಾತನಾಡಿದಂತೆ ಹೇಗಾಗುತ್ತದೆ? ಅಂದರೆ ಇಲ್ಲಿ ಎರಡು ಬೇರೆ ಬೇರೆ ಸಂಗತಿಗಳನ್ನು ಪರಸ್ಪರ ಕಾರ್ಯ-ಕಾರಣಗಳಂತೆ ಜೋಡಿಸುತ್ತಿದ್ದಾರೆ. ಅವೆಂದರೆ ಜಾತಿ ವ್ಯವಸ್ಥೆಯ ಕುರಿತ ಕಥೆ ಹಾಗೂ ಭಾರತೀಯ ಸಮಾಜದಲ್ಲಿ ಇದೆ ಎನ್ನಲಾಗುವ ಅನ್ಯಾಯ ಹಾಗೂ ದೌರ್ಜನ್ಯಗಳು. ಜಾತಿವ್ಯವಸ್ಥೆಯೇ ಈ ದೌರ್ಜನ್ಯಗಳಿಗೆ ಕಾರಣ ಎಂಬುದಾಗಿ ಕಳೆದ ನೂರಾರು ವರ್ಷಗಳಿಂದ ನಂಬಿಕೊಂಡು ಬರಲಾಗಿದೆ. ಹಾಗಾಗಿ ಜಾತಿ ವ್ಯವಸ್ಥೆ ಇಲ್ಲವೆಂದಾಕ್ಷಣ ಈ ದೌರ್ಜನ್ಯವನ್ನು ಸಮರ್ಥಿಸಲಿಕ್ಕಾಗಿ ಅದರ ಕಾರಣವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಗುಮಾನಿ ಹುಟ್ಟುತ್ತದೆ. ಏಕೆ ಮರೆಮಾಚುತ್ತಿದ್ದಾರೆಂದರೆ ಇವರಿಗೇನೋ ಹಿತಾಸಕ್ತಿ ಇದೆ ಎಂಬುದಾಗಿ ಭಾವಿಸಿಕೊಳ್ಳುತ್ತಾರೆ. ಈ ಕಥೆಯನ್ನು ತಿರಸ್ಕರಿಸುವವರು ಬ್ರಾಹ್ಮಣರೇ ಆಗಿದ್ದರಂತೂ ಈ ಕಥೆಗೆ ಅದು ಸರಿಯಾಗಿಯೇ ಹೊಂದುತ್ತದೆ.

ಜಾತಿ ವ್ಯವಸ್ಥೆ ಭಾರತಕ್ಕೇ ವಿಶಿಷ್ಟವಾದುದು. ಹಾಗೂ ಅದು ಹುಟ್ಟುಹಾಕುತ್ತಿರುವ ದೌರ್ಜನ್ಯ ಕೂಡ ಭಾರತಕ್ಕೇ ವಿಶಿಷ್ಟವಾದುದು ಎನ್ನಲಾಗುತ್ತದೆ. ಪ್ರಪಂಚದ ಬೇರೆ ಯಾವ ದೇಶದಲ್ಲೂ ಇಂಥ ಕ್ರೂರ ವ್ಯವಸ್ಥೆ ಇಲ್ಲ ಎನ್ನಲಾಗುತ್ತದೆ. ಭಾರತೀಯ ಮುಸ್ಲಿಂ, ಕ್ರೈಸ್ತರನ್ನೂ ಈ ಅನಿಷ್ಟ ಬಿಟ್ಟಿಲ್ಲ ಎನ್ನಲಾಗುತ್ತದೆ. ಈ ಹೇಳಿಕೆ ಎಷ್ಟು ಹಾಸ್ಯಾಸ್ಪದವಾಗಿದೆ ಎಂಬುದಕ್ಕೆ ಈ ಮುಂದಿನ ಸಂಗತಿಯನ್ನು ಗಮನಿಸಿ: 1947ರ ವರೆಗೆ ಬ್ರಿಟಿಷರು ಆಳುತ್ತಿದ್ದ ಭಾರತದಲ್ಲಿ ಇಂದಿನ ಬಾಂಗ್ಲಾದೇಶ, ಪಾಕಿಸ್ತಾನಗಳೂ ಸೇರಿಕೊಂಡಿದ್ದವು. ಆಗಲೂ ಜಾತಿ ವ್ಯವಸ್ಥೆ ಭಾರತದ ವೈಶಿಷ್ಟ್ಯ ಎಂಬುದಾಗಿ ಎಲ್ಲ ವಿದ್ವಾಂಸರೂ ಹೇಳಿದ್ದಾರೆ. ಆ ದೇಶಗಳು ಈಗ ಭಾರತದಿಂದ ಬೇರ್ಪಟ್ಟಿವೆ. ಆದರೆ ಇಂದು ಜಾತಿ ವ್ಯವಸ್ಥೆ ಈ ಎಲ್ಲಾ ದೇಶಗಳ ವೈಶಿಷ್ಟ್ಯ ಎಂಬುದಾಗಿ ಯಾರೂ ಹೇಳುತ್ತಿಲ್ಲ. ಕೇವಲ ಇಂದಿನ ಭಾರತದಲ್ಲಿ ಮಾತ್ರವೇ ಈ ಅನಿಷ್ಟ ಪದ್ಧತಿ ಇದೆ ಎನ್ನಲಾಗುತ್ತದೆ. ಅದು ಹೇಗೆ ಭಾರತದ ನಕಾಶೆ ಬದಲಾದ ತಕ್ಷಣ ಈ ಜಾತಿವ್ಯವಸ್ಥೆ ಈಗಿನ ಭಾರತಕ್ಕೆ ಮಾತ್ರ ತನ್ನನ್ನು ಹೊಂದಿಸಿಕೊಂಡು ಬಿಡುತ್ತದೆ? ಉಳಿದ ಭಾಗಗಳಲ್ಲಿ ಮಾಯವಾಗಿಹೋಗುತ್ತದೆ? ವಿದ್ವಾಂಸರು ಈ ಕಥೆಯನ್ನು ಎಷ್ಟು ಹಗುರಾಗಿ ಪರಿಗಣಿಸಿದ್ದಾರೆ ಎಂಬುದಕ್ಕೆ ಇದೊಂದು ದೃಷ್ಟಾಂತ.

ಇದು ಒಂದು ವಿಚಾರವಾದರೆ ಇನ್ನೊಂದು ಮುಖ್ಯ ಪ್ರಶ್ನೆ ಇದೆ. ಜಾತಿ ವ್ಯವಸ್ಥೆಗೇ ವಿಶಿಷ್ಟವಾದ ಅನಿಷ್ಟ ಪದ್ಧತಿಗಳು ಯಾವವು ಎನ್ನುತ್ತಾರೆ? ಮೇಲು-ಕೀಳು ಭಾವನೆ, ಹೊರಗಿಡುವುದು, ಸಾಮಾಜಿಕ ಸಂಘರ್ಷ, ಕ್ರೌರ್ಯ, ಹಿಂಸೆ, ಶೋಷಣೆ ಇತ್ಯಾದಿ. ಇವೆಲ್ಲ ಜಾತಿ ವ್ಯವಸ್ಥೆಗೆ ನಿದರ್ಶನಗಳಾಗುವುದಾದರೆ ಇವು ಪ್ರಪಂಚದ ಎಲ್ಲಾ ಸಮಾಜಗಳಲ್ಲೂ ಇರುವಂಥವೇ. ಹಾಗಾಗಿ ಜಾತಿ ವ್ಯವಸ್ಥೆ ಎಲ್ಲ ದೇಶಗಳಲ್ಲೂ ಇಲ್ಲವೆಂದು ಹೇಗೆ ಹೇಳುತ್ತೀರಿ? ಅಂದರೆ ಈ ಮೇಲಿನ ಕಟ್ಟು ಕಥೆಯನ್ನು ಬಿಟ್ಟರೆ ಭಾರತಕ್ಕೇ ವಿಶಿಷ್ಟವಾದ ವ್ಯವಸ್ಥೆ ಏನಿದೆ ಎಂಬುದು ಸ್ಪಷ್ಟವಿಲ್ಲ. ಭಾರತದಲ್ಲೂ ಕೂಡ ಈ ಮೇಲಿನ ದುರ್ಗುಣಗಳು ಯಾವುದೇ ಜಾತಿಯ ಸೊತ್ತು ಎನ್ನಲು ಆಧಾರಗಳಿವೆಯೆ? ಜಾತಿ ವ್ಯವಸ್ಥೆಯ ಕಥೆಯನ್ನು ನಿಜ ಎಂದುಕೊಂಡರೆ ಕೇವಲ ಮೇಲ್ಜಾತಿಯವರು ಮಾತ್ರವೇ ಕೆಳಜಾತಿಯವರ ಮೇಲೆ ದೌರ್ಜನ್ಯಗಳನ್ನು ನಡೆಸಬೇಕು. ಈ ಮುಂದಿನ ದೌರ್ಜನ್ಯಗಳು ಇರಬಾರದು: 1. ಕೆಳಜಾತಿಯವರು ಕೆಳಜಾತಿಯವರ ಮೇಲೆ ನಡೆಸುವ ದೌರ್ಜನ್ಯ. 2. ಕೆಳಜಾತಿಯವರು ಮೇಲ್ಜಾತಿಯವರ ಮೇಲೆ ನಡೆಸುವ ದೌರ್ಜನ್ಯ. ಏಕೆಂದರೆ ಈ ಎರಡೂ ಪ್ರಕಾರದ ದೌರ್ಜನ್ಯಗಳನ್ನು ಜಾತಿ ವ್ಯವಸ್ಥೆಯ ಕುರಿತ ಕಥೆಯಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಷ್ಟೇ ಅಲ್ಲ, ಅವು ಈ ಕಥೆಯನ್ನು ಅಲ್ಲಗಳೆಯುತ್ತವೆ. ಆದರೆ ಇಂಥ ದೃಷ್ಟಾಂತಗಳು ಕೂಡ ನಮ್ಮ ಸಮಾಜದಲ್ಲಿ ಕಣ್ಣಿಗೆ ರಾಚುವಂತೆ ಇವೆ.

ಈ ಕಥೆಯ ಪ್ರಕಾರ ಅವಮಾನಕರವಾದ, ಅನಾರೋಗ್ಯಕರವಾದ ಹಾಗೂ ಹಿಂಸಾತ್ಮಕವಾದ ಸಾಮಾಜಿಕ ಕಟ್ಟುಪಾಡುಗಳನ್ನು ಬ್ರಾಹ್ಮಣರು ಕೆಳಜಾತಿಯವರಿಗೆ ಮಾತ್ರವೇ ವಿಧಿಸಿ ತಾವು ಹಾಯಾಗಿ ಇರಬೇಕು. ಆದರೆ ಬ್ರಾಹ್ಮಣರು ಉಳಿದವರಿಗಿಂತ ಹೆಚ್ಚು ಕಟ್ಟುಪಾಡುಗಳನ್ನೇ ಇಟ್ಟುಕೊಂಡಿದ್ದಾರೆ. ಇಂದು ಬ್ರಾಹ್ಮಣ ಸಮಾಜವನ್ನು ಇಂಥ ಕೆಲವು ಆಚರಣೆಗಳಿಂದ ಬಿಡಿಸಲು ನಡೆದಷ್ಟು ಚಳುವಳಿಗಳು ಬೇರೆ ಸಮಾಜಗಳ ಸಂದರ್ಭದಲ್ಲ್ಲಿ ನಡೆದಿಲ್ಲ. ಅದಕ್ಕಿಂತ ಮುಖ್ಯವೆಂದರೆ ಆಯಾ ಜಾತಿಯ ಕಟ್ಟುಪಾಡುಗಳನ್ನು ಅವರವರೇ ರೂಢಿಸಿಕೊಂಡು ತಲೆ ತಲಾಂತರದಿಂದ ಪಾಲಿಸಿಕೊಂಡು ಬಂದಿದ್ದಾರೆ ಎಂಬುದು ಭಾರತೀಯ ಸಮಾಜದಲ್ಲಿ ಹುಟ್ಟಿ ಬೆಳೆದ ಯಾರಿಗಾದರೂ ಇರತಕ್ಕ ಅನುಭವ. ಹೀಗಿರುವಾಗ ತಮಗೆ ತಾವೇ ಕಟ್ಟುಪಾಡುಗಳನ್ನು ಹಾಕಿಕೊಳ್ಳುವ ವ್ಯವಸ್ಥೆಯಿಂದ ಬ್ರಾಹ್ಮಣರಿಗೇನು ಲಾಭವಾಗಿರಬಹುದು?

ಭಾರತದಲ್ಲಿ ಇರುವ ವೈವಿಧ್ಯಪೂರ್ಣವಾದ ಸಾಮಾಜಿಕ ಸಮುದಾಯಗಳು ಏಕೆ ಹಾಗಿವೆ? ಅವೇಕೆ ಕ್ರೈಸ್ತ, ಇಸ್ಲಾಂ ರಿಲಿಜನ್ನುಗಳಂತೆ ಇಲ್ಲ? ಎಂಬ ಪ್ರಶ್ನೆಯನ್ನು ಉತ್ತರಿಸುವ ಸಲುವಾಗಿ ಮೇಲಿನ ಕಥೆಯು ಪಾಶ್ಚಾತ್ಯರಿಂದ ಹುಟ್ಟಿಕೊಂಡಿದೆ. ನಮ್ಮ ಸಾಮಾಜಿಕ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಎಲ್ಲರೂ ಸಧ್ಯಕ್ಕೆ ಅದನ್ನೊಂದು ಸಿದ್ಧಾಂತವೆಂದು ಬಳಸುತ್ತಿದ್ದಾರೆ. ಹಿಂದೂಯಿಸಂ ಹಾಗೂ ಅದರ ಧರ್ಮಗ್ರಂಥ, ತತ್ವಗಳು, ಅದನ್ನಾಧರಿಸಿದ ಕಾನೂನುಗಳು, ಬ್ರಾಹ್ಮಣ ಪುರೋಹಿತ ಶಾಹಿ, ಇತ್ಯಾದಿ ಸಂಗತಿಗಳು ಭಾರತದಲ್ಲಿ ನಿಜವಾಗಿಯೂ ಇಲ್ಲ ಅಂತಾದರೆ ಈ ಮೇಲಿನ ಕಥೆಯೂ ನಿಜವಾಗಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ಈ ಕಲ್ಪನೆಗಳನ್ನು ಆಧರಿಸಿಯೇ ಈ ಕಥೆಯನ್ನು ಕಟ್ಟಲಾಗಿದೆ. ನಾನು ಸಂಶೋಧನೆ ಮಾಡುತ್ತ ಮಾಡುತ್ತ ಕಂಡುಕೊಂಡದ್ದು ಕೂಡ ಅದನ್ನೇ. ನಾನೂ ಕೂಡ ಈ ಕಥೆಯನ್ನು ಅಲ್ಲಗಳೆಯಬೇಕೆಂದು ಹರಕೆ ಹೊತ್ತು ಸಂಶೋಧನೆಗೆ ತೊಡಗಿರಲಿಲ್ಲ. ಆದರೆ ಈಗ ಈ ಕಥೆಯನ್ನು ಒಪ್ಪಿಕೊಳ್ಳಬೇಕಾದರೆ ನಾನು ನನ್ನ ಇದುವರೆಗಿನ ಸಂಶೋಧನೆಯನ್ನೇ ನಿರಾಕರಿಸಬೇಕಾಗುತ್ತದೆ ಎಂಬುದು ಮಾತ್ರ ಅರಿವಾಗಿದೆ.

  1. ಮೇ 20, 2013 ರಲ್ಲಿ 6:26 ಅಪರಾಹ್ನ

    ನೀವುಗಳು ಹೇಳಿರುವುದನ್ನು ನಾನು ಓದುತ್ತಿದ್ದೇನೆ. ನನ್ನಲ್ಲಿ ಒಂದಷ್ತು ಅನುಮಾನಗಲಿವೆ. ಬಗೆಹರಿಸಲು ಕೋರಿಕೆ.

    ೧. ಜಾತಿಗಳ ಅಸ್ತಿತ್ವ – ಜಾತಿಗಳು ಅಂದೂ ಇದ್ದವು ಮತ್ತವು ಇಂದಿಗೂ ಇವೆ. ಜಾತಿ ಎನ್ನುವುದರ ಅರ್ಥವೇ ಹುಟ್ಟಿನಿಂದ ಬಂದದ್ದು ಎಂದು. ಅಂದರೆ ಒಂದು ಕುಟುಂಬದ ಜಾತಿ ಆತ ಮಾಡುವ ಕೆಲಸದಿಂದ ಬದಲಾಗದು ಮತ್ತು ಹುಟ್ಟಿನಿಂದಲೇ ಅಂಟಿಕೊಂಡು ಬರುವಂಥದ್ದು. ಹೌದೇ?

    ೨. ಜಾತಿಯಲ್ಲಿ ಮೇಲು ಕೀಳು – ಹುಟ್ಟಿನಿಂದಲೇ ಮನುಷ್ಯನು ಸಮಾಜದಲ್ಲಿ ಮೇಲು ಅಥವಾ ಕೀಳು ಎಂಬುದಾಗಿ ಪರಿಗಣನೆಗೆ ಒಳಗಾಗುತ್ತಿರಲ್ಲವೇ? ಇಂದಿಗೂ ಈ ಏರ್ಪಾಟು ಇಲ್ಲವೇ? ಹೀಗಿತ್ತು ಎನ್ನಲು ಆಧಾರ ಕೆಲವನ್ನು ಮೇಲು ಕೆಲವನ್ನು ಕೀಳು ಎನ್ನಲಾಗುತ್ತಿರುವುದೇ ಆಗಿಲ್ಲವೇ?

    ೩. ಜಾತಿ ವ್ಯವಸ್ಥೆ – ಇದು ಬಲು ಸಂಕೀರ್ಣವಾದದ್ದು. ಜಾತಿಗಳು ಇವೆ. ಇವು ಹುಟ್ಟಿನಿಂದ ತೀರ್ಮಾನವಾಗುತ್ತವೆ ಮತ್ತು ಜಾತಿಗಳಲ್ಲಿ ಮೇಲುಕೀಳು ಇದೆ ಎನ್ನುವುದರ ಆಧಾರದ ಮೇಲೆಯೇ ಈ ವ್ಯವಸ್ಥೆ ಎನ್ನುವುದನ್ನು ಗುರುತಿಸುವ ಪ್ರಯತ್ನ ನನ್ನದು. ನಮ್ಮ ಸಮಾಜದಲ್ಲಿ ಅಂತರ್ಜಾತೀಯ ವಿವಾಹಕ್ಕೆ ಸದಾ ವಿರೋಧವಿತ್ತಲ್ಲವೇ? ವರ್ಣಸಂಕರ ಎನ್ನುವುದರ ಬಗ್ಗೆ ಪುರಾಣಗಳಲ್ಲೂ ಮನುಸೂತ್ರದಲ್ಲೂ ವಿವರಿಸಲಾಗಿದೆಯಲ್ಲವೇ? ಬ್ರಾಹ್ಮಣನು ತನ್ನ ಮೊದಲ ಪತ್ನಿಯಾಗಿ ಅನ್ಯ ಜಾತಿಯವಳನ್ನು ಇಟ್ಟುಕೊಳ್ಳುವಂತಿಲ್ಲಾ ಎನ್ನುವುದು ಅಂತಹ ಒಂದು ನಿಯಮ. ಹೀಗೆ ಮನುಸ್ಮೃತಿಯಲ್ಲಿದೆ ಎನ್ನುವುದು ನನ್ನ ತಿಳುವಳಿಕೆ. ಜಾತಿ ಜಾತಿಗಳ ನಡುವೆ ರಕ್ತಸಂಬಂಧಗಳು ಏರ್ಪಡದೆ ಇರುವುದು ಜಾತಿ ವ್ಯವಸ್ಥೆ ಇದೆಯೆನ್ನುವುದಕ್ಕೆ ಸಾಕ್ಷಿಯಲ್ಲವೇ?

    ನಿಮ್ಮ ಉತ್ತರ ನೋಡಿಕೊಂಡು ನನ್ನ ಮುಂದಿನ ಅನಿಸಿಕೆಯನ್ನು ತಿಳಿಸುತ್ತೇನೆ.
    (ದಯವಿಟ್ಟು ಯಾವುದೋ ಹೊತ್ತಗೆಯನ್ನು ಓದಿ ಎನ್ನದೆ ನನ್ನ ಅನಿಸಿಕೆಗೆ ಮಾರುತ್ತರವನ್ನು ಇಲ್ಲೇ ಕೊಡಿ. ನಾನು ಸಂಶೋಧಕನೂ, ಪಂಡಿತನೂ ಅಲ್ಲ. ಕೇವಲ ಒಬ್ಬ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಮನುಷ್ಯ. ನಿಮ್ಮ ನಿಲುವನ್ನು ಟೀಕಿಸುವ, ಖಂಡಿಸುವ ಉದ್ದೇಶವಿಲ್ಲದೆ ಕೇವಲ ಅದೇನೆಂದು ಅರಿಯುವ ಉದ್ದೇಶದಿಂದ ಈ ಕಮೆಂಟ್ ಬರೆದಿದ್ದೇನೆ)
    ವಂದನೆಗಳು

    ಆನಂದ್

    Like

  2. ಮೇ 23, 2013 ರಲ್ಲಿ 5:56 ಅಪರಾಹ್ನ

    ೧. ಬಹುತೇಕ ಸಂದರ್ಭದಲ್ಲಿ ಜಾತಿ ಹುಟ್ಟಿನಿಂದಲೇ ಬರುವಂತದ್ದು, ಏಕೆಂದರೆ ಸಮುದಾಯಗಳ ಬೇರೆ ಬೇರೆ ಅಸ್ಮಿತೆಗಳ ಜೊತೆಗೆ ಅದೂ ಒಂದು ಪ್ರಮುಖವಾದ ಅಸ್ಮಿತೆಯಾಗಿದೆ.

    ೨. ಜಾತಿಗಳ ಮೇಲು ಕೀಳು ಕುರಿತು ಒಂದು ಏರ್ಪಾಟು ಇದೆ ಎಂಬುದರಲ್ಲಿ ಸಮಸ್ಯೆ ಇದೆ. ಒಂದು ಊರಿನಲ್ಲಿರುವ ಏರ್ಪಾಟಿಗಿಂತ ಮತ್ತೊಂದು ಊರಿನಲ್ಲಿ ಭಿನ್ನವಾಗಿರುತ್ತದೆ. ಇಲ್ಲಿ ಏರ್ಪಾಟು ಎಂದು ನಾವು ಪರಿಗಣಿಸಿಯೇ ಕ್ಷೇತ್ರಾಧ್ಯಯನದ ಸಂದರ್ಭದಲ್ಲಿ ಪ್ರಶ್ನೆ ಕೇಳುತ್ತಿದ್ದೆವು, ಆದರೆ ಕ್ರಮೇಣ ಅದು ಏರ್ಪಾಟು ಅಂದರೆ ಮಾಡಿಡಲ್ಪಟ್ಟಿದ್ದು ಎಂಬುದರಲ್ಲೇ ಅನುಮಾನ ಏಳಲು ಪ್ರಾರಂಭವಾಯಿತು. ಏಕೆಂದರೆ ಒಂದು ಜಾತಿ ಕೀಳು ಎಂದು ಹೇಳಿದರೆ ಅದು ಶಾಶ್ವತವಾಗಿ ಅವರ ಬದುಕಿನ ಎಲ್ಲಾ ಸಂದರ್ಭಗಳಲ್ಲಿಯೂ ಒಂದೇ ತೆರನಾಗಿ ಇರುವುದಿಲ್ಲ, ಸಂದರ್ಭಕ್ಕೆ ತಕ್ಕಂತೆ ಅವರವರ ಕಾರ್ಯಗಳು ಬದಲಾಗುತ್ತಾ ಹೋಗುತ್ತವೆ. ಮತ್ತೊಂದು ಅಂಶವೆಂದರೆ ಈ ಮೇಲು-ಕೀಳು ಎಂದು ಜನರು ಹೇಳುವಾಗ ಅದಕ್ಕೆ ಮಾನದಂಡಗಳೇನು ಎಂದು ಕೇಳಿದರೆ, ನೀವು ಊಹೆ ಮಾಡಬಹುದಾದಷ್ಟು ಮಾನದಂಡಗಳನ್ನು ಹೇಳುತ್ತಾರೆ, ಅದರ ಮೂಲಕವೂ ಇದುವೇ ಮಾನದಂಡ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಮೇಲು-ಕೀಳು, ತಾವು ಇತರ ಜಾತಿಗಿಂತ ಶ್ರೇಷ್ಟ ಎಂಬಿತ್ಯಾದಿ ಪದಬಳಕೆ ಇದ್ದರೂ ಸಹ ಅದು ನಿಜವಾಗಿಯೂ ಅವರ ದೈನಂದಿನ ವ್ಯವಹಾರಕ್ಕೆ ಮಾರ್ಗದರ್ಶನವೇ ಎಂದರೆ ಸರಿಯಾದ ಉತ್ತರ ದೊರಕುವುದಿಲ್ಲ. ಅಂದರೆ ಇಲ್ಲಿ ಯಾವುದೋ ತೆರನಾದ ಮೇಲು – ಕೀಳು ಎಂದು ಮಾತನಾಡುವ ಶೈಲಿ ಇದೆ ಜೊತೆಗೆ ಅದರ ಅಸ್ತಿತ್ವವೂ ಇರಬಹುದು. ಆದರೆ ಸಮಸ್ಯೆ ಎಂದರೆ ಸ್ಪಷ್ಟವಾಗಿ ಅದು ಏನು ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ನಾವು ಕ್ಷೇತ್ರಾಧ್ಯಯನ ಮಾಡುವ ಮುನ್ನವೆ ಹಲವಾರು ಸಮಾಜಶಾಸ್ತ್ರಜ್ಞರೂ ಸಹ ಗುರುತಿಸಿದ್ದಾರೆ.

    3. ಮೇಲು-ಕೀಳು ಇದೆ ಎಂಬುದು ಒಂದು ಪಕ್ಷ ಒಪ್ಪಿಕೊಂಡರೂ ಹಾಗೂ ಜಾತಿ ಜಾತಿಗಳ ಒಳಗೆ ವಿವಾಹ ವಾಗುತ್ತದೆ ಎಂಬುದು ನಿಜವಾದರೂ ಸಹ ಅದು ಜಾತಿವ್ಯವಸ್ಥೆ ಇತ್ತೆಂಬುದನ್ನು ಸಾಬೀತು ಪಡಿಸುವುದಿಲ್ಲ. ಏಕೆಂದರೆ ಸರಿ ಅಂತರ್ಜಾತಿ ವಿವಾಹಕ್ಕೆ ವಿರೋಧ ಇರುವದಕ್ಕೂ ಜಾತಿವ್ಯವಸ್ಥೆ ಎಂಬ ಸಂಸ್ಥೆಗೂ ಏನು ಸಂಬಂಧ? ಅಂದರೆ ಜಾತಿವ್ಯವಸ್ಥೆ ಎಂಬ ಸಂಗತಿ ಇದ್ದು ಅದು ಇವೆಲ್ಲವನ್ನೂ ನಿಯಂತ್ರಿಸುತ್ತದೆ ಎಂಬ ಅರ್ಥ ಬರುತ್ತದೆ. ಹಾಗಾಗಿ ಅಲ್ಲಲ್ಲಿ ಜಾತಿಗಳಿವೆ ಅದರ ಕಟ್ಟುಪಾಡುಗಳಿವೆ ಇನ್ನೂ ಏನೆನೋ ಇವೆ, ಆದರೆ ಅವೆಲ್ಲವನ್ನೂ ನಿಯಂತ್ರಿಸುವ ಒಂದು ಸಂಸ್ಥೆ ಯಾವುದು? ಅಂತಹ ಸಂಸ್ಥೆ ಇಲ್ಲ ಎಂದು ನಾವು ವಾದಿಸುತ್ತಿರುವುದು

    Like

  3. ಮೇ 23, 2013 ರಲ್ಲಿ 10:58 ಅಪರಾಹ್ನ

    ಧನ್ಯವಾದಗಳು ಸಾರ್, ನನ್ನ ಅನುಮಾನ ಹಾಗೂ ಅನಿಸಿಕೆಗಳನ್ನು ಸರಳವಾಗಿ ಮುಂದಿಡುತ್ತೇನೆ. ಆದಷ್ಟೂ ಸರಳವಾಗಿ ಪರಿಹರಿಸಿ.

    ೧. ಹೀಗೆ ಇರುವ ಕಟ್ಟುಪಾಡುಗಳು, ಸಮಾಜದ ಎಲ್ಲಾ ನಡೆಗಳಲ್ಲಿ ಕೆಲಸ ಮಾಡುತ್ತಿರುವುದನ್ನು ನೀವು ಒಪ್ಪುತ್ತೀರಾ? ವರ್ಣಸಂಕರ ಮತ್ತು ಅಂತರ್ಜಾತಿ ವಿವಾಹ ಎರಡೂ ಒಂದೇ ಏನು? ಅಂತರ್ಜಾತಿ ಮದುವೆಯಲ್ಲೂ ಮೇಲು ಜಾತಿಯವರು ಕೀಳು ಜಾತಿಯವರನ್ನು ಲಗ್ನವಾಗುವುದನ್ನು ವರ್ಣಸಂಕರ ಎನ್ನಬಹುದೇ?

    ೨. ನೀವು ಹೇಳಿದಂತೆ ದೈನಂದಿನ ವ್ಯವಹಾರಕ್ಕೆ ಮಾರ್ಗದರ್ಶನವಾಗಿಲ್ಲದಿರಬಹುದಾದುದನ್ನು ಒಪ್ಪಬಹುದು. ಇದಕ್ಕೆ ಕಾರಣ ಅಳಿದು ಹೋಗುತ್ತಿರುವ ಕುಲಕಸುಬಿನ ಕಲ್ಪನೆ. ಹೆಚ್ಚುತ್ತಿರುವ ನಗರ ವಲಸೆ ಮತ್ತು ಜಾತಿಯಿಂದ ಗುರುತಿಸಲಾಗದ ಕೆಲಸಗಳ ಹೆಚ್ಚಳ ಎಂದು ನನ್ನ ಅನಿಸಿಕೆ. ಆದರೆ ಈ ಮೇಲುಕೀಳೆನ್ನುವುದು ಸಾಮಾಜಿಕ ಜೀವನದಲ್ಲಿ ಪರಿಣಾಮ ಬೀರುತ್ತಿಲ್ಲವೇ? ಉದಾಹರಣೆಗೆ, ಕೆಳಜಾತಿಯವರನ್ನು ಊರೊಳಗೆ, ಗುಡಿಯೊಳಗೆ ಬಿಡದಿರುವುದು… (ಅಂದಿನ ಕನಕದಾಸನಿಂದ ನಿನ್ನೆ ಕೊಲೆಯಾದ ದಲಿತನೊಬ್ಬನ ತಾಯಿ).

    ೩. ಮೇಲು ಕೀಳು ಇದೆ ಎನ್ನುವುದನ್ನು ಒಪ್ಪಿದರೆ ಅವೆರಡು ದೀರ್ಘಕಾಲದಿಂದ ಬೇರೆಯಾಗಿ ಬದುಕುತ್ತಿರುವುದಕ್ಕೆ ಪುರಾವೆಯಾಗುತ್ತದೆ. ಯಾವುದೇ ಎರಡು ಜನ ಸಮುದಾಯ ಸಾಮಾಜಿಕವಾಗಿ ಬೆರೆಯದೇ ಇರುವಂತಹುದನ್ನೇ ಒಂದು ವ್ಯವಸ್ಥೆ ಎನ್ನಲಾಗದೆ? ಈ ಕೊಡು ಕೊಳ್ಳುವುದೇ ಇರದಿರುವುದು ಮದುವೆಗೆ ಮಾತ್ರಾ ಸೀಮಿತವಾಗಿರದೆ ಬದುಕಿನ ಎಲ್ಲಾ ನಡೆಗಳಲ್ಲಿಯೂ ಇತ್ತಲ್ಲವೇ?

    Like

    • ಮೇ 24, 2013 ರಲ್ಲಿ 6:32 ಫೂರ್ವಾಹ್ನ

      ಹೀಗೆ ಓದಿಕೊಳ್ಳಿ: (ಅಂದಿನ ಕನಕದಾಸನಿಂದ ನಿನ್ನೆ ಕೊಲೆಯಾದ ದಲಿತನೊಬ್ಬನ ತಾಯಿಯವರೆಗೆ).

      Like

  4. ಮೇ 23, 2013 ರಲ್ಲಿ 11:00 ಅಪರಾಹ್ನ

    ಹಡಪದ, ಬಡಿಗೇರ, ಕುಂಬಾರ, ಕಮ್ಮಾರ, ಗೌಡ, ಕುಲಕರ್ಣಿ, ಜೊಯ್ಸ ಮೊದಲಾದ ಗುರುತುಗಳು ಜನಗಳಿಗೆ ಸಮಾಜದಲ್ಲಿ ಸಿಗಬೇಕಾದ ಗೌರವಗಳನ್ನೂ, ಅನುಕೂಲತೆಗಳನ್ನೂ, ಟ್ರೀಟ್‌ಮೆಂಟುಗಳನ್ನೂ ತೀರ್ಮಾನಿಸುತ್ತಿರಲಿಲ್ಲವೇ? “ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ, ಜಾತಂಗೆ ಜಾತನೆನಲೇಕೆ? ಅರುವಿಡಿದಾತನೇ ಸರ್ವಜ್ಞ” ಎಂದು ಸರ್ವಜ್ಞರು ಹೇಳಿದ್ದೇಕೆ? ಇಲ್ಲಿ ಜಾತಿಹೀನ ಎಂದರೆ ಅರ್ಥವೇನು? ಅಂದಿನ ಸಮಾಜದಲ್ಲೇ ಈ ಮೇಲುಕೀಳು ಇದ್ದಿತೆಂಬುದಕ್ಕೆ ಇದು ಸಾಕ್ಷಿಯಾಗಲಾರದೇ?

    Like

  5. ಮೇ 24, 2013 ರಲ್ಲಿ 2:44 ಅಪರಾಹ್ನ

    ವರ್ಣಸಂಕರದ ಕುರಿತು ಮಾತನಾಡುವಾಗ ಅನುಲೋಮ, ಪ್ರತಿಲೋಮ ಎಂಬಿತ್ಯಾದಿ ವಿವಾಹದ ವಿಧಗಳು ಇದ್ದವು ಎಂದು ಹೇಳುತ್ತಾರೆ. ಆದರೆ ಅದು ಇತ್ತೊ ಇಲ್ಲವೋ ನಮಗೆ ತಿಳಿದಿಲ್ಲ.

    ಒಂದು ಜಾತಿಯವರನ್ನು ಒಂದು ಕಡೆ ಬಿಡದಿರುವುದು ಮತ್ತು ಬಿಡುವುದರ ಕುರಿತು ನಮಗೆ ಇಂದು ಮಾತನಾಡಲು ಇರುವುದು ಒಂದೇ ಚೌಕಟ್ಟು, ಅದುವೇ ಜಾತಿವ್ಯವಸ್ಥೆ. ಆದರೆ ತೊಂದರೆ ಇರುವುದುಅಂತಹ ನಿಷೇಧಗಳು ಏಕಾಗಿ ಇವೆ ಎಂಬುದನ್ನು ಕೂಲಂಕುಷವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಉದಾಹರಣೆಗೆ ದೇವಾಲಯದ ಪ್ರವೇಶವನ್ನು ತೆಗೆದುಕೊಂಡರೆ, ಬಹುತೇಕ ಸಮುದಾಯಗಳಿಗೆ ಅವುಗಳದ್ದೇ ಆದ ದೇವಾಲಯಗಳಿವೆ, ಆದ್ದರಿಂದ ಮತ್ತೊಬ್ಬರ ದೇವಾಲಯಗಳಿಗೆ ಹೋಗುವ ಜರೂರತ್ತು ಏನಿದೆ? ದೇವಾಲಯದ ಪ್ರವೇಶ ಮಾಡದಿರುವುದು ಯಾವಾಗಿನಿಂದ ಸಮಸ್ಯೆ ಎಂದು ಪರಿಗಣಿಸಲ್ಪಟ್ಟಿತು? ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಏಕೆಂದರೆ ಬ್ರಿಟೀಷ್ ಪೂರ್ವದಲ್ಲಿ ದೇವಾಲಯದ ಪ್ರವೇಶ ಒಂದು ಸಮಸ್ಯೆಯಾಗಿ ಇದ್ದುದಕ್ಕೆ ಪುರಾವೆಗಳಿಲ್ಲ. ಆದ್ದರಿಂದ ಒಂದು ಪ್ರಾಕ್ಟಿಸ್ ನಡೆದುಕೊಂಡು ಬರುತ್ತಿದ್ದರೆ ಅದು ಕೇವಲ ಪ್ರಾಕ್ಟೀಸ್ ಆಗಿ ಉಳಿಯದೆ ಸಮಸ್ಯೆಯಾಗಿದ್ದು ಯಾವಾಗ ಮತ್ತು ಏಕೆ ಎಂಬುದನ್ನು ಅಧ್ಯಯನ ಮಾಡಬೇಕಿದೆ. ಆಗ ಜಾತಿವ್ಯವಸ್ಥೆ ಚೌಕಟ್ಟಿನ ಮಿತಿಗಳು ಹಾಗೂ ಸಮಸ್ಯೆಗಳು ತಿಳಿಯಬಹುದು

    ಮೇಲು-ಕೀಳು ಇತ್ತೆಂಬುದು ಮತ್ತು ಸಮುದಾಯಗಳು ಬೇರೆ ಬೇರೆಯಾಗಿ ಬದುಕುತ್ತಿದ್ದವು ಎಂಬುದು ಒಂದು ವ್ಯವಸ್ಥೆಯಾಗಿದ್ದಿರಲು ಹೇಗೆ ಸಾಧ್ಯ? ಕೂಲಿಕಾರ್ಮಿಕರು ಸ್ಲಮ್ ಗಳಲ್ಲಿ ಇರುವುದಕ್ಕೂ ಆಫಿಸರ‍್ಸ್ ಗಳು ಕ್ವಾಟರ್ಸ್‌ನಲ್ಲಿ ಇರುವುದಕ್ಕೂ ವ್ಯವಸ್ಥೆ ಇದೆ ಎಂದು ಹೇಳಬಹುದೇ? ಅಂದರೆ ಬೇರೆ ಬೇರೆ ಸಮುದಾಯಗಳು ಪ್ರತ್ಯೇಕವಾಗಿ ಬದುಕಿದರೆ ತೊಂದರೆ ಏನು? ಅವರು ಎಂದಿಗೂ ಸಾಮಾಕೊವಾಗಿ ಬೆರೆಯದೆ ಇದ್ದರು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಜಾತ್ರೆ, ಕೆಲವಾರು ಆಚರಣೆಗಳಲ್ಲಿ ಮೇಲ್ಜಾತಿಗಳಿಗಿಂತ ಕೆಳಜಾತಿಯವರ ಕೆಲಸ ಹೆಚ್ಚಾಗಿರುತ್ತದೆ. ಎಲ್ಲಿ ಅವರು ಸಂಧಿಸುವ ಅಗತ್ಯವಿದೆಯೋ ಅಲ್ಲಿ ಸಂಧಿಸುತ್ತಾರೆ, ಎಲ್ಲಿ ಅಗತ್ಯವಿಲ್ಲವೋ ಬರೆಯುವುದಿಲ್ಲ. ವ್ಯಕ್ತಿ ಸ್ವಾತಂತ್ರದ ನೆರಳಿನಲ್ಲಿ ವಿಭಕ್ತ ಕುಟುಂಬದಂತಹ ಕಲ್ಪನೆಗಳು ನಮಗೆ ಶ್ರೇಷ್ಟ ಎನಿಸುತ್ತವೆ, ಆದರೆ ಸಾಮಾಜಿಕವಾಗಿ ಸ್ವತಂತ್ರವಾಗಿದ್ದ ಕುಟುಂಬಗಳು ಸಮುದಾಯಗಳು ನಮಗೇಕೆ ಸಮಸ್ಯೆ ಎಂದೆನಿಸುತ್ತವೆ. ಅಲ್ಲೇಕೆ ಯಾವುದೋ ಒಂದು ವ್ಯವಸ್ಥೆ ಇದೆ ಎಂಬುದಾಗಿ ಪರಿಭಾವಿಸಬೇಕು?

    Like

  6. ಮೇ 24, 2013 ರಲ್ಲಿ 4:39 ಅಪರಾಹ್ನ

    ಮೇಲು-ಕೀಳು ಇತ್ತು ಎಂಬ ಆಧಾರದ ಮೇಲೆ ಒಂದು ಸಿಸ್ಟಂ/ವ್ಯವಸ್ಥೆ ಇದೆ ಎಂದು ಹೇಳಲು ಸಾಧ್ಯವೆ? ಸಾಧ್ಯವಿಲ್ಲ, ಏಕೆಂದರೆ ಸಮಾಜದಲ್ಲಿರುವ ಹಲವಾರು ಸಮುದಾಯಗಳು ಒಟ್ಟಿಗೆ ಇರುವ ಅಥವಾ ಪ್ರತ್ಯೇಕವಾಗಿ ಇರುವಂತಹ ನಿಯಮಗಳನ್ನು ಮಾಡಿರುವವರು ಯಾರು? ಅಂತಹ ನಿಯಮಗಳ ಸಮರ್ಥನೆಗಳು ಯಾವ ದಾಖಲೆಗಳಲ್ಲಿ ಸಿಗುತ್ತವೆ. ಒಂದು ವ್ಯವಸ್ಥೆ ಆಗಬೇಕೆಂದರೆ ಅದು ಸಾಂಸ್ಥಿಕವಾದ ಅಸಸ್ತಿತ್ವವನ್ನು ಪಡೆದುಕೊಂಡಿರಬೇಕಾಗುತ್ತದೆ, ಹಾಗೂ ಆ ಸಂಸ್ಥೆಗೆ ನ್ಯಾಯಸಮ್ಮತತೆ ಒದಗಿಸುವ ನೀತಿ ನಿಯಮ ಕಾನೂನುಗಳು ಇರಬೇಕಾಗುತ್ತವೆ. ಅವುಗಳನ್ನು ಸಮಾಜದಲ್ಲಿ ಹುಡುಕಲು ಸಾಧ್ಯವೆ? ಅಂತಹ ನೀತಿ ನಿಯಮಗಳನ್ನು ರೂಪಿಸುವ ಸಂಸ್ಥೆ ಯಾವುದು? ನಿರ್ದಿಷ್ಟವಾಗಿ ಎಷ್ಟು ನೀತಿ ನಿಯಮಗಳನ್ನು ಅದು ರೂಪಿಸುತ್ತದೆ? ಅದನ್ನು ಜಾರಿಗೆ ತರುವವರು ಯಾರು? ಇವೆಲ್ಲಾ ಪ್ರಶ್ನೆಗಳಿಗೆ ಕಳೆದ ೬ ವರ್ಷಗಳಿಂದ ಕ್ಷೇತ್ರಾಧ್ಯಯನ ನಡೆಸಿದರೂ ಉತ್ತರ ದೊರಕುತ್ತಿಲ್ಲ.

    ವ್ಯವಸ್ಥೆಯ ಕುರಿತು ಒಂದು ಉದಾಹರಣೆಯನ್ನು ನೀಡುವುದಾದರೆ: ವಿಶ್ವವಿದ್ಯಾನಿಲಯ ಒಂದು ವ್ಯವಸ್ಥೆ ಎಂಬುದರಲ್ಲಿ ಯಾರಿಗೂ ಅನುಮಾನವಿರಲಿಕ್ಕಿಲ್ಲ. ಇಲ್ಲಿ ಸ್ಪಷ್ಟವಾಗಿ ವ್ಯವಸ್ಥೆಯನ್ನು ನೋಡಬಹುದು, ಅಂದರೆ ಲಿಖಿತ ಅಥವಾ ಅಲಿಖಿತ ನಿಯಯಮಗಳು, ನಿರ್ದಿಷ್ಟವಾದ ಶ್ರೇಣೀಕರಣ, ಉದ್ಯೋಗದ ಅರ್ಹತೆಯ ಆಧಾರದ ಮೇಲೆ ಅಂತಸ್ತು ಹಾಗೂ ಸಂಬಳ, ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷಿಸುವ ಒಂದು ಅಂಗ, ಇನ್ನೂ ಮುಂತಾದ ಸಂಗತಿಗಳು ಸೇರಿಕೊಂಡು ವಿಶ್ವವಿದ್ಯಾನಿಲಯ ಎಂಬ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸುತ್ತವೆ. ಜಾತಿಯ ಕುರಿತು ಅದೊಂದು ವ್ಯವಸ್ಥೆ ಎಂದು ಮಾತನಾಡುವಾಗ ಈ ಮೇಲಿನ ಉದಾಹರಣೆಯನ್ನು ಅನ್ವಯ ಮಾಡಿಕೊಳ್ಳುತ್ತಾ ಹೋಗಿ, ಆಗ ನಮಗೆ ಎಲ್ಲಿ ಅದು ವ್ಯವಸ್ಥೆ ಎಂಬ ಸ್ಪಷ್ಟತೆ ದೊರಕುತ್ತದೆ. ಎಲ್ಲಿಯೂ ಇಲ್ಲ.

    ಮೇಲು ಕೀಳಿನ ಕುರಿತು ಒಂದೊಂದು ಊರಿನಲ್ಲಿ ಒಂದೊಂದು ತೆರನಾದ ಅಭಿಪ್ರಾಯಗಳು ದೊರಕುತ್ತದೆ. ಒಂದು ಊರಿನಿಂದ ಮತ್ತೊಂದು ಊರು ಬಿಡಿ, ಒಂದೇ ಊರಿನಲ್ಲಿ ಹಲವು ತರದ ಮೇಲು ಕೀಳುಗಳಿವೆ ಎಂಬುದನ್ನು ಹೇಳುತ್ತಾರೆ, ಹಾಗೆಯೇ ಅವರ ಜಾತಿ ಅವರಿಗೆ ಮೇಲು ನಮ್ಮ ಜಾತಿ ನಮಗೆ ಮೇಲು ಎನ್ನುವ ಅಭಿಪ್ರಾಯ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ. ಆದರೂ ಇವೆಲ್ಲಾ ಇದ್ದರೂ ಸಹ ಆ ಎಲ್ಲಾ ಸಂಗತಿಗಳಿವೆ ಎಂದು ಹೇಳಬಹುದೇ ಹೊರತು ಒಂದು ವ್ಯವಸ್ಥೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಅವೆಲ್ಲಾ ಒಂದು ವ್ಯವಸ್ಥೆಗೆ ಸೇರಿದ್ದೇ ಆಗಿದ್ದರೆ, ಆ ಎಲ್ಲಾ ಸಂಗತಿಗಳು ಸೇರಿಕೊಂಡು ವ್ಯವಸ್ಥೆಯನ್ನು ಉತ್ಪಾದಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಅಂದರೆ ಆ ಉತ್ಪಾದನೆಯಾಗುವ ಮತ್ತು ಅದನ್ನು ಉಳಿಸಿಕೊಂಡು ಹೋಗುವ ಪ್ರಕ್ರಿಯೆಯನ್ನು ನಾವು ಕಂಡುಹಿಡಿಯಲು ಶಕ್ತರಾಗಬೇಕು, ಆದರೆ ಎಲ್ಲಿ ಸಾಧ್ಯವಾಗಿದೆ?

    Like

  7. ಮೇ 24, 2013 ರಲ್ಲಿ 10:39 ಅಪರಾಹ್ನ

    ಸರ್,

    – “ಒಂದು ಊರಿನಲ್ಲಿರುವ ಏರ್ಪಾಟಿಗಿಂತ ಮತ್ತೊಂದು ಊರಿನಲ್ಲಿ ಭಿನ್ನವಾಗಿರುತ್ತದೆ.” ಎನ್ನುವ ನೀವು ಯಾವುದಾದರೂ ಊರಲ್ಲಿ ಒಂದು ಏರ್ಪಾಟಿರುವುದನ್ನು ಒಪ್ಪಿದ್ದೀರಾ? ಒಂದು ಊರಿನಲ್ಲಿರುವುದಕ್ಕಿಂತ ಇನ್ನೊಂದರಲ್ಲಿ ಭಿನ್ನ ಎಂದರೆ ಎರಡೂ ಊರಲ್ಲಿ ಜಾತಿಯ ವ್ಯವಸ್ಥೆಯಿದೆ ಆದರೆ ಅವೆರಡೂ ಒಂದೇ ಅಲ್ಲಾ ಎಂಬುದು ಇದರ ಅರ್ಥವೇ? ಇನ್ನು ಮೇಲು – ಕೀಳು ಎನ್ನುವುದು ಇದೆ ಆದರೆ ಸ್ಪಷ್ಟವಾಗಿಲ್ಲಾ ಎನ್ನುವುದು ನಿಮ್ಮ ನಿಲುವೆಂದು ಭಾವಿಸುತ್ತೇನೆ. ಆದರೆ ಹೀಗೆ ಒಂದು ಸಮುದಾಯದವರು ಹುಟ್ಟಿನಿಂದ ಮೇಲು, ಇನ್ನೊಬ್ಬರು ಹುಟ್ಟಿನಿಂದ ಕೀಳು ಎನ್ನುವುದೇ ಒಂದು ವ್ಯವಸ್ಥೆಯ ಲಕ್ಷಣವಲ್ಲವೇ? ಒಂದೂರಿನಲ್ಲಿ ಮೇಲು ಅನ್ನಿಸಿಕೊಂಡವರು ಇನ್ನೊಂದು ಊರಿನಲ್ಲಿ ಕೀಳಾಗಿರಬಹುದು… ಇದರರ್ಥ ಸಮಾಜದಲ್ಲಿ ಮೇಲು ಕೀಳು ಇಲ್ಲಾ ಅಂತ ಅಲ್ಲಾ, ಆ ಮೇಲುಕೀಳು ಬೇರೆ ಬೇರೆ ಸಮಾಜಕ್ಕೆ ಬೇರೆ ಬೇರೆಯಾಗಿದೆ ಎಂದಲ್ಲವೇ?

    – ಜಾತಿಜಾತಿಗಳ ನಡುವೆ ವಿವಾಹವಾಗುವುದಿಲ್ಲಾ ಎನ್ನುವುದೇ ಒಂದು ವ್ಯವಸ್ಥೆಯಲ್ಲವೇ? ಇಲ್ಲಿ ವ್ಯವಸ್ಥೆಯೆಂದು ಯಾವುದನ್ನು ನೀವು ಹೇಳುತ್ತಿದ್ದೀರಾ ಗೊಂದಲವಾಗುತ್ತಿದೆ. ನೀವು ಹೇಳುವ ಹಾಗೆ ಖಂಡಿತವಾಗಿಯೂ ಇಂದು ಜಾತಿವ್ಯವಸ್ಥೆಯನ್ನು ನಿಯಂತ್ರಿಸುವ ಸಂಸ್ಥೆ ಇರುವುದು ಕಾಣುತ್ತಿಲ್ಲಾ. ಸಮಾಜದಲ್ಲಿ ಅಸ್ಪೃಶ್ಯತೆಯಿದೆಯಲ್ಲಾ, ಅದನ್ನು ನಿಯಂತ್ರಿಸುವ ಸಂಸ್ಥೆ ಯಾವುದಿದೆ? ಈ ವ್ಯವಸ್ಥೆಗಳು ವಿಶ್ವವಿದ್ಯಾಲಯದ ಹಾಗೆ ಇದ್ದು, ಅದಕ್ಕೊಬ್ಬ ಕುಲಪತಿಯಿರುವುದಿಲ್ಲವಲ್ಲವೇ? ಬಸವಣ್ಣನವರ ಕಾಲದಲ್ಲಿ ಆಗಿದ್ದೆಂದು ಹೇಳಲಾಗುವ ಮಾಧವಿ-ಶೀಲವಂತರ ಮದುವೆಯೇ ಕಲ್ಯಾಣ ಕ್ರಾಂತಿಗೆ ಕಾರಣವಾಗಿರಲಿಲ್ಲವೆ? ಅಂತರ್ಜಾತಿಯ ವಿವಾಹಕ್ಕೆ ವಿರೋಧ ಎನ್ನುವುದೇ ಜಾತಿವ್ಯವಸ್ಥೆ ಇರುವುದಕ್ಕೆ ಪುರಾವೆ ಎಂದು ನನಗನ್ನಿಸುತ್ತದೆ.

    – ಸಾರ್, ಬೇರೆ ಬೇರೆ ಸಮುದಾಯಗಳಿಗೆ ಬೇರೆ ಬೇರೆ ದೇಗುಲಗಳು, ಮಠಗಳು ಇರುವ ಕಾರಣದಿಂದ ದೇಗುಲದಲ್ಲಿ ಪ್ರವೇಶ ಮಾಡುತ್ತಿರಲಿಲ್ಲಾ ಎನ್ನುವುದಕ್ಕೆ ಆಧಾರ ಬೇರೆ ಬೇರೆ ಸಮುದಾಯಗಳಿಗೆ ಬೇರೆ ಬೇರೆ ಗುಡಿಗಳಿರುವುದು. ಇದನ್ನು ಹೀಗೂ ನೋದಬಹುದಲ್ಲವೇ? ಬೇರೆ ಬೇರೆ ಪಂಗಡಗಳಿಗೆ ಗುಡಿಯೊಳಕ್ಕೆ ಪ್ರವೇಶ ನಿರಾಕರಿಸಿದ್ದರಿಂದಾಗಿ ಅವರವರೇ ಗುಡಿಗಳನ್ನು ಕಟ್ಟಿಕೊಂಡಿದ್ದಾರೆ ಎಂದು! ಈ ಮಾತು ನನಗೆ ಯಾಕೆ ಹೆಚ್ಚು ಸರಿಯೆನ್ನಿಸುತ್ತದೆಯೆಂದರೆ ಕೆಲವೇ ದಶಕಗಳ ಹಿಂದೆ ಮಠಗಳು, ಸ್ವಾಮೀಜಿಗಳು ಬರೀ ಮೇಲ್ಜಾತಿಯ ಸಮುದಾಯಗಳಿಗೆ ಮಾತ್ರಾ ಸೀಮಿತವಾಗಿದ್ದು ಇದೀಗ ಸಣ್ಣ ಸಣ್ಣ ಸಮುದಾಯಗಳೂ ತಮ್ಮದೇ ಮಠ, ಸಂಸ್ಥಾನ, ಸನ್ಯಾಸಿಗಳನ್ನು ಹೊಂದಿದ್ದಾರೆ ಎನ್ನುವುದು ದಿಟವಲ್ಲವೇ?

    – ಸಮುದಾಯಗಳು ಒಂದಾಗಿ ಬದುಕುತ್ತಿರಲಿಲ್ಲಾ, ಜಾತಿಜಾತಿಗಳ ನಡುವೆ ಮೇಲು ಕೀಳು ಇದ್ದವು, ಬೇರೆ ಬೇರೆ ಗುಡಿಗಳಿದ್ದವು, ಹಬ್ಬ ಹರಿದಿನ ಜಾತ್ರೆಗಳಲ್ಲಿನ ಹೊಣೆಗಾರಿಕೆಗಳು, ಕೆಲಸಗಳು ಜಾತಿಯ ಆಧಾರದ ಮೇಲೇ ಬೇರೆ ಬೇರೆಯಾಗಿದ್ದವು ಎನ್ನುವುದೇ ಜಾತಿ ವ್ಯವಸ್ಥೆ ಇದೆಯೆನ್ನುವುದಕ್ಕೆ ಪುರಾವೆಯಲ್ಲವೇ?

    – ಜಾತಿ ವ್ಯವಸ್ಥೆಯೆನ್ನುವುದನ್ನು ವಿಶ್ವವಿದ್ಯಾಲಯವೊಂದರ ಶಿಸ್ತಿನ ವ್ಯವಸ್ಥೆಗೆ ಹೋಲಿಸುವುದು ಸಮಂಜಸವೇ? ಸಮಾಜದ ಕಟ್ಟುಪಾಡುಗಳು ಬರಹದಲ್ಲಿರುತ್ತವೆ ಎನ್ನುವುದನ್ನು ಅನಕ್ಷರಸ್ತರಿಂದಲೇ ತುಂಬಿದ್ದ ಭಾರತದಂತಹ ದೇಶದಲ್ಲಿ ನಿರೀಕ್ಷಿಸುವುದು ಸಾಧ್ಯವೇ?

    ಸರ್ವಜ್ಞರ ವಚನದ ಬಗ್ಗೆ ನಾನು ಗಮನ ಸೆಳೆಯಲು ಬಯಸುತ್ತೇನೆ. ದಯಮಾಡಿ ನಿಮ್ಮ ಅನಿಸಿಕೆ ತಿಳಿಸಿರಿ.

    Like

  8. ಮೇ 26, 2013 ರಲ್ಲಿ 11:08 ಫೂರ್ವಾಹ್ನ

    ಆನಂದ್ ರವರೆ

    ಮೇಲು-ಕೀಳು ಇದೆ ಎಂದು ಭಾವಿಸುವ ಅಥವಾ ಇದೆ ಎಂದು ಒಪ್ಪಿಕೊಳ್ಳುವ, ಅದು ಒಂದು ವ್ಯವಸ್ಥೆ ಆಗಬೇಕಾದರೆ ಆ ಶ್ರೇಣೀಕರಣಕ್ಕೆ ಒಂದು ನಿಯಮ ಇರಬೇಕಲ್ಲವೆ? ಅಂತಹ ನಿಯಮ ಯಾವುದಾದರೂ ಇದ್ದರೆ ಅದು ಯಾವ ನಿಯಮ? ಯಾವ ನಿಮಯದ ಆಧಾರದ ಮೇಲೆ ಮೇಲು-ಕೀಳು ಎಂದು ಜನರು ಹೇಳುತ್ತಾರೆ?ಸುಮ್ಮನೆ ನಾವು ಕೇಳಿದ್ದಕ್ಕೆ ನಾವು ಅವರಿಗಿಂತ ಮೇಲು, ನಮಗಿಂತ ಅವರು ಮೇಲು ಎಂದು ಹೇಳಿದರೆ ಅದು ವ್ಯವಸ್ಥೆಯ ಲಕ್ಷಣ ಏಕಾಗಬೇಕು? ಉದಾಹರಣೆಗೆ ಮೇಲು-ಕೀಳು ಇರುವುದೇ ಜಾತಿವ್ಯವಸ್ಥೆಯ ಅಸ್ತಿತ್ವಕ್ಕೆ ಅಥವಾ ಬರಿಯ ವ್ಯವಸ್ಥೆಯ ಅಸ್ತಿತ್ವಕ್ಕೆ ಸಾಕ್ಷಿ ಎಂದಾದರೆ, ಓದದೆ ಇರುವವರು ಮತ್ತು ಓದಿದವರು ಮುಖಾಮುಖಿಯಾದಗ ಮೇಲು-ಕೀಳು ಭಾವನೆ ಬರುತ್ತದೆ ಅದು ಜಾತಿವ್ಯವಸ್ಥೆಯೇ? ವಿವಿಧ ಉದ್ಯೋಗಗಳನ್ನು ಮಾಡುವ ಸಂದರ್ಭದಲ್ಲಿ ಪೈಲೆಟ್ ಗಳಿಗಿಂತ ಕೂಲಿ ಕೆಲಸ ಮಾಡುವವ ಕೀಳು ಎಂದಾಗುತ್ತದೆ ಅವರು ಮುಖಾಮುಖಿಯಾದರೆ ಅಂತಹ ಭಾವನೆ ಬಂದೇ ಬರುತ್ತದೆ ಅದು ಜಾತಿವ್ಯವಸ್ಥೆಯೆ? ಬಡವ-ಶ್ರೀಮಂತರ ನಡುವೆ ಮೇಲು-ಕೀಳು ಇರುತ್ತದೆ ಅದು ಜಾತಿವ್ಯವಸ್ಥೆಯ ಲಕ್ಷಣವೆ? ಗಂಡ ಹೆಂಡತಿಯ ನಡುವೆ ತಾನು ಹೆಚ್ಚು ನೀನು ಕಡಿಮೆ ಎಂಬ ಭಾವನೆ ಇದ್ದರೆ ಅದು ಜಾತಿವ್ಯವಸ್ಥೆಯ ಲಕ್ಷಣವೆ? ನೋಡಿ ಎಲ್ಲೆಲ್ಲಿ ಮೇಲು-ಕೀಳು ಇದೆಯೋ ಅಲ್ಲೆಲ್ಲಾ ಜಾತಿವ್ಯವಸ್ಥೆ ಇರಬೇಕು, ಅದು ನಿಮ್ಮ ವಾದವನ್ನೇ ಅನುಸರಿಸಿದರೆ ಅಲ್ಲವೆ? ಗಂಡು ಬಲಾಡ್ಯ ಹೆಣ್ಣು ದುರ್ಬಲ ಎಂದು ಜನಜನಿತವಾದ ನಂಬಿಕೆ(ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ವಿಮರ್ಶಿಸಬೇಕಾದ ವಿಚಾರ) ಹಾಗೆಂದು ಅಲ್ಲಿ ಮೇಲು-ಕೀಳು ಹುಟ್ಟಿನಿಂದ ಇರುವುದರಿಂದ ಅದು ಜಾತಿವ್ಯವಸ್ಥೆಯಾಗುತ್ತದೆಯೆ?

    ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಲು ಜಾತಿವ್ಯವಸ್ಥೆ ಎಂಬ ವಿವರಣೆಗೆ ಸರಳೀಕರಿಸಬೇಡಿ. ನೋಡಿ ಉದಾಹರಣೆಗೆ, ಅಂತರ್ಜಾತಿ ವಿವಾಹ ವಿರೋಧಿಸಲು ಸಾವಿರ ಕಾರಣ ಕೊಡಬಹುದು, ಪ್ರಾದೇಶಿಕವಾಗಿಯೂ ಭಿನ್ನತೆ ಇದ್ದರೆ ಬರುವ ವಿರೋಧ, ಭಾಷಿಕವಾಗಿ ಭಿನ್ನತೆ ಇದ್ದರೆ ಭಾಷಾ ಹೊಂದಾಣಿಕೆಗೆ ತೊಂದರೆ ಆಗುವುದರಿಂದ ಅದನ್ನು ವಿರೋಧಿಸುವು, ಜಾತಿ ಬೇರೆಯಾಗಿದ್ದರೆ ವಿರೋಧಿಸುವುದು, ಜಾತಿ ಒಂದೇ ಆಗಿದ್ದು ಕುಲವೂ ಒಂದೇ ಆಗಿದ್ದರೆ ಅಂತಹ ವಿವಾಹಗಳನ್ನು ವಿರೋಧಿಸುವುದು, (ಉದಾಹರಣೆ ಬಂಜಾರ ಸಮುದಾಯದಲ್ಲಿ ಜಾತ್ ಬುಕ್ಯ ಎಂಬ ಎರಡು ಕುಲಗಳಿದ್ದು ಜಾತ್-ಜಾತ್ ನಡುವೆ ವಿವಾಹ ಆಗಕೂಡದು, ಅದು ಬಂಜಾರ ಎಂಬ ಒಂದೇ ಜಾತಿ ಆಗಿದ್ದರೂ ಕೂಡ), ಆರ್ಥಿಕವಾಗಿ ಸರಿಸಮಾನರಲ್ಲದಿದ್ದಾಗ ವಿರೋಧಿಸುವುದು, ಮನೆತನದ ಹಿನ್ನೆಲೆ ಸರಿಇಲ್ಲದಾಗ ಅಂತಹ ವಿವಾಹಗಳನ್ನು ವಿರೋಧಿಸುವುದು, ಹೀಗೆ ವಿವಾಹವನ್ನು ವಿರೋಧಿಸಲು ಸಾವಿರ ಕಾರಣಗಳಿರುತ್ತವೆ. ಆದರೆ ಅವೆಲ್ಲವನ್ನೂ ಕಡೆಗಣಿಸಿ ಕೇವಲ ಜಾತಿಯನ್ನು ಮಂಚೂಣಿಗೆ ಎಳೆದು ತಂದು ಸರಳೀಕರಿಸುವುದು ಏಕೆ? ಹಾಗಾಗಿ ನಮಗೆ ಅಂತರ್ಜಾತಿವಿವಾಹದ ಕುರಿತಾಗಲಿ ಅಥವಾ ಅದನ್ನು ವಿರೋಧಿಸುವುದರ ಕುರಿತಾಗಲಿ “ಜಾತಿವ್ಯವಸ್ಥೆ” ಎಂಬ ಚೌಕಟ್ಟಿನಿಂದಾಚೆಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಒಂದು ತರಹದ ಕಾರಣ ಇಲ್ಲದಿದ್ದರೂ ಸಹ ಅವೆಲ್ಲವನ್ನೂ ಒಂದೇ ಕಾರಣಕ್ಕೆ ಇಳಿಸಿ ಅಲ್ಲಿ ಜಾತಿವ್ಯವಸ್ಥೆ ಇಲ್ಲವೆ ಎಂದು ಏನು ಹೇಳುವುದು?

    ನೋಡಿ ಒಂದೊಂದು ಸಮುದಾಯ ಒಂದೊಂದು ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿರುತ್ತದೆ. ಮನೆಗೆ ಬರುವ ಸೊಸೆಯು ತಮ್ಮ ಸಂಪ್ರದಾಯಗಳನ್ನು ಆಚರಣೆಗಳನ್ನು ಪಾಲಿಸಲು ಅಥವಾ ತಮ್ಮ ಸಂಪ್ರದಾಯಗಳಿಗೆ ಒಗ್ಗಿಕೊಳ್ಳುವುದು ವಿವಾಹದ ಸಂದರ್ಭದಲ್ಲಿ ಪರಿಗಣಿಸಲ್ಪಡುವ ಸಂಗತಿಯಾಗಿದೆ. ಹಾಗಾಗಿಯೇ ತಮ್ಮ ಜಾತಿಯವರಾದರೆ ತಮ್ಮ ಸಂಪ್ರದಾಯ ಆಚರಣೆಗಳು ಒಗ್ಗಿಕೊಳ್ಳುತ್ತವೆ ಎಂದು ತಮ್ಮ ಜಾತಿಯವರನ್ನು ಹುಡುಕಲು ಪ್ರಯತ್ನಿಸುತ್ತಾರೆ, ಜಾತಿ ಆಧಾರದಲ್ಲಿ ಅಂತರ್ಜಾತಿ ವಿವಾಹವನ್ನು ವಿರೋಧಿಸುವುದು ಈ ನೆಲೆಯಲ್ಲಿ, ಅಥವಾ ಕೆಲವು ಬಾರಿ ಆರ್ಥಿಕ ನೆಲೆಯೂ ಇರಬಹುದು. ಇಲ್ಲೆಂತ ವ್ಯವಸ್ಥೆ ಇದೆ ಎಂದು ಹುಡುಕಲು ಸಾಧ್ಯ? ಅವರವರ ಆಚರಣೆ ಹಿರಿಯರಿಂದ ಬಂದಿದೆ ಅದು ಕೌಟುಂಬಿಕವಾಗಿರುತ್ತದೆ ಇನ್ನು ಸಿಸ್ಟಂ ಇದೆ ಎಂಬುದು ಯಾವ ಅರ್ಥದಲ್ಲಿ? ಇಲ್ಲಿ ಮತ್ತೊಂದು ಸಂಗತಿಯನ್ನು ಗಮನಿಸಬೇಕಾಗುತ್ತದೆ, ಜಾತಿ ಸಮುದಾಯಗಳ ಆಚರಣೆಗಳು ಕೌಟುಂಬಿಕವಾಗಿ ಹರಿದುಬರುತ್ತಿರುವಾಗ ಸಾಮಾಜಿಕವಾಗಿ ಬೇರೆ ಬೇರೆ ಸಮುದಾಯಗಳು ಅವುಗಳದ್ದೇ ಆದ ಸಂಪ್ರದಾಯಗಳನ್ನು ಹೊಂದಿರುವಾಗ, ಹೀಗೆ ಪ್ರತ್ಯೇಕವಾಗಿ ಸಂಪ್ರದಾಯಗಳನ್ನು ಹೊಂದಿರುವ ಸಮುದಾಯಗಳನ್ನು ನಿಯಂತ್ರಿಸುವ ಒಂದು ಸಿಸ್ಟಂ ಯಾವುದು? ಅಂದರೆ ಸಿಸ್ಟಂ ಇದ್ದ ಪಕ್ಷದಲ್ಲಿ ಎಲ್ಲಾ ಸಮುದಾಯಗಳನ್ನು ನಿಯಂತ್ರಿಸುವ ಕಾರ್ಯವನ್ನು ಅದು ಮಾಡಬೇಕಾಗುತ್ತದೆ. ಆದರೆ ಇಲ್ಲಿ ಪರಿಸ್ಥಿತಿ ಭಿನ್ನವಾಗಿದೆ.

    ಮತ್ತೊಂದು ವಿಚಾರ ಕುಲಗಳು ಬೇರೆ ಬೇರೆಯಾಗಿದ್ದು, ಅಥವಾ ಕುಲಭೇದಗಳಿದ್ದರೆ ಅಲ್ಲಿ ಬೇರೆ ಬೇರೆ ಕುಲಗಳಿವೆ ಎಂದು ಹೇಳಬಹುದೇ ಹೊರತು ಆ ಕುಲಭೇದಗಳೇ ಒಂದು ವ್ಯವಸ್ಥೆ ಎಂದು ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ ಮಾವಿನಹಣ್ಣಿನಲ್ಲಿ ಬೇರೆ ಜಾತಿಯ ಹಣ್ಣುಗಳಿವೆ ಅಂದರೆ ಮಾವು ಬೇರೆ ಬೇರೆ ತಳಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿರುವ ವೈವಿಧ್ಯತೆಯ ಆಧಾರದ ಮೇಲೆ ಮಾವಿನ ವ್ಯವಸ್ಥೆ ಇದೆ ಎಂದು ಹೇಳಲು ಸಾಧ್ಯವಾಗುತ್ತದೆ. ಅಲ್ಲಿ ಏಕೆ ವ್ಯವಸ್ಥೆ ಇದೆ ಎಂದರೆ ಮಾವಿನ ಹಣ್ಣುಗಳಲ್ಲಿ ನೋಡಿ ಬೇರೆ ಬೇರೆ ವಿಧಗಳಿವೆ ಅಥವಾ ಜಾತಿಗಳಿವೆ ಹಾಗಾಗಿ ಅಲ್ಲಿ ವ್ಯವಸ್ಥೆ ಇದೆ ಎಂದು ಹೇಳಲು ಸಾಧ್ಯವೆ? ಇಂತಹ ಅತಾರ್ಕಿಕ ವಾದವನ್ನು ನಾವು ಜಾತಿ ಕುಲಗಳಿಗೆ ಹಚ್ಚುವುದೇಕೆ?

    ಅದಕ್ಕೆ ಒಂದು ಉದಾಹರಣೆಯನ್ನು ನೋಡಿ, ಒಂದು ಊರಿನಲ್ಲಿ ೨೦ ಜಾತಿಗಳಿಗೆ ಎಂದಿಟ್ಟುಕೊಳ್ಳುವ ಅಥವಾ ನಿಮ್ಮ ಊರಿನಲ್ಲಿ ನೀವೇ ಇದ್ದಂತಹ ಪರಿಸರವನ್ನು ಗಮನಿಸಿ ನೋಡಿ, ಅಲ್ಲಿ ಇರುವ ಎಲ್ಲಾ ಜಾತಿಗಳಿಗೂ ಆಯಾ ಜಾತಿಗಳದ್ದೇ ಆದ ಕಟ್ಟುಪಾಡುಗಳಿರುತ್ತವೆ, ಅವುಗಳನ್ನು ಆಯಾ ಜಾತಿಗಳು ಪಾಲಿಸಿಕೊಂಡು ಹೋಗುತ್ತಿರುತ್ತವೆ. ಆದರೆ ಆ ೨೦ ಜಾತಿಗಳನ್ನು ನಿಯಂತ್ರಿಸುವವರು ಯಾರು? ಅಥವಾ ಅವೆಲ್ಲಾ ಜಾತಿಗಳನ್ನು ಹಿಡಿದಿಟ್ಟುಕೊಂಡಿರುವ ವ್ಯವಸ್ಥೆ ಯಾವುದು? ಅಲ್ಲಿ ಜಾತಿಗಳು ಅವರರವರ ಪೂರ್ವಿಕರ ಆಚರಣೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದೋ? ಅಥವಾ ಆ ಊರಲ್ಲಿ ಯಾವುದೋ ಒಂದು ವ್ಯವಸ್ಥೆ ಇದೆ ಅದು ಅವರೆಲ್ಲರು ಆಚರಣೆಗಳನ್ನು ಸಂಪ್ರದಾಯಗಳನ್ನು ಮಾಡುವಂತೆ ನಿರ್ದೇಶನ ನೀಡುತ್ತಿದೆ ಎಂದು ಹೇಳಬಹುದೊ?

    ಬೇರೆ ಬೇರೆ ಸಮುದಾಯಗಳಿಗೆ ಗುಡಿಗಳಿದ್ದವು ಎಂದರೆ ಅವರು ಮತ್ತೊಬ್ಬರು ನಿರಾಕರಿಸಿದ್ದರಿಂದ ಹುಟ್ಟಿದವು ಎಂದು ಹೇಳಲು ಹೇಗೆ ಸಾಧ್ಯ? ನಮ್ಮಲ್ಲಿ ವೈವಿಧ್ಯಮಯವಾದ ಸಂಸ್ಕೃತಿ, ಜಾತಿ, ಆಚಾರ-ವಿಚಾರ, ಸಂಪ್ರದಾಯಗಳಿವೆ, ಅಂತೆಯೇ ವೈವಿಧ್ಯಮಯವಾದ ದೇವರ ಗುಡಿಗಳು ಇವೆ, ಅವೆಲ್ಲವೂ ವಿರೋಧದಿಂದ ಅಥವಾ ಮತ್ತೊಬ್ಬರ ನಿರಾಕರಣೆಯಿಂದ ಹುಟ್ಟಿದ ಗುಡಿಗಳು ಎಂದು ಹೇಗೆ ಹೇಳಲಿಕ್ಕೆ ಸಾಧ್ಯ? ಸರಿ ಇತ್ತೀಚೆಗೆ ಪ್ಲೇಗಮ್ಮ ಅಂತ ಹೊಸ ದೇವರು ಹುಟ್ಟಿಕೊಂಡಿದೆ ಅದಕ್ಕೆ ಗುಡಿಯೂ ಇದೆ, ಇದು ಯಾವ ಸಮುದಾಯಗಳು ತಮ್ಮ ಗುಡಿಗೆ ಪ್ರವೇಶನಿರಾಕರಿಸಿದ್ದರಿಂದ ಹುಟ್ಟಿದ ದೇವಾಳಯವಾಗಿದೆ?

    Like

  9. anandgj
    ಮೇ 27, 2013 ರಲ್ಲಿ 9:36 ಅಪರಾಹ್ನ

    ಪ್ರಿಯ ಸಂತೋಷ್ ಶೆಟ್ಟಿಯವರೇ,

    ಹೌದು ನೀವೆನ್ನುವಂತೆ ನಿಯಮವಿದೆಯೇನೋ ಎನ್ನಿಸುತ್ತದೆ. ಅದು ಪುರುಷಸೂಕ್ತದ ಈ ಮಾತುಗಳು “ಬ್ರಾಹ್ಮಣ್ಯೋ ಮುಖಮಾಸೀತ್, ಬಾಹೋರಾಜನ್ ಯಃಕೃತಃ, ಊರೂ ತದಸ್ಯ ಯದ್ವೈಶ್ಯಃ, ಪದ್ಭ್ಯಾಂ ಶೂದ್ರೋ ಅಜಾಯತಾ!”. ಈ ನಿಯಮವು ಕಾಲಾಂತರದಲ್ಲಿ ಜಾತಿಗಳನ್ನು ಸದರಿ ವರ್ಣಗಳಲ್ಲಿ ಸೇರಿಸುವ ಮೂಲಕ ತಲೆಮಾರುಗಳಿಗೆ ಹರಿದು ಬಂದು ಮೇಲುಕೀಳುಗಳು ಹಾಗೇ ಉಳಿದಿವೆಯೆನ್ನಿಸುತ್ತದೆ. ಯಾಕೆಂದರೆ ಪುರುಷಸೂಕ್ತದಲ್ಲಿ ಹೇಳಲಾಗಿರುವ ನಾಲ್ಕು ವರ್ಣಗಳಲ್ಲಿಯೇ ಇಂದಿನ ಜಾತಿಗಳನ್ನೂ ಗುರುತಿಸಬಹುದಾಗಿದೆ. ನೀವು ಓದಿದವರ – ಓದದವರ ನಡುವಿನ ತಾರತಮ್ಯವನ್ನು ಜಾತಿವ್ಯವಸ್ಥೆಯೆನ್ನಬಹುದೇ ಎಂದಿದ್ದೀರಿ. ಊಹೂಂ.. ಹಾಗನ್ನಲಾಗದು. ಕಾರಣ ಇದು ಹುಟ್ಟಿನಿಂದ ಬಂದ ಮೇಲುಕೀಳುಗಳಲ್ಲಾ! ಇದು ಬಡವ ಶ್ರೀಮಂತರ ನಡುವಿನ ತಾರತಮ್ಯಕ್ಕೂ ಇದೇ ಕಾರಣದಿಂದ ಅನ್ವಯಿಸಲಾಗದು. ಇನ್ನು ಮೇಲು ಕೀಳು ಜಾತಿ ವ್ಯವಸ್ಥೆಯ ಲಕ್ಷಣ ಎನ್ನುವುದರ ಅರ್ಥ ತಾರತಮ್ಯವಿರುವುದೆಲ್ಲಾ ಜಾತಿವ್ಯವಸ್ಥೆ ಎನ್ನಲಾಗದು ಅಲ್ಲವೇ? ಹಾಗೆ ವಾದಿಸುವುದು ತರವಲ್ಲವೆನ್ನುವುದು ನನ್ನ ಅನಿಸಿಕೆ!

    ಅಂತರ್ಜಾತಿ ವಿವಾಹಕ್ಕೆ ವಿರೋಧವೆನ್ನುವುದೂ ಕೂಡಾ ಇಂಥದ್ದೇ. ಅಂತರ್ಜಾತಿ ವಿವಾಹಕ್ಕೆ ಬೇರೆ ಬೇರೆ ಕಾರಣಕ್ಕೆ ವಿರೋಧವಿರಬಹುದು. ಆದರೆ ಜಾತಿಯ ಕಾರಣಕ್ಕೆ ವಿವಾಹವಾಗುವುದನ್ನು ವಿರೋಧಿಸುವುದು ಜಾತಿವ್ಯವಸ್ಥೆಯ ಲಕ್ಷಣ ಎನ್ನುತ್ತಿದ್ದೇನೆ. ವ್ಯತ್ಯಾಸ ತಿಳಿಯಿತೆಂದು ಭಾವಿಸುತ್ತೇನೆ.

    ನೀವು ಹೇಳುತ್ತಿರುವ ಸಂಪ್ರದಾಯ ಆಚರಣೆಗಳು ತಲೆಮಾರುಗಳಿಂದ ಕೌಟುಂಬಿಕವಾಗಿ ಹರಿದು ಬರುತ್ತಿರುವುದೇ ಜಾತಿವ್ಯವಸ್ಥೆಯ ಲಕ್ಷಣ ಎನ್ನುತ್ತಿದ್ದೇನೆ. ಯಾಕೆಂದರೆ ತನ್ನ ಆಚರಣೆಯಂತೆ ಪರರದ್ದಿಲ್ಲಾ ಎನ್ನುವ ಕಾರಣದಿಂದಾಗಿ ತನ್ನದೇ ಜಗತ್ತನ್ನು ನಾಡಿನ ನಾನಾ ಜನಸಮುದಾಯಗಳು ಕಟ್ಟಿಕೊಂಡಿವೆ ಎನ್ನುವುದೇ ಜಾತಿವ್ಯವಸ್ಥೆಗೆ ಕುರುಹು. ಯಾಕೆಂದರೆ ಇದರಲ್ಲಿ ತನ್ನದಲ್ಲದ ಜಾತಿಯೊಂದರ ಜನರ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದು ತೀರ್ಮಾನವಾಗಿರುತ್ತದೆ. ಒಬ್ಬ ಗೌಡರವನು ಬ್ರಾಹ್ಮಣನ ಜೊತೆ ನಡೆದುಕೊಳ್ಳುವ ರೀತಿಗೂ ದಲಿತನೊಬ್ಬನ ಜೊತೆ ನಡೆದುಕೊಳ್ಳುವುದಕ್ಕೂ ಇಡೀ ದೇಶದಲ್ಲಿ ಒಂದೇ ರೀತಿಯ ಹೋಲಿಕೆಯಿದೆ ಎನ್ನುವುದು ನನ್ನ ಅಭಿಪ್ರಾಯ. ಇದನ್ನು ಪರೀಕ್ಷೆ ಮಾಡಿ ನೋಡಬಹುದು. ನನಗಂತೂ ಭಾರತದಲ್ಲಿ ನಾನು ಸುತ್ತಿರುವ ಎಲ್ಲಾ ಪ್ರದೇಶದಲ್ಲೂ ಆಗಿದೆ. ಹುಟ್ಟಿನಿಂದ ಮೇಲುಜಾತಿಗೆ ಸೇರಿದ್ದೇನಾದ್ದರಿಂದ ಎಲ್ಲೂ ಜಾತಿಯ ಹೆಸರಿಂದ ಅಪಮಾನವಾಗಿಲ್ಲಾ! ಹಾಗೇ ಕೆಳಜಾತಿಯವರಾಗಿದ್ದು ಹೋದಲ್ಲೆಲ್ಲಾ ಜಾತಿ ಜಾಹೀರಾದೊಡನೆ ಅಪಮಾನ ಅನುಭವಿಸಿದ ಉದಾಹರಣೆಗಳು ಸಾಮಾನ್ಯ! ಹೀಗೆ ಇಂಥಿಂಥಾ ಜಾತಿಯವರ ಸ್ಥಾನ ಇಂಥದ್ದು ಎನ್ನುವ ವ್ಯವಸ್ಥೆ ಇರುವುದೇ ಜಾತಿವ್ಯವಸ್ಥೆಯಿರುವುದಕ್ಕೆ ಪುರಾವೆ ಎನ್ನುವುದು ನನ್ನ ಅನಿಸಿಕೆ.

    ಮಾವಿನ ಹಣ್ಣಿನ ನಿಮ್ಮ ಉದಾಹರಣೆ ವಾದಕ್ಕೆ ಅನುಕೂಲವೆಂಬಂಥಾ ವಾದ. ಇದೇ ನೆಲೆಯಲ್ಲಿ ಜಗತ್ತಿನಲ್ಲಿ ನಾನಾ ಜೀವಿಗಳಿವೆ. ಸಯಗಳನ್ನು ಹುಳುಗಳು, ಅವನ್ನು ಕಪ್ಪೆ, ಕಪ್ಪೆಗಳನ್ನು ಹಾವು, ಹಾವನ್ನು ಹದ್ದು ತಿನ್ನುವ ಆಹಾರ ಸರಪಳಿಯು ಹೇಗೆ ಒಂದು ವ್ಯವಸ್ಥೆಯೋ ಹಾಗೇ ಕೆಳಜಾತಿಯವರನ್ನು ಅವರ ಮೇಲಿನವರೂ, ಅವರನ್ನು ಅವರ ಮೇಲಿನವರೂ ಕೀಳಾಗಿ ಕಾಣುವ ಏರ್ಪಾಟಿರುವುದರಿಂದ ಜಾತಿಗಳ ನಡುವಿನ ಒಡನಾಟವೇ ಪ್ರಮುಖವಾಗಿರುವ ನಾಡಲ್ಲಿ “ಜಾತಿವ್ಯವಸ್ಥೆ” ಇದೆ ಎನ್ನಬಹುದಲ್ಲವೇ?

    ಬೇರೆ ಬೇರೆ ಸಮುದಾಯಗಳಿಗೆ ಗುಡಿಗಳಿರುವುದನ್ನೇ ಅವರು ಮತ್ತೊಬ್ಬರಿಂದ ನಿರಾಕರಿಸಿದ್ದರಿಂದಾಗಿ ಕಟ್ಟಿಕೊಂಡವು ಎನ್ನಲು ಹೇಗೆ ಸಾಧ್ಯ ಎಂದಿರಿ. ನೋಡಿ. ಇಂದಿಗೂ ಮಠಗಳಿಗೆ ಬೇರೆ ಬೇರೆ ಕೆಲಸಗಳಿಗಾಗಿ ಜಾಡಮಾಲಿಗಳು ಬರುತ್ತಾರೆ. ಇವರಿಗೆ ತಮ್ಮದೇ ಗುಡಿಯಿದ್ದರೂ ಕೆಲಸದ ಮೇಲೆ ಬರುತ್ತಾರೆ (ನೀವು ತಮ್ಮದೇ ಗುಡಿಯಿದ್ದವರು ಉಳಿದವರ ಗುಡಿಗೆ ಬರದೇ ಇರುತ್ತಾರೆಯೇ ಹೊರತು ಪ್ರವೇಶ ನಿರಾಕರಣೆಯಾಗಿಲ್ಲ ಎಂದಿದ್ದಿರಿ). ಹಾಗೆ ಬಂದವರನ್ನು ಎಂದಾದರೂ ಮಠದ ಒಳಗೆ ಸೇರಿಸಿದ್ದನ್ನು ನೋಡಿದ್ದೀರಾ? ನಾನಂತೂ ಕಂಡಿಲ್ಲಾ!! ಇನ್ನು ಬ್ರಾಹ್ಮಣರಲ್ಲಿ ದೈವಗಳ ಬಗ್ಗೆಯೇ ಮೇಲುಕೀಳಿನ ಬೋಧನೆಯಿರುತ್ತದೆ ಎನ್ನುವುದನ್ನು ತಾವು ತಿಳಿದಿಲ್ಲ ಎಂದು ಭಾವಿಸುತ್ತೇನೆ. ಇಂದಿಗೂ ಅವರಿಗೆ ಮಾರಮ್ಮ, ಚೌಡಮ್ಮ, ಅಣ್ಣಮ್ಮ ಮೊದಲಾದವು ಕ್ಷುದ್ರದೇವತೆಗಳೇ! ಇಂಥದ್ದೊಂದು ಕಲಿಸುವಿಕೆ ಮಠಗಳಲ್ಲಿರುವುದನ್ನು ಅನುಭವಿಸಿ ಕಂಡಿದ್ದೇನೆ. ಹಾಗಾಗಿ ಖಚಿತವಾಗಿ ಹೇಳಬಲ್ಲೆ. ಪಂಚಬೇಧ ತಾರತಮ್ಯ ಬೋಧಿಸುವ ಪರಂಪರೆಯೊಂದು ಬೋಧಿಸುವುದೇ ಇಂಥಾ ಹುಟ್ಟಿನಿಂದ ಒದಗುವ ಮೇಲುಕೀಳುಗಳನ್ನು… ಹಾಗಾಗಿ ಮೇಲುಜಾತಿಯವರು ಕೆಳಜಾತಿಯವರ ಗುಡಿಗಳಿಗೆ ಅವುಕೀಳು ಎಂದು ಕಾಲಿಡುವುದಿಲ್ಲ ಮತ್ತು ತಮ್ಮ ಗುಡಿಯೊಳಗೆ ಇತರೆ ಜಾತಿಗಳವರನ್ನು ಅವರು ಕೀಳು ಎಂದು ಸೇರಿಸುವುದಿಲ್ಲ. ಇದು ನಾ ಕಂಡುಕೊಂಡಿರುವುದು! ನೀವು ಪ್ಲೇಗಮ್ಮನದೋ ಮತ್ತೊಂದೋ ಉದಾಹರಣೆ ನೀಡುವ ಮೂಲಕ ಇದನ್ನು ಇಲ್ಲವೆಂದು ಸಾಧಿಸಲು ಹೊರಡುವುದು ಈ ನಿಟ್ಟಿನಲ್ಲಿ ಸರಿಯಾದುದಲ್ಲ. ಯಾಕೆಂದರೆ ಇನ್ನೊಂದರ ಉದಾಹರಣೆಗಳೂ ಬೇಕಾದಷ್ಟಿವೆ.

    ಸಮಾಜವಿಜ್ಞಾನಿಗಳ ಸಂಶೋಧನೆ, ಹೀಗೊಂದು ನಿಶ್ಚಿತವಾದ ಸಾಂಸ್ಥಿಕ ಸ್ವರೂಪವಿಲ್ಲದೆಯೂ “ಜಾತಿವ್ಯವಸ್ಥೆ” ಹೇಗೆ ಕೆಲಸ ಮಾಡುತ್ತಿವೆ ಎನ್ನುವುದನ್ನು ಕಂಡುಕೊಳ್ಳುವುದರತ್ತ ನಡೆಯಬೇಕು ಎಂದು ನನಗನ್ನಿಸುತ್ತಿದೆ.

    Like

  10. anandgj
    ಮೇ 27, 2013 ರಲ್ಲಿ 10:40 ಅಪರಾಹ್ನ

    ಸಯಗಳನ್ನು ಹುಳುಗಳು => ಸಸ್ಯಗಳನ್ನು ಹುಳುಗಳ್ ಉಎಂದು ಓದಿಕೊಳ್ಳಿ.
    ಸರ್ವಜ್ಞನ ವಚನದ ಬಗ್ಗೆ ನಿಮ್ಮ ಅನಿಸಿಕೆಗಾಗಿ ಕಾದಿದ್ದೇನೆ…

    Like

    • sharu
      ಫೆಬ್ರವರಿ 6, 2014 ರಲ್ಲಿ 10:16 ಅಪರಾಹ್ನ

      [[ಇನ್ನು ಬ್ರಾಹ್ಮಣರಲ್ಲಿ ದೈವಗಳ ಬಗ್ಗೆಯೇ ಮೇಲುಕೀಳಿನ ಬೋಧನೆಯಿರುತ್ತದೆ ಎನ್ನುವುದನ್ನು ತಾವು ತಿಳಿದಿಲ್ಲ ಎಂದು ಭಾವಿಸುತ್ತೇನೆ. ಇಂದಿಗೂ ಅವರಿಗೆ ಮಾರಮ್ಮ, ಚೌಡಮ್ಮ, ಅಣ್ಣಮ್ಮ ಮೊದಲಾದವು ಕ್ಷುದ್ರದೇವತೆಗಳೇ! ಇಂಥದ್ದೊಂದು ಕಲಿಸುವಿಕೆ ಮಠಗಳಲ್ಲಿರುವುದನ್ನು ಅನುಭವಿಸಿ ಕಂಡಿದ್ದೇನೆ. ]] ನಿಮ್ಮೂರಿನಲ್ಲಿ ಹೀಗಿದೆ ಏನೋ ನನಗೆ ಗೊತ್ತಿಲ್ಲ. ಆದರೆ ನಮ್ಮೂರಿನಲ್ಲಿ ಮೊಹರಮ್ ಹಬ್ಬದಂದು ಡೋಲಿ ಬಂದಾಗ ನಮ್ಮ ಮನೆಯವರು ಬೆಲ್ಲ ಊದು ನೈವೇದ್ಯ ತೋರಿಸುವದನ್ನು ನಾನು ನೋಡಿದ್ದೇನೆ. ಅಷ್ಟೇ ಅಲ್ಲ ಬೆಲ್ಲವನ್ನೂ ನೈವೇದ್ಯ ತೋರಿಸಲು ನಾನೂ ಸಹ ಹೋಗಿರುವೆ. ಇನ್ನು ಮಾರಮ್ಮನಿಗೆ ಆಷಾಢ ಮಾಸದಲ್ಲಿ ನೀರು ಹಾಕಿ ಮೊಸರನ್ನ ನೈವೇದ್ಯ ತೋರಿಸಿಕೊಂಡು ನಾನು ಈಗಲೂ ಬರುತ್ತೇನೆ. ಶ್ರದ್ಧೆಯಿಂದಲ್ಲದಿದ್ದರೂ ಹಿರಿಯರು ಬೈಯ್ಯುವರೆಂಬ ಕಾರಣಕ್ಕೆ ಈಗಲೂ ಹೋಗುತ್ತೇನೆ. ಇನ್ನು ಎಳ್ಳ ಅಮಾವಾಸ್ಯೆಯಂದು ಬಿಜಾಪೂರ ತಾಲೂಕಿನ ರೈತರೆಲ್ಲ ಚರಗ(ಮೊಸರನ್ನ, ಚಿತ್ರಾನ್ನ, ಸಜ್ಜೆ ರೊಟ್ಟಿ, ಸೇಂಗಾ ಹಿಂಡಿ, ಗುರೆಳ್ಳ್ ಹಿಂಡಿ ಎಣ್ಣಿಗಾಯಿ ಪಲ್ಯ ಕಟ್ಟಿಕೊಂಡು ಭೂಮಿತಾಯಿ ಬಸಿರಾಗಿರುತ್ತಾಳೆ ಅವಳ ಬಯಕೆ ಬುತ್ತಿ ಇದು ಎಂದು ಮೇಲಿನ ಪದಾರ್ಥಗಳನ್ನು ಹೊಲದಲ್ಲಿ ಚಲ್ಲಾಡುವದು) ಚಲ್ಲಲು ನಾವು ಹೋಗುವಾಗ ಹಾದಿಯಲ್ಲಿ ಈರಣ್ಣನೆಂಬ ದೇವರಿದ್ದಾನೆ. (ಇವನು ಬಹುಶಃ ಕುರುಬರ ದೇವರಿರಬಹುದು.) ಅವನಿಗೆ ನೈವೇದ್ಯ ಸಲ್ಲಿಸಿಯೇ ನಮ್ಮ ಹೊಲಗಳಿಗೆ ಹೋಗುತ್ತೇವೆ. ಹಾಗೆ ಜಟ್ಟಿಂಗರಾಯನೆಂಬ ಕುರುಬರ ದೇವರಿದ್ದಾನೆ. ಇವನಿಗೆ ಜಾತ್ರೆಯಂದು ನಮ್ಮ ಮನೆಯಿಂದ ಅಡಿಗೆ ಮಾಡಿ ನೈವೇದ್ಯ ಕಳಿಸಲಾಗುತ್ತದೆ. ನಿಮ್ಮ ಮಾರಮ್ಮನ ರೀತಿಯಲ್ಲೇ ನಮ್ಮಲ್ಲಿ ದ್ಯಾಮವ್ವ ದೇವಿ ಇದ್ದಾಳೆ. ಇವಳಿಗೂ ಯಾವುದೇ ಶುಭ ಕಾರ್ಯಗಳಾದಾಗ, ಜಾತ್ರೆಯಲ್ಲಿ ನಮ್ಮಮನೆಯಿಂದ ಸೀರೆ , ನೈವೇದ್ಯಗಳ ಅರ್ಪಣೆ ಆಗುತ್ತದೆ. ಇನ್ನು ಬಿಜಾಪೂರದ ಶ್ರೀ ಸಿದ್ಧರಾಮೇಶ್ವರನ ಪ್ರಸಿದ್ಧ ಜಾತ್ರೆಯ ಹೆಸರು ನೀವು ಕೇಳಿರಬಹುದು. ಅವನು 12 ನೇ ಶತಮಾನದ ಶರಣ ಮೂಲ ಸೋಲಾಪೂರದವನು. ಇವನ ಜಾತ್ರೆಯಲ್ಲಿ ಸಹ ನಮ್ಮ ಮನೆಯಿಂದ ಹಣ್ಣು ಕಾಯಿಗಳ ಅರ್ಪಣೆ ತಪ್ಪದೇ ನಡೆಯುತ್ತದೆ. ಇನ್ನು ನಮ್ಮ ಅತ್ತೆ ಮನೆಯ ಕುಲದೈವ ಬೇಡ ಜಾತಿಯ ಅಮೋಜೆವ್ವನಂತೆ . ನಿಷ್ಟೆಯಿಂದ ಆಕೆಗೂ ಒಂದು ನೈವೇದ್ಯದ ಎಲೆ ನಮ್ಮ ಮನೆಯಲ್ಲಿ ಎಲ್ಲ ಹಬ್ಬ ಹರಿದಿನಗಳಲ್ಲಿ ಇದ್ದೇ ಇರುತ್ತದೆ. ಅಷ್ಟೇ ಅಲ್ಲ ಗಂಡು ಮಕ್ಕಳ ಮದುವೆ ಆದಾಗ ಅವಳ ಪೂಜೆಯನ್ನು ವಿಷೇಶ ರೀತಿಯಲ್ಲಿ ನೆರವೇರಿಸುತ್ತಾರೆ. ಇಷ್ಟೆಲ್ಲ ಏಕೆ ಹೇಳಿದೆನೆಂದರೆ ಬ್ರಾಹ್ಮಣರು ಬ್ರಾಹ್ಮಣೇತರರ ದೇವತೆಗಳನ್ನು ಆರಾಧಿಸುವದಿಲ್ಲ ಕೀಳಾಗಿ ಕಾಣುತ್ತಾರೆ. ಮಠಗಳಲ್ಲಿ ಹಾಗೆ ಬೋದಿಸುತ್ತಾರೆ. ಎಂದು ನೀವು ಹೇಳಿದ್ದರಿಂದ ನಾನು ಇಷ್ಟೆಲ್ಲ ಹೇಳಿದೆ. ಇದು ಕೇವಲ ನಮ್ಮ ಮನೆಯ ಪದ್ಧತಿ ಎಂದು ಭಾವಿಸಬೇಡಿ. ಎಲ್ಲರ ಮನೆಯಲ್ಲೂ ಈ ಆರಾಧನೆಗಳಿವೆ.

      Like

  11. anandgj
    ಮೇ 29, 2013 ರಲ್ಲಿ 6:39 ಅಪರಾಹ್ನ

    ಅಂತರ್ಜಾಲದಲ್ಲಿ “ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧವಾಗಿ ಮಾತಾಡುತ್ತದೆಯೇ? ವಚನಗಳ ಆಧುನಿಕ ಅಧ್ಯಯನಗಳ ಒಂದು ಮರುಪರಿಶೀಲನೆ: ಡಂಕಿನ್ ಜಳಕಿ ಎಸ್.ಎನ್ ಬಾಲಗಂಗಾಧರ” ಎನ್ನುವ ಪ್ರಬಂಧ ಓದಿದೆ. ಓದಿ ನನಗನ್ನಿಸಿದ್ದನ್ನು ನಮ್ಮ ಚರ್ಚೆಗೆ ಪೂರಕವೆಂದು ಬರೆದಿದ್ದೇನೆ. ನನ್ನ ಗ್ರಹಿಕೆಯಲ್ಲಿ ತಪ್ಪಿದ್ದರೆ ತಿಳಿಸಿಕೊಡಿ:

    ಇದರಲ್ಲಿ ಸಂಶೋಧಕರು “ವಚನಗಳನ್ನು ಹನ್ನೆರಡನೇ ಶತಮಾನದ ಒಂದು ಆಂದೋಲನದ ಭಾಗವೆಂದು ನೋಡುವುದು ವಾಡಿಕೆಯಾಗಿದೆ” ಎನ್ನುತ್ತಾರೆ. ಮುಂದುವರೆಯುತ್ತಾ ‘ಜಾತಿವಿರೋಧಿ ವಿಚಾರವು ವಚನ ಚಳವಳಿಯ ಮತ್ತು ವಚನಗಳ ಮೂಲಆಶಯ ಎಂಬುದು ಎದುರಾಳಿಗಳ ವಾದ” ಎನ್ನುತ್ತಾರೆ. ಇಲ್ಲಿ ವಚನಗಳು ಮತ್ತು ವಚನ ಚಳಗಳಿಗಳು ಎಂದು ಬೇರೆಯಾಗಿ ಗುರುತಿಸಿದ್ದಾರೆ. ಇವರು ತಮ್ಮ ಊಹಾಸಿದ್ಧಾಂತದಲ್ಲಿ, ವಚನ ಚಳವಳಿಯು ಜಾತಿವಿರುದ್ಧವಾಗಿದ್ದರೆ ಹೆಚ್ಚಿನ ವಚನಗಳು ಜಾತಿ ವಿರೋಧಿಯಾಗಿರಲೇಬೇಕಿತ್ತು ಎನ್ನುವ ಮಾತನ್ನು ಹೇಳುತ್ತಾರೆ. ಹಾಗಿಲ್ಲದಿರುವ ಪಕ್ಷದಲ್ಲಿ ವಚನ ಚಳವಳಿ ಜಾತಿವಿರೋಧಿಯಲ್ಲಾ ಎಂಬುದಾಗಿ ಅರ್ಥವೆಂದೂ ತಾವು ಅದನ್ನೇ ಸಾಧಿಸಲು ಮುಂದಾಗಿದ್ದೇವೆಂದೂ ಹೇಳುತ್ತಾರೆ.

    ಅಂದರೆ ಹನ್ನೆರಡನೇ ಶತಮಾನದಲ್ಲಿ ಒಂದು ಆಂದೋಲನ ನಡೆಯಿತೆಂಬುದನ್ನು ಒಪ್ಪುತ್ತಾರೆ. ಅದುವರೆವಿಗೆ ಕನ್ನಡದ ಸಾಮಾನ್ಯ ಜನರ ಕೈಗೆ ಎಟುಕಿರದ ಭಕ್ತಿ ಸಾಹಿತ್ಯ ರಚನೆಯು ಹೆಚ್ಚುಜನರಿಂದ (ವಚನಕಾರರಿಂದ) ಒಟ್ಟೊಟ್ಟಿಗೆ ಆಯಿತೆಂಬುದನ್ನೇ ಇವರು ಆಂದೋಲನ ಎನ್ನುತ್ತಿದ್ದಾರೆಯೇ? ಹಾಗೆ ಆದದ್ದನ್ನು ಒಂದು ಆಂದೋಲನವೆನ್ನುವುದಾದರೆ ಆ ಆಂದೋಲನದ ಸ್ವರೂಪವೆಂಥದ್ದು? ಅದು ಏಕಾಗಿ ನಡೆಯಿತು? ಆಗ ಏನೆಲ್ಲಾ ನಡೆಯಿತು? ಎಂಬುದು ಮಹತ್ವದ್ದಾಗುತ್ತದೆ. ಮೊದಲಿಗೆ “ವಚನ ಚಳವಳಿ”ಯನ್ನು ಒಂದು ಚಳವಳಿಯೆಂದು ಯಾವ ಆಧಾರದ ಮೇಲೆ ತೀರ್ಮಾನಿಸಬಹುದು? ಚಳವಳಿಯೆಂದರೆ ಏನು? ಒಂದು ವಿಷಯದ ಹಿಂದೆ ಅಂದಿನವರೆಗೂ ಇದ್ದ ನಂಬಿಕೆ ಆಚರಣೆಗಳಿಗೆ ವಿರುದ್ಧವಾಗಿ, ಒಂದು ಕಾಲಘಟ್ಟದಲ್ಲಿ ಸಮಾಜದ ಒಂದು ವರ್ಗವು ಉದ್ದೇಶಪೂರ್ವಕವಾಗಿ ಸಾಗುವುದನ್ನು, ದನಿ ಎತ್ತುವುದನ್ನು, ಬದಲಾವಣೆಗೆ ತೆರೆದುಕೊಳ್ಳುವುದನ್ನು “ಚಳವಳಿ”ಎನ್ನಬಹುದು. ಹಾಗೆ ನೋಡುವ ಮೂಲಕ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ್ದನ್ನು ಚಳವಳಿ ಎಂದು ಗುರುತಿಸಬಹುದು. ಈ ಚಳವಳಿ ಅಧ್ಯಾತ್ಮದ ಚಳವಳಿಯೋ ಜಾತಿ ವಿನಾಶದ ಚಳವಳಿಯೋ ಎಂಬುದನ್ನು ತೀರ್ಮಾನಿಸುವುದು ಹೇಗೆ ಎಂಬುದು ಪ್ರಶ್ನೆ.

    ಮೇಲೆ ತಿಳಿಸಿದ ಪ್ರಬಂಧದಲ್ಲಿ ಈಗ ಸಿಕ್ಕಿರುವ ವಚನಗಳಲ್ಲಿ ಜಾತಿಸೂಚಕ ವಚನಗಳ ಸಂಖ್ಯೆ, ಜಾತಿವಿನಾಶದ ಬಗ್ಗೆ ಬರೆಯಲಾಗಿರುವ ಪದಗಳ ಸಂಖ್ಯೆಯನ್ನು ಲೆಕ್ಕಹಾಕಿ, ಸದರಿ ಲೆಕ್ಕದ ಪ್ರಕಾರ ವಚನ ಸಾಹಿತ್ಯವು ಜಾತಿವಿನಾಶದ ಸಾಹಿತ್ಯವಲ್ಲಾ ಎಂದಿದ್ದಾರೆ. ಇದನ್ನು ನಾವು ವಚನ ಸಾಹಿತ್ಯವು ಜಾತಿವಿನಾಶದ ಸಾಹಿತ್ಯ ಮಾತ್ರವೇ ಅಲ್ಲಾ ಎನ್ನಬಹುದು! ಆದರೆ ಈ ಎಣಿಕೆಯ ಅಳತೆಗೋಲನ್ನು ಬಳಸಿ ಇತಿಹಾಸಕ್ಕೆ ಸಂಬಂಧಿಸಿದ ಬರಹಗಳಲ್ಲಿ ಎಷ್ಟುಬಾರಿ “ಇತಿಹಾಸ” ಎಂದು ಬರೆಯಲಾಗಿದೆ ಎನ್ನುವ ಲೆಕ್ಕದ ಮೇಲೆ ಅದು ಇತಿಹಾಸ ಸಾಹಿತ್ಯವೋ ಅಲ್ಲವೋ ಹೇಳಬೇಕಾಗಬಹುದೇ? ಗಣಿತದ ಪುಸ್ತಕಗಳಲ್ಲಿ ಎಷ್ಟು ಬಾರಿ ಗಣಿತ, ಗಣಿತ ಎಂದು ಬರೆಯಲಾಗಿದೆ ಎನ್ನುವುದನ್ನು ಎಣಿಸುವ ಮೂಲಕ ಅದು ಗಣಿತದ ಪುಸ್ತಕವೇ ಅಲ್ಲವೇ ಎನ್ನುವುದನ್ನು ತೀರ್ಮಾನ ಮಾಡಬೇಕೇ?

    ಇಪ್ಪತ್ತನೇ ಶತಮಾನದಲ್ಲಿ ದೇಗುಲಗಳ ಒಳಗೆ ಕೆಲಜಾತಿಯ ಜನರಿಗೆ ಪ್ರವೇಶವಿಲ್ಲಾ ಎನ್ನುವುದನ್ನು ಹೋಗಲಾಡಿಸಲು ಹರಿಜನರ ದೇಗುಲ ಪ್ರವೇಶದ ಒಂದು ಚಳವಳಿಯನ್ನು ಹಮ್ಮಿಕೊಂಡಿದ್ದರು. ಈ ಚಳವಳಿಯನ್ನು ಇತಿಹಾಸ ಹೇಗೆ ದಾಖಲಿಸುತ್ತದೆ? ಇದನ್ನು ದೇವರ ದರ್ಶನಕ್ಕೆ ಒಂದಷ್ಟು ಮಂದಿ ದೇವಸ್ಥಾನಕ್ಕೆ ಹೋದರು ಎನ್ನುವುದಾಗಿ ನೋಡಬೇಕೋ? ಅಥವಾ ಉಡುಪಿಯಲ್ಲಿ ಚೌಕಿಊಟದ ಪಂಕ್ತಿಗೆ ಒಂದಿಷ್ಟು ಮಂದಿ ಬ್ರಾಹ್ಮಣರಲ್ಲದವರು ಹೋಗಿ ಉಂಡು ಬಂದರೆನ್ನುವುದನ್ನು “ಅವರು ಊಟ ಮಾಡಲು ಚೌಕಿಪಂಕ್ತಿಗೆ ಹೋದರು” ಎಂದು ಪರಿಗಣಿಸಬೇಕೋ? ಇದು ಒಂದು ಕ್ರಿಯೆಯನ್ನು ಮಾತ್ರಾ ಗುರುತಿಸಿ ಅದರ ಹೂರಣವನ್ನು ಕಡೆಗಣಿಸಿದ ಹಾಗಲ್ಲವೇ? ಈ ನಿಟ್ಟಿನಲ್ಲಿ ಯೋಚಿಸಿದಾಗ, ವಚನ ಸಾಹಿತ್ಯದಲ್ಲಿ ಎಷ್ಟು ಕಡೆ ಜಾತಿ ಎಂಬ ಪದ ಬಳಕೆಯಾಗಿದೆ ಎನ್ನುವುದನ್ನು ಲೆಕ್ಕ ಹಾಕಿ ಅದು ಜಾತಿವಿನಾಶದ ಹೋರಾಟವೇ ಅಲ್ಲವೇ ಎಂದು ತೀರ್ಮಾನಿಸುವುದು ಸರಿಯಲ್ಲ ಎನ್ನಿಸುತ್ತದೆ. ವಚನ ಚಳವಳಿಯನ್ನು ಅಧ್ಯಾತ್ಮದ ಚಳವಳಿಯೆಂದೇ ಗುರುತಿಸುವುದಾದರೆ ಅದುವರೆವಿಗೂ ಇರದ ಯಾವ ಬದಲಾವಣೆಗೆ ವಚನ ಚಳವಳಿ ಮುನ್ನುಡಿ ಹಾಡಿತು ಎನ್ನುವುದನ್ನು ನೋಡಬೇಕಾಗುತ್ತದೆ. ಸಾವಿರಾರು ವರ್ಷಗಳಿಂದ ಗುಡಿಯೊಳಗೆ ದೇವನಿದ್ದ, ಗುಡಿಯೊಳಗೆ ಕೆಳಜಾತಿಯವರಿಗೆ ಪ್ರವೇಶವಿರಲಿಲ್ಲ ಎನ್ನುವ ಕಟ್ಟುಪಾಡನ್ನು ಮುರಿದುಹಾಕಲು “ಇಷ್ಟಲಿಂಗವನ್ನು ಅಂಗೈಗೆ ತಂದುಕೊಟ್ಟ ನಡೆ” ಕ್ರಾಂತಿಕಾರಕವಲ್ಲವೇ? ಇದರಿಂದಾಗಿ ಗುಡಿಯೊಳಗಿರಲಿ, ತೇರುಬೀದಿಯೊಳಲೂ ಕಾಲಿಡಲಾಗದ ಮಡಿವಾಳ, ಮಾದಾರ ಜನರ ಕೈಗೆ ಲಿಂಗವನ್ನು ಕೊಟ್ಟದ್ದು ಯಾವುದರ ಸೂಚಕ? ಭಕ್ತಿಯ, ಅಧ್ಯಾತ್ಮದ ಚಳವಳಿಯದ್ದೋ? ಜಾತಿವಿನಾಶದ್ದೋ?

    ಚರ್ಚೆಗಳಲ್ಲಿ ನಾನು ಕಂಡುಕೊಂಡ ಮತ್ತೊಂದು ವಾದ “ವಸಾಹತುಶಾಹಿ ದೃಷ್ಟಿಯಲ್ಲಿ ಭಾರತದ ಸಮಾಜವನ್ನು ನೋಡಿದ್ದರ ಪ್ರಭಾವದಿಂದಾಗಿ ನಮ್ಮ ಸಮಾಜದ ಜಾತಿಯೇರ್ಪಾಟುಗಳು ಅನಿಷ್ಟಗಳಾಗಿ ಕಾಣುತ್ತಿವೆ ಮತ್ತು ಅದೇ ಕಣ್ಣಿಂದ ವಚನ ಚಳವಳಿಯನ್ನೂ ನೋಡಿ ಅದನ್ನೂ ಜಾತಿವಿನಾಶದ್ದು ಎನ್ನಲಾಗುತ್ತಿದೆ” ಎನ್ನುವುದು. ಆದರೆ ಹಿಂದೆ ಜಾತಿಯೇರ್ಪಾಡು ಇರಲಿಲ್ಲವೆಂದಾಗಲೀ, ಅದರಲ್ಲಿ ಕೆಲವೆಡೆ ಶೋಷಣೆ ಇರಲಿಲ್ಲವೆಂದಾಗಲೀ ಹೇಳುವುದು ನಮ್ಮ ಉದ್ದೇಶವಲ್ಲಾ ಎಂಬ ಮಾತೂ ಆ ಬದಿಯಿಂದ ಕೇಳಿಬರುತ್ತಿದೆ. ಒಂದುಕಡೆ ಜಾತಿಯೇರ್ಪಾಡು ಕೀಳು ಎಂದು ಮಾಡಿದ್ದು ವಸಾಹತುಶಾಹಿ ಚಿಂತನೆ ಎನ್ನುವುದೂ ಹಿಂದೆ ಇಂತಹ ತಾರತಮ್ಯ ಇರಲಿಲ್ಲ ಎಂದೇನೂ ನಾವು ಹೇಳುತ್ತಿಲ್ಲಾ ಎನ್ನುವುದೂ ವಿರೋಧಾಭಾಸವಾಗಿ ಕಾಣುತ್ತಿದೆ.

    ನನ್ನಂಥ ಸಾಮಾನ್ಯರಿಗೆ, ಬಸವಣ್ಣನವರ ಕಾಲದಲ್ಲಿ ಸಮಾಜದ ಸ್ವರೂಪ ಹೇಗಿತ್ತು, ಜಾತಿಏರ್ಪಾಡು ಮೇಲುಕೀಳು ಹೇಗಿತ್ತು ಎನ್ನುವುದನ್ನು ಅರಿಯಲು ವಚನ ಚಳವಳಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವೇನಿಲ್ಲ. ವಚನಕಾರರ ಹೆಸರುಗಳನ್ನೇ ನೋಡಿದರೆ ಸಾಕು. ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ದೇವರ ದಾಸಿಮಯ್ಯ, ಗಣೇಶ ಮಸಣಯ್ಯ, ಡೊಹರ ಕಕ್ಕಯ್ಯ, ಭಂಡಾರಿ ಶಾಂತಯ್ಯ, ಬೊಕ್ಕಸದ ಬಸವಣ್ಣ, ಬಾಚಿಕಾಯಕದ ಬಸವಣ್ಣ, ಮಾದರ ಚೆನ್ನಯ್ಯ ಇವು ಕೆಲವು ವಚನಕಾರರ ಹೆಸರುಗಳು. ಹೀಗೆ ಹೆಸರಿಗೆ ಮೊದಲು ಜಾತಿಪಟ್ಟಿ ಅಂಟಿಸುವ ಪ್ರಕ್ರಿಯೆ ಏನನ್ನು ತೋರಿಸುತ್ತದೆ? ಇಡೀ ಸಮಾಜದಲ್ಲಿ ನಿನ್ನ ಗುರುತು ನಿನ್ನ ಜಾತಿಯಿಂದಲೇ ಎನ್ನುವುದಲ್ಲವೇ? ಇದು ಕೇವಲ ಕಸುಬನ್ನು ಆಧರಿಸಿ ಇಟ್ಟುಕೊಂಡಿರುವ ಹೆಸರು ಎನ್ನುವುದಾದರೆ ಕಸುಬಿನಿಂದ ಕುಲವನ್ನು ಗುರುತಿಸುವ ಏರ್ಪಾಟು ಎಷ್ಟು ಸರಿ? ಹಡಪದ, ಬಡಿಗೇರ, ಕುಂಬಾರ, ಕಮ್ಮಾರ, ಗೌಡ, ಕುಲಕರ್ಣಿ, ಜೊಯ್ಸ ಮೊದಲಾದ ಗುರುತುಗಳು ಜನಗಳಿಗೆ ಸಮಾಜದಲ್ಲಿ ಸಿಗಬೇಕಾದ ಗೌರವಗಳನ್ನೂ, ಅನುಕೂಲತೆಗಳನ್ನೂ, ಟ್ರೀಟ್‌ಮೆಂಟುಗಳನ್ನೂ ತೀರ್ಮಾನಿಸುತ್ತಿರಲಿಲ್ಲವೇ? “ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ, ಜಾತಂಗೆ ಜಾತನೆನಲೇಕೆ? ಅರುವಿಡಿದಾತನೇ ಸರ್ವಜ್ಞ” ಎಂದು ಸರ್ವಜ್ಞರು ಹೇಳಿದ್ದೇಕೆ? ಇಲ್ಲಿ ಜಾತಿಹೀನ ಎಂದರೆ ಅರ್ಥವೇನು? ಅಂದಿನ ಸಮಾಜದಲ್ಲೇ ಈ ಮೇಲುಕೀಳು ಇದ್ದಿತೆಂಬುದಕ್ಕೆ ಇದು ಸಾಕ್ಷಿಯಾಗಲಾರದೇ? ಇಷ್ಟಿರುವಾಗ “ಹಿಂದೆ ಜಾತಿಯೇರ್ಪಾಡೇ ಇರಲಿಲ್ಲ, ಇದ್ದರೂ ಅಲ್ಲಿ ವೈಮನಸ್ಯವಿರಲಿಲ್ಲ, ಅಲ್ಲಿ ತುಳಿತವಿರಲಿಲ್ಲ, ಸೌಹಾರ್ದತೆಯಿತ್ತು” ಎನ್ನುವುದು ಅಮಾನುಷ ಎನ್ನಿಸದೇ? ಹಿಂದೆಲ್ಲಾ ಸೌಹಾರ್ದತೆಯಿರದಿದ್ದರೆ ಇಷ್ಟೊಂದು ದೀರ್ಘಕಾಲ ಜಾತಿವ್ಯವಸ್ಥೆ ಏಕಿರುತ್ತಿತ್ತು ಎನ್ನಿಸಬಹುದು. ತುಳಿತಕ್ಕೊಳಗಾದವನಿಗೆ ದನಿಯೆತ್ತಲೇ ಅವಕಾಶವಿಲ್ಲದಿದ್ದಾಗ ಪ್ರತಿಭಟನೆಯ ಸೊಲ್ಲು ಎಲ್ಲಿರುತ್ತದೆ? ಹೀಗೆ ತುಳಿತಕ್ಕೊಳಗಾದವರಲ್ಲಿ ಎಚ್ಚರ ಮೂಡಿಸಿ ಅದು ತುಳಿತವೆಂದು ತಿಳಿಸಿಕೊಡುವುದು ವಸಾಹತು ಶಾಹಿ ದೃಷ್ಟಿಕೋನವಾದರೇನು? ಯಾವುದಾದರೇನು? ಎನ್ನಿಸದೇ!

    Like

  12. ಮೇ 30, 2013 ರಲ್ಲಿ 4:55 ಅಪರಾಹ್ನ

    ಆನಂದ್ ರವರೆ

    ಪುರುಷ ಸೂಕ್ತದ ನಿಯಮಗಳೇ ಜಾತಿ ತರತಮಗಳಾದವು ಎಂದು ಹೇಳಲು ಸಾಧ್ಯವೆ? ಪುರುಷಸೂಕ್ತ ಒಂದು ಸಾಮಾಜಿಕ ಕಾನೂನಿನ ಅಥವಾ ಧಾರ್ಮಿಕ ಗ್ರಂಥವೆಂದು ಪರಿಗಣಿಸದಿದ್ದರೆ ಅದು ಸಮಾಜದ ಕುರಿತು ಹೇಳಿದೆ ಎಂಬ ವಾದವನ್ನು ಮಾಡಲು ಸಾಧ್ಯವಿಲ್ಲ. ಆದರೆ ಭಾರತದಲ್ಲಿ ಧರ್ಮಗ್ರಂಥಗಳ ಆಧಾರದ ಮೇಲೆ ಜನರು ತಮ್ಮ ಬದುಕನ್ನು ನಡೆಸುತ್ತಿದ್ದಾರೆ ಎಂಬುದನ್ನು ಯಾರೂ ಸಹ ಸಾಧಿಸಿತೋರಿಸಿಲ್ಲ. ಹಾಗೆ ನೋಡಿದರೆ ಇರುವರೆಗೂ ಗ್ರಾಂಥಿಕ ಜೀವನ ಯಾರ ಅನುಭವ ಎಂದೂ ಸಹ ತಿಳಿದಿಲ್ಲ. ಉದಾಹರಣೆಗೆ ಬೈಬಲ್ ಆಧರಿಸಿ ಕ್ರಿಶ್ಚಿಯಾನಿಟಿ ಇರುವಂತೆ ಭಾರತೀಯ ಸಮುದಾಯಗಳು ಯಾವುದಾದರೂ ಗ್ರಂಥದ ಆಧಾರದ ಮೇಲೆ ಬದುಕುತ್ತಿವೆಯೆ ಎಂದು ನೋಡಿದರೆ ಅಲ್ಲೂ ಸಹ ನಿರಾಶೆಯಾದ ಉತ್ತರ ದೊರಕುತ್ತದೆ. ಇಂತಹ ಸ್ಥಿತಿಯಲ್ಲಿ ಪುರುಷಸೂಕ್ತದಲ್ಲಿ ಹೇಳಿರುವುದು ಸೂಕ್ತವೇ ಎಂಬ ಪ್ರಶ್ನೆ ಹಾಗೆಯೇ ಉಳಿದುಕೊಳ್ಳುತ್ತದೆ. ಮತ್ತು ಏಕೆ ಇಂತಹ ಅವಾಸ್ತವಿಕ ವಿಚಾರಗಳಿಗೆ ಜೋತುಬೀಳುತ್ತೇವೆ ಎಂಬುದು ಆಸಕ್ತಿದಾಯಕವಾದ ಪ್ರಶ್ನೆಯಾಗಿದೆ. ಪುರುಷಸೂಕ್ತ ಎಲ್ಲಾ ಹಂತದಲ್ಲೂ ಒಂದು ಅವಾಸ್ತವಿಕವಾದ ಗ್ರಂಥ, ಬೈಯಾಲಾಜಿಕಲ್, ಎಂಪಿರಿಕಲ್ ಮತ್ಯಾವುದೇ ಆಯಾಮದಿಂದ ನೋಡಿದರೂ ಪುರುಷಸೂಕ್ತ ಹೇಳುವ ವಿಧಾನದಲ್ಲಿ ಮನುಷ್ಯರು ಸಹಜವಾಗಿ ಜನ್ಮತಳೆಯಲು ಸಾಧ್ಯವೇ ಇಲ್ಲ. ಇಂತಹ ಅಸಾಧ್ಯವಾದ ವಾದವನ್ನು ಮಾಡುವ ಆ ಗ್ರಂಥವನ್ನು ಇಟ್ಟುಕೊಂಡು ಅದೇ ವಾಸ್ತವ ಎಂದು ವಾದಿಸುವಲ್ಲಿ ಯಾವ ಹುರುಳಿದೆ?

    ವರ್ಣದ ವಿಷಯಕ್ಕೆ ಬಂದರೆ ಇದುವರೆಗೂ ಅನೇಕ ಸಮಾಜಶಾಸ್ತ್ರಜ್ಞರುಗಳೇ ಇಲ್ಲಿರುವ ಜಾತಿಗಳನ್ನು ವರ್ಣಕ್ಕನುಗುಣವಾಗಿ ಜೋಡಿಸಲು ಸಾಧ್ಯವಿಲ್ಲ ಎಂದು ಎಂಪಿರಿಕಲ್ ಆಗಿ ಮತ್ತು ಸೈದ್ಧಾಂತಿಕವಾಗಿ ಸಾಬೀತು ಮಾಡಿದ್ದಾರೆ, ಹಾಗಾಗಿ ವರ್ಣಕ್ಕೂ ಜಾತಿಗೂ ಯಾವ ರೀತಿಯ ಸಂಬಂಧವಿದೆ ಎಂಬುದು ಇನ್ನೂ ಬಗೆಹರಿಯದ ವಿಷಯವಾಗಿದೆ. ಇದುವರೆಗೂ ನಮ್ಮ ಕಾಮನ್ ಸೆನ್ಸ್ ಮೂಲಕ ಹೇಳುತ್ತಿರುವ ಅವುಗಳ ನಡುವಿನ ಸಂಬಂಧ ಇದೆ ಎಂಬುದು ಇದುವರೆಗೂ ಸಾಬೀತು ಆಗಿರದ ಮತ್ತು ಸಾಬೀತು ಮಾಡಬೇಕಾದ ವಿಷಯವಾಗಿದೆ.

    ಹುಟ್ಟಿನ ಕಾರಣಕ್ಕೆ ಮೇಲು-ಕೀಳು ಇರುವುದರಿಂದ ಮತ್ತು ಅದು ಜಾತಿಯ ಕಾರಣಕ್ಕೆ ಇರುವುದರಿಂದ ಅದನ್ನು ಜಾತಿವ್ಯವಸ್ಥೆ ಎನ್ನುವಲ್ಲಿ ತೊಂದರೆಗಳಿವೆ. ಅಲ್ಲಿ ಮೇಲು-ಕೀಳು ಇದೆ ಎಂಬುದು ನಿಜವಾದರೂ ಮತ್ತು ಅದು ಜಾತಿಯ ಕಾರಣಕ್ಕೆ ಆಗಿದ್ದರೂ ಕೂಡ ಅದೊಂದು ವ್ಯವಸ್ಥೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ: ಒಂದು ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ನೌಕರರ ನಡುವೆ ಶ್ರೇಣೀಕರಣ ವಿರುತ್ತದೆ, ಅಲ್ಲಿ ಅದನ್ನು ನಿರ್ಧರಿಸುವ ಒಂದು ವ್ಯವಸ್ಥೆಯಾಗಿ ಆ ಶಿಕ್ಷಣ ಸಂಸ್ಥೆ ಇರುತ್ತದೆ. ಅಂದರೆ ನೌಕರರ ನಡುವೆ ನಿರ್ದಿಷ್ಟವಾಗಿ ಶ್ರೇಣೀಕರಣಕ್ಕೆ ಕಾರಣವೆಂದರೆ ಶಿಕ್ಷಣ ಸಂಸ್ಥೆ ಮತ್ತು ಅದು ಮಾಡಿಕೊಂಡಿರುವ ನೌಕರಶಾಹಿವ್ಯವಸ್ಥೆ ಎಂದು ಖಚಿತವಾಗಿ ತೋರಿಸಬಹುದು. ಇದನ್ನೇ ಜಾತಿಗಳ ಶ್ರೇಣೀಕರಣಕ್ಕೆ ಅನ್ವಯಿಸಿದರೆ, ಒಂದು ಜಾತಿ ಕೆಳಗೆ ಮತ್ತೊಂದು ಜಾತಿ ಮೇಲೆ ಎಂದು ಸಮಾಜದಲ್ಲಿ ಹೇಳುವ ಪರಿ ಇದ್ದರೂ ಸಹ ಅವರ ಶ್ರೇಣೀಕರಣವನ್ನು ನಿರ್ಧರಿಸುವ ಸಂಸ್ಥೆ ಯಾವುದು? ಇಲ್ಲಿ ಅದಕ್ಕೆ ರೆಡಿಮೇಡ್ ಉತ್ತರ ಜಾತಿವ್ಯವಸ್ಥೆ, ಹಾಗಾದರೆ ಶಿಕ್ಷಣ ಸಂಸ್ಥೆಯಂತೆ ಜಾತಿವ್ಯವಸ್ಥೆಯೂ ಸಹ ಕಾರ್ಯನಿರ್ವಹಿಸುತ್ತದೆ ಎಂದಾದರೆ ಅದನ್ನು ಗುರುತಿಸುವುದು ಹೇಗೆ? ಜಾತಿವ್ಯವಸ್ಥೆ ಎಂಬ ಸಂಸ್ಥೆಯನ್ನು ಯಾರು ನಿಯಂತ್ರಿಸುತ್ತಾರೆ? ಅದರ ನೀತಿ ನಿಯಮಗಳನ್ನು ಹುಡುಕುವುದು ಎಲ್ಲಿ? ಮತ್ತು ನೌಕರರ ಶ್ರೇಣೀಕರಣ ಹೆಚ್ಚುಕಡಿಮೆಯಾದರೆ ಅದನ್ನು ನಿಯಂತ್ರಿಸುವಂತೆ ಒಂದೇ ಊರಿನಲ್ಲಿ ಕೇರಿಗೊಂದು ಅಭಿಪ್ರಾಯವಿರುವ ಮೇಲು-ಕೀಳು ಎಂಬುದನ್ನು ಸಾರ್ವತ್ರಿಕಗೊಳಿಸುವ ಸಂಗತಿ ಯಾವುದು?

    ಮೇಲು-ಕೀಳು ಎಂಬುದು ಜಾತಿ ಆಧಾರದ ಮೇಲಿರಲಿ ಅಥವಾ ಇನ್ನಾವುದೋ ಸಂಗತಿಯ ಆಧಾರದ ಮೇಲಿರಲಿ, ಅದರ ಮೂಲಕ ಒಂದು ವ್ಯವಸ್ಥೆ(ಸಿಸ್ಟಂ) ಇದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅಂತಹ ಸಂಗತಿಗಳು ಏಕಿವೆ ಎಂಬುದಕ್ಕೆ ಜಾತಿವ್ಯವಸ್ಥೆ ಇದೆ ಎಂಬ ಸರಳ ಉತ್ತರ ಪರಿಹಾರವಾಗುವುದಿಲ್ಲ.

    ಮತ್ತೂ ಕೆಲವು ಪ್ರಶ್ನೆಗಳು: ಇದುವರೆಗೂ ಜಾತಿಗಳ ಶ್ರೇಣೀಕರಣಕ್ಕೆ ಜಾತಿವ್ಯವಸ್ಥೆಯೇ ನಿರ್ದಿಷ್ಟವಾಗಿ ಕಾರಣೀಭೂತ ಸಂಸ್ಥೆ ಎಂಬುದು ತಿಳಿದ ಮೇಲೆ ಕಳೆದ ೧೦೦ ವರ್ಷಗಳಿಂದ ಅದನ್ನು ಮತ್ತೆ ಮತ್ತೆ ಸಂಶೋಧನೆ ಅಥವಾ ಮರುಪರಿಶೀಲನೆ ಮಾಡುವ ಅಗತ್ಯವಾದರೂ ಸಮಾಜಶಾಸ್ತ್ರಜ್ಞರುಗಳಿಗೆ ಏಕಿತ್ತು? ಸೆಲಸ್ಟೀನ್ ಬೂಗ್ಲೆ ಯಿಂದ ಹಿಡಿದು ಡೀಕ್ಲಾನ್ ಕ್ವಿಗ್ಲೆಯ ವರೆಗೆ ಶ್ರೇಣೀಕರಣದ ಸಮಸ್ಯೆಯನ್ನು ಪುಂಕಾನುಪುಂಕವಾಗಿ ಸಂಶೋಧಿಸುವ ಅಗತ್ಯವಾದರೂ ಏಕಿತ್ತು? ಇಲ್ಲಿರುವುದು ಜಾತಿ ಹಾಗಾಗಿ ಇಲ್ಲಿರುವ ಶ್ರೇಣೀಕರಣಕ್ಕೆ ಜಾತಿವ್ಯವಸ್ಥೆಯೇ ಕಾರಣ ಎಂದು ಆ ಎಲ್ಲಾ ಸಮಾಜಶಾಸ್ತ್ರಜ್ಞರುಗಳು ನಿರ್ಣಯಿಸಿ ತಮ್ಮ ಅಧ್ಯಯನವನ್ನು ಅಲ್ಲಿಗೆ ನಿಲ್ಲಿಸಲಿಲ್ಲವೇಕೆ? ಹಾಗಾಗಿ ಅಷ್ಟು ಸರಳವಾಗಿ ಜಾತಿವ್ಯವಸ್ಥೆ ಇದೆ ಎಂದು ಹೇಳಿಬಿಡುವುದು ಮತ್ತು ೨ ಉದಾಹರಣೆಗಳನ್ನು ತರುವುದು ನಮ್ಮ ಸಮಾಜದ ಕುರಿತು ನೀಡುವ ಅವರಸದ ತೀರ್ಮಾನವಾಗಬಹುದು.

    Like

  13. anandgj
    ಮೇ 30, 2013 ರಲ್ಲಿ 10:29 ಅಪರಾಹ್ನ

    ನಮಸ್ಕಾರ ಸಂತೋಷ್ ಶೆಟ್ಟಿಯವರೇ,

    ಮೊದಲಿಗೆ… ಪುರುಷ ಸೂಕ್ತವೆನ್ನುವುದು ಒಂದು ಗ್ರಂಥವಲ್ಲಾ! ಅದು ಅಪೌರುಷೇಯವೂ, ಸರ್ವಶ್ರೇಷ್ಠವೂ ಆದ ವೇದಗಳಲ್ಲಿನ ಒಂದು ಭಾಗ. ಹಿಂದೂ ಧರ್ಮ ಎಂದು ಇಂದು ಕರೆಯಲಾಗುತ್ತಿರುವ ಧರ್ಮಕ್ಕೆ ಆ ಹೆಸರು ಬಂದದ್ದು ಆಂಗ್ಲರ ಕಾಲದಲ್ಲಿ. ಅದಕ್ಕೂ ಮುನ್ನ ಇದನ್ನು ಸನಾತನ ಧರ್ಮವೆಂದೂ ವೈದಿಕ ಧರ್ಮವೆಂದೂ ಕರೆಯಲಾಗುತ್ತಿತ್ತು. ವೈದಿಕ ಧರ್ಮವೆಂದರೇ ವೇದಗಳನ್ನು ಪ್ರಮಾಣವೆಂದು ಒಪ್ಪಿ ನಡೆಯುವ ಸಮಾಜವೆನ್ನುವ ಅರ್ಥ. ಇಂತಹ ವೇದದಲ್ಲಿ ಪ್ರಮುಖವಾದ ಒಂದು ಋಗ್ವೇದ. ಇದರಲ್ಲಿ ಪುರುಷಸೂಕ್ತವಿದೆ. ಇದು ಸಮಾಜವನ್ನು ವರ್ಣಿಸುತ್ತಿಲ್ಲಾ! ನೀವು ಅಕ್ಷರಶಃ ಅರ್ಥವನ್ನು ಪರಿಗಣಿಸಿ `ಮನುಷ್ಯರು ಹೀಗೆ ಜನಿಸುತ್ತಾರೆನ್ನುವುದು ಅವಾಸ್ತವ ಹಾಗಾಗಿ ಇದು ಪ್ರಮಾಣವಲ್ಲಾ’ ಎನ್ನುವುದು ತಪ್ಪಾಗುತ್ತದೆ. ಪುರುಷಸೂಕ್ತದಲ್ಲಿರುವುದು ಸರ್ವಶಕ್ತನಾದ ಭಗವಂತನ ಆರಾಧನೆ. ಇದರಲ್ಲಿ ಹೊಗಳುವುದು ಸಹಸ್ರ ಶಿರಗಳನ್ನೂ, ಸಹಸ್ರಬಾಹುಗಳನ್ನೂ ಹೊಂದಿರುವ ಭಗವಂತನನ್ನು. ಇಂಥಾ ಭಗವಂತನ ಮುಖದಿಂದ ಬ್ರಾಹ್ಮಣರೂ, ಬಾಹುಗಳಿಂದ ಕ್ಷತ್ರಿಯರೂ, ತೊಡೆಗಳಿಂದ ವೈಶ್ಯರೂ, ಪಾದಗಳಿಂದ ಶೂದ್ರರೂ ಜನಿಸಿದ್ದಾರೆ ಎಂದಿದ್ದಾರೆ. ಹಾಗೇ ಚಂದ್ರಮಾ ಮನಸೋ ಜಾತಃ, ಚಕ್ಷುಃ ಸೂರ್ಯೋ ಅಜಾಯತಾ ಎಂದಿದ್ದಾರೆ. ಅಂದರೆ ಮನಸ್ಸಿನಿಂದ ಚಂದ್ರನೂ ಕಣ್ಣುಗಳಿಂದ ಸೂರ್ಯನೂ ಜನಿಸಿದ್ದಾರೆ ಎಂದು. ಹೀಗೆ ಕಣ್ಣು, ಮನಸ್ಸು, ಮುಖ ಬಾಹುಗಳಿಂದ ಯಾರೂ ಜನಿಸರು ಎನ್ನುವುದು ಎಲ್ಲರೂ ಬಲ್ಲರು. ನೀವು ಈ ವೇದದ ಭಾವವನ್ನು ಗ್ರಹಿಸದೆ ವಸ್ತುವಿನ/ ಮೇಲುಮೇಳಿನ ಪದಗಳ ಅರ್ಥ ಹಿಡಿದು ಪುರುಷಸೂಕ್ತಕ್ಕೆ ಯಾವುದೇ ಮಹತ್ವವಿಲ್ಲ ಎನ್ನಲು ಹೊರಟಿದ್ದೀರಾ! ನಿಮ್ಮ ವಿವರಣೆ ಸರಿಯಾಗಿದೆಯೇ ಒಮ್ಮೆ ಯೋಚಿಸಿರಿ. ಅಷ್ಟು ಸುಲಭವಾಗಿ ಪುರುಷಸೂಕ್ತದ ಈ ಮಾತುಗಳನ್ನು ಹೊಡೆದುಹಾಕಲು ಯಾಕೆ ಆಗುವುದಿಲ್ಲವೆಂದರೆ ಇದು ವೈದಿಕ ಧರ್ಮದ ಪ್ರಮುಖ ಗ್ರಂಥವಾದ ಋಗ್ವೇದದ ಭಾಗ ಮತ್ತು ಶಂಕರಾಚಾರ್ಯರಂತಹ ಮಹನೀಯರು ಎತ್ತಿಹಿಡಿದದ್ದು ಇದೇ ಅಪೌರುಶೇಯವಾದ ವೈದಿಕ ಧರ್ಮವನ್ನೇ!!

    ಸಮಾಜದಲ್ಲಿ ದಿನನಿತ್ಯ ಕಾಣುತ್ತಿರುವ ಮೇಲುಕೀಳು ಜಾತಿ ತಾರತಮ್ಯಗಳನ್ನು ಅವುಗಳಿಗೆ ಒಂದು ಸಂಸ್ಥೆಯಿಲ್ಲ ಎಂದು ನಿರಾಕರಿಸುತ್ತಾ ಶಿಕ್ಷಣ ಸಂಸ್ಥೆ/ ಸಂಸತ್ತಿನಂತಹ ಸ್ಥಾಪಿತ ಸಂಸ್ಥೆಗಳ ಜೊತೆ ಹೋಲಿಸಿ, ಅದರಂತೆ ಇದಕ್ಕೊಬ್ಬ ಅಧ್ಯಕ್ಷನಿಲ್ಲಾ, ಸಭಾಪತಿಯಿಲ್ಲಾ, ಕುಲಪತಿಯಿಲ್ಲಾ ಎಂದು ಸಂಶೋಧನೆ ಮಾಡುವುದು ಯಾಕೋ ತುಂಬಾ ಕ್ರೌರ್ಯ ಎನ್ನಿಸುತ್ತಿದೆ. ನಿಜವಾಗಲೂ ನೀವು ಜಾತಿಯಿದೆ, ಮನುಷ್ಯನ ಯೋಗ್ಯತೆಯಿಂದಲ್ಲದೆ ಅವನ ಹುಟ್ಟಿನಿಂದ ಇದು ತೀರ್ಮಾನವಾಗುತ್ತದೆ, ಜಾತಿಗಳ ನಡುವೆ ಮೇಲುಕೀಳು ಇದೆ, ಜಾತಿಗಳ (ಹುಟ್ಟಿನ) ಕಾರಣದಿಂದಾಗಿಯೇ ಮನುಷ್ಯರಿಗೆ ಸಿಗಬಹುದಾದ ಅವಕಾಶಗಳು, ಮರ್ಯಾದೆಗಳು ತೀರ್ಮಾನವಾಗುತ್ತದೆ, ಜಾತಿಯ ಕಾರಣದಿಂದಲೇ ಶೋಷಣೆಗಳೂ ನಡೆಯುತ್ತವೆ ಎನ್ನುವುದನ್ನೆಲ್ಲಾ ಒಪ್ಪಿದ್ದೀರಾ… ಆದರೆ ಇದನ್ನು ವ್ಯವಸ್ಥೆ ಎನ್ನಲಾಗದು ಎಂದು ಮಾತ್ರಾ ಹೇಳುತ್ತಿದ್ದೀರಾ ಎಂದು ಭಾವಿಸುತ್ತೇನೆ. ಹಾಗಿದ್ದಲ್ಲಿ ವ್ಯವಸ್ಥೆಯೊಂದಕ್ಕೆ ಇಂಥಿಂಥಾ ಲಕ್ಷಣವಿಲ್ಲದಿದ್ದರೆ ಅದನ್ನು ವ್ಯವಸ್ಥೆ ಎನ್ನಲಾಗದು ಎನ್ನುವ ಊಹೆಯನ್ನೇ ನಾವು ಪ್ರಶ್ನೆ ಮಾಡಿಕೊಳ್ಳಬೇಕಲ್ಲವೇ? ನಿಜವಾಗಿಯೂ ಇಂಥದ್ದೊಂದು ಸಾಂಸ್ಥಿಕ ಸ್ವರೂಪವಿಲ್ಲದೆಯೋ ಇದು ಸಾವಿರಾರು ವರ್ಷಗಳಿಂದ ಈ ನಾಡಿನ ಪ್ರಜೆಗಳ ಹಣೆಬರಹವನ್ನು ಬರೆಯುತ್ತಿದೆ ಎನ್ನುವುದು ನಿಜವಾಗಿಯೂ ಸೋಜಿಗದ ವಿಷಯವಲ್ಲವೇ? ಇದು ವ್ಯವಸ್ಥೆಯಲ್ಲದಿದ್ದರೆ ಮತ್ತೇನು ಎಂದು ಕಂಡುಹಿಡಿಯುವುದರಿಂದ ಜನರಿಗೆ ಒಳಿತಾಗುವುದಾದರೆ… ಈ ಏರುಪೇರು ಇಲ್ಲವಾಗುವುದಾದರೆ ಅದನ್ನು ಸ್ವಾಗತಿಸೋಣ.

    ನೀವು ಹೇಳಿರುವ ಹೆಸರುಗಳು ನನಗೆ ತಿಳಿದಿಲ್ಲ. ಅವರ ಸಂಶೋಧನೆಗಳೂ ನನಗೆ ಗೊತ್ತಿಲ್ಲಾ. ಬಹುಶಃ ಅವರೂ ಕೂಡಾ ಇಂಥಾ ಮೇಲೆಕಾಣುವ ವ್ಯವಸ್ಥಿತ ಸ್ವರೂಪವಿಲ್ಲದೆಯೇ ಜಾತಿವ್ಯವಸ್ಥೆ ಹೇಗೆ ಕೆಲಸಮಾಡುತ್ತಿದೆ ಎನ್ನುವುದರ ಹುಡುಕಾಟವನ್ನೇ ನಡೆಸಿರಬಹುದು! ಇದಕ್ಕೊಂದು ಸಾಂಸ್ಥಿಕ ಸ್ವರೂಪವಿಲ್ಲಾ ಹಾಗಾಗಿ ಇದನ್ನು ವ್ಯವಸ್ಥೆ ಎನ್ನಲಾಗದು ಎನ್ನುವುದನ್ನು ಒಪ್ಪಲು ಸಾಧ್ಯವಾಗುತ್ತಿಲ್ಲಾ ಎಂದಷ್ಟೇ ಹೇಳಬಯಸುತ್ತೇನೆ.

    Like

  14. ಮೇ 31, 2013 ರಲ್ಲಿ 1:42 ಅಪರಾಹ್ನ

    ಪ್ರಿಯ ಆನಂದ್ ರವರೆ ನಮಸ್ಕಾರ

    ವೈದಿಕ ಧರ್ಮ ಅಥವಾ ಸನಾತನ ಧರ್ಮ ಎಂದರೇನು? ಅಂದರೆ ವೈದಿಕ ರಿಲಿಜನ್ ಎಂದು ಅದನ್ನು ಸೂಚಿಸುತ್ತಿದ್ದೀರಾ? ಒಂದೊಮ್ಮೆ ಆ ಅರ್ಥದಲ್ಲಿ ಸೂಚಿಸುತ್ತಿದ್ದರೆ ಅದು ತಪ್ಪಾದ ವಿವರಣೆಯಾಗುತ್ತದೆ. ಏಕೆಂದರೆ ವೈದಿಕ ಎಂಬುದು ವೇದಗಳನ್ನು ಸೂಚಿಸುವ ಪರಿಕಲ್ಪನೆಯಾದರೂ ಸಹ ವೇದಗಳನ್ನು ಜನರು ಏಕೆ ಬಳಸುತ್ತಿದ್ದರು ಎಂಬುದನ್ನು ಅರಿತುಕೊಳ್ಳುವುದು ಮುಖ್ಯ ಎಂದೆನಿಸುತ್ತದೆ. ಹೋಮ ಹವನ ಮಾಡಲು ಪೂಜೆ ಪುನಸ್ಕಾರ ಮಾಡಲು ಅವುಗಳಿಂದ ಮಾರ್ಗದರ್ಶನ ಪಡೆದಿರಲೂ ಬಹುದು, ಏಕೆಂದರೆ ಅವುಗಳಲ್ಲಿ ಒಂದೊಂದು ಕಾಂಡವೂ ಅಂತಹ ಸಂಗತಿಗಳನ್ನು ವಿವರಿಸುತ್ತವೆ. ಅಂದರೆ ಹೋಮ-ಹವನಗಳನ್ನು ಹೀಗೆ ಮಾಡಿ ಎಂದು ಸೂಚಿಸುವ ಪಠ್ಯಗಳು ಎಂದು ಇಟ್ಟುಕೊಳ್ಳುವ, ಅದರ ಅರ್ಥ ಅದರಲ್ಲಿರುವ ಹಾಗೆಯೇ ಮಾಡಬೇಕು ಎಂದಲ್ಲ, ಆದರೂ ಅದರ ಮಾರ್ಗದರ್ಶನದಲ್ಲಿ ಮಾಡಬಹುದು. ಮತ್ತೆ ಈ ವೈದಿಕ ಆಚರಣೆ ಮಾಡುತ್ತಿದ್ದವರು ಯಾರು? ಯಾರಿಗೆ ಹೋಮ ಹವನದಂತಹ ಚಟುವಟಿಕೆಗಳು ಅಗತ್ಯವಾಗಿದ್ದವೋ ಅವರು ವೇದಗಳನ್ನು ಪಠಿಸುತ್ತಿದ್ದರು ಎಂದು ಹೇಳಬಹುದು. ಯಜ್ಞ-ಯಾಗಾದಿಗಳಿಗೆ ಸಂಬಂಧವೇ ಇರದ ಸಮುದಾಯಕ್ಕೂ ವೇದಗಳಿಗೂ ಏನು ಸಂಬಂಧ? ಖಂಡಿತವಾಗಿಯೂ ಅವುಗಳನ್ನು ಬ್ರಾಹ್ಮಣರು ಅನುಸರಿಸುತ್ತಿದ್ದರು ಎಂಬುದನ್ನು ಪ್ರಾಯಶಃ ತಾವು ಒಪ್ಪಬಹುದು ಎಂದು ಭಾವಿಸುತ್ತೇನೆ. ಒಂದೊಮ್ಮೆ ಅದು ನಿಜವಾದರೆ ಬ್ರಾಹ್ಮಣೇತರರು ವೇದಗಳನ್ನು ಹಿಡಿದುಕೊಂಡು ಅಲ್ಲಿ ಮಾಡುವಂತದ್ದಾದರೂ ಏನಿದೆ? ಯಾವುದೋ ಒಂದು ಸಮುದಾಯದ ಆಚರಣೆಗಳನ್ನ ಮಾರ್ಗಸೂಚಿ ಪಠ್ಯಗಳನ್ನು ಸಾರ್ವತ್ರಿಕ ಎಂದು ಬಿಂಬಿಸಿದರೆ ಅದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಹಿಂದಿನ ಕಾಲದಲ್ಲಿ ರಥಕಾರರು ಎಂಬ ಸಮುದಾಯವಿತ್ತು. ಅವರು ರಥಗಳನ್ನು ಓಡಿಸುವ ಮತ್ತು ಅವುಗಳನ್ನು ತಯಾರಿಸುವ ಕೆಲಸದಲ್ಲಿ ಕೌಶಲ್ಯವನ್ನು ಪಡೆದಿದ್ದರು. ರಥಗಳನ್ನು ರಚಿಸಲು ಯಾವುದೋ ಒಂದಿಷ್ಟು ಗ್ರಂಥಗಳೂ ಇದ್ದವು ಎಂದಿಟ್ಟುಕೊಳ್ಳುವ. ಅದರ ಮೂಲಕ ಏನು ಹೇಳಬಹುದು? ರಥಕಾರರ ಗ್ರಂಥಗಳನ್ನು ಆಧರಿಸಿ ರಥಕಾರರ ಧರ್ಮ ಒಂದಿತ್ತು ಎಂದು ಹೇಳಲು ಸಾಧ್ಯವೆ? ಅಥವಾ ಅವರ ವೃತ್ತಿ ಹಾಗೂ ಅದಕ್ಕೆ ಸಂಬಂಧಿಸಿದ ಕೆಲವು ಮಾರ್ಗಸೂಚಿ ಗ್ರಂಥಗಳಿದ್ದವು ಎಂದು ಹೇಳುವುದು ಸೂಕ್ತವೆ? ಇಂಥದೇ ಪ್ರಮಾದ ವೈದಿಕ ಗ್ರಂಥಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಆಗಿರುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ ವೇದಗಳು ಇಲ್ಲಿನ ಧರ್ಮಗ್ರಂಥಗಳು ಎಂದು ನಿರ್ಣಯ ಹೊರಡಿಸಿದ್ದು ಭಾರತೀಯರಲ್ಲ, ಬದಲಿಗೆ ಪಾಶ್ಚಾತ್ಯರು. ಅವರು ತಮ್ಮ ಸಮಾಜ ಗ್ರಂಥಗಳ ಆಧಾರದ ಮೇಲೆ ರೂಪುಗೊಂಡಿರುವ ಅನುಭವವನ್ನು ಹೊಂದಿದ್ದರಿಂದ ಭಾರತದಲ್ಲಿಯೂ ಗ್ರಂಥಗಳನ್ನು ಅಂದರೆ ಸಮಾಜಕ್ಕೆ ಬುನಾದಿಯಾಗಿರುವ ಧರ್ಮಗ್ರಂಥಗಳನ್ನು ಹುಡುಕುವ ಪ್ರಯತ್ನ ಮಾಡಿದರು. ಅಲ್ಲಿ ಸಿಕ್ಕ ವೇದಗಳು ರಾಮಾಯಣ ಮಹಾಭಾರತಗಳು ಧರ್ಮಗ್ರಂಥ ಎಂದು ನಿರ್ಣಯಿಸಿಕೊಂಡರು. ಆದರೆ ಆ ಎಲ್ಲಾ ಗ್ರಂಥಗಳ ಸ್ವರೂಪವೇನು? ಮತ್ತು ಅವುಗಳು ಇಲ್ಲಿ ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂಬ ಸಾಂದರ್ಭಿಕತೆಯನ್ನು ಹೊರಗಿಟ್ಟರು. ಇಂದು ಇದನ್ನೆ ನಾವು ಧರ್ಮಗ್ರಂಥಗಳೆಂದು ಪರೀಕ್ಷೆ ನಡೆಸದೆ ಹೇಳಿಕೊಂಡು ಬರುತ್ತಿದ್ದೇವೆ.

    ಜಾತಿವ್ಯವಸ್ಥೆ ಎಂಬ ಸಂಸ್ಥೆಯ ಕುರಿತು ಮಾತನಾಡುವ ಸಂದರ್ಭದಲ್ಲಿ ಸಂಶೋಧನೆಯ ಹೆಸರಿನಲ್ಲಿ ಕ್ರೌರ್ಯ ಎಂದು ಆರೋಪ ಮಾಡಿದ್ದೀರಿ. ಆದರೆ ನಿಮ್ಮ ನೈತಿಕ ನಿಲುವುಗಳು ಏನೇ ಇರಲಿ ಅವು ಇಲ್ಲಿ ಮುಖ್ಯವಲ್ಲ. ಚರ್ಚೆಯ ಆಸಕ್ತಿ ತಾವು ತೋರಿದ್ದರಿಂದ ಅದೇ ಉತ್ಸಾಹದಲ್ಲಿ ನಾವೂ ಸಹ ಚರ್ಚೆ ಮಾಡುತ್ತಿದ್ದೇವೆ. ಯಾವುದನ್ನು ಸಾಬೀತು ಮಾಡದೆ ನಮ್ಮ ಕುರಿತು ಆಗಲೇ ಒಂದು ಜಡ್ಜ್ ಮೆಂಟನ್ನು ನೀಡಿದ್ದೀರಿ, ಅದೂ ಚರ್ಚೆ ಇನ್ನೂ ಯಾವ ಹಂತಕ್ಕೂ ಬರದೆ. ಹೋಗಲಿ ಬಿಡಿ, ಅದೇ ಆರೋಪವನ್ನು ತಮ್ಮ ಮೇಲು ಸುಲಭವಾಗಿ ತಿರುಗಿಸಬಹುದು, ಅಂದರೆ ಟೀಕೆ ಮತ್ತು ಪ್ರಶ್ನೆಯ ಹೆಸರಿನಲ್ಲಿ ತಾವೂ ಅದನ್ನೇ ಮಾಡುತ್ತಿದ್ದೀರಿ ಎಂದು. ಆದರೆ ನಾನು ಅಂತಹ ಆರೋಪವನ್ನು ಮಾಡಲು ಸಿದ್ಧನಿಲ್ಲ. ಏಕೆಂದರೆ ವಾದಕ್ಕೆ ಪ್ರತಿವಾದ ನೀಡುವುದು ಚರ್ಚೆಯ ಲಕ್ಷಣ, ಅದಕ್ಕೆ ನೈತಿಕ ನಿಯಮಗಳನ್ನು ಆರೋಪಿಸುವುದು ಅವಲಕ್ಷಣ ಎಂಬುದು ನನ್ನ ಭಾವನೆ. ಇದನ್ನು ಇಲ್ಲಿಗೆ ಬಿಡುವ.

    ಹೌದು ಒಂದರ್ಥದಲ್ಲಿ ನೀವು ಹೇಳುವಂತೆ ನೀವು ಹೇಳುವ ಎಲ್ಲಾ ಸಂಗತಿಗಳನ್ನು ಒಪ್ಪದಿದ್ದರೂ ಜಾತಿಕಾರಣದಿಂದಲೂ ಶೋಷಣೆಗಳಾಗುತ್ತವೆ ಎಂಬುದನ್ನು ನಾವು ಒಪ್ಪುತ್ತೇವೆ. ನೋಡಿ ಒಂದು ಥಾಟ್ ಎಕ್ಸ್ ಪೆರಿಮೆಂಟ್ (Thought experiment) ಮಾಡುವ, ಅದೆಂದರೆ ನೀವು ಜಾತಿಯಕಾರಣಕ್ಕೆ ಅವಕಾಶ ವಂಚನೆ, ಮರ್ಯಾದೆ ದೊರಕುತ್ತಿಲ್ಲ ಎಂದು ಯಾವ ಸಮುದಾಯಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ವಾದಿಸುತ್ತಿದ್ದೀರೋ, ಅದೇ ಕಲ್ಪನೆಗಳನ್ನು ಆಧುನಿಕ ಕಾಲದಲ್ಲಿ ಉನ್ನತ ಜಾತಿಗಳನ್ನು ಇಟ್ಟುಕೊಂಡು ಮಾಡಬಹುದು. ಅಂದರೆ ಇಂದು ಯಾವುದೋ ಒಂದು ಮೇಲ್ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಅವಕಾಶವಂಚನೆಯಾಗುತ್ತಿದೆ ಎಂದು ವಾದಿಸಬಹುದು. ಆದರೆ ಅದಕ್ಕಿಂತ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ನೀವು ಹೇಳುವ “ನಿಜವಾಗಲೂ ನೀವು ಜಾತಿಯಿದೆ, ಮನುಷ್ಯನ ಯೋಗ್ಯತೆಯಿಂದಲ್ಲದೆ ಅವನ ಹುಟ್ಟಿನಿಂದ ಇದು ತೀರ್ಮಾನವಾಗುತ್ತದೆ, ಜಾತಿಗಳ ನಡುವೆ ಮೇಲುಕೀಳು ಇದೆ, ಜಾತಿಗಳ (ಹುಟ್ಟಿನ) ಕಾರಣದಿಂದಾಗಿಯೇ ಮನುಷ್ಯರಿಗೆ ಸಿಗಬಹುದಾದ ಅವಕಾಶಗಳು, ಮರ್ಯಾದೆಗಳು ತೀರ್ಮಾನವಾಗುತ್ತದೆ”.. ಈ ಸಂಗತಿಗಳನ್ನು ಸ್ವಲ್ಪ ವಿವರಿಸಲು ಸಾಧ್ಯವೆ? ಏಕೆಂದರೆ ಅದು ಮೇಲ್ನೋಟಕ್ಕೆ ಸರಳವಾಗಿ ಇದುವರೆಗೂ ನಾವು ಓದಿರುವ ಪಠ್ಯಗಳು ಹಾಗು ಅವು ನೀಡುವ ೪ ನಿದರ್ಶನಗಳ ಆಧಾರದ ಮೇಲೆ ನಿಜ ಎಂದೇನೋ ಅನಿಸುತ್ತವೆ. ಆದರೆ ಇಡೀ ಸಮಾಜ ಅಂತಹ ಸ್ವರೂಪವನ್ನು ಹೊಂದಿದೆಯೇ ಎಂದು ನಮ್ಮ ನಮ್ಮ ಅನುಭವದ ಮೂಲಕ ಪರಿಶೀಲನೆ ಮಾಡುತ್ತಾ ಹೋದರೆ ಅದಕ್ಕೆ ವಿರುದ್ಧವಾದ ಸಂಗತಿಗಳು ನಿದರ್ಶನಗಳು ನಮ್ಮ ಕಣ್ಣಮುಂದೆ ಬರುತ್ತವೆ. ಆದ್ದರಿಂದ, ನೀವು ಯಾವ ಅರ್ಥದಲ್ಲಿ ಹೇಳುತ್ತಿದ್ದೀರ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿದರೆ ಒಳಿತು.

    ಒಂದು ವ್ಯವಸ್ಥೆಯ ಲಕ್ಷಣಗಳಿಲ್ಲದಿದ್ದರೂ ಮತ್ತು ಅದಕ್ಕೆ ಸಾಂಸ್ಥಿಕ ರಚನೆ ಇರದಿದ್ದರೆ ಅದನ್ನು ಒಂದು ವ್ಯವಸ್ಥೆ ಎಂದು ನೋಡಬೇಕು ಎಂಬುದು ನಿಮ್ಮ ವಾದ. ಆದರೆ ಹೀಗೆ ವಾದಿಸುವಲ್ಲಿ ಒಂದು ತೊಂದರೆ ಇದೆ, ಅದೆಂದರೆ ಅಧ್ಯಯನ ನಡೆಸುವಾಗ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ, ಉದಾಹರಣೆಗೆ ಮನುಷ್ಯನ ಕುರಿತು ನಾವು ಮಾತನಾಡುವ ಸಂದರ್ಭದಲ್ಲಿ ಮನುಷ್ಯನ ಕೆಲವೊಂದು ಗುಣಲಕ್ಷಣಗಳ ಆಧಾರದ ಮೇಲೆ ಅವನ ಕುರಿತ ಚಿತ್ರಣವನ್ನು ಕಟ್ಟಿಕೊಡಬೇಕಾಗುತ್ತದೆ, ಮತ್ತು ಅದರ ಮೂಲಕ ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ನಿರ್ದಿಷ್ಟವಾಗಿ ಮುನುಷ್ಯನ ಗುಣಲಕ್ಷಣಗಳು ಇವು ಎಂಬುದಾಗಿ ತೋರಿಸಬೇಕಾಗುತ್ತದೆ. ಹಾಗೆ ಒಬ್ಬರು ಇಂತಿಂಹ ಗುಣಲಕ್ಷಣಗಳು ಇದ್ದರೆ ಮನುಷ್ಯ ಎಂದು ತೋರಿಸುವಾಗ, ಮತ್ತೊಬ್ಬರು ಬಂದು ಇಲ್ಲ ಇಲ್ಲ ನೀವು ಹೇಳುವ ಯಾವ ಗುಣಲಕ್ಷಣಗಳಿಲ್ಲದಿದ್ದರೂ ಆ ಪ್ರಾಣಿ ಮನುಷ್ಯನೇ ಎಂಬ ವಿತಂಡವಾದ ಮಾಡಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ೪ ಗುಣಲಕ್ಷಣ ತೋರಿಸಿ ಈ ಪ್ರಾಣಿ ಮನುಷ್ಯ ಎಂದು ವಿವರಣೆ ನೀಡಿದರು ಎಂದಿಟ್ಟುಕೊಳ್ಳಿ, ಆಗ ಯಾವುದೋ ಒಂದು ಪ್ರಾಣಿಯನ್ನು ತೋರಿಸಿ ಮನುಷ್ಯನ ಯಾವ ಗುಣಲಕ್ಷಣಗಳು ಇಲ್ಲದಿದ್ದರೂ ಆ ಪ್ರಾಣಿಯೂ ಮನುಷ್ಯನೇ ಎಂದು ವಾದಿಸಿದರೆ, ಆ ಪ್ರಾಣಿಯ ಕುರಿತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಅಂತೆಯೇ ಮನುಷ್ಯನ ಕುರಿತೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗೆ ವಾದ ಮಾಡುವುದರಿಂದ ನಾವು ಯಾವುದರ ಕುರಿತು ಮಾತನಾಡುತ್ತಿದ್ದೇವೆಯೋ ಅದು ಕೊನೆಯವರೂ ಅಸ್ಪಷ್ಟವಾಗಿಯೇ ಉಳಿದುಕೊಳ್ಳುತ್ತದೆ. ಆದ್ದರಿಂದ ವ್ಯವಸ್ಥೆ ಎಂದು ವಾದಿಸುವ ಸಂದರ್ಭದಲ್ಲಿ ಇಂತಿಂತಹ ಲಕ್ಷಣಗಳು ಅಗತ್ಯ ಎಂದು ವಾದಿಸುವಾಗ ಅದು ಆ ಸಂಗತಿಯನ್ನು ಅರ್ಥಮಾಡಿಕೊಳ್ಳಲು ಬೇರೆಲ್ಲಾ ಸಂಗತಿಗಳಿಗಿಂತ ಅದನ್ನು ಬೇರ್ಪಡಿಸಿ ನಿರ್ದಿಷ್ಟಪಡಿಸುತ್ತದೆ. ಹಾಗೆ ಅರ್ಥಮಾಡಿಕೊಳ್ಳುವ ವಿಧಾನವನ್ನೇ ತಿರಸ್ಕರಿಸಿದರೆ ಯಾವ ಪ್ರಯೋಜನವಾದೀತು? ಸರಿ ನೀವು ಯಾವುದನ್ನು ನಂಬಿದ್ದೀರೋ ಅದನ್ನೇ ನಂಬಿಕೊಂಡಿರಿ ಎಂದು ಸುಮ್ಮನಾಗಬಹುದು ಅಷ್ಟೆ.

    ಮೇಲು-ಕೀಳು, ಶೋಷಣೆಗಳ ಕುರಿತು ವಿವರಿಸುವಲ್ಲಿ ಇದುವರೆಗೂ ಇರುವ ಚೌಕಟ್ಟಿನಲ್ಲಿ ಹಲವಾರು ತೊಂದರೆಗಳಿರುವದರಿಂದಲೇ ಹೊಸರೀತಿಯ ಅಧ್ಯಯನದ ಅಗತ್ಯವಿದೆ. ಆಗ ಹೆಚ್ಚು ಸ್ಪಷ್ಟವಾಗಿ ಶೋಷಣೆ ಅನ್ಯಾಯಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಹೋಗಲಾಡಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬಹುದು..

    Like

  15. anandgj
    ಮೇ 31, 2013 ರಲ್ಲಿ 6:42 ಅಪರಾಹ್ನ

    ಸಂತೋಶ್ ಸಾರ್,
    ನಿಮ್ಮ ಬಗ್ಗೆ ಯಾವುದೇ ತೀರ್ಮಾನ ಮಾಡಿದ್ದೇನೆ ಎಂದುಕೊಳ್ಳುವಂತೆ ತಮಗೆ ಅನ್ನಿಸಿದ್ದರೆ ಮನ್ನಿಸಿ. ನನಗೆ ಆ ಜಂಜಾಟ ಬೇಡ! ನಿಮ್ಮನ್ನು ಹಳಿಯುವ ಉದ್ದೇಶ ನನಗಿಲ್ಲಾ! ಆದರೆ ನನ್ನ ಮಾತಿನ ಅರ್ಥವೇನೆಂದರೆ ನೀವು ವ್ಯವಸ್ಥೆಯೆಂದು ಯಾವುದನ್ನು ಕರೆಯುತ್ತಿಲ್ಲವೋ ನಾನು ಅದನ್ನು ವ್ಯವಸ್ಥೆ ಎಂಬ ಹೆಸರಿನಿಂದ ಕರೆಯುತ್ತಿರಬಹುದು ಅಷ್ಟೇ! ಇರಲಿ. ಜಾತಿಗಳಿಂದಾಗಿ ಒಡೆದು ಹೋಗಿರುವ ಸಮಾಜದಲ್ಲಿ ಜಾತಿಯ ಕುರಿತ ಚರ್ಚೆಗಳು ಎದುರಾಳಿಗಳನ್ನು ಅನುಮಾನದಿಂದಲೇ ನೋಡುವಂತೆ ಮಾಡುವ ಸಾಧ್ಯತೆ ಹೆಚ್ಚು. ಅದಕ್ಕಾಗೇ ಮಾತಿನಲ್ಲಿ ಹೆಚ್ಚು ಸಹನೆ, ವಿನಯ ರೂಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನಿಮ್ಮ ಬರಹಕ್ಕೆ ನನ್ನ ಮರುಉತ್ತರ ಬರೆಯುತ್ತೇನೆ. ತುರ್ತಾಗಿ ಇದನ್ನು ಹೇಳಬೇಕೆನಿಸಿತು, ಹೇಳಿದೆ!

    Like

  16. ಮೇ 31, 2013 ರಲ್ಲಿ 7:06 ಅಪರಾಹ್ನ

    ಆಯಿತು ನನಗೂ ತಪ್ಪಾದ ಭಾವನೆ ಬರಲಿಲ್ಲ, ಆದರೆ ಅನುಮಾನದಿಂದ ಹೀಗೆ ಮಾತನಾಡಿದ್ದೀರಿ ಎಂದೇ ಭಾವಿಸಿದೆ, ಇರಲಿ ನನ್ನ ಮಾತಿನಿಂದಲೂ ಬೇಸರವಾಗಿದ್ದರೆ ಕ್ಷಮೆ ಇರಲಿ

    Like

  17. anandgj
    ಮೇ 31, 2013 ರಲ್ಲಿ 10:53 ಅಪರಾಹ್ನ

    ಮಾನ್ಯ ಸಂತೋಷ್ ಶೆಟ್ಟಿಯವರೇ,

    ರಿಲಿಜನ್ ಎನ್ನಬೇಕೋ ಬೇಡವೋ ಎಂಬುದು ನನಗೆ ನಿಜಕ್ಕೂ ಗೊತ್ತಿಲ್ಲಾ. ಜನರು ಸಾಮಾನ್ಯವಾಗಿ ಬಳಸುವ ಅರ್ಥದಲ್ಲೇ ನಾನು ಹಿಂದೂ ಧರ್ಮ ಎಂದಿದ್ದೇನೆ. ಅಂದರೆ, ಹಿಂದೂ ಧರ್ಮ ಎಂದು ಇಂದು ಯಾವುದನ್ನು ಜನರು ಕರೆದುಕೊಳ್ಳುತ್ತಾರೋ/ ಗುರುತಿಸುತ್ತಾರೋ ಅದಕ್ಕೆ ಹಿಂದೆ ವೈದಿಕ ಧರ್ಮ/ ಸನಾತನ ಧರ್ಮ ಎನ್ನುತ್ತಿದ್ದರು ಎಂದುಕೊಳ್ಳುತ್ತೇನೆ. ಹಿಂದೂ ಎನ್ನುವುದು ಧರ್ಮವಲ್ಲಾ, ಧರ್ಮವೆಂದರೆ ಅದಕ್ಕೊಬ್ಬ ಸ್ಥಾಪಕನಿರಬೇಕು, ಅದಕ್ಕೊಂದು ಗ್ರಂಥವಿರಬೇಕು ಎನ್ನುವುದರ ಬಗ್ಗೆ ನನ್ನ ಮನಸ್ಸಲ್ಲಿ ಅಷ್ಟೊಂದು ಮಹತ್ವವಿಲ್ಲಾ. ಹಿಂದೂಗಳು ಎಂದು ಇಂದು ಕರೆಯಲಾಗುತ್ತಿರುವ ನಾನೂ, ನೀವು, ಎಲ್ಲರೂ ಕೂಡಾ ಒಂದು ಜಾತಿಯ ಹಣೆಪಟ್ಟಿಯನ್ನು ಹೊಂದಿರುವವರು ಮತ್ತು ಸರ್ವೇಸಾಧಾರಣವಾಗಿ ಹಿಂದೂಗಳಲ್ಲಿ ಜಾತಿಯಿಲ್ಲದೇ ಇರದವರು ಒಬ್ಬರೂ ಇಲ್ಲಾ ಎಂಬುದಂತೂ ನಿಜವಾದ್ದರಿಂದ ಹಿಂದೂ ಧರ್ಮವೆಂದರೆ ಜಾತಿಗಳನ್ನು ಘಟಕವಾಗಿ ಹೊಂದಿರುವ ಸಮಾಜ ಎನ್ನಬಹುದು. ಹುಟ್ಟಿನಿಂದಲೇ ಇಂಥಿಂಥದ್ದಕ್ಕೆ ಇಂಥಿಂಥವರು ಅರ್ಹರು, ಇಂಥಿಂಥವರು ನಿಷಿದ್ಧರು ಎನ್ನುವ ಏರ್ಪಾಟು ಹಿಂದೂಗಳೆಂದು ಕರೆಯಲ್ಪಡುವವರಲ್ಲಿ ಇಂದಿಗೂ ಇದೆ. ಈ ಏರ್ಪಾಟು ತಲೆಮಾರುಗಳಿಂದ ಹೆಚ್ಚಿನ ಬದಲಾವಣೆಯಿಲ್ಲದೇ ನಡೆದುಕೊಂಡು ಬರುತ್ತಿದೆ. ಒಟ್ಟಾರೆ ಈ ವಿಧಾನವನ್ನು ಹಿಂದೂ ಧರ್ಮವೆಂದೂ, ವೈದಿಕ ಧರ್ಮವೆಂದೂ ಕರೆಯುತ್ತಾರೆ ಎನ್ನುವುದು ನನ್ನ ಅನಿಸಿಕೆ.

    ವೇದಗಳೇ ಹಿಂದೂಗಳ ಪವಿತ್ರ ಗ್ರಂಥವೆಂದಾಗಲೀ, ಅದೊಂದೇ ಪರಮಗ್ರಂಥವೆಂದಾಗಲೀ ನಾನು ಹೇಳುತ್ತಿಲ್ಲಾ. ಅದನ್ನು ಶಂಕರ, ರಾಮಾನುಜ ಮಧ್ವಾದಿ ಮಹನೀಯರುಗಳು ಹೇಳಿದ್ದಾರೆ ಮತ್ತು ವೈದಿಕ ಧರ್ಮ/ ಸನಾತನ ಧರ್ಮದ ಪುನರುತ್ಥಾನವೇ ಪರಮಗುರಿಯಾಗಿಸಿಕೊಂಡು ಶಂಕರಾಚಾರ್ಯರು ದುಡಿದಿದ್ದಾರೆ. ಇಲ್ಲಿ ಧರ್ಮ ಎನ್ನುವುದು ಯಾವ ಅರ್ಥದಲ್ಲಿ? ಇದನ್ನು ಪೂಜೆ, ಹವನ ಹೋಮದ ಆಚರಣೆಯೆಂದೇ ನೋಡುವುದಾದರೆ ಈ ಎಲ್ಲಾ ಖಂಡನೆ ಮಂಡನೆಗಳ ಅಗತ್ಯವೇನು? ವೇದಗಳು ಅಂದಿನ ಸಮಾಜವನ್ನು ನಿಯಂತ್ರಿಸುತ್ತಿಲ್ಲದೇ ಇದ್ದರೆ ಮತ್ತು ಬೆರಳೆಣಿಕೆಯ ಬ್ರಾಹ್ಮಣರ ಪೂಜೆಯ ವಿಧಾನವಷ್ಟೇ ಆಗಿದ್ದರೆ ಅದಕ್ಕಾಗಿ ಆಚಾರ್ಯರು ಶ್ರಮಿಸಿದ್ದೇಕೆ? ಶ್ರಮಿಸಿದ್ದರೂ ಇಷ್ಟೊಂದು ಗೌರವದ “ಹಿಂದೂ ಧರ್ಮರಕ್ಷಕ”ರೆಂಬ ಹೆಸರೇಕೆ ಇರುತ್ತಿತ್ತು? ಹಾಗೆ ಇದು ಸಮಾಜದ ಜೀವನ ಶೈಲಿಯಾಗದೇ, ಕೇವಲ ಪೂಜೆ ಹೋಮ ಹವನ ಮಾಡುವ ಬ್ರಾಹ್ಮಣರ ಸ್ವತ್ತಾಗಿದ್ದರೆ (ಇಂದಿಗೂ ಬ್ರಾಹ್ಮಣರು ೪% ಮಾತ್ರಾ) ಯಾಕಾಗಿ ಸಾಮಾನ್ಯ ಜನರಿಗೆ ಹೆಚ್ಚು ಆಪ್ತವಾಗುತ್ತಿದ್ದ (ಮಾತಾಡದ ಸಂಸ್ಕೃತದಲ್ಲಿರದೆ ಮಾತಾಡುವ ಪಾಲಿಯಲ್ಲಿದ್ದ ಕಾರಣದಿಂದಾಗಿ) ಬೌದ್ಧ ಧರ್ಮದ ವಿರುದ್ಧವಾಗಿ ಯಾಕಾಗಿ ವಾದ ವಿವಾದ, ಸೋಲು ಗೆಲುವುಗಳಿಗೆ ಅಷ್ಟೊಂದು ಮಹತ್ವವಿರುತ್ತಿದ್ದವು?

    ನೀವನ್ನುವಂತೆ ವೇದಗಳನ್ನು ಧಾರ್ಮಿಕ ಗ್ರಂಥಗಳು ಎಂದು ಪಾಶ್ಚ್ಯಾತ್ಯರು ಕರೆದಿದ್ದರೆ ಅದಕ್ಕೆ ಕಾರಣ ಬಹುಶಃ ಇವುಗಳು ದೇವರು, ಅಧ್ಯಾತ್ಮದ ಬಗ್ಗೆ ಬೆಳಕು ತೋರುವ ಗ್ರಂಥಗಳು ಎನ್ನುವ ಕಾರಣದಿಂದಾಗಿ. ಧರ್ಮಗ್ರಂಥಗಳು ಇಹದಲ್ಲಿ ಬದುಕುವ ಬಗೆಯನ್ನು ಹೇಳುವ ಹಾಗೇ ಪರವನ್ನು ಪ್ರಾಪ್ತಗೊಳಿಸುವ ಬಗೆಯನ್ನು ಹೇಳುವುದು ಸಹಜ. ಕುರಾನ್, ಬೈಬಲ್ ಮೊದಲಾದವು ಇಹಕ್ಕೆ ಹೆಚ್ಚಿನ ಒತ್ತುಕೊಟ್ಟು ನೀವು ಹೀಗೆ ಹೀಗೆ ಬದುಕಿ.. ಇವು ನಿಮ್ಮ ಕಟ್ಟಳೆಗಳು ಎನ್ನುತ್ತವೆ. ಆದರೆ ವೇದಗಳು ಪಾರಮಾರ್ಥದ ಸಾಧನೆಗೆ ದಾರಿಗಳನ್ನು (ಹೋಮ, ಹವನ, ತಪಸ್ಸು…) ಹೆಚ್ಚಾಗಿ ತೋರುತ್ತದೆ. ಅದಕ್ಕಾಗೆ ವೇದದಲ್ಲಿ ನಾಲ್ಕು. ನಾಲ್ಕರ ಸಾರವೂ ಒಂದೇ ಆಗಿದ್ದರೂ ಋಗ್ವೇದ ತಪಸ್ಸಿನ ದಾರಿಯನ್ನೂ, ಯಜುರ್ವೇದ ಹೋಮ ಹವನಾದಿ ಕೈಕರಣೆಗಳನ್ನೂ, ಸಾಮ ಸಂಗೀತವನ್ನೂ, ಅಥರ್ವ ತಂತ್ರವನ್ನೂ ಸಾಧನವಾಗಿಸಿಕೊಂಡಿವೆ. ಇರಲಿ, ಅವು ಧರ್ಮಗ್ರಂಥಗಳು ಹೌದೋ ಅಲ್ಲವೋ ಎಂಬ ವಾದ ನಮ್ಮ ಈ ಚರ್ಚೆಯ ವ್ಯಾಪ್ತಿಯ ಆಚೆಯದು. ಇಲ್ಲಿ ನಾವು ಮಾತಾಡುತ್ತಿರುವುದು ವೇದಗಳಲ್ಲಿ ಹೇಳಿದ ಚಾತುರ್ವರ್ಣಗಳೇ ಇಂದಿನ ಜಾತಿಗಳೇ ಎಂಬುದಾಗಿ ಎಂದುಕೊಳ್ಳುತ್ತೇನೆ. ಆ ಅರ್ಥದಲ್ಲಿ ನೋಡಿದರೆ ಪ್ರತಿಯೊಬ್ಬ ಹಿಂದೂವನ್ನೂ ಅವನ ಹುಟ್ಟಿನ ಆಧಾರದ ಮೇಲೆ ಬ್ರಾಹ್ಮಣ, ಕ್ಷತ್ರಿಯ, ಶೂದ್ರ ಹಾಗೂ ವೈಶ್ಯ ಎಂಬ ಗುಂಪುಗಳಲ್ಲೊಂದರಲ್ಲಿ ಗುರುತಿಸಬಹುದು. ಹೀಗಾಗದು ಎಂದು ನೀವುಗಳ್ ಉಬರೆದಿದ್ದನ್ನು ಓದಿದ್ದೇನೆ. ನೀವುಗಳೇ ಹೇಳುವಂತೆ ನನ್ನ ಸುತ್ತಲಿನ. ನಮ್ಮ ಸಂಪರ್ಕಕ್ಕೆ ಬರುವ ಪ್ರತಿವ್ಯಕ್ತಿಯ ಜಾತಿ ಯಾವುದೆಂದು ತಿಳಿದಾಗಲೆಲ್ಲಾ ಯಾವ ವರ್ಣದಲ್ಲಿ ಅದು ಬರುತ್ತದೆಯೆಂದು ಗುರುತಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ.

    ಆಧುನಿಕ ಕಾಲದಲ್ಲಿ ಮೇಲ್ಜಾತಿಯಲ್ಲಿ ಹುಟ್ಟಿದ್ದರಿಂದಾಗಿ ಏನೆಲ್ಲಾ ಕಳೆದುಕೊಳ್ಳಬೇಕಾಗಿದೆಯೋ ಅದನ್ನು “ತಪ್ಪು ತಿದ್ದುವಿಕೆಯ ಪ್ರಕ್ರಿಯೆ” ಎಂದು ಗುರುತಿಸಬಹುದಾಗಿದೆ. ಸ್ವಾತಂತ್ರ್ಯದ ನಂತರವಷ್ಟೇ, ಭಾರತದ ಸಂವಿಧಾನದಲ್ಲಿ ತುಳಿತಕ್ಕೊಳಗಾದವರಿಗೆ ಸಾಮಾಜಿಕ ಸಮಾನತೆ ತಂದುಕೊಡುವ ಆಶಯದಿಂದ ಉದ್ಯೋಗದಲ್ಲಿ, ಕಲಿಕೆಯಲ್ಲಿ, ಜನಪ್ರತಿನಿಧಿ ಸಭೆಗಳಲ್ಲಿ ಮೀಸಲಾತಿಗಳನ್ನು ಕೊಡುವ ಏರ್ಪಾಡು ಶುರುವಾಗಿದೆ. (ಇದರ ಸರಿತಪ್ಪುಗಳ ಚರ್ಚೆ ಇಲ್ಲಿ ಅಪ್ರಸ್ತುತ). ಆ ಲೆಕ್ಕದಲ್ಲಿ ನೀವು ಹೇಳುತ್ತಿರುವ “ಹೀಗೂ ವಾದ ಮಾಡಬಹುದು” ಎನ್ನುವ ಮಾತಿಗೊಂದು ವಿವರಣೇ/ ಕಾರಣ ಒದಗಿಸುತ್ತದೆ.

    ನೀವು ಏನು ವಿವರಣೆ ಕೇಳುತ್ತಿದ್ದೀರೆಂದು ತಿಳಿಯುತ್ತಿಲ್ಲಾ. ನನ್ನ ಆ ಮಾತುಗಳಿಗೆ ಪುರಾವೆಗಳನ್ನು ಕೇಳುತ್ತಿದ್ದೀರೇನು?

    ನೀವು ವಿಷಯವನ್ನು ವಿವರಿಸುವಾಗ ತೆಗೆದುಕೊಳ್ಳುವ ಉದಾಹರಣೆಗಳ ಬಗ್ಗೆ ನನ್ನ ತಕರಾರಿದೆ. ಸುಸಂಬದ್ಧವಾದ ಉದಾಹರಣೆಗಳನ್ನು ತೋರಿಸಿದರೆ ಒಳಿತು. ಈ ಹಿಂದಿನ ಕಮೆಂಟುಗಳಲ್ಲಿ ನಾನು ಮಾವಿನ ಹಣ್ಣಿನ ಉದಾಹರಣೆಗೆ ಪ್ರತಿ ಉದಾಹರಣೆ ಕೊಟ್ಟಹಾಗೆ ಈಗಿನ ಮನುಷ್ಯನ ಲಕ್ಷಣದ ಉದಾಹರಣೆಗೂ ಕೊಡಬಹುದು. ಇದು ತರ್ಕಶಾಸ್ತ್ರದಲ್ಲಿ ಒಂದು ತಂತ್ರವೆಂದು ಹೇಳಿಕೊಡುತ್ತಾರೆ. ಇಲ್ಲಿ ನೀವು ಮನುಷ್ಯನ ಉದಾಹರಣೆ ಕೊಟ್ಟಿದ್ದನ್ನು ನಾನು ಜೀವಿಗಳ ಉದಾಹರಣೆಯಾಗಿ ಕೊಡುತ್ತೇನೆ, ಉಸಿರಾಡುವುದೆಲ್ಲಾ ಜೀವಿಗಳು ಎಂಬುದು ಜೀವಿಗಳ ಲಕ್ಷಣವೆನ್ನುವುದಾದರೆ ಕೆಲವು ಮೂಗಿನಿಂದ ಉಸಿರಾಡುತ್ತವೆ. ಕೆಲವು ಚರ್ಮದಿಂದ, ಮತ್ತೆ ಕೆಲವು ನೀರು ನುಂಗಿ. ಕೆಲವು ನಿಮಿಷಗಟ್ಟಲೆ ಉಸಿರೇ ಆಡದೆ ಜೀವಿಸುತ್ತವೆ. ಈಗ ಬಗೆಗಳು ಬೇರೆಯಾದರೂ ಅವು ಜೀವಿಗಳೇ ಆಗಿವೆಯಲ್ಲವೇ? ಹಾಗೇ ಎಲ್ಲಾ ಲಕ್ಷಣಗಳನ್ನೂ ಮೀರಿ ಒಂದು ವ್ಯವಸ್ಥೆ ಇರಬಹುದಲ್ಲವೇ? ಅಂತಹ ಒಂದು ವ್ಯವಸ್ಥೆ ಈ ಜಾತಿವ್ಯವಸ್ಥೆ ಎಂದೂ ಹೇಳಬಹುದಲ್ಲವೇ?

    ನೀವು ಹೇಳುವ ಮೇಲುಕೀಳುಗಳಲ್ಲಿನ ಇಂದಿನ ಅರ್ಥೈಸುವಿಕೆಯಲ್ಲಿ ತೊಡಕುಗಳಿವೆ ಅನ್ನುವ ಮಾತಿಗಿಂತಲೂ ಅವುಗಳನ್ನು ತೊಡೆಯಬೇಕು ಎನ್ನುವ ಆಶಯಗಳು ನನಗೆ ಮೆಚ್ಚುಗೆಯಾದವು. ಈ ದಿಕ್ಕಿನಲ್ಲಂತೂ ನಾವು ಸಮಾನ ಮನಸ್ಕರು.

    Like

    • ಜೂನ್ 4, 2013 ರಲ್ಲಿ 10:09 ಫೂರ್ವಾಹ್ನ

      ಆನಂದ ರವರೆ

      ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ ನನಗೂ ಕೆಲವು ಪ್ರಶ್ನೆಗಳು ಏಳುತ್ತಿವೆ, ಆ ಪ್ರಶ್ನೆಗಳು ಏಕೆ ಏಳುತ್ತಿವೆ ಎಂದರೆ ಇದುವರೆಗೂ ನಾನು ಓದಿದ ಪುಸ್ತಕಗಳಲ್ಲಿ ಅವುಗಳಿಗೆ ಉತ್ತರ ಸಿಕ್ಕುತ್ತಿಲ್ಲ, ಹಾಗಾಗಿ ತಾವೂ ಕೂಡ ಅದರ ಕುರಿತು ಪ್ರಸ್ತಾಪ ಮಾಡಿದ್ದರಿಂದ ಪ್ರಶ್ನೆಗಳನ್ನು ನಿಮಗೆ ಕೇಳುವುದು ಒಳಿತು ಎಂದುಕೊಳ್ಳುತ್ತೇನೆ.

      ೧. ಎಲ್ಲಾ ಖಂಡನೆ ಮಂಡನೆಗಳ ಅರ್ಥವೇನು? ಯಾವ ಖಂಡನೆ? ಯಾವುದರ ಕುರಿತು ಖಂಡನೆ? ಸ್ವಲ್ಪ ವಿವರಿಸಿ.

      ೨. ಭೌದ್ದ ಧರ್ಮದ ವಿರುದ್ಧ ಸೋಲು ಗೆಲುವಿನ ಚರ್ಚೆ ಇವೆಲ್ಲವನ್ನೂ ವಿವರಿಸಿ ಆನಂತರ ಚರ್ಚಿಸುವ

      ೩. ಚಾತುವರ್ಣಗಳೇ ಜಾತಿಗಳಾದವು ಎಂದು ಎಂದುಕೊಳ್ಳುತ್ತೇನೆ ಎಂದಿದ್ದೀರಿ? ಹೇಗೆ, ಅಂದರೆ ವರ್ಣಗಳೇ ಜಾತಿಗಳಾಗಿ ಮಾರ್ಪಾಟಾಗಿರುವ ಕುರಿತು ಅರ್ಥಮಾಡಿಕೊಳ್ಳುವುದು ಹೇಗೆ? ಹಾಗೆ ಬದಲಾವಣೆ ಆಗಿರುವುದೇ ಹೌದಾದರೆ ಅದು ಯಾವುದಾದರೂ ಒಂದು ಪ್ರಕ್ರಿಯೆಯ ಒಳಗೆ ಆಗಿರಬೇಕು, ಆ ಪ್ರಕ್ರಿಯೆ ಯಾವುದು?

      ೪. ಲಿಂಗಾಯತ ಸಮುದಾಯವನ್ನು ಯಾವ ವರ್ಣಕ್ಕೆ ಸೇರಿಸುತ್ತೀರಿ? ಇಲ್ಲಿ ನೋಡಿ ನೀವು ಯಾವ ವರ್ಣಕ್ಕಾದರೂ ಸೇರಿಸಿ, ಆದರೆ ವರ್ಣದ ಪ್ರಸ್ತುತತೆ ಏನಿದೆ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ.

      Like

  18. Dr. Shanmukha
    ಜೂನ್ 1, 2013 ರಲ್ಲಿ 3:44 ಅಪರಾಹ್ನ

    ‘ಹಿಂದೂಧರ್ಮವೆಂದರೆ ಜಾತಿಗಳನ್ನು ಘಟಕಗಳನ್ನಾಗಿ ಹೊಂದಿರುವ ಸಮಾಜ” ಎಂದಾದರೆ ಭಾರತದಲ್ಲಿರುವ ಕ್ರಿಶ್ಚಿಯಾನಿಟಿ ಇಸ್ಲಾಂ, ಸಿಖ್ಖರು ಬುದ್ದ ಜೈನರಲ್ಲಿರುವ ಜಾತಿಗಳನ್ನು ಹೇಗೆ ವಿವರಿಸಿಕೊಳ್ಳುತ್ತೀರಿ? ಧರ್ಮವೆನ್ನುವುದನ್ನು ‘ಸಮಾಜ’ವೆನ್ನುವ ರೀತಿಯಲ್ಲಿ ನಮ್ಮ ಯಾವ ಪ್ರಾಚೀನ ಪಠ್ಯಗಳು ವಿವರಿಸಿವೆ?

    ಆಧ್ಯಾತ್ಮಿಕ ಜ್ಞಾನದ ಸತ್ಯದ ಕುರಿತ ಜಿಜ್ಞಾಸೆ ವಾದ ಪ್ರತಿವಾದಗಳನ್ನು ರಿಲಜನ್ ಗಳ ನಡುವಣ ಹೋರಾಟವೆಂಬಂತೆ ಚಿತ್ರಿತವಾಗಿದ್ದು ವಸಾಹತು ಸಂಧರ್ಭದಲ್ಲಿ ಆ ಚೌಕಟ್ಟನ್ನು ಹಿಡಿದುಕೊಂಡು ನೀವು ಶಂಕರ-ಬೌದ್ದರ ನಡುವಣ ವಿವಾದವನ್ನು ಅರ್ಥೈಸಿಕೊಳ್ಳುತ್ತಿದ್ದೀರಿ. ಶಂಕರರು ಎಲ್ಲಿ ಯಾವ ಪಠ್ಯದಲ್ಲಿ ತಮ್ಮನ್ನು ಸನಾತನ ಧರ್ಮದ ರಕ್ಷಕ ಎಂದು ಹೇಳಿಕೊಂಡಿದ್ದಾರೆ?ಇಲ್ಲವೇ ಸನಾತನ ಧರ್ಮ ಒಂದಿದೆ ಅದನ್ನು ರಕ್ಷಿಸಿಕೊಳ್ಳ ಬೇಕು ಎನ್ನುವ ಕರೆ ಕೊಡುತ್ತಾರೆ? ಈ ರೀತಿ ಮಾತನಾಡಿದ ಮೊಟ್ಟ ಮೊದಲ ವ್ಯಕ್ತಿ ದಯಾನಂದ ಸರಸ್ವತಿ ಅಲ್ಲವೇ? ಅವರಿಗಿಂತ ಹಿಂದೆ ಯಾರಾದರೂ ಎಲ್ಲಾದರೂ ವೇದಗಳೇ ದೈವ ಜ್ಞಾನ, ಹಾಗಾಗಿ ಅವೇ ಸತ್ಯ ಎನ್ನುವ ರೀತಿಯಲ್ಲಿ ಒಬ್ಬ ಭಾರತೀಯ ಚಿಂತಕನಾದರೂ ಹೇಳಿದ್ದಾನೆಯೇ? ಹೇಳಿದ್ದರೆ ತೋರಿಸಿ, ಎಲ್ಲಿ ಯಾರು ಯಾವಾಗ ಹೇಳಿದ್ದಾರೆ ಎಂದು!! ಅವರ ನಂತರ ಹಿಂದುತ್ವವಾದಿಗಳು ಹೀಗೆ ಹೇಳುತ್ತಾ ಬರುತ್ತಿದ್ದಾರೆ ನಿಜ!. ಸನಾತನ ಧರ್ಮದ ರಕ್ಷಣೆಯ ಯೋಜನೆಯು ಇಲ್ಲಿಯ ಯಾವ ಆದ್ಯಾತ್ಮಿಕ ಸಾಧಕರ ಗುರಿಯೂ ಆಗಿರಲಿಲ್ಲ. ಆದರೆ ಅವರೆಲ್ಲರನ್ನೂ ಸನಾತನ ಹಿಂದೂ ಧರ್ಮದ ರಕ್ಷರು ಎಂದು ಹಿಂದೂ ಧರ್ಮದ ಪುನರುದ್ದಾಕರು ಎಂದು ನಿರೂಪಿಸುತ್ತಾ ಬರುತ್ತಿರುವುದು ಆಧುನಿಕ ವಸಾಹತು ಶಿಕ್ಷಣದ ಶಿಶುಗಳು ಅಷ್ಟೇ!!

    ವೇದಗಳು ಧರ್ಮಗ್ರಂಥಗಳೋ ಎನ್ನುವದು ಇಲ್ಲಿಯ ಚರ್ಚೆಯ ವ್ಯಾಪ್ತಿಯಿಂದ ಹೊರಗುಳಿದ ಮೇಲೆ ಅವುಗಳ ಆಧಾರದ ಮೇಲೆ ನಿಂತಿವೆ ಎನ್ನಲಾದ ವರ್ಣಗಳು ಸಾಮಾಜಿಕ ರಚನೆಗಳು ಮತ್ತು ಅವುಗಳೊಳಗೆ ಇಲ್ಲಿರುವ ಎಲ್ಲಾ ಜಾತಿಗಳನ್ನು ಗುರುತಿಸಬಹದುದು ಎನ್ನುವ ವಾದಕ್ಕೆ ನೆಲೆ ಸಿಗುವುದಿಲ್ಲ. ಒಂದುವ ವೇಳೆ ಅದು ಸಾಧ್ಯ ಎಂದು ಒಪ್ಪಿದರೂ ನಮ್ಮಲ್ಲಿರುವ ಎಲ್ಲಾ ಜಾತಿಗಳನ್ನು ಈ ನಾಲ್ಕು ವರ್ಣಗಳೊಳಗೆ ಗುರುತಿಸಬಹದು ಎಂದು ನೀವು ಸುಲಭವಾಗಿ ಹೇಳುತ್ತಿದ್ದೀರಿ. ಹೌದೇ!! ನೀವು ಸ್ವಲ್ಪ ಕ್ರಿ.ಶ 1871 ರಿಂದ 1931 ರವರೆಗೆ ಭ್ರಿಟೀಷರು ಜನಗಣತಿ ಮಾಡುವಾಗ ಈ ಜಾತಿಗಳನ್ನು ಈ ನಾಲ್ಕು ವರ್ಣಗಳೊಳಗೆ ಗುರುತಿಸಲು ಎಷ್ಟು ಹೆಣಗಾಡುತ್ತಾರೆ ಎನ್ನುವುದನ್ನು ಆ ಜನಗಣತಿಯ ವರದಿಗಳನ್ನು ನೀವು ಸ್ವಲ್ಪ ಅವಲೋಗಿಸುವುದು ಒಳ್ಳೆಯದು. ಈ ಆರು ದಶಕಗಳಲ್ಲಿ ಅವರು ಹಂತಹಂತವಾಗಿ ವರ್ಗೀಕರಣ ಮಾಡಲು ಮುಂದಾಗುತ್ತಾರೆ. 1871 ರಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಲಾದ ಸಮುದಾಯಗಳು 1901 ರ ನಂತರ ಸಾವಿರಗಳಲ್ಲಿ ಇಳಿಯುತ್ತದೆ. 1931 ರ ಗಣತಿಯ ವರಧಿಯಲ್ಲಿ ಭಾರತದಲ್ಲಿರುವ ಈ ಬೇರೆ ಬೇರೆ ರೀತಿಯ ಜನಸಮುದಾಯಗಳನ್ನು ವರ್ಣಗಳಲ್ಲಿ ಗುರುತಿಸುವುದಿರಲಿ ನಿರ್ಧಿಷ್ಟ ಜಾತಿಗಳಲ್ಲಿ ಗುರುತಿಸಿ ವರ್ಗೀಕರಿಸುವುದೇ ದುಸ್ತರ ಎಂದು ಕಂಡುಕೊಳ್ಳುತ್ತಾರೆ. ಹಾಗಾಗಿ, ಭಾರತದ ಜಾತಿಗುಂಪುಗಳನ್ನು ನಿಖರವಾಗಿ ಗುರ್ತಿಸಿ (ಇವರು ಇಂತಿತ್ತ ಜಾತಿಯವರು ಎಂದು) ವಿಭಜಿಸುವುದು ಸಾಧ್ಯವಿಲ್ಲ. ತಮ್ಮ ಜಾತಿ ಗಣತಿಯು ಒಂದು ವಿಫಲ ಯತ್ನ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಮಾತ್ರವಲ್ಲ, ಮುಂದಿನ ಜನಗಣತಿಯಲ್ಲಿ ಈ ಪ್ರಯತ್ನವನ್ನು ನಿಲ್ಲಿಸುವುದು ಒಳಿತು ಎನ್ನುವ ಸಲಹೆಯನ್ನೂ ನೀಡುತ್ತಾರೆ. ಅದರಂತೆ ಆ ನಂತರ ಭ್ರಿಟೀಷರು ಮತ್ತು ನಮ್ಮ ಸ್ವತಂತ್ರ ಭಾರತದ ಸರ್ಕಾರ ಒಮ್ಮೆಯೂ ಜಾತಿಗಣತಿಯ ಪ್ರಯತ್ನಕ್ಕೆ ಕೈಹಾಕಲೇ ಇಲ್ಲ (2011 ರಲ್ಲಿ ಪ್ರಯತ್ನಿಸಿದರೂ ಮಾಡಲಿಲ್ಲ). ಈ ಸುಧೀರ್ಘ ವರಧಿಗಳನ್ನು ಓದಲು ಸಮಯವಿಲ್ಲವೆಂದಾದರೆ, ಈ ಪ್ರಯತ್ನಗಳು ಚಾರಿತ್ರಿಕ ನೋಟಕ್ಕೆ ನಿಕಲಸ್ ಡರ್ಕಸ್ ನ ‘ಕಾಸ್ಟ್ ಆಫ್ ಮೈಂಡ್’ ಪುಸ್ತಕ ಓದಿ. ತಮ್ಮಲ್ಲಿ ಅಷ್ಟು ಸುಲಭದ ಸೂತ್ರವಿದ್ದರೆ ದಯವಿಟ್ಟು ನಮ್ಮ ಜಾತಿಗಳನ್ನು ಹೇಗೆ ಈ ನಾಲ್ಕು ವರ್ಣಗಳಲ್ಲಿ ಸುಲಭವಾಗಿ ವಿಭಜಿಸಿ ವರ್ಗೀಕರಿಸಬಹುದೆಂದು ಸರ್ಕಾರಕ್ಕೆ ಒಂದು ಯೋಜನೆಯನ್ನು ಕೊಡಿ (ಕರ್ನಾಟಕದಲ್ಲಿ ಜಾತಿ ಗಣತಿಗೆ ಒಂದು ಪ್ರತ್ಯೇಕ ಆಯೋಗ ರಚಿಸಿ ಕಳೆದ 5 ವರ್ಷಗಳಿಂದ ಹೆಣಗುತ್ತಿದ್ದಾರೆ ಅವರಿಗೆ ಸಹಾಯ ಮಾಡಿ)

    ಇನ್ನು. ಉಸಿರಾಡುವುದೆಲ್ಲವೂ ಜೀವಿಗಳು ಎನ್ನುವಲ್ಲಿ ಉಸಿರಾಟವೇ ಪ್ರಧಾನ ಲಕ್ಷಣ ಎಂದಾದಲ್ಲಿ ಅವು ಎಷ್ಟು ನಿಮಿಷಕ್ಕೊಮ್ಮೆ ಉಸಿರಾಡುತ್ತವೆ ಮತ್ತು ಯಾವ ಸ್ವರೂಪದಲ್ಲಿ ಉಸಿರಾಡುತ್ತವೆ ಎನ್ನವುದು ಮುಖ್ಯವಾಗುವುದಿಲ್ಲ. ಯಾವ್ಯಾವುದು ಉಸಿರಾಡುವುವೋ (ಅದು ಹೇಗೆ ಎಷ್ಟು ಅವಧಿಗೆ ಎನ್ನುವುದನ್ನು ಹೊರತಾಗಿ) ಅವೆಲ್ಲವೂ ಜೀವಿಗಳೇ. ಹಾಗೆಯೇ ವ್ಯವಸ್ಥೆ ಎಂದರೆ ಅದು ‘ನಿರ್ಧಿಷ್ಟ ತತ್ವ ಮತ್ತು ನಿಯಮದ ಚೌಕಟ್ಟುಗಳ ನಿರ್ದೇಶನ ನಿಯಂತ್ರಣಗಳೊಂದಿಗೆ ವ್ಯವಹರಿಸುವ ಘಟಕಗಳ ರಚನೆ’. ನಿಯಮಗಳು ಮತ್ತು ನಿಯಮಕ್ಕೊಳಪಟ್ಟು ನಡೆದುಕೊಳ್ಳುವ ಘಟಕಗಳು ವ್ಯವಸ್ಥೆಯ ‘ಮೂಲ ಲಕ್ಷಣ’ಗಳೆಂದಾದಾಗ (ಇದು ನಮ್ಮ ಕಲ್ಪನೆಯಂತೆ ಮಾಡಿಕೊಂಡಿದ್ದಲ್ಲ ಸಾಮಾಜಿಕ ಸಿದ್ದಾಂತಗಳಲ್ಲಿ ಒಪ್ಪಿತವಾದ ‘ವ್ಯವಸ್ಥಾ ಸಿದ್ದಾಂತ’ದ ನಿಲುವು ಇದು) ಆ ನಿಯಮಗಳು ಮತ್ತು ನಿಯಮಗಳಿಂದ ನಿಯಂತ್ರಿತ ಘಟಕಗಳಿಲ್ಲದೆ ವ್ಯವಸ್ಥೆ ಇರಲು ಸಾಧ್ಯವಿಲ್ಲ. ಆ ನಿಯಮಗಳು ಚರ್ಚಿನಿಂದ ಬಂದಿರಲಿ, ಸಂಘಗಳ ಬೈಲಾ ಗಳಿಂದ ಬಂದಿರಲಿ, ಸಂಸ್ಥೆಗಳ ಕಾನೂನಿನಿಂದ ಬಂದಿರಲಿ, ಅವು ಭಯಾನಕ ಸ್ವರೂಪದಲ್ಲಿರಲಿ ಇಲ್ಲವೇ ಸರಳ ಸ್ವರೂಪದಲ್ಲಿರಲಿ ಅದು ಮುಖ್ಯವಾಗುವುದಿಲ್ಲ. ಒಟ್ಟಾರೆ ಆ ಲಕ್ಷಣ ಇರಬೇಕು ಅಷ್ಟೇ!!! ಹೀಗೆ ಯಾವ ಸ್ವರೂಪದಲ್ಲಾದರಾಗಲಿ ಉಸಿರಾಡುವುದು ಎಂದಾದರೆ ಅವು ಜೀವಿಗಳು ಹಾಗೆಯೇ ಯಾವ ಸ್ವರೂಪದಲ್ಲಾದರೂ ಇರಲಿ ಅವು ನಿಯಮಗಳ ಚೌಕಟ್ಟಿನಲ್ಲಿ ವ್ಯವಹರಿಸುವ ಘಟಕಗಳ ಗುಚ್ಚ ವ್ಯವಸ್ಥೆಯಾಗುತ್ತದೆ. ಇದನ್ನು ಬಿಟ್ಟು ನಿಯಮಗಳಿಲ್ಲದಿದ್ದರೂ ವ್ಯವಸ್ಥೆ ಯಾಗುತ್ತದೆ ಎಂದು ವಾದಿಸಿದರೆ ಉಸಿರಾಡದಿದ್ದರೂ ‘ಜೀವಿ’ಯಾಗುತ್ತವೆ ಎಂದಷ್ಟೇ ಅಸಂಭದ್ದವಾಗುತ್ತದೆ.

    ಡಾ.ಷಣ್ಮುಖ

    Like

  19. anandgj
    ಜೂನ್ 2, 2013 ರಲ್ಲಿ 10:26 ಅಪರಾಹ್ನ

    ಸನ್ಮಾನ್ಯ ಡಾ. ಷಣ್ಮುಖರವರೇ,

    ಧರ್ಮ ಎನ್ನುವುದರ ಬಗ್ಗೆ ನನ್ನ ಗ್ರಹಿಕೆ ಏನೆಂಬುದನ್ನು ಹಿಂದಿನ ಕಮೆಂಟುಗಳಲ್ಲಿ ಬರೆದಿದ್ದೇನೆ. ನಿಮ್ಮ ಸಂಶೋಧನಾತ್ಮಕ ವಿವರಣೆ ಮತ್ತು ಭಾಷೆ ನನಗೆ ಬಾರದು. ಅದನ್ನು ಮೊದಲೂ ತಿಳಿಸಿದ್ದೇನೆ. ನಾನು ಯಾವ ಅರ್ಥದಲ್ಲಿ ಬರೆದಿದ್ದೇನೋ ಅದನ್ನು ಮತ್ತೆ ಹೇಳಬೇಕೆಂದರೆ… ಇಂದು “ಹಿಂದೂ ಧರ್ಮ” ಎಂದು ಯಾವುದನ್ನು ಕರೆಯಲಾಗುತ್ತಿದೆಯೋ ಅದನ್ನು ಸನಾತನ ಧರ್ಮ/ ವೈದಿಕ ಧರ್ಮವೆಂದೂ ಈ ಮೊದಲು ಗುರುತಿಸಲಾಗುತ್ತಿತ್ತು. ಇವು ನಮ್ಮ ಸಮಾಜವನ್ನು ನಿಯಂತ್ರಿಸುತ್ತಿತ್ತೇ ಇಲ್ಲವೇ ಎನ್ನುವುದಕ್ಕೆ ಸಮಾಜದಲ್ಲಿರುವ ಜಾತಿವ್ಯವಸ್ಥೆಗಿಂತಲೂ ಮತ್ತೊಂದು ಪುರಾವೆಯಿರಬೇಕೆಂದು ನನಗನ್ನಿಸುವುದಿಲ್ಲ. ಚಾತುರ್ವರ್ಣಗಳಲ್ಲೇ ಜಾತಿಗಳು ಹಂಚಿಹೋಗಿವೆ ಎನ್ನುವುದಕ್ಕೆ ಪುರಾಣ ಮತ್ತು ಇತಿಹಾಸಗಳಲ್ಲಿ ಬರೆಯಲಾಗಿರುವ ನಾನಾ ವ್ಯಕ್ತಿ ಕಥನಗಳು ಸಾಕ್ಷಿಯಾಗಿವೆ. ಪ್ರಜಾಪ್ರಭುತ್ವದ ನಂತರದಲ್ಲಿ ಈ ವ್ಯವಸ್ಥೆಯಲ್ಲಿ, ಜಾತಿಗಳು ವಹಿಸುವ ಪಾತ್ರಗಳಲ್ಲಿ ಏರುಪೇರುಗಳು ಕಾಣುತ್ತಿವೆಯಷ್ಟೇ! ಇದಕ್ಕೂ ಮುನ್ನ ಅಂದರೆ ರಾಜರುಗಳ ಕಾಲದಲ್ಲಿ ನಮ್ಮ ಸಮಾಜದಲ್ಲಿ ಜಾತಿಗಳು ವಹಿಸಿದ್ದ ಪಾತ್ರಗಳು (ROLES) ಈ ಚಾತುರ್ವರ್ಣಗಳಲ್ಲಿ ವಿವರಿಸಿದ್ದಕ್ಕಿಂತಾ ಭಿನ್ನವಲ್ಲಾ ಎಂದು ಇತಿಹಾಸದ ಪುಸ್ತಕಗಳನ್ನು ಓದಿದಾಗ ನನಗನ್ನಿಸಿದೆ, ಇದನ್ನು ಮಹಾಭಾರತದಲ್ಲಿ ಕೃಷ್ಣ ಮತ್ತು ಕರ್ಣರಿಗೆ ಕ್ಷತ್ರಿಯರಲ್ಲಾ ಎನ್ನುವ ಕಾರಣದಿಂದ ಆಯಿತೆಂಬುದರಿಂದ ಹಿಡಿದು, ಶಿವಾಜಿ ಮಹಾರಾಜರಿಗೆ ಶೂದ್ರನೆಂಬ ಕಾರಣಕ್ಕೆ ಪಟ್ಟಾಭಿಶೇಕ ಮಾಡಲು ಅಲ್ಲಿನ ಬ್ರಾಹ್ಮಣರು ನಿರಾಕರಿಸಿದ್ದ ಘಟನೆಯವರೆಗೂ ಕಾಣಬಹುದಾಗಿದೆ.

    ಜಾತಿವ್ಯವಸ್ಥೆಯ ಬಗ್ಗೆ ಮಾತಾಡುವಾಗ ಅದನ್ನು ಹಿಂದೂ ಸಮಾಜದ ಸ್ವರೂಪವೆನ್ನುವಾಗ ತಾವು ಭಾರತೀಯ ಮುಸ್ಲಿಮರ ಮತ್ತು ಭಾರತೀಯ ಕ್ರೈಸ್ತರ ಜಾತಿಗಳ ಬಗ್ಗೆ ಮಾತಾಡಿದ್ದೀರಿ. ಅವರಾದರೂ ಯಾರು? ಇದೇ ಹಿಂದೂ ಸಮಾಜದ ಜಾತಿವ್ಯವಸ್ಥೆಯ ಅಂಗಗಳಾಗಿಯೇ ಇದ್ದವರಲ್ಲವೇ? ಧರ್ಮಾಂತರವಾದರೂ ಬಿಡದ ಜಾತಿಯ ಭೂತದ ಕಾಟ ಅವರಿಗೆ ಅಷ್ಟೇ! ತಲೆಮಾರುಗಳು ಸರಿದಂತೆ ಅದು ಕುಗ್ಗುತ್ತಾ ಸಾಗುತ್ತದೆಯೆನ್ನಬಹುದಾದರೂ ಅಳಿಯುವುದು ಸುಲಭವಲ್ಲಾ! “ವೈದಿಕ ಧರ್ಮದ ವಿರೋಧಿಯಾದ ಬಸವಣ್ಣ” ಎನ್ನಲು ನನ್ನಲ್ಲಿ ಆಧಾರವಿಲ್ಲಾ… ಆದರೆ ಜಾತಿಯ ಕಟ್ಟುಪಾಡನ್ನು ಇಲ್ಲವಾಗಿಸಲು ಯತ್ನಿಸಿ (ಜಾತಿಗಳನ್ನು ಇಲ್ಲವಾಗಿಸಿ ಎನ್ನುತ್ತಿಲ್ಲಾ!) ಎಲ್ಲರನ್ನೂ ತೊಡಗಿಸಿಕೊಂಡು ವಚನ ಚಳವಳಿ ನಡೆಯುವಲ್ಲಿ ಮಹತ್ವದ ಪಾತ್ರವಹಿಸಿದ ಬಸವಣ್ಣನ ಅನುಯಾಯಿಗಳಿಗೂ ಜಾತಿಯೇರ್ಪಾಟಿನಿಂದ ಕಳಚಿಕೊಳ್ಳಲು ಸಾಧ್ಯವಾಗಿಲ್ಲ. ನೀವು ಶಂಕರಾಚಾರ್ಯರ ಬಗ್ಗೆ ಅವರು ತಮ್ಮನ್ನು ತಾವು ಹಾಗೆಂದುಕೊಂಡರೇ ಹೀಗೆಂದುಕೊಂಡರೇ ಎಂದು ಕೇಳುತ್ತಿರುವುದನ್ನು ನೋಡಿದಾಗ ನನಗನ್ನಿಸಿದ್ದು ದೊಡ್ಡವ್ಯಕ್ತಿಗಳ್ಯಾರೂ ತಮ್ಮನ್ನು ತಾವು ದೊಡ್ಡವ್ಯಕ್ತಿಗಳೆಂದೂ, ಇಂಥದ್ದೊಂದು ಬಿರುದು ತಮ್ಮದೆಂದೂ ಹೇಳಿಕೊಳ್ಳುವುದಿಲ್ಲಾ! ಅವರ ಕೆಲಸ ಕೊಡುಗೆಗಳನ್ನು ನೋಡಿ ಮುಂದಿನವರು ಹಾಗೆನ್ನುತ್ತಾರೆ!

    ವೈದಿಕ ಧರ್ಮವೆಂದರೆ ವೇದಗಳನ್ನು ಪ್ರಮಾಣವೆಂದು ಒಪ್ಪಿರುವುದು ಎಂದಿದ್ದೆ. ವೇದಗಳಿಂದ ಉಪನಿಶತ್ತುಗಳಾಗಿ, ಉಪನಿಶತ್ತುಗಳು ಸ್ಮೃತಿಗಳಾಗಿ, ಪುರಾಣ ಕಥನಗಳಾಗಿ ಸಮಾಜ ಹೇಗಿರಬೇಕೆಂದು ನಿರ್ದೇಶಿಸುತ್ತಿರುವುದಕ್ಕೆ ಪುರಾವೆಯೇನೆಂಬುದನ್ನು ಮುಂದೆ ಯಾರಾದರೂ ಸಂಶೋಧಿಸಬಹುದು. ಇತ್ತೀಚಿಗೆ ಓದಿದ ಒಂದು ಹೊತ್ತಗೆಯಲ್ಲಿ ಹೀಗೆ ಬರೆದಿದ್ದಾರೆ.

    ಮನುಸ್ಮೃತಿಯಲ್ಲಿ ಒಂದೆರಡು ಶ್ಲೋಕಗಳು ಹೀಗಿವೆ:
    ಚಾತುರ್ವರ್ಣ್ಯಂ ತ್ರಯಾಲೋಕಶ್ಚರಶ್ಚಾಮಾ ಪೃಥಕ್I ಭೂತಂ ಭವ್ಯಂ ಭವಿಷ್ಯಂ ಚ ಸರ್ವಂ ವೇದಾತ್ಪ್ರಸಿಧ್ಯತಿII (೧೨/೯೭)
    ನಾಲ್ಕುವರ್ಣಗಳೂ, ಮೂರುಲೋಕಗಳೂ, ನಾಲ್ಕು ಆಶ್ರಮಗಳೂ, ಮೂರು ಕಾಲಗಳೂ ಮತ್ತು ಇತರ ವಿದ್ಯಮಾನಗಳೂ ವೇದಗಮ್ಯಗಳಾಗಿವೆ ಎಂಬುದು ಇದರರ್ಥವಂತೆ.
    ಯಃ ಕಶ್ಚಿತ್ಕಸ್ಯಚಿದ್ಧರ್ಮೋ ಮನುಸಾ ಪರಿಕೀರ್ತಿತಃI ಸ ಸವೋಭಿಹಿತೇ ವೇದೇ ಸರ್ವಜ್ಞಾನಮಯೋ ಹಿ ಸಃII (೨/೭)
    ಇದೂ ಕೂಡಾ ಮನುಸಮೃತಿಯಲ್ಲಿ ಮನುವನ್ನು ಕುರಿತು ಹೇಳಲಾಗಿರುವುದು. ಮನುವು ಸರ್ವಜ್ಞನಾದ ಪಾರಂಗತನು. ಮನು ಹೇಳಿದುದೆಲ್ಲವೂ ವೇದಾದಿ ಧರ್ಮಗ್ರಂಥಗಳಲ್ಲಿ ಹೇಳಿದೆ ಎಂದು ಇದರ ಅರ್ಥವಂತೆ!
    ಇನ್ನು ವೇದಸುಧೆಯೆನ್ನುವ ಒಂದು ಅಂತರ್ಜಾಲತಾಣವನ್ನು ಹುಡುಕಿದಾಗ ಸಿಕ್ಕಿದ ಈ ಒಂದು ಕೊಂಡಿಯನ್ನು ನೋಡಿದೆ. ನಾಕುವೇದಗಳಲ್ಲಿ ಪಾಂದಿತ್ಯಹೊಂದಿರುವ ಶ್ರೀ ಸುಧಾಕರ ಚತುರ್ವೇದಿಗಳು ವೇದಗಳೇ ಪ್ರಮಾಣವೆನ್ನುವ ಬಗ್ಗೆ ಹೀಗನ್ನುತ್ತಾರೆ. http://blog.vedasudhe.com/2010/06/blog-post_3496.html
    ಯಾಜ್ಞವಲ್ಕ್ಯ ಸ್ಮೃತಿಯಲ್ಲಿ ಹೀಗೆ ಬರೆದಿದ್ದಾರೆ: ತಪಸ್ತಪ್ತ್ವಾ ಸೃಜದ್ಬ್ರಹ್ಮ ಬ್ರಾಹ್ಮಣಾನ್ವೇದ ಗುಪ್ತಯೇI ತೃಪ್ತ್ಯರ್ಥಂ ಪಿತೃದೇವಾನಾಂ ಧರ್ಮ ಸಂರಕ್ಷಣಾಯ ಚ II
    ಇದರ ಅರ್ಥ ಬ್ರಹ್ಮನು ಬ್ರಾಹ್ಮಣರನ್ನೂ ವೇದಗಳನ್ನೂ ಪಿತೃದೇವತೆಗಳ ತೃಪ್ತಿಗಾಗಿ ಮತ್ತು ಧರ್ಮ ಸಂರಕ್ಷಣೆಗಾಗಿಯೂ ಸೃಷ್ಟಿಸಿದ್ದಾನೆ ಎಂಬುದಾಗಂತೆ…

    ಇನ್ನೊಂದು ಬಲು ಜನಪ್ರಿಯವಾದ ಶ್ಲೋಕ, ಭಗವದ್ಗೀತೆಯದ್ದು: ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂI ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇII ಒಳ್ಳೆಯವರನ್ನು ಕಾಪಾಡಲು, ಕೆಟ್ಟವರನ್ನು ಹಾಳುಗೆಡವಲು ಧರ್ಮವನ್ನು ಗಟ್ಟಿಯಾಗಿ ನಿಲ್ಲಿಸಲು ಯುಗಯುಗಗಳಲ್ಲಿ ಬರುತ್ತೇನೆII
    ಹಾಗಾದರೆ ಯಾವುದು ಧರ್ಮ? ಇದನ್ನು ಸಂಸ್ಥಾಪನೆ ಮಾಡುವುದು ಎಂದರೇನು?

    ಇವತ್ತಿನ ಸಮಾಜದಲ್ಲಿ ಹರಡಲಾಗುತ್ತಿರುವ ಈ ಮಾತುಗಳನ್ನು ನೋಡಿರಿ. ಶ್ರೀ ಸುಧಾಕರ ಚತುರ್ವೇದಿಗಳು ಆಡಿದ್ದಾರೆಂದು ವೇದಸುಧೆಯಲ್ಲಿ ಬರೆಯಲಾಗಿರುವ ಈ ಬರಹದಲ್ಲಿರುವುದು ಹೀಗೆ:
    ವೈದಿಕ ರಾಜನೀತಿಯ ಉದ್ದೇಶ್ಯ ಆದರ್ಶವಾದ ‘ಕಲ್ಯಾಣರಾಜ್ಯ’ದ ನಿರ್ಮಾಣವೇ ಆಗಿರುತ್ತದೆ. ಆ ಕಲ್ಯಾಣ ರಾಜ್ಯದ ಸ್ವರೂಪವೇನು? ಪ್ರಾರ್ಥನಾ ರೂಪದಲ್ಲಿ ಯಜುರ್ವೇದ ಅದನ್ನು ಈ ರೀತಿ ವರ್ಣಿಸುತ್ತದೆ:-
    ಆ ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರ
    ಇಷವ್ಯೋsತಿವ್ಯಾಧೀ ಮಹಾರಥೋ ಜಾಯತಾಂ ದೋಗ್ಧ್ರೀ ಧೇನುರ್ವೋಧಾನಡ್ವಾನಾಶುಃ
    ಸಪ್ತಿಃ ಪುರಂಧಿರ್ಯೋಷಾ ಜಿಷ್ಣೂ ರಥೇಷ್ಠಾಃ ಸಭೇಯೋ ಯುವಾಸ್ಯ ಯಜಮಾನಸ್ಯ
    ವೀರೋ ಜಾಯತಾಂ ನಿಕಾಮೇ ನಿಕಾಮೇ ನಃ ಪರ್ಜನ್ಯೋ ವರ್ಷತು ಫಲವತ್ಯೋ ನ
    ಓಷಧಯಃ ಪಚ್ಯಂತಾಂ ಯೋಗಕ್ಷೇಮೋ ನಃ ಕಲ್ಪತಾಮ್ || (ಯಜು.೨೨.೨೨.)
    [ಬ್ರಹ್ಮನ್] ಓ ಪರಮಾತ್ಮನ್! [ರಾಷ್ಟ್ರೇ] ನಮ್ಮ ರಾಷ್ಟ್ರದಲ್ಲಿ [ಬ್ರಹ್ಮವರ್ಚಸೀ ಬ್ರಾಹ್ಮಣಃ] ಬ್ರಹ್ಮವರ್ಚಸ್ಸಿನಿಂದ ಕೂಡಿದ ಬ್ರಾಹ್ಮಣನು, [ಆ ಜಾಯತಾಮ್] ಹುಟ್ಟಿ ಬರುತ್ತಿರಲಿ. [ರಾಜನ್ಯಃ] ಕ್ಷತ್ರಿಯನು [ಶೂರಃ] ಶೂರನೂ [ಇಷವ್ಯಃ] ಶಸ್ತ್ರಾಸ್ತ್ರ ಪ್ರಯೋಗ ನಿಪುಣನೂ [ಅತಿವ್ಯಾಧೀ] ರೋಗರುಜಿನಗಳಿಲ್ಲದವನೂ [ಮಹಾರಥಃ] ಮಹಾರಥನೂ [ಅಜಾಯತಾಮ್] ಆಗಿ ಜನ್ಮವೆತ್ತಿ ಬರುತ್ತಿರಲಿ. [ಧೇನುಃ] ಗೋವು, [ದೋಗ್ಧ್ರೀ] ಪುಷ್ಕಳವಾಗಿ ಹಾಲು ಕೊಡುತ್ತಿರಲಿ. [ಅನಡ್ವಾನ್] ಎತ್ತು [ವೋಢಾ] ಹೊರೆ ಹೊರಲು ಸಮರ್ಥವಾಗಿರಲಿ. [ಸಪ್ತಿಃ] ಕುದುರೆ [ಆಶುಃ] ವೇಗಶಾಲಿಯಾಗಿರಲಿ. [ಯೋಷಾ] ನಾರಿಯು [ಪುರಂಧಿಃ] ಉತ್ತರದಾಯಿತ್ವ ಹೊರುವವಳಾಗಿರಲಿ. [ಅಸ್ಯ ಯಜಮಾನಸ್ಯ] ಈ ಶುಭಕರ್ಮಕರ್ತನ [ವೀರಃ] ಪುತ್ರನು [ಜಿಷ್ಣುಃ] ಜಯಶಾಲಿಯೂ, [ರಥೇಶಷ್ಠಾಃ] ಉತ್ತಮ ರಥಿಕನೂ, [ಸಭೇಯಃ] ಸಭೆಯಲ್ಲಿ ಕುಳಿತುಕೊಳ್ಳಲು ಅರ್ಹನೂ, [ಯುವಾ] ಉತ್ಸಾಹಶಾಲಿಯೂ, [ಜಾಯತಾಮ್] ಆಗಿರಲಿ. [ನಃ] ನಮಗಾಗಿ [ಓಷಧಯಃ] ಓಷಧಿಗಳು, [ಫಲವತ್ವಃ] ಫಲಭರಿತವಾಗಿ [ಪಚ್ಯಂತಾಮ್] ಪಕ್ವವಾಗಲಿ. [ನಃ] ನಮಗೆ [ಯೋಗಕ್ಷೇಮಃ] ಯೋಗಕ್ಷೇಮವು [ಕಲ್ಪತಾಮ್] ಸಿದ್ಧಿಸಲಿ. ಈ ಪ್ರಾರ್ಥನೆಗೆ ಮೂರ್ತರೂಪ ಸಿಕ್ಕಿದರೆ, ಅತ್ಯಂತ ಭವ್ಯವಾದ ಕಲ್ಯಾಣರಾಜ್ಯ (Welfare State) ಸ್ಥಾಪಿತವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ರಾಜ್ಯದಲ್ಲಿ ಜನಸಾಮಾನ್ಯರು ಸುಖದಿಂದ ಬಾಳಬಲ್ಲರು. -ಪಂ. ಸುಧಾಕರ ಚತುರ್ವೇದಿ.

    ಇದಿಷ್ಟು ನನ್ನಂಥಾ ಪಾಮರನಿಗೆ ಸಿಕ್ಕಿದ್ದು! ಸಂಶೋಧನೆಗೇ ಇಳಿದವರಿಗೆ ಇದಕ್ಕೂ ಹೆಚ್ಚೇ ಸಿಗಬಹುದು!!
    ನೀವು ಜಾತಿಸಮೀಕ್ಷೆಯಲ್ಲಿನ ತೊಡಕುಗಳ ಬಗ್ಗೆ ಹೇಳಿದ ಮಾತುಗಳಿಗೂ, ಜಾತಿಗಳನ್ನು ಚಾತುರ್ವರ್ಣದಲ್ಲಿ ಹಿಡಿದಿಡಲಾಗುವುದೇ ಇಲ್ಲವೇ ಎನ್ನುವುದಕ್ಕೂ… ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೆನ್ನುವುದಕ್ಕೂ ಅಷ್ಟಾಗಿ ಕೊಂಡಿ ಸಿಗುತ್ತಿಲ್ಲಾ! ಮನ್ನಿಸಿ. ತಾವು ಪಂಡಿತರೆನ್ನುವುದನ್ನು ನಾನು ಬಲ್ಲೆ. ನಾನು ಪುರಾವೆಯನ್ನು ಸರ್ಕಾರಕ್ಕೆ ಸಲಹೆ ಕೊಡಬೇಕೆನ್ನುವ ತಮ್ಮ ಮಾತು ವ್ಯಂಗ್ಯೋಕ್ತಿ ಅಲ್ಲಾ ಎಂದುಕೊಳ್ಳುತ್ತೇನೆ. ನಮಸ್ಕಾರ.

    Like

  20. Dr. Shanmukha
    ಜೂನ್ 3, 2013 ರಲ್ಲಿ 12:08 ಅಪರಾಹ್ನ

    ಪ್ರಿಯ ಆನಂದ್ ರವರೇ
    standard text book story ಗಳನ್ನು ಇಟ್ಕೊಂಡು ಹೊಸ ಸಂಶೋಧನಾ ವಾದಗಳಿಗೆ ಉತ್ತರವೆಂಬಂತೆ ನೀಡುತ್ತಿರುವಿರಲ್ಲಾ!!. ನೀವು ಹೇಳಿರುವ ವಾದಗಳನ್ನೇ ನಾವು 3ನೇ ತರಗತಿ ಯಿಂದ ಪಿ.ಹೆಚ್.ಡಿ ಮುಗಿಸುವ ವರೆಗೆ ಓದಿದ್ದೇವೆ, ಕೇಳಿದ್ದೇವೆ. ನಮ್ಮ ಸಂಶೋಧನೆಯ ವಾದಗಳು ಈ ಪಠ್ಯಗಳಲ್ಲಿನ ಸ್ಥಾಪಿತ ಕಥೆಗಳನ್ನು ಪರೀಕ್ಷೆಗೊಳಪಡಿಸಿ ಅವುಗಳ ಧೋಷಗಳನ್ನು ವಿವರಿಸುತ್ತಿರುವಾಗ ಈ ನಮ್ಮ ವಾದಗಳನ್ನು ತಪ್ಪೆಂದು ತೋರಿಸಿಲು ಈ ಪಠ್ಯ ಪುಸ್ತಕಗಳಿಗಿಂತ ಹೆಚ್ಚಿನ ಸಂಶೋಧನೆಯ ತಾರ್ಕಿಕ ವಾದಗಳು ಬೇಕಾಗುತ್ತವೆ.

    “ಇಂದು “ಹಿಂದೂ ಧರ್ಮ” ಎಂದು ಯಾವುದನ್ನು ಕರೆಯಲಾಗುತ್ತಿದೆಯೋ ಅದನ್ನು ಸನಾತನ ಧರ್ಮ/ ವೈದಿಕ ಧರ್ಮವೆಂದೂ ಈ ಮೊದಲು ಗುರುತಿಸಲಾಗುತ್ತಿತ್ತು.” ಈ ರೀತಿ ಯಾವ ವಸಾಹತು ಪೂರ್ವ ಭಾರತೀಯ ಚಿಂತಕ ಹೇಳಿದ್ದಾನೆ ಎಂದು ದಯವಿಟ್ಟು ತೋರಿಸಿ. ಇಂದಿನ ಬ್ರಾಹ್ಮಣ ಪಂಡಿತರು ಸಂಸ್ಕೃತ ಶ್ಲೋಕಗಳನ್ನು ಉದ್ದರಿಸಿ ‘ಹಿಂದೂಧರ್ಮ’ದ ಅಸ್ತಿತ್ವದ ಪುರಾವೆಗಳೆಂಬಂತೆ ವ್ಯಾಖ್ಯಾನಿಸಿಬಿಟ್ಟರೆ ಅವೇ ಸಾಕ್ಷಿಗಳಾಗಿಬಿಡುವುದಿಲ್ಲ. ವಸಾಹತು ದೊರೆಗಳಿಗೆ ಸನಾತನ, ವೈಧೀಕ ಧರ್ಮದ ಅಸ್ತಿತ್ವವನ್ನು ಪುಂಖಾನುಪುಂಖವಾಗಿ ಶೋದಿಸಿ ಸಾಧಿಸಿ ಕೊಟ್ಟವರೇ ಈ ಬ್ರಾಹ್ಮಣ ಪಂಡಿತರು ಎನ್ನುವುದುನ್ನು ಸ್ವಲ್ಪ ಬೆಂಗಾಲದಲ್ಲಿ 1805 ರಿಂದ 1862ರ (ಹಿಂದೂ ಲಾ ಕಂಡುಕೊಂಡ ಸಂಧರ್ಭ) ವಸಾಹತು ದೊರೆಗಳ ಆಳ್ವಿಕೆಯಲ್ಲಿ ಬ್ರಾಹ್ಮಣ ಪಂಡಿತರು ವಹಿಸಿದ ಪಾತ್ರಗಳನ್ನು ಅಧ್ಯಯನ ಮಾಡಿದರೆ ತಮ್ಮ ಗಮನಕ್ಕೆ ಬರುತ್ತದೆ. ಇಂದಿನ ಬ್ರಾಹ್ಮಣ/ ಸಂಸ್ಕೃತ ಪಂಡಿತರೂ ಅದೇ ಪ್ರಮಾಧಗಳನ್ನೇ ಮಾಡುತ್ತಿದ್ದಾರೆ. ಅವರ ವ್ಯಾಖ್ಯಾನಗಳನ್ನು ಮತ್ತು ವಸಾಹತು ಪೂರ್ವ ಭಾರತೀಯ ಚಿಂತಕರ ವ್ಯಾಖ್ಯಾನಗಳೊಟ್ಟಿಗೆ ಹೋಲಿಸಿ ಸಮಸ್ಯೆಗಳನ್ನು ಗುರುತಿಸಿದರೆ ವಾಸ್ತವ ನಿಮಗೆ ಅರಿವಾಗುತ್ತದೆ.

    ಭಗವದ್ಗೀತೆಯ ಶ್ಲೋಕ ಹೇಳುವುದು ಕೆಡಕು (ಅಧರ್ಮ) ಹೆಚ್ಚಾದಾಗ ಕೆಡಕನ್ನು ನಾಶ ಮಾಡಿ ಒಳಿತನ್ನು (ಧರ್ಮವನ್ನು) ಪುನರ್ ಸ್ಥಾಪಿಸಲು ಯುಗಯುಗಗಳಲ್ಲೂ ಜನ್ಮವೆತ್ತುವುದಾಗಿ ಹೇಳಲಾಗಿದೆ. ಹಿಂದೂ ಧರ್ಮದ ಪುನರ್ ಸ್ಥಾಪನೆಯ ಪ್ರಶ್ನೆ ಇಲ್ಲಿ ಎಲ್ಲಿಂದ ಬಂತು?

    ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ welfare state ಏನು.. Democracy, Libaral State, Decentralisation, Egalitarian State, Republic State ಎಲ್ಲವೂ ಪುರಾತನ ಭಾರತದಲ್ಲಿತ್ತು ಎಂದು 1905 ರಿಂದಲೇ ರಾಷ್ಟ್ರೀಯವಾದೀ ಇತಿಹಾಸಕಾರರು (KP Jayaswal, RC Mujumdar, RS Sharam, Altekar ಮುಂತಾದವರು) ಹೇಳುತ್ತಲೇ ಬಂದಿದ್ದಾರೆ. ಅದನ್ನು ಇಂದಿನ ಪಂಡಿತೋತ್ತಮರು ಉರು ಹೊಡೆದು ಬೇರೆ ಬೇರೆ ಉಧ್ಗರಂಥಗಳ ಶ್ಲೋಕಗಳನ್ನು ಉಧ್ದರಿಸಿ ಕಂಡುಹಿಡಿಯುತ್ತಿದ್ದಾರೆ, ಅಷ್ಟೇ. ಇದನ್ನೇ ಬಾಲು ವಸಾಹತುಪ್ರಜ್ಞೆ ಎನ್ನುತ್ತಿರುವುದು. ಪಶ್ಚಿಮದಲ್ಲಿರುವುದೆಲ್ಲವೂ (ಅದಕ್ಕಿಂತ ಶ್ರೇಷ್ಟಮಟ್ಟದಲ್ಲಿ) ಭಾರತದಲ್ಲಿ ಇತ್ತು ಎಂದರೇನೇ ಭಾರತಕ್ಕೆ ಹಿರಿಮೆ ಎನ್ನುವ ಮನೋಭಾವ ಏಕೆ? ಪಶ್ಚಿಮದಲ್ಲಿ ಅವರ ಸಂಸ್ಕೃತಿಗೆ ತಕ್ಕ ರೀತಿಯ ಸಂಸ್ಥೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಇತ್ತು. ಮತ್ತು ನಮ್ಮಲ್ಲಿ ಅದಕ್ಕಿಂತಲೂ ಬೇರೆಯದೇ ಆದ ರೀತಿಯ ಜೀವನ ಕ್ರಮ ಇದ್ದಿರಬಹದು (ಈಗಲೂ ಹಾಗೆಯೇ ಇದೆ) ಎನ್ನುವ ಆಲೋಚನೆಯೇ ಬರುವುದಿಲ್ಲವಲ್ಲ ಏಕೆ?

    ಖಂಡಿತ ನಾವ್ಯಾರೂ ಪಂಡಿತರಲ್ಲಾ ಪಂಡಿತರಾಗುವ ಇಚ್ಚೆಯೂ ಇಲ್ಲ. ಈ ಪಂಡಿತರು (ಶ್ಲೋಕಗಳನ್ನು ವ್ಯಾಖ್ಯಾನ ಮಾಡುವವರು) ವಸಾಹತು ದೊರೆಗಳು ಏನು ಕೇಳುತ್ತಿದ್ದಾರೆ ಮತ್ತು ಹೇಳುತ್ತಿದ್ದಾರೆ ಎಂದು ಯೋಚಿಸದೆಯೇ ನಮ್ಮ ಪ್ರಾಚೀನ ಗ್ರಂಥಗಳಿಗೆ ವ್ಯಾಖ್ಯಾನ ಅನುವಾದಗಳಲ್ಲಿ ಮಾಡಿದ ಅನರ್ಥಗಳ ಕಾರಣದಿಂದಲೇ ಇಂದಿನ ನಮ್ಮ ಚರಿತ್ರೆ ಸಮಾಜ ವಿಜ್ಞಾನಗಳು ತಪ್ಪು ತಪ್ಪಾದ “ವಸಾಹತು ಚಿತ್ರಣಗಳ” ಕಂಗ್ಗಂಟಾಗಿದೆ. ನಮ್ಮಲ್ಲಿ ನಿಜವಾಗಲೂ ಏನಿತ್ತು? ಏನಿದೆ? ಎನ್ನುವುದರ ಬಗ್ಗೆ ನಾವು ನೀವು ಇಂದು ಕಿತ್ತಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನಾವು ಸಾಮಾಜಿಕ ಸಂಶೋಧನೆ ಮಾಡುತ್ತಿರುವ ವಿಧ್ಯಾರ್ಥಿಗಳೇ ಹೊರತು ಖಂಡಿತ ಪಂಡಿತರಲ್ಲ. ಮತ್ತು ನನ್ನ ಪ್ರಕಾರ ಸದ್ಯಕ್ಕೆ ನಮಗೆ ಈ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಬೇಕರುವುದು ವೈಜ್ಞಾನಿಕ ಸಂಶೋಧನೆ ಮಾಡುವ ವಿದ್ಯಾರ್ಥಿಗಳೇ ಹೊರತು ಖಂಡಿತ ಪಂಡಿತರಲ್ಲ. ಈ ಪಂಡಿತರು ಈಗಾಗಲೇ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ತುಂಬಿಕೊಂಡಿದ್ದಾರೆ ಅವರ ಸ್ಥಾನಗಳು ನಮಗೆ ಬೇಡ.

    Like

  21. anandgj
    ಜೂನ್ 3, 2013 ರಲ್ಲಿ 7:21 ಅಪರಾಹ್ನ

    ಸನ್ಮಾನ್ಯ ಷಣ್ಮುಖರವರೇ,

    ತಮ್ಮ ಉತ್ತರಕ್ಕಾಗಿ ಧನ್ಯವಾದಗಳು. ನಾನು ಸಂಶೋಧಕನಲ್ಲದ್ದರಿಂದ ಮೂರನೇ ಕ್ಲಾಸಿನ ಕಲಿಕೆಗಳೇ ನನ್ನಿಂದ ಹೊರಬರುತ್ತಿರಬಹುದು. ಇರಲಿ… ಆ ಪಾಠಗಳನ್ನೂ ಒರೆ ಹಚ್ಚಿನೋಡುವುದು ಹೇಗೆಂದು ನನಗೆ ತಿಳಿದಂತೆ ಮಾಡಿ ತಿಳಿಯಲು ಪ್ರಯತ್ನಿಸಿದ್ದೇನೆ. ಅದು ಸಂಶೋಧನೆಯ ಮಾರ್ಗವಲ್ಲದೆ ನನ್ನ ಮನೆ, ಸಮಾಜ, ಪರಿಸರ ಮತ್ತು ಕೆಲವುಮಟ್ಟಿಗೆ ಓದು. ಈ ಯಾವುದರಲ್ಲೂ ನನಗೆ “ನಾಡಿನಲ್ಲಿ ಜಾತಿಗಳಿವೆ, ಜಾತಿಗಳು ಹುಟ್ಟಿನಿಂದ ತೀರ್ಮಾನವಾಗುತ್ತವೆ, ಪ್ರತಿಯೊಬ್ಬನ ಸಾಮಾಜಿಕ ಸ್ಥಿತಿ ಅವನ ಹುಟ್ಟಿನಿಂದ ತೀರ್ಮಾನವಾಗುತ್ತದೆ” ಎಂದು ನಂಬಿಸಲ್ಪಟ್ಟಿದ್ದೇನೆ. ಹೀಗೆ ಹುಟ್ಟಿನಿಂದ ವ್ಯಕ್ತಿಯ ಸ್ಥಾನಮಾನ ನಿಶ್ಚಯವಾಗುವ ವ್ಯವಸ್ಥೆಯನ್ನು ಜಾತಿ ವ್ಯವಸ್ಥೆ ಎಂದಿದ್ದೇನೆ.

    ಇದೊಂದು ವ್ಯವಸ್ಥೆಯಲ್ಲಾ! ಏಕೆಂದರೆ ಇದಕ್ಕೆ ಸಂಸ್ಥೆಯಿಲ್ಲಾ, ಕುಲಪತಿಯಂತಹ ನಿಯಂತ್ರಕರಿಲ್ಲಾ ಹಾಗಾಗಿ ಇದು ವ್ಯವಸ್ಥೆಯಲ್ಲಾ ಎನ್ನುವ ಮಾತುಗಳನ್ನು ಪ್ರಿಯ ಸಂತೋಷ್ ಶೆಟ್ಟಿಯವರ ಮಾತುಗಳಲ್ಲಿ ಕಂಡು… ಸಂಶೋಧನೆಯ ಪರಿಭಾಷೆಯಲ್ಲಿ ವ್ಯವಸ್ಥೆಯೆಂಬುದಾಗಿ ವಿವರಿಸುವ ಏರ್ಪಾಟುಗಳಿಲ್ಲದರಿಂದಲೇ ನಮ್ಮ ನಾಡಲ್ಲಿ ಜಾತಿವ್ಯವಸ್ಥೆ ಇಲ್ಲಾ ಎನ್ನುವ ವಾದವನ್ನು ಮಾಡಬಹುದೇ ಎನ್ನುವ ಅನುಮಾನ ತೋರಿಸಿದ್ದೇನೆ. ಹೀಗಾಗಿ ಇಂತಹ ಜಾತಿಯ ಕಾರಣಗಳಿಂದಾಗಿ ಮನುಷ್ಯರನ್ನು ವರ್ಗೀಕರಿಸುವ, ಅವರ ಸ್ಥಾನಮಾನ ತೀರ್ಮಾನಿಸುವ ಯಾವ ಹಳೆಯ ಕಾಲದ ಬರಹವಿದೆ ಎಂದುದಕ್ಕೆ ಪ್ರತಿಯಾಗಿ ವೇದಗಳಲ್ಲಿ ಒಂದಾದ ಋಗ್ವೇದದಲ್ಲಿನ ಪುರುಷಸೂಕ್ತದಲ್ಲಿನ ಸಾಲುಗಳನ್ನೂ, ವೇದಗಳಿಂದಲೇ ಉಂಟಾದ ಉಪನಿಶತ್ತುಗಳ, ಸ್ಮೃತಿಗಳ ಸಾಲಿಗೆ ಸೇರುವ ಯಾಜ್ಞವಲ್ಕ್ಯ ಸ್ಮೃತಿ, ಮನು ಸ್ಮೃತಿಗಳಲಿ ಇಂತಹ ವರ್ಗೀಕರಣದ ಬಗ್ಗೆ ಇರುವ ಮಾತುಗಳನ್ನು ಹೆಕ್ಕಿ ತೋರಿಸಿದ್ದೇನೆ. ಈಗ ನಿಮ್ಮ ಜೊತೆಗಿನ ಮಾತುಕತೆ ಎತ್ತಕಡೆ ಹರಿಯುತ್ತಿದೆಯೋ ತಿಳಿಯದೆ ಗೊಂದಲವಾಗುತ್ತಿದೆ. ನೀವು ಧರ್ಮವೆಂದರೇನು ಎಂದಿರಿ ಅದಕ್ಕೆ ನಾ ತಿಳಿದ ಅರ್ಥ ಹೇಳಿದೆ. ( ಜನರು ಸಾಮಾನ್ಯವಾಗಿ ಬಳಸುವ ಅರ್ಥದಲ್ಲೇ ನಾನು ಹಿಂದೂ ಧರ್ಮ ಎಂದಿದ್ದೇನೆ. ಅಂದರೆ, ಹಿಂದೂ ಧರ್ಮ ಎಂದು ಇಂದು ಯಾವುದನ್ನು ಜನರು ಕರೆದುಕೊಳ್ಳುತ್ತಾರೋ/ ಗುರುತಿಸುತ್ತಾರೋ ಅದಕ್ಕೆ ಹಿಂದೆ ವೈದಿಕ ಧರ್ಮ/ ಸನಾತನ ಧರ್ಮ ಎನ್ನುತ್ತಿದ್ದರು ಎಂದುಕೊಳ್ಳುತ್ತೇನೆ. ಹಿಂದೂ ಎನ್ನುವುದು ಧರ್ಮವಲ್ಲಾ, ಧರ್ಮವೆಂದರೆ ಅದಕ್ಕೊಬ್ಬ ಸ್ಥಾಪಕನಿರಬೇಕು, ಅದಕ್ಕೊಂದು ಗ್ರಂಥವಿರಬೇಕು ಎನ್ನುವುದರ ಬಗ್ಗೆ ನನ್ನ ಮನಸ್ಸಲ್ಲಿ ಅಷ್ಟೊಂದು ಮಹತ್ವವಿಲ್ಲಾ. ಹಿಂದೂಗಳು ಎಂದು ಇಂದು ಕರೆಯಲಾಗುತ್ತಿರುವ ನಾನೂ, ನೀವು, ಎಲ್ಲರೂ ಕೂಡಾ ಒಂದು ಜಾತಿಯ ಹಣೆಪಟ್ಟಿಯನ್ನು ಹೊಂದಿರುವವರು ಮತ್ತು ಸರ್ವೇಸಾಧಾರಣವಾಗಿ ಹಿಂದೂಗಳಲ್ಲಿ ಜಾತಿಯಿಲ್ಲದೇ ಇರದವರು ಒಬ್ಬರೂ ಇಲ್ಲಾ ಎಂಬುದಂತೂ ನಿಜವಾದ್ದರಿಂದ ಹಿಂದೂ ಧರ್ಮವೆಂದರೆ ಜಾತಿಗಳನ್ನು ಘಟಕವಾಗಿ ಹೊಂದಿರುವ ಸಮಾಜ ಎನ್ನಬಹುದು. ಹುಟ್ಟಿನಿಂದಲೇ ಇಂಥಿಂಥದ್ದಕ್ಕೆ ಇಂಥಿಂಥವರು ಅರ್ಹರು, ಇಂಥಿಂಥವರು ನಿಷಿದ್ಧರು ಎನ್ನುವ ಏರ್ಪಾಟು ಹಿಂದೂಗಳೆಂದು ಕರೆಯಲ್ಪಡುವವರಲ್ಲಿ ಇಂದಿಗೂ ಇದೆ. ಈ ಏರ್ಪಾಟು ತಲೆಮಾರುಗಳಿಂದ ಹೆಚ್ಚಿನ ಬದಲಾವಣೆಯಿಲ್ಲದೇ ನಡೆದುಕೊಂಡು ಬರುತ್ತಿದೆ. ಒಟ್ಟಾರೆ ಈ ವಿಧಾನವನ್ನು ಹಿಂದೂ ಧರ್ಮವೆಂದೂ, ವೈದಿಕ ಧರ್ಮವೆಂದೂ ಕರೆಯುತ್ತಾರೆ ಎನ್ನುವುದು ನನ್ನ ಅನಿಸಿಕೆ.)
    ಇದಕ್ಕೆ ಪ್ರತಿಯಾಗಿ ನೀವು ನನ್ನ ಮಾತಿನ ಸಾರವನ್ನು ಬಿಟ್ಟು “ಹಿಂದೂ ಧರ್ಮವೆಂದರೆ ಜಾತಿಗಳನ್ನು ಘಟಕವಾಗಿ ಹೊಂದಿರುವ ಸಮಾಜ ಎನ್ನಬಹುದು” ಎಂಬ ಸಾಲುಗಳನ್ನು ಮಾತ್ರಾ ಹಿಡಿದುಕೊಂಡಿರಿ!!

    ಧರ್ಮಕ್ಕೂ ವೇದಕ್ಕೂ ಸಂಬಂಧವೇನೆಂದಿರಿ – ಅದಕ್ಕೆ ನಾ ತಿಳಿದ ಸಂಬಂಧವನ್ನು ವಿವರಿಸಿದೆ (ನೀವನ್ನುವಂತೆ ವೇದಗಳನ್ನು ಧಾರ್ಮಿಕ ಗ್ರಂಥಗಳು ಎಂದು ಪಾಶ್ಚ್ಯಾತ್ಯರು ಕರೆದಿದ್ದರೆ ಅದಕ್ಕೆ ಕಾರಣ ಬಹುಶಃ ಇವುಗಳು ದೇವರು, ಅಧ್ಯಾತ್ಮದ ಬಗ್ಗೆ ಬೆಳಕು ತೋರುವ ಗ್ರಂಥಗಳು ಎನ್ನುವ ಕಾರಣದಿಂದಾಗಿ. ಧರ್ಮಗ್ರಂಥಗಳು ಇಹದಲ್ಲಿ ಬದುಕುವ ಬಗೆಯನ್ನು ಹೇಳುವ ಹಾಗೇ ಪರವನ್ನು ಪ್ರಾಪ್ತಗೊಳಿಸುವ ಬಗೆಯನ್ನು ಹೇಳುವುದು ಸಹಜ. ಕುರಾನ್, ಬೈಬಲ್ ಮೊದಲಾದವು ಇಹಕ್ಕೆ ಹೆಚ್ಚಿನ ಒತ್ತುಕೊಟ್ಟು ನೀವು ಹೀಗೆ ಹೀಗೆ ಬದುಕಿ.. ಇವು ನಿಮ್ಮ ಕಟ್ಟಳೆಗಳು ಎನ್ನುತ್ತವೆ. ಆದರೆ ವೇದಗಳು ಪಾರಮಾರ್ಥದ ಸಾಧನೆಗೆ ದಾರಿಗಳನ್ನು (ಹೋಮ, ಹವನ, ತಪಸ್ಸು…) ಹೆಚ್ಚಾಗಿ ತೋರುತ್ತದೆ. ಅದಕ್ಕಾಗೆ ವೇದದಲ್ಲಿ ನಾಲ್ಕು. ನಾಲ್ಕರ ಸಾರವೂ ಒಂದೇ ಆಗಿದ್ದರೂ ಋಗ್ವೇದ ತಪಸ್ಸಿನ ದಾರಿಯನ್ನೂ, ಯಜುರ್ವೇದ ಹೋಮ ಹವನಾದಿ ಕೈಕರಣೆಗಳನ್ನೂ, ಸಾಮ ಸಂಗೀತವನ್ನೂ, ಅಥರ್ವ ತಂತ್ರವನ್ನೂ ಸಾಧನವಾಗಿಸಿಕೊಂಡಿವೆ. ಇರಲಿ, ಅವು ಧರ್ಮಗ್ರಂಥಗಳು ಹೌದೋ ಅಲ್ಲವೋ ಎಂಬ ವಾದ ನಮ್ಮ ಈ ಚರ್ಚೆಯ ವ್ಯಾಪ್ತಿಯ ಆಚೆಯದು. ಇಲ್ಲಿ ನಾವು ಮಾತಾಡುತ್ತಿರುವುದು ವೇದಗಳಲ್ಲಿ ಹೇಳಿದ ಚಾತುರ್ವರ್ಣಗಳೇ ಇಂದಿನ ಜಾತಿಗಳೇ ಎಂಬುದಾಗಿ ಎಂದುಕೊಳ್ಳುತ್ತೇನೆ. ಆ ಅರ್ಥದಲ್ಲಿ ನೋಡಿದರೆ ಪ್ರತಿಯೊಬ್ಬ ಹಿಂದೂವನ್ನೂ ಅವನ ಹುಟ್ಟಿನ ಆಧಾರದ ಮೇಲೆ ಬ್ರಾಹ್ಮಣ, ಕ್ಷತ್ರಿಯ, ಶೂದ್ರ ಹಾಗೂ ವೈಶ್ಯ ಎಂಬ ಗುಂಪುಗಳಲ್ಲೊಂದರಲ್ಲಿ ಗುರುತಿಸಬಹುದು. ಹೀಗಾಗದು ಎಂದು ನೀವುಗಳು ಬರೆದಿದ್ದನ್ನು ಓದಿದ್ದೇನೆ. ನೀವುಗಳೇ ಹೇಳುವಂತೆ ನನ್ನ ಸುತ್ತಲಿನ. ನಮ್ಮ ಸಂಪರ್ಕಕ್ಕೆ ಬರುವ ಪ್ರತಿವ್ಯಕ್ತಿಯ ಜಾತಿ ಯಾವುದೆಂದು ತಿಳಿದಾಗಲೆಲ್ಲಾ ಯಾವ ವರ್ಣದಲ್ಲಿ ಅದು ಬರುತ್ತದೆಯೆಂದು ಗುರುತಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ.) – ನೀವು ಇಲ್ಲೂ ಸಾರವನ್ನು ಬಿಟ್ಟು “ಚರ್ಚೆಯ ವ್ಯಾಪ್ತಿಯ ಹೊರಗಿನದ್ದು” ಎಂಬ ವಾಕ್ಯವನ್ನು ಹಿಡಿದುಕೊಂಡಿರಿ!

    ವೇದಶಾಸ್ತ್ರಗಳಲ್ಲಿ ಸಮಾಜದ ಸ್ವರೂಪದ ಬಗ್ಗೆ ಎಲ್ಲಿಹೇಳಿದೆ ಎಂದಿರಿ. ಅದಕ್ಕೆ ನಾನು (ಆ ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರ
    ಇಷವ್ಯೋsತಿವ್ಯಾಧೀ ಮಹಾರಥೋ ಜಾಯತಾಂ ದೋಗ್ಧ್ರೀ ಧೇನುರ್ವೋಧಾನಡ್ವಾನಾಶುಃ
    ಸಪ್ತಿಃ ಪುರಂಧಿರ್ಯೋಷಾ ಜಿಷ್ಣೂ ರಥೇಷ್ಠಾಃ ಸಭೇಯೋ ಯುವಾಸ್ಯ ಯಜಮಾನಸ್ಯ
    ವೀರೋ ಜಾಯತಾಂ ನಿಕಾಮೇ ನಿಕಾಮೇ ನಃ ಪರ್ಜನ್ಯೋ ವರ್ಷತು ಫಲವತ್ಯೋ ನ
    ಓಷಧಯಃ ಪಚ್ಯಂತಾಂ ಯೋಗಕ್ಷೇಮೋ ನಃ ಕಲ್ಪತಾಮ್ || (ಯಜು.೨೨.೨೨.)
    [ಬ್ರಹ್ಮನ್] ಓ ಪರಮಾತ್ಮನ್! [ರಾಷ್ಟ್ರೇ] ನಮ್ಮ ರಾಷ್ಟ್ರದಲ್ಲಿ [ಬ್ರಹ್ಮವರ್ಚಸೀ ಬ್ರಾಹ್ಮಣಃ] ಬ್ರಹ್ಮವರ್ಚಸ್ಸಿನಿಂದ ಕೂಡಿದ ಬ್ರಾಹ್ಮಣನು, [ಆ ಜಾಯತಾಮ್] ಹುಟ್ಟಿ ಬರುತ್ತಿರಲಿ. [ರಾಜನ್ಯಃ] ಕ್ಷತ್ರಿಯನು [ಶೂರಃ] ಶೂರನೂ [ಇಷವ್ಯಃ] ಶಸ್ತ್ರಾಸ್ತ್ರ ಪ್ರಯೋಗ ನಿಪುಣನೂ [ಅತಿವ್ಯಾಧೀ] ರೋಗರುಜಿನಗಳಿಲ್ಲದವನೂ [ಮಹಾರಥಃ] ಮಹಾರಥನೂ [ಅಜಾಯತಾಮ್] ಆಗಿ ಜನ್ಮವೆತ್ತಿ ಬರುತ್ತಿರಲಿ. [ಧೇನುಃ] ಗೋವು, [ದೋಗ್ಧ್ರೀ] ಪುಷ್ಕಳವಾಗಿ ಹಾಲು ಕೊಡುತ್ತಿರಲಿ. [ಅನಡ್ವಾನ್] ಎತ್ತು [ವೋಢಾ] ಹೊರೆ ಹೊರಲು ಸಮರ್ಥವಾಗಿರಲಿ. [ಸಪ್ತಿಃ] ಕುದುರೆ [ಆಶುಃ] ವೇಗಶಾಲಿಯಾಗಿರಲಿ. [ಯೋಷಾ] ನಾರಿಯು [ಪುರಂಧಿಃ] ಉತ್ತರದಾಯಿತ್ವ ಹೊರುವವಳಾಗಿರಲಿ. [ಅಸ್ಯ ಯಜಮಾನಸ್ಯ] ಈ ಶುಭಕರ್ಮಕರ್ತನ [ವೀರಃ] ಪುತ್ರನು [ಜಿಷ್ಣುಃ] ಜಯಶಾಲಿಯೂ, [ರಥೇಶಷ್ಠಾಃ] ಉತ್ತಮ ರಥಿಕನೂ, [ಸಭೇಯಃ] ಸಭೆಯಲ್ಲಿ ಕುಳಿತುಕೊಳ್ಳಲು ಅರ್ಹನೂ, [ಯುವಾ] ಉತ್ಸಾಹಶಾಲಿಯೂ, [ಜಾಯತಾಮ್] ಆಗಿರಲಿ. [ನಃ] ನಮಗಾಗಿ [ಓಷಧಯಃ] ಓಷಧಿಗಳು, [ಫಲವತ್ವಃ] ಫಲಭರಿತವಾಗಿ [ಪಚ್ಯಂತಾಮ್] ಪಕ್ವವಾಗಲಿ. [ನಃ] ನಮಗೆ [ಯೋಗಕ್ಷೇಮಃ] ಯೋಗಕ್ಷೇಮವು [ಕಲ್ಪತಾಮ್] ಸಿದ್ಧಿಸಲಿ. ಈ ಪ್ರಾರ್ಥನೆಗೆ ಮೂರ್ತರೂಪ ಸಿಕ್ಕಿದರೆ, ಅತ್ಯಂತ ಭವ್ಯವಾದ ಕಲ್ಯಾಣರಾಜ್ಯ (Welfare State) ಸ್ಥಾಪಿತವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ರಾಜ್ಯದಲ್ಲಿ ಜನಸಾಮಾನ್ಯರು ಸುಖದಿಂದ ಬಾಳಬಲ್ಲರು. -ಪಂ. ಸುಧಾಕರ ಚತುರ್ವೇದಿ.) ಎಂದೆ,. ಇಲ್ಲಿಯೂ ನನ್ನ ಬರಹದ ಉದ್ದೇಶವಿದ್ದುದೇ ಸಮಾಜದ ಕಲ್ಪನೆ ಯಜುರ್ವೇದದಲ್ಲಿ ಹೇಗೆ ಬರೆಯಲಾಗಿದೆ ಎನ್ನುವುದನ್ನು ತೋರಿಸುವುದಾಗಿತ್ತು. ನೀವು ಅಲ್ಲೂ ಸಾರವನ್ನು ಬಿಟ್ಟು ವಸಾಹತುಶಾಹಿ ವ್ಯಾಖ್ಯಾನವಿದು ಎನ್ನುತ್ತಿದ್ದೀರಾ!

    ಹೋಗಲಿ.. ಈ ಶ್ಲೋಕ ಯಜುರ್ವೇದದಲ್ಲಿರುವುದೇ ನಿಜವಾದರೆ ಇದರ ಅರ್ಥವಾದರೂ ಏನು? ಇಲ್ಲಿ ಅರ್ಥ ನೀಡುವಲ್ಲೂ ವಸಾಹತುಶಾಹಿ ಚಿಂತನೆ ಏನು ಸೇರಿಕೊಂಡಿದೆ ತಿಳಿಯಲಿಲ್ಲ. ಹಿಂದೂ ಎಂಬ ಹೆಸರನ್ನು ಮೊದಲು ಬಳಸಿದ್ದೇ ವಸಾಹತುಶಾಹಿ ಕಾಲದಲ್ಲಿ ಎನ್ನುವುದಾಗಿ ಕೇಳಿದ್ದೇನೆ. ಹಾಗಿದ್ದಾಗ ಅದನ್ನು ಸನಾತನವೆಂದರೆ, ವೈದಿಕವೆಂದರೇ ಹಿಂದೂ ಧರ್ಮ ಎಂದು ಅದಕ್ಕಿಂತ ಮೊದಲು ಯಾರಾದರೂ ಹೇಳಿರುತ್ತಾರೆ ಎಂದು ಶೋಧಿಸುವುದಾದರೂ ಹೇಗೆ? ಈ ಯಾವ ಮಾತುಗಳೂ ಕೂಡಾ ನಮ್ಮ ನಾಡಿನಲ್ಲಿ ಜಾತಿಗಳಿವೆ, ಜಾತಿಗಳಿಗೆ ಶ್ರೇಣಿಗಳಿವೆ, ಹುಟ್ಟಿನಿಂದ ವ್ಯಕ್ತಿಗಳ ಸಾಮಾಜಿಕ ಅವಕಾಶಗಳನ್ನು ತೀರ್ಮಾನಿಸುವ ವ್ಯವಸ್ಥೆಯಿದೆ ಎನ್ನುವುದನ್ನು ಅಲ್ಲಗಳೆಯಲಾರವು ಎಂದುಕೊಳ್ಳುತ್ತೇನೆ. ನೀವು ಹೊಸ ಸಂಶೋಧನೆಗಳ ಮೂಲಕ ಅಲ್ಲಗಳೆಯುತ್ತಿರುವುದನ್ನು ಒಪ್ಪಲು ಬಹುಶಃ ಅವುಗಳನ್ನು ಓದಿದ ಮೇಲೆಯೇ ಸಾಧ್ಯವೆನ್ನಿಸುತ್ತದೆ. ನಾನ್ನಾದರೂ ಓದಿರುವುದು ಕೆಲ ಬರಹಗಳನ್ನು. ಅದರಲ್ಲೂ ಡಂಕಿನ್ ಜಳಕಿಯವರ “ವಚನ ಚಳವಳಿ….” ಎಂಬುದನ್ನು. ಅದರಿಂದಾಗಿಯೇ ಇವೆಲ್ಲಾ ವಿಚಾರ ವಿನಿಮಯ! ನನ್ನ ಕಣ್ಣಿಗೆ ಇಂದಿಗೂ ಜಾತಿಗಳ ಹೆಸರಲ್ಲಿ ನಡೆಯುತ್ತಿರುವ ಮೇಲುಕೀಳಾಟಗಳೇ ಪರಮಸತ್ಯ! ಅದರ ನಿವಾರಣೆಗೆ ಸಾಧ್ಯವಾದ ಎಲ್ಲವನ್ನೂ ಮಾಡಬೇಕೆಂಬ ಹಂಬಲ.. ತುಡಿತ! ಅಷ್ಟೇ! ನಮಸ್ಕಾರ..

    Like

  1. No trackbacks yet.

ನಿಮ್ಮ ಟಿಪ್ಪಣಿ ಬರೆಯಿರಿ