ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

Image

ಕಂತು 13: ಪ್ರಾಚೀನ ಭಾರತದಲ್ಲಿ ಜಾತಿ ವಿರೋಧಿ ಚಳುವಳಿಗಳು ನಡೆದಿದ್ದವೆ? 

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ನಾನು ಜಾತಿ ವ್ಯವಸ್ಥೆಯ ಕಥೆಯು ನಿಜವಲ್ಲವೆಂದು ಹೇಳಿದಾಗಲೆಲ್ಲ ಅದನ್ನು ಆಕ್ಷೇಪಿಸುವವರು ಹಾಕಿದ ಒಂದು ಪ್ರಶ್ನೆ ಇದು: ‘ಹಾಗಾದರೆ ಬುದ್ಧ, ಬಸವ ಇವರೆಲ್ಲ ಹೋರಾಡಿದ್ದು ಜಾತಿ ವ್ಯವಸ್ಥೆಯ ವಿರುದ್ಧವೇ ಅಲ್ಲವೆ?’ ಜಾತಿ ವ್ಯವಸ್ಥೆಯ ಕಥೆಯನ್ನು ಸಮರ್ಥಿಸುವವರಿಗೆ ಈ ಎರಡನೆಯ ಕಥೆಯು ಒಂದು ನಿರ್ಣಾಯಕ ಆಧಾರವಾಗಿದೆ ಎಂಬುದು ಸ್ಪಷ್ಟ. ಆದರೆ ಈ ವಾದವು ಪ್ರಯೋಜನವಿಲ್ಲ. ಏಕೆಂದರೆ ಬುದ್ಧ ಬಸವ ಇವರದೆಲ್ಲ ಜಾತಿವಿರೋಧಿ ಚಳುವಳಿ ಎನ್ನಬೇಕಾದರೆ ನೀವು ಜಾತಿ ವ್ಯವಸ್ಥೆ ಇತ್ತೆಂಬುದನ್ನು ಒಪ್ಪಿಕೊಳ್ಳಲೇ ಬೇಕು. ಜಾತಿ ವ್ಯವಸ್ಥೆ ಇತ್ತೆಂದು ಒಪ್ಪಿಕೊಳ್ಳಲು ನಿಮಗೆ ಹೇಗೆ ಸಾಧ್ಯ? ಜಾತಿವಿರೋಧೀ ಚಳುವಳಿಗಳು ನಡೆದಿದ್ದವು ಎಂಬುದನ್ನು ನಂಬಬೇಕು. ಅಂದರೆ ಈ ವಾದವನ್ನು ಹಿಡಿದು ಹೋದರೆ ನೀವು ಗಾಣದ ಸುತ್ತ ಸುತ್ತುತ್ತಿರುವ ಕೋಣನಂತೆ ಪ್ರಾರಂಭಿಸಿದ ಜಾಗಕ್ಕೇ ಮತ್ತೆ ಮತ್ತೆ ಬರುತ್ತಿರುತ್ತೀರಿ. ಮುಂದೆ ಹೋಗುವುದಿಲ್ಲ. ನೂರಾರು ವರ್ಷಗಳಿಂದ ಭಾರತೀಯ ಸಮಾಜದ ಕುರಿತ ಅಧ್ಯಯನಗಳು ಜಾತಿ ವ್ಯವಸ್ಥೆಯ ಕಥೆಗೆ ಸಂಬಂಧಿಸಿದಂತೆ ಈ ಕೆಲಸವನ್ನೇ ಮಾಡಿವೆ ಎಂಬುದು ನನ್ನ ವಾದ.

ಈ ಮೇಲಿನ ಎರಡೂ ಕಥೆಗಳು ಹುಟ್ಟಿದ್ದು ಐತಿಹಾಸಿಕ ಆಕಸ್ಮಿಕವಂತೂ ಅಲ್ಲ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೇ ವಸಾಹತು ಕಾಲದಲ್ಲಿ ಚಲಾವಣೆಗೆ ಬಂದಿವೆ. ಪಾಶ್ಚಾತ್ಯರು ಭಾರತೀಯ ಸಮಾಜವನ್ನು ವರ್ಣಿಸುವಾಗ ಅದನ್ನು ಅರ್ಥ ಮಾಡಿಕೊಳ್ಳಲು ಅವರಿಗಿದ್ದ ಹಿನ್ನೆಲೆಯೆಂದರೆ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟಾಂಟ್ ಚರ್ಚುಗಳು. ಯುರೋಪಿನಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚು ಮಧ್ಯಕಾಲದಲ್ಲಿ ತರತಮಗಳ ಆಧಾರದ ಮೇಲೆ ಒಂದು ರೀತಿಯ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಬೆಳೆಸಿಕೊಂಡು ಬಂದಿತ್ತು. ಇಂಥ ವ್ಯವಸ್ಥೆಯ ಮೂಲಕವೇ ಅದು ರಾಜಕೀಯ, ಸಾಮಾಜಿಕ ಸಂಸ್ಥೆಗಳ ಮೇಲೆ ಹಾಗೂ ಆ ಮೂಲಕ ಜನರಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿತ್ತು. 16ನೆಯ ಶತಮಾನದಲ್ಲಿ ಈ ವ್ಯವಸ್ಥೆಯ ವಿರುದ್ಧ ಬಂಡಾಯವೊಂದು ಹುಟ್ಟಿತು. ಅದೇ ಪ್ರೊಟೆಸ್ಟಾಂಟ್ ಚಳುವಳಿ. ಇದು ಮಾರ್ಟಿನ್ ಲೂಥರ್ ಎಂಬವನ ನೇತೃತ್ವದಲ್ಲಿ ನಡೆಯಿತು. ಆತನು ಕ್ಯಾಥೋಲಿಕ್ ಪ್ರೀಸ್ಟ್ಗಳು ಪವಿತ್ರಗ್ರಂಥವನ್ನು ತಪ್ಪಾಗಿ ನಿರೂಪಿಸಿ ಮೂಢ ಆಚರಣೆಗಳನ್ನು ಹಾಗೂ ತರತಮಗಳನ್ನು ರೂಢಿಸಿದ್ದಾರೆ ಎಂದು ಆರೋಪಿಸಿದನು ಹಾಗೂ ಇಂಥ ವ್ಯವಸ್ಥೆಯಿಂದ ಭ್ರಷ್ಟಗೊಂಡ ಕ್ರಿಶ್ಚಿಯಾನಿಟಿಯನ್ನು ಶುದ್ಧಗೊಳಿಸುವ ಪ್ರಯತ್ನ ನಡೆಸಿದನು. ತರತಮಗಳಿಲ್ಲದೇ ಎಲ್ಲರಿಗೂ ಸಮಾನವಾಗಿ ಲಭ್ಯವಾಗುವಂತೆ ಕ್ರಿಶ್ಚಿಯಾನಿಟಿಯನ್ನು ರೂಪಿಸಿದನು.

ಇದರ ಜೊತೆಗೇ ರಿಲಿಜನ್ನು ಭ್ರಷ್ಟಗೊಂಡ ಹಾಗೇ ಅದನ್ನು ಸುಧಾರಿಸಿ ಶುದ್ಧರೂಪಕ್ಕೆ ತರುವ ಪ್ರಕ್ರಿಯೆ ಕೂಡ ಅದರ ಒಂದು ನಿಯಮವಾಗಿದೆ ಎಂಬ ಕಥೆ ಪ್ರೊಟೆಸ್ಟಾಂಟರ ಕಾಲದಲ್ಲಿ ಹುಟ್ಟಿಕೊಂಡಿತು. ಯುರೋಪಿನ ಬುದ್ಧಿಜೀವಿಗಳೆಲ್ಲರೂ ಅದನ್ನು ಸತ್ಯವೆಂಬುದಾಗಿ ಒಪ್ಪಿಕೊಂಡಿದ್ದರು. ಅಂದರೆ ಪಾಶ್ಚಾತ್ಯರ ಪ್ರಕಾರ ರಿಲಿಜನ್ನಿನ ಭ್ರಷ್ಟತೆ ಹಾಗೂ ಅದರ ಸುಧಾರಣೆಯ ಕಲ್ಪನೆಗಳು ಒಂದನ್ನು ಬಿಟ್ಟು ಇನ್ನೊಂದು ಇರಲಿಕ್ಕೆ ಸಾಧ್ಯವಿಲ್ಲ. ಈ ಹಿನ್ನೆಲೆಯನ್ನಿಟ್ಟುಕೊಂಡು ಭಾರತದ ಕುರಿತ ಅಧ್ಯಯನಗಳು ನಡೆದವು. ಹಿಂದೂಯಿಸಂ ಅನ್ನು ಅವರು ಕ್ಯಾಥೋಲಿಕ್ ಚರ್ಚಿನ ಮಾದರಿಯಲ್ಲಿ ಕಲ್ಪಿಸಿಕೊಂಡರು. ಕ್ಯಾಥೋಲಿಕ್ ಚರ್ಚಿನಂತೇ ಹಿಂದೂಯಿಸಂ ಕೂಡ ಭ್ರಷ್ಟಗೊಂಡಿದೆ ಎಂದು ಅವರು ಅಂದುಕೊಂಡರು. ಕ್ಯಾಥೋಲಿಕ್ ಚರ್ಚಿನಲ್ಲಿದ್ದ ತರತಮಗಳಂತೆ ಭಾರತದ ಜಾತಿ ವ್ಯವಸ್ಥೆ ಕಂಡಿತು. ಅಂದಮೇಲೆ ಕ್ಯಾಥೋಲಿಕ್ ಪ್ರೀಸ್ಟ್ಗಳಂತೆ ಇರುವ ಬ್ರಾಹ್ಮಣ ಪುರೋಹಿತಶಾಹಿಯೇ ಜಾತಿವ್ಯವಸ್ಥೆಯನ್ನು ಹುಟ್ಟುಹಾಕಿತು ಎಂಬುದು ಕೂಡ ಪಾಶ್ಚಾತ್ಯರಿಗೆ ತರ್ಕಬದ್ಧವಾಗಿ ಕಂಡದ್ದರಲ್ಲಿ ಆಶ್ಚರ್ಯವೇ ಇಲ್ಲ.

ಈ ಮೇಲಿನ ತರ್ಕದ ಪ್ರಕಾರ ಭಾರತದಲ್ಲಿ ರಿಲಿಜನ್ನು ಭ್ರಷ್ಟಗೊಂಡಿದೆ ಎಂಬುದು ಪಾಶ್ಚಾತ್ಯರಿಗೆ ಕಾಣಿಸಿದ ಮೇಲೆ ಅದನ್ನು ಸುಧಾರಿಸುವ ಪ್ರಯತ್ನಗಳೂ ಕಾಣಿಸಲೇ ಬೇಕು. ಬುದ್ಧ ಹಾಗೂ ಬಸವರ ಕುರಿತು ಆಧುನಿಕ ವಿದ್ವಾಂಸರ ಬರವಣಿಗೆಗಳ ಜಾಡನ್ನು ಹಿಡಿದು ಅವುಗಳ ಮೂಲದ ಕಡೆ ಹೋಗಿ. ನಿಮಗೇನು ಕಾಣಿಸುತ್ತದೆ? ಅದು 19ನೆಯ ಶತಮಾನದಲ್ಲಿ ಪ್ರಾರಂಭವಾಗುತ್ತದೆ. ಪಾಶ್ಚಾತ್ಯ ವಿದ್ವಾಂಸರು ಭಾರತದಲ್ಲಿ ಕೂಡ ಮಾರ್ಟಿನ್ ಲೂಥರನಂಥ ಸುಧಾರಕರು ಇರುವ ವಿಷಯವನ್ನು ಬೆಳಕಿಗೆ ತಂದರು. ಇವರ ಹೆಸರೇ ಬುದ್ಧ ಮತ್ತು ಬಸವ. ಇಲ್ಲಿನ ಪಾಲಿ ಹಾಗೂ ವಚನ ಸಾಹಿತ್ಯಗಳು ಬೇರೆ ಭಾಷೆಯಲ್ಲೇ ಇದ್ದವು ಹಾಗೂ ಅವು ತಾವು ತಿಳಿದ ಹಿಂದೂಯಿಸಂ ಆಚರಣೆಗಳಿಗಿಂತ ಭಿನ್ನವಾದ ಮಾರ್ಗವನ್ನು ಪ್ರತಿಪಾದಿಸುವ ಸಂಗತಿ ಅವರಿಗೆ ಕುತೂಹಲ ಹುಟ್ಟಿಸಿತು. ಹಾಗೂ ಈ ಸಂಪ್ರದಾಯಗಳಲ್ಲಿ ವರ್ಣ ಜಾತಿಗಳ ಭೇದವನ್ನು ಕಡೆಗಣಿಸಲಾಗಿತ್ತಷ್ಟೇ ಅಲ್ಲ, ಅವನ್ನು ಮೋಕ್ಷ ಸಾಧನೆಗೆ ಒಂದು ಅಡ್ಡಿ ಎಂಬಂತೇ ಕೂಡ ಪ್ರತಿಪಾದಿಸಿದ್ದರು. ಭಾರತದ ಎಲ್ಲಾ ಆಧ್ಯಾತ್ಮಿಕ ಪರಂಪರೆಗಳೂ ಇಂಥ ಪ್ರತಿಪಾದನೆಗಳನ್ನು ಮಾಡುತ್ತವೆ ಎಂಬುದು ಅವರ ಗಮನಕ್ಕೆ ಬರಲಿಲ್ಲ.

ಹಾಗಾಗಿ ಭ್ರಷ್ಟಗೊಂಡ ಹಿಂದೂಯಿಸಂ ಅನ್ನು ಶುದ್ಧಗೊಳಿಸಲು ಹುಟ್ಟಿದ ಭಾರತೀಯ ಪ್ರೊಟೆಸ್ಟಾಂಟ್ ಮತಗಳಂತೇ ಈ ಎರಡೂ ಸಂಪ್ರದಾಯಗಳೂ ಕಾಣಿಸಿದವು. ಆವುಗಳ ಸಾಹಿತ್ಯದಲ್ಲಿ ಯಾವ್ಯಾವುದು ಈ ಮೇಲಿನ ಚೌಕಟ್ಟಿಗೆ ಅರ್ಥಪೂರ್ಣವಾಗಿ ಕಾಣಿಸಿತೊ ಅವನ್ನೆಲ್ಲ ಈ ಕಥೆಗೆ ಆಧಾರವೆಂಬಂತೆ ಹೆಕ್ಕಿಕೊಳ್ಳಲಾಯಿತು. ಯಾವ್ಯಾವುದು ಅರ್ಥವಾಗಲಿಲ್ಲವೊ ಅಥವಾ ಈ ಪ್ರೊಟೆಸ್ಟಾಂಟ್ ಕಥೆಗೆ ಹೊಂದಲಿಲ್ಲವೊ ಅಂಥ ಹೇಳಿಕೆಗಳನ್ನು ಉಪೇಕ್ಷಿಸಿ ಗೌಣ ಮಾಡಲಾಯಿತು. ಬೌದ್ಧ, ಜೈನ ಹಾಗೂ ವಚನ ಚಳುವಳಿಗಳ ಇತಿಹಾಸದ ಚೌಕಟ್ಟು ಹುಟ್ಟಿದ್ದು ಹೀಗೆ. ಅದನ್ನೇ ಸತ್ಯವೆಂಬುದಾಗಿ ನಾವು ದಾಟಿಸಿಕೊಂಡು ಬಂದಿದ್ದೇವೆ. ಈ ಯಾವ ಕಥೆಗಳಿಗೂ ಇನ್ನೂರು ವರ್ಷಗಳಿಗಿಂತಲೂ ಹಿಂದಿನ ಇತಿಹಾಸವಿಲ್ಲ. ಅಂದರೆ ಅವು ಮೂಲತಃ ಪ್ರೊಟೆಸ್ಟಾಂಟ್ ಚಳುವಳಿಯ ಅವತಾರಗಳಾಗಿಯೇ ಜನ್ಮ ತಳೆದಿವೆ. ಹಾಗೂ ಆ ಉದ್ದೇಶವನ್ನು ಕಳಚಿದರೆ ಈ ಕಥೆಗಳು ಅರ್ಥ ಕಳೆದುಕೊಳ್ಳುತ್ತವೆ.

ಆದರೆ ಈ ಮೇಲಿನ ಎರಡೂ ಸಂಪ್ರದಾಯಗಳೂ ಈ ಚೌಕಟ್ಟಿಗೆ ಹೊಂದಲಿಕ್ಕೆ ಅವು ನಿಜವಾಗಿಯೂ ಪ್ರೊಟೆಸ್ಟಾಂಟ್ ಚಳುವಳಿಗಳಾಗಿದ್ದರೆ ತಾನೆ? ಹಾಗಾಗಿ ಸಹಜವಾಗಿ ಸಮಸ್ಯೆಗಳೂ ಹುಟ್ಟಿಕೊಂಡವು ಹಾಗೂ ಸಮಜಾಯಿಷಿಗಳೂ ರಾಶಿಬಿದ್ದವು. ಒಂದು ಮುಖ್ಯವಾದ ಸಮಸ್ಯೆಯೆಂದರೆ ಇವರು ಕಟ್ಟಿಕೊಂಡ ಈ ಚಳುವಳಿಗಳ ಐತಿಹಾಸಿಕ ಮಾದರಿಗೂ ಇಂದಿನ ಬೌದ್ಧ ಅಥವಾ ಲಿಂಗಾಯತ ಸಮಾಜದಲ್ಲಿ ಪ್ರಚಲಿತದಲ್ಲಿರುವ ಆಚರಣೆಗಳಿಗೂ ಅರ್ಥಾರ್ಥ ಸಂಬಂಧವೇ ಕಾಣಲಿಲ್ಲ್ಲ. ಅಂದರೆ ದೇವಾಲಯ ಸಂಸ್ಥೆಗಳು, ಮೂರ್ತಿಪೂಜೆ, ಜಾತಿಭೇದ, ಪುರೋಹಿತಶಾಹಿ, ಮೂಢಾಚಾರಗಳು ಎಂಬುದಾಗಿ ಹಿಂದೂಯಿಸಂನಲ್ಲಿ ಏನೇನನ್ನು ಗುರುತಿಸಿದ್ದರೊ ಅದೆಲ್ಲ ಅವರಿಗೆ ಇಂದಿನ ಬೌದ್ಧ ಹಾಗೂ ಲಿಂಗಾಯತ ಸಂಪ್ರದಾಯಗಳಲ್ಲಿ ಕಂಡುಬಂದಿತು. ಅದನ್ನು ವಿವರಿಸುವ ಸಲುವಾಗಿ ಮತ್ತೊಂದು ಕಥೆಯನ್ನು ಕಟ್ಟಲಾಯಿತು. ಅದೆಂದರೆ ಅವು ಮೊದಲು ಶುದ್ಧವಾದ ರಿಲಿಜನ್ನುಗಳಾಗಿದ್ದು ಕಾಲಾಂತರದಲ್ಲಿ ಭ್ರಷ್ಟಗೊಂಡವು. ಅಲ್ಲೂ ಈ ಪುರೋಹಿತಶಾಹಿಯೇ ಅಪರಾಧಿಯಾಗಿ ಕಾಣಿಸಿಕೊಳ್ಳುತ್ತದೆ. ಅಂದರೆ ಈ ಚಳುವಳಿಗಳ ನೈಜತೆಯನ್ನು ಪರೀಕ್ಷಿಸೋಣವೆಂದರೆ ಅವು ಈಗ ಈ ಭೂಮಿಯಮೇಲೆ ಇಲ್ಲವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಯಿತು.

ಹಾಗಾಗಿ ಈ ಐತಿಹಾಸಿಕ ಚಳುವಳಿಗಳನ್ನು ಹಾಗೂ ಅವುಗಳ ತತ್ವಗಳನ್ನು ಕುರಿತು ತಿಳಿಯಲು ಅವುಗಳ ಸಾಹಿತ್ಯವನ್ನು ಆಧರಿಸುವುದೊಂದೇ ಮಾರ್ಗ. ಮೊದಲನೆಯದಾಗಿ ಅವುಗಳ ಭಾಷೆ. ಅವರು ಜನಸಾಮಾನ್ಯರಿಗೆ ತಿಳಿಯಲೆಂದು ಪಾಲಿ ಮತ್ತು ಕನ್ನಡಗಳಲ್ಲಿ ಬರೆದರು. ಹಾಗೂ ಸಂಸ್ಕೃತವನ್ನು ಹಾಗೂ ಪುರೋಹಿತಶಾಹಿ ತತ್ವಗಳನ್ನು ನಿರಾಕರಿಸಿದರು ಎಂಬುದಾಗಿ ಈ ಇತಿಹಾಸ ಹೇಳುತ್ತದೆ. ಅದು ಕೂಡ ಯುರೋಪಿನ ಪ್ರೊಟೆಸ್ಟಾಂಟ್ ಚಳುವಳಿಯ ಇತಿಹಾಸವೇ. ಏಕೆಂದರೆ ಬೈಬಲ್ಲನ್ನು ಲ್ಯಾಟಿನ್ನಿನಿಂದ ದೇಶೀ ಭಾಷೆಗಳಿಗೆ ತರ್ಜುಮೆ ಮಾಡುವ ಹಾಗೂ ಸಂಪೂರ್ಣವಾಗಿ ಮರು ನಿರೂಪಿಸುವ ಕೆಲಸವು ಪ್ರೊಟೆಸ್ಟಾಂಟ್ ಚಳುವಳಿಯ ಪ್ರಮುಖ ನಡೆಯಾಗಿತ್ತು. ಆದರೆ ಭಾರತದಲ್ಲಿ ಇದರಿಂದ ಜನಸಾಮಾನ್ಯರಿಗೆ ಏನು ಅನುಕೂಲವಾಯಿತು ಎಂಬುದು ಸ್ಪಷ್ಟವಿಲ್ಲ.

ಇದಕ್ಕೂ ಮುಖ್ಯವಾದ ವಿಷಯವೆಂದರೆ, ಬುದ್ಧ ಹಾಗೂ ಬಸವರು ಆಧ್ಯಾತ್ಮಿಕ ಅನ್ವೇಷಕರು ಎಂಬ ವಿಷಯವನ್ನು ಗೌಣಮಾಡಿ ಆಧುನಿಕ ಸಮಾಜ ಸುಧಾರಕರ ರೀತಿಯಲ್ಲಿ ಚಿತ್ರಿಸುವುದು. ಅವರ ಹೋರಾಟದ ಗುರಿಯೇ ಜಾತಿಯನ್ನು ವಿನಾಶ ಮಾಡುವುದು, ಅವರ ಗುರಿ ಈಗಿನ ಸೋಶಿಯಾಲಿಸಂ ಅಥವಾ ಕಮ್ಯುನಿಸಂ ಥರ ಸಮಾನತೆಯ ತಳಹದಿಯ ಮೇಲೆ ಇರುವ ಒಂದು ಸಮಾಜದ ಸ್ಥಾಪನೆ ಎಂಬ ವಿಚಾರ ಇಂದಿನ ವಿದ್ಯಾವಂತರ ತಲೆಯಲ್ಲಿ ಗಟ್ಟಿಯಾಗಿ ಕುಳಿತಿದೆ. ಈ ಕೆಲಸಕ್ಕೆಂದೇ ಪಾಲಿ ಹಾಗೂ ವಚನ ಸಾಹಿತ್ಯದಿಂದ ಕೆಲವೇ ಕೆಲವು ಸಾಲುಗಳನ್ನು ಆಯ್ದು, ಅವುಗಳ ತಲೆಬುಡಗಳನ್ನು ಮುರಿದು, ಸಂದರ್ಭವನ್ನು ಸುಲಿದು ಸಿದ್ಧಪಡಿಸಿ ಇಡಲಾಗಿದೆ. ಬಹುತೇಕರು ಈ ಸಿದ್ಧ ವಾಕ್ಯಗಳನ್ನೇ ಉಪಯೋಗಿಸಿ ಯಾವುದೇ ಓದಿನ ಸಹಾಯವಿಲ್ಲದೇ ಅಧಿಕಾರಯುತವಾಗಿ ಮಾತನಾಡಬಲ್ಲರು. ಉದಾಹರಣೆಗೆ ಬುದ್ಧನು ವರ್ಣ ಕಲ್ಪನೆಯ ವಿರೋಧಿ ಎನ್ನಲಾಗುತ್ತದೆ, ಆದರೆ ಅವನು ವರ್ಣ ಕಲ್ಪನೆಗೆ ತನ್ನದೇ ನಿರೂಪಣೆಯನ್ನು ಕೊಟ್ಟು ಕ್ಷತ್ರಿಯ ವರ್ಣವೇ ವರ್ಣಗಳಲ್ಲಿ ಮೇಲು ಎಂಬುದಾಗಿ ಕೆಲವೆಡೆ ಹೇಳುತ್ತಾನೆ. ಅದೇ ರೀತಿ ಅವನು ಬ್ರಾಹ್ಮಣ ಪುರೋಹಿತಶಾಹಿಯನ್ನು ನಾಶಮಾಡಲಿಕ್ಕಾಗಿ ಪಣತೊಟ್ಟನು ಎನ್ನಲಾಗುತ್ತದೆ. ಆದರೆ ಪಾಲಿ ಗ್ರಂಥಗಳಲ್ಲಿ ನಾವು ಕಾಣುವುದೇನು? ನಿಜವಾದ ಬ್ರಾಹ್ಮಣ ಹೇಗಿರಬೇಕು, ಹೇಗಿರಬಾರದು ಎಂಬ ಜಿಜ್ಞಾಸೆಯನ್ನು ಬುದ್ಧ ನಡೆಸುತ್ತಾನೆ. ಬ್ರಾಹ್ಮಣ ಪುರೋಹಿತಶಾಹಿಯನ್ನು ನಾಶಮಾಡಲು ಹೊರಟವರು ಹೀಗೇಕೆ ಹೇಳುತ್ತಾರೆ? ಸೊಳ್ಳೆಯನ್ನು ಹೊಡೆಯಲು ಹೊರಟವರು ನಿಜವಾದ ಸೊಳ್ಳೆ ಹೇಗಿರಬೇಕು ಎಂದು ಜಿಜ್ಞಾಸೆ ನಡೆಸುತ್ತಾರೆಯೆ?

ಇನ್ನು ವಚನ ಸಾಹಿತ್ಯಕ್ಕೆ ಬಂದರೆ ಜಾತಿಯ ವಿಷಯವನ್ನು ಉಲ್ಲೇಖಿಸುವ ಐದಾರು ವಚನಗಳನ್ನೇ ಮತ್ತೆ ಮತ್ತೆ ಹೇಳಲಾಗುತ್ತದೆ. ಈ ಖಂಡನೆಯಾದರೂ ಜಾತಿ ವ್ಯವಸ್ಥೆಯ ವಿರೋಧ ಹೇಗಾಗುತ್ತದೆ ಎಂಬುದನ್ನು ಯಾರೂ ವಿಶ್ಲೇಷಿಸಿ ತೋರಿಸಿಲ್ಲ. ಉದಾಹರಣೆಗೆ, ಇಂದಿನ ಶಿಕ್ಷಕರ ಮೌಢ್ಯವನ್ನು ಹಾಗೂ ಅವ್ಯವಹಾರಗಳನ್ನು ನಾವು ಖಂಡಿಸಿದರೆ ನಾವು ಶಿಕ್ಷಣ ವ್ಯವಸ್ಥೆಯ ವಿನಾಶಕ್ಕಾಗಿ ಚಳುವಳಿ ಮಾಡಿದಂತಾಗುತ್ತದೆಯೆ? ಇಂಥ ಪ್ರಶ್ನೆಗಳು ಹಾಗೇ ಉಳಿಯುತ್ತವೆ. ಅದಕ್ಕಿಂತ ಮುಖ್ಯ ಪ್ರಶ್ನೆಯೆಂದರೆ ಉಳಿದ 21716 ವಚನಗಳು ಏನನ್ನು ಹೇಳುತ್ತಿವೆ ಎಂಬುದು ಈ ಇತಿಹಾಸಕ್ಕೆ ಏಕೆ ಬೇಡವಾಗಿದೆ ಎಂಬುದು. ಇವೆಲ್ಲ ಯಾರಾದರೂ ಅರ್ಥಮಾಡಿಕೊಳ್ಳಬಲ್ಲ ತೀರ ಸರಳವಾದ ಪ್ರಶ್ನೆಗಳು ಎಂಬುದಾಗಿ ಭಾವಿಸಿದ್ದೇನೆ.

Advertisements
Categories: Uncategorized
 1. ಮೇ 24, 2013 ರಲ್ಲಿ 9:38 ಅಪರಾಹ್ನ

  Thoughts are impressive & every one must try to understand “Buddha & Basava” based on their complete works not on 1 or 2 lines what u read abt them … xcellent ..

  Like

 2. ambresh patil
  ಜುಲೈ 7, 2013 ರಲ್ಲಿ 10:52 ಫೂರ್ವಾಹ್ನ

  hosa tarada vishleshane utsahapurvaka aagide

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: