ಮುಖ ಪುಟ > Cultural Studies, Culture, Research Centre, Uncategorized > ಸಂಶೋಧನೆಯ ದಾರಿಯನ್ನು ಯಾರು ನಿರ್ಧರಿಸಬೇಕು?

ಸಂಶೋಧನೆಯ ದಾರಿಯನ್ನು ಯಾರು ನಿರ್ಧರಿಸಬೇಕು?

books-ಪ್ರೊ.ರಾಜಾರಾಮ ಹೆಗಡೆ


ವಚನ ಚಳುವಳಿಯ ಚರ್ಚೆಯಲ್ಲಿ ಪ್ರಜಾವಾಣಿ ಪತ್ರಿಕೆಯು ಒಂದು ಪಕ್ಷದವರ ನಿಲುವುಗಳನ್ನು ಹೆಚ್ಚಾಗಿ ಬೆಂಬಲಿಸಿ ಈಗ ಚರ್ಚೆಯನ್ನು ನಿಲ್ಲಿಸಿಯಾಗಿದೆ. ಆದರೆ ಆ ಚರ್ಚೆಯ ಪರಿಣಾಮಗಳು ಗಾಢವಾಗಿವೆ ಎಂಬುದು ಸ್ಪಷ್ಟ. ಹಲವಾರು ಪ್ರಗತಿಪರ ಸಂಘಟನೆಗಳು ಮತ್ತು ಲಾಭಿಕೋರರು ನಮ್ಮ ಸಂಶೋಧನಾ ಕೇಂದ್ರವನ್ನು ಮತ್ತು ಸಂಶೋಧನೆಯನ್ನು ನಿಲ್ಲಿಸುವಂತೆ ಸರ್ಕಾರದ ಮಟ್ಟದಲ್ಲಿ, ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ಬೀರುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ರಶಸ್ತಿ ಪಡೆದ ಎಂ.ಎಂ.ಕಲಬುರ್ಗಿಯವರು ವಿಕೃತ ಸಂಶೋಧನೆಯನ್ನು ನಿಲ್ಲಿಸಬೇಕೆಂದು ಮುಖ್ಯಮಂತ್ರಿಗಳ ಮುಂದೆ ಅಲವತ್ತುಕೊಂಡಿರುವುದು ಹಲವಾರು ಪತ್ರಿಕೆಗಳಲ್ಲಿ ಪಕ್ರಟವಾಗಿದೆ. ಅವರ ಕೋರಿಕೆಗೆ ಕೆಲವಾದರೂ ಪರಿಣಾಮಗಳು ಇದ್ದೇ ಇರುತ್ತವೆ. ಕನ್ನಡಪ್ರಭದಲ್ಲಿ ಪ್ರಕಟವಾದ ಅವರ ಅಂಬೋಣಕ್ಕೆ ಪ್ರತಿಕ್ರಿಯೆಯಾಗಿ ಈ ಲೇಖನವನ್ನು ಬರೆದು ಕನ್ನಡಪ್ರಭ ಪತ್ರಿಕೆಗೆ ಕಳುಹಿಸಲಾಗಿತ್ತು. ಆದರೆ ಪ್ರಕಟವಾಗಿಲ್ಲ.

20-5-2013 ಕನ್ನಡ ಪ್ರಭದಲ್ಲಿ ವರದಿಯಾದಂತೆ ಡಾ. ಎಂ.ಎಂ. ಕಲ್ಬುರ್ಗಿಯವರು ಬಸವಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಕುವೆಂಪು ವಿಶ್ವವಿದ್ಯಾನಿಲಯದ ಸಂಶೋಧಕರ ಕುರಿತು ಆಡಿದ ಮಾತಿಗೆ ಈ ಪ್ರತಿಕ್ರಿಯೆ. ವಿಶ್ವವಿದ್ಯಾನಿಲಯದ ಸಿಂಡಿಕೇಟು ಸದಸದ್ಯರು ಈ ಅಧ್ಯಾಪಕರಿಗೆ ಎಚ್ಚರಿಕೆ ನೀಡಬೇಕೆಂದು ಅವರು ಕರೆಕೊಟ್ಟಿದ್ದಾರೆ. ಅದೇ ಭಾಷಣದಲ್ಲಿ ಅವರು ವಚನಗಳ ಕುರಿತು ಕುವೆಂಪು ವಿಶ್ವವಿದ್ಯಾಲಯದ ಸಂಶೋಧಕರು ನಡೆಸುತ್ತಿರುವುದು ವಿಕೃತ ಸಂಶೋಧನೆ, ಅದನ್ನು ನಿಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೂ ಕೇಳಿಕೊಂಡಿದ್ದಾರೆ ಎಂಬುದನ್ನು ಇತರ ಪತ್ರಿಕೆಗಳೂ ಪ್ರಕಟಿಸಿವೆ.

ಕನ್ನಡ ಸಾರಸ್ವತ ಲೋಕದಲ್ಲಿ ಕಲಬುರ್ಗಿಯವರನ್ನು ಸಂಶೋಧಕರು ಎಂದೇ ಗುರುತಿಸಲಾಗುತ್ತದೆ. ಅವರು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೂಡ ಜವಾಬ್ದಾರಿ ನಿರ್ವಹಿಸಿದ್ದಾರೆ. ಅದಕ್ಕಿಂತ ಸ್ವತಃ ಅವರೇ ತಮ್ಮ ಮಾರ್ಗ 2 ಸಂಪುಟದಲ್ಲಿನ ಲೇಖನವೊಂದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯನ್ನು ಎದುರಿಸಬೇಕಾದ ಪರಿಸ್ಥಿತಿ ಕೂಡ ಒಮ್ಮೆ ಬಂದಿತ್ತು. ಆಗ ಅಭಿಪ್ರಾಯ ಸ್ವಾತಂತ್ರ್ಯದ ಮೌಲ್ಯ ಅವರಿಗೆ ರಕ್ಷಣೆಯಾಗಿ ಬಂದಿತ್ತು. ಆದರೆ ಈಗ ಒಂದು ವಿಪರ್ಯಾಸವನ್ನು ನೋಡುತ್ತಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆಯು ಸಂಶೋಧಕನೊಬ್ಬನಿಗೆ ನೀಡುವ ಯಾವ ಭರವಸೆಯು ಕಲಬುರ್ಗಿಯವರ ಸಂಶೋಧನೆಯನ್ನು ಸಾಧ್ಯ ಮಾಡಿತೊ ಹಾಗೂ ಅದರ ಹೆಸರಿನಲ್ಲಿ ಎದ್ದ ವಿವಾದಗಳಿಗೆ ಎದುರಾಗಿ ಅವರನ್ನು ರಕ್ಷಿಸಿತೊ ಅದು ಮುಂದಿನ ತಲೆಮಾರಿನ ಸಂಶೋಧಕರಿಗೆ ಬೇಡ ಎಂಬ ಅಭಿಪ್ರಾಯಕ್ಕೆ ಅವರು ಬಂದಂತಿದೆ. ಅಥವಾ ಅವರು ಈಗ ಸಂಶೋಧನೆಗೆ ಬೇರೆಯದೇ ಆದ ಅರ್ಥ ಹಚ್ಚುತ್ತಿರಲೂಬಹುದು

ಶಿಕ್ಷಣ ಹಾಗೂ ಸಂಶೋಧನೆಯನ್ನು ಬೆಳೆಸುವುದು ನಮ್ಮ ವಿಶ್ವವಿದ್ಯಾಲಯಗಳ ಮೂಲ ಧ್ಯೇಯ. ಸಂಶೋಧನೆ ಎಂದರೆ ನಮ್ಮ ತಿಳುವಳಿಕೆಯನ್ನು ವಿಸ್ತರಿಸುವ ಕೆಲಸ. ಇಲ್ಲಿ ಸ್ವೀಕೃತ ಸಿದ್ಧಾಂತಗಳಲ್ಲಿನ ಮಿತಿಗಳನ್ನು ತೋರಿಸುವುದು ಒಂದು ಕ್ರಮ. ಅದಿಲ್ಲದಿದ್ದರೆ ಸಂಶೋಧನೆ ನಿಂತ ನೀರಾಗಿ ಬಿಡುತ್ತದೆ. ಹಾಗಾಗಿಯೇ ಪ್ರಚಲಿತ ತಿಳುವಳಿಕೆಯನ್ನು ಪ್ರಶ್ನಿಸುವ ಅಥವಾ ಸಮರ್ಥಿಸುವ ಸ್ವಾತಂತ್ರ್ಯವನ್ನು ಒಪ್ಪಿಕೊಂಡೇ ನಮ್ಮ ಶಿಕ್ಷಣ ವ್ಯವಸ್ಥೆಯು ಸಂಶೋಧನೆಯನ್ನು ಅಳವಡಿಸಿಕೊಂಡಿದೆ. ಆದರೆ ಈ ಕೆಲಸವನ್ನು ನಿರ್ವಹಿಸಲು ವೈಜ್ಞಾನಿಕ ಕ್ರಮಗಳಿವೆ. ಹಾಗೂ ಸಂಶೋಧನೆಯಲ್ಲಿ ತೊಡಗುವವರು ಕನಿಷ್ಠ ಈ ಕ್ರಮಗಳನ್ನಾದರೂ ಗೌರವಿಸಲು ಕಲಿತಿರಬೇಕಾಗುತ್ತದೆ. ಬದಲಾಗಿ ಸಂಶೋಧನೆಯನ್ನು ನಿಲ್ಲಿಸುವ ಹಾಗೂ ಸಂಶೋಧಕರನ್ನು ಎಚ್ಚರಿಸುವ ಬಲಪ್ರಯೋಗದ ಭಾಷೆಗಳನ್ನು ಸಂಶೋಧಕನಾದವನೊಬ್ಬನು ಬಳಸಲು ಪ್ರಾರಂಭಿಸಿದರೆ, ಈ ಕೆಲಸಕ್ಕೆ ಅಧಿಕಾರದಲ್ಲಿರುವವರ ಸಹಕಾರವನ್ನು ಯಾಚಿಸಿದರೆ ಅದು ಈ ಕ್ಷೇತ್ರಕ್ಕೆ ಅಕ್ರಮವಾದ ಮಾರ್ಗವಾಗುತ್ತದೆ. ಅದು ನಮ್ಮ ಶಿಕ್ಷಣದ ವ್ಯವಸ್ಥೆಯ ಆಶಯಕ್ಕೇ ವಿರುದ್ಧವಾದ ಕೆಲಸ ಹಾಗೂ ಸಂಶೋಧನೆಯನ್ನೇ ನಾಶಗೊಳಿಸುವ ಕೆಲಸ. ಈ ಮಾರ್ಗವನ್ನು ಕಲಬುರ್ಗಿಯಂಥವರು ತುಳಿಯುತ್ತಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತವನ್ನಲ್ಲದೇ ಮತ್ತೇನನ್ನು ಸೂಚಿಸಬಹುದು?

ಕಲಬುರ್ಗಿಯವರು ಸಾಕಷ್ಟು ದೀರ್ಘಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಹಿರಿಯ ವಿದ್ವಾಂಸರು. ಅವರು ತಮ್ಮ ಗ್ರಂಥ ಸಂಪಾದನೆ, ವಿಶ್ಲೇಷಣೆ ಹಾಗೂ ಹೊಸ ಒಳನೋಟಗಳಿಂದಾಗಿ ನಮ್ಮ ತಿಳುವಳಿಕೆಗೆ ಹೊಸ ಆಯಾಮಗಳನ್ನು ನೀಡಿದ್ದಾರೆ. ಹಾಗಂತ ಆ ಕಾರಣಕ್ಕೇ ಕಲಬುರ್ಗಿಯವರ ಎಲ್ಲಾ ವಾದಗಳನ್ನು ಎಲ್ಲರೂ ಒಪ್ಪುವುದಿಲ್ಲ. ಅವರು ತಮ್ಮ ಹೆಚ್ಚಿನ ವಾದಗಳನ್ನು ಸಾಕಷ್ಟು ಪರೀಕ್ಷಿಸಿ ತರ್ಕಬದ್ಧವಾಗಿ ಬೆಳೆಸದೇ ಅವಸರದ ತೀರ್ಮಾನಕ್ಕೆ ಶರಣು ಹೋಗುತ್ತಾರೆ ಎಂಬುದನ್ನು ವ್ಯವಸ್ಥಿತವಾಗಿಯೇ ತೋರಿಸಬಹುದು. ಅವರ ಸಮಕಾಲೀನ ವಿದ್ವಾಂಸರನೇಕರಿಗೆ ಅವರ ಜೊತೆಗೆ ಭಿನ್ನಮತಗಳಿರುವುದು ಅನೇಕರಿಗೆ ಗೊತ್ತು. ಅವರ ಅನೇಕ ವಾದಗಳು, ಗ್ರಹಿಕೆಗಳು ಅವಸರದ ಅಥವಾ ಸರಳ ತೀರ್ಮಾನಗಳೆಂಬುದಾಗಿ ಕಾಣುತ್ತವೆ. ಕೃಷ್ಣದೇವರಾಯ ಹಾಗೂ ವಿಷ್ಣುವರ್ಧನರು ಕನ್ನಡ ವಿರೋಧಿಗಳು ಎಂಬಂತೆ ಅವರು ತರ್ಕಿಸುತ್ತಾರೆ. ಜೈನ ಹಾಗೂ ಲಿಂಗಾಯತ ಸಂಪ್ರದಾಯದ ಕುರಿತು ಅವರ ಕೆಲವು ತೀರ್ಮಾನಗಳೂ ನನಗೆ ಅವಸರದ್ದಾಗಿ ಕಾಣಿಸುತ್ತವೆ. ಅವರು ಬ್ರಾಹ್ಮಣ, ಲಿಂಗಾಯತ, ಜೈನ ಇತ್ಯಾದಿಗಳನ್ನು ರಿಲಿಜನ್ನುಗಳೆಂದು ಭಾವಿಸಿ ಅವುಗಳ ನಡುವೆ ವೈರತ್ವವನ್ನು ಕಲ್ಪಿಸಿಕೊಂಡು ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ವಸಾಹತುಶಾಹಿ ಯುಗದ ವರ್ಣನೆಗಳನ್ನೇ ಆಧರಿಸಿ ತಮ್ಮ ತರ್ಕವನ್ನು ಬೆಳೆಸುತ್ತಾರೆ. ಆ ಚೌಕಟ್ಟಿನೊಳಗೇ ಸ್ವೀಕೃತ ಅಭಿಪ್ರಾಯಗಳನ್ನು ಅಲ್ಲಗಳೆದು ಕೆಲವು ಗುಂಪುಗಳಿಗೆ ಅಪ್ರಿಯವಾದ ವಾದಗಳನ್ನು ಕೂಡ ಮಂಡಿಸುತ್ತಾರೆ. ಆ ಚೌಕಟ್ಟು ಇಂದು ಸ್ವೀಕಾರಾರ್ಹವಲ್ಲ ಅಥವಾ ಅವು ಕೆಲವರಿಗೆ ಸ್ವೀಕಾರಾರ್ಹವಲ್ಲ ಎಂಬ ಕಾರಣಕ್ಕೆ ಯಾರೂ ಅವರ ಸಂಶೋಧನೆಯನ್ನು ನಿಲ್ಲಿಸಬೇಕೆಂಬುದಾಗಿ ಕರೆ ನೀಡಿಲ್ಲ. ಬದಲಾಗಿ ಸಂಶೋಧನಾ ಲೇಖನಗಳನ್ನು ಬರೆದು ಪ್ರತಿಕ್ರಿಯಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟು ಅಲ್ಲಿನ ಸಂಶೋಧಕರಿಗೆ ಎಚ್ಚರಿಕೆ ನೀಡಬೇಕು ಎನ್ನುತ್ತ ಕಲಬುರ್ಗಿಯವರು ಯಾವ ಮೇಲ್ಪಂಕ್ತಿಯನ್ನು ಹಾಕುತ್ತಿದ್ದಾರೆ? ವಿಶ್ವವಿದ್ಯಾಲಯದ ಸಿಂಡಿಕೇಟು ಹಾಗೂ ಸರ್ಕಾರಗಳು ವಿದ್ವಾಂಸರ ಸಂಶೋಧನೆಯನ್ನು ನಿಯಂತ್ರಿಸಬೇಕೆಂದು ಅವರ ಅಭಿಪ್ರಾಯವೆ? ಹಾಗಿದ್ದಲ್ಲಿ ಇವರು ತಾವೇ ಸ್ವತಃ ಒಬ್ಬ ಸಂಶೋಧಕರಾಗಿ ತಮ್ಮ ಪೀಳಿಗೆಗೆ ಭವಿಷ್ಯದಲ್ಲಿ ಯಾವ ರೀತಿಯ ವ್ಯವಸ್ಥೆಯನ್ನು ಸೃಷ್ಟಿಸಲು ಹೊರಟಿದ್ದಾರೆ? ಈ ಧೋರಣೆಯನ್ನುಳ್ಳ ವಿದ್ವಾಂಸರಿಗೆ ಸ್ವತಂತ್ರವಾಗಿ ವಿಚಾರ ಮಾಡಬಲ್ಲ ಶಿಷ್ಯರನ್ನಾದರೂ ತಯಾರು ಮಾಡಲು ಸಾಧ್ಯವೆ? ಒಂದೆಡೆ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ಸಂಶೋಧನೆಯನ್ನು ಪುನರುಜ್ಜೀವನಗೊಳಿಸಲು ಯಾವ ಕ್ರಮವನ್ನು ಕೈಗೊಳ್ಳಬೇಕು ಎಂಬುದಾಗಿ ಯುಜಿಸಿ ಹಾಗೂ ಸರ್ಕಾರಗಳು ಶತಪ್ರಯತ್ನಮಾಡುತ್ತಿವೆ, ಮತ್ತೊಂದೆಡೆ ಅವೇ ವಿಶ್ವವಿದ್ಯಾಲಯಗಳಿಂದ ಬಂದಂಥ ಸಾಮಾಜಿಕ ಸಂಶೋಧಕರೊಬ್ಬರು ಇಂಥ ಕರೆಯನ್ನು ಕೊಡುತ್ತಿದ್ದಾರೆ. ಅಂದರೆ ಇವರ ಪ್ರಕಾರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸುಮ್ಮನೆ ಸಂಬಳ ತೆಗೆದುಕೊಂಡು ಆಯಾ ಕಾಲದ ರಾಜಕೀಯದ ಭಾಷೆಯನ್ನು ಆಡಿಕೊಳ್ಳುತ್ತ ಕಾಲಕಳೆಯಬೇಕೆಂಬುದೆ?

ಅವರ ಆಪಾದನೆ ಎಂದರೆ ಬಾಲಗಂಗಾಧರ ಅವರು ವಚನಗಳ ಕುರಿತು ವಿಕೃತ ಸಂಶೋಧನೆ ನಡೆಸುತ್ತಿದ್ದಾರೆ ಅಂತ. ವಿಕೃತ ಸಂಶೋಧನೆ ಎಂದರೆ ಏನೆಂಬುದನ್ನೇ ಅವರು ಸ್ಪಷ್ಟಗೊಳಿಸುವ ಗೋಜಿಗೆ ಹೋಗುವುದಿಲ್ಲ. ಬಾಲಗಂಗಾಧರರು ಸ್ವೀಕೃತ ಅಭಿಪ್ರಾಯವೊಂದನ್ನು ಪ್ರಶ್ನಿಸುತ್ತಿದ್ದಾರೆ ಎಂಬುದಂತೂ ನಿಜ. ಸ್ವೀಕೃತ ಅಭಿಪ್ರಾಯವನ್ನು ಪ್ರಶ್ನಿಸುವುದು ವಿಕೃತ ಹೇಗಾಗುತ್ತದೆ? ಅದು ಸಂಶೋಧನೆಯ ಒಂದು ಭಾಗ. ಕಲಬುರ್ಗಿಯವರೆಂದೂ ಸ್ವೀಕೃತ ಆಭಿಪ್ರಾಯವನ್ನು ಪ್ರಶ್ನಿಸಿಯೇ ಇಲ್ಲವೆ? ಒಮ್ಮೆ ಪ್ರಶ್ನಿಸಿದ್ದಾರೆಂದರೆ ಅವರದೂ ವಿಕೃತ ಸಂಶೋಧನೆ ಎನ್ನಬಹುದೆ? ಇಲ್ಲ ಅಂಥ ಪ್ರಶ್ನೆಗಳನ್ನು ಮಾಡಿಯೇ ಇಲ್ಲವೆಂದರೆ ಅದನ್ನು ಒಂದು ಸಂಶೋಧನೆ ಎಂದಾದರೂ ಹೇಗೆ ಕರೆಯುತ್ತೀರಿ?

ಇಲ್ಲ, ಬಾಲಗಂಗಾಧರ ಅವರ ಅಭಿಪ್ರಾಯವು ವಚನಗಳ ಕುರಿತು ಅವಹೇಳನಕಾರಿಯಾದ ಚಿತ್ರಣ ನೀಡುತ್ತದೆ ಅಂತೇನಾದರೂ ಅವರ ಅಭಿಪ್ರಾಯವೆ? ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ವಚನಗಳನ್ನು ನೋಡಬೇಕು ಎಂಬುದು ಹೇಗೆ ಅವುಗಳಿಗೆ ಅವಹೇಳನಕಾರಿಯಾಗಿದೆ ಎಂಬುದನ್ನು ಅವರೇ ಸಾಧಿಸಿ ತೋರಿಸಲಿ. ಹೆಚ್ಚೆಂದರೆ ಅದೊಂದು ಭಿನ್ನಾಭಿಪ್ರಾಯವಾಗಬಹುದು. ಆದರೆ ಈ ಭಿನ್ನಾಭಿಪ್ರಾಯವನ್ನು ಮಂಡಿಸುವವರು ಸಕಾರಣವಾಗಿ ತಮ್ಮ ವಾದವನ್ನು ಇಡುತ್ತಿದ್ದಾರೆ. ಬಾಲಗಂಗಾಧರ ಹಾಗೂ ಡಂಕಿನ್ ಪ್ರಕಾರ ವಚನಗಳು ಜಾತಿ ವಿರೋಧಿ ಚಳುವಳಿಗಳು ಎಂಬುದಾಗಿ ಇಟ್ಟುಕೊಂಡರೆ ನಿಮಗೆ ಅವುಗಳಲ್ಲಿ ಬಹುಪಾಲು ವಚನಗಳನ್ನು ಅರ್ಥೈಸಲು ಮಾರ್ಗವೇ ಇಲ್ಲವಾಗುತ್ತದೆ. ಉಳಿದ ಅಲ್ಪ ಸ್ವಲ್ಪ ವಚನಗಳನ್ನೂ ಸ್ಪಷ್ಟವಾಗಿ ಅರ್ಥೈಸಲು ಕೂಡ ವಿದ್ವಾಂಸರು ಸಫಲರಾಗಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಅವನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಇಟ್ಟರೆ ಎಲ್ಲಾ ವಚನಗಳನ್ನೂ ಅರ್ಥೈಸಲು ಮಾರ್ಗ ಸಿಗುವ ಸಾಧ್ಯತೆಯಿದೆ ಎಂಬುದು ಬಾಲಗಂಗಾಧರರ ಸೂಚನೆ. ಸಂಶೋಧಕರಾದವರಿಗೆ ಯಾವ ಮಾರ್ಗವು ತಮ್ಮ ಮುಂದಿರುವ ಅತೀ ಹೆಚ್ಚು ಸಂಗತಿಗಳನ್ನು ಅರ್ಥೈಸಲು ಸಾಧ್ಯತೆಯನ್ನು ಸೃಷ್ಟಿಸುವುದೊ ಅದೇ ಸೂಕ್ತ ಎನ್ನಿಸುವುದು ಕ್ರಮಬದ್ಧವಾಗಿದೆ. ಅದು ಸರಿಯಲ್ಲ ಅಂತ ಕಲಬುರ್ಗಿಯವರಿಗನ್ನಿಸಿದರೆ ಜಾತಿವಿರೋಧಿ ಚಳುವಳಿಯ ಹಿನ್ನೆಲೆಯಿಂದ ಕನ್ನಡಿಗರಿಗೆಲ್ಲ ಮನದಟ್ಟಾಗುವಂತೆ ಎಲ್ಲಾ ವಚನಗಳನ್ನೂ ಅರ್ಥೈಸಿ ತೋರಿಸಿದರೆ ಆಯಿತು. ಯಾರಿಗಾದರೂ ಮನದಟ್ಟಾಗದಿದ್ದರೆ ಅವರಿಬ್ಬರನ್ನೂ ಒಪ್ಪದಿರುವ ಸ್ವಾತಂತ್ರ್ಯ ಇದ್ದೇ ಇದೆ, ಆದರೆ ಬಲವನ್ನು ಪ್ರಯೋಗಿಸಿ ಮತ್ತೊಬ್ಬರ ಬಾಯಿಯನ್ನೇ ಮುಚ್ಚಿಸುವ ಅಧಿಕಾರವಂತೂ ಅವರಿಬ್ಬರಲ್ಲಿ ಯಾರಿಗೂ ಇಲ್ಲ. ಅಷ್ಟಕ್ಕೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ವಚನಗಳನ್ನು ನೋಡಿದವರಲ್ಲಿ ಬಾಲಗಂಗಾಧರ ಅವರೇನೂ ಮೊದಲಿಗರಲ್ಲವಷ್ಟೆ?

ಇಲ್ಲವೇ ಈ ಹೊಸ ರೀತಿಯಲ್ಲಿ ವಚನಗಳನ್ನು ನೋಡುವುದೇ ಅಸಹಜವಾದುದು, ಅಸಂಬದ್ಧವಾದುದು ಎಂಬ ಅರ್ಥದಲ್ಲಿ ಕಲಬುರ್ಗಿಯವರು ವಿಕೃತ ಎಂಬ ಶಬ್ದವನ್ನು ಬಳಸಿದ್ದರೆ ಅವರು ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ವಿವರಣೆಯನ್ನು ಒದಗಿಸಬೇಕು: ಶರಣರಲ್ಲಿ ಜಾತಿಯನ್ನರಸಬಾರದು ಎಂದ ಶರಣರ ಜಾತಿಯನ್ನು ಗುರುತಿಸಿ ಅವರ ಇತಿಹಾಸವನ್ನು ಕಟ್ಟುವುದು ವಿಕೃತವಲ್ಲ, ಮೊಲೆ ಮುಡಿ ಬಂದರೆ ಹೆಣ್ಣೆಂಬರು…ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಎಂದವರನ್ನು ಸ್ತ್ರೀವಾದೀ ಸಿದ್ಧಾಂತಗಳಿಂದ ಅರ್ಥ ಮಾಡುವುದು ವಿಕೃತವಲ್ಲ, ಆದರೆ ಶಿವಯೋಗವನ್ನೇ ಗುರಿಯಾಗಿಟ್ಟುಕೊಂಡ ಶಿವಶರಣರ ವಚನಗಳನ್ನು ಆಧ್ಯಾತ್ಮಿಕ ಪರಂಪರೆಯಿಂದ ಅರ್ಥೈಸಬೇಕು ಎಂದರೆ ಅದು ಹೇಗೆ ವಿಕೃತವಾಗುತ್ತದೆ? ಈ ಪಥದಲ್ಲಿರದವರು ತಮ್ಮನ್ನು ಶಿವಶರಣರೆಂದೇಕೆ ಕರೆದುಕೊಳ್ಳುತ್ತಾರೆ? ಹಾಗಂತ ವಚನಗಳನ್ನು ಬೇರೆ ರೀತಿಯಲ್ಲಿ ನೋಡುವುದು ವಿಕೃತ ಸಂಶೋಧನೆ ಎಂದು ಬಾಲಗಂಗಾಧರರು ಎಲ್ಲೂ ಹೇಳಿಲ್ಲ. ಹಾಗಾಗಿ ಈ ಪ್ರಶ್ನೆಗೆ ಕಲಬುರ್ಗಿಯವರೇ ಉತ್ತರಿಸಬೇಕು.

ಬಹುಶಃ ವಚನಗಳನ್ನು ಆಧ್ಯಾತ್ಮಿಕ ಸಾಹಿತ್ಯವೆಂದರೆ ಈಗಿನ ಸಾಮಾಜಿಕ ಪ್ರಗತಿಯ ಕಲ್ಪನೆಗೆ ಮಾರಕವಾಗುತ್ತದೆ ಎಂಬರ್ಥದಲ್ಲಿ ಕೂಡ ಕಲಬುರ್ಗಿಯವರು ಹಾಗೆ ಹೇಳಿರುವ ಸಾಧ್ಯತೆಯಿದೆ. ಹಾಗೇನಾದರೂ ಇದ್ದ ಪಕ್ಷದಲ್ಲಿ ವಚನಗಳನ್ನು ಆಧ್ಯಾತ್ಮಿಕ ಸಾಹಿತ್ಯವೆಂದು ಗುರುತಿಸುವುದು ಮನುಕುಲದ ಶ್ರೇಯೋಭಿವೃದ್ಧಿಗೆ ಮಾರಕವಾದುದು ಎಂಬುದನ್ನಾದರೂ ಅವರು ಮನದಟ್ಟುಮಾಡಿಕೊಡಬೇಕು.

Advertisements
  1. Srikanth
    ಜೂನ್ 27, 2013 ರಲ್ಲಿ 10:35 ಫೂರ್ವಾಹ್ನ

    “ಉಳಿದ ಅಲ್ಪ ಸ್ವಲ್ಪ ವಚನಗಳನ್ನೂ ಸ್ಪಷ್ಟವಾಗಿ ಅರ್ಥೈಸಲು ಕೂಡ ವಿದ್ವಾಂಸರು ಸಫಲರಾಗಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಅವನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಇಟ್ಟರೆ ಎಲ್ಲಾ ವಚನಗಳನ್ನೂ ಅರ್ಥೈಸಲು ಮಾರ್ಗ ಸಿಗುವ ಸಾಧ್ಯತೆಯಿದೆ ಎಂಬುದು ಬಾಲಗಂಗಾಧರರ ಸೂಚನೆ” ಈ ಅರ್ಥೈಸುವಿಕೆಯಲ್ಲಿ ಸಫಲತೆ ಹಾಗೂ ವಿಫಲತೆಯನ್ನು ನಿರ್ಧರಿಸುವ ವಿಧಾನಕ್ಕೊಂದು ಸಂಶೋಧನೆ ನೆಡೆಸಿ ನಂತರ ಆ ಸಂಶೋಧನೆ ಪ್ರಕಾರವೆ ಅರ್ಥಿಸು…

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: