ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

Baluಕಂತು 15: ನಮ್ಮ ಸಂಪ್ರದಾಯಗಳಿಗೆ ಸಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು 

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ನಾನು ಭಾರತೀಯ ಸಂಸ್ಕೃತಿಯಲ್ಲಿ ರಿಲಿಜನ್ ಇಲ್ಲ ಎಂದು ಹೇಳಿದ ತಕ್ಷಣ ಜನರಿಗೆ ಅಸಮಾಧಾನ ಆಗುವುದನ್ನು ನೋಡಿದ್ದೇನೆ. ಅದರ ಜೊತೆಗೇ ಬರುವ ಒಂದು ಪ್ರಶ್ನೆ ಎಂದರೆ ಹಾಗಾದರೆ ಭಾರತದಲ್ಲಿ ಇರುವುದೇನು?. ಅಸಮಾಧಾನ ಏಕೆಂದರೆ, ನಾನು ಭಾರತೀಯ ಸಂಸ್ಕೃತಿಯಲ್ಲಿ ಏನೋ ನ್ಯೂನತೆಯನ್ನು ಎತ್ತಿ ಹೇಳುತ್ತಿದ್ದೇನೆ ಎಂಬಂತೆ ನನ್ನ ಮಾತು ಕೇಳಿಸುತ್ತದೆ. ಅಂದರೆ ರಿಲಿಜನ್ನು ಎಂದರೆ ಏನೆಂಬುದು ಜನರಿಗೆ ಗೊತ್ತಿಲ್ಲದಿದ್ದರೂ ಕೂಡ, ಅದೊಂದು ಇರಲೇಬೇಕಾದ ಅನಿವಾರ್ಯವಾದ ಸಂಗತಿ ಎಂಬುದಾಗಿ ಅವರು ನಂಬಿಕೊಂಡಿದ್ದಾರೆ ಅಂತ ಅರ್ಥ. ಅದರ ಜೊತೆಗೇ, ರಿಲಿಜನ್ನೇ ಇಲ್ಲದ ಮೇಲೆ ಈ ಸಮಾಜವು ಹೇಗೆ ಉಳಿದುಕೊಂಡಿದೆ ಎಂಬ ಪ್ರಶ್ನೆಯೂ ಕೂಡ ಸ್ವ್ವಾಭಾವಿಕವಾಗಿಯೇ ಬರುತ್ತದೆ. ಪಾಶ್ಚಾತ್ಯರ ಸಿದ್ಧಾಂತಗಳು ಇಷ್ಟೊಂದು ಆಳವಾಗಿ ಸಾಮಾನ್ಯ ಜ್ಞಾನದ ರೂಪದಲ್ಲಿ ವಿದ್ಯಾವಂತರ ತಲೆಯಲ್ಲಿ ಕುಳಿತಿರುವುದನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ. ಅದಕ್ಕಿಂತಲೂ ಕುತೂಹಲಕಾರಿಯಾದದ್ದೆಂದರೆ, ಅವರ ಆತಂಕ.

ಈ ಆತಂಕಕ್ಕೆ ಕಾರಣ ಬಹುಶಃ ನಮಗೆ ಸಧ್ಯಕ್ಕೆ ನಂಬಿಕೊಳ್ಳಲಿಕ್ಕೆ ಇದೊಂದೇ ಕಥೆ ಇದೆ. ಈ ಕಥೆಯನ್ನು ಎಲ್ಲಾ ವಿದ್ಯಾವಂತರಿಗೂ ಶಿಕ್ಷಣದ ಮೂಲಕ ಕಡ್ಡಾಯವಾಗಿ ಕಲಿಸಿರುತ್ತಾರೆ. ಹಾಗಾಗಿ ಇದು ಇಂಗ್ಲಿಷ್ ವಿದ್ಯಾಭ್ಯಾಸದಿಂದ ಸೃಷ್ಟಿಯಾದ ಜಗತ್ತು. ಈ ಕಥೆಯ ಪ್ರಕಾರ ಮನುಷ್ಯನ ಸದ್ಗತಿಗೆ ಇರಬಹುದಾದ್ದು ಒಂದೇ ಸರಿಯಾದ ಮಾರ್ಗ, ಅದೇ ರಿಲಿಜನ್ನು. ನಮ್ಮ ಸಂಸ್ಕೃತಿಯಲ್ಲಿ ಇರಬಹುದಾದ ಇಂಥ ಮಾರ್ಗಗಳನ್ನೆಲ್ಲ ರಿಲಿಜನ್ನಿನ ವಿಭಿನ್ನ ರೂಪಗಳು ಎಂಬುದಾಗಿ ಈಗಾಗಲೇ ಗುರುತಿಸಿ, ತಿರುಚಿ, ನಮ್ಮದೇ ಶಬ್ದವಾದ ಧರ್ಮ ಎಂಬ ಹೆಸರನ್ನೂ ಈ ರಿಲಿಜನ್ನಿಗೆ ಕೊಟ್ಟಾಗಿದೆ. ನಾವು ಅವನ್ನು ಹಿಂದೂಧರ್ಮ, ಶೈವಧರ್ಮ, ಜೈನಧರ್ಮ, ಬೌದ್ಧಧರ್ಮ, ಅಂತೆಲ್ಲ ರಿಲಿಜನ್ನಿನ ಅರ್ಥದಲ್ಲಿ ಕರೆದಾಗಿದೆ. ನಮ್ಮ ಕೆಲವು ಸಂಪ್ರದಾಯಗಳು, ದೇವರು, ದರ್ಶನ, ಗ್ರಂಥಗಳು, ಮಹಾಪುರುಷರು, ಎಲ್ಲವನ್ನೂ ಹಿಂದೂಧರ್ಮದ ಭಾಗಗಳು ಎಂಬುದಾಗಿ ಕಲಿತೂ ಆಗಿದೆ. ಹೀಗಿರುವಾಗ ನನ್ನಂಥವನೊಬ್ಬ ಬಂದು ಈ ಜಗತ್ತನ್ನು ರಿಲಿಜನ್ನೇ ಅಲ್ಲವೆಂದರೆೆ ಒಪ್ಪಿಕೊಳ್ಳುವುದು ಕಷ್ಟ. ಆತಂಕ ಸಹಜ. ಆದರೆ ನಾನು ಈ ಜಗತ್ತೇ ಇಲ್ಲವೆಂದು ಹೇಳುತ್ತಿಲ್ಲ. ಈ ಜಗತ್ತು ರಿಲಿಜನ್ ಅಲ್ಲ ಎಂಬುದಷ್ಟೇ ನನ್ನ ವಾದ.

ಸ್ವಲ್ಪ ವಿವರಿಸಿ ಹೇಳುತ್ತೇನೆ: ಈ ಮೇಲಿನ ಯಾವುದನ್ನೂ ಹಿಂದೂ ಧರ್ಮದ ಭಾಗಗಳು ಎಂಬುದಾಗಿ ಅವನ್ನು ನಮಗೆ ಕಲಿಸಿದ ನಮ್ಮ ಹಿರಿಯರು ಎಂದೂ ಹೇಳಿಲ್ಲ. ಹಿಂದೂ ಧರ್ಮವನ್ನು ಭಾವಿಸುವುದರಿಂದ ನಮ್ಮ ಮೇಲೆ ಒಂದು ಹೆಚ್ಚುವರಿ ಕೆಲಸ ಬಿದ್ದಿದೆ, ನಮ್ಮ ಆಚರಣೆಗಳಿಗೆಲ್ಲ ಗ್ರಂಥಾಧಾರವನ್ನು ಹುಡುಕಿ ತೋರಿಸುವುದು. ನಾವು ನಮ್ಮ ಸಂಸ್ಕೃತಿಯಲ್ಲಿ ಇಲ್ಲದ ಸಂಗತಿಗಳನ್ನು ತೋರಿಸಲು ಹೆಣಗಾಡುತ್ತಿದ್ದೇವೆ. ಉದಾಹರಣೆಗೆ ಪಾಶ್ಚಾತ್ಯರು ಭಾರತೀಯರಿಗೆ ಮುಖಾಮುಖಿ ಮಾಡಿದ ಕಾಲದಿಂದಲೂ ಈ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ: ನೀವು ಹಣೆಗೆ ಕುಂಕುಮವನ್ನು ಏಕೆ ಇಡುತ್ತೀರಿ? ನಿಮ್ಮ ಆಚರಣೆಗಳನ್ನು ಏಕೆ ಹಾಗೇ ಮಾಡುತ್ತೀರಿ? ದೇವರಿಗೆ ತೆಂಗಿನಕಾಯಿ ಏಕೆ ಒಡೆಯುತ್ತೀರಿ? ಆರತಿ ಏಕೆ ಎತ್ತುತ್ತೀರಿ? ಇತ್ಯಾದಿ. ಭಾರತದಲ್ಲಿ ಹಿಂದೂಯಿಸಂ ಇದೆ ಎಂದು ನಂಬುವ ಸಮಾಜಶಾಸ್ತ್ರೀಯ, ಮಾನವಶಾಸ್ತ್ರೀಯ ಸಂಶೋಧನೆಗಳಲ್ಲೂ ಪ್ರಶ್ನೆ ಅದೇ, ಗಣಪತಿಗೇಕೆ ಸೊಂಡಿಲಿದೆ? ಭಾರತೀಯರು ಲಿಂಗವನ್ನೇಕೆ ಪೂಜಿಸುತ್ತಾರೆ? ಭಾರತೀಯರು ಯಜ್ಞವನ್ನೇಕೆ ಮಾಡುತ್ತಾರೆ? ಅವರೇಕೆ ಕೆಲವು ಜಾತಿಗಳನ್ನು ಮುಟ್ಟಿಸಿಕೊಳ್ಳುವುದಿಲ್ಲ? ಅಂದರೆ ಇವೆಲ್ಲ ಸಂಶೋಧನಾ ಪ್ರಶ್ನೆಗಳಾಗಿ ಬದಲಾಗಿವೆ. ಉದ್ದೇಶ ಅದೇ, ನಮ್ಮ ಆಚರಣೆಗಳಿಗೆ ಕಾರಣವನ್ನು ಹುಡುಕುವುದು. ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಗೆ ಮುಖಾಮುಖಿಯಾದ ಕಾಲದಿಂದಲೂ ಕಟಕಟೆಯಲ್ಲಿ ನಿಂತ ಸಾಕ್ಷಿಯ ಥರ ಉತ್ತರಿಸುತ್ತಲೇ ಇರಬೇಕಾಗಿದೆ.

ಆದರೆ ನಮಗೆ ಉತ್ತರ ಗೊತ್ತಿರುವುದು ಹೋಗಲಿ, ಇಂಥ ಪ್ರಶ್ನೆಗಳಾದರೂ ಗೊತ್ತಿದ್ದವೆ? ಉದಾಹರಣೆಗೆ ಹಣೆಗೆ ಕುಂಕುಮವನ್ನು ಇಡುವುದನ್ನೇ ತೆಗೆದುಕೊಳ್ಳಿ. ಅದನ್ನು ಏಕೆ ಇಡುತ್ತೇವೆ? ಈ ಪ್ರಶ್ನೆಯನ್ನು ಉತ್ತರಿಸಲಿಕ್ಕೆ ಭಾರತೀಯರೇಕೆ ಇಂದೂ ಹೆಣಗುತ್ತಾರೆ? ನೀವು ಹಣೆಗೆ ಅಮೃತಾಂಜನವನ್ನು ಏಕೆ ಹಚ್ಚಿಕೊಳ್ಳುತ್ತೀರಿ ಎಂದರೆ ಭಾರತೀಯರು ಒಂದು ಕ್ಷಣವಾದರೂ ಗಲಿಬಿಲಿಗೆ ಬೀಳುತ್ತಾರೆಯೆ? ಏಕೆ ಸಂಪ್ರದಾಯಗಳ ಕಾರಣವನ್ನು ಕುರಿತ ಪ್ರಶ್ನೆಗಳಿಗೆ ಮಾತ್ರ ಒಬ್ಬೊಬ್ಬರು ಒಂದೊಂದು ಉತ್ತರವನ್ನು ನೀಡುತ್ತಾರೆ? ಏಕೆ ಅವರಿಗೆ ಪಾಶ್ಚಾತ್ಯರ ಜೊತೆಗೂಡಿ ಉತ್ತರಗಳನ್ನು ಸಂಶೋಧನೆಮಾಡಿ ಇನ್ನೂ ಮುಗಿದಿಲ್ಲ? ಏಕೆ ಮೊತ್ತಮೊದಲು ಕುಂಕುಮವನ್ನು ಹಚ್ಚುವಾಗ ಇಂಥ ಕಾರಣಕ್ಕೆ ಅದನ್ನು ಹಚ್ಚಬೇಕು ಎಂಬುದಾಗಿ ಯಾವುದೋ ಒಂದು ನಿರ್ದಿಷ್ಟ  ಕಾರಣವನ್ನು ನಮ್ಮ ಹಿರಿಯರು ಇಂದೂ ಕೂಡ ಹೇಳುವುದಿಲ್ಲ? ಇಂಥ ಪ್ರಶ್ನೆಗಳು ಹಾಗೂ ಉತ್ತರಗಳು ನಮ್ಮ ಸಂಪ್ರದಾಯಗಳ ಒಂದು ಅಂಗವಲ್ಲ ಎಂಬುದೊಂದೇ ಸಧ್ಯಕ್ಕೆ ನಮಗೆ ತೋಚುವ ಸಮಾಧಾನಕರವಾದ ಉತ್ತರವಾಗುತ್ತದೆ. ಅಂದರೆ ಆ ಕ್ರಿಯೆ ಕಾರಣವಿಲ್ಲದೇ ದಾಟಿ ಬಂದಿದೆ. ಅದೇ ನಮ್ಮ ಸಂಪ್ರದಾಯ.

ನನ್ನ ಈ ಉತ್ತರಕ್ಕೆ ಆಕ್ಷೇಪಣೆ ಎತ್ತುವವರು ಇದ್ದೇ ಇದ್ದಾರೆ. ಒಂದು ಆಕ್ಷೇಪಣೆಯೆಂದರೆ, ‘ಕಾರಣವೇ ಇಲ್ಲದೇ ಯಾವುದಾದರೂ ಆಚರಣೆ ಹುಟ್ಟಿಕೊಳ್ಳುತ್ತದೆಯೆ?’ ಎಂಬುದು. ಹೀಗೆ ಕೇಳುವವರ ಇಚ್ಛೆಯ ಪ್ರಕಾರವೇ ಆಚರಣೆಯ ಉಗಮಕ್ಕೆ ಯಾವುದೋ ಒಂದು ಕಾರಣವಿದೆ ಅಂತಿಟ್ಟುಕೊಳ್ಳೋಣ (ಅದನ್ನು ಎಲ್ಲರೂ ಒಪ್ಪುವುದಿಲ್ಲ ಎಂಬುದು ಶತಃಸ್ಸಿದ್ಧ, ಆದರೂ ಇರಲಿ.). ಅದರಿಂದ ಏನನ್ನು ಸಾಧಿಸಿದಂತಾಯಿತು? ಉಳಿದವರು ಈ ಕಾರಣವನ್ನು ಹೇಳಿಕೊಡದೇ ಅಥವಾ ಅದು ಗೊತ್ತಿಲ್ಲದೇ ಅದನ್ನು ಅನುಕರಿಸಿಕೊಂಡು ಬಂದರು ಎನ್ನುವುದು ಸುಳ್ಳಾಗುತ್ತದೆಯೆ? ಈ ಯಾವ ಕಾರಣಗಳೂ ಗೊತ್ತಿಲ್ಲದೇ ಕುಂಕುಮ ಇಡುತ್ತಿರುವ ಶತಕೋಟಿ ಭಾರತೀಯರ ಆಚರಣೆಗಳು ಏಕೆ ಹಾಗಿವೆ ಎಂಬುದಕ್ಕೆ ವಿವರಣೆ ಸಿಗುತ್ತದೆಯೆ? ಹಾಗಾಗಿ ಈ ವಾದದಿಂದ ಪ್ರಯೋಜನವಿಲ್ಲ.

ಇಲ್ಲಿ ಕಾರಣ ಎಂಬುದಕ್ಕೆ ಮತ್ತೊಂದು ಅರ್ಥವನ್ನು ಹಚ್ಚಿ ನನ್ನ ಮಾತನ್ನು ಪ್ರಶ್ನಿಸುವವರಿದ್ದಾರೆ. ‘ಕುಂಕುಮ ಇಡಲಿಕ್ಕೆ ನಮಗೂ ಕಾರಣಗಳಿವೆ. ಉದಾಹರಣೆಗೆ ನೀವು ಸುಮಂಗಲೆಯಾಗಿದ್ದರೆ, ಯಾವುದಾದರೂ ದೇವರ ಭಕ್ತರಾಗಿದ್ದರೆ, ಹರಕೆ ಹೊತ್ತಿದ್ದರೆ, ಇಲ್ಲ ಕೆಲವು ಸಂಘಟನೆಗಳ ಸದಸ್ಯರಾಗಿದ್ದರೆ ಅದೊಂದು ಕಾರಣವಲ್ಲವೆ?’ ಆದರೆ ಗಮನಿಸಿ, ನಿಮ್ಮನ್ನು ಪ್ರಶ್ನಿಸಿದ ಪಾಶ್ಚಾತ್ಯರಿಗೆ ಹಾಗೂ ಸಮಾಜ ವಿಜ್ಞಾನಿಗಳಿಗೆ ಇಷ್ಟು ಸರಳವಾದ ವಿಷಯವು ಗಮನಕ್ಕೆ ಬಂದಿಲ್ಲವೆ? ‘ಹಣೆಗೆ ಕುಂಕುಮವನ್ನು ಏಕೆ ಇಡುತ್ತೇವೆಂದರೆ ಸುಮಂಗಲೆಯರು ಹಾಗೂ ಭಕ್ತರು ಅದನ್ನು ಇಡುವುದು ನಮ್ಮ ಸಂಪ್ರದಾಯ’ ಎಂಬ ಉತ್ತರವನ್ನು ಭಾರತೀಯರೇಕೆ ಮೊದಲೇ ಕೊಟ್ಟು ಸುಮ್ಮನಾಗಲಿಲ್ಲ? ಅದಕ್ಕೆ ಬದಲಾಗಿ ನಾವು ನಮ್ಮ ಪ್ರಾಚೀನ ಗ್ರಂಥಗಳನ್ನು ಏಕೆ ಹುಡುಕಿ ತಿರುವಿ ಹಾಕುತ್ತಿದ್ದೇವೆ? ಇತ್ತೀಚೆಗೆ ನಡೆದ ವೈಜ್ಞಾನಿಕ ಆವಿಷ್ಕಾರಗಳನ್ನು ಸಹಸ್ರಾರು ವರ್ಷಗಳ ಹಿಂದಿನ ನಮ್ಮ ಸಂಪ್ರದಾಯಗಳ ಬುನಾದಿ ಎಂಬುದಾಗಿ ಏಕೆ ವಾದಿಸುತ್ತಿದ್ದೇವೆ? ಅಂದರೆ ಇಲ್ಲಿ ಕಾರಣ ಎಂಬುದರ ಅರ್ಥ ಬೇರೆಯೇ ಇದೆ ಎಂಬುದು ಸ್ಪಷ್ಟ.

ಹಾಗಾದರೆ ಕಾರಣಗಳೆಂದರೆ ಯಾವ ಉತ್ತರವನ್ನು ನಿರೀಕ್ಷಿಸಲಾಗಿದೆ? ಪಾಶ್ಚಾತ್ಯರ ಪ್ರಶ್ನೆಯೆಂದರೆ ಸುಮಂಗಲೆಯರು, ಭಕ್ತರು ಕುಂಕುಮವನ್ನೇ ಏಕೆ ಇಡಬೇಕು? ಅದರಲ್ಲೂ ಹುಬ್ಬಿನ ನಡುವೆಯೇ ಏಕೆ ಇಡಬೇಕು? ಅಂತ. ಅವರು ನಿರೀಕ್ಷಿಸಿರುವ ಉತ್ತರವೆಂದರೆ ಯಾವ ನಿರ್ದೇಶನವನ್ನು ನಂಬಿ ಆ ನಿರ್ದಿಷ್ಟ ಕ್ರಿಯೆಯನ್ನು ಮಾಡುತ್ತಿದ್ದೀರಿ ಎಂಬುದು. ಉದಾಹರಣೆಗೆ ನೀವು ಹಣೆಗೇ ಅಮೃತಾಂಜನವನ್ನು ಹಚ್ಚಿಕೊಳ್ಳಲು ನಿಮಗೊಂದು ವೈದ್ಯಕೀಯ ನಿರ್ದೇಶನವಿದೆ . ಅದನ್ನು (ಸತ್ಯವೆಂದು) ನಂಬಿ ನೀವು ಅಮೃತಾಂಜನವನ್ನು ಹಚ್ಚುತ್ತೀರಿ. ಅದೇ ರೀತಿ ನಿಮ್ಮ ಧರ್ಮಗ್ರಂಥದಲ್ಲಿ ಹೇಳಿದ ಯಾವ ನಿರ್ದೇಶನವನ್ನು (ಸತ್ಯವೆಂದು) ನಂಬಿ ನೀವು ಕುಂಕುಮ ಇಡುವ ಕ್ರಿಯೆಯನ್ನು ಮಾಡುತ್ತಿದ್ದೀರಾ? ರಿಲಿಜನ್ನುಗಳ ಪ್ರಪಂಚವು ಏಳಿಸುವ ಪ್ರಶ್ನೆ ಹೀಗಿರುತ್ತದೆ ಎಂಬುದನ್ನು ಮೊದಲು ಗುರುತಿಸೋಣ. ನಿಮ್ಮ ಕ್ರಿಯೆಗಳ ಹಿಂದೆ ಯಾವುದೋ ನಂಬಿಕೆ ಕೆಲಸಮಾಡುತ್ತಿದೆ, ನಿಮ್ಮ ರಿಲಿಜನ್ನಿನ ಪವಿತ್ರ ಗ್ರಂಥದಲ್ಲಿ ಏನೋ ಹೇಳಿದೆ, ಅದನ್ನು ನೀವು ನಂಬುವ ಮೂಲಕ ಆ ರಿಲಿಜನ್ನಿಗೆ ಸೇರಿರುತ್ತೀರಾ. ಹಾಗಾಗಿ ಕುಂಕುಮ ಇಡುತ್ತಿದ್ದೀರಾ. ಒಮ್ಮೆ ಹಿಂದೂಗಳ ಗ್ರಂಥದಲ್ಲಿ ಅದರ ಉಲ್ಲೇಖ ಇಲ್ಲ ಎನ್ನಿ. ಆಗ ಅದು ಹಿಂದೂ ಧರ್ಮದ ಆಚರಣೆಯೆಂಬುದೇ ಸುಳ್ಳಾಗುತ್ತದೆ.

ಪರಿಸ್ಥಿತಿ ಈಗ ನಿಮಗೆ ಅರ್ಥವಾಗಿರಬಹುದು. ನಿಮ್ಮ ಡಾಕ್ಟ್ರಿನ್ನುಗಳ ಸತ್ಯವನ್ನು ಆಧರಿಸಿದರೆ ಮಾತ್ರವೇ ನಿಮ್ಮ ಆಚರಣೆ ಕ್ರಮಬದ್ಧವಾಗುತ್ತದೆ. ಸೆಕ್ಯುಲರ್ ಪ್ರಭುತ್ವದಲ್ಲಿ ಅದನ್ನು ತೋರಿಸಿ ನಮ್ಮ ಸಂಪ್ರದಾಯಗಳನ್ನು ಸಮಥರ್ಿಸಿಕೊಳ್ಳಬೇಕಾದ ಒತ್ತಡ ಕೂಡ ಹುಟ್ಟಿತು. ಹಿಂದೂಯಿಸಂನ ಆಚರಣೆಗಳು ಎಂಬುದಾಗಿ ಭಾವಿಸಿದ ಎಲ್ಲಾ ಆಚರಣೆಗಳ ಸಂಬಂಧಿಸಿಯೂ ಕೂಡ ಇಂಥ ನಂಬಿಕೆಯ ಪ್ರಶ್ನೆಗಳು ವಸಾಹತುಕಾಲದಲ್ಲಿ ಎದ್ದವು. ನಮ್ಮ ಗ್ರಂಥಗಳನ್ನು ತಿರುವಿ ಹಾಕಿ ಅವರೂ ನಾವೂ ಸೇರಿಯೇ ಹುಡುಕಿದೆವು. ಏಕೆಂದರೆ ಹಿಂದೂಯಿಸಂನ ಆಚರಣೆಗೆ ಕಾರಣವನ್ನು ಅದರ ಪವಿತ್ರಗ್ರಂಥಗಳಲ್ಲಿ ಹೇಳಿರಲೇಬೇಕು ತಾನೆ? ನಮ್ಮ ಗ್ರಂಥಗಳ ಸ್ವರೂಪವೇ ಬೇರೆ ಇರುವುದರಿಂದ ಇಂಥ ಪ್ರಶ್ನೆಗಳಿಗೆ ಅವುಗಳಲ್ಲಿ ಉತ್ತರವಿರಲಿಲ್ಲ. ಯಾವುದೇ ನಿದರ್ಿಷ್ಟ ಉತ್ತರ ಇಲ್ಲವೆಂದ ಮೇಲೆ ನಾವು ಹೇಳಿದ್ದೇ ಉತ್ತರ. ಹಾಗಾಗಿ ಈಗ ಈ ಪ್ರಶ್ನೆಗಳನ್ನು ಮತ್ತೊಂದು ಥರ ಉತ್ತರಿಸಲು ಪ್ರಾರಂಭಿಸಿದ್ದೇವೆ: ನಮ್ಮ ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳನ್ನು ತೋರಿಸುವುದು. ವಿಜ್ಞಾನಗಳಲ್ಲಿ ಇಂದು ಚಾಲ್ತಿಯಲ್ಲಿರುವ ಸಿದ್ಧಾಂತಗಳನ್ನು ಉಪಯೋಗಿಸಿ ಸಂಪ್ರದಾಯಗಳ ಕಾರಣವನ್ನು ಅರ್ಥೈಸುವ  ಕೆಲಸವೂ ಭರದಿಂದ ಸಾಗಿದೆ.

ನಮ್ಮ ಸಂಪ್ರದಾಯಗಳಿಗೆ ಕ್ರಿಯೆಗಳನ್ನು ವಿಧಿಬದ್ಧವಾಗಿ ಆಚರಿಸುವುದು ಮುಖ್ಯವೇ ಹೊರತೂ ಮೇಲೆ ತಿಳಿಸಿದ ಕಾರಣಗಳಲ್ಲ. ನಾವು ಹಿರಿಯರಿಂದ ಸಾಂಪ್ರದಾಯಿಕ ಕ್ರಿಯೆಗಳನ್ನು ಅನುಕರಿಸಿ ಕಲಿಯುತ್ತೇವೆಯೇ ಹೊರತೂ ಅವಕ್ಕೆ ಮೇಲೆ ತಿಳಿಸಿದ ಗ್ರಂಥಗಳನ್ನು ಉಲ್ಲೇಖಿಸಿ, ಸತ್ಯಗಳನ್ನು ನಂಬಿ ಕಲಿಯುವುದಿಲ್ಲ. ಏಕೆ ಕಣ್ಣಿಗೆ ಕಾಣುವ ಈ ಸತ್ಯವನ್ನು ಹೇಳಿದರೂ ಇಂದು ನಾವು ಒಪ್ಪಿಕೊಳ್ಳಲು ತಯಾರಿಲ್ಲ? ಏಕೆಂದರೆ ನಾವು ಇಂಥ ಪ್ರಶ್ನೆಗಳಿಗೆ ಉತ್ತರಿಸುತ್ತ ಶತಮಾನಗಳೇ ಸಂದಿವೆ. ಇಂಥ ಪ್ರಶ್ನೋತ್ತರಗಳು ಕಾನೂನಿನ, ಆಡಳಿತದ, ಸಂಶೋಧನೆಯ, ಇತ್ಯಾದಿಗಳ ಅಗತ್ಯವನ್ನು ಪೂರೈಸುವುದಕ್ಕೆ ನಮಗೆ ಬೇಕಾಗಿವೆ. ವಿದ್ಯಾವಂತರ ದೈನಂದಿನ ಜೀವನದ ಒಂದು ಭಾಗವಾಗಿ ಅವು ಅವರಿಗೆ ಈಗ ಪರಕೀಯವಾಗಿ ಕೂಡ ಕಾಣಿಸುತ್ತಿಲ್ಲ. ಆದರೆ ಅವು ರಿಲಿಜನ್ನುಗಳಿಂದ ಹುಟ್ಟಿಕೊಳ್ಳುವ ಪ್ರಶ್ನೆಗಳು ಎಂಬುದು ಈಗಲಾದರೂ ನಿಮಗೆ ಮನದಟ್ಟಾಗಬೇಕಾದರೆ ನಾನು ಹೇಳಿದ್ದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸಾಂಪ್ರದಾಯಿಕ ಆಚರಣೆಯ ಲೋಕವನ್ನು ಪ್ರವೇಶಿಸಿ.

Advertisements
Categories: Uncategorized
  1. No comments yet.
  1. ಜೂನ್ 6, 2013 ರಲ್ಲಿ 7:13 ಅಪರಾಹ್ನ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: