ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

Baluಕಂತು 16: ಸಾಂಪ್ರದಾಯಿಕ ಆಚರಣೆಗಳು ಅಂಧಾನುಕರಣೆಯಾದದ್ದು ಎಂದಿನಿಂದ?

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ವಿಚಾರವಾದಿಗಳ ವಲಯದಲ್ಲಿ ಒಂದು ಚರ್ಚೆ ಇದೆ. ವಿದ್ಯಾವಂತನಾದವನು ವೈಜ್ಞಾನಿಕ ಸಮರ್ಥನೆಯಿಲ್ಲದ ಆಚರಣೆಗಳಲ್ಲಿ ನಂಬಿಕೆ ಇಡಬಹುದೆ? ಈ ಚರ್ಚೆಯ ಬಲಿಪಶುಗಳೆಂದರೆ ಸಾಧಾರಣವಾಗಿ ವಿಜ್ಞಾನಿಗಳೇ. ವೈಜ್ಞಾನಿಕ ತಿಳುವಳಿಕೆಗೆ ಅವರೇ ಮಾನದಂಡ ತಾನೆ? ಅಂಥವರು ತಮ್ಮ ವೈಜ್ಞಾನಿಕ ಉಪಕರಣಗಳಿಗೆ ಪೂಜೆ ಮಾಡುವುದು, ಕುಂಕುಮ ಹಚ್ಚುವುದು, ರಾಹುಕಾಲವನ್ನು ನೋಡುವುದು, ಇತ್ಯಾದಿ ಆಚರಣೆಗಳನ್ನು ಮಾಡುವುದು ಚರ್ಚೆಗೆ ಆಹಾರವಾಗಿದೆ. ಚರ್ಚೆಯೇಕೆ? ಉದಾಹರಣೆಗೆ, ದೇವರಿಗೆ ಹರಕೆ ಹೊತ್ತರೆ ಹೊಟ್ಟೆನೋವು ಹೋಗುತ್ತದೆ ಎಂಬುದು ಆಧುನಿಕ ಮೆಡಿಕಲ್ ವಿಜ್ಞಾನದ ಪ್ರಕಾರ ನಿಜವಾಗಲಿಕ್ಕೆ ಸಾಧ್ಯವಿಲ್ಲ. ವಿಜ್ಞಾನಿಯೊಬ್ಬನು ಅದನ್ನು ನಿಜವೆಂದು ನಂಬಲಂತೂ ಸಾಧ್ಯವೇ ಇಲ್ಲ. ಹಾಗಾಗಿ ಅವನು ತನಗೆ ಹೊಟ್ಟೆನೋವು ಬಂದಾಗ ದೇವರಿಗೆ ಹರಕೆ ಹೊತ್ತುಕೊಳ್ಳುತ್ತಾನೆ ಎಂಬುದನ್ನು ನಿರೀಕ್ಷಿಸುವಂತಿಲ್ಲ. ಒಂದೊಮ್ಮೆ ಅವನು ಹರಕೆ ಹೊತ್ತುಕೊಂಡ ಎನ್ನಿ. ಅವನಿಗೆ ಹಾಗೂ ಉಳಿದವರಿಗೆ ಅದರಿಂದ ಏನೊ ತೊಂದರೆಯಾಗಿದೆ ಎನ್ನುವುದನ್ನು ತೋರಿಸಲು ಕೂಡ ನಮಗೆ ಸಾಧ್ಯವಿಲ್ಲ ಎನ್ನಿ. ಆದರೂ ಅಂಥ ಕ್ರಿಯೆಯನ್ನು ತಪ್ಪೆನ್ನಬಹುದೆ? ವಿಚಾರವಾದದ ದೃಷ್ಟಿಯಿಂದ ಅದು ತಪ್ಪು.

ಸಮಸ್ಯೆ ಎಲ್ಲಿ ಉದ್ಭವಿಸುತ್ತದೆ? ವಿಚಾರವಾದಿಗಳು ಏನನ್ನು ಹೇಳುತ್ತಿದ್ದಾರೆ ಎಂದರೆ ನಿಮ್ಮ ಕ್ರಿಯೆಗೂ ನೀವು ಸತ್ಯವೆಂದು ಏನನ್ನು ನಂಬುತ್ತೀರೋ ಅವುಗಳ ನಡುವೆ ಸಂಬಂಧ ಇರಲೇಬೇಕು. ಒಮ್ಮೆ ಹಾಗಲ್ಲದಿದ್ದರೆ ಅಂಥ ಕ್ರಿಯೆಯು ಮೂಢ, ಅನೈತಿಕ ಕ್ರಿಯೆಯಾಗುತ್ತದೆ. ಮೇಲೆ ಉಲ್ಲೇಖಿಸಿದ ವಿಜ್ಞಾನಿಯು ಎರಡನ್ನೂ ನಿಜ ಎಂದುಕೊಂಡಿರಬಹುದಲ್ಲ ಎಂದು ನೀವು ಕೇಳಬಹುದು. ಆದರೆ ವಿಜ್ಞಾನದ ಹೇಳಿಕೆಯನ್ನು ಸತ್ಯವೆಂದು ಒಪ್ಪಿಕೊಂಡರೆ, ಅದು ಸುಳ್ಳೆಂದು ಪ್ರಮಾಣೀಕರಿಸುವ ಸಾಂಪ್ರದಾಯಿಕ ಹೇಳಿಕೆಯನ್ನು ಕೂಡಾ ಸತ್ಯವೆಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಹಾಗಾಗಿ ಇದು ವಿರೋಧಾಭಾಸವಾಗುತ್ತದೆ. ಸತ್ಯವೆಂದು ನಂಬಿದ್ದನ್ನು ಆಚರಿಸುವುದೇ ನೀತಿ ಹಾಗೂ ಸಮರ್ಥನೀಯ ಎಂಬುದು ರಿಲಿಜನ್ನುಗಳಿಂದ ವಿಚಾರವಾದಿಗಳು ಪಡೆದುಕೊಂಡ ನಿಲುವು. ಮೂಢಾಚರಣೆಗಳಿಗೂ ಸುಳ್ಳು ರಿಲಿಜನ್ನುಗಳಿಗೂ ಕ್ರೈಸ್ತರು ಕಲ್ಪಿಸಿದ ಸಂಬಂಧದ ಕುರಿತು ಈಗಾಗಲೇ ತಿಳಿದುಕೊಂಡಿದ್ದೇವೆ. ನೀವು ಕ್ರೈಸ್ತರಾಗಬೇಕಾದರೆ ಬೈಬಲ್ಲಿನ ಹೇಳಿಕೆಗಳು ಸತ್ಯವೆಂಬುದಾಗಿ ನಂಬಬೇಕು. ಅವುಗಳ ಸತ್ಯದ ಮೇಲಿನ ನಂಬಿಕೆ ಇರದೇ ಅವನ್ನು ಆಚರಿಸಿದರೆ ನೀವು ಆ ರಿಲಿಜನ್ನಿಗೆ ಸೇರಲಾರಿರಿ. ವಿಚಾರವಾದಿಗಳು ಅದರ ಸೆಕ್ಯುಲರ್ ಆವೃತ್ತಿಯನ್ನು ತಿಳಿಸುತ್ತಿದ್ದಾರೆ.

ನೀವು ನಂಬಿಕೊಂಡ ಸತ್ಯವನ್ನಾಧರಿಸಿ ನಿಮ್ಮ ಕ್ರಿಯೆಗಳು ರೂಪುಗೊಂಡರೆ ಮಾತ್ರವೇ ಸರಿ ಎಂಬ ಧೋರಣೆಯು ಕ್ರಿಶ್ಚಿಯಾನಿಟಿಯನ್ನೂ ವಿಚಾರವಾದವನ್ನೂ ಒಂದಾಗಿ ಮಾಡುತ್ತದೆ. ಏಕೆಂದರೆ ಅವೆರಡೂ ಒಂದೇ ಪಾಶ್ಚಾತ್ಯ ಸಂಸ್ಕೃತಿಯ ಎರಡು ಕವಲುಗಳು. ಪ್ರಪಂಚದಲ್ಲಿ ಈ ಧೋರಣೆಯನ್ನು ಇಟ್ಟುಕೊಳ್ಳದ ಸಂಸ್ಕೃತಿಗಳೂ ಇವೆ. ಅವುಗಳ ಪ್ರಕಾರ ಪ್ರಪಂಚದ ಸತ್ಯಾಸತ್ಯತೆಯ ಕುರಿತು ನಿಮ್ಮ ನಿಲುವು ಏನೇ ಇರಬಹುದು, ನಿಮ್ಮ ಆಚರಣೆಗೂ ಅದಕ್ಕೂ ಸಂಬಂಧವಿರಲೇಬೇಕಿಲ್ಲ. ರಿಲಿಜನ್ನುಗಳು ಇಲ್ಲದ ಸಂಸೃತಿಗಳಾದ ಪ್ರಾಚೀನ ರೋಮನ್ನರು, ಭಾರತೀಯರು ಹಾಗೂ ಚೈನೀಯರು ಈ ಸಂಬಂಧವನ್ನು ಕಲ್ಪಿಸುವುದಿಲ್ಲ. ಪ್ರಾಚೀನ ರೋಮನ್ನರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗೇ ದಾಖಲಿಸಿದ್ದಾರೆ. ಅವರು ‘ಟ್ರೆಡಿಶಿಯೊ’ ಎಂಬ ಶಬ್ದವನ್ನು ಬಳಸುತ್ತಾರೆ. ಇದು ನಮ್ಮ ಸಂಪ್ರದಾಯ ಎಂಬ ಪದಕ್ಕೆ ಸಂವಾದಿಯಾಗಿದೆ. ಟ್ರೆಡಿಶಿಯೊ ಎಂದರೆ ಪೂರ್ವಜರ ಆಚರಣೆಗಳನ್ನು ಅನುಸರಿಸಿಕೊಂಡು ಹೋಗುವುದು. ಅವನ್ನು ಅನುಸರಿಸಿಕೊಂಡು ಹೋದರೇ ಒಳಿತಾಗುತ್ತದೆ ಎಂಬ ಭರವಸೆ ರೋಮನ್ನರಿಗೆ ಇತ್ತು. ಅವನ್ನು ಮುರಿಯುವುದರಿಂದ ಒಳಿತಾಗುವುದಿಲ್ಲ ಎಂಬ ಹೆದರಿಕೆಯೂ ಅವರಿಗಿತ್ತು.

ಹಾಗಂತ ರೋಮನ್ನರು ಕುರಿಗಳಂತೆ ತಮ್ಮ ಹಿರಿಯರನ್ನು ಅನುಕರಿಸುತ್ತ ತಮ್ಮ ವಿಚಾರವಂತಿಕೆಯನ್ನೇ ಮರೆತರು ಎಂದರ್ಥವಲ್ಲ. ಸಿಸೆರೋ ಎಂಬ ಚಿಂತಕನ De Natura Deorem ಎಂಬ ಕೃತಿಯು ತೋರಿಸುವಂತೆ ಅಂದಿನ ಚಿಂತಕರು ತಮ್ಮ ದೇವತೆಗಳ, ಆಚರಣೆಗಳ ಸ್ವರೂಪದ ಕುರಿತು ಮುಕ್ತವಾಗಿ ವಿಚಾರ ವಿಮರ್ಶೆ ನಡೆಸಿದ್ದರು. ಈ ಕೃತಿಯನ್ನು ನೋಡಿದಾಗ ಆಧುನಿಕ ಯುರೋಪಿನ ವಿಚಾರವಾದಿಗಳ ನಾಸ್ತಿಕ ಚಿಂತನೆಗಳು ಹೊಸತೇನನ್ನೂ ಹೇಳಿಲ್ಲ ಎಂಬುದು ಸ್ಪಷ್ಟ. ಆದರೆ ಇದು ಈ ಪ್ರಾಚೀನ ಚಿಂತಕರ ಒಂದು ಮುಖ ಅಷ್ಟೆ. ಅವರ ಮತ್ತೊಂದು ಮುಖವೆಂದರೆ, ಅವರು ಅಷ್ಟೇ ಶ್ರದ್ಧೆಯಿಂದ ತಮ್ಮ ದೇವತೆಗಳ ಜಾತ್ರೆಗಳಲ್ಲಿ ಪುರೋಹಿತರಾಗಿ ಭಾಗವಹಿಸುತ್ತಿದ್ದರು, ಹರಕೆ ಹೇಳಿಕೊಳ್ಳುತ್ತಿದ್ದರು, ಬಲಿ ಕೊಡುತ್ತಿದ್ದರು. ಅವರ ಜಿಜ್ಞಾಸೆಯಿಂದ ಪ್ರೇರಣೆ ಹೊಂದಿದ ಜ್ಞಾನೋದಯ ಯುಗದ ನಾಸ್ತಿಕ ವಿಚಾರವಾದಿಗಳಿಗೆ ಈ ವರ್ತನೆಯು ಒಂದು ಒಗಟಾಯಿತು. ಈ ಪ್ರಾಚೀನರು ತಾವೇ ಸತ್ಯವೆಂದು ನಂಬದ ಕೆಲಸದಲ್ಲಿ ತೊಡಗಿಸಿಕೊಂಡಿದ್ದನ್ನು ಹೇಗೆ ಅರ್ಥೈಸುವುದು? ಅದಕ್ಕೆ ಐರೋಪ್ಯ ಚಿಂತಕರು ಕಂಡುಹಿಡಿದ ಉತ್ತರವೆಂದರೆ, ಬಹುಶಃ ಅವರು ತಮಗೆ ನಂಬಿಕೆ ಇಲ್ಲದಿದ್ದರೂ ಯಾವುದೋ ಪ್ರಯೋಜನವನ್ನು ಮನಗಂಡು ತೋರಿಕೆಗೆ ಹಾಗೆ ಮಾಡುತ್ತಿದ್ದರು. ಅವರು ಆಷಾಢಭೂತಿಗಳು. ಇವರಿಗೆಲ್ಲ ದೈವಭಕ್ತಿಯಾಗಲೀ, ಭೀತಿಯಾಗಲೀ ಖಂಡಿತವಾಗಿಯೂ ಇರಲಿಲ್ಲ.

ಈ ಮೇಲಿನ ಆಧುನಿಕ ಚಿಂತಕರು ಕ್ರಿಶ್ಚಿಯನ್ನರ ಥಿಯಾಲಜಿಯ ದೃಷ್ಟಿಕೋನವನ್ನೇ ಸತ್ಯವೆಂದು ಸ್ವೀಕರಿಸಿದ್ದರಿಂದ ಈ ಮೇಲಿನ ತೀರ್ಮಾನಕ್ಕೆ ಬರುತ್ತಾರೆ. ಆದರೆ ಈ ಕುರಿತು ಸ್ವತಃ ಪ್ರಾಚೀನ ರೋಮನ್ ಚಿಂತಕರೇನು ಹೇಳುತ್ತಾರೆ? ಅವರ ಪ್ರಕಾರ ಈ ದೇವತೆಗಳು ಸತ್ಯವೊ ಸುಳ್ಳೊ ಎಂಬ ಜಿಜ್ಞಾಸೆಯು ಅವುಗಳನ್ನು ಪೂಜಿಸಲಿಕ್ಕೆ ಏಕೆ ತೊಡಕಾಗಬೇಕು? ಅವೇಕೆ ಸತ್ಯವಾಗಿರಬೇಕು? ಪೂರ್ವಜರು ಈ ದೇವತೆಗಳನ್ನು ಸಾವಿರಾರು ವರ್ಷದಿಂದ ಒಳ್ಳೆಯದೆಂದು ಕಂಡುಕೊಂಡು ನಮಗೆ ದಾಟಿಸಿದ್ದಾರೆ ಎಂಬ ಸತ್ಯವೊಂದೇ ಸಾಲದೆ? ದೇವತೆಗಳ ಅಸ್ತಿತ್ವದ ಕುರಿತ ಜಿಜ್ಞಾಸೆಯನ್ನು ಎಷ್ಟೇ ನಡೆಸಿದರೂ ಕೂಡ ಪೂರ್ವಜರಿಂದ ಬಳುವಳಿಯಾಗಿ ಪಡೆದ ಆಚರಣೆಗಳನ್ನು ನಿಲ್ಲಿಸುವುದು ಯುಕ್ತವಲ್ಲ. ಅಂದರೆ ಆಚರಣೆಗಳಿಗೆ ಇರುವ ಸಮರ್ಥನೆಯೆಂದರೆ ಅವು ನಮ್ಮ ಹಿರಿಯರ ಆಚರಣೆಗಳು. ಅವರವರ ಪೂರ್ವಜರ ಆಚರಣೆಗಳನ್ನು ಅವರವರು ಪಾಲಿಸುವುದು ನ್ಯಾಯಸಮ್ಮತ. ಈ ಧೋರಣೆಯಿಂದಾಗಿ ಬಹುತ್ವವನ್ನು ಗೌರವಿಸುವುದು ರೋಮಿನ ಸಂಪ್ರದಾಯಗಳ ಒಂದು ಲಕ್ಷಣವಾಯಿತು.

ಭಾರತೀಯ ಸಂಸ್ಕೃತಿಗೆ ಪಾಶ್ಚಾತ್ಯರು ಮುಖಾಮುಖಿ ಮಾಡಿದಾಗಲೂ ಇದೇ ಸಮಸ್ಯೆಯನ್ನು ಎದುರಿಸಿದರು. ಅಬೆ ದುಬೆ ಎಂಬ ಫ್ರೆಂಚ್ ಮಿಶನರಿಯು ತಿಳಿಸುವ ಪ್ರಕಾರ ಇಲ್ಲಿನ ಬ್ರಾಹ್ಮಣರ ಎದುರು ಅವರ ದೇವತೆಗಳನ್ನು ಗೇಲಿ ಮಾಡಿದರೆ ಏನೂ ಅಪಾಯವಿಲ್ಲ. ಬ್ರಾಹ್ಮಣರು ಸ್ವತಃ ತಾವು ನಗುವುದಲ್ಲದೇ, ತಮ್ಮ ದೇವತೆಗಳ ಕುರಿತು ಮಿಶನರಿಗೇ ಗೊತ್ತಿಲ್ಲದ ಇನ್ನೂ ಅನೇಕ ಹಾಸ್ಯ ಪ್ರಸಂಗಗಳನ್ನು ತಿಳಿಸುತ್ತಿದರು. ಹಾಗಾಗಿ ಅವರ ಮನಸ್ಸಿನೊಳಗೆ ತಮ್ಮ ದೇವತೆಗಳ ಕುರಿತು ಅಪನಂಬಿಕೆ ಇದ್ದರೂ ಆಶ್ಚರ್ಯವಿಲ್ಲ ಎನ್ನುತ್ತಾನೆ ಅಬೆ ದುಬೆ. ಹಾಗೂ ಬಹುಶಃ ಅವರು ಕ್ರೈಸ್ತರ ಗಾಡ್ ಒಬ್ಬನೇ ನಿಜವಾದ ಗಾಡ್ ಎಂಬುದನ್ನು ಕಂಡುಕೊಂಡಿರಬಹುದು ಎಂದೂ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾನೆ. ಆದರೆ ಬ್ರಾಹ್ಮಣರು ತಮ್ಮ ದೇವತೆಗಳನ್ನು ಅಪಹಾಸ್ಯ ಮಾಡಿಕೊಂಡರೂ ಕೂಡ ತಮ್ಮ ಆಚರಣೆಯನ್ನು ಬಿಟ್ಟು ಮತಾಂತರ ಹೊಂದಲು ಮಾತ್ರ ಏಕೆ ನಿರಾಕರಿಸುತ್ತಾರೆ ಎಂಬುದು ಅವರಿಗೆ ಒಗಟಾಯಿತು. ಹಾಗಾಗಿ ಇವರು ನಂಬಿಕೆಗೆ ಅರ್ಹರಲ್ಲ, ಅನೀತಿವಂತರು, ಸುಳ್ಳು ಹೇಳುತ್ತಾರೆ ಎಂದೆಲ್ಲ ವಿವರಿಸಿ ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರು.

ಕ್ರೈಸ್ತರೇಕೆ ಸತ್ಯಕ್ಕೂ ಆಚರಣೆಗೂ ಈ ರೀತಿಯ ಅವಿನಾಭಾವೀ ಸಂಬಂಧವನ್ನು ಪ್ರತಿಪಾದಿಸಿಕೊಂಡು ಬಂದರೆಂಬುದಕ್ಕೆ ಒಂದು ಐತಿಹಾಸಿಕ ಕಾರಣವಿದೆ. ಪ್ರಾಚೀನ ರೋಮಿನಲ್ಲಿ ಅದರ ಎಲ್ಲಾ ಪ್ರಜೆಗಳೂ ಕೂಡ ನಗರ ದೇವತೆಗಳ ಆರಾಧನೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಸೆಮೆಟಿಕ್ ರಿಲಿಜನ್ನುಗಳಾದ ಯೆಹೂದಿಗಳು ಮತ್ತು ಕ್ರೈಸ್ತರಿಗೆ ಎದುರಾದ ಸಮಸ್ಯೆಯೆಂದರೆ, ಉಳಿದ ದೇವತೆಗಳನ್ನು ಪೂಜಿಸಿದರೆ ಅವುಗಳನ್ನು ಸತ್ಯವೆಂದು ನಂಬಿದ ಹಾಗಾಗುತ್ತದೆ, ಹಾಗಂತ ಅವುಗಳನ್ನು ಸತ್ಯ ಎಂದರೆ ತಮ್ಮ ಗಾಡ್ ಸುಳ್ಳು ಎಂದಂತೇ. ಅದಕ್ಕಾಗಿ ಅವರು ರೋಮನ್ ದೇವತೆಗಳನ್ನು ಪೂಜಿಸಲು ಒಪ್ಪಲಿಲ್ಲ. ಇದು ರೋಮಿನಲ್ಲಿ ಗುರುತರವಾದ ಅಪರಾಧವಾಗಿತ್ತು. ನಗರ ದೇವತೆಗಳನ್ನು ನಗರವಾಸಿಗಳಲ್ಲೇ ಎಲ್ಲರೂ ಪೂಜಿಸದಿದ್ದರೆ ಇಡೀ ನಗರಕ್ಕೇ ಅನಿಷ್ಟ ಕಾದಿದೆ. ಅದಲ್ಲದೇ ಇಂಥ ಪ್ರತಿಪಾದನೆಯನ್ನು ಮಾಡುವವರದು ನಿಜವಾದ ಸಂಪ್ರದಾಯ ಎಂದು ಕಲ್ಪಿಸಿಕೊಳ್ಳಲಿಕ್ಕಾದರೂ ಹೇಗೆ ಸಾಧ್ಯ? ಹಾಗಾಗಿ ರೋಮನ್ನರು ಯೆಹೂದಿಗಳಿಗೆ ಹಾಗೂ ಕ್ರೈಸ್ತರಿಗೆ ತಮ್ಮದು ಸಂಪ್ರದಾಯವೆಂಬುದನ್ನು ಮನದಟ್ಟುಮಾಡಿಕೊಡಲು ಸವಾಲು ಹಾಕಿದರು. ಇದೆಲ್ಲದರ ನಡುವೆ ಕ್ರೈಸ್ತರು ಹಾಗೂ ಯೆಹೂದಿಗಳ ಮೇಲೆ ಅವರ ಅಸಹಿಷ್ಣುತೆಯ ಕಾರಣಕ್ಕಾಗಿಯೇ ಸಾಕಷ್ಟು ಹಲ್ಲೆಗಳು ಕೂಡ ನಡೆದವು. ಹಾಗಾಗಿ ಅವರು ಈ ಸವಾಲನ್ನು ಉತ್ತರಿಸಲೇಬೇಕಾದ ಒತ್ತಡ ಹುಟ್ಟಿತು.

ಈ ಸ್ಪರ್ಧೆಯಲ್ಲಿ ಯೆಹೂದಿಗಳು ತಮ್ಮ ಹಳೇ ಒಡಂಬಡಿಕೆಯ ಕಥೆಯನ್ನು ಆಧರಿಸಿ ತಮ್ಮದು ಪೂರ್ವಜರ ಆಚರಣೆ ಎಂಬುದನ್ನು ತೋರಿಸಿದರು. ಫಜೀತಿ ಬಂದಿದ್ದು ಕ್ರಿಶ್ಚಿಯನ್ನರಿಗೆ. ಯೆಹೂದಿಗಳ ಗಾಡ್ ಭವಿಷ್ಯದಲ್ಲಿ ಯೆಹೂದಿಗಳಲ್ಲೇ ಹುಟ್ಟಿಬರುತ್ತೇನೆ ಎಂದಿದ್ದನು, ಮೇಲಾಗಿ ಅವನು ಕ್ರಿಸ್ತನ ರೂಪದಲ್ಲಿ ಬಂದಿದ್ದಾನೆ ಎಂಬುದನ್ನು ಯೆಹೂದಿಗಳು ಒಪ್ಪಿರಲಿಲ್ಲ. ಕ್ರೈಸ್ತರಿಗೆ ಪೂರ್ವಜರೇ ಇಲ್ಲದಂತಾಯಿತು. ಹಾಗಾಗಿ ಕ್ರೈಸ್ತರು ತಮ್ಮ ಸಂಪ್ರದಾಯವನ್ನು ಕ್ರಿಸ್ತನಿಂದ ಗುರುತಿಸದೇ ಬೇರೆ ಉಪಾಯವಿರಲಿಲ್ಲ. ಈ ಫಜೀತಿಯಿಂದ ಪಾರಾಗಲು ಕ್ರೈಸ್ತರು ಹೇಳಿದ್ದೆಂದರೆ, ತಮ್ಮದು ಸತ್ಯದೇವನ ವಾಣಿಯನ್ನೇ ಆಧರಿಸಿದ ಪ್ರತಿಪಾದನೆ, ಹಾಗಾಗಿ ತಮ್ಮ ಆಚರಣೆಗಳು ಸತ್ಯ. ಹಾಗಾಗಿಯೇ ತಮ್ಮದು ರಿಲಿಜನ್ನು ಎನಿಸಿಕೊಳ್ಳುತ್ತದೆ. ಸತ್ಯವನ್ನು ತಿಳಿದುಕೊಳ್ಳದೇ ಪೂರ್ವಜರ ಆಚರಣೆಗಳನ್ನು ಕುರುಡಾಗಿ ಪಾಲಿಸುವುದೇ ಸಂಪ್ರದಾಯ, ಆ ಕಾರಣದಿಂದ ತಮ್ಮದು ಸಂಪ್ರದಾಯವೇ ಅಲ್ಲ. ಈ ರೀತಿಯಲ್ಲಿ, ಸಂಪ್ರದಾಯವನ್ನು ರಿಲಿಜನ್ನಿಗೆ ವಿರುದ್ಧವಾಗಿ ಇಟ್ಟು, ರಿಲಿಜನ್ನೆಂದರೆ ಸತ್ಯವನ್ನು ಆಧರಿಸಿದ ಆಚರಣೆ, ಸಂಪ್ರದಾಯವೆಂದರೆ ಅಂಧಾನುಕರಣೆ ಎಂಬ ವಾದವನ್ನು ಹುಟ್ಟುಹಾಕಿದರು.

ಈ ಮೇಲಿನ ವಾದವು ರಿಲಿಜನ್ನನ್ನು ಸಂಪ್ರದಾಯಗಳಿಗೆ ವಿರುದ್ಧವಾಗಿ ಇಟ್ಟು ಸಮರ್ಥಿಸಿಕೊಳ್ಳುವ ಅನಿವಾರ್ಯತೆಯಿಂದ ಹುಟ್ಟಿದೆ. ಅದೇ ವಾದವೇ ಸಂಪ್ರದಾಯಗಳ ಕುರಿತ ನಮ್ಮ ಧೋರಣೆಯ ಹಿಂದೆ ಕೆಲಸಮಾಡುತ್ತಿದೆ ಎಂಬುದು ಎಷ್ಟು ಜನರಿಗೆ ಗೊತ್ತು?.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: