ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

Baluಕಂತು 18 : ವರ್ಷಿಪ್ ಮತ್ತು ಪೂಜೆ ಒಂದೇ ಎಂಬ ತಪ್ಪು ತಿಳುವಳಿಕೆ

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ಭಾರತೀಯರು ಆಕಳು, ಮಂಗ, ಇತ್ಯಾದಿ ಪ್ರಾಣಿಗಳನ್ನು ಪೂಜಿಸುವುದು ಪಾಶ್ಚಾತ್ಯರ ಗಮನವನ್ನು ವಿಶೇಷವಾಗಿ ಸೆಳೆದಿದೆ. ಅಂಥವರು ವಸಾಹತು ಕಾಲದ ಕ್ರೈಸ್ತ ಮಿಶನರಿಗಳು ಇರಬಹುದು ಇಲ್ಲ ಪಾಶ್ಚಾತ್ಯ ವಿಚಾರವಾದೀ ಚಿಂತಕರು ಇರಬಹುದು. ಒಟ್ಟಾರೆಯಾಗಿ ಈ ಆಚರಣೆಗಳು ಮೂಢನಂಬಿಕೆ ಎಂಬುದರಲ್ಲಿ ಇವರಿಬ್ಬರಿಗೂ ಸಂದೇಹವೇ ಇಲ್ಲ. ಪಾಶ್ಚಾತ್ಯರು ಇಂಥ ಪೂಜೆಗಳನ್ನು ಏಕೆ ಮೂಢನಂಬಿಕೆ(ಸೂಪರ್ಸ್ಟಿಶನ್) ಎಂಬುದಾಗಿ ಗುರುತಿಸಿದರು ಎಂಬುದನ್ನು ಇದಕ್ಕೂ ಮೊದಲು ಎರಡು ಅಂಕಣಗಳಲ್ಲಿ ಚರ್ಚಿಸಿದ್ದೇನೆ. ಪ್ರಸ್ತುತ ಅಂಕಣದಲ್ಲಿ ಇಂಥ ಟೀಕೆಗಳ ಹಿಂದಿರುವ ಮತ್ತೊಂದು ತಪ್ಪು ತಿಳುವಳಿಕೆಯನ್ನು ಕುರಿತು ಚರ್ಚಿಸೋಣ. ಅದು ಭಾಷಾಂತರದ ಆವಾಂತರದಿಂದ ಹುಟ್ಟಿದೆ. ಭಾರತೀಯರು ಯಾವುದನ್ನು ಪೂಜೆ ಎನ್ನುತ್ತಾರೋ ಅದನ್ನು ಪಾಶ್ಚಾತ್ಯರು ವರ್ಷಿಪ್ (Worship) ಎಂಬುದಾಗಿ ಭಾಷಾಂತರಿಸುತ್ತಿದ್ದಾರೆ. ಆದರೆ ವರ್ಷಿಪ್ ಎಂಬ ಶಬ್ದವನ್ನು ಪೂಜೆ ಎಂಬುದಾಗಿ ಭಾಷಾಂತರಿಸಬೇಕಾದರೆ ನಮ್ಮ ಪೂಜೆಗೆ ಮೂಢನಂಬಿಕೆಯ ಪಟ್ಟ ಕಟ್ಟಲೇಬೇಕಾದ ಪರಿಸ್ಥಿತಿಯಿದೆ. ಅದು ಹೇಗೆಂಬುದನ್ನು ನೋಡೋಣ:

ವರ್ಷಿಪ್ ಎಂಬ ಶಬ್ದವು ರಿಲಿಜನ್ನುಗಳಲ್ಲಿ ಒಂದು ನಿರ್ದಿಷ್ಟಾರ್ಥವನ್ನು ಹೊಂದಿದೆ. ಪ್ರತಿಯೊಂದು ರಿಲಿಜನ್ನಿಗೂ ಏಕೈಕ ಸತ್ಯದೇವನಿರುತ್ತಾನೆ. ಆಯಾ ರಿಲಿಜನ್ನಿಗೆ ಸೇರಿದವರು ಸತ್ಯದೇವನೆಂದು ಯಾರನ್ನು ನಂಬುತ್ತಾರೊ ಅವನನ್ನು ಮಾತ್ರವೇ ವರ್ಷಿಪ್ ಮಾಡುತ್ತಾರೆ. ಏಕೆಂದರೆ ಸತ್ಯದೇವನೇ ತನ್ನ ಸೃಷ್ಟಿಕರ್ತ ಹಾಗೂ ಪರಮಾಧಿಕಾರಿ ಎಂದು ನಂಬಿದವನೊಬ್ಬನಿಗೆ ಉಳಿದ ದೇವರುಗಳು ಸತ್ಯ ದೇವನ ಸ್ಥಾನಕ್ಕೆ ಬರುವುದು ಅಸಾಧ್ಯ. ಉಳಿದ ದೇವತೆಗೆ ಆತನು ತಲೆಬಾಗಿದರೆ ತನ್ನ ರಿಲಿಜನ್ನು ಸತ್ಯ ಎಂಬುದನ್ನು ಅವನು ನಂಬುವುದಿಲ್ಲ ಎಂದಾಗುತ್ತದೆ. ಹಾಗಾಗಿಯೇ ವರ್ಷಿಪ್ ಎನ್ನುವ ಆಚರಣೆಯು ರಿಲಿಜನ್ನುಗಳಿಗೆ ತೀರಾ ನಿರ್ಣಾಯಕವಾದುದು. ವರ್ಷಿಪ್ ಸರಿಯಾಗಿ ನಡೆಯದಿದ್ದರೆ ರಿಲಿಜನ್ನುಗಳ ಸತ್ಯಪ್ರತಿಪಾದನೆಯು ಮುಂದುವರಿದುಕೊಂಡು ಬರುವುದು ಕೂಡ ಅಸಾಧ್ಯ. ಹಾಗಾಗಿ ರಿಲಿಜನ್ನುಗಳಲ್ಲಿ ಅದರ ಸದಸ್ಯರೆಲ್ಲರೂ ಕಡ್ಡಾಯವಾಗಿ ವಾರಕ್ಕೊಮ್ಮೆ ಈ ಆಚರಣೆಯನ್ನು ಮಾಡುವ ನಿಯಮವಿರುತ್ತದೆ. ಈ ಆಚರಣೆಯ ಜೊತೆಗೇ ಆಯಾ ರಿಲಿಜನ್ನಿನ ಸತ್ಯದ ಪ್ರವಚನವನ್ನು ಕೇಳುವುದು ಕೂಡಾ ಅಷ್ಟೇ ಮುಖ್ಯ.

ಯುರೋಪಿನಲ್ಲಿ 18ನೇ ಶತಮಾನದ ನಂತರ ಅನೇಕ ಚಿಂತಕರು ಕ್ರೈಸ್ತರ ಈ ಸತ್ಯದೇವನ ಕಥೆಯನ್ನು ಸುಳ್ಳೆಂದು ನಿರಾಕರಿಸಿದರು. ಅದನ್ನು ಅಥೇಯಿಸಂ ಎನ್ನುತ್ತಾರೆ. (ಅಥೇಯಿಸಂ ಎಂಬ ಶಬ್ದವನ್ನು ನಾವು ಕನ್ನಡದಲ್ಲಿ ನಿರೀಶ್ವರವಾದ, ನಾಸ್ತಿಕವಾದ ಎಂದೆಲ್ಲ ಭಾಷಾಂತರಿಸುತ್ತೇವೆ.) ಅದರ ಪ್ರತಿಪಾದಕರನ್ನು ವಿಚಾರವಾದಿಗಳು(ರ‍್ಯಾಶನಲಿಸ್ಟ್ ಗಳು) ಎಂದು ಕೂಡ ಗುರುತಿಸಬಹುದು. ಪ್ರಕೃತಿ ವ್ಯವಹಾರದ ಹಿಂದೆ ಗಾಡ್ ಎಂಬವನ ಯೋಜನೆ ಹಾಗೂ ಉದ್ದೇಶಗಳು ಇವೆ ಎಂಬ ವಿವರಣೆಯನ್ನು ಇವರು ನಿರಾಧಾರ ಎಂದು ತಳ್ಳಿಹಾಕುತ್ತಾರೆ. ಅದು ರಿಲಿಜನ್ನುಗಳು ಸೃಷ್ಟಿಸಿದ ಕಥೆ ಎನ್ನುತ್ತಾರೆ ಅವರು. ಇಂಥ ಸುಳ್ಳು ಕಥೆಗಳಿಗೆ ತಮ್ಮನ್ನು ಕೊಟ್ಟುಕೊಂಡ ಸಮಾಜಗಳು ಬೆಳವಣಿಗೆಯನ್ನೇ ಕಾಣಲಾರವು ಎಂಬುದು ಅವರ ವಾದ. ಇವರು ವೈಚಾರಿಕತೆಯನ್ನು ಎತ್ತಿ ಹಿಡಿದು, ವೈಜ್ಞಾನಿಕ ಚಿಂತನೆಯೇ ಮಾನವನ ಪ್ರಗತಿಗೆ ನಿಜವಾದ ದಾರಿ ಎಂಬುದಾಗಿ ಪ್ರತಿಪಾದಿಸಿದರು. ಹಾಗೂ ರಿಲಿಜನ್ನಿನ ಕಥೆಗೆ ಬದಲಾಗಿ ತಮ್ಮದೇ ವೈಜ್ಞಾನಿಕ ಸತ್ಯಗಳನ್ನು ಪ್ರತಿಪಾದಿಸಿದರು.

ಭಾರತದಲ್ಲಿ ಹಿಂದೂಯಿಸಂ ಮುಂತಾದ ರಿಲಿಜನ್ನುಗಳಿವೆ ಎಂಬುದನ್ನು ಶ್ರದ್ಧಾವಂತ ಕ್ರೈಸ್ತರೂ, ಅವರ ಕಥೆಯನ್ನೇ ನಿರಾಕರಿಸುವ ವಿಚಾರವಾದಿಗಳೂ ಇಬ್ಬರೂ ನಂಬಿದ್ದರು. ವರ್ಷಿಪ್ ಇಲ್ಲದೇ ರಿಲಿಜನ್ನು ಹೇಗೆ ಉಳಿದುಕೊಂಡು ಬರಲು ಸಾಧ್ಯ? ಹಿಂದೂಯಿಸಂನಲ್ಲಿ ಅದೂ ಇರಲೇಬೇಕು ಎಂದುಕೊಂಡ ಅವರು ಭಾರತಕ್ಕೆ ಭೇಟಿ ನೀಡಿದಾಗ ಹಿಂದೂಗಳು ನಾನಾ ಥರದ ಪೂಜೆಗಳನ್ನು ಮಾಡುತ್ತಿದ್ದುದು ಕಂಡುಬಂತು. ಇದು ಹಿಂದೂ ಧರ್ಮದ ಅನುಯಾಯಿಗಳು ಮಾಡುವ ವರ್ಷಿಪ್ ಎಂಬುದಾಗಿ ಅವರು ಭಾವಿಸಿಕೊಂಡರು. ಆದರೆ ಪೂಜೆಗೆ ಗುರಿಯಾದ ದೇವತೆಗಳು ಕೇವಲ ಮೂರ್ತಿಗಳು ಮಾತ್ರವೇ ಆಗಿರಲಿಲ್ಲ, ಬದಲಾಗಿ ಮಂಗ, ಆಕಳು, ಇಲಿ, ನವಿಲು, ಇತ್ಯಾದಿ ಪ್ರಾಣಿಪಕ್ಷಿಗಳು, ಮರಗಳು, ನದಿ, ಬೆಟ್ಟಗಳು, ಇಷ್ಟೇ ಅಲ್ಲದೆ ದೈನಂದಿನ ಜೀವನದಲ್ಲಿ ಬಳಕೆಯಾಗುವ ವಸ್ತುಗಳಾದ ಕತ್ತಿ, ಕೋವಿ, ಒರಳು, ಒನಕೆ ಇತ್ಯಾದಿಗಳನ್ನೂ ಪೂಜಿಸುವುದನ್ನು ಅವರು ಗಮನಿಸಿದರು. ಇವನ್ನೆಲ್ಲ ವರ್ಷಿಪ್ ಎಂಬುದಾಗಿಯೇ ಕರೆದು ಭಾರತೀಯರು ಇವನ್ನೆಲ್ಲ ದೇವತೆಗಳೆಂದು ಭಾವಿಸಿದ್ದಾರೆ ಎಂಬ ಚಿತ್ರಣವನ್ನು ಕಟ್ಟಿಕೊಟ್ಟರು.

ಆದರೆ ಈ ಭಾಷಾಂತರದ ಬೆನ್ನಿಗೇ ಭಾರತೀಯರ ಪೂಜೆಯ ಕುರಿತು ಟೀಕೆಗಳೂ ಬರತೊಡಗಿದವು. ಪ್ರೊಟೆಸ್ಟಾಂಟ್ ಮಿಶನರಿಗಳು ಈ ರೀತಿಯ ಪೂಜೆಯನ್ನು ತಪ್ಪು ವರ್ಷಿಪ್ ಎಂದರು ಹಾಗೂ ಮರ ಮತ್ತು ಕಲ್ಲುಗಳಿಗೆ ಮನುಷ್ಯನು ತಲೆಬಾಗುವಂತೆ ಮಾಡುವ ಈ ಪೂಜೆಗಳನ್ನು ಸುಳ್ಳು ರಿಲಿಜನ್ ಎಂಬುದಾಗಿ ವರ್ಣಿಸಿದರು. ಹಿಂದೂಯಿಸಂ ಅವನತಿ ಹೊಂದಿರುವುದಕ್ಕೆ ಇಂಥ ಪೂಜೆಗಳೇ ಸಾಕ್ಷಿ ಹಾಗೂ ಇವೆಲ್ಲ ಬ್ರಾಹ್ಮಣರೆಂಬ ಪುರೋಹಿತಶಾಹಿಗಳ ಕುತಂತ್ರ ಎಂಬುದಾಗಿ ಅರ್ಥೈಸಿದರು. ಈ ಮಿಶನರಿಗಳ ಉತ್ತರಾಧಿಕಾರಿಗಳಾಗಿ ಭಾರತದ ವರ್ಣನೆಯನ್ನು ಕೈಗೊಂಡ ಪಾಶ್ಚಾತ್ಯ ವಿಚಾರವಾದಿ ಚಿಂತಕರು ಪ್ರಾಣಿ ಪಕ್ಷಿಗಳ ಪೂಜೆಯನ್ನು ಅನಾಗರಿಕತೆಯ ಲಕ್ಷಣ ಎಂದು ಕರೆದರು. ಏಕೆಂದರೆ ವಿಚಾರವಂತನಾದ ಮಾನವನು ತಾನೇ ಈ ನಿಸರ್ಗದ ಸರ್ವಾಧಿಕಾರಿ ಎಂಬುದನ್ನು ಮರೆತು ಪ್ರಾಣಿಗಳ ಮುಂದೆ ತಲೆಬಾಗುತ್ತಾನೆ. ಇಂಥ ಪೂಜೆಗಳಿಂದಾಗಿಯೇ ಭಾರತೀಯ ಸಮಾಜವು ಬೆಳವಣಿಗೆಯನ್ನು ಕಾಣದೇ ನಾರುತ್ತಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.

ಎರಡೂ ಪಕ್ಷಗಳಿಗೆ ಸೇರಿದವರೂ ಅವರವರ ನಂಬಿಕೆಗಳಿಗನುಗುಣವಾಗಿ ಭಾರತೀಯರ ಪೂಜೆಯನ್ನು ವಿಭಿನ್ನವಾಗಿ ಟೀಕಿಸಿದರು ಎಂಬುದೇನೋ ನಿಜ. ಆದರೆ ಇಲ್ಲಿನ ಜನರ ಪೂಜೆಯು ವರ್ಷಿಪ್ ಎಂಬುದರಲ್ಲಿ ಅವರಿಬ್ಬರಿಗೂ ಯಾವುದೇ ಅನುಮಾನವಿರಲಿಲ್ಲ. ಅವೆರಡೂ ಟೀಕೆಗಳೂ ಒಂದೇ ಗ್ರಹಿಕೆಯಿಂದ ಹುಟ್ಟಿವೆ: ವರ್ಷಿಪ್ ಅಂದರೆ ನೀವು ಸತ್ಯದೇವನನ್ನು ನಂಬಿಕೊಂಡು ಅವನ ಉದ್ದೇಶಕ್ಕೆ ತಲೆಬಾಗುವ ಆಚರಣೆ, ಅರ್ಥಾತ್ ನೀವು ನಂಬಿಕೊಂಡ ಸತ್ಯದಲ್ಲಿ ಧೃಡವಿಶ್ವಾಸವನ್ನು ತೋರಿಸುವುದು. ಹಾಗಾಗಿ ಅವರು ಭಾರತೀಯರು ಮರ, ಕಲ್ಲು, ಪ್ರಾಣಿ ಪಕ್ಷಿಗಳನ್ನು ಸತ್ಯದೇವನೆಂದು ಭಾವಿಸಿ ತಲೆಬಾಗುತ್ತಾರೆ ಎಂದು ವರ್ಣಿಸುತ್ತಾರೆ.

ಆದರೆ ಭಾರತೀಯರ ಪೂಜೆಯ ಉದ್ದೇಶವು ನಿಜವಾದ ಸೃಷ್ಟಿಕರ್ತನಿಗೆ ತಲೆಬಾಗುವುದೂ ಅಲ್ಲ, ಪೂಜೆಯಲ್ಲಿ ತಲೆಬಾಗುವುದು ಒಂದು ವಿಧಿಯೂ ಅಲ್ಲ,. ಪೂಜೆಯನ್ನು ವಸ್ತುಗಳಿಂದ ಹಿಡಿದು ಮನುಷ್ಯರ ವರೆಗೆ ಯಾರಿಗಾದರೂ ಮಾಡಬಹುದು. ಪಾದಪೂಜೆ, ವರಪೂಜೆ, ವಾಸ್ತು ಪೂಜೆ, ಆಯುಧಪೂಜೆ, ಗೋಪೂಜೆ, ಇತ್ಯಾದಿ ಶಬ್ದಗಳೇ ಅದನ್ನು ಸೂಚಿಸುತ್ತವೆ. ಪೂಜೆಯಲ್ಲಿ ಕೈಮುಗಿವಾಗ ಕೆಲವೊಮ್ಮೆ ತಲೆ ಬಾಗುತ್ತದೆಯಾದರೂ, ಅದನ್ನು ತಲೆಬಗ್ಗಿಸಿಯೇ ಮಾಡಬೇಕೆಂಬ ಕಡ್ಡಾಯವೂ ನಮ್ಮಲ್ಲಿಲ್ಲ. ಅದನ್ನು ನಿಂತುಕೊಂಡು, ಪ್ರದಕ್ಷಿಣಾಕಾರವಾಗಿ ತಿರುಗಿ, ಬಗ್ಗಿ, ಕುಳಿತು, ಮಲಗಿ, ಉರುಳಿ, ಹಾರಿ, ಇತ್ಯಾದಿಯಾಗಿ ಇನ್ನೂ ನಾನಾ ರೀತಿಗಳಲ್ಲಿ ಮಾಡುವ ಕ್ರಮಗಳಿವೆ. ಅದಲ್ಲದೇ ಪೂಜಾ ವಿಧಾನದಲ್ಲಿ ಕೂಡ ಒಂದೇ ಕ್ರಮವಿಲ್ಲ. ಹೂವು ಏರಿಸುವುದು, ಆರತಿ ಎತ್ತುವುದು, ಪ್ರದಕ್ಷಿಣೆ ಹಾಕುವುದು, ನಮಸ್ಕಾರ ಮಾಡುವುದು, ಹೀಗೆ ಅದೂ ಕೂಡ ವೈವಿಧ್ಯಮಯವಾಗಿದೆ. ಆರತಿ ಮಾಡಿದ ವಸ್ತುಗಳಿಗೆಲ್ಲ ಕೈಮುಗಿಯಲೇ ಬೇಕೆಂದಿಲ್ಲ. ಕೈಮುಗಿದ ವಸ್ತುಗಳಿಗೆಲ್ಲ ಆರತಿ ಎತ್ತಬೇಕೆಂಬುದೂ ಇಲ್ಲ. ನಮಸ್ಕಾರ ಮಾಡುವ ಹಾಗೂ ಆರತಿ ಎತ್ತುವ ಕ್ರಿಯೆಗಳಿದ್ದಲ್ಲೆಲ್ಲ ಪೂಜೆ ನಡೆಯಲೇಬೇಕೆಂದಿಲ್ಲ. ಇವನ್ನೆಲ್ಲ ಮನುಷ್ಯರಿಗೂ ಬೇರೆ ಬೇರೆ ಸಂದರ್ಭದಲ್ಲಿ ಮಾಡುತ್ತಾರೆ. ಹಾಗಾಗಿ ನಮ್ಮ ಪೂಜೆಯನ್ನು ಸೃಷ್ಟಿಕರ್ತನಿಗೆ ತಲೆಬಾಗುವ ಕ್ರಿಯೆಗೆ ಸಮೀಕರಿಸುವ ಪಾಶ್ಚಾತ್ಯರ ವರ್ಣನೆಗಳು ನಮ್ಮ ಆಚರಣೆಗಳಂತೂ ಅಲ್ಲ.

ಇವಕ್ಕೆಲ್ಲ ನಾವು ಇಂದೂ ಕೂಡ ಪೂಜೆ ಎಂದೇ ಹೇಳುತ್ತೇವೆ. ಹಾಗೂ ಇಂಗ್ಲೀಷಿನಲ್ಲಿ ಇದನ್ನೆಲ್ಲ ವರ್ಷಿಪ್ ಎಂದೇ ತರ್ಜುಮೆ ಮಾಡುತ್ತೇವೆ. ಆದರೆ ವರ್ಷಿಪ್ ಎಂಬುದು ನಿಜವಾಗಿಯೂ ಎಂಥ ಕ್ರಿಯೆಯನ್ನು ಸೂಚಿಸುತ್ತದೆ ಎಂಬುದು ನಮಗೆ ನಿಜವಾಗಿಯೂ ಗೊತ್ತಿದ್ದಲ್ಲಿ ಅದನ್ನು ಪೂಜೆಯ ಜೊತೆಗೆ ಅಷ್ಟು ಸಲೀಸಾಗಿ ಸಮೀಕರಿಸುತ್ತಿರಲಿಲ್ಲ. ಉದಾಹರಣೆಗೆ ವರ್ಷಿಪ್ ನ ನಿಜವಾದ ಅರ್ಥವನ್ನು ಇಟ್ಟುಕೊಂಡು ಯಾವುದಾದರೂ ದೇವತೆಗೆ ಜನರು ಕೈಮುಗಿಯುವ ಕ್ರಿಯೆಯನ್ನು ಗಮನಿಸಿ. ಅಂಥವರು ಯಾವುದೋ ಸತ್ಯವನ್ನು ನಂಬಿಕೊಂಡು ಆ ದೇವತೆಯೇ ತನ್ನ ನಿಜವಾದ ಸೃಷ್ಟಿಕರ್ತ, ಅದರ ಉದ್ದೇಶಕ್ಕೆ ಅನುಗುಣವಾಗಿಯೇ ತನ್ನ ಜೀವನವಿದೆ ಎಂಬುದನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಲು ಸಾದ್ಯವಿಲ್ಲ. ಒಂದು ದೇವಾಲಯಕ್ಕೆ ಹೋದರೆ ನಾವು ಅಲ್ಲಿರುವ ಪ್ರಧಾನ ದೇವತೆ, ಅದರ ಕುಟುಂಬ, ಪರಿವಾರ, ವಾಹನಗಳು, ಇತ್ಯಾದಿಯಾಗಿ ಯಾವ್ಯಾವುದಕ್ಕೆ ಅರ್ಚಕರು ಇದ್ದಾರೆಯೊ ಅವಕ್ಕೆಲ್ಲ ಪೂಜೆ ಸಲ್ಲಿಸಿ ಪ್ರಸಾದ, ತೀರ್ಥ ತೆಗೆದುಕೊಂಡು ಬರುತ್ತೇವೆ. ಅದೂ ಸಾಕಾಗದೋ ಎಂಬಂತೆ ದಾರಿಯುದ್ದಕ್ಕೂ ಸಿಗುವ ದೇವತೆಗಳಿಗೆಲ್ಲ ಕೈ ಮುಗಿಯುತ್ತ ಬರುತ್ತೇವೆ. ಒಂದು ರಿಲಿಜನ್ನಿನ ಅನುಯಾಯಿಗಳು ಹೀಗೆ ಕಂಡ ಕಂಡ ದೇವತೆಗಳಿಗೆ ವರ್ಷಿಪ್ ಮಾಡತೊಡಗಿದರೆ ಆ ರಿಲಿಜನ್ನು ಅದಾಗಲೇ ಭೂಮಿಯಿಂದ ಕಾಲುಕಿತ್ತಿದೆ ಎಂದೇ ಅರ್ಥ.

ನಾವು ಪೂಜೆ ಎಂದು ಕರೆಯುವ ಅನೇಕ ಆಚರಣೆಗಳು ಹೀಗೂ ಇರುವುದಿಲ್ಲ ಎಂಬುದನ್ನು ಗಮನಿಸಿ. ಉದಾಹರಣೆಗೆ ಒರಳು, ಒನಕೆ, ಕೋವಿ, ಸೈಕಲ್ಲು, ಗೋವು, ಗಲ್ಲಾಪೆಟ್ಟಿಗೆ, ಇತ್ಯಾದಿಗಳನ್ನೆಲ್ಲ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯ ಭಾಗವಾಗಿ ಪೂಜಿಸಲಾಗುತ್ತದೆ. ಇವುಗಳನ್ನು ವರ್ಷಿಪ್ ಎಂದು ಕರೆದಾಗ ಇವನ್ನು ನಮ್ಮ ಸೃಷ್ಟಿಕರ್ತರು, ಅವುಗಳ ಯೋಜನೆಯ ಪ್ರಕಾರ ನಮ್ಮ ಜೀವನ ನಡೆಯುತ್ತಿದೆ ಎಂದು ನಾವು ನಂಬಿದ್ದೇವೆ ಎಂಬರ್ಥವೂ ಬರುತ್ತದೆ. ಸೆಮೆಟಿಕ್ ರಿಲಿಜನ್ನಿನ ಹಿನ್ನೆಲೆಯವರಿಗೆ ಈ ಥರದ ವರ್ಷಿಪ್ ಹಾಸ್ಯಾಸ್ಪದವಾಗಿ ಕಾಣಿಸುವುದರಲ್ಲಿ ಆಶ್ಚರ್ಯವೇ ಇಲ್ಲ. ಹಾಗೂ ವಿಚಾರವಾದಿಗಳಿಗೆ ಅಂಥವನ್ನು ನಂಬುವವರು ಹೆಡ್ಡರು ಎಂಬುದಾಗಿ ತೋರಿದರೂ ಆಶ್ಚರ್ಯವಿಲ್ಲ. ಆದರೆ ತಮ್ಮ ಜೀವನಕ್ಕೆ ಆಧಾರವಾದ ವಸ್ತುಗಳು ಹಾಗೂ ಜೀವಿಗಳನ್ನು ಪೂಜಿಸುವುದು ಭಾರತೀಯರ ಜೀವನ ಕ್ರಮ. ಅವರಿಗೆ ಪೂಜೆಯ ಮೂಲಕ ಅಂಥ ವಸ್ತು ಹಾಗೂ ಜೀವಿಗಳ ಜೊತೆಗೆ ಸಂಬಂಧವನ್ನು ಸ್ಥಾಪಿಸಿಕೊಂಡರೇ ಕ್ರಮಬದ್ಧವೆನ್ನಿಸುತ್ತದೆ. ಹಾಗಾಗಿ ಅದನ್ನು ವರ್ಷಿಪ್ ಎಂದು ಭಾವಿಸಿ ಅದನ್ನು ಪಾಪ ಅಥವಾ ಹೆಡ್ಡತನ ಎಂದು ಕರೆಯುವುದೇ ಒಂದು ದೊಡ್ಡ ಆಭಾಸ.

 

Advertisements
Categories: Uncategorized
  1. ಜನವರಿ 5, 2015 ರಲ್ಲಿ 11:21 ಫೂರ್ವಾಹ್ನ

    ಇದರ ಇಂಗ್ಳೀಶ್ ಮೂಲಪ್ರತಿ ಎಲ್ಲಿ ಸಿಗಬಹುದು?

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: