ಮುಖ ಪುಟ > Uncategorized > ಢುಂಢಿ: ಓರಿಯಟಲಿಸಂನ ಕವಾಯತು

ಢುಂಢಿ: ಓರಿಯಟಲಿಸಂನ ಕವಾಯತು

 

vallimu

ಶಿವಕುಮಾರ. ಪಿ.ವಿ

ಭಾರತೀಯ ಪುರಾಣ-ಕಥೆ ದೇವತೆಗಳ ಕುರಿತ ಆಧುನಿಕ ನಿರೂಪಣೆಗಳು ಆಗಾಗ ವಿವಾದಕ್ಕೆ ಎಡೆಮಾಡಿಕೊಡುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ‘ಢುಂಢಿ’ ಕಾದಂಬರಿ ಅಂತಹ ಒಂದು ಉದಾಹರಣೆಯಷ್ಟೇ. ಈ ಒಂದು ಉದಾಹರಣೆಯ ಮೂಲಕ ಭಾರತೀಯ ಪುರಾಣಗಳ ಕುರಿತ ಆಧುನಿಕ ಅಧ್ಯಯನಗಳ ವಿವಾದಗಳನ್ನು ನೋಡಿದರೆ ಹೆಚ್ಚು ಸ್ಪಷ್ಟತೆ ಸಿಗಬಹುದು. ಪ್ರಸ್ತುತ ಕಾದಂಬರಿಯಲ್ಲಿ ಗಣೇಶ ಹಾಗೂ ಇತರ ದೇವತೆಗಳು ಅವಹೇಳನಕಾರಿಯಾಗಿ ಚಿತ್ರಿಸಲ್ಪಟ್ಟಿವೆ ಎಂದು ಆರೋಪಿಸಲಾಗಿದೆ. ಹಿಂದೂ ಸಂಘಟನೆಗಳು ಕೆಲವೆಡೆ ಹೋರಾಟವನ್ನು ನಡೆಸಿದ್ದು, ಈಗಾಗಲೇ ಕೃತಿಯನ್ನು ಕೂಡ ನಿಷೇಧಿಸಲಾಗಿದೆ. ಮತ್ತೊಂದೆಡೆ, ಇಂತಹ ವಿವಾದಗಳೆದ್ದಾಗಲೆಲ್ಲಾ ಕೃತಿಗಳನ್ನು ಬೌದ್ಧಿಕ ಸ್ವಾತಂತ್ರದ ಹಿನ್ನೆಲೆಯಲ್ಲಿ ಪರಿಗಣಿಸಬೇಕೆಂದು ಪ್ರಗತಿಪರ ವಿಚಾರಧಾರೆಯು ಲಗಾಯ್ತಿನಿಂದಲೂ ವಾದಿಸಿಕೊಂಡು ಬರುತ್ತಿದೆ.

ಈ ಹಿಂದೆಯೂ ಕೂಡ ಹಲವು ಕಾದಂಬರಿ, ನಾಟಕ ಹಾಗೂ ಕೃತಿಗಳ ಕುರಿತಾಗಿ ವಿವಾದಗಳೆದ್ದಿರುವುದನ್ನು ನೆನಪಿಸಿಕೊಳ್ಳಬಹುದು. ಉದಾ: ಎ.ಕೆ. ರಾಮಾನುಜನ್ರವರ ‘ಮುನ್ನೂರು ರಾಮಾಯಣ’ ಪುರಾಣವನ್ನೇ ಕೇಂದ್ರ ವಿಷಯವಾಗಿಸಿಕೊಂಡ ಕೃತಿಯಾಗಿದ್ದು ವಿವಾದಕ್ಕೊಳಗಾಗಿತ್ತು. ಈಗ ಕನ್ನಡದಲ್ಲಿ ‘ಢುಂಢಿ’ಯ ಸರದಿಯಷ್ಟೇ. ಪುರಾಣಗಳು, ಕೀರ್ತನೆಗಳಲ್ಲಿ ಹಾಗೂ ಪುರಾಣ ಕಥೆಗಳನ್ನೆ ವಸ್ತುವಾಗಿಸಿಕೊಂಡಿರುವ ದೊಡ್ಡಾಟ, ಯಕ್ಷಗಾನ ಹಾಗೂ ಇತ್ಯಾದಿಗಳಲ್ಲಿ ದೇವತೆಗಳ ಕುರಿತಾಗಿ ಹಲವು ವಿಡಂಬನೆಗಳಿವೆ. ಇತ್ತೀಚೆಗೆ ಸಾರ್ವಜನಿಕವಾಗಿ ಗಣೇಶನನ್ನು ಸೈನಿಕನನ್ನಾಗಿಯೋ, ಗಾಂಧಿ ಅಥವಾ ಇತ್ಯಾದಿ ರೂಪಗಳಲ್ಲಿ ಪ್ರತಿಷ್ಠಾಪನೆ ಮಾಡುವುದು, ಅನಿಮೇಶನ್ ಧಾರಾವಾಹಿಗಳಲ್ಲಿ ಹಾಗೂ ಜನರ ದೈನಂದಿನ ವ್ಯವಹಾರಗಳಲ್ಲಿ ದೇವತೆಗಳನ್ನು ವಿಡಂಬನೆ ಮಾಡುವುದು ಸಾಮಾನ್ಯವಾದರೂ ಅವು ಯಾವುದೇ ವಿವಾದಗಳನ್ನೆಬ್ಬಿಸುವುದಿಲ್ಲ. ಆದರೆ, ಇಂತಹ ಸಂದರ್ಭಗಳಲ್ಲಿ ಉಂಟಾಗದ ವಿವಾದಗಳು ಅದೇ ಪುರಾಣದ ವಿಚಾರಗಳನ್ನು ಆಧರಿಸಿದ ಆಧುನಿಕ ಸಾಹಿತ್ಯದ ಸಂದರ್ಭದಲ್ಲೇಕೆ ಹುಟ್ಟಿಕೊಳ್ಳುತ್ತವೆ? ಇಂತಹ ಕೃತಿಗಳು ಪುರಾಣ ಕಥೆಗಳೊಂದಿಗಿನ ಜನಸಾಮಾನ್ಯರ ಅನುಭವವನ್ನಾಧರಿಸಿ ರೂಪುಗೊಡಿವೆಯೇ? ಎಂಬ ನೆಲೆಯಲ್ಲಿ ಆಕ್ಷೇಪಣೆ ಎತ್ತುವುದು ಪ್ರಸ್ತುತ ವಿವಾದವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಬಹುದು.

ಪುರಾಣ ಕಥೆಗಳನ್ನು ಭಾರತದ ಐತಿಹಾಸಿಕ ಘಟನಾವಳಿಗಳು ಎಂದು ಅರ್ಥಮಾಡಿಕೊಂಡು ಆ ಮೂಲಕ ಇಲ್ಲಿನ ಇತಿಹಾಸವನ್ನು ಕಟ್ಟುವ ಪ್ರಕ್ರಿಯೆಗಳನ್ನು ನಾವು 15, 16ನೇ ಶತಮಾನದ ವಿದೇಶಿ ಪ್ರವಾಸಿಗರ ಕಾಲಘಟ್ಟದಿಂದಲೂ ನೋಡಬಹುದು. ಬುದ್ಧಿ ಭ್ರಮಣೆಯಾಗದ ಯಾವ ಭಾರತೀಯನೂ ಕೂಡ ಊಹೆಯೂ ಮಾಡಿಕೊಳ್ಳಲಾಗದಂತ ವರ್ಣರಂಜಿತ ವಿವರಣೆಗಳು ಅದರಲ್ಲಿ ಕಾಣಸಿಗುತ್ತವೆ. ಉದಾ: ಭಾರತದಲ್ಲಿ ಮೂರು ಕಣ್ಣಿನ ಮನುಷ್ಯರು, ಸಾವಿರಾರು ವರ್ಷಗಳಿಂದ ಕರಗದ ಬೆಣ್ಣೆ ಸಮುದ್ರಗಳು ಇತ್ಯಾದಿ. ಹೀಗೆಯೇ ಮುಂದುವರೆದು ಪಾಶ್ಚಾತ್ಯ ಪ್ರವಾಸಿಗರು ಮತ್ತು ಚಿಂತಕರು ಭಾರತದಲ್ಲಿನ ಪುರಾಣ-ಕಥೆಗಳು ಇಲ್ಲಿನ ಐತಿಹಾಸಿಕ ಘಟನೆಗಳನ್ನಾಧರಿಸಿದವು ಎಂದು ತಪ್ಪಾಗಿ ಅರ್ಥಮಾಡಿಕೊಂಡು ವಿಮರ್ಶಿಸತೊಡಗಿದ್ದರಿಂದಾಗಿ ಅವು ಮಾನವ ಸಾಧ್ಯವಲ್ಲದ ಮೂಢ ನಂಬಿಕೆಗಳೆಂಬ ನಿರ್ಣಯಕ್ಕೆ ಬರತೊಡಗಿದರು. ಇದೇ ಬೌದ್ಧಿಕ ಚೌಕಟ್ಟು ನಂತರ ಭಾರತೀಯ ಪುರಾಣ-ಕಥೆ, ದೇವತೆಗಳು, ಸಂಪ್ರದಾಯ, ಆಚರಣೆಗಳನ್ನು ವಿವರಿಸುವ ಸೈದ್ಧಾಂತಿಕ ತಳಹದಿಯಾಗಿಬಿಟ್ಟಿತು.

ಇದು 20-21ನೇ ಶತಮಾನದ ಸಮಕಾಲೀನ ಸಮಾಜ ವಿಜ್ಞಾನಗಳಲ್ಲಿ ಇನ್ನೂ ಸ್ಪಷ್ಟವಾಗಿ ಕಂಡುಬರುತ್ತದೆ. ಅಮೇರಿಕದ ಇಂಡಾಲಜಿಸ್ಟ್ ಆದ ವಿಂಡಿ ಡೊನಿಗರ್ ತಮ್ಮ ‘ಹಿಂದೂ ಮೈಥಾಲಜಿ’ ಹಾಗೂ ಇತರ ಕೃತಿಗಳಲ್ಲಿ ಭಾರತೀಯ ಪುರಾಣ-ಕಥೆಗಳನ್ನು ದೇವತೆಗಳಿಗೆ ‘ವಾಸ್ತವಿಕತೆಯ’ ಹೆಸರಿನಲ್ಲಿ ಸಾಂಕೇತಿಕ ಅರ್ಥ ಹಚ್ಚಲು ಯತ್ನಿಸುತ್ತಾರೆ. ಪರಿಣಾಮವಾಗಿ, ಅವರ ಕೃತಿಯಲ್ಲಿ ಗಣೇಶನ ತಲೆಯ ಭಾಗ ಲೈಂಗಿಕ ಅಂಗವಾಗಿ ಚಿತ್ರಿಸಲ್ಪಟ್ಟರೆ, ಇನ್ನೂ ಕೆಲವು ಚಿಂತಕರು ಈಶ್ವರ ಲಿಂಗವನ್ನು ಈಶ್ವರನ ಮರ್ಮಾಂಗ ಎಂಬುದಾಗಿ ಚಿತ್ರಿಸುತ್ತಾರೆ. ಇದೇ ನೆಲೆಯಲ್ಲಿ ಪೌಲ್ ಕೊರ್ಟ್ ರೈಟ್ ಹಾಗೂ ಮುಂತಾದ ಪಾಶ್ಚಾತ್ಯ ವಿದ್ವಾಂಸರ ಚಿಂತನೆಗಳು ಸ್ಥಾನ ಪಡೆಯುತ್ತವೆ. ಈ ಹಿನ್ನೆಲೆಯಲ್ಲೇ ಭಾರತದಲ್ಲೂ ಸಹ ದೇಬಿಪ್ರಸಾದ್ ಚಟ್ಟೋಪಾಧ್ಯಾಯರ ‘ಲೋಕಾಯತ ಮತ್ತು ಗಾಣಪತ್ಯ’ ಹಾಗೂ ತಾಪಿ ಧರ್ಮರಾವ್ ಹಾಗೂ ಮುಂತಾದವರ ಚಿಂತನೆಗಳು ಪುರಾಣಗಳನ್ನು ಅದರಲ್ಲಿನ ದೇವತೆಗಳನ್ನು ಸಾಂಕೇತಿಕವಾಗಿ ನಿರೂಪಿಸುತ್ತವೆ. ಈ ಚಿಂತನೆಗಳಿಗೆ ಆರ್ಯ ದ್ರಾವಿಡ ಎಂಬ ಮೂಲೆಗುಂಪಾಗಿರುವ ಮತ್ತು ಅವಾಸ್ತವಿಕವಾದ ಜನಾಂಗೀಯ ಸಿದ್ಧಾಂತದ ಕೊಡುಗೆಯೂ ಅಪಾರವಾದುದು.

ಭಾರತೀಯ ಪುರಾಣ-ಕಥೆಗಳನ್ನು, ದೇವತೆಗಳನ್ನು ಅರ್ಥಮಾಡಿಕೊಳ್ಳುವ ಸಮಾಜ ವಿಜ್ಞಾನದ ಈ ನಿರ್ದಿಷ್ಟ ಕ್ರಮಗಳಿಂದಾಗಿ ಸಾಂಕೇತಿಕ ಅರ್ಥಗಳು ಹೊರಡಲ್ಪಟ್ಟು ಪುರಾಣಗಳು, ದೇವತೆಗಳು ಕೇವಲ ವಿಕೃತವಾದ, ಅವಾಸ್ತವಿಕ ಉತ್ಪ್ರೇಕ್ಷೆಗಳಾಗಿ ಕಾಣತೊಡಗುತ್ತವೆ. ಆದರೆ, ಸಮಾಜ ವಿಜ್ಞಾನದಲ್ಲಿಯೇ ಈ ಹಳೆಯ ಸಿದ್ಧಾಂತಗಳನ್ನು ಈಗಾಗಲೇ ಅಲ್ಲಗಳೆಯಲಾಗಿದ್ದು ಅವುಗಳ ಇತಿಮಿತಗಳನ್ನು ಚರ್ಚಿಸಲಾಗಿದೆ. ಆದರೆ, ಮೇಲೆ ನೋಡಿದ ಕೆಲವು ಚಿಂತಕರ ವಾದಗಳ ಹಿನ್ನೆಲೆಯಲ್ಲಿ ತಮ್ಮ ಕೃತಿ ರಚಿಸಿರುವುದಾಗಿ, ಅಲ್ಲದೇ, ಪುರಾಣ-ಕಥೆಗಳು ವಾಸ್ತವಿಕ ನಿರೂಪಣೆಗಳಲ್ಲ. ಅವು ಕಾಲ್ಪನಿಕ ಕಥೆಗಳಾಗಿದ್ದರೂ ಅವುಗಳಲ್ಲಿ ‘ಸತ್ಯ’ಗಳೂ ಅಡಗಿವೆ. ಅದನ್ನು ಕಂಡುಹಿಡಿಯಬೇಕು ಎಂದು ಪ್ರಸ್ತುತ ‘ಢುಂಢಿ’ಯ ಲೇಖಕರು ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಹೀಗೆ ಎಂದೋ ಮೂಲೆಗುಂಪಾದ ಸಮಾಜ ವಿಜ್ಞಾನದ ಸಿದ್ಧಾಂತಗಳೇ ಇಂದಿಗೂ ಸಹ ಕೆಲವು ಕೃತಿ ಅಥವಾ ಚಿಂತನೆಗಳಿಗೆ ಆಧಾರವಾಗಿವೆ. ಪ್ರತಿಫಲವಾಗಿ, ಸಾಹಿತ್ಯದಲ್ಲಿಯೂ ಪುರಾಣಗಳು ಹಾಗೂ ದೇವತೆಗಳನ್ನು ಸಾಂಕೇತಿಕ ರೂಪಕ್ಕೆ ಇಳಿಸಿ, ವಾಸ್ತವಿಕವಾಗಿ ವಿವರಿಸಬೇಕೆನ್ನುವ ಪ್ರಕ್ರಿಯೆಗಳು ಕಂಡುಬರುತ್ತಿವೆ. ಆದರೆ, ಜನಸಾಮಾನ್ಯರು ತಮ್ಮ ದೇವತೆ, ಪುರಾಣಗಳನ್ನು ಅದೇ ಮಾರ್ಗದಲ್ಲಿ ಅರ್ಥಮಾಡಿಕೊಳ್ಳುತ್ತಿದ್ದಾರೆಯೆ?

ಭಾರತೀಯರು ತಮ್ಮ ದಿನನಿತ್ಯದ ಜೀವನದಲ್ಲಿ ತಾವು ಕೇಳುವ/ಹೇಳುವ ಪುರಾಣ-ಕಥೆಗಳು ಭೂಮಿಯ ಮೇಲೆ ನಿಜವಾಗಿಯೂ ನಡೆದವೋ ಇಲ್ಲವೋ ಎಂಬುದರ ಆಧಾರದ ಮೇಲೆ ತಮ್ಮ ಆಚರಣೆಗಳನ್ನಾಗಲೀ ದೇವತೆಗಳನ್ನಾಗಲೀ ನೋಡುವುದಿಲ್ಲ್ಲ. ಬದಲಿಗೆ, ಒಂದೊಂದು ದೇವತೆಯ ಕುರಿತಾಗಿಯೂ ಒಬ್ಬೊಬ್ಬರು ಒಂದೊಂದು ಕಥೆ, ಪವಾಡ ಹಾಗೂ ಅವತಾರಗಳ ಬಗ್ಗೆ ಹೇಳುತ್ತಾರೆ. ಆದರೆ, ಯಾರೊಬ್ಬರು ಅವುಗಳ ಸತ್ಯಾ-ಸತ್ಯತೆಯನ್ನು ಒರೆಗೆ ಹಚ್ಚಲು ತಲೆಕೆಡಿಸಿಕೊಳ್ಳುವುದಿಲ್ಲ. ಮತ್ತು ಅದು ಅವರಿಗೆ ಮಹತ್ವದ ವಿಷಯವೇ ಆಗುವುದಿಲ್ಲ. ಅಂದರೆ ಪುರಾಣಗಳಲ್ಲಿ ಬರುವ ಪಾತ್ರ ರೂಪದ ದೇವತೆಗಳು ಭೂಮಿಯ ಮೇಲೆ ನಿಜವಾಗಿಯೂ ಬದುಕಿದ್ದರೆ? ಅವರು ಆರ್ಯರೋ, ದ್ರಾವಿಡರೋ, ರೌಡಿಗಳೋ, ಹೀರೊಗಳೋ, ಅವರ ನಡುವೆ ಎಂತಹ ಸಂಬಂಧಗಳಿದ್ದವು? ಎಂಬುದು ಆ ದೇವತೆಗಳನ್ನು ಆರಾಧಿಸುವವರಿಗೆ ತೀರ ಅಪ್ರಸ್ತುತವಾಗಿರುತ್ತದೆ. ಆದರೆ ಅವು ದೇವತೆಗಳಷ್ಟೇ ಮತ್ತು ಆ ದೇವತೆಗಳು ಹಿಂದಿನಿಂದಿಲೂ ತಮ್ಮ ಹಿರಿಯರಿಂದ ಆರಾಧಿಸಲ್ಪಡುತ್ತಿವೆ ಎಂಬುದಷ್ಟೇ ಆರಾಧಿಸುವವರಿಗೆ ಪ್ರಸ್ತುತವಾಗಿರುತ್ತದೆ.

ಆದರೆ, ಕಾದಂಬರಿ ಅಥವಾ ಕೃತಿಗಳಲ್ಲಿ ಇಲ್ಲಿನ ಪುರಾಣ ಕಥೆಗಳನ್ನು ಜನರು ಹೇಗೆ ಗ್ರಹಿಸುತ್ತಾರೆ, ದೇವತೆಗಳನ್ನು ಸಾಂಪ್ರದಾಯಿಕವಾಗಿ ಹೇಗೆ ಆರಾಧಿಸುತ್ತಾರೆ ಎಂಬುದನ್ನು ಕಡೆಗಣಿಸಿ, ಅದಕ್ಕೆ ಹೊರತಾದ ಮಾನದಂಡಗಳ ಮೂಲಕ ಒರೆಗೆ ಹಚ್ಚಲಾಗುತ್ತಿದೆ. ಪರಿಣಾಮವಾಗಿ, ಇಂತಹ ಕೃತಿಗಳು ಇಲ್ಲಿನ ಪುರಾಣ-ಕಥೆಗಳಿಗೆ ಸಂಬಂಧವೇ ಇರದ ವಾಸ್ತವಿಕತೆಯನ್ನ ಅಥವಾ ಕಾಲಘಟ್ಟವನ್ನ ಅಥವಾ ದೇವತೆಗಳ ಹಿನ್ನೆಲೆಗಳನ್ನು ವಿವರಿಸುವ ಮೂಲಕ ಪ್ರಬೇಧ ದೋಷವೆಸಗುತ್ತಿವೆ. ಆದರೆ, ಈ ಕೃತಿಗಳು ಪುರಾಣ-ಕಥೆಗಳ ಕುರಿತು ಯಾವುದೇ ಪರ್ಯಾಯ ವಿವರಣೆಗಳಾಗುವುದಿಲ್ಲ. ಬದಲಿಗೆ ಅವುಗಳನ್ನು ತಿರುಚಿದಂತಾಗುತ್ತದೆಯಷ್ಟೇ. ಈ ಹಿನ್ನಲೆಯಲ್ಲಿ ಪುರಾಣ ಕಥೆಗಳು ಮೂಢ ನಂಬಿಕೆಗಳಾಗಿ, ಅವುಗಳಲ್ಲಿನ ದೇವತೆಗಳು ಯಾವುದೋ ಅತಿಮಾನವರಾಗಿಯೋ, ರಾಕ್ಷಸರಾಗಿಯೋ, ಕಪಿಗಳಾಗಿಯೋ ಕಂಡರೆ, ದೇವತೆಗಳನ್ನು ಆರಾಧಿಸುವವರು ದಡ್ಡ ಶಿಖಾಮಣಿಗಳಾಗಿ ಕಾಣಲ್ಪಡುತ್ತಾರೆ. ಆದರೆ, ಜನಸಾಮಾನ್ಯರು ಹೀಗಿಲ್ಲ ಎನ್ನುವುದಕ್ಕೆ ಪುರಾಣಕಥೆಗಳನ್ನು ಮತ್ತು ದೇವತೆಗಳನ್ನು ವಿರೂಪಗೊಳಿಸುವ ಈ ವೈಚಾರಿಕ ಚೌಕಟ್ಟಿನಲ್ಲಿ ಅವರು ನೋಡುವುದಾಗಲೀ, ಅವುಗಳಿಗೆ ಸಾಂಕೇತಿಕ ಅರ್ಥ ಹಚ್ಚಿ ವಿಮರ್ಶಿಸುವ ಕೆಲಸವನ್ನಾಗಲೀ ಅವರು ಮಾಡುವುದಿಲ್ಲ ಎಂಬುದೇ ಸಾಕ್ಷಿ. ಅಲ್ಲದೇ ಈ ಆಧುನಿಕ ಅಧ್ಯಯನಗಳಲ್ಲ್ಲಿ ಪುರಾಣ-ಕಥೆ, ದೇವತೆಗಳು ಎಷ್ಟೇ ವಿರೂಪವಾಗಿ ಚಿತ್ರಿತಗೊಂಡರೂ ಸಹ ಪುರಾಣ-ಕಥೆಗಳೊಂದಿಗಿನ ಜನಸಾಮಾನ್ಯರ ಸಂಬಂಧಗಳಿಗೆ, ದೇವತೆಗಳನ್ನು ನೋಡುವ ಅವರ ದೃಷ್ಟಿಕೋನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಏಕೆಂದರೆ ಸಾಂಪ್ರದಾಯಿಕವಾಗಿಯೇ ಜನರು ಕೃಷ್ಣ, ಗಣೇಶನನ್ನು ಕಳ್ಳನನ್ನಾಗಿಯೂ, ತುಂಟನನ್ನಾಗಿಯೂ ಪ್ರೀತಿ ಆದರಗಳಿಂದ ನೋಡುತ್ತಾರೆ.

ಪರಿಸ್ಥಿತಿ ಹೀಗಿದ್ದರೂ ಕಾದಂಬರಿ/ಕೃತಿಗಳಲ್ಲಿ ಅಥವಾ ಅವುಗಳಿಗೆ ಆಧಾರ ಒದಗಿಸುವ ಆಧ್ಯಯನಗಳಲ್ಲಿ ಇಲ್ಲಿನ ಪುರಾಣಕಥೆಗಳು ಹಾಗೂ ದೇವತೆಗಳು ಏಕೆ ಸಾಂಕೇತಿಕ ಅರ್ಥದಲ್ಲಿ ವಿರೂಪಗೊಳ್ಳುತ್ತಿವೆ? ಈ ನಿರ್ದಿಷ್ಟ ರೀತಿಯ ಅಧ್ಯಯನಗಳ ವಿವರಣೆಗಳು ಪುರಾಣ, ದೇವತೆಗಳೊಂದಿಗಿನ ಜನಸಾಮಾನ್ಯರ ಅನುಭವವನ್ನು ಆಧರಿಸಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಆದಕ್ಕೆ ಮುಖ್ಯ ಕಾರಣ; ಈ ಕೃತಿಗಳು ರೂಪುಗೊಂಡಿರುವ ಪಾಶ್ಚಾತ್ಯ ವಸಾಹತುಶಾಹಿ ಚೌಕಟ್ಟು. ಅದು ಇಲ್ಲಿನ ಪುರಾಣ-ಕಥೆಗಳನ್ನು ಸತ್ಯ-ಸುಳ್ಳಿನ ಪ್ರಶ್ನೆಯೊಂದಿಗೇ ಪ್ರಾರಂಭಿಸುತ್ತದೆ. ಯಾವ ಹಿನ್ನೆಲೆಯಲ್ಲಿ ಜನರು ತಮ್ಮ ದೇವತೆಗಳನ್ನು ಪುರಾಣಗಳನ್ನು ನೋಡುವುದಿಲ್ಲವೋ ಅದೇ ಹಿನ್ನೆಲೆಯಲ್ಲಿ ಅವುಗಳನ್ನು ಚಿತ್ರಿಸುತ್ತದೆ. ಹಾಗಾಗಿ ಅದು ಪಾಶ್ಚಾತ್ಯ ಅನುಭವವನ್ನು ಸೂಚಿಸುತ್ತದೆಯೇ ವಿನಃ ಭಾರತೀಯ ವಾಸ್ತವವನ್ನಲ್ಲ. ಈ ವಸಾಹತುಶಾಹಿ ಪ್ರಜ್ಞೆಯ ಬಳುವಳಿಯು ಇಂದಿಗೂ ವೈಚಾರಿಕ, ವಾಸ್ತವಿಕ ಅಧ್ಯಯನ ಎಂಬ ಹೆಸರಿನಲ್ಲಿ ಮುಂದುವರೆಯುತ್ತಿದೆ. ಸಾಹಿತ್ಯ ವಲಯ ಇಂತಹ ಹಿನ್ನೆಲೆಯ ಕಾದಂಬರಿ/ಕೃತಿಗಳನ್ನು ಸಾಮಾಜಿಕ ವಾಸ್ತವದ ಪ್ರತಿಬಿಂಬ ಎಂದು ಪ್ರತಿಪಾದಿಸುತ್ತಿರುವುದರಿಂದಲೇ ತೀವ್ರ ವಿರೋಧಗಳು ಹುಟ್ಟಿಕೊಳ್ಳುತ್ತಿವೆ. ಇಂತಹ ಕೃತಿಗಳನ್ನು ಬೌದ್ಧಿಕ ಸ್ವಾತಂತ್ರದ ನೆಲೆಯಲ್ಲಿ ಸಮರ್ಥಿಸಲು ಕವಾಯತು ನಡೆಸುವ ಪ್ರಗತಿಪರ ವಿಚಾರಧಾರೆಯನ್ನು ಇದೇ ವಸಾಹತುಶಾಹಿ ಕಥೆಯೇ ದಾಸ್ಯದಲ್ಲಿಟ್ಟುಕೊಡಿದೆ. ಇನ್ನು ಹಿಂದುತ್ವ ನೆಲೆಯಿಂದ ಬರುತ್ತಿರುವ ಟೀಕೆಗಳೂ ಸಹ ಇಂತಹ ಕೃತಿಗಳಿಗೆ ಹಿನ್ನಲೆಯಾಗಿರುವ ಮಿತಿಯಲ್ಲೇ ಬಳಲುತ್ತಿವೆ.

ಜನಸಾಮಾನ್ಯರು ತಮ್ಮ ಪುರಾಣಗಳನ್ನು ಹಾಗೂ ದೇವರುಗಳನ್ನು ಅರ್ಥೈಸಿಕೊಳ್ಳುವ ವಿಧಾನವನ್ನು ಪ್ರಸ್ತುತ ಢುಂಢಿ ಕಾದಂಬರಿಯ ಲೇಖಕರು ಸಹ ತಮ್ಮ ಕಾಲಘಟ್ಟದ ಬಹುತೇಕ ಚಿಂತಕರಂತೆ ತಮ್ಮ ವಿಶ್ಲೇಷಣೆಯಿಂದ ಹೊರಗಿಟ್ಟುಬಿಡುತ್ತಾರೆ. ಇದು ಭಾರತವನ್ನು ಓರಿಯಂಟಲಿಸಂ ಚಿಂತನಾಕ್ರಮವು ಚಿತ್ರಿಸಿದ ಫಲವಾಗಿದ್ದು, ಅದರ ಮುಂದುವರಿಕೆಯನ್ನು ಢುಂಢಿ ಕಾದಂಬರಿಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಜನಸಾಮಾನ್ಯರ ಅನುಭವಗಳನ್ನೇ ನಿರಾಕರಿಸುವ ಈ ವಸಾಹತುಶಾಹಿ ಪ್ರಜ್ಞೆಯೇ ಇಲ್ಲಿನ ಆಚರಣೆ, ಪುರಾಣಗಳು ಮೌಢ್ಯದಿಂದ ಕೂಡಿರುವ ಅವಾಸ್ತವಿಕ ನಿರೂಪಣೆಗಳೆಂದು ಹಾಗೂ ಅವುಗಳನ್ನು ಅನುಸರಿಸುತ್ತಿರುವ ಭಾರತೀಯರನ್ನು ದಡ್ಡಶಿಖಾಮಣಿಗಳನ್ನಾಗಿ ಚಿತ್ರಿಸುತ್ತಿದೆ. ಈ ವಸಾಹತುಶಾಹಿ ಮಿತಿಯಿಂದ ಹೊರಬರಬೇಕಾದುದು ನಮ್ಮ ಬೌದ್ಧಿಕ ಲೋಕದ ಎದುರಿಗಿರುವ ಸವಾಲು.

ಚಿತ್ರಕೃಪೆ:kataragama.org

Advertisements
Categories: Uncategorized
 1. ಸೆಪ್ಟೆಂಬರ್ 16, 2013 ರಲ್ಲಿ 8:42 ಅಪರಾಹ್ನ

  Greetings from Yogesh Master,
  The writeup is very very insightful and thought provoking. Sincere appreciation for your detailing and reflection.

  Like

  • shiva kumara
   ಸೆಪ್ಟೆಂಬರ್ 18, 2013 ರಲ್ಲಿ 2:20 ಅಪರಾಹ್ನ

   Thanks for your kind appreciation. it is happy to see the openness in accepting these kinds of analysis. if you have any questions or opinions feel free to write here.

   Like

 2. sheetala giri
  ಸೆಪ್ಟೆಂಬರ್ 19, 2013 ರಲ್ಲಿ 6:46 ಫೂರ್ವಾಹ್ನ

  Interesting article …many times i feel such thinkers present their perspective rather than true empirical studies….thank you for your insight

  Like

  • ಸೆಪ್ಟೆಂಬರ್ 19, 2013 ರಲ್ಲಿ 6:55 ಅಪರಾಹ್ನ

   Thanks… yes, of course so many thinkers do the same as you rightly noticed. they think that they are representing or describing reality simply by reproducing outdated colonial theories. this doesn’t make sense to them because of their belief in ideologies.

   Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: