ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 22 : ಧರ್ಮಶಾಸ್ತ್ರಗಳು ಹಿಂದೂ ಕಾನೂನುಗಳೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ಇಂದಿನ ವಿದ್ಯಾವಂತರಲ್ಲಿ ಇರಬಹುದಾದ ಒಂದು ಸಾಮಾನ್ಯ ತಿಳುವಳಿಕೆಯೆಂದರೆ ಒಂದು ಕಾಲದಲ್ಲಿ ನಮ್ಮ ಧರ್ಮಶಾಸ್ತ್ರಗಳು ನಮ್ಮ ಸಮಾಜದ ಕಾನೂನುಗಳಾಗಿದ್ದವು. ಅದರಲ್ಲೂ ಅವು ವರ್ಣಾಶ್ರಮ ಸಮಾಜದ ಕಾನೂನುಗಳು. ಹಾಗಾಗಿ ಜಾತಿವ್ಯವಸ್ಥೆಯ ವಿರುದ್ಧ ಹೋರಾಡುವವರು ಧರ್ಮಶಾಸ್ತ್ರಗಳ ವಿರುದ್ಧ, ಅದರಲ್ಲೂ ಮನುಸ್ಮೃತಿಯ ವಿರುದ್ಧ ಕೆಂಡಕಾರುತ್ತಾರೆ. ‘ಮನುವಾದಿಗಳು’ ಎಂಬುದು ಅವರಲ್ಲಿ ಜನಪ್ರಿಯವಾಗಿರುವ ಒಂದು ಟೀಕೆ. ‘ಮನುವಾದಿಗಳು’ ಅಂದರೆ ಜಾತಿವ್ಯವಸ್ಥೆಯನ್ನು ಎತ್ತಿಹಿಡಿಯುವವರು, ಜಾತಿಯ ದೌರ್ಜನ್ಯಗಳನ್ನು ಸಮರ್ಥಿಸುವವರು, ಬ್ರಾಹ್ಮಣ ಪುರೋಹಿತಶಾಹಿಗಳು ಇತ್ಯಾದಿ ಅರ್ಥಗಳನ್ನು ಓದುಗರು ತಪ್ಪದೇ ಹಚ್ಚಿಕೊಳ್ಳುವಷ್ಟು ಇದರ ಅರ್ಥ ಸ್ಪಷ್ಟವಾಗಿದೆ. ಬ್ರಾಹ್ಮಣ ಪುರೋಹಿತಶಾಹಿಗಳು ಜಾತಿವ್ಯವಸ್ಥೆಯ ಕ್ರೂರ ಕಾನೂನುಗಳನ್ನು ಮನುಸ್ಮೃತಿಯ ರೂಪದಲ್ಲಿ ಮಾಡಿದ್ದಾರೆ. ಉದಾಹರಣೆಗೆ: ವೇದಗಳನ್ನು ಕೇಳಿದ ಶೂದ್ರನ ಕಿವಿಗೆ ಕಾದ ಸೀಸವನ್ನು ಹುಯ್ಯಬೇಕು, ಅವನಿಗೆ ಬ್ರಾಹ್ಮಣಾದಿ ಮೇಲು ವರ್ಣಗಳ ದಾಸ್ಯವೇ ವೃತ್ತಿ, ಒಂದೇ ತಪ್ಪಿಗೆ ಅವನಿಗೆ ಜಾಸ್ತಿ ಶಿಕ್ಷೆ, ಬ್ರಾಹ್ಮಣನಿಗೆ ಕಡಿಮೆ ಶಿಕ್ಷೆ, ಚಾಂಡಾಲರನ್ನು ಮುಟ್ಟಿಸಿಕೊಳ್ಳದೇ ಊರ ಹೊರಗೆ ಇಟ್ಟು ಮೇಲಿನ ವರ್ಣಗಳ ಎಂಜಲನ್ನು ಅವರಿಗೆ ಹಾಕಬೇಕು, ಇತ್ಯಾದಿ.

ಇವು ಕೇವಲ ಯಾವುದೋ ಗ್ರಂಥಗಳಲ್ಲಿನ ಬರವಣಿಗೆಗಳಾಗಿದ್ದಿದ್ದರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇಂದಿನ ಸಂಪ್ರದಾಯಸ್ಥ ಸಮಾಜದಲ್ಲಿ ಸ್ತ್ರೀ- ಶೂದ್ರರಿಗೆ ವೇದಾಧ್ಯಯನವಿಲ್ಲದ್ದು, ಅಸ್ಪೃಶ್ಯತೆಯ ಆಚರಣೆ, ಕೆಳಜಾತಿಗಳ ಬಡತನ, ನಿರಕ್ಷರತೆ, ಇತ್ಯಾದಿಗಳು ಸಾಮಾನ್ಯವಾಗಿ ಕಂಡುಬರುವ ಸಂಗತಿಗಳೇ ಆಗಿವೆ. ಅವನ್ನು ಈ ಧರ್ಮಶಾಸ್ತ್ರಗಳ ಬರವಣಿಗೆಗಳಿಗೆ ತಾಳೆ ಹಾಕಬಹುದು. ಅದನ್ನಿಟ್ಟುಕೊಂಡು ಎರಡು ಮುಖ್ಯ ತೀರ್ಮಾನಕ್ಕೆ ಬರಲಾಗಿದೆ: 1) ಇದನ್ನೆಲ್ಲ ಈ ಧರ್ಮಶಾಸ್ತ್ರಗಳೆಂಬ ಬ್ರಾಹ್ಮಣರ ಕಾನೂನುಗಳೇ ಜಾರಿಯಲ್ಲಿ ತಂದಿವೆ, ಆ ಕಾನೂನುಗಳ ಮೇಲಿನ ಅಂಧ ಶೃದ್ಧೆಯಿಂದಾಗೇ ಇಂದೂ ಕೂಡ ಜನರು ಅವುಗಳನ್ನು ಆಚರಿಸಿಕೊಂಡು ಬಂದಿದ್ದಾರೆ. 2) ಆ ಕಾರಣದಿಂದ ಧರ್ಮಶಾಸ್ತ್ರಗಳಲ್ಲಿ ಬರೆದದ್ದೆಲ್ಲ ಜಾರಿಯಲ್ಲಿ ಬಂದಿದ್ದವು. ಈ ಎರಡನೆಯ ತೀರ್ಮಾನದಿಂದಾಗಿ ಧರ್ಮಶಾಸ್ತ್ರಗಳು ಮತ್ತಷ್ಟು ಕ್ರೂರವಾಗಿ ಕಾಣಿಸಿದವು.ಭಾರತೀಯ ಸಮಾಜದಲ್ಲಿ ಇಂಥ ಅನಿಷ್ಠ ಪದ್ಧತಿಗಳು ತೊಲಗಿ ಹೋಗಬೇಕಾದರೆ ಧರ್ಮಶಾಸ್ತ್ರಗಳ ಮೇಲಿನ ನಂಬಿಕೆಯನ್ನು ತೆಗೆಯಬೇಕೆಂದು ಅಂಬೇಡ್ಕರರಾದಿಯಾಗಿ ಅನೇಕ ಸಾಮಾಜಿಕ ಚಿಂತಕರು ಪ್ರತಿಪಾದಿಸಿದರು. ಮಹಾಡ್ ಸತ್ಯಾಗ್ರಹದಲ್ಲಿ ಮನುಸ್ಮೃತಿಯ ಪ್ರತಿಯೊಂದನ್ನು ಸುಡಲಾಯಿತು. ಈ ಸುಡುವ ಆಚರಣೆಯು ಅಸೃಶ್ಯತೆಯ ಕಾನೂನನ್ನು ಮಾಡಿದ ಮನುಸ್ಮೃತಿಯನ್ನು ಧಿಕ್ಕರಿಸುವ ಸಂಕೇತವಾಗಿತ್ತು. ಅದು ಜಾತಿವ್ಯವಸ್ಥೆಯ ಸಂವಿಧಾನವನ್ನೇ ಸುಟ್ಟ ಹಾಗೆ. ಅದು ಹಿಂದೂಗಳ ನಂಬಿಕೆಯನ್ನೇ ಅಲುಗಾಡಿಸುತ್ತದೆ ಎಂಬ ಆಶಯ. ಆದರೆ ಪರಿಣಾಮವೆಂದರೆ ಮನುಸ್ಮೃತಿಯ ಒಂದು ಪ್ರಕಟಿತ ಪ್ರತಿ ಈ ಪ್ರಪಂಚದಿಂದ ಕಾಣೆಯಾಯಿತೇ ವಿನಃ ಅದು ಹಿಂದೂಗಳ ಆಚರಣೆಯ ಮೇಲಾಗಲೀ ಶೃದ್ಧೆಯ ಮೇಲಾಗಲೀ ಯಾವ ಆಘಾತವನ್ನೂ, ಉತ್ಪಾತವನ್ನೂ ಉಂಟುಮಾಡಲಿಲ್ಲ. ಸಾಂಪ್ರದಾಯಿಕ ಸಮಾಜವು ಇಂಥ ಕ್ರಿಯೆಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸಿತು. ಮೇಲಾಗಿ ಮನುಸ್ಮೃತಿಯನ್ನು ಸುಡುವಲ್ಲಿ ಒಬ್ಬ ಬ್ರಾಹ್ಮಣನೇ ಸಕ್ರಿಯವಾಗಿ ಭಾಗವಹಿಸಿದ್ದನು.

ಇಂದು ಆ ಚಳುವಳಿ ನಡೆದು ಶತಮಾನವೇ ಕಳೆದಿದೆ. ಪ್ರಗತಿಪರರಿಗೆಲ್ಲವೂ ಇಂದಿಗೂ ಮನುಸ್ಮೃತಿಯೆಂದರೆ ಹಿಂದೂ ಕಾನೂನು ಹಾಗೂ ಜಾತಿ ವ್ಯವಸ್ಥೆಯ ಸಂವಿಧಾನವಾಗೇ ಉಳಿದುಕೊಂಡಿದೆ. ಭಾರತೀಯ ಸಮಾಜದ ಅನಿಷ್ಠ ಆಚರಣೆಗಳು, ಜಾತಿ ದೌರ್ಜನ್ಯಗಳು ವರದಿಯಾದಾಗಲೆಲ್ಲ ನಿರಂತರವಾಗಿ ಭಾಷಣ, ಬರವಣಿಗೆಯ ರೂಪದಲ್ಲಿ ಮನುಸ್ಮೃತಿಗೂ ಅದರ ರಚನಾಕಾರರಾದ ಬ್ರಾಹ್ಮಣ ಪುರೋಹಿತಶಾಹಿಗೂ ಸಹಸ್ರನಾಮೋಕ್ತ ಪೂಜೆ ನಡೆಯುತ್ತಲೇ ಇವೆ. ವಿದ್ಯಾವಂತ ಪ್ರಗತಿಪರ ಬ್ರಾಹ್ಮಣರೇ ಅದನ್ನು ಧಿಕ್ಕರಿಸಿದ್ದಾರೆ. ಒಂದು ರೀತಿಯಲ್ಲಿ ನೋಡಿದರೆ ಧರ್ಮಶಾಸ್ತ್ರಗಳ ಜನಪ್ರಿಯತೆ ಅವುಗಳ ವಿರೋಧಿ ವಲಯದಲ್ಲಿ ದಿನದಿಂದ ದಿನಕ್ಕೆ ಜಾಸ್ತಿಯೇ ಆಗಿದೆ. ಮಾರ್ಕ್ಸವಾದ, ಸೆಕ್ಯುಲರಿಸಂ, ಸ್ತ್ರೀವಾದ, ಇತ್ಯಾದಿ ವಾದಗಳು ಭಾರತದಲ್ಲಿ ಬೇರೂರುತ್ತಿದ್ದಹಾಗೇ ಅವುಗಳಿಗೆ ಈ ಧರ್ಮಶಾಸ್ತ್ರಗಳೆಂಬ ಸಂವಿಧಾನದಲ್ಲಿ ವರ್ಗ ಸಂಘರ್ಷ, ಕೋಮುವಾದ, ಪುರುಷಪ್ರಾಧಾನ್ಯತೆ, ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕಾನೂನುಗಳು ಕೂಡ ಇರುವುದು ಪತ್ತೆಯಾಗತೊಡಗಿತು. ಅಂದರೆ ಹಿಂದೂಯಿಸಂ ಇಂದಿನ ಅನಿಷ್ಠಗಳಿಗೆಲ್ಲ ಕಾನೂನಿನ ಬುನಾದಿಯನ್ನು ಹಾಕಿದ್ದಕ್ಕೆ ಧರ್ಮಶಾಸ್ತ್ರಗಳೇ ಸಾಕ್ಷಿಯಾದವು ಹಾಗೂ ಅವು ಅನಿಷ್ಠಗಳ ಪ್ರತಿರೂಪಗಳು ಎಂಬಂತೆ ಒಂದು ವಲಯದಲ್ಲಿ ಬಿಂಬಿತವಾಗತೊಡಗಿದವು.

ಇವರಿಗೆಲ್ಲ ಕ್ರಮೇಣ ಮನದಟ್ಟಾದ ಒಂದು ಸತ್ಯವೆಂದರೆ ಎಷ್ಟೇ ಹೋರಾಟವನ್ನು ಮಾಡಿದರೂ, ಪ್ರತಿಗಳನ್ನು ಸುಟ್ಟರೂ ಸಂಪ್ರದಾಯಸ್ಥ ಜನರ ತಲೆಯಿಂದ ಈ ಕಾನೂನುಗಳನ್ನು ತೊಡೆಯುವುದು ಅಸಾಧ್ಯ. ಅಂದರೆ ಈ ಕಾನೂನುಗಳು ಯಾವ ಹೋರಾಟಕ್ಕೂ ಅಭೇದ್ಯವಾಗಿವೆ. ಬ್ರಾಹ್ಮಣ ಪುರೋಹಿತಶಾಹಿಯು ಕಾರ್ಯತಂತ್ರಗಳನ್ನು ನಾವು ಇನ್ನಷ್ಟು ಆಳವಾಗಿ ಅರಿಯಬೇಕಿದೆ, ಪಾದ್ರಿಗಳಂತೆ, ಮುಲ್ಲಾಗಳಂತೆ ನೇರವಾಗಿ ಅವರು ಬೋಧನೆಯನ್ನು ಮಾಡುವುದು ಕಾಣಿಸುವುದಿಲ್ಲ, ಆದರೆ ಅದು ಹೇಗೆ, ಯಾವ ರೂಪದಲ್ಲಿ ಈ ಕಾನೂನುಗಳನ್ನು ಅವಿದ್ಯಾವಂತರ ತಲೆಯೊಳಗೆ ತುರುಕಲಾಗಿದೆ? ಇಂದು ಅದನ್ನು ತುರುಕುತ್ತಿರುವ ವಿಧಾನಗಳು ಯಾವವು? ಎಂಬೆಲ್ಲ ಗಹನ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಸಂಶೋಧನೆಗಳೂ ನಡೆದಿವೆ, ನಡೆಯುತ್ತಿವೆ. ಒಂದು ರೀತಿಯಲ್ಲಿ ಈ ಬ್ರಾಹ್ಮಣರ ಕಾರ್ಯತಂತ್ರದ ಹುಡುಕಾಟದ ಫಲವಾಗಿ ಎಲ್ಲೆಲ್ಲೂ ಅವರ ಹುನ್ನಾರಗಳು ಇರುವಂತೆ ಭಾಸವಾಗತೊಡಗಿವೆ, ರಾಜಕೀಯದಲ್ಲಿ, ಶಿಕ್ಷಣದಲ್ಲಿ, ಸಂಶೋಧನೆಯಲ್ಲಿ, ಉದ್ಯಮಗಳಲ್ಲಿ, ಅಧಿಕಾರಶಾಹಿಯಲ್ಲಿ, ಜನಪರ ಹೋರಾಟಗಳಲ್ಲಿ, ಹೀಗೆ ಎಲ್ಲೆಲ್ಲಿಂದಲೋ ಈ ಕಾನೂನುಗಳನ್ನು ಬಲಪಡಿಸುವ ಹುನ್ನಾರ ನಡೆಯುತ್ತಿವೆ ಎಂಬುದಾಗಿ ಇವರು ಭೀತರಾಗಿದ್ದಾರೆ ಎಂಬುದು ಇವರ ಬರವಣಿಗೆಗಳಿಂದ ಸ್ಪಷ್ಟವಾಗುವ ಒಂದು ಸಂಗತಿ.

ಈ ಫಜೀತಿಗಳೆಲ್ಲ ಧರ್ಮಶಾಸ್ತ್ರಗಳನ್ನು ಕಾನೂನುಗಳೆಂದು ಭಾವಿಸಿಕೊಂಡು, ಬ್ರಾಹ್ಮಣರನ್ನು ಪುರೋಹಿತಶಾಹಿಗಳೆಂದು ಭಾವಿಸಿಕೊಂಡು ಹುಟ್ಟಿದಂಥವುಗಳು. ಧರ್ಮಶಾಸ್ತ್ರಗಳಲ್ಲಿ ಬರುವ ನಿರ್ದೇಶನಗಳನ್ನು ಶರೀಯತ್ತುಗಳೆಂದೋ, ಡಾಕ್ಟ್ರಿನ್ನುಗಳೆಂದೋ, ಕಾನೂನುಗಳೆಂದೋ ಭಾವಿಸಿಕೊಂಡು ಹುಟ್ಟಿದಂಥವುಗಳು. ಒಂದೊಮ್ಮೆ ಧರ್ಮಶಾಸ್ತ್ರಗಳು ಆ ಸ್ಥಾನದಲ್ಲಿ ಇದ್ದಿದ್ದರೆ ಅವು ಕಾರ್ಯಗತಗೊಳ್ಳಲು ಕೆಲವು ಭೌತಿಕ ಕ್ರಮಗಳು ಹಾಗೂ ಸಂಸ್ಥೆಗಳು ಅಗತ್ಯವಾಗಿದ್ದವು. ಅಂದರೆ ನಮ್ಮ ಸಾಂಪ್ರದಾಯಿಕ ಸಮಾಜದ ಪದ್ಧತಿಗಳನ್ನು ಧರ್ಮಶಾಸ್ತ್ರಗಳ ಮೂಲಕ ಪ್ರಮಾಣೀಕರಿಸುವ ಕೆಲಸವನ್ನು ನಾವು ಪ್ರತ್ಯಕ್ಷವಾಗಿ ಕಾಣಬೇಕಿತ್ತು. ಅಥವಾ ನಮ್ಮ ಆಧುನಿಕ ಪ್ರಭುತ್ವವು ಜಾತಿ ಆಚರಣೆಗಳನ್ನು ತೊಡೆಯುವ ಸಲುವಾಗಿ ಅವುಗಳಿಗೆ ವಿರುದ್ಧವಾದ ಕಾನೂನುಗಳನ್ನು ಮಾಡಿದಾಗ ಬ್ರಾಹ್ಮಣ ಪಂಡಿತರಿಂದ, ಈ ಸಂಸ್ಥೆಯಿಂದ ವಿರೋಧ ಬರಬೇಕಿತ್ತು. ನಮ್ಮ ಕಾನೂನಿನ ವ್ಯವಸ್ಥೆಯು ಕೋರ್ಟು, ಕಛೇರಿ, ನ್ಯಾಯ ಸಂಹಿತೆ, ವಕೀಲರು, ಜಡ್ಜುಗಳು, ಇತ್ಯಾದಿ ರೂಪದಲ್ಲಿ ಚಾಲ್ತಿಯಲ್ಲಿರುವುದು ನಿಗೂಢವೇನಲ್ಲ. ಪಾಶ್ಚಾತ್ಯ ಜಗತ್ತಿನಲ್ಲಿ ಡಾಕ್ಟ್ರಿನ್ನುಗಳನ್ನು ಉಲ್ಲೇಖಿಸಿ ಇಂಥ ಅನೇಕ ವಿರೋಧಗಳು ಚರ್ಚೆಗಳಿಂದ ಬಂದಿವೆ. ಇತ್ತೀಚೆಗೆ ಐರ‍್ಲೈಂಡಿನಲ್ಲಿ ಭಾರತೀಯ ಮಹಿಳೆಯೊಬ್ಬರ ಸಂದರ್ಭದಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದಂತೆ ಈ ಪ್ರಶ್ನೆ ಎದ್ದಿರುವುದು ಎಲ್ಲರಿಗೂ ತಿಳಿದ ವಿಷಯ. ಚರ್ಚೆ ಇನ್ನೂ ಎಷ್ಟೋ ವಿಷಯಗಳನ್ನು ಮಾನ್ಯಮಾಡಿಲ್ಲ. ಭಾರತದಲ್ಲೇ ಮುಸ್ಲಿಮರಿಂದ ಶರೀಯತ್ತುಗಳ ರಕ್ಷಣೆಗಾಗಿ ಇಂಥ ವಿರೋಧಗಳು ಆಗಾಗ ಬಂದಿವೆ.

ಅಂದರೆ ಧರ್ಮಶಾಸ್ತ್ರಗಳೂ ಈ ಸ್ಥಾನವನ್ನೇ ಹೊಂದಿದ್ದರೆ ಇಡೀ ಹಿಂದೂ ಆಚರಣೆಗಳನ್ನೇ ಬುಡಮೇಲು ಮಾಡುವ ಎಷ್ಟೊಂದು ಕಾನೂನುಗಳು ಇಷ್ಟೊಂದು ಶಾಂತಿಯುತವಾಗಿ ಜಾರಿಯಲ್ಲಿ ಬರಲು ಸಾಧ್ಯವೇ ಇರಲಿಲ್ಲ. ಈ ಕಾನೂನುಗಳನ್ನು ತಮ್ಮ ಸ್ವಾರ್ಥಕ್ಕಾಗಿ ರೂಪಿಸಿಕೊಂಡಿದ್ದಾರೆನ್ನಲಾದ ಬಹುಪಾಲು ಬ್ರಾಹ್ಮಣರಿಗೇ ಧರ್ಮಶಾಸ್ತ್ರಗಳು ಗೊತ್ತಿಲ್ಲ ಹಾಗೂ ಅವುಗಳನ್ನು ಇಟ್ಟುಕೊಂಡು ಅವರು ವ್ಯವಹರಿಸುವುದಿಲ್ಲ. ಯಾವುದೋ ಕಾಯ್ದೆ ಪುಸ್ತಕದಂತೆ ಅವುಗಳನ್ನು ಹಿಡಿದುಕೊಂಡು ಬ್ರಾಹ್ಮಣರು ಬೀದಿ ಬೀದಿ ತಿರುಗುವುದೂ, ಎಲ್ಲರಿಗೂ ಬೋಧಿಸುವುದೂ ಕಂಡುಬರುವುದಿಲ್ಲ. ಅದು ಹೋಗಲಿ ಉಳಿದ ವೇದಮಂತ್ರಗಳಂತೆ ಬ್ರಾಹ್ಮಣರಿಗೆಲ್ಲ ಅವನ್ನು ಬಾಯಿಪಾಠ ಮಾಡಿಸಿ ಕಲಿಸುವ ಪದ್ಧತಿಯೂ ಕಂಡುಬರುತ್ತಿಲ್ಲ. ಈ ಧರ್ಮಶಾಸ್ತ್ರಗಳು ಅವರ ಕಲಿಕೆಯಲ್ಲಿ ವಿಶೇಷ ಶಾಖೆಗಳಾಗಿದ್ದು ತೀರ ಕೆಲವರಿಗೆ ಅವುಗಳ ಜ್ಞಾನ ಇದ್ದಿರಬಹುದು. ನಮಗೆ ಪ್ರತ್ಯಕ್ಷ ಕಂಡುಬರುವ ಪರಿಸ್ಥಿತಿ ಹೀಗಿದೆ. ಅಂದರೆ ಪ್ರಚಲಿತದಲ್ಲಿನ ಆಚರಣೆಗಳಿಗೂ ಧರ್ಮಶಾಸ್ತ್ರಗಳ ವರ್ಣನೆಗಳು ತಾಳೆಯಾಗುತ್ತಿದೆ ಎಂಬ ಒಂದೇ ಕಾರಣಕ್ಕೆ ಅವು ಕಾನೂನುಗಳಂತೆ ಈ ಆಚರಣೆಗಳನ್ನು ನಿರ್ದೇಶಿಸಿವೆ ಎನ್ನಲಿಕ್ಕೆ ಆಧಾರಗಳಿಲ್ಲ.

18ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರು ಕಲ್ಕತ್ತಾದಲ್ಲಿ ತಮ್ಮ ವಸಾಹತು ಸರ್ಕಾರವನ್ನು ಸ್ಥಾಪಿಸಿದಾಗ ಅವರಿಗೆ ದೇಶೀ ಕಾನೂನುಗಳನ್ನು ತಿಳಿಯುವ ತುರ್ತು ಉಂಟಾಯಿತು. ಆದರೆ ಅವರಿಗೆ ದೇಶೀ ಸಂಸ್ಕೃತಿ ಹಾಗೂ ಭಾಷೆಗಳ ಪರಿಚಯ ಇರಲಿಲ್ಲ. ಆ ಕೆಲಸವನ್ನು ಪೂರೈಸಲಿಕ್ಕೆ ವಿಲಿಯಂ ಜೋನ್ಸ್ ಎಂಬ ಪೌವರ್ಾತ್ಯ ಸಂಸ್ಕೃತಿಗಳ ಕುರಿತ ವಿದ್ವಾಂಸನನ್ನು ಕರೆಸಿಕೊಂಡರು. ಅವನೇ ಸ್ವತಃ ನ್ಯಾಯಾಧೀಶನಾಗಿದ್ದನು. ಅವನು ಕಲ್ಕತ್ತಾದಲ್ಲಿದ್ದಷ್ಟೂ ವರ್ಷ ಹಿಂದೂಗಳ ಕಾನೂನಿಗಾಗಿ ಹುಡುಕಾಡಿದನು. ಅವನ ಈ ಹುಡುಕಾಟಕ್ಕೆ ನೆರವಾದವರು ದೇಶೀ ಪಂಡಿತರು! ಹಿಂದೂ ಕಾನೂನುಗಳು ನಿಜವಾಗಿಯೂ ಇದ್ದಿದ್ದರೆ ಈ ದೇಶೀ ಪಂಡಿತರೇ ಏಕೆ ಅದಕ್ಕಾಗಿ ಹುಡುಕಾಡುವ ಪ್ರಸಂಗ ಬರುತ್ತಿತ್ತು? ಹಾಗಿದ್ದಲ್ಲಿ ಅವರು ಯಾವ ಸೀಮೆ ಪಂಡಿತರಾಗಿದ್ದರು? ಎಂಬ ಪ್ರಶ್ನೆ ಏಳುವುದು ಸಹಜ. ಏನೇ ಆಗಿದ್ದರೂ, ಈ ಪಂಡಿತರು ಎಲ್ಲಾರೀತಿಯ ಗ್ರಂಥಗಳನ್ನೂ ತಂದು ರಾಶಿ ಹಾಕುವಲ್ಲಿ ಯಶಸ್ವಿಯಾದದ್ದಂತೂ ನಿಜ. ಅವುಗಳಲ್ಲಿ ಕಾವ್ಯ ನಾಟಕಗಳೂ ಸೇರಿದ್ದವು. ಕೊನೆಗೆ ವಿಲಿಯಂ ಜೋನ್ಸನು ‘ಮೆನುಸ್ಮೃತಿ’ ಎಂಬ ಹಿಂದೂ ಕಾನೂನು ಗ್ರಂಥವನ್ನು ಆ ರಾಶಿಯಲ್ಲಿ ಕಂಡುಹಿಡಿದು ಬಾಹ್ಯಜಗತ್ತಿಗೆ ಈ ಸಂಶೋಧನೆಯನ್ನು ಅಧಿಕೃತವಾಗಿ ಘೋಷಿಸಿದ. ಧರ್ಮಶಾಸ್ತ್ರಗಳು ಹಿಂದೂ ಕಾನೂನುಗಳೆಂಬುದಾಗಿ ನಂಬಿದ್ದ ವಸಾಹತು ನ್ಯಾಯಾಲಯಗಳಲ್ಲಿ ಭಾರತೀಯ ಹಿಂದೂ ಸಮಾಜದ ವಿವಾದಗಳನ್ನು ಈ ಧರ್ಮಶಾಸ್ತ್ರಗಳನ್ನು ಆಧರಿಸಿ ಬಗೆಹರಿಸುವ ಕ್ರಮವನ್ನು ಹುಟ್ಟುಹಾಕಲಾಯಿತು. ಸತಿ ಪದ್ಧತಿಯ ನಿಷೇಧಕ್ಕೆ ಬೆಂಬಲವಾಗಿ ಮನುಧರ್ಮಶಾಸ್ತ್ರವನ್ನು ಉದ್ಧರಿಸಲಾಗಿತ್ತು. ಧರ್ಮಶಾಸ್ತ್ರಗಳು ಕಾನೂನುಗಳಾದದ್ದು ಹೀಗೆ.

ಧರ್ಮಶಾಸ್ತ್ರಗಳ ಕುರಿತ ತದನಂತರದ ಸಂಶೋಧನೆಗಳು ನೂರಾರು ಧರ್ಮಶಾಸ್ತ್ರಗಳನ್ನು ಬೆಳಕಿಗೆ ತಂದಿವೆ. ಒಂದು ಇದ್ದ ಹಾಗೆ ಮತ್ತೊಂದಿಲ್ಲ. ಅವೆಲ್ಲವೂ ದೇಶ ಕಾಲ ಸಂದರ್ಭಕ್ಕನುಗುಣವಾಗಿ ಭಿನ್ನತೆಯನ್ನು ಹೊಂದಿವೆ. ಇವೆಲ್ಲ ಆಯಾ ಕಾಲ ಹಾಗೂ ಪ್ರದೇಶಗಳ ಆಚರಣೆಗಳನ್ನು ದಾಖಲಿಸುತ್ತವೆ ಎಂಬುದಾಗಿ ಅರ್ಥೈಸುವುದು ಹೆಚ್ಚು ಸಮಂಜಸ. ದಕ್ಷಿಣ ಭಾರತದಲ್ಲಿ ವಿಜ್ಞಾನೇಶ್ವರನ ಮಿತಾಕ್ಷರಿ ಎಂಬ ಕೃತಿಯು ಸಿಗುತ್ತದೆ. ಅದು ಯಾಜ್ಞವಲ್ಕ್ಯ ಸ್ಮೃತಿಯ ಭಾಷ್ಯವಾಗಿದೆ. ಈ ಪ್ರದೇಶದಲ್ಲಿ ಆ ಕಾಲದಲ್ಲಿ ಸೋದರ ವಿವಾಹ ಸಂಬಂಧವು ಪ್ರಚಲಿತದಲ್ಲಿದ್ದುದರಿಂದ ಮಿತಾಕ್ಷರಿಯು ಅದನ್ನು ಒಪ್ಪಿಕೊಳ್ಳುತ್ತದೆ. ಅಂದರೆ ಇಂದು ನಾವು ದಕ್ಷಿಣ ಭಾರತದಲ್ಲಿ ಕಾಣುವ ಸೋದರ ಸಂಬಂಧ ಮಿತಾಕ್ಷರಿಯಿಂದ ಹುಟ್ಟಿದ್ದಲ್ಲ, ಅದರಲ್ಲಿ ಸೇರಿಕೊಂಡದ್ದು ಎಂಬುದಂತೂ ಸ್ಪಷ್ಟ. ಮನುಸ್ಮೃತಿಯು ಕ್ರಿಸ್ತಪೂರ್ವದಲ್ಲಿ ಉತ್ತರ ಭಾರತದ ಕುರು ಪಾಂಚಾಲ ಪ್ರದೇಶದಲ್ಲಿ ರಚಿತವಾದ ಕೃತಿ. ಅದು ಸರ್ವ ಭಾರತಕ್ಕೂ ಹಿಂದೂ ಕಾನೂನು ಆಗಿತ್ತು ಎಂದರೆ ಅಸಂಬದ್ಧವಾಗಿ ಕೇಳಿಸುತ್ತದೆ.

ನಾವು ನೋಡುವ ಶಾಸ್ತ್ರ ಗ್ರಂಥಗಳು ಯಾವುದೋ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಅಭಿಮತಗಳನ್ನೂ, ಸಂಪ್ರದಾಯಗಳನ್ನೂ ದಾಖಲಿಸುವ ಕೆಲಸ ಮಾಡುತ್ತವೆ ಎಂಬುದಂತೂ ಸ್ಪಷ್ಟ. ಅಭಿಮತಗಳೆಲ್ಲ ಆಚರಣೆಯಲ್ಲಿದ್ದವೆ? ಎಂಬುದಕ್ಕೂ ಆಧಾರಗಳಿಲ್ಲ. ನಾವೂ ಆ ಆಚರಣೆಗಳನ್ನು ಇಂದು ಮಾಡುತ್ತಿದ್ದರೆ ಅವು ನಮಗೆ ನಿರ್ದೇಶನಗಳಂತೆ ಕಾಣುತ್ತವೆ. ಆದರೆ ಪ್ರಶ್ನೆಯಿರುವುದು ನಾವಾಗಲೀ ನಮ್ಮ ಹಿರಿಯರಾಗಲೀ ಅವುಗಳನ್ನು ಓದಿ ಆಚರಿಸಲಿಕ್ಕೆ ಕಲಿತಿದ್ದೇವೆಯೆ? ಎಂಬುದು. ಈ ಆಚರಣೆಗಳನ್ನು ನಾವು ನಮ್ಮ ಹಿರಿಯರಿಂದ ಅನುಕರಿಸಿ ಕಲಿತುಕೊಳ್ಳುತ್ತೇವೆ. ನಮ್ಮ ಸಂಪ್ರದಾಯಗಳು ಈ ಧರ್ಮಶಾಸ್ತ್ರಗಳ ಶೃಂಖಲೆಯಿಲ್ಲದೇ ತಮ್ಮಷ್ಟಕ್ಕೆ ಬದಲಾಗುತ್ತಿರುವುದು ನಮ್ಮೆಲ್ಲರ ಅನುಭವ. ಅವುಗಳನ್ನು ಬದಲಾಯಿಸಬೇಕೆಂದಿದ್ದರೆ ಒಂದಿಲ್ಲೊಂದು ಧರ್ಮಶಾಸ್ತ್ರದಲ್ಲಿ ನಿಮಗೆ ಪೂರಕ ಆಧಾರ ಸಿಗದೇ ಹೋಗುವುದಿಲ್ಲ. ಏಕೆಂದರೆ ಅವು ದೇಶ ಕಾಲ ಭಿನ್ನವಾದ ಆಚರಣೆಗಳನ್ನು ದಾಖಲಿಸುವುದರಿಂದ ಪರಸ್ಪರ ವೈರುಧ್ಯಪೂರ್ಣವಾದ, ವೈವಿಧ್ಯಪೂರ್ಣವಾದ ಪ್ರಮಾಣಗಳನ್ನು ನೀಡಬಲ್ಲವು.

ಭಾರತದಲ್ಲಿ ಬಹುಶಃ ಬ್ರಾಹ್ಮಣರನ್ನೂ ಒಳಗೊಂಡಂತೆ ಯಾರೂ ಧರ್ಮಶಾಸ್ತ್ರಗಳನ್ನು ಓದಿಕೊಂಡು ತಮ್ಮ ಜೀವನವನ್ನು ನಡೆಸುವುದಿಲ್ಲ ಎಂಬುದು ಒಂದು ಸಾಮಾನ್ಯ ಸತ್ಯ. ಹಾಗಾದರೆ ಧರ್ಮಶಾಸ್ತ್ರಗಳಲ್ಲಿ ನಮ್ಮ ಅನೇಕ ಆಚರಣೆಗಳಿಗೆ ನಿರ್ದೇಶನ ಇವೆಯಲ್ಲ? ಅವನ್ನು ಯಾಕಾಗಿ ಬರೆದಿದ್ದಾರೆ? ಎಂಬ ಪ್ರಶ್ನೆ ಏಳಬಹುದು. ನಮ್ಮ ಸಂಪ್ರದಾಯಗಳಲ್ಲಿ ಧರ್ಮಶಾಸ್ತ್ರಗಳ ಪಾತ್ರ ಏನು? ಎಂಬುದು ನಾವೆಲ್ಲ ಇನ್ನೂ ಕಂಡುಕೊಳ್ಳಬೇಕಾಗಿರುವ ವಿಷಯ ಎಂಬುದನ್ನು ಮೊದಲು ಒಪ್ಪಿಕೊಳ್ಳೋಣ.

Advertisements
Categories: Uncategorized
 1. ಸೆಪ್ಟೆಂಬರ್ 22, 2013 ರಲ್ಲಿ 1:05 ಫೂರ್ವಾಹ್ನ

  Mr.Bal Gangadhar, I challenge you to debate on the issues you understood and opined about the Hindu social science and due systems even on Manusmriti in front of well educated people especially the post graduate sociologists and let them decide what is right and wrong. There should be foreign and non Hindu sociologists to hear we both and judge the validity of the thesis. If I will be judged wrong then I’ll submit myself as your slave till I live and if you’ll be judged wrong then you should accept yourself as biased fool.

  Like

 2. Dr. A. Shanmukha
  ಸೆಪ್ಟೆಂಬರ್ 22, 2013 ರಲ್ಲಿ 12:40 ಅಪರಾಹ್ನ

  Mr. Vikas Naik, what exactly your objections and questions are about the arguments in this article? Why don’t you write your comments sensibly ( So far I have not seen from you) than inviting for open challenge so foolishly?

  Sorry, I never seen your comments sensibly addressing the issues that a article is discussing. Why don’t you try now? (I have seen your comments in FB groups and blogs but none of them are addressing the issue at the discussion. I hope you will do it here)

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: