ಮುಖ ಪುಟ > Cultural Studies, Culture, Dharma, Religion > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

s200_s.n..balagangadharaಕಂತು 25 : ನಮ್ಮ ದೇವತೆಗಳು ಮತ್ತು ಸೆಮೆಟಿಕ್ ಗಾಡ್
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

‘ದೇವನೊಬ್ಬ ನಾಮ ಹಲವು’ ಎಂಬ ಹೇಳಿಕೆ ನಮಗೆಲ್ಲ ಗೊತ್ತು. ಈ ಹೇಳಿಕೆಯ ಪ್ರಕಾರ ಮೂಲತಃ ದೇವನು ಒಬ್ಬನೇ ಆಗಿದ್ದು ನಾವು ಇಂದು ನೋಡುವ ಅಸಂಖ್ಯಾತ ದೇವತೆಗಳೆಲ್ಲ ಆತನ ವಿಭಿನ್ನ ಹೆಸರುಗಳು ಮಾತ್ರ. ಆ ಒಬ್ಬನೇ ದೇವನು ಯಾರು? ಅವನು ಶಿವ, ವಿಷ್ಣು, ಗಣಪತಿ, ದುರ್ಗಾ ಇಂಥ ಯಾವ ನಾಮಧೇಯಗಳೂ ಆಗಿರಲು ಸಾಧ್ಯವಿಲ್ಲ. ಅಂದರೆ ಅವನು ಅನಾಮಧೇಯನೇ ಆಗಿರಬೇಕಾಗುತ್ತದೆ. ಭಾರತೀಯ ಸಂಪ್ರದಾಯಗಳ ಹಿನ್ನೆಲೆಯಿಂದ ಈ ವಾಕ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಎರಡು ಆಯ್ಕೆಗಳಿವೆ: 1. ಪರಮಾತ್ಮ ಎಂಬ ನಿರ್ಗುಣ ನಿರಾಕಾರ ತತ್ವ. ಈ ಆಯ್ಕೆ ಹೊಂದುವುದಿಲ್ಲ. ಏಕೆಂದರೆ ಅಂಥ ತತ್ವವು ದೇವತಾ ಕಲ್ಪನೆಯಲ್ಲ. ಅದಕ್ಕೆ ನಾಮ ರೂಪಗಳು ಇಲ್ಲ. 2. ಅದು ದೇವತಾ ಕಲ್ಪನೆ ಆಗಿರಬೇಕಾದರೆ ಶಿವ, ವಿಷ್ಣು ಪಾರಮ್ಯದ ಕಲ್ಪನೆಯಲ್ಲೇ ಅದನ್ನು ನಮ್ಮ ಸಂಪ್ರದಾಯವು ನೀಡುತ್ತದೆ. ‘ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ’ ಎಂಬಂಥ ವಾಕ್ಯಗಳೂ ನಮಗೆ ಸಿಗುತ್ತವೆ. ಹಾಗೆ ಮಾಡುವಾಗ ದೇವನು ಅನಾಮಧೇಯನಾಗುವುದಿಲ್ಲ. ಭಾರತದಲ್ಲಿ ಯಾವ ನಾಮಗಳನ್ನೂ ಅಂಟಿಸಿಕೊಳ್ಳದ ಒಬ್ಬ ದೇವನಿಲ್ಲ. ದೇವಾಃ ಅಥವಾ ದೇವತೆಗಳು ಅಂತ ಇದ್ದಾರೆ. ಅವರಿಗೆಲ್ಲ ವ್ಯಕ್ತಿಗತವಾಗಿ ಬೇರೆ ಬೇರೆ ಹೆಸರುಗಳಿವೆ. ವಿಷ್ಣು, ಶಿವ, ಗಣಪತಿ, ಲಕ್ಷ್ಮಿ, ದುರ್ಗಾ, ಇತ್ಯಾದಿ. ಹಾಗಾದರೆ ‘ದೇವನೊಬ್ಬ ನಾಮ ಹಲವು’ ಎಂಬ ಹೇಳಿಕೆ ನಮಗೆಲ್ಲ ಅರ್ಥವಾಗಿದೆ ಎಂದೇಕೆ ಭಾಸವಾಗುತ್ತದೆ?

ದೇವ ಎಂಬ ಶಬ್ದವು ಗಾಡ್ ಎಂಬ ಶಬ್ದದ ತರ್ಜುಮೆಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕ್ರಿಶ್ಚಿಯಾನಿಟಿಯಲ್ಲಿ ಒಬ್ಬನೇ ಗಾಡ್ ಇರುವುದು. ಆದರೆ ಪ್ರಾಚೀನ ರೋಮನ್ನರಲ್ಲಿ, ಇಂದಿನ ಏಷ್ಯಾದಲ್ಲಿ, ಹಾಗೂ ಪ್ರಪಂಚದ ವಿವಧೆಡೆಯಲ್ಲಿ ಇರುವ ಬುಡಕಟ್ಟುಗಳಲ್ಲಿ ಅನೇಕ ದೇವತೆಗಳಿದ್ದಾರೆ. ಹಾಗಾಗಿ ಗಾಡ್ಸ್ ಎಂದು ಬಹುವಚನಪ್ರಯೋಗವು ಅನಿವಾರ್ಯವಾಯಿತು. ಭಾರತದಂಥ ಸಂಸ್ಕೃತಿಯಲ್ಲಿ ಈ ತರ್ಜುಮೆಕಾರರಿಗೆ ಮತ್ತೂ ಒಂದು ಫಜೀತಿ ಎದುರಾಯಿತು. ಇಲ್ಲಿ ದೇವ ಎಂಬುದು ಪುಲ್ಲಿಂಗವಾಗಿದೆ. ಅದಕ್ಕೆ ದೇವಿ ಎಂಬ ಸ್ತ್ರೀಲಿಂಗ ರೂಪವೂ ಇದೆ. ಇಲ್ಲಿ ಪುರುಷ ದೇವತೆಗಳಲ್ಲದೇ ದೇವಿಯರೂ ಜನಪ್ರಿಯತೆಯನ್ನು ಪಡೆದು ಪುರುಷ ದೇವತೆಗಳಿಗೆ ಸರಿಸಾಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಸೆಮೆಟಿಕ್ ಗಾಡ್ಗೆ ಲಿಂಗವನ್ನು ಆರೋಪಿಸಲಾಗಿಲ್ಲ. ಆದರೆ ಭಾಷೆಯಲ್ಲಿ ‘ಅವನು’ ಎಂಬುದಾಗಿಯೇ ಪುಲ್ಲಿಂಗದಲ್ಲಿ ಸೂಚಿಸಲಾಗುತ್ತದೆ. ಏನೇ ಆದರೂ ಅವನು ಒಬ್ಬನೇ ಆಗಿರುವುದರಿಂದ ಸಮಸ್ಯೆಯಿಲ್ಲ. ಆದರೆ ಭಾರತೀಯರ ಗಂಡು ದೇವತೆಗಳನ್ನು ಗಾಡ್ಸ್ ಎಂದ ಪಕ್ಷದಲ್ಲಿ ಹೆಣ್ಣುರೂಪಗಳನ್ನು ಗಾಡ್ಸ್ ಎನ್ನುವಂತಿಲ್ಲ. ಹಾಗಾಗಿ ಅವರನ್ನು ಗಾಡೆಸಸ್ ಎಂದು ಕರೆಯಲಾಯಿತು.ಇದು ಕೇವಲ ತರ್ಜುಮೆಯ ಸಮಸ್ಯೆಯಲ್ಲ. ಭಾರತದಂಥ ಸಂಸ್ಕೃತಿಯಲ್ಲಿ ಗಾಡ್ ಎಂಬುದಕ್ಕೆ ಸರಿಸಮನಾದ ಪರಿಕಲ್ಪನೆ ಇಲ್ಲದಿರುವುದೇ ಸಮಸ್ಯೆ. ನಾನು ಹೀಗೆ ಹೇಳಿದಾಗ ನೀವು ಆಶ್ಚರ್ಯಪಡಬಹುದು. ನಮ್ಮ ಸಂಸ್ಕೃತಿಯಲ್ಲಿ ಅದಿಲ್ಲ, ಇದಿಲ್ಲ ಅಂತ ಹೇಳುತ್ತ ಬಂದದ್ದೀರಿ, ಈಗ ದೇವರೂ ಇಲ್ಲವೆ? ಅಂತ. ನಾನು ಹೇಳುತ್ತಿರುವುದು ಗಾಡ್ ಎಂಬರ್ಥದಲ್ಲಿ ‘ದೇವನೊಬ್ಬ’ ನಿಲ್ಲ. ಗಾಡ್ ಎಂದರೆ ಸೃಷ್ಟಿಗಿಂತಲೂ ಮೊದಲು ಹಾಗೂ ನಂತರ ಸದಾಕಾಲ ಇರುವ ಒಬ್ಬನೇ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಅವನ ಉದ್ದೇಶ ಹಾಗೂ ಯುಕ್ತಿಯಿಂದಾಗಿ ಈ ಪ್ರಪಂಚವನ್ನು ಸೃಷ್ಟಿಸಿದ್ದಾನೆ. ಅವನು ಈ ಪ್ರಪಂಚದಿಂದ ಹೊರಗೇ ಇರುತ್ತಾನೆ. ಅವನೇ ಸೃಷ್ಟಿಸಿದ ಈ ಪ್ರಪಂಚದಲ್ಲಿ ಮತ್ತೊಂದು ಅಂಥ ದೇವನಿಗೆ ಪ್ರಸ್ತುತತೆ ಇರಲು ಸಾಧ್ಯವೇ ಇಲ್ಲ. ಹಾಗೆ ಇದ್ದಾನೆ ಎಂದು ಯಾರಾದರೂ ಹೇಳಿದರೆ ಅವನು ನಿಜವಾದ ದೇವನಾಗಿರಲು ಸಾಧ್ಯವೇ ಇಲ್ಲ. ಅವನು ಸುಳ್ಳಾಗಿರಲೇ ಬೇಕು. ಈ ದೇವನೇ ನಿಜ ದೇವತೆ ಎಂಬುದಾಗಿ ಪ್ರತಿಪಾದಿಸುವ ಮನುಷ್ಯರ ಮಾತನ್ನು ಹೇಗೆ ನಂಬುವುದು? ನಂಬಲಿಕ್ಕೆ ಕಾರಣವಿದೆ. ನಿಜ ದೇವನೇ ಸ್ವತಃ ಅವರ ಮಾನವರೂಪದ ಪ್ರವಾದಿಗೆ ಅದನ್ನು ಬಹಿರಂಗಪಡಿಸಿದ್ದಾನೆ. ಅದನ್ನು ಅವರ ಪವಿತ್ರಗ್ರಂಥ ಹೇಳುತ್ತದೆ ಹಾಗೂ ಅದು ಕಥೆಯಲ್ಲ, ಸತ್ಯ. ಅವನು ಸತ್ಯದೇವ.

ಕ್ರಿಶ್ಚಿಯಾನಿಟಿಯ ಪ್ರಕಾರ ಈ ಪ್ರಪಂಚವೆಲ್ಲವೂ ಅವನೊಬ್ಬನದೇ ಸೃಷ್ಟಿ ಅಂತಾದಮೇಲೆ ಈ ಪ್ರಪಂಚದಲ್ಲಿರುವ ಜನರೆಲ್ಲರೂ ಆತನದೇ ಸೃಷ್ಟಿಯಾಗುತ್ತಾರೆ ಹಾಗೂ ಅವರಿಗೆಲ್ಲರಿಗೂ ಆತನೇ ನಿಜದೇವ. ಹಾಗಿರುವಾಗ ಈ ಪ್ರಪಂಚದೊಳಗೇ ಇರುವ ಇತರ ಕೆಲವು ಜನರು ಅವನನ್ನು ಬಿಟ್ಟು ಬೇರೆ ದೇವನ ಅಥವಾ ದೇವರುಗಳ ಹೆಸರುಗಳನ್ನು ಹೇಳಿದರೆ ಹೇಗೆ ನಿಜವಾಗಲು ಸಾಧ್ಯ? ಅವರೆಲ್ಲ ನಿಜವಾಗಿಯೂ ಗಾಡ್ ಆಗಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಇಂಗ್ಲೀಷಿನಲ್ಲಿ ಗಾಡ್ ನನ್ನು ಸೂಚಿಸುವಾಗ ಉಠಜ ಎಂಬುದಾಗಿ ಮೊದಲಕ್ಷರವನ್ನು ಕ್ಯಾಪಿಟಲ್ ರೂಪದಲ್ಲಿ ಇಡಲಾಗುತ್ತದೆ. ಮೂರ್ತಿಪೂಜಕ ಸಂಸ್ಕೃತಿಗಳ ದೇವತೆಗಳನ್ನು ಸೂಚಿಸುವಾಗ god/gods ಎಂಬುದಾಗಿ ಸಣ್ಣ ಅಕ್ಷರದಲ್ಲಿ ಸೂಚಿಸಲಾಗುತ್ತದೆ.

ಭಾರತದಲ್ಲಿರುವ ಜನರೂ ಬೈಬಲ್ಲಿನ ಕಥೆಯಲ್ಲಿ ಬರುವ ನೋವಾನ ಸಂತತಿಗಳೇ ಎಂಬುದಾಗಿ ಕ್ರೈಸ್ತ ಮಿಶನರಿಗಳು ತಿಳಿದಿದ್ದರು. ಹಾಗೂ ಅವರೆಲ್ಲರೂ ಗಾಡ್ನ ನೆನಪನ್ನು ಉಳಿಸಿಕೊಂಡಿರುತ್ತಾರೆ ಎಂದುಕೊಂಡಿದ್ದರು. ಆದರೆ ಯಾವಾಗ ಅವರು ಭಾರತಕ್ಕೆ ಖುದ್ದಾಗಿ ಬಂದರೋ ಆವಾಗಲೇ ಇಲ್ಲಿನ ಅಸಂಖ್ಯಾತ ದೇವತೆಗಳಲ್ಲಿ ಯಾರೂ ತಮ್ಮ ಗಾಡ್ ನಂತಿಲ್ಲ ಎಂಬುದನ್ನು ನೋಡಿದರು. ಅದರಲ್ಲೂ ಆ ದೇವತೆಗಳ ಮೂರ್ತರೂಪ ಹಾಗೂ ಪೂಜಾ ವಿಧಾನಗಳನ್ನು ಗಮನಿಸಿದಾಗ ಅದಕ್ಕೂ ತಮ್ಮ ಗಾಡ್ ಹಾಗೂ ರಿಲಿಜನ್ನಿನ ಕಲ್ಪನೆಗೂ ಅರ್ಥಾರ್ಥ ಸಂಬಂಧವೇ ಕಾಣಲಿಲ್ಲ. ಈ ಸಂಗತಿಯನ್ನು ತಮ್ಮ ರಿಲಿಜನ್ನಿನ ಮೂಲಕ ಪಡೆದ ಜ್ಞಾನಕ್ಕೆ ಹೇಗೆ ಒಗ್ಗಿಸಿಕೊಳ್ಳುವುದು? ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಎರಡು ರೀತಿಯ ಸಬೂಬುಗಳನ್ನು ಕೊಟ್ಟುಕೊಂಡರು. ಮೊತ್ತಮೊದಲನೆಯದಾಗಿ ಈ ಎಲ್ಲ ದೇವರುಗಳೂ, ಹಾಗೂ ಅವರ ಕುರಿತಾದ ವೈವಿಧ್ಯಮಯ ಪೂಜೆಗಳೂ ಸೃಷ್ಟಿಕರ್ತನಾದ ಗಾಡ್ನ ನೆನಪು ಭಾರತೀಯರಲ್ಲಿ ಇದ್ದುದರಿಂದಲೇ ಸಾಧ್ಯವಾಗಿವೆ ಅಂದುಕೊಂಡರು. ಅಂದರೆ ಈ ಎಲ್ಲವೂ ಗಾಡ್ ಕುರಿತೇ ಇವೆ. ಆದರೆ ಈ ಜನರು ದಾರಿ ತಪ್ಪಿದ್ದೆಲ್ಲಿ? ಅದಕ್ಕೆ ಕ್ರೈಸ್ತರ ಥಿಯಾಲಜಿಯ ಕಥೆಯು ಸಹಾಯಕ್ಕೆ ಬಂದಿತು. ಆ ಕಥೆಯ ಪ್ರಕಾರ ಡೆವಿಲ್ ಎಂಬವನೊಬ್ಬನಿದ್ದಾನೆ. ಅವನು ಗಾಡ್ನ ಕಟ್ಟಾ ವಿರೋಧಿ. ಅವನು ಸುಳ್ಳು ದೇವತೆಗಳ ರೂಪದಲ್ಲಿ ಬಂದು ಜನರನ್ನು ದಾರಿ ತಪ್ಪಿಸಿ ಗಾಡ್ನಿಂದ ಅವರನ್ನು ದೂರ ಒಯ್ಯುತ್ತಾನೆ. ಇಂಥ ಮೋಸಕ್ಕೆ ಒಳಗಾದ ಜನರು ಗಾಡ್ನ ಲೋಕವನ್ನು ಸೇರುವ ಬದಲು ನರಕಕ್ಕೆ ಹೋಗುತ್ತಾರೆ. ಹಾಗಾಗಿ ಬಹು ರೂಪಗಳಲ್ಲಿ ಕಾಣಿಸಿಕೊಳ್ಳುವ ಇಂಥ ದೇವತೆಗಳಲ್ಲಿ ಒಬ್ಬರೂ ನಿಜವಾದ ಗಾಡ್ ಅಲ್ಲ.

ಇದು ಕ್ರೈಸ್ತ ಮಿಶನರಿಗಳ ನಂಬಿಕೆ. ಭಾರತವನ್ನು ಅಧ್ಯಯನ ಮಾಡಲು ಬಂದ ಆಧುನಿಕ ವಿದ್ವಾಂಸರು ಈ ನಂಬಿಕೆಯಿಂದ ಪ್ರಭಾವಿತರಾಗಿ ರಿಲಿಜನ್ನುಗಳ ಇತಿಹಾಸವನ್ನು ಕಟ್ಟಿದರು. ಎಲ್ಲಾ ಸಂಸ್ಕೃತಿಗಳಲ್ಲೂ ಗಾಡ್ ಗಾಗಿ ಹುಡುಕಾಟಗಳು ನಡೆದಿವೆ ಹಾಗೂ ಅದರ ಫಲವಾಗಿ ಎಲ್ಲೆಡೆಯೂ ರಿಲಿಜನ್ನುಗಳು ಅಸ್ತಿತ್ವಕ್ಕೆ ಬಂದಿವೆ ಎಂಬುದು ಅವರ ವಾದ. ಒಬ್ಬನೇ ದೇವನ ಕಲ್ಪನೆಯನ್ನು ಪಾಶ್ಚಾತ್ಯರು ಮೊನೊಥೇಯಿಸಂ ಎಂಬುದಾಗಿ ಕರೆಯುತ್ತಿದ್ದರು. ಇಂಥ ಏಕದೇವನ ಉಪಾಸನೆಯೇ ಶ್ರೇಷ್ಠವಾದ ರಿಲಿಜನ್ನು, ಅದು ಕ್ರಿಶ್ಚಿಯಾನಿಟಿಯಲ್ಲಿ ಸ್ಪಷ್ಟವಾಗಿದೆ ಎಂಬುದೇ ಪಾಶ್ಚಾತ್ಯ ಪಂಡಿತರ ತೀರ್ಮಾನವಾಗಿತ್ತು. ಈ ಏಕದೇವನ ಕಲ್ಪನೆಯು ಅಷ್ಟು ಸ್ಪಷ್ಟವಾಗಿ ಕಾಣಿಸಿಕೊಳ್ಳದ ಭಾರತೀಯ ರಿಲಿಜನ್ನುಗಳಿಗಿಂತ ಕ್ರಿಶ್ಚಿಯಾನಿಟಿಯು ಶ್ರೇಷ್ಠವಾದುದು ಎಂಬ ಅಭಿಪ್ರಾಯವೂ ಈ ಪಂಡಿತರಲ್ಲಿತ್ತು. ಇಂಥ ಅಭಿಪ್ರಾಯಗಳನ್ನಿಟ್ಟುಕೊಂಡ ಈ ಪಂಡಿತರು ರಿಲಿಜನ್ನಿನ ವಿಕಾಸದ ಚರಿತ್ರೆಯನ್ನು ಬರೆದರು. ಈ ವಿಕಾಸದಲ್ಲಿ ಬಹುದೇವತಾರಾಧನೆ ಕೆಳಗಿನ ಹಂತವಾದರೆ ಏಕ ದೇವತಾರಾಧನೆ ಮೇಲನೆಯ ಹಂತ. ಎಲ್ಲಾ ಸೆಮೆಟಿಕ್ ರಿಲಿಜನ್ನುಗಳೂ ಈ ಪ್ರಕಾರವಾಗಿ ಸಂಪೂರ್ಣ ವಿಕಸಿತ ರಿಲಿಜನ್ನುಗಳು. ಅಸಂಖ್ಯಾತ ವೈವಿಧ್ಯಪೂರ್ಣ ದೇವತೆಗಳಿಂದ ತುಂಬಿದ ಭಾರತದಲ್ಲಿ ನಿಜವಾದ ದೇವನ ಹುಡುಕಾಟವು ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಕೆಲವು ಸೂಚನೆಗಳೂ ಪಾಶ್ಚಾತ್ಯರಿಗೆ ಸಿಕ್ಕವು. ಅಂಥ ಒಂದು ವಾಕ್ಯವೆಂದರೆ ‘ಏಕಂ ಸತ್ ವಿಪ್ರ ಬಹುದಾ ವದಂತಿ’ ಎನ್ನುವ ವಾಕ್ಯ. ಅಂಥ ವಾಕ್ಯಗಳನ್ನು ನೋಡಿದಾಗ ‘ನಿಜವಾದ ದೇವನೊಬ್ಬನೇ’ ಎಂಬ ಜ್ಞಾನ ಇವರಿಗೆ ಇದ್ದುದಕ್ಕೆ ಇವರ ಪವಿತ್ರಗ್ರಂಥಗಳಲ್ಲಿ ಹೇಳಿಕೆಗಳು ಇದ್ದಂತೆ ತೋರಿದವು. ಸತ್ ಒಂದೇ, ಅದನ್ನು ವಿಪ್ರರು ಬಹುರೀತಿಗಳಲ್ಲಿ ಹೇಳುತ್ತಾರೆ ಎಂಬರ್ಥದ ಈ ವಾಕ್ಯವನ್ನು ಇಟ್ಟುಕೊಂಡು ‘ನಿಜದೇವನು ಒಬ್ಬನೇ, ವಿಪ್ರರು ಅವನಿಗೆ ಬಹುರೂಪಗಳನ್ನು ಆರೋಪಿಸುತ್ತಾರೆ’ ಎನ್ನುವ ಅರ್ಥವನ್ನು ಹಚ್ಚಲಾಯಿತು. ಆ ಮೂಲಕ ಪ್ರಾಚೀನ ಭಾರತೀಯರಲ್ಲಿ ದೇವನೊಬ್ಬನೇ ಎಂಬ ಕಲ್ಪನೆ ಕೂಡ ವಿಕಾಸವಾಗಿತ್ತು ಎಂಬುದಕ್ಕೆ ಸಾಕ್ಷಿಯನ್ನು ತೋರಿಸಲಾಯಿತು.

ಗಾಡ್ ಮೂರು ರೂಪಗಳಲ್ಲಿ ಇದ್ದಾನೆ ಎಂಬ ನಿರೂಪಣೆಯೂ ಕ್ರೈಸ್ತರಲ್ಲಿ ಇದೆ. ಇದನ್ನು ಟ್ರಿನಿಟಿ ಪರಿಕಲ್ಪನೆ ಎನ್ನುತ್ತಾರೆ. ಆ ಮೂರು ರೂಪಗಳೆಂದರೆ ತಂದೆ, ಮಗ (ಏಸುಕ್ರಿಸ್ತ) ಹಾಗೂ ಪವಿತ್ರ ಸ್ಪಿರಿಟ್. ಇದನ್ನು ಅವರು ಪಾಲಿಥೇಯಿಸಂ (ಬಹುದೇವತಾರಾಧನೆ ಎಂದು ಕನ್ನಡದಲ್ಲಿ ಭಾಷಾಂತರಿಸಲಾಗುತ್ತದೆ) ಎಂದು ಕರೆಯುತ್ತಾರೆ. ಈ ಮೂರು ರೂಪಗಳು ಹಾಗೂ ಹೆಸರುಗಳು ಬೇರೆ ಬೇರೆಯಾದರೂ ಗಾಡ್ ಒಬ್ಬನೇ ಎಂಬ ಪ್ರತಿಪಾದನೆಯನ್ನು ಕ್ರೈಸ್ತರು ಗಟ್ಟಿಯಾಗಿ ಮಾಡುತ್ತಾರೆ. ರಿಲಿಜನ್ನಿನ ಶಬ್ದಕೋಶಕ್ಕೆ ಸೇರಿದ ಈ ಪರಿಭಾಷೆಗಳನ್ನು ಪಾಶ್ಚಾತ್ಯ ವಿದ್ವಾಂಸರು ಭಾರತಕ್ಕೂ ವಿಸ್ತರಿಸಿದಾಗ ಬಹುದೇವತೆಗಳ ಹಿಂದೆ ಒಬ್ಬನೇ ದೇವನಿದ್ದಾನೆ ಎಂಬ ಕಲ್ಪನೆ ಕೂಡ ಅದರ ಜೊತೆಗೆ ಬಂದಂತೆ ಕಾಣುತ್ತದೆ. ಇದೇ ಪಾಶ್ಚಾತ್ಯ ತಿಳುವಳಿಕೆಯನ್ನೇ ಹಂಚಿಕೊಂಡ ಹತ್ತೊಂಭತ್ತನೆಯ ಶತಮಾನದ ಭಾರತೀಯ ಸುಧಾರಣಾವಾದಿಗಳು ಕೂಡ ಏಕದೇವತಾರಾಧನೆ, ಅದರಲ್ಲೂ ನಿರಾಕಾರ ಪರಮಾತ್ಮನ ಆರಾಧನೆ ಶ್ರೇಷ್ಠವಾದುದೆಂದು ಆ ನಿಟ್ಟಿನಲ್ಲಿ ಹಿಂದೂಯಿಸಂನ ಸುಧಾರಣೆಗಾಗಿ ಪರಿಶ್ರಮಿಸಿದರು. ಈ ಬಹುದೇವತೆಗಳ ಪೂಜೆ ಮೂಢನಂಬಿಕೆ ಎಂದೂ, ಅದರಿಂದ ಹೊರಬಂದ ಹೊರತೂ ಭಾರತೀಯರ ಉದ್ಧಾರ ಸಾಧ್ಯವಿಲ್ಲವೆಂದೂ ಪ್ರತಿಪಾದಿಸಿದರು. ಅವರು ಭಾರತೀಯ ಪರಂಪರೆಯಲ್ಲಿ ಏಕದೇವತಾ ಕಲ್ಪನೆ (ಮೊನೊಥೇಯಿಸಂ) ಇರುವುದನ್ನು ತೋರಿಸಲು ಪ್ರಯತ್ನಿಸಿದರು. ‘ದೇವನೊಬ್ಬ ನಾಮ ಹಲವು’ ಎನ್ನುವ ಸಾಲು ನಮ್ಮ ದೇವತೆಗಳಲ್ಲಿ ಇಂಥ ಸೆಮೆಟಿಕ್ ನಿಜದೇವನೊಬ್ಬನನ್ನು ಕಾಣುವ ಪ್ರಯತ್ನವಾಗಿ ಮಾತ್ರವೇ ಅರ್ಥಪಡೆದುಕೊಳ್ಳಬಲ್ಲದು.

ನಮ್ಮ ಯಾವ ದೇವತೆಗಳನ್ನೂ ಸೆಮೆಟಿಕ್ ಗಾಡ್ಗೆ ಹೋಲಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಒಂದು ಏಕೈಕ ನಿರಾಕಾರ ಪರಮಾತ್ಮನನ್ನು ಕಾಣುವ ಪ್ರಯತ್ನ ಇತ್ತೆಂದಾಕ್ಷಣ ಅದು ಸೆಮೆಟಿಕ್ ನಿಜದೇವನ ಕಲ್ಪನೆ ಎಂದು ರಿಲಿಜನ್ನಿನ ವಿಕಾಸಕ್ಕೆ ಜೋಡಿಸಲು ಬರುವುದಿಲ್ಲ. ಪರಮಾತ್ಮ ಎಂಬುದು ದೇವತಾರೂಪದ ವ್ಯಕ್ತಿಯಲ್ಲ, ಅನುಭವಕ್ಕೆ ಮಾತ್ರ ಬರುವ ತತ್ವವಾಗಿದೆ. ನಮ್ಮ ನಿರಾಕಾರ ಪರಮಾತ್ಮನು ನಮ್ಮೊಳಗೇ ಇದ್ದಾನೆ ಎಂಬುದನ್ನು ಅನುಭವಕ್ಕೆ ತಂದುಕೊಳ್ಳುವುದೇ ಅವನ ಜ್ಞಾನ. ನಾನೇ ಪರಮಾತ್ಮ ಎಂಬುದನ್ನು ಸಾಕ್ಷಾತ್ಕರಿಸಿಕೊಂಡವನು ಪರಮಾತ್ಮನೇ ಆಗುತ್ತಾನೆ ಎಂದು ನಮ್ಮ ಕೆಲವು ಅಧ್ಯಾತ್ಮ ಸಂಪ್ರದಾಯಗಳು ಹೇಳುತ್ತವೆ. ನಮ್ಮಲ್ಲಿ ಹಲವು ಭಕ್ತಿ ಪಂಥಗಳಲ್ಲಿ ಸಾಯುಜ್ಯ ಕಲ್ಪನೆಯಿದೆ, ಅಂದರೆ ದೈವವೇ ತಾನಾಗುವುದು. ಸೆಮೆಟಿಕ್ ಮತಗಳ ಸಂದರ್ಭದಲ್ಲಿ ನಾನೇ ಗಾಡ್ ಎನ್ನಲು ಸಾಧ್ಯವೇ ಇಲ್ಲ. ಅಥವಾ ನಾನು ಗಾಡ್ ಆಗಬಲ್ಲೆ ಎನ್ನುವುದು ಪಾಪ ಕೂಡ ಆಗಬಹುದು.

ಗಾಡ್ ನಮ್ಮನ್ನೆಲ್ಲ ಸೃಷ್ಟಿಸಿ ಈ ಸೃಷ್ಟಿಯ ಹೊರಗೇ ಇರುವಂಥವನು. ಅವನು ಏನೂ ಇಲ್ಲದ ಶೂನ್ಯದಿಂದ ಪ್ರಪಂಚವನ್ನು ಹೊಸದಾಗಿ ಸೃಷ್ಟಿಸಿದ ಸೃಷ್ಟಿಕರ್ತನಾಗಿದ್ದಾನೆ. ಈ ಅರ್ಥದಲ್ಲಿ ಭಾರತದ ಯಾವ ದೇವತೆಗಳೂ ಸೃಷ್ಟಿಕರ್ತರಲ್ಲ, ನಮ್ಮಲ್ಲಿ ಅಂಥ ಸೃಷ್ಟಿಯ ಕಲ್ಪನೆಯೂ ಇಲ್ಲ. ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ. ಆದರೆ ಬ್ರಹ್ಮನು ಹುಟ್ಟುವುದಕ್ಕಿಂತ ಮೊದಲೇ ವಿಷ್ಣು ಇದ್ದನು, ಆದಿಶೇಷ, ಹಾಲ್ಗಡಲು, ಲಕ್ಷ್ಮಿ ಇವರೆಲ್ಲ ಇದ್ದರು. ವಿಷ್ಣು, ಶಿವ, ಶಕ್ತಿ ಮುಂತಾದ ಎಲ್ಲಾ ದೇವತೆಗಳೂ ಸೃಷ್ಟಿಗೂ ಆದಿಯಲ್ಲಿ ಇದ್ದವರು ಎಂದು ಆಯಾ ಪಂಥದವರು ಹೇಳಿಕೊಳ್ಳುತ್ತಾರೆ. ಆದರೆ ಇವರೆಲ್ಲಾ ಒಂದು ಉದ್ದೇಶ ಸಾಧನೆಗಾಗಿ ಶೂನ್ಯದಿಂದ ಸೃಷ್ಟಿಯನ್ನು ಮಾಡಿದರು ಎಂಬ ಕಥೆಗಳಿಲ್ಲ. ಸೆಮೆಟಿಕ್ ಗಾಡ್ನಿಗೆ ಈ ಪ್ರಪಂಚವನ್ನು ಸೃಷ್ಟಿಸುವ ಹಿಂದೆ ಒಂದು ಉದ್ದೇಶ ಹಾಗೂ ಯುಕ್ತಿಗಳಿದ್ದವು. ನಮ್ಮ ಕೆಲವು ದೇವತೆಗಳು ಜಗನ್ನಿಯಾಮಕರೆಂಬುದಾಗಿ ನಮ್ಮ ಸಂಪ್ರದಾಯವು ಹೇಳಿದರೂ ಕೂಡ ಅವರ ಕಾರ್ಯವು ಲೀಲೆ ಅಥವಾ ಮಾಯೆಯಾಗಿರುವುದರಿಂದ ಅದಕ್ಕೆ ಲೆಕ್ಕಾಚಾರಗಳಿಲ್ಲ.

ಪರಮಾತ್ಮ ತತ್ವವನ್ನು ಅರಿಯುವ ಮಾರ್ಗದಲ್ಲಿ ನಮ್ಮೆಲ್ಲಾ ದೇವಾನುದೇವತೆಗಳೂ, ಅವುಗಳ ಸಾಕಾರ ಉಪಾಸನೆಯೂ ಸಾಧನಗಳಾಗಿವೆ. ನಿರಾಕಾರ ತತ್ವವನ್ನು ಒಮ್ಮಗೇ ಅರಿಯಲು ಜನರಿಗೆ ಸಾಧ್ಯವಾಗುವುದಿಲ್ಲವಾದ್ದರಿಂದ ದೇವತಾಕಾರಗಳನ್ನು ಹಾಗೂ ಮೂರ್ತಿಗಳನ್ನು ಕಲ್ಪಿಸಲಾಗಿದೆ ಎಂಬುದಾಗಿ ಹೇಳಲಾಗುತ್ತದೆ. ಆದರೆ ಅವು ಪರಮಾತ್ಮ ತತ್ವದ ವಿವಿಧ ರೂಪಗಳು/ಹೆಸರುಗಳು ಎಂಬುದಾಗಿ ಯಾರೂ ಹೇಳುವುದಿಲ್ಲ. ಏಕೆಂದರೆ ಪರಮಾತ್ಮನ ಜ್ಞಾನೋದಯವಾದ ಕ್ಷಣದಲ್ಲಿ ಅವುಗಳಲ್ಲಿ ಯಾವವೂ ಇರುವುದಿಲ್ಲ. ನಮ್ಮ ಅಧ್ಯಾತ್ಮ ಮಾರ್ಗಗಳ ವೈಶಿಷ್ಟ್ಯತೆಯನ್ನು ಉಪೇಕ್ಷಿಸಿ ರಿಲಿಜನ್ನಿನ ಚೌಕಟ್ಟಿನಲ್ಲಿ ಇಟ್ಟುದರಿಂದ ನಮ್ಮ ಸಂಸ್ಕೃತಿಯಲ್ಲಿ ಗಾಡ್ ಪರಿಕಲ್ಪನೆ ಇದೆ ಎಂಬಂತೆ ವಿದ್ವಾಂಸರಿಗೆ ಕಂಡಿದೆ ಅಷ್ಟೆ.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: