ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

Rajaram - Baluಕಂತು 28 : ಸೆಕ್ಯುಲರ್ ಚಿಂತಕರು ರಿಲಿಜನ್ನಿನಿಂದ ಹೊರಬಂದಿದ್ದಾರೆಯೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ 

ಈ ಮೇಲಿನ ಪ್ರಶ್ನೆಗೆ ನನ್ನ ಉತ್ತರವು ನಕಾರಾತ್ಮಕವಾಗಿದೆ. ಸೆಕ್ಯುಲರ‍್ ವಾದಿಯಾಗಿರಲು ರಿಲಿಜನ್ನಿನಿಂದ ಹೊರಬರುವ ಅಗತ್ಯವಿಲ್ಲ ಎಂಬುದಾಗಿ ನಮ್ಮ ಈ ವರೆಗಿನ ಚರಿತ್ರೆ ತಿಳಿಸುತ್ತದೆ. ಸೆಕ್ಯುಲರ್ ವಲಯವು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕ್ರಿಶ್ಚಿಯಾನಿಟಿ ಎಂಬ ರಿಲಿಜನ್ನಿನ ಮತ್ತೊಂದು ಮುಖವಾಗಿದೆಯೇ ವಿನಃ ಅದು ವಿಶ್ವವ್ಯಾಪೀ ವಾಸ್ತವವಲ್ಲ ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ. ಅಷ್ಟೇ ಅಲ್ಲ, ಅದು ಮುಖಮರೆಸಿಕೊಂಡ ಕ್ರಿಶ್ಚಿಯಾನಿಟಿಯೇ ಆಗಿದೆ ಎಂಬುದು ನನ್ನ ವಾದ. ಹಾಗಾಗಿ ಪ್ರಪಂಚದ ಯಾವುದೇ ಸಂಸ್ಕೃತಿಗೆ ಸೇರಿದವರಿರಬಹುದು, ಈ ಪಾಶ್ಚಾತ್ಯ ಸೆಕ್ಯುಲರ್ ವಿಚಾರಧಾರೆಯನ್ನು ಅಳವಡಿಸಿಕೊಳ್ಳುವಾಗ ಕ್ರಿಶ್ಚಿಯನ್ನರ ಥಿಯಾಲಜಿಯ ಸತ್ಯಗಳನ್ನು ಸ್ವೀಕರಿಸಿರುತ್ತಾರೆ ಹಾಗೂ ಆ ಮಟ್ಟಿಗೆ ಕ್ರೈಸ್ತರಾಗುತ್ತರೆ.

ಈ ವಾದವು ಮೇಲ್ನೋಟಕ್ಕೆ ವಿಚಿತ್ರವಾಗಿ ಕಾಣಿಸುವುದರಲ್ಲಿ ಸಂಶಯವಿಲ್ಲ. ಏಕೆಂದರೆ ನಮ್ಮ ಸಾಮಾನ್ಯ ಜ್ಞಾನದ ಪ್ರಕಾರ ಸೆಕ್ಯುಲರ್ ಎನ್ನುವುದು ರಿಲಿಜನ್ನಿಗೆ ಸಂಬಂಧಪಡದ್ದು ಹಾಗೂ ಸೆಕ್ಯುಲರೀಕರಣವೆಂದರೆ ರಿಲಿಜನ್ನಿನಿಂದ ಹೊರಬರುವ ಒಂದು ಪ್ರಕ್ರಿಯೆ. ಅಂದರೆ ಒಬ್ಬನು ಸೆಕ್ಯುಲರ್ ವಾದವನ್ನು ಒಪ್ಪಿಕೊಳ್ಳಬೇಕಾದರೆ ರಿಲಿಜನ್ನಿನ ಪ್ರತಿಪಾದನೆಗಳನ್ನು ನಿರಾಕರಿಸಬೇಕಾಗುತ್ತದೆ. ಪಾಶ್ಚಾತ್ಯ ಚರಿತ್ರೆಯು ನಮಗೆ ತಿಳಿಸುವ ಪ್ರಕಾರ ಯುರೋಪಿನಲ್ಲಿ 18ನೆಯ ಶತಮಾನದ ನಂತರ ಈ ಪ್ರಕ್ರಿಯೆ ಪ್ರಾರಂಭವಾಯಿತು. ಯುರೋಪಿನ ಪ್ರಭುತ್ವಗಳು ಚರ್ಚಿನ ನಿಯಂತ್ರಣದಿಂದ ಹೊರಬಂದು ತಮ್ಮ ಸ್ವಾಯತ್ತತೆಯನ್ನು ಪಡೆದುಕೊಂಡವು. ಯುರೋಪಿನ ಜ್ಞಾನೋದಯ ಯುಗದ ಚಿಂತಕರು ಚರ್ಚು ಹಾಗೂ ಬೈಬಲ್ಲನ್ನು ನಿರಾಕರಿಸಿ ಈ ಪ್ರಪಂಚದ ಕುರಿತು ಬದಲೀ ವಿವರಣೆಗಳನ್ನು ಬೆಳೆಸಿದರು. ಪಾಶ್ಚಾತ್ಯ ವಿಜ್ಞಾನದ ಬೆಳವಣಿಗೆಯೂ ಈ ಪ್ರಕ್ರಿಯೆಯೊಂದಿಗೆ ತಳಕುಹಾಕಿಕೊಂಡಿದೆ. ಇದನ್ನೆಲ್ಲ ಆಧುನೀಕರಣ ಅಥವಾ ಆಧುನಿಕತೆ ಎಂಬುದಾಗಿ ವರ್ಣಿಸಲಾಗುತ್ತದೆ. ಆಧುನಿಕ ಯುರೋಪಿನ ಚರಿತ್ರೆಯೆಂದರೆ ಸೆಕ್ಯುಲರೀಕರಣದ ಚರಿತ್ರೆಯಾಗಿದೆ. ಈ ಜೀವನಕ್ರಮದಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ, ಹಾಗೂ ಜೀವನ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಇತ್ಯಾದಿಗಳು ಅತ್ಯಗತ್ಯ.

ಯುರೋಪಿನಲ್ಲಿ ರಿಲಿಜನ್ನಿನ ಪ್ರಭಾವದಿಂದ ಹೊರಬರುವ ಧ್ಯೇಯವನ್ನಿಟ್ಟುಕೊಂಡು ಬೆಳೆದುಬಂದ ಸೆಕ್ಯುಲರ್ ಚಿಂತನೆ ಹಾಗೂ ಜೀವನಕ್ರಮಗಳು ವಸಾಹತೀಕರಣದಿಂದಾಗಿ ವಿಶ್ವವ್ಯಾಪಿಯಾದವು. ಐರೋಪ್ಯರು ಮನುಕುಲದ ಅಪೂರ್ವ ಸಾಧನೆಯಾದ ಹಾಗೂ ನಾಗರೀಕತೆಯ ಮಾನದಂಡವಾದ ಈ ಸೆಕ್ಯುಲರ್ ಚಿಂತನೆ ಹಾಗೂ ಅದರಿಂದ ಹುಟ್ಟಿದ ಆಧುನಿಕ ಮೌಲ್ಯಗಳನ್ನು ತಮ್ಮ ಪ್ರಭುತ್ವಗಳಲ್ಲಿ ಅನುಷ್ಠಾನಕ್ಕೆ ತಂದರು. ಹಾಗೂ ತೃತೀಯ ಜಗತ್ತಿನ ತಮ್ಮ ವಸಾಹತುಗಳ ಅಭಿವೃದ್ಧಿಗೆ ಮಾನದಂಡವಾಗಿ ಬಳಸಿದರು. ವಸಾಹತು ಆಳ್ವಿಕೆಯೆಂಬುದು ಮೂಲತಃ ಶೋಷಣೆಯಾಗಿದೆ ಎಂಬುದನ್ನು ಯುರೋಪಿನ ಚಿಂತಕರು ಗುರುತಿಸಿದರೂ ಕೂಡ ಅದು ವಸಾಹತುಗಳಿಗೆ ಒಂದು ಕಹಿ ಔಷಧಿ ಎಂಬಂತೇ ಗ್ರಹಿಸಿದರು. ಆಧುನಿಕ ನಾಗರೀಕ ಜೀವನಕ್ರಮವನ್ನು ರೂಢಿಸುವ ಕಾರ್ಯವನ್ನು ಎಸಗಿದ್ದರಿಂದ ಅದು ವಸಾಹತುಗಳಿಗೆ ಅತ್ಯಗತ್ಯವಾಗಿದೆ ಎಂಬುದಾಗಿ ತರ್ಕಿಸಿದರು. ಈ ರೀತಿಯಾಗಿ ಯುರೋಪಿನ ಆಧುನಿಕ ಜೀವನ ಕ್ರಮ ಹಾಗೂ ಮೌಲ್ಯಗಳು ವಿಶ್ವವ್ಯಾಪಿಯಾದವು. ಇಂದು ಈ ಪ್ರಕ್ರಿಯೆಯು ಇಡೀ ಪ್ರಪಂಚವನ್ನೇ ವ್ಯಾಪಿಸಿಕೊಂಡಿದೆ.

ಈ ಪ್ರಕ್ರಿಯೆಯ ಜೊತೆಗೆ ಪ್ರಪಂಚದ ಕುರಿತ ಪಾಶ್ಚಾತ್ಯ ವೈಜ್ಞಾನಿಕ ವಿವರಣೆಗಳು ಹಾಗೂ ಯುರೋಪಿನ ಜ್ಞಾನೋದಯ ಯುಗದ ಚಿಂತನೆಗಳು ಎಲ್ಲೆಡೆ ಪಸರಿಸಿದವು. ಅವುಗಳಲ್ಲಿ ಸಮಾಜ ವಿಜ್ಞಾನದ ಸಿದ್ಧಾಂತಗಳು ಹಾಗೂ ವಿವರಣೆಗಳೂ ಸೇರಿವೆ. ಈ ವಿವರಣೆಗಳು ಕ್ರಿಶ್ಚಿಯಾನಿಟಿಯು ನಮ್ಮ ವಿಶ್ವದ ಕುರಿತು ಹಾಗೂ ಮನುಷ್ಯನ ಕುರಿತು ನೀಡಿದ ವಿವರಣೆಗಳನ್ನು ಪ್ರಶ್ನಿಸಿ ಅದರ ಸ್ಥಾನದಲ್ಲಿ ಪ್ರತಿಷ್ಠಾಪಿತವಾದವು. ವಿಜ್ಞಾನದ ಬೆಳವಣಿಗೆಯ ಕಾಲಘಟ್ಟದಲ್ಲಿ ಅದರ ಸಿದ್ಧಾಂತಗಳು ಚರ್ಚಿನ ಪ್ರತಿಪಾದನೆಗಳನ್ನು ಅಲ್ಲಗಳೆಯುವ ಸಂದರ್ಭಗಳು ಸೃಷ್ಟಿಯಾದಾಗ ಚರ್ಚು ವಿಜ್ಞಾನಿಗಳನ್ನು ಹತ್ತಿಕ್ಕಲು ಪ್ರಯತ್ನಿಸಿದ್ದೂ ನಮಗೆ ಗೊತ್ತಿರುವ ವಿಷಯವೇ ಆಗಿದೆ. ಈ ವಿಶ್ವವು ಗಾಡ್ನ ಸೃಷ್ಟಿಯಲ್ಲ, ಅದಕ್ಕೆ ಅದರದೇ ಸೃಷ್ಟಿ ನಿಯಮಗಳಿವೆ ಹಾಗೂ ಪ್ರಕ್ರಿಯೆಗಳಿವೆ ಎಂಬುದನ್ನು ವಿವರಿಸಲು ಹೊರಟ ನಿಸರ್ಗ ವಿಜ್ಞಾನವು ತನ್ನದೇ ಪರ್ಯಾಯ ವಿವರಣೆಗಳನ್ನು ಬೆಳೆಸಿತು. ಈ ವಿವರಣೆಗಳನ್ನು ಪ್ರಾಯೋಗಿಕವಾಗಿ ದೃಷ್ಟಾಂತಪಡಿಸಲಾಯಿತು ಹಾಗೂ ದಿನನಿತ್ಯದ ಜೀವನದಲ್ಲಿ ಈ ಜ್ಞಾನದ ಫಲವಾಗಿ ತಂತ್ರಜ್ಞಾನದ ಕ್ರಾಂತಿಯೇ ನಡೆಯಿತು. ಹಾಗಾಗಿ ವಿಜ್ಞಾನವೇ ಈ ಪ್ರಪಂಚವನ್ನು ತಿಳಿಯಲು ನಿಜವಾದ ಮಾರ್ಗವೇ ಹೊರತೂ ಥಿಯಾಲಜಿಯಲ್ಲ, ಥಿಯಾಲಜಿ ಎಂಬುದು ಕಪೋಲಕಲ್ಪಿತ ಮಿಥ್ಯೆ ಎಂಬ ಅಭಿಪ್ರಾಯವು ಜನಜನಿತವಾಯಿತು.

ನಿಸರ್ಗದ ಕುರಿತ ಸೆಕ್ಯುಲರ್ ವಿವರಣೆಗಳ ಜೊತೆಗೇ ಮನುಷ್ಯನ ಕುರಿತ ಸೆಕ್ಯುಲರ್ ವಿವರಣೆಗಳೂ ಅಸ್ತಿತ್ವದಲ್ಲಿ ಬಂದವು. ಈ ಮನುಷ್ಯನನ್ನು, ಅವನ ಯೋಚನಾಕ್ರಮವನ್ನು ಹಾಗೂ ಅವನ ಜೀವನ ಕ್ರಮವನ್ನು ವೈಜ್ಞಾನಿಕವಾಗಿ ವಿವರಿಸುವ ನಿಟ್ಟಿನಲ್ಲಿ ಜ್ಞಾನೋದಯ ಯುಗದ ಚಿಂತಕರು ಸಿದ್ಧಾಂತಗಳನ್ನು ಹುಟ್ಟುಹಾಕಿದರು. ಸಮಾಜ ಎಂದರೇನು? ಪ್ರಭುತ್ವ ವ್ಯವಸ್ಥೆ ಏಕೆ ಅಸ್ತಿತ್ವದಲ್ಲಿ ಬಂದಿದೆ? ಮನುಷ್ಯನ ವೈವಿಧ್ಯಮಯ ಜೀವನ ಕ್ರಮಗಳು ಹೇಗೆ ಮತ್ತು ಏಕೆ ಅಸ್ತಿತ್ವದಲ್ಲಿ ಬಂದವು? ರಿಲಿಜನ್ನನ್ನು ಮನುಷ್ಯನು ಏಕೆ ಹುಟ್ಟುಹಾಕಿದ? ಇಂಥ ಪ್ರಶ್ನೆಗಳನ್ನೆಲ್ಲ ರಿಲಿಜನ್ನನ್ನು ಬಿಟ್ಟು ಉತ್ತರಿಸುವ ಜೊತೆಗೆ ಈ ಮನುಷ್ಯನ ಭವಿತವ್ಯದ ಕುರಿತೂ ರಿಲಿಜನ್ನಿಗೆ ಪರ್ಯಾಯವಾದ ಚಿಂತನೆಗಳು ಬೆಳೆದವು. ಇಂಥ ಚಿಂತನೆಗಳು ವೈಜ್ಞಾನಿಕವಾಗಿ ಮನುಷ್ಯನ ಕುರಿತು ಗಳಿಸಿಕೊಂಡ ತಿಳುವಳಿಕೆಯನ್ನೇ ಆಧರಿಸಿದ್ದವೇ ವಿನಃ ಚರ್ಚುಗಳ ಪ್ರತಿಪಾದನೆಯನ್ನಲ್ಲ. ಸೆಕ್ಯುಲರೀಕರಣದ ಭಾಗವಾಗಿ ಚರ್ಚುಗಳಿಗೆ ಪರ್ಯಾಯವಾಗಿ ಅಸ್ತಿತ್ವದಲ್ಲಿ ಬಂದ ಪ್ರಭುತ್ವಗಳು ಈ ಸೆಕ್ಯುಲರ್ ಚಿಂತನೆಗಳನ್ನು ಆಧರಿಸಿ ಪ್ರಭುತ್ವ ವ್ಯವಸ್ಥೆಯ ಸುಧಾರಣೆ ಹಾಗೂ ಪ್ರಜೆಗಳ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಯುರೋಪಿನಲ್ಲಿ ಪ್ರಭುತ್ವ ವ್ಯವಸ್ಥೆಯ ಆಧುನಿಕ ರೂಪಗಳು ವಿಕಾಸವಾದವು.

ಆದರೆ ಮಾನವನ ಕುರಿತ ಸೆಕ್ಯುಲರ್ ಸಿದ್ಧಾಂತಗಳನ್ನು ಪರೀಕ್ಷಿಸಿದಾಗ ನಮಗೆ ಕಂಡುಬರುವುದೆಂದರೆ ಅವು ಮೂಲತಃ ಕ್ರೈಸ್ತ ಥಿಯಾಲಜಿಯ ಸರಕುಗಳೇ ಆಗಿವೆ. ಉದಾಹರಣೆಗೆ ಆಧುನಿಕ ರಿಲಿಜನ್ನಿನ ವಿಜ್ಞಾನವು ತಿಳಿಸುವಂತೇ ಪ್ರಪಂಚದ ಎಲ್ಲಾ ಸಂಸ್ಕೃತಿಗಳಲ್ಲೂ ರಿಲಿಜನ್ನುಗಳಿವೆ: ಹಿಂದೂಯಿಸಂ, ಬುದ್ಧಿಸಂ, ಶಿಂಟೋಯಿಸಂ, ತಾವೋಯಿಸಂ, ವಿಭಿನ್ನ ಆದಿಮ ಬುಡಕಟ್ಟುಗಳ ರಿಲಿಜನ್ನುಗಳು, ಇತ್ಯಾದಿ. ಆದರೆ ಇವುಗಳನ್ನು ರಿಲಿಜನ್ನುಗಳೆಂದು ಯಾವ ಆಧಾರದ ಮೇಲೆ ಗುರುತಿಸುತ್ತಿದ್ದೇವೆ ಎಂಬುದನ್ನು ತಿಳಿಸಲು ಈ ವಿದ್ವಾಂಸರು ಅಸಮರ್ಥರಾಗಿದ್ದಾರೆ. ಅಂದರೆ ಗಾಡ್ ಎಲ್ಲ ಮಾನವರಿಗೂ ರಿಲಿಜನ್ನನ್ನು ನೀಡಿದ್ದಾನೆ ಎಂಬ ಕ್ರೈಸ್ತ ಥಿಯಾಲಜಿಯನ್ನೇ ರಿಲಿಜನ್ನಿನ ವೈಜ್ಞಾನಿಕ ಸಿದ್ಧಾಂತವನ್ನಾಗಿ ಪರಿವರ್ತಿಸಲಾಗಿದೆ. ಇದೇ ರೀತಿಯಲ್ಲಿ ಪಾಶ್ಚಾತ್ಯ ರಾಜಕೀಯ, ಮನಃಶಾಸ್ತ್ರೀಯು, ಮಾನವಶಾಸ್ತ್ರೀಯ ಹಾಗೂ ಸಾಮಾಜಿಕ ಸಿದ್ಧಾಂತಗಳೆಲ್ಲವೂ ಥಿಯಾಲಜಿಯ ವರ್ಣನೆಗಳನ್ನಾಧರಿಸಿ ರೂಪುಗೊಂಡಿವೆ ಎಂಬುದನ್ನು ದೃಷ್ಟಾಂತಗಳ ಮೂಲಕ ತೋರಿಸಬಹುದು. ಸ್ವತಃ ರಿಲಿಜನ್-ಸೆಕ್ಯುಲರ್ ಎಂಬ ವಿಂಗಡಣೆಯೂ ಈ ಸಾಲಿಗೇ ಸೇರುತ್ತದೆ. ಅಂದರೆ ಈ ಆಧುನಿಕ ವಿಚಾರಗಳ ಹೆಸರಿನಲ್ಲಿ ನಿಜವಾಗಿಯೂ ಪ್ರಸಾರವಾದದ್ದು ಥಿಯಾಲಜಿಯೇ.

ಈ ರೀತಿಯಲ್ಲಿ ಸೆಕ್ಯುಲರೀಕರಣವೆಂಬುದು ಕ್ರಿಶ್ಚಿಯಾನಿಟಿಯ ಪ್ರಸರಣದ ಒಂದು ವಿಧಾನವಾಗಿದೆ. ಸೆಕ್ಯುಲರೀಕರಣದ ಮೂಲಕ ಕ್ರಿಶ್ಚಿಯನ್ ಥಿಯಾಲಜಿಯು ಇಂದು ಪ್ರಪಂಚದ ತುಂಬೆಲ್ಲ ವ್ಯಾಪಿಸುವಂತಾಗಿದೆ. ವ್ಯತ್ಯಾಸವೇನೆಂದರೆ ಇಲ್ಲಿ ಕ್ರಿಶ್ಚಿಯಾನಿಟಿಯು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಅಂದರೆ ಸೆಮೆಟಿಕ್ ದೇವಕಲ್ಪನೆಗಳು ಹಾಗೂ ಕಥೆಗಳು ಇಲ್ಲಿ ಪ್ರಸ್ತುತತೆಯನ್ನು ಕಳೆದುಕೊಂಡಿವೆ, ಆದರೆ ಅದನ್ನಾಧರಿಸಿದ ಲೋಕದೃಷ್ಟಿಯೊಂದು ಅವ್ಯಾಹತವಾಗಿ ಪ್ರಸಾರವಾಗುತ್ತಿದೆ.

ಈ ಬೆಳವಣಿಗೆಗಳೆಲ್ಲವೂ ಕ್ರಿಶ್ಚಿಯಾನಿಟಿಯ ಆಂತರಿಕ ಬೆಳವಣಿಗೆಗಳಾಗಿವೆ. ನನ್ನ ಪ್ರಕಾರ ಕ್ರಿಶ್ಚಿಯಾನಿಟಿಯು ಜಗತ್ತಿನಲ್ಲಿ ಪ್ರಸಾರವಾಗಲಿಕ್ಕೆ ಎರಡು ಕ್ರಮಗಳಿವೆ. ಮೊದಲನೆಯದು ಮತಪರಿರ್ತನೆ, ಎರಡನೆಯದು ಸೆಕ್ಯುಲರೀಕರಣ. ತಾನೊಂದೇ ಸತ್ಯ ಎಂಬ ಪ್ರತಿಪಾದನೆಯನ್ನು ಮಾಡುವ ರಿಲಿಜನ್ನಿಗೆ ಅನ್ಯವನ್ನೆಲ್ಲವನ್ನೂ ತನ್ನದನ್ನಾಗಿ ಪರಿವರ್ತಿಸುವ ಪೃವೃತ್ತಿಯಿರುತ್ತದೆ. ಮತಪರಿವರ್ತನೆಯಲ್ಲಿ ಅದು ನಿರ್ದಿಷ್ಟವಾಗಿ ಇಸ್ಲಾಂ, ಕ್ರೈಸ್ತ ಎಂಬ ರೂಪನ್ನು ಇಟ್ಟುಕೊಂಡು ಆ ಕೆಲಸವನ್ನು ಮಾಡುತ್ತಿರುತ್ತದೆ. ಆದರೆ ಆ ಕೆಲಸದಲ್ಲಿ ಅದರ ನಿರ್ದಿಷ್ಟ ರೂಪವೇ ಅದಕ್ಕೆ ತೊಡಕಾಗುತ್ತದೆ. ಅಂದರೆ ಆ ರೂಪಿನ ದೆಸೆಯಿಂದ ಅದರ ಅನ್ಯತೆಯು ಬಹಿರಂಗವಾಗಿ ಕಾಣಿಸುತ್ತದೆ. ಈ ರೀತಿಯ ಪ್ರಸಾರವು ಸೀಮಿತವಾದುದು.

ಕ್ರಿಶ್ಚಿಯಾನಿಟಿಯು ಈ ಸವಾಲನ್ನು ಪ್ರಾಚೀನ ಕಾಲದಿಂದಲೂ ಎದುರಿಸಿದೆ. ಇದನ್ನು ಕ್ರೈಸ್ತಶಾಸ್ತ್ರದ ಉಭಯ ಸಂಕಟ ಎಂಬುದಾಗಿ ವಿದ್ವಾಂಸರು ಗುರುತಿಸುತ್ತಾರೆ. ಈ ಉಭಯಸಂಕಟದ ಒಂದು ಕಡೆಯಲ್ಲಿ ಕ್ರಿಸ್ತ ಮತ್ತೊಂದು ಕಡೆ ಗಾಡ್ ಕಲ್ಪನೆಗಳಿವೆ. ಕ್ರಿಶ್ಚಿಯಾನಿಟಿಯು ಕ್ರಿಸ್ತನನ್ನೇ ಆಧರಿಸಿ ಅಸ್ತಿತ್ವಕ್ಕೆ ಬಂದ ರಿಲಿಜನ್ನಾಗಿದೆ. ಕ್ರಿಸ್ತನೇ ಇಲ್ಲದಿದ್ದರೆ ಆ ರಿಲಿಜನ್ನೂ ಇರುವುದಿಲ್ಲ. ಆದರೆ ತಾನು ಸಮಸ್ತ ಮನುಕುಲದ ರಿಲಿಜನ್ನು, ತಾನು ಹೇಳುವುದೇ ಸಾರ್ವತ್ರಿಕ ಸತ್ಯ ಎಂದು ಪ್ರತಿಪಾದಿಸುವ ಈ ಪಂಥಕ್ಕೆ ಕ್ರಿಸ್ತನ ಕಥೆಯೇ ಮಿತಿಯನ್ನು ಹೇರುತ್ತದೆ. ಈ ಮಿತಿಯಿಂದ ಹೊರಬರಲಿಕ್ಕೆ ಗಾಡ್ನ ಮೇಲೆ ಒತ್ತುಕೊಟ್ಟು ಥಿಯಾಲಜಿಯನ್ನು ಬೆಳೆಸಲಾಯಿತು. ಕ್ರಿಸ್ತನು ಕ್ರಿಸ್ತನಾಗಿದ್ದುದು ಈ ಗಾಡ್ ನಿಂದಾಗಿಯೇ. ಅವನೇ ಜಗತ್ತಿನ ಜನರಿಗೆಲ್ಲಾ ರಿಲಿಜನ್ನನ್ನು ನೀಡಿದ್ದಾನೆ ಎಂಬ ನಿರೂಪಣೆ ಬೆಳೆಯಿತು. ಆದರೆ ಈ ರೀತಿಯ ನಿರೂಪಣೆಗೆ ಮತ್ತೊಂದು ತೊಂದರೆ ಇದೆ. ಅದೇನೆಂದರೆ, ಕ್ರಿಸ್ತ ಹಾಗೂ ಚರ್ಚುಗಳು ಇಲ್ಲಿ ಗೌಣವಾಗುತ್ತವೆ. ಅಷ್ಟಾದರೂ ಅದು ರಿಲಿಜನ್ನಿನ ಪ್ರತಿಪಾದನೆ ಎಂಬುದು ವ್ಯಕ್ತವಾಗಿ ಕಾಣಿಸುವವರೆಗೆ ಅದಕ್ಕೆ ಪೇಗನ್ನರಿಂದ ಪ್ರತಿರೋಧವಿದ್ದೇ ಇರುತ್ತದೆ. ಆ ಪ್ರತಿರೋಧವನ್ನೂ ಕಳೆಯುವ ಪ್ರಯತ್ನದಲ್ಲಿ ಕ್ರಿಶ್ಚಿಯಾನಿಟಿಯ ನಿರ್ದಿಷ್ಟ ರೂಪವನ್ನು ಎಷ್ಟೆಷ್ಟು ಕೈಬಿಡಲಾಯಿತೋ ಅಷ್ಟಷ್ಟು ಅದು ಪೇಗನ್ನರಲ್ಲಿ ಸಾರ್ವತ್ರಿಕವಾಯಿತು. ಈ ಪ್ರಯತ್ನವೇ ಸೆಕ್ಯುಲರೀಕರಣ ಎಂಬುದು ನನ್ನ ಅಭಿಪ್ರಾಯ.

ಸೆಕ್ಯುಲರೀಕರಣವು ಕ್ರಿಶ್ಚಿಯಾನಿಟಿಯೊಳಗಿನ ಆಂತರಿಕ ಸುಧಾರಣೆಯಿಂದಾಗಿಯೇ ಒಡಮೂಡಿದ ಚಳವಳಿಯಾಗಿದೆ ಎಂಬ ಸಂಗತಿಯನ್ನು ಗಮನಿಸಿದಾಗ ಈ ಮೇಲಿನ ವಿಚಾರಗಳು ಸ್ಪಷ್ಟವಾಗುತ್ತವೆ. ಈ ಸುಧಾರಣೆಯು ಮೊದಲು 16ನೆಯ ಶತಮಾನದಲ್ಲಿ ಪ್ರೊಟೆಸ್ಟಾಂಟ್ ಚಳವಳಿಯ ರೂಪವನ್ನು ಪಡೆಯಿತು. ಪ್ರೊಟೆಸ್ಟಾಂಟರು ಕ್ಯಾಥೋಲಿಕ್ ಕ್ರೈಸ್ತರ ಸಂಸ್ಥೆಗಳನ್ನು ಹಾಗೂ ಆಚರಣೆಗಳನ್ನು ಧಿಃಕರಿಸಿದರು. ರಿಲಿಜನ್ನಿನ ಮೇಲೆ ಚರ್ಚಿನ ಏಕಸ್ವಾಮ್ಯತೆ, ಪುರೋಹಿತಶಾಹಿ, ಕಟ್ಟುಕಟ್ಟಳೆಗಳು, ಇತ್ಯಾದಿ ರಿಲಿಜನ್ನಿನ ಬಹಿರಂಗ ರೂಪಗಳನ್ನು ಅಪ್ರಸ್ತುತವನ್ನಾಗಿ ಮಾಡಿದರು. ಹಾಗೂ ಮಾನವ ಮತ್ತು ಗಾಡ್ ನ ಸಂಬಂಧವನ್ನು ಖಾಸಗೀ ನೆಲೆಯಲ್ಲಿ ನಿರೂಪಿಸಿ ಅದಕ್ಕೆ ಅಮೂರ್ತ ರೂಪವನ್ನು ಕೊಟ್ಟರು. ಈ ವಾದವನ್ನೇ ಮುಂದುವರಿಸಿದ ಕೆಲವು ತತ್ವಶಾಸ್ತ್ರಜ್ಞರು ಗಾಡ್ ಇಲ್ಲದಿದ್ದರೂ ರಿಲಿಜನ್ನು ಅನುಭವಕ್ಕೆ ಬರಲು ಸಾಧ್ಯ ಎಂಬ ಪ್ರತಿಪಾದನೆಯನ್ನು ಮಾಡಿದರು. ಅಂದರೆ ಗಾಡ್ನನ್ನು ನಿರಾಕರಿಸುವ ರಿಲಿಜನ್ನಿನ ಕಲ್ಪನೆಯೂ ಹುಟ್ಟಕೊಂಡಿತು. ರಿಲಿಜನ್ನಿನ ಕುರಿತ ಆಧುನಿಕ ಚಿತ್ರಣಗಳು ರೂಪುತಳೆದದ್ದು ಈ ಹಿನ್ನೆಲೆಯಲ್ಲೇ. ಅಂದರೆ ರಿಲಿಜನ್ನನ್ನು ಗಾಡ್ ನ ಕಲ್ಪನೆಯ ಸಹಾಯವಿಲ್ಲದೇ ವಿವರಿಸುವ ಅಧ್ಯಯನಗಳು ಅಲ್ಲಿಂದ ಮೊದಲಾದವು. ರಿಲಿಜನ್ನೆಂದರೆ ಪವಿತ್ರ ಹಾಗೂ ಅಪವಿತ್ರ ಪರಿಕಲ್ಪನೆಗಳಿಂದ ಹುಟ್ಟಿದ್ದು ಎಂಬುದಾಗಿ ಕೂಡ ಸಮಾಜಶಾಸ್ತ್ರಜ್ಞರು ವ್ಯಾಖ್ಯೆ ಮಾಡಿದರು. ಈ ಸೆಕ್ಯುಲರ್ ವ್ಯಾಖ್ಯೆಗಳ ಸಹಾಯದಿಂದ ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲೂ ರಿಲಿಜನ್ನಿನ ಅನುಭವ ಹಾಗೂ ಪವಿತ್ರ-ಅಪವಿತ್ರ ವಿಂಗಡಣೆಗಳನ್ನು ತೋರಿಸಿ ರಿಲಿಜನ್ನು ಸರ್ವವ್ಯಾಪಿಯಾದುದು, ಹಾಗೂ ಅದು ತಿಳಿಸುವ ಸತ್ಯಗಳೂ ಸಾರ್ವತ್ರಿಕವಾಗಿವೆ ಎಂಬುದಕ್ಕೆ ಆಧಾರವನ್ನು ತೋರಿಸಲಾಯಿತು.

ಸೆಕ್ಯುಲರೀಕರಣವು ಕ್ರಿಶ್ಚಿಯಾನಿಟಿಯ ನಿರ್ದಿಷ್ಟ ರೂಪವನ್ನು ಮರೆಮಾಚುವುದರಿಂದ ಅದನ್ನು ಸ್ವೀಕರಿಸುವವರಿಗೆ ಅವು ಮತಪ್ರತಿಪಾದನೆಗಳಾಗಿ ಕಾಣದೇ ಕೇವಲ ವೈಜ್ಞಾನಿಕ ಸತ್ಯಗಳಾಗಿ ಕಾಣಿಸುತ್ತವೆ. ಪಾಶ್ಚಾತ್ಯ ಸಮಾಜ ವಿಜ್ಞಾನದ ಸಿದ್ಧಾಂತಗಳ ಮೂಲಕ ನಾವು ಮಾನವ ಸಮಾಜದ ಕುರಿತ ಸಾಮಾನ್ಯ ಸತ್ಯಗಳೆಂದು ಯಾವುದನ್ನು ಸ್ವೀಕರಿಸಿದ್ದೇವೆಯೋ ಅವು ರಿಲಿಜನ್ನುಗಳಿಗೇ ವಿಶಿಷ್ಟವಾದವುಗಳು. ಆದರೆ ಅವು ಮನುಷ್ಯರ ಕುರಿತ ಸಾಮಾನ್ಯ ಸತ್ಯಗಳು ಎಂಬುದಾಗಿ ನಾವು ಭಾವಿಸುತ್ತೇವೆ. ಆ ಮೂಲಕ ಥಿಯಾಲಜಿಯ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತೇವೆ. ಆಗ ನಮಗೆ ನಮ್ಮ ಜೀವನ ಕ್ರಮವೇ ಅನ್ಯವಾಗಿ ಕಾಣಿಸಲು ಪ್ರಾರಂಭವಾಗುತ್ತದೆ. ನಾವು ಒಪ್ಪಿಕೊಂಡ ಸತ್ಯಗಳ ಎದುರು ನಮ್ಮ ಪಾರಂಪರಿಕ ಜೀವನಕ್ರಮವೇ ದೋಷಪೂರ್ಣವಾಗಿ ಕಾಣಿಸತೊಡಗುತ್ತದೆ. ಅದನ್ನು ಅಳಿಸುವಲ್ಲಿ ನಾವೇ ಪ್ರಯತ್ನಶೀಲರಾಗುತ್ತೇವೆ. ಈ ರೀತಿಯಲ್ಲಿ ರಿಲಿಜನ್ನಿನ ಪ್ರಸರಣ ಕಾರ್ಯದಲ್ಲಿ ನಾವೂ ಕೈಜೋಡಿಸುತ್ತೇವೆ. ಈ ರೀತಿಯ ಪ್ರಸರಣಕ್ಕೆ ಅಪರಿಮಿತ ಸಾಧ್ಯತೆಗಳಿವೆ.

ಭಾರತದಂತಹ ದೇಶಗಳಲ್ಲಿ ರಿಲಿಜನ್ನೇ ಇಲ್ಲದಿದ್ದಮೇಲೆ ಸೆಕ್ಯುಲರೀಕರಣದ ಪ್ರಕ್ರಿಯೆಗೆ ಅರ್ಥವಿಲ್ಲ. ನಮಗೆ ಸಾಧ್ಯವಿರುವುದು ಪಾಶ್ಚಾತ್ಯ ಸೆಕ್ಯುಲರೀಕರಣಕ್ಕೆ ಒಳಗಾಗುತ್ತ ನಮ್ಮನ್ನು ರೂಪಾಂತರಿಸಿಕೊಳ್ಳುವುದೊಂದೇ ಪ್ರಕ್ರಿಯೆ. ಇದರ ಅಂಗವಾಗಿ ರಿಲಿಜನ್ನಿನ ಲೋಕದೃಷ್ಟಿಗೆ ಅನ್ಯವಾದ ನಮ್ಮ ಸಂಪ್ರದಾಯಗಳು ನಮ್ಮ ಏಳ್ಗೆಗೆ ಬಹುಮುಖ್ಯವಾದ ತೊಡಕುಗಳಾಗಿ ಕಾಣಿಸುತ್ತವೆ. ಹಾಗಾಗಿ ಸಹಜವಾಗಿಯೇ ನಮ್ಮ ಸಮಾಜದ ಏಳ್ಗೆಯ ಕುರಿತು ಚಿಂತಿಸುವ ಎಲ್ಲರಿಗೂ ಸಂಪ್ರದಾಯವನ್ನು ಪ್ರಶ್ನಿಸುವುದು ಹಾಗೂ ಸಂದೇಹಿಸುವುದು ಮೊದಲನೆಯ ಹೆಜ್ಜೆಯಾಗಿದೆ. ಕೆಲವರು ಸಂಪ್ರದಾಯಗಳಲ್ಲಿ ಒಳ್ಳೆಯದನ್ನು ಗುರುತಿಸಬೇಕೆನ್ನುತ್ತ ತಾವೇನೋ ಬೇರೆಯದನ್ನು ಹೇಳುತ್ತಿದ್ದೇವೆಂದು ಭಾವಿಸುತ್ತಾರೆ. ಬದಲಾಗುವುದು ಸಂಪ್ರದಾಯಗಳಿಗೆ ಸಹಜ ಪ್ರಕ್ರಿಯೆಯಾಗಿರುವುದರಿಂದ ಈ ರೀತಿಯ ಧೋರಣೆಗಳು ಮೇಲ್ನೋಟಕ್ಕೆ ವಿವೇಕಯುತವಾಗಿ ಕಾಣಿಸುತ್ತವೆಯೇನೋ ಸರಿ. ಆದರೆ ಅಂಥವರಿಗೆ ನಮ್ಮ ಸಂಪ್ರದಾಯಗಳಲ್ಲಿನ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ಗುರುತಿಸುವ ಮಾನದಂಡಗಳನ್ನೂ ಸೆಕ್ಯುಲರೀಕರಣವೇ ನೀಡುತ್ತದೆ. ಆ ಮಾನದಂಡಗಳನ್ನೇ ಉಪಯೋಗಿಸುತ್ತಿರುವವರೆಗೆ ಇಂಥ ಹೇಳಿಕೆಗಳಿಂದ ಪ್ರಯೋಜನವಿಲ್ಲ. ಇಂಥ ಹೇಳಿಕೆಗಳು ನಮ್ಮ ಸಂಪ್ರದಾಯಗಳನ್ನು ರಿಲಿಜನ್ನಿನ ಲೋಕದೃಷ್ಟಿಗೆ ಅನುಗುಣವಾಗಿ ಒಡೆದು ಕಟ್ಟುವ ಕೆಲಸವನ್ನು ಮಾತ್ರವೇ ಸೂಚಿಸಬಲ್ಲವು. ಸೆಕ್ಯುಲರೀಕರಣದ ಪ್ರಕ್ರಿಯೆಯನ್ನು ರಿಲಿಜನ್ನಿಲ್ಲದ ಸಂಸ್ಕೃತಿಗಳು ನಿರ್ವಹಿಸುವ ವೈಖರಿಗೆ ಅದೊಂದು ಉದಾಹರಣೆ ಆಗಬಹುದಷ್ಟೆ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: