ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Cultural Studies, Culture, Religion, Secularism > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

Rajaram - Baluಕಂತು 30 :ಸಿದ್ಧಾಂತವನ್ನು ಕಟ್ಟುತ್ತಾ ಬದುಕನ್ನು ರೂಪಿಸಿಕೊಳ್ಳುವ ಕ್ರಮ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ 

ಪಾಶ್ಚಾತ್ಯರ ಜೀವನಕ್ರಮವನ್ನು ಭಾರತೀಯರ ಜೀವನ ಕ್ರಮಕ್ಕೆ ಹೋಲಿಸಿದಾಗ ಮೇಲ್ನೋಟಕ್ಕೇ ಸಾಮಾನ್ಯವಾಗಿ ಕಂಡುಬರುವ ಒಂದು ವಿಶಿಷ್ಟತೆಯಿದೆ. ಅದೆಂದರೆ ಈ ಪ್ರಪಂಚದ ಕುರಿತು ತಿಳಿದುಕೊಳ್ಳಲು ಅವರು ತೋರಿಸುವ ಕುತೂಹಲ. ಈ ಭೂಮಿ, ವಿಶ್ವ, ಸಸ್ಯ, ಪ್ರಾಣಿಗಳು, ನೈಸರ್ಗಿಕ ಆಗುಹೋಗುಗಳು, ವಿಭಿನ್ನ ಸಮಾಜಗಳು ಹಾಗೂ ಸಂಸ್ಕೃತಿಗಳು ಇವುಗಳ ಕುರಿತು ವ್ಯವಸ್ಥಿತವಾದ ಜ್ಞಾನವನ್ನು ಕಟ್ಟುವುದು ಅವರಿಗೆ ಬಹು ಮುಖ್ಯ ಎನ್ನಿಸುತ್ತದೆ. ಕಳೆದ ಮುನ್ನೂರು ವರ್ಷಗಳಿಗೂ ಹೆಚ್ಚಿನ ಕಾಲ ಅವರು ನಿರಂತರವಾಗಿ ಈ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಇವೆಲ್ಲವುಗಳ ಕುರಿತು ಸರಿಯಾದ ಪ್ರಶ್ನೆಗಳನ್ನು ಎತ್ತಿ ಉತ್ತರಿಸುವ ವಿಧಾನವನ್ನು ಪರಿಷ್ಕರಿಸುತ್ತ ಬೆಳೆಸಿದ್ದಾರೆ. ಈ ವಿಶ್ವದ ಕುರಿತು, ಭೂಮಿಯ ಕುರಿತು, ಮನುಷ್ಯ ಸಮಾಜದ ಕುರಿತು ಥಿಯರಿಗಳನ್ನು ಬೆಳೆಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಿಸರ್ಗ ಹಾಗೂ ಸಮಾಜ ವಿಜ್ಞಾನಗಳನ್ನು ಬೆಳೆಸಿಕೊಂಡು ಬಂದಿದ್ದಾರೆ.

ಸಾಮಾನ್ಯವಾಗಿ ಪಾಶ್ಚಾತ್ಯ ಸಂಶೋಧಕರನ್ನು ಕುರಿತು ನಾವೆಲ್ಲರೂ ಒಂದು ವಿಷಯವನ್ನು ಗಮನಿಸಿದ್ದೇವೆ. ಪ್ರಪಂಚದ ಯಾವ್ಯಾವುದೋ ಮೂಲೆಗೆ ಹೋಗಿ, ಏನೇನೋ ಅವಸ್ಥೆ ಪಟ್ಟುಕೊಂಡು ಅವರು ಒಂದಿಲ್ಲೊಂದು ವಿಷಯಗಳ ಕುರಿತು ಅಧ್ಯಯನದಲ್ಲಿ ನಿರತರಾಗಿರುತ್ತಾರೆ. ಇದೆಲ್ಲ ಏಕೆ? ನಿಸರ್ಗದ ಅಂತರ್ಗತ ನಿಯಮಗಳನ್ನು ತಿಳಿದುಕೊಳ್ಳಲಿಕ್ಕೆ. ಹಾಗಾದರೆ ಉಳಿದ ಸಂಸ್ಕೃತಿಯವರು ಇಂಥ ಸಂಶೋಧನೆಯನ್ನೇ ಮಾಡುತ್ತಿಲ್ಲವೆ? ಎಂಬ ಪ್ರಶ್ನೆ ಏಳಬಹುದು. ಆದರೆ ಉಳಿದವರು ಈ ಕ್ರಮವನ್ನು ಕಲಿತದ್ದು ಅವರಿಂದಲೇ ಎಂಬುದನ್ನು ಕಂಡುಕೊಳ್ಳಲಿಕ್ಕೆ ಮತ್ತೊಂದು ಸಂಶೋಧನೆಯ ಅಗತ್ಯವೇನೂ ಇಲ್ಲ. ಇಷ್ಟಾಗಿಯೂ ಇಂದಿಗೂ ಕೂಡ ಪಾಶ್ಚಾತ್ಯರಿಗೆ ಹೋಲಿಸಿದರೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದರಲ್ಲಿ ನಾವು ಸಾಕಷ್ಟು ಹಿಂದೆ ಬಿದ್ದಿದ್ದೇವೆ. ಕೆಲವು ಅಪವಾದಗಳನ್ನು ಬಿಟ್ಟರೆ, ಯಾವುದೇ ಕ್ಷೇತ್ರದಲ್ಲಾಗಲೀ ಅವರೇ ಸಿದ್ಧಾಂತವನ್ನು ರೂಪಿಸುವವರು. ನಾವು ಅವನ್ನು ಬಳಸುವವರು. ಇದು ಒಂದು ರೀತಿಯಲ್ಲಿ ಅವರ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಕೆಲಸವಾದರೂ ಕೂಡ ಅದು ಅಕ್ರಮ ಎಂದೆನಿಸುವುದಿಲ್ಲ. ಎಷ್ಟೋ ಬಾರಿ ಏಕೆ ಇವರಿಗೆ ಭೌತಿಕ ಪ್ರಪಂಚದ ಕುರಿತು ಇಷ್ಟೊಂದು ಕುತೂಹಲ? ನಮಗೇಕಿಲ್ಲ? ಎಂಬ ಪ್ರಶ್ನೆ ಕೂಡಾ ಏಳುತ್ತದೆ.

ಪಾಶ್ಚಾತ್ಯರು ಅನ್ಯ ಸಂಸ್ಕೃತಿಗಳ ನಡುವೆ ತಮ್ಮ ಶ್ರೇಷ್ಠತೆಯನ್ನು ಸ್ಥಾಪಿಸಿಕೊಳ್ಳಲಿಕ್ಕಾಗಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಲ್ಲ. ಅದು ಅವರ ಸಂಸ್ಕೃತಿಗೆ ಸಹಜವಾಗಿದೆ. ಆ ಸಂಸ್ಕೃತಿಯಲ್ಲೇ ಬೆಳೆದುಬಂದ ಒಬ್ಬ ವ್ಯಕ್ತಿಗೆ ಅದೊಂದು ತನ್ನ ಬದುಕಿಗೆ ಅತ್ಯಗತ್ಯವಾದ ಕ್ರಿಯೆ ಎನ್ನಿಸುತ್ತದೆ. ತೀರಾ ದೈನಂದಿನ ವ್ಯವಹಾರದಲ್ಲೂ ಇದು ಎದ್ದು ಕಾಣುತ್ತದೆ. ಅಲ್ಲಿನ ವ್ಯಕ್ತಿಯೊಬ್ಬನು ಪ್ರಯಾಣ ಮಾಡಬೇಕೆಂದರೆ ಮುಂಚಿತವಾಗಿಯೇ ಮಾರ್ಗದರ್ಶಿ ಪುಸ್ತಕಗಳು, ನಕಾಶೆಗಳು ಇತ್ಯಾದಿಗಳನ್ನು ಓದಿ ತಾನು ಭೇಟಿಮಾಡಲಿರುವ ಭೂಭಾಗ, ಭಾಷೆ, ಸಂಸ್ಕೃತಿ, ನಂಬಿಕೆ ಹಾಗೂ ಶಿಷ್ಟಾಚಾರಗಳ ಕುರಿತು ಒಂದು ಚಿತ್ರಣವನ್ನು ಪಡೆದುಕೊಳ್ಳಲು ಪರಿಶ್ರಮ ಪಡುವುದು ಸಹಜ. (ಇದಕ್ಕೆ ವಿರುದ್ಧವಾಗಿ ಭಾರತೀಯನೊಬ್ಬನಿಗೆ ತನ್ನ ಪ್ರಯಾಣಕ್ಕೆ ಇಂಥ ಮಾಹಿತಿಗಳು ಅಗತ್ಯ ಎನ್ನಿಸುವುದೇ ಇಲ್ಲ ಎಂಬುದನ್ನು ಗಮನಿಸಿ. ಅವನು ತನ್ನ ಬಂಧು ಮಿತ್ರರ ವಿಳಾಸವನ್ನು ಸಂಗ್ರಹಿಸುವುದರಲ್ಲಿ ನಿರತನಾಗುತ್ತಾನೆ). ಅದೇ ರೀತಿಯಲ್ಲಿ ಅಲ್ಲಿನ ಮುಂದಾಳುಗಳಿಗೆ ಸಮಾಜವನ್ನು ರೂಪಿಸಬೇಕಾದರೆ ಒಳ್ಳೆಯ ಸಮಾಜವೆಂದರೇನು? ಎಂಬ ಚಿತ್ರಣಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅಲ್ಲಿನ ವೈದ್ಯರಿಗೆ ರೋಗಕ್ಕೆ ಚಿಕಿತ್ಸೆಯನ್ನು ಕಂಡು ಹಿಡಿಯಬೇಕಾದರೆ ದೇಹ ಹಾಗೂ ನಿಸರ್ಗದ ಕುರಿತು ಥಿಯರಿಗಳನ್ನು ಕಟ್ಟಬೇಕಾಗುತ್ತದೆ. ಈ ಪ್ರಯತ್ನದಲ್ಲಿ ಅವರು ಸಿದ್ಧಾಂತಗಳ ರಾಶಿಯನ್ನೇ ಪೇರಿಸಿದ್ದಾರೆ. ಜೀವನದ ಪ್ರತೀ ಕ್ರಿಯೆಗಳ ಕುರಿತೂ ತಿಳುವಳಿಕೆಯನ್ನು ಶೋಧಿಸುವ ಕೆಲಸವು ಕೂಡ ಆ ಕ್ರಿಯೆಗಳ ಅನಿವಾರ್ಯ ಅಂಗವೇ ಆಗಿರುತ್ತದೆ. ಒಮ್ಮೆ ತಿಳಿದುಕೊಳ್ಳದಿದ್ದರೆ ಕ್ರಿಯೆಯ ಸಾಧ್ಯತೆಯೇ ಮುಚ್ಚಿಹೋಗಬಹುದು.

ಇದು ಪಾಶ್ಚಾತ್ಯ ಸಂಸ್ಕೃತಿಯು ರೂಪಿಸಿಕೊಂಡ ಜೀವನಕ್ರಮವಾಗಿದೆ. ಈ ಜೀವನ ಕ್ರಮದಲ್ಲಿ ಪ್ರಪಂಚದ ಕುರಿತು ಸತ್ಯವಾದ ಚಿತ್ರಣವನ್ನು ಕಟ್ಟಿಕೊಳ್ಳುವುದು ಅದರೊಳಗೆ ಬದುಕು ಸಾಗಿಸಲಿಕ್ಕೆ ಪೂರ್ವಭಾವಿಯಾದ ಅಗತ್ಯವಾಗಿದೆ. ಸತ್ಯವಾದ ಚಿತ್ರಣವನ್ನು ಆಧರಿಸಿ ರೂಪಿಸಿಕೊಂಡ ಕ್ರಿಯೆಯು ಮಾತ್ರವೇ ಸರಿಯಾದದ್ದು ಹಾಗೂ ಸಮರ್ಥನೀಯ. ಸುಳ್ಳನ್ನು ಆಧರಿಸಿದ ಕ್ರಿಯೆಗಳು ಮನುಷ್ಯನನ್ನು ಪತನದತ್ತ ಒಯ್ಯುತ್ತವೆ. ಪ್ರಪಂಚದ ಕುರಿತ ನಿಮ್ಮ ಜ್ಞಾನವು ಸರಿಯಾಗಿದ್ದರೆ ಮಾತ್ರವೇ ನಿಮ್ಮ ಕ್ರಿಯೆಗಳೂ ಸರಿಯಾಗಿರಲು ಸಾಧ್ಯ. ಅಂದರೆ ಪ್ರಪಂಚದ ಕುರಿತ ನಮ್ಮ ಚಿತ್ರಣವು ಸತ್ಯವೆಂಬ ನಂಬಿಕೆಯನ್ನಾಧರಿಸಿ ನಮ್ಮ ಕ್ರಿಯೆಗಳು ರೂಪುಗೊಳ್ಳಬೇಕು. ಇದನ್ನು ವೈಜ್ಞಾನಿಕ ಮನೋಭಾವನೆ ಎಂಬುದಾಗಿ ಕರೆಯಲಾಗುತ್ತದೆ. ಅಂಥ ಸತ್ಯವಾದ ಚಿತ್ರಣಗಳನ್ನು ಸಾಧಿಸುವುದೇ ವೈಜ್ಞಾನಿಕ ಸಂಶೋಧನೆಯ ಗುರಿ.

ಪಾಶ್ಚಾತ್ಯ ವಿಜ್ಞಾನವು ನಿರ್ದಿಷ್ಟವಾಗಿ ಯಾವ ಸತ್ಯದ ಕುರಿತು ಮಾತನಾಡುತ್ತಿದೆ? ಅದು ಪ್ರಪಂಚದ ವಿಭಿನ್ನ ವಿದ್ಯಮಾನಗಳ ಹಿಂದೆ ಅಗೋಚರವಾಗಿರುವ ನಿಯಮಗಳ ಹಾಗೂ ವ್ಯವಸ್ಥೆಯ ಕುರಿತು ನಿಜವಾದ ತಿಳುವಳಿಕೆಯ ರೂಪದಲ್ಲಿರುತ್ತದೆ. ಅಂದರೆ ನಮಗೆ ಕಣ್ಣಿಗೆ ಕಾಣಿಸುವ ಪ್ರಾಪಂಚಿಕ ವಿದ್ಯಮಾನಗಳ ಹಿಂದೆ ನಮಗೆ ಕಾಣಿಸದಿರುವ ವಿನ್ಯಾಸವೊಂದಿದೆ. ಈ ವಿನ್ಯಾಸವನ್ನು ತಿಳಿದಾಗ ಬಾಹ್ಯದಲ್ಲಿ ಪರಸ್ಪರ ಸಂಬಂಧವಿಲ್ಲದಂತೇ ಕಾಣುವ ವಿದ್ಯಮಾನಗಳ ಒಳ ಸಂಬಂಧವು ಸ್ಫುಟವಾಗುತ್ತದೆ. ಆ ವಿನ್ಯಾಸಗಳು ನಮಗೆ ಕಾಣಿಸುವುದಿಲ್ಲವಾದ್ದರಿಂದ ಅವುಗಳ ಕುರಿತು ಥಿಯರಿಯನ್ನು ರೂಪಿಸಿ ಒಳಸಂಬಂಧಗಳ ಚಿತ್ರಣವನ್ನು ಕಟ್ಟಿಕೊಡಬೇಕಾಗುತ್ತದೆ. ಈ ಒಳಸಂಬಂಧಗಳು ನಮಗೆ ಸ್ಪಷ್ಟವಾದಾಗ ವಿದ್ಯಮಾನಗಳ ಹಿಂದಿನ ಕಾರ್ಯಾ-ಕಾರಣ ಸಂಬಂಧಗಳೂ ಸ್ಪಷ್ಟವಾಗುತ್ತವೆ ಅಥವಾ ಅವು ನಮಗೆ ಅರ್ಥವಾಗುತ್ತವೆ. ಅಂದರೆ ಯಾವುದಕ್ಕೆ ಯಾವುದು ಕಾರಣವಾಗಿದೆ ಎಂಬುದು ವಿವರಣೆಗೆ ಸಿಗುತ್ತದೆ. ಅಂಥ ಚಿತ್ರಣವು ಪ್ರಾಪಂಚಿಕ ವಿದ್ಯಾಮಾನಗಳು ಏಕೆ ಹಾಗಿವೆ? ಅಥವಾ ಏಕೆ ಹಾಗೆ ಜರುಗುತ್ತವೆ? ಎಂಬುದನ್ನು ವಿವರಿಸುತ್ತದೆ.

ಅಂದರೆ, ಪಾಶ್ಚಾತ್ಯ ವಿಜ್ಞಾನವು ಪಾಶ್ಚಾತ್ಯ ಬದುಕಿನ ಕ್ರಮವನ್ನು ನಿದರ್ಶಿಸುತ್ತದೆ ಎಂಬುದನ್ನು ಗುರುತಿಸಿದಾಗ ಅದರಲ್ಲಿ ಮುಖ್ಯವಾದ ಮೂರು ಗುಣಗಳು ವಿಶಿಷ್ಟವಾಗಿ ಕಾಣಿಸುತ್ತವೆ: 1. ಈ ಪ್ರಪಂಚದಲ್ಲಿ ಕ್ರಿಯೆಗಳನ್ನು ಜರುಗಿಸಲು ಸತ್ಯವಾದ ಚಿತ್ರಣಗಳು ಬೇಕು. 2. ಈ ಪ್ರಪಂಚದ ವಿದ್ಯಮಾನಗಳ ಹಿಂದೆ ಅಗೋಚರವಾದ ಹಾಗೂ ವ್ಯವಸ್ಥಿತವಾದ ರಚನೆಯೊಂದಿದೆ, ಸತ್ಯವಾದ ಚಿತ್ರಣಗಳು ಆ ರಚನೆಯನ್ನು ಸ್ಫುಟಗೊಳಿಸಬೇಕು. 3. ಈ ರಚನೆಯನ್ನು ತಿಳಿದಾಗ ಈ ಪ್ರಪಂಚದ ವಿದ್ಯಮಾನಗಳ ಪರಸ್ಪರ ಕಾರ್ಯಾ-ಕಾರಣ ಸಂಬಂಧವನ್ನು ವಿವರಿಸಬಹುದು. ಈ ಮೂರು ಅಂಶಗಳಿಂದ ಪಾಶ್ಚಾತ್ಯ ವಿಜ್ಞಾನವು ತನ್ನ ನಿರ್ದಿಷ್ಟತೆಯನ್ನು ಪಡೆಯುತ್ತದೆ.

ಈ ಮೂರೂ ಅಂಶಗಳೂ ಕ್ರಿಶ್ಚಿಯಾನಿಟಿಯಿಂದ ಪಾಶ್ಚಾತ್ಯ ಸಂಸ್ಕೃತಿಗೆ ಬಳುವಳಿಯಾಗಿ ಬಂದವುಗಳು ಹಾಗೂ ಪಾಶ್ಚಾತ್ಯ ವಿಜ್ಞಾನವು ಅದರದೊಂದು ಶಿಶು. ಈ ವಿಶ್ವವು ಒಂದು ಅಗೋಚರವಾದ ವ್ಯವಸ್ಥೆಗೆ ಬದ್ಧವಾಗಿದೆ, ಹಾಗೂ ಅದನ್ನು ವ್ಯವಸ್ಥಿತಗೊಳಿಸಿದವನೇ ಗಾಡ್. ಈ ವ್ಯವಸ್ಥೆಯು ಅವನ ಉದ್ದೇಶಕ್ಕನುಗುಣವಾಗಿ ಯೋಜಿತವಾಗಿದೆ. ಇದು ಕ್ರಿಶ್ಚಿಯಾನಿಟಿಯು ತನ್ನ ಅನುಯಾಯಿಗಳಿಗೆ ನೀಡುವ ದೃಷ್ಟಿ. ಈ ದೃಷ್ಟಿಯು ನಾವು ಪ್ರಪಂಚದಲ್ಲಿ ಪರಸ್ಪರ ಸಂಬಂಧವಿಲ್ಲದಂತೇ ತೋರುವ ಏನೇನನ್ನು ನೋಡುತ್ತೇವೆಯೋ ಅವುಗಳ ಹಿಂದೆ ಒಂದು ಅಗೋಚರ ವ್ಯವಸ್ಥೆಯಿದೆ ಎಂಬುದನ್ನು ಭಾವಿಸುವಂತೇ ಮಾಡುತ್ತದೆ. ಅಂದರೆ ಈ ವಿಶ್ವವು ಗಾಡ್ನ ಕ್ರಿಯೆ ಹಾಗೂ ಅದರ ಹಿಂದೆ ಒಂದು ಉದ್ದೇಶವಿದೆ. ಇದನ್ನು ತಿಳಿಯುವುದು ಇದರೊಳಗೆ ಜೀವಿಸುವುದಕ್ಕೆ ಒಂದು ಪೂರ್ವಭಾವೀ ಅಗತ್ಯ. ಈ ದೃಷ್ಟಿಯಿಲ್ಲದವನ ಜೀವನವು ಆತಂಕ ಹಾಗೂ ಭಯದಲ್ಲಿ ಸಿಲುಕುತ್ತದೆ ಎಂಬುದು ಕ್ರಿಶ್ಚಿಯಾನಿಟಿಯ ಪ್ರತಿಪಾದನೆ. ಅಂಥ ಜೀವನವು ಬರ್ಬರ ಅವಸ್ಥೆಯಾಗಿದ್ದು, ಮೌಢ್ಯದ ಪರಮಾವಧಿಯಾಗಿದೆ. ಅಂದರೆ ವಿಶ್ವದ ಕುರಿತು ರಿಲಿಜನ್ನು ನೀಡುವ ತಿಳುವಳಿಕೆಯನ್ನು ಮುಂಚಿತವಾಗಿ ತಿಳಿದುಕೊಂಡು ಅದನ್ನು ನಂಬಿ ನಡೆಸುವ ಕ್ರಿಯೆಯೇ ಸರಿಯಾದ ಕ್ರಿಯೆ ಎಂಬುದಾಗಿ ಅದು ಪ್ರತಿಪಾದಿಸುತ್ತದೆ.

ಕ್ರಿಶ್ಚಿಯಾನಿಟಿಯು ಪಾಶ್ಚಾತ್ಯ ಸಂಸ್ಕೃತಿಯನ್ನು ರೂಪಿಸಿದ ಶಕ್ತಿಯಾಗಿದೆ. ಸೆಕ್ಯುಲರೀಕರಣದ ಮೂಲಕ ಈ ಮೇಲಿನ ಜೀವನಕ್ರಮವು ಪಾಶ್ಚಾತ್ಯ ಜೀವನದಲ್ಲಿ ಸರ್ವವ್ಯಾಪಿಯಾಯಿತು. ಹಾಗೂ ಪ್ರಪಂಚದಲ್ಲಿ ಬದುಕುವುದನ್ನು ಕಲಿಯುವ ವಿಧಾನವನ್ನೂ ಅದು ರೂಪಿಸಿತು. ಅಂದರೆ ಮೊದಲು ಪ್ರಪಂಚದ ಅಂತರ್ಗತ ವಿನ್ಯಾಸದ ಕುರಿತ ಸತ್ಯವನ್ನು ತಿಳಿದುಕೊಳ್ಳಬೇಕು, ನಂತರ ಅದಕ್ಕೆ ಅನುವುಮಾಡಿಕೊಡಬಲ್ಲ ಕ್ರಿಯೆಯನ್ನು ನಡೆಸಬೇಕು. ಅನ್ಯ ಸಂಸ್ಕೃತಿಗಳು ಕೂಡ ಈ ರೀತಿಯ ತಿಳುವಳಿಕೆಯನ್ನೇ ಪ್ರಧಾನವಾಗಿ ಇಟ್ಟುಕೊಂಡು ವ್ಯವಹರಿಸುತ್ತವೆ ಎಂಬುದಾಗಿ ಪಾಶ್ಚಾತ್ಯರು ಭಾವಿಸುತ್ತಾರೆ. ಹಾಗಾಗಿ ಇತರರು ಕೂಡ ಈ ವಿಶ್ವದ ವಿನ್ಯಾಸದ ಕುರಿತು ಯಾವುದೋ ಒಂದು ತಿಳುವಳಿಕೆಯನ್ನಿಟ್ಟುಕೊಂಡು ಕ್ರಿಯೆಗಳನ್ನು ಜರುಗಿಸುತ್ತಿದ್ದಾರೆ ಅಂದುಕೊಂಡು ಅದಕ್ಕಾಗಿ ಹುಡುಕಾಡುತ್ತಾರೆ. ಅವರ ಸಮಾಜಗಳನ್ನು ಅಗೋಚರ ವ್ಯವಸ್ಥೆಯೊಂದು ಹಿಡಿದಿಟ್ಟುಕೊಂಡಿದೆ ಎಂಬುದಾಗಿ ಕಲ್ಪಿಸಿಕೊಂಡು ಅವುಗಳ ಆಚರಣೆಗಳಿಗೆ ಅರ್ಥ ಹಚ್ಚಲು ತೊಡಗುತ್ತಾರೆ. (ಭಾರತದಂತಹ ಸಂಸ್ಕೃತಿಯಲ್ಲಿ ಕ್ರಿಯೆಯನ್ನು ಜರುಗಿಸುತ್ತಲೇ ಜೀವನವು ರೂಪುಗೊಳ್ಳುತ್ತದೆ ಎಂಬುದು ಅವರ ಗಮನಕ್ಕೆ ಬರುವುದಿಲ್ಲ.) ಈ ರೀತಿಯಲ್ಲಿ ಅಂತರ್ಗತ ರಚನೆಯನ್ನು ಹಾಗೂ ಅದರಲ್ಲಿನ ಕಾರ್ಯಾ-ಕಾರಣ ಸಂಬಂಧವನ್ನು ತಿಳಿದುಕೊಳ್ಳುವ ಸೈದ್ಧಾಂತಿಕ ಜ್ಞಾನವು ಅವರ ಕಲಿಕೆಯಲ್ಲಿ ಪ್ರಾಧಾನ್ಯತೆ ಪಡೆದು ಕ್ರಿಯೆಯು ಅದಕ್ಕೆ ಆಧೀನವಾಗುತ್ತದೆ.

ಇದನ್ನು ನಾನು ಕಲಿಕೆಯ ಸಂಯೋಜನೆ ಎಂಬುದಾಗಿ ಕರೆಯುತ್ತೇನೆ. ಯಾವುದೇ ಸಂಸ್ಕೃತಿಯೂ ಕೂಡ ಉಳಿದು ಬರುವುದು ಕಲಿಕೆಯ ಸಂಯೋಜನೆಯಿಂದಲೇ. ಪ್ರತೀ ವ್ಯಕ್ತಿಯೂ ತಾನು ಹೇಗೆ ಬದುಕಬೇಕೆಂಬುದನ್ನು ಜೀವನದುದ್ದಕ್ಕೂ ಕಲಿಯುತ್ತಲೇ ಇರುತ್ತಾನೆ. ಈ ಕಲಿಕೆಯನ್ನು ಯಾವ ಕ್ರಮದಲ್ಲಿ ನಡೆಸಬೇಕೆಂಬುದನ್ನು ಪ್ರತೀ ಸಂಸ್ಕೃತಿಯೂ ತನ್ನದೇ ಆದ ಕ್ರಮದಲ್ಲಿ ತನ್ನ ಸದಸ್ಯರಿಗೆ ಕಲಿಸುವ ಉಪಾಯಗಳನ್ನು ಸಂಯೋಜಿಸಿರುತ್ತದೆ. ಉದಾಹರಣೆಗೆ ನಾವು ಮಾಡುವ ಕ್ರಿಯೆಗಳನ್ನು ನಾವು ಹೇಗೆ ಹೇಗೆ ಕಲಿಯಲು ತೊಡಗಬಹುದು? ಹಿರಿಯರನ್ನು ಅನುಕರಿಸಬಹುದು, ಅವುಗಳ ಕುರಿತು ಓದಿ ತಿಳಿದುಕೊಳ್ಳಬಹುದು, ಸ್ವತಃ ಪ್ರಯೋಗ ಮಾಡಬಹುದು, ಇತ್ಯಾದಿ ಉಪಾಯಗಳಿವೆ. ಇವುಗಳಲ್ಲಿ ಯಾವುದೋ ಒಂದಕ್ಕೆ ಪ್ರಾಧಾನ್ಯತೆಯನ್ನು ನೀಡಿ ಉಳಿದವನ್ನು ಅದಕ್ಕೆ ಅನುಗುಣವಾಗಿ ಜೋಡಿಸಿಕೊಂಡು ಕಲಿಸುವ ಉಪಾಯವನ್ನು ಸಂಸ್ಕೃತಿಗಳು ಕಂಡುಕೊಳ್ಳುತ್ತವೆ. ನನ್ನ ಪ್ರಕಾರ ಒಂದು ನಿರ್ದಿಷ್ಟ ಸಂಸ್ಕೃತಿಯು ಈ ಕಲಿಕೆಯನ್ನು ಹೇಗೆ ಸಂಯೋಜಿಸಿಕೊಂಡಿದೆ, ಯಾವುದಕ್ಕೆ ಪ್ರಾಧಾನ್ಯತೆ ನೀಡುತ್ತದೆ, ಯಾವುದನ್ನು ಗೌಣ ಮಾಡುತ್ತದೆ ಎಂಬುದರ ಮೇಲೆ ಅದು ಮತ್ತೊಂದು ಸಂಸ್ಕೃತಿಯಿಂದ ಭಿನ್ನವಾಗುತ್ತದೆ. ಆಯಾ ಸಂಸ್ಕೃತಿಗೆ ಸೇರಿದ ಪ್ರತೀ ಹಿಂದಿನ ತಲೆಮಾರು ಕೂಡ ಈ ಸಂಯೋಜನೆಯನ್ನು ಆಧರಿಸಿ ತನ್ನ ಮುಂದಿನ ತಲೆಮಾರಿಗೆ ಬದುಕನ್ನು ಸಾಗಿಸುವ ಕ್ರಮವನ್ನು ಕಲಿಸುತ್ತದೆ. ಈ ಕ್ರಮವು ಆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಫಲಿಸಿ ಒಂದು ಸಂಸ್ಕೃತಿಯನ್ನು ನಿರ್ಮಿಸುತ್ತವೆ ಹಾಗೂ ಅದು ತಲೆಮಾರುಗಳನ್ನು ದಾಟಿ ಬರುತ್ತದೆ.

ಪಾಶ್ಚಾತ್ಯ ಸಂಸ್ಕೃತಿಯು ಯೋಜಿಸಿಕೊಂಡಿರುವ ಕಲಿಕೆಯ ಸಂಯೋಜನೆಯಲ್ಲಿ ಭೌತಿಕ ಪ್ರಪಂಚದ ಕುರಿತು ತಿಳಿದುಕೊಳ್ಳುವುದಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ತಿಳಿದುಕೊಳ್ಳುವುದು ಅತ್ಯಂತ ಮಹತ್ವದ್ದು. ಏಕೆಂದರೆ ನಾವು ಬದುಕುತ್ತಿರುವ ಜಗತ್ತು ಯಾವರೀತಿಯದು ಎಂಬುದನ್ನು ತಿಳಿದುಕೊಳ್ಳದೇ ಮಾಡಿದ ಕ್ರಿಯೆಯು ಈ ಸಂಸ್ಕೃತಿಯ ಪ್ರಕಾರ ಅರ್ಥಹೀನ. ಅಂದರೆ ನಾವು ಬದುಕಿರುವ ಜಗತ್ತಿನಲ್ಲಿ ನಮ್ಮನ್ನೂ ಒಳಗೊಂಡು ಎಲ್ಲವೂ ಆಂತರಿಕವಾಗಿ ವ್ಯವಸ್ಥಿತವಾಗಿವೆ ಹಾಗೂ ಅದರ ಹಿಂದೆ ಒಂದು ಉದ್ದೇಶವಿದೆ. ಅದನ್ನು ಈಡೇರಿಸುವುದೇ ಕ್ರಿಯೆಯ ಸಾಫಲ್ಯ ಅಂತಾದಾಗ ತಿಳಿದುಕೊಳ್ಳದೇ ಕ್ರಿಯೆಯನ್ನು ಜರುಗಿಸುವುದರಲ್ಲಿ ಏನು ಅರ್ಥವಿದೆ? ಅದನ್ನು ತಿಳಿದುಕೊಂಡಾಗ ನಾವು ನಿಜವಾಗಿಯೂ ಏನನ್ನು ಮಾಡುವುದು ಸೂಕ್ತ ಎನ್ನುವುದು ಗೊತ್ತಾಗುತ್ತದೆ. ಈ ಧೋರಣೆಯು ಪಾಶ್ಚಾತ್ಯ ಕಲಿಕೆಯ ಸಂಯೋಜನೆಯಲ್ಲಿ ಸೈದ್ಧಾಂತಿಕ ಜ್ಞಾನಕ್ಕೆ ಆದ್ಯತೆಯನ್ನು ಕಲ್ಪಿಸುತ್ತದೆ.

ವ್ಯಕ್ತವಾಗಿ ತೋರದಿರುವ ವ್ಯವಸ್ಥೆಯ ಅಥವ ರಚನೆಗಳ ನಿಜಸ್ವರೂಪವನ್ನು ಕಂಡುಕೊಳ್ಳುವುದು ಹೇಗೆ? ಈ ಕುರಿತು ಕ್ರಿಶ್ಚಿಯಾನಿಟಿಯು ಒಂದು ಚಿತ್ರಣವನ್ನು ಕಟ್ಟಿಕೊಡುತ್ತದೆ. ಅದರ ಯತಾರ್ಥತೆಯನ್ನು ವಿಜ್ಞಾನವು ಪ್ರಶ್ನಿಸುತ್ತದೆ. ಪಾಶ್ಚಾತ್ಯ ವೈಜ್ಞಾನಿಕ ಸಿದ್ಧಾಂತಗಳು ಹಾಗೂ ವಿಧಾನಗಳು ನಿರ್ದಿಷ್ಟವಾಗಿ ಈ ಸವಾಲನ್ನು ಎದುರಿಸುತ್ತ ರೂಪುಗೊಂಡಿವೆ. ಹಾಗೂ ಅದು ಸೆಕ್ಯುಲರೀಕರಣದ ಒಂದು ಪ್ರಕ್ರಿಯೆಯೂ ಆಗಿದೆ. ಈಗಾಗಲೇ ನಾವು ನೋಡಿದಂತೆ ಸೆಕ್ಯುಲರೀಕರಣವು ಕೂಡ ಕ್ರಿಶ್ಚಿಯಾನಿಟಿಯ ಪ್ರಸರಣದ ಒಂದು ವಿಧಾನವಾಗಿದೆ. ಅಂದರೆ ಈ ವ್ಯಕ್ತ ಪ್ರಪಂಚದ ಹಿಂದೆ ಒಂದು ಕಾರ್ಯ-ಕಾರಣಗಳ ಅದೃಶ್ಯ ವ್ಯವಸ್ಥೆಯಿದೆ ಎಂಬುದನ್ನು ಭಾವಿಸಿಕೊಂಡು ಅದರ ಸತ್ಯ ಚಿತ್ರಣಕ್ಕಾಗಿ ಹೆಣಗುವ ಮಟ್ಟಿಗೆ ಪಾಶ್ಚಾತ್ಯ ವಿಜ್ಞಾನಕ್ಕೆ ಕ್ರಿಶ್ಚಿಯಾನಿಟಿಯೇ ಮೂಲಮಾದರಿಯಾಗಿದೆ. ಕ್ರಿಶ್ಚಿಯಾನಿಟಿಯ ಪ್ರಸರಣದ ಅಂಗವಾಗಿ ಅದರ ಮಾದರಿಯಲ್ಲೇ ವೈಜ್ಞಾನಿಕ ಮನೋಭಾವವೂ ಪಾಶ್ಚಾತ್ಯ ಸಮಾಜದಲ್ಲಿ ಆಳವಾಗಿ ಇಳಿಯಿತು ಹಾಗೂ ಸಾರ್ವತ್ರಿಕವಾಯಿತು.

ಯುರೋಪಿನಲ್ಲಿ ಪ್ರಾಚೀನ ಕಾಲದಲ್ಲೂ ವೈಜ್ಞಾನಿಕ ಥಿಯರಿಗಳು, ಸತ್ಯದ ಕುರಿತ ಹುಡುಕಾಟಗಳು ಇದ್ದರೂ ಕೂಡ ಅದು ಈ ಮೇಲಿನ ರೂಪವನ್ನು ಪಡೆದದ್ದು ಆಧುನಿಕ ಯುಗದಲ್ಲೇ. ಪ್ರಾಚೀನರಲ್ಲಿ ವಿಶ್ವದ ಕುರಿತು ಅಂಥ ತಿಳುವಳಿಕೆಯನ್ನು ಶೋಧಿಸುವುದು ಒಂದು ಸಣ್ಣ ಗುಂಪಿನ ಕುತೂಹಲವಾಗಿತ್ತು. ಆದರೆ ಕ್ರಿಶ್ಚಿಯಾನಿಟಿಯು ಗ್ರೀಕರ ಸತ್ಯಶೋಧನೆಯನ್ನು ಈ ಮೇಲೆ ತಿಳಿಸಿದಂತೇ ರಿಲಿಜನ್ನಿನ ಪರಿಭಾಷೆಯಲ್ಲಿ ನಿರೂಪಿಸಿ ಅದನ್ನೊಂದು ಕಲಿಕೆಯ ವಿಧಾನವನ್ನಾಗಿ ರೂಪಿಸಿತು. ಕ್ರಿಶ್ಚಿಯಾನಿಟಿಯ ಸೆಕ್ಯುಲರೀಕರಣದ ಮೂಲಕ ಇಂಥ ಕಲಿಕೆಯೇ ಪಾಶ್ಚಾತ್ಯ ಸಂಸ್ಕೃತಿಯ ಸಾಮಾನ್ಯ ಲಕ್ಷಣವೂ ಆಗಿ ಮಾರ್ಪಟ್ಟಿತು.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: