ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Corruption, Culture > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

Rajaram - Baluಕಂತು 32 :ಭ್ರಷ್ಟಾಚಾರ ಎಂಬ ಪರಿಕಲ್ಪನೆ ಮತ್ತು ಭಾರತೀಯರು
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಭಾರತದಲ್ಲಿ ಭ್ರಷ್ಟಾಚಾರವು ತುಂಬಿ ತುಳುಕುತ್ತಿದೆ ಎಂಬುದು ಪ್ರತಿಯೊಬ್ಬರ ದೂರು. ಆ ಕುರಿತು ಕಳೆದ ಕೆಲವು ವರ್ಷಗಳಿಂದ ವಿಶೇಷವಾದ ಹೋರಾಟಗಳು ಕೂಡ ನಡೆಯುತ್ತಿವೆ. ಈ ವಿಷಯವು ನಮ್ಮ ರಾಜಕೀಯ ವಿರೋಧ ಪಕ್ಷಗಳಿಗೆ ಆಳುವ ಪಕ್ಷದ ಮೇಲೆ ದಾಳಿ ಮಾಡುವ ಪ್ರಮುಖ ಅಸ್ತ್ರವಾಗಿದೆ. ಮತ್ತೊಂದೆಡೆ ಈ ಆಳುವವರನ್ನೆಲ್ಲ ಭ್ರಷ್ಟಾಚಾರಿಗಳೆಂಬುದಾಗಿ ಪ್ರಜೆಗಳು ಟೀಕಿಸುತ್ತಾರೆ. ಯಾವುದೇ ಸರ್ಕಾರಿ ಕಛೇರಿ ಹಾಗೂ ವಿಭಾಗದಲ್ಲೂ ಕೂಡ ಹಣ ಕೊಡದೇ ಕೆಲಸವಾಗುವುದಿಲ್ಲ ಎಂಬುದನ್ನು ಎಲ್ಲರೂ ಬಲ್ಲರು. ಉಳಿದ ವಿಭಾಗಗಳ ಮಾತಿರಲಿ, ಶಿಕ್ಷಣ ಸಂಸ್ಥೆಗಳು, ನ್ಯಾಯಾಲಯ, ಇತ್ಯಾದಿಗಳೂ ಈ ರೋಗಕ್ಕೆ ತುತ್ತಾಗಿವೆ ಎಂಬುದು ಮತ್ತೂ ಆತಂಕಕಾರಿಯಾಗಿದೆ. ಅದರ ಜೊತೆಗೇ ಇಲ್ಲಿನ ಜನರೂ, ಮನೆ, ದೇವಾಲಯ, ಮಠ, ಸಂಸ್ಥೆ ಎಂಬ ಭೇದವಿಲ್ಲದೇ ಭ್ರಷ್ಟರಾಗಿ ಹೋಗಿದ್ದಾರೆ ಎಂಬ ಗೋಳಾಟವನ್ನೂ ನಾವು ಸಾಕಷ್ಟು ಕೇಳಿದ್ದೇವೆ. ಅಂತರ್ರಾಷ್ಟ್ರೀಯ ಮಟ್ಟದಿಂದ ಹಿಡಿದು ಪ್ರಾದೇಶಿಕ ಮಟ್ಟದ ವರೆಗೂ ಸಾಮಾಜಿಕ ಚಿಂತಕರಲ್ಲಿ ಹಾಗೂ ರಾಜನೀತಿಜ್ಞರಲ್ಲಿ ಈ ಕುರಿತು ಭಿನ್ನಾಭಿಪ್ರಾಯವಿಲ್ಲ. ಇದರ ಜೊತೆಗೇ ಭಾರತದೇಶವು ಭ್ರಷ್ಟಾಚಾರದಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲೊಂದು ಎಂಬುದು ಕೂಡಾ ಒಂದು ಸಾಮಾನ್ಯ ಜ್ಞಾನವಾಗಿದೆ. ಅಂತರ್ರಾಷ್ಟ್ರೀಯ ಮಾಧ್ಯಮಗಳು ಬಿಂಬಿಸುವ ಪ್ರಕಾರ ಭಾರತದಲ್ಲಿ ಪ್ರತೀ ಇಬ್ಬರಲ್ಲಿ ಒಬ್ಬನು ಭ್ರಷ್ಟಾಚಾರದಲ್ಲಿ ತೊಡಗಿರಲೇಬೇಕು.

ಭ್ರಷ್ಟಾಚಾರವೆಂಬುದು ಅನೈತಿಕವಾದುದು, ಕೆಟ್ಟದ್ದು, ನಿರ್ಮೂಲನಗೊಳ್ಳತಕ್ಕದ್ದು ಎನ್ನಲಾಗುತ್ತದೆ. ಇಂದು ಯಾರೂ ಕೂಡ ಇದಕ್ಕೆ ವ್ಯತಿರಿಕ್ತವಾಗಿ ಅಭಿಪ್ರಾಯಪಟ್ಟು ನೀತಿವಂತನೆಂದು ಕರೆಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಹಾಗಾದರೆ ಇಂಥ ಪಿಡುಗಾಗಿರುವ ಭ್ರಷ್ಟಾಚಾರವನ್ನು ಭಾರತೀಯರು ನಿರ್ದಿಷ್ಟವಾಗಿ ಹೇಗೆ ಅರ್ಥ ಮಾಡಿಕೊಂಡಿದ್ದಾರೆ? ನಾವು ಅದನ್ನು ಲಂಚ ತೆಗೆದುಕೊಳ್ಳುವುದು ಎನ್ನುತ್ತೇವೆ, ಅಕ್ರಮ ಆಸ್ತಿ, ಸಂಪತ್ತು ಗಳಿಸುವುದು ಎನ್ನುತ್ತೇವೆ. ಭ್ರಷ್ಟಾಚಾರದ ವಿರೋಧೀ ಕಾನೂನುಗಳನ್ನು ಮಾಡಬೇಕೆನ್ನುವವರೂ ಕೂಡ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡುವವರನ್ನಷ್ಟೇ ಉದ್ದೇಶವಾಗಿಟ್ಟುಕೊಂಡಿದ್ದಾರೆ. ಅಂಥವರ ಮನೆಗಳನ್ನು ರೇಡ್ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಿ, ಸ್ವಿಸ್ ಬ್ಯಾಂಕಿನಲ್ಲಿರುವ ಹಣವನ್ನು ವಾಪಸು ದೇಶಕ್ಕೆ ತನ್ನಿ, ಇತ್ಯಾದಿ ಆಗ್ರಹಗಳನ್ನೇ ಮಾಡುತ್ತಿದ್ದಾರೆ. ಅಂದರೆ ಭ್ರಷ್ಟಾಚಾರವೆಂದರೆ ಅಕ್ರಮ ಸಂಪಾದನೆ ಎಂದಂತಾಯಿತು. ಇದರಾಚೆಗೆ ಅದನ್ನು ವಿರೋಧಿಸುವ ಭಾರತೀಯರಿಗೂ ಕೂಡ ಅದು ಮತ್ತೇನಾದರೂ ಅರ್ಥ ನೀಡುತ್ತದೆ ಎಂಬುದಕ್ಕೆ ನಮಗೆ ಆಧಾರಗಳಿಲ್ಲ.

ಅಕ್ರಮ ಸಂಪಾದನೆಯೇ ಭ್ರಷ್ಟಾಚಾರವೆಂಬುದಾಗಿ ಇಟ್ಟುಕೊಂಡರೆ ಒಂದು ಸಮಸ್ಯೆ ಏಳುತ್ತದೆ. ಅದನ್ನು ನಮ್ಮ ಜನರು ಅನೈತಿಕ ಎಂಬುದಾಗಿ ಭಾವಿಸುತ್ತಾರೆಯೆ? ಜನರೇ ತಮ್ಮ ಅಕ್ರಮ ಕೆಲಸಗಳನ್ನು ಮಾಡಿಕೊಳ್ಳಲು, ಅಥವಾ ವಿಳಂಬವನ್ನು ತಪ್ಪಿಸಲು, ಅಥವಾ ಸ್ವಖುಷಿಯಿಂದ ಭಕ್ಷೀಸಿನ ರೂಪದಲ್ಲಿ ಅಧಿಕಾರಿಗಳಿಗೆ ಲಂಚ ನೀಡುವುದೂ ಸಾಮಾನ್ಯವಾಗಿದೆ. ಅವರಿಗೆ ತಮ್ಮ ಕೆಲಸವನ್ನು ಮಾಡಲು ಇನ್ನು ಬೇರೆ ಕ್ರಮಗಳೇ ಇಲ್ಲ, ಇರುವುದು ಇದೊಂದೇ ಕ್ರಮ. ಎಷ್ಟೇ ಕಾನೂನುಗಳನ್ನು ಮಾಡಲಿ, ಅಂಥ ಕಾನೂನಿಗೆ ಸಿಲುಕದಂತೇ ಈ ವ್ಯವಹಾರ ನಡೆಯುತ್ತದೆಯೆಂದರೆ ಕೊಡುವವರೂ ಸಾಮೀಲಾಗಿರಬೇಕು ತಾನೆ? ಅವರೇನು ಬಹಳ ದೌರ್ಜನ್ಯಕ್ಕೆ ಒಳಗಾಗಿ, ತಪ್ಪಿತಸ್ಥ ಭಾವನೆಯಿಂದ ಈ ಕೆಲಸ ಮಾಡುತ್ತಾರೆ ಎಂದು ನಿರೀಕ್ಷಿಸಿದರೆ ಅದೂ ಭಾರತದ ಸಂದರ್ಭದಲ್ಲಿ ಹುಸಿಯಾಗುತ್ತದೆ. ಜನರು ನಿಡಿದಷ್ಟನ್ನೇ ಸ್ವೀಕರಿಸುವ ವ್ರತವನ್ನು ಪಾಲಿಸುತ್ತಲೇ ಕೋಟಿಗಟ್ಟಲೆ ಸಂಪಾದಿಸಿದ ಅನೇಕ ಅಧಿಕಾರಿಗಳದಿದ್ದಾರೆ.

ಭ್ರಷ್ಟಾಚಾರದ ವಿರುದ್ಧದ ಹೋರಾಟ, ಟೀಕೆ, ಆತಂಕಗಳು ಚಿಂತಕರ ತೀರಾ ಸಣ್ಣ ಸಮುದಾಯದಲ್ಲಿ ಮಾತ್ರವೇ ಇವೆ. ಅವರಲ್ಲೂ ಬ್ರಷ್ಟಾಚಾರದ ವಿರುದ್ಧ ಘೋಷಣೆಯನ್ನು ಕೂಗುವವರೂ ಕೂಡಾ ತಾವೇ ಅಕ್ರಮ ಎನ್ನುವ ಒಂದಿಲ್ಲೊಂದು ಕ್ರಿಯೆಗಳಲ್ಲಿ ಭಾಗಿಯಾಗಿರುವುದು ಸಾಮಾನ್ಯ. ಅಂದಮೇಲೆ ಉಳಿದವರಂತೂ ಕೇಳಲೇಬೇಡಿ. ಅವರಿಗೆ ಇಂಥ ಹಣಸಂಪಾದನೆಯ ಕುರಿತು ಗೌರವವೇ ಇದ್ದಂತೆ ತೋರುತ್ತದೆ. ಅಕ್ರಮವಾಗಿ ಹಣ ಸಂಪಾದಿಸಿದ ಶ್ರೀಮಂತನನ್ನು ಅವನ ಸಾಧನೆಗಾಗಿ ಗೌರವಿಸುವರೂ, ಮೆಚ್ಚುವರೂ ಸಾಕಷ್ಟಿದ್ದಾರೆ. ಒಂದೇ ಮನೆಯಲ್ಲಿ ಇಂಥ ಮಾರ್ಗವನ್ನು ತುಳಿಯದೇ ಭಿಕಾರಿಯಾಗಿರುವ ಮಗನಿಗಿಂತ, ಅಕ್ರಮ ಸಂಪಾದನೆ ಮಾಡಿ ಶ್ರೀಮಂತನಾದ ಮಗನ ಕುರಿತು ಸಾಧಾರಣವಾಗಿ ಅಪ್ಪ ಅಮ್ಮಂದಿರಿಂದಲೂ, ಬಂಧುಗಳಿಂದಲೂ ಮೆಚ್ಚುಗೆಯ ಮಾತು ಬರುತ್ತದೆ. ಲಂಚವನ್ನು ಮುಟ್ಟದ ಯಜಮಾನನನ್ನು ಕುಟುಂಬದ ಸದಸ್ಯರು ಮೂದಲಿಸುವುದೂ ಸಾಮಾನ್ಯ. ಭ್ರಷ್ಟಾಚಾರದ ಆಪಾದನೆಯಿಂದ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ನಾಯಕರನ್ನು ಅವರು ಸ್ವಾತಂತ್ರ್ಯ ಹೋರಾಟಗಾರರೋ ಎಂಬಂತೇ ಅವರ ಅಭಿಮಾನಿಗಳು ಮೆರವಣಿಗೆ ಮಾಡಿ ಸಂಭ್ರಮಿಸುವ ಪರಿಪಾಠವನ್ನೂ ಇತ್ತೀಚೆಗೆ ಕಾಣುತ್ತಿದ್ದೇವೆ.

ಅದೇ ರೀತಿಯಲ್ಲಿ ಲಂಚ ಸ್ವೀಕರಿಸುವ ಕುರಿತು ತೆಗೆದುಕೊಳ್ಳುವವರ ಧೋರಣೆ ಕೂಡ ಆಸಕ್ತಿದಾಯಕವಾಗಿದೆ. ಸಾಧಾರಣವಾಗಿ ಸಂಬಳದ ಜೊತೆಗೆ ಗಿಂಬಳ ಇರುವ ನೌಕರಿಯನ್ನೇ ಜನ ಹುಡುಕುವುದು. ಅಂಥ ಗಿಂಬಳ ಹೆಚ್ಚಾದಷ್ಟೂ ಹೆಚ್ಚು ಲಂಚವನ್ನು ನೀಡಿ ಉದ್ಯೋಗವನ್ನು ಪಡೆಯಲು ಪೈಪೋಟಿ ನಡೆಸಲಾಗುತ್ತದೆ. ಒಂದು ಆಫೀಸಿನಲ್ಲಿ ಲಂಚ ತೆಗೆದುಕೊಳ್ಳದವನೊಬ್ಬನಿದ್ದರೆ ಅವನಿಗೆ ಅಲ್ಲಿ ಇರಲಿಕ್ಕೇ ಸಾಧ್ಯವಿಲ್ಲ, ಇಲ್ಲವೇ ಅವನಿಂದ ಏನು ಕೆಲಸವೂ ಆಗುವುದಿಲ್ಲ ಎಂಬುದಾಗಿ ಪುಕಾರು ಇದೆ. ಅದರಂತೇ ಲಂಚ ತೆಗೆದುಕೊಂಡ ಮೇಲೆ ಆ ಕೆಲಸವನ್ನು ಮಾಡಿಕೊಡುವ ನಿಯತ್ತನ್ನು ಇವರು ಪಾಲಿಸುತ್ತಾರೆ. ಅವರು ಲಂಚವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಬಿಟ್ಟರೆ ಅವರು ಉಳಿದೆಲ್ಲಾ ನಿತಿ ನಿಯತ್ತುಗಳನ್ನೂ ಪ್ರದರ್ಶಿಸಬಹುದು, ಅವರು ದೈವ ಭಕ್ತರಾಗಿರಬಹುದು, ಸುತ್ತಲಿನ ಜನರಿಗೆ ಸಹಾಯ ಮಾಡಬಹುದು, ಗುರು ಹಿರಿಯರಲ್ಲಿ ಗೌರವ ತೋರಿಸಬಹುದು, ತಮ್ಮ ಕರ್ತವ್ಯವನ್ನು ದಕ್ಷತೆಯಿಂದ ಮಾಡಿ ಲಂಚ ಸ್ವೀಕರಿಸದಿರುವವರಿಗಿಂತಲೂ ಹೆಚ್ಚು ಜನಪ್ರಶಂಸೆಗೆ ಪಾತ್ರರಾಗಬಹುದು. ಲಂಚ ತೆಗೆದುಕೊಳ್ಳುವುದನ್ನು ಬಿಟ್ಟರೆ ಅವರು ಅನೈತಿಕ ಜನರು ಎಂಬುದಾಗಿ ಸಮಾಜವು ಭಾವಿಸುವಂತೇ ಅವರ ವರ್ತನೆ ಇರುವುದಿಲ್ಲ.

ಈ ಮೇಲೆ ನಾನು ನೀಡಿದ ಉದಾಹರಣೆಗಳೆಲ್ಲವೂ ನಮ್ಮ ಸಮಾಜವನ್ನು ಬಲ್ಲವರಿಗೆ ಯತಾರ್ಥವಾಗಿಯೇ ತೋರುತ್ತವೆ. ಇದು ನಿಜವೇ ಆಗಿದ್ದಲ್ಲಿ ಇದು ಆತಂಕಪಡುವ ಸಂಗತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೂ ಮುಖ್ಯವಾಗಿ ನನಗೆ ಇದೊಂದು ಆಶ್ಚರ್ಯದ ಸಂಗತಿಯಾಗಿದೆ. ಅಂದರೆ ಒಂದೆಡೆ ಭ್ರಷ್ಟಾಚಾರವೊಂದು ಪಿಡುಗು ಎಂಬ ಬೊಬ್ಬೆ ನಡೆಯುತ್ತಿದ್ದರೆ ಮತ್ತೊಂದೆಡೆ ಈ ಮೇಲಿನ ಸಂಗತಿಗಳು ಯಥಾಕ್ರಮದಲ್ಲಿ ನಡೆಯುತ್ತಲೇ ಇವೆ. ಏಕೆ ಇಂಥ ಅನೈತಿಕ ವ್ಯವಹಾರದ ಕುರಿತು ಭಾರತೀಯರು ಇಷ್ಟೊಂದು ಆಸಕ್ತರಾಗಿದ್ದಾರೆ? ಜನರಿಗೇಕೆ ಅದು ಅನೈತಿಕ ಅಥವಾ ತಪ್ಪು ಎನ್ನಿಸುತ್ತಿಲ್ಲ? ಒಂದೋ, ಅವರು ಹಾಗೂ ಅವರನ್ನು ಪೋಷಣೆ ಮಾಡಿದ ಸಮಾಜವು ಮೂಲತಃ ಅನೈತಿಕವಾಗಿರಬಹುದು, ಇಲ್ಲ ಭಾರತದ ಬಹುಪಾಲು ಜನರು ಅಪರಾಧೀ ಪ್ರಜ್ಞೆಯಿಂದ ನರಳುತ್ತಿರಬಹುದು, ಇಲ್ಲ ಭ್ರಷ್ಟಾಚಾರ ಎಂಬದಾಗಿ ನಾವು ಯಾವ ಪರಿಕಲ್ಪನೆಯನ್ನು ಗುರುತಿಸುತ್ತಿದ್ದೇವೆಯೋ ಅದು ಅವರ ಪ್ರಪಂಚಕ್ಕೆ ಅಪ್ರಸ್ತುತವಾದುದಾಗಿದೆ. ನನಗನಿಸುವ ಮಟ್ಟಿಗೆ ಮೊದಲಿನ ಎರಡು ಸಾಧ್ಯತೆಗಳನ್ನು ಒಪ್ಪಿಕೊಂಡರೆ ಸಮಸ್ತ ಭಾರತೀಯರನ್ನೂ ಅನೀತಿವಂತರು ಅಥವಾ ಮನೋರೋಗಿಗಳು ಎಂಬುದಾಗಿ ನಿರ್ಣಯಿಸಿದಂತೇ. ಹಾಗಾಗಿ ಈ ಪರಿಕಲ್ಪನೆಯನ್ನೇ ಸ್ವಲ್ಪ ಮರು ಪರಿಶೀಲನೆಗೆ ಒಡ್ಡುವ ಜರೂರು ಇದೆ. ಹಾಗಂತ, ಲಂಚವನ್ನು ತೆಗೆದುಕೊಳ್ಳುವುದು ಸರಿ ಎಂಬುದಾಗಿ ನಾನು ಇಲ್ಲಿ ಸರ್ವಥಾ ಸೂಚಿಸ ಬಯಸುತ್ತಿಲ್ಲ. ಹಾಗೂ ಅದೇಕೆ ತಪ್ಪೆಂದು, ಅನೈತಿಕವೆಂದು ಬಹುತೇಕರಿಗೆ ಅನ್ನಿಸುವುದಿಲ್ಲ? ಎಂಬ ಪ್ರಶ್ನೆಯನ್ನು ಸಧ್ಯಕ್ಕೆ ಪಕ್ಕಕ್ಕಿಡುತ್ತೇನೆ. ಆದರೆ ಸಧ್ಯಕ್ಕೆ ಭ್ರಷ್ಟಾಚಾರ ಎಂಬ ಪರಿಕಲ್ಪನೆಯು ಎಲ್ಲಿಂದ ಬಂದಿದೆ ಹಾಗೂ ಅದು ನಮ್ಮಲ್ಲಿರುವ ಸಂಗತಿಯನ್ನು ಅರ್ಥೈಸಲು ಹೇಗೆ ವಿಫಲವಾಗುತ್ತದೆ ಎಂಬುದರ ಕುರಿತಷ್ಟೇ ನಿಮ್ಮ ಗಮನವನ್ನು ಸೆಳೆಯುತ್ತಿದ್ದೇನೆ.

ಭ್ರಷ್ಟಾಚಾರ ಎಂಬ ಶಬ್ದವು ಇಂಗ್ಲೀಷಿನ ಕರಪ್ಶನ್ ಎಂಬ ಶಬ್ದದ ಅನುವಾದವಾಗಿದೆ. ಆದರೆ ನಮ್ಮ ಶಬ್ದಕೋಶಗಳಲ್ಲಿ ಭ್ರಷ್ಟಾಚಾರ ಎನ್ನುವ ಪ್ರಯೋಗವಿಲ್ಲ. ಭ್ರಷ್ಟವಾಗುವುದೆಂದರೆ ಹಾಳಾಗುವುದು, ಶುದ್ಧ ಸ್ವರೂಪವನ್ನು ಕಳೆದುಕೊಳ್ಳುವುದು ಇತ್ಯಾದಿ ಅರ್ಥಗಳು ಸಾಧ್ಯವಿರುವುದರಿಂದ ಭ್ರಷ್ಟಾಚಾರ ಎಂಬ ಪ್ರಯೋಗವನ್ನು ಕರಪ್ಶನ್ ಎಂಬ ಶಬ್ದದ ಅನುವಾದವಾಗಿ ರೂಪಿಸಿರುವುದು ಸ್ಪಷ್ಟ. ಕರಪ್ಶನ್ ಎಂಬ ಶಬ್ದವು ಶುದ್ಧ ರೂಪವನ್ನು ಕಳೆದುಕೊಳ್ಳುವುದು ಎಂಬ ಅರ್ಥವನ್ನು ಹೊಂದಿದೆ. ಆದರೆ ಒಂದು ಪರಿಭಾಷೆಯಾಗಿ ಇದು ಕ್ರೈಸ್ತ ಥಿಯಾಲಜಿಗೆ ಸಂಬಂಧಿಸಿದೆ. ಗಾಡ್ ಕೊಟ್ಟ ಶುದ್ಧವಾದ ರಿಲಿಜನ್ನು ಕಾಲಾಂತರದಲ್ಲಿ ಮರೆಯಾಗಿ ತಪ್ಪು ಆಚರಣೆಗಳು ಪ್ರಚಲಿತದಲ್ಲಿ ಬರುವುದನ್ನು ಈ ಶಬ್ದವು ಸೂಚಿಸುತ್ತದೆ. ಇಂಥ ತಪ್ಪು ಆಚರಣೆಗಳು ಕೆಲವರ ಸ್ವಾರ್ಥಸಾಧನೆಗಾಗಿ ಹಾಗೂ ಲಾಭಕ್ಕಾಗಿ ಹುಟ್ಟಿಕೊಳ್ಳುತ್ತವೆ ಎಂಬುದಾಗಿ ನಿರೂಪಿಸಲಾಗಿದೆ. ಹಾಗೂ ಒಂದು ರಿಲಿಜನ್ನಿನ ಅವನತಿಯನ್ನೂ, ವಿಕೃತಿಯನ್ನೂ ಈ ಪರಿಭಾಷೆಯು ಸೂಚಿಸುತ್ತದೆ. ಈ ತಪ್ಪು ಆಚರಣೆಗಳು ಗಾಡ್ನ ಆಜ್ಞೆಗೆ ವಿರುದ್ಧವಾಗಿರುವುದರಿಂದ ಅವು ಅನೈತಿಕ ಹಾಗೂ ಪಾಪಕಾರ್ಯಗಳಾಗುತ್ತವೆ. ಈ ಅನೈತಿಕ ಆಚರಣೆಯನ್ನೇ ಐಡೋಲೇಟ್ರಿ (ವಿಗ್ರಹಾರಾಧನೆ ಎಂಬದಾಗಿ ಭಾಷಾಂತರಿಸಲಾಗುತ್ತದೆ) ಎಂಬುದಾಗಿ ಸೂಚಿಸಿ ಪ್ರೊಟೆಸ್ಟಾಂಟರು ಕ್ಯಾಥೋಲಿಕರನ್ನು ಕೂಡ ಇಂಥ ಭ್ರಷ್ಟರ ಪಟ್ಟಿಗೆ ಸೇರಿಸಿದ್ದರು. ಭ್ರಷ್ಟಾಚಾರವು ಅನೈತಿಕವೇಕೆಂಬುದನ್ನು ತಿಳಿಯಲು ಈ ಕಥೆಯನ್ನು ತಿಳಿದಿರುವುದು ಅತ್ಯಗತ್ಯ.

ಈ ಹಿನ್ನೆಲೆಯಿಂದ ಭಾರತದ ಕುರಿತ ತಮ್ಮ ಚಿತ್ರಣಗಳನ್ನು ಬೆಳೆಸಿಕೊಂಡ ಕ್ರೈಸ್ತ ಮಿಶನರಿಗಳು ಹಾಗೂ ಪ್ರವಾಸಿಗರು ಹಿಂದೂಗಳದು ಸುಳ್ಳು ರಿಲಿಜನ್ನೆಂಬುದಾಗಿ ಭಾವಿಸಿದ್ದರು ಹಾಗೂ ಅವರು ಡೆವಿಲ್ಲನ ವಶರಾಗಿ ದಾರಿ ತಪ್ಪಿದ ಐಡೋಲೇಟರ್ಗಳು ಎಂಬುದಾಗಿ ನಿರ್ಣಯಿಸಿದ್ದರು. ಅದೇ ಕಾರಣಕ್ಕಾಗಿ ಅವರ ಆಚರಣೆಗಳನ್ನು ಭ್ರಷ್ಟ ಆಚರಣೆಗಳೆಂಬುದಾಗಿ, ಹಿಂದೂಗಳು ಅನೀತಿವಂತರೆಂಬುದಾಗಿ ಕರೆದರು. ಅಂದಿನವರ ಕಥನಗಳಲ್ಲಿ ಭಾರತೀಯರನ್ನು ಭ್ರಷ್ಟರು, ಅನೀತಿವಂತರು, ಸುಳ್ಳರು, ಅವರು ನಂಬಿಕೆಗೆ ಅರ್ಹರಲ್ಲ ಎಂಬಿತ್ಯಾದಿಯಾಗಿ ವರ್ಣಿಸುವುದು ಸಾಮಾನ್ಯವಾಗಿತ್ತು. ಹಾಗೂ ಭಾರತಕ್ಕೆ ಬಂದ ಪ್ರವಾಸಿಗರು ಇಲ್ಲಿ ತಮಗೆ ಅನೀತಿ ಎಂಬುದಾಗಿ ಯಾವುದು ತೋರಿತ್ತೋ ಅದನ್ನೇ ಎತ್ತಿ ತೋರಿಸಿ, ಕೆಲವೊಮ್ಮೆ ಕಪೋಲಕಲ್ಪನೆಯಿಂದ, ಅತಿಶಯೋಕ್ತಿಯಿಂದ ಅದನ್ನು ನಿರೂಪಿಸಿ ಐರೋಪ್ಯರನ್ನು ರಂಜಿಸಿದರು. ಉದಾಹರಣೆಗೆ, 17-18ನೆಯ ಶತಮಾನಗಳಲ್ಲಿ ಭಾರತಕ್ಕೆ ಬಂದ ಪ್ರವಾಸಿಗರು ಭಾರತೀಯರ ಲೈಂಗಿಕ ಸಂಬಂಧಗಳನ್ನು, ದೇವದಾಸಿ ಪದ್ಧತಿಯನ್ನು, ಸತಿ ಪದ್ಧತಿಯನ್ನು, ಹಾಗೂ ಜಾತಿ ವ್ಯವಸ್ಥೆಯನ್ನು ಇವರ ಐಡೋಲೇಟ್ರಿಯ ಲಕ್ಷಣ ಎಂಬುದಾಗಿ ಚಿತ್ರಿಸುತ್ತಾರೆ.

ಅದನ್ನೇ ಮುಂದುವರಿಸಿದ ಆಧುನಿಕ ವಿದ್ವಾಂಸರು ಇಂದಿನ ಹಿಂದೂಯಿಸಂ ಎಂಬುದು ಮೂಲ ಶುದ್ಧ ರಿಲಿಜನ್ನಿನ ಭ್ರಷ್ಟ ರೂಪವಾಗಿದೆ ಎಂಬುದಾಗಿ ಗುರುತಿಸಿದರು. ಹಿಂದೂಗಳ ಪುರೋಹಿತಶಾಹಿಯಾದ ಬ್ರಾಹ್ಮಣರು ತಮ್ಮ ಸ್ವಾರ್ಥಕ್ಕಾಗಿ ರಿಲಿಜನ್ನಿನ ಹೆಸರಿನಲ್ಲಿ ಮೂಢನಂಬಿಕೆಗಳನ್ನು ರೂಢಿಯಲ್ಲಿ ತಂದು ಜಾತಿ ವ್ಯವಸ್ಥೆಯಂಥ ಅನೀತಿಯುತವಾದ ವ್ಯವಸ್ಥೆಯನ್ನು ಹುಟ್ಟುಹಾಕಿದ್ದಾರೆ ಎಂಬುದಾಗಿ ಚಿತ್ರಿಸಿದರು. ಈ ಚಿತ್ರಣವೇ ವಸಾಹತು ಭಾರತದ ಸತ್ಯ ಚಿತ್ರಣವಾಗಿ ಸುಪ್ರಸಿದ್ಧವಾಯಿತು. ವಸಾಹತು ಆಡಳಿತಗಾರರು ಹಾಗೂ ಅವರಿಗೆ ಸಂಪನ್ಮೂಲಗಳಾಗಿದ್ದ ಇಂಥ ವಿದ್ವಾಂಸರು ಇಲ್ಲಿನ ಜನರ ನಡಾವಳಿಗಳಲ್ಲಿ ಕೆಲವು ವಿಚಿತ್ರಗಳನ್ನು ಗುರುತಿಸಿದರು. ಇವರು ಸಲೀಸಾಗಿ ಯಾವುದೇ ಎಗ್ಗಿಲ್ಲದೇ ಸುಳ್ಳು ಹೇಳುತ್ತಿರುವುದು ಅವರಿಗೆ ಕಂಡುಬಂದಿತು, ಇವರ ಪದ್ಧತಿಗಳು ಪಾಶ್ಚಾತ್ಯ ನೀತಿ ನಿಯಮಗಳ ದೃಷ್ಟಿಯಿಂದ ಅನೈತಿಕ ಹಾಗೂ ಮೌಢ್ಯ ಎಂಬಂತೇ ಕಂಡುಬಂದಿತು. ಅಂದರೆ ಅವರು ಇಲ್ಲಿ ಒಂದು ವಿಭಿನ್ನವಾದ ಸಂಸ್ಕೃತಿಯನ್ನು ನೋಡುತ್ತಿದ್ದರು, ಆದರೆ ಅದನ್ನು ತಮ್ಮ ಚೌಕಟ್ಟಿನ ಮೂಲಕ ಅರ್ಥೈಸುತ್ತ ಇವನ್ನೆಲ್ಲ ಭ್ರಷ್ಟ ಆಚರಣೆಗಳ ಪಟ್ಟಿಗೆ ಸೇರಿಸಿದರು. ಭಾರತೀಯರು ಕೇವಲ ಅನೈತಿಕ ಆಚರಣೆಗಳನ್ನು ಮಾಡುವುದಷ್ಟೇ ಅಲ್ಲ, ಅವು ತಪ್ಪು ಎಂಬ ಭಾವನೆಯೂ ಅವರಲ್ಲಿಲ್ಲ ಎಂಬುದನ್ನು ಗುರುತಿಸಿ ಅವರೇಕೆ ಹೀಗೆ ವರ್ತಿಸುತ್ತಾರೆಂದರೆ ಅವರ ಸಮಾಜ ವ್ಯವಸ್ಥೆ ಹಾಗೂ ಅದಕ್ಕೆ ಆಧಾರವಾದ ನೈತಿಕ ನಿಯಮಗಳೇ ಭ್ರಷ್ಟವಾಗಿವೆ ಎಂಬ ಕಾರಣವನ್ನು ಕೊಟ್ಟುಕೊಂಡರು. ಇಲ್ಲಿನ ನೈತಿಕ ನಿಯಮಗಳು ಹಾಗೂ ಅವುಗಳ ಆಧಾರವಾದ ಪಠ್ಯಗಳೇ ಭ್ರಷ್ಟಗೊಂಡಿರುವಾಗ ಅವರಿಗೆ ತಾವು ಮಾಡುತ್ತಿರುವುದು ತಪ್ಪು ಎಂಬುದೇ ತಿಳಿಯದಿರುವುದು ಸಹಜ ಎಂದುಕೊಂಡರು. ವಸಾಹತು ಆಡಳಿತ ನೀತಿಯನ್ನು ಭಾರತೀಯ ಸಮಾಜದ ಈ ಮೇಲಿನ ಚಿತ್ರಣವನ್ನಾಧರಿಸಿ ರೂಪಿಸಿಕೊಳ್ಳಲಾಗಿತ್ತು.

ಭ್ರಷ್ಟಾಚಾರವನ್ನು ಜಾಗತಿಕ ಮಟ್ಟದಲ್ಲಿ ವಿಶ್ಲೇಷಿಸುವಾಗ ಕೂಡ ಅದನ್ನು ವಂಚನೆ ಎಂಬ ಸಾಮಾನ್ಯ ಮಾನದಂಡವನ್ನಿಟ್ಟು ನೋಡಲಾಗುತ್ತದೆ ಎಂಬುದೇನೋ ನಿಜ. ಹಾಗೂ ಸಾರ್ವಜನಿಕ ಸಂಪನ್ಮೂಲವನ್ನು ಅಪಹರಿಸುವುದು ಕಳ್ಳತನದಂತಹ ಅನೈತಿಕ ಚಟುವಟಿಕೆಗೆ ಸಮಾನವಾದ ಅಪರಾಧವೂ ಆಗುತ್ತದೆ ಎಂಬ ವಿವರಣೆಯೂ ಸಾಧ್ಯ. ಆದರೆ ಭಾರತದ ಸಂದರ್ಭದಲ್ಲಿ ಪಾಶ್ಚಾತ್ಯ ಚಿಂತಕರು ಇಷ್ಟನ್ನೇ ಹೇಳುತ್ತಿಲ್ಲ. ಅವರ ಹೇಳಿಕೆಗಳಲ್ಲಿ ಒಂದು ಅಂಶವಂತೂ ವಿಶಿಷ್ಟವಾಗಿದೆ: ಅವರು ಬೇರೆ ದೇಶಗಳಂತೇ ಇಲ್ಲಿ ಕೆಲವೊಬ್ಬರು ಅಕ್ರಮದಲ್ಲಿ, ವಂಚನೆಯಲ್ಲಿ ತೊಡಗಿದ್ದಾರೆ ಎನ್ನುತ್ತಿಲ್ಲ. ಈ ಸಮಾಜವು ಮೂಲತಃ ಅನೈತಿಕವಾಗಿದ್ದು, ಭ್ರಷ್ಟಾಚಾರವು ಅದರದೊಂದು ಲಕ್ಷಣ ಎನ್ನುತ್ತಿದ್ದಾರೆ. ಆದರೆ ಭಾರತೀಯರ ವ್ಯವಹಾರವನ್ನು ಗಮನಿಸಿದರೆ ಭಾರತೀಯರು ಇದನ್ನು ಅನೈತಿಕ ಎಂಬುದಾಗಿ ಭಾವಿಸುವುದಿಲ್ಲವಷ್ಟೇ ಅಲ್ಲ ಬಹುತೇಕರು ಇದನ್ನು ಪುರುಷಾರ್ಥ ಸಾಧನೆ ಎಂಬುದಾಗಿ ಕೂಡ ಭಾವಿಸಿದಂತಿದೆ. ಇದು ಸಮಸ್ಯೆಯನ್ನು ಮತ್ತಷ್ಟು ಜಟಿಲವಾಗಿಸುತ್ತದೆ.

ಅಂದರೆ ಈ ಸಮಸ್ಯೆಯನ್ನು ಬಿಡಿಸಬೇಕಾದರೆ ಭಾರತೀಯ ಜೀವನಕ್ರಮ ಹಾಗೂ ಅದರ ಮೇಲೆ ಪಾಶ್ಚಾತ್ಯ ರಾಜಕೀಯ ಪ್ರಯೋಗಗಳು ಹಾಗೂ ಪರಿಕಲ್ಪನೆಗಳು ಉಂಟುಮಾಡಿದ ವಿಕೃತಿಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಸಾಂಸ್ಕೃತಿಕ ವ್ಯತ್ಯಾಸವನ್ನು ಗುರುತಿಸಿ ಅಧ್ಯಯನಕ್ಕೆ ಒಳಪಡಿಸಬಹುದಾದ ಸಮಸ್ಯೆಯೊಂದನ್ನು ಭ್ರಷ್ಟಾಚಾರ ಎಂಬುದಾಗಿ ವರ್ಣಿಸಿ ಕೈಬಿಟ್ಟಿರುವುದರಿಂದ ವಸಾಹತು ಕಾಲದಿಂದಲೂ ಇಲ್ಲಿ ವಿದ್ವಾಂಸರು ಗಮನಿಸಿದ ಸಂಗತಿಗಳು ಇನ್ನೂ ವಿವರಣೆಗೆ ಕಾಯುತ್ತಿವೆ. ಅವರ ಪ್ರಶ್ನೆಗಳು ಇನ್ನೂ ಉತ್ತರಕ್ಕಾಗಿ ಕಾಯುತ್ತಿವೆ.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: