ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Corruption, Culture > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

Rajaram - Balu ಕಂತು 33 :ಭಾರತೀಯ ಸಮಾಜವು ನಿಂತನೀರು ಎಂಬ ಕಲ್ಪನೆಯು ಎಲ್ಲಿಂದ ಹುಟ್ಟಿತು?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇಂದಿನ ಸಮಾಜ ಶಾಸ್ತ್ರದ ಪ್ರಕಾರ ಭಾರತೀಯ ಸಮಾಜವು ಸಾವಿರಾರು ವರ್ಷಗಳಿಂದಲೂ ಯಾವುದೇ ಬದಲಾವಣೆಯನ್ನು ಕಾಣದೇ ಹಾಗೇ ಉಳಿದುಕೊಂಡು ಬಂದಿದೆ. ಇದು ಮೂಲತಃ ವಸಾಹತು ಕಾಲದ ಪಾಶ್ಚಾತ್ಯ ಇತಿಹಾಸಕಾರರು ಹಾಗೂ ಚಿಂತಕರು ಕಟ್ಟಿಕೊಟ್ಟ ಚಿತ್ರಣವಾಗಿದೆ. ಅಂದರೆ ಈ ಸಮಾಜವು ಕಾಲಕ್ಕೆ ತಕ್ಕಂತೆ ವಿಕಾಸವನ್ನು ಹಾಗೂ ಪ್ರಗತಿಯನ್ನು ಹೊಂದಿಲ್ಲ. ಅದೇ ಈ ಸಮಾಜವು ಹಿಂದುಳಿಯಲಿಕ್ಕೆ ಮೂಲ ಕಾರಣ. ಅದೇ ಈ ಸಮಾಜದ ಬರ್ಬರತೆಗೆ ಸಾಕ್ಷಿ. ಭಾರತದ ಈ ಜಡತೆಯನ್ನು ನಿವಾರಿಸಿ ಅದನ್ನು ಪ್ರಗತಿಪಥಕ್ಕೆ ಹಚ್ಚುವುದೇ ಬ್ರಿಟಿಷ್ ವಸಾಹತು ಆಳ್ವಿಕೆಯ ಅಂತಿಮಧ್ಯೇಯವಾಯಿತು. ಇಂದು ವಸಾಹತು ಆಳ್ವಿಕೆಯನ್ನು ಬೇರೆ ಕಾರಣಗಳಿಗಾಗಿ ಟೀಕಿಸುವವರೂ ಕೂಡ ಈ ಕಾರಣಕ್ಕಾಗಿ ಅದನ್ನು ಸಮರ್ಥಿಸಲು ಮರೆಯುವುದಿಲ್ಲ.

ಭಾರತೀಯ ಸಮಾಜದ ಕುರಿತು ಇಂದು ಭಾರತೀಯ ವಿದ್ವಾಂಸರು ನಂಬಿಕೊಂಡು ಬಂದ ಚಿತ್ರಣಗಳೂ ಕೂಡ ನೇರವಾಗಿ ಈ ಕಥೆಯನ್ನು ಹೇಳದಿರಬಹುದು ಆದರೆ ಅವು ಅದನ್ನೇ ಸೂಚಿಸುತ್ತವೆ. ಒಂದು ಉದಾಹರಣೆಯನ್ನು ಕೊಡಬಹುದಾದರೆ, ನಮ್ಮ ಸಮಾಜದ ಕುರಿತು ನಾವು ನಂಬಿಕೊಂಡ ಚಿತ್ರಣದ ಪ್ರಕಾರ ವೇದಕಾಲದಲ್ಲೇ ಈ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬುದಾಗಿ ವಿಭಾಗಿಸಲಾಯಿತು. ನಂತರ ಎಷ್ಟೆಷ್ಟೋ ಸುಧಾರಕರು ಹಾಗೂ ಚಳವಳಿಗಳು ಆಗಿ ಹೋದರೂ ಕೂಡ ಆ ವ್ಯವಸ್ಥೆಯು ಭಾರತದ ನದಿ ಪರ್ವತಗಳಂತೇ ಅಚಲವಾಗಿ ನಿಂತಿದೆ. ಇದಕ್ಕೆ ಸಾಕ್ಷಿಯಾಗಿ ಯಾವುದೇ ಇತಿಹಾಸ ಪುಸ್ತಕವನ್ನಾದರೂ ತೆಗೆದು ನೋಡಿ: ಅಲ್ಲಿ ಸಾವಿರಾರು ವರ್ಷಗಳ ವರೆಗೆ ರಾಜಕೀಯವಾಗಿ ಅನೇಕ ರಾಜಮನೆತನಗಳ ಆಳ್ವಿಕೆ ಆಗಿಹೋಯಿತು, ಈ ಎಲ್ಲ ಆಳ್ವಿಕೆಗಳಲ್ಲೂ ನಮ್ಮ ಸಮಾಜವು ಮಾತ್ರ ಬ್ರಾಹ್ಮಣ, ಕ್ಷತ್ರಿಯ, ಇತ್ಯಾದಿಯಾಗಿಯೇ ವಿಭಾಗಿಸಲ್ಪಟ್ಟಿತ್ತು.

ಹಿಂದೂ ರಾಜರ ಕಥೆ ಬಿಟ್ಟುಬಿಡಿ. ಎಷ್ಟೆಂದರೂ ಅವರು ಬ್ರಾಹ್ಮಣ ಪುರೋಹಿತಶಾಹಿ ಹಾಗೂ ಮನುಸ್ಮೃತಿ ಎಂಬ ಸಂವಿಧಾನಕ್ಕೆ ಬದ್ಧರಾಗಿದ್ದರು. ಮುಸ್ಲಿಂ ರಾಜರೂ ಇಲ್ಲಿ ಸಾವಿರಾರು ವರ್ಷ ಆಳಿದರು. ಅವರ ಕಾಲದಲ್ಲೂ ಹಿಂದೂ ಸಮಾಜವನ್ನು ಬ್ರಾಹ್ಮಣ ಕ್ಷತ್ರಿಯ, ಇತ್ಯಾದಿಯಾಗೇ ವಿಭಾಗಿಸಿದ್ದರು. ಅದೂ ಹೋಗಲಿ, ಕಳೆದ ಇನ್ನೂರೈವತ್ತು ವರ್ಷಗಳಿಂದೀಚೆಗೆ ಬ್ರಿಟಿಷರು ಹಾಗೂ ನಮ್ಮವರೇ ಈ ದೇಶವನ್ನು ಆಳಿದ್ದಾರೆ. ಆದರೂ ಸಮಾಜ ಮಾತ್ರ ಹಾಗೇ ಇದೆ ಎಂಬುದು ಸುಧಾರಣಾವಾದಿಗಳ ಗೋಳಾಟ. ಅದು ಈ ಮುಸ್ಲಿಂ, ಬ್ರಿಟಿಷ್ ರಾಜರ ಹಾಗೂ ಸ್ವತಂತ್ರ ಭಾರತದ ರಾಜಕಾರಣಿಗಳ ಆಲಸ್ಯತನವನ್ನು ತೋರಿಸುತ್ತದೆಯೋ, ಇಲ್ಲ, ಜಾತಿ ವ್ಯವಸ್ಥೆಯ ಗಟ್ಟಿತನವನ್ನು ತೋರಿಸುತ್ತದೆಯೋ, ಒಟ್ಟಿನಲ್ಲಿ ನಮ್ಮ ಸಮಾಜವು ನಿಂತ ನೀರಿನ ಹಾಗೇ ಚೂರೂ ಕೊಂಕದೇ ಹಾಗೇ ಉಳಿದು ಕೊಂಡು ಬಂದಿತು ಎಂಬುದಾಗಿ ಭಾರತೀಯ ಇತಿಹಾಸವು ಇವರಿಗೆಲ್ಲ ತಿಳಿಸುತ್ತದೆ. ಇದು ಭಾರತೀಯ ಸಮಾಜದ ಕುರಿತು ನಕಾರಾತ್ಮಕವಾಗಿ ನೋಡುವವರ ಹಾಗೂ ನಮ್ಮ ಸಂಸ್ಕೃತಿಯ ಕಟು ವಿಮರ್ಶಕರ ಇತಿಹಾಸವೊಂದೇ ಅಲ್ಲ. ಈ ಸಂಸ್ಕೃತಿಯ ಆರಾಧಕರೆಂಬುದಾಗಿ ಕರೆದುಕೊಳ್ಳುವವರ ಇತಿಹಾಸವೂ ಇದೇ ಅಗಿದೆ. ನಮ್ಮ ಸಂಸ್ಕೃತಿಯ ಇಂಥ ಉತ್ತಮ ವ್ಯವಸ್ಥೆಯು ವೇದಕಾಲದಲ್ಲೇ ಸೃಷ್ಟಿಯಾಯಿತು ಹಾಗೂ ತದನಂತರ ಅದು ಹಾಗೇ ಉಳಿದುಕೊಂಡು ಬಂದಿತು. ಸಾವಿರಾರು ವರ್ಷಗಳಲ್ಲಿ ಆಗಿಹೋದ ಎಲ್ಲಾ ಮಹಾತ್ಮರೂ ಕೂಡ ಅದನ್ನೇ ಎತ್ತಿಹಿಡಿಯುತ್ತ ಬಂದರು.

ನಮ್ಮ ಇತಿಹಾಸ ಹಾಗೂ ಸಮಾಜದ ಕುರಿತು ಹೊಸದಾಗಿ ಸಂಶೋಧನೆ ನಡೆಸುವವರು ಕಂಡುಕೊಳ್ಳುವ ಸತ್ಯವೂ ಇದೇ ಆಗಿದೆ. ಅದಕ್ಕಿಂತ ಅವರು ಕಂಡುಕೊಳ್ಳತಕ್ಕ ಸತ್ಯವು ಇದೇ ಆಗಿರಲೇಬೇಕು ಎಂಬ ಒತ್ತಾಯವೂ ವಿದ್ವಾಂಸರ ಮೇಲಿದೆ. ಇದನ್ನು ಗಮನಿಸಿದರೆ ಭಾರತೀಯರಿಗೆ ತಮ್ಮ ಸಮಾಜವು ಸಾವಿರಾರು ವರ್ಷ ಒಂದೇ ರೀತಿಯಲ್ಲಿ ಉಳಿದುಕೊಂಡು ಬಂದಿತು ಎಂಬ ವಿಚಾರವೊಂದು ಪ್ರಯೋಜನಕಾರಿಯಾದ ಅಥವಾ ಅಭಿಮಾನದ ವಿಷಯವಾಗಿರುವಂತೇ ಕಾಣುತ್ತದೆ. ಆದರೆ ಪ್ರಪಂಚದ ಬೇರೆ ಯಾವುದಾದರೂ ಸಮಾಜದಲ್ಲಿ ಇಂಥ ವ್ಯವಸ್ಥೆಯೊಂದು ಸಾವಿರಾರು ವರ್ಷ ಉಳಿದುಕೊಂಡು ಬಂದ ಉದಾಹರಣೆ ನಮಗೆ ಸಿಗುವುದಿಲ್ಲ. ಅಥವಾ ವ್ಯವಸ್ಥೆಯೊಂದು ಬದಲಾಗದೇ ಹಾಗೇ ಸಾವಿರಾರು ವರ್ಷಗಳ ವರೆಗೆ ಉಳಿದುಕೊಂಡು ಬರುವ ಸಂಗತಿಯು ನಮ್ಮ ಅನುಭವಕ್ಕೂ ಅಸಂಗತವೆನ್ನಿಸುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಭಾರತದಂತಹ ವೈವಿಧ್ಯಪೂರ್ಣ ಸಮಾಜವು ಬದಲಾಗಿದೆ ಅಥವಾ ಇಲ್ಲ ಎಂಬುದಕ್ಕೆ ಮಾನದಂಡಗಳಾವವು ಎಂಬುದೂ ನಮಗೆ ತಿಳಿದಿಲ್ಲ. ಈ ಹೇಳಿಕೆಯನ್ನು ನಂಬಲು ಇಷ್ಟೊಂದು ತೊಡಕುಗಳಿದ್ದರೂ ವಿದ್ವಾಂಸರಿಗೇಕೆ ಇದೇ ಸತ್ಯವೆಂಬ ನಂಬಿಕೆ ಹುಟ್ಟಿತು?

ಭಾರತೀಯರು ತಮ್ಮ ಸಮಾಜದ ಕುರಿತು ಏನನ್ನು ಚಿತ್ರಿಸಿಕೊಳ್ಳುತ್ತಾರೋ ಅದು ವಸಾಹತು ಕಾಲದ ಬಳುವಳಿ ಎಂಬುದಾಗಿ ಸಬೂಬು ಹೇಳಬಹುದು. ವಸಾಹತು ದೊರೆಗಳಿಗೆ ಭಾರತವನ್ನು ಹಿಂದುಳಿದ ಸಮಾಜವೆಂಬಂತೇ ಚಿತ್ರಿಸುವುದು ಪ್ರಯೋಜನಕಾರಿಯಾಗಿತ್ತು ಎಂದೂ ದೂರಬಹುದು. ಆದರೆ ವಸಾಹತು ಆಳ್ವಿಕೆಗೆ ಸಂಬಂಧವೇ ಇಲ್ಲದ ಪಾಶ್ಚಾತ್ಯ ವಿದ್ವಾಂಸರಿಗೇಕೆ ಹಾಗನ್ನಿಸಬೇಕು? ಉದಾಹರಣೆಗೆ ಯುರೋಪಿನ ಜ್ಞಾನೋದಯ ಯುಗದ ಚಿಂತಕರೇ ಈ ಅಭಿಪ್ರಾಯವನ್ನು ಹುಟ್ಟುಹಾಕಿದವರು. ಜ್ಞಾನೋದಯ ಚಿಂತನೆಯ ತವರು ಪ್ಯಾರೀಸು. ನಂತರ ಈ ಚಿತ್ರಣಗಳನ್ನು ಮತ್ತಷ್ಟು ಗಟ್ಟಿ ಮಾಡಿದವರು ಜರ್ಮನಿಯ ರೋಮಾಂಟಿಸಿಸ್ಟ್ ಚಿಂತಕರು. ಬ್ರಿಟಿಷ್ ಇತಿಹಾಸಕಾರರು ಇವರ ಅಭಿಪ್ರಾಯಗಳನ್ನೇ ಭಾರತೀಯ ಇತಿಹಾಸಕ್ಕೆ ಆರೋಪಿಸಿದರು. ಅವರಲ್ಲಿ ಬಹಳಷ್ಟು ಜನರು ಭಾರತವನ್ನೇ ನೋಡಿರಲಿಲ್ಲ, ಅದರ ಕುರಿತು ನಿಖರವಾದ ಮಾಹಿತಿಯೂ ಅವರಿಗೆ ಇರಲಿಲ್ಲ. ಅವರು ತಮ್ಮ ಆರಾಮ ಖುರ್ಚಿಯಲ್ಲಿ ಕುಳಿತುಕೊಂಡೇ ಈ ಸತ್ಯವನ್ನು ಕಂಡುಕೊಂಡರು. ಹಾಗಾದರೆ ಈ ಜ್ಞಾನೋದಯ ಎಲ್ಲಿಂದ ಆಯಿತು?

ರಿಲಿಜನ್ನಿನ ಕುರಿತ ಆಧುನಿಕ ಚಿಂತನೆಗಳು ಯುರೋಪಿನಲ್ಲಿ ರೂಪುಗೊಂಡಂತೇ ಅದನ್ನಾಧರಿಸಿ ಇಂಥ ಅಭಿಪ್ರಾಯಗಳೂ ರೂಪುಗೊಂಡವು. ಇದು ಕ್ರಿಶ್ಚಿಯಾನಿಟಿಯಲ್ಲಿ ಪೇಗನ್ನರ ಕುರಿತ ಚಿತ್ರಣಗಳನ್ನು ಆಧಾರವಾಗಿಟ್ಟುಕೊಂಡು ಜ್ಞಾನೋದಯ ಯುಗದ ಚಿಂತಕರು ಹುಟ್ಟುಹಾಕಿದ ಪ್ರತಿಪಾದನೆಯಾಗಿದೆ. ಪ್ರೊಟೆಸ್ಟಾಂಟಿಸಂನ ಉಗಮದೊಂದಿಗೆ ಸತ್ಯವಾದ ರಿಲಿಜನ್ನು ಹಾಗೂ ಸುಳ್ಳು ರಿಲಿಜನ್ನುಗಳ ಕುರಿತ ಚರ್ಚೆಯು ಯುರೋಪಿನಲ್ಲಿ ಪ್ರಧಾನವಾಯಿತು. ರಿಲಿಜನ್ನು ಮೂಲತಃ ಶುದ್ಧವಾಗಿದ್ದರೂ ನಂತರ ಅದರ ಅನುಯಾಯಿಗಳು ದೈವವಾಣಿಯನ್ನು ಮರೆಯುವುದರಿಂದ ಅದು ಭ್ರಷ್ಟವಾಗುತ್ತ ಹೋಗುತ್ತದೆ, ಹಾಗಾಗಿ ಅದು ಸುಧಾರಣೆಗೊಳಪಡುತ್ತ ಇರಬೇಕಾಗುತ್ತದೆ ಎಂಬುದು ಪ್ರೊಟೆಸ್ಟಾಂಟರ ವಾದ. ಈ ಭ್ರಷ್ಟತೆಯನ್ನು ಹೇಗೆ ಅಳೆಯಬೇಕು? ಈ ಪ್ರಶ್ನೆಯನ್ನು ಉತ್ತರಿಸುವ ಸಲುವಾಗಿ ಪೇಗನ್ನರ ಆಚಾರಗಳನ್ನು ಭ್ರಷ್ಟ ರಿಲಿಜನ್ನಿಗೆ ಪ್ರಮಾಣವನ್ನಾಗಿ ತರಲಾಯಿತು. ಪ್ರಾಚೀನ ರೋಮನ್ನರನ್ನು ಪೇಗನ್ನರೆಂಬುದಾಗಿ ಕ್ರೈಸ್ತರು ಕರೆಯುತ್ತಿದ್ದರು. ರೋಮನ್ನರು ವಿಗ್ರಹಾರಾಧಕರಾಗಿದ್ದರು. ಮಧ್ಯಕಾಲದಲ್ಲಿ ಪೇಗನಿಸಂ ಸುಳ್ಳು ರಿಲಿಜನ್ನಿಗೆ ಮತ್ತೊಂದು ಹೆಸರಾಯಿತು ಹಾಗೂ ಐಡೋಲೇಟ್ರಿಯ ಕುರಿತು ಕ್ರೈಸ್ತ ಥಿಯಾಲಜಿಯಲ್ಲಿ ನಿರೂಪಣೆಗಳು ಬೆಳೆದವು. ಐಡೋಲೇಟ್ರಿಯು ಡೆವಿಲ್ಲನ ಮೋಸವಾಗಿದೆ ಹಾಗೂ ಆ ಕಾರಣದಿಂದ ಪಾಪ ಹಾಗೂ ಅನೈತಿಕ ಕಾರ್ಯವಾಗಿದೆ ಎಂಬ ನಂಬಿಕೆ ಕ್ರೈಸ್ತರಲ್ಲಿ ಗಟ್ಟಿಯಾಯಿತು. ಕ್ಯಾಥೋಲಿಕರೂ ಕೂಡ ಈ ಐಡೋಲೇಟ್ರಿಯನ್ನು ಅಳವಡಿಸಿಕೊಂಡು ಭ್ರಷ್ಟರಾಗಿದ್ದಾರೆ ಎಂಬುದಾಗಿ ಪ್ರೊಟೆಸ್ಟಾಂಟರು ಆರೋಪಿಸಿದರು.

ಪ್ರೊಟೆಸ್ಟಾಂಟ್ ಪ್ರತಿಪಾದನೆಗಳು ಯುರೋಪಿನಲ್ಲಿ ಸಾಮಾನ್ಯಜ್ಞಾನವಾಗಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಯುರೋಪಿನ ಪ್ರವಾಸಿಗರು ಭಾರತ, ಚೀನಾ ಇತ್ಯಾದಿ ದೇಶಗಳ ಸಂಸ್ಕೃತಿಯನ್ನು ಕಂಡರು. ಈ ಜನರು ಅವರಿಗೆ ಥಿಯಾಲಜಿಯ ಪೇಗನ್ನರಂತೇ ಕಂಡರು. ಇವರನ್ನೂ ಕೂಡ ಸಾಂಸ್ಕೃತಿಕವಾಗಿ ಪ್ರಾಚೀನ ಪೇಗನ್ನರಿಗೇ ಸಮೀಕರಿಸಲಾಯಿತು. ಅಂದರೆ ಇವರೂ ಐಡೋಲೇಟರ್ಗಳಾಗಿದ್ದು ಪತಿತರಾಗಿದ್ದಾರೆ ಎಂದು ಭಾವಿಸಿ ಇವರನ್ನು ಹೀದನ್ನರು ಎಂಬುದಾಗಿ ಕರೆದರು. ಅಂದಿನವರ ಪ್ರವಾಸೀ ಕಥನಗಳಲ್ಲಿ ಭಾರತೀಯರ ಅನೈತಿಕ ಆಚರಣೆಗಳು, ಭ್ರಷ್ಟತೆ, ಅಮಾನವೀಯ ಪದ್ಧತಿಗಳು, ಮೌಢ್ಯ ಇತ್ಯಾದಿಗಳನ್ನು ಅತಿಶಯೋಕ್ತಿಮಾಡಿ ಬಣ್ಣಿಸಲಾಯಿತು. ಅಂದರೆ ಹೀದನ್ ಸಂಸ್ಕೃತಿಯೊಂದು ಐರೋಪ್ಯ ಕಲ್ಪನೆಗೆ ಹೇಗಿರಬೇಕೋ ಹಾಗೇ ಚಿತ್ರಣಗಳು ರೂಪುಗೊಂಡವು. ಐರೋಪ್ಯರಿಗೆ ಪ್ರಪಂಚದ ಇತರ ಹೀದನ್ ಜನರ ಕುರಿತೂ ಇಂಥ ವರ್ಣರಂಜಿತ ಕಥನಗಳು ಲಭ್ಯವಾದವು. ಅಂದರೆ ಪೇಗನಿಸಂ ಎಂಬ ಒಂದು ವಿಲಕ್ಷಣ ಮೃಗವು ಪ್ರಪಂಚದಾದ್ಯಂತ ತನ್ನ ಅಸ್ತಿತ್ವವನ್ನು ತಳೆಯಿತು.

ಭಾರತದ ಕುರಿತು ಜ್ಞಾನೋದಯ ಯುಗದ ಸೆಕ್ಯುಲರ್ ಚಿಂತನೆಗಳು ಇಂತಹ ಚಿತ್ರಣಗಳನ್ನು ಆಧರಿಸಿ ರೂಪುಗೊಂಡವು. ಸೆಕ್ಯುಲರ್ ಚಿಂತಕರಿಗೆ ಪ್ರಪಂಚದ ಜನರ ಕುರಿತು ಒಂದು ಸ್ಥೂಲ ಚಿತ್ರಣವು ಇದರಿಂದ ಲಭ್ಯವಾಯಿತು. ಅದರ ಪ್ರಕಾರ ಈ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಅನಾಗರಿಕತೆಯ ವಿಭಿನ್ನ ಹಂತಗಳಲ್ಲಿರುವ ಜನರು ವಾಸಿಸುತ್ತಿದ್ದಾರೆ. ಅವರ ನಡಾವಳಿಗಳು ವಿಲಕ್ಷಣವಾಗಿಯೂ, ವಿಕೃತವಾಗಿಯೂ ಇವೆ ಹಾಗೂ ಅವರಲ್ಲಿ ನೈತಿಕತೆ ಹಾಗೂ ಮಾನವೀಯತೆಗಳು ವಿಕಾಸದ ವಿಭಿನ್ನ ಹಂತಗಳಲ್ಲಿವೆ. ಅವರು ತಮ್ಮ ಈ ಜ್ಞಾನವನ್ನೇ ಆಧರಿಸಿ ಸಮಾಜಜ್ಞಾನಕ್ಕೆ ಬುನಾದಿಯನ್ನು ಹಾಕಿದರು. ಈ ಸಮಾಜಜ್ಞಾನದಲ್ಲಿ ಎರಡು ಅಂಶಗಳು ನಿರ್ಣಾಯಕವಾಗಿವೆ:
1. ಈ ಎಲ್ಲಾ ಸಂಸ್ಕೃತಿಗಳ ಇತಿಹಾಸವೂ ಕೂಡ ಏಕೈಕ ಮನುಕುಲದ ಪ್ರಗತಿಯ ಕಥೆಯಾಗಿದೆ. 2. ಆ ಮನುಕುಲದಲ್ಲಿ ವಿಕಾಸದ ವಿಭಿನ್ನ ಹಂತಗಳಲ್ಲಿರುವ ಸಂಸ್ಕೃತಿಗಳಿವೆ. ಆದಿಮ ಜನರು ಅತ್ಯಂತ ಬರ್ಬರರಾಗಿದ್ದು ಅತ್ಯಂತ ಕೆಳಹಂತದಲ್ಲಿದ್ದರೆ, ಪೇಗನ್ನರು ಅವರಿಗಿಂತ ಮೇಲಿದ್ದಾರೆ. ಅವರಿಗಿಂತಲೂ ಮೇಲೆ ರಿಲಿಜನ್ನಿನ ಪರಿಪೂರ್ಣ ಕಲ್ಪನೆಯನ್ನು ಪಡೆದವರು ಹಾಗೂ ಎಲ್ಲರಿಗಿಂತ ಎತ್ತರದಲ್ಲಿ ಸೆಕ್ಯುಲರ್ ಜ್ಞಾನೋದಯವನ್ನು ಕಂಡ ಐರೋಪ್ಯರಿದ್ದಾರೆ.

ಜ್ಞಾನೋದಯ ಯುಗದ ಚಿಂತಕರು ಈ ಮೇಲಿನ ಮನುಕುಲದ ವಿಕಾಸದ ಕುರಿತ ಕಥೆಯನ್ನು ರೂಪಿಸುವಾಗ ರಿಲಿಜನ್ನು ಸಾರ್ವತ್ರಿಕವಾದ ಸಂಗತಿ ಎಂಬುದಾಗಿ ಭಾವಿಸಿ ಮನುಕುಲದ ಪ್ರಗತಿಯನ್ನು ಅದಕ್ಕೆ ತಳುಕುಹಾಕಿದರು. ರಿಲಿಜನ್ನಿನ ಕುರಿತು ಸೆಕ್ಯುಲರ್ ಚಿತ್ರಣದ ಪ್ರಕಾರ ಮಾನವನು ಸೆಮೆಟಿಕ್ ರಿಲಿಜನ್ನಿನಂಥ ರಿಲಿಜನ್ನನ್ನು ಕಲ್ಪಿಸಿಕೊಳ್ಳುವ ಹಂತವು ಅವನ ಬೌದ್ಧಿಕ ವಿಕಾಸದಲ್ಲಿ ಮೇಲಿನ ಹಂತವಾಗಿದೆ. ಏಕೆಂದರೆ ಈ ರಿಲಿಜನ್ನುಗಳಲ್ಲಿ ಮಾನವನು ಈ ವಿಶ್ವದ ಹಿಂದಿರಬಹುದಾದ ಅಗೋಚರವಾದ ಒಂದು ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುತ್ತಾನೆ ಹಾಗೂ ಈ ವ್ಯವಸ್ಥೆಯ ಹಿಂದಿನ ನಿಯಮವನ್ನೂ ಅದಕ್ಕೆ ಕಾರಣೀಭೂತವಾದ ಶಕ್ತಿಯನ್ನೂ ಕಲ್ಪಿಸಿಕೊಳ್ಳುತ್ತಾನೆ. ಈ ರೀತಿಯ ಕಲ್ಪನೆಯನ್ನು ಅಮೂರ್ತ (ಅಬ್ಸ್ಟ್ರಾಕ್ಟ್) ಚಿಂತನೆ ಎಂಬುದಾಗಿ ಗುರುತಿಸಲಾಯಿತು. ಹಾಗೂ ರಿಲಿಜನ್ನಿನ ಮೂಲಕ ವಿಶ್ವದ ಕುರಿತು ನೀಡಿದ ವಿವರಣೆಯನ್ನು ವೈಜ್ಞಾನಿಕ ವಿವರಣೆಯನ್ನು ಹೊಂದುವ ಹಂಬಲವೆಂಬುದಾಗಿ ಗುರುತಿಸಲಾಯಿತು. ಈ ಅಮೂರ್ತ ವ್ಯವಸ್ಥೆಯನ್ನು ಕುರಿತು ವೈಜ್ಞಾನಿಕವಾಗಿ ಚಿಂತಿಸಲು ನಿಜವಾಗಿಯೂ ಸಮರ್ಥರಾದ ಆಧುನಿಕ ಪಾಶ್ಚಾತ್ಯ ಚಿಂತಕರೇ ಮನುಕುಲದ ಪ್ರೌಢಾವಸ್ಥೆಯನ್ನು ತಲುಪಿದ ಸದಸ್ಯರಾಗಿದ್ದಾರೆ. ಈ ಅಮೂರ್ತ ವ್ಯವಸ್ಥೆಯನ್ನು ಕಲ್ಪಿಸುವ ಹಂತಕ್ಕೇ ಏರದ ಜನರು ಮಾನಸಿಕವಾಗಿ ಇನ್ನೂ ಬೆಳವಣಿಗೆ ಹೊಂದದವರು ಎಂಬ ತೀರ್ಮಾನಕ್ಕೆ ಬರಲಾಯಿತು.

ಈ ವಿವರಣೆಯು ರಿಲಿಜನ್ನಿನ ವಿಕಾಸದ ಇತಿಹಾಸವನ್ನೂ ರೂಪಿಸಿತು. ಆದಿಮ ಮಾನವರು ನಿಸರ್ಗದ ಸಂಗತಿಗಳನ್ನು ಮೂರ್ತರೂಪದಲ್ಲಿ ನೇರವಾಗಿ ಆರಾಧಿಸುತ್ತಿದ್ದರು. ನಂತರದ ಹಂತದಲ್ಲಿ ಈ ನೈಸರ್ಗಿಕ ಸಂಗತಿಗಳಿಗೆ ದೈವೀ ರೂಪವನ್ನು ನೀಡಿದರು. ನಂತರ ಈ ವಿಕಾಸದ ಅತ್ಯುಚ್ಛ ಹಂತವಾಗಿ ಈ ನಿಸರ್ಗದ ಹಿಂದೆ ಕಾರಣ ಶಕ್ತಿಯಾಗಿ ಏಕಮಾತ್ರ ದೇವನನ್ನು ಹಾಗೂ ಆತನ ನಿಯಮಗಳನ್ನೂ ಕಲ್ಪಿಸಿದರು. ಈ ತರ್ಕದ ಮೂಲಕ ಭಾರತೀಯರನ್ನು ಅರ್ಥೈಸಿದ ಈ ಚಿಂತಕರು ಭಾರತೀಯರು ಸಸ್ಯ, ಪ್ರಾಣಿ, ನದಿ ಇತ್ಯಾದಿಗಳಿಗೆ ದೈವತ್ವವನ್ನು ಆರೋಪಿಸಿ ಪೂಜಿಸುವ ಕಾರಣದಿಂದ ಅವರಲ್ಲಿ ಅಮೂರ್ತ ಚಿಂತನಾಶಕ್ತಿಯು ವಿಕಾಸಹೊಂದಿಲ್ಲ ಎಂಬ ನಿರ್ಣಯಕ್ಕೆ ಬಂದರು. ಇಲ್ಲಿನ ಇತಿಹಾಸ-ಪುರಾಣಗಳನ್ನು ಗಮನಿಸಿದ ಚಿಂತಕರು ಭಾರತೀಯರಿಗೆ ಪ್ರೌಢವಾಗಿ ಯೋಚಿಸುವ ಸಾಮರ್ಥ್ಯವವೇ ಇಲ್ಲದಿರುವುದರಿಂದ ಸತ್ಯ-ಸುಳ್ಳುಗಳ, ಕನಸು-ವಾಸ್ತವಗಳ ತಾರತಮ್ಯಜ್ಞಾನವೇ ಅವರಿಗಿಲ್ಲ ಎಂದುಕೊಂಡರು. ಈ ರೀತಿಯಲ್ಲಿ ಸಾವಿರಾರು ವರ್ಷಗಳ ಹಿಂದೆ ರಿಲಿಜನ್ನಿನ ಉಗಮಕ್ಕೂ ಪೂರ್ವದಲ್ಲಿದ್ದ ಮನುಷ್ಯನ ಅವಸ್ಥೆಯು ಇಂದೂ ಭಾರತದಂತಹ ದೇಶಗಳಲ್ಲಿ ಜೀವಂತವಾಗಿ ಉಳಿದುಕೊಂಡು ಬಂದಿದೆ, ಗತಕಾಲವು ವರ್ತಮಾನದಲ್ಲೂ ಮುಂದುವರಿಯುತ್ತಿದೆ ಎಂಬುದಕ್ಕೆ ಭಾರತವು ದೃಷ್ಟಾಂತವಾಯಿತು.

ಭಾರತವು ಮನುಕುಲದ ಪ್ರಾರಂಭಿಕ ಅವಸ್ಥೆಯನ್ನು ಪ್ರಕಟಪಡಿಸುತ್ತಿದ್ದುದರಿಂದ ಅದು ಮನುಕುಲದ ಬಾಲ್ಯಾವಸ್ಥೆಯನ್ನು ನಿದರ್ಶಿಸಿತು. ಭಾರತೀಯ ಸಂಸ್ಕೃತಿಯನ್ನು ಸಹಜವಾಗಿಯೇ ಮನುಕುಲದ ಬಾಲ್ಯಾವಸ್ಥೆ ಎಂಬುದಾಗಿ ಐರೋಪ್ಯ ಚಿಂತಕರು ವರ್ಣಿಸಿದರು. ಇದನ್ನೇ ರೋಮ್ಯಾಂಟಿಕ್ ಚಿಂತಕರು ಭಾರತದ ಹೆಚ್ಚುಗಾರಿಕೆಯೆಂಬಂತೇ ಪ್ರಶಂಸಿಸಿದ್ದು ಕಂಡುಬರುತ್ತದೆ. ಜ್ಞಾನೋದಯ ಚಿಂತಕರಿಗೆ ಕೊರತೆಯಾಗಿ ಕಂಡದ್ದು ರೋಮ್ಯಾಂಟಿಕ್ ಚಿಂತಕರಿಗೆ ಸದ್ಗುಣವಾಗಿ ಕಂಡಿತು. ಐರೋಪ್ಯರ ನಾಗರೀಕತೆಯ ಉತ್ಕೃಷ್ಟ ಅಂಶಗಳೆಲ್ಲ ಭಾರತದಲ್ಲಿ ಉಗಮವಾಗಿವೆ ಎಂಬುದಾಗಿ ಅವರು ವಾದಿಸಿದರು ಹಾಗೂ ಅದನ್ನು ಮಾನವ ನಾಗರೀಕತೆಯ ತೊಟ್ಟಿಲು ಎಂಬುದಾಗಿ ವರ್ಣಿಸಿದರು. ಅಂದರೆ ರೋಮ್ಯಾಂಟಿಕ್ ಚಿಂತಕರ ಪ್ರಕಾರ ಮನುಕುಲದ ಬಾಲ್ಯವೇ ಭಾರತ. ಆದರೆ ಭಾರತವು ಮುಂದಿನ ಹಂತಗಳನ್ನು ತುಳಿದ ವಿಷಯವನ್ನು ಅವರು ಕೂಡಾ ಪ್ರಸ್ತಾಪಿಸುವುದಿಲ್ಲ. ಅಂದರೆ ಒಟ್ಟಾರೆಯಾಗಿ ಈ ಎಲ್ಲಾ ಚಿಂತಕರೂ ಸೇರಿ ಭಾರತವೆಂಬ ಅದ್ಭುತ ಶಿಶುವು ಸಾವಿರಾರು ವರ್ಷಗಳಿಂದಲೂ ತೊಟ್ಟಿಲಲ್ಲಿ ಬೆರಳು ಚೀಪುತ್ತ ಮಲಗಿಕೊಂಡೇ ಇದೆ ಎಂಬ ಚಿತ್ರಣವನ್ನು ಕಟ್ಟಿಕೊಟ್ಟರು.

ಇದೇ ಚಿತ್ರಣದ ಮತ್ತೊಂದು ಆವೃತ್ತಿಯ ಪ್ರಕಾರ ಭಾರತವು ಬದಲಾವಣೆ ರಹಿತವಾದ ಜಡ ಸಮಾಜವಾಗಿದೆ. ಕಾರಣವೆಂದರೆ ಸಾವಿರಾರು ವರ್ಷಗಳಿಂದಲೂ ಅದರ ಜಾತಿ ವ್ಯವಸ್ಥೆ ಎಂಬ ಜಾಡ್ಯದಿಂದಾಗಿ ಅದು ಬೆಳವಣಿಗೆಯನ್ನು ನಿಲ್ಲಿಸಿಬಿಟ್ಟಿದೆ. ಇದನ್ನು ಪೌರ್ವಾತ್ಯ ನಿರಂಕುಶ ಪ್ರಭುತ್ವ, ಏಶಿಯಾಟಿಕ್ ಉತ್ಪಾದನಾ ವಿಧಾನ ಇತ್ಯಾದಿ ಸಿದ್ಧಾಂತಗಳಿಂದ ವಿವರಿಸುವ ಪ್ರಯತ್ನಗಳು ನಡೆದಿವೆ. ನಮ್ಮ ಯಾವುದೇ ಸಮಾಜ ವಿಜ್ಞಾನ ಪುಸ್ತಕಗಳನ್ನು ಓದಿದರೂ ಜಾತಿ ವ್ಯವಸ್ಥೆಯೆಂಬುದು ಬದಲಾವಣೆಯನ್ನು ವಿರೋಧಿಸುವ ಒಂದು ಶಕ್ತಿ ಎಂಬ ಕುರಿತು ಅವು ಸಂದೇಹವನ್ನುಳಿಸುವುದಿಲ್ಲ. ಭಾರತೀಯ ಜಾತಿವ್ಯವಸ್ಥೆ ಹಾಗೂ ಸಾಂಪ್ರದಾಯಗಳು ಪ್ರೌಢಾವಸ್ಥೆಯ ಕಡೆಗಿನ ನಮ್ಮ ಪ್ರಯಾಣವನ್ನು ಮನುಕುಲದ ಬಾಲ್ಯಾವಸ್ಥೆಗೆ ಮರಳಿ ಕೊಂಡೊಯ್ಯುತ್ತವೆ. ಹಾಗಾಗಿ ಅವು ಪ್ರತಿಗಾಮೀ ಶಕ್ತಿಗಳಾಗುತ್ತವೆ. ಮೇಲೆ ಉಲ್ಲೇಖಿಸಿದ ಜ್ಞಾನೋದಯ ಚಿಂತಕರ ಕಥೆಯು ಗೊತ್ತಿಲ್ಲದಿದ್ದರೆ ಈ ಹೇಳಿಕೆಗಳು ನಮಗೆ ಅರ್ಥವಾಗುವ ಸಾಧ್ಯತೆಯೇ ಇಲ್ಲ.

Advertisements
 1. vidya
  ಡಿಸೆಂಬರ್ 7, 2013 ರಲ್ಲಿ 6:18 ಅಪರಾಹ್ನ

  ನೀವು ಬೇರೆಯವರ ಹೇಳಿಕೆ ಮಾತ್ರ ಕೊಟ್ಟೀದ್ದೀರಿ . ಆದರೆ ಭಾರತೀಯ ಸಮಾಜ ಬದಲಾಗಿದೆಯೋ ಇಲ್ಲವೋ ಎಂದು ಆಧಾರ ಸಹಿತ ವಿವರಿಸಿಲ್ಲವಲ್ಲ ಸರ್. ಅಥವಾ ಅದಕ್ಕಾಗಿ ಮುಂದಿನ ಲೇಖನದ ವರೆಗೆ ಕಾಯಬೇಕಾ?

  Like

 2. ಡಿಸೆಂಬರ್ 12, 2013 ರಲ್ಲಿ 8:58 ಅಪರಾಹ್ನ

  ಭಾರತೀಯ ಸಮಾಜ ಬದಲಾಗುತ್ತಿದೆಯೆ ಎಂಬುದು ನಿಮ್ಮ ಅನುಮಾನವೆ? ಸಮಾಜ ಬದಲಾಗುತ್ತಿರುವುದಕ್ಕೆ ಎಂತಹ ಆಧಾರಗಳನ್ನು ನಿರಿಕ್ಷೀಸುತ್ತಿದ್ದೀರಿ?

  Like

 3. vidya
  ಡಿಸೆಂಬರ್ 12, 2013 ರಲ್ಲಿ 11:23 ಅಪರಾಹ್ನ

  ವೇದ ಕಾಲದಲ್ಲಿದ್ದ ಆಚರಣೆಗಳಲ್ಲಿ ಇನ್ನೂ ಕೆಲವು ಹಾಗೇ ಇವೆ. ಉದಾಹರಣೆಗೆ ಉಪನಯನ ಸಂಸ್ಕಾರ, ಮದುವೆಯ ಪದ್ಧತಿಗಳು, ಸ್ತ್ರೀಯರ ಸ್ಥಾನಮಾನಗಳು, ಯಜ್ಞಾಚರಣೆ,ಪೂಜಾ ವಿಧಾನಗಳು ಇವುಗಳಲ್ಲಿ ಬಹಳವೇನು ವ್ಯತ್ಯಾಸಗಳಾಗಿಲ್ಲವಲ್ಲ? ಬೇರೆ ದೇಶಗಳ ಧರ್ಮಾಚರಣೆಗಳಂತೆ ನಮ್ಮ ವಿಧಾನಗಳಲ್ಲಿ ವಿಚಾರಗಳಲ್ಲಿ ಬಹಳ ಬದಲಾವಣೆಗಳಿಲ್ಲ. ಹಾಗೆ ಆಗಿದ್ದರೆ ವಿವರವಾಗಿ ತಿಳಿಸಿ ಪ್ಲೀಜ್.

  Like

 4. ಡಿಸೆಂಬರ್ 13, 2013 ರಲ್ಲಿ 12:22 ಅಪರಾಹ್ನ

  ವಿದ್ಯಾರವರೆ

  ನಿಮ್ಮ ಪ್ರಶ್ನೆಗೆ ಎರಡು ರೀತಿಯಲ್ಲಿ ಉತ್ತರ ನೀಡಬಹುದು..

  ಮೊದಲನೆ ಸಾಧ್ಯತೆ: ಹೌದು ಸಮಾಜ ಎಲ್ಲಾ ರೀತಿಯಲ್ಲೂ ಬದಲಾಗುತ್ತಿದೆ. ಬಟ್ಟೆ ಬಳಸಲು ತಿಳಿಯದಿದ್ದ ಮಾನವ ಇಂದು ಅಗತ್ಯಕ್ಕಿಂತ ಹೆಚ್ಚು ಮತ್ತು ಕಡಿಮೆ ಬಟ್ಟೆಗಳನ್ನು ಬಳಸುವುದುನ್ನು ಕಲಿತಿದ್ದಾನೆ. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಸಮಾಜ ಬದಲಾಗಿದೆ. ವಿಜ್ಞಾನ, ತಂತ್ರಜ್ಞಾನಗಳು ಸಾಕಷ್ಟು ಬೆಳೆದಿವೆ. ಧಾರ್ಮಿಕ ಗುರುಗಳಿಗೆ ಮಠ ಮಂದಿರಗಳನ್ನು ನಿರ್ಮಿಸುವ ಪರಿಪಾಠ ಬೆಳೆದಿದೆ.ಆರ್ಥಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಹಣಕಾಸು ಹರಿದಾಡುತ್ತಿದೆ. ಪ್ರೇಮಿಗಳ ದಿನಾಚರಣೆ, ಭೂತಕೋಲಗಳ ಆಧುನಿಕತೆ, ಡೇಟಿಂಗ್, ಚಾಟಿಂಗ್, ಶಿಕ್ಷಣದಲ್ಲಾದ ಬದಲಾವಣೆಗಳು..ಇವೆಲ್ಲವೂ ಸಹ ಬದಲಾವಣೆಯ ದ್ಯೋತಕಗಳಾಗಿವೆ..

  ಎರಡನೆಯ ಸಾಧ್ಯತೆ:ಸಾಮಾಜಿಕ ಬದಲಾವಣೆಗೂ ಆಚರಣೆಗಳ ಬದಲಾವಣೆಗೂ ಏನು ಸಂಬಂಧ? ಅಂದರೆ ಆಚರಣೆಗಳು ಬದಲಾದರೆ ಸಮಾಜವು ಬದಲಾಗಿದೆ ಎಂದು ಅರ್ಥವೆ? ವೇದಕಾಲಗಳಲ್ಲಿನ ಆಚರಣೆಗಳು ಹಾಗೆ ಇವೆ ಎನ್ನುವುದಕ್ಕೆ 2 ತರಹದ ಸಾಕ್ಷ್ಯಗಳು ಬೇಕಾಗುತ್ತವೆ.1. ವೇದಗಳ ಕಾಲದಿಂದಲೇ ಪ್ರಾರಂಭವಾದವು ಎನ್ನುವುದಕ್ಕೆ ಪುರಾವೆ ಹಾಗೂ 2. ಅವುಗಳು ವೇದಗಳ ಕಾಲದಲ್ಲಿ ಇದ್ದ ಸ್ಥಿತಿಯಲ್ಲೇ ಇವೆ ಎನ್ನುವುದಕ್ಕೆ ಮತ್ತೊಂದು ತೆರನಾದ ಪುರಾವೆಗಳು. ಆದರೆ ಉಪನಯನ, ಮದುವೆ ಇವೆಲ್ಲವೂ ಈಗಲೂ ಇವೆ, ಅವುಗಳಲ್ಲಾದ ಬದಲಾವಣೆ ಅಥವಾ ಚಿರಸ್ಥಾಯಿಯಾಗಿ ಇರುವುದು ಸಮಾಜದ ಬದಲಾವಣೆ ಅಥವಾ ಜಡತ್ವದ ಪ್ರತೀಕವೆ? ಯಾವ ಆಚರಣೆಗಳನ್ನು ಬದಲಾಯಿಸಿದರೆ ಸಮಾಜ ಬದಲಾಗುತ್ತದೆ. ಯಾವ ಆಚರಣೆಗಳನ್ನು ಬದಲಾಯಿಸದಿದ್ದರೆ ಸಮಾಜ ನಿಂತ ನೀರಾಗುತ್ತದೆ ಎಂಬ ಸ್ಪಷ್ಟತೆ ನಮಗೆ ಬೇಕಾಗುತ್ತದೆ. ಹಾಗಾಗಿ ಆಚರಣೆಗಳನ್ನಿಟ್ಟುಕೊಂಡು ಸಮಾಜ ಬದಲಾಗಿದೆಯೇ ಇಲ್ಲವೆ ಎಂದು ಚರ್ಚಿಸುವುದು ಮುಗಿಯದ ದಾರಿಯಾಗುತ್ತದೆ. ಏಕೆಂದರೆ ಒಂದು ಆಚರಣೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಬದಲಾಗಿದೆ ನೋಡಿ ಎಂದು ತೋರಿಸಿದರೆ ಮತ್ತೊಂದು ಅದಕ್ಕೆ ವಿರುದ್ಧವಾದ ಆಚರಣೆ ಸಿಗಬಹುದು.

  ಮೇಲಿನ ಲೇಖನವು ಈ ಎರಡೂ ಸಾಧ್ಯತೆಗಳ ಆಚೆಗೆ ನಿಂತು ತನ್ನ ವಾದವನ್ನು ಮಂಡಿಸುತ್ತಿದೆ. ಈ ಎರಡೂ ಸಾಧ್ಯತೆಗಳು ಚರ್ಚೆಯನ್ನು ಬಹಳ ಮುಂದೆ ಕೊಂಡೊಯ್ಯಲಾರವು. ಲೇಖನದ ಪ್ರಕಾರ, ಭಾರತವು ತಪ್ಪಾದ ರಿಲಿಜನ್ ಹೊಂದಿರುವುದರಿಂದ ಹಾಗೂ ಪ್ರೀಸ್ಟ್ ಹುಡ್ ಇಲ್ಲಿನ ಸಮಾಜವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವುದರಿಂದ ಸಮಾಜವು ನಿಜವಾದ ರಿಲಿಜನ್ನಿನೆಡೆಗೆ ಸಾಗುತ್ತಿಲ್ಲ, ಹಾಗಾಗಿ ಸಮಾಜ ಬದಲಾಗದೆ ನಿಂತ ನೀರಂತಾಗಿದೆ ಎಂಬುದು. ಇದು ರಿಲಿಜನ್ ಅಧ್ಯಯನಕಾರರು ಕಟ್ಟಿಕೊಟ್ಟ ಚಿತ್ರಣ. ಇಂತಹ ಚಿತ್ರಣದಿಂದ ಪರೋಕ್ಷವಾಗಿ ಪ್ರಭಾವಿತರಾದ ಸಮಾಜವಿಜ್ಞಾನಗಳು ಇಂದು ಹಲವಾರು ಸಾಮಾಜಿಕ ಕಾರಣಗಳನ್ನು ಕೊಟ್ಟು ಭಾರತ ಹಿಂದುಳಿದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ ಎಂದು ವಿವರಿಸುತ್ತವೆ. ಕಾರ್ಲಮಾರ್ಕ್ಸ್ ಇದಕ್ಕೆ ಆರ್ಥಿಕ ಕಾರಣಗಳನ್ನು ನೀಡುವ ಮೂಲಕ ಹಿಂದುಳಿದೆ, ಜಡವಾಗಿದೆ ಎಂದು ಚಿತ್ರಿಸಿದ. ಆದರೆ ಸಮಾಜ ಮುಂದುವರೆಯುವುದು ಅಥವಾ ಜಡವಾಗಿರುವುದು ರಿಲಿಜನ್ ಹಾಕಿಕೊಟ್ಟ ನಿರ್ಧಾರಕ ಅಂಶಗಳಿಂದ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

  ಹಿಂದಿನ ಆಚರಣೆಗಳು ಸ್ವಲ್ಪ ಬದಲಾವಣೆಗಳೊಂದಿಗೆ ಇಂದೂ ಸಹ ಏಕೆ ಮುಂದುವರೆಯುತ್ತಿವೆ ಎಂಬುದು ಬೇರೆಯದೆ ಪ್ರಶ್ನೆಯಾಗಿದೆ. ಅದನ್ನು ಸಮಾಜ ಬದಲಾಗಿದೆಯೇ ಇಲ್ಲವೆ ಎಂಬ ಪ್ರಶ್ನೆಯಿಂದ ಹೊರಬಂದು ಚರ್ಚಿಸಿದರೆ ಉತ್ತಮವಾಗಬಹುದು.

  Like

 5. vidya
  ಡಿಸೆಂಬರ್ 16, 2013 ರಲ್ಲಿ 5:01 ಅಪರಾಹ್ನ

  ಆತ್ಮೀಯ ಸಂತೋಷರವರೆ, ವೇದ ಕಾಲದ ಎಷ್ಟೋ ಆಚರಣೆಗಳು ಇಂದಿಗೂ ಆಚರಿಸಲ್ಪಡುತ್ತಿವೆ. ವೇದ ಕಾಲವು ಇತ್ತೀಚೆಗೆ ನಾವು ತಿಳಿದುಕೊಂಡಂತೆ 10,000 ವರ್ಷಗಳ ಆಚಿಗಿನದು. ಯಾಕೆಂದರೆ ಋಗ್ವೇದದಲ್ಲಿ ವರ್ಣಿತವಾದ ತುಂಬಿ ಹರಿಯುತ್ತದೆಂದು ವರ್ಣಿತವಾದ ಸರಸ್ವತೀ ನದಿ ಬತ್ತಿ ಹೋಗಿ 10,000 ವರ್ಷಗಳಾಗಿವೆಯೆಂದು ನ್ಯಾಷನಲ್ ಜಿಯಾಗ್ರಫಿ ಶೋಧನೆ ಹೇಳುತ್ತದೆ. ಇರಲಿ, ಹತ್ತು ಸಾವಿರ ವರ್ಷಗಳಿಂದಲೂ ಕೆಲವು ಆಚರಣೆಗಳು ಅದು ಹೇಗೆ ಉಳಿದಿವೆ? ಆ ಆಚರಣೆಗಳು ಇಂದಿನ ಅಗತ್ಯಗಳೇನಲ್ಲ. ಆದರೂ ಉಳಿದಿವೆಯಲ್ಲ? ಉದಾಹರಣೆಗೆ ಉಪನಯನ, ಸಮಾವರ್ತನ, ಸಂಧ್ಯಾವಂದನೆ, ಶ್ರಾದ್ಧ ಕರ್ಮಗಳು ಇತ್ಯಾದಿ. ನನ್ನ ಕುತೂಹಲವೆಂದರೆ ಇವೆಲ್ಲ ಹ್ಯಾಗೆ ಉಳಿದವು? ಬೇರೆ ದೇಶದಲ್ಲೂ ಇಂಥ ಸಹಸ್ರ ಸಹಸ್ರ ವರ್ಷದ ಆಚರಣೆಗಳು ಉಳಿದಿವೆಯಾ?

  Like

 6. ಡಿಸೆಂಬರ್ 19, 2013 ರಲ್ಲಿ 5:12 ಅಪರಾಹ್ನ

  ಶತಮಾನಗಳಿಂದ ಕೆಲವು ಆಚರಣೆಗಳು ಏಕೆ ಉಳಿದುಕೊಂಡು ಬಂದಿವೆ ಎನ್ನುವುದಕ್ಕೂ ಸಾಮಾಜಿಕ ಬದಲಾವಣೆ ಆಗಿಲ್ಲ ಎಂದು ಹೇಳುವುದಕ್ಕೂ ಸಂಬಂಧವಿಲ್ಲ. ನಿಮ್ಮ ಪ್ರಶ್ನೆ ಸಾಮಾಜಿಕ ಬದಲಾವಣೆಯ ಕುರಿತಾದ್ದೋ ಅಥವಾ ಆಚರಣೆಗಳು ಏಕೆ ಉಳಿದುಕೊಂಡು ಬಂದಿವೆ ಎಂಬುದರ ಕುರಿತಾಗಿಯೊ? ಏಕೆಂದರೆ ಅವೆರಡೂ ವಿದ್ಯಮಾನಗಳು ಬೇರೆ ಬೇರೆಯಾಗಿವೆ, ಅವುಗಳನ್ನು ಮಿಶ್ರಣ ಮಾಡಿದರೆ ಗೊಂದಲಗಳು ಹೆಚ್ಚಾಗುತ್ತವೆ.

  ಪ್ರಾಚೀನ ಕಾಲದಿಂದಲೂ ಹಲವಾರು ಆಚರಣೆಗಳು ಇಂದು ಅಗತ್ಯವಿರದಿದ್ದರೂ ಏಕೆ ಉಳಿದುಕೊಂಡು ಬಂದಿವೆ? ಎಂಬ ಪ್ರಶ್ನೆಯು ಸಂಸ್ಕೃತಿಯ ವೈಶಿಷ್ಟ್ಯತೆಯನ್ನು ಅರ್ಥಮಾಡಿಕೊಳ್ಳುವ ಮಾರ್ಗಕ್ಕೆ ಕರೆದುಕೊಂಡು ಹೋಗುತ್ತದೆ. ಅಗತ್ಯ ಮತ್ತು ಅನಗತ್ಯಗಳ ನಡುವೆ ಆಚರಣೆಗಳು ಉಳಿದುಕೊಂಡು ಬರುತ್ತಿವೆ ಎಂದರೆ ನಮ್ಮ ಸಂಸ್ಕೃತಿಗೂ ಆಚರಣೆಗಳಿಗೂ ವಿಶಿಷ್ಟವಾದ ಸಂಬಂಧವಿದೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಆ ಸಂಬಂಧವನ್ನು ಇಂದು ನಾವು ಅರ್ಥಮಾಡಿಕೊಳ್ಳಬೇಕಿದೆ.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: