ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Cultural Studies, Culture, Hinduism, Religion > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 36 :ಸಾರ್ವತ್ರಿಕ ನಿಯಮಗಳಿಗೆ ಕಟ್ಟುಬಿದ್ದ ನಾರ್ಮೇಟಿವ್ ಜಗತ್ತು ಹಾಗೂ ಭಾರತೀಯ ಸಂದರ್ಭ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಭಾರತೀಯ ಸಾಂಪ್ರದಾಯಿಕ ಪದ್ಧತಿಗಳು ಕೆಲವೊಂದು ನಿಯಮಾವಳಿಗಳ ಮೇಲೆ ನಿಂತಿವೆ ಎಂಬುದಾಗಿ ಇಂದು ಪ್ರತಿಪಾದಿಸಲಾಗುತ್ತಿದೆ. ಇಂಥ ನಿಯಮಗಳನ್ನು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹುಡುಕಲಾಗುತ್ತದೆ. ಮನುಸ್ಮೃತಿಯಲ್ಲಿ ಬರುವ ಕೆಲವು ಹೇಳಿಕೆಗಳು ಭಾರತೀಯ ಸ್ತ್ರೀ ಶೂದ್ರರ ಸ್ಥಾನಮಾನವನ್ನು ನಿರ್ಣಯಿಸಿಬಿಟ್ಟಿದೆ ಎಂಬುದಾಗಿ ಹೇಳಲಾಗುತ್ತಿದೆ. ಸ್ತ್ರೀಯರಿಗೆ ಸ್ವಾತಂತ್ರ್ಯವೇ ಇರಕೂಡದು, ಶೂದ್ರರು ವೇದವನ್ನು ಕೇಳಿದರೆ ಅವರ ಕಿವಿಯಲ್ಲಿ ಕಾದ ಸೀಸವನ್ನು ಹಾಕಬೇಕು ಇತ್ಯಾದಿ ಕಾನೂನುಗಳನ್ನು ಮನುಸ್ಮೃತಿ ಮಾಡಿದೆ ಹಾಗೂ ಇಂದಿನ ಭಾರತೀಯರೂ ಅದನ್ನೇ ನಂಬಿಕೊಂಡು ಬಂದಿದ್ದಾರೆ ಎಂಬಂಥ ಬರೆಹಗಳೂ ಸಾಮಾನ್ಯ. ನಮ್ಮ ಸಾಮಾಜಿಕ ಇತಿಹಾಸವೇ ಇಂಥ ಚಿತ್ರಣಗಳಿಂದ ತುಂಬಿದೆ. ಉದಾಹರಣೆಗೆ ನಮ್ಮ ಪಠ್ಯ ಪುಸ್ತಕಗಳಲ್ಲಿ ಬರುವ ಪ್ರಕಾರ ವರ್ಣಾಶ್ರಮ ವ್ಯವಸ್ಥೆ ಎಂಬುದು ಪ್ರಾಚೀನ ಭಾರತೀಯರ ಸಾಮಾಜಿಕ ರಚನೆಯಾಗಿತ್ತು. ಅದನ್ನು ವೇದ ಕಾಲದಲ್ಲೇ ರಚಿಸಿ ಇಂತಿಂಥ ವರ್ಣಗಳಿಗೆ ಇಂತಿಂಥ ಕರ್ತವ್ಯ ಎಂಬ ನಿಯಮವನ್ನು ಮಾಡಲಾಯಿತು. ಆ ವರ್ಣಗಳನ್ನು ಒಂದು ತರತಮ ವ್ಯವಸ್ಥೆಯಲ್ಲಿ ನಿಬಂಧಿಸಲಾಯಿತು. ಎಲ್ಲರೂ ಆ ಪ್ರಕಾರವೇ ಜೀವನವನ್ನು ನಡೆಸಬೇಕಾಗಿತ್ತು. ಆ ಜನರು ಇದೇ ನಿಯಮಗಳ ಪ್ರಕಾರ ಜೀವನದಲ್ಲಿ ನಾಲ್ಕು ಆಶ್ರಮಗಳನ್ನು ಪಾಲಿಸಬೇಕಿತ್ತು. ಮೊದಲು ಬ್ರಹ್ಮಚರ್ಯ, ನಂತರ ಗೃಹಸ್ಥ, ವಾನಪ್ರಸ್ಥ ಹಾಗೂ ಕೊನೆಗೆ ಸನ್ಯಾಸ.

ಎಲ್ಲಾ ಭಾರತೀಯರೂ ಇವುಗಳನ್ನು ಪಾಲನೆ ಮಾಡುತ್ತಿದ್ದರೆ ಎಂಬ ಪ್ರಶ್ನೆ ಇಲ್ಲಿ ಗೌಣವೇಕೆಂದರೆ ಇಂದಿನ ಹಾಗೇ ಅಂದೂ ನಿಯಮಗಳನ್ನು ಭಂಜಿಸುವವರು ಇದ್ದೇ ಇದ್ದರು. ಭಂಜಿಸಿದವರಿಗೆ ಇಂದಿನ ಹಾಗೇ ಅಂದೂ ಶಿಕ್ಷೆಗಳೂ ಇರಲೇಬೇಕಲ್ಲ? ಆದರೆ ಆಶ್ರಮಧರ್ಮವನ್ನು ಪಾಲಿಸದಿದ್ದವರಿಗೆ ಯಾವ ಶಿಕ್ಷೆಗಳನ್ನು ಕೊಡುತ್ತಿದ್ದರು ಎಂಬುದನ್ನು ಎಲ್ಲೂ ಹೇಳಿಲ್ಲ. ಧರ್ಮಶಾಸ್ತ್ರಗಳು ವರ್ಣಸಂಕರವಾಗಿ ಹುಟ್ಟಿದ ಜಾತಿಗಳನ್ನು ಉಲ್ಲೆಖಿಸುತ್ತವೆಯೇ ವಿನಃ ವರ್ಣಗಳ ನಿಯಮಗಳನ್ನು ಮುರಿದವರಿಗೆ ಏನು ಶಿಕ್ಷೆ ಎಂಬುದನ್ನು ಹೇಳುವುದಿಲ್ಲ. ಶೂದ್ರರ ವೇದಾಧ್ಯಯನದ ಕುರಿತು ಮಾತ್ರವೇ ಅವು ಶಿಕ್ಷೆಗಳನ್ನು ಉಲ್ಲೇಖಿಸುತ್ತವೆ. ಅಂದರೆ ಈ ವಿಷಯವನ್ನು ಬಿಟ್ಟರೆ ವರ್ಣಾಶ್ರಮ ಧರ್ಮವೆಂಬುದು ಉಲ್ಲಂಘಿಸಿಯೂ ದಕ್ಕಿಸಿಕೊಳ್ಳಬಹುದಾದ ನಿಯಮಾವಳಿಯಾಗಿತ್ತು ಎಂಬುದಾಗಿ ತೆಗೆದುಕೊಳ್ಳಬೇಕೆ?

ಅದಕ್ಕಿಂತಲೂ ವಿಚಿತ್ರವಾದುದೆಂದರೆ ಪ್ರಾಚೀನರು ಅನುಸರಿಸುತ್ತಿದ್ದ ಎಂಟು ವಿಧದ ವಿವಾಹ ಪದ್ಧತಿ. ಅಂದಿನ ಯಾರಿಗಾದರೂ ವಿವಾಹವಾಗಬೇಕಿದ್ದಲ್ಲಿ ಈ ಯಾವುದಾದರೊಂದು ಪದ್ಧತಿಯನ್ನು ಅನುಸರಿಸುತ್ತಿದ್ದರೋ ಎಂಬಂತೇ ಪಠ್ಯಪುಸ್ತಕಗಳು ಬರೆಯುತ್ತವೆ. ಈ ವಿವಾಹಗಳಲ್ಲಿ ಅಸುರ, ರಾಕ್ಷಸ, ಪೈಶಾಚ ಇತ್ಯಾದಿ ಪ್ರಕಾರಗಳೂ ಇದ್ದವು. ಹುಡುಗಿಯನ್ನು ಬಲಾತ್ಕಾರವಾಗಿ ಹೊತ್ತುಕೊಂಡು ಹೋಗುವುದೂ ಅದರಲ್ಲಿ ಒಂದು. ಹಾಗಾಗಿ ಸ್ವಾಭಾವಿಕವಾಗಿಯೇ ಇಂಥ ಸಾಮಾಜಿಕ ನಿಯಮಗಳನ್ನು ಮಾಡಿದ ಸಂಸ್ಕೃತಿಯು ಅನೈತಿಕ ಹಾಗೂ ಅಮಾನವೀಯವಾಗಿ ಪಾಶ್ಚಾತ್ಯರಿಗೆ ಕಾಣಿಸಿತು. ಉದಾಹರಣೆಗೆ ವಾತ್ಸ್ಯಾಯನನ ಕಾಮಸೂತ್ರವೆಂಬ ಗ್ರಂಥದಲ್ಲಿ ಯಾವ ಯಾವ ಕಾರಣಗಳಿಗೆ ಸ್ನೇಹಿತನ ಪತ್ನಿಯೊಂದಿಗೆ ಹಾದರವನ್ನು ಮಾಡಿದರೆ ಹಾಗೂ ಕೊಲೆಯನ್ನು ಮಾಡಿದರೆ ತಪ್ಪಿಲ್ಲ ಎಂಬುದನ್ನು ವರ್ಣಿಸುವ ಸಾಲುಗಳು ಇವೆ. ಇಂಥ ಸಾಲುಗಳಂತೂ ನೀತಿವಂತರಿಗೆ ಆಘಾತಕಾರಿಯಾಗಿ ಕಾಣಿಸುವುದರಲ್ಲಿ ಸಂದೇಹವೇ ಇಲ್ಲ. ಹಾದರ ಹಾಗೂ ಕೊಲೆಯನ್ನು ಕೂಡ ಮಾನ್ಯ ಮಾಡಲಾಗಿತ್ತು ಎಂಬಂತೇ ಅದು ಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲೇ ಭಾರತೀಯ ಸಮಾಜವು ಅನೈತಿಕ ತಳಹದಿಯ ಮೇಲೆ ನಿಂತಿದೆ, ಅದು ಹಿಂದೂಯಿಸಂನ ಭ್ರಷ್ಟ ರೂಪವಾಗಿದೆ, ಭಾರತೀಯರಿಗೆ ನೈತಿಕ ತಿಳುವಳಿಕೆಯೇ ಕಡಿಮೆ, ಇತ್ಯಾದಿ ಟೀಕೆಗಳು ವಸಾಹತು ಕಾಲದ ಪಾಶ್ಚಾತ್ಯ ಬರವಣಿಗೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಈ ಮೇಲಿನ ಪರಿಸ್ಥಿತಿಯು ಒಂದು ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಭಾರತೀಯ ಸಂಸ್ಕೃತಿಯನ್ನು ಹೇಗೆ ಅರ್ಥೈಸಬೇಕು? ಈ ಸಮಾಜವು ಬಲಾತ್ಕಾರ, ಕಳ್ಳತನ, ಸುಳ್ಳುಹೇಳುವುದು, ಕೊಲೆ, ಹಾದರಗಳನ್ನು ನೀತಿಯೆಂದು ಪುರಸ್ಕರಿಸಿದ್ದಲ್ಲಿ ಸಾವಿರಾರು ವರ್ಷಗಳ ಕಾಲ ಬಾಳಿಕೊಂಡು ಬರಲು ಸಾಧ್ಯವೇ ಇಲ್ಲ. ಹಾಗಾಗಿ ಇಂಥ ಸಂಗತಿಗಳನ್ನು ಅದು ನೀತಿಯೆಂಬುದಾಗಿ ಪ್ರತಿಪಾದಿಸಲಿಕ್ಕೆ ಸಾಧ್ಯವೇ ಇಲ್ಲ. ಆದರೆ ಈ ಮೇಲೆ ಉಲ್ಲೇಖಿಸಿದ ಉದಾಹರಣೆಗಳನ್ನು ಅಲ್ಲಗಳೆಯುವುದು ಹೇಗೆ? ಕಿವಿಯಲ್ಲಿ ಕಾದ ಸೀಸವನ್ನು ಹುಯ್ಯುವುದನ್ನಾಗಲೀ, ಬಲಾತ್ಕಾರ ಮಾಡುವುದನ್ನಾಗಲೀ ಗ್ರಂಥಗಳು ಉಲ್ಲೇಖಿಸುತ್ತಿಲ್ಲ ಎಂದು ಹೇಗೆ ವಾದಿಸಲು ಸಾಧ್ಯ?

ನಾವು ಈ ಮೇಲಿನ ವರ್ಣನೆಗಳನ್ನು ಅಲ್ಲಗಳೆಯಬೇಕಿಲ್ಲ. ಆದರೆ ಅವುಗಳನ್ನು ಓದುತ್ತಿರುವ ರೀತಿಯಲ್ಲೇ ಏನೋ ಎಡವಟ್ಟಾಗುತ್ತಿದೆ ಎಂಬುದು ಸ್ಪಷ್ಟ. ಅಂದರೆ ನಮ್ಮ ಗ್ರಂಥಗಳಲ್ಲಿರುವ ಈ ಮೇಲಿನ ವಾಕ್ಯಗಳನ್ನು ಪಾಶ್ಚಾತ್ಯರು ತಮ್ಮ ನಾರ್ಮೇಟಿವ್ ಹೇಳಿಕೆಯನ್ನಾಗಿ ಬದಲಾಯಿಸಿ ಓದಿದ್ದಾರೆ. ನಾರ್ಮೇಟಿವ್ ಹೇಳಿಕೆಯು ನಾವು ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ನಿರ್ದೇಶಿಸುವ ವಾಕ್ಯವಾಗಿದೆ. ಹೀಗೆ ಹೇಳಿದಾಗ ಒಂದು ಪ್ರಶ್ನೆ ಏಳಬಹುದು. ನಮ್ಮ ಶಾಸ್ತ್ರಗಳ ಭಾಷೆಯೂ ಹೀಗೇ ಇರುವುದಿಲ್ಲವೆ? ಹೀಗೆ ಮಾಡಬೇಕು ಅಂತಲೇ ಅಲ್ಲವೆ ಅವು ಹೇಳುವುದು? ಸ್ತ್ರೀಗೆ ಸ್ವಾತಂತ್ರ್ಯವಿಲ್ಲ, ಕಾದ ಸೀಸವನ್ನು ಹುಯ್ಯಬೇಕು ಇಂಥ ವಾಕ್ಯಗಳು ನಾರ್ಮೇಟಿವ್ ಹೇಳಿಕೆಗಳಲ್ಲವೆ? ಆದರೆ ಹೀಗೆ ಇದ್ದಾಕ್ಷಣ ಅವು ನಾರ್ಮೇಟಿವ್ ಹೇಳಿಕೆಗಳಾಗಿಬಿಡುವುದಿಲ್ಲ. ಏಕೆಂದರೆ ನಾರ್ಮೇಟಿವ್ ಹೇಳಿಕೆಗೆ ಮತ್ತೊಂದು ಆಯಾಮವೂ ಇದೆ, ನಾರ್ಮೇಟಿವ್ ಭಾಷೆಯು ought ಎಂಬ ಪ್ರತ್ಯಯದ ಜೊತೆಗೂಡಿ ಪ್ರಯೋಗವಾಗುತ್ತದೆ. ಅದು ಸರಿ ತಪ್ಪುಗಳಿಗೆ ಸಂಬಂಧಿಸಿದ ಸಾರ್ವತ್ರಿಕ ನಿಯಮವನ್ನು ಕುರಿತು ತಿಳಿಸುತ್ತದೆ ಹಾಗೂ ಅದೇ ಸರಿಯಾದ್ದರಿಂದ ಅದನ್ನಾಧರಿಸಿದ ಕ್ರಿಯೆ ಮಾತ್ರವೇ ಸರಿ. ಒಂದೊಮ್ಮೆ ಎಲ್ಲರೂ ಅದಕ್ಕೆ ವಿರುದ್ಧವಾದುದನ್ನೇ ಸರಿ ಎಂಬುದಾಗಿ ನಂಬಿದರೂ ಕೂಡ ಆ ವಾಕ್ಯದ ಹೇಳಿಕೆಯು ಸುಳ್ಳಾಗುವುದಿಲ್ಲ. ಏಕೆಂದರೆ ಸತ್ಯ ಸುಳ್ಳಾಗಲು ಸಾಧ್ಯವೆ? ನಾರ್ಮೇಟಿವ್ ವಾಕ್ಯಗಳು ಮನುಷ್ಯ ಕ್ರಿಯೆಗೆ ಸಂಬಂಧಿಸಿದಂತೆ ಅಂಥ ಸತ್ಯಗಳನ್ನು ಹೇಳುತ್ತವೆ. ಹಾಗಾಗೇ ought ಎಂಬ ಕ್ರಿಯಾ ಪ್ರತ್ಯಯ ಅದಕ್ಕೆ ಇರಲೇಬೇಕು.

ought ಎಂಬ ಶಬ್ದದ ಅರ್ಥವಾಗಬೇಕಾದರೆ ಕ್ರೈಸ್ತ ಥಿಯಾಲಜಿಯಲ್ಲಿ ಅದರ ಸಂದರ್ಭವನ್ನು ತಿಳಿದುಕೊಳ್ಳಬೇಕಾಗುತ್ತದೆ. ಸೆಮೆಟಿಕ್ ರಿಲಿಜನ್ನುಗಳು ಗಾಡ್ನ ಹತ್ತು ಆಜ್ಞೆಯನ್ನು ಆಧರಿಸಿ ಇಂಥ ನೀತಿ ನಿಯಮಗಳನ್ನು ಪ್ರತಿಪಾದಿಸುತ್ತವೆ. ಅವುಗಳ ಪ್ರಕಾರ ನಾವೆಲ್ಲರೂ ನಮ್ಮೆಲ್ಲರ ಸೃಷ್ಟಿಕರ್ತನಾದ ಸತ್ಯದೇವನ ಆಳ್ವಿಕೆಗೆ ಬದ್ಧರಾಗಿದ್ದೇವೆ. ಅವನು ತನ್ನ ಹತ್ತು ಆಜ್ಞೆಗಳನ್ನು ಮೋಸೆಸ್ಗೆ ಸಿನಾಯ್ ಪರ್ವತದಲ್ಲಿ ನೀಡಿದ್ದಾನೆ. ಅದು ಮಾನವರಿಗೆಲ್ಲ ಆತನು ನೀಡಿದ ಕಟ್ಟುಪಾಡುಗಳು, ಅವನ ಉದ್ದೇಶವೇ ನಮ್ಮ ಸೃಷ್ಟಿಗೆ ಕಾರಣವಾಗಿರುವುದರಿಂದ ಅವನ ಆಜ್ಞೆಯೇ ನಮ್ಮನ್ನು ಆಳುತ್ತದೆ. ಅದನ್ನು ಉಲ್ಲಂಘಿಸುವುದು ಸಿನ್ ಆಗುತ್ತದೆ ಹಾಗೂ ಅಂಥ ಕೆಲಸದಿಂದ ಗಾಡ್ನ ಶಾಪಕ್ಕೆ ಒಳಗಾಗಿ ಶಾಶ್ವತವಾಗಿ ನರಕದಲ್ಲಿ ಕೊಳೆಯುತ್ತೇವೆ. ಮನುಷ್ಯನ ಅಂತಿಮ ಉದ್ಧಾರವೇ ಗಾಡ್ನನ್ನು ಮತ್ತೆ ಸೇರುವುದು. ಹಾಗಾಗಿ ಈ ಆಜ್ಞೆಗಳನ್ನು ಪಾಲಿಸುವುದನ್ನು ತಪ್ಪಿಸುವ ಪ್ರಶ್ನೆಯೇ ಇಲ್ಲ. ಅಂಥ ವ್ಯವಸ್ಥೆಗೊಳಪಟ್ಟ ನಾವು ಏನನ್ನು ಮಾಡಬೇಕು? ಯಾವುದು ಸರಿ? ಇತ್ಯಾದಿ ನೈತಿಕ ಪ್ರಶ್ನೆಗಳಿಗೆ ಗಾಡ್ ವಿಧಿಸಿದ ನಿಯಮಗಳೇ ಪ್ರಮಾಣಗಳು. ಆ ನಿಯಮಗಳನ್ನು ದೇವವಾಣಿಯನ್ನು ಆಧರಿಸಿ ಕಟ್ಟಿಕೊಡುವ ಹಾಗೂ ನಿರೂಪಿಸುವ ಕೆಲಸವೇ ಒಂದು ನಾರ್ಮೇಟಿವ್ ನೀತಿ ಸಂಹಿತೆಯ ಶೋಧನೆಗೆ ದಾರಿ ಮಾಡಿತು.

ಪಾಶ್ಚಾತ್ಯ ಸಮಾಜದಲ್ಲಿ ಜ್ಞಾನೋದಯ ಯುಗದಲ್ಲಿ ಮಾನವ ಸಮಾಜದ ಕುರಿತು ಸೆಕ್ಯುಲರ್ ಚಿಂತನೆಗಳು ಬೆಳೆಯಲು ಪ್ರಾರಂಭವಾದವು. ಆಗ ನೀತಿ ಅನೀತಿಗಳ ಕುರಿತ ಸೆಕ್ಯುಲರ್ ಜಿಜ್ಞಾಸೆಗಳೂ ಪ್ರಾರಂಭವಾದವು. ದೇವವಾಣಿಯನ್ನೂ, ಅದರ ಕುರಿತ ಕಥೆಗಳನ್ನೂ ಈ ಚಿಂತಕರು ತಿರಸ್ಕರಿಸಿದರೂ ಕೂಡ, ಮನುಷ್ಯ ಸಮಾಜಕ್ಕೆ ಆಧಾರಭೂತವಾಗಿ ಸಾರ್ವತ್ರಿಕ ಪ್ರಮಾಣಗಳುಳ್ಳ ನಿಯಮಗಳು ಇರುತ್ತವೆ, ಇಲ್ಲದಿದ್ದಲ್ಲಿ ಸಮಾಜವು ನಾಶವಾಗುತ್ತದೆ ಎನ್ನುವ ಧೋರಣೆಯು ಅವರ ಪೂರ್ವಗ್ರಹೀತವಾಗಿ ಕೆಲಸಮಾಡಿತು. ಹಾಗಾಗಿ ಅವರ ನೈತಿಕ ಚಿಂತನೆಗಳು ought ಪರಿಭಾಷೆಯಲ್ಲಿಯೇ ರೂಪುಗೊಂಡವು. ದೈವಾಜ್ಞೆಯನ್ನು ಆಧರಿಸದೇ ಮಾನವೀಯತೆಯ ನೆಲೆಯಲ್ಲಿ ಗುರುತಿಸಬಹಾದಾದ ನಾರ್ಮೇಟಿವ್ ನೀತಿ ನಿಯಮಗಳಿಗಾಗಿ ಅವರು ಶೋಧಿಸತೊಡಗಿದರು. ಅಂದರೆ ಒಳ್ಳೆಯದು ಎಂಬುದು ಸಮಸ್ತ ಮಾನವರಿಗೂ ಸಂದರ್ಭಾತೀತವಾಗಿ ಹಾಗೂ ಸಾರ್ವತ್ರಿಕವಾಗಿ ಒಳ್ಳೆಯದಾಗಿರಲೇಬೇಕು. ಅಂಥವು ಸಾಮಾಜಿಕ ಮೌಲ್ಯ (social value) ಗಳಾಗಿರುತ್ತವೆ, ಹಾಗೂ ಎಲ್ಲರೂ ಅವನ್ನು ಸಾಧಿಸಲು ಪ್ರಯತ್ನಿಸಬೇಕು. ಅವುಗಳಿಂದಲೇ ಮನುಷ್ಯ ಸಮಾಜವು ಉದ್ಧಾರವಾಗುತ್ತದೆ.

ಈ ರೀತಿಯಲ್ಲಿ ಸಾರ್ವತ್ರಿಕ ಮಾನವ ಮೌಲ್ಯಗಳನ್ನು ಈ ಚಿಂತಕರು ಪ್ರತಿಪಾದಿಸಿದರು. ಈ ಮೌಲ್ಯಗಳಿಂದಲೇ ಮನುಕುಲ ಪ್ರಗತಿಹೊಂದುತ್ತದೆ ಹಾಗೂ ಅವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ನಮಗೆ ಬೇರೆ ಆಯ್ಕೆಯೇ ಇಲ್ಲ ಎಂಬ ಧೋರಣೆಯು ಇವರಲ್ಲಿ ಗಟ್ಟಿಯಾಗಿ ಇದೆ. ಆದರೆ ಈ ಧೋರಣೆಯಿದ್ದ ಮಾತ್ರಕ್ಕೇ ಸಾರ್ವತ್ರಿಕ ನೈತಿಕ ನಿಯಮಗಳು ಸಿಕ್ಕಿಬಿಡುವುದಿಲ್ಲ. ಹಾಗಾಗಿ ನಾರ್ಮೇಟಿವ್ ಎಥಿಕ್ಸಿನ ಹುಡುಕಾಟವು ಪಾಶ್ಚಾತ್ಯ ಚಿಂತಕರ ಒಂದು ಪ್ರಮುಖ ಬೌದ್ಧಿಕ ಚರ್ಚೆಯಾಗಿ ಬೆಳೆದುಬಂದಿದೆ. ಈ ಕುರಿತು ಅವರ ನಡುವೆ ವಿವಾದಗಳೇನೇ ಇರಬಹುದು, ಮನುಷ್ಯನ ಸಾಮಾಜಿಕ ನಡಾವಳಿಗಳು ನಾರ್ಮೇಟಿವ್ ನಿಯಮಗಳನ್ನು ಆಧರಿಸಿ ಇರುತ್ತವೆ, ಹಾಗೂ ಇರಬೇಕು ಎಂಬ ಧೋರಣೆ ಇವರಲ್ಲಿ ಮೂಲಭೂತವಾಗಿದೆ. ಈ ನಿಯಮಗಳನ್ನು ವಿಮರ್ಶಿಸಿ ಮರು ನಿರೂಪಿಸುತ್ತಾ ಸಮಾಜವನ್ನೂ ಬದಲಾಯಿಸುವುದು ಸಾಧ್ಯ ಹಾಗೂ ಅದು ಅತ್ಯಗತ್ಯವಾದ ಕೆಲಸ ಎಂಬುದೂ ಪಾಶ್ಚಾತ್ಯ ಸಮಾಜ ಚಿಂತಕರ ಧೋರಣೆಯಾಗಿದೆ.

ಈ ಧೋರಣೆಯನ್ನಿಟ್ಟುಕೊಂಡ ಸಮಾಜ ವಿಜ್ಞಾನಿಗಳು ಭಾರತದಂತಹ ಅನ್ಯ ಸಂಸ್ಕೃತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಹಿಂದೂಯಿಸಂ ಇಲ್ಲಿನ ಸಾಂಪ್ರದಾಯಿಕ ಸಮಾಜಕ್ಕೆ ಆಧಾರಭೂತವಾದ ನಾರ್ಮೇಟಿವ್ ಹೇಳಿಕೆಗಳನ್ನು ಮಾಡುತ್ತದೆ ಹಾಗೂ ಅದು ಹಿಂದೂಯಿಸಂನ ಧರ್ಮಗ್ರಂಥ ಹಾಗೂ ಡಾಕ್ಟ್ರಿನ್ನುಗಳನ್ನಾಧರಿಸಿ ಇರುತ್ತದೆ ಎಂಬುದಾಗಿ ನಿರೀಕ್ಷಿಸಿದರು. ಈ ನಿರೀಕ್ಷೆಯಲ್ಲಿ ವೇದ, ಶಾಸ್ತ್ರ, ಪುರಾಣಗಳಲ್ಲಿ ಬರುವ ಬೇರೆ ಬೇರೆ ಸ್ವರೂಪದ ವಾಕ್ಯಗಳನ್ನು ನಾರ್ಮೇಟಿವ್ ವಾಕ್ಯಗಳನ್ನಾಗಿ ರೂಪಾಂತರಿಸಲಾಗಿದೆ. ಅಂಥ ಹೇಳಿಕೆಗಳು ಮೂಲತಃ ಒಂದು ಆಚರಣೆಯನ್ನು ವರ್ಣಿಸುತ್ತಿರಬಹುದು, ಅಥವಾ ಪ್ರಚಲಿತದಲ್ಲಿರುವ ರೂಢಿಗಳನ್ನು ವರ್ಗೀಕರಿಸುತ್ತಿರಬಹುದು, ಜನರ ಪದ್ಧತಿಗಳನ್ನು ದಾಖಲಿಸುತ್ತಿರಬಹುದು, ಇಲ್ಲ ಅದರ ಕುರಿತು ತನ್ನದೇ ಅಭಿಪ್ರಾಯವನ್ನು ತಿಳಿಸುತ್ತಿರಬಹುದು. ಅವೆಲ್ಲವುಗಳಲ್ಲೂ ಭಾರತೀಯ ಸಮಾಜಕ್ಕೆ ತಳಹದಿಯಾಗಿರುವ ನಿಯಮಗಳ ಹುಡುಕಾಡಲಾಯಿತು. ಅದರ ಫಲವಾಗಿ ಇಂದು ಭಾರತದಲ್ಲೂ ನಾರ್ಮೇಟಿವ್ ಜಗತ್ತೊಂದನ್ನು ಸೃಷ್ಟಿಸಿವೆ, ಹಾಗೂ ಪಾಶ್ಚಾತ್ಯರು ಕಂಡುಹಿಡಿದ ಸಾರ್ವತ್ರಿಕ ನೈತಿಕ ನಿಯಮಗಳಿಗೆ ಹೋಲಿಸಿದಾಗ ನಮ್ಮ ಜಗತ್ತು ಅನೈತಿಕವಾಗಿ ಕಾಣಿಸುತ್ತಿದೆ.

ought ಎಂಬ ಶಬ್ದಕ್ಕೆ ಪರ್ಯಾಯವಾಗಿ ಭಾರತೀಯ ಭಾಷೆಗಳಲ್ಲಿ ಬೇರೆ ಯಾವ ಶಬ್ದವನ್ನೂ ಬಳಸುವದು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಭಾರತೀಯ, ಅಥವಾ ಏಶಿಯಾದ ಭಾಷೆಗಳಲ್ಲಿ ಈ ಶಬ್ದವನ್ನು ಭಾಷಾಂತರಿಸುವುದು ಕೂಡ ಸಾಧ್ಯವಿಲ್ಲ, ಏಕೆಂದರೆ ಈ ಯಾವ ಸಂಸ್ಕೃತಿಗಳಲ್ಲೂ ನಾರ್ಮೇಟಿವ್ ಭಾಷೆ ಇಲ್ಲ. ಈ ಸಮಸ್ಯೆಯನ್ನು ಈಗಾಗಲೇ ಪಾಶ್ಚಾತ್ಯ ವಿದ್ವಾಂಸರು ಗುರುತಿಸಿದ್ದಾರೆ. ಹಾಗಾಗಿ ಇಲ್ಲಿ ಅದರ ಭಾಷಾಂತರ ಸಾಧ್ಯವಿಲ್ಲ. ಆ ಶಬ್ದವನ್ನು ಭಾಷಾಂತರಿಸುವುದು ಸಾಧ್ಯವಿಲ್ಲ ಅಂತಾದಮೇಲೆ ಕನ್ನಡದಲ್ಲಾಗಲೀ ಭಾರತದ ಇತರ ಭಾಷೆಗಳಲ್ಲಾಗಲೀ ನಾರ್ಮೇಟಿವ್ ವಾಕ್ಯಗಳನ್ನು ರಚಿಸುವುದೂ ಸಾಧ್ಯವಿಲ್ಲದ ಮಾತು. ಹಾಗಾಗಿ ಅಂಥ ವಾಕ್ಯಗಳು ನಮ್ಮ ಗ್ರಂಥಗಳಲ್ಲಿ ಕಾಣಿಸಿಕೊಳ್ಳುವುದೂ ಸಾಧ್ಯವಿಲ್ಲ. ನಾನು ಹೀಗೆ ಹೇಳಿದಾಗ ಸಾಮಾನ್ಯವಾಗಿ ಅದಕ್ಕೆ ಆಕ್ಷೇಪಣೆ ಬಂದೇ ಬಂದಿದೆ. ಕನ್ನಡದಲ್ಲಿ ನಾವು ಆ ಶಬ್ದದ ಅರ್ಥವನ್ನು ‘ಕಡ್ಡಾಯವಾಗಿ ಪಾಲಿಸಲೇಬೇಕಾದಂಥದ್ದು’ ಎಂಬುದಾಗಿ ಮಾಡುತ್ತೇವೆ. ಹಾಗಾಗಿ ಆ ಶಬ್ದದ ಭಾಷಾಂತರ ಸಾಧ್ಯವಿದೆ ಅಂತ ಸಹಜವಾಗಿಯೇ ಅನ್ನಿಸುತ್ತದೆ. ಆ ಅನ್ನಿಸಿಕೆಯಿಂದಲೇ ನನ್ನ ಹೇಳಿಕೆಯ ಕುರಿತು ಆಕ್ಷೇಪಣೆ ಏಳುತ್ತದೆ. ಆದರೆ ನಮ್ಮ ಸಂಸ್ಕೃತಿಯಲ್ಲಿ ‘ಪಾಲಿಸಲೇಬೇಕಾದಂಥದ್ದು’ ಎಂದರೆ ought ಅರ್ಥ ಬರಲಾರದು.
ಉದಾಹರಣೆಗೆ ನಮ್ಮ ಗ್ರಂಥಗಳಲ್ಲಿ ಸತ್ಯವನ್ನೇ ಹೇಳಬೇಕು, ಧರ್ಮವನ್ನು ಆಚರಿಸಲೇಬೇಕು, ಹಿರಿಯರಿಗೆ ಗೌರವ ಕೊಡಲೇಬೇಕು, ಇತ್ಯಾದಿ ಹೇಳಿಕೆಗಳು ಇವೆ. ಆದರೆ ಅವುಗಳನ್ನು ಹತ್ತು ದೈವಾಜ್ಞೆಗಳೋ ಎಂಬಂತೇ ನೋಡಲಾಗುವುದಿಲ್ಲ. ಆ ಹೇಳಿಕೆಗಳು ಸಾರ್ವತ್ರಿಕ ನಿಬಂಧನೆಗಳಾಗುವುದು ಸಾಧ್ಯವಿಲ್ಲ. ದೇಶ ಕಾಲ, ಸಂದರ್ಭಗಳಿಗೆ ಅವು ಬದ್ಧವಾಗಿವೆ. ನಮ್ಮ ಸಂಸ್ಕೃತಿಯು ಅವನ್ನು ಸದಾಚಾರ ಎನ್ನುತ್ತದೆ. ಅಂದರೆ ಅವು ಆದರ್ಶಗಳು. ಅದನ್ನು ಸಾಧಿಸುವುದು ಕೂಡ ಅಷ್ಟು ಸುಲಭವಲ್ಲ ಹಾಗೂ ಅದಕ್ಕೆ ಸಿದ್ಧ ಮಾರ್ಗದರ್ಶಿ ಸೂತ್ರಗಳಿಲ್ಲ. ನಮ್ಮ ನೀತಿವಾಕ್ಯಗಳು ‘ಕೆಲವು ಸಂದರ್ಭಗಳಲ್ಲಿ ಧರ್ಮ ಅಧರ್ಮವಾಗಬಹುದು, ಅಧರ್ಮ ಧರ್ಮವಾಗಬಹುದು’, ‘ಸತ್ಯವನ್ನು ಹೇಳುವುದರಿಂದ ಅಧರ್ಮವಾಗುವಂತಿದ್ದರೆ ಆ ಸತ್ಯವನ್ನು ಹೇಳಿದವನಿಗೆ ಸುಳ್ಳು ಹೇಳಿದ ಪಾಪ ಅಂಟಿಕೊಳ್ಳುತ್ತದೆ’ ‘ಸತ್ಯಂ ಬ್ರೂಯಾತ್. ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ’ ಎಂಬಂಥ ಹೇಳಿಕೆಗಳನ್ನು ಮಾಡುತ್ತವೆ. ಸತ್ಯ, ಧರ್ಮ, ಅಹಿಂಸೆ ಇತ್ಯಾದಿ ಯಾವ ಕ್ರಿಯೆಗಳು ಸದಾಚಾರಕ್ಕೆ ಕಡ್ಡಾಯ ಎನ್ನಲಾಗುತ್ತದೆಯೋ ಅದನ್ನೇ ಹೆಡ್ಡತನದಿಂದ ಆಚರಿಸಿದಲ್ಲಿ ಅದು ದುರಾಚಾರವಾಗಿ ಪರಿಣಮಿಸುತ್ತದೆ ಎಂಬುದು ಇಂಥ ನೀತಿ ವಾಕ್ಯಗಳ ಸ್ಪಷ್ಟ ಅಭಿಪ್ರಾಯ. ಹಾಗಾಗಿ ಮಾಡಲೇಬೇಕು, ಮಾಡತಕ್ಕದ್ದು, ಕಡ್ಡಾಯ ಇತ್ಯಾದಿ ಶಬ್ದಗಳು ಎಲ್ಲೆಡೆಯಲ್ಲೂ ಬುದ್ಧಿಶೂನ್ಯವಾಗಿ ಅನ್ವಯಮಾಡಬಲ್ಲ ನಿಯಮವನ್ನು ಸೂಚಿಸಲು ಸಾಧ್ಯವಿಲ್ಲ.

ಆದರೆ ಇಂದು ನಮಗೆ ನಮ್ಮ ಕಾನೂನು ಅಥವಾ ನಿಯಮಗಳ ಸಂದರ್ಭದಲ್ಲಿ ಇಂಥ ಶಬ್ದಗಳನ್ನು ಬಳಸಿ ರೂಢಿಯಾಗಿರುವುದರಿಂದ ಅವು ನಾರ್ಮೇಟಿವ್ ಭಾಷೆಯಾಗಿ ಗೋಚರಿಸುತ್ತವೆ. ಉದಾಹರಣೆಗೆ ಶಿಕ್ಷಕನಾದವನು ಪಾಠ ಮಾಡಬೇಕು, ವಾಹನ ಚಾಲಕರಿಗೆ ಲೈಸೆನ್ಸ್ ಕಡ್ಡಾಯ, ಅಂತೆಲ್ಲ ಅನ್ನುವಾಗ ನಾವು ನಿಯಮಪಾಲನೆಯ ಕುರಿತು ಮಾತನಾಡುತ್ತಿರುತ್ತೇವೆ. ಇಂಥ ಕಾನೂನುಗಳು ನಮ್ಮ ಇಂದಿನ ಜೀವನವನ್ನು ನಿರ್ದೇಶಿಸುವ ಸಂಗತಿಗಳಾಗಿವೆ. ಹಾಗಾಗಿ ನಮ್ಮ ಶಬ್ದಗಳ ಅರ್ಥಸೂಚನೆಗಳೂ ಬದಲಾಗಿವೆ. ಇಂಥ ಶಬ್ದಗಳನ್ನು ಕಾನೂನಿನ ಸಂದರ್ಭದಲ್ಲಿಟ್ಟು ನೋಡಿದಾಗ ನಮ್ಮ ಗ್ರಂಥಗಳಲ್ಲಿ ಬರುವ ಅಂಥ ಹೇಳಿಕೆಯು ಹೇಳಿಕೆಯಾಗಿಯಷ್ಟೇ ಉಳಿಯುವುದಿಲ್ಲ. ಅದು ಆ ಹೇಳಿಕೆಯನ್ನಾಧರಿಸಿದ ಒಂದು ಕಾನೂನು ವ್ಯವಸ್ಥೆಯನ್ನೂ, ಆ ಕಾನೂನನ್ನು ಅನುಷ್ಠಾನಕ್ಕೆ ತರುವ ಒಂದು ಪ್ರಭುತ್ವವನ್ನೂ ಸೂಚಿಸುತ್ತದೆ. ಆ ಆಯಾಮಗಳು ಅದಕ್ಕೆ ಇಲ್ಲದಿದ್ದಲ್ಲಿ ಅದು ಇಂದಿನ ಅರ್ಥದ ನಿಯಮಾವಳಿಯಾಗಲಿಕ್ಕೆ ಸಾಧ್ಯವಿಲ್ಲ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಈ ಕಾನೂನಿನ ಆಳ್ವಿಕೆಯ ಕಲ್ಪನೆಯು ಬಂದಿದ್ದೇ ಮನುಷ್ಯರನ್ನು ನಾರ್ಮೇಟಿವ್ ಚೌಕಟ್ಟಿಗೆ ಒಗ್ಗಿಸುವ ಸಲುವಾಗಿ. ಮನುಷ್ಯರು ನಾರ್ಮೇಟಿವ್ ಚೌಕಟ್ಟಿನ ಪ್ರಕಾರ ಸರಿಯಾದುದನ್ನು ಪಾಲಿಸುವಂತೆ, ತಪ್ಪಾದುದನ್ನು ಪಾಲಿಸದಂತೆ ಮಾಡುವುದು ಹೇಗೆ? ಎಂಬುದಕ್ಕೆ ಅದು ಮಾರ್ಗೋಪಾಯವಾಗಿದೆ. ಆದರೆ ನಮ್ಮ ಸಂಪ್ರದಾಯಗಳ ಭಾಷೆಯು ಈ ನಾರ್ಮೇಟಿವ್ ಭಾಷೆಯ ಪ್ರಪಂಚಕ್ಕೆ ಸೇರಿದ್ದಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡಾಗ ಭಾರತೀಯ ಸಂಸ್ಕೃತಿಯ ಕುರಿತಾಗಿ ಹುಟ್ಟಿಕೊಂಡ ಒಗಟುಗಳನ್ನು ಬಿಡಿಸಲು ದಾರಿಯೊಂದು ಕಾಣಿಸಬಹುದು.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: