ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Cultural Studies, Culture, Hindu, Religion > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 37 :ನೀತಿ-ಅನೀತಿ, ಪೂರ್ವ ಮತ್ತು ಪಶ್ಚಿಮಗಳ ಭಿನ್ನತೆ 
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ವಸಾಹತುಯುಗದ ಪ್ರಾರಂಭದಲ್ಲಿ ಪಾಶ್ಚಾತ್ಯ ಮಿಶನರಿಗಳು ಮತ್ತು ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದಾಗ ಅವರ ನೈತಿಕ ತಿಳಿವಳಿಕೆಗೆ ಇಲ್ಲಿನ ಅನೇಕ ಆಚರಣೆಗಳು ನೀತಿಹೀನವಾಗಿ ಕಾಣಿಸಿದವು. ಸುಳ್ಳು ಹೇಳುವುದು, ಮೋಸಮಾಡುವುದು, ಕಳ್ಳತನ, ಸ್ತ್ರೀಲಂಪಟತೆ, ಇತ್ಯಾದಿಗಳು ಹಿಂದೂಗಳ ಲಕ್ಷಣವೇ ಆಗಿದೆ ಎಂಬುದಾಗಿ ಅವರು ವರ್ಣಿಸಿದ್ದಾರೆ. ಭಾರತೀಯ ದೇವತೆಗಳೇ ಇಂಥ ವರ್ತನೆಗಳಿಗೆ ಮಾದರಿಯಾಗಿದ್ದಾರೆ. ಭಾರತೀಯ ಇತಿಹಾಸ ಪುರಾಣಗಳೂ ತಮ್ಮ ಅಸಂಖ್ಯಾತ ಕಥೆಗಳ ಮೂಲಕ ಇಂಥವನ್ನೇ ಓದುಗರಿಗೆ ಬಿತ್ತರಿಸುತ್ತವೆ ಎಂಬುದಾಗಿ ಅವರು ಭಾವಿಸಿದರು. ಉದಾಹರಣೆಗೆ ಮಹಾಭಾರತದಲ್ಲಿ ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಅರ್ಜುನನಿಗೆ ಬಂಧು ಹತ್ಯೆಯನ್ನು ಮಾಡುವುದು ಅವನ ಧರ್ಮವೆಂಬುದನ್ನು ಭಾರತೀಯ ತತ್ವಶಾಸ್ತ್ರಗಳನ್ನು ಉದಾಹರಿಸಿ ಉಪದೇಶಿಸುತ್ತಾನೆ. ಅನೇಕ ಸಂದರ್ಭಗಳಲ್ಲಿ ಸುಳ್ಳು ಹೇಳಿಸುವುದರ ಮೂಲಕ, ಮೋಸ ಮಾಡುವುದರ ಮೂಲಕ ವೈರಿಗಳನ್ನು ಕೊಲ್ಲಿಸುತ್ತಾನೆ. ಇಂತಹ ಕಥೆಗಳೆಲ್ಲ ಈ ಜನರು ನಂಬಿಕೊಂಡಿರಬಹುದಾದ ನೈತಿಕ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತವೆ ಎಂಬುದಾಗಿ ಪಾಶ್ಚಾತ್ಯರು ಅರ್ಥೈಸಿದರು. ಈ ಜನರು ಹೀದನ್ ರಿಲಿಜನ್ನನ್ನು ನಂಬಿಕೊಂಡಿರುವುದರಿಂದ ಇಂಥ ಅನೈತಿಕತೆಯು ಇವರಿಗೆ ಸಹಜ ಎಂಬುದಾಗಿ ಅವರು ಅರ್ಥೈಸಿದರು.

ಅವರ ನಂತರ 19, 20ನೆಯ ಶತಮಾನದಲ್ಲಿ ಯುರೋಪಿನ ಸಮಾಜ ಶಾಸ್ತ್ರಜ್ಞರು ಭಾರತವನ್ನು ಕುರಿತು ಅಧ್ಯಯನವನ್ನು ನಡೆಸಿದರು. ಅವರು ಕ್ರಿಶ್ಚಿಯಾನಿಟಿಯ ಕಥೆಗಳನ್ನು ಬಿಟ್ಟು ವೈಜ್ಞಾನಿಕ ವಿಧಾನದಲ್ಲಿ ಮನುಷ್ಯ ಸಮಾಜವನ್ನು ಅರ್ಥಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದ್ದರು. ಅವರಿಗೂ ಈ ಸಮಾಜವು ಹೀಗೇ ಕಾಣಿಸಿತು. ಆದರೆ ಅವರು ಸುಳ್ಳು ರಿಲಿಜನ್ನಿನ ಕಥೆಯನ್ನು ಬಿಟ್ಟು ತಾವು ಕಂಡ ಸಂಗತಿಗಳಿಗೆ ಸಮಾಜ ಶಾಸ್ತ್ರೀಯ ವಿವರಣೆಗಳನ್ನು ಹುಟ್ಟುಹಾಕಿದರು. ಭಾರತೀಯರ ನೈತಿಕ ಮಾನದಂಡಗಳೇ ಬೇರೆ ಥರ ಇವೆ, ಇವರ ವರ್ತನೆಗಳ ಹಿಂದಿನ ನೈತಿಕ ಮಾನದಂಡಗಳನ್ನು ಕಂಡುಕೊಂಡರೆ ಇವರ ವರ್ತನೆ ಅರ್ಥವಾಗಬಹುದು ಎಂದುಕೊಂಡು ಅಧ್ಯಯನಕ್ಕೆ ತೊಡಗಿದರು. ಆದರೆ ಇವರಿಗೆ ಸಾರ್ವತ್ರಿಕ ನೈತಿಕ ಮಾನದಂಡಗಳೇ ಇದ್ದಂತೆ ಕಾಣಲಿಲ್ಲ. ಅವರು ಗುರುತಿಸಿದ ಅಂಶಗಳು ಈ ಮುಂದಿನಂತಿವೆ: 1. ಪೌರ್ವಾತ್ಯ ನೈತಿಕ ತತ್ವಗಳು ಪಾಶ್ಚಾತ್ಯರಿಗೆ ಎಷ್ಟು ಪರಕೀಯವಾಗಿವೆಯೆಂದರೆ ಅವುಗಳಿಂದ ಪಡೆಯಬಹುದಾದ ಅಂಶಗಳೇ ಅವರಿಗೆ ಕಾಣಿಸಲಿಲ್ಲ. 2. ಪೌರ್ವಾತ್ಯರ ನೈತಿಕತೆಯು ಕ್ರೌರ್ಯವನ್ನು ಹಾಗೂ ಅಮಾನವೀಯತೆಯನ್ನು ನಿರ್ವಿಕಾರವಾಗಿ ಪ್ರತಿಪಾದಿಸುತ್ತದೆ. 3. ನೈತಿಕ ನಿಯಮಗಳ ಕುರಿತ ಸಿದ್ಧಾಂತವನ್ನು ಕಟ್ಟಿಕೊಡುವ ಎಥಿಕ್ಸ್ ಎಂಬ ಜ್ಞಾನ ಶಾಖೆಯು ಒಂದೋ ಪೌರ್ವಾತ್ಯರಲ್ಲಿ ಬೆಳವಣಿಗೆಯಾಗಿಲ್ಲ ಅಥವಾ ಇಲ್ಲವೇ ಇಲ್ಲ. ಈ ಸಮಾಜವು ಈ ದೃಷ್ಟಿಯಿಂದ ಪ್ರಾಚೀನ ಗ್ರೀಕರ ಸಮಾಜಕ್ಕಿಂತಲೂ ಹಿಂದುಳಿದ ಸಮಾಜವಾಗಿದೆ.

ಈ ರೀತಿಯಲ್ಲಿ ಕ್ರೈಸ್ತರ ವಿವರಣೆಗಳನ್ನು ಬಿಟ್ಟು ವೈಜ್ಞಾನಿಕವಾಗಿ ಅಧ್ಯಯನವನ್ನು ನಡೆಸಿದರೂ ಪಾಶ್ಚಾತ್ಯರಿಗೆ ಭಾರತೀಯರಲ್ಲಿ ನೈತಿಕತೆಯ ಕುರಿತ ಸಿದ್ಧಾಂತಗಳೇ ಸರಿಯಾಗಿ ಬೆಳೆದಿಲ್ಲ ಎನಿಸಿತು. ಸುಳ್ಳು ರಿಲಿಜನ್ನಿನ ಬದಲಾಗಿ ಹಿಂದುಳಿದ ಸಮಾಜವೊಂದು ಕಾಣಿಸಿತು ಅಷ್ಟೆ. ಇಂಥ ಅಧ್ಯಯನಗಳು ಸೃಜಿಸಿದ ತಿಳುವಳಿಕೆಯನ್ನೇ ಬಳುವಳಿಯಾಗಿ ಪಡೆದ ಭಾರತೀಯ ವಿದ್ಯಾವಂತರೂ ಕೂಡ ನೈತಿಕತೆಗೆ ಸಂಬಂಧಿಸಿದಂತೇ ಭಾರತೀಯ ಸಂಸ್ಕೃತಿಯಲ್ಲಿ ಏನೋ ಮೂಲಭೂತ ತೊಂದರೆಗಳಿವೆ ಎಂಬುದಾಗಿ ಭಾವಿಸುವುದು ಆಶ್ಚರ್ಯವೇನಿಲ್ಲ. ಅದೇ ರೀತಿಯಲ್ಲಿ ಇದನ್ನೆಲ್ಲ ಒರೆಗೆ ಹಚ್ಚುತ್ತಿರುವ ಪಾಶ್ಚಾತ್ಯ ನೈತಿಕ ಸಿದ್ಧಾಂತಗಳೇ ಅತ್ಯಂತ ಉಚ್ಚಮಟ್ಟದವು, ಅನುಕರಣೀಯ ಎಂಬುದಾಗಿ ಅವರಿಗೆ ಅನಿಸಿದರೂ ಆಶ್ಚರ್ಯವಿಲ್ಲ. ಇಂದು ಶಿಕ್ಷಿತರಲ್ಲಿ ಒಂದು ಗುಂಪು ಈ ಹಾದಿಯನ್ನು ಹಿಡಿದಿದೆ. ಆದರೆ ಇದೇ ಶಿಕ್ಷಿತರ ಮತ್ತೊಂದು ಗುಂಪಿಗೆ ಭಾರತೀಯ ಸಂಪ್ರದಾಯಗಳು ನಮ್ಮ ಜೀವನಕ್ಕೆ ಅತ್ಯಗತ್ಯವಾದ ನೈತಿಕತೆಯನ್ನು ಪ್ರತಿಪಾದಿಸುತ್ತವೆ ಎಂದು ಬಲವಾಗಿ ಅನ್ನಿಸುತ್ತದೆ ಎಂಬುದೂ ಅಷ್ಟೇ ನಿಜ. ಮೇಲಿನ ಮೊದಲನೆಯ ಗುಂಪು ಎಷ್ಟು ಭದ್ರವಾಗಿ ತನ್ನ ನಿಲುವನ್ನು ನಂಬಿಕೊಂಡಿದೆಯೆಂದರೆ ಅದಕ್ಕೆ ಈ ಎರಡನೆಯ ಗುಂಪು ಅನಾಹುತಕಾರಿಯಾಗಿ ಕಾಣಿಸುತ್ತದೆ. ಆದರೆ ಈ ಎರಡೂ ಗುಂಪುಗಳೂ ಕೂಡ ಮಕ್ಕಳಿಗೆ ಶಾಲೆಗಳಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದುಕೊಳ್ಳುತ್ತಾರೆ. (ಅದಕ್ಕೆ ಕಾರಣ ಹಾಗೂ ಮಾನದಂಡಗಳು ಬೇರೆ ಬೇರೆಯೇ ಇರಬಹುದು.)

ನಾವು ಎಥಿಕ್ಸ್, ಮಾರಲ್ಸ್ ಇತ್ಯಾದಿ ಶಬ್ದಗಳನ್ನು ನೀತಿ ಎಂಬುದಾಗಿ ಭಾಷಾಂತರಿಸಿರುವುದರಿಂದ ಅವೆಲ್ಲ ಒಂದೇ ಅರ್ಥವನ್ನು ಸೂಚಿಸುತ್ತವೆ ಎಂಬ ಆಭಾಸವುಂಟಾಗುತ್ತದೆ. ನಾವು ನೈತಿಕ ಶಿಕ್ಷಣ ಎನ್ನುವಾಗ ‘ಮಾರಲ್ ಡೊಮೈನ್’ ಪರಿಭಾಷೆಯಲ್ಲಿ ಮಾತನಾಡುತ್ತಿರುತ್ತೇವೆ. ಆದರೆ ಭಾರತೀಯರು ನೀತಿ ಎಂಬ ಶಬ್ದವನ್ನು ಈ ಮೇಲಿನ ಸಂದರ್ಭದಲ್ಲಾಗಲೀ, ಅರ್ಥದಲ್ಲಾಗಲೀ ಬಳಸುವುದಿಲ್ಲ. ನಮ್ಮ ನೀತಿ ವಾಕ್ಯಗಳು, ನೀತಿ ಶಾಸ್ತ್ರಗಳು ಜೀವನದ ವಿಭಿನ್ನ ಸಂದರ್ಭದಲ್ಲಿ ಸರಿಯಾದ ಕ್ರಿಯೆ ಯಾವುದು ಎಂಬುದರ ಕುರಿತು ಆಲೋಚಿಸುವ ಕೆಲಸಕ್ಕೆ ಸಹಕರಿಸುವ ದೃಷ್ಟಿಯಿಂದ ರಚನೆಯಾಗಿವೆ. ದಂಡನೀತಿ, ರಾಜನೀತಿ, ಯುದ್ಧನೀತಿ, ಇತ್ಯಾದಿ ಶಬ್ದಗಳು ಪಾಶ್ಚಾತ್ಯರು ತಿಳಿಸುವ ಮಾರಲ್ ಗಳ ಕುರಿತಾಗಿಲ್ಲ. ಅವು ಸಾರ್ವತ್ರಿಕವಾಗಿ ಅನ್ವಯವಾಗಬಲ್ಲ ನಿಯಮಗಳೂ ಅಲ್ಲ. ನಮ್ಮಲ್ಲಿ ಕುಟಿಲನೀತಿಯೂ (ಕುತಂತ್ರ ಎಂಬರ್ಥದಲ್ಲಿ) ಸಾಧ್ಯವಿದೆ. ಹಾಗಾಗಿ ನೀತಿಶಾಸ್ತ್ರವು ಪಾಶ್ಚಾತ್ಯರ ‘ಮಾರಲ್ ಡೊಮೈನ್’ ಅನ್ನು ಸೂಚಿಸುವುದು ಅಸಂಭವನೀಯ.

ಒಬ್ಬನದು ನೀತಿಯೊ ಅಲ್ಲವೋ ಎನ್ನುವುದು ಆಯಾ ಸಮೂಹದಲ್ಲಿ ಆಯಾ ವ್ಯಕ್ತಿಯ ಪಾತ್ರ ಹಾಗೂ ಸಂದರ್ಭಕ್ಕೆ ಸಂಬಂಧಿಸಿದ್ದಾಗಿದೆ. ಆ ಸಂದರ್ಭಕ್ಕೆ ಹೊರತಾಗಿ ನೀತಿಯೇ ಅನೀತಿಯಾಗಬಹುದು. ಒಬ್ಬನ ಸಂದರ್ಭಕ್ಕೆ ನೀತಿಯಾದದ್ದು ಮತ್ತೊಬ್ಬನ ಸಂದರ್ಭಕ್ಕೆ ಆಗಬೇಕಿಲ್ಲ. ಇಂಥ ನೀತಿಯನ್ನು ಹೇಗೆ ಕಲಿಯುವುದು? ನಮ್ಮ ನೀತಿ ಕಥೆಗಳು ಒಂದಿಲ್ಲೊಂದು ನೈತಿಕ ಸಿದ್ಧಾಂತವನ್ನು ಸಾರ್ವತ್ರಿಕವಾಗಿ ಪ್ರಮಾಣೀಕರಿಸುವ ಮಾರಲ್ ಸ್ಟೋರಿಗಳಲ್ಲ. ಅಥವಾ ಅವು ಯಾವ ನಾರ್ಮೇಟಿವ್ ಹೇಳಿಕೆಗಳನ್ನೂ ಒಳಗೊಂಡಿಲ್ಲ. ಒಂದು ನಿರ್ದಿಷ್ಟ ಸಂದರ್ಭದಲ್ಲಿ ಕೆಲವು ನಿರ್ದಿಷ್ಟ ವ್ಯಕ್ತಿಗಳು ಯಾವುದನ್ನು ನೀತಿಯೆಂಬುದಾಗಿ ನಿರ್ಣಯಿಸಿದರು ಎಂಬುದನ್ನು ಅವು ತಿಳಿಸುತ್ತವೆ ಅಷ್ಟೆ. ಇಂಥ ವಿಭಿನ್ನ ದೃಷ್ಟಾಂತಗಳನ್ನಿಟ್ಟುಕೊಂಡು ನಾವು ನಮ್ಮ ಕ್ರಿಯೆಯ ಕುರಿತು ಆಲೋಚಿಸಲು ಈ ಕಥೆಗಳು ಸಹಾಯಮಾಡುತ್ತವೆ. ಅಂದರೆ ನಮ್ಮ ಸಂಸ್ಕೃತಿಯಲ್ಲಿ ನೀತಿಯೆಂಬುದು ನಿಯಮವಾಗಲು ಸಾಧ್ಯವಿಲ್ಲ, ವ್ಯಕ್ತಿಯೊಬ್ಬನಿಗೆ ಅದು ನಿರಂತರವಾದ ಒಂದು ಕಲಿಕೆಯಾಗಿದೆ.

ಈ ಹಿನ್ನೆಲೆಯನ್ನಿಟ್ಟುಕೊಂಡು ಇಲ್ಲಿ ಎರಡು ಅಂಶಗಳ ಕುರಿತು ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಮೊದಲನೆಯದೆಂದರೆ ಭಾರತೀಯರ ನೈತಿಕತೆಯಲ್ಲಿ ಪಾಶ್ಚಾತ್ಯರಿಗೆ ಕಾಣಿಸುತ್ತಿರುವ ಬಗೆಹರಿಯದ ಸಮಸ್ಯೆಯು ನಮ್ಮ ಅನುಭವದ ಭಾಗವಾಗಿಲ್ಲ. ಅಂದರೆ ನಾವು ಒಂದು ನೈತಿಕವಾಗಿ ಹಿಂದುಳಿದ ಅಥವಾ ವಿಲಕ್ಷಣವಾದ ಬದುಕನ್ನು ನಡೆಸುತ್ತಿದ್ದೇವೆ ಎಂಬುದು ನಮಗನಿಸುವುದಿಲ್ಲ. ಅದೇ ರೀತಿಯಲ್ಲಿ, ನೈತಿಕತೆಯ ಕುರಿತು ಇಂಥ ತೊಂದರೆಗಳನ್ನಿಟ್ಟುಕೊಂಡ ಯಾವ ಸಮಾಜವೂ ಸಾವಿರಾರು ವರ್ಷಗಳವರೆಗೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬರಲು ಸಾಧ್ಯವಿಲ್ಲ. ಅಂದರೆ ನಮ್ಮ ನೈತಿಕತೆಯ ಕುರಿತ ವಿದ್ವದ್ವಲಯದ ಸಮಸ್ಯೆಗಳು ನಮ್ಮ ಸಮಸ್ಯೆಗಳಂತೇ ತೋರುವುದಿಲ್ಲ. ನಾವಿಂದು ನೈತಿಕ ಶಿಕ್ಷಣ ಎಂಬುದಾಗಿ ಚರ್ಚಿಸುತ್ತಿರುವಾಗ ಕೂಡ ಪಾಶ್ಚಾತ್ಯರಿಗೇ ವಿಶಿಷ್ಠವಾಗಿರುವ ಪರಿಕಲ್ಪನೆಯೊಂದನ್ನು ಉಲ್ಲೇಖಿಸುತ್ತಿರುತ್ತೇವೆ ಎಂಬುದನ್ನು ಗಮನಿಸಬೇಕು. ನೈತಿಕತೆ ಎಂಬುದೇ ಒಂದು ಬೇರೆ ವಿಷಯವಿದೆ, ಅದನ್ನು ನಿಯಮ, ಸಿದ್ಧಾಂತಗಳ ರೂಪದಲ್ಲಿ ಕಲಿಯಬಹುದು, ಕಲಿಸಬಹುದು ಎಂಬುದು ಪಾಶ್ಚಾತ್ಯ ಕಲ್ಪನೆಯಾಗಿದೆ.

ಎರಡನೆಯದೆಂದರೆ, ಪಾಶ್ಚಾತ್ಯ ಸಮಾಜವು ಇಂಥ ಕಲ್ಪನೆಗಳನ್ನಿಟ್ಟುಕೊಂಡು ಮನುಕುಲದಲ್ಲೇ ಅತ್ಯಂತ ಉಚ್ಛಮಟ್ಟದ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಂಡಿದೆ ಅಂತಾದಲ್ಲಿ ಪಾಶ್ಚಾತ್ಯ ಇತಿಹಾಸದಲ್ಲಿ ಅಲ್ಲಿನ ಜನರು ನಡೆಸಿದ ಕೆಲವು ಕೃತ್ಯಗಳನ್ನು ಹೇಗೆ ಅರ್ಥೈಸಬೇಕೆಂಬುದು ತಿಳಿಯುವುದಿಲ್ಲ. ಉದಾಹರಣೆಗೆ ಅದು ಅನ್ಯದೇಶಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿ ದಬ್ಬಾಳಿಕೆ, ಶೋಷಣೆ ನಡೆಸಿದೆ, ಕೆಲವೆಡೆ ಮೂಲನಿವಾಸಿಗಳ ಸಂತತಿಯನ್ನೇ ಬರ್ಬರವಾಗಿ ಒರೆಸಿಹಾಕಿದೆ, ಕಪ್ಪುಜನರನ್ನು ಪ್ರಾಣಿಗಳಂತೇ ಹಿಡಿದುಕೊಂಡು ಬಂದು ಮಾರಾಟಮಾಡಿ ಗುಲಾಮಗಿರಿ ಪದ್ಧತಿಯನ್ನು ಹುಟ್ಟುಹಾಕಿದೆ, ಮೈಬಣ್ಣವನ್ನೇ ಆಧರಿಸಿದ ಜನಾಂಗೀಯತೆಯನ್ನೂ, ವರ್ಣಭೇದನೀತಿಯನ್ನೂ ಕಾನೂನಾತ್ಮಕವಾಗಿ ಪೋಷಿಸಿಕೊಂಡು ಬಂದಿದೆ, ಯಾವ್ಯಾವುದೋ ಐಡಿಯಾಲಜಿಗಳ ಹೆಸರಿನಲ್ಲಿ ತಮ್ಮದೇ ಕೋಟ್ಯಂತರ ಪ್ರಜೆಗಳನ್ನೇ ನಾಯಕರು ಹತ್ಯೆಮಾಡಿದ್ದಾರೆ, ಯುದ್ಧದ ಹೆಸರಿನಲ್ಲಿ ನರಮೇಧ ನಡೆದಿದೆ. ಇವು ಉಚ್ಛಮಟ್ಟದ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಂಡ ಪಾಶ್ಚಾತ್ಯರಲ್ಲಿ ನಡೆದಿವೆ ಎಂಬುದು ಒಂದು ಸೋಜಿಗವಾದರೆ, ನೈತಿಕ ಪ್ರಜ್ಞೆಯಲ್ಲಿ ನ್ಯೂನತೆಯನ್ನು ಹೊಂದಿದ ಭಾರತೀಯ ಸಮಾಜದಲ್ಲಿ ಅವಕ್ಕೆ ಸರಿಸಾಟಿಯಾದ ಉದಾಹರಣೆಗಳೇ ಇಲ್ಲವಲ್ಲ ಎಂಬುದು ಅದಕ್ಕಿಂತಲೂ ಸೋಜಿಗವಾಗಿದೆ. ಇದನ್ನೆಲ್ಲ ಗಮನಿಸಿದಾಗ ಪಾಶ್ಚಾತ್ಯರು ನೈತಿಕತೆಯ ಕುರಿತು ಯಾವ ಸಿದ್ಧಾಂತಗಳನ್ನು ಹಾಗೂ ನಿಯಮಗಳನ್ನು ಪ್ರತಿಪಾದಿಸುತ್ತಾರೆಯೋ ಅದು ಅವರ ಬದುಕಿನಲ್ಲೇ ಕಾಣುತ್ತಿಲ್ಲ ಎಂಬ ಅಭಿಪ್ರಾಯ ನಮ್ಮಲ್ಲಿ ಮೂಡುತ್ತದೆ.

ಅಷ್ಟೊಂದೇ ಅಲ್ಲ, ಪಾಶ್ಚಾತ್ಯ ನೈತಿಕ ಸಿದ್ಧಾಂತಗಳು ಅವರದೇ ಸಂದಿಗ್ಧಗಳನ್ನು ಬಗೆಹರಿಸಲು ಎಷ್ಡರಮಟ್ಟಿಗೆ ಪ್ರಯೋಜಕವಾಗಿವೆ? ಇದೇ ಸಿದ್ಧಾಂತಗಳನ್ನು ಇಟ್ಟುಕೊಂಡು ವಸಾಹತು ದಬ್ಬಾಳಿಕೆಯನ್ನು, ವರ್ಣಭೇದನೀತಿಯನ್ನು ಕೆಲವರು ಸಮರ್ಥಿಸಿದ್ದಾರೆ, ಇನ್ನೂ ಕೆಲವರು ಅವನ್ನು ಖಂಡಿಸಿ ಅವುಗಳ ವಿರುದ್ಧ ಹೋರಾಡಿದ್ದಾರೆ. ಎರಡೂ ಪಕ್ಷಗಳಿಗೂ ತಂತಮ್ಮ ಕೃತ್ಯಗಳಿಗೆ ತಳಹದಿಯಾಗಿ ನೈತಿಕ ಸಿದ್ಧಾಂತಗಳು ಇವೆ ಅಂತಾದ ಪಕ್ಷದಲ್ಲಿ ಮಾನವರ ಒಳ್ಳೆಯದು-ಕೆಟ್ಟದ್ದುಗಳನ್ನು ನಿರ್ಧರಿಸುವುದರಲ್ಲಿ ಈ ಸಿದ್ಧಾಂತಗಳ ಸ್ಥಾನಮಾನವೇನು? ಎಂಬ ಮೂಲಭೂತ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ವ್ಯಕ್ತಿಯೊಬ್ಬನು ತನ್ನ ಅನೈತಿಕ ಕ್ರಿಯೆಗಳನ್ನು ಸರಿಯಾದದ್ದು ಎಂಬುದಾಗಿ ಸಮರ್ಥಿಸಲು ಕೂಡ ಈ ಸಿದ್ಧಾಂತಗಳೇ ಸಹಕರಿಸುತ್ತವೆ ಅಂತಾದರೆ ಈ ಸಿದ್ದಾಂತಗಳೇ ಅಪಾಯಕಾರಿಯಲ್ಲವೆ? ಈ ರೀತಿಯಲ್ಲಿ ಪಾಶ್ಚಾತ್ಯರು ಬೆಳೆಸಿಕೊಂಡ ನೈತಿಕ ಸಿದ್ಧಾಂತಗಳಿಗೂ, ಮಾನವರ ಒಳಿತು-ಕೆಡುಕುಗಳಿಗೂ ನಡುವೆ ಒಂದು ಕಂದರವಿದೆ ಎಂಬುದು ಯಾರ ಗಮನಕ್ಕಾದರೂ ಬರುವಂಥದ್ದೇ ಆಗಿದೆ.

ಇಷ್ಟಾದರೂ ಪಾಶ್ಚಾತ್ಯರು ನೈತಿಕ ಸಿದ್ಧಾಂತಗಳನ್ನು ಬೆಳೆಸುವುದು ಅತ್ಯಂತ ಮಹತ್ವದ ಕೆಲಸ ಎಂಬುದಾಗಿ ಏಕೆ ಅಂದುಕೊಂಡಿದ್ದಾರೆ? ಇದಕ್ಕೆ ಉತ್ತರವಾಗಿ ಪಾಶ್ಚಾತ್ಯರಿಗೆ ನೈತಿಕ ಕ್ರಿಯೆಗಳ ಕುರಿತು ಏನು ಕಲ್ಪನೆಯಿದೆ ಎಂಬುದನ್ನು ಗಮನಿಸಬೇಕು. ಮೊತ್ತಮೊದಲನೆಯದಾಗಿ ಅವರಿಗೆ ನೈತಿಕತೆ ಎನ್ನುವುದು ವ್ಯಕ್ತಿಯೊಬ್ಬನ ಜೀವನದ ಕೆಲವು ನಿರ್ದಿಷ್ಟ ಕ್ರಿಯೆಗಳಿಗೆ ಸಂಬಂಧಿಸಿದಂತೇ ತಪ್ಪು-ಸರಿ ಗಳನ್ನು ಸೂಚಿಸುವ ಒಂದು ವಲಯ. ಈ ತಪ್ಪು ಸರಿಗಳು ಮನುಷ್ಯರಿಗೆ ಯಾವ ಗುಣಗಳು ಒಳ್ಳೆಯವು ಹಾಗೂ ರಕ್ಷಿಸಿಕೊಳ್ಳಬೇಕಾದ ಮೌಲ್ಯಗಳು ಎಂಬ ಮಾನದಂಡದಿಂದ ನಿರ್ಧಾರವಾಗುತ್ತವೆ. ಯಾವ ಕ್ರಿಯೆಯು ಒಂದಿಲ್ಲೊಂದು ನೈತಿಕ ಸಿದ್ಧಾಂತಗಳ ಪರಿಧಿಗೆ ಬರುತ್ತದೆಯೋ ಅದು ಮಾತ್ರವೇ ನೈತಿಕ ಕ್ರಿಯೆಯ ವಲಯಕ್ಕೆ ಸೇರುತ್ತದೆ. ಎಲ್ಲಾ ಮಾನವರಿಗೂ ಸಾರ್ವತ್ರಿಕವಾಗಿ ಅನ್ವಯವಾಗುವಂಥ ಮಾನದಂಡವನ್ನು ಕಂಡುಹಿಡಿದುಕೊಳ್ಳುವುದಕ್ಕೆ ನೈತಿಕ ಸಿದ್ಧಾಂತಗಳು ಅನಿವಾರ್ಯ. ಅಂಥ ಸಿದ್ಧಾಂತಕ್ಕೆ ಸಂಸ್ಕೃತಿ, ದೇಶ, ಕಾಲಗಳ ಪರಿಮಿತಿಗಳಿಲ್ಲ. ಒಬ್ಬನಿಗೆ ಅನ್ವಯವಾಗಿ ಮತ್ತೊಬ್ಬನಿಗೆ ಅನ್ವಯವಾಗದಿದ್ದರೆ ಅಂಥ ಸಿದ್ಧಾಂತದಲ್ಲೇ ದೋಷವಿದೆ. ಏಕೆಂದರೆ ಅದು ಕೆಲವರಿಗೆ ನೈತಿಕ ಮಾರ್ಗದರ್ಶನವನ್ನು ನೀಡಲಾರದು.

ಈ ಮೇಲಿನ ವಿಚಾರಗಳು ಎಲ್ಲಿಂದ ಹುಟ್ಟಿಕೊಂಡಿವೆ? ಅದಕ್ಕೆ ಪ್ರತ್ಯಕ್ಷ ಪ್ರಮಾಣಗಳೇನೂ ಇದ್ದಂತೆ ಕಾಣುವುದಿಲ್ಲ. ಏಕೆಂದರೆ ಈ ನಿರ್ಣಯಗಳೂ ಕ್ರೈಸ್ತ ಥಿಯಾಲಜಿಯ ಸತ್ಯಗಳಾಗಿವೆ. ಒಬ್ಬ ಮನುಷ್ಯನು ನೈತಿಕ ನಿಯಮಗಳಿಗೆ ಏಕೆ ಒಳಪಟ್ಟಿದ್ದಾನೆಂದರೆ ಈ ನಿಯಮಗಳು ಗಾಡ್ ನ ಇಚ್ಛೆಯಾಗಿದೆ. ಗಾಡ್ ನ ಸೃಷ್ಟಿಯಾದ ಮನುಷ್ಯನು ಅವನ ಆಜ್ಞಾನುವರ್ತಿಯಾಗಿದ್ದಾನೆ. ಅವನ ಉದ್ದೇಶವನ್ನು ಸಾಕಾರಗೊಳಿಸುವವನಾಗಿದ್ದಾನೆ. ಗಾಡ್ ನ ನಿಯಮಗಳು ಸರಿಯಾಗಿವೆ, ಅವೇ ಒಳ್ಳೆಯವು ಹಾಗಾಗಿ ಮನುಷ್ಯರ ನೀತಿಯ ಮಾನದಂಡಗಳು. ಅವನ್ನು ಉಲ್ಲಂಘಿಸುವುದು ತಪ್ಪು. ಹುಟ್ಟಿದ ಪ್ರತಿಯೊಬ್ಬನೂ ಗಾಡ್ ನ ನೈತಿಕ ಆಳ್ವಿಕೆಗೆ ಬದ್ಧನಾಗಿರುವುದರಿಂದ ಅವನ ವಯಕ್ತಿಕ ಕ್ರಿಯೆಗಳನ್ನು ಅದಕ್ಕೆ ಅನುಗುಣವಾಗಿಯೇ ನಡೆಸಬೇಕು. ಮನುಷ್ಯನು ಗಾಡ್ ನ ನೀತಿ ನಿಯಮಗಳನ್ನು ಅನುಷ್ಠಾನಕ್ಕೆ ತರಬಲ್ಲ ನೈತಿಕ ಕರ್ತೃ (ಮಾರಲ್ ಏಜೆಂಟ್) ಆಗಿದ್ದಾನೆ ಹಾಗಾಗಿ ಅವನು ನೈತಿಕ ಕ್ರಿಯೆಯನ್ನು ಮಾಡಬೇಕು ಎಂಬ ಕಲ್ಪನೆಯು ಸೆಮೆಟಿಕ್ ರಿಲಿಜನ್ನುಗಳಿಗೇ ವಿಶಿಷ್ಠವಾದದ್ದು.

ಆದರೆ ಒಂದು ಮನುಷ್ಯನು ನಡೆಸುವ ಎಲ್ಲಾ ಕ್ರಿಯೆಗಳೂ ನೈತಿಕ ಜಗತ್ತಿನ ಪರಿಧಿಯೊಳಕ್ಕೆ ಬರುತ್ತವೆಯೆ? ಎಂಬ ಪ್ರಶ್ನೆ ಏಳುತ್ತದೆ. ಊಟ, ಉಡುಗೆ, ನಿದ್ರೆಗಳಿಂದ ಹಿಡಿದು ಎಲ್ಲೆಡೆಯಲ್ಲೂ ನೈತಿಕ ಮಾನದಂಡಗಳನ್ನು ನೀಡಬಲ್ಲ ನಿಯಮಗಳೂ ಇರಲು ಸಾಧ್ಯವಿಲ್ಲ. ಹಾಗಾಗಿ ಕ್ರಿಶ್ಚಿಯಾನಿಟಿಯಲ್ಲಿ ಗಾಡ್ ನ ಆಜ್ಞೆಗೆ ಸಂಬಂಧಪಟ್ಟ ಕೆಲವು ನಿರ್ದಿಷ್ಟ ಕ್ರಿಯೆಗಳನ್ನು ಮಾತ್ರವೇ ನೈತಿಕ ವಲಯಕ್ಕೆ ಒಳಪಡುವ ಕ್ರಿಯೆಗಳು ಎಂಬುದಾಗಿ ಗುರುತಿಸಲಾಗಿತ್ತು. ಈ ವಲಯವು ಕಾಲದಿಂದ ಕಾಲಕ್ಕೆ ಹಿಗ್ಗುತ್ತ ಬಂದಿತು. ಕ್ಯಾಥೋಲಿಕ ಕ್ರಿಶ್ಚಿಯಾನಿಟಿಯಲ್ಲಿ ಪ್ರೀಸ್ಟ್ಗಳು ಇಂಥ ನೈತಿಕತೆಗೆ ಮಾನದಂಡಗಳಾಗಿದ್ದರು, ಹಾಗೂ ಅವರಿಗೂ ಅನುಯಾಯಿಗಳಿಗೂ ಇದ್ದ ಶ್ರೇಣೀಕೃತ ಅಂತರವು ಅದರಿಂದ ನಿರ್ಧಾರಿತವಾಗಿತ್ತು. ಪ್ರೊಟೆಸ್ಟಾಂಟ್ ಚಳುವಳಿಯು ಪ್ರತಿಯೊಬ್ಬ ಅನುಯಾಯಿಯೂ ತಾನೇ ಪ್ರೀಸ್ಟ್ ಹಾಗೂ ಚರ್ಚು ಕೂಡ ಆಗಿದ್ದಾನೆ ಎಂಬ ಕಲ್ಪನೆಯನ್ನು ಪ್ರಚಲಿತದಲ್ಲಿ ತಂದಿತು. ಹಾಗಾಗಿ ಕ್ರೈಸ್ತರ ನೈತಿಕ ವಲಯಕ್ಕೆ ಎಲ್ಲಾ ಅನುಯಾಯಿಗಳೂ ಅಷ್ಟೇ ಸಮಾನವಾಗಿ ಒಳಗಾದರು. ಇಷ್ಟಾಗಿಯೂ ಈ ನೈತಿಕ ವಲಯ (ಮಾರಲ್ ಡೊಮೈನ್) ಎನ್ನುವುದು ಶುದ್ಧಾಂಗ ಕ್ರೈಸ್ತ ಪರಿಕಲ್ಪನೆ ಎಂಬುದನ್ನು ನಾವು ಗಮನದಲ್ಲಿಡಬೇಕು.

ಜ್ಞಾನೋದಯ ಯುಗದ ಹೊಸ್ತಿಲಲ್ಲಿ ಯುರೋಪಿನ ಸೆಕ್ಯುಲರ್ ಚಿಂತಕರು ಈ ಕ್ರೈಸ್ತ ಪರಿಕಲ್ಪನೆಯನ್ನು ಆಧರಿಸಿ ನೈತಿಕತೆಯ ಕುರಿತು ತಮ್ಮ ಧೋರಣೆಗಳನ್ನು ರೂಪಿಸಿಕೊಂಡರು. ಮನುಷ್ಯರು ನೈತಿಕತೆಯ ಪರಿಧಿಗೆ ಒಳಪಡಬೇಕು ಎಂಬ ನಂಬಿಕೆಯನ್ನು ಅವರೂ ಮುಂದುವರಿಸಿದರು. ಆದರೆ ಅವರು ಗಾಡ್ ನನ್ನು ಈ ಚರ್ಚೆಯಿಂದ ಹೊರಗಿಟ್ಟರು. ಹಾಗೆ ಹೊರಗಿಟ್ಟಾಗ ‘ನಾವೇಕೆ ನೈತಿಕ ಕ್ರಿಯೆಗಳನ್ನು ಮಾಡಬೇಕು?’ ಎಂಬ ಪ್ರಶ್ನೆಗೆ ಸಮಾಜದ ಭವಿತವ್ಯದ, ಸಾಮಾಜಿಕ ಮೌಲ್ಯಗಳ ಕಾರಣಗಳನ್ನು ನೀಡಿದರು. ಗಾಡ್ನ ಉದ್ದೇಶ ಹಾಗೂ ನಿಯಮಗಳ ಬದಲಾಗಿ ಮಾನವೀಯ ನೈತಿಕ ಸಿದ್ಧಾಂತಗಳನ್ನು ಸೃಷ್ಟಿಸಿದರು ಮತ್ತು ಅವುಗಳಿಗೆ ಬದ್ಧವಾಗಿರುವಂಥವೇ ನೈತಿಕ ಕ್ರಿಯೆಗಳು ಎಂದರು. ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಸ್ವಂತಿಕೆ ಹಾಗೂ ಹಿತಾಸಕ್ತಿಯನ್ನು ಆರೋಪಿಸಿದರು. ಈ ಪ್ರಕಾರ ಪ್ರತೀ ಮನುಷ್ಯನೂ ತನಗೆ ಸೂಕ್ತವಾದ ಒಂದಿಲ್ಲೊಂದು ಸಿದ್ಧಾಂತಗಳನ್ನು ಆಯ್ಕೆಮಾಡಿಕೊಂಡು ತನ್ನ ನೀತಿ ಯಾವುದೆಂದು ಕಂಡುಕೊಳ್ಳುತ್ತಾನೆ ಎಂದರು. ಹಾಗೂ ಅಂಥ ಸಮಾಜವೇ ಪ್ರಗತಿಪರ ಸಮಾಜವೆಂಬ ಅಭಿಪ್ರಾಯವೂ ಚಾಲ್ತಿಯಲ್ಲಿ ಬಂದಿತು. ಆದರೆ ವಾಸ್ತವದಲ್ಲಿ ಏನಾಯಿತೆಂದರೆ ಇವರು ಸಿದ್ಧಾಂತಗಳ ಜಗತ್ತೊಂದನ್ನು ಸೃಷ್ಟಿಸಿಕೊಂಡರೇ ವಿನಃ ಮನುಷ್ಯ ಕ್ರಿಯೆಗಳು ತಮ್ಮ ಪಾಡಿಗೆ ತಾವು ಉಳಿದವು.

ಅನ್ಯ ಸಂಸ್ಕೃತಿಗಳನ್ನು ಅಧ್ಯಯನ ಮಾಡುವಾಗ ಒಂದೋ ಅನ್ಯರ ಆಚರಣೆಗಳು ತಮಗೆ ತಿಳಿದ ಒಂದಿಲ್ಲೊಂದು ನೈತಿಕ ಸಿದ್ಧಾಂತಗಳ ಮಾನದಂಡಕ್ಕೆ ಸಿಗಬೇಕು, ಇಲ್ಲ ಮಾನದಂಡವನ್ನು ಹುಡುಕುವ ಕೆಲಸ ನಡೆಯಬೇಕು ಎಂಬುದು ಪಾಶ್ಚಾತ್ಯರ ಧೋರಣೆ. ಈ ಧೋರಣೆಯಿಂದಾಗಿಯೇ ಎಲ್ಲಾ ಸಮಾಜಗಳೂ ಇಂಥ ಒಂದಿಲ್ಲೊಂದು ನೈತಿಕ ಸಿದ್ಧಾಂತಗಳನ್ನು ಹೊಂದಿ ಪ್ರತ್ಯೇಕ ನೈತಿಕ ಕ್ರಿಯೆಗಳನ್ನು ನಿರ್ದೇಶಿಸುತ್ತವೆ ಎಂಬ ನಿರೀಕ್ಷೆ ಹುಟ್ಟುತ್ತದೆ. ಇಂಥ ಒಂದು ಧೋರಣೆಯನ್ನಿಟ್ಟುಕೊಂಡ ಸಮಾಜವು ಒಂದೋ ತನ್ನದೇ ನೀತಿ-ಅನೀತಿಗಳ ಮಾನದಂಡವನ್ನು ಎಲ್ಲರ ಮೇಲೂ ಹೇರಬೇಕು, ಇಲ್ಲ ಇನ್ನೂ ಒಳ್ಳೆಯ ಸಾರ್ವತ್ರಿಕ ಸಿದ್ಧಾಂತಗಳಿಗಾಗಿ ಹುಡುಕಾಡಬೇಕು. ಭಾರತೀಯರ ನೈತಿಕತೆಯ ಕುರಿತ ಪಾಶ್ಚಾತ್ಯ ಚರ್ಚೆಯು ನಿರ್ದಿಷ್ಟವಾಗಿ ಈ ದೃಷ್ಟಿಕೋನದಿಂದ ನಡೆಯುತ್ತಿದೆ. ಇದನ್ನು ತಿಳಿದುಕೊಳ್ಳದಿದ್ದರೆ ಅವರೇನು ಚರ್ಚೆ ಮಾಡುತ್ತಿದ್ದಾರೆಂಬುದು ನಮಗೆ ಅರ್ಥವಾಗಲು ಸಾಧ್ಯವಿಲ್ಲ ಹಾಗೂ ಅವರಿಗೆ ಭಾರತೀಯರ ನೈತಿಕತೆಯ ಕುರಿತು ನಿರ್ದಿಷ್ಟವಾಗಿ ಏನು ಸಮಸ್ಯೆಯಿದೆ ಎಂಬುದೂ ಅರ್ಥವಾಗುವುದಿಲ್ಲ.

 

Advertisements
 1. vidya
  ಜನವರಿ 3, 2014 ರಲ್ಲಿ 10:49 ಅಪರಾಹ್ನ

  ” ಮಾತೃ ದೇವೋಭವ.” ”ಪಿತೃ ದೇವೋ ಭವ.” ”ಆಚಾರ್ಯ ದೇವೋಭವ”. ”ಅತಿಥಿ ದೇವೋ ಭವ”. ಸತ್ಯ್ವಮೇವ ಜಯತೆ, ಲೋಕಾ ಸಮಸ್ತಾ ಸುಖಿನೋ ಭವಂತು. ವಸುಧೈವ ಕುಟುಂಬಕಂ, ಜಗತ್ತಿನ ಜ್ಞಾನವೆಲ್ಲ ನನ್ನೆಡೆಗೆ ಬರಲಿ. ಸುಳ್ಳು ಹೇಳಬೇಡ, ಹಾಗೆಂದು ಅಪ್ರಿಯ ಸತ್ಯವನ್ನು ಹೇಳಬೇಡ . ಯಾವ ರೂಪದಲ್ಲಿ ಪೂಜೆಸಿದರೂ ಆ ಪೂಜೆ ಅಂತಿಮವಾಗಿ ಕೇಶವನಿಗೆ ಸಲ್ಲುತ್ತದೆ. ಇವೆಲ್ಲವೂ ಭಾರತಿಯರ ನೈತಿಕ ಮೌಲ್ಯಗಳಲ್ಲವೆ?? ಇವು ವಸಾಹತುಗಳ ಕಣ್ಣಿಗೆ ಬೀಳಲಿಲ್ಲವೆ? ಬಿದ್ದರೂ ಬೇಕೆಂದೆ ಕಡೆಗಣಿಸಿದರೆ? ಇನ್ನು ದೇವಸ್ಥಾನಗಳಲ್ಲಿ ಕಾಮಕೇಳಿಯ ದೃಶ್ಯಗಳು, ದೇವರೆನಿಸಿಕೊಂಡವನ ಕಾಮಕೇಳಿ ಕಥೆಗಳು, ಇವೆಲ್ಲ ಹೇಗೆ ಬಂದವು ಈ ಮಡಿವಂತ ದೆಶದಲ್ಲಿ ??!! ನನಗೆ ಈ ಕುರಿತು ಆಶ್ಚರ್ಯವಿದೆ.

  Like

 2. ಜನವರಿ 6, 2014 ರಲ್ಲಿ 3:18 ಅಪರಾಹ್ನ

  ವಿದ್ಯಾ ಅವರೆ,

  ನಿಮ್ಮ ಪ್ರಶ್ನೆಗಳು ಪ್ರಮುಖವಾಗಿ ಎರಡು ಸ್ವರೂಪದಲ್ಲಿವೆ.
  ಮೊದಲನೆಯದು: ನೀವು ಉದಾಹರಿಸಿದ ಅ) ಮೇಲಿನ ಕೆಲವು ಹೇಳಿಕೆಗಳು ಭಾರತದಲ್ಲಿ ನೈತಿಕತೆಗೆ ಉದಾಹರಣೆಯಲ್ಲವೇ? ಎಂಬುದು. ಬ) ದೇವಾಲಯಗಳಲ್ಲಿ ಲೈಂಗಿಕ ಶಿಲ್ಪಗಳು ಮತ್ತು ದೇವತೆಗಳ ಕಾಮಕೇಳಿಯ ಕತೆಗಳು ಹೇಗೆ ಬಂದವು? ಎಂಬುದು.

  ಈ ಪ್ರಶ್ನೆಗಳು ಭಾರತೀಯ ಸಂದರ್ಭದಲ್ಲಿ ನೈತಿಕತೆ ಮತ್ತು ಅನೈತಿಕತೆಯನ್ನು ಗುರುತಿಸುವ ಸಂದಿಗ್ದತೆಯನ್ನು ಹೊಂದಿವೆ. ಈ ಪ್ರಶ್ನೆಗಳು ಎಲ್ಲಿಂದ ಮತ್ತು ಏಕೆ ಉದ್ಭವಿಸುತ್ತಿವೆ ಎಂಬುದು ಮುಖ್ಯ. ಅದನ್ನು ಪ್ರಸ್ತುತ ಲೇಖನದಲ್ಲಿ ಪ್ರಮುಖವಾಗಿ ಗುರುತಿಸಲು ಯತ್ನಿಸಲಾಗಿದೆ.
  ಈ ಪ್ರಶ್ನೆಗಳು ಮೇಲ್ನೋಟಕ್ಕೆ ವಿಭಿನ್ನವಾಗಿ ಕಂಡರೂ ಅವುಗಳ ತಳಹದಿ ಒಂದೇ ಆಗಿದೆ. ಪಾಶ್ಚಾತ್ಯ ನೈತಿಕ ಸಿದ್ಧಾಂತಗಳನ್ನು ಹಿನ್ನೆಲೆಯನ್ನಾಗಿಟ್ಟುಕೊಂಡಾಗ ಮಾತ್ರ ಇಂತಹ ಪ್ರಶ್ನೆಗಳು ನಮಗೆ ಅರ್ಥವಾಗುತ್ತವೆ. ಭಾರತೀಯ ಸಂದರ್ಭದಲ್ಲಿ ನೈತಿಕ ಮತ್ತು ಅನೈತಿಕ ಸಂಗತಿಗಳು ಎಂಬುದಕ್ಕೆ ನೀವು ನೀಡಿರುವ ಮೇಲಿನ ಹೇಳಿಕೆ ಅಥವಾ ಉದಾಹರಣೆಗಳು ಪಾಶ್ಚಾತ್ಯ ನೈತಿಕ ಸಿದ್ಧಾಂತಗಳಿಂದ ಏಳುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿವೆ ಅಷ್ಟೇ. ಇಲ್ಲಿನ ನೈತಿಕ ಅನೈತಿಕ ವಿಚಾರಗಳು ಯಾವುವು ಎಂದು ಗುರುತಿಸುವ ಪ್ರವೃತ್ತಿಯನ್ನು ಪಾಶ್ಚಾತ್ಯ ಸಿದ್ಧಾಂತಗಳ ತಿಳುವಳಿಕೆಯನ್ನು ಪಡೆದ ಭಾರತೀಯ ಬುದ್ಧಿಜೀವಿಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಆದರೆ, ಮೇಲೆ ನೀವು ತಿಳಿಸಿದ ಈ ಕೆಲವು ಉದಾಹರಣೆಗಳು ಪಶ್ಚಿಮವು ಕಲ್ಪಿಸಿಕೊಳ್ಳುವ ಸಾರ್ವತ್ರಿಕವಾಗಿ ಅನ್ವಯವಾಗುವಂತಹ ನಾರ್ಮೆಟಿವ್ ಮಾರಲ್ ಪರಿಭಾಷೆಗಳ ಸ್ವರೂಪದವುಗಳಲ್ಲ. ಭಾರತದಲ್ಲಿ ನೀತಿ ಅನೀತಿಗಳು ಸಂದರ್ಭಸ್ಪಂದಿ ಸ್ವರೂಪದಲ್ಲಿರುತ್ತವೆ. ಕೆಲವೊಮ್ಮೆ ಸುಳ್ಳು ಹೇಳುವುದೇ ಇಲ್ಲಿ ನೀತಿಯುತವಾದುದು ಎನಿಸಿಕೊಳ್ಳುತ್ತದೆ. ಉದಾ: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬುದು. ಹಾಗಾಗಿ ಭಾರತದಲ್ಲಿ ಪಾಶ್ಚತ್ಯ ಸ್ವರೂಪದ ನೈತಿಕ (ನಾರ್ಮೆಟಿವ್ ಮಾರಲ್ಸ್) ಪರಿಕಲ್ಪನೆಯಿಲ್ಲ ಎಂದಷ್ಟೇ ಹೇಳಬಹುದು. ಅದು ನಮಗೆ ದೊಡ್ಡ ಕೊರತೆಯಾಗಿ ಕಾಣಿಸಬೇಕಾಗಿಲ್ಲ. ಆದರೆ, ನಾವು ಇಲ್ಲಿನ ದೇವತೆಗಳ ಕಥೆಗಳು, ಶಿಲ್ಪಗಳು ಅಥವಾ ಹೇಳಿಕೆಗಳನ್ನು ನೈತಿಕ ಅಥವಾ ಅನೈತಿಕ ಎಂದು ಸಮರ್ಥಿಸಲು ಹೊರಟಾಗ ಪಶ್ಚಿಮದ ನಾರ್ಮೆಟಿವ್ ಮಾರಲ್ಸ್ ಪರಿಕಲ್ಪನೆಯ ಮಾನದಂಡಗಳನ್ನು ಬಳಸುತ್ತಿರುತ್ತೇವೆ. ಆಗ ಈ ಸಿದ್ಧಾಂತಗಳಿಗೆ ನಾವು ಆಧಾರಗಳನ್ನು ಒದಗಿಸುವ ಪ್ರಯತ್ನಗಳಲ್ಲಿ ತೊಡಗುತ್ತೇವೆ. ಅಂದರೆ ಪಶ್ಚಿಮವೇ ಕೇಳುವ ಪ್ರಶ್ನೆಗಳಿಗೆ ಪಶ್ಚಿಮವೇ ಊಹಿಸಿಕೊಳ್ಳುವ ಉತ್ತರಗಳನ್ನು ನಾವು ಸಿದ್ಧಮಾಡಿ ಕೊಡುತ್ತಿರುತ್ತೇವೆ. ಈ ಪಾಶ್ಚಾತ್ಯ ನೈತಿಕ ಪರಿಕಲ್ಪನೆಗಳು ಭಾರತೀಯರು ಈ ಶಿಲ್ಪಗಳು, ದೇವತೆಗಳನ್ನು, ಹೇಳಿಕೆಗಳನ್ನು ಹೇಗೆ ಪರಿಭಾವಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವುದಿಲ್ಲ. ಹಾಗಾಗಿ ಸಾರ್ವತ್ರಿಕ ನೈತಿಕ ನಿಯಮಗಳನ್ನು ಕಂಡು ಹಿಡಿಯಲು ಪಾಶ್ಚಾತ್ಯ ಸಿದ್ಧಾಂತಗಳ ಮಾನದಂಡಗಳನ್ನು ಬಳಸಿ ಇಲ್ಲಿನ ಹೇಳಿಕೆಗಳು ಶಿಲ್ಪ, ಕತೆ ಇತ್ಯಾದಿಗಳನ್ನು ನಾವು ನೈತಿಕ ಅನೈತಿಕ ಎಂದು ನಿರ್ಧರಿಸಲು ಹೇಗೆ ಸಾಧ್ಯ?

  ಎರಡನೆಯದಾಗಿ: ಅ) ಭಾರತದಲ್ಲಿನ ನೈತಿಕ ಅಂಶಗಳು ವಸಾಹತುಗಳ ಕಣ್ಣಿಗೆ ಬೀಳಲಿಲ್ಲವೇ? ಬ) ಬೇಕೆಂದೇ ಕಡೆಗಣಿಸಿದರೆ? ಎಂಬುದು.
  ಭಾರತೀಯರ ನೈತಿಕ ಸ್ವರೂಪವೇನು ಎಂಬುದನ್ನು ಕಂಡುಕೊಳ್ಳುವುದು ವಸಾಹತುಶಾಹಿಗಳಿಗೆ ಮತ್ತು ಓರಿಯಂಟಲಿಸ್ಟರಿಗೆ ಕುತೂಹಲಕರ ಮತ್ತು ಸಹಜ ಪ್ರವೃತ್ತಿಯೇ ಆಗಿತ್ತು. ಇವರ ವಿವರಣೆಗಳಲ್ಲಿ ಭಾರತೀಯರು ನೈತಿಕವಾಗಿ ಅಧಃಪತನ ಹೊಂದಿದವರು, ಪಾಶ್ಚಿಮಾತ್ಯ ನೈತಿಕ ಚೌಕಟ್ಟಿಗೆ ಹೋಲಿಸಿದರೆ ಭಾರತೀಯರು ಪ್ರಾಚೀನ ಗ್ರೀಕರಿಗಿಂತಲೂ ಕೆಳ ಹಂತದಲ್ಲಿದ್ದಾರೆ. ಭಾರತೀಯರದು ಅನೈತಿಕ ಸಮಾಜ ಎಂಬ ಸಾಮಾನ್ಯ ಧೋರಣೆ ಕಂಡುಬರುತ್ತದೆ. ಪಾಶ್ಚಾತ್ಯರು ಈ ರೀತಿಯ ಚಿತ್ರಣ ನೀಡಿರುವುದರ ಹಿಂದೆ ಸಾಮ್ರಾಜ್ಯಶಾಹಿ ಉದ್ದೇಶವಿದೆ ಎಂದು ಆರೋಪಿಸುವುದು ವಸಾಹತೋತ್ತರವಾದಿಗಳು. ವಸಾಹತೋತ್ತರವಾದಿಗಳ ಈ ಆರೋಪ ಪಾಶ್ಚತ್ಯರ ವಿವರಣೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವುದಿಲ್ಲ. ಏಕೆಂದರೆ, ಪಾಶ್ಚಾತ್ಯರು ಉದ್ದೇಶಪೂರ್ವಕವಾಗಿ ಭಾರತೀಯ ನೈತಿಕ ಅಂಶಗಳನ್ನು ಬೇಕೆಂದೇ ಕಡೆಗಣಿಸಿದರು ಎನ್ನಲು ನಮಗೆ ಯಾವ ಆಧಾರಗಳೂ ಇಲ್ಲ. ಏಕೆಂದರೆ ಭಾರತದ ಮೇಲೆ ಹೆಚ್ಚಾಗಿ ವಸಾಹತು ಪ್ರಭುತ್ವವನ್ನು ಹೊಂದಿದ್ದು ಇಂಗ್ಲೇಂಡ್ ಮಾತ್ರ. ಇನ್ನು ಕೆಲವು ರಾಷ್ಟ್ರಗಳಿದ್ದರೂ ಅವು ಅಲ್ಪ ಸ್ವಲ್ಪ. ಆದರೆ ಭಾರತದ ಕುರಿತು ವಿವರಣೆಗಳನ್ನು ಇಂಗ್ಲೇಂಡಿನವರಲ್ಲದೇ ಜಗತ್ತಿನ ಅನೇಕ ರಾಷ್ಟ್ರಗಳ ವಿದ್ವಾಂಸರು ನೀಡಿದ್ದಾರೆ. ಇವರ ವಿವರಣೆಗಳಲ್ಲಿ ಭಾರತವನ್ನು ನಕಾರಾತ್ಮಕವಾಗಿ ಚಿತ್ರಿಸಬೇಕೆಂಬ ದುರುದ್ದೇಶವಿತ್ತು ಎಂಬುದನ್ನು ಸಾಭೀತುಪಡಿಸುವುದು ತೀರ ದುಸ್ತರವಾದುದು. ಹಾಗೂ ವಸಾಹತು ಪ್ರಭುತ್ವ ಸ್ಥಾಪನೆಯಾಗುವ ಮೊದಲಿನ ಪಾಶ್ಚಾತ್ಯ ಪ್ರವಾಸಿಗರು ಮತ್ತು ಮಿಷನರಿಗಳ ಚಿತ್ರಣಗಳು ಸಹ ಭಾರತವನ್ನು ಹಿಗೇಯೆ ಚಿತ್ರಿಸಿವೆ. ಹಾಗಾಗಿ ಭಾರತವು ಅನೈತಿಕ ಸಮಾಜ ಎಂದು ಬಿಂಬಿಸುವುದು, ಇಲ್ಲಿನ ನೈತಿಕ ಅಂಶಗಳನ್ನು ಕಡೆಗಣಿಸುವುದು ಅವರ ಉದ್ದೇಶವಾಗಿತ್ತು ಎನ್ನುವ ವಸಾಹತೋತ್ತರವಾದಿಗಳ ಆರೋಪವು ಆಧಾರರಹಿತವಾದುದು.
  ಆದರೆ, ಭಾರತದ ಕುರಿತ ಪಾಶ್ಚಾತ್ಯ ವಿದ್ವಾಂಸರಲ್ಲಿನ ಸಾಮಾನ್ಯ ಧೋರಣೆಯು ರೂಪುಗೊಂಡಿರುವುದು ಅವರ ರಿಲಿಜನ್ನಿನ ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ ಎಂಬುದು ಮೇಲಿನ ಲೇಖನದಲ್ಲಿ ಸ್ಪಷ್ಟವಾಗುತ್ತದೆ.

  Like

 3. Anil
  ಜನವರಿ 8, 2014 ರಲ್ಲಿ 10:22 ಫೂರ್ವಾಹ್ನ

  Very insightful. These fine articles are very compelling and thought provoking. Though it is a bit of a academic type literature. I mean it takes a layman like me 2 or 3 readings to get the complete understanding 🙂 Thank you so much for posting them (Author and the Translator). Are these articles available in English ? please publish a book with these valuable articles both in Kannada and English.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: