ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Cultural Studies, Culture, Religion > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 38 :ಜೀವನದ ಅರ್ಥಕ್ಕಾಗಿ ವ್ಯರ್ಥ ಹುಡುಕಾಟ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇಂದು ಯಾರಾದರೂ ‘ಜೀವನದ ಅರ್ಥವೇನು?’ ಎಂಬುದಾಗಿ ಪ್ರಶ್ನೆಯನ್ನೆತ್ತಿದರೆ ನಮಗದು ಪರಿಚಿತವಾದ ಪ್ರಶ್ನೆಯಾಗಿಯೇ ಕೇಳಿಸುತ್ತದೆ. ಗಿರೀಶ ಕಾರ್ನಾಡರ ಯಯಾತಿ ನಾಟಕದ ಅಂತ್ಯದಲ್ಲಿ ಯಯಾತಿಯ ಮಗನಾದ ಪುರು ಎಂಬವನು ‘ಇದೆಲ್ಲದರ ಅರ್ಥವೇನು ದೇವರೆ?’ ಎಂಬ ಉದ್ಗಾರ ಎತ್ತುತ್ತಾನೆ. ಅವನು ಕೇಳುತ್ತಿರುವುದು ಅವನ ಜೀವನದಲ್ಲಿ ನಡೆದ ಘಟನಾವಳಿಗಳ ಅರ್ಥವೇನು ಎಂಬುದಾಗಿ. ಮನುಷ್ಯನ ಜೀವನದ ಅರ್ಥದ ಹುಡುಕಾಟವೇ ಸಾಹಿತ್ಯದ ಅತ್ಯಂತ ಗಹನವಾದ ಕೆಲಸವಾಗಿದೆ ಎಂಬುದಾಗಿ ಇಂದಿನ ಸಾಹಿತ್ಯವು ಕೂಡ ನಮಗೆ ತಿಳಿಸುತ್ತದೆ. ಇನ್ನೂ ಕೆಲವು ಪಾಶ್ಚಾತ್ಯ ತತ್ವಶಾಸ್ತ್ರಜ್ಞರು ‘ಜೀವನಕ್ಕೆ ಅರ್ಥವಿಲ್ಲ’ ಎಂದು ಘೋಷಿಸಿದ್ದಾರೆ. ಇಲ್ಲೆಲ್ಲ ಈ ‘ಅರ್ಥ’ ಎಂದರೇನು?

ನಮಗೇಕೆ ಇಂಥ ವಾಕ್ಯಗಳು ಅರ್ಥವಾಗಿವೆ ಎಂದೆನಿಸುತ್ತದೆ? ಅರ್ಥ ಎನ್ನುವುದು ನಮ್ಮ ಶಬ್ದವೇ ಆಗಿದೆ ಎಂಬುದಂತೂ ಖಂಡಿತ. ಶಬ್ದಗಳಿಗೆ ಅರ್ಥ ಇರುತ್ತದೆ ಎನ್ನುತ್ತೇವೆ. ಮತ್ತೊಂದು ಪರಿಭಾಷೆಯಾದ ಪುರುಷಾರ್ಥ ಎಂಬ ಶಬ್ದ ನಮಗೆ ಪರಿಚಿತವಾದುದು. ಇನ್ನು ಅರ್ಥಶಾಶ್ತ್ರ ಎಂಬ ಪ್ರಯೋಗವೂ ಇದೆ. ಅದು ರಾಜನೀತಿಗೆ ಸಂಬಂಧಪಟ್ಟ ಶಾಸ್ತ್ರವಾಗಿದೆ. ಈ ಮೇಲಿನ ಸಂದರ್ಭಗಳನ್ನಿಟ್ಟುಕೊಂಡು ರಚಿಸಿದ ವಾಕ್ಯಗಳು ನಮ್ಮ ತಿಳುವಳಿಕೆಗೆ ಬರುವುದು ಕಷ್ಟವಲ್ಲ. ಅದನ್ನು ಪುರುಷಾರ್ಥದ ಸಂದರ್ಭದಲ್ಲಿ ಇಟ್ಟರೆ ‘ಯಾವ ಪುರುಷಾರ್ಥಕ್ಕಾಗಿ ಜೀವಿಸಬೇಕು?’ ಎಂಬ ಪ್ರಶ್ನೆಯು ಜೊತೆಗೇ ಯಾವುದಾದರೂ ಕೆಲಸದ ಕುರಿತು ‘ಏನು ಪುರುಷಾರ್ಥಕ್ಕಾಗಿ ಮಾಡಬೇಕು?’ ಎಂಬ ಪ್ರಶ್ನೆಗಳೂ ಸಾಧ್ಯ. ‘ಬದುಕು ಸಾರ್ಥಕವಾಯಿತು’ ಎಂಬ ಹೇಳಿಕೆಗಳೂ ಸಾಧ್ಯ. ಆದರೆ ಇಷ್ಟೇ ಜ್ಞಾನವನ್ನು ಇಟ್ಟುಕೊಂಡು ‘ಜೀವನದ ಅರ್ಥವೇನು?’ ಎಂಬಂಥ ವಾಕ್ಯಗಳನ್ನು ಅರ್ಥಮಾಡುವುದು ಅಸಾಧ್ಯ. ‘ಇದೆಲ್ಲದರ ಅರ್ಥವೇನು?’ ‘ ಈ ಘಟನೆಯ ಅರ್ಥವೇನು?’ ಎಂಬ ಪ್ರಶ್ನೆಗಳಲ್ಲಿ ಅದು ಪುರುಷಾರ್ಥಕ್ಕೆ ಸಂಬಂಧಪಟ್ಟ ಪ್ರಶ್ನೆಯಲ್ಲ ಎಂಬುದು ಸ್ಪಷ್ಟ.

ಈ ಪ್ರಶ್ನೆಯ ಜಾಡು ಹಿಡಿದು ಹೋದರೆ ನಮಗೆ ಕಂಡುಬರುವುದೇನು? ಇಂದು ಬೇರೆ ಬೇರೆ ಸಂದರ್ಭಗಳಲ್ಲಿ ನಾವು ಎತ್ತುತ್ತಿರುವ ಈ ಪ್ರಶ್ನೆಯು ಭಾರತೀಯ ಸಂಸ್ಕೃತಿಯು ಎತ್ತಿದ ಪ್ರಶ್ನೆಯಲ್ಲ. ಇದು ‘what is the meaning of life?’ ಎಂಬ ವಾಕ್ಯದ ತರ್ಜುಮೆಯಾಗಿದೆ. ಈ ವಾಕ್ಯವು ನಿಜವಾಗಿಯೂ ಏನು ಹೇಳುತ್ತದೆಯೆಂಬುದನ್ನು ತಿಳಿದುಕೊಳ್ಳಲು ಕ್ರೈಸ್ತ ಥಿಯಾಲಜಿಗೇ ಶರಣು ಹೋಗಬೇಕಾಗುತ್ತದೆ. ‘ಜೀವನದ ಅರ್ಥ’ದ ಕಲ್ಪನೆಯು ಕ್ರೈಸ್ತ ಥಿಯಾಲಜಿಯಲ್ಲಿ ಪ್ರಮುಖವಾದುದು. ಇಲ್ಲಿ ಬರುವ ‘ಅರ್ಥ’ವು ಅಕ್ಷರಶಃ ಮಾತಿನ ಅರ್ಥವನ್ನು ಸೂಚಿಸುತ್ತದೆ. ಮಾತನಾಡುವವನು ಏನನ್ನೋ ಉದ್ದೇಶದಲ್ಲಿಟ್ಟುಕೊಂಡು ಮತ್ತೊಬ್ಬನಿಗೆ ಅದನ್ನು ಭಾಷೆಯ ಮೂಲಕ ತಿಳಿಸಲು ಪ್ರಯತ್ನಿಸುತ್ತಾನೆ. ಒಂದೊಮ್ಮೆ ಅದು ನಿಮಗೆ ಗೊತ್ತಾಗದಿದ್ದಲ್ಲಿ ‘ ಈ ಮಾತಿನ ಅರ್ಥವೇನು?’ ಎಂಬುದಾಗಿ ಕೇಳುತ್ತೇವೆ. ನಮ್ಮ ಜೀವನವೂ ಮಾತಿನಂತೆಯೇ ಯಾವುದೋ ‘ಉದ್ದೇಶ’ ಅಥವಾ ‘ಕಾರಣ’ಕ್ಕಾಗಿ ರಚಿಸಲ್ಪಟ್ಟಿದೆ. ಅದು ಗೊತ್ತಾದರೆ ಜೀವನದ ಅರ್ಥ ಗೊತ್ತಾದಂತೇ ಸರಿ. ಗಾಡ್ ಪ್ರಪಂಚದ ಸೃಷ್ಟಿಯನ್ನು ಮಾಡಿ ಅದರೊಳಗೆ ಮನುಷ್ಯರನ್ನೂ ಮಾಡುವಾಗ ಅವನಿಗೊಂದು ಉದ್ದೇಶವಿತ್ತು ಎಂಬುದಾಗಿ ಬೈಬಲ್ ಹೇಳುತ್ತದೆ. ಹಾಗೂ ಅದನ್ನು ಅವನು ಪ್ರವಾದಿಗೆ ಪ್ರಕಟಪಡಿಸಿದ್ದಾನೆ. ಅಂದರೆ ಅವನ ಉದ್ದೇಶವನ್ನು ಈಡೇರಿಸಲಿಕ್ಕಾಗಿ ಈ ಸೃಷ್ಟಿಯೂ, ಅದರ ಭಾಗವಾದ ಮನುಷ್ಯರೂ ಅಸ್ತಿತ್ವಕ್ಕೆ ಬಂದಿದ್ದಾರೆ. ಆದರೆ ಮಾನವರಿಗೆ ಅದು ಯಾವ ಉದ್ದೇಶ ಎಂಬುದು ಗೊತ್ತಿಲ್ಲ. ಅಂಥ ಸಂದರ್ಭದಲ್ಲಿ ‘ಪ್ರಪಂಚವನ್ನು ಗಾಡ್ ಯಾಕಾಗಿ ಸೃಷ್ಟಿಸಿದ್ದಾನೆ?’ ‘ನನ್ನನ್ನು ಗಾಡ್ ಯಾಕಾಗಿ ಸೃಷ್ಟಿಸಿದ್ದಾನೆ?’ ಇಂಥ ಪ್ರಶ್ನೆಗಳು ಪ್ರಸ್ತುತವಾಗುತ್ತವೆ. ಅಂದರೆ ‘ನಾನು ಯಾವ ಉದ್ದೇಶಕ್ಕಾಗಿ ಜೀವಿಸಬೇಕು?’ ‘ನನ್ನ ಜೀವನವು ಯಾಕಾಗಿ ಇದೆ?’ ಎಂಬ ಪ್ರಶ್ನೆಗಳಿಗೆ ಅವಕಾಶವು ನಿರ್ಮಾಣವಾಗುತ್ತದೆ. ಇಂಥ ಪ್ರಶ್ನೆಯನ್ನು ಪ್ರತಿಯೊಬ್ಬ ಕ್ರೈಸ್ತನೂ ಕೇಳಿಕೊಳ್ಳುವ ಮೂಲಕ ತನ್ನ ಜೀವನದ ಹಿಂದೆ ಇರುವ ದೈವೀ ಉದ್ದೇಶವನ್ನು ಮನದಟ್ಟುಮಾಡಿಕೊಳ್ಳುತ್ತಾನೆ. ಈ ಎಲ್ಲಾ ಪ್ರಶ್ನೆಗಳೂ ಕೂಡ ಗಾಡ್ ಒಂದು ಉದ್ದೇಶವನ್ನು ಇಟ್ಟುಕೊಂಡು ನಮ್ಮನ್ನು ಸೃಷ್ಟಿಸಿದ್ದಾನೆ ಎಂಬ ನಂಬಿಕೆಯಿಂದಲೇ ಅಸ್ತಿತ್ವಕ್ಕೆ ಬಂದಿವೆ ಎಂಬುದು ಮುಖ್ಯ.

ರಿಲಿಜನ್ನುಗಳ ಪ್ರಕಾರ ನಾನು ಏನು ಮಾಡಬೇಕು ಎಂಬುದನ್ನು ಕಂಡುಕೊಳ್ಳಬೇಕಾದರೆ ಗಾಡ್ ನನ್ನನ್ನು ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆ ಎಂಬುದನ್ನು ತಿಳಿದುಕೊಳ್ಳಬೇಕು. ಅದಕ್ಕೆ ಸೆಮೆಟಿಕ್ ರಿಲಿಜನ್ನುಗಳು ತಮ್ಮದೇ ನಿರೂಪಣೆಗಳನ್ನು ನೀಡುತ್ತವೆ. ಅವುಗಳ ಪ್ರಕಾರ ಮಾನವ ಸಂತತಿಯು ಗಾಡ್ನ ಆಜ್ಞೆಯನ್ನು ಉಲ್ಲಂಘಿಸಿ ಪಾಪವನ್ನು ಮಾಡಿದ್ದರಿಂದ ಗಾಡ್ನ ಲೋಕದಿಂದ ಭ್ರಷ್ಟವಾಗಿ ಭೂಮಿಗೆ ಬಿದ್ದಿತು. ಇಂಥ ಮನುಷ್ಯರ ಜೀವನದ ಅಂತಿಮ ಗುರಿಯೇ ಅವನ ಉದ್ದೇಶವನ್ನು ತಿಳಿದುಕೊಂಡು, ಅವನ ಆಜ್ಞೆಯಂತೇ ನಡೆದುಕೊಂಡು ಅವನನ್ನು ಮತ್ತೆ ಸೇರುವುದು. ಹಾಗಾಗಿ ಪ್ರತಿಯೊಬ್ಬ ಕ್ರೈಸ್ತನೂ ತನ್ನ ಬದುಕಿನ ಉದ್ದೇಶವನ್ನು ತಿಳಿದಿರಬೇಕು ಎಂಬುದಾಗಿ ಕ್ರಿಶ್ಚಿಯಾನಿಟಿಯು ತಿಳಿಸುತ್ತದೆ. ಆದರೆ ರಿಲಿಜನ್ನುಗಳು ಗಾಡ್ನಿಗೆ ಮನುಷ್ಯರನ್ನು ಸೃಷ್ಟಿಸುವಾಗ ಒಂದು ಉದ್ದೇಶವಿದೆ ಎನ್ನುವುದನ್ನು ಧೃಡೀಕರಿಸುತ್ತವೆಯೇ ವಿನಃ ಪ್ರತೀ ಮನುಷ್ಯನ ಸಂದರ್ಭದಲ್ಲಿ ಆ ಉದ್ದೇಶ ಯಾವುದು ಎಂಬುದನ್ನು ಬಿಡಿಸಿ ಹೇಳಿಲ್ಲ. ಅದರಲ್ಲೂ ಪ್ರೊಟೆಸ್ಟಾಂಟ್ ಥಿಯಾಲಜಿಯ ಪ್ರಕಾರ ಪ್ರತೀ ಮನುಷ್ಯನ ಸೋಲ್ ಅನ್ನೂ ( ಈ ಶಬ್ದವನ್ನು ಕನ್ನಡದಲ್ಲಿ ಆತ್ಮ ಎಂದು ತಪ್ಪಾಗಿ ಅನುವಾದ ಮಾಡಲಾಗಿದೆ) ಗಾಡ್ ಸ್ವತಃ ರಚಿಸಿದ್ದಾನೆ. ಅಂದರೆ ಪ್ರತಿಯೊಬ್ಬನ ಜೀವನಕ್ಕೂ ಬೇರೆ ಬೇರೆಯದೇ ಆದ ಅರ್ಥಗಳಿರಲು ಸಾಧ್ಯ. ಅಂದ ಮೇಲೆ ಪ್ರತಿಯೊಬ್ಬನೂ ನಿಜವಾದ ಕ್ರಿಶ್ಚಿಯನ್ ಆಗಿರಬೇಕಾದರೆ ‘ನನ್ನನ್ನು (ಸೋಲ್ಅನ್ನು) ಸೃಷ್ಟಿಸುವ ಹಿಂದೆ ಯಾವ ಉದ್ದೇಶವಿದೆ?’ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಏಕೆಂದರೆ ಮತ್ತೊಬ್ಬನ ಉದ್ದೇಶ ಕೂಡ ನನ್ನದಾಗಲು ಸಾಧ್ಯವಿಲ್ಲ. ಅಷ್ಟಾಗಿಯೂ ಕ್ರೈಸ್ತನೊಬ್ಬನಿಗೆ ಆ ಅರ್ಥ ಎಂದರೆ ಏನು ಎಂಬುದು ಅರ್ಥವಾಗುತ್ತದೆ.

ಈ ಮೇಲಿನ ಸಂದರ್ಭದಿಂದ ಈ ವಾಕ್ಯವನ್ನು ಕಿತ್ತು ಇಟ್ಟರೆ ಅದು ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಏಕೆಂದರೆ ಪ್ರಪಂಚ ಹಾಗೂ ಜೀವನವೆಂಬುದೇ ಬೇರೆ, ಆಡುವ ಮಾತೇ ಬೇರೆ. ಅವೆರಡೂ ಬೇರೆ ಬೇರೆ ಪ್ರಭೇದಗಳಿಗೆ ಸೇರಿದ ಸಂಗತಿಗಳು. ಅರ್ಥ ಎಂಬುದು ಮಾತಿಗೆ ಅನ್ವಯಿಸಬಹುದಾದ ಗುಣವಾಗಿದೆ, ಜೀವನಕ್ಕಲ್ಲ. ನೀವು ರಿಲಿಜನ್ ಹಾಗೂ ಗಾಡ್ನನ್ನು ನಂಬುವುದಿಲ್ಲ ಅಂತಾದಲ್ಲಿ ನಿಮ್ಮ ಜೀವನದ ಹಿಂದೆ ಅಥವಾ ಪ್ರಪಂಚದ ಹಿಂದೆ ಆತನ ಉದ್ದೇಶವಿದೆ ಎಂಬುದನ್ನೂ ಒಪ್ಪಲಾರಿರಿ. ಅಂದಾಗ ಅಲ್ಲಿಯೇ ಅವುಗಳ ಅರ್ಥದ ಪ್ರಶ್ನೆಯೂ ಮಾಯವಾಗಬೇಕು. ಆದರೆ ಯುರೋಪಿನ ಜ್ಞಾನೋದಯ ಯುಗದ ಸೆಕ್ಯುಲರ್ ಅಥವಾ ಅಥೇಯಿಸ್ಟ್ ಚಿಂತನೆಗಳಲ್ಲಿ ಹಾಗಾಗಲಿಲ್ಲ. ಅವರು ಗಾಡ್ ಮತ್ತು ಆತನ ಉದ್ದೇಶಗಳನ್ನು ಬಿಟ್ಟರು ಆದರೆ ಅರ್ಥದ ಹುಡುಕಾಟವನ್ನು ಒಂದು ಸೆಕ್ಯುಲರ್ ಸಮಸ್ಯೆಯನ್ನಾಗಿ ಬದಲಾಯಿಸಿ ಮುಂದುವರಿಸಿದರು. ಗಾಡ್ನನ್ನು ಕೈಬಿಟ್ಟ ನಿರ್ದಿಷ್ಟ ಕಾರಣದಿಂದಲೇ ಅವರಿಗೆ ಮುಂದೆ ಮಾನವರು ಈ ಅರ್ಥದ ಕುರಿತು ಬಿಡಿಸಬೇಕಾದ ಒಗಟುಗಳು ಎಲ್ಲೆಲ್ಲಿಯೂ ಕಂಡವು. ಅಲ್ಲಿನ ವಿಜ್ಞಾನಿಗಳಿಗೆ ನಿಸರ್ಗವೇ ಒಂದು ಪುಸ್ತಕವಾಗಿ, ಓದಿ ಅರ್ಥೈಸಬೇಕಾದ ಸಂಗತಿಯಾಗಿ ಕಂಡಿತು. ತತ್ವಶಾಸ್ತ್ರಜ್ಞರಿಗೆ ಜೀವನವೇ ಒಂದು ಪುಸ್ತಕವಾಗಿ ಅರ್ಥಹಚ್ಚಬೇಕಾದ ಸಂಗತಿಯಾಗಿ ಕಂಡಿತು. ಪಾಶ್ಚಾತ್ಯ ನಿಸರ್ಗ ವಿಜ್ಞಾನ ಹಾಗೂ ಸಾಮಾಜಿಕ ಚಿಂತನೆಗಳಲ್ಲಿ ನಡೆದ ಆವಿಷ್ಕಾರಗಳೆಲ್ಲವೂ ಈ ಹುಡುಕಾಟದ ಕೊಡುಗೆಗಳೇ ಆಗಿವೆ.

ಆಧುನಿಕ ಯುರೋಪಿಯನ್ನರ ಬದುಕನ್ನೇ ಈ ವಿಚಾರವು ರೂಪಿಸಿದೆ ಎಂದರೂ ತಪ್ಪಿಲ್ಲ. ಪ್ರಪಂಚ ಹಾಗೂ ಮನುಷ್ಯ ಜೀವನದ ಹಿಂದೆ ಒಂದು ಉದ್ದೇಶವಿದೆ. ಮನುಷ್ಯ ಸಮಾಜವು ಈ ಉದ್ದೇಶವನ್ನು ಸಾಕಾರಗೊಳಿಸುವ ಒಂದು ಸಾಧನವಾಗಿದೆ ಎಂಬುದಾಗಿ ಅವರು ನಂಬಿದ್ದಾರೆ. ಹಾಗಾಗಿ ಇಂಥ ಉದ್ದೇಶದ ಕುರಿತು ತಿಳಿದುಕೊಳ್ಳುವುದು ಇವರ ಬದುಕಿಗೆ ತೀರಾ ನಿರ್ಣಾಯಕವೆನ್ನಿಸುತ್ತದೆ. ತಿಳಿದುಕೊಳ್ಳುವುದೆಂದರೆ ಅರ್ಥೈಸುವುದು. ಅಂದರೆ ಆ ಕುರಿತು ವಿವರಣೆಗಳನ್ನು ಸೃಷ್ಟಿಸುವುದು. ಮನುಷ್ಯನು ಹುಟ್ಟುಹಾಕಿದ ರಿಲಿಜನ್ನು, ಸಂಪ್ರದಾಯ, ಕಲೆ, ಇತಿಹಾಸ, ಸಮಾಜ, ಇವೆಲ್ಲವುಗಳೂ ಈ ಉದ್ದೇಶದ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕಾದ ವಿಷಯಗಳಾಗಿ ಅವರಿಗೆ ಕಂಡವು. ಅವುಗಳನ್ನು ಅರ್ಥಮಾಡಿಕೊಳ್ಳದೇ ಅವುಗಳಲ್ಲಿ ತೊಡಗಿಕೊಳ್ಳುವುದೇ ಅಕ್ರಮವೆಂಬಂತಾಯಿತು. ಏಕೆಂದರೆ ಅವುಗಳ ಉದ್ದೇಶವನ್ನು ಅರ್ಥಮಾಡಿಕೊಳ್ಳದೇ ಇವೆಲ್ಲವನ್ನೂ ರೂಪಿಸುವ ಮನುಷ್ಯರ ಕ್ರಿಯೆಗೇ ಒಂದು ಗುರಿಯಿರಲಾರದು. ಹಾಗಾಗಿ ಇವೆಲ್ಲ ಏಕೆ ಹುಟ್ಟಿದವು? ಮನುಷ್ಯನು ಅವುಗಳನ್ನು ಏಕೆ ಹುಟ್ಟುಹಾಕಿದನು ಹಾಗೂ ಅವು ಯಾವ ಉದ್ದೇಶವನ್ನು ಪೂರೈಸಲಿಕ್ಕೆ ಇವೆ? ಎಂಬ ಚಿಂತನೆಯು ಅವುಗಳನ್ನು ಕಲಿಯಲಿಕ್ಕೆ, ಆಚರಿಸಲಿಕ್ಕೆ ಅತ್ಯಂತ ಮೂಲಭೂತವಾಯಿತು.

ಉದಾಹರಣೆಗೆ ಮನುಕುಲವು ಯಾವ ಉದ್ದೇಶವನ್ನು ಈಡೇರಿಸಲಿಕ್ಕಾಗಿ ಇದೆ ಎಂಬುದನ್ನು ತಿಳಿಸುವದೇ ಇತಿಹಾಸ ಗ್ರಂಥವಾಯಿತು. ಐತಿಹಾಸಿಕ ಘಟನೆಗಳ ಹಿಂದಿನ ನಿಯಮಗಳನ್ನು ಹುಡುಕುವ ಹಾಗೂ ಅವುಗಳ ಗತಿಯನ್ನು ಗುರುತಿಸುವ ಕುರಿತು ತತ್ವಶಾಸ್ತ್ರೀಯ ಸಿದ್ಧಾಂತಗಳನ್ನು ಕಟ್ಟಲಾಯಿತು. ಇತಿಹಾಸದ ಜ್ಞಾನವು ವರ್ತಮಾನದ ಮನುಷ್ಯನಿಗೆ ತಾನು ನಡೆದು ಬಂದ ದಾರಿಯ ಅರ್ಥವನ್ನು ತಿಳಿಸುತ್ತದೆ. ಯಾವ ರೀತಿಯ ಸಮಾಜವನ್ನು ಹಾಗೂ ಮೌಲ್ಯಗಳನ್ನು ರೂಪಿಸಿಕೊಂಡರೆ ಮನುಕುಲದ ನಿಶ್ಚಿತ ಗುರಿಯತ್ತ ಪ್ರಗತಿಯನ್ನು ಸಾಧಿಸಲು ಅನುಕೂಲವಾಗಿರುತ್ತದೆ? ಯಾವರೀತಿಯ ತಪ್ಪು ಆಚಾರ ವಿಚಾರಗಳು ಅವನನ್ನು ಆ ಪ್ರಗತಿಯಿಂದ ಹಿಂದಕ್ಕೆ ಸೆಳೆಯುತ್ತವೆ? ಇತ್ಯಾದಿಗಳನ್ನು ಉತ್ತರಿಸಲಿಕ್ಕಾಗಿ ಸಮಾಜವನ್ನು ಕುರಿತು ತಿಳಿದುಕೊಳ್ಳಬೇಕು.

ಅದಕ್ಕಿಂತಲೂ ಕುತೂಹಲಕಾರಿಯಾದದ್ದೆಂದರೆ ಪಾಶ್ಚಾತ್ಯರಿಗೆ ಸಂಗೀತ, ಚಿತ್ರಕಲೆ, ಕಥೆ, ಕಾವ್ಯಗಳೆಲ್ಲ ಕೇವಲ ಆಸ್ವಾದನೆ ಮಾಡಿ ಸಂತೋಷಪಡಬೇಕಾದ ವಿಷಯಗಳಾಗಿ ಅವರಿಗೆ ಕಾಣುವುದಿಲ್ಲ. ಅವು ಅರ್ಥಮಾಡಿಕೊಳ್ಳಬೇಕಾದ ವಿಷಯಗಳು. ಕಲಾ ವಿಮರ್ಶೆ ಎಂಬುದು ಅವರಲ್ಲಿ ಆದ್ಯ ಸ್ಥಾನವನ್ನು ಪಡೆದುಕೊಂಡಿದೆ. ಒಂದು ಕಲೆಯನ್ನು ಆಸ್ವಾದನೆ ಮಾಡುವುದೆಂದರೆ ಅದರ ಅರ್ಥವನ್ನು, ಉದ್ದೇಶವನ್ನು ತಿಳಿದುಕೊಳ್ಳುವುದು ಎಂಬುದಾಗಿ ಅವರು ಭಾವಿಸುತ್ತಾರೆ. ಏನನ್ನು ತಿಳಿಸಲಿಕ್ಕಾಗಿ ಈ ಕಲಾಕೃತಿಯನ್ನು ರಚಿಸಲಾಗಿದೆ? ಕಲಾಕಾರನು ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದಾನೆ? ಎಲ್ಲಿ ಎಡವಿದ್ದಾನೆ. ಅವನ ಉದ್ದೇಶವನ್ನು ಇನ್ನೂ ಹೇಗೆ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು? ಇತ್ಯಾದಿಗಳನ್ನು ಕಲಾ ವಿಮರ್ಶೆ ಒಳಗೊಳ್ಳುತ್ತದೆ. ಕಲಾಕೃತಿಯೆಂಬುದರ ಮೂಲಕ ಕಲಾಕಾರನು ಏನನ್ನೋ ತಿಳಿಸಬೇಕು, ಇಲ್ಲದಿದ್ದಲ್ಲಿ ಕಲಾಕೃತಿಗೆ ಅದೊಂದು ನ್ಯೂನತೆ ಎಂಬ ಭಾವನೆ ಅವರಲ್ಲಿದೆ. ಹೀಗಾಗಿ ಕಲೆಯ ಉದ್ದೇಶದ ಶೋಧನೆಯ ಹಂಬಲದಿಂದಲೇ ಅಲ್ಲಿ ಹಲವಾರು ಕಲಾ ಪಂಥಗಳು ಹುಟ್ಟಿಕೊಂಡವು. ಈ ಪಂಥಗಳೇನೇ ಇರಲಿ ಅವರೆಲ್ಲರ ಪ್ರಕಾರ ವ್ಯಕ್ತಿಯೊಬ್ಬನು ಏನನ್ನೋ ತಿಳಿಸುವ, ಸಂಕೇತಿಸುವ ಹಂಬಲವಿಲ್ಲದೇ ರಚಿಸಿದ್ದು ಕಲಾಕೃತಿಯಾಗಲಾರದು. ಇದನ್ನೇ ‘ಕಲಾಕಾರನ ಅಭಿವ್ಯಕ್ತಿ,’ ಎನ್ನಲಾಗುತ್ತದೆ. ಆದರೆ ಈ ವಿಮರ್ಶಕರಿಗೆ ತಾವು ಕಲಾಕೃತಿಗಳಲ್ಲಿ ಯಾವ ಅರ್ಥವನ್ನು ಹುಡುಕಬೇಕು? ಯಾವ ಪ್ರಶ್ನೆಯನ್ನು ಇಟ್ಟುಕೊಂಡು, ಏಕಾಗಿ ವಿಮರ್ಶೆಯನ್ನು ಮಾಡಬೇಕೆಂಬುದರ ಸಂಬಂಧಿಸಿ ಇನ್ನೂ ಒಮ್ಮತ ಬಂದಿಲ್ಲ. ಹಾಗಾಗಿ ವಿಭಿನ್ನ ಪಂಥಗಳು, ಬಗೆಹರಿಯದ ಚರ್ಚೆಗಳು ಈ ಸಂಬಂಧಿಸಿ ಹುಟ್ಟಿಕೊಂಡಿವೆ.

ಭಾರತದಂತಹ ದೇಶಗಳಲ್ಲೂ ಪಾಶ್ಚಾತ್ಯರ ಜೊತೆಗೇ ಈ ಪ್ರಶ್ನೆಗಳೂ ಬಂದವು. ಅದಕ್ಕಿಂತಲೂ ಹೆಚ್ಚಾಗಿ ಅವರ ಹುಡುಕಾಟದ ಪ್ರಕಾರಗಳೂ ಬಂದವು. ಪಾಶ್ಚಾತ್ಯರಿಗೆ ಇಂಥ ಪ್ರಶ್ನೆಗಳು ಮುಖ್ಯ ಎಂದಾದರೂ ಅನ್ನಿಸುತ್ತವೆ. ಭಾರತೀಯರಿಗಂತೂ ಇಂಥ ಧೋರಣೆಗಳು ಏಕೆ ಮುಖ್ಯ ಎಂಬುದು ಅರ್ಥವಾಗುವುದೂ ಕಷ್ಟ. ಅದರಲ್ಲೂ ಕಲಾಪ್ರಕಾರಗಳ ಉದಾಹರಣೆಗೆ ಬಂದರೆ ಈ ಪರಿಸ್ಥಿತಿಯು ಮತ್ತೂ ಎದ್ದು ಕಾಣುತ್ತದೆ. ಇಂದು ಪಾಶ್ಚಾತ್ಯ ಪರಂಪರೆಯ ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟಕ, ಇತ್ಯಾದಿಗಳೂ, ಅವುಗಳನ್ನನುಸರಿಸಿ ಬಂದ ವಿಮರ್ಶೆಯ ಪ್ರಕಾರಗಳು ನಮ್ಮಲ್ಲೂ ಚಾಲ್ತಿಯಲ್ಲಿವೆ. ಇವುಗಳ ಜೊತೆಗೆ ಇರುವ ಪಾಶ್ಚಾತ್ಯರ ಹುಡುಕಾಟವು ನಮಗೆ ಪ್ರಸ್ತುತವಾಗಿದೆ ಎಂದೆನಿಸುವುದಿಲ್ಲ. ಇಂಥ ವಿಮರ್ಶೆಗಳಲ್ಲಿ ಪ್ರಯೋಗವಾಗುವ ಪದಗಳು ಹಾಗೂ ಪರಿಕಲ್ಪನೆಗಳೇ ಓದುಗರಿಗೆ ಅರ್ಥವಾಗದಿದ್ದಮೇಲೆ, ಅವುಗಳನ್ನಿಟ್ಟುಕೊಂಡು ಕಲಾಕೃತಿಗಳನ್ನು ಅರ್ಥಮಾಡುವುದಂತೂ ದೂರದ ಮಾತೇ ಸರಿ. ಅದಕ್ಕಿಂತ, ಭಾರತೀಯ ಸಾಂಪ್ರದಾಯಿಕ ಕಲಾ ಪ್ರಕಾರಗಳ ಸಂದರ್ಭದಲ್ಲಿ ಇಂಥ ಹುಡುಕಾಟಕ್ಕೆ ಪ್ರಸ್ತುತತೆಯೇನು? ಎಂಬ ಪ್ರಶ್ನೆಗೆ ಉತ್ತರವಿದ್ದಂತಿಲ್ಲ. ಭಾರತೀಯ ಕಲೆಗಳ ಸಂಬಂಧಿಸಿ ರಸಾಸ್ವಾದನೆ ಎಂಬ ಪರಿಕಲ್ಪನೆ ಇದೆ. ಆದರೆ ಇದನ್ನು ಅಲ್ಲಗಳೆದು, ‘ಕಲಾಕಾರ ಏನನ್ನು ಅಭಿವ್ಯಕ್ತಿ ಮಾಡುತ್ತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು’ ರಸಿಕನ ಉದ್ದೇಶ ಎಂಬುದಾಗಿ ಯಾರಾದರೂ ಪ್ರತಿಪಾದಿಸಿದರೆ ಅದು ಉಳಿದವರಿಗಿರಲಿ, ಹೇಳಿದವನಿಗೇ ಅರ್ಥವಾಗುತ್ತದೆ ಅಂತ ಅನ್ನಿಸುವುದಿಲ್ಲ. ಸಾಂಪ್ರದಾಯಿಕ ಸಂಗೀತ, ನಾಟ್ಯ, ಚಿತ್ರಕಲೆ, ಇತ್ಯಾದಿಗಳ ಸಂದರ್ಭದಲ್ಲಿ ಇಲ್ಲಿ ಕಲಾಕಾರರು ಆಧರಿಸುವ ಸಾಹಿತ್ಯದ ಅರ್ಥಕ್ಕೆ ಗಮನಕೊಟ್ಟರೆ ರಸಾಸ್ವಾದನೆಯೇ ಸಾಧ್ಯವಾಗದಿರಬಹುದು. ಒಬ್ಬ ನಾಸ್ತಿಕವಾದಿಗೆ ಒಂದು ಸಂಗೀತ ಕಛೇರಿಯು ಅದ್ಭುತವೆನ್ನಿಸಬಹುದು, ಆದರೆ ಅಲ್ಲಿ ಹಾಡಿದ ದೇವರನಾಮದ ಅರ್ಥಕ್ಕೆ ಮಹತ್ವ ಕೊಟ್ಟರೆ ಅದೇ ಸಂಗೀತದ ರಸಾಸ್ವದನೆ ಅವನಿಗೆ ಸಾಧ್ಯವಾಗುತ್ತದೆ ಎನಿಸುವುದಿಲ್ಲ. ಅಂದರೆ ನಮ್ಮ ಕಲಾ ಪ್ರಕಾರಗಳಲ್ಲಿ ಅರ್ಥ ಕಂಡುಹಿಡಿಯುವುದೇ ಅರ್ಥಹೀನಕೆಲಸವಾಗಬಹುದು.

ಈ ರೀತಿಯಲ್ಲಿ ಜೀವನದ ಅರ್ಥದ ಪ್ರಶ್ನೆಯು ಗಾಡ್ನಿಂದ ಕಳಚಿಕೊಂಡು ಪಾಶ್ಚಾತ್ಯ ಸೆಕ್ಯುಲರ್ ಲೋಕದಲ್ಲಿ ಅರ್ಥವಾಗದ ಪ್ರಶ್ನೆಯಾಗಿ ಮಾರ್ಪಟ್ಟರೆ, ಹೀದನ್ನರ ಲೋಕದಲ್ಲಿ ಅರ್ಥಹೀನವಾದ ಪ್ರಶ್ನೆಯಾಗಿ ಮಾರ್ಪಟ್ಟಿತು. ಮನುಷ್ಯನ ಬದುಕಿನ ಕುರಿತ ಚಿಂತನೆಗಳಿಗೆ ಸಂಬಂಧಿಸಿದಂತೇ ಅದು ಕಗ್ಗಂಟುಗಳನ್ನು ಸೃಷ್ಟಿಸಿತು. ಯುರೋಪಿನ ಚಿಂತನಾ ಪರಂಪರೆಯಲ್ಲಿ ಜೀವನಕ್ಕೆ ಅರ್ಥವಿದೆ ಎಂಬ ಪ್ರತಿಪಾದನೆಯನ್ನು ಅರ್ಥ ಮಾಡಿಕೊಳ್ಳಲಿಕ್ಕಾಗಿ ಅಲ್ಲಿನ ಚಿಂತಕರ ತಲೆ ಕೂದಲುಗಳು ಸಾಕಷ್ಟು ಉದುರಿವೆ. ಈ ಪ್ರಸ್ತಾಪಕ್ಕೆ ತೀವ್ರವಾಗಿ ಬಂಡೆದ್ದವರೂ ಇದ್ದಾರೆ. ನಿಹಿಲಿಸಂ ಪಂಥದ ಚಿಂತಕರು ಗಾಡ್ ಇಲ್ಲ ಹಾಗೂ ಬದುಕಿಗೆ ಅರ್ಥವಿಲ್ಲ ಎಂಬುದಾಗಿ ಘೋಷಿಸಿದ್ದಾರೆ. ಬದುಕಿಗೆ ಅರ್ಥಗಳನ್ನು ನಾವು ಆರೋಪಿಸುತ್ತೇವೆಯೇ ವಿನಃ ಅದೊಂದು ಅಸಂಗತ ಕ್ರಿಯಾಸರಣಿ ಎಂಬ ಕಾಣ್ಕೆಯೇ ಅಸಂಗತತೆಯ ವಾದವನ್ನು (ಎಬ್ಸರ್ಡಿಸಂ) ಹುಟ್ಟುಹಾಕಿತು. ಹಾಗೂ ‘ವೇಟಿಂಗ್ ಫಾರ್ ಗೋಡೋ’ ದಂಥ ನಾಟಕಗಳು ಇಂಥ ತಡಕಾಟವನ್ನು ದೃಶ್ಯರೂಪದಲ್ಲಿ ತೋರಿಸುತ್ತವೆ. ಅಸಂಗತ ಬದುಕಿಗೆ ಅರ್ಥ ಕೊಟ್ಟುಕೊಳ್ಳುವ ಅಸ್ತಿತ್ವವಾದೀ ಕಾರಣಕ್ಕಾಗಿಯಾದರೂ ಮನುಷ್ಯನಿಗೆ ಗಾಡ್ ಬೇಕು ಎಂಬುದನ್ನೂ ಇವರು ಕಂಡುಕೊಂಡಿದ್ದಾರೆ.

ಒಟ್ಟಿನಲ್ಲಿ ಜೀವನದ ಅರ್ಥವೇನು ಎಂಬ ಪ್ರಶ್ನೆಯು ಪರಕೀಯತೆಯನ್ನು, ಉದ್ವಿಗ್ನತೆಯನ್ನು ಅಥವಾ ಖಿನ್ನತೆಯನ್ನು ಸೃಷ್ಟಿಸಿದ್ದಲ್ಲದೇ ಆತ್ಮಹತ್ಯೆಗೆ ಒಂದು ಅರ್ಥಪೂರ್ಣ ಕಾರಣವಾಗಿಯೂ ಯುರೋಪಿಯನ್ನರನ್ನು ಕಾಡಿದೆ. ಭಾರತೀಯರೇನೂ ಇಂಥ ಮಹಾರೋಗಗಳನ್ನು ಹಿಡಿಸಿಕೊಂಡಂತೇ ಕಾಣುವುದಿಲ್ಲ, ಏಕೆಂದರೆ ಇದೊಂದು ಪ್ರಶ್ನೆಯಾಗಿಯೇ ಅವರನ್ನು ಕಾಡಿದಂತಿಲ್ಲ. ಆದರೆ ಏಕೆಂದು ತಿಳಿಯದಿದ್ದರೂ ಕೂಡ ಅವರು ಈ ಸಲುವಾಗಿ ಸಾಕಷ್ಟು ಸೈದ್ಧಾಂತಿಕ ತಲೆನೋವು ಹಾಗೂ ಅಜೀರ್ಣವನ್ನು ಅನುಭವಿಸಿದ್ದಂತೂ ಹೌದು. ಅಂದರೆ ಮೂಲತಃ ಥಿಯಾಲಜಿಯ ಈ ಪ್ರಶ್ನೆಯನ್ನು ಹೈಜಾಕ್ ಮಾಡಿದ್ದಲ್ಲದೇ, ಅದರ ಸೃಷ್ಟಿಕರ್ತನಾದ ಗಾಡ್ನನ್ನೇ ಕಾಣೆಮಾಡಿದ್ದಕ್ಕೆ ಐರೋಪ್ಯ ಚಿಂತಕರು ಶಿಕ್ಷೆಯನ್ನು ಅನುಭವಿಸಿದರೆ, ಈ ಕೃತ್ಯದಲ್ಲಿ ಸಾಮೀಲಾಗುತ್ತಿರುವ ಹೀದನ್ನರೂ ಇಂಥ ಶಿಕ್ಷೆಗಳಿಂದ ತಪ್ಪಿಸಿಕೊಳ್ಳುವಂತಿಲ್ಲ.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: