ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 40 :ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆಯೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ
ಇಂದು ಸಾಮಾನ್ಯವಾಗಿ ನಮ್ಮ ಕಿವಿಗೆ ಬೀಳುವ ಒಂದು ಪ್ರಶ್ನೆಯೆಂದರೆ ‘ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆಯೆ?’ ಎಂಬುದು. ಈ ಪ್ರಶ್ನೆಗೆ ಇಲ್ಲ ಎಂಬುದಾಗಿ ಒಂದಷ್ಟು ಜನರು ಉತ್ತರಿಸಿದರೆ, ಇನ್ನೂ ಕೆಲವರು ಇದೆಯೆಂಬುದಾಗಿ ಶಪಥಮಾಡಿ ಹೇಳುತ್ತಾರೆ. ಆದರೆ ಈ ಚರ್ಚೆಯಲ್ಲಿ ತೊಡಗಿಕೊಂಡ ಎಷ್ಟು ಮಂದಿಗೆ ಈ ಪ್ರಶ್ನೆ ಅರ್ಥವಾಗಿದೆ ಎಂಬುದೇ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಏಕೆಂದರೆ ನಮ್ಮ ಮಹಾಭಾರತ ರಾಮಾಯಣಗಳನ್ನು ಇತಿಹಾಸ ಎಂಬುದಾಗಿ ಪ್ರಾಚೀನ ಕಾಲದಿಂದಲೂ ಕರೆದುಕೊಂಡು ಬರಲಾಗಿದೆ. ಈ ಇತಿಹಾಸವೆಂದರೆ ಹಿಂದಿನ ಕಾಲದಲ್ಲಿ ನಡೆದಿವೆ ಎನ್ನಲಾದ ಘಟನೆಗಳು. ಅದರಲ್ಲೂ ‘ಹೀಗೇ ಇತ್ತು’ ಎಂದು ಖಚಿತವಾಗಿ ಹೇಳುವುದೇ ಇತಿಹಾಸದ ಶಬ್ದಾರ್ಥವಾಗಿದೆ. ಇದರ ಜೊತೆಗೇ ಚರಿತ ಎಂಬ ಪ್ರಕಾರವೂ ಭಾರತೀಯರಿಗೆ ಗೊತ್ತಿತ್ತು. ಹಿಂದೆ ಆಗಿಹೋದ ಮಹಾಪುರುಷರ ಜೀವನವನ್ನು ಚಿತ್ರಿಸುವುದೇ ಚರಿತದ ಉದ್ದೇಶ. ರಾಮ, ಕೃಷ್ಣರಂಥ ಅವತಾರ ಪುರುಷರೊಂದೇ ಅಲ್ಲದೇ ಹರ್ಷ, ವಿಕ್ರಮಾದಿತ್ಯರಂಥ ರಾಜರ ಕುರಿತೂ ಚರಿತಗಳು ರಚನೆಯಾಗಿವೆ. ಈ ರೀತಿಯಲ್ಲಿ ಕಳೆದು ಹೋದ ಕಾಲದ ಘಟನಾವಳಿಗಳನ್ನು ದಾಖಲಿಸುವ ವಿಭಿನ್ನ ಪ್ರಕಾರಗಳು ನಮ್ಮಲ್ಲಿ ಇದ್ದವು ಅಂತಾದರೆ ಇವರಿಗೆ ‘ಇತಿಹಾಸ ಪ್ರಜ್ಞೆ ಇದೆಯೆ?’ ಎಂಬ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ? ‘ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ’ ಎಂಬುದಾಗಿ ತೀರ್ಮಾನಿಸಿದವರು ಈ ಪ್ರಶ್ನೆಗೆ ಉತ್ತರವನ್ನು ನೀಡುವುದಿರಲಿ ಪ್ರಶ್ನೆಯನ್ನೇ ಪರಿಗಣಿಸಿಲ್ಲ. ಇದಕ್ಕೆ ಸಕಾರಾತ್ಮಕವಾಗಿ ಉತ್ತರವನ್ನು ನೀಡಿದವರೂ ಕೂಡ ಈ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಏಕೆ ಎಂಬುದನ್ನು ಮುಂದೆ ನೋಡೋಣ.

ಈ ಮೇಲಿನ ವಿವಾದವು ಭಾರತೀಯರಿಗೆ ಹಿಸ್ಟರಿ ಎಂಬುದು ಗೊತ್ತಿದೆಯೋ ಇಲ್ಲವೊ ಎಂಬುದರ ಕುರಿತಾಗಿದೆ. ಹಿಸ್ಟರಿ ಎಂಬುದು ಪಾಶ್ಚಾತ್ಯ ನಾಗರೀಕತೆಯಲ್ಲಿ ಒಂದು ಪ್ರಮುಖವಾದ ಜ್ಞಾನವಾಗಿದೆ. ಗತಕಾಲದಲ್ಲಿ ನಿಜವಾಗಿಯೂ ಏನು ನಡೆಯಿತು ಎಂಬುದನ್ನು ತಿಳಿದುಕೊಳ್ಳುವುದೇ ಅದರ ಉದ್ದೇಶ. ನಿಜವನ್ನು ತಿಳಿದುಕೊಳ್ಳುವುದು ಹೇಗೆ ಎಂಬುದು ಹಿಸ್ಟರಿಗೆ ಒಂದು ಗಂಭೀರವಾದ ಪ್ರಶ್ನೆಯಾಗಿದೆ. ಹಾಗಾಗಿ ಅದು ಈ ಕುರಿತು ವೈಜ್ಞಾನಿಕ ವಿಧಾನಗಳನ್ನು ಬೆಳೆಸಿಕೊಂಡು ಬಂದಿದೆ. ಆಕರಗಳನ್ನು ಸಂಗ್ರಹಿಸುವುದು, ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸುವುದು, ಘಟನೆಗಳನ್ನಿಟ್ಟುಕೊಂಡು ತರ್ಕಿಸುವುದು ಇತ್ಯಾದಿ ವಿಧಾನಗಳ ಮೂಲಕ ನಿಜವನ್ನು ಧೃಡಪಡಿಸಿಕೊಳ್ಳಬೇಕು. ಇಂಥ ತರ್ಕ, ವಿಶ್ಲೇಷಣೆಗಳೆಲ್ಲವೂ ಗತಕಾಲದ ಮನುಷ್ಯರಿಗೆ ಸಂಬಂಧಿಸಿದವುಗಳಾದ್ದರಿಂದ ಮಾನವನ ಸ್ವಭಾವ, ಉದ್ದೇಶಗಳ ಕುರಿತು ನಮಗಿರುವ ಜ್ಞಾನಕ್ಕೆ ಅವು ಸಂಗತವಾಗಿರಲೇಬೇಕು. ಇಂಥ ಮನುಷ್ಯ ಘಟನೆಗಳು ಯಾವ ಜಾಗದಲ್ಲಿ ನಡೆದವು, ಯಾವ ಕಾಲದಲ್ಲಿ ನಡೆದವು ಎಂಬುದನ್ನು ನಿರ್ದಿಷ್ಟ್ಟಪಡಿಸಿ ಅವನ್ನು ಪೋಣಿಸಿದಾಗ ಮಾತ್ರವೇ ಅದು ಹಿಸ್ಟರಿಯಾಗುತ್ತದೆ. ಪಾಶ್ಚಾತ್ಯರು ತಮ್ಮ ಹಿಸ್ಟರಿಯ ಘಟನೆಗಳ ಕಾಲವನ್ನು ಕ್ರಿಸ್ತಶಕದಲ್ಲಿ ಗುರುತಿಸಿ ಅವುಗಳ ಕಾಲಾನುಕ್ರಮಣಿಕೆಯನ್ನು ಕಟ್ಟುವ ಸಲುವಾಗಿಯೇ ಕ್ರೊನಾಲಜಿ ಎಂಬ ವಿಶೇಷ ಶಾಖೆಯನ್ನು ಬೆಳೆಸಿದ್ದರು. ಇಂಥ ಹಿಸ್ಟರಿಯು ನಾಗರೀಕ ಸಮಾಜವನ್ನು ರೂಪಿಸುವಲ್ಲಿ ತೀರಾ ಅನಿವಾರ್ಯವಾದ ಹಾಗೂ ಅಮೂಲ್ಯವಾದ ಜ್ಞಾನವಾಗಿದೆ ಎಂಬುದಾಗಿ ಪಾಶ್ಚಾತ್ಯರು ನಂಬಿದ್ದರು. ಹಾಗಾಗಿ ಸ್ವಾಭಾವಿಕವಾಗಿಯೇ ಅವರ ಶಿಕ್ಷಣದಲ್ಲೂ ಈ ವಿಷಯವು ಆದ್ಯತೆ ಪಡೆಯಿತು.

ಪಾಶ್ಚಾತ್ಯರು ಭಾರತಕ್ಕೆ ಬಂದು ಇಲ್ಲಿನ ಪಾರಂಪರಿಕ ಜ್ಞಾನವನ್ನು ಅಧ್ಯಯನಕ್ಕೊಳಪಡಿಸಿದಾಗ ಅವರಿಗೆ ಇಲ್ಲಿ ಹಿಸ್ಟರಿ ಎಂಬ ಪ್ರಕಾರವು ಕಂಡುಬರಲಿಲ್ಲ. ಭಾರತೀಯರು ಹಿಸ್ಟರಿಯನ್ನು ಬರೆದಿಟ್ಟಿಲ್ಲ ಎಂಬುದನ್ನು ಕಂಡುಕೊಳ್ಳಲಿಕ್ಕೂ ಅವರು ಅನೇಕ ವರ್ಷಗಳನ್ನು ತೆಗೆದುಕೊಂಡರು. ಭಾರತದಲ್ಲಿ ವಸಾಹತು ಸರ್ಕಾರದ ಸ್ಥಾಪನೆಯಾದ ತರುವಾಯ ಇಲ್ಲಿ ತಾವು ಅಳವಡಿಸಿಕೊಳ್ಳಬಹುದಾದ ಶಿಕ್ಷಣ ಹಾಗೂ ಆಡಳಿತ ವ್ಯವಸ್ಥೆಗೆ ಈ ಜನರ ಹಿಸ್ಟರಿಯನ್ನು ತಿಳಿದುಕೊಳ್ಳುವುದು ಅವರಿಗೆ ಮುಖ್ಯವೆನಿಸಿತು. ಅದನ್ನು ತಿಳಿದುಕೊಳ್ಳಲು ಅವರು ಕಂಡುಕೊಂಡ ಉಪಾಯವೆಂದರೆ ದೇಸೀ ಪಂಡಿತರನ್ನು ಕೇಳುವುದು. ಅವರಲ್ಲಿ ನಿಮ್ಮ ಹಿಸ್ಟರಿಯನ್ನು ತಿಳಿಸಿ ಎಂದು ಕೇಳಿದಾಗ ಅವರು ಭಾರತದ ಗತಕಾಲದ ಕುರಿತ ಕಥೆಗಳನ್ನು ಕೇಳುತ್ತಿದ್ದಾರೆ ಎಂಬುದಾಗಿ ದೇಸೀ ಪಂಡಿತರು ಗ್ರಹಿಸಿದರು. ಹಿಸ್ಟರಿ ಎಂಬ ನಿರ್ದಿಷ್ಟ ಪ್ರಕಾರದ ಕಥನವನ್ನು ತಮ್ಮಿಂದ ಕೇಳುತ್ತಿದ್ದಾರೆ ಎಂಬುದು ಅವರಿಗೆ ತಿಳಿಯಲಿಲ್ಲ. ಅವರಿಗೆ ಹಿಂದಿನ ಕಾಲದ ಕುರಿತು ತಿಳಿಸುತ್ತಿದ್ದ ಇತಿಹಾಸ, ಚರಿತ, ಪುರಾಣ ಇತ್ಯಾದಿಗಳನ್ನು ಅವರು ಸಾದರ ಪಡಿಸಿದರು. ಅದೇ ರೀತಿ ಇಂತಹ ಪಂಡಿತರ ನೇತೃತ್ವದಲ್ಲಿ ಭಾರತದ ವಿಭಿನ್ನ ಭಾಗಗಳಲ್ಲಿದ್ದ ಹಿಸ್ಟರಿಗಳನ್ನು ಕಲೆಹಾಕುವ ಪ್ರಯತ್ನದಲ್ಲಿ ಕಥೆಗಳು ಹಾಗೂ ಸ್ಥಳ ಪುರಾಣಗಳ ರಾಶಿ ಬಿದ್ದಿತು. ಈ ಎಲ್ಲಾ ಕಥೆಗಳನ್ನು ಭಾರತೀಯರ ಹಿಸ್ಟರಿ ಎಂಬುದಾಗಿ ನೋಡಲು ಪ್ರಯತ್ನಸಿದರೂ ಪಾಶ್ಚಾತ್ಯರಿಗೆ ಅದರಲ್ಲಿ ತಮ್ಮ ಹಿಸ್ಟರಿಗೆ ಹೋಲುವಂಥದ್ದು ಏನೂ ಕಾಣಲಿಲ್ಲ. ಕಾಗಕ್ಕ ಗುಬ್ಬಕ್ಕನ ಕಥೆಗಳು ಹಾಗೂ ಅವಾಸ್ತವಿಕವಾದ ಘಟನೆಗಳಲ್ಲಿ ಹಿಸ್ಟರಿಯ ಲಕ್ಷಣಗಳು ಕಾಣಿಸಲಿಲ್ಲ.

ಹಾಗಾಗಿ ‘Indians lack the sense of history’ ( ಭಾರತೀಯರಿಗೆ ಹಿಸ್ಟರಿಯ ಪ್ರಜ್ಞೆ ಇಲ್ಲ) ಎಂಬುದಾಗಿ ನಿರ್ಣಯಿಸಿದರು. 19ನೆಯ ಶತಮಾನದ ಪ್ರಾರಂಭದಲ್ಲಿ ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವಾಗ ಭಾರತದ ಸಾಂಪ್ರದಾಯಿಕ ಜ್ಞಾನವನ್ನು ಅದರಲ್ಲಿ ಕಲಿಸುವುದು ಅಪಾಯಕಾರಿ ಎಂಬುದಾಗಿ ಬ್ರಿಟಿಷರು ತೀರ್ಮಾನಿಸಿದರು. 30 ಅಡಿ ಎತ್ತರದ ರಾಜರು, 30ಸಾವಿರ ವರ್ಷ ಆಳಿದ ರಾಜರ ಕಥೆಗಳನ್ನು ಇತಿಹಾಸ ಎಂದು ಕಲಿಸುವುದರಿಂದ ಬ್ರಿಟಿಷರು ನಗೆಪಾಟಲಿಗೀಡಾಗುವುದರಲ್ಲಿ ಸಂಶಯವಿಲ್ಲ ಎಂಬುದಾಗಿ ಬಾಬಿಂಗ್ಟನ್ ಮೆಕಾಲೆಯು ತನ್ನ ನಡಾವಳಿಯಲ್ಲಿ ಒತ್ತಿ ಹೇಳಿದನು. ಹಾಗಾಗಿ ಪಾಶ್ಚಾತ್ಯರೇ ಭಾರತೀಯ ಹಿಸ್ಟರಿಯನ್ನು ರಚಿಸಿ ಅದನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡರು. ಹಿಸ್ಟರಿ ಸಂಶೋಧನೆಯ ಅಂಗವಾಗಿ ಗ್ರಂಥಗಳ, ಪತ್ರಾಗಾರ ದಾಖಲೆಗಳ ಹಾಗೂ ಪ್ರಾಕ್ತನ ವಸ್ತುಗಳ ಶೋಧನೆ ಪ್ರಾರಂಭವಾಯಿತು. ಹೀಗೆ ರಚಿತವಾದ ಹಿಸ್ಟರಿಯು ಭಾರತೀಯ ಗತಕಾಲದ ಕುರಿತು ತಿಳಿಸಿದ ಕಥೆಗೂ ಭಾರತೀಯರ ಇತಿಹಾಸ, ಪುರಾಣ ಕಥೆಗಳಿಗೂ ಅರ್ಥಾರ್ಥ ಸಂಬಂಧ ಇಲ್ಲದಿರುವುದು ಕ್ರಮೇಣ ಭಾರತೀಯರಿಗೆ ಅರಿವಾಗತೊಡಗಿತು. ಅಂದರೆ ಯಾವ ವಿಧಾನದಿಂದ ಪಾಶ್ಚಾತ್ಯರು ಭಾರತೀಯ ಹಿಸ್ಟರಿಯ ನಿಜಗಳನ್ನು ಕಟ್ಟಿ ತೋರಿಸಿದರೋ ಆ ವಿಧಾನಗಳನ್ನು ನಮ್ಮ ಇತಿಹಾಸ ಪುರಾಣಗಳಿಗೆ ಅನ್ವಯ ಮಾಡಿದಾಗ ಇವು ಸುಳ್ಳುಗಳಾಗಿ ಬದಲಾದವು. ಹಾಗಾಗಿ ನಮ್ಮ ಇತಿಹಾಸ ಪುರಾಣಗಳನ್ನು ಹಿಸ್ಟರಿ ಎಂಬುದಾಗಿ ಆಧುನಿಕ ಶಿಕ್ಷಣದಲ್ಲಿ ಅಧ್ಯಯನ ಮಾಡುವುದನ್ನು ಅವರೂ ನಿರೀಕ್ಷಿಸಲಿಲ್ಲ ಮತ್ತು ಭಾರತೀಯರಿಗೆ ಹಿಸ್ಟರಿಯ ಪ್ರಜ್ಞೆ ಇಲ್ಲ ಎಂಬ ಹೇಳಿಕೆಯು ಅವರಿಗೂ ಸರಿಯೆನ್ನಿಸಿತು. ಭಾರತೀಯರೂ ಕೂಡ ಭಾರತೀಯ ಹಿಸ್ಟರಿಯ ರಚನೆಯಲ್ಲಿ ಅತ್ಯುತ್ಸಾಹದಿಂದ ಪಾಶ್ಚಾತ್ಯರ ಜೊತೆಗೆ ಕೈಜೋಡಿಸಿದರು.

ಈ ಹಂತದಲ್ಲಿ ಇತಿಹಾಸ, ಚರಿತ್ರೆ ಇವೆಲ್ಲ ಹಿಸ್ಟರಿಯ ಭಾರತೀಯ ಅವತಾರಗಳು ಎಂಬ ಸಾಮಾನ್ಯಜ್ಞಾನವೂ ಅದರೊಂದಿಗೆ ರೂಪುಗೊಂಡಿದ್ದು ಕಂಡುಬರುತ್ತದೆ. ಹಾಗಾಗಿ ಹಿಸ್ಟರಿಯನ್ನು ದೇಶೀ ಭಾಷೆಗಳಲ್ಲಿ ಇತಿಹಾಸ, ಚರಿತ್ರೆ ಇತ್ಯಾದಿಯಾಗಿ ಭಾಷಾಂತರಿಸಿಕೊಳ್ಳಲಾಯಿತು. ಇದರ ಜೊತೆಗೇ ಹಿಸ್ಟರಿ ಎಂಬುದು ಗತಕಾಲದ ಕುರಿತ ಅಧಿಕೃತ ಜ್ಞಾನ ಹಾಗೂ ಇತಿಹಾಸ ಪುರಾಣಗಳು ವಿಶ್ವಾಸಾರ್ಹವಾದ ಜ್ಞಾನವಲ್ಲ ಎಂಬ ಧೋರಣೆಯೂ ಹುಟ್ಟಿಕೊಂಡಿತು. ಏಕೆಂದರೆ ಹಿಸ್ಟರಿ ಎಂಬುದಕ್ಕೆ ಯಾವ್ಯಾವ ಲಕ್ಷಣಗಳಿದ್ದವೋ ಅವುಗಳನ್ನು ಪ್ರಮಾಣವಾಗಿ ತೆಗೆದುಕೊಂಡು ದೇಶೀ ಸಂಪ್ರದಾಯಗಳನ್ನು ತುಲನೆಮಾಡಿದಾಗ ಅವುಗಳು ಅಪರಿಪೂರ್ಣ ಹಿಸ್ಟರಿಗಳಾಗಿ ತೋರಿದ್ದು ಸಹಜ. ಅವುಗಳಲ್ಲಿದ್ದ ದೋಷಗಳನ್ನು ಕಳೆದಾಗ ಅವು ಕೂಡ ಹಿಸ್ಟರಿಗಳಾಗಿ ಬದಲಾಗಬಲ್ಲವು. ಒಂದುಕಾಲದಲ್ಲಿ ಭಾರತೀಯರು ಹಿಸ್ಟರಿಯ ದಾಖಲೆಯನ್ನು ಇಟ್ಟಿದ್ದರು, ಅವುಗಳಲ್ಲಿ ಕಾಲಕ್ರಮೇಣ ಸುಳ್ಳುಗಳು, ಕಲ್ಪನೆಗಳು, ಅತಿಶಯೋಕ್ತಿಗಳು ನುಸುಳಿಕೊಂಡು ಪುರಾಣ ಕಥೆಗಳು ಹುಟ್ಟಿಕೊಂಡಿವೆ. ಹಾಗಾಗಿ ಇತಿಹಾಸವು ಮೂಲತಃ ಹಿಸ್ಟರಿಯೇ ಆಗಿದೆ ಎಂದೂ ಕೆಲವರು ನಿರೂಪಿಸಿದರು. ಈ ಎಲ್ಲ ಅಭಿಪ್ರಾಯಗಳ ಪರಿಣಾಮವಾಗಿ ಪುರಾಣ ಇತಿಹಾಸಗಳನ್ನು ಹಿಸ್ಟರಿಯನ್ನಾಗಿ ಬದಲಾಯಿಸುವ ಕಾರ್ಯಕ್ರಮವು ಚಾಲ್ತಿಯಲ್ಲಿ ಬಂದಿತು. ಅದು ಈ ಮುಂದಿನ ರೀತಿಗಳಲ್ಲಿ ನಡೆಯಿತು: 1) ಇಂಥ ಸುಳ್ಳುಗಳನ್ನು ಬೇರ್ಪಡಿಸಿ ಅನ್ಯ ಆಕರಗಳ ಜೊತೆಗೆ ಹೋಲಿಸಿ ಈಗಲೂ ಅವುಗಳಲ್ಲಿರುವ ಸತ್ಯಘಟನೆಗಳನ್ನು ತೆಗೆದು ಹಿಸ್ಟರಿಯನ್ನು ಕಟ್ಟಬಹುದು ಎಂಬುದಾಗಿ ಕೆಲವರು ವಾದಿಸಿದರು. 2) ಅದಕ್ಕೂ ಮುಖ್ಯವಾಗಿ ಪ್ರಾಚೀನ ಭಾರತೀಯರು ನಿಜಘಟನೆಗಳನ್ನು ಪುರಾಣ ಪ್ರತೀಕಗಳನ್ನಾಗಿ ಬದಲಾಯಿಸಿ ಈ ಕಥೆಗಳಲ್ಲಿ ತಿಳಿಸಿದ್ದಾರೆ. ಇಂಥ ಪ್ರತೀಕಗಳನ್ನು ಅರ್ಥಮಾಡಿಕೊಂಡರೆ ಅವುಗಳಿಂದ ಹಿಸ್ಟರಿಯನ್ನು ತೆಗೆಯಬಹುದು ಎಂಬ ಸಾಮಾನ್ಯ ಧೋರಣೆಯೂ ಬೆಳೆಯಿತು.

ಇಂಥ ಧೋರಣೆಗಳ ಪರಿಣಾಮವಾಗಿ ನಮ್ಮ ಇತಿಹಾಸ ಪುರಾಣದ ಕಥೆಗಳನ್ನು ಹಿಸ್ಟರಿಯನ್ನಾಗಿ ಬದಲಾಯಿಸುವ ಪ್ರಯತ್ನ ಪ್ರಾರಂಭವಾಯಿತು. ಮಹಾಭಾರತವು ಮೂರು ಸಾವಿರ ವರ್ಷಗಳ ಹಿಂದೆ ಗಂಗಾ ಯಮುನಾ ಪ್ರದೇಶದಲ್ಲಿದ್ದ ಕೆಲವು ಬುಡಕಟ್ಟುಗಳ ಹಿಸ್ಟರಿಯಾಯಿತು. ರಾಮಾಯಣವು ಆರ್ಯ-ದ್ರಾವಿಡ ಸಂಘರ್ಷದ ಹಿಸ್ಟರಿಯಾಯಿತು. ಬಲಿ-ವಾಮನ ಪುರಾಣವು ಬ್ರಾಹ್ಮಣರು ಶೂದ್ರರನ್ನು ವಂಚಿಸಿದ ಹಿಸ್ಟರಿಯಾಯಿತು. ಕಪಿಸೈನ್ಯವು ದಕ್ಷಿಣ ಭಾರತದ ಆದಿ ಜನಾಂಗಗಳಾದ ದಲಿತರಾದರು. ಇಲ್ಲೆಲ್ಲ ನಿಜ ಘಟನೆಗಳು ಎಂಬುದಾಗಿ ಯಾವುದನ್ನು ಈ ಇತಿಹಾಸ ಪುರಾಣಗಳಿಂದ ಕಂಡುಕೊಂಡರೋ ಅವೆಲ್ಲವೂ ಪಾಶ್ಚಾತ್ಯರು ಭಾರತೀಯ ಹಿಸ್ಟರಿಯ ನಿಜಗಳೆಂದು ಈಗಾಗಲೇ ಕಟ್ಟಿಕೊಟ್ಟ ಆರ್ಯರ ಆಕ್ರಮಣ, ಜಾತಿವ್ಯವಸ್ಥೆ, ಆದಿಮ ಸಮಾಜಗಳು, ಇತ್ಯಾದಿ ಕಲ್ಪನೆಗಳನ್ನು ಆಧರಿಸಿ ಇದ್ದವು. ಅಂದರೆ ಯುರೋಪಿನ ಹಿಸ್ಟರಿಯ ನಿಜಗಳಿಗೆ ಈ ಕಥೆಗಳನ್ನು ಹೊಂದಿಸುವ ಕೆಲಸಕ್ಕೇ ಹಿಸ್ಟರಿ ಸಂಶೋಧನೆ ಎಂಬ ಹೆಸರನ್ನು ನೀಡಲಾಗಿತ್ತು.

ಈ ಎಲ್ಲಾ ಪ್ರಯತ್ನಗಳ ಫಲವಾಗಿ ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆಯೆ? ಎಂಬ ಪ್ರಶ್ನೆಯು ನಮಗೆ ಅರ್ಥವಾದಂತೇ ಅನಿಸುತ್ತದೆ. ಆದರೆ ಇತಿಹಾಸ ಪ್ರಜ್ಞೆ ಎಂಬ ಪದವನ್ನು ಪ್ರಯೋಗಿಸಿದಾಗ ಒಂದು ಗೊಂದಲವು ಸ್ವಾಭಾವಿಕವಾಗಿಯೇ ಹುಟ್ಟುತ್ತದೆ. ಇದು ನಮ್ಮ ಇತಿಹಾಸವನ್ನು ಉದ್ದೇಶಿಸಿದೆಯೋ ಇಲ್ಲ ಹಿಸ್ಟರಿ ಎಂಬ ಶಬ್ದದ ತರ್ಜುಮೆಯೊ? ಈ ಹೇಳಿಕೆಯನ್ನು ಇತಿಹಾಸ ಎಂಬ ಶಬ್ದವನ್ನಿಟ್ಟಾದರೂ ಬರೆಯಿರಿ, ಇಲ್ಲ ಹಿಸ್ಟರಿ ಎಂಬ ಶಬ್ದವನ್ನಿಟ್ಟಾದರೂ ಬರೆಯಿರಿ, ಅದು ಹಿಸ್ಟರಿ ಎಂಬ ಪರಿಕಲ್ಪನೆಗೆ ಸಂಬಂಧಿಸಿದ್ದಾಗಿದೆಯೇ ವಿನಃ ಇತಿಹಾಸ-ಚರಿತ್ರೆ ಇತ್ಯಾದಿ ಪರಿಕಲ್ಪನೆಗಳಿಗಲ್ಲ. ಪಾಶ್ಚಾತ್ಯರು ತಮ್ಮ ಹಿಸ್ಟರಿಯನ್ನು ಇಲ್ಲಿ ಹುಡುಕಲು ಸೋತು ಉದ್ಗರಿಸಿದ ವಾಕ್ಯವಿದು. ಭಾರತೀಯರು ಅದನ್ನು ತಮ್ಮ ಭಾಷೆಗೆ ತರ್ಜುಮೆ ಮಾಡಿದ್ದಾರೆ ಅಷ್ಟೆ. ಅವರು ತಮ್ಮ ಇತಿಹಾಸ ಸಂಪ್ರದಾಯದ ಕುರಿತು ರೂಪಿಸಿದ ಪ್ರಶ್ನೆ ಇದಲ್ಲ. ಇಂದು ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆ ಎಂದು ವಾದಿಸುವವರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ವಾದಗಳನ್ನು ಮಂಡಿಸುತ್ತಿಲ್ಲ. ಹಾಗಾಗಿ ಗೊಂದಲವನ್ನು ಹೆಚ್ಚಿಸುತ್ತಿದ್ದಾರೆ.

ಈ ಗೊಂದಲದ ಪರಿಣಾಮವೇನಾಗಿದೆ? ಮಹಾಭಾರತ, ರಾಮಾಯಣಗಳೂ ಹಿಸ್ಟರಿ ಎಂದಾದಮೇಲೆ ಅವುಗಳ ದೇಶ ಕಾಲಗಳ ನೈಜತೆಗೆ ಒಂದಿಲ್ಲೊಂದು ದಿನ ಆಧಾರ ಸಿಕ್ಕೇ ಸಿಗಬೇಕು ಎಂಬ ಧೃಡ ವಿಶ್ವಾಸ ಭಾರತೀಯರಿಗಿದೆ. ಅಂದರೆ ನಮಗೂ ಇತಿಹಾಸ ಪ್ರಜ್ಞೆ ಇದೆ ಎಂಬುದಾಗಿ ವಾದಿಸುವವರಿಗೆ ಇರುವ ಒಂದೇ ಆಯ್ಕೆಯೆಂದರೆ ನಮ್ಮ ಇತಿಹಾಸ ಪುರಾಣಗಳನ್ನು ಹಿಸ್ಟರಿಯ ಪ್ರಮಾಣಗಳಿಗೆ ಒಡ್ಡಿ ಪರೀಕ್ಷಿಸುವುದು. ಈ ಕೆಲಸವನ್ನು ಎಡ-ಬಲ ಪಂಥೀಯರೆಲ್ಲರೂ ಶ್ರದ್ಧೆಯಿಂದ ಮಾಡಿದ್ದಾರೆ, ಮಾಡುತ್ತಿದ್ದಾರೆ. ಮಹಾಭಾರತ ಹಾಗೂ ರಾಮಾಯಣಗಳ ಕಾಲನಿರ್ಣಯದ ಕುರಿತು, ಪ್ರಾಕ್ತನ ಆಧಾರಗಳ ಕುರಿತು ಗಂಭೀರವಾದ ಅನ್ವೇಷಣೆಗಳು ನಡೆದಿವೆ. ಮಹಾಭಾರತ ಯುದ್ಧ, ಕಲಿಯುಗ ಪ್ರಾರಂಭ ಇತ್ಯಾದಿಗಳ ಕಾಲವನ್ನು ಲೆಕ್ಕಹಾಕಿ ತೋರಿಸಿ ಈ ಸವಾಲನ್ನು ಗೆದ್ದೇಬಿಟ್ಟಿದ್ದೇವೆ ಎಂದು ವಿಜಯೋತ್ಸಾಹ ಆಚರಿಸಿದವರೂ ಇದ್ದಾರೆ. ಇದರ ಫಲಿತಾಂಶವಾಗಿ ನಮ್ಮ ಇತಿಹಾಸ ಪುರಾಣಗಳ ಬಹುಭಾಗಗಳು ಯಾವುದೇ ಮಾನದಂಡದಿಂದಲೂ ಹಿಸ್ಟರಿಯ ಮಾನ್ಯತೆಯನ್ನು ಗಳಿಸಲು ಸೋತವು. ಯಾವುದೋ ಒಂದೆರಡು ಘಟನೆಗಳ ಕಾಲವನ್ನು ಹಾಗೂ ನೈಜತೆಯನ್ನು ಲೆಕ್ಕಹಾಕಿ ತೋರಿಸಿದರೆ ಅವು ಹಿಸ್ಟರಿಗಳಾಗಲು ಸಾಧ್ಯವಿಲ್ಲ. ಹಿಸ್ಟರಿಯೆಂದರೆ ನೈಜ ಘಟನೆಗಳನ್ನೇ ಆಯ್ದು ಅವುಗಳನ್ನು ಕಾಲ ದೇಶಗಳ ಅನುಕ್ರಮಣಿಕೆಯೊಳಗೇ ವಿಧಾನಶಾಸ್ತ್ರೀಯವಾಗಿ ಕಟ್ಟಿದ ಕಥೆಯಾಗಿದೆ. ಮಹಾಭಾರತ ರಾಮಾಯಣಗಳ ಪಾತ್ರಗಳು ಹಾಗೂ ಘಟನೆಗಳನ್ನು ಈ ಚೌಕಟ್ಟಿಗೆ ಸುಸಂಗತವಾಗಿ ಒಗ್ಗಿಸುವುದು ಅಸಾಧ್ಯ. ಹಾಗಾಗಿ ಇಂಥ ಪ್ರಯತ್ನಗಳ ಫಲವಾಗಿ ‘ಭಾರತೀಯರಿಗೆ ಕ್ರೊನಾಲಜಿಯ ಬಗ್ಗೆ, ನೈಜತೆಯ ಬಗ್ಗೆ ಆದರವಿಲ್ಲ’ ಎಂಬ ಹೊಸ ಬಿರುದನ್ನು ನಾವು ಸಂಪಾದಿಸಿದೆವು. ಒಟ್ಟಾರೆಯಾಗಿ ಹಿಸ್ಟರಿಯ ಹೀನಾಯ ರೂಪಗಳಾಗಿ ಮಹಾಭಾರತ ಹಾಗೂ ರಾಮಾಯಣಗಳು ಪರಿವರ್ತಿತವಾದವು.

ಅಂದರೆ ನಮಗೂ ಇತಿಹಾಸ ಪ್ರಜ್ಞೆ ಇದೆ ಎಂಬುದಾಗಿ ವಾದಿಸುವುದರ ಪರಿಣಾಮವು ಇದುವರೆಗೂ ಒಂದೇ ಫಲವನ್ನು ನೀಡಿದೆ: ಅದೆಂದರೆ ನಮ್ಮ ಇತಿಹಾಸ ಪುರಾಣಗಳಲ್ಲಿ ಕೆಲವು ಭಾಗಗಳು ಅಪೂರ್ಣ ಹಾಗೂ ಅವಿಕಸಿತ ಹಿಸ್ಟರಿಗಳಾಗಿದ್ದರೆ ಬಹುಭಾಗಗಳು ಕಟ್ಟುಕಥೆಯಾಗಿ ಮಾರ್ಪಡುವುದನ್ನು ತಪ್ಪಿಸಲು ನಮ್ಮಿಂದ ಸಾಧ್ಯವಿಲ್ಲ. ಅಂದರೆ ನಮ್ಮ ಇತಿಹಾಸವು ಕಟ್ಟುಕಥೆಯಾಗುವುದರಿಂದ ಅದು ಗತಕಾಲದ ಅಧಿಕೃತ ವಕ್ತಾರನಾಗಲು ಸಾಧ್ಯವಿಲ್ಲ. ಹಾಗಾಗಿಯೇ ನಮಗೂ ಇತಿಹಾಸ ಪ್ರಜ್ಞೆ ಇದೆ ಎಂದು ವಾದಿಸುವ ವಿದ್ವಾಂಸರಲ್ಲಿ ಯಾರೂ ಕೂಡ ನಮ್ಮ ಇತಿಹಾಸ-ಪುರಾಣಗಳನ್ನು ಅಧಿಕೃತ ಹಿಸ್ಟರಿ ಎಂಬಂತೇ ಶಾಲಾ ಕಾಲೇಜುಗಳಲ್ಲಿ ಕಲಿಸಬೇಕೆಂಬುದಾಗಿ ಬೇಡಿಕೆಯನ್ನಿಟ್ಟಿಲ್ಲ. ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಹಿಸ್ಟರಿಯ ಸ್ಥಾನಮಾನವನ್ನು ಅವು ಹೊಂದುವುದು ಸಾಧ್ಯವಿಲ್ಲ ಎಂಬುದಾಗಿ ಈ ಕುರಿತು ಅಧ್ಯಯನ ನಡೆಸಿದ ಇತಿಹಾಸ ವಿದ್ವಾಂಸರೂ ನಿರ್ಣಯಿಸಿದಂತಿದೆ.

ಇದು ನಮ್ಮ ಸಂಪ್ರದಾಯಗಳ ಶ್ರೇಷ್ಠತೆಯನ್ನು ಸಾರಬೇಕೆನ್ನುವವರ ಉತ್ಸಾಹಕ್ಕೆ ತಣ್ಣೀರೆರಚುವುದು ಸ್ವಾಭಾವಿಕ. ಇದು ರಾಮಾಯಣ ಮಹಾಭಾರತಗಳನ್ನು ಪೂಜಿಸಿಕೊಂಡು ಬಂದವರಿಗೆ ಕೀಳರಿಮೆಯನ್ನು ಹುಟ್ಟುಹಾಕುತ್ತದೆ. ಇಂಥವರು ಆಯ್ದುಕೊಳ್ಳುತ್ತಿರುವ ಮಾರ್ಗವೆಂದರೆ ನಮ್ಮ ಇತಿಹಾಸ ಪುರಾಣಗಳು ಪರಿಪೂರ್ಣ ಹಿಸ್ಟರಿಗಳು ಎಂಬುದಾಗಿ ವಾದಿಸಿ ಅದನ್ನು ಹಿಸ್ಟರಿಯ ಮಾನದಂಡಗಳಿಂದಲೇ ಸಮರ್ಥಿಸುವುದು. ರಾಮಜನ್ಮಭೂಮಿ, ರಾಮಸೇತು ಇತ್ಯಾದಿ ವಿವಾದಗಳು ಈ ಧೋರಣೆಯಿಂದ ಹುಟ್ಟಿವೆ. ರಾಮಾಯಣ ಮಹಾಭಾರತದ ಒಂದೊಂದು ಕಥೆಯನ್ನು ಹಿಸ್ಟರಿಯ ಮಾನದಂಡಗಳಿಗೆ ಹಿಡಿದಷ್ಟೂ ಅವುಗಳ ಕೊರತೆ ನಿದರ್ಶನವಾಗುತ್ತ ಹೋಗುತ್ತದೆ. ಇಂಥ ಸರ್ಕಸ್ಸುಗಳ ಪರಿಣಾಮವಾಗಿ ಇತಿಹಾಸ-ಪುರಾಣಗಳ ಘನತೆ ಮೂರಾಬಟ್ಟೆಯಾಗುತ್ತಿದೆ ಹಾಗೂ ನಮ್ಮ ಪರಂಪರೆಯ ಜೊತೆಗೆ ನಮ್ಮ ಸಂಬಂಧವೇ ಕಡಿದುಹೋಗುತ್ತಿದೆ. ರಾಮಾಯಣ ಮಹಾಭಾರತಗಳನ್ನು ನಾವೇಕೆ ಪೂಜ್ಯವಾಗಿ ನೋಡುತ್ತೇವೆ? ಭಾರತೀಯರ ಜೀವನದಲ್ಲಿ ಅವು ಯಾವ ಸ್ಥಾನವನ್ನು ಪಡೆದಿವೆ, ನಾವು ಅವುಗಳಿಂದ ಏನನ್ನು ಕಲಿಯುತ್ತೇವೆ? ಇತ್ಯಾದಿ ಅರ್ಥಪೂರ್ಣ ಪ್ರಶ್ನೆಗಳೇ ನಮಗಿಂದು ಬೇಡವಾಗಿದೆ. ಅವುಗಳ ಘಟನೆಗಳು ನಿಜ ಎಂಬುದನ್ನು ಸಾಧಿಸಿ ತೋರಿಸುವುದೇ ನಮ್ಮ ಗುರಿಯಾಗಿದೆ.

ಈ ಕಥೆಗಳು ನಿಜ ಎಂಬುದನ್ನು ತೋರಿಸಿದರೆ ನಮಗೆ ಸಿಗುವುದೇನು? ಅವು ಹಿಸ್ಟರಿಗಳು ಎಂಬುದನ್ನು ಸಮರ್ಥಿಸಿದಂತಾಯಿತು ಅಷ್ಟೆ. ಅಂದರೆ ನಾವು ಪಾಶ್ಚಾತ್ಯರಿಗೆ ಸರಿಸಮ ಎಂದಂತಾಯಿತು. ಅದರಾಚೆಗೆ ಅದರಿಂದ ಮತ್ತೇನು ಪ್ರಯೋಜನ ಎಂಬುದು ನಮಗೆ ಗೊತ್ತಿಲ್ಲ. ಭಗವದ್ಗೀತೆಯನ್ನು ಹಿಸ್ಟರಿಯನ್ನಾಗಿ ಪರಿವರ್ತಿಸಿ ಅದರ ಕಾಲವನ್ನು ನಿಖರವಾಗಿ ನಿರ್ಣಯಿಸುವುದು ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಎಳ್ಳಷ್ಟಾದರೂ ಸಹಕರಿಸುತ್ತದೆಯೆ? ಹೋಗಲಿ, ಮಹಾಭಾರತ ಯುದ್ಧದ ಕಾಲ ಮತ್ತು ಸ್ಥಳಗಳನ್ನು ತಿಳಿದುಕೊಂಡರೆ ‘ಧರ್ಮಕ್ಷೇತ್ರ ಕುರುಕ್ಷೇತ್ರ’ ಎಂಬ ಎಂಬ ಪರಿಕಲ್ಪನೆಯು ಅರ್ಥವಾಗುತ್ತದೆಯೆ? ಅದಕ್ಕೆ ಬದಲಾಗಿ ಇವು ಹಿಸ್ಟರಿ ಎಂದು ತೋರಿಸುವ ಅಬ್ಬರದಲ್ಲಿ ಅವುಗಳಿಗೆ ಅವುಗಳದ್ದೇ ಆದ ಅರ್ಥವಿದೆ ಎಂಬ ಸಂಗತಿಯೇ ಮರೆತುಹೋಗುತ್ತಿದೆ. ಇದಕ್ಕೆ ಬದಲಾಗಿ ನಮ್ಮ ಸಂಸ್ಕೃತಿಯಲ್ಲಿ ಅವುಗಳ ಮಹತ್ವವೇನು ಎಂಬುದನ್ನು ಶೋಧಿಸುವುದು ಫಲಪ್ರದವಾದ ಕೆಲಸವಾಗಬಹುದು. ಅಂಥ ಕೆಲಸದಿಂದ ಅವುಗಳ ಮಹತ್ವವೂ ಹೆಚ್ಚುತ್ತದೆ ಹಾಗೂ ನಮ್ಮ ಪರಂಪರೆಯ ಜೊತೆಗೆ ಅರ್ಥಪೂರ್ಣ ಸಂಬಂಧವನ್ನು ಸ್ಥಾಪಿಸಿಕೊಳ್ಳಲೂ ಸಾಧ್ಯವಾಗುತ್ತದೆ ಹಾಗೂ ನಮ್ಮ ಸಂಸ್ಕೃತಿಯ ಬಹುಮುಖ್ಯ ಅಂಗವಾದ ಈ ಇತಿಹಾಸ-ಪುರಾಣ ಸಂಪ್ರದಾಯವನ್ನು ಹಿಸ್ಟರಿಯ ಗಿಲೆಟಿನ್ ಯಂತ್ರದಿಂದ ತಪ್ಪಿಸಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

 

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: