ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 41 :ರಾಮಾಯಣ ಮಹಾಭಾರತಗಳಲ್ಲಿ ಸತ್ಯಘಟನೆಗಳನ್ನು ಹುಡುಕುವ ಗೀಳು
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಭಾರತೀಯ ಇತಿಹಾಸ ಸಂಪ್ರದಾಯಕ್ಕೆ ಸೇರಿದ ರಾಮಾಯಣ ಹಾಗೂ ಮಹಾಭಾರತಗಳಲ್ಲಿ ಬರುವ ಘಟನೆಗಳ ಸತ್ಯಾಸತ್ಯತೆಯ ಕುರಿತು ವಿವಾದಗಳು ಏಳುವುದು ಇಂದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಇಂಥ ವಿವಾದಗಳಲ್ಲಿ ಒಂದು ಪಕ್ಷದವರು ಈ ಕೃತಿಗಳು ಸತ್ಯಘಟನೆಗಳಲ್ಲ ಎನ್ನಲಿಕ್ಕೆ ಆಧಾರವನ್ನು ತೋರಿಸುತ್ತಾರೆ, ಮತ್ತೊಂದು ಪಕ್ಷದವರು ಅವು ಸತ್ಯ ಘಟನೆಗಳೇ ಎಂಬುದಕ್ಕೆ ಆಧಾರ ತೋರಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಇಂಥ ವಿವಾದಗಳನ್ನು ಆಶ್ರಯಿಸಿದ ಹೋರಾಟಗಳೂ, ಸಂಘರ್ಷಗಳೂ, ಕೋರ್ಟ್ ತೀರ್ಮಾನಗಳೂ, ರಾಜಕೀಯ ಪ್ರಣಾಲಿಕೆಗಳೂ ಜನರಿಗೆ ಗೊತ್ತಿರುವಂಥವೇ ಆಗಿವೆ. ಈ ವಿವಾದಗಳಲ್ಲಿ ಭಾಗವಹಿಸುವವರು ಮೇಲ್ನೋಟಕ್ಕೆ ಎರಡು ವಿರುದ್ಧ ಪಕ್ಷಗಳಂತೆ ಕಾಣಿಸುತ್ತಾರೆ. ಆದರೆ ವಾಸ್ತವದಲ್ಲಿ ಅವರಿಬ್ಬರೂ ಒಂದೇ ರೀತಿ ವಿಚಾರ ಮಾಡುತ್ತಿದ್ದಾರೆ. ಈ ಎರಡೂ ಪಕ್ಷದವರೂ ರಾಮಾಯಣ ಮಹಾಭಾರತಗಳನ್ನು ಹಿಸ್ಟರಿ ಎಂದು ಭಾವಿಸಿದ್ದಾರೆ ಹಾಗಾಗಿ ಅವುಗಳಲ್ಲಿ ಬರುವ ಘಟನೆಗಳನ್ನು ಸತ್ಯ ಅಥವಾ ಸುಳ್ಳೆಂದು ತೀರ್ಮಾನಿಸುವುದು ನಿರ್ಣಾಯಕ ಎಂಬುದಾಗಿ ಭಾವಿಸಿದ್ದಾರೆ.

ರಾಮಾಯಣ ಹಾಗೂ ಮಹಾಭಾರತಗಳಂತೆಯೇ ಇನ್ನೂ ಅನೇಕಾನೇಕ ಪ್ರಾಚೀನ ಕಾವ್ಯಗಳೂ, ಪುರಾಣಗಳೂ ಹಾಗೂ ಕಥೆಗಳೂ ಭಾರತದಲ್ಲಿ ಇವೆ. ಅವುಗಳಲ್ಲಿ ಉಳಿದ ಯಾವುದರ ಸತ್ಯಾಸತ್ಯತೆಯ ಕುರಿತೂ ವಿವಾದಗಳು ಏಳುವುದಿಲ್ಲ. ಉದಾಹರಣೆಗೆ ಅಷ್ಟಾದಶ ಪುರಾಣಗಳು, ಕಥಾಸರಿತ್ಸಾಗರ, ಪಂಚತಂತ್ರದ ಕಥೆಗಳು ಇತ್ಯಾದಿಗಳನ್ನು ಐತಿಹಾಸಿಕ ಸತ್ಯಾಸತ್ಯತೆಯ ದೃಷ್ಟಿಯಿಂದ ಯಾರೂ ನೋಡಬಯಸಿಲ್ಲ. ನೀವು ಹೇಳಬಹುದು, ಪಂಚತಂತ್ರದ ಕಥೆಗಳಲ್ಲಿ ಪ್ರಾಣಿಗಳು ಹಾಗೂ ಪಕ್ಷಿಗಳು ಮನುಷ್ಯರಂತೇ ಮಾತನಾಡುವ, ವ್ಯವಹರಿಸುವ ಸನ್ನಿವೇಶಗಳು ಇರುವುದರಿಂದ ಅವು ಕಟ್ಟು ಕಥೆಗಳು ಎಂಬುದು ಸ್ಪಷ್ಟ. ಆದರೆ ಮಹಾಭಾರತ ರಾಮಾಯಣಗಳಲ್ಲೂ ಇಂಥ ಪ್ರಾಣಿ ಪಕಿಗಳ ವ್ಯವಹಾರಗಳು ಇವೆಯಲ್ಲ? ನಾಯಿಗಳು ಶಾಪ ಕೊಡುತ್ತವೆ, ಕಪಿಗಳು ಸೈನಿಕರಾಗಿ ಹೋರಾಡುತ್ತವೆ, ಸೇತುವೆ ಕಟ್ಟುತ್ತವೆ. ಹಾವುಗಳು ಆಧ್ಯಾತ್ಮಿಕ ಪ್ರಶ್ನೆ ಕೇಳುತ್ತವೆ. ಪ್ರಾಣಿಪಕ್ಷಿಗಳೆಲ್ಲ ಮನುಷ್ಯರಂತೇ ವ್ಯವಹರಿಸುತ್ತವೆ. ಇನ್ನು ಇವುಗಳಲ್ಲಿ ಬರುವ ಅತಿಮಾನುಷ ಘಟನೆಗಳಂತೂ ಲೆಕ್ಕಕ್ಕಿಲ್ಲ. ಇಷ್ಟಾಗಿಯೂ ಈ ಎರಡು ಕೃತಿಗಳ ಸಂದರ್ಭದಲ್ಲಿ ಮಾತ್ರವೇ ಐತಿಹಾಸಿಕ ಆಧಾರಗಳನ್ನು ಶೋಧಿಸುವುದು ಇಂದಿನ ಭಾರತೀಯರಿಗೆ ಬಹುಮುಖ್ಯ ಎನಿಸುತ್ತದೆ. ಏಕೆ?

ಈ ಎರಡು ಕೃತಿಗಳನ್ನೇ ನಮ್ಮ ಪ್ರಾಚೀನರು ಇತಿಹಾಸ ಎಂಬುದಾಗಿ ಕರೆದಿದ್ದಾರೆ ಹಾಗೂ ನಾವು ಹಿಸ್ಟರಿಯನ್ನು ಇತಿಹಾಸ ಎಂಬುದಾಗಿ ತರ್ಜುಮೆ ಮಾಡಿಕೊಂಡಿದ್ದೇವೆ. ಈ ಶಬ್ದವು ಇಂದು ನಮಗೆ ಸಮಸ್ಯೆಯನ್ನು ಸೃಷ್ಟಿಸುತ್ತಿರುವುದಕ್ಕೆ ಇದೇ ಕಾರಣ. ಇತಿಹಾಸ ಎಂದಾಕ್ಷಣ ಅವುಗಳು ಸತ್ಯಘಟನೆಗಳು ಎಂದು ಸಾಧಿಸುವ ಆಗ್ರಹಕ್ಕೆ ಭಾರತೀಯರು ಸಿಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಹಾಭಾರತ ರಾಮಾಯಣಗಳನ್ನು ಹಿಸ್ಟರಿಗಳನ್ನಾಗಿ ಮಾಡುವ ಪ್ರಯತ್ನದಲ್ಲಿ ಅವು ಹಿಸ್ಟರಿ ಬರವಣಿಗೆಯ ಅಪೂರ್ಣ ಅವತಾರಗಳು ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂಬುದನ್ನು ಹಿಂದಿನ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಹಿಸ್ಟರಿ ಎಂಬುದು ಸತ್ಯ ಘಟನೆಗಳನ್ನಾಧರಿಸಿದ ಕಥನವಾಗಿದೆ. ಹಾಗೆ ಭಾವಿಸಿಕೊಂಡಾಗ ಈ ಕೃತಿಗಳು ಕೂಡ ಮೂಲತಃ ಸತ್ಯಕಥೆಗಳಾಗಿದ್ದು, ಕಾಲಾಂತರದಲ್ಲಿ ಅವುಗಳ ಜೊತೆಗೆ ಕಟ್ಟುಕಥೆಗಳು ಬೆರೆತುಕೊಂಡಿವೆ, ಸತ್ಯದ ಜೊತೆಗೆ ಮಿಥ್ಯ ಬೆರೆತುಕೊಂಡಿದೆ ಎಂಬ ಧೋರಣೆ ಸ್ವಾಭಾವಿಕವಾಗಿಯೇ ಹುಟ್ಟುತ್ತದೆ. ರಾಮಾಯಣ ಮಹಾಭಾರತಗಳಲ್ಲಿ ಸತ್ಯಕಥೆಯನ್ನು ಸುಳ್ಳು ಕಥೆಗಳಿಂದ ಬೇರ್ಪಡಿಸುವ ಪ್ರಶ್ನೆ ಈ ಹಿನ್ನೆಲೆಯಿಂದ ಹುಟ್ಟಿಕೊಳ್ಳುತ್ತವೆ. ಈ ಕಾಯಕಕ್ಕೆ ತೊಡಗಿದ ಯಾರೇ ಆದರೂ ಅವುಗಳನ್ನು ಹಿಸ್ಟರಿಗಳು ಎಂಬುದಾಗಿ ನಂಬಿದ್ದಾರೆ.

ಮಹಾಭಾರತ ಹಾಗೂ ರಾಮಾಯಣಗಳ ಸತ್ಯವನ್ನು ಶೋಧಿಸುವುದೆಂದರೆ ನಾವು ಏನು ಭಾವಿಸಿಕೊಂಡಿದ್ದೇವೆ? ಅದು ಹಿಸ್ಟರಿಯ ಸತ್ಯ. ಅಂದರೆ ಈ ಕೃತಿಗಳಲ್ಲಿ ಉಲ್ಲೇಖಿತವಾದ ಘಟನೆಗಳು, ಸ್ಥಳಗಳು ಹಾಗೂ ಪಾತ್ರಗಳು ನಿಜವಾಗಿಯೂ ಭೂಮಿಯ ಮೇಲೆ ಇದ್ದವು ಅಥವಾ ನಡೆದವು ಅಂತ ಅರ್ಥ. ಅಂದರೆ ರಾಮ, ರಾವಣ, ಕೃಷ್ಟ್ಣ, ಅರ್ಜುನ, ದ್ರೌಪದಿ ಇವರೆಲ್ಲ ನಿಜವಾಗಿಯೂ ಒಂದು ಕಾಲದಲ್ಲಿ ಭೂಮಿಯ ಮೇಲೆ ಇದ್ದರು. ಹಸ್ತಿನಾವತಿ, ಲಂಕೆ, ಇತ್ಯಾದಿಗಳೂ ಇದ್ದವು. ಕುರುಕ್ಷೇತ್ರ ಯುದ್ಧ, ಸೇತುಬಂಧನ, ಸರ್ಪಯಾಗ, ಇತ್ಯಾದಿ ಘಟನೆಗಳೆಲ್ಲವೂ ನಿಜವಾಗಿ ಒಂದು ಕಾಲದಲ್ಲಿ ನಡೆದವು, ಇತ್ಯಾದಿಗಳು ಈ ಹಿಸ್ಟರಿಯ ಸತ್ಯಗಳು. ಅಂದರೆ ಒಂದು ಕೃತಿಯನ್ನು ತೆಗೆದುಕೊಂಡು ಅದರ ಪಾತ್ರ, ಘಟನೆಗಳೆಲ್ಲವೂ ನಿಜವಾಗಿ ಇದ್ದವು ಎಂದು ತೋರಿಸುವುದೇ ಅವು ಸತ್ಯ ಎಂಬುದನ್ನು ನಿದರ್ಶಿಸಲಿಕ್ಕೆ ಮುಖ್ಯವಾಗುತ್ತವೆ. ಈ ಸತ್ಯವನ್ನು ತೋರಿಸುವುದಕ್ಕೆ ಅವುಗಳು ಯಾವ ಕಾಲದಲ್ಲಿ ನಡೆದವು ಎಂಬುದನ್ನು ನಿರ್ದಿಷ್ಟಪಡಿಸುವುದೂ ಮುಖ್ಯ.
ಈ ಹಂತದಲ್ಲಿ ಏಳುವ ಎರಡು ಪ್ರಶ್ನೆಗಳಿಗೆ ನಮಗಿನ್ನೂ ಉತ್ತರ ಸಿಕ್ಕಿಲ್ಲ. ಮೊದಲನೆಯದೆಂದರೆ ಈ ಕಥೆಗಳನ್ನು ನಮಗೆ ದಾಟಿಸಿದ ನಮ್ಮ ಪೂರ್ವಜರೇಕೆ ಈ ಘಟನೆಗಳ ಸತ್ಯಾಸತ್ಯತೆಯ ಕುರಿತು ದಿವ್ಯ ಅಜ್ಞಾನವನ್ನು ಬಿಟ್ಟು ಹೋಗಿದ್ದಾರೆ? ಎರಡನೆಯದೆಂದರೆ ಅವು ನಿಜವಾಗಿಯೂ ನಡೆದಿವೆ ಎಂಬುದು ನಮಗೇಕೆ ಮುಖ್ಯವಾಗಬೇಕು? ಮೊದಲನೆಯ ಪ್ರಶ್ನೆಗೆ ಉತ್ತರಗಳನ್ನು ನೀಡಲು ವಿದ್ವಾಂಸರು ಪ್ರಯತ್ನಿಸಿದ್ದರೂ ಯಾವುದೂ ಸಮರ್ಪಕವಾಗಿಲ್ಲ. ಬ್ರಾಹ್ಮಣ ಪುರೋಹಿತಶಾಹಿಗಳು ತಮ್ಮ ಸ್ವಾರ್ಥಕ್ಕಾಗಿ ಕಟ್ಟು ಕಥೆಗಳನ್ನು ಸೇರಿಸಿದ್ದಾರೆ, ಭಾರತೀಯರು ಬೌದ್ಧಿಕವಾಗಿ ಬಾಲಿಶ ಅವಸ್ಥೆಯಲ್ಲಿರುವುದರಿಂದ ಅವರಿಗೆ ಹಿಸ್ಟರಿ-ಕಟ್ಟುಕಥೆಗಳ ನಡುವಿನ ವ್ಯತ್ಯಾಸ ತಿಳಿದಿಲ್ಲ, ಇತ್ಯಾದಿ ವಿವರಣೆಗಳಿವೆ. ಇವುಗಳನ್ನು ಒಪ್ಪಿಕೊಂಡರೆ ನಮ್ಮ ಪೂರ್ವಜರಿಗೆ ದುರುದ್ದೇಶವನ್ನು ಅಥವಾ ಬುದ್ಧಿಮಾಂದ್ಯತೆಯನ್ನು ಆರೋಪಿಸಬೇಕಾಗುತ್ತದೆ. ಹಾಗಾಗಿ ಇದು ಅಸಾಧ್ಯ. ಎರಡನೆಯ ಪ್ರಶ್ನೆಯನ್ನು ನಾವಿನ್ನೂ ಕೇಳಿಕೊಂಡೇ ಇಲ್ಲ. ಅದೆಂದರೆ, ಈ ರಾಮ ಅಥವಾ ಧರ್ಮರಾಯರು ನಿಜವಾಗಿಯೂ ಇದ್ದರೇ ಎಂಬ ಮಾಹಿತಿಯು ರಾಮಾಯಣ ಅಥವಾ ಮಹಾಭಾರತವನ್ನು ಅರ್ಥಮಾಡಿಕೊಳ್ಳಲು ಅನಿವಾರ್ಯವೆ? ಅನಿವಾರ್ಯ ಅಂತಾದರೆ ಬ್ರಿಟಿಷ್ ಪೂರ್ವದ ಸಹಸ್ರಾರು ವರ್ಷಗಳಲ್ಲಿ ಭಾರತೀಯರು ಈ ಪ್ರಶ್ನೆಗಳನ್ನು ಕೇಳಿಯೇ ಇಲ್ಲ, ಹಾಗಾಗಿ ಅವರು ಈ ಕೃತಿಗಳನ್ನು ಅರ್ಥಮಾಡಿಕೊಂಡೇ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಇಲ್ಲ, ಅವರು ಅರ್ಥ ಮಾಡಿಕೊಂಡಿದ್ದರು ಅಂತಾದರೆ ಈ ಕೃತಿಗಳಲ್ಲಿ ಬರುವ ಪಾತ್ರಗಳು ಹಾಗೂ ಘಟನೆಗಳು ನಿಜವೇ ಸುಳ್ಳೇ ಎಂಬ ಜಿಜ್ಞಾಸೆಯು ನಮ್ಮವರಿಗಿಂದು ಮಹತ್ವದ್ದೆಂದು ಏಕೆ ಅನ್ನಿಸುತ್ತದೆ?

ಏಕೆ ಈ ಮೇಲಿನ ಫಜೀತಿಗಳು ಏಳುತ್ತವೆಯೆಂದರೆ ಇವು ರಾಮಾಯಣ ಮಹಾಭಾರತಗಳನ್ನು ರಚಿಸಿದ ಸಂಸ್ಕೃತಿಯ ಪ್ರಶ್ನೆಗಳಲ್ಲ. ನಾವು ಹಿಸ್ಟರಿಯ ಪ್ರಶ್ನೆಗಳನ್ನು ತಂದು ಈ ಕೃತಿಗಳಿಗೆ ಆರೋಪಿಸುತ್ತಿದ್ದೇವೆ. ಹಿಸ್ಟರಿಯಲ್ಲಿ ನಿಜ ಸುಳ್ಳಿನ ಪ್ರಶ್ನೆಗಳು ಏಕೆ ಮಹತ್ವ ಪಡೆಯುತ್ತವೆಯೆಂಬುದಕ್ಕೆ ಪಾಶ್ಚಾತ್ಯರಿಗೆ ಅವರದೇ ಆದ ಕಾರಣಗಳಿವೆ. ಪ್ರಾಚೀನ ಗ್ರೀಕರು ಹಿಸ್ಟರಿಗೂ ಮಿಥ್ಗಳಿಗೂ ಒಂದು ವ್ಯತ್ಯಾಸವನ್ನು ಗುರುತಿಸಿದ್ದರು ಹಾಗೂ ಮಿಥ್ಗಳು ಸುಳ್ಳುಕಥೆಗಳು, ಹಿಸ್ಟರಿ ಸತ್ಯಕಥೆ ಎಂಬುದಾಗಿ ಬೇರ್ಪಡಿಸಿದ್ದರು. ಹಿಸ್ಟೋರಿಯಾ ಎಂದರೆ ಸತ್ಯದ ಕುರಿತ ವಿಚಾರಣೆ. ಅದರ ಜೊತೆಗೇ ಪ್ಲೇಟೋನಂಥ ದಾರ್ಶನಿಕರು ಸುಳ್ಳುಗಳು ಜನರನ್ನು ದಾರಿ ತಪ್ಪಿಸುತ್ತವೆ, ಗ್ರೀಕರ ಜೀವನವು ಸತ್ಯವನ್ನಾಧರಿಸಿ ಇರಬೇಕು ಎಂಬುದಾಗಿ ಪ್ರತಿಪಾದಿಸಿದ್ದರು. ಹಾಗಾಗಿ ಇಂಥ ಸುಳ್ಳು ಕಥೆಗಳನ್ನು ಹೇಳುವವರನ್ನು ಗಡೀಪಾರು ಮಾಡಬೇಕೆಂದೂ ಅವನು ವಾದಿಸಿದನು. ಅವರನ್ನನುಸರಿಸಿ ಹಿಸ್ಟರಿ ಎಂಬುದು ಮಾತ್ರವೇ ಗತಕಾಲದ ಕುರಿತು ನಂಬಿಕೊಳ್ಳಬಹುದಾದ ಕಥನವಾಗಿದೆ ಎಂಬುದಾಗಿ ಪ್ರಾಚೀನ ರೋಮನ್ನರೂ ಕೂಡ ತಮ್ಮ ಗತಕಾಲದ ಕುರಿತು ಅಧಿಕೃತ ಮಾಹಿತಿಗಾಗಿ ಹಿಸ್ಟರಿಗಳನ್ನು ಬರೆದರು.

ಪ್ರಾಚೀನ ರೋಮನ್ನರ ಪಟ್ಟಣಗಳಲ್ಲಿಯೇ ಸೆಮೆಟಿಕ್ ರಿಲಿಜನ್ನುಗಳ ಅನುಯಾಯಿಗಳಾದ ಯಹೂದಿಗಳು ಹಾಗೂ ಕ್ರೈಸ್ತರು ಕೂಡ ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡರು. ಆ ಸಂದರ್ಭದಲ್ಲಿ ರೋಮನ್ನರಿಗೂ, ಸೆಮೆಟಿಕ್ ರಿಲಿಜನ್ನುಗಳಿಗೂ ಒಂದು ಸಂಘರ್ಷ ಪ್ರಾರಂಭವಾಯಿತು. ಏತಕ್ಕೆಂದರೆ, ರೋಮನ್ನರ ನಗರ ದೇವತೆಗಳ ಪೂಜೆ, ಉತ್ಸವಾದಿಗಳಲ್ಲಿ ಭಾಗವಹಿಸಲು ಯೆಹೂದಿಗಳು ಹಾಗೂ ಕ್ರೈಸ್ತರು ನಿರಾಕರಿಸುತ್ತಿದ್ದರು. ರೋಮನ್ನರ ಪ್ರಕಾರ ನಗರಕ್ಕೆ ಒಳ್ಳೆಯದಾಗಬೇಕಾದರೆ ನಗರವಾಸಿಗಳೆಲ್ಲರೂ ಈ ದೇವತೆಗಳ ಪೂಜೆಯಲ್ಲಿ ಪಾಲ್ಗೊಳ್ಳಬೇಕು, ಅದು ನಗರವಾಸಿಗಳ ಕರ್ತವ್ಯ. ಕ್ರೈಸ್ತ, ಯೆಹೂದಿಗಳ ಪ್ರಕಾರ ತಮ್ಮ ಗಾಡ್ನನ್ನು ಬಿಟ್ಟು ಬೇರೆ ಯಾವ ದೇವತೆಯನ್ನೂ ಪೂಜಿಸುವಂತಿಲ್ಲ ಎಂಬುದಾಗಿ ತಮ್ಮ ರಿಲಿಜನ್ನು ಕಟ್ಟುಪಾಡು ಮಾಡಿದೆ. ಹಾಗಾಗಿ ರೋಮನ್ ದೇವತೆಗಳನ್ನು ಪೂಜಿಸಿದರೆ ತಮ್ಮ ಗಾಡ್ ನನ್ನು ವಿರೋಧಿಸಿದಂತೇ ಆಗುತ್ತದೆ ಹಾಗೂ ಅದು ಪಾಪವಾಗುತ್ತದೆ. ರೋಮನ್ನರಿಗೆ ಈ ಪಟ್ಟು ಹೊಸದು, ಏಕೆಂದರೆ ಅವರು ತಮ್ಮ ನಗರಗಳಲ್ಲಿ ಅನೇಕ ದೇವತೆಗಳನ್ನು ಪೂಜಿಸುತ್ತಿದ್ದರು. ಹೊಸ ಹೊಸ ದೇವತೆಗಳೂ ಆ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದವು. ಒಂದು ದೇವತೆಯನ್ನು ಪೂಜಿಸಿದರೆ ಮತ್ತೊಂದಕ್ಕೆ ಸಿಟ್ಟು ಬರುವ ಕಥೆಯ ಮೇಲೆ ಅವರಿಗೆ ವಿಶ್ವಾಸ ಬರಲಿಲ್ಲ. ಅದಕ್ಕೂ ಮುಖ್ಯವಾಗಿ ಯೆಹೂದಿಗಳು ಹಾಗೂ ಕ್ರೈಸ್ತರ ಪರಂಪರೆ ಅಲ್ಲಿ ಯಾರಿಗೂ ಅಷ್ಟಾಗಿ ಗೊತ್ತಿರಲಿಲ್ಲ. ಹಾಗಾಗಿ ಕ್ರೈಸ್ತರು ಹಾಗೂ ಯೆಹೂದಿಗಳು ಸಲ್ಲದ ಕಾರಣಗಳನ್ನು ಹೇಳಿ ತಮ್ಮ ದೇವತೆಗಳಿಗೆ ಅಗೌರವ ತೋರಿಸುತ್ತಿದ್ದಾರೆ ಎಂಬುದಾಗಿ ಭಾವಿಸಿ ಅವರ ಜೊತೆಗೆ ಸಂಘರ್ಷಕ್ಕಿಳಿದರು.

ಈ ಮೇಲಿನ ಫಜೀತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯೆಹೂದಿಗಳು ತಮ್ಮದು ಪ್ರಾಚೀನ ಸಂಪ್ರದಾಯ ಎಂಬುದನ್ನು ಹಳೆ ಒಡಂಬಡಿಕೆಯ ಕಥೆಗಳನ್ನು ಉದಾಹರಿಸಿ ರೋಮನ್ನರಿಗೆ ಮನದಟ್ಟು ಮಾಡಲೆತ್ನಿಸಿದರು. ರೋಮನ್ನರು ಎಲ್ಲಾ ಸಂಪ್ರದಾಯಗಳನ್ನು ಗೌರವಿಸುತ್ತಿದ್ದರು. ಸಂಪ್ರದಾಯವೆಂದರೆ ಪೂರ್ವಜರಿಂದ ದತ್ತವಾದ ಆಚರಣೆಗಳು. ಪೂರ್ವಜರು ಅಷ್ಟೆಲ್ಲ ತಲೆಮಾರುಗಳ ವರೆಗೆ ಅವನ್ನು ದಾಟಿಸಿಕೊಂಡು ಬಂದಿದ್ದಾರೆಂಬುದೇ ಅವು ಆ ಸಮುದಾಯಕ್ಕೆ ಒಳ್ಳೆಯದನ್ನು ಮಾಡಿವೆ ಎಂಬುದಕ್ಕೆ ಪ್ರಮಾಣ. ಅಂದ ಮೇಲೆ ಅವು ತಮಗೆ ಒಪ್ಪಿಗೆಯಾಗಲಿ ಬಿಡಲಿ, ಅದು ಪೂರ್ವಜರಿಂದ ದತ್ತವಾಗಿ ಬಂದ ಪಕ್ಷದಲ್ಲಿ ಆಯಾ ಸಮುದಾಯಗಳು ಒಳ್ಳೆಯದು ಎಂದು ಭಾವಿಸಿದ್ದಲ್ಲಿ ಅದನ್ನು ತಾವೂ ಗೌರವಿಸಲೇ ಬೇಕು ಎಂಬುದು ರೋಮನ್ನರ ತರ್ಕ. ಈ ತರ್ಕವೇ ರೋಮನ್ನರ ಸಾಮ್ರಾಜ್ಯದಲ್ಲಿ ಸಂಪ್ರದಾಯಗಳ ಸಹಬಾಳ್ವೆಗೆ ಒಂದು ತಳಹದಿಯನ್ನು ನಿರ್ಮಿಸಿತ್ತು. ಯೆಹೂದಿಗಳು ತಮ್ಮದು ಪ್ರಾಚೀನ ಸಂಪ್ರದಾಯ ಎಂಬುದನ್ನು ನಿದರ್ಶಿಸಿದಾಗ ಅವರ ಕುರಿತಂತೇ ರೋಮನ್ನರು ತಮ್ಮ ಧೋರಣೆಯನ್ನು ಸಡಿಲಿಸಿದರು.

ಆದರೆ ಇದರಿಂದ ಕ್ರೈಸ್ತರ ಸಮಸ್ಯೆ ಬಗೆಹರಿಯಲಿಲ್ಲ. ಅವರೂ ತಮ್ಮದು ಯೆಹೂದಿಗಳಂತೆಯೇ ಪ್ರಾಚೀನ ಸಂಪ್ರದಾಯವೆಂಬುದನ್ನು ನಿದರ್ಶಿಸಬೇಕಿತ್ತು. ಅವರಿಗಿದ್ದ ಒಂದೇ ಕಥೆಯೆಂದರೆ ಸೃಷ್ಟಿಕರ್ತನಾದ ಗಾಡ್ ಎಂಬವನು ಯೆಹೂದಿಗಳ 13 ಬುಡಕಟ್ಟುಗಳಲ್ಲಿ ಹುಟ್ಟಿಬರುತ್ತೇನೆಂದು ಮಾತುಕೊಟ್ಟದ್ದ ಪ್ರಕಾರ ಜೀಸಸ್ ಕ್ರೈಸ್ತನಾಗಿ ಹುಟ್ಟಿ ಬಂದಿದ್ದಾನೆ, ಅವನ ಅನುಯಾಯಿಗಳೇ ತಾವು. ಈ ಕಥೆಯು ರೋಮಿನ ನಗರಗಳಲ್ಲಿ ಅವರನ್ನೊಂದು ಬಿಟ್ಟರೆ ಉಳಿದವರಿಗೆ ಗೊತ್ತಿರಲಿಲ್ಲ. ಅಂದರೆ ಯೆಹೂದಿಗಳ ಹಳೇ ಒಡಂಬಡಿಕೆಯ ಕಥೆಯನ್ನು ತಮ್ಮದೆಂದು ಹೇಳಿಕೊಳ್ಳದಿದ್ದರೆ ಅವರಿಗೆ ತಮ್ಮದಾದ ಪರಂಪರೆಯೇ ಇರಲಿಲ್ಲ. ಆದರೆ ಯೆಹೂದಿಗಳು ಅದನ್ನು ಈಗಾಗಲೇ ತಮ್ಮದೆಂದು ಹೇಳಿಕೊಂಡಿದ್ದರು. ಈ ಇಕ್ಕಟ್ಟಿಗೆ ಸಿಲುಕಿದ ಕ್ರೈಸ್ತರು ಅದರಿಂದ ಹೊರಬರುವ ಪ್ರಯತ್ನವಾಗಿ ಈ ಮುಂದಿನ ಹೆಜ್ಜೆಗಳನ್ನು ಇರಿಸಿದರು: 1) ತಮ್ಮದು ಸಂಪ್ರದಾಯವೇ ಅಲ್ಲ, ಅದು ರಿಲಿಜನ್ನು, ಹಾಗಾಗಿಯೇ ಶ್ರೇಷ್ಠ ಎಂಬುದಾಗಿ ವಾದಮಾಡಿದ್ದು. ಏಕೆಂದರೆ ಸಂಪ್ರದಾಯಗಳು ಹಿಂದಿನವರ ಅಂಧಾನುಕರಣೆಯೇ ಹೊರತೂ ಯಾವುದೇ ಸತ್ಯದ ನೆಲೆಗಟ್ಟಿನಿಂದ ಪ್ರಮಾಣಿತವಾದವುಗಳಲ್ಲ. ತಮ್ಮ ಆಚರಣೆಗಳು ಸತ್ಯ ಘಟನೆಯನ್ನು ಆಧರಿಸಿವೆ ಹಾಗಾಗಿ ಸಂಪ್ರದಾಯಗಳಿಗಿಂತಲೂ ಹೆಚ್ಚು ವಿಶ್ವಾಸಾರ್ಹವಾಗಿವೆ. 2) ತಮ್ಮದು ಸತ್ಯ ಘಟನೆ ಎಂಬುದನ್ನು ದೃಷ್ಟಾಂತ ಪಡಿಸಲು ತಮ್ಮದೇ ಹಿಸ್ಟರಿಯನ್ನು ರಚಿಸಿದ್ದು.

ಹಿಸ್ಟರಿಯೆಂಬುದು ಗತಕಾಲದ ಅಧಿಕೃತ ಜ್ಞಾನ ಎಂಬ ನಂಬಿಕೆಯನ್ನು ಹೊಂದಿದ್ದ ರೋಮನ್ನರ ಸಮಾಜದಲ್ಲಿ ಕ್ರೈಸ್ತರು ತಮ್ಮ ಸಮರ್ಥನೆಗಾಗಿ ಈ ಹಿಸ್ಟರಿಯನ್ನೇ ತಮ್ಮದನ್ನಾಗಿ ಮಾಡಿಕೊಂಡರು. ಆದರೆ ಅವರೇನೂ ಗ್ರೀಕರ ಹಾಗೆ ಸಾಕ್ಷ್ಯಾಧಾರಗಳನ್ನು ಪರೀಕ್ಷಿಸಿ ಕಂಡುಕೊಂಡ ನಿಜಗಳನ್ನು ಆಧರಿಸಿ ತರ್ಕಿಸಲಿಲ್ಲ. ಬದಲಾಗಿ ತಾವು ಹೇಳಿಕೊಂಡು ಬಂದ ಕಥೆಯೇ ನಿಜ ಎಂಬುದಾಗಿ ಹೇಳಿದರು, ಅದು ನಿಜವೇ ಏಕೆಂದರೆ ಈ ಸೃಷ್ಟಿಯನ್ನು ಮಾಡಿದವನೇ ಸ್ವತಃ ಜೀಸಸ್ನಿಗೆ ಅದನ್ನು ಹೇಳಿದ್ದಾನೆ. ಅದೇ ಈ ನಿಜಕ್ಕೆ ಪ್ರಮಾಣ. ಈ ಪ್ರಮಾಣದ ಪ್ರಕಾರ ಇಡೀ ಬೈಬಲ್ಲಿನ ಕಥೆಯೇ ಸತ್ಯ. ಹೀಗೆ ಕ್ರಿಶ್ಚಿಯಾನಿಟಿಯು ಬೈಬಲ್ಲಿನ ಕಥೆಯು ನಿಜವಾದ ಕಾರಣದಿಂದಲೇ ಕ್ರೈಸ್ತರ ರಿಲಿಜನ್ನು ಕೂಡ ಸತ್ಯ ಎನ್ನುತ್ತದೆ. ಹಾಗಾಗಿ ಈ ಬೈಬಲ್ಲು ಸುಳ್ಳಾದರೆ ಕ್ರಿಶ್ಚಿಯಾನಿಟಿಯೇ ಅಪ್ರಸ್ತುತವಾಗುತ್ತದೆ. ಈ ಮಟ್ಟಕ್ಕೆ ಹಿಸ್ಟರಿ ನಿರ್ಣಾಯಕವಾದುದರಿಂದ ತಮ್ಮ ಕಥೆಯು ಸತ್ಯವೋ ಸುಳ್ಳೋ ಎಂಬುದು ಕ್ರಿಶ್ಚಿಯಾನಿಟಿಯ ಮೇಲಿನ ನಂಬಿಕೆಯ ಪ್ರಶ್ನೆಯಾಗಿ ಮಾರ್ಪಡುತ್ತದೆ. ಇದು ಕೇವಲ ಕ್ರಿಶ್ಚಿಯಾನಿಟಿಯದೊಂದೇ ಸಮಸ್ಯೆಯಲ್ಲ. ಜೂಡಾಯಿಸಂ ಹಾಗೂ ಇಸ್ಲಾಂಗಳೂ ಕೂಡ ತಂತಮ್ಮ ಕಥೆಗಳು ನಿಜಘಟನೆಗಳೇ ಎಂದು ನಂಬುವುದು ತಮಗೆ ನಿರ್ಣಾಯಕ ಎಂದುಕೊಂಡಿವೆ. ಹಾಗಾಗೇ ಹಿಸ್ಟರಿಗಾಗಿ ಹೊಡೆದಾಡುವ, ಹಿಸ್ಟರಿಗೆ ಸಂಬಂಧಪಟ್ಟ ಸ್ಥಳಗಳನ್ನು ಸಂರಕ್ಷಿಸಿಕೊಳ್ಳುವುದನ್ನು ಸೆಮೆಟಿಕ್ ರಿಲಿಜನ್ನುಗಳು ನಿರ್ಣಾಯಕ ಎಂದುಕೊಳ್ಳುತ್ತವೆ. ವರ್ತಮಾನವನ್ನು ಹಿಸ್ಟರಿಯ ಸತ್ಯಗಳ ಮೂಲಕ ಪ್ರಮಾಣೀಕರಿಸುವುದು ಅವುಗಳಿಗೆ ಸಹಜವಾಗಿ ಕಾಣಿಸುತ್ತದೆ.

ಈ ಮಧ್ಯೆ ಯುರೋಪಿನಲ್ಲಿ ಪ್ರಚಲಿತದಲ್ಲಿ ಬಂದ ಪ್ರೊಟೆಸ್ಟಾಂಟ್ ಪಂಥದವರು ಕ್ಯಾಥೋಲಿಕ್ ಕ್ರೈಸ್ತರು ಬರೆದುಕೊಂಡು ಬಂದಿದ್ದ ಅತಿಮಾನುಷ ಕಥೆಗಳು ನಿಜವಾಗಲಿಕ್ಕೆ ಸಾಧ್ಯವಿಲ್ಲ ಎಂದರು. ಕ್ರಿಸ್ತನ ನಂತರ ಯಾರೂ ಅತಿಮಾನುಷ ಜೀವಿಗಳಿಲ್ಲ ಹಾಗಾಗಿ ಬೈಬಲ್ಲೊಂದನ್ನು ಬಿಟ್ಟು ಎಲ್ಲವೂ ಹುಲುಮಾನವರ ವೃತ್ತಾಂತಗಳೇ ಆಗಿವೆ. ಮನುಷ್ಯನಿಗೆ ಏನು ಸಹಜವೋ ಅದನ್ನು ಮಾತ್ರ ಅವರು ಮಾಡಿದ್ದಾರೆ. ಹಾಗಾಗಿ ಮನುಷ್ಯರ ಹಿಸ್ಟರಿಯು ಮನುಷ್ಯ ಸಾಧನೆಗಳ ನೈಜ ದಾಖಲೆಗಳಾಗಿರಲೇಬೇಕು ಎಂಬುದಾಗಿ ಅವರು ಆಗ್ರಹಿಸಿದರು. ಈ ರೀತಿಯಲ್ಲಿ ಹಿಸ್ಟರಿಯ ಸತ್ಯವನ್ನು ನೈಜ ವ್ಯಕ್ತಿ ಹಾಗೂ ಘಟನೆಗಳ ನೆಲೆಯಲ್ಲಿ ತಂದು ನಿಲ್ಲಿಸಿದರು.

ಪಾಶ್ಚಾತ್ಯ ಸೆಕ್ಯುಲರ್ ಹಿಸ್ಟರಿಯು ನಿಜದ ಕುರಿತ ಪ್ರೊಟೆಸ್ಟಾಂಟ್ ಧೋರಣೆಯನ್ನೇ ಸ್ವೀಕರಿಸಿ ನಿಜಘಟನೆಗಳನ್ನು ಶೋಧಿಸುವ ವೈಜ್ಞಾನಿಕ ವಿಧಾನಗಳನ್ನು, ಸಿದ್ಧಾಂತಗಳನ್ನು ಬೆಳೆಸಿತು. ಆದರೆ ಸೆಕ್ಯುಲರ್ ಹಿಸ್ಟರಿಯ ಸಿದ್ಧಾಂತಗಳು ಮಾತ್ರ ಮಾನವರ ಕುರಿತ ಥಿಯಾಲಜಿಯ ಗ್ರಹಿಕೆಗಳನ್ನು ಆಧರಿಸಿಯೇ ಇದ್ದವು. ಅದು ಹಿಸ್ಟರಿ ಎಂಬುದು ಗಾಡ್ನ ಯೋಜನೆಯಲ್ಲ, ಅದು ನಿಸರ್ಗದ ಅಥವಾ ಮಾನವನ ಯೋಜನೆ ಎಂಬ ತಿದ್ದುಪಡಿಯನ್ನು ಮಾಡಿತು ಅಷ್ಟೆ. ಜ್ಞಾನೋದಯ ಯುಗದಿಂದ ಬರೆದುಕೊಂಡು ಬಂದ ಈ ಸೆಕ್ಯುಲರ್ ಹಿಸ್ಟರಿಗೆ ನಿಸರ್ಗ ಅಥವಾ ಮಾನವನ ಯೋಜನೆ ಏನು ಎಂಬುದರ ಕುರಿತು ಒಮ್ಮತ ಹಾಗೂ ಸ್ಪಷ್ಟತೆ ಇದುವರೆಗೂ ಬಂದಿಲ್ಲ. ಆದರೆ ಗತಕಾಲದ ನಿಜ ಘಟನೆಗಳನ್ನು ಕಂಡುಹಿಡಿದು ಹಿಸ್ಟರಿಯನ್ನು ರಚಿಸಿಕೊಳ್ಳುವುದು ಮಾನವರ ವರ್ತಮಾನ ಹಾಗೂ ಭವಿಷ್ಯಕ್ಕೆ ಅತ್ಯಗತ್ಯ ಎಂಬ ನಂಬಿಕೆ ಅದರಿಂದ ವಿಚಲಿತವಾಗಿಲ್ಲ. ಹಾಗಾಗಿ ಹಿಸ್ಟರಿ ಬರವಣಿಗೆ ಎಂಬುದು ಅಂತಿಮವಾಗಿ ನಿಜ ಘಟನೆಗಳ ಶೋಧನೆಯಾಗಿ ಮಹತ್ವಪಡೆಯಿತು. ಅದು ವರ್ತಮಾನಕ್ಕೆ ಅತ್ಯಂತ ಮುಖ್ಯ ಎಂಬುದು ಅವರ ನಂಬಿಕೆ, ಆದರೆ ಅದು ಹೇಗೆಂಬುದು ಬುದ್ಧಿಗೆ ನಿಲುಕಿಲ್ಲ.

ಪಾಶ್ಚಾತ್ಯರು ಭಾರತದ ಹಿಸ್ಟರಿಯನ್ನು ರಚಿಸುವ ಸಂದರ್ಭದಲ್ಲಿ ಇಂಥ ಸತ್ಯಗಳಿಗಾಗಿ ನಮ್ಮ ಗ್ರಂಥಗಳನ್ನು ತಡಕಾಡಿದರು. ವಿಭಿನ್ನ ಸಂಸ್ಕೃತಿಗಳು ದಾಟಿಸಿಕೊಂಡು ಬಂದ ಕಥೆಗಳು ಆಯಾ ಸಂಸ್ಕೃತಿಗಳ ಹಿಸ್ಟರಿಯನ್ನು ತಿಳಿಸುತ್ತವೆ, ಹಾಗಾಗಿ ಇಂಥ ಗ್ರಂಥಗಳಲ್ಲಿ ಬರುವ ಕಥೆಗಳು ನಿಜವಾಗಿರಬೇಕು ಇಲ್ಲ ಸುಳ್ಳಾಗಿರಬೇಕು ಎಂಬ ಧೋರಣೆಯಿಂದ ಅವನ್ನು ನೋಡಿದರು. ಇವೆಲ್ಲ ಸುಳ್ಳು ಎಂಬ ನಿರ್ಣಯಕ್ಕೆ ಬಂದ ಮೆಕಾಲೆಯಂಥ ಕೆಲವರು ಅವೆಲ್ಲ ಜ್ಞಾನವೇ ಅಲ್ಲ, ನಿಷ್ಪ್ರಯೋಜಕ ಎಂಬುದಾಗಿ ಪರಿಗಣಿಸಿ ಅವನ್ನು ತಿರಸ್ಕರಿಸುವ ಸಲಹೆಯನ್ನು ನೀಡಿದರು. ಆದರೆ ಇನ್ನೂ ಕೆಲವರು ಈ ಕಥೆಗಳು ಸುಳ್ಳಿನ ಹೊದಿಕೆಯೊಳಗೆ ಪರೋಕ್ಷವಾಗಿ ಗತಕಾಲದ ನಿಜಘಟನೆಗಳನ್ನು ಬಚ್ಚಿಟ್ಟುಕೊಂಡಿವೆ ಎಂಬುದಾಗಿ ನಿರ್ಣಯಿಸಿ ಅವುಗಳನ್ನು ಪರಾಮರ್ಶೆಗೊಡ್ಡಿದರು. ಅವರನ್ನನುಸರಿಸಿ ಭಾರತೀಯರೂ ಕೂಡ ಈ ಪ್ರಾಚೀನ ಕಥೆಗಳಲ್ಲಿ ಸತ್ಯ ಘಟನೆಗಳು ಅಡಕವಾಗಿವೆ ಎಂಬ ಧೋರಣೆಯನ್ನು ರೂಢಿಸಿಕೊಂಡಿದ್ದಾರೆ.

ನಮ್ಮ ಪ್ರಾಚೀನ ಗ್ರಂಥಗಳನ್ನು ಹಿಸ್ಟರಿಗೆ ಸಮೀಕರಿಸಿದಾಗ ಅವನ್ನು ನೋಡುವ ಏಕೈಕ ವಿಧಾನವೆಂದರೆ ಅವುಗಳಲ್ಲಿ ಬರುವ ಘಟನೆಗಳು ನಿಜವೋ ಸುಳ್ಳೋ ಎಂಬುದು. ಒಂದೊಮ್ಮೆ ಅವು ಹಿಸ್ಟರಿಗಳು ಅಲ್ಲದಿದ್ದರೆ? ಅವು ಬೇರೇನನ್ನೂ ತಿಳಿಸಲಿಕ್ಕಾಗಿ ರಚನೆಯಾಗಿದ್ದರೆ? ಅವುಗಳ ನಿಜ ಸುಳ್ಳುಗಳ ಕುರಿತ ಬಡಿದಾಟವು ವ್ಯರ್ಥವಾಗುತ್ತದೆಯಷ್ಟೇ ಅಲ್ಲ ಈ ಗ್ರಂಥಗಳ ಜೊತೆಗೆ ಇರುವ ಪಾರಂಪರಿಕ ಸಂಬಂಧವನ್ನು ಕಡಿದುಕೊಳ್ಳುವುದರಿಂದ ಅವೂ ನಮ್ಮ ಪಾಲಿಗೆ ಅರ್ಥಹೀನವಾಗುತ್ತವೆ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: