ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 42 :ಪುರಾಣ ಕಥೆಗಳು ಮತ್ತು ಸತ್ಯ ಸುಳ್ಳಿನ ಪ್ರಶ್ನೆ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಹಿಂದಿನ ಅಂಕಣಗಳಲ್ಲಿ ನಮ್ಮ ಇತಿಹಾಸ ಸಂಪ್ರದಾಯವು ಪಾಶ್ಚಾತ್ಯರಿಗೆ ಸುಳ್ಳಿನ ಕಂತೆಯಾಗಿ ಕಾಣಿಸಿದ ವಿಷಯವನ್ನು ಪ್ರಸ್ತಾಪಿಸಿದ್ದೆ. ಹಾಗಾಗಿ ಅವರು ನಮಗೆ ಹಿಸ್ಟರಿಯ ಅರಿವು ಇಲ್ಲ ಎಂಬುದಾಗಿ ತೀರ್ಮಾನಿಸಿದ್ದರು. ಮೆಕಾಲೆಯ ಸುಪ್ರಸಿದ್ಧ ನಡಾವಳಿಯಲ್ಲಿ ಅವನು ಉದ್ಗರಿಸಿದ ಪ್ರಕಾರ ಭಾರತೀಯರು ಗತಕಾಲದಲ್ಲಿ 30 ಅಡಿ ಎತ್ತರದ ರಾಜರು ಇದ್ದರು, 30000 ವರ್ಷ ಆಳ್ವಿಕೆ ನಡೆಸಿದ ರಾಜರು ಇದ್ದರು ಎಂಬ ಹಿಸ್ಟರಿಯನ್ನು ನಂಬಿದ್ದಾರೆ, ಅವರ ಭೂಗೋಲವು ಬೆಲ್ಲ ಬೆಣ್ಣೆಗಳ ಸಮುದ್ರಗಳು ಇವೆ ಎಂಬಿತ್ಯಾದಿ ಹಾಸ್ಯಾಸ್ಪದವಾದ ಸಂಗತಿಗಳನ್ನು ತಿಳಿಸುತ್ತದೆ. ಮೆಕಾಲೆಯ ಹೇಳಿಕೆಯೊಂದೇ ಅಲ್ಲ, ನಮ್ಮ ಇತಿಹಾಸ-ಪುರಾಣಗಳನ್ನು ಬಲ್ಲ ಯಾರಿಗಾದರೂ ಇದಕ್ಕೂ ವಿಚಿತ್ರವಾದ ವ್ರತ್ತಾಂತಗಳು ಖಂಡಿತವಾಗಿಯೂ ಗೊತ್ತಿರುತ್ತವೆ.

ಕೇವಲ ಮೆಕಾಲೆ ಮಾತ್ರವೇ ಅಲ್ಲ, ಅಂಥವೆಲ್ಲ ನಿಜ ಎಂದು ಯಾರಾದರೂ ವಾದಿಸಿದರೆ ನಮಗೇ ಅದು ಹಾಸ್ಯಾಸ್ಪದವಾಗಿ ಕಾಣಿಸುತ್ತದೆ. ಎರಡು ಸಾವಿರ ವರ್ಷಗಳ ಹಿಂದೆ ಪ್ರಾಣಿ ಪಕ್ಷಿಗಳು ಮಾತನಾಡುತ್ತಿದ್ದವು, ಋಷಿಗಳ ಶಾಪಕ್ಕೆ ಗಂಡುಗಳು ಹೆಣ್ಣಾಗುತ್ತಿದ್ದರು, ಮನುಷ್ಯರು 30 ಸಾವಿರ ವರ್ಷ ಬದುಕುತ್ತಿದ್ದರು, ಬೆಣ್ಣೆಯ, ಹಾಲಿನ ಸಮುದ್ರಗಳಿದ್ದವು, ಇತ್ಯಾದಿಗಳನ್ನು ನಿಜವೆಂಬುದಾಗಿ ಯಾವುದಾದರೂ ಭಾರತೀಯರು ಎಂದಾದರೂ ನಂಬಿದ್ದರೆ? ಹೋಗಲಿ, ಪಾಶ್ಚಾತ್ಯ ಹಿಸ್ಟರಿಯಿಂದ ಜ್ಞಾನೋದಯವಾಗುವುದಕ್ಕೂ ಪೂರ್ವದಲ್ಲಿ ಭಾರತೀಯರು ಹಾಗೇ ನಂಬಿಕೊಂಡಿದ್ದರು ಅಂತ ವಾದಕ್ಕೆ ಇಟ್ಟುಕೊಳ್ಳೋಣ. ಈಗ ನಮಗೆ ಅದು ಸುಳ್ಳು ಅಂತ ಗೊತ್ತಾಗಿದೆಯಲ್ಲ? ಗೊತ್ತಾದಮೇಲೂ ನಮ್ಮಂಥ ವಿದ್ಯಾವಂತರಿಗೆ ಈ ಪುರಾಣ ಕಥೆಗಳ ಅಗತ್ಯವೇನಿದೆ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ನಾವು ಸುಳ್ಳುಗಳನ್ನು ನಂಬಲು ಅವನ್ನು ಓದುತ್ತೇವೆಯೆ?

ಇಂದು ರಾಮಾಯಣದ ಕೆಲವು ಘಟನೆಗಳ ಕುರಿತಾಗಿ ಸತ್ಯ-ಸುಳ್ಳುಗಳ ವಿವಾದ ಎದ್ದಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ ಇಂದಿನ ಯುವಜನರಲ್ಲಿ ರಾಮಾಯಣದ ಕುರಿತು ಸಾಮಾನ್ಯವಾಗಿ ಮೂಡುವ ಒಂದು ಪ್ರಶ್ನೆ ಎಂದರೆ ಅದು ನಿಜವಾಗಿಯೂ ನಡೆಯಿತೆ? ಎಂಬುದು. ಅವರ ಆತಂಕ ಏನೆಂದರೆ ಒಂದೊಮ್ಮೆ ಅದು ಸುಳ್ಳಾಗಿದ್ದರೆ ಅದನ್ನು ಪೂಜ್ಯವಾಗಿ ನೋಡಲು ಸಾಧ್ಯವಾಗದಿರಬಹುಸು. ಹೀಗೆ ಆತಂಕಪಡುವವರು ಮತ್ತೊಂದು ರೀತಿಯ ಪ್ರಶ್ನೆಯನ್ನು ಕೇಳಿಕೊಳ್ಳಲಿ: ವಾಲ್ಮೀಕಿ, ವ್ಯಾಸರಂಥ ಮಹರ್ಷಿಗಳು ಈ ಕೃತಿಗಳನ್ನು ಹೀಗೇ ಏಕೆ ರಚಿಸಿದರು? ನೈಜ ಘಟನೆಗಳನ್ನು ದಾಖಲಿಸುವುದೇ ಅವರ ಉದ್ದೇಶವಾಗಿದ್ದರೆ ಅವರಿಗೆ ನೈಜ ಘಟನೆಗಳನ್ನು ಮಾತ್ರವೇ ಆಯ್ದು ಬರೆಯುವಷ್ಟು ಬುದ್ಧಿಮತ್ತೆ ಹಾಗೂ ಸಾಮರ್ಥ್ಯ ಇರಲಿಲ್ಲವೆ? ಇಲ್ಲ ನಿಜಘಟನೆಗಳನ್ನು ಇಂದಿನ ಹಿಸ್ಟರಿಕಾರರ ಥರ ನೇರವಾಗಿ ಹೇಳುವ ಸಾಮರ್ಥ್ಯವಿರಲಿಲ್ಲವೆ? ಈ ಗ್ರಂಥಗಳಲ್ಲಿ ನಡೆದ ಘಟನೆಗಳ ಸತ್ಯ ಸುಳ್ಳುಗಳನ್ನು ಪ್ರಮಾಣೀಕರಿಸಲು ಹೊರಡುವವರು ಅವರಿಗೆ ಅಂಥ ಬುದ್ಧಿಮತ್ತೆ ಹಾಗೂ ಸಾಮರ್ಥ್ಯ ಇರಲಿಲ್ಲ ಎಂಬುದಾಗಿ ತೀರ್ಮಾನಿಸಿದ್ದಾರೆ ಅಂತಲೇ ಅರ್ಥ. ಇಲ್ಲ ಅವರಿಗೆ ಆ ಬುದ್ಧಿಮತ್ತೆ ಹಾಗೂ ಸಾಮರ್ಥ್ಯಗಳಿದ್ದವು ಎಂಬುದನ್ನು ಪರಿಗಣಿಸುತ್ತೇವೆ ಅಂತಾದಲ್ಲಿ, ಅವರು ಹಿಸ್ಟರಿಯನ್ನು ಬರೆಯುತ್ತಿಲ್ಲ, ಬೇರೇನನ್ನೋ ಬರೆಯುತ್ತಿದ್ದಾರೆ ಎಂಬುದನ್ನು ಅರಿಯುವುದೊಂದೇ ಮಾರ್ಗ.

ಈ ಪರ್ಯಾಯ ಮಾರ್ಗದಲ್ಲಿ ನೀವು ಹೊರಡಬಯಸುವಿರಾದರೆ ಒಂದು ವಿಷಯವನ್ನು ಗುರುತಿಸುವ ಅಗತ್ಯವಿದೆ. ಇಂದಿಗೂ ಕೂಡ ನಾವು ವಿದ್ಯಾವಂತರಾಗಿ ಪುರಾಣ ಕಥೆಗಳನ್ನು ಓದುತ್ತೇವೆ, ಅವುಗಳನ್ನಾಧರಿಸಿ ಬೇರೆ ಬೇರೆ ಕಲಾ ಪ್ರಕಾರಗಳನ್ನು ಸೃಷ್ಟಿಸುತ್ತೇವೆ, ಈ ಕಥೆಗಳು ನಮ್ಮ ಜೀವನಕ್ಕೆ ಮುಖ್ಯ ಎಂಬ ಅನಿಸಿಕೆಯನ್ನು ಹೊಂದಿದ್ದೇವೆ ಎಂಬುದಂತೂ ಸತ್ಯ. ಭಾರತದಲ್ಲಿ ನಿಜಘಟನೆಗಳನ್ನು ದಾಖಲಿಸುವ ಹಿಸ್ಟರಿಗಳ ಆರ್ಭಟ ಹೆಚ್ಚಾದಂತೆಲ್ಲ ಪುರಾಣಕಥೆಗಳು ಹೆದರಿ ಮೂಲೆಗೆ ಸರಿಯುತ್ತಿರುವುದು ಕಾಣುವುದಿಲ್ಲ. ಬದಲಾಗಿ ಅವು ಕೂಡ ಹಿಸ್ಟರಿಯನ್ನು ಕಲಿತ ವಿದ್ಯಾವಂತರಿಗೆ ಮೊದಲಿಗಿಂತ ಹೆಚ್ಚೆಚ್ಚು ಆಸಕ್ತಿಪೂರ್ಣವಾಗಿ ಕಾಣಿಸುತ್ತಿವೆ. ಇಂಥ ಕಥೆಗಳನ್ನು ನಮಗೆ ಹೇಳಿದವರು ಇವುಗಳು ನಿಜವಾಗಿಯೂ ನಡೆದವು ಎಂದು ನಂಬಬೇಕು ಎಂಬ ಷರತ್ತನ್ನು ಇಟ್ಟು ಕಥೆ ಹೇಳಿದರೆ? ನಾನು ಸಣ್ಣವನಿದ್ದಾಗ ಶಾಲೆಯಲ್ಲಿ ಕಲಿತ ಭೂಗೋಳ, ವಿಜ್ಞಾನ, ಹಿಸ್ಟರಿಗಳ ಪ್ರಕಾರ ಈ ಕಥೆಗಳಲ್ಲಿ ಬರುವ ವಿವರಗಳು ನಿಜವಾಗಿರಲು ಸಾಧ್ಯವೆ? ಎಂಬ ಪ್ರಶ್ನೆಗಳು ಏಳುತ್ತಿದ್ದವು. ಆದರೆ ಅಂಥ ಪ್ರಶ್ನೆಗಳನ್ನು ಕೇಳುವುದರಿಂದ ‘ತಲೆಹರಟೆ’ ಎಂಬ ಬಿರುದನ್ನು ಬಿಟ್ಟರೆ ನನಗೆ ಮತ್ತೇನೂ ಸಿಕ್ಕಲಿಲ್ಲ. ನಮ್ಮ ಪುರಾಣ ಕಥೆಗಳ ಸಂದರ್ಭದಲ್ಲಿ ಇವು ಕೇಳುವ ಪ್ರಶ್ನೆಗಳಲ್ಲ ಎಂಬುದನ್ನು ನಾನು ಕ್ರಮೇಣ ಕಂಡುಕೊಂಡೆ. ಅಂದರೆ ಘಟನೆಗಳು ಸತ್ಯವೆ? ಸುಳ್ಳೆ? ಎಂಬ ಪ್ರಶ್ನೆಗಳು ಈ ಕಥೆಗಳಿಗೆ ಅಪ್ರಸ್ತುತ.

ನಮ್ಮ ಸಾಮಾನ್ಯಜ್ಞಾನದ ಪ್ರಕಾರ ಒಂದು ಘಟನೆ ಸತ್ಯವಾಗದಿದ್ದರೆ ಅದು ಸುಳ್ಳಾಗಿರಲೇಬೇಕು. ಆದರೆ ಹಾಗಾಗಲೇಬೇಕೆಂದಿಲ್ಲ. ಅದು ಸತ್ಯವೂ ಸುಳ್ಳೂ ಎರಡೂ ಆಗಿರದಿರುವ ಸಾಧ್ಯತೆಯೂ ಇದೆ. ಹೀಗೆ ಹೇಳಿದಾಗ ನಾನು ಅಡ್ಡಗೋಡೆಯ ಮೇಲೆ ದೀಪವಿಡುತ್ತಿದ್ದೇನೆಂದು ನೀವು ಹೇಳುವ ಸಾಧ್ಯತೆಯಿದೆ. ಯಾವುದೋ ರಾಜಕೀಯ ಪಕ್ಷವನ್ನು ಬೆಂಬಲಿಸುವ ಕೆಲವು ಯುವಕರು ‘ರಾಮಸೇತುವು ನಿಜವಾಗಿಯೂ ಇತ್ತೆ?’ ಎಂದು ನನ್ನನ್ನು ಕೇಳುತ್ತಾರೆನ್ನಿ. ನಾನು ಅದು ಸತ್ಯವೂ ಅಲ್ಲ, ಸುಳ್ಳೂ ಅಲ್ಲ ಎಂದು ಉತ್ತರ ಕೊಟ್ಟರೆ ಏನಾಗುತ್ತದೆ? ನಾನು ಹಾರಿಕೆಯ ಉತ್ತರವನ್ನು ನೀಡುತ್ತಿದ್ದೇನೆ, ನನಗೆ ನೇರವಾಗಿ ಹೇಳುವ ಧೈರ್ಯವಿಲ್ಲ ಅಂತಲೇ ಅವರು ತೀರ್ಮಾನಿಸುತ್ತಾರೆ.

ಆದರೆ ನನ್ನದು ಹಾರಿಕೆಯ ಉತ್ತರವಲ್ಲ. ಇದೊಂದು ವೈಜ್ಞಾನಿಕ ಸಮಸ್ಯೆ. ಹಿಸ್ಟರಿಯ ಪ್ರಶ್ನೆಗಳು ಈ ಹಿನ್ನೆಲೆಯಿಂದ ಹುಟ್ಟುತ್ತವೆ ಎನ್ನುವುದನ್ನು ಗಮನಿಸಬೇಕು. ವಿಜ್ಞಾನದಲ್ಲಿ ಸತ್ಯ ಅಥವಾ ಸುಳ್ಳು ಎನ್ನುವುದು ಒಂದು ನಿರ್ದಿಷ್ಟ ಪ್ರಕಾರದ ವಾಕ್ಯಗಳಿಗೆ ಆರೋಪಿಸಬಹುದಾದ ಗುಣಲಕ್ಷಣವಾಗಿದೆ. ಅವು ಪ್ರಪಂಚದಲ್ಲಿ ನಿಜವಾಗಿಯೂ ಏನಿದೆ ಎಂಬುದನ್ನು ತಿಳಿಸಲು ಉದ್ದೇಶಿಸಿರುವ ವಾಕ್ಯಗಳು. ಅಂದರೆ ‘ರಾಮಾಯಣದಲ್ಲಿ ಹೇಳಲಾದ ರಾಮಸೇತುವು ಪ್ರಪಂಚದಲ್ಲಿ ವಾಸ್ತವಿಕವಾಗಿ ಇದ್ದ ಒಂದು ವಸ್ತುವನ್ನು ಸೂಚಿಸುತ್ತದೆಯೆ?’ ಎಂಬುದು ಆ ಪ್ರಶ್ನೆಯ ಸರಿಯಾದ ರೂಪ. ಒಂದೊಮ್ಮೆ ರಾಮಾಯಣವನ್ನು ಬರೆದವನಿಗೆ ಭಾರತದ ಯಾವುದೋ ಭಾಗದಲ್ಲಿ ರಾಮನೆಂಬವನು ಸೇತುವೆಯನ್ನು ಕಟ್ಟಿದ ನಿಜ ಘಟನೆಯನ್ನು ದಾಖಲಿಸುವ ಉದ್ದೇಶ ಇತ್ತು ಅನ್ನಿ. ಆದರೆ ಸೇತುವೆಯನ್ನು ಕಟ್ಟುವ ಘಟನೆ ನಡೆದೇ ಇರಲಿಲ್ಲ. ಅಂಥ ಸಂದರ್ಭದಲ್ಲಿ ಅವನ ಹೇಳಿಕೆ ಸುಳ್ಳಾಗುತ್ತದೆ. ಅಂದರೆ ಪ್ರಪಂಚದಲ್ಲಿ ವಾಸ್ತವಿಕವಾಗಿ ಇರಬಹುದಾದ ಸಂಗತಿಗಳನ್ನು ಚಿತ್ರಿಸುವ ಉದ್ದೇಶವನ್ನು ಹೊಂದಿದ ಹೇಳಿಕೆಗಳಿಗೆ ಮಾತ್ರವೇ ಸತ್ಯ-ಸುಳ್ಳುಗಳ ತರ್ಕ ಅನ್ವಯವಾಗುತ್ತದೆ. ರಾಮಾಯಣಕ್ಕೆ ರಾಮಸೇತುವನ್ನು ಉಲ್ಲೇಖಿಸುವಲ್ಲಿ ಆ ಉದ್ದೇಶವೇ ಇಲ್ಲ, ಅದರ ಉದ್ದೇಶವೇ ಬೇರೆ ಅಂತಿಟ್ಟುಕೊಳ್ಳಿ, ಆಗ ಆ ಹೇಳಿಕೆಯು ಸತ್ಯ-ಸುಳ್ಳುಗಳ ಪರಿಧಿಗೆ ಬರುವುದಿಲ್ಲ. ಅದು ಸತ್ಯವೂ ಅಲ್ಲ, ಸುಳ್ಳೂ ಅಲ್ಲ.

ಇತಿಹಾಸ ಪುರಾಣಗಳು ಪ್ರಪಂಚದ ಕುರಿತ ಸತ್ಯಹೇಳಿಕೆಗಳೆಂಬುದಾಗಿ ಪೂರ್ವದೇಶದವರು ತಿಳಿಯುವುದಿಲ್ಲ. ಆ ನಿರ್ದಿಷ್ಟ ಕಾರಣದಿಂದಲೇ ಅವನ್ನು ಸುಳ್ಳು ಎಂದಾಗಿ ಕೂಡ ಅವರು ತಿಳಿಯುವುದಿಲ್ಲ. ಹಾಗಾಗಿ ಹಿಸ್ಟರಿಯ ದೃಷ್ಟಿಯನ್ನಿಟ್ಟುಕೊಂಡು ಅವುಗಳು ಸುಳ್ಳು ಘಟನೆಗಳು ಎಂದಾಗ ಅವರಿಗೆ ಅದು ಸರಿ ಎನ್ನಿಸುವುದಿಲ್ಲ. ಅವರು ಅದನ್ನು ವಿರೋಧಿಸುತ್ತಾರೆ. ಆದರೆ ಇಂಥ ಹೇಳಿಕೆಗಳಲ್ಲಿನ ಸಮಸ್ಯೆ ಏನೆಂಬುದು ಅವರಿಗೆ ಹೊಲಬಾಗುವುದಿಲ್ಲವಾದ್ದರಿಂದ ಅವರಿಗೆ ತಮ್ಮ ಉತ್ತರವನ್ನು ಸರಿಯಾಗಿ ರೂಪಿಸಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ಅವು ಸುಳ್ಳಲ್ಲ ಎಂದು ಹೇಳುತ್ತಾರೆ. ಸುಳ್ಳಲ್ಲ ಎನ್ನುವಾಗ ಅವರಿಗೆ ಅದು ಸತ್ಯ ಎಂದೇ ಅನ್ನಿಸುತ್ತದೆ. ಆಗ ಪ್ರಶ್ನೆ ಕೇಳುವವರು ‘ಓಹೋ ಇವರು ಅವನ್ನು ಹಿಸ್ಟರಿಯ ಸತ್ಯ ಎಂದು ನಂಬಿಕೊಂಡಿದ್ದಾರೆ’ ಅಂದುಕೊಳ್ಳುತ್ತಾರೆ. ಆದರೆ ಹಿಸ್ಟರಿಯು ಯಾವುದನ್ನು ಸತ್ಯ ಎಂಬುದಾಗಿ ಪರಿಗಣಿಸುತ್ತದೆ ಎಂಬುದು ಅವರಿಗೆ ತಿಳಿಯುವುದಿಲ್ಲ. ಅವರು ಕೊಡುವ ಉತ್ತರವೇ ಒಂದು, ವಿದ್ವಾಂಸರು ತಿಳಿದುಕೊಳ್ಳುವುದೇ ಇನ್ನೊಂದು ಆಗುತ್ತದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ರಾಮಾಯಣದ ಘಟನೆಗಳು ಸತ್ಯ ಎಂಬ ಧೃಡ ವಿಶ್ವಾಸವಿದೆ, ಅವರು ಹಾಗೇ ವಾದವನ್ನೂ ಮಾಡುತ್ತಾರೆ. ಆದರೆ ಯಾವ ಅರ್ಥದಲ್ಲಿ?

ಈ ದೃಷ್ಟಿಯಿಂದ ಒಬ್ಬ ಬಾಲಿ ಯುವಕನ ಜೊತೆಗೆ ಪಾಶ್ಚಾತ್ಯ ವಿದ್ವಾಂಸನೊಬ್ಬನು ನಡೆಸಿದ ಸಂಭಾಷಣೆಯು ನನಗೆ ಆಸಕ್ತಿಪೂರ್ಣವಾಗಿ ಕಂಡಿತು. ರಾಮಾಯಣದ ಕುರಿತು ಪಾಶ್ಚಾತ್ಯ ಸಂಸ್ಕೃತಿಯವರಿಗೆ ಯಾವ ಪ್ರಶ್ನೆಗಳು ಏಳುತ್ತವೆ ಹಾಗೂ ಪೂರ್ವ ದೇಶದವರು ಅದನ್ನು ಯಾವ ರೀತಿಯ ಸತ್ಯ ಎಂಬುದಾಗಿ ನೋಡುತ್ತಾರೆ ಎಂಬುದಕ್ಕೆ ಅದೊಂದು ದೃಷ್ಟಾಂತವಾಗಿದೆ. ಆ ವಿದ್ವಾಂಸನು ಹಿಂದೂಗಳ ಪವಿತ್ರ ಗ್ರಂಥವಾದ ರಾಮನ ಇತಿಹಾಸವನ್ನು ಬಾಲಿ ಯುವಕನು ಸತ್ಯವೆಂದು ನಂಬಿದ್ದಾನೋ ಎಂದು ಕೇಳಿದಾಗ ಆ ಯುವಕನು ಯಾವುದೇ ಅನುಮಾನವಿಲ್ಲದೇ “ಹೌದು” ಎಂದು ಉತ್ತರಿಸಿದನು. ಈ ಸಂಭಾಷಣೆ ಹೀಗಿದೆ:
ವಿದ್ವಾಂಸ: “ಹಾಗಾದರೆ ರಾಜಕುಮಾರ ರಾಮನು ಎಲ್ಲೋ, ಯಾವಾಗಲೋ ಬದುಕಿದ್ದನು ಎಂಬುದಾಗಿ ನೀನು ನಂಬುತ್ತೀಯಾ?”
ಬಾಲಿ ಯುವಕ: “ಅವನು ಬದುಕಿದ್ದನೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ”
ವಿದ್ವಾಂಸ: “ಹಾಗಾದರೆ ಇದೊಂದು ಕಥೆಯೆ?”
ಬಾಲಿ ಯುವಕ: “ಹೌದು ಇದೊಂದು ಕಥೆ”
ವಿದ್ವಾಂಸ: “ಹಾಗಾದರೆ ಯಾರೋ ಈ ಕಥೆಯನ್ನು ಬರೆದರು – ಅಂದರೆ ಒಬ್ಬ ಮನುಷ್ಯನು ಇದನ್ನು ಬರೆದನೆ?”
ಬಾಲಿ ಯುವಕ: “ಖಂಡಿತವಾಗಿಯೂ ಯಾವುದೋ ಮನುಷ್ಯನು ಈ ಕಥೆಯನ್ನು ಬರೆದನು”
ವಿದ್ವಾಂಸ: “ಹಾಗಾದರೆ ಯಾವುದೋ ಮನುಷ್ಯನು ಇದನ್ನು ಕಲ್ಪಿಸಿಕೊಂಡಿರಬಹುದು”
ಬಾಲಿ ಯುವಕ: “ಯಾರೋ ಈ ಕಥೆಯನ್ನು ಹುಟ್ಟು ಹಾಕಿರಬಹುದು. ಆದರೆ ಏನೇ ಆದರೂ ಇದು ಸತ್ಯ”.
ವಿದ್ವಾಂಸ: “ಹಾಗಾದರೆ ರಾಜಕುಮಾರ ರಾಮನು ಭೂಮಿಯ ಮೇಲೆ ಬದುಕಿರಲಿಲ್ಲ ಎಂದಂತಾಯಿತು”.
ಬಾಲಿ ಯುವಕ: “ನಿನಗೆ ಯಾವ ಮಾಹಿತಿ ಬೇಕಾಗಿದೆ? ಕಥೆ ಸತ್ಯವೆಂಬುದು ನಿನ್ನ ಪ್ರಶ್ನೆಯೋ ಅಥವಾ ಕೇವಲ ಅದು ನಡೆಯಿತೋ ಇಲ್ಲವೋ ಎಂಬ ಪ್ರಶ್ನೆಯೋ?”
ವಿದ್ವಾಂಸ: “ಕ್ರೈಸ್ತರು ತಮ್ಮ ದೇವರಾದ ಜೀಸಸ್ ಕ್ರೈಸ್ತನು ಭೂಮಿಯ ಮೇಲೆ ಬದುಕಿದ್ದ ಎಂಬುದಾಗಿಯೂ ನಂಬುತ್ತಾರೆ. ಹೊಸ ಒಡಂಬಡಿಕೆಯಲ್ಲಿ ಮನುಷ್ಯರು ಅದನ್ನು ವರ್ಣಿಸಿದ್ದಾರೆ. ಆದರೆ ಕ್ರೈಸ್ತರು ಅದೊಂದು ವಾಸ್ತವಿಕವಾದ ವರ್ಣನೆಯೆಂದು ನಂಬುತ್ತಾರೆ. ಅವರ ದೇವರು ಕೂಡ ಭೂಮಿಯ ಮೇಲೆ ವಾಸ್ತವಿಕವಾಗಿ ಇದ್ದನು”.
ಬಾಲಿ ಯುವಕ: “ಈ ವಿಷಯವು ನನಗೂ ತಿಳಿದಿದೆ. ನಿಮ್ಮ ದೇವರು ಭೂಮಿಯ ಮೇಲೆ ಇದ್ದಿರಲೇಬೇಕೆಂಬುದು ಏಕೆ ಅಷ್ಟೊಂದು ಮಹತ್ವದ ವಿಷಯವಾಗಬೇಕು ಎಂಬುದು ನನಗೆ ತಿಳಿಯುತ್ತಿಲ್ಲ.”

ಇಲ್ಲಿ ಪಾಶ್ಚಾತ್ಯ ವಿದ್ವಾಂಸನು ಕೇಳುತ್ತಿರುವುದು ಹಿಸ್ಟರಿಯ ಸತ್ಯದ ಬಗೆಗೆ. ಬಾಲಿ ಯುವಕನು ಒಂದೆಡೆ ರಾಮಾಯಣವು ಒಂದು ಕಥೆ ಎನ್ನುತ್ತಾನೆ, ಮತ್ತೊಂದೆಡೆ ಅದು ಸತ್ಯವೆನ್ನುತ್ತಾನೆ. ಅದು ಭೂಮಿಯ ಮೇಲೆ ನಡೆದ ಘಟನೆ ಎಂಬರ್ಥದಲ್ಲಿ ಅವನು ಅದನ್ನು ಸತ್ಯ ಎನ್ನುತ್ತಿಲ್ಲ. ಅದು ಭೂಮಿಯಮೇಲೆ ನಡೆಯಿತೋ ಇಲ್ಲವೋ ಎಂಬುದು ಅವನಿಗೆ ತಿಳಿದಿಲ್ಲ. ಅಂದರೆ ಅವನು ಹಿಸ್ಟರಿಯ ಸತ್ಯದ ಕುರಿತು ಮಾತನಾಡುತ್ತಿಲ್ಲ. ಅವನು ರಾಮಾಯಣ ಎಂಬುದೊಂದು ಗ್ರಂಥವಿದೆ ಹಾಗೂ ಅದರಲ್ಲಿ ಆ ಘಟನೆಗಳು ಹಾಗೆ ಇರುವುದು ಸತ್ಯ ಎನ್ನುತ್ತಿದ್ದಾನೆ. ಅಂದರೆ ಇಲ್ಲಿ ಸತ್ಯ ಎನ್ನುವುದು ರಾಮಾಯಣ ಎಂಬ ಗ್ರಂಥ ಹಾಗೂ ಅದರ ವಿವರಗಳಿಗೆ ಸಂಬಂಧಪಟ್ಟಿದ್ದೇ ವಿನಃ ನಾವಿರುವ ಪ್ರಪಂಚದಲ್ಲಿ ನಿಜವಾಗಿಯೂ ಆಗಿಹೋದ ಘಟನೆಗಳಿಗೆ ಸಂಬಂಧ ಪಟ್ಟದ್ದಲ್ಲ. ಉದಾಹರಣೆಗೆ, ರಾವಣನನ್ನು ಕೊಂದವರು ಯಾರು? ಎಂಬ ಪ್ರಶ್ನೆಗೆ ರಾಮ ಎಂದರೆ ನಿಜವಾಗುತ್ತದೆ, ಲಕ್ಷ್ಮಣ ಎಂದರೆ ಸುಳ್ಳಾಗುತ್ತದೆ. ರಾಮಾಯಣದಲ್ಲಿ ರಾಮನು ರಾವಣನನ್ನು ಕೊಂದದ್ದು ಸತ್ಯ, ಹನುಮಂತನು ಲಂಕೆಗೆ ಹಾರಿದ್ದೂ ಸತ್ಯ, ಅದೇ ರೀತಿ ಜಟಾಯು, ಮಾಯಾ ಜಿಂಕೆ, ಶೂರ್ಪನಖಿ, ಕುಂಭಕರ್ಣ ಎಲ್ಲರೂ ನಿಜವೇ. ರಾಮಾಯಣವೇ ಈ ಸತ್ಯ-ಸುಳ್ಳುಗಳಿಗೆ ಒರೆಯಾಗುತ್ತದೆ. ಆ ಕಾರಣಕ್ಕೆ ರಾಮ ರಾವಣರು ಭೂಮಿಯ ಮೇಲೆ ಇದ್ದರು ಎಂದಂತೇನೂ ಅಲ್ಲ. ಅಂದರೆ ಹಿಸ್ಟರಿಯ ಸತ್ಯ-ಸುಳ್ಳುಗಳು ರಾಮಾಯಣದ ಸಂಪ್ರದಾಯವನ್ನು ದಾಟಿಸಿಕೊಂಡು ಬಂದವರಿಗೆ ಅಪರಿಚಿತ ಹಾಗೂ ಅಪ್ರಸ್ತುತ. ಅವರ ಪ್ರಪಂಚವೇ ಬೇರೆ ಇದ್ದಂತಿದೆ.

ಕಥೆಗಳು ಈ ಪ್ರಭೇದಕ್ಕೆ ಸೇರುತ್ತವೆ. ಕಥೆಗಳನ್ನು ಸುಳ್ಳು ಕಥೆಗಳು ಹಾಗೂ ಸತ್ಯಕಥೆಗಳು ಎಂದು ವಿಭಾಗಿಸಿಕೊಂಡವರು ಪಾಶ್ಚಾತ್ಯರು. ಅವರು ಸತ್ಯ ಕಥೆಗಳನ್ನು ಹಿಸ್ಟರಿ ಎಂದೂ ಸುಳ್ಳು ಕಥೆಗಳನ್ನು ಮಿಥ್ ಎಂದೂ ವಿಭಾಗಿಸಿಕೊಂಡರು. ಸತ್ಯ ಕಥೆಗಳು ಮಾತ್ರವೇ ನಮಗೆ ಬೋಧಕವಾಗುತ್ತವೆ, ಸುಳ್ಳು ಕಥೆಗಳು ಕೇವಲ ಮನೋರಂಜನೆಗೆ ಮಾತ್ರವೇ ಲಾಯಖ್ಖು ಎಂಬ ಧೋರಣೆಯನ್ನು ಬೆಳೆಸಿದರು. ಇಲ್ಲ ಸುಳ್ಳು ಕಥೆಗಳು ಸತ್ಯವನ್ನು ಪರೋಕ್ಷವಾಗಿ ತಿಳಿಸುತ್ತವೆ ಎಂದು ನಿರ್ಧರಿಸಿದರು. ಅದರ ಪರಿಣಾಮವಾಗಿ ಕಥೆಗಳು ಕೇವಲ ಕಥೆಗಳಾಗಿ ಪಶ್ಚಿಮದ ಜನರಿಗೆ ಕಲಿಕೆಯ ಸಾಧನಗಳಾಗಿ ಉಳಿದಿಲ್ಲ. ಅವು ರಮ್ಯ, ಕಾಲ್ಪನಿಕ ಲೋಕಗಳು ಅಷ್ಟೆ. ಅವು ನಮ್ಮ ದಾರಿ ತಪ್ಪಿಸುವ ಕೆಲಸವನ್ನು ಮಾತ್ರ ಮಾಡಬಲ್ಲವು ಎಂಬುದು ಅವರ ಧೋರಣೆ. ಇದು ಒಂದು ಸಂಸ್ಕೃತಿಯ ಧೋರಣೆ ಅಷ್ಟೆ. ಈ ಧೋರಣೆ ಸಮಸ್ಯಾತ್ಮಕವಾಗಿದೆ. ಉದಾಹರಣೆಗೆ, ನಮ್ಮ ರಾಮಾಯಣ ಮಹಾಭಾರತಗಳು ಈಗಿರುವಂತೆಯೇ ಬೋಧಕವಾಗಬಲ್ಲವು ಹಾಗೂ ಅವು ಭಾರತೀಯರ ವರ್ತಮಾನದ ಹುಡುಕಾಟದ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಿವೆ ಅಂತಾದರೆ ಅವು ಸತ್ಯಘಟನೆಗಳು ಎಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವೇನಿದೆ? ಈ ಪ್ರಶ್ನೆಯನ್ನು ಉತ್ತರಿಸಬೇಕಾದರೆ ಸತ್ಯಕಥೆಗಳು ನಮ್ಮ ಜೀವನವನ್ನು ಇನ್ನೂ ಚೆನ್ನಾಗಿ ಮಾಡುತ್ತವೆ, ಸುಳ್ಳುಕಥೆಗಳು ಅದನ್ನು ಹಾಳು ಮಾಡುತ್ತವೆ ಎಂಬುದನ್ನು ಸಿದ್ಧಪಡಿಸಬೇಕು. ಇದು ಸಿದ್ಧವಾಗುವವರೆಗೆ ಸತ್ಯಕಥೆಗಳು ಮಾತ್ರವೇ ನಮ್ಮ ಭವಿಷ್ಯಕ್ಕೆ ಒಳ್ಳೆಯದು ಎನ್ನಲು ವಿಶೇಷ ಕಾರಣಗಳು ಇಲ್ಲ.

ವಾಸ್ತವದಲ್ಲಿ ರಾಮಾಯಣದಂಥ ಕಥೆಗಳು ಸತ್ಯ ಹೇಳಿಕೆಗಳೂ ಅಲ್ಲ, ಸುಳ್ಳೂ ಹೇಳಿಕೆಗಳೂ ಅಲ್ಲ. ಅವು ತಮ್ಮದೇ ಆದ ರೀತಿಯಲ್ಲಿ ಮನುಷ್ಯ ಜನಾಂಗದ ಕಲಿಕೆಯ ಸಾಧನಗಳಾಗಿವೆ. ಇಂಥ ಕಲಿಕೆಯಲ್ಲಿ ಸತ್ಯ-ಸುಳ್ಳುಗಳ ಪ್ರಶ್ನೆ ಅಪ್ರಸ್ತುತವಾಗುತ್ತದೆ. ಅದು ಹೇಗೆಂಬುದನ್ನು ತಿಳಿದುಕೊಳ್ಳಲು ಅಂಥ ಕಲಿಕೆಯನ್ನು ಇನ್ನೂ ಉಳಿಸಿಕೊಂಡು ಬಂದ ಪೌರ್ವಾತ್ಯ ಸಂಸ್ಕೃತಿಯನ್ನು ಅಧ್ಯಯನಕ್ಕೊಳಪಡಿಸಬೇಕಾಗಿದೆ. ನಮ್ಮ ಇತಿಹಾಸ-ಪುರಾಣಗಳ ಸಂದರ್ಭದಲ್ಲಿ ಅವು ನಮಗೇನು ಕಲಿಸುತ್ತವೆ? ಹೇಗೆ ಕಲಿಸುತ್ತವೆ? ಇತ್ಯಾದಿ ಪ್ರಶ್ನೆಗಳು ಪ್ರಯೋಜಕವಾಗಬಹುದೇ ಹೊರತೂ ಅವುಗಳಲ್ಲಿ ಉಲ್ಲೇಖಿತವಾದ ಘಟನೆಗಳು ನಿಜವಾಗಿಯೂ ನಡೆದವೋ ಇಲ್ಲವೋ ಎಂಬ ಪ್ರಶ್ನೆಗಳಲ್ಲ. ಇಂಥ ಪ್ರಶ್ನೆಗಳನ್ನು ಕೇಳುತ್ತಿರುವವರು ಅದಾಗಲೇ ಇಂಥ ಕೃತಿಗಳ ಜೊತೆಗಿನ ತಮ್ಮ ಸಾಂಪ್ರದಾಯಿಕ ಕೊಂಡಿಗಳನ್ನು ಕಳಚಿಕೊಳ್ಳುತ್ತಿದ್ದಾರೆ ಅಂತಲೇ ಅರ್ಥ.

Advertisements
Categories: Uncategorized
 1. ಫೆಬ್ರವರಿ 7, 2014 ರಲ್ಲಿ 9:45 ಅಪರಾಹ್ನ

  ಮಾನ್ಯರೇ, ನಾವು ಮತ್ತು ನಮ್ಮ ಹಿಂದಿನ ತಲೆಮಾರಿನವರು ರಾಮಾಯಣವನ್ನು ನಂಬುತ್ತಿದ್ದರು. ಅವರು ಎಂತಹ ವಿದ್ಯಾವಂತರಾಗಿರಲಿ, ರಾಜ ಮಹರಾಜರಾಗಿರಲಿ,ಅಧಿಕಾರಿಗಳಾಗಿರಲಿ ನಂಬುತ್ತಿದ್ದರು. ಅನುಸರಿಸುತ್ತಿದ್ದರು. ಈಗ ವಿದೇಶಿಗಳೇನು ನಮ್ಮ ಹಿಂದುಗಳೇ ಅದನ್ನು ಕೈಬಿಡುತ್ತಿದ್ದಾರೆ. ರಾಮನಂತೆ ಆದರ್ಶಪುರುಷನಾಗಿ, ಏಕ ಪತ್ನಿವ್ರತಸ್ಠನಾಗಿ,ತನ್ನ ಹಿರಿಯರು ಮತ್ತು ನಾನು ಕೊಟ್ಟಮಾತನ್ನು ಮರೆಯಬಾರದು ತಪ್ಪಲೂ ಬಾರದು ಎಂಬು ನೀತಿಯಿಂದ ಬದುಕುತ್ತಿದ್ದರು. ಅಧಿಕಾರದ ತ್ಯಾಗ ಮತ್ತು ತಮ್ಮಂದಿರನ್ನು ಗೌರವಿಸುವುದು. ಪ್ರಜೆಗಳನ್ನು ಪ್ರೀತಿಸುವುದು. ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ನೀಡುವಂತಹ ಅವನ ನೀತಿಯನ್ನು ಪಾಲಿಸುತ್ತಿದ್ದರು. ಇನ್ನು ಹಾಗೆಯೇ ಲಕ್ಷಣ ಅಣ್ಣನೆಂದರೆ,ಗೌರವ. ಅಣ್ಣನ ಮಾತು ಮತ್ತು ನೀತಿಯನ್ನು ಗೌರವಿಸುವುದು.ಅವನ ಸಹಚರನಾಗಿ ತನ್ನ ಹೆಂಡತಿಯನ್ನು ಬಿಟ್ಟು ಅಣ್ಣನೊಂದಿಗೆ ೧೪ ವರುಷಗಳನ್ನು ವನವಾಸ ಅನುಭವಿಸಿದ್ದು.ದೊಡ್ಡ ಗುಣವಲ್ಲವೇ, ಇನ್ನು ಸೀತೆ, ಗಂಡನ ಮಾತಿಗೆ ಯಾವಾಗಲು ಎದುರಾಡಲಿಲ್ಲ. ಅವನ ನಿರ್ದಾರಕ್ಕೆ ಯಾವುದೇ ಪ್ರತಿಕ್ರಿಯೆ ತೋರದೆ ರಾಮನಾಮದಲ್ಲೇ ಜೀವನ ಕಳೆದಿದ್ದಾಳೆ. ಇನ್ನು ಭರತ ಶತೃಘ್ನರು ೧೪ ವರುಷಗಳು ರಾಜ್ಯಭಾರಮಾಡುವ ಮತ್ತು ಸಿಂಹಾಸನವೇರುವ ಅವಕಾಶ ಸಿಕ್ಕಿದರೂ ಸಹ ಅಣ್ಣನಿಗಾಗಿ ತಮ್ಮ ಸುಖವನ್ನು ತ್ಯಾಗ ಮಾಡಿ, ತನ್ನಣ್ಣನ ಪಾದುಕೆಯನ್ನೇ ಸಿಂಹಾಸನದ ಮೇಲಿಟ್ಟು ಅವನ ಅದರ್ಶದಲ್ಲೇ ರಾಜ್ಯಭಾರ ಮಾಡಿದವರು. ಇದನ್ನೇಲಾ ಬಹುತೇಕ ನಮ್ಮ ಭಾರತೀಯರು ಅನುಸರಿಸುತ್ತಿದ್ದರು. ಈಗ ತಾವೇ ವಿಚಾರವಾದಿಗಳು, ಆಧಾರ ಮತ್ತು ದಾಖಲೆಗಳಿಲ್ಲದೆ ಯಾವುದೇ ಕತೆಯನ್ನು ನಂಬುವುದು ತುಂಬಾ ಮೂರ್ಖತನ. ಎಂದು ವಾದಿಸುತ್ತಾ, ಧರ್ಮವನ್ನು ಕೈಬಿಡುತ್ತಿದ್ದಾರೆ.

  Like

 2. sharu
  ಫೆಬ್ರವರಿ 7, 2014 ರಲ್ಲಿ 11:41 ಅಪರಾಹ್ನ

  ಪುರಾಣದ ಕೆಲವು ಘಟನೆಗಳಿಗೆ ಇಂದೂ ಸಹ ಆಧಾರಗಳು ಸಿಗುತ್ತಿವೆಯಲ್ಲ? ಉಧಾಹರಣೆಗೆ ರಾಮಸೇತು. ಇದು ರಾಮಾಯಣದಲ್ಲಿ ಎಲ್ಲಿ ಹೇಳಲ್ಪಟ್ಟಿದೆಯೋ ಅಲ್ಲೇ ಇದೆ. ಇನ್ನು ಮಹಾಭಾರತದಲ್ಲಿ ಬ್ರಹ್ಮಾಸ್ತ್ರ ಪ್ರಯೋಗ ಇದು ಸಹ ಬ್ರಹ್ಮಾಸ್ತ್ರ ಪ್ರಯೋಗದಿಂದ ಯಾವ ಹಾನಿ ಆಗುತ್ತವೆಂದು ಅವತ್ತು ಹೆಳಿದ್ದರೋ ಅವೆ ಹಾನಿಗಳು ಇವತ್ತಿನ ನ್ಯೂಕ್ಲಿಯರ್ ಬಾಂಬಿನಿಂದ ಆಗುತ್ತವೆ. ಪೃಥ್ವಿ ನಾಶಮಾಡುವ ಅವಿಷ್ಕಾರಗಳು ಅವತ್ತು ಇದ್ದವೆಂದೇ ಅರ್ಥವಲ್ಲವೆ? ಇನ್ನು ರಾಮಾಯಣ ಮಹಾಭಾರತ ಕಥೆಗಳು ಕೇವಲ ರೋಚಕ ಕಥೆಗಳಾದರೂ ಸಮಾಜ ಜನಜೀವನ ಆಡಳಿತ ಇತ್ಯಾದಿ ತಿಳಿಯಲು ಇವು ಉಪಯೋಗಿ ಆಗುತ್ತಿವೆ. ಭಾರತದ ಅನೇಕ ರಾಜರ ಬಗ್ಗೆ ತಿಳಿದು ಕೊಳ್ಳುವದು ಇಂಥ ಕಾವ್ಯಗಳಿಂದ ಮತ್ತು ಸಾಹಿತ್ಯಗಳಿಂದಲೇ ಅಲ್ಲವೆ??

  Like

 3. sharu
  ಫೆಬ್ರವರಿ 7, 2014 ರಲ್ಲಿ 11:45 ಅಪರಾಹ್ನ

  ಸಾಹಿತ್ಯದಲ್ಲಿ ಅನೇಕ ಅಂಶಗಳು ರೋಚಕತೆಗಳಿಂದ ಕೂಡಿದ್ದರೂ ಕೂಡ ಕೆಲವಾದರೂ ಸತ್ಯ ಅಂಶಗಳಿರುತ್ತವೆ ಅಲ್ಲವೆ? ಉದಾಹರಣೆಗೆ ಪಂಪ ಬರೆದ ವಿಕ್ರಮಾರ್ಜುನ ವಿಜಯವು ಅನೇಕ ರೋಚಕ ಅಂಶಗಳಿಂದ ಕೂಡಿದ್ದರೂ ಕೂಡ ತೈಲಪ ಇರಿವ ಬೆಡಂಗ ರಂಥ ಹೆಸರಿನ ರಾಜರಿದ್ದರು ಇತ್ಯಾದಿ ಕೆಲವು ಅಂಶಗಳಾದರೂ ಸತ್ಯವಲ್ಲವೆ?

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: