ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Cultural Studies, Culture, Religion > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 43 :ದೇವರು ಮೃತರ ಆತ್ಮಕ್ಕೆ ಶಾಂತಿಯನ್ನು ಕರುಣಿಸಬಹುದೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಯಾರಾದರೂ ತೀರಿಕೊಂಡಾಗ ಸಂತಾಪ ಸೂಚನೆಯನ್ನು ಮಾಡುವುದು ಇಂದು ಸಾಮಾನ್ಯವಾಗಿ ಕಂಡುಬರುವ ವಿಷಯ. ತೀರಿಕೊಂಡವರು ವಿಧಿವಶರಾಗುತ್ತಾರೆ ಇಲ್ಲವೆ ಅವರವರ ಮತಗಳಿಗನುಸಾರವಾಗಿ ಕೈಲಾಸವಾಸಿಗಳೋ, ವೈಕುಂಠವಾಸಿಗಳೋ ಆಗುತ್ತಾರೆ. ಇಂಥ ವಿಧಿವಶರಾದವರು ಗಣ್ಯ ವ್ಯಕ್ತಿಗಳಾಗಿದ್ದರೆ ಇತರ ಗಣ್ಯ ವ್ಯಕ್ತಿಗಳು, ಅದರಲ್ಲೂ ರಾಜಕಾರಣಿಗಳು ಪೈಪೋಟಿಯ ಮೇಲೆ ಪತ್ರಿಕೆಗಳಲ್ಲಿ ಸಂತಾಪವನ್ನು ಸೂಚಿಸುತ್ತಾರೆ. ಸಂತಾಪ ಸೂಚಕ ಸಭೆಗಳೂ ನಡೆಯುತ್ತವೆ. ಸಂತಾಪ ಸೂಚನೆ ಕೂಡ ಅವರವರ ಮಟ್ಟಕ್ಕನುಗುಣವಾಗಿ ಸಂಸ್ಥೆಯ ಮಟ್ಟದಿಂದ ಹಿಡಿದು ರಾಜ್ಯ, ರಾಷ್ಟ್ರ ಮಟ್ಟದ ವರೆಗೆ ನಡೆಯುತ್ತದೆ. ಆಗ ಎಲ್ಲರೂ ಮಾಡುವ ಒಂದು ಕೆಲಸವೆಂದರೆ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುವುದು. ಅದರಲ್ಲೂ ಆಸ್ತಿಕರಾದವರು ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂಬುದಾಗಿ ಕೋರುತ್ತಾರೆ. ಅದು ಈಡೇರುವ ಸಲುವಾಗಿ ಮೌನವಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ಮೌನಾಚರಣೆಯು ನಮ್ಮ ಸೆಕ್ಯುಲರ್ ಸಂಸ್ಥೆಗಳಲ್ಲಿ ಒಂದು ನಿಮಿಷ ಸ್ತಬ್ಧವಾಗಿ, ನಿಃಶ್ಯಬ್ದವಾಗಿ ನಿಂತುಕೊಳ್ಳುವುದರ ರೂಪದಲ್ಲಿ ನಡೆಯುತ್ತದೆ. ಬಹುಶಃ ಇದು ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುವ ಸೆಕ್ಯುಲರ್ ರೂಪವಿರಬಹುದು. ಇಲ್ಲಿ ದೇವರು ಅದನ್ನು ಕರುಣಿಸುವುದರ ಬದಲಾಗಿ ಮನುಷ್ಯರೇ ಅದಕ್ಕಾಗಿ ಕೋರುತ್ತಾರೆ. ಯಾರನ್ನು ಎಂದು ಕೇಳಬೇಡಿ, ಅದು ಅವರಿಗೂ ಹೇಳಲಾಗದ ವಿಷಯ.

ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಲ್ಪ ಸ್ವಲ್ಪ ಜ್ಞಾನವಿರುವವರಿಗೆ ಈ ಮೇಲಿನ ಕ್ರಿಯೆಯು ಅಸಂಬದ್ಧವಾಗಿ ಕಾಣಿಸುವುದರಲ್ಲಿ ಸಂದೇಹವಿಲ್ಲ. ಮೃತರ ಆತ್ಮ ಎಂದರೇನು? ಅದಕ್ಕೆ ಶಾಂತಿಯನ್ನು ದೇವರು ಕರುಣಿಸುವುದೆಂದರೆ, ಮನುಷ್ಯರು ಕೋರುವುದೆಂದರೆ ಏನು? ಅದೆಲ್ಲ ಹೋಗಲಿ ಆತ್ಮಕ್ಕೆ ಶಾಂತಿಯನ್ನು ಕೋರುವುದೆಂದರೇನು? ಆತ್ಮವು ಅಶಾಂತವಾಗಿರುತ್ತದೆ ಎಂಬುದಾಗಿ ನಮ್ಮ ಯಾವ ಸಂಪ್ರದಯಗಳೂ ಹೇಳಿಲ್ಲ. ಅದು ಶಾಂತಿ-ಅಶಾಂತಿ, ಸುಖ-ದುಃಖ, ಪಾಪ-ಪುಣ್ಯ ಮುಂತಾದ ದ್ವಂದ್ವಗಳಿಂದ ಮುಕ್ತವಾದ ಸ್ಥಿತಿಯಾಗಿದೆ. ಇವೆಲ್ಲವೂ ಜೀವನಿಗೆ ಅಂಟಿಕೊಂಡ ಸ್ಥಿತಿಗಳು. ಈ ಸ್ಥಿತಿಗಳಿಂದ ಮುಕ್ತನಾಗುವುದೇ ಆತ್ಮವನ್ನು ಕಂಡುಕೊಳ್ಳುವ ಮಾರ್ಗ. ಹಾಗಾಗಿ ನಮ್ಮಲ್ಲಿ ಅತೃಪ್ತ ಆತ್ಮಗಳು, ಅಶಾಂತ ಆತ್ಮಗಳು ಅರ್ಥವಾಗದ ಸಂಗತಿಗಳು. ಹಾಗೂ ಆತ್ಮಗಳು ಚಿರಶಾಂತಿಯಲ್ಲಿ ನಿದ್ರಿಸುವುದು ಕೂಡ ಅಸಾಧ್ಯ. ಹಾಗಾದರೆ ನಾವೇಕೆ ಇಂಥ ಅರ್ಥವಾಗದ ವಾಕ್ಯಗಳನ್ನು, ವ್ಯವಹಾರಗಳನ್ನು ರೂಢಿಸಿಕೊಂಡಿದ್ದೇವೆ?

ಶಿಷ್ಟಾಚಾರಕ್ಕಾಗಿ ಇಂಥ ಅನೇಕ ಆಚರಣೆಗಳನ್ನು ಹಾಗೂ ಮಾತುಗಳನ್ನು ಬಳಸುವ ಪ್ರಸಂಗಗಳು ಆಗಾಗ ಬರುತ್ತವೆ. ಅವಕ್ಕೆಲ್ಲ ಬಹಳ ಅರ್ಥವನ್ನು ಹಚ್ಚಲು ಹೋಗಬಾರದು ಎಂಬುದಾಗಿ ನೀವು ಅಭಿಪ್ರಾಯ ಪಡಬಹುದು. ನಾನಿಲ್ಲ ಆ ಕುರಿತು ಆಕ್ಷೇಪಣೆಯನ್ನು ಎತ್ತುತ್ತಿಲ್ಲ. ಇದು ಕೇವಲ ಈ ಆಚರಣೆಗೆ ಮಾತ್ರವೇ ಸೀಮಿತವಾದ ಸಂಗತಿಯಾಗಿದ್ದಲ್ಲಿ ಏನೂ ತೊಂದರೆಯಿಲ್ಲ. ಈ ವಾಕ್ಯದಲ್ಲಿ ಬರುವ ಆತ್ಮ ಎಂಬುದು ಇಂಗ್ಲೀಷಿನ ಸೋಲ್ ಎಂಬ ಶಬ್ದದ ತಜರ್ುಮೆಯಾಗಿದೆ. ಈ ವಾಕ್ಯವು may his/her soul rest in peace ಎಂಬ ವಾಕ್ಯದ ಅನುವಾದವಾಗಿದೆ. ಸೋಲ್ ಎಂಬುದನ್ನು ಆತ್ಮ ಎಂಬುದಾಗಿ ಪರಿಭಾವಿಸಿರುವುದರಿಂದ ಈ ಮೇಲೆ ಉಲ್ಲೇಖಿಸಿದ ಕನ್ನಡದ ವಾಕ್ಯಗಳು ಸೃಷ್ಟಿಯಾಗಿವೆ. ಈ ಭಾಷಾಂತರವನ್ನು ನಮ್ಮ ಅಧ್ಯಾತ್ಮದ ಸಂದರ್ಭದಲ್ಲಿ ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಅದು ಭಾರತೀಯ ಸಂಸ್ಕೃತಿಯ ಕುರಿತ ಅಜ್ಞಾನವನ್ನು ಹೆಚ್ಚಿಸುವ ಕೆಲಸವನ್ನೂ ಕೂಡ ಮಾಡುತ್ತದೆಯಾದ್ದರಿಂದ ಅದರ ಅರ್ಥವನ್ನು ಕೆದಕುವುದು ಅಗತ್ಯ.

ಕ್ಯಾಥೋಲಿಕ್ ಕ್ರೈಸ್ತರ ಕಾಲದಿಂದಲೂ ಸತ್ತವರನ್ನು ಹೂಳುವಾಗ ಮಾಡುತ್ತಿದ್ದ ಪ್ರಾರ್ಥನೆ ಇದು. ಅವರ ಸಮಾಧಿಯ ಕಲ್ಲುಗಳ ಮೇಲೆ ಈ ಸಾಲನ್ನು ಕೆತ್ತಿಸುವುದು ಕ್ರೈಸ್ತರಲ್ಲಿ ಪ್ರಚಲಿತದಲ್ಲಿ ಬಂದಿತು. ಸೋಲ್ ಎಂದರೆ ಮನುಷ್ಯನ ಆಂತರಿಕ ಜಗತ್ತು, ಅಥವಾ ವ್ಯಕ್ತಿತ್ವ. ಅದು ಅವನ ಮನಸ್ಸು, ಭಾವನೆ, ಸಂಕಲ್ಪ, ಗುರಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬನಿಗೂ ಅದನ್ನು ಭ್ರೂಣಾವಸ್ಥೆಯಲ್ಲೇ ಗಾಡ್ ಸೃಷ್ಟಿಸುತ್ತಾನೆ. ದೇಹ ಹಾಗೂ ಸೋಲ್ಗಳೆರಡೂ ಒಟ್ಟಾಗಿ ಒಬ್ಬನು ಮನುಷ್ಯನೆಂದೆನಿಸಿಕೊಳ್ಳುತ್ತಾನೆ. ಆ ವ್ಯಕ್ತಿ ಸತ್ತ ನಂತರ ಅವನ ದೇಹ ಹಾಗೂ ಸೋಲ್ಗಳು ಪ್ರತ್ಯೇಕವಾಗುತ್ತವೆ. ಸಮಾಧಿಯಲ್ಲಿ ದೇಹವು ನಾಶವಾದರೂ ಸೋಲ್ ಹಾಗೇ ಅಂತಿಮ ನಿರ್ಣಯಕ್ಕಾಗಿ ಕಾದಿರುತ್ತದೆ. ಅಂತಿಮ ನಿರ್ಣಯವೆಂಬುದು ಸೆಮೆಟಿಕ್ ರಿಲಿಜನ್ನುಗಳಿಗೇ ವಿಶಿಷ್ಠವಾದ ಪರಿಕಲ್ಪನೆಯಾಗಿದೆ. ಸಮಾಧಿಯಲ್ಲಿರುವ ಸೋಲ್ಗಳಿಗೆಲ್ಲಾ ಮರುಜೀವವನ್ನು ಕೊಟ್ಟು ಅವು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸಿನ್ (ಗಾಡ್ನ ಆಜ್ಞೆಯನ್ನು ಉಲ್ಲಂಘಿಸುವುದು)ಗಳನ್ನು ಲೆಕ್ಕಹಾಕಿ ಅವು ಸ್ವರ್ಗ(ಪ್ಯಾರಡೈಸ್) ಲೋಕಕ್ಕೆ ಹೋಗಬೇಕೋ ನರಕಕ್ಕೆ (ಹೆಲ್) ಹೋಗಬೇಕೋ ಎನ್ನುವುದನ್ನು ಗಾಡ್ ಅಂತಿಮವಾಗಿ ನಿರ್ಣಯಿಸುತ್ತಾನೆ.

ಸೋಲ್ ಎನ್ನುವುದರ ಸ್ವರೂಪವೇನು, ಸಮಾಧಿಯಲ್ಲಿ ಅದು ಹೇಗೆ ಇರುತ್ತದೆ, ಅಂತಿಮ ನಿರ್ಣಯವು ಯಾವಾಗ ನಡೆಯುತ್ತದೆ, ಹೇಗೆ ನಡೆಯುತ್ತದೆ ಎಂಬುದರ ಕುರಿತು ಕ್ರೈಸ್ತರಲ್ಲಿ ವಿವಿಧ ಮತಗಳಿವೆ. ಆದರೆ ಸಮಾಧಿಯಲ್ಲಿ ಸೋಲ್ ಅಂತಿಮ ನಿರ್ಣಯಕ್ಕೆ ಕಾದುಕೊಂಡಿರುತ್ತದೆ ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ಅದು ಎಚ್ಚರಾಗಿರುತ್ತದೆ ಎಂದು ಕೆಲವರು ಹೇಳಿದರೆ ಕೆಲವರು ನಿದ್ರಿಸುತ್ತದೆ ಎನ್ನುತ್ತಾರೆ. ಸತ್ತವನ ದೇಹವನ್ನು ಹೂಳುವಾಗ ಸಮಾಧಿಯೊಳಗೆ ಅಂತಿಮ ನಿರ್ಣಯದ ಕ್ಷಣಗಳನ್ನು ಎಣಿಸುತ್ತಾ ಅದು ಶಾಂತಿಯಿಂದ ನಿದ್ರಿಸಲಿ ಅಥವಾ ವಿಶ್ರಮಿಸಲಿ ಎಂಬುದಾಗಿ ಹಾರೈಸುವ ಸಲುವಾಗಿ may his/her soul rest in peace ಎಂಬ ಹೇಳಿಕೆ ಹುಟ್ಟಿಕೊಂಡಿದೆ. ಇಂಥ ಆಚರಣೆಯನ್ನು ಪಾಶ್ಚಾತ್ಯರು ಅದರಲ್ಲೂ ವಸಾಹತು ದೊರೆಗಳು ಭಾರತಕ್ಕೆ ತಂದಾಗ ಈ ಹೇಳಿಕೆಯೂ ಸಂತಾಪ ಸೂಚನೆಯ ಭಾಗವಾಗಿ ಇಲ್ಲಿಗೆ ಬಂದಿದೆ. ಭಾರತೀಯ ಪ್ರಜೆಗಳು ತಮ್ಮ ಸಂದರ್ಭಕ್ಕೆ ತಕ್ಕಂತೆ ಈ ಆಚರಣೆ ಹಾಗೂ ಹೇಳಿಕೆಯನ್ನು ಅಳವಡಿಸಿಕೊಂಡಿದ್ದಾರೆ. ಅದರಲ್ಲೂ ಸರ್ಕಾರೀ ಸಂದರ್ಭದಲ್ಲಿ ಈ ಸಂಗತಿಗಳು ಪ್ರಸ್ತುತವಾಗಿವೆ ಎಂಬುದು ಮುಖ್ಯ. ಸೋಲ್ ಎಂಬುದನ್ನು ಆತ್ಮ ಎಂಬುದಾಗಿ ಭಾಷಾಂತರಿಸಿಕೊಳ್ಳಲಾಯಿತು. ಇಲ್ಲಿ ಮೃತದೇಹವನ್ನು ಸುಡುವ ಆಚರಣೆ ಪ್ರಧಾನವಾಗಿದೆ. ಹಾಗಾಗಿ ವಿಶ್ರಮಿಸಲಿ, ಮಲಗಲಿ ಇತ್ಯಾದಿ ಶಬ್ದಗಳು ಅಪ್ರಸ್ತುತವಾದವು.

ಆದರೆ ಭಾರತೀಯ ಸಂಸ್ಕೃತಿಯಲ್ಲಿ ಈ ವಾಕ್ಯದ ಅನುವಾದವು ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುವಂತಹ ಅರ್ಥವಿಲ್ಲದ ವಾಕ್ಯಗಳನ್ನು ಸೃಷ್ಟಿಸುತ್ತದೆ. ಸೋಲ್ ಎಂಬುದನ್ನು ಆತ್ಮ ಎಂಬುದಾಗಿ ತರ್ಜುಮೆ ಮಾಡಲು ಸಾಧ್ಯವಿಲ್ಲ. ಆತ್ಮ ಎಂಬುದು ಮನಸ್ಸು, ಬುದ್ಧಿ, ಅಹಂಕಾರ, ಇತ್ಯಾದಿಗಳಿಗೆ ಅತೀತವಾದುದು ಎಂಬುದಾಗಿ ನಮ್ಮ ಸಂಪ್ರದಾಯಗಳು ಹೇಳುತ್ತವೆ. ಆತ್ಮವೆಂದರೆ ವ್ಯಕ್ತಿತ್ವವಲ್ಲ. ನಮ್ಮಲ್ಲಿ ಜೀವಾತ್ಮ ಹಾಗೂ ಪರಮಾತ್ಮ ಎಂಬ ಕಲ್ಪನೆಗಳಿವೆ. ಭಾಷಾಂತರಕಾರರು ಅವನ್ನು ಇಂಡಿವಿಜುವಲ್ ಸೋಲ್ ಹಾಗೂ ಯುನಿವರ್ಸಲ್ ಸೋಲ್ ಎಂಬುದಾಗಿ ತರ್ಜುಮೆಮಾಡಿ ಕೈತೊಳೆದುಕೊಂಡಿದ್ದಾರೆ. ಆದರೆ ಸೋಲ್ ಕಲ್ಪನೆಯಲ್ಲಿ ಸಾರ್ವತ್ರಿಕ ಅಥವಾ ವಿಶ್ವವ್ಯಾಪಿ ಎಂಬುದಕ್ಕೆ ಏನರ್ಥ ಇರಲಿಕ್ಕೆ ಸಾಧ್ಯ? ಮನುಷ್ಯನೊಬ್ಬನ ವ್ಯಕ್ತಿ ವಿಶಿಷ್ಟತೆಗೆ ಅದು ಸಂಬಂಧಪಟ್ಟಿದೆ.

ಈ ಸಮಸ್ಯೆ ಏಕೆ ಏಳುತ್ತದೆಯೆಂದರೆ ಸೋಲ್ ಎಂಬುದು ಥಿಯಾಲಜಿಗೇ ವಿಶಿಷ್ಟವಾದ ಪರಿಭಾಷೆಯಾಗಿದೆ. ಅದನ್ನು ನಮ್ಮ ಆತ್ಮ ಎಂಬ ಪರಿಕಲ್ಪನೆಗೆ ಸಮೀಕರಿಸುವಂತಿಲ್ಲ. ಹಾಗಾದರೆ ಈ ಅನುವಾದವನ್ನು ಮಾಡಿದವರಿಗೆ ಇಷ್ಟು ಸಾಮಾನ್ಯ ವಿಷಯ ಗೊತ್ತಾಗಲಿಲ್ಲವೆ ಎಂಬ ಪ್ರಶ್ನೆ ಏಳುವುದು ಸಹಜ. ಈ ಅನುವಾದವನ್ನು ಹುಡುಕಿದ ಪಂಡಿತರಿಗೆ ಆತ್ಮದ ಕುರಿತು ಬರುವ ವರ್ಣನೆಗಳು ಗೊತ್ತಿರಲಿಲ್ಲವೆ? ಅದು ಹೋಗಲಿ ಈಗಲೂ ಈ ಶಬ್ದವನ್ನೇ ಉಪಯೋಗಿಸಿ ನಮ್ಮ ಅಧ್ಯಾತ್ಮವನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡುತ್ತಿರುವ ತತ್ವಶಾಸ್ತ್ರಜ್ಞರು, ಸನ್ಯಾಸಿಗಳು, ಮುಂತಾದವರಿಗೆ ತಾವು ಪಾಶ್ಚಾತ್ಯರಿಗೆ ಹೇಳಬೇಕಾದ್ದನ್ನು ಹೇಳುತ್ತಿದ್ದೇವೆ ಎಂಬ ವಿಶ್ವಾಸ ಎಲ್ಲಿಂದ ಬರುತ್ತದೆ?

ಅದು ಥಿಯಾಲಜಿಯ ಪರಿಭಾಷೆಯೆಂಬುದು ನಮಗೆ ಗೊತ್ತಿದ್ದರೆ ಅದು ಕ್ರೈಸ್ತರಿಗೇ ವಿಶಿಷ್ಟವಾದುದು ಎಂಬುದು ಕೂಡ ಸ್ಪಷ್ಟವಾಗಿಯೇ ಗೊತ್ತಿರುತ್ತಿತ್ತೇನೋ. ಆದರೆ ನಮಗೆ ಈ ಪರಿಭಾಷೆಯು ನೇರವಾಗಿ ಥಿಯಾಲಜಿಯಿಂದ ಬರಲಿಲ್ಲ. ರಿಲಿಜನ್ನಿನ ಕುರಿತ ಸೆಕ್ಯುಲರ್ ಸಿದ್ಧಾಂತಗಳಿಂದ ಬಂದಿದೆ. ಹಾಗಾಗಿ ಅದು ಪ್ರಪಂಚದ ಯಾವುದೇ ಸಂಸ್ಕೃತಿಯ ಕುರಿತೂ ವೈಜ್ಞಾನಿಕವಾಗಿ ಮಾತನಾಡಲು ಸಮರ್ಪಕವಾದ ಪರಿಭಾಷೆ ಎಂಬ ಧೋರಣೆ ಹುಟ್ಟುತ್ತದೆ. ಪಾಶ್ಚಾತ್ಯ ರಿಲಿಜನ್ನಿನ ಅಧ್ಯಯನಗಳು ಥಿಯಾಲಜಿಯದೇ ಪರಿಭಾಷೆಗಳನ್ನು ತಮ್ಮ ಪ್ರಪಂಚ ವರ್ಣನೆಯ ಭಾಷೆಯನ್ನಾಗಿ ಸ್ವೀಕರಿಸಿದವು. ಅದರ ಪರಿಣಾಮವೆಂದರೆ ಥಿಯಾಲಜಿಯೇ ತನ್ನ ರೂಪವನ್ನು ಮರೆಮಾಚಿಕೊಂಡು ರಿಲಿಜನ್ನಿನ ವಿಜ್ಞಾನವಾಗಿ ಬದಲಾಗಿದೆ. ಈ ಪ್ರಕ್ರಿಯೆ ಹೇಗಾಗಿದೆಯೆಂದರೆ ಥಿಯಾಲಜಿಯ ಶಬ್ದಗಳು ಪಾಶ್ಚಾತ್ಯರ ದಿನನಿತ್ಯದ ಭಾಷೆಯ ಒಂದು ಭಾಗವಾಗಿ ಸೆಕ್ಯುಲರ್ ಜಗತ್ತಿನಲ್ಲಿ ಸೇರಿಕೊಂಡವು. ನಂತರ ಸೆಕ್ಯುಲರ್ ವಿಜ್ಞಾನಗಳು ಬೆಳೆದು ಬರುವ ಕಾಲದಲ್ಲಿ ಇವೇ ಅನ್ಯ ಸಂಸ್ಕೃತಿಗಳ ಚಿತ್ರಣದ ಪರಿಭಾಷೆಗಳಾಗಿ ಅವತಾರ ತಳೆದವು. ಅಂಥ ಚಿತ್ರಣಗಳು ಥಿಯಾಲಜಿಯಾಗಿ ಪಾಶ್ಚಾತ್ಯ ಸಮಾಜ ಶಾಸ್ತ್ರಜ್ಞರಿಗೆ ಕಾಣಿಸಲಿಲ್ಲ. ಹಾಗಾಗಿ ಪ್ರಪಂಚದ ಇತರ ಸಂಸ್ಕೃತಿಗಳೂ ಕೂಡ ಗೊತ್ತಿಲ್ಲದಂತೇ ರಿಲಿಜನ್ನಿನ ಪರಿಭಾಷೆಯಲ್ಲಿ ಚಿತ್ರಣಗೊಂಡವು. ಇಂಥ ಚಿತ್ರಣಗಳು ಪಾಶ್ಚಾತ್ಯರಿಗೆ ತಮ್ಮ ರಿಲಿಜನ್ನು ಎಲ್ಲೆಡೆಯಲ್ಲೂ ಇದೆ ಎಂಬ ಭ್ರಮೆಯನ್ನು ಹುಟ್ಟಿಸುತ್ತವೆ. ತೀರಾ ಅಪರಿಚಿತವಾದ ಸಂಸ್ಕೃತಿಯೂ ಅವರಿಗೆ ಅರ್ಥವಾದಂತೇ, ಪರಿಚಿತವಾಗಿರುವಂತೇ ಕಾಣಿಸತೊಡಗುತ್ತವೆ. ಸಂಸ್ಕೃತಿಗಳ ನಿಜವಾದ ವ್ಯತ್ಯಾಸವು ಬುದ್ಧಿಗೆ ನಿಲುಕುವುದಿಲ್ಲ.

ಸೋಲ್ ಎಂಬ ಪರಿಕಲ್ಪನೆಯ ವೈಶಿಷ್ಟ್ಯತೆಯಿಂದಾಗಿಯೇ ಮನುಷ್ಯರ ಕುರಿತು ಪಾಶ್ಚಾತ್ಯರ ಚಿಂತನಾಕ್ರಮ ಹಾಗೂ ತಿಳುವಳಿಕೆಗಳಿಗೆ ವಿಶಿಷ್ಟತೆಯೊಂದು ಪ್ರಾಪ್ತವಾಗಿದೆ. ಅವರ ಪ್ರಕಾರ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಣಯಿಸುವಲ್ಲಿ ಸೋಲ್ ಅತ್ಯಂತ ನಿರ್ಣಾಯಕವಾದ ಪಾತ್ರವನ್ನು ಹೊಂದಿದೆ. ಅಷ್ಟೇ ಅಲ್ಲ, ಪಾಶ್ಚಾತ್ಯ ಸಾಮಾಜಿಕ ಚಿಂತನೆಗಳಲ್ಲಿ ವ್ಯಕ್ತಿಗೆ ಸಮುದಾಯಕ್ಕಿಂತಲೂ ನಿರ್ಣಾಯಕವಾದ ಸ್ಥಾನವು ಕಲ್ಪಿತವಾಗಿದೆ. ವ್ಯಕ್ತಿವಾದವೂ (ಇಂಡಿವಿಜ್ಯುವಲಿಸಂ) ಅಲ್ಲಿಂದಲೇ ಹುಟ್ಟುತ್ತದೆ. ಒಬ್ಬ ವ್ಯಕ್ತಿಯ ವೈಶಿಷ್ಟ್ಯತೆಯ ಹಿಂದೆ ಕಾರಣವಿದೆ. ಏಕೆಂದರೆ ಅದು ಗಾಡ್ನ ಸೃಷ್ಟಿಯಾಗಿರುವುದರಿಂದ ಅವನ ಉದ್ದೇಶ ಹಾಗೂ ಇಚ್ಛೆ ಅದರ ಹಿಂದಿದೆ. ಈ ಲೋಕದಲ್ಲಿ ವ್ಯಕ್ತಿಯೊಬ್ಬನು ಗಾಡ್ನ ಇಚ್ಛೆಗೆ ಹಾಗೂ ಉದ್ದೇಶಕ್ಕೆ ಅನುಗುಣವಾಗಿ ಕರ್ತೃತ್ವವನ್ನು ನಿರ್ವಹಿಸಲು ಅದು ಸಾಧನವಾಗಿದೆ. ಅದಕ್ಕೆ ಆತ್ಯಂತಿಕ ಬೆಲೆಯನ್ನು ನೀಡಬೇಕು, ಅದನ್ನು ಕಡೆಗಣಿಸುವುದು ಅಥವಾ ಹತ್ತಿಕ್ಕುವುದು ಅಪರಾಧವಾಗುತ್ತದೆ. ಅದರದೇ ಸೆಕ್ಯುಲರ್ ರೂಪವಾಗಿ ‘ಸೆಲ್ಫ್’ (ನನ್ನತನ) ಎಂಬುದು ಪಾಶ್ಚಾತ್ಯ ಮನೋವಿಜ್ಞಾನ, ರಾಜನೀತಿ, ಸಮಾಜಶಾಸ್ತ್ರಗಳಲ್ಲೆಲ್ಲ ನಿರ್ಣಾಯಕ ಸ್ಥಾನವನ್ನು ವಹಿಸಿತು. ವ್ಯಕ್ತಿ ಸ್ವಾತಂತ್ರ್ಯದ ಕಲ್ಪನೆ, ವ್ಯಕ್ತಿ ನೈತಿಕತೆ (ಮೊರಾಲಿಟಿ), ವ್ಯಕ್ತಿ ಮತ್ತು ಸಮಾಜಗಳ ನಡುವಿನ ಸಂಬಂಧದ ಜಿಜ್ಞಾಸೆಗಳು ಇವೆಲ್ಲವೂ ಪಾಶ್ಚಾತ್ಯ ಚಿಂತನೆಯಲ್ಲಿ ಕೇಂದ್ರ ಸ್ಥಾನವನ್ನು ಗಳಿಸಲು ಅವರಿಗೆ ಸೋಲ್ ಹಾಗೂ ಸೆಲ್ಫ್ಗಳ ಕುರಿತು ಇರುವ ವಿಶೇಷ ಕಲ್ಪನೆಗಳೇ ಕಾರಣವಾಗಿವೆ. (ಈ ಕುರಿತು ಪ್ರತ್ಯೇಕವಾಗಿ ಬರೆಯುತ್ತೇನೆ) ನಮ್ಮ ಆತ್ಮ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಇಂಥ ಯಾವ ಚಿಂತನೆಯನ್ನೂ ಬೆಳೆಸಲು ಸಾಧ್ಯವಿಲ್ಲ. ಆತ್ಮಕ್ಕೆ ಬಂಧ-ಮೋಕ್ಷಗಳಾಗಲೀ, ಸುಖ-ದುಃಖಗಳಾಗಲೀ, ಪುಣ್ಯ-ಪಾಪಗಳಾಗಲೀ ಅಂಟುವುದಿಲ್ಲ.

ಒಂದು ಪರಿಭಾಷೆಯ ತರ್ಜುಮೆಯೇ ಇಷ್ಟೊಂದು ಗೊಂದಲಗಳನ್ನು ಸೃಷ್ಟಿಸುತ್ತದೆಯೆಂದಾಗ ನಮ್ಮ ಅಧ್ಯಾತ್ಮವನ್ನು ಇಂತಹ ಅನೇಕ ಶಬ್ದಗಳಿಂದ ಭಾಷಾಂತರಿಸಿಕೊಂಡ ಪಾಶ್ಚಾತ್ಯರಿಗೆ ಅದು ಏನು ಎಂಬುದು ಅರ್ಥವಾಗಲು ಎಂದಾದರೂ ಸಾಧ್ಯವೆ? ಇಂಥ ಶಬ್ದಗಳನ್ನು ಉಪಯೋಗಿಸಿಯೇ ಭಾರತೀಯರು ಕೂಡ ಪಾಶ್ಚಾತ್ಯರಿಗೆ ಅಧ್ಯಾತ್ಮದ ಮಹತ್ವವನ್ನು ತಿಳಿಸುತ್ತೇವೆ ಎಂದು ನಂಬಿಕೊಂಡಿದ್ದಾರೆ. ಇಂದು ಹಿಂದೂಯಿಸಂ ಎಂಬ ಹೆಸರಿನಲ್ಲಿ ಇಂಗ್ಲೀಷಿನಲ್ಲಿ ಇರುವ ಸಮಸ್ತ ಗ್ರಂಥರಾಶಿಯೂ ಥಿಯಾಲಜಿಯ ಪರಿಭಾಷೆಗಳನ್ನು ಉಪಯೋಗಿಸಿಯೇ ಅದನ್ನು ವರ್ಣಿಸುತ್ತದೆ. ಉದಾಹರಣೆಗೆ ರಿಲಿಜನ್(ಧರ್ಮ), ಸೇಕ್ರೆಡ್ ಪಠ್ಯ (ಪವಿತ್ರ ಗ್ರಂಥ), ಡಾಕ್ಟ್ರಿನ್ (ತತ್ವ), ಸೆಕ್ಯುಲರ್(ಜಾತ್ಯತೀತ), ಗಾಡ್ (ದೇವರು), ಡೆವಿಲ್(ದೆವ್ವ), ವರ್ಷಿಪ್(ಪೂಜೆ), ಸಿನ್(ಪಾಪ), ಸಾಲ್ವೇಶನ್(ಮುಕ್ತಿ), ಐಡೋಲೇಟ್ರಿ (ಮೂರ್ತಿಪೂಜೆ), ಇತ್ಯಾದಿ ಭಾಷಾಂತರಗಳಲ್ಲಿ ಎರಡು ಪ್ರಕ್ರಿಯೆಗಳನ್ನು ಕಾಣುತ್ತೇವೆ: 1. ಥಿಯಾಲಜಿಯ ಪರಿಭಾಷೆಗಳಿಂದ ಭಾರತೀಯ ಸಂಸ್ಕೃತಿಯಲ್ಲಿರುವ ಸಂಗತಿಗಳನ್ನು ಗುರುತಿಸುವ ಕೆಲಸ. ಆ ಪರಿಭಾಷೆಗಳಿಂದಾಗಿಯೇ ಇಲ್ಲಿ ಕ್ರಿಶ್ಚಿಯಾನಿಟಿಯಂಥದ್ದೇ ಒಂದು ರಿಲಿಜನ್ನು ಇದೆ ಎಂಬುದಕ್ಕೆ ಪ್ರಮಾಣಗಳು ಪಾಶ್ಚಾತ್ಯರ ಪಾಲಿಗೆ ಸೃಷ್ಟಿಯಾಗುತ್ತವೆ. 2. ಭಾರತೀಯರ ಪಾಲಿಗೆ ಆ ಹೊಸ ಶಬ್ದಗಳಿಗೆ ಥಿಯಾಲಜಿಯ ಹಿನ್ನೆಲೆಯಲ್ಲಿ ನೀಡಬಹುದಾದ ಅರ್ಥವೇ ದಕ್ಕುವುದಿಲ್ಲ, ಜೊತೆಗೆ ಅವುಗಳಿಗೆ ತರ್ಜುಮೆಯಾಗಿ ಬಂದ ದೇಸೀ ಶಬ್ದಗಳ ಬಳಕೆಯ ಸಂದರ್ಭವು ಪಲ್ಲಟವಾಗುವುದರಿಂದ ಈ ದೇಸೀ ಶಬ್ದಗಳ ಮೂಲ ಅರ್ಥದ ಸ್ಮೃತಿಯೂ ನಷ್ಟವಾಗುತ್ತವೆ. ಅಂದರೆ ಈ ಭಾಷಾಂತರದ ಪ್ರಕ್ರಿಯೆಯಲ್ಲಿ ಭಾರತೀಯ ಸಂಸ್ಕೃತಿಗೆ ಸೇರಿದ ಪರಿಭಾಷೆಗಳ ಅರ್ಥವು ವಿಕೃತವಾಗುತ್ತದೆ.

ಈ ಮೇಲಿನ ಥಿಯಾಲಜಿಯ ಪರಿಕಲ್ಪನೆಗಳನ್ನು ಹಿಂದೂಯಿಸಂಗೆ ಅನ್ವಯಿಸಬಹುದಾದರೆ ಅದೂ ಕ್ರಿಶ್ಚಿಯಾನಿಟಿಯಂಥದ್ದೇ ರಿಲಿಜನ್ನಾಗಿ ತೋರುವುದು ಸಹಜ. ಅಂದರೆ ಹಿಂದೂಯಿಸಂ ಕೂಡ ಕಿಶ್ಚಿಯಾನಿಟಿಯಂಥದ್ದೇ ರಿಲಿಜನ್ನೆಂದು ಭಾವಿಸಿದ ಪಾಶ್ಚಾತ್ಯರು ನಮ್ಮ ಸಂಪ್ರದಾಯದಲ್ಲೂ ಥಿಯಾಲಜಿಯ ಪರಿಕಲ್ಪನೆಗಳನ್ನು ಕಂಡರು. ಹೀಗೆ ಕಾಣುವ ಪ್ರಕ್ರಿಯೆಯಲ್ಲಿ ಅವರು ಆಧಾರವಾಗಿ ಇಟ್ಟುಕೊಂಡದ್ದು ದೇಶೀ ಪರಿಭಾಷೆಗಳು. ಆದರೆ ನಿಜವಾಗಿ ನೋಡಿದರೆ ಅವರಿಗೆ ಈ ದೇಶೀ ಪರಿಭಾಷೆಗಳು ಥಿಯಾಲಜಿಯ ಚೌಕಟ್ಟಿನಲ್ಲಿಯೇ ಅರ್ಥಪಡೆದುಕೊಂಡವೇ ಹೊರತೂ ತಮ್ಮ ಮೂಲ ಅರ್ಥದಲ್ಲಲ್ಲ. ಅದರ ಫಲವಾಗಿ ಇಂಗ್ಲೀಷ್ ಭಾಷೆಯಲ್ಲಿ ಕ್ರಿಶ್ಚಿಯಾನಿಟಿಯದೇ ಪಡಿಯಚ್ಚಿನಲ್ಲಿ ಹಿಂದೂಯಿಸಂ ಹುಟ್ಟಿಕೊಂಡಿತು. ಹಿಂದೂಯಿಸಂ ಕುರಿತು ಐರೋಪ್ಯ ಭಾಷೆಗಳಲ್ಲಿ ಬಂದ ವರ್ಣನೆಗಳು ಅವರಿಗೆ ಏಕೆ ಅರ್ಥವಾಗುತ್ತವೆಂದರೆ ಪರಿಭಾಷೆಗಳು ಅವರಿಗೆ ಸುಪರಿಚಿತವಾಗಿವೆ. ಆದರೆ ಈ ವರ್ಣನೆಯನ್ನು ದೇಶೀ ಭಾಷೆಗೆ ಭಾಷಾಂತರಿಸಿದಾಗ ಥಿಯಾಲಜಿಯ ಪರಿಚಯವೇ ಇಲ್ಲದವರ ಭಾಷೆಯಲ್ಲಿ ಪಾಶ್ಚಾತ್ಯ ವರ್ಣನೆಗೆ ಅರ್ಥವೇ ಇರುವುದಿಲ್ಲ. ಹಾಗಂತ ಈ ದೇಶೀ ಪರಿಭಾಷೆಗಳ ಸಾಂಪ್ರದಾಯಿಕ ಅರ್ಥವನ್ನು ಕಲಿಯುವ ಪ್ರಕ್ರಿಯೆ ಕೂಡ ವಿದ್ಯಾವಂತ ವರ್ಗದಲ್ಲಿ ನಿಂತು ಹೋಗಿರುತ್ತದೆ. ಹಾಗಾಗಿ ಇಂಥ ವಾಕ್ಯಗಳು ಅಸಂಬದ್ಧವೆಂಬುದೂ ಕೂಡ ಅವರ ಗಮನಕ್ಕೆ ಬರುವುದಿಲ್ಲ. ಇಲ್ಲದಿದ್ದರೆ ಆತ್ಮಕ್ಕೆ ಶಾಂತಿಯನ್ನು ಕೋರುವ ಕೆಲಸದಲ್ಲಿ ಅವರು ಇಷ್ಟು ನಿರಂತರವಾಗಿ ತೊಡಗಿಕೊಳ್ಳುತ್ತಿರಲಿಲ್ಲ.

Advertisements
 1. ಫೆಬ್ರವರಿ 17, 2014 ರಲ್ಲಿ 3:41 ಅಪರಾಹ್ನ

  [[ಆತ್ಮ ಎಂಬುದು ಮನಸ್ಸು, ಬುದ್ಧಿ, ಅಹಂಕಾರ, ಇತ್ಯಾದಿಗಳಿಗೆ ಅತೀತವಾದುದು ಎಂಬುದಾಗಿ ನಮ್ಮ ಸಂಪ್ರದಾಯಗಳು ಹೇಳುತ್ತವೆ.]]
  ಆತ್ಮವೆನ್ನುವುದು ದೇಹದಿಂದ ದೇಹಕ್ಕೆ ಸಂಚರಿಸುತ್ತದೆ. ಕರ್ಮಕ್ಕೆ ತಕ್ಕಂತೆ ಆತ್ಮವು ಮರುಹುಟ್ಟು ಪಡೆಯುತ್ತದೆ.
  ಹೀಗೆ ಪಯಣಿಸುವ ಆತ್ಮವು ತನ್ನೊಡನೆ ಕೆಲವು ನೆನಪುಗಳನ್ನು, ಸಂಸ್ಕಾರಗಳನ್ನು, ಕರ್ಮಗಳನ್ನು ಹೊತ್ತೊಯ್ಯುತ್ತದೆ.
  ವ್ಯಕ್ತಿ ಸತ್ತ ನಂತರ ದೇಹದಿಂದ ಹೊರಹೋಗುವ ಆತ್ಮವು, ಮತ್ತೊಂದು ದೇಹವನ್ನು ಧರಿಸುವವರೆಗೆ ಸೂಕ್ಷ್ಮ ಶರೀರವನ್ನು ಹೊಂದಿರುತ್ತದೆ. ಈ ಸೂಕ್ಷ್ಮ ಶರೀರರದಲ್ಲಿ ಆತ್ಮ, ಅದರ ಹಿಂದಿನ ನೆನಪುಗಳು ಮತ್ತು ಕರ್ಮಗಳು ಸೇರಿರುತ್ತವೆ. ವ್ಯಕ್ತಿಯು ಅಂತ್ಯಕಾಲದಲ್ಲಿ ನೆನಪಿಸಿಕೊಳ್ಳುವುದೇ ಸೂಕ್ಷ್ಮ ಶರೀರದಲ್ಲಿ ಗಾಢವಾಗಿ ದಾಖಲಾಗುತ್ತದೆ ಮತ್ತು ಆ ರೀತಿಯ ಜನುಮವನ್ನೇ ಮುಂದೆ ಪಡೆಯುತ್ತಾನೆ. ಅದಕ್ಕಾಗಿಯೇ, ಅಂತ್ಯಕಾಲದಲ್ಲಿ ರಾಮನಾಮ ಜಪವನ್ನೋ, ಭಗವದ್ಗೀತೆಯನ್ನೋ ಅಥವಾ ಇನ್ಯಾವುದಾದರೂ ಉತ್ತಮ ಸಂಗತಿಗಳನ್ನು ಕೇಳುತ್ತಿರಬೇಕೆಂದು ಹೇಳುತ್ತಾರೆ ಮತ್ತು ಗಂಗಾಜಲವನ್ನು ಕುಡಿಯಲು ತವಕಿಸಲಾಗುತ್ತದೆ.

  ಯೋಗಿಗಳು ತಮ್ಮ ಆತ್ಮ (ಮತ್ತು ಸೂಕ್ಷ್ಮಶರೀರ)ದ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುತ್ತಾರೆ. ತಮ್ಮ ಪ್ರಸ್ತುತ ದೇಹವನ್ನು ಯಾವಾಗ ತ್ಯಜಿಸಬೇಕು, ಹೇಗೆ ತ್ಯಜಿಸಬೇಕೆಂದು ಅವರು ನಿರ್ಧರಿಸಬಲ್ಲವರಾಗುರುತ್ತಾರೆ. ಆದಿಶಂಕರರು ಪರಕಾಯ ಪ್ರವೇಶ ಮಾಡಿದ ಪ್ರಸಂಗ ಸುಪ್ರಸಿದ್ಧವಾಗಿದೆ. ಅವರು ತಮ್ಮ ಸೂಕ್ಷ್ನಶರೀರವನ್ನು ತಮ್ಮ ದೇಹದಿಂದ ಹೊರತೆಗೆದು ಮತ್ತೊಂದು ಶರೀರಕ್ಕೆ ಒಯ್ದರು. ಅವರ ಆತ್ಮದೊಡನೆ, ಅವರ ಅಹಂಕಾರ (ತಮ್ಮ ದೇಹದ ಪ್ರಜ್ಞೆ, ನೆನಪುಗಳು, ಇತ್ಯಾದಿ)ವೂ ಆ ಹೊಸ ದೇಹಕ್ಕೆ ಹೋಗಿತ್ತು. ಮತ್ತು ಆ ಹೊಸ ದೇಹದಿಂದ ಅವರು ತಮ್ಮ (ಶಂಕರರ) ದೇಹಕ್ಕೆ ಹಿಂತಿರುಗಿದಾಗ, ಆ ಹೊಸ ದೇಹದಲ್ಲಿ ಪಡೆದ ನೆನಪುಗಳನ್ನೂ ಹಿಂದಕ್ಕೆ ಒಯ್ದರು. ಕೇವಲ ಅವರ ಆತ್ಮವು ಸಂಚರಿಸಿದ್ದರೆ, ಅವರಿಗೆ ಹಿಂದಿನ ನೆನಪುಗಳನ್ನು ಒಯ್ಯಲಾಗುತ್ತಿರಲಿಲ್ಲ ಅಲ್ಲವೇ?

  ಹೀಗಾಗಿ, ಆತ್ಮದೊಡನೆ ಹಿಂದಿನ ನೆನಪುಗಳು, ಪೂರ್ವಸಂಸ್ಕಾರ ಮತ್ತು ಕರ್ಮಗಳು ಸಂಚರಿಸುತ್ತವೆ (ಇದನ್ನೇ ಅಲ್ಲವೇ ಮನಸ್ಸು ಮತ್ತು ಅಹಂಕಾರಗಳು ಎಂದು ಕರೆಯುವುದು) ಎನ್ನುವುದು ಸ್ಪಷ್ಟ. ನಾನು ಮೇಲೆ ಹೇಳಿರುವ ಸಂಗತಿಗಳು ನನ್ನ ಊಹೆಯಲ್ಲ. ಇದೆಲ್ಲವೂ ವಿವಿಧ ಉಪನಿಷತ್ತುಗಳಲ್ಲಿ ದಾಖಲಾಗಿರುವ ಸಂಗತಿಗಳು. ಆತ್ಮವು ಹೊಸ ದೇಹವನ್ನು ಯಾವ ರೀತಿಯಲ್ಲಿ ಪಡೆಯುತ್ತದೆ ಎನ್ನುವ ವಿವರಣೆಗಳೂ ಉಪನಿಷತ್ತುಗಳಲ್ಲಿದೆ; ಈಗಿನ ಚರ್ಚೆಗೆ ಅದು ಅಪ್ರಸ್ತುತವಾದ್ದರಿಂದ, ಅದನ್ನಿಲ್ಲಿ ವಿವರಿಸಲು ಹೋಗುವುದಿಲ್ಲ.

  Like

 2. aani
  ಫೆಬ್ರವರಿ 19, 2014 ರಲ್ಲಿ 9:33 ಅಪರಾಹ್ನ

  {{ನಮ್ಮಲ್ಲಿ ಅತೃಪ್ತ ಆತ್ಮಗಳು, ಅಶಾಂತ ಆತ್ಮಗಳು ಅರ್ಥವಾಗದ ಸಂಗತಿಗಳು.]] ನಮ್ಮಲ್ಲಿ ಅತೃಪ್ತ ಆತ್ಮಗಳ ಕಥೆ ಇವೆ ಅಲ್ಲಾ? ಉದಾಹರಣೆಗೆ ಪ್ರೇತಾತ್ಮಗಳು. ರಾಮಾನುಜಾಚಾರ್ಯರ ಹೆಂಡತಿ ಪ್ರೇತವಾದ ಕಥೆ ಇದೆ. ಆವಾಗ ವಸಾಹತು ಇರಲಿಲ್ಲ. ಆದರು ಅತೃಪ್ತ ಆತ್ಮದ ಕಥೆ ಇದೆ ಅಲ್ಲವೆ???

  Like

 3. Rajaram Hegde
  ಫೆಬ್ರವರಿ 28, 2014 ರಲ್ಲಿ 12:03 ಫೂರ್ವಾಹ್ನ

  thank you SSNK for the comments. This is a kannada narration of Balu’s ideas. The examples and the sentences you cited are entirely mine. I did that exercise to show the difference between soul and atman. Though what you said is right, the attributes of a soul and self are of a different kind. the soul can rest in peace, that means it experiences. I do not know whether the atman you referred can have experience of peace, ahamkara, etc. Or is it possible to pray for it. Do you have any idea about Shankara’s atman in between two living bodies?
  However, it is good that you pointed out this. I should have delimited myself to the advaita concept of atman. Point is that the concept of soul is different than the concept of atman. and the narration required a proper naunce in putting forth the original idea. I too have read the upanishads, I will look into it again. But I vaguely remember that Jains talk about kashaya (impurity) that can stick to atman and cause rebirth, but that too will not match the concept of soul. In Buddhists rebirth happens without atman.
  Thanks also to aani, I think I have to change my sentence about atrapta atma simply because of the examples cited by you, because I realise I have to look into it in depth.May be I better not use such examples till it is clear to me.

  (May I know about both of you? Your scruitinies will help me)

  Like

  • ಫೆಬ್ರವರಿ 28, 2014 ರಲ್ಲಿ 9:32 ಫೂರ್ವಾಹ್ನ

   We all agree about “Parakaya Pravesha” done by Adi Shankara.
   If Shankara’s aatma had to leave his body, enter another body, gain some experience and come back to the same Shankara’s body, it should have some consciousness about the previous body. If the Atma doesn’t have “ahankara”, why did it come back to Shankara’s body?
   And basic tenet of “Karma Siddhanta” is that, we attain rebirth due to the karma’s (good or bad). Now, if the karma is attached only to the body, then why rebirth is needed for Aatma? So, Karma siddhanta says that, karma is attached to Aatma and travels with the Aatma from body to body.
   The memory of all the previous births are etched in the memory of aatma itself. Yogi’s can concentrate on the aatma and can remember the previous births and also can control the way aatma leaves the body.

   You can contact me at: ssnkumar@gmail.com

   Like

 4. ಫೆಬ್ರವರಿ 28, 2014 ರಲ್ಲಿ 9:42 ಫೂರ್ವಾಹ್ನ

  [[ನಮ್ಮಲ್ಲಿ ಅತೃಪ್ತ ಆತ್ಮಗಳ ಕಥೆ ಇವೆ ಅಲ್ಲಾ? ಉದಾಹರಣೆಗೆ ಪ್ರೇತಾತ್ಮಗಳು. ರಾಮಾನುಜಾಚಾರ್ಯರ ಹೆಂಡತಿ ಪ್ರೇತವಾದ ಕಥೆ ಇದೆ.]]
  ಇವೆಲ್ಲಾ ಸಾಹಿತ್ಯದಲ್ಲಿ ಉಪಯೋಗಿಸುವ ವಿವಿಧ ಪದಪ್ರಯೋಗಗಳಷ್ಟೇ.
  ಪ್ರೇತ ಎಂದರೆ ಹೆಣ – ಜೀವವಿಲ್ಲದಿರುವ ದೇಹ. ಜೀವವೇ ಆತ್ಮ. ಜೀವವಿಲ್ಲದಿರುವ ಪ್ರೇತದಲ್ಲಿ ಆತ್ಮವಿರಲು ಸಾಧ್ಯವೇ?
  ಆತ್ಮವು ದೇಹವನ್ನು ಬಿಟ್ಟ ನಂತರ, ತನ್ನ ಮುಂದಿನ ದೇಹವನ್ನು ಹುಡುಕಬೇಕು. ಆ ಸಮಯದಲ್ಲಿ ಸ್ವಲ್ಪಕಾಲ ಅದು ದೇಹವಿಲ್ಲದೆ ಇರಬೇಕಾಗುತ್ತದೆ. ಈ ರೀತಿ ದೇಹವಿಲ್ಲದ ಆತ್ಮವನ್ನು ಪ್ರೇತಾತ್ಮ ಎನ್ನುವರು.
  ಆತ್ಮವು ಮತ್ತೊಂದು ದೇಹವನ್ನು ಪ್ರವೇಶಿಸುವುದು ಆಹಾರದ ಮೂಲಕ.
  ಆಹಾರರು ರಕ್ತವಾಗಿ, ರಕ್ತವು ವೀರ್ಯವಾಗುತ್ತದೆ. ಈ ವೀರ್ಯವನ್ನು ಆತ್ಮವು ಸೇರಿಕೊಳ್ಳುತ್ತದೆ.
  ಈ ರೀತಿ ದೇಹವನ್ನು ಸೇರುವ ಆತ್ಮಕ್ಕೆ, ತಾನು ಈಗ ಸೇರಿರುವ ದೇಹ ಸರಿಯಿಲ್ಲವೆನಿಸಿದಾಗ, ಅಥವಾ ವೀರ್ಯದ ಮೂಲಕ ಪ್ರವೇಶಿಸುವ ಸ್ತ್ರೀ ದೇಹ ಸರಿಯಿಲ್ಲವೆನಿಸಿದಾಗ, ಅದು ಮಲದ ಮೂಲಕ ಆ ದೇಹವನ್ನು ತ್ಯಜಿಸುತ್ತದೆ.
  ಹೀಗೆ ಆತ್ಮವು ಸಾಕಷ್ಟು ಪ್ರಯತ್ನದ ನಂತರ ತನಗೆ ಸೂಕ್ತವಾದ ದೇಹವನ್ನು ಧರಿಸುತ್ತದೆ.

  ಆದರೆ, ಆತ್ಮವು ಅತೃಪ್ತವಾಗಿರಲು ಸಾಧ್ಯವಿಲ್ಲ. ಅತೃಪ್ತಿ ಎನ್ನುವುದು ಮಾನಸಿಕ ಸ್ಥಿತಿ.
  ಮನಸ್ಸು ಎನ್ನುವುದು ದೇಹಕ್ಕೆ ಮಾತ್ರ ಸೇರಿದ್ದು. ಆತ್ಮಕ್ಕೆ (ಮತ್ತು ಜೊತೆಗಿರುವ ಸೂಕ್ಷ್ಮ ಶರೀರಕ್ಕೆ) ಮನಸ್ಸು ಎನ್ನುವುದಿಲ್ಲ. ಅದಕ್ಕಿರುವುದು ನೆನಪುಗಳು, ಪೂರ್ವ ಸಂಸ್ಕಾರ ಮತ್ತು ಕರ್ಮ ಮಾತ್ರ.
  ಹೀಗಾಗಿ ಅತೃಪ್ತ ಆತ್ಮ ಎನ್ನುವುದು ಇರಲು ಸಾಧ್ಯವಿಲ್ಲ.

  Like

 5. Rajaram Hegde
  ಫೆಬ್ರವರಿ 28, 2014 ರಲ್ಲಿ 11:25 ಫೂರ್ವಾಹ್ನ

  Dear SSNK
  I went through the major upanishads again. I never found a sentence stating that manas, buddhi, ahankara can be attributed to atma inbetween two births. (They are part and parcel of it in a jiva.) What they say is that atman is followed by vidya karma and purva prajna, i.e. karma and vasanas. These happen in unconscious state, latent like a seed. Everything dissolves into atman at the time of death and express after it enters another body. Manas, buddhi etc need a A living body as a precondition to have their experience. Certainly this does not allow for the statements like resting in peace after death.

  I agree with Your response to aani , if atma can not be atrapta, because of the things you have stated, then it can not experience shanti also.

  Like

  • ಫೆಬ್ರವರಿ 28, 2014 ರಲ್ಲಿ 11:40 ಫೂರ್ವಾಹ್ನ

   Dear Sir,

   I have clearly mentioned in my last comment (reply to Aani) that, manas is part of body and not aatma:
   >> ಮನಸ್ಸು ಎನ್ನುವುದು ದೇಹಕ್ಕೆ ಮಾತ್ರ ಸೇರಿದ್ದು. ಆತ್ಮಕ್ಕೆ (ಮತ್ತು ಜೊತೆಗಿರುವ ಸೂಕ್ಷ್ಮ ಶರೀರಕ್ಕೆ) ಮನಸ್ಸು ಎನ್ನುವುದಿಲ್ಲ. <<

   In the same way Buddhi (or intellect) is part of the body (or deha or sthula sharira) and not part of aatma.
   So, the ahankara that comes with the atma is not because of manas or buddhi.
   And when atma leaves the body after the death, it goes in an unconscious state.
   But, when the atma leaves body without death (parakaya pravesha), then the body goes in a conscious state.
   In both cases, it is the same atma – the structure of atma (or sukshma sharira) does not change from conscious to unconscious state.
   In conscious state, atma is aware of its ahankara and in unconscious state it is not aware of ahankara.
   If a Yogi can know about his/her previous births, then that consciousness about previous birth is from ahankara etched in the memory of atma.
   In atma that leaves a dead body of a person, it leaves in unconscious state. Here also, ahankara is etched in its memory. If that atma enters a body and if that person becomes a Yogi by doing sadhana/yoga, then he/she will be able to recall the previous births memory.

   Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: