ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Religion, Secularism > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 44 :ಮನುಕುಲವು ಫ್ರೆಂಚ್ ಕ್ರಾಂತಿಯ ಮೂಲಕ ವಿಮೋಚನೆಗೊಂಡಾಗ..
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

1789 ರಿಂದ 1799ರ ಅವಧಿಯಲ್ಲಿ ಹದಿನಾರನೆಯ ಲೂಯಿ ದೊರೆಯ ವಿರುದ್ಧ ಫ್ರಾನ್ಸಿನ ಜನರು ದಂಗೆಯೆದ್ದು ರಾಜ ಮನೆತನದ ಆಳ್ವಿಕೆಯನ್ನು ಕೊನೆಗೊಳಿಸಿದ ಕಥೆಯು ಸುಪ್ರಸಿದ್ಧವಾದುದು. ಇದನ್ನು ಫ್ರೆಂಚ್ ಕ್ರಾಂತಿ ಎಂಬುದಾಗಿ ಉಲ್ಲೇಖಿಸುತ್ತಾರೆ. ಇದು ಕ್ರಾಂತಿಯೇಕೆಂದರೆ ಈ ಘಟನೆಯ ಮೂಲಕ ಫ್ರಾನ್ಸಿನ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಮೂಲಭೂತ ಪಲ್ಲಟಗಳಾದವು. ಸಂವಿಧಾನದ ಆಳ್ವಿಕೆ ಬಂದಿತು. ಚರ್ಚುಗಳ ಹಾಗೂ ರಾಜರ ಆಳ್ವಿಕೆ ಕೊನೆಗೊಂಡಿತು. ಹೊಸ ಮೌಲ್ಯಗಳಾದ ಸ್ವತಂತ್ರ, ಸಮಾನತೆ ಹಾಗೂ ಭ್ರಾತೃತ್ವಗಳ ತಳಹದಿಯ ಮೇಲೆ ರಾಜಕೀಯವನ್ನು ನಿರ್ಮಿಸುವ ಪ್ರಯತ್ನ ನಡೆಯಿತು. ಈ ಎಲ್ಲಾ ಘಟನೆಗಳೂ ಫ್ರಾನ್ಸಿಗೆ ಸೀಮಿತವಾದ ಘಟನೆಗಳೆಂಬಂತೆ ನಮ್ಮ ಇತಿಹಾಸಕಾರರು ನೋಡಿಲ್ಲ. ಅದನ್ನು ಮನುಕುಲದ ಹಿಸ್ಟರಿಯ ಒಂದು ಮಹತ್ವಪೂರ್ಣ ಘಟ್ಟ ಎಂಬಂತೇ ನೋಡಲಾಗಿದೆ. ಕೆಲವು ಹಿಸ್ಟರಿಕಾರರಂತೂ ಫ್ರೆಂಚ್ ಕ್ರಾಂತಿಯ ಮೂಲಕ ಮನುಕುಲವು ದಬ್ಬಾಳಿಕೆಯಿಂದ ವಿಮೋಚನೆಗೊಂಡಿತು ಎಂಬುದಾಗಿ ಕೂಡ ವರ್ಣಿಸುತ್ತಾರೆ.

ಈ ಹೇಳಿಕೆಯನ್ನು ಅಕ್ಷರಶಃ ತೆಗೆದುಕೊಂಡರೆ ಅದು ಅಸಂಬದ್ಧವಾಗಿ ಕಾಣುತ್ತದೆ. ಏಕೆಂದರೆ ಇದೇ ಮನುಕುಲದ ಹಿಸ್ಟರಿಯ ಪ್ರಕಾರ ಮನುಕುಲವು ವಿಮೋಚನೆಗೊಂಡ ನಂತರದಲ್ಲೇ ಭಾರತವು ವಸಾಹತಶಾಹಿಗೆ ಆಹಾರವಾಯಿತು. ಭಾರತವೊಂದೇ ಅಲ್ಲ ಏಶಿಯಾದ ಅನೇಕ ದೇಶಗಳು ಹಾಗೂ ಆಫ್ರಿಕಾ, ಅಮೇರಿಕಾದ ಅನೇಕ ಭಾಗಗಳು ಕೂಡ ಐರೋಪ್ಯರ ವಸಾಹತುಶಾಹಿಗೆ ಒಂದಾದ ಮೇಲೆ ಮತ್ತೊಂದರಂತೇ ಬಲಿಯಾದವು. ಇದೇ ಕಾಲದಲ್ಲಿ ಉತ್ತರ ಅಮೇರಿಕಾದ ಮೂಲನಿವಾಸಿಗಳ ನರಮೆಧವು ತನ್ನ ಮೊದಲನೆಯ ಹಂತದಲ್ಲಿತ್ತು. ಹಾಗೂ ಅದೇ ಕಾಲದಲ್ಲಿ ಅದೇ ಅಮೇರಿಕಾದಲ್ಲಿ ಸ್ವಾತಂತ್ರ್ಯ ಸಂಗ್ರಾಮವು ನಡೆಯಿತು ಎಂಬುದಾಗಿ ಇದೇ ಮನುಕುಲದ ಹಿಸ್ಟರಿಯು ನಮಗೆ ತಿಳಿಸುತ್ತದೆ. ಹೀಗಿರುವಾಗ ಈ ಮನುಕುಲದ ವಿಮೋಚನೆಯ ಕಥೆಯು ಸತ್ಯವಾಗಬೇಕಾದರೆ ಮನುಕುಲವೆಂದರೆ ಯುರೋಪಿಯನ್ನರು ಎಂಬುದಾಗಿ ನಿರ್ದಿಷ್ಟಪಡಿಸಿಕೊಳ್ಳಬೇಕು, ಹಾಗೂ ಏಶಿಯಾ, ಆಫ್ರಿಕಾ ಹಾಗೂ ಅಮೇರಿಕಾದ ಮೂಲನಿವಾಸಿಗಳು ಅದರಲ್ಲಿ ಬರುವುದಿಲ್ಲ ಎಂದೇ ತೀರ್ಮಾನಿಸಬೇಕು. ಆದರೆ ಅದೇ ಇತಿಹಾಸಕಾರರೇ ಈ ತೀರ್ಮಾನವನ್ನು ಒಪ್ಪಲಾರರು. ಅವರ ಪ್ರಕಾರ ಮನುಕುಲದಲ್ಲಿ ಎಲ್ಲರೂ ಬರುತ್ತಾರೆ. ಹಾಗಿದ್ದ ಪಕ್ಷದಲ್ಲಿ ಅದು ಫ್ರಂಚ್ ಕ್ರಾಂತಿಯ ಮೂಲಕ ವಿಮೋಚನೆಗೊಂಡದ್ದು ಸುಳ್ಳೆಂದು ಹೇಳಬೇಕಾಗುತ್ತದೆ.

ಈ ಮೇಲಿನ ಫಜೀತಿ ಏಕೆ ಏಳುತ್ತದೆಯೆಂದರೆ ಮನುಕುಲದ ಹಿಸ್ಟರಿಯ ಕಲ್ಪನೆಯಲ್ಲೇ ತೊಂದರೆಗಳಿವೆ. ಮನುಕುಲ ಎನ್ನುವುದು ಎಲ್ಲಾ ಮನುಷ್ಯ ಸಮಾಜಗಳನ್ನೂ ಸೂಚಿಸುತ್ತದೆ, ಆದರೆ ಆ ಹಿಸ್ಟರಿ ಮಾತ್ರ ಐರೋಪ್ಯರದ್ದು. ಐರೋಪ್ಯರ ಹಿಸ್ಟರಿಯನ್ನು ಮನುಕುಲಕ್ಕೆ ಆರೋಪಿಸಲಾಗಿದೆ. ಹಾಗಂತ ಫ್ರೆಂಚ್ ಕ್ರಾಂತಿಯು ಸಮಸ್ತ ಐರೋಪ್ಯ ಹಿಸ್ಟರಿಯೂ ಅಲ್ಲ. ಹಾಗೂ ಐರೋಪ್ಯ ಹಿಸ್ಟರಿಯ ಗತಿಯನ್ನು ನಿದರ್ಶಿಸುವಂಥದ್ದೂ ಅಲ್ಲ ಎಂಬುದು ಯುರೋಪಿನ ಹಿಸ್ಟರಿಯನ್ನು ಓದಿದರೆ ಗೊತ್ತಾಗುತ್ತದೆ. ಆದರೆ ಫ್ರೆಂಚ್ ಕ್ರಾಂತಿಯನ್ನು ಫ್ರಾನ್ಸಿಗೆ ಸೀಮಿತವಾದ ಹಿಸ್ಟರಿ ಎಂಬುದಾಗಿ ಮನುಕುಲದ ಹಿಸ್ಟರಿಯು ನೋಡುವುದಿಲ್ಲ. ಅದು ಯುರೋಪಿನ ಹಿಸ್ಟರಿಯಲ್ಲಿ ಒಂದು ಯುಗವನ್ನು ನಿದರ್ಶಿಸುತ್ತದೆ, ಅಷ್ಟೇ ಅಲ್ಲ, ಪ್ರಪಂಚದ ಹಿಸ್ಟರಿಯಲ್ಲೇ ಒಂದು ಘಟ್ಟವಾಗಿದೆ ಎನ್ನುತ್ತದೆ. ಅದು ನಮ್ಮ ನಿಮ್ಮ ಮುತ್ತಜ್ಜಂದಿರೆಲ್ಲ ಕೆಲವು ಉನ್ನತ ಲಿಬರಲ್ ಮೌಲ್ಯಗಳನ್ನು ಕಂಡುಕೊಂಡು ಅವುಗಳ ತಳಹದಿಯ ಮೇಲೆ ಸಮಾಜವನ್ನು ಕಟ್ಟಲು ಪ್ರಾರಂಭಿಸಿದ ಕ್ಷಣವೆಂಬಂತೇ ಅದನ್ನು ನಾವು ನೋಡುತ್ತೇವೆ. ಆದರೆ ನಮ್ಮ ಈ ಗ್ರಹಿಕೆಯನ್ನು ವಾಸ್ತವಿಕ ಸಾಕ್ಷ್ಯಾಧಾರಗಳು ಸಮರ್ಥಿಸುವುದಿಲ್ಲವಷ್ಟೇ ಅಲ್ಲ, ಅದಕ್ಕೆ ವಿರುದ್ಧವಾಗಿ ಕೂಡ ಕಾಣಿಸುತ್ತವೆ.

ಅಂದರೆ ಈ ಮನುಕುಲದ ಹಿಸ್ಟರಿ ಎಂಬ ಪರಿಕಲ್ಪನೆ ಹಾಗೂ ಅದರ ನಿರೂಪಣೆಗಳು ವಾಸ್ತವವನ್ನಾಧರಿಸಿ ರೂಪುಗೊಂಡಿದ್ದಲ್ಲ. ಐರೋಪ್ಯರ ಮನುಕುಲದ ಹಿಸ್ಟರಿ ಹಾಗೂ ಅದರ ವಿವರಗಳು ಮೂಲತಃ ಕ್ರಿಶ್ಚಿಯನ್ ಹಿಸ್ಟರಿಯನ್ನಾಧರಿಸಿವೆ. ಪ್ರಾಚೀನ ರೋಮನ್ನರ ನಡುವೆ ತಮ್ಮದೇ ಸತ್ಯವಾದ ರಿಲಿಜನ್ನು ಎಂದು ಸಮರ್ಥಿಸಿಕೊಳ್ಳಲು ಕ್ರೈಸ್ತರು ಯೆಹೂದಿಗಳ ಹಿಸ್ಟರಿಯನ್ನು ಆತುಕೊಂಡ ಸಂಗತಿಯನ್ನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ಹಳೆಯ ಒಡಂಬಡಿಕೆಯ ಕಥೆಯು ಭೂಮಿಯ ಮೇಲೆ ನಿಜವಾಗಿಯೂ ನಡೆದ ಘಟನೆ ಎಂಬುದಾಗಿ ಯೆಹೂದಿಗಳು ನಂಬಿದ್ದರು. ಹಾಗೂ ಅದು ಕೇವಲ ಯೆಹೂದಿಗಳದ್ದೊಂದೇ ಅಲ್ಲ, ಮಾನವ ಜನಾಂಗದ ಗತವನ್ನೇ ತಿಳಿಸುತ್ತದೆ ಎಂಬುದಾಗಿ ಕೂಡ ಭಾವಿಸಿದ್ದರು. ಈ ಕಥೆಯನ್ನೇ ಆಧರಿಸಿದ ಕ್ರೈಸ್ತರು ಅದನ್ನು ತಮ್ಮ ಹಿಸ್ಟರಿಯನ್ನಾಗಿ ಮಾಡಿಕೊಂಡರು. ಮಾನವ ಹಿಸ್ಟರಿಯು ತಮ್ಮ ಗಾಡ್ನ ದೈವೀ ಯೋಜನೆಯ ಸಾಕಾರವಾಗಿದೆ ಎಂಬುದಾಗಿ ಕ್ರೈಸ್ತರು ಪ್ರತಿಪಾದಿಸಿದರು.

ಕ್ರೈಸ್ತರ ಹಿಸ್ಟರಿಯಲ್ಲಿ ಯೆಹೂದಿಗಳ ಕಥೆಗೆ ಇನ್ನೂ ಬೇರೆ ಆಯಾಮಗಳೂ ಸಿಕ್ಕವು. ಅವೆಂದರೆ ಮಾನವ ಜನಾಂಗದ ಉದ್ದೇಶ ಹಾಗೂ ಅಂತಿಮ ಗುರಿಗಳು. ಬೈಬಲ್ಲಿನ ಕಥೆಯ ಪ್ರಕಾರ ಸಮಸ್ತ ಮನುಕುಲವೂ ಗಾಡ್ನ ಸೃಷ್ಟಿಯಾಗಿದ್ದು ಅವನ ಉದ್ದೇಶಕ್ಕೆ ಬದ್ಧವಾಗಿದೆ. ಗಾಡ್ ತಾನು ಭೂಮಿಯ ಮೇಲೆ ಯೆಹೂದಿಗಳ ಬುಡಕಟ್ಟಿನಲ್ಲಿ ಮನುಷ್ಯ ರೂಪದಲ್ಲಿ ಬರುತ್ತೇನೆಂದು ಆಶ್ವಾಸನೆ ನೀಡಿದ್ದನು. ಇದು ಅವನು ತಾನು ಸೃಷ್ಟಿಸಿದ ಮನುಕುಲಕ್ಕೆ ನೀಡಿದ ಆಶ್ವಾಸನೆಯಾಗಿತ್ತು. ಯೆಹೂದಿಗಳ ಕಥೆಯಲ್ಲಿ ಇದು ಕೇವಲ ಆಶ್ವಾಸನೆ ಮಾತ್ರವಾಗಿದ್ದರೆ ಕ್ರೈಸ್ತರ ಹಿಸ್ಟರಿಯಲ್ಲಿ ಅವನು ಜೀಸಸ್ ಕ್ರೈಸ್ತನ ರೂಪದಲ್ಲಿ ಮೂರ್ತವಾಗಿ ಬರುವುದರ ಮೂಲಕ ಅದು ಸತ್ಯವೆಂಬುದು ದೃಷ್ಟಾಂತವಾಯಿತು. ಹಾಗಾಗಿ ಮನುಕುಲದ ಹಿಸ್ಟರಿಯ ಹಿಂದೆ ಗಾಡ್ನ ಉದ್ದೇಶವಿದೆ ಎಂಬುದು ಸಿದ್ಧವಾಯಿತು. ಹಾಗೂ ಮನುಷ್ಯರ ಕುರಿತು ಬೈಬಲ್ ಏನು ಹೇಳುತ್ತದೆಯೋ ಅದು ಸತ್ಯವೆಂಬುದು ಕೂಡ ದೃಷ್ಟಾಂತವಾಯಿತು. ಈ ಸತ್ಯದ ಪ್ರಕಾರ ಕ್ರಿಶ್ಚಿಯಾನಿಟಿಯು ನಿಜವಾದ ರಿಲಿಜನ್ನಾಗಿದೆ. ಅದು ಗಾಡ್ನಿಂದ ಸ್ವತಃ ಬೋಧಿಸಲ್ಪಟ್ಟದ್ದು. ಮನುಕುಲವು ತನ್ನ ಮೂಲ ಪಾಪದಿಂದ ಮುಕ್ತನಾಗಲು ಹಾಗೂ ಸ್ವರ್ಗವನ್ನು ಸೇರಲು ನಿಜವಾದ ರಿಲಿಜನ್ನನ್ನು ಅನುಸರಿಸುವುದೊಂದೇ ಮಾರ್ಗ.

ಆಡಮ್ ಈವ್ ಎಂಬ ಜೋಡಿಯನ್ನು ಗಾಡ್ ಸೃಷ್ಟಿಸಿದ ನಂತರ ಅವರಿಂದ ಮನುಕುಲ ಹುಟ್ಟಿಕೊಂಡಿತು. ಈ ಕಥೆಯು ಸತ್ಯವೇ ಆಗಿದ್ದಲ್ಲಿ ಭೂಮಿಯ ಮೇಲಿರುವ ಎಲ್ಲಾ ಮಾನವರೂ ಇವರ ಸಂತತಿಗಳೇ ಆಗಿರಬೇಕು. ಸಮಸ್ತ ಮನುಕುಲಕ್ಕೂ ಇದರ ಅರಿವು ಇದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಡೆವಿಲ್ ಎಂಬವನು ಮನುಷ್ಯರನ್ನು ಸುಳ್ಳು ರಿಲಿಜನ್ನಿನತ್ತ ಸೆಳೆದು ಅವರನ್ನು ದಾರಿ ತಪ್ಪಿಸುತ್ತಿರುತ್ತಾನೆ. ಹಾಗಾಗಿ ಪಥಭ್ರಷ್ಟರಾಗುವುದು ಮನುಷ್ಯರಿಗೆ ಸಹಜ. ಆದರೆ ಅವರೆಲ್ಲ ಏನನ್ನು ನಂಬಿದ್ದಾರೆ ಎಂಬುದಕ್ಕೂ ಹೊರತಾಗಿ ಅವರೆಲ್ಲರನ್ನೂ ಸೃಷ್ಟಿಸಿದ ಗಾಡ್ನ ನಿಯಮವು ಅವರನ್ನು ಆಳುತ್ತಿದೆ. ನಿಜವಾದ ರಿಲಿಜನ್ನನ್ನು ಅನುಸರಿಸದಿದ್ದರೆ ಅವರು ಶಾಶ್ವತವಾಗಿ ನರಕದಲ್ಲಿ ಕೊಳೆಯುತ್ತಾರೆ. ಉದಾಹರಣೆಯ ಮೂಲಕ ಇದನ್ನು ವಿವರಿಸಬಹುದಾದರೆ, ಒಬ್ಬನಿಗೆ ಆಮ್ಲಜನಕ ಎಂಬುದು ಇದೆ ಎಂದು ಗೊತ್ತಿಲ್ಲದೇ ಇರಬಹುದು, ಆದರೆ ಅವನು ಬದುಕಿರುವುದು ಅದನ್ನವಲಂಬಿಸಿಯೇ ಎಂಬುದು ಸತ್ಯ. ಅದನ್ನು ಸೇವಿಸದಿದ್ದವನು ಸಾಯುತ್ತಾನೆ. ಹೀಗೆ ಸಮಸ್ತ ಮನುಕುಲಕ್ಕೇ ಅನ್ವಯವಾಗಬಲ್ಲ ಸತ್ಯವೊಂದನ್ನು ಕ್ರೈಸ್ತರು ಪ್ರತಿಪಾದಿಸಿದ್ದರಿಂದ ಅವರ ಹಿಸ್ಟರಿಯು ಅವರೆಲ್ಲರಿಗೂ ಒಂದೇ ಗತವನ್ನು ಹಾಗೂ ಗತಿಯನ್ನು ಕಲ್ಪಿಸುತ್ತದೆ. ಅಂದರೆ ಕ್ರಿಶ್ಚಿಯಾನಿಟಿಯನ್ನು ನಂಬುವವರೂ, ನಂಬದವರೂ, ಎಲ್ಲರಿಗೂ ಒಂದೇ ಮೂಲ ಹಾಗೂ ಒಂದೇ ಗುರಿ ಇದೆ. ಈ ಸತ್ಯವನ್ನು ಕ್ರಿಶ್ಚಿಯನ್ನರು ತಿಳಿದುಕೊಂಡಿದ್ದಾರೆ ಅಥವಾ ಗಾಡ್ ಅವರಿಗೆ ತಿಳಿಸಿದ್ದಾನೆ. ಈ ಪ್ರಯಾಣದಲ್ಲಿ ಮನುಕುಲವು ಎಲ್ಲಿಯವರೆಗೆ ಬಂದಿದೆ ಎಂಬುದನ್ನು ದಾಖಲಿಸುವುದೇ ಕ್ರೈಸ್ತರ ಹಿಸ್ಟರಿಯ ಕೆಲಸ. ಈ ಹಿನ್ನೆಲೆಯಲ್ಲಿ ಮನುಕುಲದ ಹಿಸ್ಟರಿಯೆಂಬ ಪರಿಕಲ್ಪನೆಯು ಅವರಿಗೆ ಅರ್ಥಪೂರ್ಣವಾಗಿ ಕಂಡಿತು.

ಅಂದರೆ ಸಮಸ್ತ ಮನುಕುಲಕ್ಕೂ ಅನ್ವಯವಾಗಬಲ್ಲ ಏಕೈಕ ಕಾಲಗಣನೆಯು ಈ ಹಿಸ್ಟರಿಗೆ ಬೆನ್ನೆಲುಬಾಯಿತು. ಏಕೆಂದರೆ ಮನುಕುಲದ ಪ್ರಯಾಣವು ಒಂದೇ ಮಾರ್ಗದಲ್ಲಿ ಒಂದೇ ದಿಕ್ಕಿನತ್ತ ಸಾಗಿದೆ. ಮನುಕುಲವು ಎಂದು ಉಗಮವಾಯಿತು ಹಾಗೂ ಹೇಗೆ ಉಗಮವಾಯಿತು, ತದನಂತರ ಎಂದೆಂದು ಏನೇನು ಘಟನೆಗಳು ನಡೆದವು ಎಂಬುದನ್ನು ಒಂದೇ ಕಾಲಗಣನೆಯ ಚೌಕಟ್ಟಿಗೆ ಅಳವಡಿಸಿ ನೋಡಬೇಕಾಗಿತ್ತು. ಕ್ರಿಶ್ಚಿಯಾನಿಟಿಯು ಮನುಕುಲದ ಗತ ಮತ್ತು ಭವಿಷ್ಯಗಳೆರಡನ್ನೂ ಈ ರೀತಿಯಲ್ಲಿ ತನ್ನದನ್ನಾಗಿ ಮಾಡಿಕೊಂಡಿತು. ಈ ಕೆಲಸವನ್ನು ಸಾಧಿಸುವ ನಿಟ್ಟಿನಲ್ಲಿ ಭೂಮಿಯ ಮೇಲಿನ ಎಲ್ಲಾ ಪ್ರಕಾರದ ಜನರ ಗತಕಾಲದ ಸ್ಮೃತಿಗಳನ್ನೂ ಕ್ರೈಸ್ತರ ಈ ಏಕೈಕ ಗತಕಾಲದೊಳಗೆ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆಯಿತು. ಕ್ರೈಸ್ತರ ಕಾಲಗಣನೆಯೊಳಗೆ ಅವುಗಳನ್ನೆಲ್ಲ ಜೋಡಿಸಿ, ಕ್ರೈಸ್ತರ ಅಂತಿಮ ಗುರಿಯ ಪರಿಕಲ್ಪನೆಯೊಳಗೆ ಅವುಗಳನ್ನು ಪ್ರಮಾಣೀಕರಿಸಿ ಈ ಕೆಲಸವನ್ನು ನಡೆಸಲಾಯಿತು. ಅಂದರೆ ನಿಜವಾದ ರಿಲಿಜನ್ನನ್ನು ಸರಿಯಾಗಿ ಅನುಸರಿಸುವವರು ಅಂತಿಮ ಗುರಿಗೆ ತೀರಾ ಹತ್ತಿರದಲ್ಲಿದ್ದಾರೆ, ನಿಜವಾದ ರಿಲಿಜನ್ನನ್ನು ಅನುಸರಿಸದವರು, ಅಂದರೆ ಸುಳ್ಳು ರಿಲಿಜನ್ನನ್ನು ಪಾಲಿಸುವವರು ಈ ದಾರಿಯಿಂದ ತಪ್ಪಿಸಿಕೊಂಡಿದ್ದಾರೆ. ಇತ್ತೀಚೆಗೆ ಪರಿವರ್ತನೆಗೊಂಡ ಇನ್ನೂ ಕೆಲವರು ಅವರವರ ಸಾಧನೆಗನುಸಾರವಾಗಿ ಈ ದಾರಿಯಲ್ಲಿ ಸ್ಥಾನವನ್ನು ಕಂಡುಕೊಂಡಿದ್ದಾರೆ.

ಜ್ಞಾನೋದಯ ಯುಗದ ಕಾಲದಲ್ಲಿ ಸೆಕ್ಯುಲರ್ ಹಿಸ್ಟರಿಯು ರೂಪುಗೊಂಡಿತು. ಪ್ರಪಂಚದಲ್ಲಿ ವಿಭಿನ್ನ ಸಮಾಜಗಳಿವೆ ಹಾಗೂ ಅವೆಲ್ಲವುಗಳ ನಿಜವಾದ ಅಥವಾ ಕಲ್ಪಿತವಾದ ಗತಕಾಲಗಳು ಭಿನ್ನ ಭಿನ್ನವಾಗಿವೆ ಎಂಬ ವಾಸ್ತವವು ಮೇಲ್ನೋಟಕ್ಕೆ ಕಾಣಿಸುವಂಥದ್ದು. ಅವುಗಳ ಜೊತೆಗೆ ಕ್ರೈಸ್ತರದೂ ಒಂದು ಥರದ ಗತಕಾಲ, ಅದಕ್ಕೆ ಅದರದೇ ಘಟನೆಗಳಿವೆ, ಪಾತ್ರಗಳಿವೆ ಹಾಗೂ ಹೆಸರುಗಳಿವೆ ಎಂಬುದೂ ಸಹಜಜ್ಞಾನಕ್ಕೆ ಸೂಕ್ತವಾಗಿಯೇ ಇತ್ತು. ಆದರೆ ಸೆಕ್ಯುಲರ್ ಹಿಸ್ಟರಿಕಾರರು ವೈಜ್ಞಾನಿಕತೆಗೆ ಒತ್ತುಕೊಟ್ಟರು ಹಾಗೂ ಥಿಯಾಲಜಿಯ ಹಿಸ್ಟರಿಯನ್ನು ನಿರಾಕರಿಸಿದರು. ಅದರ ಪರಿಣಾಮವಾಗಿ ಈ ಯುರೋಪಿನ ಸೆಕ್ಯುಲರ್ ಹಿಸ್ಟರಿಯಲ್ಲಿ ಕ್ರಿಸ್ತ, ಗಾಡ್, ಡೆವಿಲ್ ಮುಂತಾದ ಪಾತ್ರಗಳು ಹಾಗೂ ಹೆಸರುಗಳು ಮರೆಯಾದವು. ಅನ್ಯ ಸಂಸ್ಕೃತಿಗಳ ಹಿಸ್ಟರಿಯ ನಿರ್ದಿಷ್ಟ ಪಾತ್ರಗಳು ಹಾಗೂ ಘಟನೆಗಳೂ ಅದೇ ರೀತಿಯಲ್ಲಿ ಗೌಣವಾದವು. ಇವೆಲ್ಲವೂ ಸೇರಿ ಮನುಕುಲದ ಹಿಸ್ಟರಿಯಾಗಿ ಅವತರಿಸಿದವು. ಈ ಎಲ್ಲಾ ವೈವಿಧ್ಯಪೂರ್ಣ ಗತಕಾಲಗಳೂ ಮನುಕುಲದ ವಿಕಾಸದ ವಿಭಿನ್ನ ಅವಸ್ಥೆಗಳಿಗೆ ದೃಷ್ಟಾಂತಗಳಾಗಿವೆ ಎಂಬುದಾಗಿ ತಿಳಿಯಲಾಯಿತು. ಪ್ರಪಂಚದ ಮನುಷ್ಯ ಸಮಾಜಗಳೆಲ್ಲವೂ ಈ ವಿಕಾಸಪಥದಲ್ಲಿ ಏಕೈಕ ದಿಕ್ಕಿನ ಕಡೆ ಚಲಿಸುತ್ತಿವೆ, ಹಾಗೂ ಈ ಚಲನೆಯೇ ಪ್ರಗತಿ ಎಂಬ ಹೆಸರನ್ನು ಪಡೆಯಿತು. ಅಂದರೆ ಮನುಕುಲಕ್ಕೆ ಒಂದೇ ಉಗಮ ಹಾಗೂ ಒಂದೇ ಗುರಿ ಇವೆ.

ಅಂದರೆ ಈ ಸೆಕ್ಯುಲರ್ ಹಿಸ್ಟರಿಕಾರರು ತಾವು ಬಳುವಳಿಯಾಗಿ ಪಡೆದ ಮನುಕುಲದ ಹಿಸ್ಟರಿಯ ಕ್ರೈಸ್ತ ಗುರುತನ್ನು ಕ್ರಮೇಣ ಒರೆಸಿಹಾಕಿದರು. ಆದರೆ ಮನುಕುಲದ ಕುರಿತ ಕ್ರೈಸ್ತರ ಧೋರಣೆಯು ಹಾಗೇ ಮುಂದುವರಿಯಿತು. ಇದರ ಪರಿಣಾಮವಾಗಿ ಕ್ರಿಶ್ಚಿಯಾನಿಟಿಯ ಸ್ಥಾನವನ್ನು ಯುರೋಪಿನ ಹಿಸ್ಟರಿಯು ಅಲಂಕರಿಸಿತು. ಏಕೆಂದರೆ ಮನುಕುಲದ ಹಿಸ್ಟರಿಯು ನಿಜದಲ್ಲಿ ಕ್ರೈಸ್ತರ ಹಿಸ್ಟರಿಯಗಿದೆ ಎಂಬುದನ್ನು ನೋಡಿದ್ದೇವೆ. ಕ್ರೈಸ್ತರ ಪ್ರಕಾರ ತಮ್ಮ ಹಿಸ್ಟರಿಯು ಮನುಕುಲದ ಪ್ರಗತಿಯನ್ನು ದಾಖಲಿಸುವ ಕಥೆ ಅಥವಾ ಅದನ್ನು ಅಳೆಯುವ ಮಾನದಂಡ. ಹಾಗಾಗಿ ಉಳಿದೆಲ್ಲ ಗತಕಾಲಗಳೂ ಅದರಿಂದ ಅರ್ಥ ಪಡೆದುಕೊಳ್ಳುತ್ತವೆ. ಕ್ರೈಸ್ತರ ಗುರುತನ್ನು ಅಳಿಸಿದಾಗ ಅದರ ಸ್ಥಾನದಲ್ಲಿ ಯುರೋಪು ಈ ಮನುಕುಲದ ಹಿಸ್ಟರಿಯ ಮಾನದಂಡವಾಗಿ ಬದಲಾಯಿತು. ಮನುಕುಲದ ಪ್ರಗತಿಯನ್ನು ಅಳೆಯುವ ಸೆಕ್ಯುಲರ್ ಮಾನದಂಡ ಯಾವುದು? ಅದೇ ಯುರೋಪಿನ ಹಿಸ್ಟರಿ. ಅದರ ವಿಭಿನ್ನ ಹಂತಗಳೇ ಈ ಪ್ರಗತಿ ಪಥಕ್ಕೆ ನಿದರ್ಶನವಾಗಿವೆ.

ಜ್ಞಾನೋದಯ ಕಾಲದ ಹಿಸ್ಟರಿಕಾರರು ಪಶ್ಚಿಮದ ಗತಕಾಲವನ್ನು ಯುಗಗಳನ್ನಾಗಿ ವಿಂಗಡಿಸಿಕೊಂಡರು. ಪ್ರಾಚೀನ ಯುಗದಲ್ಲಿ, ಅಂದರೆ ಗ್ರೀಕರ ಕಾಲದಲ್ಲಿ ಮಾನವ ಚಿಂತನೆ ಹಾಗೂ ನಾಗರೀಕತೆಯ ಉಗಮವಾಯಿತು. ಮಧ್ಯಯುಗದಲ್ಲಿ ರಿಲಿಜನ್ನಿನ ಹಿಡಿತಕ್ಕೆ ಸಿಕ್ಕಿ ಪಾಶ್ಚಾತ್ಯ ನಾಗರೀಕತೆಗೆ ಕತ್ತಲೆ ಕವಿಯಿತು. ಮಧ್ಯ ಯುಗದ ನಂತರ ಬಂದದ್ದೇ ಆಧುನಿಕ ಯುಗ. ಈ ಯುಗದ ಪ್ರಾರಂಭದಲ್ಲಿ ಯುರೋಪಿನ ನಾಗರೀಕತೆಯ ಪುರುಜ್ಜೀವನವಾಯಿತು. ನಂತರ ಕ್ರಿಶ್ಚಿಯಾನಿಟಿಯ ಸುಧಾರಣೆಯ ಯುಗ. ಅದರ ನಂತರ ಜ್ಞಾನೋದಯ ಯುಗ. ಅದು ವೈಚಾರಿಕತೆಯ ಬೆಳಕಿನ ಯುಗ. ಆಧುನಿಕ ಯುರೋಪಿನ ಪ್ರಗತಿಯ ಒಂದೊಂದು ಮೆಟ್ಟಿಲುಗಳಾಗಿ ಒಂದೊಂದು ಯುಗಗಳು ಕಲ್ಪಿಸಲ್ಪಟ್ಟಿವೆ. ಈ ಮೆಟ್ಟಿಲುಗಳನ್ನು ಒಬ್ಬೊಬ್ಬ ಚಿಂತಕನೂ ಒಂದೊಂದು ಥರ ಗುರುತಿಸಿರಬಹುದು. ಯುರೋಪಿನ ಹಿಸ್ಟರಿಯ ಪ್ರಗತಿಯನ್ನು ಹೆಗೆಲ್, ಕಾಮ್ಟೆ, ಮಾರ್ಕ್ಸ್ ಮುಂತಾದ ಚಿಂತಕರು ಬೇರೆಬೇರೆಯಾಗಿ ನಿರ್ವಚಿಸಿದ್ದಾರೆ. ಆದರೆ ಇಂಥ ಪ್ರಯತ್ನಗಳು ನಡೆದಲ್ಲೆಲ್ಲ ಒಂದೇ ಧೋರಣೆ ಕೆಲಸಮಾಡಿದೆ: ಅದೆಂದರೆ ಈ ಮೆಟ್ಟಿಲುಗಳು ಕೇವಲ ಯುರೋಪಿನ ಹಿಸ್ಟರಿಯ ಹಂತಗಳಲ್ಲ ಅದು ಮನುಕುಲದ ಪ್ರಗತಿಯ ದಿಕ್ಕನ್ನು, ಹಾಗೂ ಸ್ವರೂಪವನ್ನು ತಿಳಿದುಕೊಳ್ಳಲು ಒಂದು ಮಾದರಿಯಾಗಿದೆ. ಅಂದರೆ ಯುರೋಪು ಪ್ರಪಂಚದ ಉಳಿದೆಲ್ಲ ಸಮಾಜಗಳೂ ಯಾವ ಮಾರ್ಗದಲ್ಲಿ ನಡೆಯಬೇಕೆಂಬುದಕ್ಕೆ ನಿದರ್ಶನವಾಗಿದೆ.

ಈ ಐರೋಪ್ಯ ಹಿಸ್ಟರಿಯ ಮಾದರಿಯು ಅನ್ಯ ಸಂಸ್ಕೃತಿಗಳ ಹಿಸ್ಟರಿಗಳ ಲೇಖನದಲ್ಲಿ ಕೂಡ ಪುನರುತ್ಪಾದನೆಯಾಯಿತು. ಅನ್ಯರ ಹಿಸ್ಟರಿಗಳನ್ನು ಬರೆಯುವುದರ ಮೂಲಕ ಯುರೋಪಿನ ಮಾನವರು ತಮ್ಮ ಗತಕಾಲವನ್ನೇ ತಿಳಿದುಕೊಂಡರು. ಪ್ರಪಂಚದ ವಿಭಿನ್ನ ಸಮಾಜಗಳ ಹಿಸ್ಟರಿಗಳು ಯುರೋಪಿನ ವಿಕಾಸದ ವಿವಿಧ ಹಂತಗಳನ್ನು ನಿದರ್ಶಿಸಿದವು. ಅಂದರೆ ಯುರೋಪಿನಲ್ಲಿ ಗತವಾಗಿ ಅಳಿದುಹೋದ ಒಂದು ಹಂತವು ಜಗತ್ತಿನ ಅನ್ಯ ಸಂಸ್ಕೃತಿಯೊಂದರಲ್ಲಿ ಇಂದು ಪ್ರದರ್ಶನಕ್ಕೆ ಸಿಗುವ ಭಾಗ್ಯವೂ ಇದರಿಂದಾಗಿ ಲಭ್ಯವಾಯಿತು. ಆಫ್ರಿಕದ ಕಾಡುಗಳಲ್ಲಿ ಅಂಡಲೆಯುತ್ತಿರುವ ಜನಾಂಗಗಳು ಅತ್ಯಂತ ಪ್ರಾರಂಭಿಕ ಹಂತವನ್ನು ನಿದರ್ಶಿಸುತ್ತವೆಯಷ್ಟೇ ಅಲ್ಲ ಅವು ಐರೋಪ್ಯರ ಪ್ರಿಮಿಟಿವ್-ಆದಿಮ ಅವಸ್ಥೆಯಾಗಿ ವರ್ತಮಾನದಲ್ಲಿ ಮಾನವಶಾಸ್ತ್ರಜ್ಞರ ಅಧ್ಯಯನಕ್ಕೆ ಸಿಗುತ್ತವೆ. ಭಾರತವನ್ನು ಅಧ್ಯಯನ ಮಾಡಿ ಅವರು ತಮ್ಮ ಬಾಲ್ಯವನ್ನೇ ತಿಳಿದುಕೊಂಡರು. ಯುರೋಪನ್ನು ಅಧ್ಯಯನ ಮಾಡಿ ತಮ್ಮ ಪ್ರೌಢಾವಸ್ಥೆಯನ್ನು ತಿಳಿದುಕೊಂಡರು. ಆದರೆ ಈ ಮನುಕುಲದ ಹಿಸ್ಟರಿಯ ವ್ಯಂಗ್ಯವೆಂದರೆ ಅನ್ಯ ಸಂಸ್ಕೃತಿಗಳು ಮನುಕುಲದ ಪ್ರಗತಿಯ ಕೆಳಹಂತಕ್ಕೆ ನಿದರ್ಶನಗಳಾದವು ಹಾಗೂ ಅವು ಕೂಡ ತಮ್ಮ ಭವಿಷ್ಯದ ಪಥವನ್ನು ಈ ಯುರೋಪಿನ ಹಿಸ್ಟರಿಯಿಂದ ಕಂಡುಕೊಳ್ಳತೊಡಗಿದವು.

ಯುರೋಪಿನ ಮಾನದಂಡದಲ್ಲಿ ತಾವು ಯಾವ ಹಂತದಲ್ಲಿ ಬರುತ್ತೇವೆ ಎಂಬ ಸತ್ಯವನ್ನು ಶೋಧಿಸುವ ಕೆಲಸವನ್ನು ಈ ಅನ್ಯ ಹಿಸ್ಟರಿಗಳು ಮಾಡಿದವು. ಹಾಗಾಗಿ ಯುರೋಪಿನ ಯುಗಗಳನ್ನು ತಮ್ಮ ಹಿಸ್ಟರಿಗೆ ಜೋಡಿಸಿಕೊಳ್ಳುವ ಮೂಲಕ ತಮ್ಮ ಅರ್ಥವಂತಿಕೆಯನ್ನು ತೋರಿಸುವ ಪ್ರಯತ್ನ ನಡೆಯಿತು. ಅದೊಂದೇ ಅಲ್ಲ ಐರೋಪ್ಯ ಹಿಸ್ಟರಿಯ ಹೆಗ್ಗಳಿಕೆಯನ್ನು ಪ್ರಶ್ನಿಸುವುದಕ್ಕೂ, ತಮ್ಮ ಹೆಗ್ಗಳಿಕೆಯನ್ನು ಸ್ಥಾಪಿಸಿಕೊಳ್ಳುವುದಕ್ಕೂ ಇದೇ ಮನುಕುಲದ ಹಿಸ್ಟರಿಯೇ ಮಾನದಂಡವಾಯಿತು. ಮನುಕುಲದ ಹಿಸ್ಟರಿಯ ಪ್ರಕಾರ ಭಾರತೀಯ ಹಿಸ್ಟರಿಯು ಅದರ ಹಿಂದುಳಿದಿರುವಿಕೆಯನ್ನು ನಿದರ್ಶಿಸುತ್ತದೆ, ಅದರ ಜಡತ್ವವನ್ನು ನಿದರ್ಶಿಸುತ್ತದೆ. ಈ ಆರೋಪವನ್ನು ಅಲ್ಲಗಳೆಯಲು ರಾಷ್ಟ್ರೀಯತಾ ಯುಗದಲ್ಲಿ ಭಾರತೀಯರು ಕಂಡುಕೊಂಡ ಉಪಾಯವೆಂದರೆ ತಮ್ಮ ಹಿಸ್ಟರಿಯೂ ಯುರೋಪಿನ ಹಿಸ್ಟರಿಯಂತೆಯೇ ಇದೆ ಎಂಬುದನ್ನು ತೋರಿಸುವುದು. ಭಾರತದಲ್ಲಿ ಫ್ಯೂಡಲಿಸಂ ಇತ್ತು ಎಂಬುದಾಗಿ ವಾದಿಸಿದ ಮಾರ್ಕ್ಸ್ ವಾದೀ ಹಿಸ್ಟರಿಕಾರರು ಕೂಡ ಭಾರತೀಯ ಸಮಾಜದ ಜಡತ್ವವನ್ನು ಅಲ್ಲಗಳೆಯುವ ಉದ್ದೇಶವನ್ನೇ ಹೊಂದಿದ್ದರು. ಆದರೆ ಅವರು ಕೊನೆಗೂ ಮಾಡಿದ್ದೇನು? ಭಾರತೀಯ ಹಿಸ್ಟರಿಯೂ ಕೂಡ ಯುರೋಪಿನಂತೆಯೇ ಫ್ಯೂಡಲಿಸಂ ಎಂಬ ಯುಗವನ್ನು ಹೊಂದಿದೆ, ಆ ಕಾರಣದಿಂದ ಕ್ರಿಯಾಶೀಲವಾಗಿದೆ ಎಂಬ ವಾದವನ್ನು ಇಟ್ಟರು. ಒಂದು ನಾಗರೀಕತೆಯ ಲಕ್ಷಣವಾಗಿ ಹಿಸ್ಟರಿ ಬರವಣಿಗೆಯು ಪ್ರಾಚೀನ ಭಾರತೀಯರಿಗೂ ಗೊತ್ತಿತ್ತು ಎಂಬುದನ್ನು ಯೇನಕೇನಪ್ರಕಾರವಾಗಿ ಸಾಧಿಸಲು ಈ ಹಿಸ್ಟರಿಕಾರರೆಲ್ಲ ತಿಣುಕಾಡಲೇಬೇಕಾಗಿದೆ. ಏಕೆಂದರೆ, ಒಂದೊಮ್ಮೆ ಯುರೋಪಿನ ಹಿಸ್ಟರಿಯ ಯಾವುದೋ ಒಂದು ಗುಣವು ಭಾರತೀಯ ಹಿಸ್ಟರಿಯಲ್ಲಿ ಇಲ್ಲದಿದ್ದರೆ ಅದಕ್ಕೆ ಸಮಜಾಯಿಷಿಯನ್ನು ಕೊಡಬೇಕು, ಒಂದೊಮ್ಮೆ ಕೊಡಲಾಗದಿದ್ದರೆ ಅದು ಭಾರತೀಯರ ದೋಷ ಎಂಬುದಾಗಿ ತರ್ಕಿಸಬೇಕು ಎನ್ನುವ ಒತ್ತಡಕ್ಕೆ ಹಿಸ್ಟರಿಕಾರರೆಲ್ಲ ಸಿಲುಕಿದ್ದಾರೆ.

ಅಂದಮೇಲೆ ಸಧ್ಯದ ಮಟ್ಟಿಗೆ ಇರುವುದೊಂದೇ ಪ್ರಮಾಣಿತ ಹಿಸ್ಟರಿಯಾಗಿದೆ, ಅದು ಯುರೋಪಿನ ಹಿಸ್ಟರಿಯೇ ಆಗಿದೆ. ಅದೇ ಮನುಕುಲದ ಹಿಸ್ಟರಿಯಾಗಿದೆ. ಯುರೋಪಿನ ಹಿಸ್ಟರಿಯ ಫ್ರೆಂಚ್ ಕ್ರಾಂತಿಯಂಥ ಒಂದು ಘಟನೆಯು ಸಮಸ್ತ ಮನುಕುಲದ ವಿಮೋಚನೆಯ ಘಟನೆಯಾಗಿ ಬದಲಾದದ್ದು ಹಿಸ್ಟರಿಕಾರರಿಗೆಲ್ಲ ಸಹಜವಾಗಿಯೇ ಕಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: