ಮುಖ ಪುಟ > Uncategorized > ಪ್ರಾಚೀನ ಸಾಹಿತ್ಯ ಮತ್ತು ಮಾಂಸಾಹಾರದ ಕುರಿತ ಚರ್ಚೆ

ಪ್ರಾಚೀನ ಸಾಹಿತ್ಯ ಮತ್ತು ಮಾಂಸಾಹಾರದ ಕುರಿತ ಚರ್ಚೆ

-ಪ್ರೊ. ರಾಜಾರಾಮ ಹೆಗಡೆ, ಕುವೆಂಪು ವಿಶ್ವವಿದ್ಯಾನಿಲಯ

images

ಈ ವಿಷಯಕ್ಕೆ ಸಂಬಂಧಿಸಿ ಅನಂತಮೂರ್ತಿಯವರ ಹೇಳಿಕೆ ಹಾಗೂ ಅದಕ್ಕೆ ಬಂದಿದ್ದ ಪ್ರತಿಕ್ರಿಯೆಗಳು ನಮ್ಮ ಮುಂದಿರುವ ಸಮಸ್ಯೆಯನ್ನು ಪರಿಹರಿಸುವುದರ ಬದಲು ಪರಸ್ಪರರ ಮನಸ್ಸು ಕೆಡಿಸುವುದರ ಮೂಲಕ ಅದನ್ನು ಮತ್ತಷ್ಟು ರಾಡಿ ಮಾಡುತ್ತವೆ ಎಂಬುದು ಸ್ಪಷ್ಟ. ಈ ಇಡೀ ಚರ್ಚೆಯಲ್ಲಿ ಎತ್ತದೇ ಇರುವ ಕೆಲವು ಪ್ರಶ್ನೆಗಳನ್ನು ಕುರಿತು ಯೋಚಿಸಬೇಕಾದ ತರ್ತು ಇದೆ ಅನ್ನಿಸುತ್ತದೆ. ಹಾಗಾಗಿ ಈ ಚರ್ಚೆಯನ್ನು ನೆಪವಾಗಿಟ್ಟುಕೊಂಡು ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಮೊತ್ತಮೊದಲನೆಯದಾಗಿ ಏಕೆ ಇಂದು ಕೆಲವರಿಗೆ ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ಮಾಂಸ, ಗೋಮಾಂಸಗಳನ್ನು ತಿಂದಿದ್ದು ಮಹತ್ವದ ವಿಷಯವೆನ್ನಿಸುತ್ತದೆ? ಹಾಗೂ ಏಕೆ ಇನ್ನೂ ಕೆಲವರಿಗೆ ಅದನ್ನು ನಿರಾಕರಿಸುವುದು ಮಹತ್ವದ ಪ್ರಶ್ನೆ ಎನ್ನಿಸುತ್ತದೆ? ಏಕೆಂದರೆ ಇಲ್ಲಿ ಚರ್ಚಿಸುತ್ತಿರುವ ಘಟನೆ ಸಾವಿರಾರು ವರ್ಷಗಳ ಹಿಂದಿನದೆಂಬುದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ.

ಪ್ರಾಚೀನ ಗ್ರಂಥಗಳಲ್ಲಿ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಿದ್ದ ಉಲ್ಲೇಖಗಳ ಕುರಿತು ರಾಷ್ಟ್ರೀಯತಾ ಯುಗದ ಕೆಲವು ವಿದ್ವಾಂಸರು ಚರ್ಚೆ ನಡೆಸಿದ್ದರು. ಅವರಿಗದು ಬೌದ್ಧಿಕ ಕುತೂಹಲದ ವಿಷಯವಾಗಿತ್ತು. ಆದರೆ 80ರ ದಶಕದ ನಂತರ ಕನ್ನಡದ ಕೆಲವು ಪ್ರಗತಿಪರರು ಇಂಥ ಉಲ್ಲೇಖಗಳನ್ನು ತಮ್ಮ ಉದ್ದೇಶಗಳಿಗಳಿಗಾಗಿ ಬಳಸಿಕೊಂಡರು. ಅವರ ಉದ್ದೇಶ ಬ್ರಾಹ್ಮಣ ಪರಂಪರೆಯ ಕುರಿತ ಮಿಥ್ಯೆಗಳನ್ನು ಒಡೆಯುವುದು. ಆದರೆ ಅವರು ಸ್ವತಃ ತಾವೇ ನಮ್ಮ ಸಂಸ್ಕೃತಿಯ ಕುರಿತು ಅನೇಕ ಮಿಥ್ಯೆಗಳನ್ನು ನಂಬಿಕೊಂಡಿದ್ದೇವೆಂಬುದನ್ನು ಅರಿಯದೇ ಹೋದರು. ಈಗ ಇದೇ ವಿಷಯವು ಸೆಕ್ಯುಲರ್ ವಾದಕ್ಕೆ ಅರ್ಥಪೂರ್ಣವಾಗಿ ಕಾಣಿಸುತ್ತಿದೆ. ಇಂದು ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಗೋಹತ್ಯೆಯನ್ನು ವಿರೋಧಿಸುವುದು ಅತ್ಯಗತ್ಯ ಎಂಬುದಾಗಿ ಭಾವಿಸಿ ಕೆಲವು ಹಿಂದುತ್ವದ ಬಣಗಳು ಹೋರಾಟನಡೆಸಿವೆ. ಆ ಮೂಲಕ ಗೋಮಾಂಸವನ್ನು ತಿನ್ನುವ ಎಲ್ಲಾ ಸಮುದಾಯಗಳೂ ಹಿಂದೂ ಧರ್ಮದ ವಿರೋಧಿಗಳು ಎನ್ನುವ ಭಾವನೆ ಗಟ್ಟಿಗೊಳ್ಳುತ್ತಿದೆ. ಇದು ಭಾರತದಲ್ಲಿ ಗೋಮಾಂಸವನ್ನು ತಿನ್ನುವ ಹಾಗೂ ಗೋಮಾಂಸವನ್ನು ತಿನ್ನದಿರುವ ಸಮುದಾಯಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ತಿನ್ನದಿರುವ ಸಮುದಾಯಗಳು ಗೋವು ಪವಿತ್ರ ಪ್ರಾಣಿ ಎಂಬುದಾಗಿ ಭಾವಿಸುತ್ತವೆ, ಅದನ್ನು ನಾವು ಗೋಮಾತೆ ಎಂಬುದಾಗಿ ಕರೆಯುತ್ತೇವೆ ಹಾಗಾಗಿ ಅದನ್ನು ತಿನ್ನುವವರು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎನ್ನುತ್ತಾರೆ. ಅದನ್ನು ತಿನ್ನುವ ಸಮುದಾಯಗಳಿಗೆ ಅದು ಪಾರಂಪರಿಕ ಆಹಾರ ಪದ್ಧತಿಯಾಗಿದೆ. ಇಂಥ ಸಂದರ್ಭದಲ್ಲಿ ಯಾರೂ ಗೋಮಾಂಸವನ್ನು ತಿನ್ನಬಾರದೆಂದು ಆಗ್ರಹಪಡಿಸುವ ಹೋರಾಟಗಳು ಸ್ವಾಭಾವಿಕವಾಗಿ ಸಮಸ್ಯೆಯನ್ನು ಸೃಷ್ಟಿಸುತ್ತವೆ. ಅಂಥವರಿಗೆ ಪ್ರತಿಯಾಗಿ ಪ್ರಾಚೀನ ಭಾರತದಲ್ಲಿ ಅದನ್ನು ಬ್ರಾಹ್ಮಣರು ಕೂಡ ತಿನ್ನುತ್ತಿದ್ದರೆಂಬ ಹೇಳಿಕೆಯನ್ನು ಮಾಡಲಾಗುತ್ತಿದೆ. ಇದು ಇಂದು ಈ ಚರ್ಚೆಯ ಸಂದರ್ಭ. ಗೋಹತ್ಯಾ ನಿಷೇಧದ ಕುರಿತ ಚರ್ಚೆ ನೂರು ವರ್ಷಗಳಿಗೂ ಹಳೆಯದು. ಅದರ ಕುರಿತು ಯಾರ್ಯಾರು ಏನೇನು ಹೇಳಿಕೆಗಳನ್ನು ಮಾಡಿದ್ದಾರೆ ಎಂಬುದನ್ನು ಗಮನಿಸಿದರೆ ಇದೊಂದು ಸ್ವತಂತ್ರ ಭಾರತದ ಜಟಿಲವಾದ ಚರ್ಚೆ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ.
ಬ್ರಾಹ್ಮಣರು ಕೂಡ ಒಂದು ಕಾಲದಲ್ಲಿ ಗೋಮಾಂಸವನ್ನು ತಿನ್ನುತ್ತಿದ್ದರೆಂಬ ನಿಜಾಂಶವು ಈ ಗೋಹತ್ಯಾ ನಿಷೇಧದ ಪರವಾಗಿರುವವರ ವಾದವನ್ನು ಖಂಡಿಸಲು ಒಂದು ಆಯುಧವೆಂದು ಕೆಲವು ಸೆಕ್ಯುಲರ್ವಾದಿಗಳು ಭಾವಿಸಿದ್ದಾರೆ ಎನ್ನುವುದು ಸ್ಪಷ್ಟ. ಆದರೆ ಈ ವಾದವು ಎದುರಾಳಿಗಳನ್ನು ಕೆರಳಿಸುವಲ್ಲಿ ಯಶಸ್ವಿಯಾಗುತ್ತದೆಯೇ ವಿನಃ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಮಗೆ ಯಾವುದೇ ಸಹಾಯವನ್ನು ಮಾಡಲಾರದು. ಏಕೆಂದರೆ ಈ ವಾದವನ್ನು ಕೇಳಿದಾಕ್ಷಣ ಸಾವಿರಾರು ವರ್ಷಗಳ ಹಿಂದೆ ಆಗಿದ್ದಿರಬಹುದಾದ ಸಂಗತಿಯು ಇಂದಿನ ಕ್ರಿಯೆಗಳಿಗೆ ಸಮರ್ಥನೆಯಾಗಲೀ ವಿರೋಧವಾಗಲೀ ಹೇಗೆ ಆಗಬಲ್ಲದು? ಎಂಬ ಪ್ರಶ್ನೆ ಏಳುವುದು ಸಹಜ. ಬ್ರಾಹ್ಮಣರು ತಮ್ಮ ಇತಿಹಾಸ ಕಾಲಕ್ಕೆ ಮರಳಬೇಕೆಂಬುದಾಗಿ ಏನಾದರೂ ಸೂಚನೆಗಳನ್ನು ಇವರು ನೀಡುತ್ತಿದ್ದಾರೆಯೆ? ಅಥವಾ ಬ್ರಾಹ್ಮಣರು ಸಾವಿರಾರು ವರ್ಷಗಳ ಹಿಂದೆ ಏನು ಮಾಡಿದ್ದಾರೆ ಎಂಬುದು ಇಂದಿನ ಬ್ರಾಹ್ಮಣರ ಟೀಕೆಗೆ ಯಾವರೀತಿಯಲ್ಲಿ ಪ್ರಸ್ತುತವಾಗುತ್ತದೆ? ಅದಕ್ಕಿಂತಲೂ ಇಂಥ ಟೀಕೆಗಳಿಂದ ಇಂದಿನ ಬ್ರಾಹ್ಮಣ ಸಮುದಾಯ ಏಕೆ ಕೆರಳುತ್ತದೆ ಎಂಬುದು ಮತ್ತೂ ಕುತೂಹಲಕಾರಿಯಾಗಿದೆ. ಹೀಗೆ ಟೀಕೆ ಮಾಡುವವರ ಹಾಗೂ ಕೆರಳುವವರ ಗ್ರಹಿಕೆ ಏನೆಂಬುದನ್ನು ಊಹಿಸಿಕೊಂಡಾಗ ನನಗೆ ಕಾಣುವುದಿಷ್ಟು: ಅವರ ಗ್ರಹಿಕೆಯ ಪ್ರಕಾರ ಇಂದಿನ ಹಿಂದೂಗಳ ಆಚರಣೆಗಳನ್ನು ವೇದ, ಧರ್ಮಶಾಸ್ತ್ರಗಳ ಕಾಲದ ಜನರ ಆಚರಣೆಗಳ ಜೊತೆಗೆ ಸಮೀಕೃತವಾಗಿವೆ ಎಂಬುದು. ವೇದಗಳಲ್ಲಿ ಗೋಹತ್ಯೆಯ ಉಲ್ಲೇಖವಿದೆ ಎನ್ನುವವರ ಧೋರಣೆ ಎಂದರೆ ‘ವೇದಗಳಲ್ಲೇ ಹೀಗಿದ್ದ ಮೇಲೆ ನಿಮ್ಮದೆನು ತಕರಾರು?’ ಎಂದೋ ಅಥವಾ ‘ವೇದಕಾಲದಲ್ಲಿ ನೀವೇ ಮಾಡಿದ್ದನ್ನು ಇಂದು ಹೇಗೆ ಬೇರೆಯವರು ಮಾಡಬಾರದೆನ್ನುತ್ತೀರಿ?’ ಎಂದೋ ಇರುತ್ತದೆ. ಇಂಥ ಹೇಳಿಕೆಗಳಿಗೆ ಕೆರಳುವವರೂ ಈ ಅರ್ಥಪ್ರಪಂಚವನ್ನು ತಮ್ಮ ವಿರೋಧಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಅಂಥ ಉಲ್ಲೇಖಗಳೇ ಇಲ್ಲ ಎಂಬುದಾಗಿ ವಾದಿಸುವುದೊಂದೇ ದಾರಿ ಅವರಿಗೆ ಉಳಿಯುತ್ತದೆ. ಈ ಚರ್ಚೆಗೆ ಇಷ್ಟೇ ಫಲವೇ ಹೊರತೂ ಅದು ನಮ್ಮನ್ನು ಮುಂದಕ್ಕೊಯ್ಯುವುದಿಲ್ಲ.

ಈ ಚರ್ಚೆಯಲ್ಲಿ ಏನು ಎಡವಟ್ಟಾಗುತ್ತಿದೆಯೆಂದರೆ ಇಲ್ಲಿ ಎರಡು ತಪ್ಪು ಧೋರಣೆಗಳು ಕೆಲಸಮಾಡುತ್ತಿವೆ: 1) ಗೋಹತ್ಯೆಯ ನಿಷೇಧವು ಬ್ರಾಹ್ಮಣರಿಗೆ ಸಂಬಂಧಿಸಿದ ಸಮಸ್ಯೆ. 2) ಪ್ರಾಚೀನ ಗ್ರಂಥಗಳು ಬ್ರಾಹ್ಮಣರು ಹಿಂದೂ ಸಂಸ್ಕೃತಿಗಾಗಿ ಮಾಡಿದ ನಿಯಮಗಳನ್ನು ಒಳಗೊಂಡಿವೆ. ಇವುಗಳಲ್ಲಿ ಮೊದಲನೆಯ ಧೋರಣೆಯನ್ನು ತೆಗೆದುಕೊಂಡರೆ, ಗೋಹತ್ಯೆಯ ವಿರೋಧವನ್ನು ಹಾಗೂ ಅದನ್ನು ಪ್ರತಿಪಾದಿಸುವ ಹಿಂದುತ್ವವನ್ನು ಇಲ್ಲಿ ಒಂದು ಜಾತಿಗೆ ಸಮೀಕರಿಸಲಾಗುತ್ತಿದೆ. ಗೋಹತ್ಯೆಯು ಮಹಾಪಾಪ ಎಂಬ ಪ್ರಾಚೀನ ಗ್ರಂಥಗಳ ಹೇಳಿಕೆಗಳು ಕೇವಲ ಬ್ರಾಹ್ಮಣರಿಗೆ ಸಂಬಂಧಪಟ್ಟವಲ್ಲ. ಭಾರತದಲ್ಲಿ ಇತಿಹಾಸಕಾಲದಲ್ಲಿ ಹಾಗೂ ಇಂದು ಗೋವನ್ನು ತಿನ್ನದಿರುವವರು ಕೇವಲ ಬ್ರಾಹ್ಮಣರೊಂದೇ ಅಲ್ಲ. ಇದು ಗೋವನ್ನು ನಿರ್ಣಾಯಕವಾಗಿ ಅವಲಂಬಿಸಿದ ಭಾರತೀಯ ಕೃಷಿ ಸಂಸ್ಕೃತಿಗಳ ಎಲ್ಲಾ ಜಾತಿಗಳಲ್ಲೂ, ಮತಗಳಲ್ಲೂ ಸಂಪ್ರದಾಯವಾಗಿ ಬೆಳೆದುಬಂದಿದೆ. ಹಾಗಿರುವಾಗ ಬ್ರಾಹ್ಮಣರು ಗೋವನ್ನು ಹತ್ಯೆಮಾಡುತ್ತಿದ್ದರೆಂದು ತೋರಿಸಿದಾಕ್ಷಣ ಗೋಹತ್ಯಾವಿರೋಧಿಗಳ ವಾದವು ಬಿದ್ದುಹೋಗುತ್ತದೆ ಎಂದೇಕೆ ಭಾವಿಸಲಾಗುತ್ತಿದೆ? ಅದು ವಾಸ್ತವಕ್ಕೆ ವಿರುದ್ಧವಾಗಿರುವುದರಿಂದ ಪ್ರಾಚೀನ ಗ್ರಂಥಗಳಿಂದ ಈ ಸಂಬಂಧಿಸಿ ಕೊಡುವ ಉದಾಹರಣೆಗಳೂ ಕೂಡ ನಿಷ್ಪ್ರಯೋಜಕ.

ಎರಡನೆಯ ಧೋರಣೆಯನ್ನು ತೆಗೆದುಕೊಂಡರೆ, ಭಾರತೀಯ ಸಂಪ್ರದಾಯಗಳಿಗೂ ಪ್ರಾಚೀನ ಗ್ರಂಥಗಳಿಗೂ ಇರುವ ಸಂಬಂಧದ ಕುರಿತು ಈ ಚರ್ಚೆಯಲ್ಲಿ ತೊಡಗಿರುವ ಪರ ವಿರೋಧಿಗಳಿಬ್ಬರ ಕಲ್ಪನೆಯೂ ಪರಿಷ್ಕಾರಕ್ಕೆ ಒಳಗಾಗಬೇಕಿದೆ. ಇಂದು ಕೆಲವು ಸಮುದಾಯಗಳು ಗೋವನ್ನು ತಿನ್ನದಿರುವುದಕ್ಕೂ, ಪ್ರಾಚೀನ ಗ್ರಂಥಗಳಲ್ಲಿ ಗೋವಧೆಯನ್ನು ಪಾಪ ಎಂದಿರುವುದಕ್ಕೂ ನಿರ್ದಿಷ್ಟವಾಗಿ ಯಾವ ಸಂಬಂಧವಿದೆ? ಅವು ಸೆಮೆಟಿಕ್ ರಿಲಿಜನ್ನುಗಳ ಪವಿತ್ರಗ್ರಂಥಗಳಲ್ಲಿ ಬರುವ ವಾಕ್ಯಗಳಂತೆ ಸಮಸ್ತ ಹಿಂದೂ ಜನರ ಆಚರಣೆಗಳಿಗೆ ತಳಹದಿಗಳಾಗಿ ಕೆಲಸಮಾಡುತ್ತಿವೆ, ಆ ಕಾರಣದಿಂದಲೇ ಇಂದಿನ ಹಿಂದೂಗಳು ಗೋಹತ್ಯೆಯನ್ನು ಮಾಡುವುದು ಪಾಪ ಎಂದು ಭಾವಿಸಿಕೊಂಡಿದ್ದಾರೆ ಎಂಬುದಾಗಿ ಇವರು ಭಾವಿಸುತ್ತಿದ್ದಾರೆ. ಇಂದಿನ ಹಿಂದೂಗಳು ತಮ್ಮ ಸಂಪ್ರದಾಯದ ಭಾಗವಾಗಿ ಈ ಪದ್ಧತಿಗಳನ್ನು ತಮ್ಮ ಹಿರಿಯರಿಂದ ಹಾಗೂ ಸುತ್ತಲಿನ ಸಮಾಜದಿಂದ ಪಡೆದುಕೊಂಡಿದ್ದಾರೆಯೇ ಹೊರತೂ ನಮ್ಮ ಗ್ರಂಥಗಳು ಹೇಳುತ್ತವೆ ಎಂಬ ಕಾರಣಕ್ಕಾಗಿ ಆಚರಣೆಯಲ್ಲಿ ಬಂದ ಪದ್ಧತಿ ಇದಲ್ಲ. ನಮ್ಮ ಗ್ರಂಥಗಳು ಏನು ಮಾಡಿವೆಯೆಂದರೆ ಒಂದು ಕಾಲದಲ್ಲಿ ಇಂದಿನ ಹಾಗೇ ಪ್ರಚಲಿತದಲ್ಲಿದ್ದ ಇಂಥ ಆಚರಣೆಗಳನ್ನು ದಾಖಲಿಸಿವೆ. ಆದರೆ ಇಂದು ನಮ್ಮಲ್ಲಿ ನಮ್ಮ ಸಂಸ್ಕೃತಿಯನ್ನು ನೋಡುವ ದೃಷ್ಟಿ ಬದಲಾಗಿದೆ. ನಮ್ಮ ಸಂಸ್ಕೃತಿಯನ್ನು ಸೆಮೆಟಿಕ್ ರಿಲಿಜನ್ನುಗಳಂತೆ ಭಾವಿಸಿ ಪ್ರಚಲಿತದಲ್ಲಿರುವ ಆಚರಣೆಯನ್ನು ಗ್ರಂಥಗಳ ವಿವರಗಳಿಗೆ ಜೋಡಿಸಿಕೊಂಡು ಕಾರ್ಯ ಕಾರಣ ಸಂಬಂಧದಿಂದಲೇ ನೋಡಲು ಕಲಿತಿದ್ದೇವೆ. ಹಾಗಾಗಿ ಈ ಆಚರಣೆಗಳ ಹಿಂದೆ ಗ್ರಂಥಗಳ ನಿರ್ದೇಶನ ಇದೆ ಎಂಬುದಾಗಿ ಭಾಸವಾಗುತ್ತದೆ.

ಒಮ್ಮೆ ಯೋಚಿಸಿ ನೋಡಿ. ಗೋಹತ್ಯೆಯನ್ನು ಮಾಡಬಾರದೆಂಬುದಾಗಿ ಈ ಸಮಾಜದ ಪ್ರತಿಯೊಬ್ಬ ಸದಸ್ಯನೂ ಹೇಗೆ ಕಲಿಯುತ್ತಾನೆ? ಹಾಗೆ ಕಲಿಯುವಾಗ ಯಾರಾದರೂ ಇಂಥ ಗ್ರಂಥದಲ್ಲಿ ಹೇಳಿದೆ ಹಾಗಾಗಿ ಅದನ್ನು ಕೊಲ್ಲಬಾರದು ಎಂದು ಹೇಳುತ್ತಾರೆಯೆ? ಗೋವು ಕಾಮಧೇನು, ಅದರ ರೋಮ ರೋಮಗಳಲ್ಲೂ ದೇವತೆಗಳಿರುತ್ತಾರೆ ಎಂಬ ಕಥೆಗಳನ್ನು ಹೇಳುತ್ತಾರಲ್ಲ? ಎಂದು ನೀವೆನ್ನಬಹುದು. ಆದರೆ ಈ ಕಥೆಗಳೂ ಕೂಡ ಉಳಿದ ಕಥೆಗಳಂತೇ ನಮಗೆ ಗೊತ್ತೇ ಹೊರತೂ ಅವುಗಳಿಗೆ ಗ್ರಂಥಾಧಾರ ಯಾವುದೆಂದು ನಮಗೆ ಗೊತ್ತೆ? ನಮಗೆ ಹಿರಿಯರು ಹೇಳಿಕೊಟ್ಟ ಆಚರಣೆಗಳಿಗೆ ಈ ಕಥೆಗಳನ್ನು ಜೋಡಿಸಿಕೊಳ್ಳುತ್ತೇವೆ ಹಾಗೂ ಆ ಆಚರಣೆಗಳಿಗೆ ಕಾರಣ ಎಂಬಂತೆ ಆ ಕಥೆಗಳನ್ನು ಅವರೂ ಹೇಳುತ್ತಾರೆ ಹಾಗೂ ನಾವೂ ಜೋಡಿಸಿಕೊಳ್ಳುತ್ತೇವೆ ಎಂದಾಕ್ಷಣ ಈ ಆಚರಣೆಗಳಿಗೆ ಗ್ರಂಥಾಧಾರವಿದೆ ಅಂತಲ್ಲ. ಹಾಗಾಗಿ ನಮ್ಮ ಗ್ರಂಥಗಳು ಇದಕ್ಕೆ ವ್ಯತಿರಿಕ್ತವಾಗಿ ಹೇಳುತ್ತವೆ ಎಂಬುದನ್ನು ತೋರಿಸಿದರೆ ಇಂಥ ಆಚರಣೆಗಳು ಬಿದ್ದುಹೋಗುತ್ತವೆ ಅಂದುಕೊಳ್ಳುವುದೇ ತಪ್ಪು.

ಅದೇ ರೀತಿ, ಪ್ರಾಚೀನ ಗ್ರಂಥಗಳಲ್ಲಿ ಗೋಮಾಂಸ ಭಕ್ಷಣೆಗೆ ಆಧಾರಗಳೇ ಇಲ್ಲ ಎಂದು ವಾದಿಸುವುದು ಕೂಡ ಪ್ರಯೋಜನಕಾರಿಯಲ್ಲ. ಗೋಹತ್ಯೆಗೆ ಆಧಾರವನ್ನು ತೋರಿಸುತ್ತಿರುವವರೇನೂ ಸ್ವಂತ ಕಂಡುಹಿಡಿದು ಈ ಸಂಗತಿಯನ್ನು ಹೇಳುತ್ತಿಲ್ಲ. ಕಳೆದ ನೂರಾರು ವರ್ಷಗಳಲ್ಲಿ ಭಾರತೀಯ ಸಂಸ್ಕೃತ ಪಂಡಿತರೂ ಸೇರಿದಂತೆ ವಿದ್ವಾಂಸರನೇಕರು ನಮ್ಮ ಗ್ರಂಥಗಳನ್ನು ಭಾಷಾಂತರಿಸಿ ಕೊಟ್ಟ ಮಾಹಿತಿಯನ್ನೇ ಅವರು ಉಲ್ಲೇಖಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಬೇಕು. ಮಹಾಮಹೋಪಾಧ್ಯಾಯ ಪಿ.ವಿ.ಕಾಣೆಯಂಥವರೂ ಈ ಸಾಲಿನಲ್ಲಿ ಇದ್ದಾರೆ. ಹಾಗಿರುವಾಗ ಆಧಾರಗಳೇ ಇಲ್ಲ ಎಂದು ತೋರಿಸಲು ಹೊರಡುವವರು ಈ ಮೇಲಿನ ಚರ್ಚೆ ಸಾಲದೋ ಎಂಬಂತೆ ಮತ್ತೊಂದು ಚರ್ಚೆಯನ್ನು ಅದಕ್ಕೆ ಸೇರಿಸುತ್ತಾರೆ. ಈ ತಂತ್ರವು ಮತ್ತೊಂದು ತಪ್ಪು ಕಲ್ಪನೆಗೆ ಎಡೆಮಾಡಿಕೊಡುತ್ತದೆ: ಒಂದೊಮ್ಮೆ ಅಂಥ ಉಲ್ಲೇಖ ಇದೆ ಅಂತಾದರೆ ಗೋವಧೆ ಸರಿಯೆ? ಈ ವಿಚಾರವು ನಮಗೆ ಅಸಂಬದ್ಧವೆನ್ನಿಸುತ್ತದೆ. ಉದಾಹರಣೆಗೆ, ವೇದಕಾಲದಲ್ಲಿದ್ದ ನಿಯೋಗ ಪದ್ಧತಿ ಈಗಿಲ್ಲ. ಕೆಲವು ಧರ್ಮಶಾಸ್ತ್ರಗಳೂ ಅದನ್ನು ಉಲ್ಲೇಖಿಸುತ್ತವೆ. ಹಾಗಂತ ಗ್ರಂಥಗಳಲ್ಲಿ ಹೇಳಿದ್ದನ್ನು ಬಿಡುವುದು ಸರಿಯಲ್ಲ, ಹಿಂದೂ ಧರ್ಮದ ಪುನರುತ್ಥಾನ ಮಾಡುವ ಕಾರ್ಯಕ್ರಮದ ಅಂಗವಾಗಿ ನಿಯೋಗಪದ್ಧತಿಯನ್ನು ಈಗ ಪ್ರಚಲಿತದಲ್ಲಿ ತರಬೇಕು ಅಂತ ಯಾರಿಗಾದರೂ ಅನ್ನಿಸುತ್ತದೆಯೆ? ಏಕೆ ಅನ್ನಿಸುವುದಿಲ್ಲ ಎಂದರೆ ನಮಗೂ ನಮ್ಮ ಗ್ರಂಥಗಳಿಗೂ ಇರುವ ಸಂಬಂಧವೇ ಬೇರೆ ಥರದ್ದು. ಮುಂದೊಮ್ಮೆ ನಿಯೋಗ ಪದ್ಧತಿ ಪ್ರಚಲಿತದಲ್ಲಿ ಬಂದ ಪಕ್ಷದಲ್ಲಿ ವೇದಗಳಲ್ಲೇ ಹೇಳಿದೆ ಎಂಬುದಾಗಿ ಆಧಾರ ತೋರಿಸುತ್ತೇವೆ.

ಪವಿತ್ರಗ್ರಂಥಗಳು ತಿಳಿಸುವ ಡಾಕ್ಟ್ರಿನ್ನುಗಳು ಇಲ್ಲದ ಸಂಪ್ರದಾಯಗಳಲ್ಲಿ ಕಾಲಾಂತರದಲ್ಲಿ ಇಂಥ ಅನೇಕ ಪದ್ಧತಿಗಳು ಬರುತ್ತಿರುತ್ತವೆ ಹೋಗುತ್ತಿರುತ್ತವೆ. ಹೊರಟುಹೋದ ಪದ್ಧತಿಗಳನ್ನು ಉಳಿಸಿಕೊಳ್ಳಬೇಕೆಂಬುದಕ್ಕೆ ಇಂಥ ಸಂಪ್ರದಾಯಗಳಲ್ಲಿ ಯಾವುದೇ ಪ್ರಮಾಣಗಳಿಲ್ಲ. ಈ ಎಲ್ಲ ಪ್ರಾಚೀನ ಗ್ರಂಥಗಳೂ ಕೂಡ ಯಾವ್ಯವ್ಯಾವುದೋ ಕಾಲದ ಸಂಪ್ರದಾಯಯಗಳ ದಾಖಲೆಗಳು. ವರ್ತಮಾನದಲ್ಲಿ ಮುಂದುವರಿದುಕೊಂಡು ಬಂದ ಆಚರಣೆಗಳಿಗೆ ಹೊಂದುವಂಥ ನಿರ್ದೇಶನಗಳನ್ನು ಅವುಗಳಿಂದ ಉಲ್ಲೇಖಿಸಿ ಸಮರ್ಥಿಸಬಹುದು, ಆದರೆ ಗ್ರಂಥಗಳಲ್ಲಿದೆ ಎಂಬ ಕಾರಣಕ್ಕೆ ಆ ಆಚರಣೆಗಳು ಉಳಿದುಕೊಂಡು ಬಂದಿವೆ ಅಥವಾ ಉಳಿದುಕೊಂಡು ಬರಬೇಕು ಎನ್ನುವ ತರ್ಕವು ಸಂಪ್ರದಾಯಗಳಿಗೆ ಹೊಂದುವುದಿಲ್ಲ. ಗರ್ಭಿಣಿಯೊಬ್ಬಳು ಸಾಯುತ್ತ ಬಿದ್ದಿರುವಾಗಲೂ ಪವಿತ್ರಗ್ರಂಥದ ಪ್ರಕಾರ ಅವಳಿಗೆ ಗರ್ಭಪಾತವನ್ನು ಮಾಡುವುದು ತಪ್ಪು ಎಂಬಂಥ ಕಾನೂನುಗಳನ್ನು ಮಾಡಬೇಕೆಂದು ರಿಲಿಜನ್ನುಗಳು ಒತ್ತಾಯಿಸಬಹುದು, ಭಾರತೀಯ ಗ್ರಂಥಗಳು ಅಂಥ ಒತ್ತಾಯ ಮಾಡುವುದಿಲ್ಲ . ಸೆಮೆಟಿಕ್ ರಿಲಿಜನ್ನುಗಳಲ್ಲಿ ಸತ್ಯದೇವನಿಂದ ಬೋಧೆಯಾದ ವಾಕ್ಯಗಳನ್ನು ಅದರ ಅನುಯಾಯಿಗಳು ಕಾಣುವಂತೆ ಹಿಂದೂಗಳು ತಮ್ಮ ಗ್ರಂಥವನ್ನು ಕಾಣುವುದಿಲ್ಲ. ಈ ಗ್ರಂಥಗಳ ಜೊತೆಗೆ ನಮ್ಮ ಅನುಸಂಧಾನವೇ ಬೇರೆ ಥರದ್ದು. ನಮ್ಮ ವಿವೇಚನೆ ವರ್ತಮಾನದ ರೂಢಿಗೆ ಹಾಗೂ ಅನಿವಾರ್ಯತೆಗೆ ಒತ್ತು ಕೊಡುತ್ತದೆ. ಯಾವುದೋ ಗ್ರಂಥದಲ್ಲಿದೆ ಎನ್ನುವ ಕಾರಣದಿಂದ ವರ್ತಮಾನದ ರೂಢಿಯನ್ನು ಅದು ಅಲ್ಲಗಳೆಯುವುದಿಲ್ಲ. ನಮ್ಮ ಧರ್ಮದ ಪರಿಕಲ್ಪನೆಯೇ ಸಂದರ್ಭಸ್ಪಂದಿಯಾದುದು ಹಾಗೂ ಕ್ರಿಯಾಶೀಲವಾದುದು. ಯಾವುದೋ ನಿರ್ದಿಷ್ಟ ಗ್ರಂಥ ವಾಕ್ಯಕ್ಕೆ ಸೀಮಿತವಾಗುವಂಥದ್ದಲ್ಲ. ಹಿಂದೂ ಸಂಸ್ಕೃತಿಯ ಕುರಿತು ಮಾತನಾಡುವವರು ಈ ವ್ಯತ್ಯಾಸವನ್ನು ಉಪೇಕ್ಷಿಸುವಂತಿಲ್ಲ. ಉಪೇಕ್ಷಿಸಿದರೆ ಮತ್ತಷ್ಟು ಅನರ್ಥಗಳನ್ನು ಮೈಮೇಲೆಳೆದುಕೊಂಡಂತೇ.

ಹಾಗಾಗಿ ಪ್ರಾಚೀನ ಗ್ರಂಥಗಳಲ್ಲಿ ಗೋವಧೆಗೆ ಉಲ್ಲೇಖವಿದೆಯೋ ಇಲ್ಲವೋ ಎಂಬ ಚರ್ಚೆ ಇಂದಿನ ಸಮಸ್ಯೆಯನ್ನು ಕುರಿತು ಚಿಂತಿಸಲಿಕ್ಕೆ ಪ್ರಯೋಜನವಾಗುವುದಿಲ್ಲ. ಹೆಚ್ಚೆಂದರೆ ಅದು ಮತ್ತೊಂದಿಷ್ಟು ಗೊಂದಲಗಳನ್ನು ಹುಟ್ಟುಹಾಕಬಹುದು. ಇದು ಪಾಶ್ಚಾತ್ಯರು ನಮಗೆ ಕಲಿಸಿದ ಪದ್ಧತಿ. ಅವರು ಭಾರತವನ್ನು ಆಳ್ವಿಕೆಗೆ ಒಳಪಡಿಸಿದಾಗ ನಮ್ಮ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಎದ್ದ ಕಾನೂನಿನ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ನಮ್ಮ ಗ್ರಂಥಗಳನ್ನು ಪ್ರಮಾಣವಾಗಿ ಉಲ್ಲೇಖಿಸುವ ಕ್ರಮವನ್ನು ನಮಗೆ ಕಲಿಸಿದರು. ಈ ಕ್ರಮವು ನಮ್ಮಲ್ಲಿ ಕೆಲಸಮಾಡುವುದಿಲ್ಲ ಎಂಬುದನ್ನು ನಾವು ಎಷ್ಟು ಬಾರಿ ಕಂಡುಕೊಂಡರೂ ಕೂಡ ನಮಗೆ ಅಂಥ ಚರ್ಚೆಗಳನ್ನು ಎತ್ತುವುದು ಒಂದು ಚಾಳಿಯಾಗಿ ಹೋಗಿದೆ.

ಅದಕ್ಕೆ ಬದಲಾಗಿ ಇಂದಿನ ನಮ್ಮ ಭಾರತೀಯ ಸಂಪ್ರದಾಯಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದನ್ನು ಧರ್ಮ ಹಾಗೂ ವ್ಯಾವಹಾರಿಕ ಎಂಬುದಾಗಿ ಭಾವಿಸಿವೆ? ಎಂಬ ಕುರಿತು ಯೋಚಿಸಿದಲ್ಲಿ ಏನಾದರೂ ಹೊಳಹು ಸಿಗಬಹುದು. ಗೋಮಾಂಸವನ್ನು ತಿನ್ನುವವರಿಗೆ ಗೋವನ್ನು ಒದಗಿಸುವವರೇ ಭಾರತೀಯ ಗೋಪೂಜಕ ಕೃಷಿ ಸಂಸ್ಕೃತಿಗಳು ಎಂಬ ಸತ್ಯವನ್ನು ಮರೆಮಾಚುವಂತಿಲ್ಲ. ನಮ್ಮ ಯಾವ ಸಂಪ್ರದಾಯಗಳೂ ಕೂಡ ಒಂದು ಪದ್ಧತಿಯನ್ನು ಅದಕ್ಕೆ ಒಳಪಟ್ಟವರಿಗೆ ವಿಧಿಸುತ್ತವೆಯೇ ವಿನಃ ಹೊರಗಿನವರಿಗಲ್ಲ. ಗೋಹತ್ಯೆಯನ್ನು ನಿಷೇಧಿಸಿದ ಸಂಪ್ರದಾಯಗಳ ಸದಸ್ಯರಿಗೆ ಅದು ಪದ್ಧತಿ ಹಾಗೂ ಧರ್ಮ. ಅವು ಗೋವನ್ನು ಪೂಜಿಸುತ್ತವೆ. ಒಬ್ಬರಿಗೆ ಧರ್ಮವಾದದ್ದು ಮತ್ತೊಬ್ಬರಿಗೆ ಆಗಲೇಬೇಕೆಂದಿಲ್ಲ ಎಂಬ ತಿಳುವಳಿಕೆಯು ನಮ್ಮ ಸನಾತನ ಧರ್ಮವೇ ಆಗಿದೆ. ಅಂಥ ತಿಳುವಳಿಕಯನ್ನಾಧರಿಸಿ ಬಾಳುತ್ತಿರುವ ಅಂಥ ಸಮುದಾಯಗಳು ಗೋಮಾಂಸವನ್ನು ಯಾರೂ ತಿನ್ನಕೂಡದೆಂದು ಹೇಳುವುದಿಲ್ಲ ಹಾಗೂ ಗೋಮಾಂಸವನ್ನು ತಿನ್ನುವವರ ಆಹಾರ ಪದ್ಧತಿಯನ್ನು ಅವು ನಿರಾಕರಿಸುವುದಿಲ್ಲ. ಆದರೆ ತಮಗೆ ಧರ್ಮವಲ್ಲದ್ದನ್ನು ಮತ್ತೊಬ್ಬರು ಮಾಡುತ್ತಿರುವಾಗ ಅವರ ಜೊತೆಗೆ ಸಹಬಾಳ್ವೆ ನಡೆಸಬೇಕೆಂದರೆ ಅವರಿಂದ ಪ್ರತ್ಯೇಕರಾಗಿ ಅವರ ಆಚರಣೆಯ ಕುರಿತು ಔದಾಸೀನ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅಂಥವರ ಜೊತೆಗೆ ಒಂದು ಗಡಿರೇಖೆಯನ್ನು ಎಳೆದುಕೊಳ್ಳುವುದು ಅನ್ಯ ಪದ್ಧತಿಗಳ ಕುರಿತು ನಿರ್ಲಿಪ್ತವಾಗಿರುವುದಕ್ಕೆ ಸಾಧನವಾಗುತ್ತವೆ. ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯು ಇಂಥ ಸಹಬಾಳ್ವೆಯನ್ನು ಕಂಡುಕೊಳ್ಳುತ್ತ ಉಳಿದುಕೊಂಡದ್ದು ಎಂಬುದನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ. ಈ ಸಾಂಪ್ರದಾಯಿಕ ಸಹಬಾಳ್ವೆಯ ವೈಖರಿಯ ಸಾಧಕ ಬಾಧಕಗಳನ್ನೂ ಕೂಡ ಇದನ್ನು ಲಕ್ಷ್ಯದಲಿಟ್ಟುಕೊಂಡೇ ವಿಮಶರ್ಿಸಬೇಕಾಗುತ್ತದೆ. ಗೋಹತ್ಯೆಯನ್ನು ಕುರಿತ ಹೋರಾಟಗಳು ವಸಾಹತು ಕಾಲದಲ್ಲೇ ಏಕೆ ಹುಟ್ಟಿದವು ಎನ್ನುವುದಕ್ಕೂ, ಆಗ ನಾವು ರೂಢಿಸಿಕೊಂಡ ಅನ್ಯ ಚಿಂತನಾಕ್ರಮಕ್ಕೂ ಸಂಬಂಧವಿದೆಯೆ? ಎಂಬುದು ನಮ್ಮ ಸಂಸ್ಕೃತಿಯ ಕುರಿತು ಅಭಿಮಾನವನ್ನಿಟ್ಟುಕೊಂಡವರು ಯೋಚಿಸಬೇಕಾದ ವಿಷಯ.

ಅಷ್ಟಕ್ಕೂ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿಬಿಟ್ಟಷ್ಟಕ್ಕೇ, ಹಾಗೂ ಎಲ್ಲಾ ಆಹಾರ ನಿಯಮಗಳನ್ನು ಪಾಲಿಸಿ ಕಠಿಣ ತಪಶ್ಚರ್ಯೆಯನ್ನು ಮಾಡಿದಷ್ಟಕ್ಕೇ ಬ್ರಹ್ಮಜ್ಞಾನವಾಗಿಬಿಡುತ್ತದೆ ಅಂತ ನಮ್ಮ ಯಾವ ಪ್ರಾಚೀನ ಗ್ರಂಥಗಳೂ ಆಶ್ವಾಸನೆ ಕೊಡುವುದಿಲ್ಲ. ಅದೇ ರೀತಿ ಶ್ವಪಚನಿಗೂ ಕೂಡ ಆತ್ಮಜ್ಞಾನವಾಗಬಹುದು ಎಂದೂ ಅವು ಹೇಳುತ್ತವೆ. ಇಂಥ ಗ್ರಂಥಗಳು ನಿಜವಾಗಿಯೂ ನಮಗೆ ಏನನ್ನು ತಿಳಿಸುತ್ತವೆ ಎಂಬುದರ ಕುರಿತು ನಾವು ಬೇರೆ ನೆಲೆಯಲ್ಲೇ ಚರ್ಚಿಸಬೇಕಾದ ಅಗತ್ಯವಿದೆ.

Advertisements
Categories: Uncategorized
 1. Someone
  ಮಾರ್ಚ್ 3, 2014 ರಲ್ಲಿ 2:14 ಅಪರಾಹ್ನ

  Just a small suggestion. Writing the article originally in unicode (rather than converting to unicode from nudi) will help solve these unreadable characters, like the following: ಚಚರ್ಿ; ತಪಶ್ಚಯರ್ೆ. It is very disturbing to read the article with these errors.

  Like

 2. M A Sriranga
  ಮಾರ್ಚ್ 4, 2014 ರಲ್ಲಿ 7:56 ಅಪರಾಹ್ನ

  ಶ್ರೀ ರಾಜಾರಾಮ್ ಹೆಗಡೆಯವರಿಗೆ ವಂದನೆಗಳು —
  ತಮ್ಮ ಲೇಖನ ವಿಚಾರಪೂರ್ಣವಾಗಿದ್ದು ಇದರಿಂದ ಗೋಹತ್ಯಾ ನಿಷೇಧ ಕುರಿತಂತೆ ಇಂದು ಸಾಮಾನ್ಯವಾಗಿ ಎಲ್ಲರಲ್ಲೂ ಇರುವ ಅನುಮಾನಗಳು ಪರಿಹಾರವಾಗುವಂತಿದೆ. ಇದನ್ನು ತಾವು ರಾಜ್ಯವ್ಯಾಪಿ ಪ್ರಸಾರವಿರುವ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸಬೇಕಾಗಿ ವಿನಂತಿ.
  -ಮು ಅ ಶ್ರೀರಂಗ ಬೆಂಗಳೂರು

  Like

 3. valavi
  ಮಾರ್ಚ್ 4, 2014 ರಲ್ಲಿ 8:33 ಅಪರಾಹ್ನ

  ರಾಜ್ಯವ್ಯಾಪಿ ಪ್ರಸಾರವಿರುವ ಕನ್ನಡ ಪತ್ರಿಕೆಗಳು ಸಮಸ್ಯೆಯನ್ನು ಇಷ್ಟು ಸರಳವಾಗಿ ಬಿಡಿಸಿಬಿಟ್ಟ ಇವರ ಲೇಖನವನ್ನು ಪ್ರಸಾರ ಮಾಡಿದರೆ ಮರುದಿನ ವಿಷಯವಿರದೇ ಸೊರಗಬೇಕಾಗುತ್ತದೆಂಬ ಭಯದಿಂದ ಪ್ರಸಾರ ಮಾಡುವದಿಲ್ಲ. ಅವರಿಗೆ ಸಮಸ್ಯೆಗಳಿರಲೇಬೇಕು. ಅಂದಾಗಲೇ ಪ್ರಸಾರ ಕಾಣಲು ಸಾಧ್ಯವಲ್ಲವೆ??

  Like

 4. M A Sriranga
  ಮಾರ್ಚ್ 5, 2014 ರಲ್ಲಿ 1:23 ಅಪರಾಹ್ನ

  ವಾಳವಿ ಅವರಿಗೆ– ನಿಮ್ಮ ಮಾತು ನಿಜ. ತಾವು ಹೇಳಿದ ರೀತಿಯ ಘಟನೆಯನ್ನು ನಾವೀಗಾಗಲೇ ವಚನಗಳು vs ಜಾತಿ ವ್ಯವಸ್ಥೆಯ ವಾದ ವಿವಾದಗಳ ಸಂದರ್ಭದಲ್ಲೇ ನೋಡಿದ್ದೇವೆ. ಹೆಚ್ಚು ಜನರನ್ನು ತಲುಪಲಿ ಎಂಬ ಉದ್ದೇಶದಿಂದ ನಾನು ಹೇಳಿದ್ದು. ಆ ”ಕನ್ನಡದ ಅತ್ಯಂತ ವಿಶ್ವಾಸಾರ್ಹ” ಪತ್ರಿಕೆಗೆ ಇಂತಹ ಲೇಖನಗಳೆಂದರೆ ಅಲರ್ಜಿ. ಬೇರೆ ಯಾವುದಾದರೂ ಪತ್ರಿಕೆಗಳು ಪ್ರಕಟಿಸಬಹುದೇನೋ ಎಂಬ ಆಸೆ ನನ್ನದು.

  Like

 5. ಮಾರ್ಚ್ 6, 2014 ರಲ್ಲಿ 11:06 ಅಪರಾಹ್ನ

  ನಿಮ್ಮ ಲೇಖನದ ಶೀರ್ಷಿಕೆಯಲ್ಲಿ “ಪ್ರಾಚೀನ ಸಾಹಿತ್ಯ ಮತ್ತು ಮಾಂಸಾಹಾರದ ಕುರಿತ ಚರ್ಚೆ” ಎಂದು ಬರೆದಿದ್ದೀರಿ.
  ಆದರೆ, ಲೇಖನದಲ್ಲಿ ಮಾಂಸಾಹಾರದ ಕುರಿತಾಗಿ ಯಾವ ವಿಚಾರವೂ ಇಲ್ಲ. ಕೇವಲ ಗೋಹತ್ಯೆಗೆ ಸಂಬಂಧಿಸಿದಂತೆ ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಗೋಹತ್ಯೆಗೆ ಸಂಬಂಧಿಸಿದಂತೆ ಲೇಖನ ಉತ್ತಮವಾಗಿ ಮೂಡಿಬಂದಿದೆ.

  ಒಂದು ಕಡೆ ಈ ರೀತಿ ಬರೆದಿದ್ದೀರಿ:
  >> ಅದರ ಕುರಿತು ಯಾರ್ಯಾರು ಏನೇನು ಹೇಳಿಕೆಗಳನ್ನು ಮಾಡಿದ್ದಾರೆ ಎಂಬುದನ್ನು ಗಮನಿಸಿದರೆ
  >> ಇದೊಂದು ಸ್ವತಂತ್ರ ಭಾರತದ ಜಟಿಲವಾದ ಚಚರ್ೆ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ.
  ಅದಕ್ಕೆ ಸಂಬಂಧಿಸಿದಂತೆ ಒಂದು ನಾಲ್ಕಾದರೂ ಹೇಳಿಕೆಗಳನ್ನು ಉಲ್ಲೇಖಿಸಿದ್ದರೆ ಉತ್ತಮವಿತ್ತು.

  ನಿಮ್ಮ ಲೇಖನ ಮುಖ್ಯವಾಗಿ ಗೋಹತ್ಯೆಯ ಸುತ್ತಲೇ ಸುತ್ತುತ್ತಿರುವುದರಿಂದ, ಲೇಖನದ ಶೀರ್ಷಿಕೆಯನ್ನು ಅದಕ್ಕೆ ಹೊಂದುವಂತೆ ಕೊಟ್ಟಿದ್ದರೆ ಉತ್ತಮವಿತ್ತು.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: