ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Cultural Studies, Culture > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 47: ಭಾರತೀಯ ಪುರಾಣಗಳ ಕಥೆಗಳನ್ನು ಅರ್ಥೈಸುವಾಗ ಎಲ್ಲಿ ಎಡವಟ್ಟಾಗುತ್ತಿದೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇತ್ತೀಚೆಗೆ ಭಾರತೀಯ ಪುರಾಣಗಳಿಗೆ ಹೊಸ ನಿರೂಪಣೆ ನೀಡುವ ಕೆಲವು ಪುಸ್ತಕಗಳು ವಿವಾದಕ್ಕೀಡಾಗುತ್ತಿವೆ. ಕನ್ನಡದಲ್ಲಿ ‘ಡುಂಢಿ’ ಎಂಬ ಕೃತಿಯಿಂದ ಹಿಡಿದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವೆಂಡಿ ಡೊನಿಗರ್ ಹಾಗೂ ಅವಳ ಶಿಷ್ಯರು ಭಾರತೀಯ ಸಂಸ್ಕೃತಿಯ ಕುರಿತು ಬರೆದ ಸಂಶೋಧನಾ ಗ್ರಂಥಗಳ ವರೆಗೂ ಈ ವಿವಾದಗಳು ಹಬ್ಬಿವೆ. ಈ ಕೃತಿಗಳ ಸ್ವರೂಪವೇನೇ ಇರಲಿ, ವಿವಾದವು ಮಾತ್ರ ಒಂದೇ ವಿಷಯದ ಕುರಿತಾಗಿದೆ. ಇವರು ಹಿಂದೂ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿದ್ದಾರೆ ಎಂಬುದೇ ತಕರಾರು. ಈ ತಕರಾರುಗಳನ್ನು ಸಂಘಟಿಸುತ್ತಿರುವವರು ಹಿಂದುತ್ವ ಸಂಘಟನೆಯ ಹಿನ್ನೆಲೆಯನ್ನು ಹೊಂದಿರುತ್ತಾರೆ. ಹಾಗಾಗಿ ಈ ವಿರೋಧವನ್ನು ‘ಹಿಂದೂ ಮೂಲಭೂತವಾದಿಗಳ ಆಕ್ರಮಣಶೀಲತೆ’ ಎಂಬುದಾಗಿ ಖಂಡಿಸಲಾಗುತ್ತದೆ. ‘ಹಿಂದೂ ಮೂಲಭೂತವಾದಿ’ ಎಂಬ ಶಬ್ದವು ನಮ್ಮ ಸೆಕ್ಯುಲರ್ ಪ್ರಭುತ್ವದಲ್ಲಿ ಒಂದು ಬಯ್ಗಳಿನ ಸ್ಥಾನವನ್ನು ಅಲಂಕರಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಜೊತೆಗೇ ಇಂಥ ವಿರೋಧಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ಎಂಬ ಕೂಗೂ ಏಳುತ್ತದೆ. ಹಾಗಾಗಿ ಈ ವಿರೋಧವನ್ನು ಕಣ್ಮುಚ್ಚಿ ಖಂಡಿಸಬೇಕು ಎನ್ನುವುದರಲ್ಲಿ ಸಾಮಾಜಿಕ ಕಳಕಳಿಯಿರುವ ಯಾರಿಗೂ ಸಂದೇಹ ಹುಟ್ಟುವುದಿಲ್ಲ.

ಈ ‘ವೆಂಡಿ’ ಯಿಂದ ‘ಡುಂಢಿ’ಯ ವರೆಗೂ ನಡೆಯುತ್ತಿರುವ ವಿವಾದಗಳನ್ನು ಗಮನಿಸಿದಾಗ ಅವೆಲ್ಲವುಗಳಲ್ಲೂ ಒಂದು ಸಾಮಾನ್ಯ ಸಮಸ್ಯೆಯು ಮನೆಮಾಡಿರುವುದು ಕಂಡುಬರುತ್ತದೆ. ಪ್ರಶ್ನೆ ಇರುವುದು ನಮ್ಮ ಪುರಾಣ ಕಥೆಗಳನ್ನು ಹೇಗೆ ಅರ್ಥೈಸಬೇಕು ಎಂಬುದು. ಅಂದರೆ ಕಳೆದ ನೂರಾರು ವರ್ಷಗಳಿಂದ ಪಾಶ್ಚಾತ್ಯರು ಹಾಗೂ ಅವರನ್ನನುಸರಿಸಿದ ಭಾರತೀಯರು ನಮ್ಮ ಪುರಾಣಗಳನ್ನು ಅರ್ಥೈಸಲು ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಅವರು ಈ ಪ್ರಯತ್ನದ ಫಲವಾಗಿ ಥರಾವರಿ ನಿರೂಪಣೆಗಳನ್ನು ಬೆಳೆಸಿ ಅವುಗಳನ್ನು ವಿದ್ವತ್ ಪ್ರಪಂಚದಲ್ಲಿ ಚಾಲ್ತಿಯಲ್ಲಿ ತಂದಿದ್ದಾರೆ. ಇಂದು ಪುರಾಣಗಳಿಗೆ ಹೊಸ ನಿರೂಪಣೆಗಳನ್ನು ಕೊಡುತ್ತೇವೆಂಬುದಾಗಿ ಹೊರಟ ಯಾವುದೇ ವಿದ್ವಾಂಸನೂ ಕೂಡ ಇಂಥ ಒಂದಿಲ್ಲೊಂದು ನಿರೂಪಣೆಗಳನ್ನು ಬಳಸಿಕೊಂಡಿರುತ್ತಾನೆ. ಇಂಥ ತಿಳುವಳಿಕೆಯನ್ನೇ ಆಧರಿಸಿ ಭಾರತೀಯ ಭಾಷೆಗಳಲ್ಲಿ ಕಥೆಗಳು, ಕಾದಂಬರಿಗಳು, ನಾಟಕಗಳು ರಚನೆಯಾಗಿವೆ. ಇವುಗಳ ಲೇಖಕರೆಲ್ಲ ತಮ್ಮದು ಸೃಜನಶೀಲ ಬರವಣಿಗೆ ಎಂದು ಘೋಷಿಸಿಕೊಳ್ಳುತ್ತಾರಾದರೂ ಅವರು ನಿಜವಾಗಿಯೂ ಈ ಪಾಶ್ಚಾತ್ಯ ನಿರೂಪಣೆಗಳಿಗೇ ಬೇರೆ ಹಣೆಪಟ್ಟಿಯನ್ನು ನೀಡಿ ಬಿಕರಿ ಮಾಡುತ್ತಿರುತ್ತಾರೆ.

ಇದುವರೆಗೂ ರಾಶಿಬಿದ್ದ ಇಂಥ ನಿರೂಪಣೆಗಳಿಗೆ ಕೆಲವು ಉದಾಹರಣೆಗಳನ್ನು ನೀಡುವುದಾದರೆ, ವಿಷ್ಣು ಆರ್ಯ ಬ್ರಾಹ್ಮಣರ ಸಂಕೇತವಾದರೆ ಬಲಿ ಶೂದ್ರರ ಸಂಕೇತವಾಗುತ್ತಾನೆ, ರಾಕ್ಷಸರು ದ್ರಾವಿಡ ಜನಾಂಗದವರಾದರೆ ರಾಮನು ಆರ್ಯ ಆಕ್ರಮಣಕ್ಕೆ ಸಂಕೇತವಾಗಿದ್ದಾನೆ, ರಾಮಾಯಣದ ವಾನರರು ದಲಿತರಾಗಿದ್ದರು, ಶಂಬೂಕ ವಧೆ, ಏಕಲವ್ಯನ ಕಥೆ ಇತ್ಯಾದಿಗಳು ಬ್ರಾಹ್ಮಣರು ಶೂದ್ರ, ಬುಡಕಟ್ಟಿನ ಜನರನ್ನು ಶೋಷಿಸಿದ ಕಥೆಗಳಾಗಿವೆ. ಇಂಥ ಅಸಂಖ್ಯ ನಿರೂಪಣೆಗಳು ಇವೆ. ಪುರಾಣ ಕಥೆಗಳಲ್ಲಿ ಇಂಥ ನಿರೂಪಣೆಗಳನ್ನು ಹೊರಡಿಸುವುದು ಎಷ್ಟು ಸಲೀಸಾಗಿದೆಯೆಂದರೆ ಆ ಕೆಲಸಕ್ಕೆ ಅಧ್ಯಯನವೇ ಬೇಕಾಗಿಲ್ಲ. ಭಾರತೀಯ ಲೇಖಕರು ಹಾಗೂ ವಿಭಿನ್ನ ಹೋರಾಟಗಾರರು ನಮ್ಮ ಪುರಾಣಗಳನ್ನೆಲ್ಲ ಇಂಥ ನಿರೂಪಣೆಗಳಿಗೆ ಒಳಪಡಿಸಿದ್ದಾರೆ. ಅಷ್ಟಾಗಿಯೂ ಪುರಾಣಗಳ ಅರ್ಥವನ್ನು ಬರಿದು ಮಾಡಲಿಕ್ಕೆ ವಿದ್ವಾಂಸರಿಗೆ ಹಾಗೂ ಲೇಖಕರಿಗೆ ಆಗಿಲ್ಲ. ಹೊಸ ಹೊಸ ಹೋರಾಟಗಳು ಹುಟ್ಟಿದಂತೆಲ್ಲ ಅದೇ ಪುರಾಣದಲ್ಲಿ ಹೊಸ ಸಂದೇಶಗಳು ಅಡಗಿಕೊಂಡಿರುವುದು ಗಮನಕ್ಕೆ ಬರುತ್ತದೆ.

ಈ ಮೇಲಿನವೆಲ್ಲವೂ ಭಾರತೀಯ ಲೇಖಕರ ಫಲವಂತಿಕೆಗೆ ಸಾಕ್ಷಿಯಾದರೆ, ಅವರಿಗೆ ಆಧಾರವಾದ ಪಾಶ್ಚಾತ್ಯ ಸಮಾಜ ವಿಜ್ಞಾನಿಗಳೂ ಕೈಕಟ್ಟಿ ಕುಳಿತಿಲ್ಲ. ಅವರೂ ಹೊಸ ಹೊಸ ಅಂತಃಶಾಸ್ತ್ರೀಯ ಮಾರ್ಗಗಳನ್ನು ತೆರೆಯುತ್ತ ಪುರಾಣಗಳ ಅರ್ಥವನ್ನು ಶೋಧಿಸುತ್ತಿದ್ದಾರೆ. ಮಾನವಶಾಸ್ತ್ರ ಹಾಗೂ ಮನಃಶಾಸ್ತ್ರಗಳಲ್ಲಿ ಹೊಸ ಸಿದ್ಧಾಂತಗಳು ಬಂದ ಹಾಗೆಲ್ಲ ಪುರಾಣಗಳ ಹೊಸ ಹೊಸ ಅರ್ಥದ ಶೋಧನೆಯಾಗುತ್ತದೆ. ಇತ್ತೀಚೆಗೆ ವೆಂಡಿ ಡೊನಿಗರ್, ಪಾಲ್ ಕೋರ್ಟ್ರೈಟ್, ಜೆಫ್ರಿ ಕ್ರಿಪಾಲ್ ಮುಂತಾದವರು ಮನಃಶಾಸ್ತ್ರೀಯ ಸಿದ್ಧಾಂತಗಳನ್ನು ಬಳಸಿ ಭಾರತೀಯ ಪುರಾಣಗಳನ್ನು ಹಾಗೂ ರಾಮಕೃಷ್ಣರಂಥ ಸನ್ಯಾಸಿಗಳನ್ನು ಅರ್ಥೈಸಲು ಪ್ರಯತ್ನಿಸಿದ್ದರು. ಅವರ ಪ್ರಕಾರ ಈ ಪುರಾಣಗಳು ಲೈಂಗಿಕ ಸಂಕೇತಗಳಿಂದ ತುಂಬಿವೆ. ಅವು ಭಾರತೀಯರ ಲೈಂಗಿಕ ವಿಕೃತಿಯನ್ನೋ, ಆಶಯಗಳನ್ನೋ ಬಿಂಬಿಸುತ್ತವೆ. ಗಣಪತಿಯ ಸೊಂಡಿಲು ಕೂಡ ಲೈಂಗಿಕ ಸಂಕೇತವನ್ನು ಹೊಂದಿದೆ. ರಾಮಕೃಷ್ಣ ಪರಮಹಂಸರ ಅನುಭಾವದ ಹಿಂದೆ ಲೈಂಗಿಕ ಕಾರಣವಿದೆ. ಇಡೀ ಭಾರತೀಯ ಪುರಾಣ ಪ್ರಪಂಚವೇ ಫ್ರಾಯ್ಡ್ ಹಾಗೂ ಯುಂಗ್ರ ಮನಃಶಾಸ್ತ್ರೀಯ ಸಿದ್ಧಾಂತಗಳ ಪ್ರಕಾರ ಲೈಂಗಿಕ ವಿಕೃತಿಯನ್ನು ಪ್ರದರ್ಶಿಸುತ್ತದೆ.

ಇಂಥ ನಿರೂಪಣೆಗಳ ವಿರುದ್ಧ ಹಿಂದೂ ಸಂಪ್ರದಾಯವಾದಿಗಳು ಹೋರಾಟಕ್ಕಿಳಿದರು. ಈ ಕೃತಿಗಳನ್ನು ನಿಷೇಧಿಸಬೇಕೆಂಬುದಾಗಿ ಆಗ್ರಹಿಸಿದರು. ಆಗ ಎದ್ದ ಪ್ರಶ್ನೆಯೆಂದರೆ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಬಾರದೆ? ಹೊಸ ನಿರೂಪಣೆಗಳನ್ನು ಮಾಡಬಾರದೆ? ತಾವೇನೂ ಕಲ್ಪಿಸಿಕೊಂಡು ಹೇಳುತ್ತಿಲ್ಲ. ಮನಃಶಾಸ್ತ್ರೀಯ ಸಿದ್ಧಾಂತಗಳು ಸುಳ್ಳು ಹೇಳುತ್ತವೆಯೆ? ಪ್ರಪಂಚದ ಎಲ್ಲೆಡೆಯಲ್ಲಿ ಮನೋರೋಗ ಚಿಕಿತ್ಸೆಯು ಇಂಥ ಸಿದ್ಧಾಂತಗಳನ್ನೇ ಆಧರಿಸಿಲ್ಲವೆ? ಇತ್ಯಾದಿ. ಈ ಪ್ರಶ್ನೆಗಳು ಯತಾರ್ಥವಾಗಿವೆ. ಏಕೆಂದರೆ ಈ ಮೇಲಿನ ಲೇಖಕರು ಭಾರತೀಯ ಸಂಸ್ಕೃತಿಯನ್ನು ವಿಕೃತವಾಗಿ ತೋರಿಸುವ ಸಲುವಾಗಿ ಸಂಶೋಧನೆ ಮಾಡಿದ್ದಲ್ಲ. ಭಾರತೀಯ ಪುರಾಣಗಳನ್ನು ಅರ್ಥೈಸುವ ನಿಟ್ಟಿನಲ್ಲಿ ಒಂದು ಹೊಸ ಮನಃಶಾಸ್ತ್ರೀಯ ಸಿದ್ಧಾಂತವನ್ನು ಬಳಸಿದ್ದಾರೆ ಹಾಗೂ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ನಡುವೆ ಒಂದು ಸಂವಾದವನ್ನು ನಡೆಸಬಯಸುತ್ತಾರೆ. ಆದರೆ ಈ ಅಧ್ಯಯನಗಳು ತಮಗೆ ಸರಿ ಕಾಣಿಸದಿದ್ದರೂ ಇವುಗಳನ್ನು ಒಪ್ಪಿಕೊಳ್ಳುವ ಹಿಂಸೆ ಭಾರತೀಯರಿಗೆ ತಪ್ಪಿದ್ದಲ್ಲ. ಈ ಮಾತುಗಳನ್ನು ಒಪ್ಪಿದರೆ ಒಂದು ಸಮಸ್ಯೆ ಏಳುತ್ತದೆ: ಒಂದೋ, ಭಾರತೀಯ ಪುರಾಣಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲೇಬಾರದು ಎನ್ನಬೇಕಾಗುತ್ತದೆ, ಇಲ್ಲ, ವೈಜ್ಞಾನಿಕ ಸತ್ಯಗಳನ್ನು ಪ್ರತಿಪಾದಿಸುವಾಗ ಭಾರತೀಯ ಸಂಪ್ರದಾಯಸ್ಥರಿಗೆ ಇಂಥ ಮಾನಸಿಕ ಹಿಂಸೆ ಹಾಗೂ ಸಂಘರ್ಷವು ಅನಿವಾರ್ಯ ಎನ್ನಬೇಕಾಗುತ್ತದೆ. ಇಂಥ ಆಯ್ಕೆಯನ್ನು ಇಟ್ಟರೆ ಪ್ರಜ್ಞಾವಂತರೆಲ್ಲರೂ ಎರಡನೆಯ ಆಯ್ಕೆಯನ್ನೇ ಮಾಡಿಕೊಳ್ಳುವುದು ಅನಿವಾರ್ಯ.

ಈ ಮೇಲಿನ ಆಯ್ಕೆಗಳು ವಿಚಿತ್ರವಾಗಿವೆ. ನಮಗೆ ವೈಜ್ಞಾನಿಕ ಸತ್ಯಗಳು ಬೇಕಾದರೆ ಹಿಂಸೆ ಅನಿವಾರ್ಯ. ಇದರಲ್ಲೇನು ವಿಚಿತ್ರವಿದೆ ಎಂಬುದಾಗಿ ನೀವು ಕೇಳಬಹುದು. ಆಧುನಿಕ ಪಾಶ್ಚಾತ್ಯ ವಿಜ್ಞಾನದ ಉತ್ಸರ್ಗದ ಕಾಲದಲ್ಲಿ ಚರ್ಚಿನ ಜೊತೆಗೆ ವಿಜ್ಞಾನಿಗಳು ಸಂಘರ್ಷಿಸಲಿಲ್ಲವೆ? ಇಂದೂ ಆ ಸಂಘರ್ಷವು ತಣ್ಣಗಾಗಿದೆಯೆ? ಇಂಥ ಉದಾಹರಣೆಯನ್ನು ಗಮನಕ್ಕೆ ತರುವುದರ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಕರೆಕೊಡುವುದು ಈಗ ಸಧ್ಯದಲ್ಲಿ ವಿದ್ವಾಂಸರಿಗೆ ತೆರೆದಿರುವ ಒಂದೇ ಮಾರ್ಗ. ಹಾಗಾಗಿ ನಮ್ಮ ಸಮಾಜದ ಏಳ್ಗೆಯನ್ನು ಗಮನದಲ್ಲಿರಿಸಿ ಈ ವಿರೋಧವನ್ನು ಹತ್ತಿಕ್ಕಬೇಕು. ನನ್ನ ಪ್ರಕಾರ ಸಮಸ್ಯೆ ಇಷ್ಟು ಸರಳವಾಗಿಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಭಾರತವು ಮುಖಾಮುಖಿಯಾದಾಗಲೆಲ್ಲ ಏಳತಕ್ಕ ಸಮಸ್ಯೆಯಿದು. ಪಾಶ್ಚಾತ್ಯ ಸಂಸ್ಕೃತಿಯು ಅನ್ಯ ಸಂಸ್ಕೃತಿಯನ್ನು ವೈಜ್ಞಾನಿಕ ನಿರೂಪಣೆಗೊಳಪಡಿಸಿದಾಗ ಅಲ್ಲಿ ಒಂದು ಹಿಂಸೆ ಜರುಗುತ್ತದೆ. ಅದೆಂದರೆ ಅನ್ಯ ಸಂಸ್ಕೃತಿಗಳು ಪಾಶ್ಚಾತ್ಯರಿಗೆ ವಿಕೃತವಾಗಿ, ಅನೈತಿಕವಾಗಿ ಹಾಗೂ ಹಾಸ್ಯಾಸ್ಪದವಾಗಿ ಕಾಣತೊಡಗುತ್ತವೆ. ಭಾರತೀಯರು ಈ ಪ್ರಕ್ರಿಯೆಗೆ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದು ವೈಜ್ಞಾನಿಕ ಅಧ್ಯಯನವಾಗಿರುವುದರಿಂದ ಭಾರತೀಯರು ತಮ್ಮ ಕುರಿತ ಈ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂಬುದಾಗಿ ಈ ವಿದ್ವತ್ ಪ್ರಪಂಚವು ಆಗ್ರಹಿಸುತ್ತದೆ. ಅಂದರೆ ಸತ್ಯವಾಗಿಯೂ ಭಾರತೀಯರು ಹೀಗೇ ಇದ್ದಾರೆ ಎಂದು ನಂಬದೇ ವಿಧಿಯಿಲ್ಲ.

ನಾನು ಈ ಮೇಲಿನ ವಾದವನ್ನು ಪ್ರಶ್ನಿಸಬಯಸುತ್ತೇನೆ. ಇದು ಸಂಸ್ಕೃತಿಗಳ ಮುಖಾಮುಖಿಯ ಸಮಸ್ಯೆ. ಸಾಮಾಜಿಕ ಅಧ್ಯಯನವು ಪ್ರಪಂಚದ ಕುರಿತು ವಸ್ತುನಿಷ್ಠ ತಿಳುವಳಿಕೆಯನ್ನು ನೀಡುವುದರಿಂದ ಅದನ್ನಿಟ್ಟುಕೊಂಡು ಎರಡು ಸಂಸ್ಕೃತಿಗಳ ನಡುವಿನ ಅಪಾರ್ಥಗಳನ್ನು ನಿವಾರಿಸಬಹುದು ಎಂಬುದು ಸುಳ್ಳು. ಭಾರತೀಯ ಸಂಸ್ಕೃತಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ನಡುವೆ ಇರುವ ವ್ಯತ್ಯಾಸಗಳಿಂದಾಗಿ ಅವುಗಳ ಮುಖಾಮುಖಿಯಲ್ಲಿ ಸಮತೋಲನೆಯಿಲ್ಲ. ಈ ಮುಂದಿನ ದೃಷ್ಟಾಂತವನ್ನು ಗಮನಿಸಿ: ಪಾಶ್ಚಾತ್ಯ ವಿದ್ವಾಂಸನೊಬ್ಬನು ಗಣಪತಿಯ ಕುರಿತ ಪುರಾಣ ಕಥೆಯನ್ನು ಓದಿದಾಗ ಅವನಲ್ಲಿ ಒಂದು ಪ್ರಶ್ನೆ ಏಳುತ್ತದೆ: ಗಣಪತಿಗೇಕೆ ಸೊಂಡಿಲಿದೆ? ಅವನೇಕೆ ಪೂರ್ಣ ಮನುಷ್ಯರಂತಿರದೇ ಅರ್ಧ ಮನುಷ್ಯ ಅರ್ಧ ಆನೆಯಾಗಿದ್ದಾನೆ? ಇತ್ಯಾದಿ. ಅಂದರೆ ಭಾರತೀಯರು ಯಾವುದೋ ಉದ್ದೇಶವನ್ನು ಇಟ್ಟುಕೊಂಡು ಈ ಮೂರ್ತಿಯನ್ನು ಕಲ್ಪಿಸಿದ್ದಾರೆ. ಅದನ್ನು ತಿಳಿದುಕೊಳ್ಳಲು ಅವನು ಭಾರತೀಯನನ್ನು ಕೇಳುತ್ತಾನೆ ಅಂತಿಟ್ಟುಕೊಳ್ಳಿ. ಸಂಭಾಷಣೆ ಹೀಗೆ ಸಾಗುತ್ತದೆ:

ಪಾಶ್ಚಾತ್ಯ: ಈ ಆನೆ ತಲೆಯ ದೇವತೆ ಯಾರು?
ಭಾರತೀಯ: ಅವನು ಗಣಪತಿ, ಶಿವನ ಮಗ, ಶಿವ ಅಂದರೆ….ಇತ್ಯಾದಿ..ಇತ್ಯಾದಿ..
ಪಾಶ್ಚಾತ್ಯ: ಗಣಪತಿಗೇಕೆ ಆನೆಯ ತಲೆ ಇದೆ?
ಭಾರತೀಯ: ಓ ಅದಾ? ಅದನ್ನು ಶಿವನೇ ಅಂಟಿಸಿದ್ದು. ಅದಕ್ಕೊಂದು ಕಥೆಯಿದೆ. ಅದರ ಪ್ರಕಾರ ಪಾರ್ವತಿಯು ಗಣಪತಿಯನ್ನು ತನ್ನ ಮೈ ಕೊಳೆಯಿಂದ ಮಾಡಿದಳು….ಇತ್ಯಾದಿ..ಇತ್ಯಾದಿ..
ಪಾಶ್ಚಾತ್ಯ: ಅದು ಸರಿ, ಅದು ಪುರಾಣವಾಯಿತು. ನಾನು ಈ ಪುರಾಣ ಕಥೆಯ ಅರ್ಥವನ್ನು ಕೇಳುತ್ತಿದ್ದೇನೆ. ಆನೆಯ ತಲೆಯೇ ಏಕೆ ಕಥೆಯಲ್ಲಿ ಬರುತ್ತದೆ? ಮನುಷ್ಯನ ತಲೆಯೇಕಲ್ಲ?
ಭಾರತೀಯ: ನನಗೆ ಗೊತ್ತಿಲ್ಲ. (ಗೊತ್ತಿದೆ ಅಂದರೆ ಮತ್ತೊಂದು ಪುರಾಣ ಕಥೆಯನ್ನು ಅವನು ಹೇಳುತ್ತಾನೆ)
ಪಾಶ್ಚಾತ್ಯ: ಮತ್ತೆ ನೀನು ಏನು ನಡೆಯಿತೆಂಬುದನ್ನೇ ಹೇಳುತ್ತಿದ್ದೀಯಾ. ಯಾಕೆ ಈ ಕಥೆಯಲ್ಲಿ ಆನೆಯ ತಲೆಯನ್ನೇ ಕಲ್ಪಿಸಲಾಗಿದೆ?
ಭಾರತೀಯ: ???..!!!
ಪಾಶ್ಚಾತ್ಯ: ನೀನು ಈ ಕುರಿತು ಯೋಚಿಸಿಯೇ ಇಲ್ಲ ಅಂತಾಯ್ತು. ಹಾಗಾದರೆ ಕೇಳು, ಫ್ರಾಯ್ಡನ ಸಿದ್ಧಾಂತದ ಪ್ರಕಾರ ಅದನ್ನು ವಿವರಿಸಬಹುದು. ವಿವರಣೆ ಹೀಗಿದೆ….ಇತ್ಯಾದಿ.. ಇತ್ಯಾದಿ..
ಅಂದರೆ ಪಾಶ್ಚಾತ್ಯ ಸಂಸ್ಕೃತಿಯು ಎತ್ತುವ ಪ್ರಶ್ನೆ ಹಾಗೂ ವಿವರಣೆಯ ರೂಪದ ಉತ್ತರಗಳು ಭಾರತೀಯ ಕಥೆಗೆ ಪಾಶ್ಚಾತ್ಯ ಸಂಸ್ಕೃತಿಯು ನೀಡುವ ಒಂದು ಹೆಚ್ಚುವರಿ ಆಯಾಮವಾಗಿದೆ. ಆ ಆಯಾಮವು ಭಾರತೀಯ ಪುರಾಣಕ್ಕೆ ಇಲ್ಲ. ಇದ್ದಿದ್ದರೆ ಭಾರತೀಯರು ಅದನ್ನು ಹೇಳುತ್ತಿದ್ದರು. ಆ ಆಯಾಮವು ಭಾರತೀಯ ಪುರಾಣಗಳಿಗೆ ಏಕಿಲ್ಲವೆಂದರೆ ಭಾರತೀಯರು ಪಾಶ್ಚಾತ್ಯರ ಪ್ರಶ್ನೆಯನ್ನು ಕೇಳಿಕೊಂಡಿಲ್ಲ. ಈ ಮೇಲಿನ ಸಂದರ್ಭದಲ್ಲಿ ಆ ಪುರಾಣವನ್ನು ಸೃಷ್ಟಿಸಿದ ಮನುಷ್ಯನು ಹಾಗೇಕೆ ಪುರಾಣವನ್ನು ಬರೆದ? ಅವನ ಸಂಸ್ಕೃತಿಯ ಕುರಿತು ಯಾವ ಸತ್ಯವನ್ನು ಅದು ತಿಳಿಸುತ್ತದೆ? ಎಂಬುದನ್ನು ಶೋಧಿಸುವ ಕೆಲಸ ನಡೆದಿದೆ. ಅಂದರೆ ಪುರಾಣವನ್ನು ಸೃಷ್ಟಿಸಿದ ಸಂಸ್ಕೃತಿಯ ಜನರು ಏನನ್ನು ನಂಬಿಕೊಂಡು ಅಥವಾ ಉದ್ದೇಶವಾಗಿಟ್ಟುಕೊಂಡು ಪುರಾಣವನ್ನು ಕಟ್ಟಿದ್ದಾರೆ ಹಾಗೂ ಆಚರಣೆಯನ್ನು ಮಾಡುತ್ತಿದ್ದಾರೆ? ಎಂಬ ಕಾರಣ ವಿವರಣೆಯನ್ನು ನೀಡಲಾಗಿದೆ.

ಈ ಪ್ರಕ್ರಿಯೆಯಲ್ಲಿ ಗಣಪತಿಯ ಪುರಾಣವನ್ನು ಹೇಳಿಕೊಂಡು ಬಂದ ಜನರು ದಡ್ಡರಾಗಿ ಅಥವಾ ಮುಗ್ಧರಾಗಿ ಪರಿವರ್ತಿತರಾಗುತ್ತಾರೆ. ಆದರೆ ನಿಜವಾಗಿಯೂ ನೋಡಿದರೆ ಭಾರತೀಯರ ದಡ್ಡತನ ಅಥವಾ ಮುಗ್ಧತೆಯು ಪಾಶ್ಚಾತ್ಯ ವಿವರಣೆಯ ಕುರಿತಾಗಿದೆಯೇ ಹೊರತೂ ತಮ್ಮ ಪುರಾಣದ ಕುರಿತಲ್ಲ. ಆದರೆ ಇರುವುದೊಂದೇ ವಿವರಣೆ, ಅದು ಪಾಶ್ಚಾತ್ಯ ವಿವರಣೆ. ಹಾಗಾಗಿ ಪಾಶ್ಚಾತ್ಯ ವಿವರಣೆಯ ಕುರಿತ ದಡ್ಡತನವೇ ಅವರಿಗೆ ತಮ್ಮದೇ ಸಂಸ್ಕೃತಿಯ ಕುರಿತ ದಡ್ಡತನವೂ ಆಗಿ ಪರಿಣಮಿಸುತ್ತದೆ. ಅಷ್ಟೊಂದೇ ಅಲ್ಲ ಪಾಶ್ಚಾತ್ಯರು ನೀಡಿದ ವಿವರಣೆಯೇ ಅವರ ಸಂಸ್ಕೃತಿಯ ಕುರಿತ ಸತ್ಯದ ಸ್ಥಾನವನ್ನು ಅಲಂಕರಿಸುತ್ತದೆ. ಆ ವಿವರಣೆಯ ಪ್ರಕಾರ ಪುರಾಣವು ಲೈಂಗಿಕ ವಿಕೃತಿಯನ್ನು ಚಿತ್ರಿಸಬಹುದು. ಅದನ್ನು ಹೌದೆನ್ನಲೂ ಈ ಸಂಸ್ಕೃತಿಯಲ್ಲಿ ಬೌದ್ಧಿಕ ಸಂಪನ್ಮೂಲಗಳಿಲ್ಲ, ಇಲ್ಲವೆನ್ನಲೂ ಇಲ್ಲ, ಏಕೆಂದರೆ ಅವರಿಗೆ ಆ ಪ್ರಶ್ನೆ ಹಾಗೂ ಉತ್ತರ ಎರಡೂ ಇರಲಿಲ್ಲವಲ್ಲ! ಅಂಥ ಸಂದರ್ಭವು ಅವರನ್ನು ಮೂಕ ಸಾಕ್ಷಿಗಳನ್ನಾಗಿಟ್ಟುಕೊಂಡು ಅವರದೇ ಪುರಾಣಗಳ ಕುರಿತು ವಿವರಣೆಗಳ ಬೆಳೆಯನ್ನು ತೆಗೆಯಲು ಫಲವತ್ತಾದ ನೆಲವಾಗುತ್ತದೆ.

ಇದೊಂದು ವಿಚಿತ್ರವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಅವರು ನೀಡಿದ ವಿವರಣೆಯು ಕೊನೆಗೂ ಭಾರತೀಯರ ಸಹಜಜ್ಞಾನಕ್ಕೆ ಸರಿಯೆನ್ನಿಸುವುದಿಲ್ಲ. ಅದು ತಮ್ಮ ಸಂಸ್ಕೃತಿಯನ್ನು ವಿಕೃತವಾಗಿ ಹಾಸ್ಯಾಸ್ಪದವಾಗಿ ಚಿತ್ರಿಸುತ್ತದೆ ಎಂದೂ ಅನಿಸುತ್ತದೆ. ನಮ್ಮಲ್ಲಿ ಶಿವಲಿಂಗವು ಶಿವನ ಜನನೇಂದ್ರಿಯ ಎಂಬ ಪುರಾಣಕಥೆಗಳು ಇರಬಹುದು, ಆದರೆ ಯಾರೂ ಅದನ್ನು ಶಿವನ ಜನನೇಂದ್ರಿಯ ಎಂಬುದಾಗಿ ಭಾವಿಸಿಕೊಂಡು ಪೂಜೆ ಸಲ್ಲಿಸುವುದಿಲ್ಲ. ಅದನ್ನು ಶಿವ ಎಂಬುದಾಗಿ ಪೂಜಿಸುತ್ತಾರೆ. ಇವರಲ್ಲಿ ಯಾರಿಗೂ ಆ ಕಥೆಯೇ ಗೊತ್ತಿರಲಾರದು. ಗಣಪತಿಯ ಸಂದರ್ಭದಲ್ಲಂತೂ ಯಾರೂ ಅದೊಂದು ಹತ್ತಿಕ್ಕಿದ ಲೈಂಗಿಕ ಸಂಕೇತ ಎಂಬ ಊಹೆಯನ್ನೂ ಮಾಡಿರಲಿಕ್ಕಿಲ್ಲ. ಹಾಗಾಗಿ ಇಂಥ ವಿವರಣೆಯು ಅವರಿಗೆ ಆಘಾತವನ್ನು ನೀಡುತ್ತದೆ. ಆದರೆ ಈ ಪಾಶ್ಚಾತ್ಯರ ವಾದಗಳು ತರ್ಕಬದ್ಧವಾಗಿ ಕಾಣಿಸುತ್ತವೆ ಏಕೆಂದರೆ ಅವು ಒಂದಿಲ್ಲೊಂದು ಸಿದ್ಧಾಂತಗಳನ್ನು ಆಧರಿಸಿವೆ. ಆ ಒಂದು ವಾದವನ್ನು ಪ್ರಶ್ನಿಸುವವರು ಅದಕ್ಕೆ ಆಧಾರವಾದ ಪಾಶ್ಚಾತ್ಯ ಸಿದ್ಧಾಂತವನ್ನೇ ಅಧ್ಯಯನ ಮಾಡಬೇಕು.

ಒಂದೊಮ್ಮೆ ಅಧ್ಯಯನ ನಡೆಸಿ ಒಬ್ಬನು ಆ ಸಿದ್ಧಾಂತವು ಸರಿಯಿಲ್ಲ ಎನ್ನುತ್ತಾನೆ ಅಂತಿಟ್ಟುಕೊಳ್ಳಿ. ಆಗ ಅವನು ಈ ಪುರಾಣಗಳ ಕುರಿತು ಒಳ್ಳೆಯ ಚಿತ್ರಣವನ್ನು ನೀಡುವ ಮತ್ತೊಂದು ಪಾಶ್ಚಾತ್ಯ ಸಿದ್ಧಾಂತವನ್ನು ಬಳಸಿಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಏಕೆಂದರೆ ಈ ವಿವರಣೆಯ ಆಯಾಮವೇ ಈ ಸಂಪ್ರದಾಯಗಳಿಗಿಲ್ಲ. ಹಾಗಾಗಿ ಪುರಾಣಗಳ ಕುರಿತು ಪರ್ಯಾಯ ಸಿದ್ಧಾಂತಗಳನ್ನು ಹಾಗೂ ವಿವರಣೆಗಳನ್ನು ಕಟ್ಟುವ ಕೆಲಸವನ್ನು ಈ ಮೇಲಿನ ನಿರೂಪಣೆಯನ್ನು ವಿರೋಧಿಸುವವರೇ ಮಾಡಿಕೊಳ್ಳಬೇಕು. ಅಂದರೆ, ಒಂದೆಡೆ ಭಾರತೀಯನಿಗೆ ಈ ಮೇಲಿನ ವಿವರಣೆಯು ಸುಳ್ಳೆನ್ನಿಸುತ್ತದೆ, ಆದರೆ ಮತ್ತೊಂದೆಡೆ ಪರ್ಯಾಯ ವಿವರಣೆಯನ್ನು ಅಷ್ಟೇ ತರ್ಕಬದ್ಧವಾಗಿ ಮುಂದಿಡಲೂ ಸಾಧ್ಯವಿಲ್ಲ. ಇದು ಅವನಲ್ಲಿ ಹತಾಶೆಯನ್ನು ಹಾಗೂ ರೋಷವನ್ನು ಹುಟ್ಟಸುತ್ತದೆ.

ಪಾಶ್ಚಾತ್ಯ ಸಿದ್ಧಾಂತಗಳು ಭಾರತೀಯರ ಸಹಜಜ್ಞಾನಕ್ಕೆ ವಿರುದ್ಧವಾಗಿ ಕಾಣಿಸುವುದಕ್ಕೆ ಇವೆರಡೂ ಸಂಸ್ಕೃತಿಗಳ ನಡುವಿನ ವ್ಯತ್ಯಾಸವೇ ಕಾರಣ. ಮನಃಶಾಸ್ತ್ರದ ಸಿದ್ಧಾಂತಗಳನ್ನು ಒಪ್ಪಿಕೊಂಡ ಪಾಶ್ಚಾತ್ಯ ವಿದ್ವಾಂಸರಲ್ಲಿ ಇರುವ ಪೂರ್ವಗ್ರಹೀತದ ಪ್ರಕಾರ ರಿಲಿಜನ್ನಿನ ಆಚರಣೆ ಹಾಗೂ ವರ್ಷಿಪ್ಗಳು ಮನುಷ್ಯನ ಹತ್ತಿಕ್ಕಿದ ಲೈಂಗಿಕತೆಯನ್ನು ಪ್ರಕಟಪಡಿಸುತ್ತವೆ. ಹಿಂದೂಯಿಸಂ ಕೂಡ ರಿಲಿಜನ್ನು ಆಗಿರುವುದರಿಂದ ಅದರ ಪುರಾಣಗಳಲ್ಲೂ ಈ ಲೈಂಗಿಕತೆ ಕಾಣಿಸಬೇಕು. ಅಂದರೆ ಗಣಪತಿಯ ಕುರಿತ ವಿವರಣೆಯು ಮಂಜುಗಡ್ಡೆಯ ಮೊನೆ ಮಾತ್ರ. ಅದರ ಒಳಗೆ ಮನಃಶಾಸ್ತ್ರೀಯ ಪೂರ್ವಗ್ರಹೀತಗಳು ಇವೆ. ಈ ಮನಃಶಾಸ್ತ್ರೀಯ ಪೂರ್ವಗ್ರಹೀತಗಳ ಹಿಂದೆ ಥಿಯಾಲಜಿಯ ಗ್ರಹಿಕೆಗಳಿವೆ. ಉದಾಹರಣೆಗೆ ಆಚರಣೆಗಳ ಹಿಂದೆ ನಂಬಿಕೆಗಳಿರಬೇಕು ಎಂಬುದು. ಅದೇ ಗ್ರಹಿಕೆಯೇ ಇಂಟೆನ್ಶನಲ್ ಸೈಕಾಲಜಿಗೆ ಆಧಾರವಾಗಿದೆ. ಅಂದರೆ ಈಗ ಇರುವ ಸಾಮಾಜಿಕ ಅಧ್ಯಯನವು ಥಿಯಾಲಜಿಯ ಗ್ರಹಿಕೆಗಳನ್ನು ಕಳ್ಳಸಾಗಣೆ ಮಾಡುತ್ತಿದೆ. ಪಾಶ್ಚಾತ್ಯ ಮನಃಶಾಸ್ತ್ರವೂ ಇದಕ್ಕೆ ಹೊರತಲ್ಲ. ಇದರ ಪರಿಣಾಮವಾಗಿ ರಿಲಿಜನ್ನೇ ಇಲ್ಲದ ತೀರಾ ಬೇರೆಯದೇ ಆದ ಸಂಸ್ಕೃತಿಯ ಕುರಿತ ಗ್ರಹಿಕೆಯು ವಿಕೃತವಾಗುತ್ತದೆ.

ಹಾಗಾಗಿ ಪಶ್ಚಿಮೇತರ ಸಂಸ್ಕೃತಿಗಳಿಗೆ ಪಾಶ್ಚಾತ್ಯ ನಿರೂಪಣೆಗಳನ್ನು ಅಲ್ಲಗಳೆಯಲು ಇರುವ ಒಂದೇ ಮಾರ್ಗವೆಂದರೆ ತಮ್ಮ ಕುರಿತು ಪರ್ಯಾಯ ವಿವರಣೆಗಳನ್ನು ಬೆಳೆಸುವುದು. ಅದನ್ನು ಬೆಳೆಸಬೇಕಾದರೆ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸಗಳ ಕುರಿತು ಸಿದ್ಧಾಂತಗಳನ್ನು ಬೆಳೆಸಬೇಕು.

 

Advertisements
 1. ವಲವಿ
  ಏಪ್ರಿಲ್ 1, 2014 ರಲ್ಲಿ 10:22 ಅಪರಾಹ್ನ

  ಬಲಿ ಶೂದ್ರನೆಂದು ನೀವು ಹೇಳಿದ್ದೀರಿ? ಬಲಿ ಹೇಗೆ ಶೂದ್ರ? ಕಶ್ಯಪ ಬ್ರಹ್ಮ ಬ್ರಾಹ್ಮಣ. ಇವನ ಮೊಮ್ಮಗ ಪ್ರಹ್ಲ್ಲಾದ ಬ್ರಾಹ್ಮಣ. ಪ್ರಹ್ಲಾದನ ಮೊಮ್ಮಗ ಬಲಿ ಹೇಗೆ ಶೂದ್ರ? ಅವನೂ ಬ್ರಾಹ್ಮಣನೇ ಆಗಬೇಕಲ್ಲವೆ? ಇನ್ನು ನನ್ನ ಪ್ರಶ್ನೆ ಎಂದರೆ ಬ್ರಾಹ್ಮಣರನ್ನು ಅವರ ದುರ್ಗುಣಗಳಿಗಾಗಿ ಕೊಂದವರನ್ನೇ ಬ್ರಾಹ್ಮಣರು ತಮ್ಮ ಮನೆ ದೇವರಾಗಿ ಪೂಜಿಸುತ್ತಾರಲ್ಲಾ? ಯಾಕೆ? ಉದಾಹರಣೆಗೆ ಬ್ರಾಹ್ಮಣನಾದ ಹಿರಣ್ಯಕಶಿಪುವನ್ನು ಕೊಂದ ನರಸಿಂಹ, ಹಾಗೆ ಇವನ ತಮ್ಮ ಹಿರಣ್ಯಾಕ್ಷನನ್ನು ಕೊಂದ ವರಾಹ , ಮಹಾಬ್ರಾಹ್ಮಣ ರಾವಣನನ್ನು ಕೊಂದ ರಾಮ, ದಕ್ಷನನ್ನು ಕೊಂದ ಶಿವ ಬಲಿಯನ್ನು ಪಾತಾಳಕ್ಕೆ ಮೆಟ್ಟಿದ ವಾಮನ, ಇವರೆಲ್ಲ ಬ್ರಾಹ್ಮಣರಿಂದಲೇ ಪೂಜಿಸಲ್ಪಡುತ್ತಿರುವರಲ್ಲಾ? ತಮ್ಮವರನ್ನೇ ಕೊಂದವರನ್ನೂ ಬ್ರಾಹ್ಮಣರು ಯಾಕೆ ದೇವರೆಂದು ಪೂಜಿಸುತ್ತಾರೆ? ಇವರಿಗೆ ಆತ್ಮ ಗೌರವವಿಲ್ಲವೋ ಅಥವಾ ದುಷ್ಟನು ಯಾವನಾದರೂ ದುಷ್ಟನೇ ಎಂಬ ಭಾವ ಬಲವಾಗಿದ್ದ ಕಾರಣವೋ?? ನಮ್ಮ ಶತೃವಿನಲ್ಲು ಒಳ್ಳೆಯ ಗುಣವಿದ್ದರೆ ಗೌರವಿಸೋಣ ಎಂಬ ಉದಾತ್ತ ಚಿಂತನೆಯೋ?? ದಯವಿಟ್ಟು ಉತ್ತರಿಸುವಿರಾ????

  Like

  • Anil
   ಏಪ್ರಿಲ್ 2, 2014 ರಲ್ಲಿ 9:34 ಫೂರ್ವಾಹ್ನ

   Hello Valavi, I am a reader and have read this article before. So thought to share my ideas about your comments.In my opinion your first question seems to be out of context. I feel the article or the author doesnot himself say that Bali is Shudra. He is only giving examples of “existing” wrong arguments. Also, these 2-3 examples is enough to imagine how one can extrapolate to create innumerable amount of silly arguments of this type and put our own selves in to perpetual condemnation which is exactly what is happening with some intellectuals in India.

   Coming to your remaining part of the comments, If you read puranas you will see the god incarnation takes on all evil people. But you are cherry picking only those who were brahmanas who fought with the gods. You should rethink what compells you to restrict yourself this way and forces your mind to ignore other examples. I can give you other examples but I feel it will be intellectual spoon feeding to do so and I am sure you will defnitely know all other samharas of Rama ,Kirshna, Shiva and others.

   You seem to be equating god figure with human.This is a fundamental error in your approach. That is why I am compelled to assume that perhaps you dont consider Rama and Shiva to be gods at personal level and super imposing this personal belief while tackling this question. This is the reason why you get a silly question such as why brahmins praying to ‘enemy’ Rama even though he killed one of their own. you have given 3 possible reasons why brahmins pray to these gods. But none of them factually qualify for being valid reason for them to pray to these gods. Moreover not only brahmins , every hindu community pray to these gods. Do you genuinely believe that while praying , any hindu person whether brahmin or other community conciously thinking about the caste of the persons killed by god ?? They all treat it as good vs evil since thats how all their forefathers have been praying.

   Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: