ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 48: ಕಥೆಗಳನ್ನು ಕಟ್ಟುತ್ತಾ ಜಗತ್ತನ್ನು ಕಟ್ಟಿಕೊಳ್ಳುವ ಕ್ರಮ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಭಾರತೀಯ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ಮಗುವೊಂದಕ್ಕೆ ‘ಒಂದಲ್ಲಾ ಒಂದೂರಿನಲ್ಲಿ…’ ಎಂಬ ಸಾಲು ಚಿರಪರಿಚಿತ. ಮಕ್ಕಳು ಸಣ್ಣವರಿದ್ದಾಗ ಅವರ ತಾಯಂದಿರೋ, ಅಜ್ಜಿಯರೋ ಅವರಿಗೆ ಕಥೆಯನ್ನು ಹೇಳಿ ಮಲಗಿಸುವ ಪದ್ಧತಿಯಿದೆ. ಅಜ್ಜಿಯರಿರುವ ಮನೆಯಲ್ಲಿ ಅವರಿಗೇ ಹೆಚ್ಚು ಪುರುಸೊತ್ತು ಇರುವುದರಿಂದ ಅವರೇ ಈ ಕೆಲಸವನ್ನು ನಿರ್ವಹಿಸುತ್ತಾರೆ. ಹಾಗಾಗಿ ಅವನ್ನು ‘ಅಜ್ಜಿ ಕಥೆ’ ಎಂಬುದಾಗಿಯೂ ಅನ್ವರ್ಥನಾಮದಿಂದ ಗುರುತಿಸುತ್ತಾರೆ. ಈ ಕಥೆಗಳಲ್ಲೂ ಬೇರೆ ಬೇರೆ ವಯಸ್ಕರಿಗೆ ತಕ್ಕಂತೇ ಗ್ರೇಡುಗಳಿವೆ. ಒಂದು ಮಗು ಮಾತು ಕಲಿತಾಕ್ಷಣ ಪ್ರಾರಂಭಿಸುವ ಕಾಕಣ್ಣ-ಗುಬ್ಬಣ್ಣ ಮುಂತಾದ ಪ್ರಾಣಿಗಳ ಸರಳ ಕಥೆಗಳಿವೆ. ಪ್ರಾಣಿ ಪಕ್ಷಿಗಳ ಕುರಿತು ಅಂಥ ಮಕ್ಕಳು ತೋರಿಸುವ ಸ್ವಾಭಾವಿಕ ಕುತೂಹಲವನ್ನು ಆಧರಿಸಿ ಈ ಕಥೆಗಳಿರುತ್ತವೆ. ಮಗು ದೊಡ್ಡದಾದಂತೆಲ್ಲ ಕ್ರಮೇಣ ಮಕ್ಕಳ ನಡಾವಳಿಯಿಂದ ಹಿಡಿದು ದೊಡ್ಡವರ ನಡಾವಳಿಗಳ ಹಾಗೂ ಘಟನೆಗಳನ್ನೊಳಗೊಂಡ ಕಥೆಗಳವರೆಗೂ ಅದರ ಪ್ರಜ್ಞೆಯ ಭಾಗಗಳಾಗುತ್ತವೆ. ಆಗಲೇ ರಾಮಾಯಣ, ಮಹಾಭಾರತ, ಪುರಾಣ ಕಥೆಗಳು ಮಗುವಿಗೆ ಪರಿಚಯವಾಗುತ್ತವೆ. ಅಂಥ ಕುಟುಂಬವೊಂದರಲ್ಲಿ ಒಂದು ಮಗುವು ಹೊಸ ಕಥೆಯನ್ನು ಹೇಳಬೇಕೆಂದು ಹಿರಿಯರನ್ನು ಪೀಡಿಸುವುದೂ, ರಚ್ಚೆ ಹಿಡಿಯುವುದೂ, ಕಥೆಗಳಿಗೆ ಸಂಬಂಧಿಸಿದಂತೇ ಪ್ರಶ್ನೆಗಳನ್ನು ಹಾಕುವುದೂ, ಹಾಗೂ ತಾನೇ ಹೊಸ ಕಥೆಗಳನ್ನು ಕಟ್ಟಿ ಹೇಳುವುದೂ ಸಾಮಾನ್ಯ. ಈ ರೀತಿಯಾಗಿ ಒಂದು ಮಗುವು ತನ್ನ ಕುಟುಂಬದ ಸದಸ್ಯರಂತೇ ಅವರು ಹೇಳುವ ಕಥೆಗಳ ಪಾತ್ರಗಳ ಜೊತೆಗೂ ಒಡನಾಡುತ್ತ ಬೆಳೆಯುತ್ತದೆ.

ಇದರಲ್ಲೇನು ವಿಶೇಷವಿದೆ? ಎಂದು ನೀವೆನ್ನಬಹುದು. ಅಥವಾ ನನ್ನದು ಕಳೆದುಹೋದ ಜೀವನಕ್ರಮವೊಂದರ ಕುರಿತಾದ ಹಳವಂಡ ಎಂಬುದಾಗಿ ಕೂಡ ನಿಮಗನಿಸಬಹುದು. ‘ಕಥೆಗೆ ಕಾಲಿಲ್ಲ’ ಎಂಬಂತೇ ಏನೋ ಕಾಲಹರಣಕ್ಕೆ ಅಜ್ಜಿ ಮೊಮ್ಮಕ್ಕಳು ಪ್ರಯತ್ನಿಸಿದ್ದಾರೆ, ಅದನ್ನೇನು ದೊಡ್ಡದಾಗಿ ಹೇಳುವುದು? ಎನ್ನಲೂಬಹುದು. ನಿಮ್ಮ ಈ ಯಾವ ಅನಿಸಿಕೆಗಳೂ ಸುಳ್ಳಲ್ಲ. ನಮಗೆ ಇದೊಂದು ತೀರಾ ಸಾಮಾನ್ಯ ವಿಷಯ. ಹಾಗೂ ನಮ್ಮಲ್ಲಿ ಕಥಾ ಕಾಲಕ್ಷೇಪ ಎಂಬುದಾಗಿಯೇ ಇದನ್ನು ಗುರುತಿಸುತ್ತಾರೆ. ಯಾರೂ ಇದನ್ನು ನೀತಿಬೋಧನೆ, ಮಗುವಿಗೆ ಪ್ರಪಂಚದ ಕುರಿತಾಗಿ ಕಲಿಸುವುದು ಎಂದು ಕರೆಯುವುದು ಹೋಗಲಿ, ಹಾಗೆ ಅಂದುಕೊಳ್ಳುವುದೂ ಇಲ್ಲ. ಹಾಗಂತ ಈ ಕಥಾಲೋಕವೊಂದು ಕೇವಲ ಕನಸಿನಂಥ ಕಾಲ್ಪನಿಕ ಲೋಕವನ್ನು ಸೃಷ್ಟಿಸಲಿಕ್ಕಾಗಿ ಇರುವಂಥದ್ದು ಎಂಬುದಾಗಿ ಭಾವಿಸಿದರೆ ನಾವು ನಮ್ಮ ಸಂಸ್ಕೃತಿಯನ್ನು ಅರ್ಥೈಸುವಲ್ಲಿ ನಿರ್ಣಾಯಕವಾಗಿ ತಪ್ಪು ಮಾಡುತ್ತೇವೆ. ಹಾಗಾಗಿ ನನ್ನದು ಹಳವಂಡವಲ್ಲ. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ, ಬೆಳೆದು ದೊಡ್ಡವರಾಗಿ ಸಾಯುವವರೆಗೂ ನಾವು ಭಾರತೀಯರು ಕಥಾಲೋಕದಲ್ಲೇ ಬದುಕುತ್ತೇವೆ, ಕಥೆ ಕೇಳುತ್ತಲೇ ಸಾಯುತ್ತೇವೆ. ಪ್ರಪಂಚದ ಯಾವ ಸಂಸ್ಕೃತಿಯೂ ಸೃಷ್ಟಿಸದಂತಹ ಚಿತ್ರ ವಿಚಿತ್ರ, ಅದ್ಭುತ ರಮ್ಯ ಕಥೆಗಳನ್ನು ಸೃಷ್ಟಿಸಿದ್ದೇವೆ. ನಮ್ಮ ಪಂಚತಂತ್ರ, ಜಾತಕ ಕಥೆಗಳು, ಮಹಾಭಾರತ, ರಾಮಾಯಣ, ಪುರಾಣಗಳು, ಬೃಹತ್ಕಥಾಮಂಜರಿ, ಇಂಥವೇ ಅಸಂಖ್ಯ ಕಥೆಗಳ ಸಂಗ್ರಹಗಳು ಭಾರತದ ಎಲ್ಲಾ ಭಾಷೆಯಲ್ಲೂ, ಸಂಪ್ರದಾಯಗಳಲ್ಲೂ ವಿಫುಲವಾಗಿ ಸೃಷ್ಟಿಯಾಗಿವೆ.

ಇದೇ ನನಗೆ ವಿಶೇಷವಾಗಿ ಕಾಣಿಸುತ್ತಿದೆ. ದೊಡ್ಡವರಿಗೂ ಏಕೆ ಕಥೆಯ ಹುಚ್ಚು? ಪಾಶ್ಚಾತ್ಯರಿಗೆ ಇದು ವಿಲಕ್ಷಣವಾಗಿ ಕಂಡಿದೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮಕ್ಕಳ ಕಥೆಗಳೆಂದರೆ ಮನೋರಂಜನೆಯ ವಸ್ತುಗಳು. ಒಬ್ಬನು ಪ್ರೌಢನಾಗಿ ಬೆಳೆದಂತೆಲ್ಲ ಇಂಥ ಕಥೆಗಳನ್ನು ಸುಳ್ಳು ಹಾಗೂ ಅವಾಸ್ತವಿಕವೆಂಬುದಾಗಿ ಗುರುತಿಸಲು ಕಲಿಯಬೇಕು. ಹಾಗೆ ಗುರುತಿಸುವುದೇ ಅವನ ಪ್ರೌಢತೆಯ ಲಕ್ಷಣವಾಗುತ್ತದೆ. ಸತ್ಯಶೋಧನೆಗೆ ಈ ಪ್ರೌಢತೆಯು ಅತ್ಯಗತ್ಯ. ಹಾಗಾಗಿ ಪಾಶ್ಚಾತ್ಯರು ಈ ವಿಚಿತ್ರವನ್ನು ಗಮನಿಸಿದಾಗ ಅವರಿಗೆ ಸಾಧ್ಯವಾದ ಒಂದು ವಿವರಣೆಯೆಂದರೆ ಭಾರತೀಯರು ಇನ್ನೂ ಮನುಕುಲದ ಬಾಲ್ಯಾವಸ್ಥೆಯಲ್ಲೇ ಇದ್ದಾರೆ ಎಂಬುದು. ಇವರ ಬುದ್ಧಿಯು ಪ್ರೌಢಾವಸ್ಥೆಯನ್ನು ತಲುಪಿದ್ದೇ ಹೌದಾಗಿದ್ದರೆ ಅವರು ಹೀಗೇಕೆ ಮಕ್ಕಳಂತೇ ಕಾಲಿಲ್ಲದ ಕಥೆಗಳನ್ನು ಹೇಳಿಕೊಂಡು ತಿರುಗಬೇಕು? ಅದೂ ಅಲ್ಲದೇ ಪಾಶ್ಚಾತ್ಯರು ನಮ್ಮ ಸಂಸ್ಕೃತಿಯನ್ನು ನೋಡಿ, ಕೇಳಿ, ಓದಿ ತಿಳಿದುಕೊಂಡಿದ್ದೆಂದರೆ ಇವರಿಗೆ ಈ ಪ್ರಪಂಚದ ಕುರಿತು ಹೇಳಲಿಕ್ಕೆ ಕಥೆಗಳನ್ನು ಬಿಟ್ಟರೆ ಯಾವುದೇ ವೈಜ್ಞಾನಿಕ ವಿವರಣೆಗಳಿಲ್ಲ ಎಂಬುದು. ಹಾಗಾಗಿ ಭಾರತೀಯರ ಮನಸ್ಸು ಕಥೆಗಳ ಮಾಯಾಲೋಕದಿಂದ ಇನ್ನೂ ಹೊರಗೇ ಬಂದಿಲ್ಲ ಎಂಬುದಾಗಿ ಅವರು ತಿಳಿದರು. ಹಾಗಾಗಿ ಒಂದೋ ಪಾಶ್ಚಾತ್ಯರು ನಿರ್ಣಯಿಸಿದಂತೇ ಭಾರತೀಯರ ಬಾಲಿಶತನವನ್ನು ಈ ಕಥಾಲೋಕವು ತೋರಿಸುತ್ತದೆ. ಒಂದೊಮ್ಮೆ ಆ ನಿರ್ಣಯವು ಭಾರತೀಯರಾಗಿ ನಿಮಗೆ ಸರಿ ಕಾಣಿಸದಿದ್ದರೆ ಏಕೆ ಅದು ಸರಿಯಲ್ಲ ಎಂಬುದನ್ನು ವಿವರಿಸಬೇಕು.

ನಮ್ಮಲ್ಲಿ ಯಾವುದಾದರೂ ಆಚರಣೆಗೆ ಕಾರಣವನ್ನು ಕೇಳಿದಾಗ ನಮ್ಮ ಹಿರಿಯರು ಒಂದೋ ಅಥವಾ ಬಹಳಷ್ಟೋ ಕಥೆಗಳನ್ನು ಹೇಳಿಬಿಡುತ್ತಾರೆ. ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯ ಕುರಿತು ಕೇಳಿದ ಪ್ರಶ್ನೆಗಳಿಗೂ ಅವರಿಂದ ಇಂಥ ಉತ್ತರಗಳೇ ಬಂದಿದ್ದವು. ಅಂದರೆ ಊಹಿಸಿ, ಪ್ರಶ್ನೆಯು ಆಚರಣೆಗಳ ಕಾರಣ ಹಾಗೂ ಉದ್ದೇಶದ ಕುರಿತಾಗಿತ್ತು. ಅದಕ್ಕೆ ಸಿಕ್ಕಿದ ಉತ್ತರ ಕಥೆಯಾಗಿತ್ತು. ಆಗ ಬರಬಹುದಾದ ಒಂದು ತೀರ್ಮಾನವೆಂದರೆ ಈ ಜನರು ಕಥೆಗಳಲ್ಲಿ ನಿರ್ದೇಶಿಸಿದ ಕ್ರಿಯೆಗಳನ್ನು ನಂಬಿ ಅದರಂತೇ ಆಚರಿಸುತ್ತಾರೆ ಎಂಬುದು. ಪಾಶ್ಚಾತ್ಯರು ಹಾಗೇ ತೀರ್ಮಾನಿಸಿದರು ಹಾಗೂ ಅಂಥ ತೀರ್ಮಾನಗಳಿಂದ ನಮ್ಮ ಸಂಸ್ಕೃತಿಯ ಕುರಿತು ಯಾವ ಚಿತ್ರಣವು ಹೊಮ್ಮಿತು ಎಂಬುದನ್ನು ಈಗಾಗಲೇ ನೋಡಿದ್ದೇವೆ. ಸೈದ್ಧಾಂತಿಕ ಕಲಿಕೆಗೆ ಒತ್ತು ಕೊಡುವ ಸಂಸ್ಕೃತಿಯೊಂದು ಕ್ರಿಯಾ ಜ್ಞಾನಕ್ಕೆ ಒತ್ತುಕೊಡುವ ಸಂಸ್ಕೃತಿಯ ಕಥೆಗಳನ್ನು ತನ್ನದೇ ದೃಷ್ಟಿಕೋನಕ್ಕೆ ಸಮೀಕರಿಸಿದಾಗ ಹುಟ್ಟಿದ ಅಪಾರ್ಥ ಇದಾಗಿದೆ. ಅಂದರೆ ಇವರು ಈ ಕಥೆಗಳನ್ನು ಸತ್ಯ ಎಂಬುದಾಗಿ ನಂಬಿ ತಮ್ಮ ಕ್ರಿಯೆಯನ್ನು ರೂಢಿಸಿಕೊಂಡಿದ್ದಾರೆ ಎಂಬುದಾಗಿ ಪಾಶ್ಚಾತ್ಯರು ತೀರ್ಮಾನಿಸಿದರು.

ಕಥೆಗಳಿಗೂ ಅವುಗಳನ್ನು ಹೇಳುವ ಜನರ ಆಚರಣೆಗೂ ಈ ಮೇಲಿನ ರೀತಿಯ ಸಂಬಂಧ ಇರಲಿಕ್ಕೆ ಸಾಧ್ಯವಿಲ್ಲ. ಕಥೆಗಳನ್ನು ಹೇಳುವ ಜನರು ಅವನ್ನು ಸತ್ಯ ಹೇಳಿಕೆಗಳು ಎಂಬುದಾಗಿ ನಂಬಿಲ್ಲ. ಯಾರಾದರೂ ಭಾರತೀಯರು ಪಂಚತಂತ್ರ ಕಥೆಗಳಲ್ಲಿ ಬರುವ ನರಿ, ಹುಲಿ, ಏಡಿ, ಬಕಪಕ್ಷಿ, ಇವುಗಳೆಲ್ಲವೂ ಮನುಷ್ಯರಂತೇ ಮಾತನಾಡುತ್ತಿದ್ದವು ಅಥವಾ ಯೋಚಿಸುತ್ತಿದ್ದವು ಎಂಬುದಾಗಿ ಎಂದಾದರೂ ನಂಬಿದ್ದರೆ? ಈ ಕಥೆಗಳು ಸತ್ಯವೂ ಅಲ್ಲ ಸುಳ್ಳೂ ಅಲ್ಲದ ಸಂಗತಿಗಳನ್ನು ತಿಳಿಸುತ್ತವೆ. ಅಂದರೆ ಅವು ಪ್ರಪಂಚದಲ್ಲಿ ಏನು ನಡೆಯಿತು ಎಂಬುದರ ಕುರಿತ ಸತ್ಯ ಚಿತ್ರಣಗಳಲ್ಲ. ಅಂಥ ಚಿತ್ರಣಗಳನ್ನು ನೀಡುವುದು ಅವುಗಳ ಉದ್ದೇಶವೇ ಅಲ್ಲ. ಅವು ಕೇವಲ ಕ್ರಿಯಾ ವಿನ್ಯಾಸಗಳು ಅಷ್ಟೆ.

ನಮ್ಮ ಆಚರಣೆಗಳಿಗೆ ಕಥೆಗಳು ಕಾರಣಗಳಾಗಿ ಬರುವುದಿಲ್ಲ. ಉದಾಹರಣೆಗೆ, ಮಳೆ ಬರದಿದ್ದರೆ ಕಪ್ಪೆಯ ಮದುವೆಯನ್ನು ಮಾಡುವ ಪದ್ಧತಿ ನಮ್ಮಲ್ಲಿದೆ. ಕಪ್ಪೆಯ ಮದುವೆಯನ್ನು ಮಾಡಿದರೆ ಮಳೆ ಬರುತ್ತದೆ ಎಂಬುದಾಗಿ ಅವರೇಕೆ ನಂಬಿದ್ದಾರೆ ಎಂಬುದಾಗಿ ಅವರನ್ನು ಕೇಳುತ್ತೀರಿ ಅಂತಿಟ್ಟುಕೊಳ್ಳಿ. ಅವರೊಂದು ಕಥೆ ಹೇಳುತ್ತಾರೆ. ಅದರ ಪ್ರಕಾರ ಇಂತಿಂಥ ಸಂದರ್ಭದಲ್ಲಿ ಇಂಥ ಘಟನೆ ನಡೆದಿತ್ತು. ನಮ್ಮ ಆಚರಣೆಗಳ ಹಿಂದೆ ಇಂಥವೇ ಅಸಂಖ್ಯಾತ ಕಥೆಗಳಿರುತ್ತವೆ. ಈ ಕಥೆಗಳನ್ನು ಸತ್ಯವೆಂದು ನಂಬಿ ಅವರು ಆಚರಣೆ ಮಾಡುತ್ತಾರೆ ಅಂದುಕೊಂಡರೆ ಅದು ತಪ್ಪಾಗುತ್ತದೆ. ಹಾಗಿದ್ದ ಪಕ್ಷದಲ್ಲಿ ಒಂದೊಮ್ಮೆ ಕಪ್ಪೆಯ ಮದುವೆಯನ್ನು ಮಾಡಿದರೂ ಮಳೆ ಬರಲಿಲ್ಲ ಅಂತಾದರೆ ಆ ಕಥೆ ಸುಳ್ಳು ಎಂಬುದಾಗಿ ಅವರು ತಿಳಿಯಬೇಕು ಹಾಗೂ ಆ ಆಚರಣೆಯನ್ನು ಬಿಟ್ಟುಬಿಡಬೇಕು. ಈ ಕಥೆ ಏನು ಮಾಡುತ್ತದೆಯೆಂದರೆ, ಒಂದೊಮ್ಮೆ ಮಳೆ ಬಂದರೆ ಜನರು ‘ನೋಡಿ ಕಥೆಯಲ್ಲಿ ಹೇಳಿದಂತೇ ಆಯಿತು’ ಎಂಬುದಾಗಿ ಹೇಳುತ್ತಾರೆ. ಮಳೆ ಬರಲಿಲ್ಲ ಅಂದರೆ ‘ನಮ್ಮ ಆಚರಣೆಯಲ್ಲೇ ಏನೋ ಎಡವಟ್ಟಾಗಿದೆ’ ಅಂದುಕೊಳ್ಳುತ್ತಾರೆ. ಅಂದರೆ ಜನರಿಗೆ ತಮ್ಮ ಆಚರಣೆಗಳನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಕಥೆಗಳು ಒಂದು ವಿನ್ಯಾಸವನ್ನು ರಚಿಸಿಕೊಡುತ್ತಿವೆ ಅಷ್ಟೇ.

ಈ ವಿನ್ಯಾಸ ಏಕೆ ಬೇಕೆಂದರೆ ಈ ವಿಶ್ವದಲ್ಲಿ ಎಲ್ಲವೂ ಸರಿಯಾಗಿದೆ ಎಂಬ ಭಾವನೆಯನ್ನು ಅದು ನೀಡುತ್ತಿರುತ್ತದೆ. ಅಂದರೆ ಮೂಲತಃ ಯಾವುದೋ ಉದ್ದೇಶವನ್ನು, ವ್ಯವಸ್ಥೆಯನ್ನು ಯೋಜಿಸುವುದರಿಂದ ಅಥವಾ ಸತ್ಯದ ಕುರಿತ ಸಿದ್ಧಾಂತವನ್ನು ಕಟ್ಟುವುದರಿಂದ ತಮ್ಮ ಸಂಸ್ಕೃತಿ ಉಳಿದು ಬಂದಿದೆ ಎಂಬುದಾಗಿ ಅಂಥ ಜನರು ಭಾವಿಸುವುದಿಲ್ಲ. ಬದಲಾಗಿ ತಮ್ಮ ಆಚರಣೆಗಳೇ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತವೆ ಎಂಬ ಅರಿವು ಇಲ್ಲಿ ಮುಖ್ಯವಾಗುತ್ತದೆ. ಇಂಥ ಆಚರಣೆಗಳಿಗೆ ಸರಿಯಾದ ವಿನ್ಯಾಸವನ್ನು ರಚಿಸಿಕೊಡುವ ಮೂಲಕ ಎಲ್ಲವೂ ಸರಿಯಾಗಿದೆ ಎಂಬ ಭಾವನೆಯನ್ನು ಕಥೆಗಳು ಹುಟ್ಟಿಸುತ್ತವೆ. ಒಂದೊಮ್ಮೆ ಆ ಕಥೆಯನ್ನು ಇಟ್ಟುಕೊಂಡರೆ ಏನೋ ತಪ್ಪಾಗಿದೆ ಎನ್ನಿಸುವಂತಿದ್ದರೆ ಆ ಕಥೆಯು ಅಲ್ಲಿ ಮಾದರಿಯೇ ಆಗುವುದಿಲ್ಲ. ಅಂದರೆ ಆಚರಣೆಯನ್ನು ವಿನ್ಯಾಸಗೊಳಿಸಲಿಕ್ಕೆ ಕಥೆಗಳು ಬರುತ್ತವೆಯೇ ವಿನಃ ಆಚರಣೆಗಳಿಗೆ ಕಾರಣಗಳಾಗಿ ಅವು ಬರುವುದಿಲ್ಲ.

ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಗಳ ಪ್ರಪಂಚಕ್ಕೆ ಬಂದರೆ ಕಾಣುವುದೇನು? ಅದೊಂದು ಜಗತ್ತು. ಅದರಲ್ಲಿ ಕ್ರಿಯೆಗಳ ವಿನ್ಯಾಸದ ಒಂದು ಮಾದರಿ ಇರುತ್ತದೆ. ಅಂದರೆ ಕೆಲವು ಘಟನೆಗಳು ಒಂದರ ಜೊತೆಗೊಂದು ಜೋಡಣೆಯಾಗಿ ಒಂದು ಕ್ರಿಯಾ ವಿನ್ಯಾಸವನ್ನು ರಚಿಸುತ್ತವೆ. ಒಂದೊಂದು ಕಥೆಯೂ ತನ್ನದೇ ವಿನ್ಯಾಸಗಳನ್ನು ಸೃಷ್ಟಿಸಿ ಅದರಷ್ಟಕ್ಕೇ ಜಗತ್ತಿನ ಒಂದೊಂದು ಮಾದರಿಯಾಗಿರುತ್ತದೆ. ಅಂದರೆ ಕಥೆಯ ಜಗತ್ತೆಂಬುದು ನಿರ್ದಿಷ್ಟ ಕ್ರಮದಲ್ಲಿ ಜರುಗುವ ಒಂದು ಕ್ರಿಯಾಸರಣಿಯನ್ನು ಒಳಗೊಂಡಿರುತ್ತದೆ. ಈ ಕಥಾಜಗತ್ತು ವಿಶ್ವಮಾದರಿಯೊಂದನ್ನು ಆ ಸಂಸ್ಕೃತಿಯ ಜನರಿಗೆ ನೀಡುತ್ತದೆ. ಅದರ ಮಹತ್ವವೇನೆಂಬುದನ್ನು ಅರ್ಥೈಸಲು ಮೊದಲು ನಾವು ವಿಶ್ವಮಾದರಿ ಎಂದರೇನೆಂಬುದನ್ನು ಅರ್ಥ ಮಾಡಿಕೊಳ್ಳುವ ಜರೂರಿದೆ.

ಈ ಜಗತ್ತಿನಲ್ಲಿ ಬದುಕುತ್ತಿರುವ ಮನುಷ್ಯರು ಪ್ರಪಂಚದಲ್ಲಿ ವ್ಯವಹರಿಸುವಾಗ ಈ ಪ್ರಪಂಚದ ಕುರಿತು ಒಂದಿಲ್ಲೊಂದು ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಕಲ್ಪನೆಗಳು ಹೇಗೆ ಸೃಷ್ಟಿಯಾಗುತ್ತವೆ? ಪ್ರಪಂಚದ ಜೊತೆಗಿನ ನಮ್ಮ ಒಡನಾಟದ ನೆನಪುಗಳಿಂದ ಎಂಬುದು ತಕ್ಷಣದ ಹೊಳೆಯುವ ಉತ್ತರ. ಆದರೆ ದಿನನಿತ್ಯ ಈ ಪ್ರಪಂಚವನ್ನು ನೋಡುವ ಮಾತ್ರದಿಂದಲೇ ಈ ಪ್ರಪಂಚವು ಹೀಗಿದೆ ಎಂಬುದು ನೆನಪಿನಲ್ಲುಳಿದು ಬಿಡುವುದಿಲ್ಲ. ಆ ನೆನಪನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಅಂದರೆ ಈ ಪ್ರಪಂಚದ ಕುರಿತು ಒಂದು ಕಲ್ಪನೆಯನ್ನು ಮೊದಲು ಕಟ್ಟಿಕೊಳ್ಳಬೇಕಾಗುತ್ತದೆ. ತದನಂತರ ಆ ಕಲ್ಪನೆಯ ಮೂಲಕ ಈ ಪ್ರಪಂಚವನ್ನು ನೋಡಬೇಕಾಗುತ್ತದೆ. ಈ ಕ್ರಿಯೆಯೇ ನಮ್ಮ ಅನುಭವವನ್ನು ರಚಿಸುತ್ತದೆ. ಅಂದರೆ ಜಗತ್ತಿನಲ್ಲಿ ವಿಶ್ವಕಲ್ಪನೆಯು ಕಟ್ಟಿಕೊಟ್ಟ ಒಂದು ರಚನೆಯ ಮೂಲಕ ಬದುಕುವುದು. ವಿಶ್ವಕಲ್ಪನೆಗಳಿಲ್ಲದಿದ್ದಲ್ಲಿ ಅನುಭವವೂ ಸಾಧ್ಯವಿಲ್ಲ. ನೆನಪು ಯಾವುದರದ್ದು? ಅದು ಈ ಅನುಭವದ ನೆನಪೇ ಆಗಿರುತ್ತದೆ. ಅಂದರೆ ವಿಶ್ವಕಲ್ಪನೆಯನ್ನು ಕಟ್ಟಿಕೊಳ್ಳುವುದು ಈ ಮನುಷ್ಯರು ಪ್ರಪಂಚದಲ್ಲಿ ವ್ಯವಹರಿಸಲಿಕ್ಕೆ ಒಂದು ಪೂರ್ವನಿಬಂಧನೆಯಾಗಿದೆ. ಅದಿದ್ದರೆ ಮಾತ್ರವೇ ಈ ಪ್ರಪಂಚವು ಅವರಿಗೆ ಅರ್ಥವಾಗುತ್ತದೆ, ಅನುಭವಕ್ಕೆ ಬರುತ್ತದೆ ಹಾಗೂ ನೆನಪಿನಲ್ಲುಳಿಯುತ್ತದೆ. ಇಂಥ ವಿಶ್ವಕಲ್ಪನೆಯನ್ನು ಕಟ್ಟಿಕೊಡುವ ಘಟಕಗಳನ್ನು ವಿಶ್ವಮಾದರಿಗಳು ಎನ್ನಬಹುದು.

ಈ ಕಾರಣದಿಂದ ವಿಶ್ವಮಾದರಿಯಿಂದ ಪಡೆದದ್ದು ವಯಕ್ತಿಕ ಕಲ್ಪನೆಯಾಗಲಿಕ್ಕೆ ಸಾಧ್ಯವಿಲ್ಲ. ಅದು ಒಂದು ಸಂಸ್ಕೃತಿಯ ಸಾಮೂಹಿಕ ನೆನಪುಗಳನ್ನು ರಚಿಸುವ ಸಾಮಾನ್ಯ ಕಲ್ಪನೆಯಾಗಿರುತ್ತದೆ. ಅಂದರೆ ಒಂದು ಸಂಸ್ಕೃತಿಯ ಸದಸ್ಯನು ಉಳಿದೆಲ್ಲರ ಜೊತೆಗೆ ಹಂಚಿಕೊಳ್ಳುವ ಕಲ್ಪನೆಯಾಗಿರುತ್ತದೆ. ಈ ಮಾದರಿಗಳು ಸಾಮೂಹಿಕವಾಗಿ ಅಸ್ತಿತ್ವದಲ್ಲಿರುವ ಕಾರಣದಿಂದ ಉದ್ದೇಶ ರಹಿತವಾಗಿರುತ್ತವೆ. ಅಂದರೆ ಮನುಷ್ಯನು ಅದನ್ನು ತನಗೆ ಇಂತಿಂಥ ಕಾರಣಕ್ಕಾಗಿ ಬೇಕು ಎಂದು ಯೋಚಿಸಿ ಕಟ್ಟಿಕೊಂಡದ್ದಲ್ಲ. ಹಾಗಾಗಿ ಅದರಲ್ಲಿನ ನಿಯಮಗಳು, ರಚನೆಗಳು ಅಥವಾ ವಿನ್ಯಾಸಗಳು ಪ್ರಜ್ಞಾಪೂರ್ವಕವಾಗಿ ಯೋಜಿಸಿದಂಥವುಗಳಲ್ಲ. ಹಾಗಾಗಿ ಒಂದು ಸಂಸ್ಕೃತಿಯ ಸದಸ್ಯರು ಇಂಥ ವಿಶ್ವಮಾದರಿಗಳನ್ನು ಉದ್ದೇಶರಹಿತವಾಗಿ ಸಂಪಾದಿಸುತ್ತಾರೆ. ಅವರು ಒಂದು ಸಂಸ್ಕೃತಿಯ ಸದಸ್ಯರಾಗಿದ್ದ ಕಾರಣದಿಂದಲೇ ಈ ಮಾದರಿಗಳು ಅವರಿಗೆ ಸಹಜಜ್ಞಾನಗಳಾಗಿ ಬಂದಿರುತ್ತವೆ. ಅಂದರೆ ವಿಶ್ವಮಾದರಿಗಳು ಉದ್ದೇಶರಹಿತವಾದ ಕಲಿಕೆಗಳಾಗಿವೆ. ವಿಶ್ವಕಲ್ಪನೆಯನ್ನು ರಚಿಸಿಕೊಡುವುದೇ ಅವುಗಳ ಕಾರ್ಯ. ಭಾರತೀಯ ಸಂಸ್ಕೃತಿಯಲ್ಲಿ ಕಥೆಗಳು ಇಂಥ ವಿಶ್ವಮಾದರಿಗಳ ಸ್ಥಾನವನ್ನು ನಿರ್ವಹಿಸುತ್ತವೆ. ಮೊತ್ತಮೊದಲನೆಯದಾಗಿ ಅವು ನಮ್ಮ ಸಂಸ್ಕೃತಿಯು ವಿಶ್ವದ ಕುರಿತು ಕಟ್ಟಿಕೊಡುವ ಕಲ್ಪನೆಯನ್ನು ನಮಗೆ ಪರಿಚಯಿಸುತ್ತವೆ. ಒಂದು ಸಂಸ್ಕೃತಿಯ ಸದಸ್ಯನಾಗಿರುವ ಕಾರಣದಿಂದಲೇ ಕಥೆಗಳನ್ನು ಕೇಳುತ್ತ ಕೇಳುತ್ತ ಒಂದು ಮಗುವು ಈ ಕಲ್ಪನೆಯನ್ನು ತನ್ನದಾಗಿಸಿಕೊಳ್ಳುತ್ತದೆ.

ಕಥೆಗಳು ಉದ್ದೇಶರಹಿತ ಕಲಿಕೆಗಳಾಗಿವೆ ಅಂತಾದರೆ ಆ ಕಲಿಕೆಯು ಹೇಗೆ ನಡೆಯುತ್ತದೆ? ಇದನ್ನು ವಿವರಿಸುವುದು ನನಗೆ ಈ ಹಂತದಲ್ಲಿ ಕಷ್ಟ. ಏಕೆಂದರೆ ಈ ಕುರಿತು ನಾವು ಇನ್ನೂ ಸಂಶೋಧನೆಯನ್ನು ನಡೆಸಬೇಕಾಗಿದೆ. ಆದರೆ ಈ ಕುರಿತು ಕೆಲವು ಅಂಶಗಳನ್ನಂತೂ ಇಲ್ಲಿ ಮುಂದೊತ್ತಬಹುದು.

ಕಥೆಗಳು ನೀತಿ ಪಾಠದ ಮೂಲಕ ಕಲಿಸುವುದಿಲ್ಲ. ಹಾಗಾದರೆ ನಮ್ಮಲ್ಲಿ ನೀತಿ ಕಥೆಗಳಿಲ್ಲವೆ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನಾವು ನೀತಿಪಾಠ ಎಂಬ ಶಬ್ದವನ್ನು ಮಾರಲ್ ಟೀಚಿಂಗ್ಸ್ ಎಂಬ ಅರ್ಥದಲ್ಲಿ ಬಳಸುತ್ತೇವೆ. ನಾನು ಈಗಾಗಲೇ ಪಾಶ್ಚಾತ್ಯ ನೈತಿಕ ಅಧಿಕಾರ ವಲಯದ ಕುರಿತು ಚರ್ಚಿಸಿದ್ದೇನೆ. ಅದು ಮೂಲತಃ ಗಾಡ್ನ ಆಜ್ಞೆಗಳ ಆಧಾರದ ಮೇಲೆ ರೂಪುಗೊಂಡಿದೆ ಎಂಬುದಾಗಿಯೂ ತಿಳಿಸಿದ್ದೆ. ಅಂದರೆ ನೈತಿಕ ಕ್ಷೇತ್ರ ಎಂಬುದಾಗಿ ಗುರುತಿಸಿದ ಕ್ರಿಯೆಗಳ ವಲಯಕ್ಕೆ ಸಂಬಂಧಿಸಿದಂತೇ ಕಡ್ಡಾಯವಾಗಿ (ought ಎಂಬರ್ಥದಲ್ಲಿ) ಪಾಲಿಸಲೇಬೇಕು/ಪಾಲಿಸಲೇಬಾರದು ಎಂಬ ನಿಯಮಾವಳಿಗಳಿರುತ್ತವೆ. ನಮ್ಮ ಕಥೆಗಳು ಇಂಥ ಹಿಂದೂಯಿಸಂನ ನೈತಿಕ ನಿಯಮಗಳನ್ನು ವಿಧಿಸುತ್ತವೆ ಎಂದುಕೊಳ್ಳುವುದು ತಪ್ಪು. ನಮ್ಮಲ್ಲಿ ನೀತಿಯನ್ನು ಹೇಗೆ ಕಂಡುಕೊಳ್ಳಬೇಕು ಎಂಬುದಕ್ಕೆ ನಿಯಮಗಳಿಲ್ಲ. ನೀತಿಯು ಕಂಡುಕೊಳ್ಳುವವನ ವಿವೇಚನೆಗೆ ಅಥವಾ ಯುಕ್ತಿಗೆ ಸಂಬಂಧಪಟ್ಟ ವಿಷಯವಾಗಿದೆ. ಹಾಗಾಗಿ ನಮ್ಮ ನೀತಿ ಕಥೆಗಳಾವವೂ ನೈತಿಕ ನಿಯಮಗಳನ್ನು ತಿಳಿಸುವ ಕೆಲಸವನ್ನು ಮಾಡುವುದಿಲ್ಲ. ಅದನ್ನು ಓದುಗನಿಗೆ ಬಿಡುತ್ತವೆ. ಹೆಚ್ಚೆಂದರೆ ಅವು ನೈತಿಕ ಜಿಜ್ಞಾಸೆಗೆ ವಸ್ತುಗಳಾಗಬಲ್ಲವು ಅಷ್ಟೆ.

ಅಂದರೆ ಈ ಕಥೆಗಳು ಏನು ಮಾಡುತ್ತವೆಯೆಂದರೆ ಕೆಲವು ಕ್ರಿಯೆಗಳನ್ನು ಜೋಡಿಸಿ ಒಂದು ವಿನ್ಯಾಸವನ್ನಾಗಿ ಮಾಡಿಕೊಡುತ್ತಿರುತ್ತವೆ. ಆ ವಿನ್ಯಾಸದೊಳಗೆ ಕೆಲವು ಪಾತ್ರಗಳು ಕೆಲವು ರೀತಿಯ ಸರಿ ತಪ್ಪು ತಿಳುವಳಿಕೆಗಳ ಆಧಾರದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತಿರುತ್ತವೆ. ಇಂತಿಥ ಪಾತ್ರವು ಹೀಗೆ ನಿರ್ಣಯಿಸಿತು, ಹಾಗಾಗಿ ಅದರ ಪರಿಣಾಮ ಹೀಗಾಯಿತು ಎಂಬುದೊಂದು ಮಾದರಿಯನ್ನಷ್ಟೇ ಅವು ನೀಡುತ್ತಿರುತ್ತವೆಯೇ ವಿನಃ, ನೀವು ಕೂಡ ಹೀಗೇ ಮಾಡಿ ಎಂದು ಹೇಳುವುದಿಲ್ಲ. ಈ ಕಥೆಗಳನ್ನು ಮನುಷ್ಯ ಕ್ರಿಯೆಗಳಲ್ಲಿ ಏಳಬಹುದಾದ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ರಚಿಸಿದ್ದಾರೆ ಎಂದೂ ಅಂದುಕೊಳ್ಳಬಾರದು. ಅಂದರೆ ಮೊದಲು ಸಮಸ್ಯೆಗಳನ್ನು ಗುರುತಿಸಿ, ನಂತರ ಅವುಗಳಿಗೆ ಪರಿಹಾರವನ್ನು ಯೋಚಿಸಿ, ನಂತರ ಅವನ್ನು ಕಥಾ ರೂಪಕ್ಕೆ ಇಳಿಸಿದ್ದಲ್ಲ. ಈ ಕಥೆಗಳೂ ವಿಶ್ವ ಮಾದರಿಗಳಂತೆಯೇ ಉದ್ದೇಶ ರಹಿತವಾಗಿ ಸಾಮುದಾಯಿಕ ಪ್ರಜ್ಞೆಯ ಭಾಗವಾಗಿ ಚಾಲ್ತಿಯಲ್ಲಿ ಇರುತ್ತವೆ. ಅಂದರೆ ಒಂದು ಕಥೆಯು ಯಾವುದಾದರೂ ವ್ಯಕ್ತಿಯ ಯಾವುದಾದರೊಂದು ಸಮಸ್ಯೆಯನ್ನು ಪರಿಹರಿಸುತ್ತದೆಯೆ ಎಂಬುದು ಆ ಕಥೆಯನ್ನು ಮಾದರಿಯನ್ನಾಗಿ ಮಾಡಿಕೊಳ್ಳುವವನಿಗೆ ಬಿಟ್ಟದ್ದು. ಅಥವಾ ಯಾವಾಗಲೂ ಆಸಕ್ತಿರಹಿತವಾಗಿ ಕಂಡ ಕಥೆಯೊಂದು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಒಬ್ಬನಿಗೆ ತನ್ನ ಸಮಸ್ಯೆಗಳನ್ನು ಒಳಗೊಂಡಂತೇ ಕಾಣಬಹುದು. ಇಲ್ಲವೇ, ತನಗೆ ಒಂದು ನಿರ್ದಿಷ್ಟ ಅನುಭವವನ್ನು ರಚಿಸಿಕೊಡಲು ಅದು ಸಹಕರಿಸುತ್ತದೆ ಎಂಬುದಾಗಿ ಅವನಿಗೆ ಹೊಳೆಯಬಹುದು.

ಒಬ್ಬ ವ್ಯಕ್ತಿಯು ತನ್ನ ಕ್ರಿಯೆಯನ್ನು ಈ ಕಥೆಗಳಿಂದ ಹೇಗೆ ಕಲಿಯುತ್ತಾನೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಕ್ರಿಯಾಜ್ಞಾನವಾಗಿ ಕಥೆಗಳು ಮಹತ್ವವನ್ನು ಪಡೆಯುತ್ತವೆ ಎಂಬುದಂತೂ ನಿಶ್ಚಯ. ಭಾರತೀಯ ಸಂಪ್ರದಾಯಗಳು ತಮ್ಮ ಶಿಕ್ಷಣದಲ್ಲಿ ಕ್ರಿಯಾ ಜ್ಞಾನಕ್ಕೆ ಒತ್ತುಕೊಡುತ್ತವೆ ಎಂಬುದಾಗಿ ಈಗಾಗಲೇ ತಿಳಿಸಿದ್ದೇನೆ. ಕ್ರಿಯೆಯ ಕುರಿತ ಸೈದ್ಧಾಂತಿಕ ತಿಳುವಳಿಕೆಗಿಂತ ಅವುಗಳ ಅನುಕರಣೆಯೇ ಕ್ರಿಯಾಜ್ಞಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಥೆಗಳು ನಿರ್ದಿಷ್ಟ ಕ್ರಿಯಾ ಸರಣಿಗಳನ್ನು ಒಳಗೊಂಡ ಮಾದರಿಗಳಾಗಿವೆ. ಅವು ಯಾರಿಗೆ ಯಾವ ಥರದ ಕ್ರಿಯೆಗಳಿಗೆ ಅನುಕರಣೆಯ ಮಾದರಿಯಾಗುತ್ತವೆ ಎಂಬುದು ಪೂರ್ವನಿರ್ದೇಶಿತವಲ್ಲ. ಅದು ವ್ಯಕ್ತಿ ಭಿನ್ನವಾಗಿರುತ್ತದೆ, ಸಂದರ್ಭ ಭಿನ್ನವಾಗಿರುತ್ತದೆ. ಅನುಕರಣೆ ಯಾವಾಗಲೂ ಪ್ರಜ್ಞಾಪೂರ್ವಕವಾಗಿ ನಡೆಯುವುದಿಲ್ಲ. ಆದರೂ ಅವು ಅನುಕರಿಸುವವನಿಗೆ ಸರಿಯಾದ ಕ್ರಿಯೆಯ ಮಾದರಿಯನ್ನು ನೀಡಬಲ್ಲವು. ಅಥವಾ, ತಮ್ಮ ಕ್ರಿಯಾ ಸರಣಿಯ ಮೂಲಕ ತಮ್ಮೊಳಗೇ ಇಲ್ಲದ ಕ್ರಿಯೆಯೊಂದಕ್ಕೆ ಪ್ರೇರಣೆ ಅಥವಾ ಸೂಚನೆಯನ್ನೂ ನೀಡಬಲ್ಲವು. ಇದು ಅಧ್ಯಯನ ನಡೆಸಲಿಕ್ಕೆ ತುಂಬಾ ಆಸಕ್ತಿಪೂರ್ಣವಾದ ಕ್ಷೇತ್ರವಾಗಿದೆ ಎಂಬುದಂತೂ ನಿಸ್ಸಂದೇಹ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: