ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Cultural Studies, Theory > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 49: ಜಗತ್ತನ್ನು ಸ್ಟೀರಿಯೋ ಟೈಪುಗಳ ಮೂಲಕ ನೋಡುವ ಕ್ರಮ.
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

 

‘ಯುರೋಪಿಯನ್ನರು ಶಿಸ್ತಿಗೆ ಮಹತ್ವ ನೀಡುತ್ತಾರೆ’, ‘ಅಮೇರಿಕನ್ನರು ಕೆಲಸ ಪ್ರಿಯರು’, ‘ಜಪಾನಿಗಳು ಉದ್ಯಮಶೀಲರು’, ‘ಭಾರತೀಯರು ಸೋಮಾರಿಗಳು’, ಇತ್ಯಾದಿ ವಾಕ್ಯಗಳನ್ನು ನಾವು ಸಾಧಾರಣವಾಗಿ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಓದುತ್ತಿರುತ್ತೇವೆ, ಭಾಷಣಗಳಲ್ಲಿ ಕೇಳುತ್ತಿರುತ್ತೇವೆ. ಕನ್ನಡ ಸಾಹಿತಿಗಳು ತಮ್ಮ ಯುರೋಪು ಹಾಗೂ ಅಮೇರಿಕಾ ಪ್ರವಾಸದ ಕುರಿತು ಬರೆದ ಪ್ರವಾಸ ಕಥನಗಳನ್ನು ತೆರೆದರೆ ಇಂಥ ಹೇಳಿಕೆಗಳು ಧಾರಾಳವಾಗಿ ಸಿಗುತ್ತವೆ. ಒಂದು ಜನಾಂಗವನ್ನು, ಸಮಾಜವನ್ನು ಅಥವಾ ದೇಶವನ್ನು ಒಂದು ಮನುಷ್ಯನೋ ಎಂಬಂತೇ ಭಾವಿಸಿ ಅದರ ಗುಣವನ್ನು ಚಿತ್ರಿಸುವ ಕೆಲಸವನ್ನು ಇಂಥ ವಾಕ್ಯಗಳು ಮಾಡುತ್ತವೆ. ಆ ಸಮಾಜದ ಎಲ್ಲ ಪ್ರಜೆಯೂ ಈ ಗುಣವನ್ನು ಹೊಂದಿದ್ದಾನೆ ಎಂಬ ಅಭಿಪ್ರಾಯವನ್ನು ಅದು ಹುಟ್ಟಿಸುತ್ತದೆ. ಈ ಮೇಲಿನ ಥರದ ವಾಕ್ಯಗಳನ್ನು ಸ್ಟೀರಿಯೋಟೈಪ್ ಎಂಬುದಾಗಿ ಇಂಗ್ಲೀಷಿನಲ್ಲಿ ಸೂಚಿಸುತ್ತಾರೆ. ಈ ಶಬ್ದವನ್ನು ಕನ್ನಡಕ್ಕೆ ಅನುವಾದಿಸುವಲ್ಲಿ ನಾವಿನ್ನೂ ಯಶಸ್ವಿಯಾಗಿಲ್ಲ. ಹಾಗಾಗಿ ಅವುಗಳಿಗೆ ಸಿದ್ಧಮಾದರಿ, ಪಡಿಯಚ್ಚು, ಇತ್ಯಾದಿ ಅನೇಕ ಭಾಷಾಂತರಗಳು ಅಸ್ತಿತ್ವದಲ್ಲಿ ಬಂದಿವೆ. ಇಂಥ ಹೇಳಿಕೆಗಳು ವಸಾಹತುಕಾಲದ ಪಾಶ್ಚಾತ್ಯರ ಬರವಣಿಗೆಗಳಲ್ಲಿ ಧಾರಾಳವಾಗಿ ಸಿಗುತ್ತವೆ. ಅದರಲ್ಲೂ ಅವರ ಪ್ರವಾಸೀ ಬರವಣಿಗೆಗಳಲ್ಲಿ ಅವು ಬಹಳ ಮುಖ್ಯವಾಗಿದೆ. ಅವರು ತಮ್ಮ ಕುರಿತೂ ಅನ್ಯ ಸಂಸ್ಕೃತಿಗಳ ಕುರಿತೂ ಇಂಥ ಸ್ಟೀರಿಯೋಟೈಪುಗಳ ರಾಶಿಯನ್ನೇ ಪೇರಿಸಿದ್ದಾರೆ.

ಬಹುತೇಕ ಸ್ಟೀರಿಯೋಟೈಪುಗಳು ಜನರ ಸದ್ಗುಣ, ದುರ್ಗುಣಗಳನ್ನು ಎತ್ತಿ ಹೇಳುವ ಕೆಲಸವನ್ನಂತೂ ಸ್ಪಷ್ಟವಾಗಿ ಮಾಡುತ್ತವೆ. ಅದಕ್ಕಿಂತಲೂ ವಿಚಿತ್ರವೆಂದರೆ, ಪಾಶ್ಚಾತ್ಯರು ತಮ್ಮ ಕುರಿತು ಬಳಸಿಕೊಂಡ ಸ್ಟೀರಿಯೋಟೈಪುಗಳು ಬಹುತೇಕವಾಗಿ ಸದ್ಗುಣಗಳನ್ನು ಸೂಚಿಸಿದರೆ, ಪೌರ್ವಾತ್ಯರ/ಭಾರತೀಯರ ಕುರಿತು ಬಳಸಿದ ಸ್ಟೀರಿಯೋಟೈಪುಗಳು ಮಾತ್ರ ಬಹುತೇಕ ದುರ್ಗುಣಗಳನ್ನೇ ಸೂಚಿಸುತ್ತವೆ. ಇದು ವಸಾಹತು ಕಾಲದ ಪಾಶ್ಚಾತ್ಯರ ಬರವಣಿಗೆಗಳನ್ನು ಓದುವ ಯಾರಿಗಾದರೂ ತಿಳಿದುಬರುವ ವಿಷಯವಾಗಿದೆ. ಇವುಗಳನ್ನು ಮೊದಮೊದಲು ಅಧ್ಯಯನ ಮಾಡಿದ ವಿದ್ವಾಂಸರು ಅವನ್ನು ಸತ್ಯ ಹೇಳಿಕೆಗಳು ಎಂಬುದಾಗಿ ತೆಗೆದುಕೊಂಡಿದ್ದರು. ಹಾಗೂ ಯುರೋಪಿಯನ್ನರು ತಮ್ಮ ಶ್ರೇಷ್ಠತೆಯನ್ನು ಸಾರಿಕೊಳ್ಳುವ ಸಲುವಾಗಿ ಹಾಗೂ ಅನ್ಯರನ್ನು ಹೀಗಳೆಯುವ ಸಲುವಾಗಿ ಈ ಸ್ಟೀರಿಯೋಟೈಪುಗಳನ್ನು ಸೃಷ್ಟಿಸಿದ್ದಾರೆ ಎಂಬುದಾಗಿ ಆರೋಪಿಸಿದ್ದರು. ಇಂಥ ಸ್ಟೀರಿಯೋಟೈಪುಗಳನ್ನು ಇಟ್ಟುಕೊಂಡೇ ಅವರು ಪೌರ್ವಾತ್ಯ ದೇಶಗಳ ಜನರಲ್ಲಿ ಕೀಳರಿಮೆಯನ್ನು ಹುಟ್ಟಿಸಿ ವಾಸಹತು ಪ್ರಭುತ್ವದ ಮೂಲಕ ಅವರ ಮೇಲೆ ಸವಾರಿ ಮಾಡಿದರು ಎಂಬುದಾಗಿ ಕೂಡ ತರ್ಕಿಸಿದರು.

ಸ್ಟೀರಿಯೋಟೈಪುಗಳನ್ನು ಸ್ವಲ್ಪ ಆಳವಾಗಿ ಪರಿಶೀಲನೆಗೊಳಪಡಿಸಿದಾಗ ಈ ಮೇಲಿನ ತರ್ಕದಲ್ಲಿ ಸಮಸ್ಯೆಯಿರುವುದು ಕಂಡುಬರುತ್ತದೆ. ಅದನ್ನು ಉಪಯೋಗಿಸುವವರು ತಾವೊಂದು ಸತ್ಯವಾದ ಹೇಳಿಕೆಯನ್ನು ಮಾಡುತ್ತಿದ್ದೇವೆ ಎಂಬ ಅಭಿಪ್ರಾಯವನ್ನು ಇಟ್ಟುಕೊಂಡಿದ್ದಾರೆ ಎನ್ನಲು ಬರುವಂತಿಲ್ಲ. ಅಂದರೆ ಹಾಗೆ ಹೇಳುವವರು ಪ್ರತಿಯೊಬ್ಬ ಯುರೋಪಿಯನ್ನನೂ ಶಿಸ್ತುಗಾರನಾಗಿರುತ್ತಾನೆ, ಅಥವಾ ಪ್ರತಿಯೊಬ್ಬ ಭಾರತೀಯನೂ ಸೋಮಾರಿಯಾಗಿರುತ್ತಾನೆ ಎಂದು ನಂಬುವಷ್ಟು ಮೂರ್ಖರಾಗಿರುವ ಸಾಧ್ಯತೆಯಿಲ್ಲ. ಹಾಗಾದರೆ ಅವರ ಪ್ರಕಾರ ಬಹುಪಾಲು ಯುರೋಪಿಯನ್ನರು ಶಿಸ್ತುಗಾರರು ಅಂತ ಅರ್ಥವೆ? ಮೇಲ್ನೋಟಕ್ಕೆ ಅವರು ಹಾಗೇ ಹೇಳುತ್ತಿದ್ದಂತೇ ಕಾಣುತ್ತದೆ. ಆದರೆ ಹಾಗಿದ್ದ ಪಕ್ಷದಲ್ಲಿ ಅದನ್ನು ಹಾಗೇ ಸ್ಪಷ್ಟವಾಗಿ ಬಿಡಿಸಿ ಹೇಳುತ್ತಿದ್ದರಲ್ಲ? ಆದರೆ ಅವರು ಈ ವಾಕ್ಯಗಳನ್ನು ಹಾಗೆ ಬಿಡಿಸಿ ಹೇಳಿದರೆ ಅದರ ಸ್ವಾರಸ್ಯವು ಹೊರಟುಹೋಗಿಬಿಡುತ್ತದೆ ಎಂಬುದೂ ಗಮನಾರ್ಹ. ಹಾಗಾಗಿ ಅವನ್ನು ಹಾಗೇ ಇಡಬೇಕು. ಏಕೆ ಈ ವಾಕ್ಯಗಳನ್ನು ಹೀಗೇ ಹೇಳಬೇಕು? ಏಕೆಂದರೆ ಸ್ಟೀರಿಯೋ ಟೈಪುಗಳು ಇರುವುದೇ ಹಾಗೆ. ಹಾಗಿಲ್ಲದಿದ್ದರೆ ಅವು ಸ್ಟೀರಿಯೋಟೈಪುಗಳೇ ಆಗುವುದಿಲ್ಲ. ಅವುಗಳನ್ನು ಸತ್ಯ ಅಥವಾ ಸುಳ್ಳು ಹೇಳಿಕೆಗಳು ಎಂಬುದಾಗಿ ಪರಿಗಣಿಸಲು ಬರಲಾರದಂತೇ ಅವನ್ನು ರಚಿಸಲಾಗುತ್ತದೆ.

ವಾಸ್ತವಿಕ ಪ್ರಪಂಚದ ಚಿತ್ರಣವನ್ನು ನೀಡುವ ಉದ್ದೇಶವನ್ನು ಹೊಂದಿಲ್ಲದ ವಾಕ್ಯಗಳನ್ನು ವಿಜ್ಞಾನದಲ್ಲಿ ಸತ್ಯವೂ ಅಲ್ಲದ ಸುಳ್ಳೂ ಅಲ್ಲದ ಹೇಳಿಕೆಗಳೆನ್ನುತ್ತಾರೆ. ಈ ಕುರಿತು ನಾನು ಈಗಾಗಲೇ ಹಿಂದಿನ ಅಂಕಣವೊಂದರಲ್ಲಿ ವಿವರಿಸಿದ್ದೇನೆ. ಸ್ಟೀರಿಯೋಟೈಪುಗಳು ಪಾಶ್ಚಾತ್ಯ ಸಂಸ್ಕೃತಿಯ ವೈಶಿಷ್ಟ್ಯಗಳಾಗಿವೆ. ಪೌರ್ವಾತ್ಯ ಸಂಸ್ಕೃತಿಗಳಲ್ಲಿ ಅವು ಇವೆಯೆ ಎಂಬ ಕುರಿತು ಪರಿಶೀಲನೆ ನಡೆಯಬೇಕಾಗಿದೆ. ಆದರೂ ಭಾರತೀಯನಾಗಿ ನನ್ನ ಸಹಜ ಜ್ಞಾನವು ತಿಳಿಸುವ ಪ್ರಕಾರ ನಮ್ಮ ಸಂಸ್ಕೃತಿಯಲ್ಲಿ ಅವು ಇಲ್ಲ, ಇದ್ದರೂ ತೀರಾ ವಿರಳವಾಗಿ ಇರಬಹುದು, ಹಾಗಾಗಿ ಎದ್ದು ಕಾಣಿಸುವುದಿಲ್ಲ. ನನ್ನ ಈ ಹೇಳಿಕೆಗೆ ನಿಮ್ಮ ಆಕ್ಷೇಪಣೆ ಬರಬಹುದು. ನಮ್ಮಲ್ಲೂ ‘ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ, ‘ಕಳ್ಳನನ್ನು ನಂಬಿದರೂ ಕುಳ್ಳನನ್ನು ನಂಬಬಾರದು’. ಎಂಬಂಥ ಹೇಳಿಕೆಗಳು ಇವೆಯಲ್ಲ? ಆದರೆ ಇಂಥ ಉದಾಹರಣೆಗಳೆಲ್ಲ ಗಾದೆ ಮಾತುಗಳೇ ಆಗಿರುತ್ತವೆ ಎಂಬುದನ್ನು ಗಮನಿಸಿ. ನಮ್ಮಲ್ಲಿ ಅಂಥ ಗಾದೆಗಳು ಧಾರಾಳವಾಗಿ ಇವೆ.

ಈ ಮೇಲಿನ ಗಾದೆಗಳಿಗೂ ಸ್ಟೀರಿಯೋಟೈಪುಗಳಿಗೂ ಒಂದು ಮೂಲಭೂತ ವ್ಯತ್ಯಾಸವಿದೆ. ಅದೆಂದರೆ ಸ್ಟೀರಿಯೋಟೈಪುಗಳು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ವಹಿಸುವ ಪಾತ್ರವೇ ಬೇರೆ, ಗಾದೆಗಳು ನಮ್ಮ ಸಂಸ್ಕೃತಿಯಲ್ಲಿ ವಹಿಸುವ ಪಾತ್ರವೇ ಬೇರೆ. ಸ್ಟೀರಿಯೋ ಟೈಪುಗಳು ವಿಭಿನ್ನ ಜನರ ಕುರಿತು ಒಂದು ಹೇಳಿಕೆಯನ್ನು ನೀಡುತ್ತವೆ. ಈ ಹೇಳಿಕೆಗಳು ಅವರ ಜೊತೆಗಿನ ಒಡನಾಟಕ್ಕೆ ಪೂರ್ವಭಾವಿಯಾಗಿ ಬರುತ್ತವೆ. ಉದಾಹರಣೆಗೆ ‘ಭಾರತೀಯರು ಸೋಮಾರಿಗಳು’ ‘ಭಾರತೀಯರು ಭ್ರಷ್ಟರು’ ಎಂಬ ಹೇಳಿಕೆಗಳನ್ನು ತೆಗೆದುಕೊಳ್ಳಿ. ಯುರೋಪಿನ್ ಉದ್ಯಮಿಯೊಬ್ಬನು ಭಾರತದಲ್ಲಿ ಉದ್ಯಮವನ್ನು ಸ್ಥಾಪಿಸುವ ಯೋಚನೆಯನ್ನಿಟ್ಟುಕೊಂಡು ಇಲ್ಲಿಗೆ ಬರುತ್ತಾನೆ ಅಂತಿಟ್ಟುಕೊಳ್ಳಿ. ಅವನಿಗೆ ಭಾರತೀಯರನ್ನು ತನ್ನ ಉದ್ಯಮದಲ್ಲಿ ತೊಡಗಿಸುವಾಗ ತಾನು ಇಲ್ಲಿ ಯಾವ ಹೆಜ್ಜೆಯನ್ನು ಇಡಬೇಕು ಎಂಬುದಕ್ಕೆ ಈ ಮೇಲಿನ ಸ್ಟೀರಿಯೋಟೈಪು ಮಾರ್ಗವನ್ನು ಸೂಚಿಸುತ್ತದೆ. ಹಾಗಂತ ಅವು ಸತ್ಯ ಹೇಳಿಕೆಗಳು ಎಂಬುದಾಗಿ ಅವನ್ನು ಅವನು ನಂಬಿಕೊಳ್ಳುವುದಿಲ್ಲ. ಒಂದು ಕ್ರಿಯೆಯನ್ನು ಜರುಗಿಸುವುದಕ್ಕೆ ಪೂರ್ವಭಾವಿಯಾಗಿ ಅವು ಅವನಲ್ಲಿ ಪ್ರಸ್ತುತತೆ ಪಡೆಯುತ್ತವೆ.

ಗಾದೆಗಳು ಹೀಗಲ್ಲ. ಕುಳ್ಳರನ್ನು ಅಥವಾ ಹೆಂಗಸರನ್ನು ನೋಡಿದಾಕ್ಷಣ ಅವರ ಜೊತೆಗೆ ಹೇಗೆ ವ್ಯವಹರಿಸಬೇಕೆಂಬುದಕ್ಕೆ ಈ ಗಾದೆಗಳು ಸೂಚನೆಗಳಲ್ಲ. ಹಾಗಾಗಿ ಅವರನ್ನು ಭೇಟಿಮಾಡುವ ಪೂರ್ವದಲ್ಲಿ ಈ ಗಾದೆಗಳಿಗೆ ಕೆಲಸವಿಲ್ಲ. ಒಂದೊಮ್ಮೆ ಆ ಗಾದೆಗೆ ಹೊಂದುವಂತೇ ಅವರು ನಡೆದುಕೊಂಡರೆ ಆಗ ಈ ಗಾದೆಗಳನ್ನು ಹೇಳುತ್ತಾರೆ. ಇಲ್ಲದಿದ್ದರೆ ಈ ಗಾದೆಗಳು ಪ್ರಸ್ತುತವೇ ಆಗುವುದಿಲ್ಲ. ಅಂದರೆ ಗಾದೆಗಳ ಸಂದರ್ಭದಲ್ಲಿ ಏನಾಗುತ್ತಿದೆಯೆಂದರೆ ಒಂದು ಘಟನೆಯು ಘಟಿಸಿದ ನಂತರ ಅದರ ಕುರಿತು ನಮ್ಮ ಅನುಭವವನ್ನು ರಚಿಸಿಕೊಳ್ಳಲು ಅವು ಸಹಕರಿಸುತ್ತವೆ ಅಷ್ಟೆ. ನಮ್ಮ ಸಂಸ್ಕೃತಿಯಲ್ಲಿ ಕಥೆಗಳೂ ಇದೇ ರೀತಿಯಲ್ಲಿ ಪ್ರಸ್ತುತವಾಗುತ್ತವೆ ಎಂಬುದನ್ನು ಹಿಂದಿನ ಅಂಕಣವೊಂದರಲ್ಲಿ ನೋಡಿದ್ದೇವೆ. ಗಾದೆಗಳೂ ಮೂಲದಲ್ಲಿ ಕಥೆಗಳೇ ಆಗಿದ್ದವು. ಇಂದೂ ಕೂಡ ಬಹಳಷ್ಟು ಗಾದೆಗಳಿಗೆ ಕಥೆಗಳನ್ನು ಉಳಿಸಿಕೊಂಡುಬಂದಿದ್ದಾರೆ. ಈ ಕಥೆಗಳನ್ನು ಸಂಕ್ಷಿಪ್ತವಾಗಿ ಒಂದು ಅಥವಾ ಕೆಲವು ಸಾಲುಗಳ ಮೂಲಕ ಉಲ್ಲೇಖಿಸುವ ಸಲುವಾಗಿ ಗಾದೆಗಳು ಅಸ್ತಿತ್ವದಲ್ಲಿ ಬಂದಂತೆ ಕಾಣುತ್ತದೆ.

ಅಷ್ಟಾಗಿಯೂ ದೈನಂದಿನ ಜೀವನದಲ್ಲಿ ಬಳಕೆಯಾಗುವ ಮಾತುಗಳಲ್ಲಿ ಕೆಲವೊಮ್ಮೆ ಅವರು ಹಾಗೆ, ಇವರು ಹೀಗೆ ಅಂತೆಲ್ಲಾ ಆಡಿಕೊಳ್ಳುವುದನ್ನು ನಾನು ಕಂಡಿದ್ದೇನೆ. ಅದರಲ್ಲೂ ಮುಖ್ಯವಾಗಿ ಅವು ಸ್ಥಳೀಯವಾಗಿ ವ್ಯವಹರಿಸುವ ಗುಂಪುಗಳ ಬಗೆಗೆ ಮಾತ್ರವೇ ಚಾಲ್ತಿಯಲ್ಲಿರುತ್ತವೆ. ಇಂಥ ಜಾತಿಯವರು ಪಾಕಡಾ, ಇಂಥ ವೃತ್ತಿಯವರು ಜಿಪುಣರು, ಇತ್ಯಾದಿ. ಆದರೆ ಇವು ಕ್ರಿಯೆಗೆ ಪೂರ್ವಭಾವಿಯಾಗಿ ಬರುವುದಿಲ್ಲ. ಬದಲಾಗಿ ಒಂದು ಸಮೂಹದ ವ್ಯಕ್ತಿಯೊಬ್ಬನ ಜೊತೆಗೆ ಜೀವಿಸುವಾಗ ಆದ ಒಂದು ಅನುಭವವನ್ನು ಅರ್ಥೈಸುವಾಗ ಇಂಥ ಹೇಳಿಕೆಗಳು ಬರುತ್ತವೆ. ಒಂದೊಮ್ಮೆ ಅವರ ಜೊತೆಗೆ ಅಂಥ ಅನುಭವವೇ ಆಗದಿದ್ದರೆ ಆ ಮಾತನ್ನು ಯಾರೂ ಎತ್ತುವುದಿಲ್ಲ. ಕಥೆ ಹಾಗೂ ಗಾದೆಗಳ ಸಂದರ್ಭದಲ್ಲಿ ಏನನ್ನು ಗಮನಿಸಿದ್ದೇವೆಯೋ ಅದು ಇಲ್ಲೂ ಅನ್ವಯವಾಗುವಂತಿದೆ. ಅಂದರೆ ನಿರ್ದಿಷ್ಟ ಸಂದರ್ಭಕ್ಕೆ ಹೊರತಾಗಿ ಒಂದು ಲೋಕ ಚಿತ್ರಣವೆಂಬಂತೇ ಯಾರೂ ಅವುಗಳನ್ನಿಟ್ಟುಕೊಂಡು ವ್ಯವಹರಿಸುವುದಿಲ್ಲ ಹಾಗೂ ಕಾಪಾಡಿಕೊಂಡು ಬರುವುದಿಲ್ಲ.

ಏಕೆ ನಮ್ಮ ಇದುವರೆಗಿನ ಬರವಣಿಗೆಗಳಲ್ಲಿ ಅಂಥ ಸಮೂಹಗಳನ್ನು ವರ್ಣಿಸುವಾಗ ಅವುಗಳ ಉಪಯೋಗ ಕಾಣುವುದಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಉದಾಹರಣೆಗೆ ಕನ್ನಡದಲ್ಲಿ ಎಷ್ಟೊಂದು ಪ್ರವಾಸ ಸಾಹಿತ್ಯವು ಸೃಷ್ಟಿಯಾಗಿದೆ. ಎಲ್ಲರೂ ಪಾಶ್ಚಾತ್ಯರ ಸ್ಟೀರಿಯೋಟೈಪುಗಳನ್ನೇ ಪುನರುಚ್ಛರಿಸುತ್ತಿರುತ್ತಾರೆಯೇ ಹೊರತೂ ಭಾರತೀಯ ಜನಜಾತಿಗಳ ಸಂದರ್ಭದಲ್ಲಿ ಅವುಗಳ ಬಳಕೆಯನ್ನೇ ಮಾಡುವುದಿಲ್ಲ. ಅಂದರೆ ಇಂತಹ ಸ್ಟೀರಿಯೋಟೈಪುಗಳಲ್ಲಿ ಪಾಶ್ಚಾತ್ಯ-ಭಾರತೀಯ ಎಂಬ ಪ್ರಭೇದಗಳು ಮುಖ್ಯವಾಗುತ್ತವೆಯೇ ವಿನಃ ಭಾರತೀಯರೊಳಗೇ ಇರುವ ಪ್ರಾದೇಶಿಕ ಗುಂಪುಗಳು ಹಾಗೂ ಜಾತಿಗಳಲ್ಲ. ಇವರೆಲ್ಲರೂ ಪಾಶ್ಚಾತ್ಯರ ಸ್ಟೀರಿಯೋಟೈಪುಗಳನ್ನೇ ಪುನರುತ್ಪಾದಿಸುತ್ತಿದ್ದಾರೆಯೇ ವಿನಃ ನಮ್ಮ ಸಂಸ್ಕೃತಿಯ ಮಾತುಗಳನ್ನು ಪ್ರಯೋಗಿಸುತ್ತಿಲ್ಲ. ಏಕೆ ಈ ಬರೆಹಗಾರರಿಗೆ ತಮ್ಮದೇ ಆದ ಸ್ಟೀರಿಯೋಟೈಪುಗಳಿಲ್ಲ? ಬಹುಶಃ ಭಾರತೀಯ ನೆಲದಲ್ಲಿ ಅವು ಬೆಳೆಯುವುದಿಲ್ಲ. ಅಂದರೆ ಭಾರತೀಯರು ಅವುಗಳನ್ನು ಬಳಸಿಕೊಂಡು ಲೋಕವ್ಯವಹಾರವನ್ನು ಮಾಡುವುದಿಲ್ಲ. ಇದರಿಂದ ಏನು ತಿಳಿದುಬರುತ್ತದೆಯೆಂದರೆ, ಪಾಶ್ಚಾತ್ಯ ಸಾಹಿತ್ಯ ಹಾಗೂ ಸಮಾಜವಿಜ್ಞಾನಗಳ ಬರವಣಿಗೆಗಳಲ್ಲಿ ಬರುವ ಸ್ಟೀರಿಯೋ ಟೈಪುಗಳಿಗೂ ಆ ಸಂಸ್ಕೃತಿಯ ಜನರು ಪ್ರಪಂಚದಲ್ಲಿ ವ್ಯವಹರಿಸುವುದಕ್ಕೂ ಏನೋ ಸಂಬಂಧವಿರುವಂತೇ ಕಾಣುತ್ತದೆ.

ಅಂದರೆ ಸ್ಟೀರಿಯೋಟೈಪುಗಳಿಗೂ ಒಂದು ಸಂಸ್ಕೃತಿಯ ಕಲಿಕೆಯ ಕ್ರಮಕ್ಕೂ ಒಂದು ಸಂಬಂಧವಿದೆ ಎಂಬುದು ಗೋಚರಿಸುತ್ತದೆ. ಯಾವ ಸಂಸ್ಕೃತಿಯು ಸೈದ್ಧಾಂತಿಕ ತಿಳುವಳಿಕೆಯನ್ನು ತನ್ನ ಕಲಿಕೆಯಲ್ಲಿ ಪ್ರಧಾನವಾಗಿ ಅಳವಡಿಸಿಕೊಂಡಿರುತ್ತದೆಯೋ ಅದಕ್ಕೆ ಸ್ಟೀರಿಯೋಟೈಪುಗಳನ್ನು ಸೃಷ್ಟಿಸಿಕೊಳ್ಳುವ ಅಗತ್ಯ ಬೀಳುತ್ತದೆ ಎಂಬುದು ನನ್ನ ಊಹೆ. ಅಂದರೆ ಪ್ರಾಪಂಚಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದಕ್ಕೂ ಮೊದಲು ಈ ಜಗತ್ತಿನ ಕುರಿತು ಜ್ಞಾನವನ್ನು ಸಂಪಾದಿಸಬೇಕೆಂಬುದಾಗಿ ಈ ಸಂಸ್ಕೃತಿಯು ಕಲಿಸುತ್ತದೆ. ಅದೇ ಪ್ರಕಾರವಾಗಿ ಜನರ ಹಾಗೂ ಸಂಸ್ಕೃತಿಗಳ ಜೊತೆಗೆ ವ್ಯವಹರಿಸುವ ಪೂರ್ವದಲ್ಲಿ ಅವರ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಹಾಗಾಗಿ ಜನರ ಹಾಗೂ ಸಂಸ್ಕೃತಿಗಳ ಚಿತ್ರಣವನ್ನು ಕಟ್ಟುವ ಕೆಲಸವು ಪಾಶ್ಚಾತ್ಯರಿಗೆ ಬಹು ಮುಖ್ಯವಾಗುತ್ತದೆ. ತಮ್ಮ ಕುರಿತು ಹಾಗೂ ಅನ್ಯರ ಕುರಿತು ಚಿತ್ರಣಗಳನ್ನು ಇಟ್ಟುಕೊಂಡೇ ಒಡನಾಟದಲ್ಲಿ ತೊಡಗಿಕೊಳ್ಳುವ ಕ್ರಮವನ್ನು ಅನುಸರಿಸುವ ಜನರಿಗೆ ತಮ್ಮ ಕ್ರಿಯೆಗಳಿಗೆ ಪೂರ್ವಭಾವಿಯಾಗಿ ಕೆಲವು ಹೇಳಿಕೆಗಳ ಆಧಾರ ಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ಟೀರಿಯೋಟೈಪುಗಳು ಹುಟ್ಟಿಕೊಳ್ಳುತ್ತವೆ. ಅಂದರೆ ಯಾವುದಾದರೊಂದು ಪೂರ್ವಕಲ್ಪನೆಯನ್ನಿಟ್ಟುಕೊಳ್ಳದೇ ಈ ಜನರಿಗೆ ಜನಸಮುದಾಯಗಳ ಜೊತೆಗೆ ಒಡನಾಡುವುದು ಅಸಾಧ್ಯವಾಗುತ್ತದೆ.

ಆದರೆ ಸ್ಟೀರಿಯೋಟೈಪುಗಳಲ್ಲಿ ಬರುವ ಹೇಳಿಕೆಯು ಪ್ರಪಂಚದ ಚಿತ್ರಣವನ್ನು ನೀಡುವ ಉದ್ದೇಶವನ್ನು ಹೊಂದಿಲ್ಲ. ಒಂದೊಮ್ಮೆ ಅಂಥ ಉದ್ದೇಶವಿದ್ದಿದ್ದರೆ ಸ್ಟೀರಿಯೋಟೈಪುಗಳನ್ನು ಕಟ್ಟುವ ಬದಲು ಸಿದ್ಧಾಂತಗಳನ್ನು ಕಟ್ಟುತ್ತಿದ್ದರು. ಕೆಲವರಿಗೆ ಅಥವಾ ಹಲವರಿಗೆ ಆದ ಅನುಭವವನ್ನು ಆಧರಿಸಿ ಇಂಥ ಸಾರ್ವತ್ರಿಕ ಹೇಳಿಕೆಗಳು ಅಸ್ತಿತ್ವದಲ್ಲಿ ಬರುತ್ತವೆ. ಇಂಥ ಹೇಳಿಕೆಗಳ ವೈಶಿಷ್ಟ್ಯತೆಯೆಂದರೆ ಅವು ವಿಶ್ಲೇಷಣೆಯಿಂದ ಹುಟ್ಟಿದ ಹೇಳಿಕೆಗಳಲ್ಲ. ಹಾಗೂ ಅವು ಕೆಲವು ವ್ಯಕ್ತಿಗಳ ವ್ಯವಹಾರದಲ್ಲಿ ಗುರುತಿಸಿದ ಯಾವುದೋ ಒಂದು ವಿಶಿಷ್ಟತೆಯನ್ನು ಆ ಸಮೂಹದ ಸ್ವಭಾವವನ್ನಾಗಿ ಪರಿವರ್ತಿಸುತ್ತವೆ. ಸ್ಟೀರಿಯೋಟೈಪುಗಳ ಉದ್ದೇಶವೆಂದರೆ ಪಾಶ್ಚಾತ್ಯರಿಗೆ ಅನ್ಯ ಜನರ ಜೊತೆಗೆ ಒಡನಾಡುವ ಕ್ರಿಯೆಗೆ ಅದು ಬೇಕು. ಕ್ರಿಯೆಯನ್ನು ಜರುಗಿಸಲು ನೇರವಾಗಿ ಕ್ರಿಯೆಯನ್ನು ಅನುಕರಿಸುವುದು ಒಂದು ಮಾರ್ಗವಾದರೆ, ತೀರಾ ಸಂಕ್ಷಿಪ್ತವಾದ ಹೇಳಿಕೆಗಳನ್ನು ಕ್ರಿಯೆಗೆ ನಿರ್ದೇಶನವಾಗಿ ಬಳಸಿಕೊಂಡು ತೊಡಗುವುದು ಮತ್ತೊಂದು ಮಾರ್ಗ. ಪಾಶ್ಚಾತ್ಯ ಸಂಸ್ಕೃತಿಯು ಎರಡನೆಯ ಮಾರ್ಗಕ್ಕೆ ಒತ್ತು ನೀಡುವುದರಿಂದ ಅವರು ಸ್ಟೀರಿಯೋ ಟೈಪುಗಳನ್ನು ಹುಟ್ಟುಹಾಕುತ್ತಾರೆ.

ಹಾಗಂತ ಇಂಥ ಹೇಳಿಕೆಗಳಿಗೂ ವಾಹನ ಚಾಲನೆಯ ನಿಯಮಗಳಂಥ ಹೇಳಿಕೆಗಳಿಗೂ ವ್ಯತ್ಯಾಸವಿದೆ. ಸ್ಟೀರಿಯೋ ಟೈಪುಗಳನ್ನು ಹೇಗೆ ನಂಬುತ್ತಾರೆ ಅಥವಾ ಬಳಸುತ್ತಾರೆನ್ನುವುದು ಆಯಾ ವ್ಯಕ್ತಿಗೆ ಬಿಟ್ಟದ್ದು. ಉಪಯೋಗಿಸುವವರೂ ಕೂಡ ಸ್ಟೀರಿಯೋ ಟೈಪುಗಳನ್ನು ನಂಬಿಯೇ ಒಡನಾಡುವುದಿಲ್ಲ. ಅಷ್ಟಾಗಿಯೂ, ಕೆಲವು ವ್ಯಕ್ತಿಗಳ ವರ್ತನೆಯನ್ನು ಇಡೀ ಸಮೂಹದ ಸ್ವಭಾವವನ್ನಾಗಿ ಮಾಡುವ ಹೇಳಿಕೆಗಳು ವಿಭಿನ್ನ ಸಂಸ್ಕೃತಿಗಳ ಒಡನಾಟದ ಮೇಲೆ ತಮ್ಮದೇ ಆದ ಪರಿಣಾಮಗಳನ್ನು ಹೊಂದಿವೆ. ಅವು ಕ್ರಿಯೆಗೆ ಪೂರ್ವಭಾವಿಯಾಗಿ ಬರುವುದರಿಂದ ಪಾಶ್ಚಾತ್ಯರಿಗೆ ಅನ್ಯ ಸಂಸ್ಕೃತಿಗಳ ಕುರಿತು ಪೂರ್ವಾಗ್ರಹಗಳನ್ನು ಹುಟ್ಟುಹಾಕುವ ಶಕ್ತಿಯನ್ನು ಹೊಂದಿವೆ. ಈ ಸ್ಟೀರಿಯೋಟೈಪುಗಳಲ್ಲಿ ಸಾಕಷ್ಟು ಅಥವಾ ಬಹಳಷ್ಟು ಪಾಶ್ಚಾತ್ಯರ ನೈತಿಕ ನಿರೀಕ್ಷೆಯನ್ನು ಒಳಗೊಂಡಿವೆ. ಅಂದರೆ ಪಾಶ್ಚಾತ್ಯರ ಪ್ರಕಾರ ನೈತಿಕ ನಿಯಮಗಳ (ought ಎಂಬರ್ಥದಲ್ಲಿ) ಆಳ್ವಿಕೆಗೊಳಪಟ್ಟ ಮಾನವ ಕ್ರಿಯೆಗಳ ವಲಯವೊಂದಿದೆ, ಅದನ್ನು ಅವರು ಮಾರಲ್ ಡೊಮೈನ್ ಎನ್ನುತ್ತಾರೆ ಎಂಬುದನ್ನು ಈ ಮೊದಲೇ ಚರ್ಚಿಸಿದ್ದೆ. ಅವರು ಆ ನಿಯಮಗಳ ಪ್ರಕಾರ ಯಾವುದು ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ನಿರ್ಧರಿಸುತ್ತಾರೆ. ಈ ನಿರ್ಣಯಗಳು ತಮ್ಮ ಹಾಗೂ ಅನ್ಯರ ಕುರಿತು ಹುಟ್ಟುಹಾಕಿದ ಸ್ಟೀರಿಯೋಟೈಪುಗಳಲ್ಲಿ ಕೂಡ ಪ್ರಸ್ತುತತೆ ಪಡೆಯುತ್ತವೆ.

ಅಂದರೆ ಸಂಸ್ಕೃತಿಗಳ ನಡುವಿನ ವ್ಯತ್ಯಾಸದ ಕುರಿತ ಅಜ್ಞಾನದಿಂದಾಗಿ ವಸಾಹತು ಕಾಲದಲ್ಲಿ ಭಾರತೀಯರ ಹಲವು ವರ್ತನೆಗಳು ಪಾಶ್ಚಾತ್ಯರ ಮಾನದಂಡಕ್ಕೆ ನಕಾರಾತ್ಮಕವಾಗಿ ಕಾಣಿಸಿದವು. ಅದಕ್ಕೆ ಅನುಗುಣವಾಗಿ ಪಾಶ್ಚಾತ್ಯರ ಶ್ರೇಷ್ಟತೆ ಹಾಗೂ ಅನ್ಯರ ಕನಿಷ್ಠತೆಯು ಪ್ರತಿಪಾದನೆ ನಡೆಯಿತು. ಆ ಕಾಲದಲ್ಲಿ ಹುಟ್ಟಿದ ಸ್ಟೀರಿಯೋಟೈಪುಗಳು ಇನ್ನೂ ಬಳಕೆಯಲ್ಲಿರುವುದರಿಂದ ಆ ಅಭಿಪ್ರಾಯಗಳು ಇನ್ನೂ ಪುನರುತ್ಪಾದನೆಯಾಗುತ್ತಿವೆ. ಈ ಪುನರುತ್ಪಾದನೆಯು ಕೇವಲ ಪಾಶ್ಚಾತ್ಯರಿಂದ ಮಾತ್ರವೇ ಆಗುತ್ತಿಲ್ಲ. ಅದು ಭಾರತೀಯರಿಂದಲೂ ಆಗುತ್ತಿದೆ ಎಂಬುದನ್ನು ಭಾರತೀಯ ಭಾಷೆಗಳಲ್ಲಿ ಬಂದ ಪ್ರವಾಸ ಸಾಹಿತ್ಯವನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಯುರೋಪು, ಅಮೇರಿಕಾಗಳಿಗೆ ಹೋಗಿ ಬಂದ ಕನ್ನಡಿಗರ ಪ್ರವಾಸ ಸಾಹಿತ್ಯವನ್ನು ಓದಿದಾಗ ಕಾಣುವುದೇನು? ಪ್ರವಾಸ ವರ್ಣನೆಯ ಜೊತೆಗೇ ಪಾಶ್ಚಾತ್ಯರು ತಮ್ಮ ಕುರಿತು ಹಾಗೂ ಭಾರತೀಯರ ಕುರಿತು ಹುಟ್ಟುಹಾಕಿದ ಸ್ಟೀರಿಯೋಟೈಪುಗಳಿಗೆ ದೃಷ್ಟಾಂತವನ್ನು ಒದಗಿಸುವ ಕೆಲಸವನ್ನೂ ಅವು ಮಾಡುತ್ತವೆ ಎಂಬುದನ್ನು ಗಮನಿಸದಿರುವುದು ಕಷ್ಟ. ಅದಕ್ಕಿಂತಲೂ, ಭಾರತೀಯ ಸಮಾಜದ ಕುರಿತು ಪಾಶ್ಚಾತ್ಯರು ಹುಟ್ಟುಹಾಕಿದ ಸ್ಟೀರಿಯೋಟೈಪುಗಳು ಇಂದು ಭಾರತೀಯ ಸಮಾಜದ ವರ್ಣನೆಗೆ ತಳಹದಿಗಳಾಗಿವೆ ಮಾತ್ರವಲ್ಲ, ಅವೇ ಸಿದ್ಧಾಂತದ ಸ್ಥಾನವನ್ನೂ ಅಲಂಕರಿಸಿವೆ. ಅದಕ್ಕಿಂತಲೂ ಮುಖ್ಯವಾಗಿ ಕಳೆದ ನೂರಿನ್ನೂರು ವರ್ಷಗಳಲ್ಲಿ ನಮ್ಮ ಪ್ರಾದೇಶಿಕ ಭಾಷೆ ಹಾಗೂ ಸಂದರ್ಭಗಳಲ್ಲೂ ಕೂಡ ಇಂಥ ಸ್ಟೀರಿಯೋಟೈಪುಗಳ ಸೃಷ್ಟಿಯಾಗುತ್ತಿದೆ.

ಸ್ಟಿರಿಯೋಟೈಪುಗಳು ಸಮಾಜದ ಚಿತ್ರಣಕ್ಕಾಗಿ ಅಸ್ತಿತ್ವದಲ್ಲಿ ಬರಲಿಲ್ಲ ಎಂಬುದೇನೋ ನಿಜ. ಆದರೆ ಪಾಶ್ಚಾತ್ಯರು ತಮ್ಮ ನೈತಿಕ ಪೂರ್ವಾಗ್ರಹಗಳ ಮೂಲಕ ಇಂಥ ಸ್ಟೀರಿಯೋಟೈಪುಗಳನ್ನು ಹುಟ್ಟುಹಾಕಿದ್ದಾರೆ ಎಂಬುದನ್ನು ಮರೆಯಬಾರದು. ಅವುಗಳನ್ನು ಹಿಡಿದುಕೊಂಡು ಕ್ರಿಯೆಯ ಸಾಧ್ಯತೆಯನ್ನು ಆವಿಷ್ಕರಿಸುವುದಕ್ಕೂ, ಅವುಗಳನ್ನು ಸಮಾಜದ ಚಿತ್ರಣಗಳೆಂದು ಪ್ರತಿಪಾದಿಸುವುದಕ್ಕೂ ವ್ಯತ್ಯಾಸವಿದೆ. ಅಷ್ಟೇ ಅಲ್ಲ ಭಾರತೀಯರು ಅವನ್ನು ಸಮಾಜದ ಚಿತ್ರಣಗಳನ್ನಾಗಿ ಬದಲಾಯಿಸಿದರೆ ವಸಾಹತು ಕಾಲದ ಚಿತ್ರಣಗಳನ್ನು ಹಾಗೂ ಬೌದ್ಧಿಕ ಗುಲಾಮಗಿರಿಯನ್ನು ಮುಂದುವರೆಸಲು ಅವು ಸಾಧನಗಳಾಗುವ ಅಪಾಯ ಕೂಡ ಇದೆ. ಈ ಕಾರಣದಿಂದ ಭಾರತೀಯ ಸಂಸ್ಕೃತಿಯ ಕುರಿತು ಪರ್ಯಾಯ ವಿವರಣೆಯನ್ನು ಬೆಳೆಸಬೇಕಾದರೆ ಸ್ಟೀರಿಯೋಟೈಪುಗಳ ನಿಜ ಸ್ವರೂಪವನ್ನು ತಿಳಿದುಕೊಳ್ಳುವ ಕೆಲಸವು ಅತ್ಯಂತ ಮಹತ್ವದ್ದು.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: