ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Cultural Studies, Religion > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 50: ಎಲ್ಲಾ ಸಂಸ್ಕೃತಿಗಳಿಗೂ ರಿಲಿಜನ್ನು ಇರಲೇಬೇಕೆಂದು ವಿದ್ವಾಂಸರಿಗೇಕೆ ಅನ್ನಿಸುತ್ತದೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ


ಒಂದೆಡೆ ಪಾಶ್ಚಾತ್ಯ ವಿದ್ವಾಂಸರು ತಾವು ನೋಡಿದ ಸಂಸ್ಕೃತಿಗಳಲ್ಲೆಲ್ಲ ರಿಲಿಜನ್ನು ಇದೆ ಎಂಬುದಾಗಿ ಭಾವಿಸುತ್ತಾರೆ. ಆದರೆ ಮತ್ತೊಂದೆಡೆ ಸೆಮೆಟಿಕ್ ರಿಲಿಜನ್ನುಗಳನ್ನು ಬಿಟ್ಟು ಉಳಿದ ಯಾವ ರಿಲಿಜನ್ನುಗಳೂ ಕೂಡ ಅವರಿಗೆ ರಿಲಿಜನ್ನುಗಳಂತೇ ಕಾಣಿಸುತ್ತಿಲ್ಲ ಎಂಬುದಾಗಿ ಗೋಳಾಡುತ್ತಾರೆ. ಉದಾಹರಣೆಗೆ ಭಾರತದ ಸಂಪ್ರದಾಯಗಳಲ್ಲಿ ಅವರಿಗೆ ರಿಲಿಜನ್ನುಗಳ ಅತ್ಯಾವಶ್ಯಕ ಗುಣಗಳಾದ ಏಕದೇವ, ಪ್ರವಾದಿ, ದೇವವಾಣಿ, ಪವಿತ್ರಗ್ರಂಥ ಇತ್ಯಾದಿಗಳನ್ನು ಗುರುತಿಸಲಿಕ್ಕೆ ಆಗಿಲ್ಲ. ಆದರೂ ಇಲ್ಲಿ ಹಿಂದೂಯಿಸಂ, ಬುದ್ಧಿಸಂ ಇತ್ಯಾದಿ ರಿಲಿಜನ್ನುಗಳಿವೆ ಎನ್ನುತ್ತಾರೆ. ಇದು ಹೇಗಿದೆಯೆಂದರೆ, ಬೇರಿಲ್ಲ, ಕಾಂಡವಿಲ್ಲ, ಎಲೆಯಿಲ್ಲ ಆದರೂ ಅದೊಂದು ಮರ ಎಂಬುದಾಗಿ ಹಟಹಿಡಿದಂತಿದೆ. ಅವರನ್ನೇ ಅನುಸರಿಸಿ ಭಾರತೀಯ ವಿದ್ಯಾವಂತರು ಕೂಡ ಭಾರತದಲ್ಲಿ ರಿಲಿಜನ್ನಿಲ್ಲ ಎಂದರೆ ಅದು ತಮ್ಮ ಸಂಸ್ಕೃತಿಗೊಂದು ನ್ಯೂನತೆ ಎಂಬಂತೇ ಭಾವಿಸುತ್ತಾರೆ.

ಹೀಗೇಕೆಂದರೆ, ಮಾನವ ಸಂಸ್ಕೃತಿಗಳಲ್ಲಿ ರಿಲಿಜನ್ನು ಅದರ ಸದಸ್ಯರಿಗೆ ಲೋಕದೃಷ್ಟಿಯನ್ನು ಕಟ್ಟಿಕೊಡುತ್ತದೆ ಎಂಬುದಾಗಿ ರಿಲಿಜನ್ನಿನ ಅಧ್ಯಯನವನ್ನು ನಡೆಸುವ ವಿದ್ವಾಂಸರು ಪ್ರತಿಪಾದಿಸುತ್ತಾರೆ. ಲೋಕ ದೃಷ್ಟಿಯೆಂದರೆ ವಿಶ್ವದ ಕುರಿತ ಒಂದು ಸಮಗ್ರ ನೋಟ. ಇದನ್ನು ಇಂಗ್ಲೀಷಿನಲ್ಲಿ ವಲ್ರ್ಡವ್ಯೂ (world view) ಎನ್ನುತ್ತಾರೆ. ವಿಶ್ವಾವಲೋಕನ ಎಂಬ ಅನುವಾದವು ಈ ಪರಿಕಲ್ಪನೆಗೆ ಹೆಚ್ಚು ಹತ್ತಿರವಾಗಿದೆ. ಆದರೆ ಲೋಕದೃಷ್ಟಿ ಎಂಬ ಶಬ್ದವು ಇದಕ್ಕೆ ಅನುವಾದವಾಗಿ ಪ್ರಚಲಿತದಲ್ಲಿರುವುದರಿಂದ ಇಲ್ಲಿ ಅದನ್ನೇ ಬಳಸುತ್ತೇನೆ. ಮಾನವ ಶಾಸ್ತ್ರಜ್ಞರು ಹಾಗೂ ಸಮಾಜ ಶಾಸ್ತ್ರಜ್ಞರು ಲೋಕದೃಷ್ಟಿಯ ಪರಿಕಲ್ಪನೆಯನ್ನು ಜಗತ್ತಿನ ಸಮಾಜಗಳ ಚಿತ್ರಣಕ್ಕೆ ಬಳಸುತ್ತಾ ಅದನ್ನು ಜನಪ್ರಿಯಗೊಳಿಸಿದ್ದಾರೆ. ಅಂದರೆ ಪಾಶ್ಚಾತ್ಯರು ಅನ್ಯ ಸಂಸ್ಕೃತಿಗಳನ್ನು ಅಧ್ಯಯನ ನಡೆಸುವಾಗ ಅವುಗಳ ಲೋಕದೃಷ್ಟಿಯನ್ನು ಕಂಡುಹಿಡಿಯುವುದು ಅವರಿಗೆ ಆದ್ಯತೆಯ ಕೆಲಸವಾಗುತ್ತದೆ.

ಲೋಕದೃಷ್ಟಿ ಎಂದರೆ ಒಂದು ಸಮಾಜವು ಈ ವಿಶ್ವದ ಕಾರ್ಯ-ಕಾರಣದ ಕುರಿತು, ಅದರ ಆದಿ ಅಂತ್ಯದ ಕುರಿತು, ಅದರೊಳಗೆ ಮಾನವರ ಹುಟ್ಟು ಸಾವು, ಜೀವನದ ಅರ್ಥ, ಅಂತಿಮ ಗತಿ, ಇತ್ಯಾದಿಗಳನ್ನು ಕುರಿತು ಕಟ್ಟಿಕೊಂಡ ನಂಬಿಕೆಗಳಾಗಿವೆ. ಇಂಥ ನಂಬಿಕೆಗಳನ್ನು ಆಧರಿಸಿ ಆಯಾ ಸಂಸ್ಕೃತಿಗೆ ಸೇರಿದವರು ತಮ್ಮ ಜೀವನ ಮೌಲ್ಯವನ್ನು ಹಾಗೂ ಕಲ್ಪನೆಯನ್ನು ರೂಪಿಸಿಕೊಂಡಿರುತ್ತಾರೆ ಎಂಬುದಾಗಿ ವಿದ್ವಾಂಸರು ತಿಳಿಯುತ್ತಾರೆ. ಇದು ವಿಶ್ವವನ್ನು ಅವಲೋಕಿಸುವ ಕೆಲಸವಾಗಿದೆ. ಅಂದರೆ ಪ್ರತೀ ಸಂಸ್ಕೃತಿಗೆ ಸೇರಿದವರಿಗೂ ವಿಶ್ವದ ಕುರಿತು ಒಂದಿಲ್ಲೊಂದು ಅಂಥ ದೃಷ್ಟಿಯು ಇರುತ್ತದೆ. ಒಮ್ಮೆ ಇಲ್ಲದಿದ್ದರೆ, ಕುರುಡನೊಬ್ಬನಿಗೆ ದಾರಿಯು ಹೇಗೆ ಕಾಣಿಸಲಾರದೋ ಹಾಗೆ ಆ ಜನರಿಗೆ ತಮ್ಮ ಜೀವನವನ್ನು ನಡೆಸುವ ದಾರಿಯೇ ಕಾಣಿಸಲಾರದು. ಈ ಲೋಕದೃಷ್ಟಿಯನ್ನು ಆಯಾ ಸಂಸ್ಕೃತಿಗಳಲ್ಲಿನ ರಿಲಿಜನ್ನುಗಳು ಕಟ್ಟಿಕೊಡುತ್ತವೆ. ಉದಾಹರಣೆಗೆ, ಕ್ರಿಶ್ಚಿಯಾನಿಟಿಯು ತನ್ನ ಅನುಯಾಯಿಗಳಿಗೆ ಈ ಪ್ರಪಂಚದ ಸೃಷ್ಟಿ, ಅದರ ಹಿಂದಿನ ಉದ್ದೇಶ, ಇಲ್ಲಿ ಜೀವಿಸಬೇಕಾದ ಸರಿಯಾದ ಮಾರ್ಗವೇನು, ಎಂಬುದರ ಕುರಿತು ಒಂದು ನಿರ್ದಿಷ್ಟ ದೃಷ್ಟಿಯನ್ನು ಕಟ್ಟಿಕೊಡುತ್ತದೆ. ಅದನ್ನಾಧರಿಸಿ ವ್ಯಕ್ತಿಯೊಬ್ಬನು ಜೀವಿಸುತ್ತಾನೆ. ಇದನ್ನೇ ಓದಿ ನಂಬಿಕೊಂಡ ವಿದ್ಯಾವಂತರಿಗೆ ರಿಲಿಜನ್ನು ಜೀವನ ನಡೆಸಲಿಕ್ಕೆ ಹಾಗೂ ಜೀವನ ಮೌಲ್ಯಗಳನ್ನು ಕಟ್ಟಿಕೊಡಲಿಕ್ಕೆ ಅತ್ಯಗತ್ಯವಾದ ಒಂದು ಸಂಗತಿ ಎನ್ನಿಸದಿರಲು ಸಾಧ್ಯವಿಲ್ಲ. ಭಾರತದಲ್ಲಿ ರಿಲಿಜನ್ನೇ ಇಲ್ಲ ಎಂದು ಯಾರಾದರೂ ಹೇಳಿದಾಗ ಅದು ಅಸಾಧ್ಯವಾಗಿ ಇಲ್ಲವೇ ನಿಂದನೆಯಾಗಿ ಕಾಣಿಸುವುದು ಸ್ವಾಭಾವಿಕ.

ಅಂದರೆ ಈ ಮೇಲಿನ ತರ್ಕದ ಪ್ರಕಾರ ಒಂದು ಸಂಸ್ಕೃತಿಯಲ್ಲಿ ಎರಡು ಅಂಶಗಳಿರಬೇಕು: ಒಂದು ರಿಲಿಜನ್ನು, ಮತ್ತೊಂದು ಅದನ್ನಾಧರಿಸಿ ಹುಟ್ಟಿಕೊಂಡ ಲೋಕದೃಷ್ಟಿ. ಒಂದಿದ್ದರೆ ಮತ್ತೊಂದಿದ್ದೇ ಇರುತ್ತದೆ. ಇಲ್ಲೊಂದು ಪ್ರಶ್ನೆ ಹುಟ್ಟುತ್ತದೆ. ಲೋಕದೃಷ್ಟಿ ಇರಬೇಕಾದರೆ ರಿಲಿಜನ್ನು ಏಕೆ ಇರಲೇಬೇಕು? ರಿಲಿಜನ್ನಿಲ್ಲದೇ ಲೋಕದೃಷ್ಟಿಯನ್ನು ರಚಿಸಿಕೊಳ್ಳಲಿಕ್ಕೆ ಆಗುವುದಿಲ್ಲವೆ? ಪಾಶ್ಚಾತ್ಯ ಸೆಕ್ಯುಲರ್ ವಿದ್ವಾಂಸರು ಅದು ಸಾಧ್ಯ ಎನ್ನುತ್ತಾರೆ. ನಿಜವಾಗಿಯೂ ಹೇಳಬೇಕೆಂದರೆ ಲೋಕದೃಷ್ಟಿ ಎಂಬ ಪರಿಕಲ್ಪನೆಯೇ ಸೆಕ್ಯುಲರ್ ವಿದ್ವಾಂಸರ ಸೃಷ್ಟಿಯಾಗಿದೆ. ಯುರೋಪಿನಲ್ಲಿ 17ನೆಯ ಶತಮಾನದ ನಂತರ ಬೆಳೆದುಬಂದ ಅಥೇಯಿಸಂ ಚಳುವಳಿ ಹಾಗೂ ಸೆಕ್ಯುಲರ್ ಅಧ್ಯಯನಗಳು ಮಾನವರ ಕುರಿತ ಬೈಬಲ್ಲಿನ ಕಥೆಗಳನ್ನು ತಿರಸ್ಕರಿಸಿದವು. ಅದಕ್ಕೆ ಬದಲಾಗಿ ಮಾನವ ವಾಸ್ತವವನ್ನಾಧರಿಸಿದ ವೈಜ್ಞಾನಿಕ ಸಿದ್ಧಾಂತಗಳನ್ನು ಬೆಳೆಸಿದವು. ಆ ಸಂದರ್ಭದಲ್ಲಿ ಅವರಿಗೆ ರಿಲಿಜನ್ನು ಮಾನವ ಸಮಾಜಕ್ಕೆ ಏಕೆ ಅಗತ್ಯವಾಯಿತು ಎಂಬುದಕ್ಕೆ ವೈಜ್ಞಾನಿಕ ವಿವರಣೆಯನ್ನು ಬೆಳೆಸುವ ಸವಾಲು ಎದ್ದಿತು. ಅದಕ್ಕೆ ಉತ್ತರವಾಗಿ ಲೋಕದೃಷ್ಟಿಯನ್ನು ನೀಡುವುದಕ್ಕಾಗಿ ಸಂಸ್ಕೃತಿಗಳಿಗೆ ರಿಲಿಜನ್ನುಗಳ ಅನಿವಾರ್ಯತೆ ಇದೆಯೆಂಬ ಸೆಕ್ಯುಲರ್ ನಿರೂಪಣೆಯನ್ನು ಆಧುನಿಕ ವಿದ್ವಾಂಸರು ಬೆಳೆಸಿದರು. ಅಂದರೆ ಅವರು ರಿಲಿಜನ್ನಿಗೆ ಪ್ರತಿಯಾಗಿ ಲೋಕದೃಷ್ಟಿಯೆಂಬ ಕಲ್ಪನೆಯನ್ನು ಹುಟ್ಟುಹಾಕಿದರು.

ಯುರೋಪಿನ ವಿಚಾರವಾದಿಗಳು ಮಾನವನು ತನ್ನ ವಿಚಾರವನ್ನಾಧರಿಸಿದ ಲೋಕದೃಷ್ಟಿಯನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂಬುದಾಗಿ ಪ್ರತಿಪಾದಿಸಿದರು. ಆದರೆ ಈ ಲೋಕದೃಷ್ಟಿಗೆ ಅವರಿಗಿದ್ದ ಒಂದೇ ಉದಾಹರಣೆಯೆಂದರೆ ರಿಲಿಜನ್ನು. ಅಂದರೆ, ವೈಚಾರಿಕತೆಯ ತಳಹದಿಯ ಮೇಲೆ ತಮ್ಮ ಲೋಕದೃಷ್ಟಿಯನ್ನು ಕಟ್ಟಿಕೊಳ್ಳುವಷ್ಟು ಪ್ರೌಢತೆಯನ್ನು ಹೊಂದಿರದ ಸಮಾಜಗಳು ಲೋಕದೃಷ್ಟಿಗಾಗಿ ರಿಲಿಜನ್ನನ್ನು ಆಧರಿಸಿಕೊಳ್ಳುವ ಅನಿವಾರ್ಯತೆಯಿದೆ. ಹೀಗೆ ಪಾಶ್ಚಾತ್ಯ ಸಮಾಜವು ತನ್ನ ಮಧ್ಯಕಾಲದಲ್ಲಿ ರಿಲಿಜನ್ನನ್ನೇ ಆಧರಿಸಿ ಲೋಕದೃಷ್ಟಿಯನ್ನು ಕಟ್ಟಿಕೊಂಡಿತ್ತು. ಆದರೆ ಆಧುನಿಕ ಕಾಲದಲ್ಲಿ ರಿಲಿಜನ್ನನ್ನು ಅಲ್ಲಗಳೆದು ವೈಚಾರಿಕತೆಗೆ ಪ್ರಾಧಾನ್ಯತೆ ನೀಡಿದಾಗ ಯುರೋಪಿಯನ್ನರು ತಮ್ಮ ಹಳೆಯ ಲೋಕದೃಷ್ಟಿಯನ್ನು ಕಳೆದುಕೊಂಡರು ಎಂಬುದಾಗಿ ಸೆಕ್ಯುಲರ್ ಚಿಂತಕರು ಯೋಚಿಸಿದರು. ಹೊಸ ಸೆಕ್ಯುಲರ್ ಲೋಕದೃಷ್ಟಿಯನ್ನು ಕಟ್ಟಿಕೊಳ್ಳುವ ಜರೂರು ಇದೆ ಎಂಬುದಾಗಿ ಭಾವಿಸಿದರು. ಪರ್ಯಾಯ ಲೋಕದೃಷ್ಟಿಯನ್ನು ಕಟ್ಟಿಕೊಳ್ಳದಿದ್ದರೆ ಪಾಶ್ಚಾತ್ಯ ನಾಗರೀಕತೆಯು ವಿನಾಶವಾಗಿ ಬಿಡುತ್ತದೆ ಎಂಬುದಾಗಿ ಆತಂಕ ಪಟ್ಟರು. ಆಧುನಿಕ ಯುರೋಪಿಯನ್ನರು ಜಗತ್ತಿನಲ್ಲೆಲ್ಲ ತಾವೊಂದೇ ವೈಚಾರಿಕ ಪ್ರೌಢತೆಯನ್ನು ತಲುಪಿದವರು ಎಂಬುದಾಗಿ ನಂಬಿದ್ದರು. ಹಾಗಾಗಿ ಉಳಿದ ಸಂಸ್ಕೃತಿಗಳಲ್ಲಿ ಸೆಕ್ಯುಲರ್ ಲೋಕದೃಷ್ಟಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಯುರೋಪಿನ ಆಧುನಿಕ ಸಂಸ್ಕೃತಿ ಅಧ್ಯಯನಗಳು ತಮ್ಮ ಸೆಕ್ಯುಲರ್ ಚೌಕಟ್ಟಿನಿಂದ ಅನ್ಯ ಸಂಸ್ಕೃತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಅಲ್ಲಿ ಲೋಕದೃಷ್ಟಿಗಾಗಿ ಹುಡುಕಾಡಿದರು. ಏಕೆಂದರೆ ಸಂಸ್ಕೃತಿಗಳು ಉಳಿದು ಬಂದಿವೆ ಎಂದರೆ ಅವುಗಳಿಗೊಂದು ಲೋಕದೃಷ್ಟಿ ಇದ್ದಿರಲಿಕ್ಕೇ ಬೇಕು. ಲೋಕದೃಷ್ಟಿಯನ್ನು ಗುರುತಿಸುವುದು ಹೇಗೆ? ಅವುಗಳ ರಿಲಿಜನ್ನುಗಳನ್ನು ಗುರುತಿಸಿದರೆ ಅದು ತಿಳಿಯುತ್ತದೆ ಎಂಬುದಾಗಿ ಅವರು ಭಾವಿಸಿದರು. ಅಂದರೆ ಈ ಹಿಂದುಳಿದ ಸಮಾಜಗಳಿಗೆ ರಿಲಿಜನ್ನಿನ ಮೂಲಕ ಲೋಕದೃಷ್ಟಿಯನ್ನು ಕಟ್ಟಿಕೊಂಡು ಬದುಕನ್ನು ರೂಪಿಸಿಕೊಳ್ಳುವುದನ್ನು ಬಿಟ್ಟು ಬೇರಾವ ವಿಧಾನಗಳೂ ಇದ್ದಿರಲಿಕ್ಕಿಲ್ಲ. ಲೋಕದೃಷ್ಟಿಯು ಒಂದು ಸಂಸ್ಕೃತಿಗೆ ಅನಿವಾರ್ಯ ಅಂತಾದಮೇಲೆ ಅವುಗಳಿಗೆ ರಿಲಿಜನ್ನು ಒಂದಿಲ್ಲೊಂದು ರೂಪದಲ್ಲಿ ಇದ್ದಿರಲೇಬೇಕು ಎಂಬುದು ಅವರ ತರ್ಕ. ಹೀಗೆ ಎಲ್ಲೆಡೆಯಲ್ಲೂ ರಿಲಿಜನ್ನನ್ನು ಹುಡುಕುವ, ಕಟ್ಟುವ ಕೆಲಸವು ಈ ಆಧುನಿಕ ವಿದ್ವಾಂಸರಿಗೆ ಮುಖ್ಯವಾಯಿತು. ಭಾರತದ ಉದಾಹರಣೆಯನ್ನು ತೆಗೆದುಕೊಂಡರೆ, ಹಿಂದೂಯಿಸಂ, ಬುದ್ಧಿಸಂ ಇತ್ಯಾದಿಗಳಲ್ಲಿ ಅವರ ಪರಿಕಲ್ಪನೆಯ ರಿಲಿಜನ್ನು ಕಾಣಲಿಲ್ಲ, ಅಷ್ಟೇ ಅಲ್ಲ ಅದಕ್ಕೆ ವ್ಯತಿರಿಕ್ತವಾದ ಲಕ್ಷಣಗಳೂ ಕಂಡವು. ಆದರೆ ಅವು ಭಾರತೀಯರ ರಿಲಿಜನ್ನುಗಳ ವಿಶಿಷ್ಟತೆಯೆಂಬುದಾಗಿ ತೀರ್ಮಾನಿಸಿದರು, ಏಕೆಂದರೆ ಭಾರತೀಯರಿಗೆ ಒಂದು ಲೋಕದೃಷ್ಟಿಯಂತೂ ಇದ್ದಿರಲೇಬೇಕಲ್ಲ?

ಭಾರತೀಯರಿಗೂ ಕೂಡ ಈ ವಿಶ್ವದ ಆದಿ ಅಂತ್ಯಗಳ ಕುರಿತು, ಸಾವಿನಾಚೆಯ ಗತಿಯ ಕುರಿತು, ಹುಟ್ಟು ಸಾವುಗಳ ಕುರಿತು ಕಲ್ಪನೆಗಳಿಲ್ಲವೆ? ಅವನ್ನು ಲೋಕದೃಷ್ಟಿ ಎನ್ನಬಹುದಲ್ಲವೆ? ಆ ಕಾರಣಕ್ಕಾಗಿ ಇಲ್ಲೂ ರಿಲಿಜನ್ನುಗಳು ಇವೆಯೆಂಬುದಾಗಿ ತೀರ್ಮಾನಿಸಿರುವುದರಲ್ಲಿ ತಪ್ಪೇನಿದೆ? ಎಂಬ ಪ್ರಶ್ನೆ ಏಳಬಹುದು. ಆದರೆ ಅಷ್ಟೇ ಲೋಕದೃಷ್ಟಿಯಾಗುವುದಿಲ್ಲ. ಅದಕ್ಕೆ ಎರಡು ಅತ್ಯಂತ ನಿರ್ಣಾಯಕ ಅಂಶಗಳಿವೆ. ಮೊತ್ತಮೊದಲನೆಯದಾಗಿ ಈ ಕಲ್ಪನೆಗಳು ಸತ್ಯ ಎಂಬುದಾಗಿ ಅವರು ನಂಬಿಕೊಂಡಿರಬೇಕು. ಎರಡನೆಯದಾಗಿ ಈ ನಂಬಿಕೆಗಳು ಅವರ ಕ್ರಿಯೆಗಳಿಗೆ ಕಾರಣಗಳಾಗಿ ಇರಬೇಕು. ಪ್ರತೀ ಸಂಸ್ಕೃತಿಗಳೂ ಪ್ರಪಂಚದ ಕುರಿತು, ಜೀವನದ ಕುರಿತು ಒಂದಿಲ್ಲೊಂದು ಕಲ್ಪನೆಗಳನ್ನು ಇಟ್ಟುಕೊಂಡಿರುತ್ತವೆ ಅಂದಾಕ್ಷಣ ಅವನ್ನು ಅವರು ಲೋಕದೃಷ್ಟಿ ಎಂಬ ಪರಿಕಲ್ಪನೆಯ ಥರ ಉಪಯೋಗಿಸುತ್ತಿದ್ದಾರೆ ಅಂತಲ್ಲ. ಭಾರತೀಯ ಪುರಾಣಗಳಲ್ಲಿ ಬರುವ ಸಂಗತಿಗಳನ್ನು ನಾವು ಸತ್ಯ ಹೇಳಿಕೆಗಳು ಎಂಬಂತೇ ನೋಡುವುದಿಲ್ಲ ಹಾಗೂ ಈ ಹೇಳಿಕೆಗಳು ನಮಗೆ ಡಾಕ್ಟ್ರಿನ್ನುಗಳೋ, ದೈವಾಜ್ಞೆಗಳೋ ಅಲ್ಲ.

ಉದಾಹರಣೆಗೆ ಲೋಕದೃಷ್ಟಿಗಳು ಸತ್ಯವಾಗಿರಬೇಕಾದರೆ ಒಂದು ಸಮುದಾಯವು ಒಂದೇ ಕಥೆಯನ್ನು ಸತ್ಯವೆಂದು ನಂಬಿಕೊಂಡಿರಬೇಕು. ಉದಾಹರಣೆಗೆ ವಿಶ್ವದ ಸೃಷ್ಟಿಯ ಕಥೆಯನ್ನು ತೆಗೆದುಕೊಳ್ಳಿ. ನಮ್ಮಲ್ಲಿ ಒಂದೊಂದು ಸಂಪ್ರದಾಯಗಳು ಒಂದೊಂದು ರೀತಿಯಲ್ಲಿ ಅದನ್ನು ನಿರೂಪಿಸುತ್ತವೆ. ಅಂದರೆ ಒಂದು ಸಂಪ್ರದಾಯಕ್ಕೆ ಒಂದು ಸತ್ಯ ಕಥೆ ಇದೆ ಎಂಬುದಾಗಿ ಹೇಳಬಹುದಲ್ಲವೆ? ಎಂದು ನೀವು ಕೇಳಬಹುದು. ಆದರೆ ಒಂದೇ ಸಂಪ್ರದಾಯವೇ ಅದನ್ನು ಬೇರೆ ಬೇರೆ ಗ್ರಂಥಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನಿರೂಪಿಸುತ್ತದೆ. ಒಬ್ಬನೇ ವ್ಯಕ್ತಿ ಒಮ್ಮೊಮ್ಮೆ ಒಂದೊಂದನ್ನು ಹೇಳಬಹುದು ಏಕೆಂದರೆ ಅವೆಲ್ಲ ವಿಭಿನ್ನ ಕಥೆಗಳಾಗಿ ಅವನಲ್ಲಿ ಮಹತ್ವ ಪಡೆಯುತ್ತವೆಯೇ ಹೊರತೂ ಸತ್ಯಘಟನೆ ಎಂಬುದಾಗಿ ಅಲ್ಲ. ಒಂದೇ ಘಟನೆ ಹಲವಾರು ರೀತಿಯಲ್ಲಿ ಘಟಿಸಲಿಕ್ಕಂತೂ ಸಾಧ್ಯವಿಲ್ಲ. ಅಷ್ಟೇ ಅಲ್ಲ, ನಮ್ಮಲ್ಲಿ ಸೃಷ್ಟಿಗೂ ಪೂರ್ವದಲ್ಲಿ ಕೂಡ ಏನೋ ಇತ್ತು ಎಂಬ ಕಲ್ಪನೆ ಬರುತ್ತದೆ. ಹಾಗಾಗಿ ನಿಜ ಅರ್ಥದಲ್ಲಿ ಅದೊಂದು ಪರಿಪೂರ್ಣ ಸೃಷ್ಟಿಯೇ ಅಲ್ಲ.

ನಮ್ಮ ಪುರಾಣ ಕಥೆಗಳ ಕುರಿತು ಈ ರೀತಿಯ ವಿಭಿನ್ನ ನಿರೂಪಣೆಗಳನ್ನು ನಾವು ಪೋಷಿಸಿಕೊಂಡು ಬಂದಿದ್ದೇವೆ. ಅವುಗಳಲ್ಲಿ ಯಾವುದು ಸತ್ಯ ಘಟನೆ ಎಂಬ ಕುರಿತು ಎಂದೂ ವಾಗ್ವಾದಗಳನ್ನು ನಾವು ಬೆಳೆಸಿಲ್ಲ. ಏಕೆ ಈ ವೈವಿಧ್ಯಮಯ ಕಥೆಗಳನ್ನು ಸ್ವೀಕರಿಸಲಿಕ್ಕೆ ನಮಗೆ ತೊಂದರೆಯಿಲ್ಲ? ಅಂದರೆ ನಮಗೂ ಈ ಕಥೆಗಳಿಗೂ ಇರುವ ಸಂಬಂಧ ಸತ್ಯಸುಳ್ಳುಗಳದಲ್ಲ. ಅಂದರೆ ನಮ್ಮ ಯಾವ ಕ್ರಿಯೆಯು ಪ್ರಾಪಂಚಿಕ ಸತ್ಯ ಘಟನೆಯನ್ನು ಆಧರಿಸಿ ಇರುತ್ತದೆಯೋ ಅದಕ್ಕೆ ನಾವು ನಂಬಿರುವ ಕಥೆಯು ಸತ್ಯವೋ ಸುಳ್ಳೋ ಎಂಬುದು ಮುಖ್ಯವಾಗುತ್ತದೆ. ಉದಾಹರಣೆಗೆ ಒಂದು ಮಾತ್ರೆಯನ್ನು ತೆಗೆದುಕೊಂಡರೆ ತಲೆನೋವು ಹೋಗುತ್ತದೆ ಎಂಬ ಹೇಳಿಕೆ. ಆ ಮಾತ್ರೆಯನ್ನು ತೆಗೆದುಕೊಳ್ಳುವ ಕ್ರಿಯೆಯು ಅದು ನಿಜವೋ ಸುಳ್ಳೋ ಎಂಬುದರ ಕುರಿತ ನಮ್ಮ ನಂಬಿಕೆಯ ಮೇಲೆ ನಿಂತಿದೆ. ನಮ್ಮ ಕಥೆಗಳು ನಮ್ಮ ಕ್ರಿಯೆಗಳಿಗೆ ಈ ರೀತಿಯ ಮಾರ್ಗದರ್ಶನಗಳಲ್ಲ. ಹಾಗಾಗಿ ಅವು ಹೇಳಿದ್ದನ್ನು ಲೋಕದೃಷ್ಟಿಯ ಥರ ಇಟ್ಟುಕೊಂಡು ನಾವು ವ್ಯವಹರಿಸುವುದಿಲ್ಲ. ಭಾರತೀಯ ಸಂಪ್ರದಾಯಗಳು ಲೋಕದೃಷ್ಟಿಯನ್ನು ಇಟ್ಟುಕೊಳ್ಳದೇ ವ್ಯವಹರಿಸುವುದನ್ನು ಕಂಡುಕೊಂಡಿವೆ, ಅಂದರೆ ನಮ್ಮಲ್ಲಿ ಲೋಕದೃಷ್ಟಿಯೇ ಇಲ್ಲ.

ಇದಕ್ಕೆ ಬೈಬಲ್ಲಿನ ಉದಾಹರಣೆಯನ್ನು ವಿರುದ್ಧವಾಗಿ ಇಟ್ಟರೆ ವ್ಯತ್ಯಾಸ ಗೊತ್ತಾಗುತ್ತದೆ. ಬೈಬಲ್ಲಿನ ಘಟನೆಗಳು ನಿಜವಾಗಿರಲೇ ಬೇಕು ಎಂಬುದಾಗಿ ಕ್ರೈಸ್ತರು ನಂಬುತ್ತಾರೆ. ಹಾಗಾಗಿ ಅವುಗಳ ಸತ್ಯಾಸತ್ಯತೆಯ ಕುರಿತು ಇತಿಹಾಸ ಕಾಲದಲ್ಲಿ ಸಾಕಷ್ಟು ವಾಗ್ವಾದಗಳು ನಡೆದಿವೆ. ಆ ಘಟನೆಗಳು ನಡೆದ ಸ್ಥಳಗಳು, ಅವುಗಳ ಕಾಲ, ಅವುಗಳ ಸ್ವರೂಪ ಇತ್ಯಾದಿಗಳ ಕುರಿತು ವಿಭಿನ್ನ ನಿರೂಪಣೆಗಳು ರಾಶಿ ಬಿದ್ದಿವೆ. ಸತ್ಯಘಟನೆಗಳನ್ನು ಕಟ್ಟಿಕೊಡುವ ಹಿಸ್ಟರಿ ಎಂಬ ಪ್ರಕಾರವು ಪಶ್ಚಿಮದಲ್ಲೇ ಬೆಳೆಯಿತು ಎಂಬುದಕ್ಕೂ ಕ್ರೈಸ್ತರ ಈ ದೃಷ್ಟಿಕೋನಕ್ಕೂ ಕಾರ್ಯ ಕಾರಣ ಸಂಬಂಧವಿದೆ. ಪುರಾಣಗಳ ಘಟನೆಗಳ ಸತ್ಯಾಸತ್ಯತೆಯನ್ನು ಇಟ್ಟುಕೊಂಡು ಇಂದು ಭಾರತೀಯರು ಹೊಡೆದಾಡುತ್ತಿದ್ದರೆ ಅದು ಪಾಶ್ಚಾತ್ಯರಿಂದ ಕಲಿತದ್ದೇ ಹೊರತೂ ಅದು ಅವರ ಚಾಳಿಯಲ್ಲ. ವಸಾಹತು ಪೂರ್ವ ಕಾಲದಲ್ಲಿ ಇಂಥ ಹೊಡೆದಾಟಗಳನ್ನೇ ನಾವು ಕಾಣುವುದಿಲ್ಲ. ನಮ್ಮಲ್ಲಿ ನಮ್ಮ ಇತಿಹಾಸ ಪುರಾಣಗಳ ಸತ್ಯಾಸತ್ಯತೆಯ ಕುರಿತು ನಮ್ಮಲ್ಲಿ ಯಾವ ಚರ್ಚೆಯೂ ಇರಲಿಲ್ಲ.

ಏಕೆ ಬೈಬಲ್ಲಿನ ಘಟನೆಗಳ ಸತ್ಯಾಸತ್ಯತೆಯು ಅವರಿಗೆ ಅಷ್ಟೊಂದು ನಿರ್ಣಾಯಕ ಎಂದೆನಿಸುತ್ತದೆ? ಏಕೆಂದರೆ ಕ್ರೈಸ್ತರು ಏನು ಮಾಡಬೇಕೆಂಬುದನ್ನು ಈ ಸತ್ಯಘಟನೆಗಳು ನಿರ್ದೇಶಿಸಬೇಕು. ಬೈಬಲ್ಲಿನ ಡಾಕ್ಟ್ರಿನ್ನುಗಳನ್ನು ಕ್ರೈಸ್ತರೇಕೆ ಅನುಸರಿಸಬೇಕೆಂದರೆ ಅವು ಸತ್ಯ ಘಟನೆಗಳನ್ನಾಧರಿಸಿವೆ. ಕ್ರಿಸ್ತನು ಭೂಮಿಗೆ ಬಂದಿದ್ದು, ದೇವವಾಣಿ, ಇತ್ಯಾದಿಗಳು ನಿಜವಾಗಿಯೂ ನಡೆಯಲಿಲ್ಲ ಎಂದರೆ ಕ್ರಿಶ್ಚಿಯಾನಿಟಿ ಎಂಬುದೇ ಇರಲಾರದು. ಪ್ರಪಂಚದ ಸೃಷ್ಟಿ, ಮನುಷ್ಯರ ಸೃಷ್ಟಿ, ಅವರ ಅಂತಿಮಗತಿ ಇತ್ಯಾದಿಗಳ ಕುರಿತು ಎಲ್ಲಾ ಕ್ರಿಶ್ಚಿಯನ್ನರೂ ಈ ಮೂಲಭೂತ ಸಂಗತಿಗಳನ್ನು ಸತ್ಯವೆಂದು ಒಪ್ಪಿಯೇ ಗ್ರಹಿಕೆಯನ್ನು ಕಟ್ಟಿಕೊಂಡಿರುತ್ತಾರೆ. ಭಿನ್ನಾಭಿಪ್ರಾಯಗಳಿದ್ದಲ್ಲಿ ಅವು ಈ ಸತ್ಯಗಳನ್ನು ಪ್ರಶ್ನಿಸುವ ಮಟ್ಟಿಗೆ ಹೋಗುವುದಿಲ್ಲ. ಅದನ್ನು ಅನುಸರಿಸಲಿಕ್ಕೂ ಕಾರಣಗಳಿರಲಾರವು. ಆದರೆ ಭಾರತದಲ್ಲಿ ಯಾವ ಸಂಪ್ರದಾಯಕ್ಕೂ ಸತ್ಯ ಘಟನೆಗಳು ಈ ನಿರ್ಣಾಯಕ ಸ್ಥಾನವನ್ನು ವಹಿಸುವುದಿಲ್ಲ.

ಅಂದರೆ ಲೋಕದೃಷ್ಟಿ ಎಂಬ ಕಲ್ಪನೆಯು ಇಂಥ ರಿಲಿಜನ್ನೊಂದರಿಂದ ಮೂಡಿದ್ದು ಎಂಬುದನ್ನು ಗಮನದಲ್ಲಿಟ್ಟುಕೊಂಡಾಗ ಅದಿದ್ದರೆ ಏಕೆ ರಿಲಿಜನ್ನಿದೆ ಎಂಬುದಾಗಿ ವಿದ್ವಾಂಸರಿಗೆ ಅನ್ನಿಸುತ್ತದೆ ಎಂಬುದು ಅರ್ಥವಾಗುತ್ತದೆ. ಲೋಕದೃಷ್ಟಿ ಎಂಬುದು ಈ ವಿಶ್ವದ ಒಂದು ಅವಲೋಕನವಾಗಿದೆ. ಅದು ವಿಶ್ವದ ಯಾವುದೋ ಭಾಗದ ಅಥವಾ ಅಂಶದ ಅವಲೋಕನವಲ್ಲ. ಒಟ್ಟಾರೆಯಾದ ಅವಲೋಕನ. ಈ ಅವಲೋಕನವು ಸಾಧ್ಯವಾಗಬೇಕಾದರೆ ಈ ವಿಶ್ವದಿಂದ ಹೊರಗೆ ನಿಂತು ನೋಡಬೇಕಾಗುತ್ತದೆ. ಅದರಲ್ಲಿ ಈ ವಿಶ್ವದ ಭೂತ, ಭವಿಷ್ಯತ್ತು, ವರ್ತಮಾನಗಳೆಲ್ಲವೂ ಸೇರಿರುತ್ತವೆ. ಇಂಥ ಅವಲೋಕನವನ್ನು ಮನುಷ್ಯರು ತಾವೇ ಹೊಂದಲು ಸಾಧ್ಯವಿಲ್ಲ. ಈ ಪ್ರಪಂಚವನ್ನು ಸೃಷ್ಟಿಸಿ ಅದರಿಂದ ಹೊರಗೆ ಇರುವವನೇ ಅದನ್ನು ಮಾನವರಿಗೆ ನೀಡಬೇಕಾಗುತ್ತದೆ. ರಿಲಿಜನ್ನು ಅಂಥ ವಿಶ್ವಾವಲೋಕನವನ್ನು ತನ್ನ ಅನುಯಾಯಿಗಳಿಗೆ ಒಂದು ಷರತ್ತಿನ ಪ್ರಕಾರ ನೀಡುವ ಭರವಸೆ ನೀಡುತ್ತದೆ. ಆ ಷರತ್ತೆಂದರೆ ಅದು ತಿಳಿಸುವ ಕಥೆಯನ್ನು ಅವನು ಸತ್ಯವೆಂದು ನಂಬಬೇಕು. ಆ ಸತ್ಯ ಕಥೆಯ ಪ್ರಕಾರ ಈ ವಿಶ್ವವನ್ನು ಸೃಷ್ಟಿಸಿದ ಸತ್ಯದೇವನೇ ಅದನ್ನು ಮಾನವರಿಗೆ ತಿಳಿಸಿದ್ದಾನೆ. ಅದನ್ನಾಧರಿಸಿ ಡಾಕ್ಟ್ರಿನ್ನುಗಳು ರೂಪುಗೊಂಡಿವೆ ಹಾಗೂ ಆ ಡಾಕ್ಟ್ರಿನ್ನುಗಳನ್ನು ಆಧರಿಸಿ ರಿಲಿಜನ್ನಿನ ಆಚರಣೆಗಳು ಇರಬೇಕು. ಆಗ ಮಾತ್ರವೇ ಒಬ್ಬನು ಸತ್ಯವಾದ ರಿಲಿಜನ್ನನ್ನು ಆಚರಿಸಿದಂತಾಗುತ್ತದೆ.

ಈ ಮಾದರಿಯನ್ನಿಟ್ಟುಕೊಂಡು ಭಾರತದಂತಹ ಸಂಸ್ಕೃತಿಗಳನ್ನು ನೋಡಿದ ಪಾಶ್ಚಾತ್ಯರು ಇಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನು ಇದೆ ಎಂಬುದಾಗಿ ಭಾವಿಸಿದರು. ಅದರ ಡಾಕ್ಟ್ರಿನ್ನುಗಳು ಯಾವವೆಂಬುದನ್ನು ತಿಳಿದುಕೊಳ್ಳುವುದು ಹಿಂದೂಗಳ ಆಚರಣೆಯನ್ನು ಅರ್ಥೈಸಲು ನಿರ್ಣಾಯಕವಾಗಿದೆ ಎಂದುಕೊಂಡರು. ಡಾಕ್ಟ್ರಿನ್ನುಗಳನ್ನು ತಿಳಿದುಕೊಳ್ಳಲು ಇವರ ಪವಿತ್ರ ಗ್ರಂಥವನ್ನು ಪತ್ತೆ ಹಚ್ಚುವ ಅಗತ್ಯವುಂಟಾಯಿತು. ಪವಿತ್ರ ಗ್ರಂಥಗಳನ್ನು ಗುರುತಿಸಲು ಆಗದಿದ್ದಾಗ ವಿಭಿನ್ನ ಗ್ರಂಥಗಳಿಂದ ಸಾಲುಗಳನ್ನಾಯ್ದು ಡಾಕ್ಟ್ರಿನ್ನುಗಳನ್ನು ಸಂಗ್ರಹಿಸುವ ಕೆಲಸ ನಡೆಯಿತು. ಅಂಥ ಸಂಗ್ರಹವನ್ನು ಇಟ್ಟುಕೊಂಡು ಹಿಂದೂಗಳ ಲೋಕದೃಷ್ಟಿಯ ಕುರಿತು ವಿದ್ವಾಂಸರು ಮಾತನಾಡತೊಡಗಿದರು. ಹಾಗೂ ಈ ಲೋಕದೃಷ್ಟಿಯೇ ನಮ್ಮ ಸಂಸ್ಕೃತಿಯನ್ನು ರಚಿಸಿದೆ ಹಾಗೂ ನಮ್ಮನ್ನು ನಡೆಸುತ್ತಿದೆ ಎಂಬ ಪೂರ್ವಗ್ರಹೀತವು ಇಂಥ ಅಧ್ಯಯನಗಳ ಹಿಂದೆ ಇದೆ.

ನಾನು ಹಿಂದಿನ ಅಂಕಣಗಳಲ್ಲಿ ನಮ್ಮ ಸಂಸ್ಕೃತಿಯಲ್ಲಿ ಕಥೆಗಳ, ಇತಿಹಾಸ-ಪುರಾಣಗಳ ಸ್ವರೂಪವೇನು, ಹಾಗೂ ಅವುಗಳ ಜೊತೆಗೆ ನಮಗಿರುವ ಸಂಬಂಧವೇನು ಎಂಬುದರ ಕುರಿತು ಪರ್ಯಾಯ ವಿವರಣೆಗಳನ್ನು ಬೆಳೆಸುವ ಸಾಧ್ಯತೆಯನ್ನು ಚರ್ಚಿಸಿದ್ದೇನೆ. ಅಂದರೆ ಈ ಕಥೆಗಳು ಸತ್ಯ ಸುಳ್ಳಿನ ಪ್ರತಿಪಾದನೆ ಮಾಡುವುದಿಲ್ಲ, ಅವು ಭಾರತೀಯರ ಕ್ರಿಯೆಯನ್ನು ನಿರ್ದೇಶಿಸುವ ನೀತಿ ನಿಯಮಗಳಲ್ಲ. ಅವು ಕ್ರಿಯೆಗೆ ಹೇಗೆ ಪ್ರೇರಣೆ ನೀಡುತ್ತವೆ ಎಂಬುದು ಇನ್ನೂ ಸೂಕ್ಷ್ಮವಾದ ವಿಚಾರವಾಗಿದೆ. ಆ ಚರ್ಚೆಯಿಂದ ಭಾರತೀಯ ಸಂಸ್ಕೃತಿಯಲ್ಲಿ ಲೋಕದೃಷ್ಟಿ ಅಥವಾ ವಿಶ್ವಾವಲೋಕನ ಎಂಬ ಸಂಗತಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗೂ ವಿಶ್ವಾವಲೋಕನವನ್ನು ಇಟ್ಟುಕೊಳ್ಳದೆಯೂ ಕೂಡ ಸಂಸ್ಕೃತಿಗಳು ಉಳಿದು, ಬೆಳೆದು ಬರಬಲ್ಲವು ಎಂಬುದಕ್ಕೆ ಈ ಸಂಸ್ಕೃತಿಯೇ ಒಂದು ಉದಾಹರಣೆ.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: