ಮುಖ ಪುಟ > Hindu, Hinduism, Religion > ಪವಿತ್ರ ಗ್ರಂಥಗಳು ಹಾಗೂ ಮನುಸ್ಮೃತಿ

ಪವಿತ್ರ ಗ್ರಂಥಗಳು ಹಾಗೂ ಮನುಸ್ಮೃತಿ

-ಸಂತೋಷ್ ಕುಮಾರ್ ಪಿ.ಕೆ

holy-book

ಇತ್ತೀಚೆಗೆ ಮುಳಬಾಗಿಲಿನ ಒಂದು ಪ್ರದೇಶದಲ್ಲಿ ಒಬ್ಬಾತ ಕುರಾನ್ ನನ್ನು ಹರಿದು ಹಾಕಿದ ಘಟನೆಯಿಂದಾಗಿ ಸಾವನ್ನಪ್ಪಬೇಕಾಯಿತು. ಈ ಘಟನೆಗೆ ಹಲವಾರು ಆಯಾಮಗಳಿವೆ, ಮಾನವ ಹಕ್ಕುಗಳ ಉಲ್ಲಂಘನೆ, ಧರ್ಮಗ್ರಂಥದ ಕುರಿತು ಗೌರವ, ಹಾಗೂ ಅಸಭ್ಯ ವರ್ತನೆಗೆ ಜನರ ಪ್ರತಿಕ್ರಿಯೆ ಇವೆಲ್ಲವೂ ಚರ್ಚೆಗೆ ಒಳಬೇಕಾದ ವಿಷಯಗಳು ಎಂಬುದು ಸರಿಯಷ್ಟೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಬದುಕುತ್ತಿರುವ ನಮಗೆ ಮೇಲಿನ ಚರ್ಚಾಂಶಗಳಿಂದಾಚೆಗೆ ಆಸಕ್ತಿದಾಯಕವಾದ ಮತ್ತೊಂದು ಸಂಗತಿಯಿದೆ, ಅದರ ಕುರಿತು ನಾವು ಗಮನ ಹರಿಸಬೇಕಿದೆ. ಧರ್ಮಗ್ರಂಥಗಳು ಯಾರಿಗೆ ಮುಖ್ಯ? ಎಲ್ಲಾ ಸಂಸ್ಕೃತಿಗಳು ಧರ್ಮಗ್ರಂಥಗಳನ್ನು ಒಳಗೊಂಡಿವೆಯೆ? ಇದನ್ನು ಅರ್ಥಮಾಡಿಕೊಳ್ಳಲು ಈ ಮುಂದಿನ ಪ್ರಶ್ನೆ ಬಹುಮುಖ್ಯವಾದುದು.ಧರ್ಮಗ್ರಂಥಗಳನ್ನು ಹರಿದಹಾಕಿದರೆ ಪ್ರತಿಯೊಂದು ಸಮುದಾಯದ ಪ್ರತಿಕ್ರಿಯೆ ಒಂದೆ ತೆರನಾಗಿ ಇರುತ್ತದೆಯೆ? ಅಂದರೆ ಯಾವವಿಧಾನದಲ್ಲಿಯಾದರೂ ಪ್ರತಿರೋಧವನ್ನು ಕಾಣಲು ಸಾಧ್ಯವಿದೆಯೆ? ಈ ಪ್ರಶ್ನೆಗಳಿಗೆ ನಮಗೆ ತರಹೇವಾರಿ ಉತ್ತರಗಳು ದೊರಕುತ್ತವೆ. ಅದರಲ್ಲಿಯೂ ಭಾರತೀಯ ಸಂಸ್ಕೃತಿ ಮತ್ತು ಸೆಮೆಟಿಕ್ ರಿಲಿಜನ್ ಸಂಸ್ಕೃತಿಯನ್ನು ನೋಡಿದರೆ ಅಲ್ಲಿರುವ ವ್ಯತ್ಯಾಸವು ಸ್ಪಟವಾಗಿ ಗೋಚರವಾಗುತ್ತದೆ. ಪಾಶ್ಚಾತ್ಯ ರಾಷ್ಟದ ಇತಿಹಾಸವನ್ನು ತಿರುವಿಹಾಕಿದರೆ ಗೆಲಿಲಿಯೋ ಗೆಲಿಲಿಯ ಉದಾಹರಣೆಯು ಸ್ಪಷ್ಟವಾಗಿ ಕಂಡುಬರುತ್ತದೆ. ಬೈಬಲ್ನ ವಿಚಾರಧಾರೆಗೆ ತೀರಾ ವಿರುದ್ಧವಾಗಿ ವಿಜ್ಞಾನವನ್ನು ಬೆಳೆಸಿದ ಆತನೂ ಸಾಯುವವರೆಗೂ ಸೆರೆವಾಸವನ್ನು ಅನುಭವಿಸಬೇಕಾಯಿತು. ಇದು ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳ ಕಥೆಯಾದರೆ, ಇದಕ್ಕೆ ವಿರುದ್ಧವಾಗಿ ಒಂದು ಘಟನೆ ನಡೆದಿದೆ, ಅದೆಂದರೆ ಸುಮಾರು 6 ದಶಕಗಳ ಹಿಂದೆ ಸುಡಲ್ಪಟ್ಟ ಮನುಸ್ಮೃತಿಯೇ ಆಗಿದೆ.

ಮನುಸ್ಮೃತಿ ಸುಟ್ಟಿರುವುದಕ್ಕೂ ಕುರಾನ್ ನನ್ನು ಹರಿದುಹಾಕಿರುವುದಕ್ಕೂ ವಾಸ್ತವಿಕವಾಗಿ ಮತ್ತು ಉದ್ದೇಶಾತ್ಮಕವಾಗಿ ವ್ಯತ್ಯಾಸಗಳಿದ್ದಾಗ್ಯೂ ಸಹ ಇವೆರಡೂ ಘಟನೆಗಳಿಗೂ ಬಂದಿರುವ ಪ್ರತಿಕ್ರಿಯೆಗಳು ನಮ್ಮ ಆಸಕ್ತಿಯನ್ನು ಕೆರಳಿಸುತ್ತವೆ. ಡಾ.ಬಿ.ಆರ್. ಅಂಬೇಡ್ಕರ್ ರವರು ಸಮಾಜ ಸುಧಾರಣೆಯ ಭಾಗವಾಗಿ, ಸಮಾನತೆಯ ಸಮಾಜವನ್ನ ಕಟ್ಟುವ ಉದ್ದೇಶದಿಂದ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟುಹಾಕಿದರು. ಇಡೀ ಭಾರತೀಯ ಸಮಾಜದ ಕಾನೂನು ಗ್ರಂಥವೆಂದು ಪರಿಗಣಿಸಲ್ಪಟ್ಟ ಮತ್ತು ಸಮಾಜವನ್ನು ನಿರ್ದೇಶಿಸುವ ಕಾರ್ಯವನ್ನು ಮಾಡುವ ಧರ್ಮಗ್ರಂಥವು ಹಿಂದೂಯಿಸಂನ ಅವಿಭಾಜ್ಯ ಅಂಗವಾಗಿದ್ದು, ಅದು ಶೋಷಣೆ ದಬ್ಬಾಳಿಕೆಗಳನ್ನು ಪೋಷಿಸುತ್ತಿದ್ದುದರಿಂದ ಅದನ್ನು ಸುಡಲು ಸಮರ್ಥನೆಯನ್ನು ನೀಡಲಾಯಿತು. ಸಮಾಜ ಸುಧಾರಕರು ಒಂದಷ್ಟು ಜನ ಅದಕ್ಕೆ ಪೂರಕವಾಗಿ ನಿಂತಿದ್ದರೂ ಸಹ, ಇಡೀ ಸಮಾಜದ ಪ್ರತಿಕ್ರಿಯೆ ಮಾತ್ರ ಆಶ್ಚರ್ಯವಾಗಿತ್ತು. ಅದೆಂದರೆ ನೀರಸ ಪ್ರತಿಕ್ರಿಯೆ ಅಥವಾ ಮನುಸ್ಮೃತಿಯನ್ನು ಸುಟ್ಟ ಕ್ರಿಯೆಗೆ ಯಾವುದೇ ಅಗ್ರೆಸ್ಸಿವ್ ಆದ ಪ್ರತಿಕ್ರಿಯೆ ಬರಲಿಲ್ಲ ಎಂದರೂ ತಪ್ಪಾಗುವುದಿಲ್ಲ. ಅಂದಾಗಲಿ ಅಥವಾ ಇಂದಾಗಲಿ ಮನುಸ್ಮೃತಿಯನ್ನು ಸುಟ್ಟ ವಿಚಾರಕ್ಕೆ ಆಲಸ್ಯದಿಂದ ಪ್ರತಿಕ್ರಿಯಿಸುತ್ತಾರೆ? ಅದಕ್ಕೆ ಮುಂದಿನ ಎರಡು ಕಾರಣಗಳನ್ನು ನೀಡಬಹುದು. 1. ಇಲ್ಲಿನ ಜನರು ಸಮಾಜ ಸುಧಾರಕರಿಂದ ಭಯಭಿತರಾಗಿದ್ದರು ಹಾಗಾಗಿ ವಿರೋಧಿಸಲಿಲ್ಲ. 2. ಮನುಸ್ಮೃತಿ ನಿಜವಾಯೂ ಅನ್ಯಾಯವನ್ನು ಮುಂದೊತ್ತುತ್ತಿದ್ದ ಕಾರಣ ಅದು ಅನಗತ್ಯ ಎಂದು ಸುಮ್ಮನಾಗಿದ್ದರು. ಈ ಎರಡು ಕಾರಣಗಳು ಸಕಾರಣಗಳಾಗುವುದಿಲ್ಲ, ಏಕೆಂದರೆ ಸಮಾಜ ಸುಧಾರಕರಿಂದ ಜನರು ಭಯಬೀತರಾಗಿದ್ದರು ಎಂಬುದನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ, ಅದಕ್ಕೆ ಯಾವುದೇ ಪುರಾವೆಗಳೂ ಇಲ್ಲ, ಹಾಗೆ ನೋಡಿದರೆ ಅಂಬೇಡ್ಕರ್ ರವರ ಮೇಲೆಯೇ ಬೇರೆ ವಿಚಾರಗಳಿಗೆ ದಾಳಿ ನಡೆದಿದ್ದವು. ಇನ್ನೂ ಎರಡನೇ ಕಾರಣವೂ ಸಹ ಅರ್ಥವಾಗುವುದಿಲ್ಲ, ಏಕೆಂದರೆ ಅದು ಅನ್ಯಾಯವನ್ನೇ ಮುಂದೊತ್ತಿದ್ದರೆ ಶತಮಾನಗಳಿಂದ ಕೇವಲ ಬ್ರಾಹ್ಮಣರು ಮಾತ್ರವೆ ಸಮಾಜದಲ್ಲಿ ಬದುಕುತ್ತಿಲ್ಲ, ಬದಲಿಗೆ ಹಲವಾರು ಸಮುದಾಯಗಳು ಬದುಕುತ್ತಿವೆ, ಅದನ್ನು ಯಾರೂ ಏಕೆ ವಿರೋಧಿಸಲಿಲ್ಲ ಎಂಬಂತಹ ಉತ್ತರ ನೀಡಲಾಗದ ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತವೆ. ಆದ್ದರಿಂದ ಅದನ್ನು ಸುಟ್ಟಾಗ ಜನರು ಏಕೆ ವಿರೋಧಿಸಲಿಲ್ಲ ಎಂಬುದಕ್ಕೆ ನಮಗೆ ಇನ್ನೂ ಉತ್ತಮವಾದ ವಿವರಣೆಯ ಅಗತ್ಯವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಇತ್ತೀಚೆಗೆ ನಡೆದ ಕುರಾನ್ ಘಟನೆ ಮನುಸ್ಮೃತಿಯಂತೆ ಉದ್ದೇಶಪೂರ್ವಕವಾಗಿ ನಡೆದಿದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಮೇಲ್ನೋಟಕ್ಕೆ ಕಾಣಸಿಗುವ ಸಾಕ್ಷ್ಯಗಳು ಕುರಾನ್ ನನ್ನು ಹರಿದು ಹಾಕಿದ್ದು ಉದ್ದೇಶಪೂರ್ವಕ ಕ್ರಿಯೆ ಅಲ್ಲ ಎಂಬುದನ್ನು ತೋರಿಸುತ್ತದೆ. ಈ ಘಟನೆಯಿಂದ ಜನರೇಕೆ ಉದ್ರಿಕ್ತರಾಗಿ ಒಬ್ಬ ವ್ಯಕ್ತಿಯನ್ನು ಕೊಲ್ಲುವ ಮಟ್ಟಕ್ಕೆ ಇಳಿದರು? ಅದೇ ಮನುಸ್ಮೃತಿಯನ್ನು ಸುಟ್ಟಾಗಲು ಜನರೇಕೆ ನೀರಸವಾಗಿ ಅದನ್ನು ನೋಡಿದರು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯತೆ ಗೋಚರಿಸಬಹುದು.

ಕುರಾನ್ ಇಸ್ಲಾಂ ರಿಲಿಜನ್ನಿನ ಪವಿತ್ರಗ್ರಂಥ ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ. ಇಸ್ಲಾಂ ಒಳಗಿರುವ ಮತ್ತು ಹೊರಗಿರುವ ಜನರಿಗೆ ಕುರಾನ್ ಎಂಬುದು ಅವರ ಪವಿತ್ರಗ್ರಂಥ ಹೌದೇ ಅಥವಾ ಅಲ್ಲವೆ ಎಂಬ ಚರ್ಚೆಯೇ ನಿರುಪಯುಕ್ತವಾಗಿ ಕಾಣುತ್ತದೆ. ಏಕೆಂದರೆ ಇಸ್ಲಾಂ ರಿಲಿಜನ್ ತನ್ನನ್ನು ಹಾಗೆಯೇ ರೂಪಿಸಿಕೊಂಡಿದ್ದು ಪವಿತ್ರಗ್ರಂಥದ ಕುರಿತು ಯಾವುದೇ ಅನುಮಾನವನ್ನು ಇಟ್ಟಿಲ್ಲ. ಒಂದು ರಿಲಿಜನ್ನಿಗೆ ಪವಿತ್ರಗ್ರಂಥವು ಕೇವಲ ನಿರ್ದೇಶನ ಮಾರ್ಗಸೂಚಿಯಾಗಿ ಮಾತ್ರವೆ ಉಳಿದುಕೊಂಡಿರದೆ, ಅದೊಂದು ಪವಿತ್ರವಾದ ಸ್ಥಾನವನ್ನು ಪಡೆಯುತ್ತದೆ. ಅದು ಕುರಾನ್ ಇದ್ದಿರಲಿ, ಬೈಬಲ್ ಆಗಿರಲಿ ಅವುಗಳು ಹೋಲಿ ಸ್ಕ್ರಿಪ್ಚರ್ ಗಳಾಗಿ ಕಾರ್ಯನಿರ್ವಹಿಸುತ್ತವೆ. ರಿಲಿಜನ್ ಗಳಿಗೆ ಗಾಡ್ ನೀಡಿರುವ ಸಂದೇಶಗಳನ್ನು ಮೂರ್ತ ರೂಪಕ್ಕೆ ಇಳಿಸುವ ಕಾರ್ಯವನ್ನು ಗ್ರಂಥಗಳು ಮಾಡುತ್ತವೆ. ನಿಜ ಅರ್ಥದಲ್ಲಿ ರಿಲಿಜನ್ ಗಳಿಗೆ ಗ್ರಂಥಗಳೇ ಎಲ್ಲವೂ ಆಗಿರುತ್ತವೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಆದ್ದರಿಂದಲೇ ರಿಲಿಜನ್ ಎಂದರೆ ಪವಿತ್ರಗ್ರಂಥಗಳು ಹೊಂದಿರುವ ಒಂದು ಸಂಸ್ಥೆಯಾಗಿರುತ್ತದೆ. ಒಂದು ಪಕ್ಷ ಅದಕ್ಕೆ ಯಾವುದೇ ರೀತಿಯ ಚ್ಯುತಿ ಬಂದರೆ ಆ ರಿಲಿಜನ್ನಿನ ಅನುಯಾಯಿಗಳು ಯಾವ ಮಾರ್ಗವನ್ನಾದರೂ ಅನುಸರಿಸಿ ರಕ್ಷಿಸಲು ಹವಣಿಸುತ್ತಾರೆ. ಕುರಾನ್ ನನ್ನು ಹರಿದು ಹಾಕಿದ ಇಡೀ ಘಟನೆಯ ಪರಿಣಾಮದ ಹಿಂದೆ ಇರುವ ಕಾರಣಗಳು ಈ ಮೇಲಿನ ವಿವರಣೆಯೊಳಗೆ ಹೆಚ್ಚು ಅರ್ಥವಾಗುತ್ತದೆ. ಹಾಗೆಂದ ಮಾತ್ರಕ್ಕೆ ಕುರಾನ್ ಕುರಿತು ಅಥವಾ ಆ ಘಟನೆಯ ಕುರಿತು ನಾನು ಯಾವುದೇ ಪೂರ್ವಾಗ್ರಹವನ್ನಾಗಲಿ, ನಿರ್ಣಯವನ್ನಾಗಲಿ ಹೊಂದಿಲ್ಲ, ಬದಲಿಗೆ ಘಟನೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾತ್ರ ಮಾಡಲು ಪ್ರಯತ್ನಿಸಿದ್ದೇನೆ.

ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟಹಾಕಿದ ಹಲವು ದಶಕಗಳ ತರುವಾಯವೂ ಇಂದಿಗೂ ಮನುಸ್ಮೃತಿಯನ್ನು ಸುಡಬೇಕು ಎಂದು ಬಹಿರಂಗವಾಗಿ ಹಲವಾರು ಚಿಂತಕರು ಬೊಬ್ಬೆಹಾಕುತ್ತಿರುವುದನ್ನು ನಾವು ಕೇಳುತ್ತಿರುತ್ತೇವೆ. ಹಿಂದೂಯಿಸಂ ಎಂಬ ರಿಲಿಜನ್ನಿನ ಪವಿತ್ರ ಮತ್ತು ಕಾನೂನಿನ ಗ್ರಂಥವನ್ನು ನಾಶಪಡಿಸಬೇಕೆಂದು ಹಲವರು ಹೇಳುತ್ತಿದ್ದರೂ ಅದೊಂದು ತಮಗೆ ಸಂಬಂಧವಿಲ್ಲದ ಹೇಳಿಕೆಯೋ ಎಂಬಂತೆ ಜನಸಾಮಾನ್ಯರು ಇರುವುದು ನೋಡಿದರೆ ಮೇಲ್ನೋಟಕ್ಕೆ ಇದು ಕುರಾನ್ ಅಥವಾ ಬೈಬಲ್ ನಂತಹ ಗ್ರಂಥವಲ್ಲ ಎಂಬುದು ವೇದ್ಯವಾಗುತ್ತದೆ. ಕುರಾನ್ ಅಥವಾ ಬೈಬಲ್ ಗೆ ಸಮನಾಂತರವಾದ ಗ್ರಂಥ ಮನುಸ್ಮೃತಿಯಾಗಿರದ ಕಾರಣದಿಂದ ಜನರ ಅದನ್ನು ಸುಟ್ಟ ಘಟನೆಯ ಕುರಿತು ಅಥವಾ ಈಗ ಸುಡಬೇಕು ಎಂದು ಹೇಳುವ ಅಭಿಪ್ರಾಯಗಳ ಕುರಿತು ಪ್ರತಿಕ್ರಿಯಿಸುವುದಿಲ್ಲ. ಇದು ಬಾಲಗಂಗಾಧರರವರ ಹಿಂದೂಯಿಸಂ ರಿಲಿಜನ್ ಅಲ್ಲ ಮತ್ತು ಅಂತಹ ವಿದ್ಯಮಾನ ಅಸ್ತಿದಲ್ಲಿಯೂ ಇಲ್ಲ ಎಂಬ ವಾದಕ್ಕೆ ಮತ್ತಷ್ಟು ನಿದರ್ಶವನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು. ಆದರೂ ಮನುಸ್ಮೃತಿಯನ್ನು ಏಕೆ ಸುಟ್ಟರು?

ಪಾಶ್ಚಾತ್ಯರು, ಅದರಲ್ಲಿಯೂ ವಿಲಿಯಂ ಜೋನ್ಸ್ ಭಾರತದ ಕಾನೂನು ಗ್ರಂಥವನ್ನು ಕ್ರೋಡೀಕರಿಸುವ ಕಾರ್ಯವನ್ನು ಪ್ರಾರಂಭಿಸಿದರು. ಕ್ರಿಶ್ಚಿಯಾನಿಟಿಯ ರಿಲಿಜನ್ನಿನ ಮಡಿಲಲ್ಲಿ ಜನ್ಮತಾಳಿದ ಪಾಶ್ಚಾತ್ಯ ಸಂಸ್ಕೃತಿಯ ಜನರು ಇತರ ಸಂಸ್ಕೃತಿಗಳನ್ನು ಸಂಧಿಸಿದಾಗ ಅವರ ಹಿನ್ನೆಲೆಯಲ್ಲಿಯೆ ಇತರರನ್ನು ಅರ್ಥಮಾಡಿಕೊಂಡರು. ಈ ನಿಟ್ಟಿನಲ್ಲಿ ಸಮಾಜವು ರಿಲಿಜನ್ನನ್ನು ಹೊಂದಿದ್ದು, ಅದು ಪವಿತ್ರಗ್ರಂಥವನ್ನು ಅಥವಾ ಸಮುದಾಯವನ್ನು ನಿರ್ದೇಶಿಸುವ ಗ್ರಂಥವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದ ಭಾರತದಲ್ಲಿಯೂ ಅದರ ಶೋಧ ನಡೆಸಿದರು. ಅವರಿಗೆ ಏಕಸ್ಥವಾದ ಮತ್ತು ಒಂದೆಡೆ ದೊರಕಬಹುದಾದ ಗ್ರಂಥವು ಸಿಗಲಿಲ್ಲ. ಕೆವು ಭಾರತೀಯರು ವೇದಗಳನ್ನು ತೋರಿಸಿದರೆ, ಮತ್ತೆ ಕೆಲವರು ರಾಮಾಯಣ ಮಹಾಭಾರತ ಹಾಗೂ ಅವರಿಗೆ ತೋಚಿದ ಕೃತಿಗಳನ್ನು ಸೂಚಿಸಲು ಪ್ರಾರಂಭಿಸಿದರು. ಇದರಿಂದ ಬೇಸತ್ತ ಪಾಶ್ಚಾತ್ಯರು ಭಾರತದ ಕಾನೂನಿನ ಗ್ರಂಥವನ್ನು ತಾವೇ ಕ್ರೂಢೀಕರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಇದರ ಪರಿಣಾಮವಾಗಿಯೇ ಮನುಸ್ಮೃತಿಯೆಂಬ ಕೃತಿಯನ್ನು ಹಿಂದೂಗಳ ಕಾನೂನಿನ ಗ್ರಂಥವೆಂದೇ ಗುರುತಿಸಲಾಯಿತು. ಆದರೆ ಅದು ನಿಜವಾಗಿಯೂ ಭಾರತೀಯರ ಪವಿತ್ರಗ್ರಂಥವೆ? ಅರ್ಥಾಥ್ ಜನರ ಬದುಕನ್ನು ನಿರ್ದೇಶಿಸುವ ಗ್ರಂಥವೆ? ಈ ಪ್ರಶ್ನೆಗೆ ಇದುವರೆಗೂ ಯಾರೂ ಸಹ ಸಕಾರಾತ್ಮಕವಾದ ಉತ್ತರವನ್ನು ನೀಡಿಲ್ಲ.

ಹಿಂದೂಯಿಸಂ ಎಂಬ ರಿಲಿಜನ್ ಇದೆ ಎಂಬ ಭಾವಿಸಿಕೊಳ್ಳದಿದ್ದರೆ, ಮನುಸ್ಮೃತಿಯಾಗಲಿ ಅಥವಾ ಧರ್ಮಗ್ರಂಥಗಳು ಎಂದು ಪರಿಭಾವಿಸಲಾಗಿರುವ ಕೃತಿಗಳಾಗಲಿ ಯಾವುದೇ ಅಸ್ತಿತ್ವನ್ನು ಪಡೆಯುವುದಿಲ್ಲ. ಏಕೆಂದರೆ ರಿಲಿಜನ್ಗೆ ಮಾತ್ರವೆ ದೈವವಾಣಿಯನ್ನು ಹಿಡಿದಿಟ್ಟಿರುವ ಮತ್ತು ಜನರನ್ನು ನಿಯಂತ್ರಿಸವು ಪಠ್ಯ ಬೇಕಾಗುತ್ತದೆ. ಅಂತಹ ಕೆಲಸವನ್ನು ಬೈಬಲ್ ಮತ್ತು ಕುರಾನ್ ಗಳು ಆಯಾ ಸಮುದಾಯಗಳಿಗೆ ಮಾಡುತ್ತಾ ಬಂದಿವೆ. ಆದರೆ ಹಿಂದೂ ಗಳಲ್ಲಿ ರಿಲಿಜನ್ ಇಲ್ಲದ ಕಾರಣ ಅಂತಹ ಪವಿತ್ರಗ್ರಂಥಗಳು ಇರಲಿಕ್ಕೂ ಸಾಧ್ಯವಿಲ್ಲ. ಮನುಸ್ಮೃತಿಯಂತಹ ಗ್ರಂಥಗಳಿದ್ದರೂ ಅವು ಜನರನ್ನು ನಿರ್ದೇಶಿಸುವ ಪವಿತ್ರಗ್ರಂಥವಾಗಿರಲಿಕ್ಕೆ ಸಾಧ್ಯವೆ ಇಲ್ಲ. ಆದ್ದರಿಂದಲೆ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿದರೂ ಸಹ ನಮ್ಮದಲ್ಲವೆನೋ ಎನ್ನುವ ಮಟ್ಟಿಕೆ ಮೂಕವಿಸ್ಮಿತರಾಗಿ ಜನರು ಅದನ್ನು ನೋಡಿದರು. ಹಾಗೆಯೆ ಬಹುಶಃ ತುಂಬಾ ಜನರಿಗೆ ಅದನ್ನೇಕೆ ಸುಟ್ಟರು ಎಂಬುದು ಅರ್ಥವೂ ಸಹ ಆಗದಿರುವ ಸಾಧ್ಯತೆ ಇದೆ. ಏಕೆಂದರೆ ಮನುಸ್ಮೃತಿಯನ್ನನ್ನುಸರಿಸಿ ಯಾವ ಸಮುದಾಗಳು ಜೀವನ ನಡೆಸುತ್ತವೆ? ಅದು ಯಾರಿಗೆ ಧರ್ಮಗ್ರಂಥ? ಅದು ಬ್ರಾಹ್ಮಣರಿಗೆ ಸಂಬಂಧಪಟ್ಟಿದೆ ಎಂದರೂ ಸಹ ಸಮಂಜವಾಗುವುದಿಲ್ಲ, ಏಕೆಂದರೆ ಬಹುತೇಕ ಬ್ರಾಹ್ಮಣರು ಅದರ ಹೆಸರನ್ನೂ ಕೇಳಿಲ್ಲ, ಒಂದು ಕೇಳಿದವರು ಅದರಲ್ಲೇನಿದೆ ಎಂಬುದನ್ನೂ ತಿಳಿದುಕೊಂಡಿಲ್ಲ. ಇದೆಲ್ಲವನ್ನು ಗಮನಿಸಿದರೆ, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಪಂಥಗಳು ಪವಿತ್ರಗ್ರಂಥಗಳ ಕುರಿತು ಅಷ್ಟು ಕಠೋರವಾದ ನಿರ್ಧಾರವನ್ನು ಕೈಗೊಳ್ಳಲು ಅವುಗಳು ರಿಲಿಜನ್ ಆಗಿರುವುದೇ ಕಾರಣವಾಗಿದೆ. ಭಾರತೀಯ ಸಂಸ್ಕೃತಿ ಅಂತಹ ಗುಣಲಕ್ಷಣವನ್ನು ಹೊಂದಿಲ್ಲದ ಕಾರಣ ಯಾವ ಗ್ರಂಥವನ್ನು ಸುಟ್ಟರೂ ಅದು ಪರಿಣಾಮ ಬೀರುವುದಿಲ್ಲ. ಆದ್ದರಿಂದ ಮನುಸ್ಮೃತಿಯು ಇಲ್ಲಿನ ಪವಿತ್ರಗ್ರಂಥ ಅಥವಾ ಕಾನೂನಿನ ಗ್ರಂಥವೆಂದು ಪರಿಗಣಿಸಿರುವುದೇ ಅಸಮಂಜಸವಾಗಿದೆ.

ಚಿತ್ರಕೃಪೆ: http://swipetelecom.com/blog/religious-books-just-a-swipe-away-with-swipe-tablet-pcs/

Advertisements
Categories: Hindu, Hinduism, Religion
  1. ashok kumar.m
    ನವೆಂಬರ್ 12, 2014 ರಲ್ಲಿ 7:52 ಅಪರಾಹ್ನ

    super sir

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: