ಮುಖ ಪುಟ > Uncategorized > ಮೂರ್ತಿಪೂಜೆಯ ಕುರಿತ ಆಧುನಿಕರ ಗೊಂದಲಗಳು

ಮೂರ್ತಿಪೂಜೆಯ ಕುರಿತ ಆಧುನಿಕರ ಗೊಂದಲಗಳು

ಪ್ರೊ.ರಾಜಾರಾಮ ಹೆಗಡೆ, ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ

(ನಿಲುಮೆಯಲ್ಲಿ ಪ್ರಕಟಿತ)

Recently Updated1

“ನಾನು ದೇವರ ನಿರಾಕಾರ ರೂಪವನ್ನು ಒಪ್ಪುತ್ತೇನೆ, ಆದರೆ ಅವುಗಳಿಗೆ ಆಕಾರ ಕೊಡುವುದನ್ನು ವಿರೋಧಿಸುತ್ತೇನೆ.” “ಒಂದು ಶಕ್ತಿ ಈ ಪ್ರಪಂಚವನ್ನು ಆಳುತ್ತಿದೆ ಎಂದು ನಂಬುತ್ತೇನೆ ಆದರೆ ಈ ದೇವತೆಗಳು, ಪುರಾಣಗಳು ಎಲ್ಲ ಸುಳ್ಳು, ಅವನ್ನು ನಂಬಬಾರದು” ಎಂಬ ಧೋರಣೆ ಬಹಳಷ್ಟು ಆಧುನಿಕ ಚಿಂತಕರಲ್ಲಿ ಇದೆ. ಈ ಹೇಳಿಕೆಯನ್ನು ಮಾಡುವವರು ತಾವು ಭಾರತೀಯ ಅಧ್ಯಾತ್ಮ ಸಂಪ್ರದಾಯದ ಸತ್ಯವನ್ನೇ ಹೇಳುತ್ತಿದ್ದೇವೆ ಎಂದುಕೊಂಡಿದ್ದಾರೆ. ಏಕೆಂದರೆ ನಮ್ಮ ಅಧ್ಯಾತ್ಮ ಸಂಪ್ರದಾಯಗಳು ಪರಮಾತ್ಮನ ನಿಜಸ್ವರೂಪವು ನಿರಾಕಾರವೇ ಆಗಿದೆ ಎಂದು ಹೇಳುತ್ತವೆ. ಹಾಗೂ ಅವುಗಳಲ್ಲಿ ಕೆಲವಂತೂ ಮೂರ್ತಿಪೂಜೆಯ ನಿರರ್ಥಕತೆಯ ಕುರಿತು ಸಾಧಕರನ್ನು ಎಚ್ಚರಿಸುತ್ತವೆ. ಅಷ್ಟಾದರೂ ಕೂಡ ಅವನ ಸಾಕಾರೋಪಾಸನೆಯನ್ನು ಅವು ವಿರೋಧಿಸುವುದಿಲ್ಲ, ಸಾಕಾರೋಪಾಸನೆ ಅಧ್ಯಾತ್ಮ ಸಾಧನೆಯಲ್ಲಿ ದಾರಿತಪ್ಪಿಸುವ ಮೋಸ, ಅದನ್ನು ಮಾಡಲೇಬೇಡಿ ಎಂದು ಎಲ್ಲಿಯೂ ಹೇಳುವುದಿಲ್ಲ. ಸಾಕಾರೋಪಾಸನೆಯು ನಿರಾಕಾರ ತತ್ವವನ್ನು ತಿಳಿಯಲಿಕ್ಕೆ ದಾರಿಯಾಗಿದೆ. ಈ ಕಾರಣದಿಂದಲೇ ಸಾಕಾರೋಪಾಸನೆಯಲ್ಲೇ ತೃಪ್ತಿಪಟ್ಟುಕೊಂಡ ಸಾಧಕರನ್ನು ಟೀಕಿಸಿ ಎಚ್ಚರಿಸುವ ಸಂದರ್ಭದಲ್ಲಿ ಮೂರ್ತಿರೂಪಗಳ ಮಿತಿಯನ್ನು ತಿಳಿಸಿಕೊಡುವ ಕೆಲಸವನ್ನು ಅವು ಮಾಡುತ್ತವೆ. ಅಜ್ಞಾನದಲ್ಲಿ ಬಂಧಿತನಾದ ಮನುಷ್ಯನ ಬುದ್ಧಿಗೆ ಏಕಾಏಕಿಯಾಗಿ ನಿರಾಕಾರ ತತ್ವವನ್ನು ಅರಿಯಲು ಅಸಾಧ್ಯ. ಅಂಥವನಿಗೆ ಮೂರ್ತಿಪೂಜೆ ಒಂದು ಸಾಧನ. ಜನಸಾಮಾನ್ಯರ ಮನೋಸ್ಥಿತಿಯ ಹೀಗೇ ಇರುವುದರಿಂದ ನಮ್ಮಲ್ಲಿ ಎಲ್ಲಾ ಸಂಪ್ರದಾಯಗಳೂ ಮೂರ್ತಿಪೂಜೆಯ ಉಪಾಯವನ್ನು ಕಲ್ಪಿಸಿವೆ ಎನ್ನುತ್ತವೆ. ಹಾಗಾಗಿ ಈ ಮೇಲಿನ ಹೇಳಿಕೆಗಳನ್ನು ನೀಡುವವರು ಭಾರತೀಯ ಅಧ್ಯಾತ್ಮ ಸಂಪ್ರದಾಯದ ವಕ್ತಾರರಂತೂ ಅಲ್ಲ.

“ದೇವರೆಂಬವನೇ ಇಲ್ಲ, ಹಾಗಾಗಿ ಈ ಮೂರ್ತಿಪೂಜೆ ಒಂದು ಪುರೋಹಿತರ ಕಣ್ಕಟ್ಟು” ಎಂಬ ಮತ್ತೊಂದು ಥರದ ಹೇಳಿಕೆಗಳೂ ಇವೆ. ಈ ಹೇಳಿಕೆಯನ್ನು ಮಾಡುವವರು ತಾವು ನಾಸ್ತಿಕರು ಎಂದು ಕರೆದುಕೊಳ್ಳಲು ಹೆಮ್ಮೆ ಪಡುತ್ತಾರೆ ಹಾಗೂ ಮೂರ್ತಿಪೂಜೆಯನ್ನು ತೊಡೆಯುವುದೇ ನಮ್ಮ ಸಮಾಜದ ಉದ್ಧಾರಕ್ಕೆ ಮಾರ್ಗ ಎನ್ನುತ್ತಾರೆ. ಅಷ್ಟೇ ಅಲ್ಲ ಅವರನ್ನು ವಿರೋಧಿಸುವವರೂ ಕೂಡ ಅವರನ್ನು ನಾಸ್ತಿಕರೆಂದು ಪದೇ ಪದೇ ಜರಿಯುವುದು ಕೂಡ ಕಂಡುಬರುತ್ತದೆ. ಆದರೆ ಹಾಗೆ ಅವರನ್ನು ಕರೆಯುವು ತಪ್ಪು. ನಮ್ಮಲ್ಲಿ ನಾಸ್ತಿಕರಾದ ಬೌದ್ಧರು ಹಾಗೂ ಜೈನರು ಕೂಡಾ ಮೂರ್ತಿಪೂಜೆಯನ್ನು ಅಳವಡಿಸಿಕೊಂಡಿದ್ದಾರೆ. ಜೈನ ಬೌದ್ಧರು ಪರಮಾತ್ಮ ತತ್ವವನ್ನು ಒಪ್ಪುವುದಿಲ್ಲ. ಹಾಗಾಗೇ ಅವರನ್ನು ನಾಸ್ತಿಕರೆಂದು ಹೇಳಲಾಗುತ್ತದೆ. (ಅಸ್ತಿ=ಇದೆ; ನಾಸ್ತಿ=ಇಲ್ಲ. ಆಸ್ತಿಕ ನೆಂದರೆ ಆ ತತ್ವ ಇದೆ ಎಂದು ಒಪ್ಪುವವನು, ನಾಸ್ತಿಕನು ಅದು ಇಲ್ಲ ಎನ್ನುವವನು. ಈ ಪರಿಭಾಷೆಗಳಿಗೆ ಅಧ್ಯಾತ್ಮದ ಸಂದರ್ಭದ ಹಿನ್ನೆಲೆಯಿದೆ). ಆದರೆ ನಾಸ್ತಿಕರಾದವರು ಮೂರ್ತಿಪೂಜೆಯನ್ನು ನಿರಾಕರಿಸಬೇಕೆಂದಿಲ್ಲ. ನಾಸ್ತಿಕರ ಪರಮ ಜ್ಞಾನವನ್ನು ಹೊಂದಲು ಕೂಡ ಮೂರ್ತಿ ಪೂಜೆ ಸಹಕರಿಸಿದೆ. ಅದಿಲ್ಲದಿದ್ದರೆ ಅವೇಕೆ ಸಾವಿರಾರು ವರ್ಷ ಮೂರ್ತಿಪೂಜೆಯನ್ನು ಆಚರಿಸಿಕೊಂಡು ಬರುತ್ತಿದ್ದವು? ಆಸ್ತಿಕ ಹಾಗೂ ನಾಸ್ತಿಕ ಸಂಪ್ರದಾಯಗಳೆರಡೂ ಕೂಡ ತಂತಮ್ಮ ಗುರಿ ಸಾಧನೆಗೆ ಮೂರ್ತಿಪೂಜೆ ಸಾಧನವಾಗಿದೆ ಎಂದು ಒಪ್ಪಿಕೊಂಡಿದ್ದವು. ಹಾಗಾಗಿ ದೇವರಿಲ್ಲವೆಂದು ನಂಬಿದಾಕ್ಷಣ ಮೂರ್ತಿಪೂಜೆ ನಿಲ್ಲಬೇಕೆಂಬ ವಾದವು ನಾಸ್ತಿಕ ದೃಷ್ಟಿಯೂ ಅಲ್ಲ.

ಭಾರತದಲ್ಲಿ ಒಂದೆಡೆ ಈ ಪರಿಸ್ಥಿತಿಯಿದ್ದರೆ, ಮತ್ತೊಂದೆಡೆ ಮೂರ್ತಿಪೂಜೆಯೇ ಆತ್ಯಂತಿಕ ಎಂದು ನಾಸ್ತಿಕರು ಹೋಗಲಿ, ಆಸ್ತಿಕ ಸಂಪ್ರದಾಯಗಳು ಕೂಡ ಒಪ್ಪಿರಲಿಲ್ಲ ಎಂಬುದು ಗಮನಾರ್ಹ. ವೇದಾಂತ ಸಂಪ್ರದಾಯವು ನಿರಾಕಾರ ಬ್ರಹ್ಮವೇ ತಿಳಿಯಬೇಕಾದ ವಸ್ತು, ಮೂರ್ತಿಪೂಜೆಯು ಅದಕ್ಕೆ ಸಾಧನ ಎನ್ನುತ್ತದೆ. ದೇವತೆಗಳಿಗೆ ಈ ಸಂಪ್ರದಾಯಗಳಲ್ಲಿ ಆತ್ಯಂತಿಕ ಸ್ಥಾನವಿಲ್ಲ. ಅಧ್ಯಾತ್ಮವನ್ನು ಲಕ್ಷ್ಯದಲ್ಲಿಟ್ಟುಕೊಳ್ಳದಿದ್ದರೆ ಮೂರ್ತಿಪೂಜೆಯು ಮನುಷ್ಯನನ್ನು ಪುನರ್ಜನ್ಮಕ್ಕೆ ಕಟ್ಟುವ ಸಾಧನವಾಗುತ್ತದೆ ಎನ್ನುತ್ತಾರೆ ಅವರು. ಅದೇ ರೀತಿ, ಒಮ್ಮೆ ಪರಮಾತ್ಮ ಜ್ಞಾನವಾದವನಿಗೆ ಮೂರ್ತಿಪೂಜೆಯ ಅಗತ್ಯವೇ ಇಲ್ಲ. ಮೂರ್ತಿಪೂಜೆಯನ್ನೇ ಮಾಡದೇ ಧ್ಯಾನದಿಂದ, ತಪಸ್ಸಿನಿಂದ, ಇಲ್ಲವೇ ಪೂರ್ವಜನ್ಮ ಸಂಸ್ಕಾರದಿಂದ ಪರಮಾತ್ಮನ ಜ್ಞಾನ ಸಾಧ್ಯ ಎಂದೂ ಅವು ಅನ್ನುತ್ತವೆ. ಶಿವ, ವಿಷ್ಣು ಪಾರಮ್ಯವನ್ನು ಎತ್ತಿಹಿಡಿಯುವ ಭಕ್ತಿ ಸಂಪ್ರದಾಯಗಳೂ ಕೂಡ ಅವರ ಪರಾ ರೂಪವನ್ನು ನಿರಾಕಾರ ತತ್ವಗಳನ್ನಾಗಿ ಕಲ್ಪಿಸಿ ಮೂರ್ತಿಯೂ ಅವನ ಒಂದು ರೂಪವೆನ್ನುತ್ತವೆ. ಅಂದರೆ ಮೂರ್ತಿಯು ಈ ಪರಾತತ್ವದ ದೇಹವೆನ್ನುತ್ತವೆ. ಈ ದೇಹವನ್ನು ದಾಟಿ ಪರಾತತ್ವವನ್ನು ಕಾಣದಿದ್ದರೆ ಪಜೆಯ ಉದ್ದೇಶ ಈಡೇರುವುದಿಲ್ಲ. ಮೂರ್ತಿಗಳನ್ನು ಹೇಗೆ ರಚಿಸಬೇಕೆಂದು ನಿರ್ದೇಶಿಸುವ ಆಗಮ ಶಾಸ್ತ್ರಗಳೇ ‘ಪ್ರತಿಮೆಗಳು ಅಲ್ಪಬುದ್ಧಿಯವರಿಗಾಗಿ ಯೋಜಿತವಾಗಿವೆ,’ ‘ಕಾಷ್ಟ, ಲೋಷ್ಟ, ಲೋಹಗಳ ಮೂರ್ತಿಗಳನ್ನು ಪೂಜೆ ಮಾಡುವುದರಿಂದ ಜನನ ಮರಣದ ಬಂಧನಕ್ಕೆ ಸಿಲುಕುತ್ತಾರೆ,’ ಇತ್ಯಾದಿ ವಾಕ್ಯಗಳನ್ನೂ ನಮಗೆ ನೀಡುತ್ತವೆ. ಅಂದರೆ, ಅದನ್ನು ಸಾಧನವನ್ನಾಗಿಸಿಕೊಂಡು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಸರಿಯಾದ ಗುರಿ ಎನ್ನುತ್ತವೆ. ಆದರೆ ಇವರ್ಯಾರೂ ಮೂರ್ತಿಪೂಜೆ ನಿಲ್ಲಬೇಕು ಎನ್ನುವುದಿಲ್ಲ. ಅದನ್ನು ಅರಿತು ಆಚರಿಸುವುದು ಮಾರ್ಗವಾಗಬಲ್ಲದು ಎಂದೇ ಅನ್ನುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಮೂರ್ತಿಪೂಜೆಯ ಟೀಕೆ ಏನಾದರೂ ಬಂದರೆ ಅದಕ್ಕೆ ಈ ಆಧ್ಯಾತ್ಮಿಕ ಸಂದರ್ಭವಿದೆ. ಮೂರ್ತಿಪೂಜೆಯನ್ನು ಪಾಪ ಎಂಬಂತೇ ನೋಡುವುದು ಭಾರತೀಯ ಆಧ್ಯಾತ್ಮಿಕ ದೃಷ್ಟಿ ಅಲ್ಲ. ಅಂದರೆ, ಮೂರ್ತಿಪೂಜೆಯನ್ನು ನಿರಾಕರಿಸುವವರು ಆಸ್ತಿಕರೂ ಅಲ್ಲ, ನಾಸ್ತಿಕರೂ ಅಲ್ಲ.

ಮೂರ್ತಿಪೂಜೆಯ ಈ ಭಾರತೀಯ ಸಂದರ್ಭವು ಆಧುನಿಕ ವಿದ್ಯಾವಂತರನೇಕರಲ್ಲಿ ಕಳಚಿಹೋಗಿದೆ ಎಂಬುದು ಅವರ ನಿರಾಕರಣೆಯ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಅಂದರೆ ಆಧುನಿಕ ವಿದ್ಯಾಭಾಸ ಮಾಡಿದವರಿಗೆ ಹಾಗೂ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಸರಿಯಾಗಿ ಅರಿತುಕೊಳ್ಳುವ ಕುತೂಹಲ ಇಲ್ಲದವರಿಗೆ ನಮ್ಮ ಸಂಸ್ಕೃತಿಯಲ್ಲಿ ಮೂರ್ತಿಪೂಜೆಯನ್ನು ಯಾವ ನಿರ್ದಿಷ್ಟ ಕಾರಣಕ್ಕಾಗಿ ಟೀಕಿಸುತ್ತಾರೆ ಎಂಬ ತಿಳುವಳಿಕೆ ಹೊರಟುಹೋಗಿದೆ. ಅವರಿಗಿರುವುದು ಒಂದೇ ತಿಳುವಳಿಕೆ. ಆಧುನಿಕ ವಿದ್ಯಾಭಾಸವು ಕಟ್ಟಿಕೊಡುವ ತಿಳುವಳಿಕೆಯಾಗಿದೆ. ಅಂದರೆ ಮೂರ್ತಿಪೂಜೆ ಎಂದರೆ ಐಡೋಲೇಟ್ರಿ ಹಾಗೂ ಅನೈತಿಕ, ಅದು ನಾಶಮಾಡಬೇಕಾದ ಆಚರಣೆ. ಈ ನಿರ್ದಿಷ್ಟ ಧೋರಣೆಯು ಸೆಮೆಟಿಕ್ ರಿಲಿಜನ್ನುಗಳ, ಅದರಲ್ಲೂ ಪ್ರೊಟೆಸ್ಟಾಂಟ್ ಥಿಯಾಲಜಿಯ ಧೋರಣೆಯಾಗಿದೆ. ಹಾಗೂ ದೇವರೇ ಇಲ್ಲ ಎಂಬ ಧೋರಣೆಯ ಭಾಗವಾಗಿ ಮೂರ್ತಿಪೂಜೆಯನ್ನು ವಿರೋಧಿಸುವವರು ನಿರ್ದಿಷ್ಟವಾಗಿ ಪಾಶ್ಚಾತ್ಯ ಅಥೇಯಿಸ್ಟ್ ಪರಂಪರೆಗೆ ಸೇರುತ್ತಾರೆ. ಏಕೆಂದರೆ ಅಲ್ಲಿ ಗಾಡ್ ಇಲ್ಲ ಎಂಬುದೊಂದು ಸೆಕ್ಯುಲರ್ ಚಳವಳಿಯೇ ನಡೆದಿದೆ. ಅದನ್ನು ನಾವು ವಿದ್ಯಾವಂತರು ಬಳುವಳಿಯಾಗಿ ಪಡೆದುಕೊಂಡಿದ್ದೇವೆ. ಹಾಗಾಗಿ ಈ ಎರಡೂ ಪ್ರಕಾರದ ಮೂರ್ತಿಪೂಜೆಯ ವಿರೋಧಿಗಳಿಗೂ ಭಾರತೀಯ ಆಸ್ತಿಕ-ನಾಸ್ತಿಕ ಸಂಪ್ರದಾಯಗಳಿಗೂ ಯಾವುದೇ ಸಂಬಂಧವಿಲ್ಲ.

ಪ್ರೊಟೆಸ್ಟಾಂಟರೇಕೆ ಮೂರ್ತಿಪೂಜೆಯನ್ನು ತೊಡೆಯಬೇಕೆಂದು ಪಣತೊಟ್ಟರು? ಏಕೆಂದರೆ, ಅದು ಸುಳ್ಳು ರಿಲಿಜನ್ನಿನ ಪ್ರತೀಕವಾಗಿದೆ. ಸೈತಾನ ಅಥವಾ ಡೆವಿಲ್ಲನ ಪ್ರತಿರೂಪವಾಗಿದೆ. ಅದನ್ನು ಪೂಜಿಸಿದ ತಕ್ಷಣ ನೀವು ಗಾಡ್ ನಿಂದ ದೂರವಾಗಿ ಶೈತಾನನ ವಶವಾಗುತ್ತೀರಿ. ಶೈತಾನನ ಪ್ರಭಾವದಿಂದ ನಿಮ್ಮ ತಲೆ ಕೆಟ್ಟುಹೋಗುತ್ತದೆ. ಅನೈತಿಕತೆ, ಅನಾಚಾರಗಳ ಪೃವೃತ್ತಿ ನಿಮ್ಮೊಳಗೆ ನುಸುಳುತ್ತದೆ. ಸುಳ್ಳು ಹೇಳುವುದು, ಮೋಸಮಾಡುವುದು, ಭ್ರಷ್ಟತೆ, ಲೈಂಗಿಕ ವಿಕಾರಗಳು, ಕೆಟ್ಟ ಹವ್ಯಾಸಗಳು ಎಲ್ಲವೂ ನಿಮ್ಮನ್ನು ಅಂಟಿಕೊಳ್ಳುತ್ತವೆ. ನೀವು ಗಾಡ್ನ ಆಜ್ಞೆಯನ್ನು ಧಿಕ್ಕರಿಸಿ ನಡೆಯುತ್ತೀರಿ. ಗಾಡ್ನ ಆಜ್ಞೆಯೇ ನೀತಿ ನಿಯಮವಾಗಿರುವುದರಿಂದ ನೀವು ಅನೀತಿವಂತರಾಗುತ್ತೀರಿ. ಹಾಗಾಗಿ ಡೆವಿಲ್ ಅಥವಾ ಶೈತಾನ ಎಂಬ ಕಲ್ಪನೆಗೂ ಮೂರ್ತಿಪೂಜೆಗೂ ಸಂಬಂಧವಿರುವುದರಿಂದ ಅದು ಪಾಪವೆಂಬುದಾಗಿ ಸೆಮೆಟಿಕ್ ರಿಲಿಜನ್ನುಗಳು ಧಿಕ್ಕರಿಸುತ್ತವೆ. ಎಲ್ಲೆಲ್ಲಿ ಮೂರ್ತಿಪೂಜೆ ಕಾಣುತ್ತದೆಯೋ ಅಲ್ಲಿ ಶೈತಾನನ ಉಪಸ್ಥಿತಿಯಿದೆ ಎಂಬುದಾಗಿ ನಂಬುವ ಈ ಮತಗಳು ಅಂಥ ಮೂರ್ತಿಗಳನ್ನು ಭಂಜಿಸಿ, ಅಥವಾ ಅಪವಿತ್ರಗೊಳಿಸಿ ಅದನ್ನು ನಂಬಿದವರನ್ನು ನಿಜವಾದ ಗಾಡ್ನ ದಾರಿಗೆ ಹಚ್ಚಲು ಪ್ರಯತ್ನಿಸಿದ ನಿದರ್ಶನಗಳೂ ಇತಿಹಾಸದಲ್ಲಿ ಇವೆ.

ಮೂರ್ತಿಗಳಲ್ಲಿ ಶಕ್ತಿ ಇಲ್ಲ ಎಂದು ನಿದರ್ಶನ ಮಾಡುವ ಪ್ರಯತ್ನಗಳೆಲ್ಲವೂ ಈ ರೀತಿಯಾಗಿ ಪ್ರೊಟೆಸ್ಟಾಂಟ್ ಅಥವಾ ಸೆಕ್ಯುಲರ್ ಆಚರಣೆಗಳು. ನಮ್ಮ ಭಾರತೀಯರು ಹೇಗೆ ಈ ಪರಕೀಯ ಆಚರಣೆಯನ್ನೇ ನೈತಿಕ ಆಚರಣೆ ಎಂದು ನಂಬಲು ಸಾಧ್ಯ? ಇದೊಂದು ವಿಚಿತ್ರವಾದರೂ ನಿಜ. ಅದಕ್ಕೆ ಹತ್ತೊಂಭತ್ತನೆಯ ಶತಮಾನದಿಂದಲೂ ಇಲ್ಲಿ ನಡೆದ ಸುಧಾರಣಾ ಚಳವಳಿಗಳ ಹಿನ್ನೆಲೆಯಿದೆ. ಭಾರತೀಯ ಧಾರ್ಮಿಕ ಸುಧಾರಣಾವಾದಿಗಳು ಪ್ರೊಟೆಸ್ಟಾಂಟ್ ಥಿಯಾಲಜಿಯನ್ನೇ ಸತ್ಯವೆಂದು ನಂಬಿ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅದರ ಮೂಲಕ ಒರೆಗೆ ಹಚ್ಚಿದರು. ಆಗ ನಿರಾಕಾರೋಪಾಸನೆಯೇ ಸತ್ಯವಾದುದು, ಸಾಕಾರೋಪಾಸನೆ ಒಂದು ತಪ್ಪು ಬೆಳವಣಿಗೆ, ಹಿಂದೂಯಿಸಂ ಎಂಬುದು ಬ್ರಾಹ್ಮಣ ಪ್ರೀಸ್ಟ್ಗಳಿಂದ ಭ್ರಷ್ಟಗೊಂಡು ಇಂಥ ಆಚರಣೆಗಳು ಪ್ರಚಲಿತದಲ್ಲಿ ಬಂದಿವೆ ಎಂಬುದಾಗಿ ಅವರು ನಿರೂಪಿಸಿದರು. ಅಂದರೆ ಕ್ಯಾಥೋಲಿಕರ ಕುರಿತ ಪ್ರೊಟೆಸ್ಟಾಂಟ್ ಕಥೆಯನ್ನು ಅವರು ಬಳಸಿಕೊಂಡರು. ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಎಷ್ಟೆಷ್ಟು ಪ್ರೊಟೆಸ್ಟಾಂಟ್ಗೊಳಿಸುತ್ತೀರೋ ಅಷ್ಟಷ್ಟು ಅದು ಶುದ್ಧವಾಗುತ್ತದೆ ಎಂದು ತಿಳಿದರು. ಈ ಪ್ರಯತ್ನದಲ್ಲಿ ಆಧ್ಯಾತ್ಮ ಸಂಪ್ರದಾಯಗಳು ನಿಜವಾಗಿಯೂ ಮೂರ್ತಿಪೂಜೆಯ ಬಗೆಗೆ ಏನು ಧೋರಣೆ ಇಟ್ಟುಕೊಂಡಿವೆ ಎಂಬುದರ ಕುರಿತು ಒಂದು ಮರೆವು ವಿದ್ಯಾವಂತರನ್ನು ಆವರಿಸತೊಡಗಿತು. ಬದಲಾಗಿ ಪ್ರೊಟೆಸ್ಟಾಂಟ್ ಧೋರಣೆಯೇ ಅವುಗಳ ಧೋರಣೆ ಎಂಬ ತಪ್ಪು ಅಭಿಪ್ರಾಯವು ಅವರನ್ನು ಆವರಿಸಿಕೊಂಡಿತು.

ಹತ್ತೊಂಭತ್ತನೆಯ ಶತಮಾನದ ನಂತರ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅಧ್ಯಯನಕ್ಕೊಳಪಡಿಸಿದ ವಿದ್ವಾಂಸರು ನಿರಾಕಾರೋಪಾಸನೆಯೇ ಅದರ ಹೆಚ್ಚುಗಾರಿಕೆ ಎಂಬಂತೇ ಬಿಂಬಿಸುವುದರಲ್ಲಿ ಆಸಕ್ತಿ ತೋರಿಸಿದರು. ಆ ಸಂದರ್ಭದಲ್ಲಿ ನಿರಾಕಾರ ಬ್ರಹ್ಮವೊಂದೇ ಸತ್ಯವೆಂದೆನ್ನುವ ಅದ್ವೈತ ವೇದಾಂತವು ಮಹತ್ವ ಪಡೆಯಿತು. ಹಾಗೂ ಅದು ಭಾರತದ ಸತ್ಯವಾದ ರಿಲಿಜನ್ನಿನ ವಕ್ತಾರನಾಯಿತು. ಜೊತೆಗೆ ಮಧ್ಯಕಾಲೀನ ನಿರ್ಗುಣ ಭಕ್ತಿ ಸಂಪ್ರದಾಯಗಳು ಕೂಡ ಮಹತ್ವ ಪಡೆದವು. ಅವನ್ನು ಸುಧಾರಣಾ ಚಳವಳಿಗಳು ಎಂಬುದಾಗಿ ಕರೆಯಲಾಯಿತು. ಇದೇ ದೇವತೆಗಳಿಗೆ ಸಂಬಂಧಿಸಿದ ಆಗಮ ಸಂಪ್ರದಾಯಗಳು ಖಂಡನೆಗೆ ಒಳಗಾದವು. ದೇವಾಲಯ ಹಾಗೂ ಮೂರ್ತಿಪೂಜೆಗಳು ಹಿಂದೂಯಿಸಂನ ಅವನತಿಯ ಸಂಕೇತಗಳು ಎಂಬುದಾಗಿ ವಿದ್ವಾಂಸರು ಭಾವಿಸಿದರು. ಮೂರ್ತಿಪೂಜೆಗೂ ಬ್ರಾಹ್ಮಣ ಪುರೋಹಿತಶಾಹಿಗೂ, ಜಾತಿ ವ್ಯವಸ್ಥೆಗೂ, ಹಿಂದೂಯಿಸಂನ ಅವನತಿಗೂ ಕೊಂಡಿ ಬೆಳೆಯಿತು. ಈ ಕೊಂಡಿ ಏಕೆ ಬೆಳೆಯಿತೆಂದರೆ, ಪ್ರೊಟೆಸ್ಟಾಂಟರು ಕ್ಯಾಥೋಲಿಕರಲ್ಲಿ ಈ ಕೊಂಡಿಯನ್ನು ಗುರುತಿಸಿ ಖಂಡಿಸಿದ್ದರು. ಕ್ಯಾಥೋಲಿಕ್ ಪ್ರೀಸ್ಟ್ಗಳ ಐಡೋಲೇಟ್ರಿಯಿಂದಾಗಿ ಅವರಲ್ಲಿ ಅನೈತಿಕತೆ ಬೆಳೆದು ಕ್ರೈಸ್ತರಲ್ಲಿ ತರತಮದ ಶ್ರೇಣೀಕರಣವನ್ನು ಬೆಳೆಸಿದರು, ಅದು ಕ್ರಿಶ್ಚಿಯಾನಿಟಿಯ ಅವನತಿಗೆ ಕಾರಣವಾಯಿತು ಎಂಬ ಕಥೆಯೇ ಈ ಕೊಂಡಿಯನ್ನು ರಚಿಸುತ್ತದೆ.

ಭಾರತದಲ್ಲಿ ಈ ಕೊಂಡಿ ನಿಜವಾಗಿಯೂ ಇದೆಯೆ ಎಂಬುದನ್ನು ಯಾರೂ ಪರೀಕ್ಷಿಸಲಿಲ್ಲ. ಆದರೆ ಅದೇ ದೇವತೆಯನ್ನು ಪೂಜಿಸುವವರಲ್ಲೇ ಒಂದು ವರ್ಗವನ್ನು ಪುರೋಹಿತಶಾಹಿ ಎಂದು ಪರಿಗಣಿಸಿ ಮತ್ತೊಂದನ್ನು ಸುಧಾರಣಾವಾದಿಗಳು ಎಂಬುದಾಗಿ ಭಾವಿಸುವ ಅಧ್ಯಯನಗಳು ನಡೆದವು. ಈ ಭರಾಟೆಯಲ್ಲಿ ಸಾಕಾರ ಹಾಗೂ ನಿರಾಕಾರೋಪಾಸನೆಯವರು ನಿಜವಾಗಿಯೂ ಮೂರ್ತಿಪೂಜೆಯ ಕುರಿತು ಯಾವ ಧೋರಣೆ ಇಟ್ಟುಕೊಂಡಿದ್ದರು ಎಂಬುದು ಮರೆವಿಗೆ ಸರಿಯಿತು. ಇವೆರಡೂ ರಿಲಿಜನ್ನುಗಳಂತೇ ಪರಸ್ಪರ ವಿರುದ್ಧವಾದ ವೈರಿ ಪಂಥಗಳೋ ಎಂಬಂತೇ ಬಿಂಬಿಸಲಾಯಿತು. ಉದಾಹರಣೆಗೆ ಆಗಮಿಕ ಶೈವರು ಹಾಗೂ ಕನ್ನಡ ಶಿವಶರಣ ದೃಷ್ಟಿಕೋನ.

ಮೂರ್ತಿಗಳು ಹಾಗೂ ಪೌರಾಣಿಕ ದೇವತೆಗಳ ಆಕೃತಿ ಹಾಗೂ ಕಥೆಗಳನ್ನು ಸುಳ್ಳು ಎಂದು ಮನದಟ್ಟು ಮಾಡುವುದು ಸುಲಭ. ಮನುಷ್ಯ ದೇಹಕ್ಕೆ ನಾಲ್ಕು ಕೈಗಳು, ನಾಲ್ಕು ತಲೆ ಇತ್ಯಾದಿಗಳು, ದೇವತೆಗಳ ಪವಾಡಗಳು, ಮಾಯೆ, ಇವುಗಳ ಕುರಿತು ಸತ್ಯ ಸುಳ್ಳಿನ ಪರಿಭಾಷೆಯಲ್ಲಿ ಮಾತನಾಡಿದಾಗ ಯಾರಿಗಾದರೂ ತರ್ಕಬದ್ಧವಾಗಿ ತೋರುತ್ತದೆ. ಹಾಗಾಗಿ ಈ ತರ್ಕವನ್ನೇ ಇಟ್ಟುಕೊಂಡು ಅವು ಸುಳ್ಳು ಎಂದು ಅದರ ವಿರೋಧಿಗಳು ತಾವೇನೋ ಅದ್ಭುತವಾದದ್ದನ್ನು ತಿಳಿಸುತ್ತಿದ್ದೇವೆಂಬುದಾಗಿ ತಿಳಿದಿದ್ದಾರೆ. ಇದು ಹಿಂದೊಮ್ಮೆ ಕ್ರೈಸ್ತ ಮಿಶನರಿಗಳು ಮಾಡಿದ ಕೆಲಸ. ಏಕೆಂದರೆ ಅವರಿಗೆ ನಮ್ಮ ದೇವತೆಗಳು ಸುಳ್ಳು ದೇವತೆಗಳಾಗಿ ಕಂಡಿದ್ದರು. ಅದನ್ನು ನಮಗೆ ಮನದಟ್ಟು ಮಾಡಿಬಿಟ್ಟರೆ ನಾವೆಲ್ಲರೂ ಸತ್ಯದೇವನ ರಿಲಿಜನ್ನಿಗೆ ಪರಿವರ್ತನೆ ಆಗಿಬಿಡುತ್ತೇವೆ ಎಂಬುದಾಗಿ ಅವರು ತಿಳಿದಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಏಕೆಂದರೆ ಭಾರತೀಯರು ಕೂಡ ಅವನ್ನು ನಿಜ ವ್ಯಕ್ತಿ ಹಾಗೂ ಘಟನೆಗಳೆಂದುಕೊಂಡಿರಲಿಲ್ಲ. ಆದರೂ ಅವು ತಮ್ಮ ಜೀವನಕ್ಕೆ ಅತ್ಯಗತ್ಯ ಎಂದುಕೊಂಡಿದ್ದರು. ಅಧ್ಯಾತ್ಮ ಸಂಪ್ರದಾಯಗಳು ಈ ಆಕೃತಿ ಹಾಗೂ ಕಥೆಗಳಿಗೆಲ್ಲ ಬೇರೆ ಯಾವುದೋ ಪಾತಳಿಯಲ್ಲಿ ಅರ್ಥ ಕಲ್ಪಿಸಿ ತಮ್ಮ ಸಾಧನೆಗೆ ಅವುಗಳನ್ನು ವಸ್ತುಗಳನ್ನಾಗಿ ಒಗ್ಗಿಸಿಕೊಂಡಿದ್ದವು. ಉದಾಹರಣೆಗೆ ಬೃಹದಾರಣ್ಯಕೋಪನಿಷತ್ತಿನ ಭಾಷ್ಯದಲ್ಲಿ ಶಂಕರರು ‘ಈ ದೇವ ಅಸುರ ಇವೆಲ್ಲ ವಾಸ್ತವಿಕ ವ್ಯಕ್ತಿಗಳಲ್ಲ ಹಾಗೂ ಘಟನೆಗಳಲ್ಲ. ಅವು ಅವಿದ್ಯೆಯನ್ನು ಕಳೆದುಕೊಂಡು ಆತ್ಮಜ್ಞಾನವನ್ನು ಸಾಧಿಸಲು ಮಾರ್ಗಗಳು’ ಎಂಬ ನಿರೂಪಣೆಯನ್ನು ಮಾಡುತ್ತಾರೆ. ದೇವರಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕನ್ನಡದ ಸಾಹಿತಿಗಳಾದ ಪುತಿನ ಅವರ ಸುಪ್ರಸಿದ್ಧ ಹೇಳಿಕೆ ಇದೆ: ‘ದೇವರು ಇಲ್ಲ, ಅದಕ್ಕಾಗೇ ಒಬ್ಬನನ್ನು ಕಲ್ಪಿಸಿಕೊಳ್ಳಬೇಕಪ್ಪಾ’. ಮೂರ್ತಿಪೂಜೆ ಹಾಗೂ ಪವಾಡಗಳು ಸುಳ್ಳು ಎಂದು ಸಾಧಿಸುವವರು ಈ ಸಂಪ್ರದಾಯಗಳ ಎದುರು ಅವಿವೇಕಿಗಳಾಗಿ, ಮೂರ್ಖರಾಗಿ ಕಾಣಿಸದೇ ಮತ್ತೇನು? ಈ ಸಂಪ್ರದಾಯಗಳಿಗೆ ನಿಜವಾಗಿಯೂ ಅವರು ತೋರಿಸಬೇಕಾದದ್ದು ಮೂರ್ತಿಗಳು ಸುಳ್ಳು ಎಂಬುದನ್ನಲ್ಲ, ಮೂರ್ತಿಪೂಜೆಯನ್ನು ಮಾಡಿದಾಕ್ಷಣ ಪರಮಾತ್ಮನ ಜ್ಞಾನದ ಸಾಧ್ಯತೆಯೇ ಮುಚ್ಚಿಹೋಗುತ್ತದೆ ಎಂಬುದನ್ನು. ಆದರೆ ಅದನ್ನು ತೋರಿಸಲು ಸಾಧ್ಯವೇ ಇಲ್ಲ. ಏನೇ ಆಗಲಿ, ಸೆಮೆಟಿಕ್ ವಾದವಂತೂ ಇಲ್ಲಿ ನಿರರ್ಥಕವೇ ಸರಿ.

ಚಿತ್ರಕೃಪೆ

http://blogs.nazarene.org/kpprobst/files/2010/11/idols.

http://www.smh.com.au/ffximage/2007/02/16/snaps17207_india_gallery__470x380.jp

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: