ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 51: ಭಾರತೀಯ ಸಂದರ್ಭದಲ್ಲಿ ಕಾನೂನು ಮತ್ತು ನ್ಯಾಯ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

‘ಲಾ’ ಎನ್ನುವ ಶಬ್ದವನ್ನು ಕಾನೂನು ಅಥವಾ ಕಾಯ್ದೆ ಎಂಬುದಾಗಿ ಭಾರತೀಯ ಭಾಷೆಗಳಿಗೆ ತರ್ಜುಮೆ ಮಾಡುತ್ತೇವೆ. ಲಾ ಎಂಬ ಕಲ್ಪನೆಯು ಪಾಶ್ಚಾತ್ಯ ಸಂಸ್ಕೃತಿಗೇ ವಿಶಿಷ್ಟವಾದದ್ದು. ಮನುಷ್ಯರು ಹಾಕಿಕೊಂಡ ಪ್ರಭುತ್ವಗಳು ಕಾನೂನು ವ್ಯವಸ್ಥೆಯನ್ನು ಆಧರಿಸಿ ಇರಬೇಕು, ಅಂದರೇನೇ ಅದೊಂದು ನಾಗರಿಕ ಆಳ್ವಿಕೆಯಾಗುತ್ತದೆ ಎಂಬುದಾಗಿ ಪಾಶ್ಚಾತ್ಯರು ನಂಬಿದ್ದರು. ಅದೇ ರೀತಿಯಲ್ಲಿ, ಅಂಥ ನಾಗರಿಕ ಸಮಾಜದ ಸದಸ್ಯನೊಬ್ಬನು ಕಾನೂನುಗಳನ್ನು ಗೌರವಿಸಬೇಕು ಎಂದೂ ಅವರು ನಂಬುತ್ತಾರೆ. ಈ ಕಾನೂನುಗಳು ಸಮಾಜದ ಹಾಗೂ ಪ್ರಜೆಗಳ ಹಿತರಕ್ಷಣೆಗಾಗಿ ರಚಿತವಾಗಿರುತ್ತವೆ ಹಾಗೂ ನೀತಿಪೂರ್ಣವಾದ ಹಾಗೂ ಸರಿಯಾದ ನಡವಳಿಕೆಗಳ ಕುರಿತ ನಿಯಮಗಳ ಕಟ್ಟುಗಳಾಗಿವೆ. ಇವನ್ನಾಧರಿಸಿ ಒಬ್ಬನ ಅಪರಾಧವನ್ನು ನಿರ್ಣಯಿಸಬೇಕಾಗುತ್ತದೆ. ಆಯಾ ದೇಶದ ದಂಡಸಂಹಿತೆಗೆ ಈ ಕಾನೂನುಗಳೇ ಆಧಾರ. ಇಂಥ ಅಪರಾಧಗಳನ್ನು ನಿರ್ಣಯಿಸುವ ಸ್ಥಳಗಳನ್ನು ಕೋರ್ಟುಗಳೆಂದು ಕರೆಯಲಾಗುತ್ತದೆ. ನೀಡುವ ನಿರ್ಣಯವನ್ನು ಜಜ್ಮೆಂಟ್ ಎನ್ನಲಾಗುತ್ತದೆ ಹಾಗೂ ಈ ಕ್ರಿಯೆಯನ್ನು ಜಸ್ಟೀಸ್ ನೀಡುವುದು ಎನ್ನಲಾಗುತ್ತದೆ.

ಲಾ ಎನ್ನುವ ಶಬ್ದವನ್ನು ತರ್ಜುಮೆ ಮಾಡಲು ಬಳಸಿದ ಕಾನೂನು ಹಾಗೂ ಕಾಯಿದೆ ಎಂಬ ಶಬ್ದಗಳೆರಡೂ ಭಾರತೀಯ ಮೂಲದ ಶಬ್ದಗಳೇ ಅಲ್ಲ. ಅವು ಮಧ್ಯಕಾಲದಲ್ಲಿ ಇಸ್ಲಾಮಿಕ್ ಪ್ರಭುತ್ವಗಳ ಕಾಲದಲ್ಲಿ ಭಾರತದಲ್ಲಿ ಬಳಕೆಯಲ್ಲಿ ಬಂದಂತೇ ತೋರುತ್ತದೆ. ನಂತರ ವಸಾಹತು ಕಾಲದಲ್ಲಿ ಪಾಶ್ಚಾತ್ಯ ಲಾ ಎಂಬ ಕಲ್ಪನೆ ಭಾರತದಲ್ಲಿ ಪ್ರಚಲಿತದಲ್ಲಿ ಬಂದಾಗ ಅದನ್ನು ತರ್ಜುಮೆ ಮಾಡಲು ಈ ಕಾನೂನು ಅಥವಾ ಕಾಯಿದೆ ಎಂಬ ಶಬ್ದಗಳನ್ನು ಉಪಯೋಗಿಸಲಾಯಿತು. ಈ ಶಬ್ದಗಳನ್ನು ಬಿಟ್ಟರೆ ನಮಗೆ ಭಾರತೀಯ ಗ್ರಂಥಗಳಲ್ಲಿ ಅವುಗಳಿಗೆ ಸಮನಾದ ಒಂದೇ ಒಂದು ಶಬ್ದವೂ ಸಿಕ್ಕಿಲ್ಲ. ಅವು ಭಾರತೀಯ ಶಬ್ದಗಳು ಅಲ್ಲ ಎಂಬುದೇ ನನ್ನ ಆಕ್ಷೇಪಣೆಯಲ್ಲ. ಇಂಥ ಎಷ್ಟೋ ಪರಕೀಯ ಶಬ್ದಗಳನ್ನು ನಾವು ನಮ್ಮದನ್ನಾಗಿಸಿಕೊಂಡಿದ್ದೇವೆ. ಶಬ್ದಗಳ ಜೊತೆಗೆ ವಸ್ತುಗಳನ್ನೂ ನಮ್ಮದನ್ನಾಗಿಸಿಕೊಂಡಿದ್ದೇವೆ, ಉದಾಹರಣೆಗೆ ಷರ್ಟು, ಪ್ಯಾಂಟು, ರೇಲ್ವೆ, ಬಸ್ಸು, ಇತ್ಯಾದಿ. ಆದರೆ ಇಲ್ಲಿ ಶಬ್ದಗಳಿವೆ ಹಾಗೂ ಅವು ಸೂಚಿಸುವ ವಸ್ತುಗಳೂ ನಿಶ್ಚಿತವಾಗಿ ಅವೇ ಆಗಿವೆ. ಯಾರೂ ಬೂಟಿಗೆ ಷರ್ಟು ಎಂದೆನ್ನುವುದಿಲ್ಲ. ಹಾಗೂ ಭಾರತೀಯರಿಗೆ ಷರ್ಟು ಎಂದರೆ ಏನೆಂಬುದೇ ಗೊತ್ತಿಲ್ಲ ಎಂಬಂಥ ಗೊಂದಲಗಳು ಇನ್ನೂ ಹುಟ್ಟಿಲ್ಲ.

ಆದರೆ ಲಾ ಸಂದರ್ಭದಲ್ಲಿ ಹಾಗಾಗಿದೆ. ಲಾ ಶಬ್ದಕ್ಕೆ ನಾವು ನಿಯಮ, ಶಾಸನ, ಶಾಸ್ತ್ರ, ಇತ್ಯಾದಿ ಅರ್ಥಗಳನ್ನು ಹಚ್ಚಿಕೊಳ್ಳುತ್ತೇವೆ. ಅಸಲು ನಮ್ಮ ಭಾರತೀಯ ಸಂಪ್ರದಾಯಗಳಿಗೆ ಸೆಮೆಟಿಕ್ ರಿಲಿಜನ್ನುಗಳ ಈ ಕಲ್ಪನೆಯೇ ಅಪರಿಚಿತ. ನಮ್ಮಲ್ಲಿ ನಮ್ಮ ಸತ್ಯದೇವನು ನಮಗೆ ಲಾ ಅಥವಾ ದೈವಾಜ್ಞೆಗಳನ್ನು ನೀಡಿದ್ದಾನೆ ಹಾಗಾಗಿ ಅದರ ಪ್ರಕಾರವೇ ನಡೆಯಬೆಕು, ಒಂದೊಮ್ಮೆ ಹಾಗೆ ನಡೆಯದಿದ್ದರೆ ನರಕವೇ ಗತಿ ಎಂಬ ಕಲ್ಪನೆಯಿಲ್ಲ. ಹಾಗಾಗಿ ಈ ಲಾ ಎಂಬ ಅದೃಶ್ಯ ಶಕ್ತಿಯು ನಮ್ಮನ್ನು ನಿಯಂತ್ರಿಸುತ್ತಿದೆ ಎಂಬುದು ನಮ್ಮ ಕಲ್ಪನೆಗೆ ಎಟಕುವುದಿಲ್ಲ. ಹಾಗಾಗಿ ನಮ್ಮ ದೇಶೀಶಬ್ದಗಳು ಅದರ ತರ್ಜುಮೆಗಳಾಗಲಾರವು. ಹಾಗೂ ಭಾರತೀಯರಿಗೆ ಕಳೆದ ಇನ್ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಈ ಲಾ ಆಳ್ವಿಕೆಯೇ ಇನ್ನೂ ಸರಿಯಾಗಿ ಅನುಭವಕ್ಕೆ ಬಂದಂತಿಲ್ಲ ಎಂಬುದನ್ನು ಹಿಂದಿನ ಅಂಕಣವೊಂದರಲ್ಲಿ ವಿಶ್ಲೇಷಿಸಿದ್ದೆ.

ಸಮಸ್ಯೆ ಬರುವುದು ಜಸ್ಟೀಸ್ ಶಬ್ದವನ್ನು ನ್ಯಾಯ ಎಂದು ತರ್ಜುಮೆ ಮಾಡಿದಾಗ. ಜಜ್ಮೆಂಟನ್ನು ನ್ಯಾಯದಾನ ಎಂದೂ, ಕೋರ್ಟನ್ನು ನ್ಯಾಯಾಲಯ ಎಂದೂ, ವಕೀಲರನ್ನು ನ್ಯಾಯವಾದಿಗಳೆಂದೂ, ಜಜ್ಜರನ್ನು ನ್ಯಾಯಾಧೀಶರೆಂದೂ ತರ್ಜುಮೆ ಮಾಡಿದ್ದೇವೆ. ಅಂದರೆ ಇದೊಂದು ನ್ಯಾಯ ಕೊಡುವ ವ್ಯವಸ್ಥೆ ಎಂಬುದು ಸ್ಪಷ್ಟವಾಗಿದೆ. ಈ ನ್ಯಾಯವನ್ನು ಹೇಗೆ ನಿರ್ಣಯಿಸಲಾಗುತ್ತದೆ? ಕಾನೂನುಗಳನ್ನು ಆಧರಿಸಿ ನಿರ್ಣಯಿಸಲಾಗುತ್ತದೆ. ಹಾಗಾಗಿ ಕಾನೂನುಗಳಿಗೂ ನ್ಯಾಯಕ್ಕೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಜ್ಞಾನವು ಕೂಡ ಸಹಜವಾಗಿಯೇ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ, ಕಾನೂನನ್ನಾಧರಿಸಿದ ನ್ಯಾಯ ತೀರ್ಮಾನವೇ ವೈಜ್ಞಾನಿಕವಾದದ್ದು ಹಾಗಾಗಿ ಅದೊಂದೇ ಪದ್ಧತಿಯನ್ನು ಮಾತ್ರ ನಾವು ರೂಢಿಸತಕ್ಕದ್ದು ಎಂಬ ನಿಲುವೂ ನಮ್ಮದಾಗಿದೆ. ಆದರೆ ನಮ್ಮ ಈ ಕಾರ್ಯಕ್ರಮಕ್ಕೆ ದೊಡ್ಡ ತೊಡಕಾಗಿರುವುದು ನಾನಾ ಪ್ರಕಾರದ ದೇಶೀ ನ್ಯಾಯ ತೀರ್ಮಾನದ ಪದ್ಧತಿಗಳು. ನಮ್ಮ ಹಳ್ಳಿಯ ಸಾಂಪ್ರದಾಯಿಕ ನ್ಯಾಯ ಪಂಚಾಯತಿಗಳು, ಜಾತಿ ಪಂಚಾಯತಿಗಳು, ಬೇರೆ ಬೇರೆ ವೃತ್ತಿಗಳಿಗೆ ಸಂಬಂಧಿಸಿದ ಪಂಚಾಯತಿಗಳು, ಧರ್ಮ ಕ್ಷೇತ್ರಗಳು, ಮಠಗಳು, ಇತ್ಯಾದಿ. ಈ ಎಲ್ಲಾ ದೇಶೀ ಪದ್ಧತಿಗಳೂ ಯಾವುದೇ ನಿರ್ದಿಷ್ಟ ಕಾನೂನುಗಳನ್ನು ಆಧರಿಸಿ ನ್ಯಾಯವನ್ನು ತೀರ್ಮಾನಿವುದಿಲ್ಲ. ಕಾನೂನುಗಳಿಲ್ಲದೇ ನ್ಯಾಯವನ್ನು ಹೇಗೆ ತೀರ್ಮಾನಿಲು ಸಾಧ್ಯ? ಹಾಗಾಗಿ ಇಂಥ ಪಂಚಾಯತಿಗಳಲ್ಲಿ ಅನ್ಯಾಯವೇ ಆಗುತ್ತಿದೆ, ಬೇಕಾಬಿಟ್ಟಿ ತೀಮರ್ಾನಗಳು ಆಗುತ್ತಿವೆ, ಲಿಂಗ, ಜಾತಿ, ವರ್ಗ ಪಕ್ಷಪಾತ ನಡೆಯುತ್ತಿದೆ ಎನ್ನಲಾಗುತ್ತಿದೆ. ಎಲ್ಲರಿಗೂ ಕಾಫ್ ಪಂಚಾಯತಿಗಳು ಅತ್ಯತ್ಕೃಷ್ಟ ದೃಷ್ಟಾಂತಗಳಾಗಿವೆ.

ಹಾಗಾಗಿ ಇಂಥ ಪದ್ಧತಿಗಳನ್ನು ಆದಷ್ಟೂ ತೊಡೆದು, ಎಲ್ಲೆಲ್ಲೂ ಕಾನೂನಿನ ಆಳ್ವಿಕೆಯನ್ನು ತರಲು ನ್ಯಾಯಾಲಯಗಳ ವಿಕೇಂದ್ರೀಕರಣವನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿವೆ. ಅಂದರೆ ಕಾನೂನಿನ ಆಳ್ವಿಕೆಯನ್ನು ಆದಷ್ಟೂ ವಿಸ್ತರಿಸಿದಂತೆಲ್ಲ ಭಾರತೀಯ ಪ್ರಜೆಗಳಿಗೆ ಹೆಚ್ಚೆಚ್ಚು ನ್ಯಾಯ ದೊರೆಯತೊಡಗುತ್ತದೆ ಎಂಬುದು ನಮ್ಮ ಧೃಡ ವಿಶ್ವಾಸ. ಆದರೆ ಅದೇಕೋ ಕೋರ್ಟುಗಳ ಕುರಿತ ನಮ್ಮ ಜನಸಮಾನ್ಯರ ಅನುಭವ ಹಾಗೂ ಅಭಿಪ್ರಾಯಗಳು ಈ ಮೇಲಿನ ಪ್ರತಿಪಾದನೆಯನ್ನು ಬೆಂಬಲಿಸುತ್ತಿಲ್ಲ. ನಮ್ಮಲ್ಲಿ ‘ಕೋರ್ಟಿನಲ್ಲಿ ಗೆದ್ದವ ಸೋತ ಸೋತವ ಸತ್ತ’ ಎಂಬ ಗಾದೆಯಿದೆ. ಅಂದರೆ ಇಲ್ಲಿ ನ್ಯಾಯಕ್ಕಾಗಿ ಕೋರ್ಟಿನ ಮೆಟ್ಟಿಲು ಹತ್ತಿದವನು ವಕೀಲರಿಗೆ ಹಣ ಚೆಲ್ಲಿ, ಅಲೆದೂ ಅಲೆದೂ ಸುಸ್ತಾಗಿ ತಮ್ಮ ಪರವಾಗಿ ತೀರ್ಪು ಬರುವ ಮೊದಲೇ ದಿವಾಳಿಯಾಗಿ ಸೋತುಹೋಗಿರುತ್ತಾರೆ ಅಂತ. ಕೋರ್ಟು ಕಛೇರಿಗಳ ಮೆಟ್ಟಿಲು ಹತ್ತಿದ ಕುಟುಂಬಗಳು ಹಾಳಾಗುತ್ತವೆ, ದಾಯಾದಿಗಳ ಹೊಡೆದಾಟ ಕೊಲೆಗಳಲ್ಲಿ ಕೂಡ ಅಂತ್ಯವಾಗಬಹುದು, ಕೊಲೆ ಮಾಡಿದವರು, ಗೂಂಡಾಗಳು ತಪ್ಪಿಸಿಕೊಂಡು ಬರುತ್ತಾರೆ, ತಪ್ಪು ಮಾಡದವರು ಸಿಕ್ಕಿಹಾಕಿಕೊಳ್ಳುತ್ತಾರೆ, ಸತ್ಯ ಸುಳ್ಳಾಗುತ್ತದೆ, ಸುಳ್ಳು ಸತ್ಯವಾಗುತ್ತದೆ, ಕೋರ್ಟಿನ ತೀರ್ಮಾನ ಸಿಗುವ ವೇಳೆಗೆ ದಾವೆ ಹಾಕಿದವರಲ್ಲಿ ಎಷ್ಟೋ ಮಂದಿ ಈ ಲೋಕದಲ್ಲೇ ಇರುವುದಿಲ್ಲ, ಕೋರ್ಟಿನಲ್ಲಿ ಏನು ನಡೆಯುತ್ತಿದೆಯೆಂಬುದು ಕಕ್ಷಿದಾರನಿಗೆ ಗೊತ್ತಾಗುವುದೇ ಇಲ್ಲ, ಇತ್ಯಾದಿ ವಿಷಯಗಳು ಜನಸಮಾನ್ಯರ ಸಾಮಾನ್ಯ ಜ್ಞಾನವೇ ಅಗಿದೆ. ಅದರಲ್ಲೂ ಕೋರ್ಟಿಗೆ ಹೋಗುವುದು ಹಳ್ಳಿಯ ಕುಟುಂಬಗಳ ಹಾಗೂ ಸಮುದಾಯಗಳ ಶಾಂತಿಗೆ ಭಂಗ ತರುತ್ತದೆ ಎಂಬ ಭಾವನೆ ಬಲವಾಗಿದೆ. ಹಾಗಾಗಿ ಹಳ್ಳಿಗರು ತಮ್ಮ ಜನರು ಆದಷ್ಟೂ ಕೋರ್ಟಿಗೆ ಹೋಗದಂತೇ ತಡೆಯಲು ಇನ್ನೂ ದೇಶೀ ಪದ್ಧತಿಗಳನ್ನು ರಕ್ಷಿಸಿಕೊಂಡು ಬಂದಿದ್ದಾರೆ.

ಈ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡು ಇನ್ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲವಾದರೂ ನಮ್ಮ ನ್ಯಾಯಾಸ್ಥಾನಗಳಲ್ಲಿ ನ್ಯಾಯ ಸಿಗುವುದರ ಕುರಿತು ನಮ್ಮ ಜನರಿಗೆ ಅದೇಕೋ ಇನ್ನೂ ವಿಶ್ವಾಸವೇ ಮೂಡಿಲ್ಲ. ಅದಕ್ಕೆ ಕುರುಹಾಗಿ ಈ ಮೇಲಿನ ಅಭಿಪ್ರಾಯಗಳು ಹಾಗೂ ಪರ್ಯಾಯ ನ್ಯಾಯದಾನ ವ್ಯವಸ್ಥೆಗಳು ಇಂದು ಇವೆ. ಅಂದರೆ ದೇಶೀ ಪದ್ಧತಿಗಳು ನಮ್ಮ ಪ್ರಾಚೀನ ಸಮಾಜದ ಮೌಢ್ಯದ ಅವಶೇಷಗಳಲ್ಲ, ಬದಲಾಗಿ ವಿಚಾರಪೂರ್ವಕವಾಗಿ ಮುಂದು ವರಿಸಿಕೊಂಡು ಬಂದ ಪದ್ಧತಿಗಳು ಎಂಬದು ಗಮನಾರ್ಹ. ಅಂದರೆ ಕಾನೂನುಗಳು ತಮ್ಮ ಘೋಷಿತ ಉದ್ದೇಶವನ್ನು ತಲುಪುತ್ತಿಲ್ಲ ಎಂಬುದು ಇದರಿಂದ ವಿದಿತವಾಗುತ್ತದೆ.

ನನ್ನ ಪ್ರಕಾರ ಕಾನೂನು ಹಾಗೂ ನ್ಯಾಯಗಳು ಬೇರೆ ಬೇರೆ. ಅವಕ್ಕೆ ಸಂಬಂಧವಿರಲೇಬೇಕೆಂದಿಲ್ಲ. ಜಸ್ಟೀಸ್ ಎಂಬ ಶಬ್ದವನ್ನು ನ್ಯಾಯ ಎಂಬುದಗಿ ತರ್ಜುಮೆ ಮಾಡಿರುವುದರಿಂದ ಅವೆರಡೂ ಮಾರ್ಗ ಹಾಗೂ ಗುರಿಗಳೆಂಬ ಗೊಂದಲ ಹುಟ್ಟಿದೆ. ಜಸ್ಟೀಸ್ ಎಂಬ ಪರಿಕಲ್ಪನೆಯ ಮೂಲವನ್ನು ನಾನಿಲ್ಲಿ ಕೆದಕಲು ಹೋಗುವುದಿಲ್ಲ. ಆದರೆ ಅದು ಕಾನೂನನ್ನಾಧರಿಸಿ ತೆಗೆದುಕೊಂಡ ನಿರ್ಣಯ ಎಂಬುದನ್ನಷ್ಟೇ ಇಲ್ಲಿ ಗಮನದಲ್ಲಿಟ್ಟುಕೊಳ್ಳೋಣ. ಅಂದರೆ ಒಂದು ದಾವೆಯ ಸಂದರ್ಭದಲ್ಲಿ ಅದು ನಾವು ಹಾಕಿಕೊಂಡ ಯಾವ ಕಾನೂನಿನ ವ್ಯಾಪ್ತಿಗೆ ಬರುತ್ತದೆ (ಜೂರಿಸ್ಪ್ರೂಡೆನ್ಸ್) ಎಂಬುದನ್ನು ಗುರುತಿಸುವುದೇ ಜಜ್ಮೆಂಟ್ ಎನ್ನುತ್ತಾರೆ. ಹಾಗೆ ಗುರುತಿಸಿದಾಗ ಅಪರಾಧ ಏನು, ಯಾವ ಸ್ವರೂಪದ್ದು, ಅದಕ್ಕೆ ಏನು ಶಿಕ್ಷೆ ಇತ್ಯಾದಿಗಳೆಲ್ಲವೂ ಸ್ಪಷ್ಟವಾಗುತ್ತವೆ. ಆ ದಾವೆಯು ಅದೇ ಕಾನೂನಿಗೆ ಸಂಬಂಧ ಪಟ್ಟಿದೆ ಎಂಬುದನ್ನು ಒಪ್ಪಿಕೊಂಡ ಎಲ್ಲರೂ ಮುಂದಿನದನ್ನೂ ಒಪ್ಪಿಕೊಳ್ಳಬೇಕು. ಒಂದೊಮ್ಮೆ ಅದನ್ನು ಪ್ರಶ್ನಿಸಬಯಸುವವರು ಆ ಕಾನೂನುಗಳ ವ್ಯಾಪ್ತಿಗೆ ಆ ದಾವೆಯು ಬರುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕು. ಅಂದರೆ ಜಸ್ಟೀಸ್ ಎಂಬುದು ಯಾವ ನಿದರ್ಿಷ್ಟ ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ನಿರ್ಣಯಿಸುವ ಮೂಲಕ ಸಂತ್ರಸ್ತರಿಗೆ ಪರಿಹರವನ್ನೂ, ಅಪರಾಧಿಗಳಿಗೆ ಶಿಕ್ಷೆಯನ್ನೂ ನಿರ್ಣಯಿಸುವ ಕೆಲಸ. ಅಂದರೆ ಕಾನೂನನ್ನು ಬಿಟ್ಟು ಮನುಷ್ಯ ಸಂದರ್ಭಗಳಿಗೆ ಸ್ಪಂದಿಸುವ ಅವಕಾಶ ಈ ಕ್ರಿಯೆಗಿಲ್ಲ. ಕಾನೂನುಗಳಿಗೆ ಈ ಪದ್ಧತಿಯಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಕಲ್ಪಿಸಲಾಗಿದೆ. ಕಾನೂನುಗಳು ಒಂದು ಸುಖೀ ಸಮಾಜಕ್ಕೆ ಅತ್ಯಾವಶ್ಯಕ, ಅವು ಉಲ್ಲಂಘನೆಯಾಗಬಾರದು ಎಂಬ ಕಾಳಜಿಯಂದಲೇ ಈ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ.

ಅಂದರೆ ಜಸ್ಟೀಸಿನ ಮೂಲ ಕಾಳಜಿಯು ಕಾನೂನಿನ ಪ್ರಭುತ್ವ, ಹಾಗೂ ಅಂಥ ಪ್ರಭುತ್ವವೇ ಸುಖೀ ಸಮಾಜಕ್ಕೆ ಬುನಾದಿಯಾಗಬಲ್ಲದು ಎಂಬ ನಂಬಿಕೆಯಿಂದ ಈ ಕಾಳಜಿಯು ನ್ಯಾಯೋಚಿತವಾಗುತ್ತದೆ. ಆದರೆ ಈ ನಂಬಿಕೆಯು ಪಾಶ್ಚಾತ್ಯ ಪ್ರಭುತ್ವಗಳಲ್ಲಿ ಬೆಳೆದು ಬರುವುದಕ್ಕೆ ಅವಕ್ಕಿರುವ ಕ್ರೈಸ್ತ ದೈವಾಧಿಪತ್ಯದ ಹಿನ್ನೆಲೆಯೇ ಕಾರಣವಾಗಿದೆ. ಗಾಡ್ನ ಕಾನೂನುಗಳು ನಮ್ಮನ್ನೆಲ್ಲಾ ಆಳುತ್ತಿವೆ, ಅವನ ಆಜ್ಞೆಯ ಪ್ರಕಾರ ನಡೆದುಕೊಳ್ಳುವುದರಲ್ಲೇ ಮನುಕುಲದ ಹಿತ ಅಡಗಿದೆ, ಮನುಷ್ಯರು ಹೇಗೆ ನಡೆದುಕೊಂಡರೆ ಅವರಿಗೆಲ್ಲಾ ಸುಖ ಸಿಗಬಹುದು ಎಂಬುದನ್ನು ಈ ಕಾನೂನುಗಳೇ ಒಳಗೊಂಡಿರುವುದರಿಂದ ಅವನ್ನು ಬಿಟ್ಟು ಬೇರೆ ನ್ಯಾಯ ಇಲ್ಲ, ಬೇರೆ ಗತಿ ಇಲ್ಲ ಎಂಬ ನಂಬಿಕೆಯನ್ನು ಕ್ರೈಸ್ತರು ಹೊಂದಿದ್ದರು. ಹದಿನೇಳನೆಯ ಶತಮಾನದ ನಂತರ ಯುರೋಪಿನಲ್ಲಿ ತಲೆಯೆತ್ತಿದ ಸೆಕ್ಯುಲರ್ ಪ್ರಭುತ್ವಗಳು ಹಾಗೂ ಚಿಂತನೆಗಳು ಮನುಷ್ಯ ನಿರ್ಮಿತ ಕಾನೂನುಗಳು ತಮ್ಮ ಪ್ರಭುತ್ವಕ್ಕೆ ಬುನಾದಿಯಾಗಬೇಕೆಂದು ಕಾರ್ಯ ಪ್ರವೃತ್ತವಾದವು. ಅದರ ಫಲವೇ ಈ ಮನುಷ್ಯ ನಿರ್ಮಿತ ಕಾನೂನು ಸಂಹಿತೆಗಳು. ಕ್ರೈಸ್ತ ಲೋಕದೃಷ್ಟಿಯೊಳಗೆ ಬೆಳೆದುಬಂದ ಪ್ರಜೆಗಳಿಗೆ ಈ ಅವಸ್ಥಾಂತರವು ಯಾವ ಗೊಂದಲವನ್ನೂ ಹುಟ್ಟಿಸಲಿಲ್ಲ. ಗಾಡ್ನ ಕಾನೂನುಗಳಿಗೆ ಬದಲಾಗಿ ಮಾನವರ ಕಾನೂನುಗಳು ಬಂದವು ಅಷ್ಟೆ. ಕಾನೂನಿನ ಆಳ್ವಿಕೆಯು ಅನೂಚಾನವಾಗಿ ಮುಂದುವರಿಯಿತು.

ಆದರೆ ಭಾರತೀಯ ನ್ಯಾಯಾಲಯಗಳಲ್ಲಿ ಬರುವ ಬಹಳಷ್ಟು ಜಜ್ಮೆಂಟುಗಳನ್ನು ನೋಡಿದರೆ ನಮಗೊಂದು ಕುತೂಹಲಕಾರಿಯಾದ ಸಂಗತಿ ಕಂಡುಬರುತ್ತದೆ. ಒಂದು ಪ್ರತ್ಯೇಕ ದಾವೆಯಲ್ಲಿ ಕಾನೂನು ಏನು ಹೇಳುತ್ತದೆ ಎಂಬುದಕ್ಕೂ ಯಾವುದು ನ್ಯಾಯ ಎಂಬುದಕ್ಕೂ ಸಂಬಂಧ ಇಲ್ಲ ಎಂಬುದಾಗಿ ನ್ಯಾಯಾಧೀಶನೊಬ್ಬನಿಗೆ ಕಂಡುಬರುತ್ತದೆ. ಆಗ ಒಂದೋ ಅವನು ಅನ್ಯಾಯವನ್ನು ಮಾಡಬೇಕು, ಇಲ್ಲ ಕಾನೂನನ್ನು ಕಡೆಗಣಿಸಿ ನ್ಯಾಯವನ್ನು ನೀಡಬೇಕು. ಅಂಥ ಸಂದರ್ಭದಲ್ಲಿ ನ್ಯಾಯವನ್ನು ನೀಡಬೇಕಾದರೆ ಯಾವ ಕಾನೂನಿನ ವ್ಯಾಪ್ತಿಗೆ ಆ ದಾವೆಯನ್ನು ತರಬೇಕು ಎಂಬುದನ್ನು ಆತನು ಹುಡುಕುತ್ತಾನೆ. ಅಂದರೆ ಕಾನೂನಿನಿಂದ ಇಲ್ಲಿ ನ್ಯಾಯ ಹೊರಡುವುದಿಲ್ಲ, ಬದಲಾಗಿ ನ್ಯಾಯದಿಂದ ಕಾನೂನು ನಿರ್ಣಯವಾಗುತ್ತದೆ. ಅಂದರೆ ನ್ಯಾಯಬುದ್ಧಿಯೇ ಯಾವ ಕಾನೂನು ಸರಿ, ಯಾವುದಲ್ಲ ಎಂಬುದನ್ನು ನಿಷ್ಕಷರ್ಿಸುವ ಕೆಲಸ ಅಲ್ಲಿ ನಡೆಯುತ್ತದೆ. ಹಾಗಾಗಿ ಇಂಥ ಜಜ್ಮೆಂಟುಗಳು ಕಾನೂನಿನಿಂದ ಹೊರಟಿರದೇ ಜಜ್ಮೆಂಟು ಹೊರಟನಂತರ ಕಾನೂನು ಅದರ ಸಮರ್ಥನೆಗಾಗಿಯಷ್ಟೇ ಪ್ರಸ್ತುತವಾಗುತ್ತದೆ.

ಇಂಥ ಪಜೀತಿಗಳನ್ನು ಹೀಗೆ ಎದುರಿಸಲಾಗದಿದ್ದಾಗ ಭಾರತೀಯ ನ್ಯಾಯಾಲಯಗಳಲ್ಲಿ ರಾಜಿ ನಡೆಸುವ ಕೆಲಸವನ್ನು ಹುಟ್ಟುಹಾಕುವುದೇ ನ್ಯಾಯೋಚಿತ ಎಂದು ನ್ಯಾಯಾಧೀಶರುಗಳಿಗೆ ಅನಿಸುತ್ತದೆ. ಆದರೆ ಅದು ಕಾನೂನಿನ ವ್ಯಾಪ್ತಿಗೇ ಬರುವುದಿಲ್ಲ. ಅಂದರೆ ತಮ್ಮ ಜಜ್ಮೆಂಟಿನಿಂದ ಎರಡೂ ಅಥವಾ ಒಂದು ಪಕ್ಷಕ್ಕೆ ಅನ್ಯಾಯವಾಗುತ್ತದೆ ಎಂದೆನಿಸಿದಾಗ ಅವು ಆ ದಾವೆಯಿಂದ ಹಿಂದೆ ಸರಿಯುವುದೇ ಒಳ್ಳೆಯದು ಎಂದು ನ್ಯಾಯಾಧೀಶರಿಗೆ ಅನ್ನಿಸುತ್ತದೆ. ಇಂಥ ರಾಜಿ ಪಂಚಾಯ್ತಿಗಳು ಕಾನೂನುಬದ್ಧವಾಗಲಾರವು. ರಾಜಿ ಮಾಡಿಬಿಟ್ಟರೆ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತೀರ್ಮಾನವಾದಂತೆಯೆ? ಕಾನೂನಿನ ಆಳ್ವಿಕೆಯ ಪಾವಿತ್ರ್ಯತೆ ಹೇಗೆ ಉಳಿದೀತು? ಇಂಥ ಒಂದು ಸುಪ್ರಸಿದ್ಧ ಉದಾಹರಣೆಯೆಂದರೆ ರಾಮ ಜನ್ಮಭೂಮಿಯ ವಿವಾದದ ಕುರಿತು 2010ರ ಅಲಹಾಬಾದ ಹೈಕೋರ್ಟಿನ ತೀರ್ಮಾನ. ಅದರಲ್ಲಿ ದಾವೆಯಿದ್ದುದು ಬಾಬರಿ ಮಸೀದಿಯ ಭಾಗ ಯಾರಿಗೆ ಸೇರಬೇಕು ಎಂಬುದು. ಅದರ ಒಡೆತನಕ್ಕೆ ಮೂರು ಪಕ್ಷಗಳು ದಾವೆ ಹಾಕಿದ್ದವು. ಅಂದರೆ ಯಾವುದೋ ಒಂದು ಪಕ್ಷದ ಬೇಡಿಕೆ ಕಾನೂನುಬದ್ಧವಾಗಿರಬೇಕು ಹಾಗೂ ಉಳಿದವು ಕಾನೂನನ್ನು ಉಲ್ಲಂಘಿಸಿರುತ್ತವೆ. ಆದರೆ ಜಜ್ಮೆಂಟ್ ಏನು ಹೇಳುತ್ತದೆಯೆಂದರೆ ಆ ಸ್ಥಳವನ್ನು ಮೂರು ಭಾಗ ಮಾಡಿ ಒಂದನ್ನು ಮುಸ್ಲಿಮರಿಗೂ, ಒಂದನ್ನು ರಾಮಜನ್ಮಸ್ಥಾನಕ್ಕೂ, ಮತ್ತೊಂದನ್ನು ನಿರ್ಮೋಹಿ ಅಖಾಡಾಕ್ಕೂ ನೀಡಬೇಕೆಂಬುದಾಗಿ ಹೇಳುತ್ತದೆ. ಈ ಜಜ್ಮೆಂಟನ್ನು ಕಟ್ಟೆಪಂಚಾಯ್ತಿ ತೀರ್ಮಾನ ಎಂಬುದಾಗಿ ಅನೇಕರು ಲೇವಡಿ ಮಾಡಿದರು. ಸುಪ್ರೀಂ ಕೋರ್ಟು ಕೂಡ ಇದನ್ನು ಒಪ್ಪಲಿಲ್ಲ. ಆದರೆ ಇಲ್ಲಿ ವ್ಯಂಗ್ಯವೆಂದರೆ, ಈ ವಿವಾದಕ್ಕೆ ಕಾನೂನು ರೀತ್ಯಾ ತೆರೆ ಎಳೆಯಲು ಸಾಕ್ಷ್ಯಾಧಾರಗಳ ಕೊರತೆಯನ್ನು ಮನಗಂಡು ಹಾಗೂ ಅಂಥ ತೀರ್ಮಾನಗಳು ಸಮಾಜದಲ್ಲಿ ಹುಟ್ಟಿಸಬಹುದಾಗಿದ್ದ ಸಂಘರ್ಷವನ್ನು ತಡೆಯುವ ಸಲುವಾಗಿ ಇಂಥ ನಿರ್ಣಯವೇ ನ್ಯಾಯೋಚಿತ ಎಂಬುದಾಗಿ ಹೈಕೋರ್ಟು ತೀರ್ಮಾನಿಸಿತ್ತು. ಅಂದರೆ ಈ ದಾವೆಯ ಸಂದರ್ಭದಲ್ಲಿ ಸುಖೀ ಸಮಾಜಕ್ಕೂ ನಮ್ಮ ಕಾನೂನಿಗೂ ಸಂಬಂಧವಿಲ್ಲ ಎಂಬುದನ್ನು ಕೋರ್ಟೇ ಒಪ್ಪಿಕೊಂಡಂತೇ ಆಯಿತು.

ದಾವೆಯೊಂದಕ್ಕೆ ಕಾನೂನಿನ ವ್ಯಾಪ್ತಿಯನ್ನು ಯಾವ ಸೂತ್ರದ ಮೇಲೆ ನಿರ್ಣಯಿಸಲಾಗುತ್ತದೆ? ಒಂದೇ ರೀತಿಯ ದೃಷ್ಟಾಂತಗಳು ಒಂದೇ ಥರದ ಕಾನೂನುಗಳ ವ್ಯಾಪ್ತಿಗೆ ಬರುತ್ತವೆ ಎಂಬ ಆಧಾರವಾಕ್ಯನ್ನಿಟ್ಟುಕೊಂಡು ಈ ನಿರ್ಣಯಗಳನ್ನು ಮಾಡಲಾಗುತ್ತದೆ. ಈ ಪ್ರಪಂಚದ ಯಾವ ಎರಡು ಘಟನೆಗಳು ಒಂದೇ ಥರ ಇರುತ್ತವೆ? ಅಂಥ ಒಂದು ಘಟನೆಯನ್ನು ತೋರಿಸುವುದೂ ಸಾಧ್ಯವಿಲ್ಲದ ಮಾತು. ಮೇಲ್ನೋಟಕ್ಕೆ ಸಾಮ್ಯತೆಗಳು ಇರುತ್ತವೆ. ಸಾಮಾನ್ಯೀಕರಣವೂ ಸಾಧ್ಯವಿರಬಹುದು, ಉದಾಹರಣೆಗೆ ಆಸ್ತಿ ವಿವಾದಗಳು, ಡೈವೋರ್ಸ್ ವಿವಾದ, ಇತ್ಯಾದಿ. ಇದಾವುದನ್ನೂ ನಾನು ಅಲ್ಲಗಳೆಯುತ್ತಿಲ್ಲ. ಆದರೆ ಇಂಥ ಸಾಮಾನ್ಯ ಪ್ರಭೇದಗಳೊಳಗೆ ಬರುವ ಪ್ರತೀ ಘಟನೆಯೂ ಕಾಲ, ದೇಶ, ಸಂಪ್ರದಾಯ, ವ್ಯಕ್ತಿವಿಶಿಷ್ಟತೆ, ಸನ್ನಿವೇಶ, ಕಾರಣ, ಪರಿಣಾಮ, ಇತ್ಯಾದಿಗಳ ತುಲನೆಯಿಂದಾಗಿ ವಿಶಿಷ್ಟವಾಗುತ್ತವೆ. ನ್ಯಾಯಾನ್ಯಾಯ ಕಲ್ಪನೆಯೂ ಕೂಡ ಇವನ್ನೆಲ್ಲ ಒಳಗೊಂಡಷ್ಟೂ ನ್ಯಾಯದಾನದ ಕ್ಷಮತೆ ಹೆಚ್ಚುತ್ತದೆ. ಅಂದರೆ ಸಂದರ್ಭಕ್ಕೆ ಸ್ಪಂದಿಸುವ ಗುಣವು ನ್ಯಾಯದಾನಕ್ಕೆ ಅತ್ಯಗತ್ಯವಾದ ಪ್ರಮಾಣ ಎಂಬುದನ್ನು ನಮ್ಮ ದೇಶೀ ನ್ಯಾಯ ತೀರ್ಮಾನ ಪದ್ಧತಿಗಳು ಗುರುತಿಸಿಕೊಂಡಿವೆ. ಈ ಸಂದರ್ಭಕ್ಕೆ ಅತೀತವಾದ ಹಾಗೂ ಕುರುಡಾದ ಚೌಕಟ್ಟೊಂದು ಅದಕ್ಕೆ ಪ್ರಮಾಣವಾಗುತ್ತದೆ ಎಂಬುದನ್ನು ಭಾರತೀಯರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: