ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 52: ಕಾನೂನಿನ ಆಳ್ವಿಕೆ ಯಾರಿಗೆ ಅರ್ಥವಾಗುತ್ತದೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಪ್ರಜಾ ಪ್ರಭುತ್ವವು ಯಾವುದೇ ಒಬ್ಬ ಮನುಷ್ಯನ ಇಚ್ಛೆಯ ಪ್ರಕಾರ ನಡೆಯುವ ಆಳ್ವಿಕೆಯಲ್ಲ, ಅಥವಾ ಯಾವುದೋ ಬಲಾಢ್ಯ ಗುಂಪಿನ ಇಚ್ಛೆಯ ಪ್ರಕಾರವೂ ನಡೆಯುವುದಲ್ಲ. ಅದು ಜನರಿಂದ ಜನರಿಗಾಗಿ ಜನರೇ ನಡೆಸುವ ಆಳ್ವಿಕೆ. ಜನರೇ ಇಲ್ಲಿ ಸರ್ವಭೌಮರು. ಅವರು ಹೇಗೆ ಆಳುತ್ತಾರೆ ಎಂದರೆ ಚುನಾವಣೆಯ ಮೂಲಕ ತಮ್ಮ ಪ್ರತಿನಿಧಿಗಳನ್ನು ಶಾಸನ ಸಭೆಗಳಿಗೆ ಆರಿಸಿ ಕಳುಹಿಸುತ್ತಾರೆ. ಈ ಪ್ರತಿನಿಧಿಗಳು ಶಾಸನಗಳನ್ನು ಮಾಡುತ್ತಾರೆ ಹಾಗೂ ನಾವು ಆ ಶಾಸನಗಳ ಆಳ್ವಿಕೆಗೆ ಒಳಪಡುತ್ತೇವೆ. ಈ ಪ್ರಜಾ ಪ್ರಭುತ್ವಕ್ಕೆ ಸಂವಿಧಾನವೇ ಅಡಿಗಲ್ಲು. ಎಲ್ಲಾ ಶಾಸನಗಳಿಗೂ ಅದರ ನಿಯಮಗಳೇ ಆಧಾರ. ಈ ರೀತಿಯಲ್ಲಿ ಪ್ರಜಾಪ್ರಭುತ್ವವೆಂದರೆ ನಿಜವಾಗಿಯೂ ಕಾನೂನಿನ ಆಳ್ವಿಕೆಯೇ ಆಗಿದೆ, ಇಲ್ಲಿ ಯಾವ ವ್ಯಕ್ತಿಯ ಖಾಸಗಿ ಇಚ್ಛೆಗೂ ಮಹತ್ವವಿಲ್ಲ. ಇದು ನಮ್ಮೆಲ್ಲರ ಸಾಮಾನ್ಯ ಜ್ಞಾನ. ಆದರೆ ಭಾರತದಲ್ಲಿ ಇಂದು ಏನು ನಡೆಯುತ್ತಿದೆ? ಶಾಸಕರೆಂದು ಆರಿಸಿ ಹೋಗುವವರಲ್ಲಿ ಎಷ್ಟು ಮಂದಿಗೆ ಸಂವಿಧಾನದಲ್ಲಿ ಏನಿದೆ ಎಂಬುದು ಗೊತ್ತಿದೆ? ಅಥವಾ ಪ್ರಜೆಗಳ ಹಿತಾಸಕ್ತಿಯಾದರೂ ಗೊತ್ತಿದೆ? ಶಾಸನಗಳು ಜಾರಿಯಾಗುವಾಗ ಎಷ್ಟು ಮಂದಿ ಅವುಗಳ ಕುರಿತು ತಿಳಿದುಕೊಂಡಿರುತ್ತಾರೆ? ಸಾಕಷ್ಟು ಮಂದಿ ಸ್ವತಃ ತಾವೇ ಕಾನೂನುಗಳನ್ನು ಉಲ್ಲಂಘಿಸಿ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿ ಅಲ್ಲಿ ಹೋಗಿರುತ್ತಾರೆ. ಹಾಗಾಗಿ ಅವರು ಜಾರಿಯಲ್ಲಿ ತಂದ ಕಾನೂನುಗಳ ಆಳ್ವಿಕೆಯು ಪ್ರಜೆಗಳ ಹಿತರಕ್ಷಣೆಯನ್ನು ಯಾವರೀತಿ ಮಾಡಬಲ್ಲದು? ಇವೆಲ್ಲ ದೊಡ್ಡ ಪ್ರಶ್ನೆಗಳು.

ಆದರೆ ವಾಸ್ತವಿಕವಾಗಿ ಭಾರತೀಯರು ಈ ಕಾನೂನಿನ ಆಳ್ವಿಕೆಗೆ ಬದ್ಧರಾಗಿದ್ದಾರೆಯೆ? ಭಾರತೀಯರಿಗೆ ಈ ಆಳ್ವಿಕೆ ಅನುಭವಕ್ಕೇ ಬಂದಂತಿಲ್ಲ ಎಂಬುದನ್ನು ಹಿಂದಿನ ಅಂಕಣವೊಂದರಲ್ಲಿ ಚರ್ಚಿಸಿದ್ದೆ. ಏಕೆ ಹೀಗೆ ಎಂಬುದನ್ನು ಮುಂದಿನ ಭಾಗದಲ್ಲಿ ನೋಡೋಣ. ಈ ಕಾನೂನಿನ ಆಳ್ವಿಕೆ ಎಂಬ ಕಲ್ಪನೆಯನ್ನು ಹದಿನೆಂಟನೆಯ ಶತಮಾನದಿಂದಲೂ ಕೆಲವು ಪಾಶ್ಚಾತ್ಯ ಚಿಂತಕರು ಕಟು ಟೀಕೆಗೆ ಒಳಪಡಿಸಿದ್ದಾರೆ. ಅವರ ಪ್ರಕಾರ ಪ್ರಜಾಪ್ರಭುತ್ವವೆಂಬುದು ಕಾನೂನಿನ ಆಳ್ವಿಕೆಯಾದರೆ ಅದು ಗುಲಾಮಗಿರಿಗಿಂತ ಒಳ್ಳೆಯ ವ್ಯವಸ್ಥೆ ಹೇಗಾಗುತ್ತದೆ? ಶಾಸಕರು ಮಾಡಿದ ಕಾನೂನುಗಳಿಗೆ ವಿಧೇಯರಾಗಿರುವುದೇ ಪ್ರಜೆಗಳ ಕೆಲಸವೆಂದರೆ ಅವರಿಗೆ ಯಾವ ವೈಚಾರಿಕ ಸ್ವಾತಂತ್ರ್ಯವನ್ನು ಉಳಿಸಿದಂತಾಯಿತು? ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಸಂವಿಧಾನವೆಂಬುದು ಪ್ರಜೆಗಳ ಕ್ರಿಯೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಹಾಗೂ ಸೀಮಾರೇಖೆಗಳನ್ನು ವಿಧಿಸುತ್ತದೆಯೇ ವಿನಃ ಅದು ಕಾನೂನಿನ ಆಳ್ವಿಕೆಯಲ್ಲ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದಲ್ಲೂ ಕೂಡ ಕಾನೂನುಗಳನ್ನು ಬದಲುಮಾಡುವ, ಸಂವಿಧಾನವನ್ನೇ ತಿದ್ದುಪಡಿ ಮಾಡುವ ಶಕ್ತಿಯೂ ಈ ಪ್ರಜೆಗಳಿಗೆ ಇದೆ. ಯಾವುದೋ ಒಂದು ಕಾನೂನು ಇದೆ ಅಂದಾಕ್ಷಣ ಪ್ರಜೆಗಳ ಸುಖವನ್ನೇ ಬಲಿಕೊಟ್ಟಾದರೂ ಅದನ್ನು ರಕ್ಷಿಸಬೇಕೆಂಬುದು ಮೂರ್ಖತನದ ಮಾತಾಗಿ ಕಾಣಿಸುತ್ತದೆ. ಅಂದರೆ ವಾಸ್ತವದಲ್ಲಿ ಸಂವಿಧಾನವೆಂಬುದು ಕಾನೂನಿನ ಆಳ್ವಿಕೆಯಲ್ಲ. ಆದರೆ ನಾವೇಕೆ ಇದನ್ನು ಕಾನೂನಿನ ಆಳ್ವಿಕೆ ಎಂಬುದಾಗಿ ನಂಬಿದ್ದೇವೆ?

ಈ ಚರ್ಚೆಗೆ ಸಂಬಂಧಿಸಿದಂತೇ ಪಾಶ್ಚಾತ್ಯರಿಗೂ ನಮಗೂ ಒಂದು ಮೂಲಭೂತ ವ್ಯತ್ಯಾಸವಿದೆ. ಪಾಶ್ಚಾತ್ಯರಿಗೆ ಕಾನೂನಿನ ಆಳ್ವಿಕೆ ಎಂದರೆ ಏನೆಂಬುದು ಗೊತ್ತಾಗುತ್ತದೆ. ನಮಗೆ ಸುತಾರಾಂ ಗೊತ್ತಾಗುವುದಿಲ್ಲ. ಹಾಗಾಗಿ ಅವರು ತಾವು ಕಾನೂನನ್ನು ರಚಿಸಿಕೊಳ್ಳುತ್ತಾರೆ ಹಾಗೂ ಅದಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಾರೆ. ನಾವು ಕೂಡ ಕಾನೂನುಗಳನ್ನು ರಚಿಸಿಕೊಳ್ಳುತ್ತೇವೆ, ಆದರೆ ಅವನ್ನು ಪಾಲಿಸಬೇಕೆಂಬ ಬದ್ಧತೆ ಇಲ್ಲ. ಅವನ್ನು ಏಕೆ ಪಾಲಿಸಬೇಕು ಎಂಬುದೂ ನಮಗೆ ಅರ್ಥವಾಗುವುದಿಲ್ಲ. ಕಾನೂನನ್ನು ಶಿಕ್ಷೆಯ ಭೀತಿಯಂದ ಮಾತ್ರವೇ ಪಾಲಿಸುತ್ತೇವೆಯೇ ವಿನಃ, ನಮ್ಮ ಸಮಾಜಕ್ಕೆ ಅವು ಮುಖ್ಯ, ಅವನ್ನು ಉಲ್ಲಂಘಿಸುವುದು ಸಮಾಜ ದ್ರೋಹವಾಗುತ್ತದೆ ಎಂಬ ಭಾವನೆ ಬಹುತೇಕರಲ್ಲಿ ಹುಟ್ಟುವುದೇ ಇಲ್ಲ. ಕಾನೂನನ್ನು ಉಲ್ಲಂಘಿಸಿದವರನ್ನು ಸಮಾಜ ದ್ರೋಹಿಗಳೆಂಬಂತೇ ಜನರೂ ನೋಡುವುದಿಲ್ಲ.

ಸೆಮೆಟಿಕ್ ರಿಲಿಜನ್ನುಗಳಿಗೂ ಕಾನೂನಿನ ಆಳ್ವಿಕೆಯ ಕಲ್ಪನೆಗೂ ಸಂಬಂಧವಿದೆ ಎಂಬ ವಿಷಯವನ್ನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ಈ ಕಾನೂನಿನ ಆಳ್ವಿಕೆಯ ಕಲ್ಪನೆ ಹುಟ್ಟಿದ್ದೇ ಬೈಬಲ್ಲಿನಲ್ಲಿ. ಒಂದಾನೊಂದು ಕಾಲದಲ್ಲಿ ಯೆಹೂದಿಗಳು ಇಜಿಪ್ತಿನಲ್ಲಿ ಗುಲಾಮರಾಗಿದ್ದರು. ಮೋಸೆಸ್ ಎಂಬ ಪ್ರವಾದಿಯು ಅವರನ್ನು ರಕ್ಷಿಸಿ ಇಸ್ರೇಲಿಗೆ ಕರೆದುಕೊಂಡು ಬರುವಾಗ ಸಿನಾಯಿ ಪರ್ವತದ ಮೇಲೆ ಗಾಡ್ ಅವನಿಗೆ ತನ್ನ ಹತ್ತು ಕಮಾಂಡ್ಮೆಂಟ್ಗಳನ್ನು ನೀಡುತ್ತಾನೆ. ಯೆಹೂದಿಗಳಲ್ಲಿ ಹದಿಮೂರು ಬುಡಕಟ್ಟುಗಳು ಇದ್ದವು. ಆ ಹದಿಮೂರು ಬುಡಕಟ್ಟುಗಳಿಗೆ ಅವೇ ಕಾನೂನುಗಳಾದವು. ಈ ಕಾನೂನಗಳು ಗಾಡ್ನ ಇಚ್ಛೆ. ಹಾಗಾಗಿ ಅವನ್ನು ಪಾಲಿಸುವುದಷ್ಟೇ ಆ ಬುಡಕಟ್ಟುಗಳ ಕೆಲಸ. ಅವನ್ನು ಏಕೆ ಪಾಲಿಸಬೇಕೆಂದರೆ ಅವು ಅವರ ಸೃಷ್ಟಿಕರ್ತನ ಇಚ್ಛೆ ಅಷ್ಟೆ. ಸೃಷ್ಟಿಕರ್ತನಿಗೆ ನಮ್ಮನ್ನು ಸೃಷ್ಟಿಸುವುದಕ್ಕೆ ಒಂದು ಉದ್ದೇಶವಿದೆ, ಹಾಗೂ ಅದರ ಈಡೇರಿಕೆಗೆ ಅವನು ಈ ಕಾನೂನುಗಳನ್ನು ಇಚ್ಛೆಪಟ್ಟಿದ್ದಾನೆ. ಇಸ್ರೇಲಿನ ಯೆಹೂದಿ ಬುಡಕಟ್ಟುಗಳು ಈ ಕಾನೂನುಗಳು ತಮ್ಮ ಜೀವನಕ್ಕೆ ಆಧಾರ ಎಂದು ಭಾವಿಸಿ ಸ್ವೀಕರಿಸಿದರು. ಅವರಲ್ಲೇ ಒಂದು ಬುಡಕಟ್ಟು ಈ ಕಾನೂನುಗಳನ್ನು ರಕ್ಷಿಸಿ, ಕಾಲ ಕಾಲಕ್ಕೆ ಅದರ ಅರ್ಥವನ್ನು ನಿರೂಪಿಸಿಕೊಂಡು ಬಂದಿತು. ಅವರನ್ನು ರಾಬ್ಬಿಗಳು ಅಥವಾ ಪ್ರೀಸ್ಟ್ಗಳು ಎಂದು ಕರೆಯಲಾಯಿತು. ಕಾಲಾಂತರದಲ್ಲಿ ಅದೇ ಸೆಮೆಟಿಕ್ ರಿಲಿಜನ್ನಿನಲ್ಲೇ ಕ್ರಿಶಿಯಾನಿಟಿಯು ಉಗಮಿಸಿತು. ಕ್ರೈಸ್ತರೂ ಕೂಡ ಗಾಡ್ನ ಕಾನೂನುಗಳು ತಮ್ಮ ಜೀವನಕ್ಕೆ ಆಧಾರ ಎಂದು ನಂಬಿದ್ದರು. ಹಾಗೂ ಅದನ್ನು ಕ್ರೈಸ್ತ ಪ್ರೀಸ್ಟ್ಗಳು ನಿರೂಪಿಸಿ ಬೆಳೆಸಿಕೊಂಡು ಬಂದರು. ನಂತರ ಉಗಮಿಸಿದ ಇಸ್ಲಾಂ ಕೂಡ ಅಲ್ಲಾನ ಕಾನೂನುಗಳಿಗೆ ತಮ್ಮ ಸಮುದಾಯವು ಬದ್ಧವಾಗಿದೆ ಎಂಬ ನಂಬಿಕೆಯನ್ನು ಬೆಳೆಸಿಕೊಂಡು ಬಂದಿತು ಹಾಗೂ ಅವುಗಳನ್ನು ನಿರೂಪಿಸಿಕೋಡು ಬರುವ ವರ್ಗವೊಂದು ಅವರಲ್ಲಿ ಹುಟ್ಟಿಕೊಂಡಿತು.

ಈ ರೀತಿಯಲ್ಲಿ ಯುರೋಪಿನಲ್ಲಿ ಆಧುನಿಕ ಯುಗದ ಪ್ರಾರಂಭದಲ್ಲಿ ಮನುಷ್ಯ ಸಮಾಜವು ಕಾನೂನನ್ನು ಆಧರಿಸಿ ಇರುತ್ತದೆ ಎಂಬ ತಿಳುವಳಿಕೆಯು ಬೇರೂರಿತು. ಸೆಕ್ಯುಲರ್ ಯುಗದಲ್ಲಿ ಚರ್ಚಿನ ಪ್ರಭಾವದಿಂದ ಹೊರಬರುವ ಹಾಗೂ ಸೆಕ್ಯುಲರ್ ಪ್ರಭುತ್ವವನ್ನು ರೂಪಿಸುವ ಪ್ರಯತ್ನಗಳಾದವಷ್ಟೆ? ಆಗ ಪಾಶ್ಚಾತ್ಯ ಚಿಂತಕರು ಗಾಡ್ನ ಕಾನೂನುಗಳಿಗೆ ಪ್ರತಿಯಾಗಿ ಮಾನವ ಕಾನೂನುಗಳನ್ನು ರೂಪಿಸಿಕೊಳ್ಳುವುದು ಸೆಕ್ಯುಲರ್ ಪ್ರಭುತ್ವಕ್ಕೆ ನಿರ್ಣಾಯಕ ಎಂಬುದಾಗಿ ತಿಳಿದರು. ಆಗ ಬಂದಂತಹ ಒಂದು ಚರ್ಚೆಯೆಂದರೆ ಸಾರ್ವಭೌಮತ್ವದ (sovereignty) ಕುರಿತಾದದ್ದು. ಅಂದರೆ ಕಾನೂನು ಗಾಡ್ನ ಇಚ್ಛೆ ಏಕೆಂದರೆ ಆತನೇ ಈ ಪ್ರಪಂಚವನ್ನೂ ನಮ್ಮನ್ನೂ ಸೃಷ್ಟಿಸಿದವನು. ಹಾಗಾಗಿ ಆ ಕಾನೂನನ್ನು ಮಾಡುವ ಅವನ ಶಕ್ತಿಯೇ ಸಾರ್ವಭೌಮತ್ವ. ಆ ಸಾರ್ವಭೌಮನ ಆಳ್ವಿಕೆಗೆ ಒಳಪಟ್ಟವರಿಗೆಲ್ಲರಿಗೂ ಆತನ ಇಚ್ಛೆಯೇ ಕಾನೂನು. ಆದರೆ ಗಾಡ್ ಮಾನವನಿಗೆ ಈ ಭೂಮಿಯ ಒಡೆತನವನ್ನು ನೀಡಿದ್ದಾನೆ. ಗಾಡ್ ತನ್ನದೇ ಪ್ರತಿರೂಪದಲ್ಲಿ ಮಾನವನನ್ನು ಮಾಡಿದ್ದಾನೆ. ಅಂದಮೇಲೆ ಭೂಮಿಯ ಮೇಲೆ ಮಾನವನಿಗೆ ಇರುವ ಅಧಿಕಾರದ ಸ್ವರೂಪವೇನು? ಮಾನವನ ಇಚ್ಛೆ ಕಾನೂನಾಗಬಹುದೆ? ಈ ಭೂಮಿಯ ಸಾರ್ವಭೌಮತ್ವವು ಮನುಷ್ಯನಿಗಿದೆಯೆ? ಈ ರೀತಿಯಲ್ಲಿ ಒಂದೆಡೆ ಈ ಬ್ರಹ್ಮಾಂಡಕ್ಕೆ ಗಾಡ್ ಎಂಬ ಸಾರ್ವಭೌಮ ಹಾಗೂ ಭೂಮಿಗೆ ಮಾನವನೆಂಬ ಸಾರ್ವಭೌಮರ ಕಲ್ಪನೆಗಳು ಬೆಳೆದವು. ಅಂದರೆ ತನ್ನ ಸೆಕ್ಯುಲರ್ ಪ್ರಭುತ್ವದಲ್ಲಿ ಕಾನೂನನ್ನು ರೂಪಿಸುವ ಮಾನವನು ಗಾಡ್ನ ಸ್ಥಾನದಲ್ಲಿ ನಿಂತು ತನ್ನ ಸಾರ್ವಭೌಮತ್ವವನ್ನು ಪ್ರಯೋಗಿಸಬೇಕು. ಆದರೆ ಅವನು ಗಾಡ್ನ ಕಾನೂನುಗಳ ಸೆಕ್ಯುಲರ್ ನಿರೂಪಣೆಯನ್ನಷ್ಟೇ ಮಾಡಬಲ್ಲವನಾಗಿದ್ದನು. ಏಕೆಂದರೆ ಅವನ ಸಾರ್ವಭೌಮತ್ವವೇ ಗಾಡ್ನಿಂದ ದತ್ತವಾದದ್ದು. ಹೀಗೆ ಸೆಕ್ಯುಲರ್ ಕಾನೂನಿನ ಆಳ್ವಿಕೆಯ ಕಲ್ಪನೆಗೆ ತಳಪಾಯವಾಗಿ ಗಾಡ್ನ ಕಾನೂನಿನ ಆಳ್ವಿಕೆಯ ಕಲ್ಪನೆ ಮೂಲಭೂತವಾಗಿ ಇದೆ.

ಯುರೋಪಿಯನ್ನರು ಭಾರತಕ್ಕೆ ಬಂದು ವಸಾಹತುವನ್ನು ಸ್ಥಾಪಿಸುವ ಕಾಲದಲ್ಲಿ ಅವರು ಜಗತ್ತಿನೆಲ್ಲೆಡೆಯಲ್ಲೂ ರಿಲಿಜನ್ನುಗಳಿವೆ ಎಂಬುದಾಗಿ ತಿಳಿದಿದ್ದರು. ಹಾಗೂ ಈ ರಿಲಿಜನ್ನುಗಳಿಗೆ ಅವುಗಳದೇ ಗಾಡ್ಗಳೂ, ಅವರ ಕಾನೂನಿನ ಆಳ್ವಿಕೆಗಳ ಕುರಿತ ನಂಬಿಕೆಗಳೂ ಇರುತ್ತವೆ ಎಂಬುದು ಅವರ ಸಾಮಾನ್ಯ ಜ್ಞಾನದ ಭಾಗವೇ ಆಗಿತ್ತು. ಭಾರತದಲ್ಲಿ ಅವರು ಹಿಂದೂಯಿಸಂ ಎಂಬ ವಿಚಿತ್ರವಾದ ರಿಲಿಜನ್ನನ್ನು ನೋಡಿದರು. ಅಂದಮೇಲೆ ಅದರಲ್ಲೂ ರಾಬ್ಬಿ ಅಥವಾ ಪ್ರೀಸ್ಟ್ಗಳು ಹಾಗೂ ಹಿಂದೂ ಸಮಾಜಕ್ಕೆ ತಳಪಾಯವಾಗಿ ಗಾಡ್ ನೀಡಿದ ಕಾನೂನುಗಳು ಇರಲೇಬೇಕು ಎಂಬುದಾಗಿ ಭಾವಿಸಿದರು. ಅದಕ್ಕುತ್ತರವಾಗಿ ಅವರಿಗೆ ಬ್ರಾಹ್ಮಣರೆಂಬ ಪ್ರೀಸ್ಟ್ಗಳೂ, ಅವರು ರಕ್ಷಿಸಿಕೊಂಡು ಬಂದ ಮನುಸ್ಮೃತಿಯೆಂಬ ಗ್ರಂಥವೂ ಕಾಣಿಸಿದವು. ಇದು ಹಿಂದೂಗಳ ಕಾನೂನು ಗ್ರಂಥ ಹಾಗೂ ಮನು ಎಂಬವನು ಮೋಸೆಸ್ನಂತೇ ಇವರ ಕಾನೂನನ್ನು ಗಾಡ್ನಿಂದ ಸ್ವೀಕರಿಸಿದವನಾಗಿದ್ದಾನೆ ಎಂದು ಅವರು ನಿರ್ಣಯಿಸಿದರು. ಅಷ್ಟೇ ಅಲ್ಲ ಅದನ್ನಾಧರಿಸಿಯೇ ಹಿಂದೂ ಸಮಾಜದ ರಚನೆಯಾಗಿದೆ, ಹಾಗೂ ಹಿಂದೂಗಳೆಲ್ಲರೂ ಅದಕ್ಕೆ ವಿಧೇಯರಾಗಿದ್ದಾರೆ ಎಂದೂ ನಂಬಿದರು.

ಈ ಮೇಲಿನ ಮಾಹಿತಿಗಳೆಲ್ಲವೂ ಸುಲಭವಾಗಿ ಅವರಿಗೆ ಸಿಗಲಿಲ್ಲ. ಬ್ರಿಟಿಷರು ಇಲ್ಲಿ ವಸಾಹತು ಸರ್ಕಾರವನ್ನು ಸ್ಥಾಪಿಸಿದ ನಂತರ ಭಾರತೀಯರನ್ನು ಕಾನೂನಿನ ಆಳ್ವಿಕೆಗೆ ಒಳಪಡಿಸುವ ಕಾರ್ಯಕ್ರಮವನ್ನು ಹಾಕಿಕೊಂಡಾಗ ಇವರ ಕಾನೂನನ್ನು ಕಂಡುಹಿಡಿಯುವ ಸಮಸ್ಯೆ ಎದ್ದಿತು. ಏಕೆಂದರೆ ಅವರ ಪ್ರಕಾರ ಕಾನೂನನ್ನು ಆಧರಿಸಿದ ಆಳ್ವಿಕೆಯೇ ನಿಜವಾದ ನಾಗರಿಕ ಸಮಾಜದ ಲಕ್ಷಣವಾಗಿತ್ತು. ಅದರಲ್ಲೂ ಅವರದು ಸೆಕ್ಯುಲರ್ ನೀತಿಗಳನ್ನು ಅಳವಡಿಸಿಕೊಂಡ ಪ್ರಭುತ್ವವಾಗಿತ್ತು. ಸೆಕ್ಯುಲರ್ ಪ್ರಭುತ್ವದ ಆದರ್ಶವೆಂದರೆ ರಿಲಿಜನ್ನುಗಳ ಕುರಿತು ತಟಸ್ಥತೆ ಹಾಗೂ ರಿಲಿಜನ್ನುಗಳ ಸಹಿಷ್ಣುತೆ. ವಿಭಿನ್ನ ರಿಲಿಜನ್ನುಗಳ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಈ ನೀತಿಯ ಒಂದು ಭಾಗ. ಪ್ರತೀ ರಿಲಿಜನ್ನೂ ಒಂದಿಲ್ಲೊಂದು ಕಾನೂನನ್ನು ಆಧರಿಸಿಯೇ ತನ್ನ ಸಮಾಜವನ್ನು ರಚಿಸಿಕೊಂಡಿರುವಾಗ ಅವುಗಳನ್ನು ತಿಳಿದುಕೊಳ್ಳುವುದು ಪ್ರಭುತ್ವದ ಆದ್ಯತೆಯಾಗುತ್ತದೆ. ಹೀಗೆ ಬ್ರಿಟಿಷರು ಹಿಂದೂ ಕಾನೂನು ಸಂಹಿತೆಯನ್ನು ಕಂಡುಹಿಡಿಯಲು ಸಾಕಷ್ಟು ಪರಿಶ್ರಮ ಪಟ್ಟರು.

ಹಿಂದೂಗಳಿಗೆ ಅಂತಹ ಸಂಹಿತೆ ಇದ್ದುದು ಗೊತ್ತಿರಲಿಲ್ಲ, ಅಷ್ಟೇ ಅಲ್ಲ ಅವರಿಗೆ ಬ್ರಿಟಿಷರು ನಿರ್ದಿಷ್ಟವಾಗಿ ಏನನ್ನು ಹುಡುಕಾಡುತ್ತಿದ್ದಾರೆ ಎಂಬುದು ಹೊಳೆಯಲಿಲ್ಲ. ಹಿಂದೂಗಳಿಗೆ ಕಾನೂನಿನ ಆಳ್ವಿಕೆ ಎಂಬುದು ಗೊತ್ತೇ ಇರಲಿಲ್ಲ, ಏಕೆಂದರೆ ಅವರಿಗೆ ಅವರ ಯಾವ ದೇವರುಗಳೂ ಕಾನೂನನ್ನು ನೀಡಿ ಅದಕ್ಕೆ ವಿಧೇಯರಾಗಿರುವುದೇ ಸ್ವರ್ಗಕ್ಕೆ ದಾರಿ ಎಂದಿರಲಿಲ್ಲ. ಅವರು ತಮ್ಮ ದೇವತೆಗಳ ಇಚ್ಛೆಗೆ ವಿಧೇಯರಾಗಿರುವ ಷರತ್ತಿಗೆ ಬದ್ಧರಾಗಿ ಹುಟ್ಟಿರಲೂ ಇಲ್ಲ. ಹಾಗಾಗಿ ಬ್ರಿಟಿಷರು ಕಾನೂನು ಸಂಹಿತೆಯನ್ನು ಹುಡುಕುತ್ತಿರುವಾಗ ಭಾರತೀಯ ಪಂಡಿತರು ಬ್ರಿಟಿಷರಿಗೆ ಅನೇಕ ಸಂಸ್ಕೃತ ಗ್ರಂಥಗಳನ್ನು ತೋರಿಸಿದರು. ಅವುಗಳಲ್ಲಿ ಮನುಸ್ಮೃತಿಯೆಂಬ ಗ್ರಂಥವು ಬ್ರಿಟಿಷ್ ಕಾನೂನು ತಜ್ಞರ ಗಮನ ಸಳೆಯಿತು. ತಮ್ಮ ಸಂಪ್ರದಾಯಗಳಲ್ಲಿ ನಿಜವಾಗಿಯೂ ಅದರ ಸ್ಥಾನಮಾನವೇನು ಎಂಬುದನ್ನು ಭಾರತೀಯರು ಅವರಿಗೆ ಮನದಟ್ಟು ಮಾಡಲಿಲ್ಲ. ಬ್ರಿಟಿಷರು ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ. ತಾವು ಹುಡುಕುತ್ತಿದ್ದುದು ಸಿಕ್ಕಿದೆ ಎಂಬುದಷ್ಟೇ ಅವರಿಗೆ ಬೇಕಾಗಿತ್ತು. ಹೀಗೆ ಭಾರತದ ನೂರಾರು ಧರ್ಮಶಾಸ್ತ್ರಗಳಲ್ಲೊಂದಾಗಿರುವ ಮನುಸ್ಮೃತಿಯು ಹಿಂದೂ ಕಾನೂನಾಗಿ ಬದಲಾಯಿತು. ಅದಕ್ಕಿಂತ ಮುಖ್ಯವಾಗಿ ವಿದ್ಯಾವಂತ ಹಿಂದೂಗಳಿಗೆ ತಮ್ಮ ಸಮಾಜವೂ ಕಾನೂನು ಸಂಹಿತೆಯನ್ನಾಧರಿಸಿ ರಚನೆಯಾಗಿದೆ, ತಾವೂ ಕಾನೂನಿನ ಆಳ್ವಿಕೆಗೊಳಪಟ್ಟಿದ್ದೆವು ಎಂಬ ನಂಬಿಕೆಗೆ ಕಾರಣವಾಯಿತು.\

ನಾವು ಕಾನೂನಿನ ಆಳ್ವಿಕೆಗೆ ಒಳಪಟ್ಟಿದ್ದೇವೆ ಎಂಬುದು ಒಂದು ನಂಬಿಕೆ ಅಷ್ಟೆ. ರಿಲಿಜನ್ನಿಗೆ ಸೇರಿದವರು ಈ ನಂಬಿಕೆಯನ್ನು ಹೊಂದಿರುತ್ತಾರೆ. ಅದರಾಚೆಗೆ ನಾವೇಕೆ ಕಾನೂನಿಗೆ ಬದ್ಧರಾಗಿರಬೇಕು? ಎಂಬ ಪ್ರಶ್ನೆಗೆ ಅವರಲ್ಲೂ ಅಂತಿಮ ಉತ್ತರವಿಲ್ಲ. ಆದರೆ ರಿಲಿಜನ್ನಿನ ಹಿನ್ನೆಲೆಯಲ್ಲಿ ಬೆಳೆದುಬಂದ ಸಮಾಜವೊಂದು ತಾನು ರಚಿಸಿಕೊಂಡ ಕಾನೂನಿನ ಕುರಿತು ಇಂಥ ಪ್ರಶ್ನೆಗಳನ್ನು ಎತ್ತದೇ ವಿಧೇಯವಾಗಿರುತ್ತದೆ. ಕಾನೂನುಗಳು ತಮ್ಮ ಸಮಾಜದ ತಳಪಾಯ ಎಂಬುದು ಅವರ ಮೂಲಭೂತ ನಂಬಿಕೆ. ಅವನ್ನು ಉಲ್ಲಂಘಿಸುವುದು ಸಮಾಜಘಾತುಕ ಕೆಲಸ, ಅದು ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರುತ್ತದೆ, ಅದು ಒಟ್ಟಾರೆಯಾಗಿ ಎಲ್ಲರಿಗೂ ಅಪಾಯಕಾರಿಯಾದುದು, ಎಂಬುದಾಗಿ ಅವರಿಗೆ ಅನಿಸುತ್ತದೆ. ಬಹುಶಃ ಈ ಅನಿಸಿಕೆಯಿಂದಲೇ ಪಾಶ್ಚಾತ್ಯ ಪ್ರಭುತ್ವಗಳು ಹಾಗೂ ಪ್ರಜೆಗಳು ತಮ್ಮ ಕಾನೂನು ವ್ಯವಸ್ಥೆಯನ್ನು ರಚಿಸಿಕೊಂಡು ಪಾಲಿಸಿಕೊಂಡು ಬರುತ್ತಾರೆಯೇ ವಿನಃ ನಾವೇಕೆ ಕಾನೂನಿಗೆ ಬದ್ಧರಾಗಿರಬೇಕು ಎಂಬುದಕ್ಕೆ ಅವರಲ್ಲೂ ಉತ್ತರಗಳಿಲ್ಲ. ಅಂದರೆ ಕಾನೂನುಗಳನ್ನು ರಚಿಸಿಕೊಂಡು ಸಮಾಜವನ್ನು ನಡೆಸುವುದು ರಿಲಿಜನ್ನಿನ ಹಿನ್ನೆಲೆಯುಳ್ಳ ಸಂಸ್ಕೃತಿಗಳಿಗೆ ಒಂದು ಜೀವನಕ್ರಮವಾಗಿದೆ. ಆ ಜೀವನವು ಕಾನೂನುಗಳನ್ನು ಆಧರಿಸಿ ವ್ಯವಸ್ಥಿತವಾಗಿರುತ್ತದೆ. ಒಟ್ಟಿನಲ್ಲಿ ಕಾನೂನಿನ ಆಳ್ವಿಕೆ ಎಂಬುದು ಅವರಿಗೆ ಅರ್ಥವಾಗುವ ಶಬ್ದ.

ಭಾರತದಂತಹ ದೇಶದಲ್ಲಿ ಕಾನೂನಿನ ಆಳ್ವಿಕೆ ಎಂಬುದು ಅರ್ಥವಾಗದ ಶಬ್ದ. ಹಾಗಾಗಿ ಇವರಿಗೆ ಕಾನೂನಗಳ ಕುರಿತು ಬದ್ಧತೆಯೂ ಕಡಿಮೆ. ಇವರ ಜೀವನ ಕ್ರಮದಲ್ಲಿ ಕಾನೂನುಗಳು ತೊಡಕುಗಳಾಗಿ ಕಂಡುಬಂದರೂ ಆಶ್ಚರ್ಯವಿಲ್ಲ. ಅವು ಜಾರಿಯಾಗುವಷ್ಟರಲ್ಲೇ ಅವನ್ನು ತಪ್ಪಿಸುವುದು ಅಥವಾ ಮುರಿಯುವುದು ಹೇಗೆ ಎಂಬ ಹುಡುಕಾಟಗಳು ನಡೆದಿರುತ್ತವೆ. ಅವುಗಳನ್ನು ತಿಳಿದುಕೊಳ್ಳುವುದು ನಮ್ಮ ಜೀವನಕ್ಕೆ ಅಗತ್ಯ ಎಂದು ಭಾರತೀಯರಿಗೆ ಸಾಮಾನ್ಯವಾಗಿ ಅನಿಸುವುದಿಲ್ಲ. ಕಾನೂನುಗಳನ್ನು ಉಪಯೋಗಿಸುವುದು ಹೇಗೆಂಬುದೂ ಇವರಿಗೆ ತಿಳಿಯುವುದಿಲ್ಲ, ಹಾಗಾಗಿ ಅದರ ದುರುಪಯೋಗವೇ ಉಪಯೋಗ ಎಂಬ ಮನೋಭಾವನೆ ದಟ್ಟವಾಗಿದೆ. ಅಂದರರೆ ಕಾನೂನನ್ನು ಸ್ವಾರ್ಥ ಸಾಧನೆಗೆ, ಇಲ್ಲವೇ ಪರಪೀಡನೆಗೆ ಉಪಯೋಗಿಸುವುದು ಸಾಮಾನ್ಯ. ಈ ಕುರಿತು ಹಿಂದಿನ ಅಂಕಣವೊಂದರಲ್ಲಿ ವಿವರವಾಗಿ ಚರ್ಚಿಸಿದ್ದೇನೆ.

ವಾಸ್ತವ ಪರಿಸ್ಥಿತಿ ಹೀಗಿರುವಾಗ ಸುಮ್ಮನೇ ಕುರುಡಾಗಿ ಪಾಶ್ಚಾತ್ಯ ಕಾನೂನುಗಳನ್ನು ಇಲ್ಲಿ ಅಳವಡಿಸಿಕೊಂಡು ಬಿಟ್ಟರೆ ನಮ್ಮ ಸಮಾಜದ ಅಭಿವೃದ್ಧಿ ಆಗಿಬಿಡುತ್ತದೆ ಎಂದು ಭಾವಿಸುವುದೂ, ಕಾನೂನಿನ ಆಳ್ವಿಕೆ ಈ ಸಮಾಜದ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ನಂಬುವುದೂ ನಿರಾಧಾರವಾದುದು. ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸದೇ ಒಂದು ಸಂಸ್ಕೃತಿಯ ರಚನೆಗಳನ್ನು ಮತ್ತೊಂದರ ಮೇಲೆ ಹೇರಿದರೆ ಅದು ಮತ್ತೊಂದು ಸಮಾಜದಲ್ಲಿ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ನಾವು ಪ್ರಜಾ ಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಂಡು, ಸಂವಿಧಾನವನ್ನು ರಚಿಸಿಕೊಂಡು, ಕಾನೂನುಗಳನ್ನು ರಚಿಸಿಕೊಂಡು, ನ್ಯಾಯಾಲಯಗಳನ್ನು ಸ್ಥಾಪಿಸಿಕೊಂಡ ಮಾತ್ರಕ್ಕೇ ಕಾನೂನಿನ ಸತ್ಫಲಗಳೆಲ್ಲ ಸಿದ್ಧಿಸಿಬಿಡುವುದಿಲ್ಲ. ಬದಲಾಗಿ ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಹೊಸ ಹೊಸ ಅನ್ಯಾಯಗಳು ಹುಟ್ಟಿ ಸಕ್ರಮಗೊಳ್ಳುವ ಸಾಧ್ಯತೆಯೂ ಇರುತ್ತದೆ. ನಮ್ಮ ಜನರು ಕಾನೂನುಗಳನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ಕಡೆಗಣಿಸಿದರೆ ಕಾನೂನಿನ ತಳಪಾಯದ ಮೇಲೆ ಸಮಾಜವನ್ನು ನಿರ್ಮಿಸುವ ಪ್ರಯತ್ನವು ಮರಳಿನ ಮೇಲೆ ಮನೆಕಟ್ಟಿದಂತೇ ಆಗಬಹುದು.

 

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: